ಹರಟೆ ನಿಮಗೂ ಇತರರಿಗೂ ನೋವು ಮಾಡುವುದನ್ನು ತಪ್ಪಿಸುವ ವಿಧ
ಜನರು ಇರುವಷ್ಟು ಕಾಲ ಹರಟೆಯೂ ಇರುವುದು. ಬೈಬಲಿನಲ್ಲಿ ಪ್ರವಾದಿಸಿರುವ ಪರಿಪೂರ್ಣವಾದ ಹೊಸ ಜಗತ್ತು ಸಹ ಹರಟೆಮುಕ್ತವಾಗಿರುವುದು ಅಸಂಭವನೀಯ.a (2 ಪೇತ್ರ 3:13) ಮಿತ್ರ, ಪರಿಚಿತರ ವಿಷಯ ಅವಿಧಿಯಾದ ಅನಿಯತ ಮಾತುಕತೆಯು ನಾವು ಅವರೊಂದಿಗೆ ಸಂಪರ್ಕ ಬೆಳೆಸಿ ಆರೋಗ್ಯಕರವಾದ ಸಂಬಂಧವನ್ನಿಟ್ಟುಕೊಳ್ಳುವ ಅವಶ್ಯ ಭಾಗವಾಗಿದೆ.
ಆದರೂ, ನೋವುಂಟುಮಾಡುವ, ಮತ್ಸರದ ಹರಟೆ, ಯಾ ಚಾಡಿಗೆ ನೆವವೆಂಬುದೇ ಇಲ್ಲ! ಆ ರೀತಿಯ ಮಾತು ಹಾನಿ ಮಾಡುತ್ತದೆ, ಊನಗೊಳಿಸುತ್ತದೆ; ಅದು ಜೀವಗಳನ್ನು, ಬಾಂಧವ್ಯಗಳನ್ನು, ಮತ್ತು ಖ್ಯಾತಿಗಳನ್ನು ಹಾಳುಗೊಳಿಸಬಲ್ಲದು. ಹಾಗಾದರೆ ಔಚಿತ್ಯದ ರೇಖೆಯನ್ನು ದಾಟಿ ಹಾನಿಕರವಾದ ಹರಟೆಗೆ ತೊಡಗುವುದನ್ನು ನೀವು ಹೇಗೆ ತಪ್ಪಿಸಬಲ್ಲಿರಿ? ಅದರಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಲ್ಲಿರಿ? ಈ ವಿಷಯದಲ್ಲಿ ಕೊಡಲ್ಪಟ್ಟಿರುವ ಅತ್ಯುತ್ತಮ ಸಲಹೆಗಳಲ್ಲಿ ಕೆಲವು ಬೈಬಲಿನಲ್ಲಿ ಲಿಖಿತವಾಗಿವೆ. ಈ ಸಲಹೆಯಲ್ಲಿ ಕೇವಲ ಕೆಲವನ್ನು ನಾವು ನೋಡೋಣ.
ನಿಮ್ಮ ನಾಲಿಗೆಯನ್ನು ಕಚ್ಚಿರಿ: “ಸಂಭಾಷಣೆಯು ಮನಸ್ಸಿನ ಬಳಕೆ, ಆದರೆ ಹರಟೆ ಕೇವಲ ನಾಲಿಗೆಯ ಬಳಕೆ” ಎಂದು ಹೇಳಲಾಗಿದೆ. ಅಧಿಕಾಂಶ ಹಾನಿಕಾರಕ ಮಾತು ಮತ್ಸರವನ್ನಲ್ಲ, ಮಾತನಾಡುವ ಮೊದಲು ಯೋಚಿಸಲು ತಪ್ಪುವುದನ್ನು ಪ್ರತಿಬಿಂಬಿಸುತ್ತದೆ. ಕೆಲವರು ಇತರರ ವ್ಯವಹಾರಗಳ ಕುರಿತು ಮಾತಾಡುತ್ತಾರೆ; ಅವರು ಅದಕ್ಕೆ ಮಸಾಲೆ ಬೆರಸಿ, ಅತಿಶಯಿಸಿ, ಅಂತ್ಯಪರಿಣಾಮದ ಲಕ್ಷ್ಯವಿಲ್ಲದೆ ಅದನ್ನು ಕೊಂಕಿಸುತ್ತಾರೆ. ತಮ್ಮ ಮಿತ್ರರ, ವಿವಾಹಜೊತೆಗಳ, ಮತ್ತು ತಮ್ಮ ಮಕ್ಕಳ ತಪ್ಪುಗಳನ್ನು, ತಾವು ಮಾಡುತ್ತಿರುವ ಹಾನಿಯನ್ನು ವಿವೇಚಿಸದೆ ಬಯಲುಪಡಿಸುತ್ತಾರೆ.
