ಅಧ್ಯಾಯ ಇಪ್ಪತ್ತೇಳು
ಯೆಹೋವನು ಶುದ್ಧಾರಾಧನೆಯನ್ನು ಆಶೀರ್ವದಿಸುತ್ತಾನೆ
1. ಯೆಶಾಯ ಪುಸ್ತಕದ ಕೊನೆಯ ಅಧ್ಯಾಯದಲ್ಲಿ ಯಾವ ಮುಖ್ಯ ವಿಷಯಗಳನ್ನು ಎತ್ತಿಹೇಳಲಾಗಿದೆ, ಮತ್ತು ಯಾವ ಪ್ರಶ್ನೆಗಳಿಗೆ ಉತ್ತರ ಕೊಡಲಾಗಿದೆ?
ಯೆಶಾಯ ಪುಸ್ತಕದ ಕೊನೆಯ ಅಧ್ಯಾಯದಲ್ಲಿ, ಈ ಪ್ರವಾದನ ಪುಸ್ತಕದ ಕೆಲವು ಪ್ರಧಾನ ಮುಖ್ಯ ವಿಷಯಗಳನ್ನು ನಾಟಕೀಯವಾಗಿ ಪರಾಕಾಷ್ಠೆಗೆ ತರಲಾಗಿದ್ದು, ಅನೇಕ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸಲಾಗಿದೆ. ಎತ್ತಿಹೇಳಲ್ಪಟ್ಟಿರುವ ಮುಖ್ಯ ವಿಷಯಗಳಲ್ಲಿ ಕೆಲವು, ಯೆಹೋವನ ಮಹೋನ್ನತೆ, ಕಪಟಾಚಾರದ ಕಡೆಗೆ ಆತನಿಗಿರುವ ದ್ವೇಷ, ದುಷ್ಟರನ್ನು ಶಿಕ್ಷಿಸುವ ಆತನ ದೃಢನಿರ್ಧಾರ ಮತ್ತು ನಂಬಿಗಸ್ತರಿಗಾಗಿ ಆತನು ತೋರಿಸುವ ಪ್ರೀತಿ ಮತ್ತು ಚಿಂತೆಯೇ ಆಗಿವೆ. ಇದಲ್ಲದೆ, ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡಲಾಗಿದೆ: ಸತ್ಯಾರಾಧನೆಯನ್ನು ಸುಳ್ಳು ಆರಾಧನೆಯಿಂದ ಯಾವುದು ಪ್ರತ್ಯೇಕಿಸುತ್ತದೆ? ತಾವು ಪವಿತ್ರರೆಂದು ತೋರಿಸಿಕೊಂಡು, ದೇವಜನರ ಮೇಲೆ ದಬ್ಬಾಳಿಕೆ ನಡೆಸುವ ಕಪಟಿಗಳ ಮೇಲೆ ದೇವರು ಪ್ರತೀಕಾರವನ್ನು ತರುವನೆಂದು ನಾವು ಹೇಗೆ ಖಾತ್ರಿಯಿಂದಿರಬಲ್ಲೆವು? ಮತ್ತು ಯೆಹೋವನು ತನಗೆ ನಂಬಿಗಸ್ತರಾಗಿರುವವರನ್ನು ಹೇಗೆ ಆಶೀರ್ವದಿಸುವನು?
ಶುದ್ಧಾರಾಧನೆಯ ಕೀಲಿ ಕೈ
2. ಯೆಹೋವನು ತನ್ನ ಮಹಾ ವೈಭವದ ಕುರಿತು ಯಾವ ಹೇಳಿಕೆಯನ್ನು ಮಾಡುತ್ತಾನೆ, ಮತ್ತು ಈ ಹೇಳಿಕೆಯು ಏನನ್ನು ಸೂಚಿಸುವುದಿಲ್ಲ?
