ಸುಳ್ಳು ಧರ್ಮವು ತನ್ನ ನಾಶನಕ್ಕೆ ಸವಾರಿಮಾಡುತ್ತದೆ!
ಈ ಲೋಕದ ಧರ್ಮಗಳು ತಮ್ಮ ಅಂತ್ಯವನ್ನು ಸಮೀಪಿಸುತ್ತಿವೆಯೆ ಎಂಬುದನ್ನು ಕಂಡುಕೊಳ್ಳಲಿಕ್ಕಾಗಿ, ಬೈಬಲಿನ ಅತ್ಯಂತ ವೈವಿಧ್ಯಮಯವಾದ ಪ್ರವಾದನೆಗಳಲ್ಲೊಂದನ್ನು ನಾವು ಪರೀಕ್ಷಿಸೋಣ. ಅದು ಬೈಬಲಿನ ಕೊನೆಯ ಪುಸ್ತಕವಾದ ಪ್ರಕಟನೆಯಲ್ಲಿ ವರ್ಣಿಸಲಾದ ಆ ನಿಗೂಢ ಸಾಂಕೇತಿಕ ಸ್ತ್ರೀಯ ಕುರಿತಾಗಿದೆ.
ಇತಿಹಾಸದಾದ್ಯಂತ ನೂರಾರು ಕೋಟಿ ಜನರ ಜೀವಗಳ ಮೇಲೆ ಪ್ರಭಾವಬೀರುತ್ತಾ—ಧೂಮ್ರವರ್ಣದ ವಸ್ತ್ರಗಳನ್ನೂ ರಕ್ತಾಂಬರವನ್ನೂ ಧರಿಸಿಕೊಂಡು, ಚಿನ್ನ, ರತ್ನ, ಮುತ್ತು ಇವುಗಳಿಂದ ಬಹಳವಾಗಿ ಅಲಂಕರಿಸಿಕೊಂಡಿರುವ ಒಬ್ಬಾಕೆ ಧನವಂತ ಸ್ತ್ರೀ—ರಾಷ್ಟ್ರಗಳ ಮೇಲೆ ರಾಣಿಯಾಗಿ ಆಳಿರುವ ಒಬ್ಬ ಸ್ತ್ರೀಯನ್ನು ನೀವು ಕಲ್ಪಿಸಿಕೊಳ್ಳಬಲ್ಲಿರೊ? ಅವಳ ಹಣೆಯ ಮೇಲೆ ಒಂದು ದೀರ್ಘವಾದ, ಗೂಢಾರ್ಥದ ಹೆಸರನ್ನು ಬರೆಯಲಾಗಿದೆ: “ಮಹಾ ಬಾಬೆಲ್, ಭೂಮಿಯಲ್ಲಿರುವ ಜಾರಸ್ತ್ರೀಯರ ಮತ್ತು ಅಸಹ್ಯವಾದ ಕಾರ್ಯಗಳ ತಾಯಿ” (NW). ಲೋಕದ ಅರಸರೊಂದಿಗೆ “ಜಾರತ್ವ” ಗೈದವಳಾದ ಈಕೆಯು, ತನ್ನ ಬಗ್ಗದ ವಿಷಯಲಂಪಟ ಜೀವಿತದಿಂದ ನಿಸ್ಸಂದೇಹವಾಗಿ ಗುರುತಿಸಲ್ಪಟ್ಟಿದ್ದಾಳೆ. ಅವಳ ಪಾಪಗಳು ಆಕಾಶದ ವರೆಗೂ ಬೆಳೆದಿವೆ. ಏಳುತಲೆಗಳೂ ಹತ್ತುಕೊಂಬುಗಳೂ ಇರುವ ಒಂದು ವಿಲಕ್ಷಣವಾದ ರಕ್ತವರ್ಣದ ಕಾಡುಮೃಗದ ಮೇಲೆ ಅವಳು ಸವಾರಿಮಾಡುತ್ತಿದ್ದಾಳೆ.—ಪ್ರಕಟನೆ 17:1-6; 18:5.
ಈ ಸ್ತ್ರೀಯನ್ನು ನೀವು ಕಲ್ಪಿಸಿಕೊಳ್ಳಬಲ್ಲಿರಾದರೆ, ಒಬ್ಬ ದೇವದೂತನ ಮೂಲಕವಾಗಿ ಯೇಸುವಿನ ಶಿಷ್ಯ ಅಪೊಸ್ತಲ ಯೋಹಾನನಿಗೆ ಕೊಡಲ್ಪಟ್ಟ ಒಂದು ದರ್ಶನದಲ್ಲಿ, ಅವನು ಕಂಡ ಪ್ರವಾದನಾ ನಾಟಕದ ಪ್ರಮುಖ ಪಾತ್ರಧಾರಿ ಯಾರೆಂದು ನಿಮಗೆ ತಿಳಿಯುವುದು. ಪ್ರಕಟನೆ 17 ಮತ್ತು 18ನೆಯ ಅಧ್ಯಾಯಗಳಲ್ಲಿ ಅವನು ಅದನ್ನು ಸುವ್ಯಕ್ತವಾಗಿ ವರ್ಣಿಸುತ್ತಾನೆ. ಈ ಅಧ್ಯಾಯಗಳನ್ನು ನಿಮ್ಮ ಸ್ವಂತ ಬೈಬಲಿನಲ್ಲಿ ಓದಿರಿ. ಈ ನಿಗೂಢ ಸ್ತ್ರೀಯ ಗುರುತಿನ ಬಯಲುಪಡಿಸುವಿಕೆಯಿಂದ ಹಿಡಿದು ಅವಳ ಮರಣಾಂತಕ ಅಂತ್ಯದ ತನಕದ ಘಟನಾವಳಿಗಳನ್ನು ಹಿಂಬಾಲಿಸಲು ನೀವು ಶಕ್ತರಾಗುವಿರಿ.
