ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಆಲೆಕಾಂಡ್ರಾಳಿಂದ ಒಂದು ಪತ್ರ
ಸಾಕ್ಷಿನೀಡುವ ಒಂದು ಪ್ರಭಾವಕಾರಿ ವಿಧಾನವು ಪ್ರತ ಬರೆಯುವ ಮೂಲಕವೇ ಆಗಿದೆ. ಪ್ರತಿಕ್ರಿಯೆಯು ಹೇಗಿರುವುದೆಂದು ಕೆಲವೊಮ್ಮೆ ನಮಗೆ ತಿಳಿಯದಿದ್ದರೂ, ಈ ವಿಧಾನವನ್ನು ಪಟ್ಟುಬಿಡದೆ ಉಪಯೋಗಿಸುತ್ತಾ ಇರುವವರು ಹೇರಳವಾಗಿ ಆಶೀರ್ವದಿಸಲ್ಪಟ್ಟಿದ್ದಾರೆ. ಅವರು ಬೈಬಲಿನ ಈ ವಿವೇಕಪ್ರದ ಬುದ್ಧಿವಾದವನ್ನು ನೆನಪಿನಲ್ಲಿಡುತ್ತಾರೆ: “ಮುಂಜಾನೆ ಬೀಜಬಿತ್ತು, ಸಂಜೆಯ ತನಕ ಕೈದೆಗೆಯಬೇಡ; ಇದು ಸಫಲವೋ, ಅದು ಸಫಲವೋ, ಒಂದು ವೇಳೆ ಎರಡೂ ಚೆನ್ನಾಗುವವೋ ನಿನಗೆ ತಿಳಿಯದು.”—ಪ್ರಸಂಗಿ 11:6.
ಯೆಹೋವನ ಸಾಕ್ಷಿಗಳ ಮೆಕ್ಸಿಕೊ ಬ್ರಾಂಚ್ ಆಫೀಸಿನಲ್ಲಿ ಸುಮಾರು ಹತ್ತು ವರುಷಗಳಿಂದ ಸೇವೆಸಲ್ಲಿಸುತ್ತಿದ್ದ ಒಬ್ಬ ಯುವ ಸಾಕ್ಷಿಯಾದ ಆಲೆಕಾಂಡ್ರಾ, ಕ್ಯಾನ್ಸರ್ ರೋಗಕ್ಕಾಗಿ ಕೀಮೋಥೆರಪಿ ಚಿಕಿತ್ಸೆಯನ್ನು ಪಡೆಯುತ್ತಿದ್ದಳು. ಅವಳ ಸ್ಥಿತಿಯು ತೀರಾ ಹದಗೆಟ್ಟಿತು, ಮತ್ತು ಅವಳು ಬಹಳ ಬಲಹೀನಳಾಗಿ ತನ್ನ ದೈನಂದಿನ ಕೆಲಸವನ್ನು ಸಹ ಮಾಡಲು ಅಶಕ್ತಳಾದಳು. ಆದರೆ, ತನ್ನ ಶುಶ್ರೂಷೆಯನ್ನು ಬಿಟ್ಟುಬಿಡಲು ಆಕೆ ಬಯಸದಿದ್ದ ಕಾರಣ ಪತ್ರಗಳನ್ನು ಬರೆದು ಸಾಕ್ಷಿನೀಡಲು ನಿರ್ಧರಿಸಿದಳು. ಪತ್ರಗಳಲ್ಲಿ ಉಚಿತ ಮನೆ ಬೈಬಲ್ ಅಧ್ಯಯನದ ಕುರಿತು ಅವಳು ಬರೆದಳು ಮತ್ತು ತನ್ನ ತಾಯಿಯ ಫೋನ್ ನಂಬರ್ ಅನ್ನು ಸಹ ಸೇರಿಸಿದಳು. ಅನಂತರ ಅವಳು ತನ್ನ ತಾಯಿಗೆ ಅವನ್ನು ನೀಡಿ, ಮನೆಯಿಂದ ಮನೆಯ ಸೇವೆಯ ಸಮಯದಲ್ಲಿ ಜನರು ಮನೆಯಲ್ಲಿಲ್ಲದಿದ್ದರೆ ಈ ಪತ್ರಗಳನ್ನು ಅವರ ಮನೆಯಲ್ಲಿ ಇಡುವಂತೆ ಕೇಳಿಕೊಂಡಳು.