2 ಆರಂಭದಲ್ಲಿ ಪ್ರವಾದನೆಯು ಯೆಹೋವನ ಮಹಾ ವೈಭವವನ್ನು ಒತ್ತಿಹೇಳುತ್ತದೆ: “ಯೆಹೋವನು ಹೀಗನ್ನುತ್ತಾನೆ—ಆಕಾಶವು ನನಗೆ ಸಿಂಹಾಸನ, ಭೂಮಿಯು ನನಗೆ ಪಾದಪೀಠ. ನೀವು ನನಗೆ ಇನ್ನೆಂಥಾ ಮನೆಯನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಎಂಥದು?” (ಯೆಶಾಯ 66:1) ಆ ಜನಾಂಗವು ಸ್ವದೇಶಕ್ಕೆ ಹಿಂದಿರುಗಿದಾಗ, ದೇವಾಲಯದ ಪುನರ್ನಿರ್ಮಾಣವನ್ನು ಯೆಹೂದ್ಯರು ಮಾಡದಂತೆ ಪ್ರವಾದಿಯು ಇಲ್ಲಿ ನಿರುತ್ತೇಜಿಸುತ್ತಿದ್ದಾನೆ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಆದರೆ ಹಾಗಿರುವುದಿಲ್ಲ. ಯೆಹೋವನು ತಾನೇ ಆ ದೇವಾಲಯವು ಪುನಃ ಕಟ್ಟಲ್ಪಡಲಿ ಎಂಬ ಆಜ್ಞೆಯನ್ನು ನೀಡುವನು. (ಎಜ್ರ 1:1-6; ಯೆಶಾಯ 60:13; ಹಗ್ಗಾಯ 1:7, 8) ಹಾಗಾದರೆ, ಈ ಮಾತುಗಳ ಅರ್ಥವೇನು?
3. ಈ ಭೂಮಿಯನ್ನು ಯೆಹೋವನ “ಪಾದಪೀಠ”ವಾಗಿ ವರ್ಣಿಸಿರುವುದು ಯೋಗ್ಯವೇಕೆ?
3 ಪ್ರಥಮವಾಗಿ, ಭೂಮಿಯನ್ನು ಯೆಹೋವನ “ಪಾದಪೀಠ”ವಾಗಿ ಏಕೆ ವರ್ಣಿಸಲಾಗಿದೆ ಎಂಬುದನ್ನು ನಾವು ಪರಿಗಣಿಸಬಹುದು. ಇದೊಂದು ತುಚ್ಛೀಕಾರಕ ಪದವಲ್ಲ. ವಿಶ್ವದಲ್ಲಿರುವ ಕೋಟ್ಯಂತರ ಆಕಾಶಸ್ಥ ಕಾಯಗಳಲ್ಲಿ ಭೂಮಿಗೆ ಮಾತ್ರ ಈ ವಿಶೇಷ ಹೆಸರನ್ನು ಕೊಡಲಾಗಿದೆ. ನಮ್ಮ ಭೂಗ್ರಹವು ಎಂದೆಂದಿಗೂ ಅಪೂರ್ವವಾದದ್ದಾಗಿ ಉಳಿಯುವುದು. ಏಕೆಂದರೆ ಯೆಹೋವನ ಏಕಜಾತ ಪುತ್ರನು ತನ್ನ ಪ್ರಾಯಶ್ಚಿತ್ತ ಯಜ್ಞವನ್ನು ಕೊಟ್ಟ ಸ್ಥಳ ಇದಾಗಿದೆ ಮಾತ್ರವಲ್ಲ, ಯೆಹೋವನು ಮೆಸ್ಸೀಯ ರಾಜ್ಯದ ಮುಖಾಂತರ ತನ್ನ ಪರಮಾಧಿಕಾರವನ್ನು ನಿರ್ದೋಷೀಕರಿಸುವ ಸ್ಥಳವೂ ಇದೇ ಆಗಿದೆ. ಆದಕಾರಣ, ಭೂಮಿಯನ್ನು ಯೆಹೋವನ ಪಾದಪೀಠವೆಂದು ಕರೆಯುವುದು ಎಷ್ಟು ಸೂಕ್ತವಾದದ್ದಾಗಿದೆ! ಒಬ್ಬ ರಾಜನು ಇಂತಹ ಪಾದಪೀಠವನ್ನು ತನ್ನ ಉನ್ನತ ಸಿಂಹಾಸನವನ್ನೇರಲು ಮತ್ತು ಆ ಬಳಿಕ ತನ್ನ ಪಾದಗಳಿಗೆ ವಿಶ್ರಾಂತಿ ಕೊಡಲು ಉಪಯೋಗಿಸಬಹುದು.
