‘ಹೆಚ್ಚು ಮಹತ್ವಪೂರ್ಣವಾದ ಬದಲಾವಣೆಗಳು’
“20ನೇ ಶತಮಾನದ ಜನರು ನೋಡಿರುವಂಥ ಹೆಚ್ಚು ಮಹತ್ವಪೂರ್ಣವಾದ ಹಾಗೂ ವ್ಯಾಪಕವಾದ ಬದಲಾವಣೆಗಳನ್ನು ಮಾನವ ಚರಿತ್ರೆಯ ಇನ್ನಾವುದೇ ಶತಮಾನದ ಜನರು ನೋಡಿಲ್ಲ.”—20ನೇ ಶತಮಾನದ ಟೈಮ್ಸ್ ಭೂಪಟ (ಇಂಗ್ಲಿಷ್).
ಇಪ್ಪತ್ತನೇ ಶತಮಾನವನ್ನು ಪುನರ್ವಿಮರ್ಶಿಸುವಾಗ, ಅನೇಕರು ಟೈಮ್ ಪತ್ರಿಕೆಯ ನಿರ್ವಾಹಕ ಸಂಪಾದಕರಾದ ವಾಲ್ಟರ್ ಐಸಕ್ಸನ್ ಅವರೊಂದಿಗೆ ಸಹಮತಿಸುವುದು ಖಂಡಿತ. ಅವರು ಹೇಳಿದ್ದು: “ಹಿಂದಿನ ಶತಮಾನಗಳನ್ನು 20ನೇ ಶತಮಾನದೊಂದಿಗೆ ಹೋಲಿಸಿ ನೋಡುವಾಗ, ಅದು ಹೆಚ್ಚು ಆಶ್ಚರ್ಯಚಕಿತಗೊಳಿಸುವಂಥದ್ದೂ ಪ್ರೇರಣೆಯನ್ನು ನೀಡುವಂಥದ್ದೂ ಆಗಿದೆ. ಕೆಲವೊಮ್ಮೆ ಭಯಚಕಿತಗೊಳಿಸುವಂಥದ್ದಾಗಿದ್ದರೂ ಯಾವಾಗಲೂ ಮೂಕಗೊಳಿಸುವಂಥದ್ದಾಗಿದೆ.”
ನಾರ್ವೆ ದೇಶದ ಮಾಜಿ ಪ್ರಧಾನಮಂತ್ರಿಯಾಗಿದ್ದ ಗ್ರೂ ಹಾರ್ಲಮ್ ಬ್ರುವೆಂಟ್ಲಾಂಟ್ ಕೂಡ ಈ ಶತಮಾನದ ಕುರಿತು, “ಪ್ರತಿಯೊಂದರಲ್ಲೂ ಅತಿರೇಕವನ್ನು ಮುಟ್ಟಿರುವ . . . ಅದರಲ್ಲೂ ಮಾನವ ದುರ್ಗುಣಗಳು ಗ್ರಹಿಕೆಗೆ ನಿಲುಕಲಾರದಷ್ಟು ಆಳವನ್ನು ಸೇರಿರುವ” ಶತಮಾನವೆಂದು ಕರೆಯಲಾಗಿದೆ ಎಂದು ಹೇಳುತ್ತಾರೆ. ಮತ್ತು ಇದು, “ಹೆಚ್ಚು ಪ್ರಗತಿಯನ್ನು ಕಂಡಿರುವ ಹಾಗೂ [ಕೆಲವು ಸ್ಥಳಗಳಲ್ಲಿ] ಹಿಂದೆಂದೂ ಕಂಡಿರದ ಆರ್ಥಿಕ ಪ್ರಗತಿಯನ್ನು ಮಾಡಿರುವ ಶತಮಾನ”ವಾಗಿದೆ ಎಂದು ಅವರು ಗಮನಿಸುತ್ತಾರೆ. ಆದರೆ ಅದೇ ಸಮಯದಲ್ಲಿ, “ಜನರಿಂದ ಕಿಕ್ಕಿರಿದಿರುವ ಹಾಗೂ ಅನಾರೋಗ್ಯಕರ ವಾತಾವರಣ ಮತ್ತು ಬಡತನಕ್ಕೆ ಸಂಬಂಧಿಸಿರುವ ರೋಗಗಳ ಹರಡುವಿಕೆಯಿಂದಾಗಿ” ಚಿಂತಾಜನಕ ಸ್ಥಿತಿಯಲ್ಲಿರುವ ನಗರ ಪ್ರದೇಶಗಳ ಭವಿಷ್ಯವು ನಿರಾಶಾಜನಕವಾಗಿದೆ.
