ಯುವ ಜನರು ಪ್ರಶ್ನಿಸುವುದು . . .
ನನ್ನ ರೂಮ್ಮೇಟ್ಗಳೊಂದಿಗೆ ಹೇಗೆ ಹೊಂದಿಕೊಂಡುಹೋಗಬಲ್ಲೆ?
“ಅಡಿಗೆಮನೆಯು ಸ್ವಚ್ಛವಾಗಿರಬೇಕೆಂದು ನಾನು ಇಷ್ಟಪಡುತ್ತೇನೆ. ಆದರೆ ಪಾತ್ರೆಗಳು ಅಲ್ಲಲ್ಲೇ ಬಿದ್ದಿದ್ದರೂ ಸ್ಟೌವಿನ ಮೇಲೆ ಬಿಡಲ್ಪಟ್ಟಿದ್ದರೂ ನನ್ನ ರೂಮ್ಮೇಟ್ಗಳು ಅವರ ಪಾಡಿಗೆ ಇರುತ್ತಿದ್ದರು. ಅವರಿಗೆ ಅದು ಹೇಗಿದ್ದರೂ ನಡೆಯುತ್ತಿತ್ತು.”—ಲಿನ್.a
ರೂಮ್ಮೇಟ್ಗಳು. “ಅವರು ಅತ್ಯುತ್ತಮ ಸ್ನೇಹಿತರೂ ಆಗಿರಬಲ್ಲರು, ಇಲ್ಲವೆ ಅತಿ ಕೆಟ್ಟ ಶತ್ರುಗಳೂ ಆಗಿರಬಲ್ಲರು” ಎಂದು ಲೇಖಕರಾದ ಕೆವನ್ ಸ್ಕೋಲರೀ ಪ್ರತಿಪಾದಿಸುತ್ತಾರೆ. ಅದರ ಕುರಿತು ಅಷ್ಟು ಪ್ರಬಲವಾದ ಅನಿಸಿಕೆಗಳು ನಿಮಗಿಲ್ಲದಿರಬಹುದಾದರೂ, ಯಾರೋ ಒಬ್ಬರೊಂದಿಗೆ ಜೀವಿಸುವುದು ಒಂದು ನಿಜವಾದ ಪಂಥಾಹ್ವಾನವಾಗಿರಬಲ್ಲದು ಎಂಬುದನ್ನಂತೂ ಅಲ್ಲಗಳೆಯಲು ಸಾಧ್ಯವಿಲ್ಲ.b ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ನಡುವೆ ರೂಮ್ಮೇಟ್ಗಳ ನಡುವಿನ ತಿಕ್ಕಾಟಗಳು ಎಷ್ಟು ಸಾಮಾನ್ಯವಾಗಿವೆಯೆಂದರೆ, ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ಗನುಸಾರ, ರೂಮ್ಮೇಟ್ಗಳು ಹೊಂದಿಕೊಂಡುಹೋಗುವಂತೆ ಸಹಾಯಮಾಡಲಿಕ್ಕಾಗಿ ಅನೇಕ ಶಾಲೆಗಳು “ಕಲಹ ಸಂಧಾನ ಕಾರ್ಯಕ್ರಮಗಳನ್ನು” ಹಾಗೂ ಚರ್ಚಾಗೋಷ್ಠಿಗಳನ್ನೂ ಒಳಗೊಂಡು “ವ್ಯಾಪಕವಾದ ಪ್ರಯತ್ನಗಳನ್ನು” ಮಾಡುತ್ತಿವೆ.
ಪೂರ್ಣ ಸಮಯದ ಸೌವಾರ್ತಿಕ ಕೆಲಸವನ್ನು ಮಾಡಲಿಕ್ಕಾಗಿ ಮನೆಯನ್ನು ಬಿಟ್ಟುಬಂದಿರುವ ಯುವ ಕ್ರೈಸ್ತರಿಗೂ, ಒಂದು ಅಪಾರ್ಟ್ಮೆಂಟ್ನಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಜೀವಿಸುವುದು ಕಷ್ಟಕರವಾಗಿರಸಾಧ್ಯವಿದೆ. ಬೈಬಲ್ ಮೂಲತತ್ತ್ವಗಳನ್ನು ಅನ್ವಯಿಸುವ ಮೂಲಕ ಮತ್ತು “ಸುಜ್ಞಾನವನ್ನು” ತೋರಿಸುವ ಮೂಲಕ, ಅನೇಕವೇಳೆ ಜಗಳಗಳನ್ನು ಬಗೆಹರಿಸಸಾಧ್ಯವಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಪ್ರೋತ್ಸಾಹದಾಯಕವಾಗಿದೆ.—ಜ್ಞಾನೋಕ್ತಿ 2:7.
