ಮೆಕ್ಸಿಕೊದಲ್ಲಿ ವಿಪತ್ತುಗಳ ನಡುವೆ ಕ್ರೈಸ್ತ ಪ್ರೀತಿ
ಮೆಕ್ಸಿಕೊ ನಗರದ ಒಂದು ವಾರ್ತಾಪತ್ರವು ವರದಿಸಿದ್ದು: “ಕಳೆದ 20 ದಿನಗಳಲ್ಲಿ, ನೈಸರ್ಗಿಕ ಘಟನೆಯು—ಚಂಡಮಾರುತಗಳು ಮತ್ತು ಒಂದು ಭೂಕಂಪ—ಮೆಕ್ಸಿಕೊವಿನ ಕರಾವಳಿಗಳ ಮೇಲೆ ರಭಸದಿಂದ ಬೀಸುತ್ತಾ, ಮರಣ ಮತ್ತು ನಾಶನದ ಪರಿಣಾಮವನ್ನು ಹಿಂದೆ ಬಿಟ್ಟು ಹೋಗಿದೆ.”—ಎಲ್ ಫೈನಾನ್ಸ್ಯೇರೊ, ಅಕ್ಟೋಬರ್ 17, 1995.
ಕಾಂಪೆಚ್, ಕ್ವಿಂಟಾನಾ ರೂ, ಮತ್ತು ಟಾಬಾಸ್ಕೊ ಎಂಬ ಮೆಕ್ಸಿಕನ್ ರಾಜ್ಯಗಳು, ಅಕ್ಟೋಬರ್ ತಿಂಗಳ ಆದಿಭಾಗದಲ್ಲಿ ಓಪಲ್ ಚಂಡಮಾರುತದಿಂದ ತೀವ್ರವಾಗಿ ಹಾನಿಗೊಳಿಸಲ್ಪಟ್ಟವು. ಬಹುಮಟ್ಟಿಗೆ 200 ಮಂದಿ ಕೊಲ್ಲಲ್ಪಟ್ಟರು, 150ಕ್ಕಿಂತಲೂ ಹೆಚ್ಚಿನ ಜನರು ಗಾಯಗೊಳಿಸಲ್ಪಟ್ಟರು, 5,00,000 ಮಂದಿ ನಷ್ಟಗಳನ್ನು ಅನುಭವಿಸಿದರು ಮತ್ತು ಸಾವಿರಾರು ಮನೆಗಳು ಹಾನಿಗೊಳಿಸಲ್ಪಟ್ಟವು ಅಥವಾ ಸಂಪೂರ್ಣವಾಗಿ ನಾಶಗೊಳಿಸಲ್ಪಟ್ಟವು.
ಮೆಕ್ಸಿಕೊದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸು ಹಾನಿಯ ಕುರಿತಾಗಿ ಕೇಳಿದ ಕೂಡಲೆ, ಬಾಧಿತ ಕ್ಷೇತ್ರಗಳಲ್ಲಿ ಸಾಕ್ಷಿಗಳು ಹೇಗಿದ್ದರೆಂಬುದನ್ನು ಕಂಡುಹಿಡಿಯಲು ಒಬ್ಬರನ್ನು ಕಳುಹಿಸಲಾಯಿತು. ಅವರಲ್ಲಿ 2,500ಕ್ಕಿಂತಲೂ ಹೆಚ್ಚು ಮಂದಿ ತಮ್ಮ ಮನೆಗಳನ್ನು ಬಿಟ್ಟುಬಿಡಲು ಒತ್ತಾಯಿಸಲ್ಪಟ್ಟಿದ್ದರೆಂಬುದು ತಿಳಿದುಬಂತು. ಇವರು ಜೊತೆ ಸಾಕ್ಷಿಗಳ ಮನೆಗಳೊಳಗೆ ದಯಾಪೂರ್ವಕವಾಗಿ ಒಳಸೇರಿಸಲ್ಪಟ್ಟರು.