ಆ ವೇಶ್ಯೆಯನ್ನು ಗುರುತಿಸುವುದು
ಈ ವೇಶ್ಯಾರಾಣಿಯು ಯಾವುದರ ಮೇಲೆ ಸಾಂಕೇತಿಕವಾಗಿ ಕುಳಿತುಕೊಳ್ಳುತ್ತಾಳೊ ಆ ಎರಡು ವಸ್ತುಗಳಲ್ಲಿ ಅವಳ ಗುರುತನ್ನು ತಿಳಿದುಕೊಳ್ಳುವ ಸುಳಿವು ಕಂಡುಬರುತ್ತದೆ. ಪ್ರಕಟನೆ 17:18ರಲ್ಲಿ (NW) ಅವಳನ್ನು “ಭೂರಾಜರ ಮೇಲೆ ಒಂದು ರಾಜ್ಯವಿರುವ ಮಹಾನಗರಿ” ಎಂದು ವರ್ಣಿಸಲಾಗಿದೆ. ಇದು ಅವಳಿಗೆ ‘ಅನೇಕ ನೀರುಗಳ’ ಮೇಲೆ ಅಂದರೆ, ಪ್ರಕಟನೆ 17:1, 15ರಲ್ಲಿ ತೋರಿಸಲ್ಪಟ್ಟಂತೆ, “ಪ್ರಜೆ ಸಮೂಹ ಜನ ಭಾಷೆಗಳ” ಮೇಲೆ ಕುಳಿತುಕೊಳ್ಳಲು ಅನುಮತಿಯನ್ನೀಯುತ್ತದೆ. ಅದೇ ಅಧ್ಯಾಯದ 3ನೆಯ ವಚನಕ್ಕನುಸಾರ, ಏಳುತಲೆಗಳ ಒಂದು ಕಾಡುಮೃಗದ ಮೇಲೆ—ಬೈಬಲಿನಲ್ಲಿ ಮೃಗಗಳನ್ನು ಸಾಮಾನ್ಯವಾಗಿ ಜಾಗತಿಕ ರಾಜಕೀಯ ಶಕ್ತಿಗಳು ಅಥವಾ ಸಂಘಟನೆಗಳ ಕುರುಹುಗಳನ್ನಾಗಿ ಬಳಸಲಾಗಿದೆ—ಕುಳಿತುಕೊಂಡವಳಾಗಿಯೂ ಅವಳು ಕಂಡುಬರುತ್ತಾಳೆ.
ಇದು ಮಹಾ ಬಾಬೆಲ್ ಎಂಬ ವೇಶ್ಯಾಸ್ತ್ರೀಯನ್ನು, ಇತರ ಅಧಿಕಾರಿಗಳನ್ನೂ ಅವರ ಪ್ರಜೆಗಳನ್ನೂ ಆಳುವ ಒಂದು ಉತ್ಕರ್ಷಿತ ಸಾಮ್ರಾಜ್ಯದ ಮೂರ್ತರೂಪವೆಂದು ಸೂಚಿಸುತ್ತದೆ. ಇದು ಲೋಕದ ಸುಳ್ಳು ಧರ್ಮಗಳ ಸಾಮ್ರಾಜ್ಯವು ಮಾತ್ರವೇ ಆಗಿರಬಲ್ಲದು.
ರಾಜ್ಯ ಕಾರ್ಯನೀತಿ ಮತ್ತು ರಾಜಕೀಯದ ವಿಷಯಗಳ ಮೇಲೆ ಧಾರ್ಮಿಕ ಮುಖಂಡರಿಗಿರುವ ಪ್ರಭಾವವು, ಇತಿಹಾಸದ ಒಂದು ಸುವಿದಿತವಾದ ಭಾಗವಾಗಿದೆ. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಪಶ್ಚಿಮ ರೋಮನ್ ಸಾಮ್ರಾಜ್ಯದ [5ನೆಯ ಶತಮಾನ] ಪತನದ ಬಳಿಕ, ಯೂರೋಪಿನ ಬೇರೆ ಯಾವುದೇ ವ್ಯಕ್ತಿಗಿಂತ ಪೋಪರಿಗೆ ಹೆಚ್ಚು ಅಧಿಕಾರವಿತ್ತು. . . . ಪೋಪರು ರಾಜಕೀಯ ಹಾಗೂ ಆಧ್ಯಾತ್ಮಿಕ ಅಧಿಕಾರವನ್ನು ಚಲಾಯಿಸಿದರು. 800ನೆಯ ಇಸವಿಯಲ್ಲಿ, IIIನೆಯ ಪೋಪ್ ಲಿಯೊ, ಫ್ರ್ಯಾಂಕಿಷ್ ಅಧಿಪತಿ ಷಾರ್ಲ್ಮೇನ್ [ಮಹಾ ಚಾರ್ಲ್ಸ್]ನಿಗೆ ರೋಮನರ ಸಮ್ರಾಜನನ್ನಾಗಿ ಕಿರೀಟಧಾರಣೆ ಮಾಡಿದರು. . . . IIIನೆಯ ಲಿಯೊ, ಒಬ್ಬ ಸಮ್ರಾಜನ ಅಧಿಕಾರವನ್ನು ನ್ಯಾಯಬದ್ಧಗೊಳಿಸಲು ಪೋಪರಿಗಿರುವ ಹಕ್ಕನ್ನು ಸ್ಥಾಪಿಸಿದ್ದನು.”