ಪರಸ್ಪರ ಅರಿತುಕೊಳ್ಳಿರಿ
ಮನೆಯನ್ನು ಬಿಟ್ಟುಹೋಗುವ ಪುಳಕವು ತಣ್ಣಗಾದ ಬಳಿಕ, ಈ ಹಿಂದೆ ಮನೆಯಲ್ಲಿರುವಾಗ ನೀವು ಹೇಗೆ ಜೀವಿಸುತ್ತಿದ್ದಿರೋ ಅದೇ ರೀತಿ ಇಲ್ಲಿಯೂ ಜೀವಿಸುವ ಹಂಬಲ ನಿಮ್ಮಲ್ಲಿ ಉಂಟಾಗುವುದನ್ನು ನೀವು ಕಂಡುಕೊಳ್ಳಬಹುದು. (ಅರಣ್ಯಕಾಂಡ 11:4, 5) ಆದರೂ, ಗತ ವಿಷಯಗಳ ಕುರಿತು ಯೋಚಿಸುತ್ತಾ ಇರುವುದು, ಹೊಸ ಪರಿಸ್ಥಿತಿಗೆ ನೀವು ಹೊಂದಿಕೊಳ್ಳುವುದನ್ನು ಹೆಚ್ಚು ಕಷ್ಟಕರವಾದದ್ದಾಗಿ ಮಾಡುವುದಷ್ಟೆ. ಪ್ರಸಂಗಿ 7:10 ಈ ಬುದ್ಧಿವಾದವನ್ನು ಕೊಡುತ್ತದೆ: “ಹಿಂದಿನ ಕಾಲವು ಈ ಕಾಲಕ್ಕಿಂತ ಮೇಲಾದದ್ದಕ್ಕೆ ಕಾರಣವೇನು ಅನ್ನಬೇಡ; ನೀನು ಈ ವಿಷಯದಲ್ಲಿ ವಿಚಾರಿಸುವದು ಜ್ಞಾನಕಾರ್ಯವಲ್ಲ.” ಹೌದು, ನೀವಿರುವ ಸನ್ನಿವೇಶದಿಂದಲೇ ಅತ್ಯುತ್ತಮವಾದ ಪ್ರಯೋಜನವನ್ನು ಪಡೆದುಕೊಳ್ಳಲು ಪ್ರಯತ್ನಿಸುವುದು ಒಳ್ಳೇದು.
ನಿಮ್ಮ ರೂಮ್ಮೇಟನ್ನು ಅರಿತುಕೊಳ್ಳಲು ಪ್ರಯತ್ನಗಳನ್ನು ಮಾಡಲಾರಂಭಿಸಿರಿ. ರೂಮ್ಮೇಟ್ಗಳು ಅತಿ ಆಪ್ತ ಸ್ನೇಹಿತರಾಗಿರುವ ಅಗತ್ಯವಿಲ್ಲ ಎಂಬುದಂತೂ ನಿಜ. ವಾಸ್ತವದಲ್ಲಿ, ಅವನು ಅಥವಾ ಅವಳು, ನೀವು ವಿಶೇಷವಾಗಿ ಆಕರ್ಷಿತರಾಗುವಂಥ ರೀತಿಯ ವ್ಯಕ್ತಿಯಾಗಿರಲಿಕ್ಕಿಲ್ಲ. ಹಾಗಿದ್ದರೂ, ನೀವು ಆ ವ್ಯಕ್ತಿಯೊಂದಿಗೆ ಜೀವಿಸಲೇಬೇಕಾಗಿದ್ದಲ್ಲಿ, ಸಾಧ್ಯವಿರುವಷ್ಟು ಮಟ್ಟಿಗೆ ಸ್ನೇಹಭಾವದ ಸಂಬಂಧವನ್ನು ಹೊಂದಿರುವುದು ಸಮಂಜಸವಾದದ್ದಲ್ಲವೋ?
ಫಿಲಿಪ್ಪಿ 2:4 ನಮಗೆ, “ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ” ನೋಡುವಂತೆ ಹೇಳುತ್ತದೆ. ವಿಚಾರಣೆ ಮಾಡುವಂಥ ರೀತಿಯಲ್ಲಿ ಸಂಭಾಷಣೆಯನ್ನು ಆರಂಭಿಸುವುದರ ಬದಲಿಗೆ, ನೀವು ನಿಮ್ಮ ರೂಮ್ಮೇಟ್ನ/ಳ ಕುಟುಂಬ ಹಿನ್ನೆಲೆ, ಅವನ ಅಥವಾ ಅವಳ ಅಭಿರುಚಿಗಳು, ಗುರಿಗಳು, ಮತ್ತು ಇಷ್ಟಾನಿಷ್ಟಗಳ ಬಗ್ಗೆ ಅವರನ್ನು ಕೇಳಬಹುದೊ? ಸ್ವತಃ ನಿಮ್ಮ ಬಗ್ಗೆಯೂ ಅವರಿಗೆ ತಿಳಿಸಿರಿ. ನೀವು ಒಬ್ಬರು ಇನ್ನೊಬ್ಬರ ಬಗ್ಗೆ ಹೆಚ್ಚೆಚ್ಚು ವಿಷಯಗಳನ್ನು ತಿಳಿದುಕೊಂಡಂತೆ, ನೀವಿಬ್ಬರೂ ಪರಸ್ಪರ ಹೆಚ್ಚೆಚ್ಚು ಅರ್ಥಮಾಡಿಕೊಳ್ಳಲು ಆರಂಭಿಸುವಿರಿ.
