ಜನರೆಲ್ಲರು ಒಬ್ಬರನ್ನೊಬ್ಬರು ಪ್ರೀತಿಸುವಾಗ
ತನ್ನ ಪರ್ವತ ಪ್ರಸಂಗದಲ್ಲಿ, ಜನರೆಲ್ಲರು ಒಬ್ಬರನ್ನೊಬ್ಬರು ಪ್ರೀತಿಸುವಂತಹ ಸಮಯದ ಕುರಿತು ಯೇಸು ಕ್ರಿಸ್ತನು ಸೂಚಿಸಿದನು. ಯೇಸು ತನ್ನ ಅಭಿಪ್ರಾಯವನ್ನು ತಿಳಿಯಪಡಿಸಿದ ಬಳಿಕ, 37ನೆಯ ಕೀರ್ತನೆಯಿಂದ ಆಧಾರ ಕೊಡುತ್ತಾ ಹೇಳಿದ್ದು: “ಶಾಂತರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.” ಆ ಬೈಬಲ್ ಕೀರ್ತನೆಯು, ಈ ಅದ್ಭುತಕರವಾದ ಸನ್ನಿವೇಶವು ಹೇಗೆ ನೆರವೇರುವುದೆಂಬುದನ್ನು ಸಹ ವರ್ಣಿಸುತ್ತದೆ; ಅದು ಹೀಗನ್ನುತ್ತದೆ: “ಕೆಡುಕರು ತೆಗೆದುಹಾಕಲ್ಪಡುವರು; ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು.”—ಮತ್ತಾಯ 5:5; ಕೀರ್ತನೆ 37:9.
ಎಲ್ಲ ದುಷ್ಟರು ಭೂಮಿಯಿಂದ ತೆಗೆದುಹಾಕಲ್ಪಡುವುದು ಮತ್ತು ಒಬ್ಬರನ್ನೊಬ್ಬರು ಪ್ರೀತಿಸುವ ಜನರು ಮಾತ್ರ ಅಲ್ಲಿ ಉಳಿಸಲ್ಪಡುವುದು ಎಂತಹ ಒಂದು ಗಮನಾರ್ಹ ಬದಲಾವಣೆಯಾಗಿರುವುದು! ಅದು ಹೇಗೆ ಸಂಭವಿಸಸಾಧ್ಯವಿದೆ? “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂದು ಪ್ರಾರ್ಥಿಸುವಂತೆ ನಮಗೆ ಕಲಿಸಿದಾಗ, ಅದು ಹೇಗೆ ಸಂಭವಿಸುತ್ತದೆಂಬುದನ್ನು ತೋರಿಸಲಿಕ್ಕಾಗಿ ಯೇಸು ತನ್ನ ಪ್ರಸಿದ್ಧ ಪ್ರಸಂಗವನ್ನು ಮುಂದುವರಿಸಿದನು. (ಮತ್ತಾಯ 6:10) ದೇವರ ಚಿತ್ತವು ಎಲ್ಲಿ ನೆರವೇರಿಸಲ್ಪಡಬೇಕೆಂಬುದನ್ನು ಗಮನಿಸಿರಿ. ಕೇವಲ ಪರಲೋಕದಲ್ಲಿ ಅಲ್ಲ. “ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರವೇ ಭೂಲೋಕದಲ್ಲಿಯೂ ನೆರವೇರಲಿ ಎಂದು ನಾವು ಪ್ರಾರ್ಥಿಸುತ್ತೇವೆ” ಎಂದು ದ ಕ್ರಿಸ್ಟಿಯನ್ ಸೆಂಚುರಿ ಪತ್ರಿಕೆಯು ಒತ್ತಿಹೇಳಿತು.
ಹಾಗಾದರೆ, ಯಾವುದಕ್ಕಾಗಿ ಪ್ರಾರ್ಥಿಸುವಂತೆ ಯೇಸು ಕಲಿಸಿದನೋ ಆ ದೇವರ ರಾಜ್ಯವು ಏನಾಗಿದೆ? ಅದು, ಸ್ವರ್ಗದಿಂದ ಆಳುವಂತಹ ಒಂದು ನೈಜ ಸರಕಾರವಾಗಿದೆ. ಆದುದರಿಂದಲೇ ಅದನ್ನು “ಪರಲೋಕರಾಜ್ಯ” ಎಂದು ಕರೆಯಲಾಗುತ್ತದೆ. (ಮತ್ತಾಯ 10:7) ಈ ರಾಜ್ಯ ಅಥವಾ ಸರಕಾರದ ನೇಮಿತ ಅರಸನು, ದೇವಕುಮಾರನಾದ ಯೇಸು ಕ್ರಿಸ್ತನೇ ಆಗಿದ್ದಾನೆ.