4. (ಎ) ಭೂಮಿಯ ಯಾವ ಕಟ್ಟಡವೂ ಯೆಹೋವ ದೇವರ ವಿಶ್ರಾಂತಿಯ ಸ್ಥಳವಾಗಿರಲು ಸಾಧ್ಯವಿಲ್ಲವೇಕೆ? (ಬಿ) “ಇವುಗಳನ್ನೆಲ್ಲಾ” ಎಂಬ ವಾಕ್ಸರಣಿಯ ಅರ್ಥವೇನು, ಮತ್ತು ಯೆಹೋವನ ಆರಾಧನೆಯ ವಿಷಯದಲ್ಲಿ ನಾವು ಯಾವ ತೀರ್ಮಾನಕ್ಕೆ ಬರಬೇಕು?
4 ಒಬ್ಬ ರಾಜನು ಪಾದಪೀಠದ ಮೇಲೆ ವಾಸಿಸುವುದಿಲ್ಲ, ಅಂತೆಯೇ ಯೆಹೋವನು ಈ ಭೂಮಿಯಲ್ಲಿ ವಾಸಿಸುವುದಿಲ್ಲ ಎಂಬುದು ನಿಶ್ಚಯ. ಅಷ್ಟೇಕೆ, ವಿಶಾಲವಾದ ಭೌತಿಕ ಆಕಾಶವು ಸಹ ಆತನು ಹಿಡಿಸುವಷ್ಟು ಸ್ಥಳವನ್ನು ಹೊಂದಿಲ್ಲ! ಹಾಗಾದರೆ ಭೂಮಿಯ ಮೇಲಿನ ಒಂದು ಬರಿಯ ಕಟ್ಟಡವು ಆತನನ್ನು ಹಿಡಿಸುವ ಒಂದು ಅಕ್ಷರಾರ್ಥದ ನಿವಾಸವಾಗಸಾಧ್ಯವಿಲ್ಲ. (1 ಅರಸುಗಳು 8:27) ಯೆಹೋವನ ಸಿಂಹಾಸನ ಮತ್ತು ವಿಶ್ರಾಂತಿಯ ಸ್ಥಳವು ಆತ್ಮ ಕ್ಷೇತ್ರದಲ್ಲಿದೆ. ಯೆಶಾಯ 66:1ರ “ಆಕಾಶ” ಎಂಬ ಶಬ್ದದ ಅರ್ಥವು ಇದೇ ಆಗಿದೆ. ಆದರೆ ಮುಂದಿನ ವಚನವು ಇದನ್ನು ನಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿ ಮೂಡಿಸುತ್ತದೆ: “ಇವುಗಳನ್ನೆಲ್ಲಾ ನನ್ನ ಕೈಯೇ ನಿರ್ಮಿಸಿತು, ಹೌದು, [ನನ್ನ ಕೈಯಿಂದಲೇ] ಇವುಗಳೆಲ್ಲಾ ಉಂಟಾದವು.” (ಯೆಶಾಯ 66:2ಎ) ಯೆಹೋವನು “ಇವುಗಳನ್ನೆಲ್ಲಾ,” ಅಂದರೆ ಆಕಾಶ ಮತ್ತು ಭೂಮಿಯಲ್ಲಿರುವ ಸರ್ವವನ್ನೂ ತಾನು ಮಾಡಿದ್ದೆಂದು ಕೈಯಾಡಿಸಿ ಸೂಚಿಸುವುದನ್ನು ತುಸು ಊಹಿಸಿಕೊಳ್ಳಿರಿ. (ಯೆಶಾಯ 40:26; ಪ್ರಕಟನೆ 10:6) ಇಡೀ ವಿಶ್ವದ ಮಹಾ ಸೃಷ್ಟಿಕರ್ತನಾದ ಆತನು ತನಗೆ ಸಮರ್ಪಿತವಾದ ಕೇವಲ ಒಂದು ಕಟ್ಟಡಕ್ಕಿಂತ ಹೆಚ್ಚಿನದ್ದಕ್ಕೆ ಯೋಗ್ಯನಾಗಿದ್ದಾನೆ. ಆತನು ಕೇವಲ ಬಾಹ್ಯ ಆರಾಧನಾ ರೂಪಕ್ಕಿಂತ ಹೆಚ್ಚಿನದ್ದಕ್ಕೆ ಯೋಗ್ಯನಾಗಿದ್ದಾನೆ.
