ಬಕಪಕ್ಷಿಯಿಂದ ಒಂದು ಪಾಠ
“ಆಕಾಶದಲ್ಲಿ ಹಾರುವ ಬಕವೂ ತನ್ನ ನಿಯಮಿತ ಕಾಲಗಳನ್ನು ತಿಳಿದುಕೊಂಡಿದೆ, . . . ನನ್ನ ಜನರಾದರೋ ಯೆಹೋವನ ನಿಯಮವನ್ನು [“ನ್ಯಾಯತೀರ್ಪನ್ನು,” NW] ತಿಳಿಯರು.” (ಯೆರೆಮೀಯ 8:7) ಈ ಮಾತುಗಳಿಂದ ಪ್ರವಾದಿಯಾದ ಯೆರೆಮೀಯನು, ಯಾರು ತಮ್ಮ ದೇವರಾಗಿದ್ದ ಯೆಹೋವನನ್ನು ತೊರೆದು, ವಿಧರ್ಮಿ ದೇವತೆಗಳ ಆರಾಧನೆಗೆ ಇಳಿದಿದ್ದರೋ ಆ ಯೆಹೂದದ ಧರ್ಮಭ್ರಷ್ಟ ಜನರ ವಿರುದ್ಧ ಯೆಹೋವನ ನ್ಯಾಯತೀರ್ಪನ್ನು ಘೋಷಿಸಿದನು. (ಯೆರೆಮೀಯ 7:18, 31) ಅಪನಂಬಿಗಸ್ತ ಯೆಹೂದ್ಯರಿಗೋಸ್ಕರ ಒಂದು ನೀತಿ ಪಾಠವಾಗಿ ಯೆರೆಮೀಯನು ಬಕಪಕ್ಷಿಯನ್ನು ಆಯ್ಕೆಮಾಡಿದ್ದೇಕೆ?
ಇಸ್ರಾಯೇಲ್ಯರಿಗೆ ಬಕಪಕ್ಷಿಯು ಅದರಲ್ಲೂ ವಿಶೇಷವಾಗಿ ಬಿಳಿಯ ಬಕವು ಒಂದು ಪರಿಚಿತ ನೋಟವಾಗಿತ್ತು. ಏಕೆಂದರೆ ಇದು ಬೈಬಲ್ ದೇಶಗಳಾದ್ಯಂತ ವಲಸೆಹೋಗುತ್ತಿತ್ತು. ಈ ದೊಡ್ಡ, ಉದ್ದ ಕಾಲಿನ ಕಾಲನಡಗೆಯ ನೀರಹಕ್ಕಿಗಾಗಿರುವ ಹೀಬ್ರು ಹೆಸರು ಒಂದು ಪದದ ಸ್ತ್ರೀಲಿಂಗ ರೂಪವಾಗಿದ್ದು, ಅದರ ಅರ್ಥ “ನಿಷ್ಠೆಯುಳ್ಳದ್ದು; ಪ್ರೀತಿದಯೆಯುಳ್ಳದ್ದು” ಎಂದಾಗಿದೆ. ಇದು ಸೂಕ್ತವಾದ ಹೆಸರಾಗಿದೆ, ಏಕೆಂದರೆ ಅಧಿಕಾಂಶ ಇತರ ಪಕ್ಷಿಗಳಿಗೆ ಅಸದೃಶವಾಗಿ, ಈ ಬಿಳಿಯ ಗಂಡು ಮತ್ತು ಹೆಣ್ಣು ಬಕಪಕ್ಷಿಗಳು ಬದುಕಿನಾದ್ಯಂತ ಜೊತೆಯಾಗಿಯೇ ಇರುತ್ತವೆ. ಹೆಚ್ಚು ಉಷ್ಣತೆಯುಳ್ಳ ಪ್ರದೇಶಗಳಲ್ಲಿ ಚಳಿಗಾಲವನ್ನು ಕಳೆದ ಬಳಿಕ, ಪ್ರತಿಯೊಂದು ವರ್ಷವೂ ಅಧಿಕಾಂಶ ಬಕಪಕ್ಷಿಗಳು ಅನೇಕವೇಳೆ ತಾವು ಹಿಂದೆ ಉಪಯೋಗಿಸಿದ್ದಂಥ ಹಳೇ ಗೂಡುಗಳಿಗೇ ಹಿಂದಿರುಗುತ್ತವೆ.
