ಅವರು ಯಾರು?
ನೀವು ಯೆಹೋವನ ಸಾಕ್ಷಿಗಳೊಂದಿಗೆ ಹೆಚ್ಚು ಪರಿಚಿತರಾಗಬೇಕೆಂಬುದು ಅವರ ಇಚ್ಛೆಯಾಗಿದೆ. ನೀವು ಅವರನ್ನು ನೆರೆಹೊರೆಯವರಾಗಿ ಮತ್ತು ಸಹೋದ್ಯೋಗಿಗಳಾಗಿ ಅಥವಾ ಜೀವನದ ಇನ್ನಿತರ ದೈನಂದಿನ ಕೆಲಸಕಾರ್ಯಗಳಲ್ಲಿ ಭೇಟಿಯಾಗಿದ್ದಿರಬಹುದು. ಬೀದಿಯಲ್ಲಿ ಹಾದುಹೋಗುತ್ತಿರುವ ಜನರಿಗೆ ತಮ್ಮ ಪತ್ರಿಕೆಗಳನ್ನು ನೀಡುವಾಗ ನೀವು ಅವರನ್ನು ನೋಡಿರಬಹುದು. ಅಥವಾ ನಿಮ್ಮ ಮನೆ ಬಾಗಿಲಲ್ಲೇ ನೀವು ಅವರೊಂದಿಗೆ ಸ್ವಲ್ಪ ಹೊತ್ತು ಮಾತಾಡಿರಬಹುದು.
ವಾಸ್ತವದಲ್ಲಿ ಯೆಹೋವನ ಸಾಕ್ಷಿಗಳು ನಿಮ್ಮಲ್ಲಿ ಮತ್ತು ನಿಮ್ಮ ಹಿತಕ್ಷೇಮದಲ್ಲಿ ಆಸಕ್ತರಾಗಿದ್ದಾರೆ. ಅವರು ನಿಮ್ಮ ಸ್ನೇಹಿತರಾಗಲು ಮತ್ತು ತಮ್ಮ ಕುರಿತು, ತಮ್ಮ ನಂಬಿಕೆಗಳ ಕುರಿತು ಹಾಗೂ ತಮ್ಮ ಸಂಸ್ಥೆಯ ಕುರಿತು ನಿಮಗೆ ಹೆಚ್ಚನ್ನು ತಿಳಿಸಲು ಬಯಸುತ್ತಾರೆ. ಜನರ ವಿಷಯದಲ್ಲಿ ಹಾಗೂ ನಾವೆಲ್ಲರೂ ಜೀವಿಸುತ್ತಿರುವ ಈ ಭೂಮಿಯ ವಿಷಯದಲ್ಲಿ ಅವರ ಅನಿಸಿಕೆಯೇನೆಂದು ನಿಮಗೆ ತಿಳಿಸುವ ಅಪೇಕ್ಷೆಯೂ ಅವರಿಗಿದೆ. ಇದಕ್ಕಾಗಿಯೇ ಅವರು ಈ ಬ್ರೋಷರನ್ನು ನಿಮಗಾಗಿ ತಯಾರಿಸಿದ್ದಾರೆ.
ಹೆಚ್ಚಿನ ವಿಧಗಳಲ್ಲಿ ಯೆಹೋವನ ಸಾಕ್ಷಿಗಳು ಬೇರೆಲ್ಲರಂತೆಯೇ ಇದ್ದಾರೆ. ಸಾಮಾನ್ಯವಾಗಿ ಎಲ್ಲರಿಗೂ ಇರುವಂತೆ ಅವರಿಗೂ ಆರ್ಥಿಕ, ಶಾರೀರಿಕ ಹಾಗೂ ಭಾವನಾತ್ಮಕ ಸಮಸ್ಯೆಗಳು ಇವೆ. ಅವರೂ ಕೆಲವೊಮ್ಮೆ ತಪ್ಪುಗಳನ್ನು ಮಾಡುತ್ತಾರೆ, ಏಕೆಂದರೆ ಅವರೇನೂ ಪರಿಪೂರ್ಣರಲ್ಲ, ಪ್ರೇರಿತರಲ್ಲ ಇಲ್ಲವೆ ತಪ್ಪೇ ಮಾಡದಂಥವರೂ ಅಲ್ಲ. ಆದರೆ ಅವರು ತಮ್ಮ ಅನುಭವಗಳಿಂದ ಪಾಠವನ್ನು ಕಲಿಯಲು ಪ್ರಯತ್ನಿಸುತ್ತಾರೆ ಮತ್ತು ತಪ್ಪುಗಳನ್ನು ತಿದ್ದಿಕೊಳ್ಳಲಿಕ್ಕಾಗಿ ಬೈಬಲಿನ ಶ್ರದ್ಧಾಪೂರ್ವಕ ಅಧ್ಯಯನವನ್ನು ಮಾಡುತ್ತಾರೆ. ದೇವರ ಚಿತ್ತವನ್ನು ಮಾಡಲು ಅವರು ತಮ್ಮನ್ನು ಆತನಿಗೆ ಸಮರ್ಪಿಸಿಕೊಂಡಿದ್ದಾರೆ, ಹಾಗೂ ಈ ಸಮರ್ಪಣೆಯನ್ನು ಪೂರೈಸಲಿಕ್ಕಾಗಿ ಅವರು ತಮ್ಮನ್ನೇ ನೀಡಿಕೊಳ್ಳುತ್ತಾರೆ. ತಮ್ಮೆಲ್ಲಾ ಚಟುವಟಿಕೆಗಳಲ್ಲಿ ಅವರು ದೇವರ ವಾಕ್ಯದ ಮತ್ತು ಆತನ ಪವಿತ್ರಾತ್ಮದ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ.
