ಬೈಬಲಿನ ದೃಷ್ಟಿಕೋನ
ನಿಮ್ಮ ಕೋಪವನ್ನು ಏಕೆ ಹತೋಟಿಯಲ್ಲಿ ಇಡಬೇಕು?
ಅದೊಂದು ಅಶುಭದ ಆರಂಭವಾಗಿತ್ತು. “ಈಗ ನಾನು ಈ ಮನೆಯ ಶಿರಸ್ಸಾಗಿರುವುದರಿಂದ, ನೀನು ತಡಮಾಡಿ ಬರುವ ಮೂಲಕ ನನಗೆ ಕಿರಿಕಿರಿ ಮಾಡಸಾಧ್ಯವಿಲ್ಲ,” ಎಂದು ಜಾನ್ ತನ್ನ ನವ ವಧು, ಜಿಂಜರ್ಳ ಕಡೆಗೆ ಕೂಗಾಡಿದನು.a ಸೋಫಾದ ಮೇಲೆ ಕುಳಿತುಕೊಂಡೇ ಇರುವಂತೆ ಅವಳನ್ನು ಹಕ್ಕೊತ್ತಾಯ ಮಾಡುತ್ತಾ, ಅವನು 45 ನಿಮಿಷಗಳಿಗಿಂತಲೂ ಹೆಚ್ಚು ಹೊತ್ತು ಅವಳಿಗೆ ಅಬ್ಬರಿಸಿದನು. ಅವರ ಮದುವೆ ಜೀವಿತದಲ್ಲಿ, ನಿಂದಾತ್ಮಕ ಮಾತುಗಳು ರೂಢಿಯಾದವು. ದುಃಖಕರವಾಗಿ, ಜಾನ್ನ ಕೋಪದ ವರ್ತನೆಯು ಹೆಚ್ಚಾಯಿತು. ಅವನು, ಬಾಗಿಲುಗಳನ್ನು ರಭಸದಿಂದ ಮುಚ್ಚುತ್ತಿದ್ದನು, ಅಡಿಗೆ ಮನೆಯ ಮೇಜನ್ನು ಅನೇಕಾವರ್ತಿ ಬಡಿಯುತ್ತಿದ್ದನು, ಮತ್ತು ಚಾಲಕ ಚಕ್ರದ ಮೇಲೆ ಬಡಿಯುತ್ತಾ, ಗೊತ್ತುಗುರಿಯಿಲ್ಲದೆ ವಾಹನ ಚಲಾಯಿಸುತ್ತಿದ್ದನು. ಹೀಗೆ, ಇತರರ ಜೀವಗಳನ್ನು ಅಪಾಯಕ್ಕೆ ಸಿಕ್ಕಿಸುತ್ತಿದ್ದನು.
ಅಸಂತೋಷಕರವಾಗಿ, ನಿಮಗೆ ಚೆನ್ನಾಗಿ ತಿಳಿದಿರುವಂತೆ, ಇಂತಹ ದೃಶ್ಯಗಳು ಅನೇಕ ವೇಳೆ ಪುನರಾವರ್ತಿಸಲ್ಪಡುತ್ತವೆ. ಈ ಮನುಷ್ಯನ ಕೋಪವು ನ್ಯಾಯಸಮ್ಮತವಾಗಿತ್ತೋ, ಅಥವಾ ಅವನು ತನ್ನ ಹತೋಟಿಯನ್ನು ಕಳೆದುಕೊಳ್ಳುತ್ತಿದ್ದನೋ? ಪ್ರತಿಯೊಂದು ರೀತಿಯ ಕೋಪವು ತಪ್ಪಾಗಿದೆಯೋ? ಕೋಪವು ಯಾವಾಗ ಹತೋಟಿ ತಪ್ಪಿದ್ದಾಗಿ ಪರಿಗಣಿಸಲ್ಪಡುತ್ತದೆ? ಯಾವಾಗ ಅದು ತೀರ ಹೆಚ್ಚಾಗಿರುತ್ತದೆ?
