ಅಧ್ಯಾಯ 16
ಇಸಾಕನು ಒಳ್ಳೆಯ ಪತ್ನಿಯನ್ನು ಪಡೆಯುತ್ತಾನೆ
ಈ ಚಿತ್ರದಲ್ಲಿರುವ ಸ್ತ್ರೀ ಯಾರೆಂದು ನಿಮಗೆ ಗೊತ್ತಿದೆಯೇ? ಅವಳ ಹೆಸರು ರೆಬೆಕ್ಕ. ಅವಳು ಇಸಾಕನನ್ನು ಭೇಟಿಯಾಗಲು ಬರುತ್ತಿದ್ದಾಳೆ. ಅವಳು ಅವನ ಪತ್ನಿಯಾಗಲಿರುವಳು. ಇದೆಲ್ಲಾ ಹೇಗೆ ನಡೆಯಿತು? ನೋಡೋಣ.
ಇಸಾಕನ ತಂದೆ ಅಬ್ರಹಾಮನು ತನ್ನ ಮಗನಿಗೆ ಒಳ್ಳೆಯ ಪತ್ನಿ ಸಿಗಬೇಕೆಂದು ಬಯಸಿದನು. ಇಸಾಕನು ಕಾನಾನ್ನ ಸ್ತ್ರೀಯೊಬ್ಬಳನ್ನು ಮದುವೆಯಾಗುವುದು ಅವನಿಗೆ ಇಷ್ಟವಿರಲಿಲ್ಲ. ಯಾಕೆಂದರೆ ಈ ಜನರು ಸುಳ್ಳು ದೇವರುಗಳನ್ನು ಆರಾಧಿಸುತ್ತಿದ್ದರು. ಆದುದರಿಂದ ಅಬ್ರಹಾಮನು ತನ್ನ ಸೇವಕನನ್ನು ಕರೆದು, ‘ನೀನು ನನ್ನ ಸಂಬಂಧಿಕರು ಜೀವಿಸುತ್ತಿರುವ ಖಾರಾನ್ಗೆ ಹೋಗಿ ನನ್ನ ಮಗನಾದ ಇಸಾಕನಿಗೆ ಒಂದು ಹೆಣ್ಣನ್ನು ನೋಡಿ ಕರೆದುಕೊಂಡು ಬಾ’ ಎಂದು ಹೇಳಿದನು.
ಆ ಕೂಡಲೆ ಅಬ್ರಹಾಮನ ಸೇವಕನು ಹತ್ತು ಒಂಟೆಗಳೊಂದಿಗೆ ದೂರದ ಪ್ರಯಾಣವನ್ನು ಕೈಕೊಂಡನು. ಅಬ್ರಹಾಮನ ಸಂಬಂಧಿಕರು ಎಲ್ಲಿ ವಾಸಿಸುತ್ತಿದ್ದರೋ ಆ ಸ್ಥಳದ ಹತ್ತಿರವಿರುವ ಒಂದು ಬಾವಿಯ ಬಳಿಗೆ ಅವನು ಬಂದನು. ಆಗ ಸಂಜೆಯಾಗಿತ್ತು. ಪಟ್ಟಣದ ಸ್ತ್ರೀಯರು ಬಾವಿಯಿಂದ ನೀರನ್ನು ತೆಗೆದುಕೊಂಡು ಹೋಗಲು ಬರುತ್ತಿದ್ದರು. ಆದುದರಿಂದ ಅಬ್ರಹಾಮನ ಸೇವಕನು ಯೆಹೋವನಿಗೆ ಒಂದು ಪ್ರಾರ್ಥನೆಯನ್ನು ಮಾಡಿದನು: ‘ನನಗಾಗಿಯೂ ಒಂಟೆಗಳಿಗಾಗಿಯೂ ನೀರನ್ನು ಕೊಡುವ ಸ್ತ್ರೀಯೇ ನೀನು ಇಸಾಕನಿಗಾಗಿ ಆರಿಸಿರುವ ಪತ್ನಿಯಾಗಿರಲಿ.’
ಸ್ವಲ್ಪ ಸಮಯದಲ್ಲೇ ರೆಬೆಕ್ಕ ನೀರನ್ನು ಸೇದಲು ಬಂದಳು. ಆ ಸೇವಕನು ಕುಡಿಯಲು ನೀರನ್ನು ಕೇಳಿಕೊಂಡಾಗ ಆಕೆ ಕೊಟ್ಟಳು. ಅನಂತರ ಅವಳು ಬಾಯಾರಿದ್ದ ಒಂಟೆಗಳಿಗೂ ಸಾಕಾಗುವಷ್ಟು ನೀರನ್ನು ತಂದುಕೊಟ್ಟಳು. ಅದು ಕಷ್ಟದ ಕೆಲಸವಾಗಿತ್ತು. ಯಾಕೆಂದರೆ ಒಂಟೆಗಳು ತುಂಬಾ ನೀರು ಕುಡಿಯುತ್ತವೆ.