5. ನಾವು ‘ದುಃಖಪೀಡಿತರೂ ಮನಮುರಿದವರೂ’ ಆಗಿದ್ದೇವೆಂಬುದನ್ನು ಹೇಗೆ ತೋರಿಸುತ್ತೇವೆ?
5 ಆ ವಿಶ್ವ ಪರಮಾಧಿಕಾರಿಯು ಯಾವ ರೀತಿಯ ಆರಾಧನೆಗೆ ಯೋಗ್ಯನು? ಆತನು ತಾನೇ ಹೇಳುವುದು: “ನಾನು ಕಟಾಕ್ಷಿಸುವವನು ಎಂಥವನೆಂದರೆ ದೀನನೂ [“ದುಃಖಪೀಡಿತನೂ,” NW] ಮನಮುರಿದವನೂ ನನ್ನ ಮಾತಿಗೆ ಭಯಪಡುವವನೂ ಆಗಿರುವವನೇ.” (ಯೆಶಾಯ 66:2ಬಿ) ಹೌದು, ಶುದ್ಧಾರಾಧನೆಗೆ ಆವಶ್ಯಕವಾದ ಸಂಗತಿಯು ಆರಾಧಕನಲ್ಲಿರುವ ಸರಿಯಾದ ಹೃದಯದ ಭಾವನೆಯೇ. (ಪ್ರಕಟನೆ 4:11) ಯೆಹೋವನ ಆರಾಧಕನು “ದುಃಖಪೀಡಿತನೂ ಮನಮುರಿದವನೂ” ಆಗಿರಬೇಕು. ಹಾಗಾದರೆ, ನಾವು ಅಸಂತೋಷದಿಂದಿರುವಂತೆ ಯೆಹೋವನು ಬಯಸುತ್ತಾನೆಂಬುದು ಇದರ ಅರ್ಥವೊ? ಅಲ್ಲ, ಏಕೆಂದರೆ ಆತನು “ಸಂತೋಷಭರಿತ ದೇವ”ರಾಗಿದ್ದಾನೆ ಮತ್ತು ತನ್ನ ಆರಾಧಕರೂ ಆನಂದಭರಿತರಾಗಿರುವಂತೆ ಆತನು ಬಯಸುತ್ತಾನೆ. (1 ತಿಮೊಥೆಯ 1:11, NW; ಫಿಲಿಪ್ಪಿ 4:4) ಆದರೆ ನಾವೆಲ್ಲರೂ ಪದೇ ಪದೇ ಪಾಪಮಾಡುತ್ತೇವೆ, ಮತ್ತು ನಾವು ನಮ್ಮ ಪಾಪಗಳನ್ನು ಕ್ಷುಲ್ಲಕವೆಂದು ಎಣಿಸಬಾರದು. ನಾವು ಅವುಗಳಿಂದ ‘ದುಃಖಪೀಡಿತರಾಗ’ಬೇಕು, ಅಂದರೆ ಯೆಹೋವನ ನೀತಿಯ ಮಟ್ಟಗಳ ಗುರಿಯನ್ನು ತಪ್ಪಿಹೋಗಿದ್ದೇವೆಂಬುದಕ್ಕೆ ನಾವು ದುಃಖಿತರಾಗಬೇಕು. (ಕೀರ್ತನೆ 51:17) ನಾವು ಪಶ್ಚಾತ್ತಾಪಪಡುತ್ತ, ತಪ್ಪು ಪ್ರವೃತ್ತಿಗಳ ವಿರುದ್ಧ ಹೋರಾಡುತ್ತ ಮತ್ತು ಯೆಹೋವನ ಕ್ಷಮೆಯನ್ನು ಬೇಡುತ್ತ “ಮನಮುರಿದವರು” ಆಗಿದ್ದೇವೆ ಎಂಬುದನ್ನು ತೋರಿಸಬೇಕು.—ಲೂಕ 11:4; 1 ಯೋಹಾನ 1:8-10.
