ಭಾಗ 5
ಜೀವಿತಕ್ಕೆ ಒಂದು ಮಹಾ ಉದ್ದೇಶವಿದೆ
1, 2. ದೇವರು ನಮ್ಮ ಕುರಿತು ಚಿಂತಿಸುತ್ತಾನೆಂದು ನಾವು ಹೇಗೆ ಹೇಳಬಲ್ಲೆವು, ಮತ್ತು ಜೀವನದ ಪ್ರಶ್ನೆಗಳಿಗೆ ಉತ್ತರಗಳಿಗಾಗಿ ನಾವೆತ್ತ ತಿರುಗಬೇಕು?
1 ಭೂಮಿಯನ್ನು ಮತ್ತು ಅದರಲ್ಲಿ ಜೀವಿಸುವ ಪ್ರಾಣಿಗಳನ್ನು ಮಾಡಲಾಗಿರುವ ವಿಧವು, ಅವುಗಳ ಸೃಷ್ಟಿಕರ್ತನು ನಿಜವಾಗಿಯೂ ಚಿಂತೆ ಮಾಡುವ ಪ್ರೀತಿಯ ದೇವರು ಎಂದು ತೋರಿಸುತ್ತದೆ. ಮತ್ತು ಆತನ ವಾಕ್ಯವಾದ ಬೈಬಲು, ಆತನು ಚಿಂತೆ ಮಾಡುವವನೆಂದು ತೋರಿಸುತ್ತದೆ; ಅದು ನಮಗೆ ಈ ಪ್ರಶ್ನೆಗಳ ಕುರಿತು ಅತ್ಯುತ್ತಮವಾದ ಉತ್ತರಗಳನ್ನು ಕೊಡುತ್ತದೆ: ನಾವು ಇಲ್ಲಿ ಭೂಮಿಯಲ್ಲಿ ಏಕೆ ಇದ್ದೇವೆ? ಮತ್ತು, ನಾವೆಲ್ಲಿ ಹೋಗುತ್ತಿದ್ದೇವೆ?
2 ಆ ಉತ್ತರಗಳಿಗಾಗಿ ನಾವು ಬೈಬಲಿನಲ್ಲಿ ಹುಡುಕುವುದು ಅಗತ್ಯ. ದೇವರ ವಾಕ್ಯವು ಹೇಳುವುದು: “ನೀವು ಆತನನ್ನು ಹುಡುಕಿದರೆ ನಿಮಗೆ ಸಿಕ್ಕುವನು; ಆತನನ್ನು ಬಿಟ್ಟರೆ ಆತನೂ ನಿಮ್ಮನ್ನು ಬಿಟ್ಟುಬಿಡುವನು.” (2 ಪೂರ್ವಕಾಲವೃತ್ತಾಂತ 15:2) ಹಾಗಾದರೆ, ದೇವರ ವಾಕ್ಯದ ಪರೀಕ್ಷಣವು, ನಮಗಾಗಿರುವ ಆತನ ಉದ್ದೇಶದ ಕುರಿತು ಏನು ತೋರಿಸಿಕೊಡುತ್ತದೆ?
ದೇವರು ಮಾನವರನ್ನು ಸೃಷ್ಟಿಸಲು ಕಾರಣ
3. ದೇವರು ಭೂಮಿಯನ್ನೇಕೆ ಸೃಷ್ಟಿಸಿದನು?
