ಬದಲಾಗುವಂತೆ ಮಾಡಿದ ಒಂದು ಭೇಟಿ
“ದೇವರು ನನ್ನ ಬಳಿಗೆ ಕಳುಹಿಸಿದ ಇಬ್ಬರು ‘ದೇವದೂತರ’ ಬಗ್ಗೆ ನನ್ನ ಕುಟುಂಬದವರಿಗೆ ಹೇಳಲು ನಾನು ಹಾತೊರೆದೆ” ಎಂದು ಒಬ್ಬ ವ್ಯಕ್ತಿ ಬರೆದನು. ಅವನನ್ನು ಯೆಹೋವನ ಸಾಕ್ಷಿಗಳಾಗಿರುವ ಇಬ್ಬರು ಯುವತಿಯರು ಭೇಟಿಯಾಗಿದ್ದರು. ಅವರ ಭೇಟಿಯ ಕೆಲವು ವಾರಗಳಿಗೆ ಮುಂಚೆ, 45 ವರ್ಷ ಅವನ ಬಾಳಸಂಗಾತಿಯಾಗಿದ್ದ ಅವನ ಹೆಂಡತಿ ತೀರಿಹೋಗಿದ್ದಳು. ಈ ದುಃಖ ಅವನನ್ನು ಛಿದ್ರಗೊಳಿಸಿತ್ತು. ಅವನ ಇಬ್ಬರು ವಯಸ್ಕ ಮಕ್ಕಳು ಅವನಿಗೆ ಸಮಾಧಾನ ಹೇಳಿದರಾದರೂ, ಅವರು ತುಂಬ ದೂರದಲ್ಲಿ ವಾಸಿಸುತ್ತಿದ್ದರು. ಸ್ನೇಹಿತರು ಮತ್ತು ನೆರೆಹೊರೆಯವರು ಯಾರೂ ಅವನನ್ನು ಭೇಟಿಮಾಡಲು ಬಂದಿರಲಿಲ್ಲ.
ಆ ವ್ಯಕ್ತಿಯು ತನ್ನನ್ನು ಭೇಟಿಮಾಡಿದ ಆ ಇಬ್ಬರು ಯುವತಿಯರಿಗೆ, “ನಾನು ದೇವರಿಗೆ ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಿದ್ದೇನೆ” ಎಂದು ಹೇಳಿದನು. ಆದರೂ ಅವರು ಅನುಕಂಪ ತೋರಿಸಿ, ಸತ್ತ ಪ್ರಿಯ ಜನರಿಗಾಗಿ ನಿರೀಕ್ಷೆ ಏನು? ಎಂಬ ಬೈಬಲಾಧಾರಿತವಾದ ಒಂದು ಚಿಕ್ಕ ಟ್ರ್ಯಾಕ್ಟ್ ಅನ್ನು ಅವನಿಗೆ ಕೊಟ್ಟರು. ಆ ಸಂಜೆ ಅವನದನ್ನು ಓದಿ ತುಂಬ ಸಾಂತ್ವನ ಪಡೆದುಕೊಂಡನು.
ಕೆಲವೇ ದಿನಗಳಲ್ಲಿ ಆ ಇಬ್ಬರು ಕ್ರೈಸ್ತ ಯುವತಿಯರು ಅವನನ್ನು ಪುನಃ ಭೇಟಿಯಾದರು. ಈ ಹಿಂದೆ ಅವನನ್ನು ಭೇಟಿಯಾದಾಗ ಅವನೆಷ್ಟು ದುಃಖದಲ್ಲಿದ್ದನು ಎಂಬುದನ್ನು ಅವರು ನೆನಪಿಸಿಕೊಂಡು ಈಗ ಹೇಗಿದ್ದಾನೆಂದು ನೋಡಲಿಕ್ಕಾಗಿ ಬಂದಿದ್ದರು. ಆ ವ್ಯಕ್ತಿ ತದನಂತರ ಪತ್ರದಲ್ಲಿ ಹೀಗೆ ಬರೆದನು: “ನನ್ನ ಪರಿಚಯವೇ ಇಲ್ಲದ ಅವರಿಬ್ಬರು ನನ್ನ ಬಗ್ಗೆ ಇಷ್ಟೊಂದು ಕಾಳಜಿ ವಹಿಸಿದ್ದನ್ನು ಮತ್ತು ನನ್ನ ಕ್ಷೇಮದ ಬಗ್ಗೆ ಚಿಂತಿತರಾಗಿರುವುದನ್ನು ನೋಡಿ ನಾನು ದಂಗಾದೆ.” ಅವರು ಬೈಬಲಿನಿಂದ ತೋರಿಸಿದ ವಿಷಯಗಳಿಂದ ಅವನು ಉತ್ತೇಜನ ಪಡೆದುಕೊಂಡನು. ಆ ಯುವತಿಯರು ಹೊರಡುವಾಗ ತಾವು ಪುನಃ ಬರುವೆವೆಂದು ಹೇಳಿದರು. ಇದರಿಂದ ಆ ವ್ಯಕ್ತಿಗೆ ಎಷ್ಟು ಸಂತೋಷವಾಯಿತೆಂದರೆ, ಅವನು ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹಕ್ಕೆ ಒಂದು ಪತ್ರ ಬರೆದು ಈ ಮೇಲಿನ ಮಾತುಗಳನ್ನು ತಿಳಿಸಿದನು.
ತನ್ನ ಮಗನಿದ್ದಲ್ಲಿಗೆ ಹತ್ತಿರವಿರಲು ಆ ಸ್ಥಳ ಬಿಟ್ಟು ಹೋಗುವ ಮುಂಚೆ ಈ ವ್ಯಕ್ತಿ ಯೆಹೋವನ ಸಾಕ್ಷಿಗಳ ಒಂದು ಕೂಟಕ್ಕೆ ಹಾಜರಾದನು ಮತ್ತು ಆ ಇಬ್ಬರು ಯುವತಿಯರಲ್ಲಿ ಒಬ್ಬಳ ಕುಟುಂಬವು ಅವನನ್ನು ಊಟಕ್ಕೆ ಕರೆಯಿತು. ಅವನು ಬರೆದುದು: “ನಾನೀಗ ಈ ಸ್ಥಳವನ್ನು ಬಿಟ್ಟುಹೋಗುತ್ತಿದ್ದೇನೆ, ಆದರೆ ಆ ಯುವತಿಯರು ಮತ್ತು ಅವರ ಚರ್ಚ್ನ ಬಗ್ಗೆ ನಾನು ಯಾವಾಗಲೂ ನೆನಪಿಸಿಕೊಳ್ಳುವೆ ಮತ್ತು ಅವರಿಗಾಗಿ ಪ್ರಾರ್ಥಿಸುವೆ. ಹೌದು, ನಾನೀಗ ತುಂಬ ಪ್ರಾರ್ಥನೆ ಮಾಡುತ್ತೇನೆ. ನಾನು ಪೂರ್ತಿ ಬದಲಾಗಿದ್ದೇನೆ. ಇದರಲ್ಲಿ ಆ ಯುವತಿಯರು ದೊಡ್ಡ ಪಾತ್ರವಹಿಸಿದರು ಮತ್ತು ನಾನು ಅವರಿಗೆ ಚಿರಋಣಿ.” (w06 7/1)