ಕ್ಯಾತೊಲಿಕ್ ಚರ್ಚು ಮತ್ತು ಅದರ “ಪ್ರಭುಗಳು” ಅಧಿಪತಿಗಳ ಮೇಲೆ ಚಲಾಯಿಸಿದ ಅಧಿಕಾರವು, ಕಾರ್ಡಿನಲ್ ಥಾಮಸ್ ವುಲ್ಸಿಯಿಂದ ಇನ್ನಷ್ಟು ಉದಾಹರಿಸಲ್ಪಟ್ಟಿತು (1475?-1530). “ಇಂಗ್ಲೆಂಡಿನಲ್ಲಿ ಅನೇಕ ವರ್ಷಗಳ ತನಕ ಇದ್ದ ಅತ್ಯಂತ ಪ್ರಭಾವಶಾಲಿ ವ್ಯಕ್ತಿ”ಯಾಗಿ ಅವನು ವರ್ಣಿಸಲ್ಪಡುತ್ತಾನೆ. ಅರಸ VIIIನೆಯ ಹೆನ್ರಿಯ ಆಳಿಕೆಯ ಕೆಳಗೆ ಅವನು “ಬೇಗನೆ ರಾಜ್ಯದ ಎಲ್ಲ ವಿಷಯಗಳನ್ನು ನಿಯಂತ್ರಿಸುವ ವ್ಯಕ್ತಿಯಾದನು. . . . ಅವನು ರಾಜಯೋಗ್ಯ ವೈಭವದಿಂದ ಜೀವಿಸಿ, ತನ್ನ ಅಧಿಕಾರಬಲದಲ್ಲಿ ಮೆರೆದಾಡಿದನು.” ಎನ್ಸೈಕ್ಲೊಪೀಡಿಯ ವೃತ್ತಾಂತವು ಮುಂದುವರಿಸುವುದು: “ಕಾರ್ಡಿನಲ್ ವುಲ್ಸಿ ರಾಜ್ಯನೀತಿಜ್ಞನೂ ಆಡಳಿತಗಾರನೂ ಆಗಿ, ತನ್ನ ಮಹಾ ಸಾಮರ್ಥ್ಯಗಳನ್ನು ಮುಖ್ಯವಾಗಿ, VIIIನೆಯ ಹೆನ್ರಿಗಾಗಿ ವಿದೇಶೀಯ ವ್ಯವಹಾರಗಳನ್ನು ನಿರ್ವಹಿಸುವುದರಲ್ಲಿ ಕಳೆದನು.”
ರಾಜ್ಯದ ಸರಕಾರಿ ವಿಷಯಗಳ ಮೇಲೆ ಕ್ಯಾತೊಲಿಕ್ ಅಧಿಕಾರದ ಇನ್ನೊಂದು ಎದ್ದುಕಾಣುವ ಉದಾಹರಣೆಯು ಫ್ರಾನ್ಸಿನ ಕಾರ್ಡಿನಲ್ ರಿಶೆಲ್ಯೂ (1585-1642)ವಿನದ್ದು. ಅವನು “18ಕ್ಕೂ ಹೆಚ್ಚು ವರ್ಷಗಳ ತನಕ . . . ಫ್ರಾನ್ಸಿನ ಸಾಕ್ಷಾತ್ ಪ್ರಭುವಾಗಿದ್ದನು.” ಈ ಹಿಂದೆ ಉದ್ಧರಿಸಲ್ಪಟ್ಟ ಮೂಲವು ಹೇಳುವುದು: “ಅವನು ಅತಿರೇಕ ಹೆಬ್ಬಯಕೆಯವನಾಗಿದ್ದನು ಮತ್ತು ಬೇಗನೆ ಉಚ್ಚಾಧಿಕಾರವನ್ನು ಪಡೆಯಲು ತವಕಪಟ್ಟನು.” 1622ರಲ್ಲಿ ಅವನನ್ನು ಕಾರ್ಡಿನಲನಾಗಿ ಮಾಡಲಾಯಿತು, “ಮತ್ತು ಬೇಗನೆ ಫ್ರೆಂಚ್ ಸರಕಾರದಲ್ಲಿ ಪ್ರಮುಖ ಪ್ರಭಾವವಾದನು.” ಅವನೊಬ್ಬ ವ್ಯವಹಾರ ಚತುರ ವ್ಯಕ್ತಿಯಾಗಿದ್ದನು, ಯಾಕೆಂದರೆ “ಲಾ ರಶೆಲ್ನ ಮುತ್ತಿಗೆಯಲ್ಲಿ, ಅರಸನ ಸೇನೆಯಲ್ಲಿ ಅವನು ಸ್ವತಃ ನಾಯಕತ್ವವಹಿಸಿದನು” ಎಂಬುದು ವ್ಯಕ್ತ. ಲೇಖನವು ಕೂಡಿಸಿದುದು: “ರಿಶೆಲ್ಯೂವಿನ ಅತ್ಯಂತ ಮಹಾ ಅಭಿರುಚಿಯು ವಿದೇಶೀಯ ವ್ಯವಹಾರಗಳಲ್ಲಿತ್ತು.”