ಆಗಿಂದಾಗ್ಗೆ, ಒಟ್ಟುಗೂಡಿ ಕೆಲಸಮಾಡಲು ನಿಶ್ಚಿತ ಯೋಜನೆಗಳನ್ನು ಮಾಡಿರಿ. ಲೀ ಹೇಳುವುದು: “ಕೆಲವೊಮ್ಮೆ ನಾನು ಮತ್ತು ನನ್ನ ರೂಮ್ಮೇಟ್ಗಳು ಹೊರಗೆ ಊಟಮಾಡಲು ಹೋಗುತ್ತೇವೆ ಅಥವಾ ಎಲ್ಲರೂ ಜೊತೆಗೂಡಿ ಯಾವುದಾದರೊಂದು ಕಲಾ ಪ್ರದರ್ಶನಕ್ಕೆ ಭೇಟಿನೀಡುತ್ತೇವೆ.” ಕ್ರೈಸ್ತ ರೂಮ್ಮೇಟ್ಗಳಿಗಾದರೋ, ಸಭಾ ಕೂಟಗಳಿಗಾಗಿ ತಯಾರಿಯನ್ನು ಮಾಡುವುದು ಅಥವಾ ಸೌವಾರ್ತಿಕ ಕೆಲಸದಲ್ಲಿ ಭಾಗವಹಿಸುವುದರಂಥ ಆತ್ಮಿಕ ಚಟುವಟಿಕೆಗಳಲ್ಲಿ ಒಳಗೂಡುವುದು, ಸ್ನೇಹದ ಬಂಧಗಳನ್ನು ಬೆಸೆಯಲಿಕ್ಕಾಗಿರುವ ಹೆಚ್ಚು ಪರಿಣಾಮಕಾರಿಯಾದ ವಿಧವಾಗಿದೆ.
ಡೇವಿಡ್ ಹೇಳುವುದು: “ನನ್ನ ರೂಮ್ಮೇಟ್ ಒಂದು ಬಹಿರಂಗ ಬೈಬಲ್ ಭಾಷಣವನ್ನು ಕೊಟ್ಟಾಗ, ಅವನಿಗೆ ಬೆಂಬಲ ನೀಡಲಿಕ್ಕಾಗಿ ನಾನು ಅವನ ಸಭೆಗೆ ಹಾಜರಾದೆ.” ಕ್ರೀಡೆ ಹಾಗೂ ಸಂಗೀತದ ವಿಷಯದಲ್ಲಿ ಅವನ ಹಾಗೂ ಅವನ ರೂಮ್ಮೇಟ್ನ ಅಭಿರುಚಿಗಳು ಬೇರೆ ಬೇರೆಯಾಗಿರುವುದಾದರೂ, ಆತ್ಮಿಕ ವಿಷಯಗಳಿಗಾಗಿರುವ ಅವರ ಪ್ರೀತಿಯು ಅವರ ನಡುವೆ ಒಂದು ಬಂಧವನ್ನು ಬೆಸೆದಿದೆ. ಡೇವಿಡ್ ಹೇಳುವುದು: “ನಾವು ಅಧಿಕವಾಗಿ ಆತ್ಮಿಕ ವಿಷಯಗಳ ಕುರಿತು ಸಂಭಾಷಿಸುತ್ತೇವೆ. ನಿಜ ಹೇಳಬೇಕೆಂದರೆ, ಆತ್ಮಿಕ ವಿಷಯಗಳ ಕುರಿತು ನಾವು ಗಂಟೆಗಟ್ಟಲೆ ಮಾತಾಡಬಲ್ಲೆವು.”
ಆದರೆ ಒಂದು ಎಚ್ಚರಿಕೆಯ ಮಾತು: ಬೇರೆ ಕೆಲವರೊಂದಿಗೆ ಹಿತಕರವಾದ ಸಂಬಂಧಗಳನ್ನು ಬೆಳೆಸಿಕೊಳ್ಳಲು ತಪ್ಪಿಹೋಗುವಷ್ಟರ ಮಟ್ಟಿಗೆ ಒಬ್ಬ ರೂಮ್ಮೇಟ್ಗೆ ಹತ್ತಿರವಾಗಬೇಡಿ. ಅವನು ಅಥವಾ ಅವಳು ಪ್ರತಿ ಬಾರಿ ಎಲ್ಲಿಗಾದರೂ ಹೋಗುವಾಗ ನಿಮ್ಮನ್ನು ಆಮಂತ್ರಿಸಲೇ ಬೇಕೆಂದು ನಿಮ್ಮ ರೂಮ್ಮೇಟ್ಗೆ ಅನಿಸುವಲ್ಲಿ, ಅವನು ಅಥವಾ ಅವಳಿಗೆ ನಿರ್ಬಂಧಿಸಲ್ಪಟ್ಟಿರುವ ಅನಿಸಿಕೆಯಾಗಬಹುದು. ಬೈಬಲ್ ಸಲಹೆ ನೀಡುವುದೇನೆಂದರೆ, ನಿಮ್ಮ ಸ್ನೇಹದಲ್ಲಿ “ವಿಶಾಲವಾಗಿರಿ.”—2 ಕೊರಿಂಥ 6:13.