ಆದರೆ ಬೈಬಲು ಈ ಸಲಹೆ ನೀಡುತ್ತದೆ: “ಮಾತಿನ ಯಥೇಷ್ಟತೆಯಲ್ಲಿ ಪಾಪ ತಪ್ಪುವುದಿಲ್ಲ, ಆದರೆ ತನ್ನ ತುಟಿಗಳನ್ನು ತಡೆಗಟ್ಟುವವನು ವಿವೇಕದಿಂದ ವರ್ತಿಸುತ್ತಾನೆ.” (ಜ್ಞಾನೋಕ್ತಿ 10:19, NW) ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಮಾತನಾಡುವ ಮೊದಲು ಯೋಚಿಸಿರಿ. ಇನ್ನೊಬ್ಬನ ವಿಷಯ ಏನಾದರೂ ಹೇಳುವ ಮೊದಲು ಆಲೋಚಿಸಿರಿ. ಹೀಗೆ ಕೇಳಿಕೊಳ್ಳಿರಿ: ‘ನಾನು ಆ ವ್ಯಕ್ತಿಯ ಸಮಕ್ಷಮದಲ್ಲಿ ಇದನ್ನು ಹೇಳಿಯೇನೊ? ನನ್ನ ವಿಷಯ ಹೀಗೆ ಹೇಳಲ್ಪಡುವಲ್ಲಿ ನನಗೆ ಹೇಗನಿಸೀತು?’ (ಮತ್ತಾಯ 7:12) ಕೀರ್ತನೆ 39:1 ಹೇಳುವುದು: “ನನ್ನ ನಾಲಿಗೆ ಪಾಪಕ್ಕೆ ಹೋಗದಂತೆ ಜಾಗರೂಕನಾಗಿರುವೆನು; ದುಷ್ಟರು ನನ್ನ ಮುಂದೆ ಇರುವಾಗ ಬಾಯಿಗೆ ಕುಕ್ಕೆ ಹಾಕಿಕೊಂಡಿರುವೆನು.”
ನಿಮ್ಮ ನಾಲಿಗೆಯನ್ನು ಕಚ್ಚುವುದು ತೀರಾ ಅಸಾಧ್ಯವಾಗಿ ಪರಿಣಮಿಸುವ ಸಂದರ್ಭಗಳಿರಬಹುದೆಂಬುದು ಒಪ್ಪತಕ್ಕದ್ದೇ. ದೃಷ್ಟಾಂತಕ್ಕೆ, ನಿಮ್ಮ ಯಾ ನಿಮ್ಮ ಕುಟುಂಬದ ವಿರುದ್ಧ ಗುರುತರವಾದ ತಪ್ಪು ಮಾಡಲಾಗಿದೆಯೆಂಬ ಬಲವಾದ ಸಂಶಯ ನಿಮಗಿರಬಹುದು. ನಿಮ್ಮಲ್ಲಿ ಆ ವಿಷಯ ರುಜುವಾತಿಲ್ಲದ್ದಿದರೂ, ನಿಮಗೆ ಆ ಸಂಬಂಧದಲ್ಲಿ ಕ್ರಮ ಕೈಕೊಳ್ಳಬೇಕಾದ ಆವಶ್ಯಕತೆ ಇದೆಯೆಂದು ನೀವು ಎಣಿಸಬಹುದು. ಹಾಗಾದರೆ, ಈ ವಿಷಯ ಒಬ್ಬ ಭರವಸಯೋಗ್ಯ ಮಿತ್ರನೊಂದಿಗೆ ಯಾ ಅಧಿಕಾರಸ್ಥಾನದಲ್ಲಿರುವ ಒಬ್ಬನೊಂದಿಗೆ ಮಾತನಾಡುವುದು ಚಾಡಿಯೊ? ಬುದ್ಧಿವಾದಕ್ಕಾಗಿ ನೀವು ಒಬ್ಬನನ್ನು ಸಮೀಪಿಸುವಲ್ಲಿ ಹಗೆಸಾಧಿಸುವ ಹರಟೆಗಾರರಾಗುತ್ತೀರೊ? ಅಲ್ಲವೆಂಬುದು ಸ್ಪಷ್ಟ. ಗೋಪ್ಯವಾಗಿ ಮಾತನಾಡುವ ವಿವೇಕವನ್ನು ಬೈಬಲು ಒಪ್ಪಿಕೊಳ್ಳುತ್ತದೆ. ಆದರೆ ಇಂಥ ಸೂಕ್ಷ್ಮ ಪರಿಸ್ಥಿತಿಗಳನ್ನು ನಿಭಾಯಿಸುವಾಗ ಉತ್ತಮ ನಿರ್ಣಯ ಮತ್ತು ಸಮತೆ ಆವಶ್ಯಕವೆಂಬುದು ನಿಶ್ಚಯ.—ಜ್ಞಾನೋಕ್ತಿ 15:22.