ಹತೋಟಿಯಲ್ಲಿಡಲ್ಪಟ್ಟಿರುವ ಕೋಪವು ನ್ಯಾಯಸಮ್ಮತವಾಗಿರಬಹುದು. ಉದಾಹರಣೆಗಾಗಿ, ದೇವರ ಕೋಪವು, ಪುರಾತನ ಅನೈತಿಕ ಪಟ್ಟಣಗಳಾದ ಸೊದೋಮ್ ಗೊಮೋರಗಳ ವಿರುದ್ಧ ಉರಿಯಿತು. (ಆದಿಕಾಂಡ 19:24) ಏಕೆ? ಏಕೆಂದರೆ, ಆ ಪಟ್ಟಣಗಳ ನಿವಾಸಿಗಳು—ಆ ಪ್ರದೇಶದಲ್ಲೆಲ್ಲಾ ಬಹಳ ಪ್ರಸಿದ್ಧವಾಗಿದ್ದಂತೆ—ಹಿಂಸಾತ್ಮಕ ಹಾಗೂ ನೀತಿಗೆಟ್ಟ ಲೈಂಗಿಕ ಅಭ್ಯಾಸಗಳಲ್ಲಿ ತೊಡಗಿದರು. ಉದಾಹರಣೆಗಾಗಿ, ನೀತಿವಂತ ಮನುಷ್ಯನಾದ ಲೋಟನನ್ನು ದೇವದೂತ ಸಂದೇಶವಾಹಕರು ಭೇಟಿಮಾಡಿದಾಗ, ಮುದುಕರೊಂದಿಗೆ ಯೌವನಸ್ಥರ ಒಂದು ದೊಂಬಿಗುಂಪು, ಲೋಟನ ಅತಿಥಿಗಳನ್ನು ಗುಂಪಾಗಿ ಬಲಾತ್ಕಾರ ಸಂಭೋಗಿಸಲು ಪ್ರಯತ್ನಿಸಿದರು. ಅವರ ಘೋರ ಅನೈತಿಕತೆಯ ವಿರುದ್ಧ ಯೆಹೋವ ದೇವರು ನ್ಯಾಯಸಮ್ಮತವಾಗಿಯೇ ಕೋಪಿಸಿಕೊಂಡನು.—ಆದಿಕಾಂಡ 18:20; 19:4, 5, 9.
ತನ್ನ ತಂದೆಯಂತೆ, ಪರಿಪೂರ್ಣ ಮನುಷ್ಯನಾದ ಯೇಸು ಕ್ರಿಸ್ತನಿಗೆ ಕೋಪಿಸಿಕೊಳ್ಳಲು ಸಂದರ್ಭವಿತ್ತು. ದೇವರ ಆರಿಸಿದ ಜನರಿಗೆ, ಯೆರೂಸಲೇಮಿನಲ್ಲಿನ ದೇವಾಲಯವು ಆರಾಧನೆಯ ಕೇಂದ್ರವಾಗಿರಬೇಕಿತ್ತು. ಅದು, ವ್ಯಕ್ತಿಗಳು ವೈಯಕ್ತಿಕ ಯಜ್ಞಗಳನ್ನೂ ದೇವರಿಗೆ ಕಾಣಿಕೆಗಳನ್ನೂ ಅರ್ಪಿಸಸಾಧ್ಯವಿರುವ ಹಾಗೂ ಆತನ ಮಾರ್ಗಗಳಲ್ಲಿ ಬೋಧಿಸಲ್ಪಡಲೂ ಅವರ ಪಾಪಗಳಿಗೆ ಕ್ಷಮೆಪಡೆದುಕೊಳ್ಳಲೂ ಸಾಧ್ಯವಿರುವ, “ಪ್ರಾರ್ಥನಾಲಯ”ವಾಗಿರಬೇಕಿತ್ತು. ದೇವಾಲಯದಲ್ಲಿ ಅವರು ಯೆಹೋವನೊಂದಿಗೆ ಆಪ್ತ ಸಂಪರ್ಕವನ್ನಿಟ್ಟುಕೊಳ್ಳಸಾಧ್ಯಾವಿತ್ತು. ಅದರ ಬದಲು, ಯೇಸುವಿನ ದಿನದ ಧಾರ್ಮಿಕ ಮುಖಂಡರು ಆ ದೇವಾಲಯವನ್ನು “ಸಂತೆ” ಹಾಗೂ “ಕಳ್ಳರ ಗವಿ”ಯಾಗಿ ಮಾರ್ಪಡಿಸಿದರು. (ಮತ್ತಾಯ 21:12, 13; ಯೋಹಾನ 2:14-17) ಯಜ್ಞಗಳಾಗಿ ಉಪಯೋಗಿಸಲ್ಪಡಲಿಕ್ಕಾಗಿದ್ದ ಪ್ರಾಣಿಗಳ ಮಾರಾಟದಿಂದ ಅವರು ವೈಯಕ್ತಿಕವಾಗಿ ಲಾಭವನ್ನು ಪಡೆದುಕೊಂಡರು. ನಿಜವಾದ ಅರ್ಥದಲ್ಲಿ, ಅವರು ಮಂದೆಯ ಉಣ್ಣೆಯನ್ನು ಕತ್ತರಿಸುತ್ತಿದ್ದರು. ಹೀಗೆ, ಆ ಕಳ್ಳರನ್ನು ತನ್ನ ತಂದೆಯ ಮನೆಯಿಂದ ಹೊರಗಟ್ಟಿದಾಗ, ದೇವರ ಮಗನು ಪರಿಪೂರ್ಣವಾಗಿ ನ್ಯಾಯಸಮ್ಮತನಾಗಿದ್ದನು. ಯೇಸು ಗ್ರಾಹ್ಯವಾಗಿಯೇ ಕೋಪಿಸಿಕೊಂಡಿದ್ದನು!