ಯೇಸು ಮರಿಯಳ ಗರ್ಭದಲ್ಲಿ ಜನ್ಮತಾಳುವ ಬಹಳ ಸಮಯಕ್ಕೆ ಮುಂಚೆಯೇ, ಆ ಅದ್ಭುತಕರ ಘಟನೆಯ ಕುರಿತು ಹಾಗೂ ತದನಂತರ ಸಂಭವಿಸುವ ಸಂಗತಿಗಳ ಕುರಿತು ಯೆಹೋವನ ಪ್ರವಾದಿಯಾದ ಯೆಶಾಯನು ಮುಂತಿಳಿಸಿದ್ದು: “ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವದು; ಅದ್ಭುತಸ್ವರೂಪನು, ಆಲೋಚನಾಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬವು ಅವನ ಹೆಸರು. ಅವನ ಮುಖಾಂತರ ದಾವೀದನ ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವದು, . . . ರಾಜ್ಯದಲ್ಲಿ ನಿತ್ಯ ಸಮಾಧಾನವಿರುವದು.” (ಯೆಶಾಯ 9:6, 7) ಯೇಸುವಿನ ಮರಣ ಹಾಗೂ ಪುನರುತ್ಥಾನದ ಬಳಿಕ, ಅವನು ಪರಲೋಕದಲ್ಲಿ ತನ್ನ ತಂದೆಯ ಬಲಗಡೆಯಲ್ಲಿ ಕುಳಿತುಕೊಂಡು, ರಾಜನೋಪಾದಿ ಆಳ್ವಿಕೆಯನ್ನು ಆರಂಭಿಸುವ ಆಜ್ಞೆಯು ತಂದೆಯಿಂದ ಕೊಡಲ್ಪಡುವ ತನಕ ಕಾಯುತ್ತಾ ಇದ್ದನು.—ಕೀರ್ತನೆ 110:1, 2; ಇಬ್ರಿಯ 10:12, 13; ಪ್ರಕಟನೆ 11:15.
ಕಾಲಕ್ರಮೇಣ, ದ್ವೇಷದಿಂದ ತುಂಬಿರುವ ಈ ಲೋಕಕ್ಕೆ ಏನು ಸಂಭವಿಸುವುದು? ಈ ಪ್ರಶ್ನೆಗೆ ಬೈಬಲು ಹೇಗೆ ಉತ್ತರಿಸುತ್ತದೆ ಎಂಬುದನ್ನು ಗಮನಿಸಿರಿ. ದೇವರ ಪ್ರವಾದಿಯಾದ ದಾನಿಯೇಲನು ಮುಂತಿಳಿಸಿದ್ದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿಯೇಲ 2:44.
ಸ್ಪಷ್ಟವಾಗಿಯೇ, ಮಾನವ ವ್ಯವಹಾರಗಳಲ್ಲಿ ಆಗುವ ಒಂದು ದೊಡ್ಡ ಬದಲಾವಣೆಯ ಕಡೆಗೆ ಈ ಬೈಬಲ್ ಪ್ರವಾದನೆಯು ಕೈತೋರಿಸುತ್ತದೆ. ದೇವರ ಆಳ್ವಿಕೆಗೆ ಅಧೀನರಾಗಲು ಹಟಮಾರಿತನದಿಂದ ನಿರಾಕರಿಸುವಂತಹ, ಮಾನವ ಜಗತ್ತಿನ ಜನರನ್ನು ಒಳಗೂಡುವ ಇಡೀ ವಿಷಯಗಳ ವ್ಯವಸ್ಥೆಯು ಭೂಮಿಯಿಂದ ತೆಗೆದುಹಾಕಲ್ಪಡುವುದು! ಅದಕ್ಕೆ ಬದಲಾಗಿ ಯಾವ ರೀತಿಯ ಪರಿಸ್ಥಿತಿಯು ಬರುವುದೆಂಬುದನ್ನು ಗಮನಿಸಿರಿ.
ಒಂದು ನೀತಿಭರಿತ ಹೊಸ ಲೋಕದಲ್ಲಿನ ಜೀವನ
ಹಳೆಯ ಲೋಕವು ಅಂತ್ಯಗೊಳ್ಳುವಾಗ, ಅನೇಕರು ಪಾರಾಗಿ ಉಳಿಯುವರು. ಬೈಬಲು ವಿವರಿಸುವುದು: “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:17) ಹೌದು, ನೋಹ ಹಾಗೂ ಅವನ ಕುಟುಂಬವು ತಮ್ಮ ದಿನಗಳ ಲೋಕದ ಅಂತ್ಯದ ತನಕವೂ ಜೀವಿಸಿದ್ದಂತೆಯೇ, ದೇವರ ಚಿತ್ತವನ್ನು ಮಾಡುವವರೆಲ್ಲರೂ ಪಾರಾಗಿ, ಹೊಸ ಲೋಕವನ್ನು ಪ್ರವೇಶಿಸುವರು. ಅಪೊಸ್ತಲ ಪೇತ್ರನು ಬರೆದುದು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.”—2 ಪೇತ್ರ 3:5-7, 11-13.
ಆಳ್ವಿಕೆ ನಡಿಸುತ್ತಿರುವ ಏಕಮಾತ್ರ ಸರಕಾರವು ದೇವರ ರಾಜ್ಯವಾಗಿರುವಂತಹ ಸಮಯದ ಕುರಿತು ಬೈಬಲು ವಾಗ್ದಾನಿಸುವುದು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) ನೀತಿವಂತ ಮಾನವರು ಶುದ್ಧೀಕರಿಸಲ್ಪಟ್ಟ ಭೂಮಿಯಲ್ಲಿ ಜೀವಿಸುವರು. ಅದು ಎಂತಹ ಹರ್ಷಭರಿತ ಸಮಯವಾಗಿರುವುದು! ಈಗಾಗಲೇ ನೀವು ಬೈಬಲನ್ನು ಪರೀಕ್ಷಿಸಿ ನೋಡಿರದಿದ್ದಲ್ಲಿ, ಹಿಂದಿನ ಪುಟಗಳಲ್ಲಿ ವಿವರಿಸಲ್ಪಟ್ಟಿದ್ದು, ಬೈಬಲಿನಲ್ಲಿ ವರ್ಣಿಸಲ್ಪಟ್ಟಿರುವ ಆಶೀರ್ವಾದಗಳನ್ನು ದಯವಿಟ್ಟು ಪರೀಕ್ಷಿಸಿ ನೋಡಿ.
ತನ್ನನ್ನು ಆರಾಧಿಸುವವರ ಪ್ರಯೋಜನಕ್ಕಾಗಿ ಅಂತಹ ಅದ್ಭುತಕರವಾದ ವಿಷಯಗಳನ್ನು ನಮ್ಮ ಸೃಷ್ಟಿಕರ್ತನು ವಾಗ್ದಾನಿಸುತ್ತಾನೆ ಎಂಬುದನ್ನು ತಿಳಿದು ನಿಮ್ಮ ಮನಸ್ಸು ಪುಳಕಿತಗೊಳ್ಳುವುದಿಲ್ಲವೊ? ದೇವರು ಪ್ರಥಮ ಮಾನವ ದಂಪತಿಗಳನ್ನು ಸೃಷ್ಟಿಸಿ, ಅವರನ್ನು ಒಂದು ಭೂಪ್ರಮೋದವನದಲ್ಲಿ ಇರಿಸಿದಾಗ, ಇದೇ ಆತನ ಮೂಲ ಉದ್ದೇಶವಾಗಿತ್ತೆಂಬುದು ಖಂಡಿತ! ದೇವರು ಅವರಿಗೆ ಏನು ಹೇಳಿದನೆಂಬುದನ್ನು ಗಮನಿಸಿರಿ: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.”—ಆದಿಕಾಂಡ 1:27, 28.
