ಅಧ್ಯಾಯ 63
ಇನ್ನೂ ಹೆಚ್ಚಿನ ತಿದ್ದುಪಾಟಿನ ಬುದ್ಧಿವಾದ
ಯೇಸು ಮತ್ತು ಅವನ ಅಪೊಸ್ತಲರು ಕಪೆರ್ನೌಮಿನ ಮನೆಯಲ್ಲಿ ಇರುವಾಗಲೇ, ತಮ್ಮಲ್ಲಿ ದೊಡ್ಡವನು ಯಾರು ಎಂಬ ವಿಷಯವಲ್ಲದೆ ಅಪೊಸ್ತಲರ ವಾದವಿಷಯಕ್ಕೆ ಬೇರೊಂದು ಸಂಗತಿಯೂ ಇತ್ತು. ಈ ಘಟನೆಯು ಕೂಡಾ ಅವರು ಕಪೆರ್ನೌಮಿಗೆ ಹಿಂತೆರಳಿದಾಗ ಪ್ರಾಯಶಃ ಯೇಸುವು ಸ್ವತಃ ಹಾಜರಿರದ ಸಮಯದಲ್ಲಿ ನಡೆದಿರಬಹುದು. ಅಪೊಸ್ತಲ ಯೋಹಾನನು ವರದಿ ಮಾಡಿದ್ದು: “ಯಾವನೋ ಒಬ್ಬನು ನಿನ್ನ ಹೆಸರನ್ನು ಹೇಳಿ ದೆವ್ವ ಬಿಡಿಸುವದನ್ನು ನಾವು ಕಂಡು ಅವನು ನಮಗೆ ಸೇರಿದವನಲ್ಲವಾದ್ದರಿಂದ ಅವನಿಗೆ ಅಡ್ಡಿಮಾಡಿದೆವು.”
ಅಪೊಸ್ತಲರು ಮಾತ್ರ ವಿಶಿಷ್ಟವಾಗಿ, ಗುಣಪಡಿಸುವ ತಂಡದ ಬಿರುದುಹೊತ್ತವರು ಎಂದು ಯೋಹಾನನು ಎಣಿಸಿದ್ದಿರಬೇಕೆಂದು ವಿದಿತವಾಗುತ್ತದೆ. ಆದುದರಿಂದ ಅವರ ತಂಡದ ಒಂದು ಭಾಗವಾಗಿ ಆ ಮನುಷ್ಯನು ಇಲ್ಲದಿದ್ದರಿಂದ ಅವನು ಮಾಡುವ ಮಹತ್ಕಾರ್ಯವು ಅಯೋಗ್ಯವಾದದ್ದು ಎಂದವನು ಭಾವಿಸುತ್ತಾನೆ.
ಆದಾಗ್ಯೂ, ಯೇಸುವು ಬುದ್ಧಿ ಹೇಳುವದು: “ಅವನಿಗೆ ಅಡ್ಡಿಮಾಡಬೇಡಿರಿ; ನನ್ನ ಹೆಸರಿನ ಮೇಲೆ ಮಹತ್ತನ್ನು ಮಾಡಿ ಏಕಾಏಕಿ ನನ್ನನ್ನು ದೂಷಿಸುವವನು ಒಬ್ಬನೂ ಇಲ್ಲ. ನಮ್ಮನ್ನು ಎದುರಿಸದವನು ನಮ್ಮ ಪಕ್ಷದವನೇ. ನೀವು ಕ್ರಿಸ್ತನವರೆಂದು ನಿಮಗೆ ಯಾವನಾದರೂ ಒಂದು ತಂಬಿಗೆ ನೀರನ್ನು ಕುಡಿಯುವದಕ್ಕೆ ಕೊಟ್ಟರೆ ಬರತಕ್ಕ ಪ್ರತಿಫಲವು ಅವನಿಗೆ ತಪ್ಪುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”
