ಕಾಯಫನ ಕುಟುಂಬಕ್ಕೆ ಸೇರಿದವಳು
ಬೈಬಲಿನಲ್ಲಿ ತಿಳಿಸಲಾಗಿರುವ ವ್ಯಕ್ತಿಗಳು ನಿಜವಾಗಿಯೂ ಅಸ್ತಿತ್ವದಲ್ಲಿದ್ದರು. ಈ ಸತ್ಯಕ್ಕೆ ಪ್ರಾಕ್ತನಶಾಸ್ತ್ರಜ್ಞರು ಕಂಡುಕೊಂಡ ವಸ್ತುಗಳು ನೇರ ಇಲ್ಲವೆ ಪರೋಕ್ಷ ರುಜುವಾತು ನೀಡುತ್ತವೆ. ಹೀಗೆ ಸಿಕ್ಕಿದ ಒಂದು ಅಸ್ಥಿಪೆಟ್ಟಿಗೆಯ ಕುರಿತು 2011ರಲ್ಲಿ ಇಸ್ರೇಲ್ನ ವಿದ್ವಾಂಸರು ಮಾಹಿತಿಯನ್ನು ಪ್ರಕಾಶಿಸಿದರು. ಈ ಪೆಟ್ಟಿಗೆ 2,000 ವರ್ಷಗಳಷ್ಟು ಹಳೆಯದು. (ಅಸ್ಥಿಪೆಟ್ಟಿಗೆ ಅಂದರೆ ಸತ್ತ ವ್ಯಕ್ತಿಯ ದೇಹ ಕೊಳೆತುಹೋದ ಮೇಲೆ ಮೂಳೆಗಳನ್ನು ತೆಗೆದು ಇಡಲಾಗುತ್ತಿದ್ದ ಅಲಂಕೃತ ಸುಣ್ಣಕಲ್ಲಿನ ಪೆಟ್ಟಿಗೆ.)
ಈ ಅಸ್ಥಿಪೆಟ್ಟಿಗೆಯ ಮೇಲೆ ಕೆತ್ತನೆ ಬರಹವಿದೆ. ಅದು, “ಬೆತ್ ಇಮ್ರಿಯ ಮಾಜ್ಯ ಯಾಜಕನಾದ ಕಾಯಫನ ಮಗ ಯೆಶೂವನ ಮಗಳಾದ ಮಿರ್ಯಾಮ್” ಎಂದಾಗಿದೆ. ಯೇಸುವಿನ ವಿಚಾರಣೆ ನಡೆಸಿ ಮರಣಕ್ಕೊಪ್ಪಿಸಿದ್ದರಲ್ಲಿ ಒಳಗೂಡಿದ್ದ ಯೆಹೂದಿ ಮಹಾ ಯಾಜಕನು ಕಾಯಫನಾಗಿದ್ದನು. (ಯೋಹಾ. 11:48-52) ಆ ಮಹಾ ಯಾಜಕನು “ಕಾಯಫನೆಂದು ಕರೆಯಲಾಗುತ್ತಿದ್ದ ಯೋಸೇಫ್” ಎಂದು ಇತಿಹಾಸಕಾರ ಫ್ಲೇವಿಯಸ್ ಜೋಸೀಫಸ್ ಹೇಳುತ್ತಾರೆ. ಹಾಗಾದರೆ ಮಿರ್ಯಾಮಳು ಕಾಯಫನ ಸಂಬಂಧಿಕರಲ್ಲಿ ಒಬ್ಬಳಾಗಿದ್ದಿರಬೇಕು. ಹಿಂದೊಮ್ಮೆ ಪ್ರಾಕ್ತನಶಾಸ್ತ್ರಜ್ಞರಿಗೆ ಸಿಕ್ಕಿದ ಒಂದು ಅಸ್ಥಿಪೆಟ್ಟಿಗೆಯನ್ನು ಮಹಾ ಯಾಜಕನಾದ ಕಾಯಫನದ್ದೆಂದು ಹೇಳಲಾಗಿತ್ತು. ಅದರ ಮೇಲೆ “ಯೆಹೊಸೆಫ್ ಬಾರ್ ಕಾಯಫಾ” (ಅಂದರೆ ಕಾಯಫನ ಮಗನಾದ ಯೋಸೇಫ್)a ಎಂಬ ಕೆತ್ತನೆಯಿತ್ತು. ಅಂದರೆ ಮಿರ್ಯಾಮಳು ಕಾಯಫನ ಸಂಬಂಧಿಯಾಗಿದ್ದಳು.
ಪ್ರಾಚೀನ ವಸ್ತುಗಳ ಸಂಶೋಧನೆ ಮಾಡುವ ಇಸ್ರೇಲ್ನ ಒಂದು ಸಂಸ್ಥೆ (ಇಸ್ರೇಲ್ ಆ್ಯಂಟಿಕ್ವಿಟಿ ಆತಾರಿಟಿ) ಹೇಳುವ ಪ್ರಕಾರ ಪುರಾತನ ಗೋರಿಯನ್ನು ಕೊಳ್ಳೆಹೊಡೆದಿದ್ದ ಕಳ್ಳರಿಂದ ಮಿರ್ಯಾಮಳ ಅಸ್ಥಿಪೆಟ್ಟಿಗೆಯನ್ನು ವಶಪಡಿಸಿಕೊಳ್ಳಲಾಯಿತು. ಕೌಶಲದಿಂದ ರಚಿಸಲಾದ ಈ ಪೆಟ್ಟಿಗೆಯನ್ನು ಮತ್ತು ಅದರ ಮೇಲಿರುವ ಕೆತ್ತನೆಬರಹವನ್ನು ಜಾಗ್ರತೆಯಿಂದ ಪರೀಕ್ಷಿಸಿದಾಗ ಅದು ವಿಶ್ವಾಸಾರ್ಹವೆಂದು ಸಾಬೀತಾಗಿದೆ.