ಅಪರಿಪೂರ್ಣ ಮಾನವರು ಕೋಪಿಸಿಕೊಂಡಾಗ
ಅಪರಿಪೂರ್ಣ ಮನುಷ್ಯರು ಸಹ ಕೆಲವೊಂದು ಸಮಯಗಳಲ್ಲಿ ಸೂಕ್ತವಾಗಿಯೇ ಕೋಪಿಸಿಕೊಳ್ಳಸಾಧ್ಯವಿದೆ. ಮೋಶೆಗೆ ಏನು ಸಂಭವಿಸಿತೆಂಬುದನ್ನು ಪರಿಗಣಿಸಿರಿ. ಇಸ್ರಾಯೇಲ್ ಜನಾಂಗವು ಆಗ ತಾನೇ ಅದ್ಭುತಕರವಾಗಿ ಐಗುಪ್ತದಿಂದ ಬಿಡುಗಡೆಗೊಳಿಸಲ್ಪಟ್ಟಿತ್ತು. ಹತ್ತು ಬಾಧೆಗಳಿಂದ ಐಗುಪ್ತ್ಯರನ್ನು ಪೀಡಿಸುವ ಮೂಲಕ, ಯೆಹೋವನು ಐಗುಪ್ತದ ಸುಳ್ಳು ದೇವರುಗಳ ವಿರುದ್ಧ ತನ್ನ ಶಕ್ತಿಯನ್ನು ನಾಟಕೀಯವಾಗಿ ಪ್ರದರ್ಶಿಸಿದ್ದನು. ಅನಂತರ ಆತನು, ಕೆಂಪು ಸಮುದ್ರವನ್ನು ವಿಭಾಗಿಸುವ ಮೂಲಕ ಯೆಹೂದ್ಯರಿಗೆ ಪಾರಾಗಲು ದಾರಿಯನ್ನು ತೆರೆದನು. ತರುವಾಯ, ಅವರು ಸೀನಾಯಿ ಬೆಟ್ಟದ ಬುಡಕ್ಕೆ ಕರೆದೊಯ್ಯಲ್ಪಟ್ಟರು. ಅಲ್ಲಿ ಅವರು ಒಂದು ಜನಾಂಗವಾಗಿ ಸಂಘಟಿಸಲ್ಪಟ್ಟರು. ಒಬ್ಬ ಮಧ್ಯಸ್ಥನಾಗಿ ಕ್ರಿಯೆಗೈಯುತ್ತಾ, ಮೋಶೆಯು ದೇವರ ಧರ್ಮಶಾಸ್ತ್ರಗಳನ್ನು ಪಡೆದುಕೊಳ್ಳಲು ಬೆಟ್ಟದ ಮೇಲೆ ಹೋದನು. ಇತರ ಎಲ್ಲ ನಿಯಮಗಳೊಂದಿಗೆ ಯೆಹೋವನು ಮೋಶೆಗೆ, ಬೆಟ್ಟದಿಂದ ತಾನೇ ಕೆತ್ತಿದ ಕಲ್ಲಿನ ಹಲಗೆಗಳ ಮೇಲೆ “ದೇವರ ಕೈಯಿಂದ” (NW) ಬರೆಯಲ್ಪಟ್ಟ ಹತ್ತು ಆಜ್ಞೆಗಳನ್ನೂ ಕೊಟ್ಟನು. ಹಾಗಿದ್ದರೂ, ಮೋಶೆಯು ಬೆಟ್ಟದಿಂದ ಇಳಿದು ಬಂದಾಗ, ಏನನ್ನು ಕಂಡುಕೊಂಡನು? ಜನರು, ಚಿನ್ನದ ಬಸವನ ಮೂರ್ತಿಯನ್ನು ಆರಾಧಿಸುವುದರ ಕಡೆಗೆ ತಿರುಗಿದ್ದರು! ಎಷ್ಟು ಬೇಗನೆ ಅವರು ಮರೆತುಬಿಟ್ಟರು! ಕೇವಲ ಕೆಲವೇ ವಾರಗಳು ದಾಟಿದ್ದವು. ಸೂಕ್ತವಾಗಿಯೇ, “ಮೋಶೆಯ ಕೋಪವು ಉರಿಯಲಾರಂಭಿಸಿತು” (NW). ಅವನು ಕಲ್ಲಿನ ಹಲಗೆಗಳನ್ನು ನುಚ್ಚು ನೂರು ಮಾಡಿದನು ಮತ್ತು ಬಸವನ ಮೂರ್ತಿಯನ್ನು ನಾಶಮಾಡಿದನು.—ವಿಮೋಚನಕಾಂಡ 31:18; 32:16, 19, 20.