6. ಸತ್ಯಾರಾಧಕರು ಯಾವ ಅರ್ಥದಲ್ಲಿ ‘ದೇವರ ಮಾತಿಗೆ ಭಯಪಡಬೇಕು’?
6 ಇದಲ್ಲದೆ, ಯೆಹೋವನು ತನ್ನ ‘ಮಾತಿಗೆ ಭಯಪಡುವಂತಹ’ ವ್ಯಕ್ತಿಗಳನ್ನು ಹುಡುಕುತ್ತಾನೆ. ಅಂದರೆ, ನಾವು ಆತನ ಹೇಳಿಕೆಗಳನ್ನು ಓದುವಾಗಲೆಲ್ಲ ಭಯದಿಂದ ನಡುಗಬೇಕೆಂದು ಆತನು ಬಯಸುತ್ತಾನೊ? ಇಲ್ಲ, ಅದರ ಬದಲು ಆತನು ಏನನ್ನು ಹೇಳುತ್ತಾನೊ ಅದನ್ನು ನಾವು ಭಯಭಕ್ತಿ ಮತ್ತು ಪೂಜ್ಯಭಾವದಿಂದ ಪರಿಗಣಿಸುವಂತೆ ಆತನು ಬಯಸುತ್ತಾನೆ. ನಾವು ಯಥಾರ್ಥತೆಯಿಂದ ಆತನ ಬುದ್ಧಿವಾದವನ್ನು ಯಾಚಿಸಿ, ಅದು ನಮ್ಮ ಜೀವಿತದ ಎಲ್ಲ ವಿಚಾರಗಳಲ್ಲಿ ಮಾರ್ಗದರ್ಶಕವಾಗಿರುವಂತೆ ಉಪಯೋಗಿಸುತ್ತೇವೆ. (ಕೀರ್ತನೆ 119:105) ದೇವರಿಗೆ ಅವಿಧೇಯರಾಗುವ, ಆತನ ಸತ್ಯವನ್ನು ಮಾನವ ಸಂಪ್ರದಾಯಗಳಿಂದ ಮಲಿನಮಾಡುವ ಅಥವಾ ಅದನ್ನು ಕ್ಷುಲ್ಲಕವೆಂದೆಣಿಸುವ ಯೋಚನೆಗೇ ಹೆದರುವ ಅರ್ಥದಲ್ಲಿಯೂ ನಾವು ‘ಭಯಪಡಬಹುದು.’ ಶುದ್ಧಾರಾಧನೆಗೆ ಇಂತಹ ದೀನ ಮನೋಭಾವವು ಅಗತ್ಯವಾದರೂ ಅದು ಇಂದಿನ ಲೋಕದಲ್ಲಿ ಕಂಡುಬರುವುದು ತುಂಬ ವಿರಳ.
ಯೆಹೋವನು ಕಪಟಾರಾಧನೆಯನ್ನು ದ್ವೇಷಿಸುತ್ತಾನೆ
7, 8. ಧಾರ್ಮಿಕ ಕಪಟಿಗಳ ಬಾಹ್ಯೋಪಚಾರದ ಆರಾಧನೆಯನ್ನು ಯೆಹೋವನು ಹೇಗೆ ಪರಿಗಣಿಸುತ್ತಾನೆ?