ಮಿರ್ಯಾಮಳ ಅಸ್ಥಿಪೆಟ್ಟಿಗೆಯು ಆಸಕ್ತಿಕರವಾದ ಹೊಸ ವಿಷಯವನ್ನೂ ಬಿಚ್ಚಿಡುತ್ತದೆ. ಆ ಪೆಟ್ಟಿಗೆಯ ಮೇಲೆ “ಮಾಜ್ಯ” ಎಂಬ ಹೆಸರು ಇದೆ. ಯೆರೂಸಲೇಮಿನ ದೇವಾಲಯದಲ್ಲಿ ಸರದಿಯ ಪ್ರಕಾರ ಸೇವೆಮಾಡಲು 24 ಗುಂಪುಗಳಾಗಿ ವಿಭಾಗಿಸಲ್ಪಟ್ಟ ಯಾಜಕ ವರ್ಗಗಳಲ್ಲಿ ಕೊನೆಯದೇ ಮಾಜ್ಯ ಆಗಿದೆ. (1 ಪೂರ್ವ. 24:18) “ಕಾಯಫನ ಕುಟುಂಬವು ಮಾಜ್ಯ ವಿಭಾಗಕ್ಕೆ ಸೇರಿದ್ದು” ಎಂದು ಮಿರ್ಯಾಮಳ ಅಸ್ಥಿಪೆಟ್ಟಿಗೆಯ ಮೇಲಿರುವ ಕೆತ್ತನೆಬರಹ ತೋರಿಸುತ್ತದೆಂದು ಆ ಸಂಸ್ಥೆ ಹೇಳಿತು.
ಮಿರ್ಯಾಮಳ ಅಸ್ಥಿಪೆಟ್ಟಿಗೆ ಮೇಲೆ ‘ಬೆತ್ ಇಮ್ರಿ’ ಎಂಬ ಹೆಸರು ಕೂಡ ಇದೆ. ಇದಕ್ಕೆ ಎರಡು ಅರ್ಥಗಳಿರುವ ಸಾಧ್ಯತೆಯಿದೆ. “ಒಂದು ಯಾವುದೆಂದರೆ ಬೆತ್ ಇಮ್ರಿ ಎಂಬುದು ಒಂದು ಯಾಜಕ ಕುಟುಂಬದ (ಇಮ್ಮೇರನ ಪುತ್ರರು) (ಎಜ್ರ 2:36, 37; ನೆಹೆಮೀಯ 7:39-42) ಹೆಸರಾಗಿರಬಹುದು. ಅವನ ಪುತ್ರರ ಸಂತತಿಯು ಮಾಜ್ಯ ವಿಭಾಗದಲ್ಲಿತ್ತು. ಎರಡನೆಯ ಅರ್ಥ [ಬೆತ್ ಇಮ್ರಿ ಎಂಬುದು] ಮಿರ್ಯಾಮಳ ಅಥವಾ ಆಕೆಯ ಇಡೀ ಕುಟುಂಬದ ಸ್ವಂತ ಊರು ಆಗಿರಬಹುದು” ಎನ್ನುತ್ತದೆ ಆ ಸಂಸ್ಥೆ. ಏನೇ ಆಗಿರಲಿ ಮಿರ್ಯಾಮಳ ಅಸ್ಥಿಪೆಟ್ಟಿಗೆ ಒಂದು ವಿಷಯಕ್ಕಂತೂ ಸಾಕ್ಷ್ಯ ಕೊಡುತ್ತದೆ. ಅದೇನೆಂದರೆ ಬೈಬಲಿನಲ್ಲಿ ತಿಳಿಸಲಾಗಿರುವ ವ್ಯಕ್ತಿಗಳು ಮತ್ತು ಕುಟುಂಬಗಳು ನಿಜವಾಗಿಯೂ ಇದ್ದವೆಂದೇ.
[ಪಾದಟಿಪ್ಪಣಿ]
a ಕಾಯಫನ ಅಸ್ಥಿಪೆಟ್ಟಿಗೆಯ ಕುರಿತ ಮಾಹಿತಿಗಾಗಿ 2006, ಜನವರಿ 15ರ ಕಾವಲಿನಬುರುಜು ಪುಟ 10-13ರಲ್ಲಿರುವ “ಯೇಸುವನ್ನು ದಂಡನೆಗೊಳಪಡಿಸಿದ ಮಹಾ ಯಾಜಕ” ಎಂಬ ಲೇಖನ ನೋಡಿ.
[ಪುಟ 30ರಲ್ಲಿರುವ ಚಿತ್ರ]
ಹಿನ್ನೆಲೆ: ಅಸ್ಥಿಪೆಟ್ಟಿಗೆಗಳನ್ನು ಇಡಲಾಗುತ್ತಿದ್ದ ಒಂದು ಸ್ಥಳ
[ಕೃಪೆ]
Todd Bolen/BiblePlaces.com
[ಪುಟ 30ರಲ್ಲಿರುವ ಚಿತ್ರ]
[ಕೃಪೆ]
Boaz Zissu, Bar-Ilan University, Israel