ವ್ಯಾಟಿಕನ್ ವಾರ್ತಾಪತ್ರವಾದ ಲಾಸೇರ್ವಾಟೋರೆ ರೊಮಾನೊದಲ್ಲಿ, ವಿದೇಶೀಯ ರಾಯಭಾರ ನಿರ್ವಾಹಕರು ತಮ್ಮ ಪರಿಚಯಪತ್ರವನ್ನು ಪೋಪರ ಪರಮಾಧಿಕಾರಕ್ಕೆ ಸಾದರಪಡಿಸುವ ಸತತವಾದ ಪ್ರಕಟನೆಗಳಿಂದ, ರಾಜಕೀಯ ಅಧಿಕಾರಗಳಲ್ಲಿ ವ್ಯಾಟಿಕನ್ನ ಮುಂದುವರಿದ ಒಳಗೂಡಿರುವಿಕೆಯು ಸ್ಪಷ್ಟವಾಗಿ ಕಂಡುಬಂದಿದೆ. ಲೋಕವ್ಯಾಪಕ ರಾಜಕೀಯ ಮತ್ತು ರಾಯಭಾರ ನಿರ್ವಹಣೆಯ ವಿಕಸನಗಳ ಕುರಿತು ಪೋಪರಿಗೆ ಮಾಹಿತಿಕೊಡಲು, ನಿಷ್ಠಾವಂತ ಕ್ಯಾತೊಲಿಕರ ಒಂದು ಜಾಲಬಂಧವನ್ನು ವ್ಯಾಟಿಕನ್ ಹೊಂದಿದೆಯೆಂಬುದು ಸುವ್ಯಕ್ತ.
ಈ ಲೋಕದ ರಾಜಕೀಯ ವ್ಯವಹಾರಗಳಲ್ಲಿ ಧಾರ್ಮಿಕ ಮುಖಂಡರ—ಕ್ರೈಸ್ತಪ್ರಪಂಚದ ಒಳಗೂ ಹೊರಗೂ—ಶಕ್ತಿಯುತ ಪ್ರಭಾವವನ್ನು ದೃಷ್ಟಾಂತಿಸಲು ಇನ್ನು ಅನೇಕ ಉದಾಹರಣೆಗಳನ್ನು ಕೊಡಸಾಧ್ಯವಿದೆ. ಸಾಂಕೇತಿಕ ವೇಶ್ಯೆಯು (“ಪ್ರಜೆ ಸಮೂಹ ಜನ”ವನ್ನು ಪ್ರತಿನಿಧಿಸುವ) ‘ಅನೇಕ ನೀರುಗಳ’ ಮೇಲೆ ಮತ್ತು (ಸಕಲ ರಾಜಕೀಯ ಜಾಗತಿಕ ಶಕ್ತಿಗಳನ್ನು ಪ್ರತಿನಿಧಿಸುವ) ಕಾಡುಮೃಗದ ಮೇಲೆ ಕುಳಿತುಕೊಂಡಿರುವ ನಿಜತ್ವವು ಸಹ ಸೂಚಿಸುತ್ತದ್ದೇನೆಂದರೆ, ಜನರ, ರಾಷ್ಟ್ರಗಳ ಮತ್ತು ಶಕ್ತಿಗಳ ಮೇಲಣ ಅವಳ ಪ್ರಭಾವವು, ಕೇವಲ ರಾಜಕೀಯ ದೊರೆತನಕ್ಕಿಂತ ಭಿನ್ನವೂ ಉಚ್ಚಸ್ವರೂಪದ್ದೂ ಆಗಿದೆ. ಅದು ಯಾವ ರೀತಿಯದ್ದೆಂಬುದನ್ನು ನಾವು ನೋಡೋಣ.
ಅವಳ ಹಣೆಯ ಮೇಲಿನ ಆ ದೀರ್ಘ ಹೆಸರಿನ ಅಂಶವು “ಮಹಾ ಬಾಬೆಲ್” ಎಂದಾಗಿತ್ತು. ಅದು ಸುಮಾರು 4,000 ವರ್ಷಗಳ ಹಿಂದೆ, ಯಾರು ಸತ್ಯ ದೇವರಾದ ‘ಯೆಹೋವನಿಗೆ ವಿರುದ್ಧ’ ಇದ್ದನೊ ಆ ನಿಮ್ರೋದನಿಂದ ಸ್ಥಾಪಿಸಲ್ಪಟ್ಟ ಪುರಾತನ ಬಾಬೆಲಿಗೆ ನಿರ್ದೇಶಿಸುತ್ತದೆ. (ಆದಿಕಾಂಡ 10:8-10) ಈ ಹೆಸರನ್ನು ಅವಳು ಧರಿಸಿರುವುದು, ತದ್ರೀತಿಯ ಅಂಶಗಳೊಂದಿಗೆ, ಅವಳು ಪುರಾತನ ಬಾಬೆಲಿನ ಒಂದು ಉತ್ಪ್ರೇಕ್ಷಿತ ಸ್ವರೂಪವಾಗಿದ್ದಾಳೆಂಬುದನ್ನು ಸೂಚಿಸುತ್ತದೆ. ಯಾವ ಅಂಶಗಳು? ಯೆಹೋವನ ವಾಕ್ಯದಿಂದ ಯಾವ ಎಲ್ಲ ವಿಷಯಗಳು ಖಂಡಿಸಲ್ಪಟ್ಟಿವೆಯೋ ಆ ರಹಸ್ಯಾರ್ಥವುಳ್ಳ ಧರ್ಮ, ಕೀಳ್ಮಟ್ಟದ ಸಂಪ್ರದಾಯಗಳು, ಮೂರ್ತಿಪೂಜೆ, ಮಂತ್ರವಿದ್ಯೆ, ಜ್ಯೋತಿಶಾಸ್ತ್ರ, ಮತ್ತು ಮೂಢನಂಬಿಕೆಯು ಪುರಾತನ ಬಾಬೆಲಿನಲ್ಲಿ ಹರಡಿಹೋಗಿತ್ತು.
