ಎಲ್ಲ ಕುಲಗಳು ಒಟ್ಟಾಗಿ ಶಾಂತಿಯಲ್ಲಿ ಜೀವಿಸುವ ಸಮಯ
ದೇವರು “ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ . . . ಭೂಮಂಡಲದಲ್ಲೆಲ್ಲಾ ವಾಸಮಾಡಿಸಿದನು.” (ಅ. ಕೃತ್ಯಗಳು 17:26) ಮಾನವ ಕುಟುಂಬದ ಮೂಲದ ಕುರಿತು ಅದು ಬೈಬಲಿನ ಸರಳವಾದ ಹೇಳಿಕೆಯಾಗಿದೆ.
ಇದು ಏನನ್ನು ಸೂಚಿಸುತ್ತದೆಂದರೆ ಎಲ್ಲಾ ಮಾನವವರ್ಗದವರು, ಅವರು ಎಲ್ಲೇ ಜೀವಿಸಲಿ ಯಾ ಯಾವುದೇ ಶಾರೀರಿಕ ಲಕ್ಷಣಗಳನ್ನು ಅವರು ಹೊಂದಿರಲಿ, ಒಂದೇ ಸಾಮಾನ್ಯ ಬುಡದಿಂದ ಬಂದಿದ್ದಾರೆ. ಗಮನಿಸಬಹುದಾದ ಎಲ್ಲಾ ವ್ಯತ್ಯಾಸಗಳ ಹೊರತಾಗಿಯೂ, “ಎಲ್ಲಾ ಜನಾಂಗದವರಿಗೆ” ಸಾಮರ್ಥ್ಯಗಳು ಮತ್ತು ಬುದ್ಧಿಶಕ್ತಿಯ ವಿಷಯದಲ್ಲಿ ಸಮಾನವಾದ ಶಕ್ತಿಯಿದೆ ಎಂಬುದನ್ನು ಕೂಡ ಅದು ಅರ್ಥೈಸುತ್ತದೆ. ಹೌದು, ದೇವರ ದೃಷ್ಟಿಯಲ್ಲಿ, ಪ್ರತಿಯೊಂದು ಕುಲ ಯಾ ಜನಾಂಗದ ಮಾನವರು ಸಮಾನರಾಗಿದ್ದಾರೆ.—ಅ. ಕೃತ್ಯಗಳು 10:34, 35.
ಬೈಬಲಿನ ನೋಟವು ಸರಿಯಾಗಿದ್ದರೆ, ಕುಲದ ಭಿನ್ನತೆಗಳ ಮೇಲೆ ಆಧಾರಿತವಾದ ಎಲ್ಲಾ ಪೂರ್ವಾಗ್ರಹಗಳನ್ನು ಮತ್ತು ಅನ್ಯಾಯಗಳನ್ನು ತೆಗೆದುಹಾಕ ಸಾಧ್ಯವಿದೆ ಎಂಬ ನಿರೀಕ್ಷೆ ಇದೆ. ಇನ್ನೂ ಹೆಚ್ಚಾಗಿ, ಮಾನವ ಕುಟುಂಬದ ಮೂಲದ ಕುರಿತು ಬೈಬಲ್ ನಿಷ್ಕೃಷ್ಟವಾಗಿದ್ದರೆ, ಆಗ ತರ್ಕಬದ್ಧವಾಗಿ ಅದೇ ಪುಸ್ತಕವು ಮಾನವ ಕುಲವು ಹೇಗೆ ಒಟ್ಟಾಗಿ ಶಾಂತಿಯಲ್ಲಿ ಜೀವಿಸಬಲ್ಲದೆಂದು ತೋರಿಸುವ ಮಾಹಿತಿಯನ್ನು ಕೂಡ ನಮಗೆ ಒದಗಿಸಬಲ್ಲದು.
ಒಳ್ಳೆಯದು, ನಿಜತ್ವಗಳು ಏನನ್ನು ತೋರಿಸುತ್ತವೆ? ಮಾನವ ಮೂಲದ ಕುರಿತಾದ ಬೈಬಲಿನ ದಾಖಲೆಯು ವಿಜ್ಞಾನದ ಮೂಲಕ ಸ್ಥಿರಪಡಿಸಲಾಗಿದೆಯೋ?