ಅನಂತರದ ಸಂದರ್ಭದಲ್ಲಿ, ನೀರಿನ ಕೊರತೆಯ ಕುರಿತು ಜನರು ಗೊಣಗಿದಾಗ ಮೋಶೆಯು ಕೋಪಿಸಿಕೊಂಡನು. ಉದ್ರೇಕಗೊಂಡು, ಅವನು ತನ್ನ ಪ್ರಸಿದ್ಧವಾದ ದೀನತೆಯನ್ನು ಅಥವಾ ಸೌಮ್ಯತೆಯನ್ನು ಕ್ಷಣಿಕವಾಗಿ ಕಳೆದುಕೊಂಡನು. ಇದು ಒಂದು ಗಂಭೀರವಾದ ತಪ್ಪಿಗೆ ನಡಿಸಿತು. ಇಸ್ರಾಯೇಲ್ಯರ ಒದಗಿಸುವವನೋಪಾದಿ ಯೆಹೋವನನ್ನು ಘನಪಡಿಸುವ ಬದಲಿಗೆ, ಮೋಶೆಯು ಜನರಿಗೆ ಕಟುವಾಗಿ ಮಾತಾಡಿದನು ಮತ್ತು ಅವರ ಗಮನವನ್ನು ತನ್ನ ಸಹೋದರನಾದ ಆರೋನನ ಹಾಗೂ ತನ್ನ ಕಡೆಗೆ ಎಳೆದನು. ಆದಕಾರಣ, ಮೋಶೆಯನ್ನು ಶಿಸ್ತುಗೊಳಿಸುವುದು ಯೋಗ್ಯವೆಂದು ದೇವರು ಕಂಡುಕೊಂಡನು. ವಾಗ್ದಾನ ದೇಶವನ್ನು ಪ್ರವೇಶಿಸಲು ಅವನು ಬಿಡಲ್ಪಡಲಿಲ್ಲ. ಮೆರೀಬಾದಲ್ಲಿ ನಡೆದ ಈ ಘಟನೆಯ ಅನಂತರ, ಮೋಶೆಯು ಕೋಪಿಸಿಕೊಂಡದ್ದನ್ನು ಎಲ್ಲಿಯೂ ದಾಖಲಿಸಿಲ್ಲ. ವ್ಯಕ್ತವಾಗಿ, ಅವನು ತನ್ನ ಪಾಠವನ್ನು ಕಲಿತುಕೊಂಡನು.—ಅರಣ್ಯಕಾಂಡ 20:1-12; ಧರ್ಮೋಪದೇಶಕಾಂಡ 34:4; ಕೀರ್ತನೆ 106:32, 33.
ಹೀಗೆ, ದೇವರ ಹಾಗೂ ಮನುಷ್ಯನ ಮಧ್ಯೆ ಒಂದು ವ್ಯತ್ಯಾಸವಿದೆ. ಯೆಹೋವನು ತನ್ನ ಕೋಪವನ್ನು ‘ಹತೋಟಿಯಲ್ಲಿಡ’ಶಕ್ತನು ಮತ್ತು ಸೂಕ್ತವಾಗಿಯೇ, “ಕೋಪಿಸುವುದರಲ್ಲಿ ನಿಧಾನಿ” (NW) ಎಂಬುದಾಗಿ ವರ್ಣಿಸಲ್ಪಟ್ಟಿದ್ದಾನೆ. ಏಕೆಂದರೆ ಅವನ ಪ್ರಧಾನ ಗುಣವು ಕೋಪವಲ್ಲ ಬದಲಾಗಿ ಪ್ರೀತಿಯಾಗಿದೆ. ಆತನ ಕೋಪವು ಯಾವಾಗಲೂ ನೀತಿಯುಳ್ಳದ್ದು, ಯಾವಾಗಲೂ ನ್ಯಾಯಸಮ್ಮತವಾದದ್ದು, ಯಾವಾಗಲೂ ನಿಯಂತ್ರಿಸಲ್ಪಟ್ಟದ್ದು ಆಗಿದೆ. (ವಿಮೋಚನಕಾಂಡ 34:6; ಯೆಶಾಯ 48:9; 1 ಯೋಹಾನ 4:8) ಪರಿಪೂರ್ಣ ಮನುಷ್ಯನಾದ ಯೇಸು ಕ್ರಿಸ್ತನು, ತನ್ನ ಕೋಪದ ಪ್ರದರ್ಶನವನ್ನು ಸದಾ ಹತೋಟಿಯಲ್ಲಿಡಶಕ್ತನಾಗಿದ್ದನು; ಅವನು “ಸಾತ್ವಿಕ”ನೆಂದು ವರ್ಣಿಸಲ್ಪಟ್ಟನು. (ಮತ್ತಾಯ 11:29) ಇನ್ನೊಂದು ಬದಿಯಲ್ಲಿ, ಅಪರಿಪೂರ್ಣ ಮಾನವರು, ಮೋಶೆಯಂತಹ ನಂಬಿಕೆಯ ಪುರುಷರು ಸಹ, ತಮ್ಮ ಕೋಪವನ್ನು ಹತೋಟಿಯಲ್ಲಿಡಲು ಕಷ್ಟಪಟ್ಟರು.