ಅವರ ನಂಬಿಕೆಗಳು ಬರಿಯ ಮಾನವ ಊಹಾಪೋಹಗಳು ಅಥವಾ ಧಾರ್ಮಿಕ ಆಚಾರಗಳ ಮೇಲೆ ಆಧಾರಿಸಿರದೆ ಬೈಬಲಿನ ಮೇಲೆಯೇ ಆಧಾರಿತವಾಗಿರುವುದು ಅವರಿಗೆ ಬಹು ಪ್ರಾಮುಖ್ಯವಾದ ಸಂಗತಿಯಾಗಿದೆ. “ಎಲ್ಲಾ ಮನುಷ್ಯರು ಸುಳ್ಳುಗಾರರಾದರೂ ದೇವರು ಸತ್ಯವಂತನೇ ಸರಿ” ಎಂದು ಅಪೊಸ್ತಲ ಪೌಲನು ಪವಿತ್ರಾತ್ಮ ಪ್ರೇರಿತನಾಗಿ ನುಡಿದಾಗ ಅವನಿಗೆ ಏನನಿಸಿತೊ ಅದೇ ಅನಿಸಿಕೆ ಅವರಿಗೂ ಇದೆ. (ರೋಮಾಪುರ 3:4, ಸತ್ಯವೇದವುa) ಬೈಬಲಿನ ಸತ್ಯವೆಂದು ಪ್ರಸ್ತುತಪಡಿಸಲಾಗುವ ಬೋಧನೆಗಳ ವಿಷಯದಲ್ಲಿ, ಸಾಕ್ಷಿಗಳು ಬೆರೋಯದವರು ತೆಗೆದುಕೊಂಡ ಕ್ರಮವನ್ನು ಬಲವಾಗಿ ಅನುಮೋದಿಸುತ್ತಾರೆ. ಆ ಬೆರೋಯದವರು ಅಪೊಸ್ತಲ ಪೌಲನು ಏನು ಸಾರಿದನೊ ಅದನ್ನು “ದೇವರ ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು.” (ಅ. ಕೃತ್ಯಗಳು 17:11) ಸ್ವತಃ ಅವರಿಂದಲೇ ತಿಳಿಸಲ್ಪಟ್ಟವುಗಳಾಗಿರಲಿ ಅಥವಾ ಬೇರೆಯವರಿಂದ ತಿಳಿಸಲ್ಪಟ್ಟವುಗಳಾಗಿರಲಿ, ಎಲ್ಲ ಧಾರ್ಮಿಕ ಬೋಧನೆಗಳನ್ನು ಈ ರೀತಿಯಲ್ಲಿ ಪ್ರೇರಿತ ಶಾಸ್ತ್ರವಚನಗಳೊಂದಿಗೆ ಒಪ್ಪಿಗೆಯ ಪರೀಕ್ಷೆಗೆ ಒಳಪಡಿಸಬೇಕೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ನಿಮ್ಮೊಂದಿಗೆ ಅವರು ಮಾಡುವ ಚರ್ಚೆಯಲ್ಲಿ ನೀವಿದನ್ನು ಮಾಡುವಂತೆ ಅವರು ಆಮಂತ್ರಿಸುತ್ತಾರೆ, ಹೌದು ಪ್ರಚೋದಿಸುತ್ತಾರೆ.
