ಅಧ್ಯಾಯ 4
ಅವರು ತಮ್ಮ ಬೀಡನ್ನು ಕಳೆದುಕೊಂಡದ್ದಕ್ಕೆ ಕಾರಣ
ಈಗ ಏನು ಸಂಭವಿಸುತ್ತಾ ಇದೆ ನೋಡಿರಿ. ಆದಾಮಹವ್ವರನ್ನು ಆ ಸುಂದರ ಏದೆನ್ ತೋಟದಿಂದ ಹೊರಗಟ್ಟಲಾಗುತ್ತಿದೆ. ಯಾಕೆಂದು ನಿಮಗೆ ಗೊತ್ತೋ?
ಅದು ಯಾಕಂದರೆ ಅವರು ಯಾವುದೋ ಒಂದು ಕೆಟ್ಟ ಸಂಗತಿಯನ್ನು ಮಾಡಿದರು. ಆದುದರಿಂದ ಯೆಹೋವನು ಅವರನ್ನು ಶಿಕ್ಷಿಸುತ್ತಿದ್ದಾನೆ. ಆದಾಮ ಮತ್ತು ಹವ್ವ ಮಾಡಿದ ಆ ಕೆಟ್ಟ ಸಂಗತಿ ಏನೆಂದು ನಿಮಗೆ ತಿಳಿದಿದೆಯೆ?
ದೇವರು ಮಾಡಕೂಡದೆಂದು ಹೇಳಿದ ಒಂದು ವಿಷಯವನ್ನು ಅವರು ಮಾಡಿದರು. ತೋಟದ ಎಲ್ಲ ಮರಗಳಿಂದ ಹಣ್ಣುಗಳನ್ನು ತಿನ್ನಬಹುದೆಂದು ದೇವರು ಅವರಿಗೆ ಹೇಳಿದನು. ಆದರೆ ಒಂದು ಮರದ ಹಣ್ಣನ್ನು ಅವರು ತಿನ್ನಬಾರದೆಂದು, ತಿಂದರೆ ಸಾಯುವಿರೆಂದು ದೇವರಂದನು. ಆ ಮರ ಆತನಿಗೆ ಸೇರಿದ್ದಾಗಿತ್ತು. ಮತ್ತು ಬೇರೊಬ್ಬರಿಗೆ ಸೇರಿರುವ ಒಂದು ವಸ್ತುವನ್ನು ತೆಗೆದುಕೊಳ್ಳುವುದು ತಪ್ಪೆಂದು ನಮಗೆ ತಿಳಿದದೆ, ಅಲ್ಲವೇ? ಆದಾಮಹವ್ವರು ದೇವರ ಮಾತಿಗೆ ವಿಧೇಯರಾದರೋ? ನಾವು ನೋಡೋಣ.
ಒಂದು ದಿನ ಹವ್ವಳು ತೋಟದಲ್ಲಿ ಒಬ್ಬಳೇ ಇದ್ದಾಗ ಒಂದು ಹಾವು ಅವಳೊಂದಿಗೆ ಮಾತಾಡಿತು. ಯಾವ ಮರದ ಹಣ್ಣನ್ನು ತಿನ್ನಬಾರದೆಂದು ದೇವರು ಅವರಿಗೆ ಹೇಳಿದ್ದನೋ ಆ ಮರದ ಹಣ್ಣನ್ನು ತಿನ್ನುವಂತೆ ಅದು ಹವ್ವಳಿಗೆ ಹೇಳಿತು. ಆದರೆ ಸ್ವಲ್ಪ ಯೋಚಿಸಿ, ಯೆಹೋವನು ಹಾವುಗಳನ್ನು ಉಂಟುಮಾಡಿದಾಗ ಅವುಗಳು ಮಾತಾಡುವಂಥ ರೀತಿಯಲ್ಲಿ ಉಂಟುಮಾಡಲಿಲ್ಲ. ಅಂದರೆ ಬೇರೆ ಯಾವನೋ ಒಬ್ಬನು ಹಾವು ಮಾತಾಡುವಂತೆ ಮಾಡುತ್ತಿದ್ದನು. ಅವನು ಯಾರು?
ಅವನು ಆದಾಮನಾಗಿರಲಿಲ್ಲ. ಆದುದರಿಂದ ಅವನು ಯೆಹೋವನು ಭೂಮಿಯನ್ನು ಉಂಟುಮಾಡುವುದಕ್ಕೆ ಬಹಳ ಮುಂಚೆ ನಿರ್ಮಿಸಿದ್ದ ವ್ಯಕ್ತಿಗಳಲ್ಲಿ ಒಬ್ಬನಾಗಿರಲೇಬೇಕು. ಆ ವ್ಯಕ್ತಿಗಳು ದೇವದೂತರಾಗಿದ್ದಾರೆ. ನಾವು ಅವರನ್ನು ನೋಡಲಾರೆವು. ಅವರಲ್ಲಿ ಒಬ್ಬ ದೇವದೂತನು ತುಂಬಾ ದುರಹಂಕಾರಿಯಾಗಿದ್ದನು. ತಾನು ದೇವರಂತೆ ಒಬ್ಬ ಅಧಿಪತಿಯಾಗಬೇಕೆಂದು ಅವನು ಯೋಚಿಸತೊಡಗಿದನು. ಜನರು ಯೆಹೋವನಿಗೆ ವಿಧೇಯರಾಗುವ ಬದಲಿಗೆ ತನಗೆ ವಿಧೇಯರಾಗಬೇಕೆಂದು ಅವನು ಬಯಸಿದನು. ಹಾವು ಮಾತಾಡುವಂತೆ ಮಾಡಿದ ದೇವದೂತನು ಅವನೇ ಆಗಿದ್ದನು.
ಈ ದೇವದೂತನು ಹವ್ವಳನ್ನು ಮೋಸಗೊಳಿಸಿದನು. ಹಣ್ಣನ್ನು ತಿಂದರೆ ಅವಳು ತುಂಬಾ ವಿವೇಕಿಯಾಗುವಳು ಅಂದರೆ ದೇವರಂತೆ ಆಗುವಳೆಂದು ಅವನು ಹೇಳಿದನು. ಅದನ್ನು ನಂಬಿ ಆಕೆ ಹಣ್ಣನ್ನು ತಿಂದಳು ಮತ್ತು ಆದಾಮನು ಸಹ ತಿಂದನು. ಹೀಗೆ ಆದಾಮಹವ್ವರು ದೇವರಿಗೆ ಅವಿಧೇಯರಾದರು. ಆದುದರಿಂದ ಅವರು ತಮ್ಮ ಸುಂದರವಾದ ಉದ್ಯಾನ ಬೀಡನ್ನು ಕಳಕೊಂಡರು.
ಆದರೆ ಖಂಡಿತವಾಗಿಯೂ ಮುಂದೊಂದು ದಿನ ದೇವರು ಇಡೀ ಭೂಮಿಯನ್ನು ಏದೆನ್ ತೋಟದಷ್ಟು ಸುಂದರವಾಗಿ ಮಾಡುವನು. ಹಾಗೆ ಸುಂದರ ತೋಟವಾಗಿ ಮಾಡುವುದರಲ್ಲಿ ನೀವು ಹೇಗೆ ಜೊತೆಗೂಡಬಹುದು ಎಂಬದನ್ನು ಆಮೇಲೆ ನಾವು ಕಲಿಯುವೆವು. ಆದರೆ ಈಗ, ಆದಾಮಹವ್ವರಿಗೆ ಏನು ಸಂಭವಿಸಿತೆಂದು ನೋಡೋಣ.