3 ವಿಶೇಷವಾಗಿ ಮಾನವರನ್ನು ಮನಸ್ಸಿನಲ್ಲಿಟ್ಟುಕೊಂಡೇ ದೇವರು ಭೂಮಿಯನ್ನು ತಯಾರಿಸಿದನೆಂದು ಬೈಬಲು ತೋರಿಸುತ್ತದೆ. ಭೂಮಿಯ ವಿಷಯದಲ್ಲಿ, ಯೆಶಾಯ 45:18, “ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು,” ಎಂದು ಹೇಳುತ್ತದೆ. ಮತ್ತು ಜನರಿಗೆ—ಕೇವಲ ಬದುಕಲಿಕ್ಕಲ್ಲ, ಜೀವನದಲ್ಲಿ ಪೂರ್ಣವಾಗಿ ಆನಂದಿಸಲು ಬೇಕಾಗುವ ವಿಷಯಗಳನ್ನೆಲ್ಲಾ—ಭೂಮಿಯಲ್ಲಿ ಆತನು ಒದಗಿಸಿದನು.—ಆದಿಕಾಂಡ, 1 ಮತ್ತು 2 ನೆಯ ಅಧ್ಯಾಯಗಳು.
4. ದೇವರು ಪ್ರಥಮ ಮಾನವರನ್ನೇಕೆ ಸೃಷ್ಟಿಸಿದನು?
4 ತನ್ನ ವಾಕ್ಯದಲ್ಲಿ, ದೇವರು ಪ್ರಥಮ ಮಾನವರಾದ ಆದಾಮನನ್ನು ಮತ್ತು ಹವ್ವಳನ್ನು ಸೃಷ್ಟಿಸುವುದರ ಕುರಿತು ಹೇಳಿ, ಮಾನವ ಕುಟುಂಬದ ವಿಷಯದಲ್ಲಿ ತನ್ನ ಮನಸ್ಸಿನಲ್ಲಿ ಏನಿತ್ತೆಂದು ತಿಳಿಯಪಡಿಸುತ್ತಾನೆ. ಆತನಂದದ್ದು: “ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ; ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಆಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಕೀಟಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ದೊರೆತನಮಾಡಲಿ.” (ಆದಿಕಾಂಡ 1:26) ಮಾನವರಿಗೆ “ಎಲ್ಲಾ ಭೂಮಿಯ ಮೇಲೆ” ಮತ್ತು ಅದರ ಪ್ರಾಣಿ ಸೃಷ್ಟಿಯ ಮೇಲೆ ಮೇಲ್ವಿಚಾರಣೆ ಇರಬೇಕಾಗಿತ್ತು.
5. ಪ್ರಥಮ ಮಾನವರನ್ನು ಎಲ್ಲಿ ಇಡಲಾಯಿತು?
5 ದೇವರು ಮಧ್ಯ ಪೂರ್ವದಲ್ಲಿದ್ದ ಏದೆನ್ ಎಂದು ಕರೆಯಲಾಗಿದ್ದ ಪ್ರದೇಶದಲ್ಲಿ ಒಂದು ವಿಶಾಲವಾದ ವನಸದೃಶ ಉದ್ಯಾನವನ್ನು ಮಾಡಿದನು. ಬಳಿಕ ಆತನು “ಮನುಷ್ಯನನ್ನು ಕರಕೊಂಡು ಹೋಗಿ ಏದೆನ್ ತೋಟವನ್ನು ವ್ಯವಸಾಯ ಮಾಡುವದಕ್ಕೂ ಕಾಯುವದಕ್ಕೂ ಅದರಲ್ಲಿ ಇಟ್ಟನು.” ಆ ಪ್ರಥಮ ಮಾನವರಿಗೆ ತಿನ್ನಲು ಬೇಕಾಗಿದ್ದ ಸಕಲವೂ ಇದ್ದ ಪ್ರಮೋದವನವು ಅದಾಗಿತ್ತು. ಮತ್ತು ಅದರಲ್ಲಿ “ನೋಟಕ್ಕೆ ರಮ್ಯವಾಗಿಯೂ ಊಟಕ್ಕೆ ಅನುಕೂಲವಾಗಿಯೂ ಇರುವ ಎಲ್ಲಾ ತರದ ಮರಗಳು,” ಮತ್ತು ಇತರ ಸಸ್ಯಗಳು ಹಾಗೂ ಅನೇಕ ಅಭಿರುಚಿಕರವಾದ ಪ್ರಾಣಿ ಜೀವಜಾತಿಗಳೂ ಇದ್ದವು.—ಆದಿಕಾಂಡ 2:7-9, 15.