ಆದಾಮಹವ್ವರು ಮಕ್ಕಳನ್ನು ಹಡೆಯಬೇಕಿತ್ತು, ಮತ್ತು ಆ ಮಕ್ಕಳು ಬೆಳೆದು ದೊಡ್ಡವರಾದಂತೆ, ಭೂಪ್ರಮೋದವನವನ್ನು ಉಳಿಸಿಕೊಂಡುಹೋಗುವ ಆಹ್ಲಾದಕರ ಕೆಲಸದಲ್ಲಿ ಅವರು ಪಾಲ್ಗೊಳ್ಳಬೇಕಿತ್ತು. ಮಾನವ ಕುಟುಂಬವು ಅತ್ಯಧಿಕ ಸಂಖ್ಯೆಯಲ್ಲಿ ಬೆಳೆದಂತೆ, ಏದೆನ್ ತೋಟದ ಗಡಿಗಳನ್ನು ವಿಸ್ತರಿಸುವ ಆನಂದದ ಕುರಿತು ತುಸು ಆಲೋಚಿಸಿರಿ! ಇಡೀ ಭೂಮಿಯು ಒಂದು ಪ್ರಮೋದವನವಾಗುವುದು ದೇವರ ಉದ್ದೇಶವಾಗಿತ್ತೆಂಬುದು ಸ್ಪಷ್ಟ. ಆ ಉದ್ದೇಶವು ಎಂದಾದರೂ ನೆರವೇರುವುದೊ? ಅದು ನೆರವೇರುವುದು ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ, ಏಕೆಂದರೆ ಸ್ವತಃ ದೇವರೇ ಅದನ್ನು ವಾಗ್ದಾನಿಸಿದ್ದಾನೆ! ಆತನು ವಾಗ್ದಾನಿಸುವುದು: “ನಾನು ನುಡಿದಿದ್ದೇನೆ, . . . ಸಾಧಿಸುವೆನು.”—ಯೆಶಾಯ 46:11; 55:11.
ಹಿಂದಿನ ಪುಟಗಳಲ್ಲಿ ಕೊಡಲ್ಪಟ್ಟಿರುವ ಶಾಸ್ತ್ರವಚನಗಳಲ್ಲಿ ವಿವರಿಸಲ್ಪಟ್ಟಿರುವ ಭೂಪ್ರಮೋದವನದಲ್ಲಿ ಸದಾಕಾಲ ಜೀವಿಸಲು ನೀವು ಆನಂದಿಸುವಿರೊ? ಆದರೆ, ಈಗಾಗಲೇ ನೀವು ನಿರೀಕ್ಷಿಸಿರುವಂತೆ, ಅಲ್ಲಿ ಸದಾಕಾಲ ಜೀವಿಸಲು ಪ್ರತಿಯೊಬ್ಬರಿಗೂ ಅನುಮತಿಯು ಕೊಡಲ್ಪಡುವುದಿಲ್ಲ. ಅದಕ್ಕೆ ಕೆಲವು ಅರ್ಹತೆಗಳಿವೆ. ಅವು ಯಾವುವು?
ಸದಾಕಾಲ ಜೀವಿಸಲು ಅರ್ಹತೆ ಪಡೆಯುವುದು
ಮೊದಲಾಗಿ, ದೇವರ ಹೊಸ ಲೋಕದಲ್ಲಿ ಜೀವಿಸುವವರೆಲ್ಲರೂ, ದೇವರು ನಮಗೆ ಉಪದೇಶಿಸುವಂತೆಯೇ ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಬೈಬಲು ಹೇಳುವುದು: “ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದವರಾಗಿದ್ದೀರಿ.” (1 ಥೆಸಲೊನೀಕ 4:9) ದೇವರು ಇದನ್ನು ನಮಗೆ ಹೇಗೆ ಕಲಿಸುತ್ತಿದ್ದಾನೆ?
ವಿಶೇಷವಾಗಿ ತನ್ನ ಲಿಖಿತ ವಾಕ್ಯವಾದ ಬೈಬಲಿನ ಮೂಲಕವೇ. ಸದಾಕಾಲ ಜೀವಿಸಲಿಕ್ಕಾಗಿ, ನಾವು ಬೈಬಲಿನಲ್ಲಿರುವ ದೇವರ ಬೋಧನೆಗಳನ್ನು ಅಂಗೀಕರಿಸಬೇಕೆಂಬುದೇ ಇದರ ಅರ್ಥವಾಗಿದೆ. ಪೂರ್ವ ದೇಶದ ಒಬ್ಬ ಬೈಬಲ್ ವಿದ್ಯಾರ್ಥಿಯು ಹೇಳಿದ್ದು: “ಬೈಬಲು ವಾಗ್ದಾನಿಸುವಂತೆ, ಜನರೆಲ್ಲರು ಒಬ್ಬರನ್ನೊಬ್ಬರು ಪ್ರೀತಿಸಲು ಕಲಿತಿರುವ ಸಮಯಕ್ಕಾಗಿ ನಾನು ಎದುರು ನೋಡುತ್ತೇನೆ.”