ರೆಬೆಕ್ಕಳು ಒಂಟೆಗಳಿಗೆ ನೀರು ಕೊಟ್ಟು ಮುಗಿಸಿದಾಗ, ಅಬ್ರಹಾಮನ ಸೇವಕನು ಅವಳ ತಂದೆಯ ಹೆಸರೇನೆಂದು ಕೇಳಿದನು. ಅವರ ಮನೆಯಲ್ಲಿ ಒಂದು ರಾತ್ರಿ ತಂಗಬಹುದೋ ಎಂದೂ ಅವನು ಕೇಳಿದನು. ಅವಳಂದದ್ದು: ‘ನನ್ನ ತಂದೆ ಬೆತೂವೇಲನು, ಮತ್ತು ನೀನು ನಮ್ಮೊಂದಿಗೆ ತಂಗಲು ಸ್ಥಳವಿದೆ.’ ಬೆತೂವೇಲನು ಅಬ್ರಹಾಮನ ಸಹೋದರನಾದ ನಾಹೋರನ ಮಗನು ಎಂದು ಅಬ್ರಹಾಮನ ಸೇವಕನಿಗೆ ತಿಳಿದಿತ್ತು. ಆದುದರಿಂದ ತನ್ನನ್ನು ಅಬ್ರಹಾಮನ ಸಂಬಂಧಿಕರ ಬಳಿಗೆ ಬರುವಂತೆ ಮಾಡಿದಕ್ಕಾಗಿ ಅವನು ಮೊಣಕಾಲೂರಿ ಯೆಹೋವನಿಗೆ ಕೃತಜ್ಞತೆ ಹೇಳಿದನು.
ಆ ರಾತ್ರಿ ಅಬ್ರಹಾಮನ ಸೇವಕನು ತಾನು ಬಂದ ಕಾರಣವನ್ನು ಬೆತೂವೇಲನಿಗೆ ಮತ್ತು ರೆಬೆಕ್ಕಳ ಅಣ್ಣನಾದ ಲಾಬಾನನಿಗೆ ತಿಳಿಸಿದನು. ರೆಬೆಕ್ಕಳು ಅವನೊಂದಿಗೆ ಹೋಗಿ ಇಸಾಕನನ್ನು ಮದುವೆಯಾಗಬಹುದೆಂದು ಅವರಿಬ್ಬರೂ ಒಪ್ಪಿದರು. ರೆಬೆಕ್ಕಳನ್ನು ಕೇಳಿದಾಗ ಅವಳೇನು ಹೇಳಿದಳು? ಅವಳು ‘ಆಯಿತು’ ಎಂದಳು. ಅವನೊಂದಿಗೆ ಹೋಗಲು ಒಪ್ಪಿದಳು. ಆದುದರಿಂದ ಮರುದಿನವೇ ಅವರು ಒಂಟೆಗಳ ಮೇಲೆ ಕೂತುಕೊಂಡು ಕಾನಾನಿಗೆ ಪ್ರಯಾಣವನ್ನು ಆರಂಭಿಸಿದರು.
ಅವರು ಕಾನಾನಿಗೆ ಬಂದಾಗ ಸಂಜೆಯಾಗಿತ್ತು. ಆಗ ರೆಬೆಕ್ಕಳು, ಹೊಲದಲ್ಲಿ ನಡೆದುಬರುತ್ತಿದ್ದ ಒಬ್ಬ ಪುರುಷನನ್ನು ಕಂಡಳು. ಅವನು ಇಸಾಕನು. ರೆಬೆಕ್ಕಳನ್ನು ಕಂಡು ಅವನು ಸಂತೋಷಪಟ್ಟನು. ಅವನ ತಾಯಿ ಸಾರಳು ಕೇವಲ ಮೂರು ವರ್ಷಗಳ ಹಿಂದೆ ತೀರಿಕೊಂಡಿದ್ದಳು. ಮತ್ತು ಅವನು ಇನ್ನೂ ಅದರ ಕುರಿತು ದುಃಖಪಡುತ್ತಿದ್ದನು. ಆದರೆ ಈಗ ಇಸಾಕನು ರೆಬೆಕ್ಕಳನ್ನು ತುಂಬಾ ಪ್ರೀತಿಸತೊಡಗಿ, ಪುನಃ ಸಂತೋಷವುಳ್ಳವನಾದನು.