ಸುವರ್ಣ ನಿಯಮಕ್ಕನುಸಾರ ಜೀವಿಸುವುದು
ನೀವು ಪರಸ್ಪರರನ್ನು ಅರಿತುಕೊಳ್ಳುತ್ತಾ ಹೋದಂತೆ, ಹವ್ಯಾಸಗಳು, ಅಭಿರುಚಿಗಳು ಮತ್ತು ದೃಷ್ಟಿಕೋನಗಳ ಬಗ್ಗೆ ನಿಮ್ಮಲ್ಲಿರುವ ಭಿನ್ನತೆಗಳನ್ನೂ ನೀವು ಅರ್ಥಮಾಡಿಕೊಳ್ಳುತ್ತೀರಿ ಎಂಬುದಂತೂ ನಿಶ್ಚಯ. ಮಾರ್ಕ್ ಎಂಬ ಯುವಕನು ಎಚ್ಚರಿಕೆ ನೀಡುವಂತೆ, “ನೀವು ಅಪರಿಪೂರ್ಣತೆಗಳನ್ನು ನಿರೀಕ್ಷಿಸಬೇಕು.” ಎಂದೂ ಮಣಿಯದವರಾಗಿರುವುದು ಅಥವಾ ಸ್ವವಿಚಾರಾಸಕ್ತರಾಗಿರುವುದು ಒತ್ತಡ ಹಾಗೂ ಉದ್ವೇಗವನ್ನು ಉಂಟುಮಾಡುತ್ತದೆ. ನಿಮಗೆ ಹೊಂದಿಕೊಳ್ಳಲಿಕ್ಕಾಗಿ ನಿಮ್ಮ ರೂಮ್ಮೇಟ್ ಬಹು ದೊಡ್ಡ ಬದಲಾವಣೆಗಳನ್ನು ಮಾಡುವಂತೆ ನಿರೀಕ್ಷಿಸುವುದರಿಂದಲೂ ಒತ್ತಡವು ಉಂಟಾಗುತ್ತದೆ.
ಒಬ್ಬ ರೂಮ್ಮೇಟ್ ಆಗಿರುವ ವಿಷಯದಲ್ಲಿ ಫರ್ನಾಂಡೊ ಇದನ್ನು ಕಲಿತಿದ್ದಾನೆ: “ನೀವು ನಿಸ್ವಾರ್ಥಿಗಳಾಗಿರಬೇಕು ಮತ್ತು ಸ್ವವಿಚಾರಾಸಕ್ತರಾಗಿರಬಾರದು.” ಅವನ ಹೇಳಿಕೆಯು ಪ್ರಸಿದ್ಧವಾದ ಸುವರ್ಣ ನಿಯಮಕ್ಕೆ ಹೊಂದಿಕೆಯಲ್ಲಿದೆ. ಅದು ಹೇಳುವುದು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12) ಉದಾಹರಣೆಗೆ, ತನ್ನ ಹಾಗೂ ತನ್ನ ರೂಮ್ಮೇಟ್ನ ನಡುವೆ ಕೋಣೆಯಲ್ಲಿನ ತಾಪಮಾನದ ಬಗ್ಗೆ ಘರ್ಷಣೆಯಾಗುತ್ತಿದೆ ಎಂಬುದನ್ನು ಫರ್ನಾಂಡೊ ಸ್ವಲ್ಪ ಸಮಯದೊಳಗೇ ಕಂಡುಕೊಂಡನು; ಇವನಿಗೆ ಕೋಣೆ ಬೆಚ್ಚಗಿರುವುದು ಇಷ್ಟವಾಗುತ್ತಿತ್ತು, ಆದರೆ ಅವನ ರೂಮ್ಮೇಟ್ಗೆ ಸ್ವಲ್ಪ ತಣ್ಣಗಿನ ತಾಪಮಾನದಲ್ಲಿ ಮಲಗುವುದು ಇಷ್ಟಕರವಾಗಿತ್ತು. ಇದಕ್ಕೆ ಪರಿಹಾರವೇನು? ಫರ್ನಾಂಡೊ ಹೇಳುವುದು: “ನಾನು ನನಗೋಸ್ಕರ ಒಂದು ಕಂಬಳಿಯನ್ನು ಖರೀದಿಸಿದೆ.” ಹೌದು, ಮಾರ್ಕ್ ಹೇಳುವಂತೆ, “ನಮ್ಯರಾಗಿರಿ. ನೀವು ನಿಮ್ಮ ಎಲ್ಲಾ ರೂಢಿಗಳನ್ನು ಬಿಟ್ಟುಬಿಡಬೇಕಾಗಿಲ್ಲ, ಆದರೆ ಕಡಿಮೆಪಕ್ಷ ಕೆಲವು ಇಷ್ಟಾನಿಷ್ಟಗಳನ್ನು ನೀವು ತ್ಯಾಗಮಾಡಬೇಕಾಗಬಹುದು.”