ವೈಜ್ಞಾನಿಕ ರುಜುವಾತು
ಮಾನವ ಶಾಸ್ತ್ರಜ್ಞರಾದ ಆರ್. ಬೆನೆಡಿಕ್ಟ್ ಮತ್ತು ಜಿ. ವೆಲ್ಟ್ಫಿಷ್ರಿಂದ ಬರೆಯಲಾದ ಮಾನವವರ್ಗದ ಕುಲಗಳು (ದ ರೇಸಸ್ ಆಫ್ ಮ್ಯಾನ್ಕೈಂಡ್) ಎಂಬ ಪ್ರಕಾಶನದಲ್ಲಿ ಅವರು ಗಮನಿಸಿದ್ದು: “ಇಡೀ ಮಾನವ ಕುಲದ ತಂದೆ ತಾಯಿ ಆದಾಮ ಮತ್ತು ಹವ್ವರ ಬೈಬಲ್ ಕಥೆಯು, ಇಂದು ವಿಜ್ಞಾನವು ತೋರಿಸಿದಂಥ ಅದೇ ಸತ್ಯವನ್ನು ಶತಮಾನಗಳ ಹಿಂದೆಯೇ ಹೇಳಿತ್ತು: ಭೂಮಿಯ ಎಲ್ಲಾ ಜನರು ಒಂದೇ ಕುಟುಂಬದವರು ಮತ್ತು ಸಾಮಾನ್ಯವಾದ ಮೂಲವನ್ನು ಹೊಂದಿದವರು.” “ಮಾನವ ದೇಹದ ಜಟಿಲವಾದ ರಚನೆಯು . . . ಅವರಿಗೊಂದು ಸಾಮಾನ್ಯವಾದ ಮೂಲವಿರದಿದ್ದಲ್ಲಿ ಎಲ್ಲಾ ಮನುಷ್ಯರಲ್ಲಿ ಒಂದೇ ರೀತಿಯಾಗಿರುವಂತೆ ‘ಅನಿರೀಕ್ಷಿತವಾಗಿ ಸಂಭವಿಸಲು,’ ಸಾಧ್ಯವಾಗುತ್ತಿರಲಿಲ್ಲ,” ಎಂದು ಕೂಡ ಈ ಬರಹಗಾರರು ಸೂಚಿಸುತ್ತಾರೆ.
ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಪ್ರಾಣಿಶಾಸ್ತ್ರದ ಫ್ರೊಫೆಸರ್, ಎಲ್. ಕೆ. ಡನ್, ಕುಲ ಮತ್ತು ಜೀವಶಾಸ್ತ್ರ (ರೇಸ್ ಆ್ಯಂಡ್ ಬೈಯಾಲೋಜಿ) ಎಂಬ ಲಘಪುಸ್ತಕದಲ್ಲಿ ಹೇಳುವುದು: “ಎಲ್ಲಾ ಮೂಲಭೂತ ಶಾರೀರಿಕ ಲಕ್ಷಣಗಳಲ್ಲಿ ಸಮಾನವಾಗಿದ್ದು, ಎಲ್ಲಾ ಮನುಷ್ಯರು ಸ್ಪಷ್ಟವಾಗಿಗಿ ಒಂದೇ ಜಾತಿಗೆ ಸೇರಿರುತ್ತಾರೆ. ಎಲ್ಲಾ ಗುಂಪುಗಳ ಸದಸ್ಯರು ಅಂತರಜಾತಿಯ ವಿವಾಹವನ್ನು ಮಾಡಬಹುದು ಮತ್ತು ನಿಜವಾಗಿಯೂ ಮಾಡುತ್ತಾರೆ.” ತದನಂತರ ಅದು ಹೀಗೆ ವಿವರಿಸುತ್ತಾ ಹೋಗುವುದು: “ಆದರೂ ಪ್ರತಿಯೊಬ್ಬ ಮನುಷ್ಯನು ಅಪೂರ್ವವಾಗಿದ್ದು, ಪ್ರತಿ ಇನ್ನೊಬ್ಬ ಮನುಷ್ಯನಿಂದ ಕನಿಷ್ಠ ರೀತಿಗಳಲ್ಲಿ ಭಿನ್ನವಾಗಿದ್ದಾನೆ. ಇದು, ಜನರು ಜೀವಿಸುವ ವಿಭಿನ್ನ ಪರಿಸರಗಳ ಕಾರಣವಾಗಿ ಮತ್ತು ಅವರು ಪಡೆದಿರುವ ವಂಶವಾಹಿಗಳ ಭಿನ್ನತೆಯಿಂದಾಗಿದೆ.”
