ಬೈಬಲಿನ ದೃಷ್ಟಿಕೋನ
ದೆವ್ವಗಳು ನಿಜವಾಗಿಯೂ ಇವೆಯೊ?
ಹದಿನೇಳು ಮತ್ತು ಹದಿನೆಂಟನೆಯ ಶತಮಾನಗಳಲ್ಲಿ, ಯೂರೋಪಿನ ಅಧಿಕಾಂಶ ಭಾಗಗಳಲ್ಲಿ, ಮಾಟಗಾರರ ವಿರುದ್ಧವಾದ ಹಿಂಸೆಯ ಉದ್ರೇಕಿತ ಕಾರ್ಯಾಚರಣೆಯ ಗಾಳಿಯು ಬೀಸಿತು. ಮಾಟಗಾರರೆಂದು ಆಪಾದಿಸಲ್ಪಟ್ಟ ಅನೇಕರು, ಭೀಕರವಾಗಿ ಚಿತ್ರಹಿಂಸೆಯನ್ನು ಅನುಭವಿಸಿದರು. ಯಾರ ಮೇಲೆ ಸುಳ್ಳಾರೋಪ ಹೊರಿಸಲಾಯಿತೋ ಅಂತಹ ಕೆಲವರು, ಚಿತ್ರಹಿಂಸೆಯಿಂದ ಪಾರಾಗುವ ಕಾರಣಕ್ಕಾಗಿಯೇ, ತಾವು ಮಾಟಮಂತ್ರವನ್ನು ನಡಿಸುತ್ತಿದ್ದೇವೆಂದು ಒಪ್ಪಿಕೊಂಡರು. ಇತರ ಅಸಂಖ್ಯಾತ ಜನರು, ವದಂತಿಗಳು ಅಥವಾ ಸಂಶಯದ ಆಧಾರದ ಮೇಲೆ ವಧಿಸಲ್ಪಟ್ಟರು.
ದೆವ್ವಾರಾಧನೆಯ ಒಂದು ರೂಪವಾಗಿದ್ದ ಮಾಟಮಂತ್ರದ ವಿರುದ್ಧವಾದ ಆ ಕಾಲದ ಕೃತ್ಯಗಳು, ತೋರಿಕೆಗೆ ಶಾಸ್ತ್ರವಚನಗಳ ಮೇಲಾಧಾರಿತವಾಗಿದ್ದವಾದರೂ, ನಿಶ್ಚಯವಾಗಿಯೂ ಅವು ಮತಭ್ರಾಂತ ಕೃತ್ಯಗಳಾಗಿದ್ದವು. ಮಾಟಗಾರರಿಗೆ ಅಥವಾ ಪ್ರೇತಾರಾಧನೆಯನ್ನು ಆಚರಿಸುವ ಇತರರಿಗೆ ಚಿತ್ರಹಿಂಸೆಕೊಡುವ ಅಥವಾ ವಧಿಸುವ ಹಂಗು ಕ್ರೈಸ್ತರಿಗೆ ಕೊಡಲ್ಪಟ್ಟಿಲ್ಲ. (ರೋಮಾಪುರ 12:19) ಇಂದು ಯಾವ ಮನೋಭಾವವು ಚಾಲ್ತಿಯಲ್ಲಿದೆ?