ನೀವು ಸುವರ್ಣ ನಿಯಮವನ್ನು ಅನ್ವಯಿಸಸಾಧ್ಯವಿರುವ ಇನ್ನೊಂದು ಕ್ಷೇತ್ರವು ಹೀಗಿದೆ: ನಿಮ್ಮ ರೂಮ್ಮೇಟ್ನ/ಳ ಅಭಿರುಚಿಗಳನ್ನು ಸಹಿಸಿಕೊಳ್ಳಲು ಕಲಿಯಿರಿ. ಉದಾಹರಣೆಗೆ, ನಿಮಗೆ ಅವನ ಸಂಗೀತ ಇಷ್ಟಕರವಾಗುವುದಿಲ್ಲ ಎಂದಿಟ್ಟುಕೊಳ್ಳಿ. ಒಳ್ಳೇದು, ಅವನಿಗೂ ನಿಮ್ಮ ಸಂಗೀತದ ಬಗ್ಗೆ ಅದೇ ರೀತಿಯ ಅಭಿಪ್ರಾಯವಿರಬಹುದು. ಆದುದರಿಂದ, ನಿಮ್ಮ ರೂಮ್ಮೇಟ್ನ/ಳ ಸಂಗೀತದಲ್ಲಿನ ಅಭಿರುಚಿಗಳು ನೈತಿಕವಾಗಿ ಹೀನಮಟ್ಟದವುಗಳಾಗಿರದಿರುವಲ್ಲಿ, ನೀವು ಸಹನೆಯನ್ನು ರೂಢಿಸಿಕೊಳ್ಳಲು ಪ್ರಯತ್ನಿಸಬಹುದು. ಫರ್ನಾಂಡೊ ಹೇಳುವುದು: “ನನ್ನ ರೂಮ್ಮೇಟ್ಗೆ ಸಂಗೀತದಲ್ಲಿ ಭಿನ್ನವಾದ ಅಭಿರುಚಿಗಳಿರುತ್ತಿದ್ದರೆ ಒಳ್ಳೇದಿತ್ತೆಂದು ನಾನು ನೆನಸುತ್ತೇನೆ. ಆದರೆ ಅದೇ ಸಮಯದಲ್ಲಿ ಸಂಗೀತದಲ್ಲಿನ ಅವನ ಅಭಿರುಚಿಗಳಿಗೆ ನಾನು ಒಗ್ಗಿಕೊಳ್ಳುತ್ತಾ ಇದ್ದೇನೆ.” ಇನ್ನೊಂದು ಕಡೆಯಲ್ಲಿ, ಅಧ್ಯಯನ ಮಾಡುತ್ತಿರಬಹುದಾದ ತನ್ನ ರೂಮ್ಮೇಟ್ಗೆ ತೊಂದರೆಯನ್ನು ಉಂಟುಮಾಡದಿರಲಿಕ್ಕಾಗಿ, ಒಬ್ಬ ವ್ಯಕ್ತಿಯು ಹೆಡ್ಫೋನುಗಳ ಮೂಲಕ ತನ್ನ ಸಂಗೀತವನ್ನು ಕೇಳಿ ಆನಂದಿಸಸಾಧ್ಯವಿದೆ.
ಸುವರ್ಣ ನಿಯಮವನ್ನು ಅನ್ವಯಿಸುವುದು, ಭೌತಿಕ ವಸ್ತುಗಳ ಕುರಿತಾದ ಅನಗತ್ಯ ಜಗಳಗಳನ್ನೂ ತಡೆಗಟ್ಟಬಲ್ಲದು. ಉದಾಹರಣೆಗೆ, ನಿಮ್ಮ ರೂಮ್ಮೇಟ್ನ/ಳ ಅನುಮತಿಯಿಲ್ಲದೆ ರೆಫ್ರಿಜರೇಟರ್ನಲ್ಲಿರುವ ಏನನ್ನಾದರೂ ತೆಗೆದುಕೊಳ್ಳುವ—ಆದರೆ ಅಪರೂಪವಾಗಿ ಅದನ್ನು ಮತ್ತೆ ತುಂಬಿಸಿಡುವ—ಅಭ್ಯಾಸ ನಿಮಗಿರುವಲ್ಲಿ, ಅಸಮಾಧಾನವು ಬೆಳೆಯಬಲ್ಲದು. ಅದೇ ಸಮಯದಲ್ಲಿ, ನೀವು ತಂದಿರುವಂಥ ಏನನ್ನಾದರೂ ನಿಮ್ಮ ರೂಮ್ಮೇಟ್ ನಿಮ್ಮ ಅನುಮತಿಯಿಲ್ಲದೆ ತಾನಾಗಿಯೇ ತೆಗೆದುಕೊಳ್ಳುವಾಗ ನೀವು ಕೋಪಗೊಳ್ಳುವುದು ಅಥವಾ ದುರುಗುಟ್ಟಿ ನೋಡುವುದು, ಆದರಣೀಯ ಸಂಬಂಧಗಳನ್ನು ಖಂಡಿತ ಉತ್ತೇಜಿಸಲಾರದು. “ದಾನಧರ್ಮಗಳನ್ನು ಮಾಡುವವರೂ ಪರೋಪಕಾರಮಾಡುವವರೂ” ಆಗಿರುವಂತೆ ಬೈಬಲು ನಮ್ಮನ್ನು ಉತ್ತೇಜಿಸುತ್ತದೆ. (1 ತಿಮೊಥೆಯ 6:18) ನಿಮ್ಮನ್ನು ದುರುಪಯೋಗಿಸಲಾಗುತ್ತಿದೆ ಎಂದು ನಿಮಗನಿಸುವಲ್ಲಿ, ಬಾಯಿಮುಚ್ಚಿಕೊಂಡು ಸುಮ್ಮನಿದ್ದುಬಿಡಬೇಡಿ. ನಿಮ್ಮ ದೂರನ್ನು ಶಾಂತಚಿತ್ತರಾಗಿ ಮತ್ತು ದಯಾಭಾವದಿಂದ ವ್ಯಕ್ತಪಡಿಸಿರಿ.
