ಪ್ರಾಪಂಚಿಕ ಸಮೃದ್ಧಯು ಸಂತೋಷದ ಖಾತರಿಯನ್ನು ಕೊಡಬಲ್ಲದೊ?
“ನಮ್ಮ ಶಾಲೆಯಲ್ಲಿ ಸುಮಾರು 50 ವಿದ್ಯಾರ್ಥಿಗಳಲ್ಲಿ ಕೇವಲ ಒಬ್ಬನು ಅಥವಾ ಇಬ್ಬರು ಮಾತ್ರವೇ ಷೂಗಳನ್ನು ಧರಿಸಿದರು” ಎಂದು, 1950ಗಳಲ್ಲಿ ದಕ್ಷಿಣ ಟೈವಾನಿನಲ್ಲಿ ಬೆಳೆದ 45 ವರ್ಷ ಪ್ರಾಯದ ಬೋಚಿಂಗ್ ಜ್ಞಾಪಿಸಿಕೊಳ್ಳುತ್ತಾನೆ. “ನಮಗೆ ಅದಕ್ಕಾಗಿ ಖರ್ಚು ಮಾಡಲು ಸಾಧ್ಯವಿರಲಿಲ್ಲ. ಆದಾಗ್ಯೂ, ನಾವು ನಮ್ಮನ್ನು ಬಡವರೆಂದು ಎಂದಿಗೂ ಪರಿಗಣಿಸಿಕೊಳ್ಳಲಿಲ್ಲ. ನಮಗೆ ಅಗತ್ಯವಿದ್ದದ್ದೆಲ್ಲವನ್ನೂ ನಾವು ಹೊಂದಿದ್ದೆವು.”
ಅದು ಸುಮಾರು 40 ವರ್ಷಗಳ ಹಿಂದೆಯಾಗಿತ್ತು. ಅಂದಿನಿಂದ ಬೋಚಿಂಗ್ನಿಗೆ ಮತ್ತು ಆ ದ್ವೀಪದ ಉಳಿದ ಎರಡು ಕೋಟಿ ನಿವಾಸಿಗಳಿಗೆ ಜೀವಿತವು ನಾಟಕೀಯವಾಗಿ ಬದಲಾಗಿದೆ. ಫ್ಯಾಕ್ಟ್ಸ್ ಆ್ಯಂಡ್ ಫಿಗರ್ಸ್—ದ ರಿಪಬ್ಲಿಕ್ ಆಫ್ ಚೈನಾ ಆನ್ ಟೈವಾನ್ ಎಂಬ ಪುಸ್ತಕವು ವಿವರಿಸುವಂತೆ, “ವ್ಯಾವಸಾಯಿಕ ಸಮಾಜದಿಂದ, ಟೈವಾನ್ ಒಂದು ಸ್ಪಂದಕ ಕೈಗಾರಿಕಾ ಸಮಾಜವಾಗಿ ರೂಪಾಂತರಗೊಂಡಿತ್ತು.” 1970ಗಳ ಕೊನೆಯೊಳಗೆ ಟೈವಾನ್ “ಒಂದು ಸ್ಥಿರವಾದ, ಸಂಪದ್ಭರಿತ ಸಮಾಜ”ವಾಗಿ ಪರಿಗಣಿಸಲ್ಪಟ್ಟಿತು.
ವಾಸ್ತವವಾಗಿ, ಸಮೃದ್ಧಿಯ ಪುರಾವೆಯನ್ನು ಟೈವಾನಿನ ಎಲ್ಲೆಡೆಗಳಲ್ಲಿಯೂ ಕಾಣಸಾಧ್ಯವಿದೆ. ದ್ವೀಪದ ಒಂದು ತುದಿಯಿಂದ ಇನ್ನೊಂದು ತುದಿಯ ವರೆಗೆ ತ್ವರಿತವಾಗಿ ಕಟ್ಟಲ್ಪಟ್ಟಿರುವ ವಿಪರೀತ ಆಧುನಿಕವಾದ ಅನೇಕ ಅಂತಸ್ತುಗಳುಳ್ಳ ಆಫೀಸ್ ಕಾಂಪೆಕ್ಲ್ಸ್ಗಳಿಂದ ಹಿಡಿದು, ದುಬಾರಿ ವೆಚ್ಚದ ಆಮದು ಮಾಡಲ್ಪಟ್ಟ ಮೋಟಾರುವಾಹನಗಳಿಂದ ಕಿಕ್ಕಿರಿದ ಹೆದ್ದಾರಿಗಳ ವರೆಗಿನ ಟೈವಾನಿನ ಪ್ರಾಪಂಚಿಕ ಸಮೃದ್ಧಯು ಇತರ ವರ್ಧಿಷ್ಣು ರಾಷ್ಟ್ರಗಳ ಅಸೂಯೆಗೆ ಪಾತ್ರವಾಗಿದೆ. ಇಂದು “ಚೀನೀಯರ ಇತಿಹಾಸದಲ್ಲಿ, ಟೈವಾನಿನ ಜನರು ಅತ್ಯುತ್ತಮವಾದ ಜೀವನ ಮಟ್ಟವನ್ನು ಅನುಭವಿಸುತ್ತಾರೆ” ಎಂದು ಟೈವಾನಿನ ಇಂಗ್ಲಿಷ್ ಭಾಷೆಯ ಪ್ರಧಾನ ವಾರ್ತಾಪತ್ರಿಕೆಯಾದ ದ ಚೈನಾ ಪೋಸ್ಟ್ ಹೊಗಳಿಕೊಳ್ಳುತ್ತದೆ.