ತನ್ನ ತಂದೆಗೆ ಮಾಡಿದ ಪ್ರಾರ್ಥನೆಯಲ್ಲಿ ಯೇಸು ಒಂದು ಅತ್ಯಗತ್ಯವಾದ ಆವಶ್ಯಕತೆಯನ್ನು ಗುರುತಿಸಿದನು. ಅವನು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯ ಜೀವವು.” (ಯೋಹಾನ 17:3) ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ 32 ಪುಟದ ಬ್ರೋಷರ್, ಈ ಜ್ಞಾನವನ್ನು ಪಡೆದುಕೊಳ್ಳಲು ನಿಮಗೆ ಸಹಾಯ ಮಾಡುವುದು. 32ನೆಯ ಪುಟದಲ್ಲಿರುವ ಕೂಪನ್ ಅನ್ನು ತುಂಬಿಸಿ, Watch Tower, H-58 Old Khandala Road, Lonavla 410 401, Mah., India, ಇವರಿಗೆ, ಅಥವಾ 5ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದ್ದಾದ ವಿಳಾಸಕ್ಕೆ ಅದನ್ನು ಕಳುಹಿಸುವ ಮೂಲಕ ನೀವು ಸಹ ಒಂದು ಪ್ರತಿಯನ್ನು ಪಡೆದುಕೊಳ್ಳಸಾಧ್ಯವಿದೆ.
[ಪುಟ 8-10ರಲ್ಲಿರುವಚೌಕ]
ದೇವರು ವಾಗ್ದಾನಿಸುವ ವಿಷಯಗಳು
ಲೋಕವ್ಯಾಪಕವಾದ ಪ್ರೀತಿಭರಿತ ಸಹೋದರತ್ವ
“ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.”—ಅ. ಕೃತ್ಯಗಳು 10:34, 35.
ದುಷ್ಕೃತ್ಯವಾಗಲಿ ಯುದ್ಧವಾಗಲಿ ಇರುವುದಿಲ್ಲ
“ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.”—ಜ್ಞಾನೋಕ್ತಿ 2:22.
“[ದೇವರು] ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ.” —ಕೀರ್ತನೆ 46:9.
ತಿನ್ನಲು ಸಮೃದ್ಧ ಸುವಸ್ತುಗಳು
“ಭೂಮಿಯ ಮೇಲೆ ದವಸಧಾನ್ಯವು ಸಮೃದ್ಧವಾಗಿ ಬೆಳೆಯುವುದು; ಬೆಟ್ಟಗಳ ಮೇಲೆಲ್ಲಾ ಬೆಳೆಯು ತುಂಬಿತುಳುಕುವುದು.” —ಕೀರ್ತನೆ 72:16, NW.
ಮನುಷ್ಯರ ಹಾಗೂ ಪ್ರಾಣಿಗಳ ನಡುವೆ ಶಾಂತಿ
“ತೋಳವು ಕುರಿಯ ಸಂಗಡ ವಾಸಿಸುವದು, ಚಿರತೆಯು ಮೇಕೆಮರಿಯೊಂದಿಗೆ ಮಲಗುವದು; . . . ಇವುಗಳನ್ನು ಚಿಕ್ಕ ಮಗುವು ನಡಿಸುವದು.”—ಯೆಶಾಯ 11:6.
ರೋಗ, ವೃದ್ಧಾಪ್ಯ, ಹಾಗೂ ಮರಣವು ತೆಗೆದುಹಾಕಲ್ಪಡುವುದು
“[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:4.
ಭೂಮಿಯ ಮೇಲೆ ಮೃತ ಪ್ರಿಯ ಜನರ ಪುನರುತ್ಥಾನ
“ಸಮಾಧಿಗಳಲ್ಲಿರುವವರೆಲ್ಲರು ಆತನ [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.”—ಯೋಹಾನ 5:28, 29.