ಅಧ್ಯಾಯ 71
ಫರಿಸಾಯರ ಹಟಮಾರಿತನದ ಅಪನಂಬಿಕೆ
ಒಮ್ಮೆ ಕುರುಡನಾಗಿದ್ದ ಮನುಷ್ಯನ ತಂದೆತಾಯಿಗಳು, ಫರಿಸಾಯರ ಮುಂದೆ ತಮ್ಮನ್ನು ಕರೆದಿದ್ದಾರೆ ಎಂದಾಗ ಭಯಭೀತರಾದರು. ಯಾರಾದರೂ ಯೇಸುವಿನ ಮೇಲೆ ವಿಶ್ವಾಸವನ್ನು ವ್ಯಕ್ತ ಪಡಿಸಿದರೆ ಅವನನ್ನು ಯೆಹೂದಿ ಸಭಾಮಂದಿರದಿಂದ ಬಹಿಷ್ಕಾರ ಹಾಕಬೇಕೆಂದು ಗೊತ್ತುಮಾಡಿಕೊಂಡಿರುವದು ಅವರಿಗೆ ತಿಳಿದಿತ್ತು. ಸಮಾಜದಲ್ಲಿ ಇತರ ವ್ಯಕ್ತಿಗಳೊಂದಿಗಿನ ಸಹವಾಸದ ಅಂತಹ ಬೇರ್ಪಡಿಸುವಿಕೆಯು, ವಿಶೇಷವಾಗಿ ಬಡ ಕುಟುಂಬವೊಂದರ ಮೇಲೆ ಗುರುತರವಾದ ಕಷ್ಟಗಳನ್ನು ತರಶಕ್ತವಾಗಿತ್ತು. ಆದುದರಿಂದ ಹೆತ್ತವರು ಜಾಗ್ರತೆ ವಹಿಸಿದ್ದರು.
“ಕುರುಡನಾಗಿ ಹುಟ್ಟಿದನೆಂದು ನೀವು ಹೇಳುವಂಥ ನಿಮ್ಮ ಮಗನು ಇವನೋ?,” ಫರಿಸಾಯರು ಕೇಳುತ್ತಾರೆ. “ಈಗ ಇವನಿಗೆ ಕಣ್ಣು ಹೇಗೆ ಬಂದವು?”
“ಇವನು ನಮ್ಮ ಮಗನೆಂದೂ ಕುರುಡನಾಗಿ ಹುಟ್ಟಿದನೆಂದೂ ಬಲ್ಲೆವು,” ಹೆತ್ತವರು ಸ್ಥಿರೀಕರಿಸುತ್ತಾರೆ. “ಈಗ ಹೇಗೆ ಕಣ್ಣುಬಂದವೂ ಅರಿಯೆವು; ಕಣ್ಣುಕೊಟ್ಟವರು ಯಾರೋ ಅರಿಯೆವು.” ಏನೆಲ್ಲಾ ಸಂಭವಿಸಿತ್ತೋ ಅದೆಲ್ಲವನ್ನು ಅವರ ಮಗನು ಅವರಿಗೆ ಖಂಡಿತವಾಗಿ ಹೇಳಿರಬೇಕು, ಆದರೆ ಅವರು ವಿವೇಚನೆಯಿಂದ ಹೇಳುತ್ತಾರೆ: “ಇವನನ್ನೇ ಕೇಳಿರಿ; ಪ್ರಾಯದವನಾಗಿದ್ದಾನಲ್ಲಾ; ಇವನೇ ತನ್ನ ವಿಷಯವಾಗಿ ಹೇಳುವನು.”