‘ಹಲವು ಜಟಿಲ ಸಮಸ್ಯೆಗಳು’
ಈ ಎಲ್ಲಾ ಪ್ರಾಪಂಚಿಕ ಸಮೃದ್ಧಯು ಜನರಿಗೆ ನಿಜವಾದ ಸಂತೋಷ ಮತ್ತು ಸಂತೃಪ್ತಿಯನ್ನು ತಂದಿದೆಯೊ? ಟೈವಾನಿನ ಜನರು ಹೆಮ್ಮೆಯುಳ್ಳವರಾಗಿದ್ದಾರೆಂಬುದರಲ್ಲಿ ಸಂದೇಹವಿಲ್ಲದಿರುವಾಗಲೂ, ಈ ಯಶಸ್ಸಿನ ಕಥೆಗೆ ಇನ್ನೊಂದು ಪಾರ್ಶ್ವವಿದೆ. ಚೈನಾ ಪೋಸ್ಟ್ ನಿರ್ದಿಷ್ಟವಾಗಿ ಉಲ್ಲೇಖಿಸುವುದು: “ಈ ಅತ್ಯುತ್ತಮ ಮಟ್ಟದ ಸಮೃದ್ಧಿಯೊಂದಿಗೆ ಬಹು ಸಂಖ್ಯೆಯ ತೊಡಕಾದ ಮತ್ತು ಜಟಿಲವಾದ ಸಮಸ್ಯೆಗಳು ಉದ್ಭವಿಸಿವೆ.” ಟೈವಾನಿನ ಪ್ರಾಪಂಚಿಕ ಸಮೃದ್ಧಯು ಬೆಲೆ ತೆರದೆ ಬಂದದ್ದಾಗಿರುವುದಿಲ್ಲ.
ಒಮ್ಮೆ ತುಲನಾತ್ಮಕವಾಗಿ ದುಷ್ಕೃತ್ಯರಹಿತವಾಗಿದ್ದ ಈ ದ್ವೀಪವನ್ನು ಕಾಡಿಸುತ್ತಿರುವ “ತೊಡಕಾದ ಹಾಗೂ ಜಟಿಲ ಸಮಸ್ಯೆಗಳ” ಕುರಿತು ಚೈನಾ ಪೋಸ್ಟ್ ಗಮನಿಸುವುದು: “ನಮ್ಮ ಸಮೃದ್ಧ ಸಮಾಜದಲ್ಲಿ, ಇತ್ತೀಚೆಗಿನ ವರ್ಷಗಳಲ್ಲಿ ನಿಯಮವನ್ನು ಪಾಲಿಸುವ ಪ್ರಜೆಗಳೆಲ್ಲರ ಜೀವ ಮತ್ತು ಸಂಪತ್ತಿಗೆ ಅಧಿಕವಾದ ಬೆದರಿಕೆಯನ್ನೊಡ್ಡುವ ಮೂಲಕ ದುಷ್ಕೃತ್ಯ ಮತ್ತು ಅವ್ಯವಸ್ಥೆಯ ದಿಗಿಲೆಬ್ಬಿಸುವಂತಹ ರೀತಿಯಲ್ಲಿ ಅಧಿಕಗೊಂಡಿವೆ.” “ಐಶ್ವರ್ಯವು ಟೈವಾನನ್ನು ವಿಷಯಾಭಿಲಾಷೆಯುಳ್ಳ ಒಂದು ದೇಶವನ್ನಾಗಿ ಮಾಡುತ್ತದೆ” ಎಂಬ ಶಿರೋನಾಮವುಳ್ಳ ಲೇಖನದಲ್ಲಿ, ಶೀಘ್ರವಾಗಿ ಬೆಳೆಯತೊಡಗಿರುವ “ಗರ್ಲಿ ರೆಸ್ಟೊರೆಂಟ್ಗಳು ಮತ್ತು ಬಾರ್ಗಳು” ಹಾಗೂ ಕ್ಷೌರದಂಗಡಿಯ ನೆಪದಲ್ಲಿ ಕಾರ್ಯನಡಿಸುತ್ತಿರುವ ಕಾನೂನಿಗೆ ವಿರುದ್ಧವಾದ ವೇಶ್ಯಾಗೃಹಗಳ ಕುರಿತ ಸಮಸ್ಯೆಗಳನ್ನು ಪೋಸ್ಟ್ ಹೀಯಾಳಿಸುತ್ತದೆ. ಸುಲಿಗೆ ಮತ್ತು, ಬಿಡುಗಡೆಗಾಗಿ ಪ್ರಾಯಶ್ಚಿತ್ತ ಮೌಲ್ಯವನ್ನು ಸಂಗ್ರಹಿಸುವ ಉದ್ದೇಶದಿಂದ ಬಲಾತ್ಕಾರ ಹರಣ ಮಾಡುವುದು ಇನ್ನೊಂದು ಸಮಸ್ಯೆಯಾಗಿ ಪರಿಣಮಿಸಿದೆ. ಮಕ್ಕಳ ಬಲಾತ್ಕಾರ ಹರಣ ಮಾಡುವುದನ್ನು “ಟೈವಾನಿನ ಅಭಿವೃದ್ಧಿಹೊಂದುತ್ತಿರುವ ಹೊಸ ಜನಪ್ರಿಯ ಉದ್ಯಮ”ವೆಂದು ಒಂದು ವರದಿಯು ಉಲ್ಲೇಖಿಸುತ್ತದೆ. ಅನೇಕರು ಜೂಜಿನ ಸಾಲಗಳನ್ನು ಅಥವಾ ಹಣಕಾಸಿನ ಇತರ ನಷ್ಟಗಳನ್ನು ಪಾವತಿ ಮಾಡಲು ಒಂದು ಮಾರ್ಗದೋಪಾದಿ ಅಂತಹ ದುಷ್ಕೃತ್ಯಗಳನ್ನು ಅವಲಂಬಿಸುತ್ತಾರೆ.
ಮಕ್ಕಳು ದುಷ್ಕೃತ್ಯದ ಕೇವಲ ಮುಗ್ಧ ಬಲಿಗಳಾಗಿಲ್ಲ. ದುಷ್ಕೃತ್ಯಗಳನ್ನು ಮಾಡುವುದರಲ್ಲಿ ಅವರು ಅಧಿಕವಾಗಿ ಒಳಗೊಂಡಿದ್ದಾರೆ. 1989ರೊಂದರಲ್ಲಿಯೇ, ಹರೆಯದವರಿಂದ ನಡೆಸಲ್ಪಟ್ಟ ದುಷ್ಕೃತ್ಯಗಳ ಸಂಖ್ಯೆಯು 30 ಪ್ರತಿಶತ ಅಧಿಕಗೊಂಡವು ಎಂದು ವರದಿಗಳು ತೋರಿಸುತ್ತವೆ. ಕೆಲವರು ಈ ಅಭಿವೃದ್ಧಿಯನ್ನು ಕುಟುಂಬದ ಕುಸಿತಕ್ಕೆ ನಿರೂಪಿಸುತ್ತಾರೆ, ಮತ್ತು ಸಂಖ್ಯಾ ಸಂಗ್ರಹಣಗಳು ಇದನ್ನು ಬೆಂಬಲಿಸುವಂತೆ ತೋರುತ್ತದೆ. ಉದಾಹರಣೆಗೆ, 1977ರಿಂದ 1987ರ ವರೆಗೆ, ವಿವಾಹ ಮಾಡಿಕೊಂಡ ಟೈವಾನೀ ದಂಪತಿಗಳ ಸಂಖ್ಯೆಯು ಕಡಿಮೆಯಾಯಿತು, ಆದರೆ ವಿವಾಹವಿಚ್ಛೇದನ ಪ್ರಮಾಣವು ಇಮ್ಮಡಿಗಿಂತಲೂ ಹೆಚ್ಚಾಯಿತು. ಚೀನೀಯರ ಸಂಸ್ಕೃತಿಯು ಸಾಂಪ್ರದಾಯಿಕವಾಗಿ ಒಂದು ಸ್ಥಿರವಾದ ಸಮಾಜದಲ್ಲಿ ಕುಟುಂಬದ ಪ್ರಮುಖತೆಗೆ ಪ್ರಾಧಾನ್ಯ ಕೊಡುವುದರಿಂದ, ಹೆಚ್ಚು ಕೆಡುತ್ತಿರುವ ಪರಿಸ್ಥಿತಿಗಳ ಕುರಿತು ಅನೇಕರು ಬಹಳ ಚಿಂತಿತರಾಗಿರುವುದು ಆಶ್ಚರ್ಯಕರವಾಗಿರುವುದಿಲ್ಲ.