ಮನುಷ್ಯರು, ಫಲಿತಾಂಶಗಳಿಗೆ ಯೋಗ್ಯವಾದ ಲಕ್ಷ್ಯವನ್ನು ಕೊಡಲು ಸಾಮಾನ್ಯವಾಗಿ ತಪ್ಪುತ್ತಾರೆ. ಒಬ್ಬನ ಕೋಪದ ಹತೋಟಿಯನ್ನು ಕಳೆದುಕೊಳ್ಳುವುದಕ್ಕೆ ಬೆಲೆ ತೆರಬೇಕಾದ ಸಾಧ್ಯತೆಗಳಿವೆ. ಉದಾಹರಣೆಗಾಗಿ, ಒಬ್ಬ ಗಂಡನು, ತನ್ನ ಮುಷ್ಠಿಯಿಂದ ಗೋಡೆಗೆ ಗುದ್ದಿ ತೂತು ಮಾಡುವಷ್ಟರ ಮಟ್ಟಿಗೆ, ತನ್ನ ಹೆಂಡತಿಯೊಂದಿಗೆ ಕೋಪಿಸಿಕೊಂಡರೆ ಸ್ಪಷ್ಟವಾದ ಪರಿಣಾಮಗಳೇನು? ಸ್ವತ್ತು ನಷ್ಟವಾಗುತ್ತದೆ. ಅವನ ಕೈಗೆ ಹಾನಿಯಾಗಬಹುದು. ಆದರೆ ಅದಕ್ಕಿಂತಲೂ ಹೆಚ್ಚಾಗಿ, ಅವನ ಕಡೆಗೆ ಅವನ ಹೆಂಡತಿಗಿರುವ ಪ್ರೀತಿ ಮತ್ತು ಗೌರವದ ಮೇಲೆ ಅವನ ಸಿಡುಕು ಯಾವ ಪ್ರಭಾವವನ್ನು ಉಂಟುಮಾಡುವುದು? ಗೋಡೆಯನ್ನು ಕೆಲವು ದಿನಗಳಲ್ಲಿ ದುರಸ್ತಿಪಡಿಸಬಹುದು, ಮತ್ತು ಅವನ ಕೈ ಕೆಲವು ವಾರಗಳಲ್ಲಿ ವಾಸಿಯಾಗಬಹುದು, ಆದರೆ ಅವನ ಹೆಂಡತಿಯ ಭರವಸೆ ಹಾಗೂ ಗೌರವವನ್ನು ತಿರುಗಿ ಸಂಪಾದಿಸಲು ಅವನಿಗೆ ಎಷ್ಟು ಸಮಯ ತಗಲುವುದು?
ವಾಸ್ತವವಾಗಿ, ಬೈಬಲ್, ತಮ್ಮ ಕೋಪವನ್ನು ಹತೋಟಿಯಲ್ಲಿಡಲು ತಪ್ಪಿದ ಹಾಗೂ ಪರಿಣಾಮಗಳನ್ನು ಅನುಭವಿಸಿದ ಪುರುಷರ ಉದಾಹರಣೆಗಳಿಂದ ತುಂಬಿದೆ. ಕೆಲವನ್ನು ಪರಿಗಣಿಸಿರಿ. ಕಾಯಿನನು, ತನ್ನ ತಮ್ಮನಾದ ಹೇಬೆಲನನ್ನು ಸಂಹರಿಸಿದ ಅನಂತರ ಹೊರ ಅಟ್ಟಲ್ಪಟ್ಟನು. ಶೆಕೆಮ್ನ ಪುರುಷರನ್ನು ಕೊಂದದ್ದಕ್ಕಾಗಿ, ಸಿಮೆಯೋನ್ ಹಾಗೂ ಲೇವಿಯರು ತಮ್ಮ ತಂದೆಯಿಂದ ಶಪಿಸಲ್ಪಟ್ಟರು. ಉಜ್ಜೀಯನು, ತನ್ನನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದ ಯಾಜಕರೊಡನೆ ಸಿಟ್ಟುಗೊಂಡ ಅನಂತರ, ಯೆಹೋವನು ಅವನನ್ನು ಕುಷ್ಠದಿಂದ ಹೊಡೆದನು. ಯೋನನು ‘ಕೋಪದಿಂದ ಬಿಸಿಯಾದಾಗ,’ ಯೆಹೋವನು ಅವನನ್ನು ಸರಿಪಡಿಸಿದನು. ಎಲ್ಲರೂ ತಮ್ಮ ಕೋಪಕ್ಕೆ ಉತ್ತರ ಕೊಡಬೇಕಾಗಿತ್ತು.—ಆದಿಕಾಂಡ 4:5, 8-16; 34:25-30; 49:5-7; 2 ಪೂರ್ವಕಾಲವೃತ್ತಾಂತ 26:19; ಯೋನ 4:1-11.