ದ ನ್ಯೂ ಇಂಟರ್ನ್ಯಾಷನಲ್ ಡಿಕ್ಷನರಿ ಆಫ್ ನ್ಯೂ ಟೆಸ್ಟಮೆಂಟ್ ತಿಯಾಲೊಜಿ ಹೇಳುವುದೇನಂದರೆ, ಸಾ.ಶ.ಪೂ. 18ನೆಯ ಶತಮಾನದಲ್ಲಿ, ಮಾರ್ದಕ್ನನ್ನು “ಬಾಬೆಲ್ ನಗರದ ದೇವರನ್ನಾಗಿ ಮತ್ತು ಹೀಗೆ ಸುಮೇರಿಯನ್ ಅಕ್ಕಾದ್ನ ಸುಮಾರು 1300 ದೇವತೆಗಳ ದೇವಸ್ಥಾನದ ಮುಖ್ಯಸ್ಥನನ್ನಾಗಿ” ಮಾಡಲಾಯಿತು. “ಅದು ಸಕಲ ಧಾರ್ಮಿಕ ಸಂಪ್ರದಾಯಗಳನ್ನು ಒಂದು ವ್ಯವಸ್ಥೆಯ ಕೆಳಗೆ ತಂದಿತು. . . . ಆದಿ. 11:1-9ರಲ್ಲಿನ ಬಾಬೆಲಿನ ಭವ್ಯ ದೇವಾಲಯ (ಗೋಪುರ)ದ ವಾಸ್ತುಶಿಲ್ಪವು, ಆಕಾಶವನ್ನು ಲಗ್ಗೆಹತ್ತಲು ಇಷ್ಟಪಡುವ ಮಾನವ ಅಹಂಕಾರದ ಅಭಿವ್ಯಕ್ತಿಯಾಗಿ ಅಪವಾದಿಸಲ್ಪಟ್ಟಿದೆ.”
ಹೀಗೆ, ಪುರಾತನ ಬಾಬೆಲು ಸಮಯ ದಾಟಿದಷ್ಟಕ್ಕೆ ಇಡೀ ಲೋಕವನ್ನೇ ವ್ಯಾಪಿಸಿದ ಸುಳ್ಳು ಧರ್ಮದ ಕೇಂದ್ರಬಿಂದುವಾಗಿತ್ತು. ಬಬಿಲೋನ್ಯ ಧಾರ್ಮಿಕ ಪದ್ಧತಿಗಳು, ಸಿದ್ಧಾಂತಗಳು, ಸಂಪ್ರದಾಯಗಳು, ಮತ್ತು ಕುರುಹುಗಳು ಭೂಮಿಯ ಎಲ್ಲ ಭಾಗಗಳನ್ನು ವ್ಯಾಪಿಸಿ, ಜಗತ್ತಿನ ಅನೇಕ ಸಾವಿರ ಧರ್ಮಗಳ ಕಲಬೆರಕೆಯಲ್ಲಿ ಪ್ರತಿಫಲಿಸಿವೆ. ರಾಜಕೀಯ ರಾಜ್ಯಗಳು ಮತ್ತು ಸಾಮ್ರಾಜ್ಯಗಳು ಎದ್ದಿವೆ ಮತ್ತು ಬಿದ್ದಿವೆ, ಆದರೆ ಬಬಿಲೋನ್ಯ ಧರ್ಮವು ಮಾತ್ರ ಅವೆಲ್ಲವನ್ನು ಪಾರಾಗಿ ಉಳಿದಿದೆ.
ನಾಶನವು ಅಷ್ಟು ಸಮೀಪವಾಗಿದೆ ಏಕೆ?
ಈ ಪತ್ರಿಕೆಯ ಹಿಂದಣ ಸಂಚಿಕೆಗಳಲ್ಲಿ ಆಗಿಂದಾಗ್ಗೆ ವಿವರಿಸಲ್ಪಟ್ಟಿರುವಂತೆ, ಬೈಬಲಿನ ಪ್ರವಾದನೆಗಳು ಮತ್ತು 1914ರಿಂದ ನಡೆದಿರುವ ಲೋಕವನ್ನೆ ನಡುಗಿಸಿದ ಘಟನೆಗಳು, ನಾವೀಗ “ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿ” ಜೀವಿಸುತ್ತಿದ್ದೇವೆಂಬುದನ್ನು ಸುಸ್ಪಷ್ಟವಾಗಿ ಸೂಚಿಸುತ್ತವೆ. (ಮತ್ತಾಯ 24:3, NW) ಇದರ ಅರ್ಥವೇನಂದರೆ, ಮೃಗಪ್ರಾಯವಾದ ಲೋಕ ವ್ಯವಸ್ಥೆಯ ಅಂತ್ಯ, ಅಂತೆಯೇ ಯಾವುದರ ಮೇಲೆ ಆ ವೇಶ್ಯೆಯು ಈಗ ಸವಾರಿಮಾಡುತ್ತಿದ್ದಾಳೊ ಆ ಹತ್ತು ಕೊಂಬುಗಳ “ರಕ್ತವರ್ಣದ ಮೃಗದ” ಅಂತ್ಯವು ಶೀಘ್ರವಾಗಿ ಸಮೀಪಿಸುತ್ತಾ ಇದೆ. (ಪ್ರಕಟನೆ 17:3) ಈ ಮೃಗವು ಬಹುಮಟ್ಟಿಗೆ ಭೂಮಿಯ ಸಕಲ ರಾಷ್ಟ್ರಗಳ ರಾಜಕೀಯ ಸಂಕೀರ್ಣವನ್ನು—ವಿಶ್ವ ಸಂಸ್ಥೆಯನ್ನು—ಪ್ರತಿನಿಧಿಸುತ್ತದೆಂಬುದು ವ್ಯಕ್ತ. ಮುಂತಿಳಿಸಲ್ಪಟ್ಟ ಅಂತ್ಯವು ಮಾನವಕುಲದ ಮೇಲಣ ವಿಭಜನಾತ್ಮಕ, ಭಕ್ತಿಹೀನ ರಾಜಕೀಯ ಆಳಿಕೆಯ ಅಂತ್ಯವನ್ನು ಅರ್ಥೈಸುತ್ತದೆ. ಆದರೆ ಮೃಗದ ಮೇಲೆ ಸವಾರಿಮಾಡುತ್ತಿರುವ ವೇಶ್ಯಾರಾಣಿಯ ಕುರಿತೇನು?