ರಾಜಕೀಯದಲ್ಲಾದ ಏರುಪೇರುಗಳು
ಇಪ್ಪತ್ತನೇ ಶತಮಾನವು ಆರಂಭವಾದಾಗ, ಚೀನಾದ ಮಂಚೂ ರಾಜವಂಶ, ಆಟಮನ್ ಸಾಮ್ರಾಜ್ಯ ಮತ್ತು ಯೂರೋಪಿನ ಹಲವು ಸಾಮ್ರಾಜ್ಯಗಳು ಲೋಕದ ಹೆಚ್ಚಿನ ಭಾಗಗಳ ಮೇಲೆ ಆಧಿಪತ್ಯ ನಡೆಸುತ್ತಿದ್ದವು. ಕೇವಲ ಬ್ರಿಟಿಷ್ ಸಾಮ್ರಾಜ್ಯವು ತಾನೇ ಭೌಗೋಲಿಕ ವಿಸ್ತರಣೆಯ ನಾಲ್ಕನೆಯ ಒಂದು ಭಾಗದಷ್ಟರ ಮೇಲೆ ಹತೋಟಿಯನ್ನು ಹೊಂದಿದ್ದು, ಭೂಮಿಯ ಮೇಲಿರುವ ಪ್ರತಿ ನಾಲ್ಕು ವ್ಯಕ್ತಿಗಳಲ್ಲಿ ಒಬ್ಬನ ಮೇಲೆ ಆಳ್ವಿಕೆಯನ್ನು ನಡೆಸುತ್ತಿತ್ತು. 20ನೇ ಶತಮಾನವು ಅಂತ್ಯವಾಗಲು ಇನ್ನೂ ಸಾಕಷ್ಟು ಸಮಯವಿರುವಾಗಲೇ, ಈ ಎಲ್ಲಾ ಸಾಮ್ರಾಜ್ಯಗಳು ಇತಿಹಾಸದ ಪುಟಗಳಿಗೆ ಸೀಮಿತಗೊಳಿಸಲ್ಪಟ್ಟಿದ್ದವು. “1945ರಲ್ಲಿ ಸಾಮ್ರಾಜ್ಯಶಾಹಿತ್ವದ ಯುಗವು ನಶಿಸಿಹೋಗಿತ್ತು” ಎಂದು 20ನೇ ಶತಮಾನದ ಟೈಮ್ಸ್ ಭೂಪಟ (ಇಂಗ್ಲಿಷ್) ಪುಸ್ತಕವು ಹೇಳುತ್ತದೆ.
ವಸಾಹತುಶಾಹಿಯ ಅಳಿವು ರಾಷ್ಟ್ರೀಯತೆಯು ತಲೆಯೆತ್ತುವುದಕ್ಕೆ ದಾರಿ ಮಾಡಿಕೊಟ್ಟಿತು. ಇದು 17 ಮತ್ತು 19ನೇ ಶತಮಾನದ ಮಧ್ಯೆ ಯೂರೋಪಿನಾದ್ಯಂತ ಕಾಣಿಸಿಕೊಳ್ಳುತ್ತ, ಜನರು ಲೋಕದ ಇತರ ಭಾಗಗಳಿಗೆ ವಲಸೆಹೋಗುವಂತೆ ಮಾಡಿತು. ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ಎರಡನೇ ಮಹಾಯುದ್ಧದ ನಂತರ ಅನೇಕ ಯೂರೋಪಿಯನ್ ರಾಷ್ಟ್ರಗಳಲ್ಲಿ ರಾಷ್ಟ್ರೀಯತೆಯ ಜ್ವಾಲೆಯು ನಂದಿಹೋಗಲಾರಂಭಿಸಿತು . . . ಆದರೆ ವಸಾಹತುಶಾಹಿಯ ವಿರುದ್ಧ ಪ್ರತಿಕ್ರಿಯಿಸುವ ಸಲುವಾಗಿ ಏಷ್ಯಾ ಮತ್ತು ಆಫ್ರಿಕದಲ್ಲಿ ರಾಷ್ಟ್ರೀಯತೆಯ ಅಲೆಯು ರಭಸದಿಂದ ಬೀಸಲಾರಂಭಿಸಿತು.” ಕಾಲಿನ್ಸ್ ಅಟ್ಲಾಸ್ ಆಫ್ ವರ್ಲ್ಡ್ ಹಿಸ್ಟರಿಗನುಸಾರ, ಕೊನೆಗೂ “ಮೂರನೇ ಲೋಕವು ಇತಿಹಾಸದ ದೃಶ್ಯದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಯಿತು ಮತ್ತು ಐದು ಶತಮಾನಗಳ ಹಿಂದೆ ಯೂರೋಪಿಯನ್ನರ ವಿಸ್ತರಣೆಯೊಂದಿಗೆ ಉದಯವಾದ ಒಂದು ಯುಗವು ಈಗ ಅಂತ್ಯವನ್ನು ಕಂಡಿತು.”