ಈ ಮನುಷ್ಯನು ಯೇಸುವಿನ ಪಕ್ಷದಲ್ಲಿರಲು ಅವನನ್ನು ದೈಹಿಕವಾಗಿ ಹಿಂಬಾಲಿಸಬೇಕಾದ ಆವಶ್ಯಕತೆ ಇರಲಿಲ್ಲ. ಕ್ರೈಸ್ತ ಸಭೆಯ ರಚನೆಯು ಈ ತನಕ ಆಗಿರಲಿಲ್ಲ, ಆದುದರಿಂದ ಅವನು ಅವರ ಗುಂಪಿನ ಒಂದು ಭಾಗವಾಗಿಲ್ಲ ಎಂಬ ಕಾರಣಮಾತ್ರಕ್ಕೆ ಅವನೊಂದು ಪ್ರತ್ಯೇಕ ಸಭೆಯವನಾಗುವದಿಲ್ಲ. ಈ ಮನುಷ್ಯನಿಗೆ ಯೇಸುವಿನ ಹೆಸರಿನ ಮೇಲೆ ನಿಜವಾದ ನಂಬಿಕೆಯಿತ್ತು ಮತ್ತು ಆದಕಾರಣ ದೆವ್ವಗಳನ್ನು ಬಿಡಿಸುವದರಲ್ಲಿ ಅವನು ಯಶಸ್ವಿಯಾಗಿದ್ದನು. ಒಂದು ಬಹುಮಾನವನ್ನು ಪಡೆಯಲು ಯೋಗ್ಯನಾಗುತ್ತಾನೆ ಎಂದು ಯೇಸು ಹೇಳಿದಂಥ ಒಂದು ಮೆಚ್ಚಿಗೆಯ ವಿಷಯವೊಂದನ್ನು ಅವನು ಮಾಡುತ್ತಿದ್ದನು. ಇದನ್ನು ಮಾಡಿದ್ದರಿಂದ, ಅವನು ತನ್ನ ಬಹುಮಾನವನ್ನು ಕಳಕೊಳ್ಳುವದಿಲ್ಲವೆಂದು ಯೇಸುವು ತೋರಿಸುತ್ತಾನೆ.
ಆದರೆ ಅಪೊಸ್ತಲರ ಮಾತುಗಳಿಂದ ಮತ್ತು ಕೃತ್ಯಗಳಿಂದ ಆ ಮನುಷ್ಯನು ಎಡವಿಬಿದ್ದರೆ ಆಗೇನು? ಇದು ಅತಿ ಗಂಭೀರವಾದದ್ದಾಗಿದೆ! ಯೇಸುವು ಅವಲೋಕಿಸಿದ್ದು: “ನಂಬುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಅಡ್ಡಿಯಾದರೆ ಅಂಥವನ ಕೊರಳಿಗೆ ಬೀಸುವ ಕಲ್ಲುಕಟ್ಟಿ ಅವನನ್ನು ಸಮುದ್ರದಲ್ಲಿ ಹಾಕಿದರೂ ಅವನಿಗೆ ಲೇಸು.”
ಅವರ ಎಡವಿಬೀಳುವಿಕೆಗೆ ಕಾರಣವಾಗುವ ಒಂದು ಕೈ, ಕಾಲು, ಇಲ್ಲವೆ ಕಣ್ಣಿನಂತಹ ನೆಚ್ಚಿನ ಯಾವುದೇ ವಿಷಯವನ್ನು ತಮ್ಮ ಜೀವಿತಗಳಿಂದ ಅವನ ಹಿಂಬಾಲಕರು ತೆಗೆದುಹಾಕತಕ್ಕದ್ದು ಎಂದು ಯೇಸುವು ಹೇಳುತ್ತಾನೆ. ಇಂತಹ ನೆಚ್ಚಿನ ವಿಷಯಗಳು ಇದ್ದು ನಿತ್ಯ ನಾಶನವನ್ನು ಸೂಚಿಸುವ ಗೆಹೆನ್ನಾಕ್ಕೆ (ಯೆರೂಸಲೇಮಿನ ಸಮೀಪದ ಉರಿಯುತ್ತಿರುವ ಕಸದ ಕೊಂಪೆ) ಹಾಕಿಸಿಕೊಳ್ಳುವದಕ್ಕಿಂತ, ಇವುಗಳಿಲ್ಲದೆ ದೇವರ ರಾಜ್ಯಕ್ಕೆ ಪ್ರವೇಶಿಸುವದು ಉತ್ತಮ.