ನೋಯಿಸುವ ಹರಟೆಗೆ ಕಿವಿಗೊಡಬೇಡಿರಿ: ‘ದೊಡ್ಡ ಕಿವಿ’ಗಳೇ ಇಲ್ಲವಾದರೆ ‘ದೊಡ್ಡ ಬಾಯಿ’ಗಳಿಗೆ ಏನಾದೀತು? ಹುಚ್ಚು ಮಾತಿನಲ್ಲಿ ಸದಾ ತೊಡಗುವವರು ಸಮಸ್ಯೆಯ ಕೇವಲ ಒಂದು ಅಂಶ; ಇದಕ್ಕೆ ಕಿವಿಗೊಡಲು ಸಂತೋಷಿಸುವವರೂ ಇದಕ್ಕೆ ಜವಾಬ್ದಾರರು. ಕೇವಲ ಕಿವಿಗೊಡುವುದೂ ನಿಮ್ಮ ಮೌನ ಒಪ್ಪಿಗೆಯನ್ನು ಸೂಚಿಸಿ, ನೋಯಿಸುವ ಹರಟೆಯ ಹಬ್ಬುವಿಕೆಗೆ ಸಹಾಯ ಮಾಡಬಹುದು. ಜ್ಞಾನೋಕ್ತಿ 17:4 ಹೇಳುವುದು: “ಕೆಡುಕನು ಕೆಟ್ಟ ತುಟಿಗಳನ್ನು ಗಮನಿಸುವನು; ಸುಳ್ಳುಗಾರನು ನಾಶನದ ನಾಲಿಗೆಗೆ ಕಿವಿಗೊಡುವನು.”
ಆದುದರಿಂದ, ಒಬ್ಬನ ವಿಷಯ ನಡೆಯುತ್ತಿರುವ ಮಾತುಕತೆ ನಿಯಂತ್ರಣ ತಪ್ಪುವುದಾದರೆ, ನೀವು ಧೈರ್ಯ ತಕ್ಕೊಂಡು, ‘ನಾವು ವಿಷಯ ಬದಲಾಯಿಸೋಣ’ ಎಂದು ಹೇಳಬಹುದು. ಮತ್ತು ನಿಮ್ಮ ಈಗಿನ ಮಿತ್ರ ಬಳಗವು ನೋಯಿಸುವ ಹರಟೆ ಹೊಡೆಯುವುದರಲ್ಲಿ ವಾಸಿ ಮಾಡಲಾಗದ ಪ್ರವೃತ್ತಿಯುಳ್ಳದ್ದಾಗಿರುವಲ್ಲಿ, ಹೊಸ ಒಡನಾಡಿಗಳನ್ನು ಕಂಡುಹಿಡಿಯುವ ಪ್ರಯತ್ನವನ್ನೂ ನೀವು ಮಾಡಬೇಕಾದೀತು. ಬೈಬಲು ಹೇಳುವುದು: “ಹರಟೆಮಲ್ಲನು ರಹಸ್ಯವನ್ನು ಎಂದಿಗೂ ಇಟ್ಟುಕೊಳ್ಳನು. ಮಿತಿಮೀರಿ ಮಾತನಾಡುವ ಜನರಿಂದ ದೂರವಿರ್ರಿ.” (ಜ್ಞಾನೋಕ್ತಿ 20:19, ಟುಡೇಸ್ ಇಂಗ್ಲಿಷ್ ವರ್ಷನ್) ಸ್ವಲ್ಪ ಸಮಯದೊಳಗೆ ನೀವೇ ಅವರ ಚರ್ಚೆಯ ವಿಷಯವಸ್ತುವಾಗುವುದು ಸಂಭವನೀಯ.