6. ಮಾನವರು ಯಾವ ಮಾನಸಿಕ ಹಾಗೂ ಶಾರೀರಿಕ ಗುಣಗಳಿಂದ ಸೃಷ್ಟಿಸಲ್ಪಟ್ಟರು?
6 ಪ್ರಥಮ ಮಾನವರು ಅಸ್ವಸ್ಥರಾಗದಂತೆ, ವೃದ್ಧರಾಗದಂತೆ ಅಥವಾ ಸಾಯದಂತೆ, ಅವರ ದೇಹಗಳು ಪರಿಪೂರ್ಣವಾಗಿ ಸೃಷ್ಟಿಸಲ್ಪಟ್ಟಿದ್ದವು. ಅವರಿಗೆ ಇಚ್ಫಾ ಸ್ವಾತಂತ್ರ್ಯದಂತಹ ಇತರ ಗುಣಗಳೂ ಕೊಡಲ್ಪಟ್ಟಿದ್ದವು. ಅವರನ್ನು ಮಾಡಿದ ವಿಧವನ್ನು ಆದಿಕಾಂಡ 1:27 ರಲ್ಲಿ ವಿವರಿಸಲಾಗಿದೆ: “ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.” ನಾವು ದೇವರ ಸ್ವರೂಪದಲ್ಲಿ ಮಾಡಲ್ಪಟ್ಟಿರುವುದರಿಂದ, ನಮಗೆ ಕೇವಲ ಶಾರೀರಿಕ ಮತ್ತು ಮಾನಸಿಕ ಗುಣಗಳು ಕೊಡಲ್ಪಟ್ಟದ್ದು ಮಾತ್ರವಲ್ಲ ನೈತಿಕ ಮತ್ತು ಅಧ್ಯಾತ್ಮಿಕ ಅಂಶಗಳೂ ಕೊಡಲ್ಪಟ್ಟವು, ಮತ್ತು ನಾವು ನಿಜವಾಗಿಯೂ ಆನಂದಿತರಾಗಿರಬೇಕಾದರೆ ಇವುಗಳು ತೃಪ್ತಿಗೊಳಿಸಲ್ಪಡಬೇಕು. ಈ ಆವಶ್ಯಕತೆಗಳನ್ನು ಹಾಗೂ ಆಹಾರ, ನೀರು ಮತ್ತು ಗಾಳಿಯ ಆವಶ್ಯಕತೆಗಳನ್ನು ಪೂರೈಸಲು ದೇವರು ಮಾಧ್ಯಮಗಳನ್ನು ಒದಗಿಸಲಿದ್ದನು. ಯೇಸು ಕ್ರಿಸ್ತನು ಹೇಳಿದಂತೆ, “ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು.”—ಮತ್ತಾಯ 4:4.
7. ಪ್ರಥಮ ಜೊತೆಗೆ ಯಾವ ಆಜ್ಞೆ ಕೊಡಲ್ಪಟ್ಟಿತು?