ಏತನ್ಮಧ್ಯೆ, ಗ್ವಾಟೆಮಾಲದ ಯುವ ಹುಡುಗಿಯಾದ ಡ್ಯೋಹಾನೀ ಮನೆಗೆಲಸಕ್ಕೆಂದು ಮೆಕ್ಸಿಕೊದ ಕನ್ಕೂನ್ ಎಂಬ ಸ್ಥಳಕ್ಕೆ ಹೋದಳು. ಅಲ್ಲಿರುವಾಗ ಅವಳಿಗೆ ಯೆಹೋವನ ಸಾಕ್ಷಿಗಳ ಪರಿಚಯವಾಯಿತು ಮತ್ತು ಅವರೊಂದಿಗೆ ಬೈಬಲ್ ಚರ್ಚೆಗಳಲ್ಲಿ ಸಹ ಅವಳು ಆನಂದಿಸಿದಳು. ಅನಂತರ, ಅವಳು ಎಲ್ಲಿ ಕೆಲಸಮಾಡುತ್ತಿದ್ದಳೊ ಆ ಮನೆಯ ದಂಪತಿಯರು ಮೆಕ್ಸಿಕೊ ಸಿಟಿಗೆ ಸ್ಥಳಾಂತರಿಸಿದರು ಮತ್ತು ಡ್ಯೋಹಾನೀ ಸಹ ತಮ್ಮೊಂದಿಗೆ ಬರುವಂತೆ ಅವರು ಬಯಸಿದರು. ಸಾಕ್ಷಿಗಳೊಂದಿಗಿನ ತನ್ನ ಸಂಪರ್ಕವು ನಿಂತುಹೋಗುತ್ತದೆಂಬ ಕಾರಣಕ್ಕಾಗಿ ಡ್ಯೋಹಾನೀ ಮೆಕ್ಸಿಕೊ ಸಿಟಿಗೆ ಸ್ಥಳಾಂತರಿಸಲು ಹಿಂಜರಿದಳು.
“ಚಿಂತಿಸಬೇಡ, ಸಾಕ್ಷಿಗಳು ಎಲ್ಲಾ ಕಡೆಯಲ್ಲಿಯೂ ಇದ್ದಾರೆ. ನಾವು ಅಲ್ಲಿಗೆ ಹೋದೊಡನೆ ಅವರಿಗಾಗಿ ಹುಡುಕುತ್ತೇವೆ” ಎಂದು ಅವಳ ಮಾಲೀಕರು ಆಶ್ವಾಸನೆ ನೀಡಿದರು. ಆ ಸಂತೋಷಕರ ಭರವಸೆಯೊಂದಿಗೆ ಡ್ಯೋಹಾನೀ ಅವರೊಂದಿಗೆ ಹೋಗಲು ಒಪ್ಪಿಕೊಂಡಳು. ಮೆಕ್ಸಿಕೊ ಸಿಟಿಯನ್ನು ತಲಪಿದ ಅನಂತರ ಡ್ಯೋಹಾನೀಯ ಮಾಲೀಕರು ಸಾಕ್ಷಿಗಳಿಗಾಗಿ ಹುಡುಕಿದರು. ಆ ಸಿಟಿಯಲ್ಲಿ 41,000 ಕ್ಕಿಂತ ಹೆಚ್ಚು ಮಂದಿ ಸಾಕ್ಷಿಗಳು ಮತ್ತು 730 ಸಭೆಗಳಿದ್ದರೂ ಯಾವುದೋ ಕಾರಣದಿಂದ ಅವರು ಸಾಕ್ಷಿಗಳನ್ನು ಕಂಡುಹಿಡಿಯಶಕ್ತರಾಗಲಿಲ್ಲ.
ಸ್ವಲ್ಪ ಸಮಯದಲ್ಲಿ ಡ್ಯೋಹಾನೀ, ಯೆಹೋವನ ಸಾಕ್ಷಿಗಳನ್ನು ಕಂಡುಹಿಡಿದು ಬೈಬಲ್ ಚರ್ಚೆಯನ್ನು ಪುನಃ ಆರಂಭಿಸಲು ಶಕ್ತಳಾಗದ ಕಾರಣ ನಿರುತ್ತೇಜನಗೊಂಡಳು. ಒಂದು ದಿನ ಅವಳು ಕೆಲಸಮಾಡುತ್ತಿದ್ದ ಮನೆಯ ಹೆಂಗಸು ಅವಳಿರುವಲ್ಲಿಗೆ ಬಂದು ಹೀಗೆಂದಳು: “ಆಶ್ಚರ್ಯದ ಸುದ್ದಿ! ನಿನ್ನ ದೇವರು ನಿನ್ನ ಪ್ರಾರ್ಥನೆಗಳನ್ನು ಆಲಿಸಿದ್ದಾನೆ.” ಅವಳ ಕೈಗೆ ಒಂದು ಪತ್ರವನ್ನು ನೀಡುತ್ತಾ ಅವಳಂದದ್ದು: “ಸಾಕ್ಷಿಗಳು ಈ ಕಾಗದವನ್ನು ನಿನಗಾಗಿ ಬಿಟ್ಟು ಹೋಗಿದ್ದಾರೆ.” ಅದು ಆಲೆಕಾಂಡ್ರಾಳ ಪತ್ರವಾಗಿತ್ತು.