ಸಾಮ್ರಾಜ್ಯಗಳು ನುಚ್ಚುನೂರಾದಂತೆ, ಸ್ವತಂತ್ರ ರಾಷ್ಟ್ರಗಳು ಅವುಗಳ ಸ್ಥಾನದಲ್ಲಿ ಹುಟ್ಟಿಕೊಂಡವು. ಅವುಗಳಲ್ಲಿ ಪ್ರಜಾಪ್ರಭುತ್ವ ಶೈಲಿಯ ಸರ್ಕಾರಗಳು ಬಹು ಸಂಖ್ಯೆಯಲ್ಲಿದ್ದವು. ಎರಡನೇ ಮಹಾಯುದ್ಧದ ಸಮಯದಲ್ಲಿ ಯೂರೋಪ್ ಮತ್ತು ಏಷ್ಯಾ ಖಂಡಗಳಲ್ಲಿ, ಅನೇಕವೇಳೆ ಪ್ರಜಾಪ್ರಭುತ್ವದ ಆಳ್ವಿಕೆಯು ಸರ್ವಾಧಿಕಾರಶಾಹಿ ಸರ್ಕಾರಗಳಿಂದ ಕಡು ವಿರೋಧವನ್ನು ಎದುರಿಸಬೇಕಾಯಿತು. ಈ ಆಡಳಿತ ಪದ್ಧತಿಗಳು ವೈಯಕ್ತಿಕ ಸ್ವಾತಂತ್ರ್ಯವನ್ನು ನಿರ್ಬಂಧಿಸಿದವು ಮತ್ತು ಆರ್ಥಿಕ, ಪ್ರಸಾರ ಮಾಧ್ಯಮ ಹಾಗೂ ಸೈನ್ಯದ ಮೇಲೆ ಸಂಪೂರ್ಣ ಹತೋಟಿಯನ್ನು ಕಾಪಾಡಿಕೊಂಡಿದ್ದವು. ಲೋಕಾಧಿಪತ್ಯವನ್ನು ಸಾಧಿಸುವ ಅವರ ಪ್ರಯತ್ನಗಳಿಗೆ ಅಂತಿಮವಾಗಿ ತಡೆಹಾಕಲಾಯಿತು. ಆದರೆ ಇದು ಅಸಂಖ್ಯಾತ ಜನರ ಜೀವಹಾನಿ ಮತ್ತು ಭಾರಿ ಹಣದ ವೆಚ್ಚದ ನಂತರವೇ ಸಾಧ್ಯವಾಯಿತು.
ಯುದ್ಧದ ಒಂದು ಶತಮಾನ
ನಿಶ್ಚಯವಾಗಿಯೂ, ಹಿಂದಿನ ಎಲ್ಲಾ ಶತಮಾನಗಳಿಗಿಂತಲೂ 20ನೇ ಶತಮಾನವನ್ನು ಗುರುತಿಸುವ ವಿಶೇಷ ಲಕ್ಷಣವು ಯುದ್ಧವೇ ಆಗಿದೆ. ಮೊದಲನೇ ಮಹಾಯುದ್ಧದ ಕುರಿತು ಜರ್ಮನಿಯ ಇತಿಹಾಸಗಾರನಾದ ಗಿಡೊ ನಾಪ್ ಬರೆಯುವುದು: “ಯುರೋಪಿಯನ್ನರಿಗೆ ಬಹುಕಾಲ ಶಾಂತಿಯನ್ನು ನೀಡಿದ 19ನೇ ಶತಮಾನವು ಆಗಸ್ಟ್ 1, 1914ರಂದು ಕೊನೆಗೊಳ್ಳುವುದೆಂದು ಯಾರೂ ಊಹಿಸಿಯೂ ಇರಲಿಲ್ಲ. ಹಾಗೂ ದುಷ್ಟ ಮಾನವರು ತಮ್ಮ ಜೊತೆ ಮಾನವರಿಗೆ ಮಾಡಬಹುದಾದ ನೀಚ ಕೃತ್ಯಗಳ ನಿದರ್ಶನವನ್ನು ಕೊಡುತ್ತಾ, ಸುಮಾರು ಮೂರು ದಶಕಗಳಷ್ಟು ಕಾಲ ಯುದ್ಧವು ಮುಂದುವರಿಯುತ್ತಿದ್ದ ಆ ಸಮಯದಲ್ಲೇ 20ನೇ ಶತಮಾನವು ಆರಂಭವಾಗಿದದ್ದು ಯಾರ ಗಮನಕ್ಕೂ ಬರಲಿಲ್ಲ.”