ಇದರಿಂದಾಗಿ, ಫರಿಸಾಯರು ಪುನಃ ಆ ಮನುಷ್ಯನನ್ನು ಕರೆಯುತ್ತಾರೆ. ಯೇಸುವಿನ ವಿರುದ್ಧ ಆಪಾದನೆಯ ರುಜುವಾತುಗಳನ್ನು ತಾವು ಸಂಗ್ರಹಿಸಿದ್ದೇವೆ ಎಂದು ಸೂಚಿಸುತ್ತಾ ಈ ಸಂದರ್ಭದಲ್ಲಿ ಅವನನ್ನು ಹೆದರಿಸಲು ಅವರು ಪ್ರಯತ್ನಿಸುತ್ತಾರೆ. “ದೇವರಿಗೆ ನೀನು ಮಾನಬರುವಂತೆ ಹೇಳು,” ಎಂದವರು ಕೇಳುತ್ತಾರೆ. “ಆ ಮನುಷ್ಯನು ಭಕ್ತಿಹೀನನೆಂದು ನಾವು ಬಲ್ಲೆವು.”
ಒಮ್ಮೆ ಕುರುಡನಾಗಿದ್ದ ಆ ಮನುಷ್ಯನು ಅವರ ಆಪಾದನೆಯನ್ನು ತೆಗಳುವದಿಲ್ಲ, ಬದಲು ಹೇಳುವದು: “ಆತನು ಭಕ್ತಿಹೀನನೋ ಏನೋ ನಾನರಿಯೆ.” ಆದರೆ ಕೂಡಿಸುವದು: “ಒಂದು ಮಾತ್ರ ಬಲ್ಲಿ, ಕುರುಡನಾಗಿದ್ದೆನು, ಈಗ ಕಣ್ಣು ಕಾಣುತ್ತವೆ.”
ಅವನ ಸಾಕ್ಷ್ಯದಲ್ಲಿ ದೋಷವನ್ನು ಕಂಡುಹುಡುಕಲು ಪ್ರಯತ್ನಿಸುತ್ತಾ, ಫರಿಸಾಯರು ಪುನಃ ಅವನಿಗೆ ಪ್ರಶ್ನಿಸುವದು: “ನಿನಗೆ ಅವನು ಏನು ಮಾಡಿದನು? ನಿನಗೆ ಹೇಗೆ ಕಣ್ಣು ಕೊಟ್ಟನು?”
“ನಿಮಗೆ ಆಗಲೇ ಹೇಳಿದೆನಲ್ಲಾ,” ಆ ಮನುಷ್ಯನು ದೂರುತ್ತಾನೆ, “ನೀವು ಕೇಳಲಿಲ್ಲ; ಯಾಕೆ ತಿರಿಗಿ ಕೇಳಬೇಕೆಂದಿದ್ದೀರಿ?” ಅವನು ವ್ಯಂಗವಾಗಿ, ಕೇಳುವದು: “ಆತನ ಶಿಷ್ಯರಾಗುವದಕ್ಕೆ ನಿಮಗೂ ಮನಸ್ಸದೆಯೋ?”
ಈ ಉತ್ತರವು ಫರಿಸಾಯರನ್ನು ಕೆರಳಿಸುತ್ತದೆ. “ನೀನು ಆ ಮನುಷ್ಯನ ಶಿಷ್ಯ,” ಅವರು ಆಪಾದಿಸುತ್ತಾರೆ, “ಆದರೆ ನಾವು ಮೋಶೆಯ ಶಿಷ್ಯರು; ಮೋಶೆಯ ಸಂಗಡ ದೇವರು ಮಾತಾಡಿದನೆಂದು ನಾವು ಬಲ್ಲೆವು; ಆದರೆ ಇವನು ಎಲ್ಲಿಯವನೋ ಅರಿಯೆವು.”
ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾ, ಈ ನಮ್ರ ಭಿಕ್ಷನು ಪ್ರತಿಕ್ರಿಯಿಸಿದ್ದು: “ಆತನು ನನಗೆ ಕಣ್ಣು ಕೊಟ್ಟರೂ ಆತನು ಎಲ್ಲಿಯವನೋ ನಿಮಗೆ ಗೊತ್ತಿಲ್ಲದೆ ಇರುವದು ಆಶ್ಟರ್ಯವಲ್ಲವೇ.” ಇದರಿಂದ ಯಾವ ಸಮಾಪ್ತಿಗೆ ಬರಬೇಕು? ಸ್ವೀಕಾರಾರ್ಹವಾದ ಸಮಾಪ್ತಿಗೆ ಭಿಕ್ಷಕನು ತೋರಿಸುತ್ತಾನೆ: “ಭಕ್ತಿಹೀನರ ಪ್ರಾರ್ಥನೆಯನ್ನು ದೇವರು ಕೇಳುವದಿಲ್ಲ; ಯಾವನು ಭಕ್ತನಾಗಿದ್ದು ಆತನ ಚಿತ್ತದಂತೆ ನಡೆಯುತ್ತಾನೋ ಅವನ ಪ್ರಾರ್ಥನೆಯನ್ನು ಕೇಳುತ್ತಾನೆಂದು ಬಲ್ಲೆವು. ಹುಟ್ಟುಕುರುಡನಿಗೆ ಯಾರಾದರೂ ಕಣ್ಣು ಕೊಟ್ಟ ಸಂಗತಿಯನ್ನು ಲೋಕಾದಿಯಿಂದ ಒಬ್ಬರೂ ಕೇಳಿದ್ದಿಲ್ಲ.” ಹೀಗೆ, ಸಮಾಪ್ತಿಯು ಸ್ಫುಟವಾಗಿ ಗೋಚರಿಸತಕ್ಕದ್ದು: “ಈತನು ದೇವರಿಂದ ಬಂದವನಲ್ಲದಿದ್ದರೆ ಏನೂ ಮಾಡಲಾರದೆ ಇರುತ್ತಿದ್ದನು.”
ಇಂಥಾ ನೇರವಾದ, ಹಾಗೂ ಸ್ಪಷ್ಟವಾದ ತರ್ಕಸರಣಿಗೆ ಫರಿಸಾಯರಿಂದ ಉತ್ತರವಿರಲಿಲ್ಲ. ಅವರು ಸತ್ಯದ ಎದುರು ಮುಖಮಾಡಿ ನಿಲ್ಲಲು ಅಶಕ್ತರಾದರು, ಆದ್ದರಿಂದ ಅವರು ಆ ಮನುಷ್ಯನನ್ನು ಹೀನೈಸಿದರು: “ನೀನು ಕೇವಲ ಪಾಪದಲ್ಲಿ ಹುಟ್ಟಿದವನು, ನಮಗೆ ಉಪದೇಶ ಮಾಡುತ್ತೀಯೋ?” ಇದಾದ ಮೇಲೆ ಆ ಮನುಷ್ಯನನ್ನು ಅವರು ಹೊರಗೆ ಹಾಕಿದರು, ಪ್ರಾಯಶಃ ಸಭಾಮಂದಿರದಿಂದ ಬಹಿಷ್ಕರಿಸಿರಬಹುದು.
ಅವರು ಅವನಿಗೆ ಮಾಡಿದ್ದನ್ನು ಯೇಸುವಿಗೆ ತಿಳಿದಾಗ, ಅವನು ಆ ಮನುಷ್ಯನನ್ನು ಕಂಡುಕೊಂಡು, ಅವನಿಗೆ ಹೇಳುವದು: “ನೀನು ಮನುಷ್ಯ ಕುಮಾರನನ್ನು ನಂಬುತ್ತೀಯೋ?”
ಅದಕ್ಕುತ್ತರವಾಗಿ ಆ ಒಮ್ಮೆ ಕುರುಡನಾಗಿದ್ದ ಭಿಕ್ಷಕನು ವಿಚಾರಿಸುವದು: “ಆತನು ಯಾರು, ಸ್ವಾಮೀ? ತಿಳಿಸಿದರೆ ಆತನನ್ನು ನಂಬುತ್ತೇನೆ.”
“ನಿನ್ನ ಸಂಗಡ ಮಾತಾಡುತ್ತಿರುವ ನಾನೇ ಅವನು,” ಯೇಸುವು ಉತ್ತರಿಸುತ್ತಾನೆ.
ಅವನು ತಕ್ಷಣವೇ ಯೇಸುವಿಗೆ ಅಡ್ಡ ಬಿದ್ದು, ಹೇಳುವದು: “ನಂಬುತ್ತೇನೆ, ಸ್ವಾಮೀ.”