ಕ್ರೈಸ್ತರು ಲೆಕ್ಕಒಪ್ಪಿಸುವವರಾಗಿದ್ದಾರೆ
ಅಂತೆಯೇ, ಇಂದಿನ ಕ್ರೈಸ್ತರು ದೇವರಿಗೆ ಮತ್ತು ಸ್ವಲ್ಪಮಟ್ಟಿಗೆ ಜೊತೆ ವಿಶ್ವಾಸಿಗಳಿಗೂ ತಮ್ಮ ಕೃತ್ಯಗಳಿಗಾಗಿ ಲೆಕ್ಕಒಪ್ಪಿಸಬೇಕು. ಕೋಪವನ್ನು ಸೂಚಿಸುವ ಗ್ರೀಕ್ ಪದಗಳ ಬೈಬಲಿನ ಉಪಯೋಗದಿಂದ ಇದು ಕೂಡಲೆ ಕಂಡುಬರಸಾಧ್ಯವಿದೆ. ಪದೇ ಪದೇ ಉಪಯೋಗಿಸಲಾದ ಎರಡು ಪದಗಳಲ್ಲಿ ಒಂದು ಆರ್-ಗೆ ಆಗಿದೆ. ಅದು ಸಾಮಾನ್ಯವಾಗಿ “ಕ್ರೋಧ” ಎಂಬುದಾಗಿ ಭಾಷಾಂತರಿಸಲ್ಪಡುತ್ತದೆ, ಮತ್ತು ಆಗಿಂದಾಗ್ಗೆ ಸೇಡು ತೀರಿಸುವ ನೋಟದಿಂದ, ಅದರಲ್ಲಿ ನಿರ್ದಿಷ್ಟ ಮಟ್ಟಿಗಿನ ಅರಿವು ಹಾಗೂ ಆಲೋಚನೆಯೂ ಸೇರಿರುತ್ತದೆ. ಆದುದರಿಂದ, ಪೌಲನು ರೋಮಾಪುರದ ಕ್ರೈಸ್ತರಿಗೆ ಪ್ರೇರೇಪಿಸಿದ್ದು: “ಪ್ರಿಯರೇ, ನೀವೇ ಮುಯ್ಯಿ ತೀರಿಸದೆ, ಕೋಪ [ಆರ್-ಗೆ]ಕ್ಕೆ ಸ್ಥಳವನ್ನು ಬಿಟ್ಟುಕೊಡಿರಿ. ಏಕೆಂದರೆ ‘ಮುಯ್ಯಿ ನನ್ನದು; ನಾನೇ ಮುಯ್ಯಿ ತೀರಿಸುವೆನು, ಎಂದು ಯೆಹೋವನು ಹೇಳುತ್ತಾನೆ,’ ಎಂಬದಾಗಿ ಬರೆದದೆ.” ತಮ್ಮ ಸಹೋದರರ ಕಡೆಗೆ ಕೆಟ್ಟ ಇಚ್ಛೆಗೆ ಇಂಬುಕೊಡುವುದರ ಬದಲು, ಅವರು “ಒಳ್ಳೇತನದಿಂದ ಕೆಟ್ಟತನವನ್ನು ಸೋಲಿ”ಸುವಂತೆ ಉತ್ತೇಜಿಸಲ್ಪಟ್ಟರು.—ರೋಮಾಪುರ 12:19, 21, NW.
ಪದೇ ಪದೇ ಉಪಯೋಗಿಸಲ್ಪಟ್ಟ ಇನ್ನೊಂದು ಪದವು ತೈಮೊಸ್ ಆಗಿದೆ. ಮೂಲ ಪದವು, “ಮೂಲಭೂತವಾಗಿ ಗಾಳಿ, ನೀರು, ಭೂಮಿ, ಪ್ರಾಣಿಗಳು, ಅಥವಾ ಮನುಷ್ಯರ ಹಿಂಸಾತ್ಮಕ ಚಲನೆಯನ್ನು ಸೂಚಿಸುತ್ತದೆ.” ಆದುದರಿಂದ, ಈ ಪದವನ್ನು, ಒಂದು “ವಿರೋಧ ಭಾವನೆಯ ಭಾವೋದ್ರಿಕ್ತ ಸ್ಫೋಟನೆ,” “ಕೋಪದ ಸ್ಫೋಟನೆಗಳು,” ಅಥವಾ “ಮನಸ್ಸಿನ ಏಕತೆಯನ್ನು ಹಾಳುಮಾಡುವ ಮತ್ತು ಮನೆಯ ಹಾಗೂ ಸಾರ್ವಜನಿಕ ಜಗಳಗಳನ್ನೂ ಅಶಾಂತಿಗಳನ್ನೂ ಉಂಟುಮಾಡುವ ಅಲ್ಲೋಲಕಲ್ಲೋಲವಾದ ಭಾವೋದ್ರೇಕಗಳು,” ಎಂಬುದಾಗಿ ವಿವಿಧ ರೀತಿಯಲ್ಲಿ ವಿವರಿಸಲಾಗಿದೆ. ಅವನ ಅಥವಾ ಅವಳ ಕೋಪವನ್ನು ಹತೋಟಿಯಲ್ಲಿಡಲಾರದ ಪುರುಷ ಅಥವಾ ಸ್ತ್ರೀಯು, ಎಚ್ಚರಿಕೆಕೊಡದೆ ಹೊರಚಿಮ್ಮಬಹುದಾದ ಮತ್ತು ಹಾನಿ, ಅಂಗಹೀನತೆ, ಹಾಗೂ ಕೊಲ್ಲಬಹುದಾದ, ಬಿಸಿ ಬೂದಿಯನ್ನೂ ಬಂಡೆಯನ್ನೂ ಲಾವವನ್ನೂ ಕಾರುವ ಜ್ವಾಲಾಮುಖಿಯಂತಿದ್ದಾರೆ. ಗಲಾತ್ಯ 5:20ರಲ್ಲಿ ತೈಮೊಸ್ನ ಬಹುವಚನವು ಉಪಯೋಗಿಸಲ್ಪಟ್ಟಿದೆ. ಅಲ್ಲಿ ಪೌಲನು “ಸಿಟ್ಟ”ನ್ನು, ಜಾರತ್ವ, ಸಡಿಲು ನಡತೆ, ಮತ್ತು ಕುಡಿಕತನ ಮುಂತಾದ ಇತರ “ಶರೀರಭಾವದ ಕರ್ಮ”ಗಳೊಂದಿಗೆ (19ನೇ ವಚನ) ಪಟ್ಟಿಮಾಡುತ್ತಾನೆ. ನಿಜವಾಗಿಯೂ, ಆರಂಭದಲ್ಲಿ ವಿವರಿಸಲ್ಪಟ್ಟ ಜಾನ್ನ ವರ್ತನೆಯು, “ಸಿಟ್ಟನ್ನು” ಚೆನ್ನಾಗಿ ದೃಷ್ಟಾಂತಿಸುತ್ತದೆ.