ಸಮಸ್ಯೆಯ ಮೂಲ
ಸಮೃದ್ಧವಾದ ಸಮಾಜವೊಂದರ ನಡುವೆ ಸಾಮಾಜಿಕ ವ್ಯವಸ್ಥೆಯ ಅವನತಿಗಾಗಿರುವ ಕಾರಣವನ್ನು ಕಂಡುಹಿಡಿಯುವ ಪ್ರಯತ್ನದಿಂದ ವಿವಿಧ ವಿವರಣೆಗಳು ಒದಗಿಸಲ್ಪಟ್ಟಿವೆ. ಅದು ಯಶಸ್ಸಿನ ಬೆಲೆಯೆಂದು ಸ್ವಲ್ಪಮಟ್ಟಿಗೆ ತತ್ವಶಾಸ್ತ್ರ ಪರಿಣತರಾದ ಕೆಲವು ಜನರು ಹೇಳುತ್ತಾರೆ. ಆದರೆ ಯಶಸ್ಸು ಅಥವಾ ಸಮೃದ್ಧಿಯ ಮೇಲೆ ದೂಷಣೆಹೊರಿಸುವುದು ಹೊಟ್ಟೆಬಾಕತನಕ್ಕಾಗಿ ಆಹಾರವನ್ನು ದೂಷಿಸುವಂತಿದೆ. ತಿನ್ನುವವರೆಲ್ಲರೂ ಹೊಟ್ಟೆಬಾಕರಲ್ಲ, ಹಾಗೆಯೇ ಸಮೃದ್ಧನಾಗಿರುವ ಪ್ರತಿಯೊಬ್ಬನೂ ಪ್ರಾಪಂಚಿಕನಾಗಲಿ ಪಾತಕಿಯಾಗಲಿ ಆಗಿರುವುದಿಲ್ಲ. ಇಲ್ಲ, ಪ್ರಾಪಂಚಿಕ ಸಮೃದ್ಧಯು ತಾನೇ ದುಷ್ಕೃತ್ಯ ಮತ್ತು ಸಾಮಾಜಿಕ ಅವ್ಯವಸ್ಥೆಯನ್ನು ಉಂಟುಮಾಡುವುದಿಲ್ಲ.
ಚೈನಾ ಪೋಸ್ಟ್ನಲ್ಲಿ ಸಂಪಾದಕೀಯವು ಒಂದು ಪ್ರಮುಖವಾದ ಸಹಾಯಕ ಅಂಶಕ್ಕೆ ನಿರ್ದೇಶಿಸಿತು. ಅದು ಹೇಳಿದ್ದು: “ಕಳೆದ ದಶಕಗಳಿಂದ ನಾವು ಪ್ರಾಪಂಚಿಕ ಅಭಿವೃದ್ಧಿಗೆ ವಿಪರೀತ ಪ್ರಾಧಾನ್ಯವನ್ನು ಕೊಟ್ಟಿದೇವ್ದೆ. ಇಂದು ನಮ್ಮ ಸಮಾಜದಲ್ಲಿ ನೈತಿಕ ಮತ್ತು ಆತ್ಮಿಕ ಮೌಲ್ಯಗಳ ಅವನತಿಗೆ ಇದು ಕಾರಣವಾಗಿದೆ.” (ಒತ್ತಕ್ಷರಗಳು ನಮ್ಮವು.) ಹೌದು, ಪ್ರಾಪಂಚಿಕ ವಿಷಯಗಳ ಬೆನ್ನಟ್ಟುವಿಕೆಯ ಮಿತಿಮೀರಿದ ಪ್ರಾಧಾನ್ಯವು, ಪ್ರಾಪಂಚಿಕತೆ ಮತ್ತು ಲೋಭದ ಆತ್ಮಕ್ಕೆ ಮುನ್ನಡೆಸುತ್ತದೆ. ಅದು ಸ್ವವಿಚಾರಸಕ್ತತೆಯನ್ನು ಪ್ರವರ್ಧಿಸುತ್ತದೆ. ಕುಟುಂಬದ ಕುಸಿತ ಮತ್ತು ಸಾಮಾಜಿಕ ಅವ್ಯವಸ್ಥೆಗಳ ಸಂಖ್ಯಾಭಿವೃದ್ಧಿಗೆ ಮುನ್ನಡೆಸುವಂತಹ ಒಂದು ಆತ್ಮವು ಅದಾಗಿದೆ. ಬೈಬಲು 2,000 ವರ್ಷಗಳ ಹಿಂದೆ ಏನನ್ನು ಹೇಳಿತ್ತೋ ಅದು ಇನ್ನೂ ಸತ್ಯವಾಗಿದೆ: “ಹಣದಾಸೆಯು [ಹಣವು ತಾನೇ ಅಲ್ಲ] ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ.”—1 ತಿಮೊಥೆಯ 6:10, NW.