ಒಬ್ಬರು ಇನ್ನೊಬ್ಬರ ವೈಯಕ್ತಿಕ ಸೊತ್ತುಗಳ ವಿಷಯದಲ್ಲಿ ಗೌರವಭಾವದವರಾಗಿರಿ. ಒಬ್ಬರ ಅನುಮತಿ ಪಡೆಯದೆ ಏನನ್ನಾದರೂ ತೆಗೆದುಕೊಳ್ಳುವುದು ದುರಭಿಮಾನವನ್ನು ತೋರಿಸುತ್ತದೆ. (ಜ್ಞಾನೋಕ್ತಿ 11:2) ರೂಮ್ಮೇಟ್ಗೆ ಏಕಾಂತತೆಯ ಆವಶ್ಯಕತೆಯಿದೆ ಎಂಬುದೂ ನಿಮಗೆ ಲಕ್ಷ್ಯವಿರಲಿ. ಅವನ ಅಥವಾ ಅವಳ ರೂಮನ್ನು ಪ್ರವೇಶಿಸುವುದಕ್ಕೆ ಮೊದಲು ಬಾಗಿಲನ್ನು ಬಡಿಯುವಂಥ ಸೌಜನ್ಯವನ್ನು ತೋರಿಸಿರಿ. ಈ ರೀತಿಯಲ್ಲಿ ನೀವು ಗೌರವವನ್ನು ತೋರಿಸುವಾಗ, ನಿಮ್ಮ ರೂಮ್ಮೇಟ್ ಸಹ ಅದೇ ರೀತಿಯಲ್ಲಿ ಪ್ರತಿಕ್ರಿಯಿಸುವನು/ಳು. ಡೇವಿಡ್ ಹೇಳುವುದು: “ನಮ್ಮಲ್ಲಿ ಯಾರಿಗೂ ಮನೆಯಲ್ಲೇ ಓದಿಕೊಳ್ಳಲು ಯಾವುದೇ ಸಮಸ್ಯೆಯಿಲ್ಲ. ನಾವಿಬ್ಬರೂ ಅದನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ ಮತ್ತು ನಮ್ಮಿಬ್ಬರಲ್ಲಿ ಯಾರಾದರೂ ಓದಿಕೊಳ್ಳುತ್ತಿರುವಲ್ಲಿ ಇನ್ನೊಬ್ಬರು ಸುಮ್ಮನಿರುತ್ತೇವೆ. ಆದರೆ ಕೆಲವೊಮ್ಮೆ ನನ್ನ ರೂಮ್ಮೇಟ್ ಬೇರೆ ಏನನ್ನಾದರೂ ಮಾಡಲು ಅಪೇಕ್ಷಿಸುವಲ್ಲಿ, ಓದಿಕೊಳ್ಳಲಿಕ್ಕಾಗಿ ನಾನು ಲೈಬ್ರರಿಗೆ ಹೋಗುತ್ತೇನೆ.”
ಸುವರ್ಣ ನಿಯಮವನ್ನು ಅನ್ವಯಿಸಿಕೊಳ್ಳುವುದರಲ್ಲಿ, ನಿಮ್ಮ ಪಾಲಿನ ಬಾಡಿಗೆಯನ್ನು ಸಮಯಕ್ಕೆ ಸರಿಯಾಗಿ ಕೊಟ್ಟುಬಿಡುವುದರಲ್ಲಿ ಅಥವಾ ನಿಮಗೆ ವಹಿಸಲ್ಪಟ್ಟಿರುವ ಮನೆಗೆಲಸಗಳನ್ನು ಮಾಡುವುದರಲ್ಲಿ ಜವಾಬ್ದಾರಿಯುತರಾಗಿರುವುದೂ ಸೇರಿದೆ.