ದೇವರ ದೂತನು ವಿವರಿಸಿದುದು: “ನೀನು ನೋಡಿದ ಹತ್ತು ಕೊಂಬುಗಳು ಮತ್ತು ಕಾಡು ಮೃಗವು, ಇವು ಜಾರಸ್ತ್ರೀಯನ್ನು ದ್ವೇಷಿಸಿ ಅವಳನ್ನು ಧ್ವಂಸಗೊಳಿಸಿ, ನಗ್ನಳನ್ನಾಗಿ ಮಾಡಿ, ಅವಳ ಮಾಂಸಲ ಭಾಗಗಳನ್ನು ತಿಂದುಬಿಟ್ಟು ಅವಳನ್ನು ಬೆಂಕಿಯಿಂದ ಪೂರ್ತಿಯಾಗಿ ಸುಟ್ಟುಬಿಡುವವು. ಏಕೆಂದರೆ ಅವರ ರಾಜ್ಯವನ್ನು ಕಾಡು ಮೃಗಕ್ಕೆ ಕೊಡುವ ಮೂಲಕ, ದೇವರ ಮಾತುಗಳು ನೆರವೇರಲ್ಪಡುವ ತನಕ, ಆತನ ಅಭಿಪ್ರಾಯವನ್ನು ನೆರವೇರಿಸಲು, ಅವರ ಒಂದೇ ಅಭಿಪ್ರಾಯವನ್ನು ಸಹ ನೆರವೇರಿಸಲು, ದೇವರು ಅವರ ಹೃದಯಗಳಲ್ಲಿ ಅದನ್ನು ಹಾಕಿದನು.”—ಪ್ರಕಟನೆ 17:16, 17, NW.
ಹೀಗೆ ರಾಜಕೀಯ ಕಾಡುಮೃಗವು ನಾಶನಕ್ಕೆ ಹೋಗುವ ಸ್ವಲ್ಪಸಮಯದ ಮುಂಚೆ, ಅದು ತನ್ನ ಸವಾರಳನ್ನು ದ್ವೇಷಿಸಿ, ಅವಳ ವಿರುದ್ಧವಾಗಿ ಏಳುವುದು ಎಂದು ಪ್ರವಾದನೆಯು ತೋರಿಸುತ್ತದೆ. ಯಾಕೆ? ಯಾಕಂದರೆ ತಮ್ಮ ಮೇರೆಗಳೊಳಗೆ ಕಾರ್ಯನಡಿಸುತ್ತಿರುವ ಸಂಸ್ಥಾಪಿತ ಧರ್ಮದಿಂದ ತಮ್ಮ ಶಕ್ತಿಯೂ ಅಧಿಕಾರವೂ ಅಪಾಯಕ್ಕೊಳಗಾಗುತ್ತಿದೆಯೆಂದು ಅಧಿಪತಿಗಳೂ ಸರಕಾರಗಳೂ ಪ್ರತ್ಯಕ್ಷವಾಗಿ ಭಾವಿಸುತ್ತವೆ. ಥಟ್ಟನೆ, ಒಂದು ಪ್ರಚೋದಕ ಶಕ್ತಿಯಿಂದ ಪ್ರೇರಿಸಲ್ಪಟ್ಟವರಾಗಿ, ವ್ಯಭಿಚಾರಿಯೂ ರಕ್ತಾಪರಾಧವುಳ್ಳದ್ದೂ ಆಗಿರುವ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯದ ಮೇಲೆ ದೇವರ ತೀರ್ಪನ್ನು ನಿರ್ವಹಿಸುವ ಮೂಲಕ, ಅವರು ದೇವರ “ಅಭಿಪ್ರಾಯವನ್ನು,” ಆತನ ನಿರ್ಣಯವನ್ನು ನೆರವೇರಿಸುವರು.a—ಹೋಲಿಸಿ ಯೆರೆಮೀಯ 7:8-11, 34.
ಅವು ಇನ್ನೂ ಸ್ವತಭರಿತವೂ ಪ್ರಭಾವಯುಕ್ತವೂ ಆಗಿವೆಯೆಂದು ತೋರಿಬರುವಾಗಲೆ, ಈ ಲೋಕದ ಸುಳ್ಳು ಧರ್ಮಗಳ ಅಂತ್ಯವು ಬರುವುದು. ಹೌದು, ಆ ವೇಶ್ಯೆಯು ನಾಶಗೊಳಿಸಲ್ಪಡುವ ತುಸು ಮುಂಚಿತವಾಗಿ, ಅವಳಿನ್ನೂ ತನ್ನ ಹೃದಯದಲ್ಲಿ ಹೀಗನ್ನುತ್ತಿರುವಳೆಂದು ಪ್ರವಾದನೆ ತೋರಿಸುತ್ತದೆ: “ನಾನು ರಾಣಿಯಾಗಿ ಕೂತುಕೊಂಡಿದ್ದೇನೆ, ನಾನು ವಿಧವೆಯಲ್ಲ, ದುಃಖವನ್ನು ಕಾಣುವದೇ ಇಲ್ಲ.” (ಪ್ರಕಟನೆ 18:7) ಆದರೂ ಅವಳ ನಾಶನವು ಅವಳ ನೂರಾರು ಕೋಟಿ ಪ್ರಜೆಗಳಿಗೆ ಒಂದು ಆಶ್ಚರ್ಯದೋಪಾದಿ ಬರುವುದು. ಅದು ಮಾನವ ಇತಿಹಾಸದಲ್ಲೇ ಅತ್ಯಂತ ಅನಿರೀಕ್ಷಿತವೂ ವಿನಾಶಕರವೂ ಆದ ಘಟನೆಯಾಗಿರುವುದು.