ಡ್ಯೋಹಾನೀಯು ಆಲೆಕಾಂಡ್ರಾಳ ತಾಯಿಯನ್ನು ಮತ್ತು ತಂಗಿ ಬ್ಲಾನ್ಕಾಳನ್ನು ಭೇಟಿಯಾದಳು. ಕೆಲವು ವಾರಗಳ ನಂತರ, ಅವಳು ಆಲೆಕಾಂಡ್ರಾಳನ್ನು ಸಹ ಭೇಟಿಯಾದಳು. ಅವರಿಬ್ಬರು ಪರಸ್ಪರ ಭೇಟಿಯಾಗಲು ಬಹಳ ಸಂತೋಷಪಟ್ಟರು. ಆಧ್ಯಾತ್ಮಿಕವಾಗಿ ಪ್ರಗತಿಯನ್ನು ಮಾಡಸಾಧ್ಯವಾಗುವಂತೆ ಬೈಬಲ್ ಅಧ್ಯಯನವನ್ನು ಕ್ರಮವಾಗಿ ಮಾಡಲು ಆಲೆಕಾಂಡ್ರಾಳು ಅವಳನ್ನು ಉತ್ತೇಜಿಸಿದಳು.
ಸ್ವಲ್ಪ ತಿಂಗಳುಗಳ ಅನಂತರ, ಅಂದರೆ 2003ರ ಜುಲೈ ತಿಂಗಳಿನಲ್ಲಿ ಆಲೆಕಾಂಡ್ರಾಳು ತೀರಿಹೋದಳು. ಅವಳು ತನ್ನ ಜೊತೆ ವಿಶ್ವಾಸಿಗಳಿಗೆ ನಂಬಿಕೆ ಮತ್ತು ಧೈರ್ಯದ ಒಂದು ಉತ್ತಮ ಮಾದರಿಯನ್ನು ಬಿಟ್ಟುಹೋದಳು. ಶವಸಂಸ್ಕಾರದ ಸ್ಥಳದಲ್ಲಿ ಅನೇಕರು ಡ್ಯೋಹಾನೀಯನ್ನು ಭೇಟಿಯಾಗಿ, ಅವಳು ಹೀಗೆ ಹೇಳುವುದನ್ನು ಕೇಳಿ ಬಹಳ ದುಃಖಿತರಾದರು: “ಆಲೆಕಾಂಡ್ರಾ ಮತ್ತು ಅವಳ ಕುಟುಂಬದ ಸದಸ್ಯರು ನನಗೆ ಒಂದು ಉತ್ತಮ ಮಾದರಿಯಾಗಿದ್ದಾರೆ. ಯೆಹೋವನನ್ನು ಸೇವಿಸಲು ಮತ್ತು ಬೇಗನೆ ದೀಕ್ಷಾಸ್ನಾನ ಪಡೆದುಕೊಳ್ಳಲು ನಾನು ದೃಢನಿರ್ಧಾರವನ್ನು ಮಾಡಿದ್ದೇನೆ. ಮುಂದೆ ಬರಲಿರುವ ಪರದೈಸಿನಲ್ಲಿ ಆಲೆಕಾಂಡ್ರಾಳನ್ನು ಪುನಃ ನೋಡಲು ನಾನು ಬಹಳ ಹಂಬಲಿಸುತ್ತೇನೆ!”
ಹೌದು, ಒಂದು ಪತ್ರವು ಅತಿ ಸಣ್ಣ ವಿಷಯವಾಗಿರಬಹುದು. ಆದರೆ, ಅದು ಎಷ್ಟು ಉತ್ತಮವಾದ ಮತ್ತು ಬಾಳುವ ಪರಿಣಾಮವನ್ನು ಉಂಟುಮಾಡಶಕ್ತವಾಗಿದೆ!