ಇತಿಹಾಸದ ಪ್ರಾಧ್ಯಾಪಕರಾದ ಹ್ಯೂ ಬ್ರೋಗನ್ ನಮಗೆ ಮರುಜ್ಞಾಪಿಸುವುದೇನೆಂದರೆ, “ಆ ಯುದ್ಧದ ಪ್ರಭಾವವು ಅಮೆರಿಕದ ಮೇಲೆ ಅಪರಿಮಿತವಾಗಿತ್ತು, ಅಷ್ಟು ಮಾತ್ರವಲ್ಲ ಭೀತಿಯನ್ನು ಉಂಟುಮಾಡುತ್ತಾ ಇಂದಿಗೂ [1998ರಲ್ಲಿ] ಅದರ ಆಘಾತದ ಅರಿವಾಗುತ್ತದೆ.” ಹಾರ್ವರ್ಡ್ ವಿಶ್ವವಿದ್ಯಾನಿಲಯದ ಇತಿಹಾಸದ ಒಬ್ಬ ಪ್ರಾಧ್ಯಾಪಕರಾದ ಆಕಿರಾ ಈರೀ ಬರೆದದು: “ಮೊದಲನೇ ಮಹಾಯುದ್ಧವು ಪೂರ್ವ ಏಷ್ಯಾ ಮತ್ತು ಅಮೆರಿಕದ ಇತಿಹಾಸದಲ್ಲಿ ಅನೇಕ ವಿಧಗಳಲ್ಲಿ ಒಂದು ಮಹತ್ವಪೂರ್ಣವಾದ ಘಟ್ಟವಾಗಿತ್ತು.”
ಸ್ಪಷ್ಟವಾಗಿಯೇ ದಿ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕವು, ಮೊದಲನೇ ಮತ್ತು ಎರಡನೇ ಮಹಾಯುದ್ಧವನ್ನು “20ನೇ ಶತಮಾನದ ಭೂರಾಜ್ಯಶಾಸ್ತ್ರ ಚರಿತ್ರೆಯ ಮಹಾ ನಿರ್ಣಾಯಕ ಸಮಯಗಳಾಗಿ” ಸೂಚಿಸಿ ಹೇಳುತ್ತದೆ. “ಮೊದಲನೇ ಮಹಾಯುದ್ಧವು ನಾಲ್ಕು ಮಹಾ ಸಾಮ್ರಾಜ್ಯವಾದಿ ರಾಜವಂಶಗಳ ಪತನಕ್ಕೆ ಕಾರಣವಾಯಿತು. . . . ಇದರ ಪರಿಣಾಮವಾಗಿ ರಷ್ಯಾದಲ್ಲಿ ಬಾಲ್ಷಿವಿಕ್ ಕ್ರಾಂತಿಯು ಪ್ರಾರಂಭವಾಯಿತು ಹಾಗೂ . . . ಇದು ಎರಡನೇ ಮಹಾಯುದ್ಧಕ್ಕೆ ಬುನಾದಿಯಾಯಿತು.” ಅಷ್ಟು ಮಾತ್ರವಲ್ಲದೆ, ಈ ಮಹಾಯುದ್ಧಗಳು ಬಹುಮಟ್ಟಿಗೆ “ಹಿಂದೆಂದೂ ಕಂಡಿರದ ರೀತಿಯಲ್ಲಿ ಕಗ್ಗೊಲೆ, ಸಾಮೂಹಿಕ ಹತ್ಯಾಕಾಂಡ, ಮತ್ತು ಧ್ವಂಸದಲ್ಲಿ” ಭಾಗವಹಿಸಿದ್ದವು ಎಂದು ಸಹ ಅದು ನಮಗೆ ಹೇಳುತ್ತದೆ. ತದ್ರೀತಿಯಲ್ಲಿ ಗಿಡೊ ನಾಪ್ ಹೇಳುವುದು: “ಕ್ರೌರ್ಯ ಹಾಗೂ ಮಾನವ ಪಾಶವೀಯತೆಯು ನಿರೀಕ್ಷಣೆಗಳನ್ನು ಮೀರುವಷ್ಟು ನೀಚವಾಗಿದ್ದವು. ಮನುಷ್ಯರನ್ನು ಇನ್ನು ಮುಂದೆ ವ್ಯಕ್ತಿಗಳಾಗಿ ವೀಕ್ಷಿಸದೇ ವಸ್ತುಗಳಾಗಿ ವೀಕ್ಷಿಸುವ ಒಂದು ಹೊಸ ಯುಗಕ್ಕಾಗಿ ಕಂದಕಗಳಲ್ಲಿ . . . ಬೀಜಗಳನ್ನು ಬಿತ್ತಲಾಯಿತು.”