ಪುರಾತನ ಬಾಬೆಲಿನ ನಿರ್ಗಮನದಂದಿನಿಂದ, ಸುಳ್ಳು ಧರ್ಮಗಳು ಮಾನವತ್ವದ ಮೇಲೆ, ತಮ್ಮ ಮುಖಂಡರು ಮತ್ತು ಬೆಂಬಲಿಗರ ಮೂಲಕ, ತಮ್ಮ ಸಿದ್ಧಾಂತಗಳು, ಸಂಪ್ರದಾಯಗಳು, ಮತ್ತು ಪದ್ಧತಿಗಳ ಮೂಲಕ, ತಮ್ಮ ಹಲವಾರು ವಂಚನಾತ್ಮಕ ಭವ್ಯ ಆರಾಧನಾ ಕಟ್ಟಡಗಳು ಮತ್ತು ತಮ್ಮ ನಂಬಲತೀತವಾದ ಐಶ್ವರ್ಯಗಳ ಮೂಲಕ ಪ್ರಚಂಡವಾದ ಪ್ರಭಾವವನ್ನು ಹಾಕಿರುತ್ತವೆ. ಅವರು ನಿಶ್ಚಯವಾಗಿಯೂ ಯಾರೂ ಕಾಣದಂತೆ ಕಣ್ಮರೆಯಾಗಿ ಹೋಗರು. ಆದುದರಿಂದ, ವೇಶ್ಯೆಯ ಮೇಲೆ ತೀರ್ಪಿನ ಸಂದೇಶವನ್ನು ತಿಳಿಸಲು ಒಪ್ಪಿಸಲ್ಪಟ್ಟ ದೇವದೂತನು ನಿರ್ದಾಕ್ಷಿಣ್ಯದಿಂದ ಮಾತಾಡುತ್ತಾ ಹೀಗೆ ಘೋಷಿಸುತ್ತಾನೆ: “ಕೊಲೆ ದುಃಖ ಕ್ಷಾಮ ಎಂಬೀ ಉಪದ್ರವಗಳು ಒಂದೇ ದಿನದಲ್ಲಿ ಸಂಭವಿಸುವವು; ಅವಳು ಬೆಂಕಿಯಿಂದ ಸುಟ್ಟುಹೋಗುವಳು; ಅವಳಿಗೆ ದಂಡನೆಯನ್ನು ವಿಧಿಸಿದ ದೇವರಾಗಿರುವ ಕರ್ತನು [“ಯೆಹೋವನು,” NW] ಬಲಿಷ್ಠನಾಗಿದ್ದಾನೆ.” ಹೀಗೆ ಮಹಾ ಬಾಬೆಲಿನ ಅಂತ್ಯವು ಬರಸಿಡಿಲು ಬಡಿದಂತೆ ಆಕಸ್ಮಿಕವಾಗಿ ಸಂಭವಿಸುವುದು ಮತ್ತು “ಒಂದೇ ದಿನ”ದಲ್ಲೊ ಎಂಬಂತೆ ಫಕ್ಕನೆ ದಾಟಿಹೋಗುವುದು.—ಪ್ರಕಟನೆ 18:8; ಯೆಶಾಯ 47:8, 9, 11.
ದೇವದೂತನ ಪ್ರಭಾವಯುಕ್ತ ಮಾತುಗಳು ಈ ಪ್ರಶ್ನೆಗೆ ನಡಿಸುತ್ತವೆ, ಯಾವುದಾದರೂ ಧರ್ಮವು ಉಳಿಯಲಿದೆಯೆ, ಹಾಗಿದ್ದರೆ, ಯಾವುದು ಉಳಿಯಲಿದೆ ಮತ್ತು ಯಾಕೆ? ಪ್ರವಾದನೆಯು ಏನನ್ನು ತೋರಿಸುತ್ತದೆ? ಇದನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.
[ಪಾದಟಿಪ್ಪಣಿ]
a ಈ ಪ್ರವಾದನೆಗಳ ಸವಿಸ್ತಾರ ಪರಿಗಣನೆಗಾಗಿ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ, ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಪುಸ್ತಕದ, 33ನೆಯ ಅಧ್ಯಾಯವನ್ನು ನೋಡಿರಿ.
[ಪುಟ 7 ರಲ್ಲಿರುವ ಚೌಕ]
ಆಫ್ರಿಕದಲ್ಲಿ ಕ್ರೈಸ್ತಸ್ತಪ್ರಪಂಚದ ರಕ್ತಾಪರಾಧದೋಷ
ಮಹಾ ಬಾಬೆಲಿನಲ್ಲಿ “ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವು” ಸಿಕ್ಕಿತು ಎಂದು ಬೈಬಲು ಪ್ರಕಟನೆ 18:24ರಲ್ಲಿ ಹೇಳುತ್ತದೆ. ಧಾರ್ಮಿಕ ಭಿನ್ನತೆಗಳ ಕಾರಣದಿಂದಾಗಿ ಮತ್ತು ಅವನ್ನು ತಡೆಗಟ್ಟಲು ಧಾರ್ಮಿಕ ಮುಖಂಡರ ಸೋಲಿನ ಕಾರಣದಿಂದಾಗಿ ಹೋರಾಡಲ್ಪಟ್ಟಿರುವ ಯುದ್ಧಗಳ ಕುರಿತಾಗಿ ಯೋಚಿಸಿರಿ. ಇದರ ಇತ್ತೀಚಿನ ಉದಾಹರಣೆಯು ರ್ವಾಂಡದ ಸಾಮೂಹಿಕ ಕಗ್ಗೊಲೆಯಲ್ಲಿ ಪ್ರತ್ಯಕ್ಷವಾಗಿದೆ. ಅದರಲ್ಲಿ ಸುಮಾರು 5,00,000 ಜನರು ಕೊಲ್ಲಲ್ಪಟ್ಟರು—ಅವರಲ್ಲಿ ತೃತೀಯಾಂಶ ಮಕ್ಕಳು.