ಬೈಬಲು ದೇವರ ವಾಕ್ಯವಾಗಿದೆ ಎಂಬುದನ್ನು ಯೆಹೋವನ ಸಾಕ್ಷಿಗಳು ನಂಬುತ್ತಾರೆಂದು ಇದರಿಂದ ಸ್ಪಷ್ಟವಾಗುತ್ತದೆ. ಅದರ 66 ಪುಸ್ತಕಗಳು ದೈವಪ್ರೇರಿತವೂ ಐತಿಹಾಸಿಕವಾಗಿ ನಿಷ್ಕೃಷ್ಟವೂ ಆಗಿವೆಯೆಂದು ಅವರು ಪರಿಗಣಿಸುತ್ತಾರೆ. ಯಾವುದನ್ನು ಸಾಮಾನ್ಯವಾಗಿ ಹೊಸ ಒಡಂಬಡಿಕೆ ಎಂದು ಕರೆಯಲಾಗುತ್ತದೋ ಅದನ್ನು ಅವರು ಕ್ರೈಸ್ತ ಗ್ರೀಕ್ ಶಾಸ್ತ್ರ ಎಂದು ಸಂಬೋಧಿಸುತ್ತಾರೆ, ಮತ್ತು ಹಳೇ ಒಡಂಬಡಿಕೆಯನ್ನು ಹೀಬ್ರು ಶಾಸ್ತ್ರ ಎಂದು ಕರೆಯುತ್ತಾರೆ. ಈ ಗ್ರೀಕ್ ಮತ್ತು ಹೀಬ್ರು ಶಾಸ್ತ್ರಗಳೆರಡರ ಮೇಲೂ ಅವರು ಆತುಕೊಂಡು, ಅವುಗಳ ಹೇಳಿಕೆಗಳು ಅಥವಾ ಹಿನ್ನೆಲೆಗಳಿಂದ ಅವು ಲಾಕ್ಷಣಿಕ ಅಥವಾ ಸಾಂಕೇತಿಕವೆಂದು ಸ್ಪಷ್ಟವಾಗಿ ತೋರಿಬರುವ ಹೊರತು ಅವುಗಳನ್ನು ಅಕ್ಷರಾರ್ಥಕವಾಗಿ ತೆಗೆದುಕೊಳ್ಳುತ್ತಾರೆ. ಬೈಬಲಿನ ಅಧಿಕಾಂಶ ಪ್ರವಾದನೆಗಳು ನೆರವೇರಿವೆ, ಬೇರೆಯವು ನೆರವೇರುತ್ತಾ ಇವೆ, ಮತ್ತು ಕೆಲವು ಇನ್ನೂ ನೆರವೇರಲಿಕ್ಕಿವೆ ಎಂಬುದು ಅವರ ತಿಳಿವಳಿಕೆ.
ಅವರ ಹೆಸರು
ಯೆಹೋವನ ಸಾಕ್ಷಿಗಳೋ? ಹೌದು, ಅವರು ತಮ್ಮನ್ನು ಹಾಗೆಂದು ಕರೆದುಕೊಳ್ಳುತ್ತಾರೆ. ಅದು ಒಂದು ವರ್ಣನಾತ್ಮಕ ಹೆಸರು. ಯೆಹೋವನ ಕುರಿತು, ಆತನ ದೇವತ್ವದ ಕುರಿತು, ಮತ್ತು ಆತನ ಉದ್ದೇಶಗಳ ಕುರಿತು ಅವರು ಸಾಕ್ಷಿಕೊಡುತ್ತಾರೆಂದು ಅದು ಸೂಚಿಸುತ್ತದೆ. “ದೇವರು,” “ಕರ್ತನು” ಮತ್ತು “ಸೃಷ್ಟಿಕರ್ತ”—ಎಂಬವುಗಳು “ರಾಷ್ಟ್ರಾಧ್ಯಕ್ಷ,” “ಅರಸ” ಮತ್ತು “ಜನರಲ್”ಗಳಂತೆಯೇ ಕೇವಲ ಬಿರುದುಗಳಾಗಿವೆ ಮತ್ತು ಅವುಗಳನ್ನು ಹಲವಾರು ವಿಭಿನ್ನ ವ್ಯಕ್ತಿಗಳಿಗೆ ಅನ್ವಯಿಸಬಹುದಾಗಿದೆ. ಆದರೆ “ಯೆಹೋವ” ಎಂಬುದು ಒಂದು ವೈಯಕ್ತಿಕ ಹೆಸರು. ಅದು ಸರ್ವಶಕ್ತ ದೇವರೂ ವಿಶ್ವದ ಸೃಷ್ಟಿಕರ್ತನೂ ಆಗಿರುವ ದೇವರನ್ನು ಸೂಚಿಸುತ್ತದೆ. ಬೈಬಲಿನ ಕೀರ್ತನೆ 83:18ರಲ್ಲಿ ಇದನ್ನು ತೋರಿಸಲಾಗಿದೆ: ‘ಯೆಹೋವ ನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.’