ವೈಜ್ಞಾನಿಕ ರುಜುವಾತು ನಿರ್ಣಾಯಕವಾಗಿದೆ. ಜೈವಿಕವಾಗಿ ಮಾತಾಡುವುದಾದರೆ, ಶ್ರೇಷ್ಠವಾದ ಯಾ ಕೀಳಾದ ಕುಲ, ಶುದ್ಧವಾದ ಯಾ ಕಲುಷಿತ ಕುಲ ಎಂಬಂಥ ವಿಷಯವೇ ಇರುವುದಿಲ್ಲ. ಕುಲದ ವಿಷಯದಲ್ಲಿ ಪ್ರಾಮುಖ್ಯವೆಂದು ಕೆಲವರು ಪರಿಗಣಿಸಬಹುದಾದ—ಒಬ್ಬನ ಚರ್ಮ, ಕೂದಲು, ಯಾ ಕಣ್ಣುಗಳ ಬಣ್ಣದಂಥ ವೈಶಿಷ್ಟಗಳು—ಒಬ್ಬನ ಬುದ್ಧಿಶಕ್ತಿ ಯಾ ಸಾಮರ್ಥ್ಯಗಳ ಸೂಚನೆಯಾಗಿರುವುದಿಲ್ಲ. ಬದಲಿಗೆ, ಅವು ಪಿತ್ರಾರ್ಜಿತವಾಗಿ ಪಡೆದಿರುವ ವಂಶವಾಹಿಗಳ ಫಲಿತಾಂಶಗಳಾಗಿವೆ.
ನಿಶ್ಚಯವಾಗಿಯೂ, ಅನುವಂಶೀಯತೆ ಮತ್ತು ಮಾನವ ಜೀವ (ಹೆರಿಡಿಟಿ ಆ್ಯಂಡ್ ಹ್ಯುಮನ್ ಲೈಫ್) ಎಂಬ ಪುಸ್ತಕದಲ್ಲಿ ಹ್ಯಾಮ್ಟನ್ ಎಲ್. ಕಾರ್ಸನ್ ಬರೆದಂತೆ, ಕುಲದ ಭಿನ್ನತೆಗಳು ಕನಿಷ್ಠವಾಗಿವೆ: “ನಾವು ಎದುರಿಸುವ ಅಸಂಗೋಕ್ತಿ ಏನಂದರೆ, ಮಾನವರ ಪ್ರತಿ ಗುಂಪು ಹೊರತೋರಿಕೆಯಲ್ಲಿ ಭಿನ್ನವಾಗಿ ತೋರುತ್ತದ್ದಾದರೂ ಈ ಭಿನ್ನತೆಗಳ ಕೆಳಗೆ ಮೂಲಭೂತವಾದ ಸಮಾನತೆ ಇದೆ.”
ಎಲ್ಲಾ ಮಾನವರು ನಿಜವಾಗಿಯೂ ಒಂದೇ ಒಂದು ಕುಟುಂಬವನ್ನಾಗಿ ಉಂಟುಮಾಡಿದರೂ, ಭಯಂಕರ ಕುಲ ಸಮಸ್ಯೆಗಳು ಯಾಕೆ ಅಸ್ತಿತ್ವದಲ್ಲಿವೆ?