ಪರಿಹಾರ ಕೇಂದ್ರಗಳು ವ್ಯವಸ್ಥಾಪಿಸಲ್ಪಟ್ಟವು. ಅಗತ್ಯದಲ್ಲಿದ್ದವರಿಗೆ ಆಹಾರ, ಬಟ್ಟೆ, ಮತ್ತು ಹಣವನ್ನು ಒದಗಿಸಲಾಯಿತು. ನೆರೆಗಳ ನೀರು ಕಡಮೆಯಾದ ನಂತರ, ಸಾಕ್ಷಿಗಳು ತಮ್ಮ ಕ್ರೈಸ್ತ ಸಹೋದರರ ಮನೆಗಳನ್ನು ಪುನಃ ಕಟ್ಟಲು ಆರಂಭಿಸಿದರು.
ಅಕ್ಟೋಬರ್ 9ರಂದು, ರಿಕ್ಟರ್ ಮಾಪಕದಲ್ಲಿ 7.6ರಷ್ಟು ಅಳತೆಯ ಒಂದು ಶಕ್ತಿಶಾಲಿ ಭೂಕಂಪವು, ಕೊಲಿಮಾ ಮತ್ತು ಜಾಲಿಸ್ಕೊ ಎಂಬ ಮೆಕ್ಸಿಕನ್ ರಾಜ್ಯಗಳನ್ನು ಹಾನಿಗೊಳಿಸಿತು. ಯೆಹೋವನ ಸಾಕ್ಷಿಗಳ ಎಂಟು ರಾಜ್ಯ ಸಭಾಗೃಹಗಳು ತೀವ್ರವಾಗಿ ಹಾನಿಗೊಂಡವು. ಅವರ ಹನ್ನೆರಡು ಮನೆಗಳು ಕುಸಿದುಬಿದ್ದವು, ಮತ್ತು ಸುಮಾರು 65 ಮನೆಗಳು ಹಾನಿಗೊಳಿಸಲ್ಪಟ್ಟವು. ಪುನಃ ಒಂದು ಪರಿಹಾರ ಕಮಿಟಿಯನ್ನು ವ್ಯವಸ್ಥಾಪಿಸಲಾಯಿತು ಮತ್ತು ನೆರವು ಒದಗಿಸಲ್ಪಟ್ಟಿತು.
ಅನಂತರ ಅಕ್ಟೋಬರ್ 20ರಂದು, ಚಿಯಾಪಾಸ್ ರಾಜ್ಯವನ್ನು ಅಲುಗಾಡಿಸುತ್ತಾ ಇನ್ನೊಂದು ಭೂಕಂಪವು ಬಡಿಯಿತು. ಇನ್ನೂ 88 ಸಾಕ್ಷಿಗಳ ಮನೆಗಳು ನಾಶಗೊಳಿಸಲ್ಪಟ್ಟವು ಮತ್ತು 38 ಮನೆಗಳು ತೀವ್ರವಾಗಿ ಹಾನಿಗೊಳಗಾದವು. ಎರಡು ರಾಜ್ಯ ಸಭಾಗೃಹಗಳು ಸಂಪೂರ್ಣವಾಗಿ ನಾಶಗೊಂಡವು, ಮತ್ತು ಇತರ ನಾಲ್ಕು ಸಭಾಗೃಹಗಳು ತುಂಬ ಹಾನಿಗೊಳಗಾದವು. ಬಹುಮಟ್ಟಿಗೆ ಅದೇ ಸಮಯದಲ್ಲಿ, ರಾಕ್ಸಾನ್ ಚಂಡಮಾರುತಕ್ಕೆ ಸಂಬಂಧಿಸಿದ ನೆರೆಗಳು ವೆರಾಕ್ರುಸ್ ರಾಜ್ಯದ ಸುಮಾರು 80 ಸಾಕ್ಷಿಗಳ ಮನೆಗಳನ್ನು ಹಾನಿಗೊಳಿಸಿದವು. ನಾಲ್ಕು ಮನೆಗಳು ಸಂಪೂರ್ಣವಾಗಿ ನಾಶಗೊಳಿಸಲ್ಪಟ್ಟವು. ಯೆಹೋವನ ಸಾಕ್ಷಿಗಳಿಂದ ಸ್ಥಾಪಿಸಲ್ಪಟ್ಟ ಒಂದು ಪರಿಹಾರ ನಿಧಿಯು ಈ ಬಲಿಗಳಿಗೂ ಕ್ಷಿಪ್ರವಾಗಿ ಸರಬರಾಯಿಯನ್ನು ಒದಗಿಸಿತು.