ಹರಟೆಗೆ ಮಿತಿಮೀರಿದ ಪ್ರತಿಕ್ರಿಯೆ ತೋರಿಸಬೇಡಿರಿ: ಅಧಿಕಾಂಶ ಜನರು ಹರಟೆ ಎಷ್ಟರ ತನಕ ತಮ್ಮ ವಿಷಯವಲ್ಲವೊ ಅಷ್ಟರ ತನಕ ಅದರಲ್ಲಿ ಸಂತೋಷಿಸುತ್ತಾರೆ. ಆದರೆ, ನೀವೇ ಒಂದು ಕೆಟ್ಟ ಗಾಳಿಸುದ್ದಿಯ ಅಥವಾ ಸುಳ್ಳು ಕಥೆಯ ಬಲಿಪಶುವಾಗಿದ್ದೀರೆಂದು ಭಾವಿಸೋಣ. ಕೆಲವು ಬಾರಿ ಈ ಕಥೆಯ ಉಗಮವನ್ನು ಕಂಡುಹಿಡಿದು ವಿಷಯವನ್ನು ಶಾಂತತೆಯಿಂದ ಸರಿಪಡಿಸಲು ಸಾಧ್ಯವಾಗುತ್ತದೆ. ಆದರೆ ಇದು ಸಾಧ್ಯವಾಗದೆ ಇರುವಲ್ಲಿ ಏನು?
ಕೋಪಿಸಿಕೊಳ್ಳುವುದರಿಂದ ಏನೂ ನೆರವೇರುವುದಿಲ್ಲ. “ಮುಂಗೋಪಿಯು ಬುದ್ಧಿಗೆಡುವನು” ಎನ್ನುತ್ತದೆ ಬೈಬಲು. (ಜ್ಞಾನೋಕ್ತಿ 14:17) ಸೊಲೊಮೋನನು ಈ ಸಲಹೆಯನ್ನು ನೀಡುತ್ತಾನೆ: “ಆಡುವ ಮಾತುಗಳನ್ನೆಲ್ಲಾ ಲಕ್ಷ್ಯಕ್ಕೆ ತಾರದಿರು . . . ನೀನೂ ಅನೇಕ ವೇಳೆ ಇತರರನ್ನು ಶಪಿಸಿದ್ದೀ ಎಂಬದಕ್ಕೆ ನಿನ್ನ ಮನಸ್ಸೇ ಸಾಕ್ಷಿ.” (ಪ್ರಸಂಗಿ 7:21, 22) ಹರಟೆಯು ಜೀವನದ ನಿಜಸ್ಥಿತಿ, ಮತ್ತು ಒಂದಲ್ಲ ಒಂದು ಸಮಯದಲ್ಲಿ ನೀವೇ ಇದರಲ್ಲಿ ಕ್ರಿಯಾಶೀಲತೆಯಿಂದ ಭಾಗವಹಿಸಿರಬಹುದು. ಆದುದರಿಂದ, ಈ ವಿಷಯ ಕೋಪಿಸಿಕೊಳ್ಳುವುದು ಲಾಭದಾಯಕವೊ? ಸ್ವಲ್ಪ ಸಮಯಾನಂತರ ಅದು ಮಾಸಿಹೋಗುವ ಸಂಭವವಿದೆಯೆ? “ನಗುವ ಸಮಯ”ವಿರುವುದರಿಂದ, ನಿಮಗೆ ವಿನೋದ ಪ್ರವೃತ್ತಿಯಿದೆಯೆಂದು ತೋರಿಸುವುದು, ಅದನ್ನು ನೆನಸಿ ನಗುವುದು, ಆ ಗಾಳಿಸುದ್ದಿಯನ್ನು ಅಡಗಿಸಿಬಿಡುವ ಅತ್ಯುತ್ತಮ ಮಾರ್ಗವಾಗಬಹುದು.—ಪ್ರಸಂಗಿ 3:4.