ಸಮಸ್ಯೆಯ ಕಾರಣ
ಪ್ರಥಮ ಮಾನವ ಹೆತ್ತವರು ತಮ್ಮ ಸಂತಾನಕ್ಕೆ ಕೊಟ್ಟಂತಹ ಕೆಟ್ಟ ಆರಂಭವೇ ಕುಲವಾದವು ಅಸ್ತಿತ್ವದಲ್ಲಿರಲು ಮೂಲಭೂತ ಕಾರಣವಾಗಿದೆ. ಆದಾಮ ಮತ್ತು ಹವ್ವರು ಉದ್ದೇಶಪೂರ್ವಕವಾಗಿಯೇ ದೇವರ ವಿರುದ್ಧ ದಂಗೆ ಎದ್ದರು ಮತ್ತು ಹೀಗೆ ಅಪರಿಪೂರ್ಣರೂ, ಕುಂದು ಉಳ್ಳವರೂ ಆದರು. ಆದಕಾರಣ, ಆದಾಮನ ಅಪರಿಪೂರ್ಣತೆ—ಕೆಟ್ಟತನದ ಕಡೆಗೆ ಇರುವ ಈ ಪ್ರವೃತ್ತಿ—ಅವನ ವಂಶದವರಿಗೆ ದಾಟಿಸಲ್ಪಟ್ಟಿತು. (ರೋಮಾಪುರ 5:12) ಆದುದರಿಂದ, ಹುಟ್ಟಿನಿಂದಲೇ ಎಲ್ಲಾ ಮನುಷ್ಯರು, ಕುಲದ ಜಗಳಕ್ಕೆ ಮತ್ತು ಸಂಕ್ಷೋಭೆಗೆ ನಡೆಸಿರುವ ಸ್ವಾರ್ಥತೆ ಮತ್ತು ದುರಭಿಮಾನದ ಕಡೆಗೆ ಒಲವುಳ್ಳವರಾಗಿದ್ದಾರೆ.
ಕುಲವಾದವು ಅಸ್ತಿತ್ವದಲ್ಲಿರಲು ಇನ್ನೊಂದು ಕಾರಣವಿದೆ. ಆದಾಮ ಮತ್ತು ಹವ್ವರು ದೇವರ ಆಧಿಪತ್ಯದಿಂದ ದೂರಹೋದಾಗ, ಸೈತಾನನು ಯಾ ಪಿಶಾಚನು ಎಂಬುದಾಗಿ ಬೈಬಲ್ ಕರೆಯುವ ಒಂದು ದುಷ್ಟ ಆತ್ಮ ಜೀವಿಯ ಆಳಿಕೆಯ ಕೆಳಗೆ ಅವರು ಬಂದರು. “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ” ಇವನ ಪ್ರಭಾವದ ಕೆಳಗೆ, ಕುಲದ ವಿಷಯದಲ್ಲಿ ಜನರನ್ನು ಮೋಸಗೊಳಿಸಲು ಉದ್ದೇಶಪೂರ್ವಕವಾದ ಪ್ರಯತ್ನಗಳು ಅನೇಕ ಬಾರಿ ಮಾಡಲಾಗಿವೆ. (ಪ್ರಕಟನೆ 12:9; 2 ಕೊರಿಂಥ 4:4) ಕುಲಕೇಂದ್ರಿತ ಭಾವ—ಒಬ್ಬನ ಸ್ವಂತ ಗುಂಪು ಶ್ರೇಷ್ಠ ಎಂಬ ವಿಚಾರವು—ಉರಿಯುವ ಜ್ವಾಲೆಯಾಗಲು ಕೆರಳಿಸಲ್ಪಟ್ಟಿದೆ, ಮತ್ತು ತಿಳಿದೊ ತಿಳಿಯದೆಯೊ ಲಕ್ಷಾಂತರ ಜನರು ವಿಪತ್ಕಾರಕ ಪರಿಣಾಮಗಳೊಂದಿಗೆ ಬಲವಾಗಿ ಪ್ರಭಾವಿಸಲ್ಪಟ್ಟಿದ್ದಾರೆ.
ಮರೆಮಾಜದೆ ಹೇಳುವುದಾದರೆ, ಸೈತಾನನ ನಿಯಂತ್ರಣದ ಕೆಳಗಿರುವ ಸ್ವಾರ್ಥಿ, ಅಪರಿಪೂರ್ಣ ಮಾನವರು, ಕುಲ ಸಂಬಂಧಿತ ಸಮಸ್ಯೆಗಳಿಗೆ ಹೊಣೆಯಾಗಿರುವ ಕುಲದ ಕುರಿತಾದ ಎಲ್ಲಾ ಸುಳ್ಳು ಬೋಧನೆಗಳನ್ನು ಹರಡಿಸಿದ್ದಾರೆ.