7 ಇದಲ್ಲದೆ, ಪ್ರಥಮ ಜೊತೆ ಏದೆನಿನಲಿದ್ಲಾಗ್ದ ದೇವರು ಅವರಿಗೆ ಅದ್ಭುತಕರವಾದ ಆಜ್ಞೆಯೊಂದನ್ನು ಕೊಟ್ಟನು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ.” (ಆದಿಕಾಂಡ 1:28) ಹೀಗೆ ಅವರು ಸಂತಾನವುಳ್ಳವರಾಗಿ ಪರಿಪೂರ್ಣ ಮಕ್ಕಳನ್ನು ಹುಟ್ಟಿಸಶಕ್ತರಾಗಲಿದ್ದರು. ಮತ್ತು ಮಾನವರ ಸಂಖ್ಯೆ ವೃದ್ಧಿಯಾದಂತೆ, ಅವರಿಗೆ ಆ ಏದೆನಿನ ಆದಿಯ ವನಸದೃಶ ಪ್ರಮೋದವನ ಪ್ರದೇಶದ ಮೇರೆಗಳನ್ನು ವಿಸ್ತರಿಸುವ ಆನಂದಕರವಾದ ಕೆಲಸವಿರುತ್ತಿತ್ತು. ಅಂತಿಮವಾಗಿ, ಪೂರ್ತಿ ಭೂಮಿಯು ಒಂದು ಪ್ರಮೋದವನವಾಗಿ ವಿಕಾಸಗೊಂಡು, ಅನಂತವಾಗಿ ಜೀವಿಸಶಕ್ತರಾಗುವ ಪರಿಪೂರ್ಣರೂ ಸಂತುಷ್ಟರೂ ಆದ ಜನರಿಂದ ನಿವಾಸಿಸಲ್ಪಡುವುದು. ಅದಕ್ಕೆಲ್ಲಾ ಒಂದು ಆರಂಭವನ್ನು ಕೊಟ್ಟ ಬಳಿಕ, ಬೈಬಲು ನಮಗೆ ತಿಳಿಸುವುದು: “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.”—ಆದಿಕಾಂಡ 1:31; ಕೀರ್ತನೆ 118:17 ಸಹ ನೋಡಿ.
8. ಮಾನವರು ಭೂಮಿಯನ್ನು ಹೇಗೆ ಪರಾಮರಿಸಬೇಕಿತ್ತು?
8 ತಾವು ವಶಪಡಿಸಿಕೊಂಡ ಭೂಮಿಯನ್ನು ಮಾನವರು ತಮ್ಮ ಪ್ರಯೋಜನಕ್ಕಾಗಿ ಉಪಯೋಗಿಸಬೇಕಾಗಿತ್ತೆಂಬುದು ವ್ಯಕ್ತ. ಆದರೆ ಇದನ್ನು ಒಂದು ಜವಾಬ್ದಾರಿಯ ರೀತಿಯಲ್ಲಿ ಮಾಡಬೇಕಾಗಿತ್ತು. ಮಾನವರು ಭೂಮಿಯ ಗೌರವಪೂರ್ಣ ಪಾರುಪತ್ಯಗಾರರಾಗಿರಬೇಕಿತ್ತು, ಅದನ್ನು ಸೂರೆ ಮಾಡುವವರಲ್ಲ. ಇಂದು ನಾವು ನೋಡುತ್ತಿರುವ ಭೂನಾಶವು ದೇವರ ಚಿತ್ತಕ್ಕೆ ವಿರುದ್ಧವಾಗಿದೆ, ಮತ್ತು ಇದರಲ್ಲಿ ಭಾಗಿಗಳಾಗುವವರು ಭೂಮಿಯ ಮೇಲಿನ ಜೀವಿತದ ಉದ್ದೇಶಕ್ಕೆ ಎದುರಾಗಿ ಹೋಗುತ್ತಿದ್ದಾರೆ. ಅದಕ್ಕೆ ಅವರು ದಂಡನೆಯನ್ನು ತೆರಲೇಬೇಕು, ಏಕೆಂದರೆ ದೇವರು, “ಲೋಕನಾಶಕರನ್ನು ನಾಶ” ಮಾಡುವನೆಂದು ಬೈಬಲು ಹೇಳುತ್ತದೆ.—ಪ್ರಕಟನೆ 11:18.
ಇನ್ನೂ ದೇವರ ಉದ್ದೇಶ
9. ದೇವರ ಉದ್ದೇಶವು ನೆರವೇರಿಸಲ್ಪಡುವುದೆಂದು ನಾವೇಕೆ ಭರವಸೆಯಿಂದಿದ್ದೇವೆ?