ಬೆಂಕಿಗೆ ಎಣ್ಣೆ ಸುರಿಯಬೇಡಿರಿ: ಆ ಗಾಳಿಕಥೆ ಸಾಯಲು ನಿರಾಕರಿಸುವಲ್ಲಿ, ಹೀಗೆ ಕೇಳಿಕೊಳ್ಳಿರಿ: ‘ಇತರರು ಹರಟೆ ಹೊಡೆಯಲು ಕಾರಣವನ್ನು ನಾನು ಕೊಡುತ್ತಿರಬಹುದೊ? ನಾನು ತಪ್ಪಿನ ತೋರಿಕೆಯನ್ನು ಕೊಟ್ಟು ಸಂದೇಹಾಸ್ಪದವಾಗಿ ವರ್ತಿಸುತ್ತಿರಬಹುದೊ?’ ಈ ಕೆಳಗಿನ ಸನ್ನಿವೇಶಗಳನ್ನು ಪರಿಗಣಿಸಿರಿ:
▫ ಒಬ್ಬ ಸ್ತ್ರೀಯ ಸಹೋದ್ಯೋಗಿಗಳು—ಆ ಸ್ತ್ರೀ ತನ್ನ ಕೆಲಸವನ್ನು ಯೋಗ್ಯ ರೀತಿಯಲ್ಲಿ ನಿರ್ವಹಿಸುವಾಗಲೂ—ಹಿಂದಿನಿಂದ ಆ ಸ್ತ್ರೀಯನ್ನು ಸೋಮಾರಿ ಮತ್ತು ಭರವಸಕ್ಕೆ ಅನರ್ಹಳು ಎಂದು ಕರೆಯುತ್ತಾರೆ. ಈ ಅಪಖ್ಯಾತಿ ಏಕೆ? ಏಕೆಂದರೆ ಅವಳ ನಿರ್ಲಕ್ಷ್ಯದ ನಿಶ್ಚಿಂತ ಮನೋಭಾವವನ್ನು ಸೋಮಾರಿತನವೆಂದು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ. ಅವಳು ಕೆಲಸ ಮಾಡುತ್ತಿರುವ ವ್ಯಾಪಾರ ಸಂಸ್ಥೆಯ ಹಿನ್ನೆಲೆಯಲ್ಲಿ ಅವಳ ಕೇಶಶೈಲಿ ತೀರಾ ಅನಿಯತವಾಗಿದೆ. ಕೊನೆಯದಾಗಿ, ಆಕೆ ಮಾಡುವ ಖಾಸಗಿ ಫೋನ್ ಸಂಭಾಷಣೆಯಲ್ಲಿ ಆಕೆ ಗಟ್ಟಿಯಾಗಿ ಮಾತಾಡಿ, ಇಡೀ ಆಫೀಸು ಕೆಲಸಗಾರರ ಗಮನ ಸೆಳೆಯುವುದರಿಂದ ಅದು ಅವಿವೇಚನೆಯದ್ದಾಗಿದೆ. ಈ ಕಾರಣದಿಂದ ಹರಟೆ!
▫ ಒಬ್ಬ ಸ್ಥಳೀಕ ಅಂಗಡಿಯವನು ಆ ಚಿಕ್ಕ ಸಮಾಜದ ಬೀದಿ ಮಾತಾದನು. ಅವನು ತನ್ನ ಪತ್ನಿಗೆ ಅಪನಂಬಿಗಸ್ತನಾಗಿದ್ದನೆಂದು ಸುದ್ದಿಯಿತ್ತು. ಆದರೆ ಈ ವ್ಯಕ್ತಿ ಅದನ್ನು ಜೋರಾಗಿ ಅಲ್ಲಗಳೆಯುತ್ತಾನೆ. ಆ ಸುದ್ದಿಯ ಕಾರಣವೊ? ಅವನು ತನ್ನ ಸ್ತ್ರೀ ಗಿರಾಕಿಗಳೊಂದಿಗೆ ವಿಪರೀತ ಪರಿಚಯ ಮನೋಭಾವವನ್ನು ತೋರಿಸುವುದೇ.