7 ಯೆಶಾಯನು ತನ್ನ ಸಮಕಾಲೀನರನ್ನು ಪರೀಕ್ಷಿಸುವಾಗ, ಯೆಹೋವನು ತನ್ನ ಆರಾಧಕರಲ್ಲಿ ಅಪೇಕ್ಷಿಸುವ ಗುಣಗಳು ಕೇವಲ ಕೆಲವರಲ್ಲಿವೆಯೆಂದು ಅವನಿಗೆ ಚೆನ್ನಾಗಿ ಗೊತ್ತಾಗುತ್ತದೆ. ಈ ಕಾರಣಕ್ಕಾಗಿ, ಧರ್ಮಭ್ರಷ್ಟ ಯೆರೂಸಲೇಮ್ ಆಕೆಯ ಮೇಲೆ ಬರಲಿರುವ ತೀರ್ಪಿಗೆ ಅರ್ಹಳಾಗುತ್ತಾಳೆ. ಆಕೆಯಲ್ಲಿ ನಡೆಯುತ್ತಿರುವ ಆರಾಧನೆಯನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆಂಬುದನ್ನು ಗಮನಿಸಿರಿ: “ಹೋರಿಯನ್ನು ವಧಿಸುವವನು ನರಬಲಿಯನ್ನು ಕೊಡುತ್ತಾನೆ; ಕುರಿಯನ್ನು ಕಡಿಯುವವನು ನಾಯಿಯ ಕತ್ತನ್ನು ಮುರಿಯುತ್ತಾನೆ; ನೈವೇದ್ಯಮಾಡುವವನು ಹಂದಿಯ ರಕ್ತವನ್ನು ಅರ್ಪಿಸುತ್ತಾನೆ; ಧೂಪಹಾಕುವವನು ವಿಗ್ರಹಾರಾಧನೆ ಮಾಡುತ್ತಾನೆ; ಇವರು ಮನಸ್ಸಿಗೆ ಬಂದ ಮಾರ್ಗಗಳನ್ನು ಆರಿಸಿಕೊಂಡು ತಮ್ಮ ಅಸಹ್ಯಕಾರ್ಯಗಳಲ್ಲಿ ಮನಃಪೂರ್ವಕವಾಗಿ ಆನಂದಿಸುತ್ತಾರೆ.”—ಯೆಶಾಯ 66:3.
8 ಈ ಮಾತುಗಳು ನಮಗೆ ಯೆಶಾಯ ಪುಸ್ತಕದ ಒಂದನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ಯೆಹೋವನ ಮಾತುಗಳನ್ನು ಜ್ಞಾಪಕಕ್ಕೆ ತರುತ್ತವೆ. ಅಲ್ಲಿ ಯೆಹೋವನು ತನ್ನ ಹಟಮಾರಿ ಜನರಿಗೆ, ಅವರ ಆರಾಧನೆಯ ವಿಧಗಳು ತನ್ನನ್ನು ಮೆಚ್ಚಿಸದೆ ಹೋಗಿರುವುದು ಮಾತ್ರವಲ್ಲ, ಆ ಆರಾಧಕರು ಕಪಟಿಗಳಾಗಿದ್ದರಿಂದ ಅವು ತನ್ನ ಸಾತ್ತ್ವಿಕಕ್ರೋಧವನ್ನು ತೀಕ್ಷ್ಣಗೊಳಿಸಿವೆ ಎಂದು ಹೇಳಿದನು. (ಯೆಶಾಯ 1:11-17) ಅದೇ ರೀತಿಯಲ್ಲಿ ಯೆಹೋವನು ಈಗ ಅವರ ಯಜ್ಞಗಳನ್ನು ಭಯಂಕರ ಪಾತಕಗಳಿಗೆ ಹೋಲಿಸುತ್ತಾನೆ. ಅವರು ಅರ್ಪಿಸುವ ಬೆಲೆಬಾಳುವ ಹೋರಿಯ ಯಜ್ಞವು ಯೆಹೋವನನ್ನು ಒಲಿಸುವುದರಲ್ಲಿ ಒಬ್ಬ ಮನುಷ್ಯನನ್ನು ಕೊಲೆಮಾಡಿ ಒಲಿಸುವಷ್ಟೇ ಅಸಫಲವಾಗಿದೆ! ಬೇರೆ ಯಜ್ಞಗಳನ್ನು ನಾಯಿ ಅಥವಾ ಹಂದಿಯನ್ನು ಬಲಿಯಾಗಿ ಅರ್ಪಿಸುವುದಕ್ಕೆ ಹೋಲಿಸಲಾಗಿದೆ. ಏಕೆಂದರೆ ಇವು ಮೋಶೆಯ ಧರ್ಮಶಾಸ್ತ್ರದಲ್ಲಿ ಅಶುದ್ಧ ಪ್ರಾಣಿಗಳಾಗಿದ್ದು, ಖಂಡಿತವಾಗಿಯೂ ಯಜ್ಞಕ್ಕೆ ಅನರ್ಹವಾಗಿವೆ. (ಯಾಜಕಕಾಂಡ 11:7, 27) ಇಂತಹ ಧಾರ್ಮಿಕ ಕಪಟಾಚಾರವನ್ನು ಯೆಹೋವನು ದಂಡಿಸದೆ ಬಿಡುತ್ತಾನೊ?