ಈ ರೀತಿಯ ವಿಧ್ವಂಸಕ ಯುದ್ಧಗಳನ್ನು ತಡೆಯುವುದಕ್ಕಾಗಿ, 1919ರಲ್ಲಿ ರಾಷ್ಟ್ರಗಳ ಸಂಘವನ್ನು ರಚಿಸಲಾಯಿತು. ಲೋಕಶಾಂತಿಯನ್ನು ಕಾಪಾಡಬೇಕಿದ್ದ ತನ್ನ ಗುರಿಯನ್ನು ಸಾಧಿಸುವುದರಲ್ಲಿ ಅದು ವಿಫಲಗೊಂಡ ಕಾರಣ, ಅದರ ಸ್ಥಾನವನ್ನು ವಿಶ್ವಸಂಸ್ಥೆ ತುಂಬಿಕೊಂಡಿತು. ವಿಶ್ವಸಂಸ್ಥೆಯು ಮೂರನೇ ಮಹಾಯುದ್ಧವಾಗುವುದನ್ನು ತಡೆಯುವುದರಲ್ಲಿ ಯಶಸ್ವಿಯಾಗಿದ್ದರೂ, ಅನೇಕ ದಶಕಗಳಿಂದ ಅಣುಯುದ್ಧದಲ್ಲಿ ಉಲ್ಬಣಗೊಳ್ಳುವ ಬೆದರಿಕೆಯನ್ನು ಹಾಕುತ್ತಿದ್ದ ಶೀತಲ ಯುದ್ಧವನ್ನು ತಡೆಯುವುದರಲ್ಲಿ ಅದು ವಿಫಲವಾಯಿತು. ಬಾಲ್ಕನ್ಸ್ನಲ್ಲಿ ನಡೆದ ಯುದ್ಧದಂತಹ, ಲೋಕದಾದ್ಯಂತ ನಡೆಯುತ್ತಿರುವ ಸಣ್ಣಪುಟ್ಟ ಯುದ್ಧಗಳನ್ನು ತಡೆಯುವುದಕ್ಕೂ ಅದಕ್ಕೆ ಸಾಧ್ಯವಾಗಿಲ್ಲ.
ಜಗತ್ತಿನಲ್ಲಿ ದೇಶಗಳ ಸಂಖ್ಯೆಯು ಹೆಚ್ಚಾದಂತೆ, ಅವುಗಳ ಮಧ್ಯೆ ಶಾಂತಿಯನ್ನು ಕಾಪಾಡುವುದೂ ಅಷ್ಟೇ ಕಷ್ಟಕರವಾಗಿದೆ. ಮೊದಲನೇ ಮಹಾಯುದ್ಧಕ್ಕೆ ಮುಂಚೆ ಇದ್ದ ಭೂಪಟವನ್ನು ಆಧುನಿಕ ಭೂಪಟದೊಂದಿಗೆ ಹೋಲಿಸಿ ನೋಡುವಾಗ, ಇಂದಿರುವ ಕನಿಷ್ಠಪಕ್ಷ 51 ಆಫ್ರಿಕದ ದೇಶಗಳು ಮತ್ತು 44 ಏಷ್ಯಾದ ದೇಶಗಳು ಆಗ ಇರಲಿಲ್ಲ ಎಂಬುದನ್ನು ಅದು ತೋರಿಸುತ್ತದೆ. ವಿಶ್ವಸಂಸ್ಥೆಯಲ್ಲಿ ಈಗಿರುವ 185 ಸದಸ್ಯರುಗಳಲ್ಲಿ 116 ಸದಸ್ಯರು ಅದರ ಸ್ಥಾಪನೆಯ ಸಮಯದಲ್ಲಿ ಇರಲಿಲ್ಲ!