ಕೆನೇಡಿಯನ್ ಕರ್ತೃವಾದ ಹ್ಯೂ ಮೆಕಲಮ್ ರ್ವಾಂಡದಿಂದ ವರದಿಸುವುದು: “ನೈತಿಕ ನಾಯಕತ್ವವನ್ನು ಕೊಡಲು ಚರ್ಚಿನ ತಪ್ಪುವಿಕೆಯನ್ನು ವಿವರಿಸುವುದು ಅಸಾಧ್ಯ ಎಂದು ಕಿಗಾಲಿ [ರ್ವಾಂಡ]ಯಲ್ಲಿನ ಒಬ್ಬ ಹೂಟೂ ಪಾದ್ರಿಯು ಹೇಳುತ್ತಾನೆ. ರ್ವಾಂಡದ ಜನರ ಸಮಾಜದಲ್ಲಿ ಬಿಷಪರ ಸ್ಥಾನವು ಅತ್ಯಂತ ಪ್ರಮುಖವಾಗಿರಬೇಕಿತ್ತು. ಕೊಲ್ಲುವಿಕೆಗಳು ಆರಂಭವಾಗುವ ಬಹಳ ಮುಂಚೆಯೆ, ಸಂಭವಿಸಲಿರುವ ವಿಪತ್ತಿನ ಕುರಿತು ಅವರಿಗೆ ತಿಳಿದಿತ್ತು. ಸಾಮೂಹಿಕ ಸಂಹಾರವನ್ನು ತಡೆಗಟ್ಟಬಹುದಾಗಿದ್ದ ಬಲವತ್ತಾದ ಸಂದೇಶವನ್ನು ಕೇಳುವ ಒಂದು ಅವಕಾಶವನ್ನು ಬಹುಮಟ್ಟಿಗೆ ಇಡೀ ದೇಶವಾಸಿಗಳಿಗೆ ಚರ್ಚ್ ಪೀಠಗಳು ಕೊಡಸಾಧ್ಯವಿತ್ತು. ಬದಲಿಗೆ ಮುಖಂಡರು ಮೌನವಾಗಿ ಉಳಿದರು.”
1944ರ ತೀರ ಕೆಟ್ಟ ಕಗ್ಗೊಲೆಯ ಬಳಿಕ, ಒಂದು ಚರ್ಚಿನ ಹಿರಿಯನಾದ ಜ್ಯೂಸ್ಟಾನ್ ಹಾಕಿಸಿಮಾನ, ಕಿಗಾಲಿಯ ಒಂದು ಪ್ರೆಸ್ಬಿಟೇರಿಯನ್ ಚರ್ಚಿನಲ್ಲಿ ನಡೆದ ಒಂದು ಚಿಕ್ಕ ಕೂಟದಲ್ಲಿ ಅಂದದ್ದು: “ಚರ್ಚು, ಹಾಬ್ಯಾರಿಮಾನ [ರ್ವಾಂಡದ ರಾಷ್ಟ್ರಾಧ್ಯಕ್ಷ]ರ ರಾಜಕಾರಣದೊಂದಿಗೆ ನಿಕಟವಾಗಿ ಜತೆಗೂಡಿತ್ತು. ನಡೆಯುತ್ತಿದ್ದ ವಿಷಯಗಳನ್ನು ನಾವು ಖಂಡಿಸಲಿಲ್ಲ ಯಾಕಂದರೆ ನಾವು ಭ್ರಷ್ಟರಾಗಿದ್ದೆವು. ನಮ್ಮ ಚರ್ಚುಗಳಲ್ಲಿ ಯಾವುವೂ, ವಿಶೇಷವಾಗಿ ಕ್ಯಾತೊಲಿಕರು, ಕಗ್ಗೊಲೆಗಳನ್ನು ಖಂಡಿಸಿಲ್ಲ.”
ಆರಾನ್ ಮೂಗೆಮೆರ ಎಂಬ ಒಬ್ಬ ಚರ್ಚ್ ಪಾಸ್ಟರನು, ಕಗ್ಗೊಲೆಯ ಅನಂತರ ರ್ವಾಂಡದಲ್ಲಿನ ಇನ್ನೊಂದು ಕೂಟದಲ್ಲಿ ಅಂದದ್ದು: “ಚರ್ಚು ನಾಚಿಕೆಗೀಡಾಗಿದೆ. . . . 1959ರಂದಿನಿಂದ ಇಲ್ಲಿ ಹತ್ಯೆಗಳು ನಡೆಯುತ್ತಾ ಇದ್ದವು. ಯಾರೂ ಅವನ್ನು ಖಂಡಿಸಲಿಲ್ಲ. . . . ನಾವು ಹೆದರಿದ್ದುದರಿಂದ ಮತ್ತು ಹಾಯಾಗಿದ್ದುದರಿಂದ, ನಾವು ಬಾಯಿಬಿಟ್ಟು ಮಾತಾಡಲಿಲ್ಲ.”
[ಪುಟ 8 ರಲ್ಲಿರುವ ಚಿತ್ರ]
ಈ “ವೇಶ್ಯೆ” ಇಡೀ ಲೋಕವನ್ನು ಪ್ರಭಾವಿಸುತ್ತಾಳೆ
[ಕೃಪೆ]
Globe: Mountain High Maps® Copyright © 1995 Digital Wisdom, Inc.