ಅನಂತರ ಯೇಸುವು ವಿವರಿಸುವದು: “ನಾನು ನ್ಯಾಯತೀರ್ಪಿಗಾಗಿ ಈ ಲೋಕಕ್ಕೆ ಬಂದಿದ್ದೇನೆ; ಆ ತೀರ್ಪು ಏನಂದರೆ, ಕಣ್ಣಿಲ್ಲದವರಿಗೆ ಕಣ್ಣುಬರುವವು, ಕಣ್ಣಿದ್ದವರು ಕುರುಡರಾಗುವರು.”
ಅವನನ್ನು ಆಲಿಸುತ್ತಿದ್ದ ಫರಿಸಾಯರು ಆಗ ಕೇಳುವದು: “ನಾವೂ ಕುರುಡರೇನು?” ಅವರು ಮಾನಸಿಕವಾಗಿ ಕುರುಡರೆಂದು ಅಂಗೀಕರಿಸಿದರೆ, ಯೇಸುವನ್ನು ಅವರು ವಿರೋಧಿಸುವದಕ್ಕೆ ಅದೊಂದು ನೆವನವಾಗಿ ಇರುತ್ತಿತ್ತು. ಯೇಸುವು ಅವರಿಗೆ ಹೇಳುವದು: “ನೀವು ಕುರುಡರಾಗಿದ್ದರೆ ನಿಮಗೆ ಪಾಪವು ಇರುತ್ತಿರಲಿಲ್ಲ.” ಆದರೂ ಅವರು ಕಠಿಣಹೃದಯಿಗಳಾಗಿ, ತಾವು ಕುರುಡರಲ್ಲ ಮತ್ತು ಆತ್ಮಿಕ ಜ್ಞಾನೋದಯದ ಆವಶ್ಯವಿಲ್ಲ ಎಂದು ಪಟ್ಟು ಹಿಡಿಯುತ್ತಿದ್ದರು. ಆದುದರಿಂದ ಯೇಸುವು ಅವಲೋಕಿಸುವದು: “ನಮಗೆ ಕಣ್ಣು ಕಾಣಿಸುತ್ತವೆ ಅನ್ನುತ್ತೀರಾದ್ದರಿಂದ ನಿಮ್ಮ ಪಾಪವು ಉಳಿದದೆ.” ಯೋಹಾನ 9:19-41.
▪ ಫರಿಸಾಯರ ಮುಂದೆ ಒಮ್ಮೆ ಕುರುಡನಾಗಿದ್ದ ಮನುಷ್ಯನ ತಂದೆತಾಯಿಗಳನ್ನು ಕರೆಯಿಸಿದಾಗ, ಅವರು ಹೆದರಿದ್ದರು ಯಾಕೆ, ಮತ್ತು ಆದುದರಿಂದ ಅವರು ತಮ್ಮ ಉತ್ತರಗಳನ್ನು ಹೇಗೆ ಜಾಗ್ರತೆಯಿಂದ ಕೊಡುತ್ತಾರೆ?
▪ ಒಮ್ಮೆ ಕುರುಡನಾಗಿದ್ದ ಆ ಮನುಷ್ಯನನ್ನು ಫರಿಸಾಯರು ಹೆದರಿಸಲು ಪ್ರಯತ್ನಿಸಿದ್ದು ಹೇಗೆ?
▪ ಆ ಮನುಷ್ಯನ ಯಾವ ನ್ಯಾಯೋಚಿತ ತರ್ಕಸರಣಿಯು ಫರಿಸಾಯರನ್ನು ಸಿಟ್ಟುಗೊಳಿಸುತ್ತದೆ?
▪ ಯೇಸುವಿನ ಕಡೆಗಿನ ಅವರ ವಿರೋಧಕ್ಕೆ ಫರಿಸಾಯರಲ್ಲಿ ಯಾವುದೇ ನೆವನ ಇರಲಿಲ್ಲ ಯಾಕೆ?