“ಹೆಚ್ಚು ಕೌತುಕವನ್ನುಂಟುಮಾಡಿದ ಪ್ರೇಕ್ಷಣೀಯ ದೃಶ್ಯ”
19ನೇ ಶತಮಾನದ ಅಂತ್ಯವು ಸಮೀಪಿಸುತ್ತಿದ್ದಂತಹ ಸಮಯದಲ್ಲಿ, ರಷ್ಯನ್ ಸಾಮ್ರಾಜ್ಯವು ಜಗತ್ತಿನಲ್ಲೇ ಹೆಚ್ಚು ಭೂಪ್ರದೇಶದ ಮೇಲೆ ಆಧಿಪತ್ಯವನ್ನು ಹೊಂದಿದ್ದ ಸಾಮ್ರಾಜ್ಯವಾಗಿತ್ತು. ಆದರೆ ಅದು ತನಗಿದ್ದ ಬೆಂಬಲವನ್ನು ವೇಗವಾಗಿ ಕಳೆದುಕೊಳ್ಳುತ್ತಿತ್ತು. ಲೇಖಕ ಜೆಫ್ರಿ ಪಾನ್ಟನ್ಗನುಸಾರ, “ಸುಧಾರಣೆಗಿಂತ ಕ್ರಾಂತಿಯು ಅಗತ್ಯವಿದೆ ಎಂದು ಅನೇಕರು ನೆನಸಿದರು.” ಅವರು ಇನ್ನೂ ಹೇಳುವುದು: “ಆದರೆ ಅದು ಮೊದಲನೇ ಮಹಾಯುದ್ಧದಂಥ ಮಹಾ ಯುದ್ಧದ ರೂಪವನ್ನು ತಾಳುತ್ತ, ಇದರ ಪರಿಣಾಮವಾಗಿ ಅವ್ಯವಸ್ಥೆಗೆ ದಾರಿಮಾಡಿಕೊಡುತ್ತ ನಿಜವಾದ ಕ್ರಾಂತಿಯನ್ನು ತ್ವರಿತಗೊಳಿಸಿತು.”
ರಷ್ಯಾದಲ್ಲಿ ಬಾಲ್ಷಿವಿಕ್ರ ಅಧಿಕಾರದ ವಶಪಡಿಸುವಿಕೆಯು, ಆ ಸಮಯದಲ್ಲಿ ಒಂದು ಹೊಸ ಸಾಮ್ರಾಜ್ಯವು ಹುಟ್ಟಿಕೊಳ್ಳುವುದಕ್ಕೆ ಮೂಲಕಾರಣವಾಯಿತು. ಅದು ಸೋವಿಎಟ್ ಒಕ್ಕೂಟಗಳಿಂದ ಪ್ರಾಯೋಜಿತವಾಗಿದ್ದ ಕಮ್ಯೂನಿಸಮ್ ಆಗಿತ್ತು. ಇದು ಭೌಗೋಲಿಕವಾಗಿ ಯುದ್ಧ ನಡೆಯುತ್ತಿದ್ದ ಸಮಯದಲ್ಲಿ ಹುಟ್ಟಿದ್ದರೂ, ಸಿಡಿಗುಂಡುಗಳ ಮಳೆಗರೆದಾಗಲೂ ಸೋವಿಎಟ್ ಸಾಮ್ರಾಜ್ಯವು ಅಂತ್ಯವಾಗಲಿಲ್ಲ. ಮೈಕಲ್ ಡಾಬ್ಸ್ ಅವರ ಡೌನ್ ವಿತ್ ಬಿಗ್ ಬ್ರದರ್ ಎಂಬ ಒಂದು ಪುಸ್ತಕವು ಪ್ರತಿಪಾದಿಸುವುದೇನೆಂದರೆ, 1970ರುಗಳ ಕೊನೆಯಲ್ಲಿ, “ಒಂದು ವಿಶಾಲವಾದ ಬಹುರಾಷ್ಟ್ರ ಸಾಮ್ರಾಜ್ಯವಾಗಿದ್ದ” ಸೋವಿಎಟ್ ಒಕ್ಕೂಟವು “ಈಗಾಗಲೇ ಹಿಂದಿನ ಸ್ಥಿತಿಗೆ ತರಲಾಗದ ರೀತಿಯಲ್ಲಿ ಅವನತಿಯ ಮಾರ್ಗವನ್ನು ಹಿಡಿದಿತ್ತು.”