ಯೆಹೋವ (ಅಥವಾ, ರೋಮನ್ ಕ್ಯಾಥೊಲಿಕ್ ಜೆರುಸಲೇಮ್ ಬೈಬಲ್ ಮತ್ತು ಕೆಲವು ವಿದ್ವಾಂಸರು ಇಷ್ಟಪಡುವಂತೆ, ಯಾಹ್ವೆ) ಎಂಬ ಹೆಸರು ಮೂಲ ಹೀಬ್ರು ಶಾಸ್ತ್ರಗಳಲ್ಲಿ ಬಹುಮಟ್ಟಿಗೆ 7,000 ಬಾರಿ ತೋರಿಬರುತ್ತದೆ. ಹೆಚ್ಚಿನ ಬೈಬಲುಗಳು ಆ ಹೆಸರನ್ನು ತೋರಿಸುವದಿಲ್ಲ, ಬದಲಿಗೆ “ದೇವರು” ಅಥವಾ “ಕರ್ತನು” ಎಂಬ ಪದಗಳನ್ನು ಬದಲಿಗಳಾಗಿ ಉಪಯೋಗಿಸಿವೆ. ಹಲವಾರು ಆಧುನಿಕ ಭಾಷಾಂತರಗಳು ಯೆಹೋವ ಎಂಬ ಹೆಸರನ್ನು ಇಲ್ಲವೆ ಯಾಹ್ವೆ ಎಂಬ ಹೆಸರನ್ನು ನಿಶ್ಚಯವಾಗಿಯೂ ಉಪಯೋಗಿಸಿವೆ. ಆದುದರಿಂದ, ಕನ್ನಡ ಭಾಷೆಯ ಸತ್ಯವೇದ ಬೈಬಲು ಯೆಶಾಯ 42:8ನ್ನು ಹೀಗೆ ಭಾಷಾಂತರಿಸಿದೆ: “ನಾನೇ ಯೆಹೋವನು, ಇದೇ ನನ್ನ ನಾಮವು.”
ತಮ್ಮ ಹೆಸರಿನ ಆಧಾರಕ್ಕಾಗಿ ಯೆಹೋವನ ಸಾಕ್ಷಿಗಳು ತೋರಿಸುವ ಶಾಸ್ತ್ರೀಯ ವೃತ್ತಾಂತವು ಯೆಶಾಯ 43ನೆಯ ಅಧ್ಯಾಯದಲ್ಲಿದೆ. ಅಲ್ಲಿ ಲೋಕ ದೃಶ್ಯವನ್ನು, ವಿಚಾರಣೆಯು ನಡೆಯುತ್ತಿರುವ ಒಂದು ಕೋರ್ಟಿನ ದೃಶ್ಯದೋಪಾದಿ ವೀಕ್ಷಿಸಲಾಗುತ್ತದೆ. ಜನಾಂಗಗಳ ದೇವರುಗಳು ನೀತಿವಂತರೆಂಬ ತಮ್ಮ ವಾದವನ್ನು ರುಜುಪಡಿಸಲಿಕ್ಕಾಗಿ ತಮ್ಮ ತಮ್ಮ ಸಾಕ್ಷಿಗಳನ್ನು ಕರೆತರುವಂತೆ ಇಲ್ಲವೆ ಯೆಹೋವನ ಪರವಾದ ಸಾಕ್ಷಿಗಳಿಗೆ ಕಿವಿಗೊಟ್ಟು ಸತ್ಯವನ್ನು ಅಂಗೀಕರಿಸುವಂತೆ ಆಮಂತ್ರಿಸಲ್ಪಡುತ್ತಾರೆ. ಅಲ್ಲಿ ಯೆಹೋವನು ತನ್ನ ಜನರಿಗೆ ಘೋಷಿಸುವುದು: “ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು; ನೀವು ನನ್ನನ್ನು ತಿಳಿದು ನಂಬಿ ನನ್ನನ್ನೇ ಪರಮಾತ್ಮನು ಎಂದು ಗ್ರಹಿಸುವ ಹಾಗೆ [ಇದನ್ನು ನಡಿಸಿದೆನು]; ನನಗಿಂತ ಮುಂಚೆ ಯಾವ ದೇವರೂ ಇರಲಿಲ್ಲ, ನನ್ನ ಅನಂತರದಲ್ಲಿಯೂ ಇರುವದಿಲ್ಲ. ನಾನೇ, ನಾನೇ ಯೆಹೋವನು; ನನ್ನ ಹೊರತು ಯಾವ ರಕ್ಷಕನೂ ಇಲ್ಲ.”—ಯೆಶಾಯ 43:10, 11.