ಯೇಸುವು ಹೀಗೆ ಸಹ ಎಚ್ಚರಿಸಿದನು: “ಈ ಚಿಕ್ಕವರಲ್ಲಿ ಒಬ್ಬನನ್ನಾದರೂ ತಾತ್ಸಾರ ಮಾಡಬಾರದು ನೋಡಿರಿ; ಪರಲೋಕದಲ್ಲಿ ಅವರ ದೇವದೂತರು ಪರಲೋಕದಲ್ಲಿರುವ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಲಿದ್ದಾರೆ ಎಂದು ನಾನು ನಿಮಗೆ ಹೇಳುತ್ತೇನೆ.” ತದನಂತರ ಅವನು ಈ “ಚಿಕ್ಕವರ” ಅಮೂಲ್ಯತೆಯನ್ನು ಉದಾಹರಿಸುತ್ತಾ, ನೂರು ಕುರಿಗಳಿರುವ ಒಬ್ಬ ಮನುಷ್ಯನ ಒಂದು ಕುರಿ ತಪ್ಪಿಸಿಕೊಳ್ಳುವದನ್ನು ತಿಳಿಸುತ್ತಾನೆ. ಕಳಕೊಂಡ ಒಂದನ್ನು ಹುಡುಕಲಿಕ್ಕಾಗಿ, ಆ ಮನುಷ್ಯನು ತನ್ನ 99 ಕುರಿಗಳನ್ನು ಬಿಟ್ಟು ಹೋಗುತ್ತಾನೆ ಮತ್ತು ಅದನ್ನು ಕಂಡುಕೊಂಡಾಗ ಇರುವ 99 ಕುರಿಗಳಿಗಿಂತಲೂ ಆ ಒಂದಕ್ಕೋಸ್ಕರ ಹೆಚ್ಚಾಗಿ ಸಂತೋಷಪಡುವನು. “ಹಾಗೆಯೇ” ಯೇಸುವು ಸಮಾಪ್ತಿಗೊಳಿಸುವದು: “ಈ ಚಿಕ್ಕವರಲ್ಲಿ ಒಬ್ಬನಾದರೂ ಕೆಟ್ಟುಹೋಗುವದು ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತವಲ್ಲ.”
ಅಪೊಸ್ತಲರೊಳಗೆ ನಡೆದ ತರ್ಕವನ್ನು ಮನಸ್ಸಿನಲ್ಲಿಟ್ಟವನಾಗಿ, ಪ್ರಾಯಶಃ ಯೇಸುವು ಒತ್ತಾಯಿಸುವದು: “ನಿಮ್ಮೊಳಗೆ ಉಪ್ಪು ಇರಲಿ, ಒಬ್ಬರಿಗೊಬ್ಬರು ಸಮಾಧಾನದಿಂದಿರಿ.” ಸಪ್ಪೆಯಾದ ಆಹಾರವನ್ನು ಉಪ್ಪಿನ ಮೂಲಕ ಹೆಚ್ಚು ರುಚಿಕರವಾಗಿ ಮಾಡಲಾಗುತ್ತದೆ. ಈ ರೀತಿಯಲ್ಲಿ, ಸಾಂಕೇತಿಕ ಉಪ್ಪು, ಒಬ್ಬನು ಹೇಳಿದ್ದನ್ನು ಸ್ವೀಕರಿಸಲು ಸುಲಭವನ್ನಾಗಿ ಮಾಡುತ್ತದೆ. ಅಂಥಾ ಉಪ್ಪು ಇರುವಲ್ಲಿ ಸಮಾಧಾನವನ್ನು ಕಾಪಾಡಲು ಸಹಾಯವಾಗುತ್ತದೆ.
ಆದರೆ ಮಾನವ ಅಪರಿಪೂರ್ಣತೆಯ ಕಾರಣದಿಂದ, ಕೆಲವೊಮ್ಮೆ ಗಂಭೀರವಾದ ವಾಗ್ವಾದಗಳು ಸಂಭವಿಸುತ್ತವೆ. ಅವುಗಳನ್ನು ವ್ಯವಹರಿಸುವ ಮಾರ್ಗದರ್ಶಕಗಳನ್ನು ಕೂಡಾ ಯೇಸುವು ಒದಗಿಸುತ್ತಾನೆ. “ನಿನ್ನ ಸಹೋದರನು ತಪ್ಪು ಮಾಡಿದರೆ, ನೀನು ಹೋಗಿ ನೀನೂ ಅವನೂ ಇಬ್ಬರೇ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು. ಅವನು ನಿನ್ನ ಮಾತನ್ನು ಕೇಳಿದರೆ ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ.” ಅವನು ಕೇಳದಿದ್ದರೆ, ಯೇಸು ಸಲಹೆಯನ್ನೀಯುವದು: “ಎರಡು ಮೂರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಾಪನೆಯಾಗುವ ಹಾಗೆ ಇನ್ನೂ ಒಬ್ಬಿಬ್ಬರನ್ನು ನಿನ್ನ ಸಂಗಡ ಕರಕೊಂಡು ಹೋಗು.”