ಜಗಳಗಳನ್ನು ನಿಭಾಯಿಸುವುದು
ಹಿಂದೆ ಬೈಬಲ್ ಸಮಯಗಳಲ್ಲಿ, ಪೌಲ ಮತ್ತು ಬಾರ್ನಬರೆಂಬ ಇಬ್ಬರು ಗೌರವಾನ್ವಿತ ಕ್ರೈಸ್ತ ಪುರುಷರ ನಡುವೆ ಸಹ “ತೀಕ್ಷ್ಣ ವಾಗ್ವಾದ” ಉಂಟಾಯಿತು. (ಅ. ಕೃತ್ಯಗಳು 15:39) ನಿಮ್ಮ ನಡುವೆಯೂ ಇಂಥದ್ದೇ ಏನಾದರೂ ಸಂಭವಿಸುವುದಾದರೆ ಆಗೇನು? ನಿಮ್ಮ ರೂಮ್ಮೇಟ್ ಹಾಗೂ ನಿಮ್ಮ ನಡುವೆ ವ್ಯಕ್ತಿತ್ವ ಸಂಘರ್ಷವಿರಬಹುದು ಅಥವಾ ನಿಮ್ಮ ರೂಮ್ಮೇಟ್ನಲ್ಲಿ ಕಿರಿಕಿರಿಮಾಡುವಂಥ ಯಾವುದಾದರೊಂದು ವೈಯಕ್ತಿಕ ಹವ್ಯಾಸವಿದ್ದು, ಅದು ನಿಮ್ಮ ತಾಳ್ಮೆಯನ್ನು ಮಿತಿಮೀರಿ ಪರೀಕ್ಷಿಸುತ್ತಿರಬಹುದು. ಒಂದು ಭಿನ್ನಾಭಿಪ್ರಾಯ ಅಥವಾ ತೀಕ್ಷ್ಣವಾದ ಚರ್ಚೆಯು, ನೀವು ಒಟ್ಟಿಗೆ ಒಂದೇ ರೂಮ್ನಲ್ಲಿ ವಾಸಿಸುವುದನ್ನು ನಿಲ್ಲಿಸಬೇಕು ಎಂಬುದನ್ನು ಅರ್ಥೈಸುತ್ತದೋ? ಹಾಗೆ ಮಾಡಬೇಕೆಂದಿಲ್ಲ. ಪೌಲ ಮತ್ತು ಬಾರ್ನಬರು ತಮ್ಮ ನಡುವೆಯಿದ್ದ ಭಿನ್ನತೆಗಳನ್ನು ಬಗೆಹರಿಸಿಕೊಳ್ಳಲು ಶಕ್ತರಾದರು ಎಂಬುದು ಸುವ್ಯಕ್ತ. ಆದುದರಿಂದ, ರೂಮನ್ನೇ ಬಿಟ್ಟುಹೋಗುವಂಥ ಗಂಭೀರ ಹೆಜ್ಜೆಯನ್ನು ತೆಗೆದುಕೊಳ್ಳುವ ಮೊದಲು ನೀವು ಸಹ ಅದನ್ನೇ ಮಾಡಬಹುದು. ನಿಮಗೆ ಸಹಾಯಮಾಡಸಾಧ್ಯವಿರುವ ಕೆಲವು ಬೈಬಲ್ ಮೂಲತತ್ತ್ವಗಳು ಇಲ್ಲಿವೆ.
●‘ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ, ಪ್ರತಿಯೊಬ್ಬರೂ ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಿರಿ.’—ಫಿಲಿಪ್ಪಿ 2:3.
●“ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ. ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ.”—ಎಫೆಸ 4:31, 32.
●“ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವದೆ ಎಂಬದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.”—ಮತ್ತಾಯ 5:23, 24; ಎಫೆಸ 4:26.