ಈ ಬಕಪಕ್ಷಿಗಳ ಸಹಜ ಪ್ರವೃತ್ತಿಯ ನಡವಳಿಕೆಯು, ಇನ್ನೂ ಅನೇಕ ಗಮನಾರ್ಹ ವಿಧಗಳಲ್ಲಿ ನಿಷ್ಠೆಯ ಗುಣವನ್ನು ದೃಷ್ಟಾಂತಿಸುತ್ತದೆ. ಗಂಡು ಮತ್ತು ಹೆಣ್ಣು ಬಕಪಕ್ಷಿಗಳು ಕಾವಿಗೆ ಕುಳಿತುಕೊಂಡು ಮರಿಮಾಡುವುದರಲ್ಲಿ ಮತ್ತು ಮರಿಗಳಿಗೆ ಉಣಿಸುವುದರಲ್ಲಿ ಒಟ್ಟಿಗೆ ಕಾರ್ಯನಡಿಸುತ್ತವೆ. ನಮ್ಮ ಅದ್ಭುತಕರ ಪ್ರಾಣಿಪ್ರಪಂಚ (ಇಂಗ್ಲಿಷ್) ಎಂಬ ಪುಸ್ತಕವು ವಿವರಿಸುವುದು: “ಹೆತ್ತವರೋಪಾದಿ ಬಕಪಕ್ಷಿಗಳು ಅಸಾಮಾನ್ಯವಾದ ರೀತಿಯಲ್ಲಿ ಪರಸ್ಪರ ನಿಷ್ಠೆಯನ್ನು ತೋರಿಸುತ್ತವೆ. ಜರ್ಮನಿಯಲ್ಲಿನ ಒಂದು ಗಂಡು ಬಕಪಕ್ಷಿಯು ಅಧಿಕ ವೋಲ್ಟೇಜಿನ ಇಲೆಕ್ಟ್ರಿಕ್ ವಯರ್ಗಳ ಮೇಲೆ ಹಾರಿತು ಮತ್ತು ವಿದ್ಯುತ್ತಿನಿಂದ ಕೊಲ್ಲಲ್ಪಟ್ಟಿತು. ಅದರ ಸಂಗಾತಿಯು ಸುಮಾರು 3 ದಿನಗಳ ವರೆಗೆ ಒಂಟಿಯಾಗಿಯೇ ಮೊಟ್ಟೆಗಳ ಮೇಲೆ ಕುಳಿತುಕೊಂಡು ಕಾವುಕೊಡುವುದನ್ನು ಮುಂದುವರಿಸಿತು. ಈ ಮೂರು ದಿನಗಳಲ್ಲಿ ಆಹಾರವನ್ನು ಹುಡುಕುತ್ತಾ ಅದು ಸ್ವಲ್ಪ ಸಮಯಾವಧಿಯ ವರೆಗೆ ಮಾತ್ರ ಗೂಡನ್ನು ಬಿಟ್ಟು ಹೋಗಿತ್ತು. . . . ಇನ್ನೊಂದು ಬಾರಿ, ಒಂದು ಹೆಣ್ಣು ಬಕಪಕ್ಷಿಯು ಗುಂಡಿಕ್ಕಿ ಕೊಲ್ಲಲ್ಪಟ್ಟಾಗ, ಗಂಡು ಬಕಪಕ್ಷಿಯು ಮರಿಗಳನ್ನು ಬೆಳೆಸಿತು.”