▫ ಒಬ್ಬ ಹದಿಪ್ರಾಯದ ಹುಡುಗಿಗೆ ಸಡಿಲು ನೈತಿಕತೆ ಇದೆಯೆಂದು ಹೇಳಲಾಗುತ್ತದೆ. ಅವಳಿಗೆ ಅನೇಕ ಪ್ರಣಯಿಗಳಿದ್ದಾರೆಂದೂ ಆಕೆ ಕೋಕೆಯ್ನ್ ಬಳಸುತ್ತಾಳೆಂದೂ ಕೆಲವರ ವಾದ. ಈ ಎಲ್ಲ ಕಥೆಗಳೂ ಸುಳ್ಳು. ಆದರೆ ಮಾದಕ ಪದಾರ್ಥ ಉಪಯೋಗಿಸುವ ಬಳಗದ ವ್ಯಕ್ತಿಗಳೊಂದಿಗೆ ಒಡನಾಟ ಮಾಡುವವಳೆಂಬ ಹೆಸರು ಅವಳಿಗಿದೆ. ಆಕೆಯ ಉಡುಪು, ಕೇಶಶೈಲಿ, ಮತ್ತು ಮುಖಾಲಂಕಾರದಲ್ಲಿ ಅವಳು ವಿಪರೀತಭಾವದವಳು.
ಮತ್ಸರದ ಹರಟೆಯ ಬಲಿಪಶು ನೀವಾಗುವುದಾದರೆ, ನಿಮ್ಮ ನಡತೆ, ಇತರರೊಂದಿಗೆ ನಿಮ್ಮ ವ್ಯವಹಾರ, ನಿಮ್ಮ ಉಡುಪು ಮತ್ತು ಕೇಶಶೈಲಿ ಸಹ ಬೆಂಕಿಗೆ ಎಣ್ಣೆ ಸುರಿಯುವಂತೆ ಮಾಡುತ್ತದೊ ಎಂದು ನಿರ್ಣಯಿಸುವುದು ಸಹಾಯಕರವಾಗಿರಬಹುದು. ಪ್ರಾಯಶಃ, ನಿಮ್ಮ ಜೀವನರೀತಿಯನ್ನು ಸರಿಪಡಿಸುವಲ್ಲಿ ಆ ಗಾಳಿಸುದ್ದಿಯನ್ನು ಅಡಗಿಸಬಹುದು. “ಕಟ್ಟಿಗೆಯಿಲ್ಲದಿದ್ದರೆ ಬೆಂಕಿ ಆರುವುದು” ಎನ್ನುತ್ತದೆ ಬೈಬಲು. (ಜ್ಞಾನೋಕ್ತಿ 26:20) ಇದಲ್ಲದೆ, ನಿಮ್ಮ ವರ್ತನೆ ಔಚಿತ್ಯದ ಮೇರೆಗೆ ಸಮೀಪವಾಗಿರುವುದಾದರೆ, ತಪ್ಪಿಗೆ ಜಾರಿ ಬೀಳುವ ನಿಜಾಪಾಯ ಯಾವಾಗಲೂ ಅಲ್ಲಿದೆ. ಇದು ಒಮ್ಮೆ ಯಾವುದು ಗಾಳಿಸುದ್ದಿಯಾಗಿತ್ತೊ ಅದನ್ನು ಈಗ ನಿಜತ್ವವಾಗಿ ಮಾಡುವುದು.—ಗಲಾತ್ಯ 6:7, 8; 1 ಕೊರಿಂಥ. 10: 12.
“ನಿನ್ನ ಕೆಲಸ ನೋಡಿಕೊ”
ಹರಟೆ ಇಲ್ಲಿ ನೆಲಸಿಬಿಟ್ಟಿದೆ. ಆದರೂ, ಅದಕ್ಕಿರುವ ನಾಶಶಕ್ತಿಯ ಸಾಮರ್ಥ್ಯದ ಕಾರಣ ಅದನ್ನು ಗೌರವಿಸಲೇಬೇಕು. ಈ ಕೆಳಗಿನ ವಿವೇಕದ ಮಾತುಗಳನ್ನು ಕೇವಲ ಅನುಸರಿಸುವುದರ ಮೂಲಕ ನಿಮಗೆ ಮತ್ತು ಇತರರಿಗೆ ತುಂಬ ಹೃದೇದ್ವನೆ ಮತ್ತು ದುಃಖವನ್ನು ದೂರಮಾಡಬಲ್ಲಿರಿ: “ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ ಯಾವದು ಕೀರ್ತಿಗೆ ಯೋಗ್ಯವೂ, ಅವುಗಳೆಲ್ಲವನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ [ಈ ವಿಷಯಗಳನ್ನು ಪರಿಗಣಿಸುತ್ತಾ ಹೋಗಿರಿ, NW]. . . . . ಹೀಗೆ ಮಾಡಿದರೆ ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು.”—ಫಿಲಿಪ್ಪಿ 4:8, 9.