ಆದುದರಿಂದ, ಮಾನವ ಕುಲವು ಐಕ್ಯವಾಗಲಿಕ್ಕೆ, ನಾವು ನಿಜವಾಗಿಯೂ ಒಂದು ಮಾನವ ಕುಟುಂಬವೆಂದು ಮತ್ತು ದೇವರು “ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ . . . ಭೂಮಂಡಲದಲ್ಲೆಲ್ಲಾ ವಾಸಮಾಡಿಸಿದನು,” ಎಂದು ಎಲ್ಲರು ನಂಬಬೇಕು. (ಅ. ಕೃತ್ಯಗಳು 17:26) ಇನ್ನೂ ಹೆಚ್ಚಾಗಿ, ಎಲ್ಲಾ ಕುಲದವರು ಒಟ್ಟಾಗಿ ಶಾಂತಿಯಲ್ಲಿ ಜೀವಿಸಲು, ಮಾನವ ವಿಷಯಗಳಲ್ಲಿ ಸೈತಾನನ ಪ್ರಭಾವವು ಹೋಗಲಾಡಿಸಲ್ಪಡಬೇಕು. ಈ ವಿಷಯಗಳು ಎಂದಾದರೂ ಸಂಭವಿಸುವವೊ? ಅವು ಸಂಭವಿಸುವವು ಎಂದು ನಂಬಲಿಕ್ಕಾಗಿ ಯಾವ ಆಧಾರವಾದರೂ ಇದೆಯೋ?
ಕುಲದ ಕುರಿತಾದ ಪೂರ್ವಾಗ್ರಹವನ್ನು ಕೊನೆಗೊಳಿಸುವುದು
ಅವನು ಅವರನ್ನು ಪ್ರೀತಿಸಿದಂತೆ ಅವರು “ಒಬ್ಬರನ್ನೊಬ್ಬರು ಪ್ರೀತಿ”ಸಲು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದಾಗ, ಕುಲದ ಕುರಿತಾದ ಪೂರ್ವಾಗ್ರಹವನ್ನು ಹೇಗೆ ಹೋಗಲಾಡಿಸ ಸಾಧ್ಯವೆಂದು ಯೇಸು ಕ್ರಿಸ್ತನು ಪ್ರಕಟಿಸಿದನು. (ಯೋಹಾನ 13:34, 35) ಈ ಪ್ರೀತಿಯು ಕೇವಲ ಒಂದು ನಿರ್ದಿಷ್ಟವಾದ ಕುಲ ಯಾ ಕುಲಗಳ ಸದಸ್ಯರಿಗಾಗಿ ಮಾತ್ರ ಇರಬಾರದಾಗಿತ್ತು. ಇಲ್ಲವೇ ಇಲ್ಲ! “ಸಹೋದರರ ಇಡೀ ಬಳಗವನ್ನು ಪ್ರೀತಿಸಿರಿ,” ಎಂದು ಅವನ ಶಿಷ್ಯರಲ್ಲಿ ಒಬ್ಬನು ಉತ್ತೇಜಿಸಿದನು.—1 ಪೇತ್ರ 2:17,NW.
ಈ ಕ್ರಿಸ್ತೀಯ ಪ್ರೀತಿಯು ಹೇಗೆ ತೋರಿಸಲ್ಪಡುತ್ತದೆ? “ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ,” ಎಂದು ಬೈಬಲ್ ಪ್ರಚೋದಿಸುವಾಗ, ಅದನ್ನು ವಿವರಿಸುತ್ತದೆ. (ರೋಮಾಪುರ 12:10) ಇದು ಮಾಡಲ್ಪಟ್ಟಾಗ ಅದು ಯಾವ ಅರ್ಥದಲ್ಲಿರುವುದೆಂದು ನೆನಸಿರಿ! ಕುಲ ಯಾ ರಾಷ್ಟ್ರೀಯತೆಯನ್ನು ಲಕ್ಷಿಸದೆ, ಇತರರನ್ನು ಕೀಳಾಗಿ ನೋಡದೆ, ಬದಲಾಗಿ ನಿಜವಾಗಿಯೂ ‘ಅವರನ್ನು ಶ್ರೇಷ್ಠರೆಂದು ಎಣಿಸುತ್ತಾ’ ನೈಜವಾದ ಗೌರವ ಮತ್ತು ಮರ್ಯಾದೆಯೊಂದಿಗೆ ಪ್ರತಿಯೊಬ್ಬನು ಇತರರನ್ನು ನಡೆಸಿಕೊಳ್ಳುತ್ತಾನೆ. (ಫಿಲಿಪ್ಪಿ 2:3) ಯಥಾರ್ಥವಾದ ಕ್ರೈಸ್ತ ಪ್ರೀತಿಯ ಅಂತಹ ಒಂದು ಆತ್ಮವು ಅಸ್ತಿತ್ವದಲ್ಲಿರುವಾಗ, ಕುಲದ ಕುರಿತಾದ ಪೂರ್ವಾಗ್ರಹದ ಸಮಸ್ಯೆಯು ಬಗೆಹರಿಸಲ್ಪಡುವುದು.