ಸಹಜ ಪ್ರವೃತ್ತಿಯಿಂದ ತನ್ನ ಜೀವನ ಸಂಗಾತಿಗೆ ನಂಬಿಗಸ್ತಿಕೆಯನ್ನು ತೋರಿಸುತ್ತಾ, ಕೋಮಲವಾದ ರೀತಿಯಲ್ಲಿ ತನ್ನ ಮರಿಗಳ ಆರೈಕೆಯನ್ನು ಮಾಡುತ್ತಾ, ಬಕಪಕ್ಷಿಯು ತನ್ನ ಹೆಸರಿನ ಅರ್ಥಕ್ಕೆ—“ನಿಷ್ಠೆಯುಳ್ಳದ್ದು”—ಅನುಸಾರವಾಗಿ ಜೀವಿಸುತ್ತದೆ. ಹೀಗೆ, ಬಕಪಕ್ಷಿಗಳು, ಅಪನಂಬಿಗಸ್ತರೂ ಹಟಮಾರಿಗಳೂ ಆಗಿದ್ದ ಇಸ್ರಾಯೇಲ್ಯರಿಗೆ ಒಂದು ಪ್ರಬಲವಾದ ಪಾಠವನ್ನು ಕಲಿಸಲು ಸೂಕ್ತವಾದ ಉದಾಹರಣೆಯಾಗಿದ್ದವು.
ಇಂದು ಅನೇಕ ಜನರಿಗೆ ನಿಷ್ಠೆ ಹಾಗೂ ನಂಬಿಗಸ್ತಿಕೆ ಎಂಬಂಥ ಗುಣಗಳು ಹಳೇ ಕಾಲದ ವಿಚಾರಗಳಾಗಿವೆ. ಇವುಗಳು ಮೆಚ್ಚತಕ್ಕವುಗಳಾಗಿವೆಯಾದರೂ ಪ್ರಾಯೋಗಿಕವಾದವುಗಳಲ್ಲ ಎಂದು ಅವರು ನೆನಸುತ್ತಾರೆ. ವಿವಾಹ ವಿಚ್ಛೇದ, ಪರಿತ್ಯಾಗ, ಹಣದ ದುರುಪಯೋಗ, ಮತ್ತು ಬೇರೆ ಬೇರೆ ರೀತಿಯ ಇನ್ನಿತರ ವಂಚನೆಗಳು, ನಿಷ್ಠೆಯನ್ನು ಈಗ ಅಮೂಲ್ಯವಾಗಿ ಪರಿಗಣಿಸಲಾಗುತ್ತಿಲ್ಲ ಎಂಬುದನ್ನು ತೋರ್ಪಡಿಸುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಪ್ರೀತಿ ಮತ್ತು ದಯೆಯಿಂದ ಪ್ರಚೋದಿತವಾದ ನಿಷ್ಠೆಗೆ ಬೈಬಲು ಅತ್ಯಧಿಕ ಬೆಲೆಯನ್ನು ಕೊಡುತ್ತದೆ. “ನೀವು . . . ನೂತನಸ್ವಭಾವವನ್ನು ಧರಿಸಿಕೊಳ್ಳಿರಿ” ಎಂದು ಇದು ಕ್ರೈಸ್ತರನ್ನು ಬಲವಾಗಿ ಉತ್ತೇಜಿಸುತ್ತದೆ. ಮತ್ತು “ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ [“ನಿಷ್ಠೆಯುಳ್ಳದ್ದಾಗಿಯೂ,” NW]” ಇದೆ. (ಎಫೆಸ 4:24) ನೂತನಸ್ವಭಾವವು ನಾವು ನಿಷ್ಠಾವಂತರಾಗಿರುವಂತೆ ನಮಗೆ ಸಹಾಯಮಾಡುತ್ತದೆಂಬುದು ನಿಜ; ಆದರೆ ನಿಷ್ಠೆಯ ಕುರಿತಾದ ಪಾಠವನ್ನು ನಾವು ಬಕಪಕ್ಷಿಯಿಂದಲೂ ಕಲಿಯಸಾಧ್ಯವಿದೆ.