ಹೌದು, ನಾವು ಇತರರ ವಿಷಯ ಮಾತಾಡುವ ಸಂಗತಿಗಳಲ್ಲಿ ದೇವರು ತಾನೆ ಆಸಕ್ತಿ ವಹಿಸುತ್ತಾನೆ. ಯೇಸು ಕ್ರಿಸ್ತನು ಎಚ್ಚರಿಸಿದ್ದು: “ಮನುಷ್ಯರು ಸುಮ್ಮನೆ ಆಡುವ ಪ್ರತಿಯೊಂದು ಮಾತಿನ ವಿಷಯವಾಗಿ ನ್ಯಾಯವಿಚಾರಣೆಯ ದಿನದಲ್ಲಿ ಉತ್ತರ ಕೊಡಬೇಕು. ನಿನ್ನ ಮಾತುಗಳಿಂದಲೇ ನೀತಿವಂತನೆಂದು ತೀರ್ಪು ಹೊಂದುವಿ; ನಿನ್ನ ಮಾತುಗಳಿಂದಲೇ ಅಪರಾಧಿಯೆಂದು ತೀರ್ಪು ಹೊಂದುವಿ.”—ಮತ್ತಾಯ 12:36, 37; ಕೀರ್ತನೆ 52:2-5 ಹೋಲಿಸಿ.
ಇತರರೊಂದಿಗೆ ಸುಸಂಬಂಧ, ಮನಶ್ಶಾಂತಿ, ಮತ್ತು, ಎಲ್ಲಕ್ಕೂ ಮುಖ್ಯವಾಗಿ, ದೇವರೊಂದಿಗೆ ಉತ್ತಮ ನೆಲೆ ನಿಮಗೆ ಬೇಕೊ? ಹಾಗಿರುವಲ್ಲಿ, ದೇವರ ವಾಕ್ಯದ ಪ್ರೇರಿತ ಸಲಹೆಯನ್ನು ಅನುಸರಿಸಿರಿ: “ನೀವು ಮತ್ತೊಬ್ಬರ ಕಾರ್ಯದಲ್ಲಿ ತಲೆಹಾಕದೆ ಸುಮ್ಮಗಿದ್ದು ಸ್ವಂತ ಕಾರ್ಯವನ್ನೇ ನಡೆಸಿಕೊಳ್ಳಿರಿ.” (1 ಥೆಸಲೊನೀಕ 4:11) ಇತರರಲ್ಲಿ ಆಸಕ್ತಿ ತೋರಿಸಿರಿ, ಆದರೆ ಇದನ್ನು ದಯಾಭಾವದಿಂದ ಗೌರವಪೂರ್ವಕವಾಗಿ ಮಾಡಿರಿ. ಹೀಗೆ ನೀವು ಹಗೆಸಾಧನೆಯ ಹಾನಿಕಾರಕ ಹರಟೆಯಿಂದ ಸರಿದು ನಿಲ್ಲುವಿರಿ. (g91 6/8)
[ಅಧ್ಯಯನ ಪ್ರಶ್ನೆಗಳು]
a ಹೆಚ್ಚಿನ ಮಾಹಿತಿಗೆ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯು ಪ್ರಕಟಿಸಿರುವ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದ 19ನೆಯ ಅಧ್ಯಾಯ ನೋಡಿ.
[ಪುಟ 9 ರಲ್ಲಿರುವ ಚಿತ್ರ]
ನೋಯಿಸುವ ಮಾತಿನ ಸ್ಥಳವನ್ನು ಬಿಟ್ಟು ಹೋಗಿರಿ
[ಪುಟ 10 ರಲ್ಲಿರುವ ಚಿತ್ರ]
ನಿಮ್ಮ ಅವಿವೇಚನೆಯ ವರ್ತನೆ ಜನರು ನಿಮ್ಮ ವಿಷಯ ಹರಟೆ ಮಾತಾಡಲು ಕಾರಣ ಕೊಡುತ್ತದೆಯೆ?