ಆದುದರಿಂದ, ಕ್ರೈಸ್ತ ಸಭೆಯೊಂದಿಗೆ ಸಹವಾಸಿಸುವ ವ್ಯಕ್ತಿಗಳು ಇನ್ನೊಬ್ಬನ ದೇಹ ಅಥವಾ ಸ್ವತ್ತಿಗೆ ಪದೇ ಪದೇ ಹಾನಿಮಾಡುವ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗವಹಿಸುವಲ್ಲಿ, ಅದು ಅವರನ್ನು ಹೇಗೆ ವೀಕ್ಷಿಸಬೇಕು? ಹತೋಟಿಯಲ್ಲಿಡದ ಕೋಪವು ನಾಶಕಾರಿಯಾಗಿದೆ ಮತ್ತು ಸುಲಭವಾಗಿ ಹಿಂಸಾಚಾರಕ್ಕೆ ನಡಿಸುತ್ತದೆ. ಆದುದರಿಂದ, ಸಕಾರಣದಿಂದ ಯೇಸು ಹೇಳಿದ್ದು: “ನಾನು ನಿಮಗೆ ಹೇಳುವದೇನಂದರೆ—ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ ಪ್ರತಿ ಮನುಷ್ಯನು ನ್ಯಾಯವಿಚಾರಣೆಗೆ ಗುರಿಯಾಗುವನು.” (ಮತ್ತಾಯ 5:21, 22) ಗಂಡಂದಿರಿಗೆ ಹೀಗೆ ಸಲಹೆ ಕೊಡಲ್ಪಟ್ಟಿದೆ: “ಪುರುಷರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಅವರಿಗೆ ನಿಷ್ಠುರವಾಗಿರಬೇಡಿರಿ [“ಕಟುವಾಗಿ ಕೋಪಿಸಬೇಡಿರಿ,” NW].” “ಮುಂಗೋಪಿ”ಯು ಸಭೆಯಲ್ಲಿ ಒಬ್ಬ ಮೇಲ್ವಿಚಾರಕನಾಗಲು ಅರ್ಹನಾಗುವುದಿಲ್ಲ. ಈ ಕಾರಣದಿಂದ, ತಮ್ಮ ಕೋಪವನ್ನು ಹತೋಟಿಯಲ್ಲಿ ಇಡಲಾರದ ವ್ಯಕ್ತಿಗಳನ್ನು ಸಭೆಗೆ ಒಂದು ಮಾದರಿಯಾಗಿ ಪರಿಗಣಿಸಬಾರದು. (ಕೊಲೊಸ್ಸೆ 3:19; ತೀತ 1:7; 1 ತಿಮೋಥೆಯ 2:8) ವಾಸ್ತವವಾಗಿ, ವ್ಯಕ್ತಿಯೊಬ್ಬನ ಮನೋಭಾವವನ್ನೂ ವರ್ತನೆಯ ರೀತಿಯನ್ನೂ ಇತರರ ಜೀವಗಳಿಗೆ ಆದ ನಷ್ಟದ ಉಗ್ರತೆಯನ್ನೂ ಪರಿಗಣಿಸಿದ ಅನಂತರ, ಹತೋಟಿಯಲ್ಲಿಡದ ಕೋಪಕ್ಕೆ ಬಿಟ್ಟುಕೊಡುವ ಅಂತಹವನನ್ನು ಸಭೆಯಿಂದ ತೆಗೆದುಹಾಕಸಾಧ್ಯವಿದೆ—ನಿಶ್ಚಯವಾಗಿಯೂ, ಒಂದು ಭಯಂಕರವಾದ ಫಲಿತಾಂಶ.