ಒಂದು ಸಡಿಲು ಮನೋಭಾವ
ಇಂದು ಕ್ರೈಸ್ತಪ್ರಪಂಚದಲ್ಲಿರುವ ಅಧಿಕಾಂಶ ಜನರು, ಅಂತಹ ಪ್ರೇತಾರಾಧನೆ ಸಂಬಂಧಿತ ಪದ್ಧತಿಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಕುತೂಹಲದಿಂದ, ಕೆಲವರು ಜ್ಯೋತಿಶ್ಶಾಸ್ತ್ರ, ಮ್ಯಾಜಿಕ್, ಕಣಿಹೇಳುವಿಕೆ, ಮತ್ತು ಮಾಟಮಂತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದಾದರೂ, ಈ ಮಾಂತ್ರಿಕ ಪದ್ಧತಿಗಳನ್ನು ಪ್ರೇತಾರಾಧನೆಯಾಗಿ ಅವರು ವೀಕ್ಷಿಸುವುದಿಲ್ಲ. ಕೆಲವೊಮ್ಮೆ, ವಿನೋದ ಪ್ರದರ್ಶಕರು, ಆಟಗಾರರು, ಮತ್ತು ರಾಜಕಾರಣಿಗಳು, ಮಾಂತ್ರಿಕತೆಯೊಂದಿಗಿನ ತಮ್ಮ ಒಳಗೂಡುವಿಕೆಯನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ. ಕೆಲವು ಪುಸ್ತಕಗಳು ಮತ್ತು ಚಲನ ಚಿತ್ರಗಳು, ಮಾಟಗಾರರನ್ನು ಹಾಗೂ ಮಂತ್ರವಾದಿಗಳನ್ನು, “ಯಾರೊಬ್ಬರಿಗೂ ಹಾನಿಯನ್ನು ಮಾಡದಿರುವಂತಹ, ಪ್ರಕೃತ್ಯತೀತ ಕಾರ್ಯಗಳನ್ನು ನಡಿಸುವ, ಸ್ವಲ್ಪಮಟ್ಟಿಗೆ ಅಸಾಮಾನ್ಯರಾದ ವ್ಯಕ್ತಿಗಳೋಪಾದಿ ಆಕರ್ಷಕವಾಗಿ” ಚಿತ್ರಿಸುತ್ತವೆ ಎಂದು ವಿಶ್ವಕೋಶವೊಂದು ಹೇಳುತ್ತದೆ. ಮಕ್ಕಳಿಗೆ ಮನೋರಂಜನೆ ನೀಡಿ, ಅವರಿಗೆ ಶಿಕ್ಷಣಕೊಡಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿರುವ ವಸ್ತುವಿಷಯವು, ಮಾಂತ್ರಿಕ ಮುಖ್ಯವಿಷಯಗಳನ್ನು ಪ್ರವರ್ಧಿಸಬಹುದು.
ದೆವ್ವಾರಾಧನೆಯ ಕಡೆಗಿನ ಅಂತಹ ಸಡಿಲು ಹಾಗೂ ಅನಿಶ್ಚಿತ ಮನೋಭಾವವು, ದೆವ್ವಗಳ ಅಸ್ತಿತ್ವದಲ್ಲಿನ ಅಪನಂಬಿಕೆಗೆ ನಡೆಸಬಲ್ಲದು. ದೆವ್ವಗಳು ಅಸ್ತಿತ್ವದಲ್ಲಿವೆಯೆಂದು ಮತ್ತು ನಮಗೆ ಹಾನಿಯನ್ನು ಉಂಟುಮಾಡಲಿಕ್ಕಾಗಿ ಅವು ಕ್ರಿಯಾಶೀಲವಾಗಿ ಪ್ರಯತ್ನಿಸುತ್ತಿವೆ ಎಂದು ನೀವು ನಂಬುತ್ತೀರೊ? ಎಷ್ಟೆಂದರೂ, ತಾವು ದೆವ್ವಗಳೊಂದಿಗೆ ಎಂದೂ ಯಾವುದೇ ಸಂಪರ್ಕವನ್ನು ಅನುಭವಿಸಿಲ್ಲ ಅಥವಾ ಅವುಗಳ ಚಟುವಟಿಕೆಯನ್ನು ಪ್ರತ್ಯಕ್ಷವಾಗಿ ನೋಡಿಲ್ಲ ಎಂದು ಇಂದಿನ ಅಧಿಕಾಂಶ ಜನರು ಹೇಳಸಾಧ್ಯವಿದೆ. ದೆವ್ವಗಳು ನಿಜವಾಗಿಯೂ ಇವೆಯೊ?
ಅಪನಂಬಿಕೆಯು ಉಭಯ ಸಂಕಟವನ್ನು ಉಂಟುಮಾಡುತ್ತದೆ
ಬೈಬಲನ್ನು ಅಂಗೀಕರಿಸುತ್ತೇವೆಂದು ಪ್ರತಿಪಾದಿಸುತ್ತಾರಾದರೂ, ದೆವ್ವಗಳು ನಿಜವಾಗಿಯೂ ಇವೆಯೆಂಬುದನ್ನು ಸಂಶಯಿಸುವವರು, ಉಭಯ ಸಂಕಟವನ್ನು ಎದುರಿಸುತ್ತಾರೆ. ದೆವ್ವಗಳು ನಿಜವಾಗಿಯೂ ಇವೆಯೆಂದು ಅವರು ನಂಬದಿರುವಲ್ಲಿ, ಅವರು ಬೈಬಲಿನಲ್ಲಿ ಸ್ವಲ್ಪಮಟ್ಟಿಗೆ ಅಪನಂಬಿಕೆಯನ್ನು ತೋರಿಸುತ್ತಿದ್ದಾರೆ. ಏಕೆ? ಏಕೆಂದರೆ ಅತಿಮಾನುಷ ಶಕ್ತಿಗಳಿರುವ ದುಷ್ಟಾತ್ಮ ಜೀವಿಗಳ ವಿಚಾರವು ದೇವರ ವಾಕ್ಯವಾದ ಬೈಬಲಿನಲ್ಲಿ ಕಲಿಸಲ್ಪಡುತ್ತದೆ.