ಕಟ್ಟಕಡೆಯ ಒಂದು ಮಾರ್ಗವಾಗಿ ಮಾತ್ರ, ಯೇಸುವು ಹೇಳಿದಂತೆ, ವಿಷಯವನ್ನು “ಸಭೆಗೆ” ಅಂದರೆ, ನ್ಯಾಯವಿಧಾಯಕ ನಿರ್ಣಯವನ್ನು ಕೊಡಸಾಧ್ಯವಿರುವ ಸಭೆಯ ಜವಾಬ್ದಾರ ಮೇಲ್ವಿಚಾರಕರ ಬಳಿಗೆ ಕೊಂಡೊಯ್ಯಬೇಕು. ಪಾಪಿಯು ಅವರ ತೀರ್ಮಾನವನ್ನು ಮಾನ್ಯ ಮಾಡದಿದ್ದರೆ, ಯೇಸುವು ಸಮಾಪ್ತಿಗೊಳಿಸುವದು: “ಅವನು ಅನ್ಯಜನಾಂಗದವನಂತೆಯೂ, ಸುಂಕವಸೂಲಿ ಮಾಡುವವನಂತೆಯೂ ಇರಲಿ.”
ಅಂಥಾ ತೀರ್ಮಾನಗಳನ್ನು ಮಾಡುವಾಗ ಮೇಲ್ವಿಚಾರಕರು, ಯೆಹೋವನ ವಾಕ್ಯದಲ್ಲಿರುವ ಅಪ್ಪಣೆಗಳನ್ನು ಬಹಳ ನಿಕಟವಾಗಿ ಪರಿಪಾಲಿಸುವ ಆವಶ್ಯಕತೆ ಇರುತ್ತದೆ. ಈ ರೀತಿ ಅವರು ಒಬ್ಬ ವ್ಯಕ್ತಿಯು ತಪ್ಪಿತಸ್ಥನೆಂದೂ, ಶಿಕ್ಷೆಗೆ ಅರ್ಹನೆಂದೂ ಕಾಣುವದಾದರೆ, ನ್ಯಾಯತೀರ್ಪು ‘ಪರಲೋಕದಲ್ಲಿ ಈಗಾಗಲೇ ಕಟ್ಟಲ್ಪಟ್ಟಿರುವದು.’ ಮತ್ತು ಅವರು “ಭೂಮಿಯಲ್ಲಿ ಬಿಚ್ಚಿರುವಾಗ” ಅಂದರೆ ಒಬ್ಬನು ನಿರಪರಾಧಿ ಎಂದು ಕಂಡುಬಂದರೆ, ಈಗಾಗಲೇ “ಪರಲೋಕದಲ್ಲಿಯೂ ಬಿಚ್ಚಿರುವದು.” ಇಂಥಾ ನ್ಯಾಯವಿಧಾಯಕ ನಿರ್ವಹಣೆಗಳಲ್ಲಿ, ಯೇಸುವು ಹೇಳುವದು, “ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿಬಂದಿರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ.” ಮತ್ತಾಯ 18:6-20; ಮಾರ್ಕ 9:38-50; ಲೂಕ 9:49-50.
▪ ಯೇಸುವಿನ ದಿನಗಳಲ್ಲಿ ಅವನ ಜತೆಯಲ್ಲಿ ಇರುವಂಥ ಆವಶ್ಯಕತೆ ಯಾಕೆ ಇರಲಿಲ್ಲ?
▪ ಚಿಕ್ಕವನೊಬ್ಬನನ್ನು ಎಡವಿಬೀಳಿಸುವ ಸಂಗತಿಯು ಎಷ್ಟು ಗಂಭೀರವಾದದ್ದು, ಮತ್ತು ಅಂತಹ ಚಿಕ್ಕವನೊಬ್ಬನ ಅಮೂಲ್ಯತೆಯನ್ನು ಯೇಸುವು ಹೇಗೆ ಉದಾಹರಿಸಿದ್ದಾನೆ?
▪ ಅವರೊಳಗೆ ಉಪ್ಪು ಇರುವದರ ಕುರಿತು ಅಪೊಸ್ತಲರಿಗೆ ಪ್ರೋತ್ಸಾಹಿಸಲು ಪ್ರಾಯಶಃ ಯೇಸುವನ್ನು ಪ್ರಚೋದಿಸಿದ್ದು ಯಾವುದಾಗಿರಬಹುದು?
▪ ‘ಕಟ್ಟುವದು’ ಮತ್ತು ‘ಬಿಚ್ಚುವದು’ ಇದರಲ್ಲಿರುವ ವೈಶಿಷ್ಟತೆಯೇನು?