ಹಾಗಿದ್ದರೂ, ಅದರ ಪತನವು ಹಠಾತ್ತಾಗಿ ಆಯಿತು. ಯೂರೋಪ್—ಒಂದು ಇತಿಹಾಸ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ನಾರ್ಮನ್ ಡೇವೀಸ್ ಹೇಳಿಕೆ ನೀಡುವುದು: “ಸೋವಿಎಟ್ ಸಾಮ್ರಾಜ್ಯದ ಕುಸಿಯುವಿಕೆಯು, ಯೂರೋಪಿನ ಚರಿತ್ರೆಯ ಇನ್ನಿತರ ಎಲ್ಲಾ ಮಹಾ ಸಾಮ್ರಾಜ್ಯಗಳ ಕುಸಿಯುವಿಕೆಗಿಂತಲೂ ತುಂಬ ವೇಗವಾಗಿತ್ತು.” ಮತ್ತು “ಅದು ಸ್ವಾಭಾವಿಕ ಕಾರಣಗಳಿಂದಾಗಿ ಸಂಭವಿಸಿತು.” ನಿಜವಾಗಿಯೂ, “ಸೋವಿಎಟ್ ಒಕ್ಕೂಟದ ಉದಯ, ಅದರ ಬೆಳವಣಿಗೆ ಮತ್ತು ಪತನವು 20ನೇ ಶತಮಾನದ ಹೆಚ್ಚು ಕೌತುಕವನ್ನುಂಟುಮಾಡುವ ಪ್ರೇಕ್ಷಣೀಯ ದೃಶ್ಯಗಳಲ್ಲಿ ಒಂದಾಗಿತ್ತು,” ಎನ್ನುತ್ತಾರೆ ಪಾನ್ಟನ್.
ವಾಸ್ತವದಲ್ಲಿ, ವ್ಯಾಪಕವಾದ ಪರಿಣಾಮಗಳನ್ನುಂಟುಮಾಡಿದ 20ನೇ ಶತಮಾನದ ಮಹತ್ವಪೂರ್ಣವಾದ ಬದಲಾವಣೆಗಳ ಸರಣಿಯಲ್ಲಿ ಸೋವಿಎಟ್ ಒಕ್ಕೂಟದ ಪತನವು ಕೇವಲ ಒಂದು. ನಿಜ, ರಾಜಕೀಯ ಬದಲಾವಣೆಗಳು ಹೊಸದೇನಲ್ಲ. ಏಕೆಂದರೆ ಅಂತಹ ಬದಲಾವಣೆಗಳು ಸಾವಿರಾರು ವರ್ಷಗಳಿಂದಲೂ ಆಗುತ್ತಾ ಬಂದಿವೆ.
ಆದರೂ, 20ನೇ ಶತಮಾನದಲ್ಲಿ ಸರ್ಕಾರದ ಕ್ಷೇತ್ರದಲ್ಲಾದ ಒಂದು ಬದಲಾವಣೆಯು ವಿಶೇಷವಾಗಿ ಮಹತ್ತರವಾಗಿದೆ. ಈ ಬದಲಾವಣೆಯು ಯಾವುದು ಮತ್ತು ಇದು ನಿಮ್ಮನ್ನು ವೈಯಕ್ತಿಕವಾಗಿ ಹೇಗೆ ಬಾಧಿಸುವುದು ಎಂಬ ವಿಷಯವನ್ನು ನಂತರ ಚರ್ಚಿಸಲಾಗುವುದು.
ಇದನ್ನು ಮಾಡುವ ಮೊದಲು, 20ನೇ ಶತಮಾನದಲ್ಲಾದ ಕೆಲವು ವೈಜ್ಞಾನಿಕ ಸಾಧನೆಗಳನ್ನು ನಾವು ಪರೀಕ್ಷಿಸೋಣ. ಇವುಗಳ ಕುರಿತಾಗಿ ಪ್ರಾಧ್ಯಾಪಕರಾದ ಮೈಕಲ್ ಹಾವರ್ಡ್ ಮುಕ್ತಾಯಗೊಳಿಸುವುದು: “ಪಶ್ಚಿಮ ಯೂರೋಪ್ ಹಾಗೂ ಉತ್ತರ ಅಮೆರಿಕದ ಜನರಿಗೆ, 20ನೇ ಶತಮಾನವನ್ನು ಮಾನವ ಚರಿತ್ರೆಯ ಒಂದು ಹೊಸ ಹಾಗೂ ಸಂತೋಷದ ಯುಗದ ಉದಯವಾಗಿ ಅಭಿವಂದಿಸಲು ಯೋಗ್ಯವಾದ ಕಾರಣಗಳಿದ್ದವು.” ಈ ಎಲ್ಲಾ ಮುನ್ನಡೆಗಳು ಉತ್ತಮ ಜೀವನವೆಂದು ಕರೆಯಲ್ಪಡುವ ಜೀವನಕ್ಕೆ ನಡೆಸುವವೋ?