9. ಯೆಹೋವನು ಯೆಶಾಯನ ಮೂಲಕ ಕೊಟ್ಟ ಮರುಜ್ಞಾಪನಗಳಿಗೆ ಹೆಚ್ಚಿನ ಯೆಹೂದ್ಯರು ಹೇಗೆ ಪ್ರತಿಕ್ರಿಯಿಸಿದ್ದಾರೆ, ಮತ್ತು ಇದರ ಅನಿವಾರ್ಯ ಪರಿಣಾಮವೇನು?
9 ಯೆಹೋವನು ಈಗ ಹೇಳುವುದು: “ಅದಕ್ಕೆ ತಕ್ಕಂತೆ ನಾನು ಇವರಿಗೋಸ್ಕರ ಕುತಂತ್ರಗಳನ್ನು ಆರಿಸಿಕೊಂಡು ಇವರು ಅಂಜುತ್ತಿದ್ದ ವಿಪತ್ತುಗಳನ್ನು ಬರಮಾಡುವೆನು; ಏಕೆಂದರೆ ನಾನು ಕೂಗಿದಾಗ ಯಾರೂ ಉತ್ತರಕೊಡಲಿಲ್ಲ, ನಾನು ಹೇಳಿದಾಗ ಇವರು ಕೇಳಲಿಲ್ಲ; ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡಿಸಿ ನನಗೆ ಇಷ್ಟವಲ್ಲದ್ದನ್ನು ಆರಿಸಿಕೊಂಡರು.” (ಯೆಶಾಯ 66:4) ಯೆಶಾಯನು ಈ ಮಾತುಗಳನ್ನು ತೀರ ದೃಢಾಭಿಪ್ರಾಯದಿಂದ ಹೇಳಶಕ್ತನಾಗಿದ್ದನೆಂಬುದರಲ್ಲಿ ಸಂಶಯವಿಲ್ಲ. ಏಕೆಂದರೆ ಅವನು ಅನೇಕ ವರುಷಗಳಿಂದ ಯೆಹೋವನ ಸಾಧನವಾಗಿದ್ದುಕೊಂಡು, ಆತನ ಜನರಿಗೆ ‘ಕೂಗುತ್ತ’ ‘ಹೇಳುತ್ತಾ’ ಇದ್ದನು. ಆದರೆ ಹೆಚ್ಚುಕಡಿಮೆ ಯಾರೂ ತನ್ನ ಮಾತುಗಳನ್ನು ಆಲಿಸುತ್ತಿರಲಿಲ್ಲವೆಂದು ಪ್ರವಾದಿಗೆ ಚೆನ್ನಾಗಿ ತಿಳಿದಿದೆ. ಅವರು ಕೆಟ್ಟದ್ದನ್ನು ಮಾಡುತ್ತ ಮುಂದುವರಿದಿರುವುದರಿಂದ ಪ್ರತೀಕಾರವು ಅನಿವಾರ್ಯ. ಖಂಡಿತವಾಗಿಯೂ ಯೆಹೋವನು ಅವರಿಗೆ ಬರಬೇಕಾದ ಶಿಕ್ಷೆಯನ್ನು ಆರಿಸಿಕೊಂಡು ತನ್ನ ಧರ್ಮಭ್ರಷ್ಟ ಜನರ ಮೇಲೆ ಭಯಂಕರವಾದ ಘಟನೆಗಳನ್ನು ಬರಮಾಡುವನು.