ಅಂಥ ಸೈತಾನ ಪ್ರೇರಿತ ವಿಚಾರಗಳಿಂದ ತಮ್ಮನ್ನು ಬಿಡಿಸಿಕೊಳ್ಳಲು ಕುಲ ಸಂಬಂಧಿತ ಪೂರ್ವಾಗ್ರಹವನ್ನು ಕಲಿಸಲ್ಪಟ್ಟವರ ವತಿಯಿಂದ, ಅಸಾಮಾನ್ಯ ಪ್ರಯತ್ನದ ಅಗತ್ಯವಿದೆ, ನಿಜ. ಆದರೆ ಅದನ್ನು ನಿರ್ವಹಿಸ ಸಾಧ್ಯವಿದೆ! ಮೊದಲನೆಯ ಶತಮಾನದಲ್ಲಿ, ಕ್ರೈಸ್ತ ಸಭೆಯೊಳಗೆ ತರಲ್ಪಟ್ಟವರೆಲ್ಲರು ಸರಿಸಾಟಿಯಿಲ್ಲದ ಒಗ್ಗಟ್ಟಿನಲ್ಲಿ ಆನಂದಿಸುವಂತಾದರು. ಅದರ ಕುರಿತು ಅಪೊಸ್ತಲ ಪೌಲನು ಬರೆದದ್ದು: “ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ, ಆಳು ಒಡೆಯ ಎಂದೂ, ಗಂಡು ಹೆಣ್ಣು ಎಂದೂ ಭೇದವಿಲ್ಲ.” (ಗಲಾತ್ಯ 3:28) ನಿಶ್ಚಯವಾಗಿಯೂ, ಕ್ರಿಸ್ತನ ನಿಜ ಹಿಂಬಾಲಕರು, ಯಥಾರ್ಥವಾದ ಸಹೋದರತ್ವದಲ್ಲಿ ಆನಂದಿಸುವಂಥವರಾದರು.
ಆದರೆ ಕೆಲವರು ಆಕ್ಷೇಪಿಸಬಹುದು: ‘ಇಂದು ಇದು ಎಂದೂ ಸಂಭವಿಸಲಾರದು.’ ಆದರೂ, ಇದು ಯೆಹೋವನ ಸಾಕ್ಷಿಗಳೊಳಗೆ—ನಾಲ್ವತೈದು ಲಕ್ಷಕ್ಕಿಂತಲೂ ಹೆಚ್ಚು ಜನರಿರುವ ಒಂದು ಸಂಸ್ಥೆಯಲ್ಲಿ ಈಗಾಗಲೇ ಸಂಭವಿಸಿದೆ!. ಈ ದೈವಿಕವಲ್ಲದ ವ್ಯವಸ್ಥೆಯಿಂದ ಕಲಿತಂಥ ಪೂರ್ವಾಗ್ರಹಗಳಿಂದಾಗಿ ಎಲ್ಲಾ ಸಾಕ್ಷಿಗಳು ಪೂರ್ಣವಾಗಿ ಮುಕ್ತರಾಗಿಲ್ಲವೆಂಬುದು ಒಪ್ಪತಕ್ಕದ್ದೇ. ಬಿಳಿ ಜೊತೆ ಸಾಕ್ಷಿಗಳ ಕುರಿತು ಒಬ್ಬಾಕೆ ಕಪ್ಪು ಅಮೆರಿಕನ್ ಯಥಾವತ್ತಾಗಿ ಗಮನಿಸಿದ್ದು: “ಅವರಲ್ಲಿ ನಿರ್ದಿಷ್ಟವಾಗಿ ಕೆಲವರಲ್ಲಿ ಕುಲ ಶ್ರೇಷ್ಠತೆಯ ಮನೋಭಾವಗಳು ಇನ್ನೂ ಉಳಿದಿರುವುದನ್ನು ನಾನು ಗುರುತಿಸಿದ್ದೇನೆ, ಮತ್ತು ಇನ್ನೊಂದು ಕುಲದ ವ್ಯಕ್ತಿಗಳೊಂದಿಗೆ ನಿಕಟವಾದ ಸಹವಾಸದಲ್ಲಿರುವಾಗ, ಅವರಲ್ಲಿ ಕೆಲವರ ನಿಶ್ಚಿತ ಆತಂಕಗೊಂಡಿರುವ ಅನಿಸಿಕೆಯನ್ನು ನಾನು ಕೆಲವೊಮ್ಮೆ ಕಂಡಿದ್ದೇನೆ.”