9 ಹೀಗೆ, ಒಂದು ಪರಿಪೂರ್ಣ ಮಾನವ ಕುಟುಂಬವು ಭೂಮಿಯ ಒಂದು ಪ್ರಮೋದವನದಲ್ಲಿ ನಿತ್ಯವಾಗಿ ಜೀವಿಸುವುದು ಆದಿಯಿಂದಲೂ ದೇವರ ಉದ್ದೇಶವಾಗಿತ್ತು. ಮತ್ತು ಆತನ ಉದ್ದೇಶವು ಇನ್ನೂ ಅದೇ ಆಗಿರುತ್ತದೆ! ತಪ್ಪದೆ, ಆ ಉದ್ದೇಶವು ನೆರವೇರಿಸಲ್ಪಡುವುದು. ಬೈಬಲು ಹೇಳುವುದು: “ಸೇನಾಧೀಶ್ವರನಾದ ಯೆಹೋವನು ಆಣೆಯಿಟ್ಟು ಹೇಳುವದೇನಂದರೆ—ನಾನು ಸಂಕಲ್ಪಿಸಿದ್ದೇ ನೆರವೇರುವದು. ಉದ್ದೇಶಿಸಿದ್ದೇ ನಿಲ್ಲುವದು, ಖಂಡಿತ.” “ನಾನು ನುಡಿದಿದ್ದೇನೆ, ಈಡೇರಿಸುವೆನು; ಆಲೋಚಿಸಿದ್ದೇನೆ, ಸಾಧಿಸುವೆನು.”—ಯೆಶಾಯ 14:24; 46:11.
10, 11. ಯೇಸು, ಪೇತ್ರ, ಮತ್ತು ಕೀರ್ತನೆಗಾರ ದಾವೀದನು ಪ್ರಮೋದವನದ ಕುರಿತು ಹೇಗೆ ಮಾತಾಡಿದರು?
10 ಭವಿಷ್ಯತ್ತಿಗಾಗಿ ನಿರೀಕ್ಷೆಯನ್ನು ಬಯಸಿದ ಒಬ್ಬ ಪುರುಷನಿಗೆ ಯೇಸು ಕ್ರಿಸ್ತನು ಮಾತಾಡಿದಾಗ, ಒಂದು ಪ್ರಮೋದವನವನ್ನು ಪುನಃಸ್ಥಾಪಿಸುವ ದೇವರ ಉದ್ದೇಶದ ಕುರಿತಾಗಿ ತಿಳಿಸಿದನು: “ನೀನು ನನ್ನ ಸಂಗಡ ಪ್ರಮೋದವನದಲ್ಲಿರುವಿ.” (ಲೂಕ 23:43, NW) ಅಪೊಸ್ತಲ ಪೇತ್ರನು ಸಹ, ಹೀಗೆ ಮುಂತಿಳಿಸಿದಾಗ ಬರಲಿರುವ ನೂತನ ಲೋಕದ ಕುರಿತು ಮಾತಾಡಿದನು: “ಆದರೆ ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ [ಸ್ವರ್ಗದಿಂದ ಆಳುವ ಒಂದು ಹೊಸ ಸರಕಾರೀ ಏರ್ಪಾಡು] ನೂತನ ಭೂಮಂಡಲವನ್ನೂ [ಒಂದು ಹೊಸ ಐಹಿಕ ಸಮಾಜ] ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.”—2 ಪೇತ್ರ 3:13.