[ಪುಟ 2-7ರಲ್ಲಿರುವ ಚಾರ್ಟು/ಚಿತ್ರಗಳು]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
1901
ವಿಕ್ಟೋರಿಯಾ ಮಹಾರಾಣಿಯು 64 ವರ್ಷಗಳ ಆಳ್ವಿಕೆಯ ನಂತರ ಮರಣಹೊಂದುತ್ತಾರೆ
ಲೋಕದ ಜನಸಂಖ್ಯೆಯು 160 ಕೋಟಿಯಾಗಿತ್ತು
1914
ಆರ್ಚ್ಡ್ಯೂಕ್ ಫರ್ಡಿನೆಂಡ್ರು ಹತ್ಯೆಮಾಡಲ್ಪಟ್ಟರು. ಮೊದಲನೇ ಲೋಕ ಯುದ್ಧವು ಸ್ಫೋಟವಾಗುತ್ತದೆ
ಕೊನೆಯ ಕ್ಸಾರ್, ಎರಡನೇ ನಿಕಲಸ್ ತನ್ನ ಪರಿವಾರದೊಂದಿಗೆ
1917
ಲೆನಿನ್ ರಷ್ಯಾವನ್ನು ಕಾಂತ್ರಿಗೆ ನಡೆಸುತ್ತಾನೆ
1919
ರಾಷ್ಟ್ರಗಳ ಸಂಘವು ರಚಿತವಾಯಿತು
1929
ಅಮೆರಿಕಾದ ಸ್ಟಾಕ್ ಮಾರುಕಟ್ಟೆಯ ಕುಸಿತವು ಮಹಾ ಆರ್ಥಿಕ ಕುಸಿತಕ್ಕೆ ನಡೆಸಿತು
ಭಾರತದ ಸ್ವಾತಂತ್ರ್ಯಕ್ಕಾಗಿ ಗಾಂಧಿಯು ತಮ್ಮ ಹೋರಾಟವನ್ನು ಮುಂದುವರಿಸುತ್ತಾರೆ
1939
ಅಡಾಲ್ಫ್ ಹಿಟ್ಲರ್ ಪೋಲೆಂಡನ್ನು ಆಕ್ರಮಿಸುತ್ತಾನೆ, ಎರಡನೇ ಮಹಾಯುದ್ಧವು ಪ್ರಾರಂಭವಾಗುತ್ತದೆ
ವಿನ್ಸ್ಟನ್ ಚರ್ಚಿಲ್ 1940ರಲ್ಲಿ ಬ್ರಿಟನಿನ ಪ್ರಧಾನಮಂತ್ರಿಯಾಗುತ್ತಾರೆ
ಸಾಮೂಹಿಕ ಕಗ್ಗೊಲೆ
1941
ಪರ್ಲ್ ಹಾರ್ಬರಿನ ಮೇಲೆ ಜಪಾನ್ ಬಾಂಬ್ದಾಳಿ ಮಾಡುತ್ತದೆ
1945
ಹಿರೊಶಿಮ ಮತ್ತು ನಾಗಸಾಕೀ ನಗರಗಳ ಮೇಲೆ ಅಮೆರಿಕ ಅಣುಬಾಂಬುಗಳನ್ನು ಹಾಕುತ್ತದೆ. ಎರಡನೇ ಮಹಾಯುದ್ಧವು ಕೊನೆಗೊಳ್ಳುತ್ತದೆ
1946
ವಿಶ್ವಸಂಸ್ಥೆಯು ಸಭೆಯಾಗಿ ಸೇರಿಬರುತ್ತದೆ
1949
ಮಾವೋ ಟ್ಸೆ-ತುಂಗ್ ಚೀನಾದ ಪ್ರಜಾಗಣರಾಜ್ಯವನ್ನು ಘೋಷಿಸುತ್ತಾರೆ
1960
ಆಫ್ರಿಕದಲ್ಲಿ ಹದಿನೇಳು ಹೊಸ ದೇಶಗಳು ಸೃಷ್ಟಿಸಲ್ಪಟ್ಟವು
1975
ವಿಯಟ್ನಾಮ್ ಯುದ್ಧವು ಕೊನೆಗೊಳ್ಳುತ್ತದೆ
1989
ಕಮ್ಯುನಿಸಮ್ ತನ್ನ ಹತೋಟಿಯನ್ನು ಕಳೆದುಕೊಂಡಂತೆ ಬರ್ಲಿನ್ ಗೋಡೆಯು ಕುಸಿದು ಬೀಳುತ್ತದೆ
1991
ಸೋವಿಎಟ್ ಒಕ್ಕೂಟವು ವಿಭಜನೆಗೊಳ್ಳುತ್ತದೆ