ಅದರ ಪ್ರಥಮ ಪುಸ್ತಕವಾದ ಆದಿಕಾಂಡ ಪುಸ್ತಕವು, ಹವ್ವಳನ್ನು ವಂಚಿಸಲಿಕ್ಕಾಗಿ ಹಾಗೂ ದೇವರ ವಿರುದ್ಧವಾಗಿ ದಂಗೆಗೈಯುವುದರಲ್ಲಿ ಅವಳನ್ನು ಮುನ್ನಡಿಸಲಿಕ್ಕಾಗಿ, ಬುದ್ಧಿಶಕ್ತಿಯುಳ್ಳ ಜೀವಿಯೊಂದು ಒಂದು ಸರ್ಪವನ್ನು ಹೇಗೆ ಉಪಯೋಗಿಸಿತು ಎಂಬುದನ್ನು ವಿವರಿಸುತ್ತದೆ. (ಆದಿಕಾಂಡ 3:1-5) ಬೈಬಲಿನ ಕೊನೆಯ ಪುಸ್ತಕವಾದ ಪ್ರಕಟನೆ ಪುಸ್ತಕವು, ಆ ದುಷ್ಟ ಕುತಂತ್ರಿಯನ್ನು, “ಪುರಾತನ ಸರ್ಪ”ವನ್ನು “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ . . . ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ”ವನೋಪಾದಿ ಗುರುತಿಸುತ್ತದೆ. (ಪ್ರಕಟನೆ 12:9) ದಂಗೆಯೇಳುವಂತೆ ಇತರ ದೇವದೂತರನ್ನೂ ಸೆಳೆಯುವುದರಲ್ಲಿ ಸೈತಾನನು ಯಶಸ್ವಿಯಾದನು. (ಯೂದ 6) ಬೈಬಲಿನಲ್ಲಿ ಈ ಪತಿತ ದೇವದೂತರು ದೆವ್ವಗಳೆಂದು ಕರೆಯಲ್ಪಡುತ್ತಾರೆ. ಅವರು ಭೂಮಿಯ ಸುತ್ತಮುತ್ತಲೂ ಕಾರ್ಯನಡಿಸುತ್ತಾರೆ ಮತ್ತು ದೇವರೊಂದಿಗೆ ಮತ್ತು ಆತನನ್ನು ಸೇವಿಸುವವರೊಂದಿಗೆ ಅವರು ಬಹಳ ಕೋಪೋದ್ರಿಕ್ತರಾಗಿದ್ದಾರೆ.—ಪ್ರಕಟನೆ 12:12.