ಕೆಲವು ಸಾಕ್ಷಿಗಳು ಜಜ್ಜುಗಾಯಗಳನ್ನು ಮತ್ತು ಅಸ್ಥಿಮುರಿತವನ್ನು ಅನುಭವಿಸಿದರೂ, ಯಾರೊಬ್ಬರೂ ಈ ನೈಸರ್ಗಿಕ ವಿಪತ್ತುಗಳಿಂದ ಸಾಯಲಿಲ್ಲ. ಒಟ್ಟಿಗೆ, ಸುಮಾರು 24 ಟನ್ನುಗಳಷ್ಟು ಆಹಾರ ಮತ್ತು 4 ಟನ್ನುಗಳಷ್ಟು ಬಟ್ಟೆಯು ಅಗತ್ಯದಲ್ಲಿರುವವರಿಗೆ ಕಳುಹಿಸಲ್ಪಟ್ಟಿತು. ಅನೇಕ ಪ್ರೇಕ್ಷಕರು ಪರಿಹಾರ ಕೆಲಸಕ್ಕಾಗಿ ಮೆಚ್ಚಿಕೆಯನ್ನು ವ್ಯಕ್ತಪಡಿಸಿದರು. ಕೊಲಿಮಾದಲ್ಲಿನ ಒಬ್ಬ ಸ್ತ್ರೀಯು ಹೇಳಿದ್ದು: “ಯೆಹೋವನ ಸಾಕ್ಷಿಗಳು ತುಂಬಾ ಐಕ್ಯರಾಗಿದ್ದಾರೆಂದು ನಾನು ಕೇವಲ ಕೇಳಿದ್ದೆ, ಆದರೆ ಈಗ ನಾನು ಅದನ್ನು ಕಣ್ಣಾರೆ ನೋಡಬಲ್ಲೆ.”
ಅನೇಕ ಬಾರಿ ಜನರು, ಸಾಕ್ಷಿಗಳು ಮತ್ತು ಅವರ ಪರಿಹಾರ ಕೆಲಸದ ಕುರಿತಾಗಿ ಹೀಗೆ ಹೇಳಿದರು: “ಇವರು ನಿಜವಾಗಿಯೂ ಸಹೋದರರಾಗಿದ್ದಾರೆ.” “ಇವರು ಹೆಚ್ಚು ಉತ್ತಮವಾಗಿ ವ್ಯವಸ್ಥಾಪಿತವಾದ ಗುಂಪಾಗಿದ್ದಾರೆ.” ಕೆಲವರು ಹೀಗೂ ಹೇಳುವುದನ್ನು ಕೇಳಲಾಯಿತು: “ಸಹಾಯ ಮಾಡಲು ಬಂದಂತಹ ಎಲ್ಲಾ ಪರಿಹಾರ ಗುಂಪುಗಳು ಯೆಹೋವನ ಸಾಕ್ಷಿಗಳಂತೆ ಕೆಲಸಮಾಡುತ್ತಿದ್ದಲ್ಲಿ, ಇಡೀ ಪಟ್ಟಣವು ಈಗಾಗಲೇ ಶುದ್ಧವಾಗಿರುತ್ತಿತ್ತು.”
ಈಗ 4,40,000ಕ್ಕಿಂತಲೂ ಹೆಚ್ಚಿನ ಸಾಕ್ಷಿಗಳು ದೇವರ ರಾಜ್ಯದ ಸುವಾರ್ತೆಯನ್ನು ತಮ್ಮ ಜೊತೆ ಮೆಕ್ಸಿಕನ್ ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚಿನ ಈ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಅವರು ಒಬ್ಬರು ಇನ್ನೊಬ್ಬರಿಗಾಗಿ ಪ್ರದರ್ಶಿಸಿದ ಪ್ರೀತಿಯು ಒಂದು ಶಕ್ತಿಶಾಲಿ ಸಾಕ್ಷಿಯನ್ನು ಒದಗಿಸಿತು.—ಯೋಹಾನ 13:34, 35.