ಒಂದು ಲೋಕವ್ಯಾಪಕ ಸಮಸ್ಯೆ
ಶಾಂತಿ ಮತ್ತು ನಿಶ್ಚಿಂತತೆ—ಮತ್ತು ಸುರಕ್ಷಣೆ—ಯ ಅನ್ವೇಷಣೆಯಲ್ಲಿ ಸಾವಿರಗಟ್ಟಲೆ ಜನರು ಟೈವಾನಿನಿಂದ ಇತರ ದೇಶಗಳಿಗೆ ವಲಸೆ ಹೋಗಿದ್ದಾರೆ. ಆದರೆ ಟೈವಾನ್ ಅನುಭವಿಸುತ್ತಿರುವ ಸಮಸ್ಯೆಗಳು ಟೈವಾನಿಗೆ ಮಾತ್ರ ಅಸದೃಶವಾಗಿರುವುದಿಲ್ಲ. ಅವು ಲೋಕವ್ಯಾಪಕವಾಗಿ ಹಬ್ಬಿವೆ.
ಅಮೆರಿಕದ ಕ್ಯಾಲಿಫೋರ್ನಿಯದ ಅತ್ಯಂತ ಸಂಪದ್ಭರಿತವಾದ ಕೌಂಟಿಯು ದೇಶದಲ್ಲೇ ಅತ್ಯಂತ ಹೆಚ್ಚು ವಿಚ್ಛೇದನ ಪ್ರಮಾಣವನ್ನು ಹೊಂದಿತ್ತೆಂದು ಕೆಲವು ವರ್ಷಗಳ ಹಿಂದೆ ಒಂದು ಅಧ್ಯಯನವು ತೋರಿಸಿತು. ಕೌಂಟಿಯ ಕೆಲವು ಕ್ಷೇತ್ರಗಳಲ್ಲಿರುವ ಎಲ್ಲಾ ಸ್ಥಿರಾಸ್ತಿ ವ್ಯವಹಾರಗಳಲ್ಲಿ ಸುಮಾರು 90 ಪ್ರತಿಶತ, ಒಡೆದ ವಿವಾಹಗಳ ಫಲಿತಾಂಶದಿಂದಾಗಿದ್ದವು. ರಾಷ್ಟ್ರೀಯ ಸರಾಸರಿಗಿಂತ ಇಮ್ಮಡಿ ಆತ್ಮಹತ್ಯೆಗಳು ವರದಿಸಲ್ಪಟ್ಟಿದ್ದವು. ಮದ್ಯವ್ಯಸನದ ಪ್ರಮಾಣವು ದೇಶದಲ್ಲೇ ಅತ್ಯಂತ ಹೆಚ್ಚು ಪ್ರಮಾಣಗಳಲ್ಲಿ ಒಂದಾಗಿತ್ತು, ಮತ್ತು ಅಮೆರಿಕದಲ್ಲಿ ಬೇರೆಲ್ಲಿಗಿಂತಲೂ, ಕೌಂಟಿಯಲ್ಲಿ, ತಲಾ ಒಬ್ಬನಿಗೆ ಹೆಚ್ಚು ಮನೋರೋಗ ಚಿಕಿತ್ಸಕರು ಮತ್ತು ಇತರ ಮಾನಸಿಕ ಚಿಕಿತ್ಸಕರು ಇದ್ದರೆಂದು ಹೇಳಸಾಧ್ಯವಿತ್ತು.
“ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವುದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು” ಎಂದು ಯೇಸು ಕ್ರಿಸ್ತನು ಹೇಳಿದಾಗ, ಆತನು ಮೂಲಭೂತ ಸತ್ಯವೊಂದನ್ನು ನಿರ್ದೇಶಿಸಿದನು. (ಮತ್ತಾಯ 4:4) ಪ್ರಾಪಂಚಿಕ ಸಂಪತ್ತುಗಳು ಎಷ್ಟೇ ಹೇರಳವಾಗಿರುವುದಾದರೂ, ವ್ಯಕ್ತಿಯೊಬ್ಬನ ಪ್ರತಿಯೊಂದು ಆವಶ್ಯಕತೆಯನ್ನು ಪೂರೈಸಲಾರವು, ಅಥವಾ ಅವು ಸಂತೋಷದ ಖಾತರಿಯನ್ನು ಕೊಡಲಾರವು. ಅದಕ್ಕೆ ಬದಲಾಗಿ, ಅದು ಅನೇಕವೇಳೆ ಚೀನೀ ಗಾದೆಯೊಂದು ಅದನ್ನು ಸೂಚಿಸುವಂತಿದೆ: “ಒಬ್ಬನು ಚೆನ್ನಾಗಿ ಉಂಡು ಉದ್ರೇಕಗೊಂಡಿರುವಾಗ, ಒಬ್ಬನ ಆಲೋಚನೆಗಳು ಅತಿರೇಕಕ್ಕೆ ಮತ್ತು ಮಾಂಸಿಕ ಅಪೇಕ್ಷೆಗಳಿಗೆ ತಿರುಗುತ್ತವೆ.” ಇದು ಟೈವಾನ್ ಮತ್ತು ಇತರ ಕಡೆಗಳಲ್ಲಿ ಏನು ಸಂಭವಿಸುತ್ತಿದೆಯೊ ಅದರಿಂದ ನಿದರ್ಶಿಸಲ್ಪಡುವಂತೆ ಇದೆ—ಪ್ರಾಪಂಚಿಕ ಸಮೃದ್ಧಿಯೊಂದೇ ಅನೇಕವೇಳೆ ನೈತಿಕ ಮತ್ತು ಸಾಮಾಜಿಕ ಕ್ಷಯಿಸುವಿಕೆಗೆ ಮತ್ತು ಅದನ್ನು ಅನುಸರಿಸುವ ಸಮಸ್ಯೆಗಳಿಗೆ ಪೀಠಿಕೆಯಾಗಿ ಪರಿಣಮಿಸುತ್ತದೆ.
ಹಾಗಾದರೆ ಪ್ರಾಪಂಚಿಕ ಸಮೃದ್ಧಯು ನೈಜ ಹಾಗೂ ಶಾಶ್ವತವಾದ ಸಂತೋಷದ ಒಂದು ಭಾಗವಾಗಿರಬೇಕಾದಲ್ಲಿ ಏನು ಆವಶ್ಯಕವಾಗಿದೆ? ಉತ್ತರಕ್ಕಾಗಿ, ದಯಮಾಡಿ ಹಿಂಬಾಲಿಸುವ ಲೇಖನವನ್ನು ಓದಿರಿ.
[ಪುಟ 6 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಒಬ್ಬನು ಚೆನ್ನಾಗಿ ಉಂಡು ಉದ್ರೇಕಗೊಂಡಿರುವಾಗ, ಒಬ್ಬನ ಆಲೋಚನೆಗಳು ಅತಿರೇಕಕ್ಕೆ ಮತ್ತು ಮಾಂಸಿಕ ಅಪೇಕ್ಷೆಗಳಿಗೆ ತಿರುಗುತ್ತವೆ.”—ಚೀನೀ ಗಾದೆ
[ಪುಟ 5 ರಲ್ಲಿರುವ ಚಿತ್ರ]
ಪ್ರಾಪಂಚಿಕ ಸಮೃದ್ಧಯು ಸಣ್ಣ ಪಟ್ಟಣಗಳನ್ನು ಸಡಗರದಲ್ಲಿರುವ, ನೀಯಾನ್ ಬೆಳಕಿನ ನಗರಗಳನ್ನಾಗಿ ಪರಿವರ್ತಿಸಿದೆ