ಆದರೂ, ಈ ವ್ಯಕ್ತಿಯು ಅಂಗೀಕರಿಸಿದ್ದು: “ಯೆಹೋವನ ಸಾಕ್ಷಿಗಳು, ಭೂಮಿಯಲ್ಲಿರುವ ಬೇರೆ ಯಾವುದೇ ಜನರಿಂದ ಸರಿಹೊಂದದ ಒಂದು ಮಟ್ಟಕ್ಕೆ ತಮ್ಮನ್ನು ಕುಲ ಸಂಬಂಧಿತ ಪೂರ್ವಾಗ್ರಹದಿಂದ ಬಿಡಿಸಿಕೊಂಡಿದ್ದಾರೆ. ಕುಲವನ್ನು ಲಕ್ಷ್ಯಿಸದೆ ಒಬ್ಬರನ್ನೊಬ್ಬರು ಪ್ರೀತಿಸಲು ಅವರು ಹೆಣಗಾಡುತ್ತಾರೆ . . . ಕೆಲವು ಸಂದರ್ಭಗಳಲ್ಲಿ ನನ್ನ ಹೃದಯವು ಬಿಳಿಯ ಸಾಕ್ಷಿಗಳ ಅಪ್ಪಟವಾದ ಪ್ರೀತಿಯನ್ನು ಅನುಭವಿಸಿದ ಕಾರಣ ನಿಯಂತ್ರಿಸಲಾಗದ ಕಣ್ಣೀರುಗಳ ಮಟ್ಟಕ್ಕೆ ಆದರದಿಂದ ತುಂಬಲ್ಪಟ್ಟಿದೆ.”
ಕೆಲವರಿಂದ ಆನಂದಿಸಲಾಗುವ ಕುಲದ ಐಕ್ಯತೆಯು—ಇವರು ಲಕ್ಷಾಂತರದ ಎಣಿಕೆಯಲ್ಲಿ ಇರುವುದಾದರೂ—ಕುಲದ ಶ್ರೇಷ್ಠತೆಯ ಕುರಿತಾದ ಸೈತಾನನ ವಿಚಾರಗಳಿಂದ ಇತರ ಲಕ್ಷಾಂತರ ಜನರು ಪ್ರಭಾವಿಸಲ್ಪಟ್ಟಿರುವಾಗ ಅಷ್ಟೊಂದು ವ್ಯತ್ಯಾಸವನ್ನು ನಿಜವಾಗಿಯೂ ಉಂಟುಮಾಡುತ್ತದೊ? ಇಲ್ಲ, ಅದು ಕುಲದ ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಎಂದು ನಾವು ಒಪ್ಪುತ್ತೇವೆ. ಹಾಗೆ ಮಾಡುವುದು ಮಾನವ ಪ್ರಯತ್ನಗಳನ್ನು ಮೀರಿದೆ. ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರು ಮಾತ್ರ, ಅದನ್ನು ಮಾಡಬಲ್ಲನು.