ಆರಂಭದಲ್ಲಿ ತಿಳಿಸಲಾದ ಜಾನ್, ತನ್ನ ಉದ್ರೇಕವನ್ನು ಎಂದಾದರೂ ಹತೋಟಿಗೆ ತಂದನೋ? ಅವನ ತ್ವರೆಯಾದ, ಕೇಡಿಗೆ ನಡೆಸುವ ಅವನತಿಯ ಧುಮುಕನ್ನು ಅವನು ಎಂದಾದರೂ ಹತೋಟಿಗೆ ತರಲು ಶಕ್ತನಾದನೋ? ದುಃಖಕರವಾಗಿ, ಕಿರುಚಾಟವು ಹೆಚ್ಚಾಗುತ್ತಾ, ದೂಡುವುದೂ ಒರಟೊರಟಾಗಿ ತಳ್ಳುವುದೂ ಆರಂಭವಾಯಿತು. ಟೀಕೆಯು ಮುಂದುವರಿಯುತ್ತಾ ಅಕ್ಷರಶಃ ನೋವಿನ, ಬೆರಳಿನಿಂದ ಜಜ್ಜುವ ತಿವಿತಕ್ಕೆ ನಡಿಸಿತು. ಜಾನ್, ಸುಲಭವಾಗಿ ಕಾಣುವ ದೇಹಭಾಗಗಳಿಗೆ ಜಜ್ಜುವುದನ್ನು ತಡೆಯಲು ಜಾಗರೂಕನಾಗಿದ್ದನು ಮತ್ತು ತನ್ನ ನಡತೆಯನ್ನು ಮುಚ್ಚಿಡಲು ಪ್ರಯತ್ನಿಸಿದನು. ಕ್ರಮೇಣ ಅವನು ಒದೆಯಲು, ಗುದ್ದಲು, ಕೂದಲನ್ನು ಎಳೆಯಲು ಮತ್ತು ಇದಕ್ಕಿಂತಲೂ ಕೀಳಾಗಿ ವರ್ತಿಸಲು ಆರಂಭಿಸಿದನು. ಜಿಂಜರ್ ಈಗ ಜಾನ್ನಿಂದ ಪ್ರತ್ಯೇಕಳಾಗಿದ್ದಾಳೆ.
ಇದು ಸಂಭವಿಸಬೇಕಾದ ಅಗತ್ಯವಿರಲಿಲ್ಲ. ಇಂತಹದ್ದೇ ಸನ್ನಿವೇಶದಲ್ಲಿದ್ದ ಅನೇಕರು ತಮ್ಮ ಕೋಪವನ್ನು ಹತೋಟಿಗೆ ತರಲು ಶಕ್ತರಾಗಿದ್ದಾರೆ. ಆದುದರಿಂದ, ಯೇಸು ಕ್ರಿಸ್ತನ ಪರಿಪೂರ್ಣ ಮಾದರಿಯನ್ನು ಅನುಸರಿಸುವುದು ಎಷ್ಟು ಪ್ರಾಮುಖ್ಯವಾಗಿದೆ. ಅವನು ಹತೋಟಿಯಲ್ಲಿಡದ ಒಂದು ಕೆರಳುವಿಕೆಗೆ ಸಹ ದೋಷಿಯಾಗಿರಲಿಲ್ಲ. ಅವನ ಕೋಪವು ಯಾವಾಗಲೂ ನೀತಿಯದ್ದಾಗಿತ್ತು; ಅವನು ಹತೋಟಿಯನ್ನು ಎಂದಿಗೂ ಕಳೆದುಕೊಳ್ಳಲಿಲ್ಲ. ವಿವೇಕಯುತವಾಗಿ, ಪೌಲನು ನಮ್ಮೆಲ್ಲರಿಗೂ ಸಲಹೆ ಕೊಟ್ಟದ್ದು: “ಕೋಪಮಾಡಬೇಕಾದರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ.” (ಎಫೆಸ 4:26) ಮಾನವರೋಪಾದಿ ನಮಗೆ ಸೀಮಿತಗಳಿವೆ ಮತ್ತು ನಾವು ಏನನ್ನು ಬಿತ್ತುತ್ತೇವೋ ಅದನ್ನೇ ಕೊಯ್ಯುವೆವು ಎಂಬುದನ್ನು ನಮ್ರವಾಗಿ ಗ್ರಹಿಸುತ್ತಾ, ನಮ್ಮ ಕೋಪಕ್ಕೆ ತಡೆಯನ್ನು ಹಾಕಲು ನಮಗೆ ಸಕಾರಣವಿದೆ.
[ಅಧ್ಯಯನ ಪ್ರಶ್ನೆಗಳು]
a ಹೆಸರುಗಳು ಬದಲಾಯಿಸಲ್ಪಟ್ಟಿವೆ.
[ಪುಟ 39 ರಲ್ಲಿರುವ ಚಿತ್ರ ಕೃಪೆ]
ದಾವೀದನ ಜೀವವನ್ನು ತೆಗೆಯಲು ಸೌಲನು ಪ್ರಯತ್ನಿಸುತ್ತಾನೆ/The Dore Bible Illustrations/Dover Publications, Inc.