ಸೈತಾನನಿಗೂ ದೆವ್ವಗಳಿಗೂ, ಮಾನವರ ಮೇಲೆ ಪ್ರಭಾವಬೀರುವ, ಕೇಡುಮಾಡುವ, ಮತ್ತು ಅವರೊಂದಿಗೆ ಸಂವಾದಮಾಡುವ ಶಕ್ತಿಯಿದೆ. (ಲೂಕ 8:27-33) ಸಾವಿರಾರು ವರ್ಷಗಳಿಂದ ಅವು ಮಾನವ ಸ್ವಭಾವವನ್ನು ಅಧ್ಯಯನಮಾಡಿವೆ. ಮಾನವ ದೌರ್ಬಲ್ಯಗಳ ಲಾಭವನ್ನು ಪಡೆದುಕೊಳ್ಳುವ ವಿಧವು ಅವುಗಳಿಗೆ ತಿಳಿದಿದೆ. ಅವು ಪುರುಷರು, ಸ್ತ್ರೀಯರು, ಹಾಗೂ ಮಕ್ಕಳನ್ನು ಸ್ವಾಧೀನಪಡಿಸಿಕೊಂಡ, ಅಥವಾ ಸಂಪೂರ್ಣವಾಗಿ ಅವರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡ ವಿದ್ಯಮಾನಗಳನ್ನು ಬೈಬಲು ವರದಿಸುತ್ತದೆ. (ಮತ್ತಾಯ 15:22; ಮಾರ್ಕ 5:2) ಅವು ರೋಗವನ್ನು ಅಥವಾ ಕುರುಡುತನದಂತಹ ಶಾರೀರಿಕ ಬಲಹೀನತೆಗಳನ್ನು ಉಂಟುಮಾಡಬಲ್ಲವು. (ಯೋಬ 2:6, 7; ಮತ್ತಾಯ 9:32, 33; 12:22; 17:14-18) ಅವು ಜನರ ಮನಸ್ಸುಗಳನ್ನು ಸಹ ಕುರುಡಾಗಿಸಬಲ್ಲವು. (2 ಕೊರಿಂಥ 4:4) “ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗು”ತ್ತಿರುವ ತಮ್ಮ ಒಡೆಯನಾದ ಸೈತಾನನು ಕ್ರಿಯಾಶೀಲನಾಗಿರುವಂತೆಯೇ, ದೆವ್ವಗಳು ಸತತವಾಗಿ ಕ್ರಿಯಾಶೀಲವಾಗಿವೆ. (1 ಪೇತ್ರ 5:8) ದೆವ್ವಗಳ ಅಸ್ತಿತ್ವದ ಕುರಿತಾದ ಅನೇಕ ವೃತ್ತಾಂತಗಳು ಬೈಬಲಿನಲ್ಲಿವೆ. ನೀವು ಬೈಬಲಿನಲ್ಲಿ ನಂಬಿಕೆಯಿಡುವುದಾದರೆ, ಅದೃಶ್ಯ ದುಷ್ಟಾತ್ಮ ಜೀವಿಗಳ ವಾಸ್ತವಿಕತೆಯನ್ನು ನೀವು ಒಪ್ಪಿಕೊಳ್ಳುತ್ತೀರಿ.
ದುಷ್ಟ ವಂಚಕರು
ಆದರೆ ಇಂದು ಲೋಕದಲ್ಲಿ ಸತತವಾದ ಭೀತಿಯ ಸ್ಥಿತಿಯನ್ನು ಉಂಟುಮಾಡದೆ, ಶಕ್ತಿಶಾಲಿ ದೆವ್ವಗಳು ಹೇಗೆ ಅಸ್ತಿತ್ವದಲ್ಲಿರಸಾಧ್ಯವಿದೆ? ಅವುಗಳ ಇರುವಿಕೆ ಹಾಗೂ ಕೃತ್ಯಗಳು ಏಕೆ ಹೆಚ್ಚು ಸ್ಪಷ್ಟವಾಗಿ ಗೋಚರಿಸುವುದಿಲ್ಲ? ಬೈಬಲು ಉತ್ತರಿಸುವುದು: “ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳು”ತ್ತಾನೆ. (2 ಕೊರಿಂಥ 11:14, 15) ಪಿಶಾಚನು ಒಬ್ಬ ವಂಚಕನಾಗಿದ್ದಾನೆ. ಅನೇಕವೇಳೆ ದೆವ್ವಗಳ ಚಟುವಟಿಕೆಯು, ಅಪಾಯರಹಿತವಾದ ಅಥವಾ ಪ್ರಯೋಜನಕರವೂ ಆದ ಸೋಗುಳ್ಳದ್ದಾಗಿರುತ್ತದೆ. ಆದುದರಿಂದ, ಅದನ್ನು ಗ್ರಹಿಸುವುದು ಕಷ್ಟಕರ.