ಸಂತೋಷಕರವಾಗಿ, ಈಗ ಬಹಳ ಬೇಗನೆ, ಯೆಹೋವನು, ಆತನ ಮಗನಾದ ಯೇಸು ಕ್ರಿಸ್ತನ ಕೈಗಳಲ್ಲಿರುವ ಆತನ ರಾಜ್ಯದ ಮೂಲಕ, ಭೂಮಿಯನ್ನು ಎಲ್ಲಾ ಅನ್ಯಾಯದಿಂದ ಮತ್ತು ಕುಲ ಸಂಬಂಧಿತ ಯಾ ಬೇರೆಯಾದ ಭೇದವನ್ನು ಮತ್ತು ವೈರತ್ವವನ್ನು ಸ್ವಾರ್ಥ ಇಚ್ಛೆಯಿಂದ ಉತ್ತೇಜಿಸುವವರಿಂದ ಇಲ್ಲವಾಗಿಸುವನು. (ದಾನಿಯೇಲ 2:44; ಮತ್ತಾಯ 6:9, 10) ತದನಂತರ, ಕ್ರಿಸ್ತನ ಕಾರ್ಯನಿರ್ವಹಣೆಯ ಕೆಳಗೆ ಪರಿಪೂರ್ಣ ಶೈಕ್ಷಣಿಕ ಕಾರ್ಯಕ್ರಮದೊಂದಿಗೆ, ಎಲ್ಲಾ ಕುಲಗಳು ನಿಜವಾಗಿಯೂ ಐಕ್ಯಗೊಳ್ಳುವವು. ಆ ಶಿಕ್ಷಣವು ಪ್ರಗತಿ ಹೊಂದಿದಂತೆ, ಕುಲ ಭೇದದ ಯಾವುದೇ ಸುಳಿವಿಲ್ಲದೆ ಅವರು ಪರಿಪೂರ್ಣ ಹೊಂದಾಣಿಕೆಯಲ್ಲಿ ಜೀವಿಸುವರು. ದೇವರ ವಾಗ್ದಾನವು ಅಂತಿಮವಾಗಿ ನೆರವೇರಲ್ಪಡುವುದು: “ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು. . . . ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ.”—ಪ್ರಕಟನೆ 21:4, 5.
ನಿಜವಾದ ಸಹೋದರತ್ವವು ಇರುವ ಸಮಯಕ್ಕಾಗಿ, ಎಲ್ಲಾ ಕುಲಗಳು ಒಟ್ಟಾಗಿ ಶಾಂತಿಯಲ್ಲಿ ಜೀವಿಸುವ ಸಮಯಕ್ಕಾಗಿ ಬಯಸುವ ವ್ಯಕ್ತಿ ನೀವಾಗಿದ್ದೀರೊ? ಹಾಗಿರುವಲ್ಲಿ, ಯೆಹೋವನ ಸಾಕ್ಷಿಗಳು ಬೈಬಲನ್ನು ಅಭ್ಯಾಸಿಸಲು ಕ್ರಮವಾಗಿ ಕೂಡಿಬರುವಲ್ಲಿ, ನಿಮಗೆ ಹತ್ತಿರವಿರುವ ರಾಜ್ಯ ಸಭಾಗೃಹವನ್ನು ನೀವು ಹಾಜರಾಗಲು ನಾವು ಸ್ವಾಗತಿಸುತ್ತೇವೆ. ಯಥಾರ್ಥವಾದ ಕ್ರೈಸ್ತ ಪ್ರೀತಿಯನ್ನು—ಎಲ್ಲಾ ಕುಲಗಳ ಜನರಿಗಾಗಿ ಅವರು ಪ್ರದರ್ಶಿಸುತ್ತಾರೋ ಇಲ್ಲವೋ ಎಂದು ನೀವೇ ನೋಡಿರಿ. (g93 8/22)
[ಪುಟ 10 ರಲ್ಲಿರುವ ಚಿತ್ರ]
ಬೇಗನೆ ಎಲ್ಲಾ ಕುಲಗಳು ಎಲ್ಲೆಡೆಯೂ ಒಟ್ಟಾಗಿ ಶಾಂತಿಯಲ್ಲಿ ಜೀವಿಸುವವು