ಯೇಸು ಹುಟ್ಟುವುದಕ್ಕೆ ಸಾವಿರಾರು ವರ್ಷಗಳ ಹಿಂದೆಯೂ ಯೆಹೋವ ದೇವರಿಗೆ ಭೂಮಿಯ ಮೇಲೆ ಸಾಕ್ಷಿಗಳಿದ್ದರು. ಇಬ್ರಿಯ 11ನೆಯ ಅಧ್ಯಾಯವು ಆ ಕೆಲವು ನಂಬಿಗಸ್ತರ ಕುರಿತು ತಿಳಿಸಿದ ನಂತರ, ಇಬ್ರಿಯ 12:1, 2 ಹೀಗನ್ನುತ್ತದೆ: “ಆದಕಾರಣ ಇಷ್ಟುಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲು ಇರುವದರಿಂದ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹ ತೆಗೆದಿಟ್ಟು . . . ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ.” ಪೊಂತ್ಯ ಪಿಲಾತನ ಮುಂದೆ ಯೇಸು ಹೇಳಿದ್ದು: “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ.” ಅವನನ್ನು “ನಂಬತಕ್ಕ ಸತ್ಯಸಾಕ್ಷಿ” ಎಂದೂ ಕರೆಯಲಾಗಿದೆ. (ಯೋಹಾನ 18:37; ಪ್ರಕಟನೆ 3:14) ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರಬೇಕು.”—ಅ. ಕೃತ್ಯಗಳು 1:8.
ಆದಕಾರಣ, ಯೇಸು ಕ್ರಿಸ್ತನು ರಾಜನಾಗಿರುವ ಯೆಹೋವನ ರಾಜ್ಯದ ಸುವಾರ್ತೆಯನ್ನು ಇಂದು 235 ದೇಶಗಳಲ್ಲಿ ಸಾರಿ ಹೇಳುತ್ತಿರುವ ಸುಮಾರು 61,00,000 ಜನರು, ಸ್ವತಃ ತಮ್ಮನ್ನು ಯೆಹೋವನ ಸಾಕ್ಷಿಗಳಾಗಿ ಕರೆದುಕೊಳ್ಳುವುದು ಯೋಗ್ಯವಾದದ್ದಾಗಿದೆ ಎಂದು ಭಾವಿಸುತ್ತಾರೆ.
[ಪಾದಟಿಪ್ಪಣಿ]
a ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಈ ಬ್ರೋಷರಿನಲ್ಲಿ ಉಪಯೋಗಿಸಲ್ಪಟ್ಟ ಬೈಬಲ್ ಭಾಷಾಂತರವು ಇದಾಗಿದೆ.
[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರಣೆ]
ದೇವರ ಚಿತ್ತವನ್ನು ಮಾಡಲಿಕ್ಕಾಗಿ ಅವರು ಆತನಿಗೆ ಸಮರ್ಪಿತರಾಗಿದ್ದಾರೆ
[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರಣೆ]
ಬೈಬಲು ದೇವರ ವಾಕ್ಯವೆಂದು ಅವರು ನಂಬುತ್ತಾರೆ
[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]
ವಿಚಾರಣೆ ನಡೆಯುತ್ತಿರುವ ಒಂದು ಕೋರ್ಟ್ಗೆ ಸಂಬಂಧಿಸಲ್ಪಟ್ಟಂತೆ ಆ ಹೆಸರು
[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]
235 ದೇಶಗಳಲ್ಲಿ ಸುಮಾರು 61,00,000 ಸಾಕ್ಷಿಗಳು
[ಪುಟ 3ರಲ್ಲಿರುವ ಚಿತ್ರ]
ಅವರಿಗೆ ನಿಮ್ಮಲ್ಲಿ ಆಸಕ್ತಿಯಿದೆ
[ಪುಟ 4ರಲ್ಲಿರುವ ಚಿತ್ರ]
ಪುರಾತನ ಕಾಲದ ಹೀಬ್ರುವಿನಲ್ಲಿ ದೇವರ ವೈಯಕ್ತಿಕ ಹೆಸರು