11 ಕೀರ್ತನೆಗಾರ ದಾವೀದನು ಸಹ ಒಳಬರಲಿರುವ ನೂತನ ಲೋಕದ ವಿಷಯ ಬರೆದು ಅದು ಎಷ್ಟು ಕಾಲ ಬಾಳುವುದೆಂದು ಹೇಳಿದನು. ಅವನು ಮುಂತಿಳಿಸಿದ್ದು: “ನೀತಿವಂತರೋ ದೇಶವನ್ನು [ಭೂಮಿಯನ್ನು, NW] ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) ಈ ಕಾರಣದಿಂದಲೇ ಯೇಸು ವಾಗ್ದಾನಿಸಿದ್ದು: “ಶಾಂತರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.”—ಮತ್ತಾಯ 5:5.
12, 13. ಮಾನವಕುಲಕ್ಕಾಗಿರುವ ದೇವರ ಮಹಾ ಉದ್ದೇಶವನ್ನು ಸಾರಾಂಶವಾಗಿ ಹೇಳಿರಿ.
12 ಸಕಲ ದುಷ್ಟತನ, ಪಾತಕ, ರೋಗ, ದುಃಖ ಮತ್ತು ವೇದನೆಯಿಲ್ಲದ ಒಂದು ಪ್ರಮೋದವನ ಭೂಮಿಯಲ್ಲಿ ಅನಂತವಾಗಿ ಜೀವಿಸುವುದು ಅದೆಂಥ ವೆಭವಯುಕ್ತ ಪ್ರತೀಕ್ಷೆ! ಬೈಬಲಿನ ಅಂತಿಮ ಪುಸ್ತಕದಲ್ಲಿ ಈ ಮಹಾ ಉದ್ದೇಶವನ್ನು ದೇವರ ಭವಿಷ್ಯ ಜ್ಞಾನದ ವಾಕ್ಯವು ಸಾರಾಂಶವಾಗಿ ಹೀಗೆ ಪ್ರಕಟಿಸುತ್ತದೆ: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು, ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” ಅದು ಕೂಡಿಸುವುದು: “ಆಗ ಸಿಂಹಾಸನದ ಮೇಲೆ ಕೂತಿದ್ದವನು—ಇಗೋ, ಎಲ್ಲವನ್ನು ಹೊಸದು ಮಾಡುತ್ತೇನೆ ಅಂದನು. ಮತ್ತು ಒಬ್ಬನು ನನಗೆ—ಇದನ್ನು ಬರೆ; ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ ಎಂದು ಹೇಳಿದನು.”—ಪ್ರಕಟನೆ 21:4, 5.
13 ಹೌದು, ಒಂದು ಮಹಾ ಉದ್ದೇಶವು ದೇವರ ಮನಸ್ಸಿನಲ್ಲಿದೆ. ನೀತಿಯ ಒಂದು ನೂತನ ಲೋಕ, ಅನಂತವಾದ ಒಂದು ಪ್ರಮೋದವನವೇ ಅದು. ವಾಗ್ದಾನಿಸಿದ್ದನ್ನು ನೆರವೇರಿಸಶಕ್ತನೂ ನೆರವೇರಿಸುವವನೂ ಆದಾತನು ಅದನ್ನು ಮುಂತಿಳಿಸಿದನು, ಏಕೆಂದರೆ “ಆತನ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ.”
[Pictures on page 20, 21]
ಒಂದು ಪ್ರಮೋದವನವಾದ ಭೂಮಿಯ ಮೇಲೆ ಮಾನವರು ಶಾಶ್ವತವಾಗಿ ಜೀವಿಸಬೇಕೆಂದು ದೇವರು ಉದ್ದೇಶಿಸಿದನು. ಅದು ಇನ್ನೂ ಆತನ ಉದ್ದೇಶವಾಗಿದೆ
[ಪುಟ 33 ರಲ್ಲಿರುವ ಚಿತ್ರ]
ಒಡೆಯನು ತನ್ನ ಮನೆಯನ್ನು ಹಾಳುಮಾಡುವ ಬಾಡಿಗೆದಾರರನ್ನು ವಿಚಾರಣೆಗೆ ಗುರಿಪಡಿಸಬಲ್ಲನು