ಸೈತಾನನೂ ಅವನ ದೆವ್ವಗಳೂ, ಬೈಬಲ್ ಸಮಯಗಳಲ್ಲಿ ಜನರನ್ನು ಬೇರೆ ಬೇರೆ ವಿಧಗಳಲ್ಲಿ ಬಾಧಿಸಿದಂತೆಯೇ ಇಂದೂ ಬಾಧಿಸುತ್ತವೆ. ಈಗ ಯಥಾರ್ಥ ಕ್ರೈಸ್ತರಾಗಿರುವ ಕೆಲವರು, ಒಂದು ಕಾಲದಲ್ಲಿ ಮಾಂತ್ರಿಕತೆಯೊಂದಿಗೆ ಒಳಗೂಡಿದ್ದವರಾಗಿದ್ದರು; ದೆವ್ವಗಳ ಆಕ್ರಮಣಗಳ ಭೀಕರತೆಗಳಿಗೆ ಅವರು ಪುರಾವೆಯನ್ನು ನೀಡಬಲ್ಲರು. ಇಂದು, ಬಹುಶಃ ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ, ಜನರನ್ನು ಬಹಿರಂಗವಾಗಿ ಮಾಂತ್ರಿಕತೆಯ ಪದ್ಧತಿಗಳಲ್ಲಿ ಸೆಳೆಯಲಿಕ್ಕಾಗಿ ದೆವ್ವಗಳು ತಮ್ಮ ಅತಿಮಾನುಷ ಶಕ್ತಿಗಳನ್ನು ಬಳಸುತ್ತಿವೆ. ಅವರ ಶಕ್ತಿಯನ್ನು ಕಡಿಮೆಯಾಗಿ ಅಂದಾಜುಮಾಡಬಾರದಾಗಿದೆ. ಆದರೂ, ಜನರಿಗೆ ಭಯವನ್ನು ಉಂಟುಮಾಡುವುದಕ್ಕಿಂತಲೂ, ಆಮಿಷವನ್ನೊಡ್ಡಿ ಅವರನ್ನು ದೇವರಿಂದ ದೂರಸೆಳೆಯುವುದರಲ್ಲಿ ಅವು ಹೆಚ್ಚನ್ನು ಸಾಧಿಸುತ್ತವೆ. ಸೈತಾನನೂ ದೆವ್ವಗಳೂ “ಭೂಲೋಕದವರನ್ನೆಲ್ಲಾ ಮರುಳುಗೊಳಿಸು”ತ್ತಿವೆ ಎಂದು ಬೈಬಲು ಹೇಳುತ್ತದೆ. (ಪ್ರಕಟನೆ 12:9) ಆತ್ಮಿಕತೆಯನ್ನು, ನವಿರಾದ, ವಂಚನಾತ್ಮಕ ವಿಧಗಳಲ್ಲಿ ಶಿಥಿಲಗೊಳಿಸುವುದೇ ಅವುಗಳ ಉದ್ದೇಶವಾಗಿದೆ.
ದೆವ್ವಗಳು ನಿಜವಾಗಿಯೂ ಇವೆ. ಇಂದು ಜನರ ನಡುವೆ ಸುವ್ಯಕ್ತವಾಗಿರುವ ರಕ್ತ ಮತ್ತು ನಾಶನದ ತಣಿಸಲಾಗದ ದಾಹವನ್ನು ಇನ್ನಾವ ರೀತಿಯಲ್ಲಿ ವಿವರಿಸಸಾಧ್ಯವಿದೆ? ಮಾನವರು ಶಾಂತಿ ಮತ್ತು ಸಂತೋಷದಿಂದ ಜೀವಿಸಲು ಬಯಸುವುದು ಸಹಜ. ಆದರೆ ದೆವ್ವಗಳು ಕೆಟ್ಟತನವನ್ನು ಪ್ರವರ್ಧಿಸುತ್ತವೆ, ಮತ್ತು ಮಾನವ ಮನಸ್ಸನ್ನು ಪ್ರಭಾವಿಸುವ ಹಾಗೂ ಭ್ರಷ್ಟಗೊಳಿಸುವ ಶಕ್ತಿ ಅವುಗಳಿಗಿದೆ.
ಆದರೆ, ಯೆಹೋವನು ಸರ್ವಶಕ್ತ—ದೆವ್ವಗಳಿಗಿಂತಲೂ ಹೆಚ್ಚು ಶಕ್ತಿಶಾಲಿ—ದೇವರಾಗಿದ್ದಾನೆ. “ಸೈತಾನನ ತಂತ್ರೋಪಾಯಗಳ” ವಿರುದ್ಧವಾಗಿ ತನ್ನ ಬಲ ಹಾಗೂ ಸಂರಕ್ಷಣೆಯನ್ನು ಆತನು ಒದಗಿಸುತ್ತಾನೆ. (ಎಫೆಸ 6:11-18) ನಮಗೆ ದೆವ್ವಗಳ ಕರಾಳವಾದ ಭಯವು ಇರುವ ಅಗತ್ಯವಿಲ್ಲ, ಏಕೆಂದರೆ ದೇವರು ವಾಗ್ದಾನಿಸುವುದು: “ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.”—ಯಾಕೋಬ 4:7.
[ಪುಟ 18 ರಲ್ಲಿರುವ ಚಿತ್ರ ಕೃಪೆ]
Sipa Icono