ಪ್ರಯೋಜನಗಳು
ರೂಮ್ಮೇಟ್ಗಳಿರುವ ಚಿಕ್ಕ ಪ್ರಾಯದ (ಮತ್ತು ಅಷ್ಟೇನೂ ಚಿಕ್ಕ ಪ್ರಾಯದವರಲ್ಲದ) ಅನೇಕ ಕ್ರೈಸ್ತರು, ಜ್ಞಾನಿ ಅರಸನಾದ ಸೊಲೊಮೋನನ “ಒಬ್ಬನಿಗಿಂತ ಇಬ್ಬರು ಲೇಸು” ಎಂಬ ಮಾತುಗಳ ನಿಜಾರ್ಥವನ್ನು ನೇರವಾಗಿ ತಿಳಿದುಕೊಂಡಿದ್ದಾರೆ. (ಪ್ರಸಂಗಿ 4:9) ವಾಸ್ತವದಲ್ಲಿ, ಬೇರೆಯವರೊಂದಿಗೆ ರೂಮ್ಮೇಟ್ಗಳಾಗಿ ವಾಸಿಸುವುದರ ಅನುಭವವು ಪ್ರಯೋಜನದಾಯಕವಾಗಿದೆ ಎಂಬುದನ್ನು ಅನೇಕರು ಕಂಡುಕೊಂಡಿದ್ದಾರೆ. “ಜನರೊಂದಿಗೆ ಹೆಚ್ಚು ಉತ್ತಮವಾಗಿ ಹೇಗೆ ವ್ಯವಹರಿಸಬೇಕು ಮತ್ತು ಹೇಗೆ ಹೊಂದಿಕೊಳ್ಳಬೇಕು ಎಂಬುದನ್ನು ನಾನು ಕಲಿತುಕೊಂಡಿದ್ದೇನೆ” ಎಂದು ಮಾರ್ಕ್ ಹೇಳುತ್ತಾನೆ. ರನೇ ಕೂಡಿಸುವುದು: “ಸ್ವತಃ ನಿಮ್ಮ ಕುರಿತು ಬಹಳಷ್ಟನ್ನು ನೀವು ಕಲಿತುಕೊಳ್ಳುತ್ತೀರಿ. ಮತ್ತು ಅದೇ ಸಮಯದಲ್ಲಿ ರೂಮ್ಮೇಟ್ ನಿಮ್ಮ ಮೇಲೆ ಸಕಾರಾತ್ಮಕವಾದ ಸಮಾನಸ್ಥರ ಒತ್ತಡವನ್ನು ಹಾಕಸಾಧ್ಯವಿದೆ.” ಲಿನ್ ಒಪ್ಪಿಕೊಳ್ಳುವುದು: “ನಾನು ರೂಮ್ಮೇಟ್ಗಳೊಂದಿಗೆ ವಾಸಿಸಲು ಬಂದಾಗ ತುಂಬ ಸ್ವವಿಚಾರಾಸಕ್ತಳಾಗಿದ್ದೆ. ಆದರೆ ಅಷ್ಟು ಕಟ್ಟುನಿಟ್ಟಾಗಿ ಇರಬಾರದು ಎಂಬುದನ್ನು ನಾನೀಗ ಕಲಿತಿದ್ದೇನೆ. ಯಾರೋ ಒಬ್ಬರು ನನಗಿಂತ ಭಿನ್ನವಾದ ರೀತಿಯಲ್ಲಿ ವರ್ತಿಸುತ್ತಾರೆ ಎಂದಮಾತ್ರಕ್ಕೆ ಅವರು ತಪ್ಪನ್ನು ಮಾಡುತ್ತಿದ್ದಾರೆ ಎಂದರ್ಥವಲ್ಲ ಎಂಬುದನ್ನು ನಾನೀಗ ಗ್ರಹಿಸಿದ್ದೇನೆ.”
ಒಬ್ಬ ರೂಮ್ಮೇಟ್ಳೊಂದಿಗೆ ಹೊಂದಿಕೊಂಡುಹೋಗುವುದು, ಪ್ರಯತ್ನ ಹಾಗೂ ತ್ಯಾಗವನ್ನು ಅಗತ್ಯಪಡಿಸುತ್ತದೆ ಎಂಬುದು ನಿಜ. ಆದರೆ ಬೈಬಲ್ ಮೂಲತತ್ತ್ವಗಳನ್ನು ಅನ್ವಯಿಸಲು ನೀವು ಕಷ್ಟಪಟ್ಟು ಪ್ರಯತ್ನಿಸುವಲ್ಲಿ, ನೀವು ಶಾಂತಿಯಿಂದ ಒಟ್ಟಿಗೆ ಜೀವಿಸುವುದಕ್ಕಿಂತಲೂ ಹೆಚ್ಚನ್ನು ಮಾಡಸಾಧ್ಯವಿದೆ; ಆಗ, ಒಬ್ಬ ರೂಮ್ಮೇಟ್ ಇರುವುದು ನಿಜವಾಗಿಯೂ ಆನಂದದಾಯಕವಾಗಿದೆ ಎಂದು ನಿಮಗೇ ಅನಿಸಬಹುದು.(g02 6/22)
[ಪಾದಟಿಪ್ಪಣಿಗಳು]
a ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.
b ನಮ್ಮ ಜುಲೈ - ಸೆಪ್ಟೆಂಬರ್, 2002ನೆಯ ಸಂಚಿಕೆಯಲ್ಲಿ ಕಂಡುಬರುವ “ನನ್ನ ರೂಮ್ಮೇಟ್ನೊಂದಿಗೆ ಜೀವಿಸುವುದು ಅಷ್ಟು ಕಷ್ಟಕರವೇಕೆ?” ಎಂಬ ಲೇಖನವನ್ನು ನೋಡಿರಿ.
[ಪುಟ 26ರಲ್ಲಿರುವ ಚಿತ್ರ]
ನಿಮ್ಮದಲ್ಲದ ವಸ್ತುವನ್ನು ಅನುಮತಿಯಿಲ್ಲದೆ ಉಪಯೋಗಿಸುವುದು ಒತ್ತಡವನ್ನು ಉಂಟುಮಾಡಬಲ್ಲದು
[ಪುಟ 27ರಲ್ಲಿರುವ ಚಿತ್ರ]
ಪರಸ್ಪರ ಪರಿಗಣನೆಯನ್ನು ತೋರಿಸಿರಿ