10. ಯೆಹೂದದೊಂದಿಗಿನ ಯೆಹೋವನ ವ್ಯವಹಾರಗಳು, ಕ್ರೈಸ್ತಪ್ರಪಂಚದ ವಿಷಯದಲ್ಲಿ ಆತನಿಗಿರುವ ಅಭಿಪ್ರಾಯದ ಕುರಿತು ನಮಗೇನು ಹೇಳುತ್ತವೆ?
10 ಆಧುನಿಕ ದಿನದ ಕ್ರೈಸ್ತಪ್ರಪಂಚವು ಸಹ ಹಾಗೆಯೇ ಯೆಹೋವನು ಮೆಚ್ಚದಿರುವ ಸಂಗತಿಗಳನ್ನು ನಡೆಸಿದೆ. ಆಕೆಯ ಚರ್ಚುಗಳಲ್ಲಿ ವಿಗ್ರಹಾರಾಧನೆಯು ಹುಲುಸಾಗಿ ಬೆಳೆದಿದೆ, ಅಶಾಸ್ತ್ರೀಯ ತತ್ತ್ವಜ್ಞಾನಗಳು ಮತ್ತು ಸಂಪ್ರದಾಯಗಳನ್ನು ಆಕೆಯ ಪೀಠಗಳಿಂದ ಘನತೆಗೇರಿಸಲಾಗುತ್ತದೆ ಮತ್ತು ರಾಜಕೀಯ ಅಧಿಕಾರಕ್ಕಾಗಿ ಆಕೆಗಿರುವ ದಾಹವು, ಆಕೆ ಲೋಕದ ಜನಾಂಗಗಳೊಂದಿಗೆ ಆತ್ಮಿಕ ವ್ಯಭಿಚಾರದ ಸಂಬಂಧದಲ್ಲಿ ಹೆಚ್ಚು ಅವನತಿಗಿಳಿಯುವಂತೆ ಮಾಡಿದೆ. (ಮಾರ್ಕ 7:13; ಪ್ರಕಟನೆ 18:4, 5, 9) ಆದಕಾರಣ, ಪುರಾತನ ಯೆರೂಸಲೇಮಿಗಾದಂತೆಯೇ ಕ್ರೈಸ್ತಪ್ರಪಂಚದ ಮೇಲೆ, ‘ಅಂಜುತ್ತಿದ್ದ ವಿಪತ್ತು’ ಅಂದರೆ ದೇವರಿಂದ ಪ್ರತೀಕಾರವು ನಿರ್ದಯದಿಂದ ಬರುತ್ತಿದೆ. ಆಕೆಯ ಮೇಲೆ ಬರುವ ನಿಶ್ಚಿತ ಶಿಕ್ಷೆಗೆ ಒಂದು ಕಾರಣವು, ಆಕೆ ದೇವಜನರನ್ನು ಉಪಚರಿಸಿರುವ ವಿಧವೇ ಆಗಿದೆ.
11. (ಎ) ಯೆಶಾಯನ ದಿನಗಳ ಧರ್ಮಭ್ರಷ್ಟರ ಪಾಪವನ್ನು ಯಾವುದು ಹೆಚ್ಚಿಸುತ್ತದೆ? (ಬಿ) ಯೆಶಾಯನ ಸಮಕಾಲೀನರು ಯಾವ ಅರ್ಥದಲ್ಲಿ ನಂಬಿಗಸ್ತರನ್ನು ‘ದೇವರ ಹೆಸರಿನ ನಿಮಿತ್ತ’ ಬಹಿಷ್ಕರಿಸುತ್ತಾರೆ?
11 ಯೆಶಾಯನು ಮುಂದುವರಿಸುವುದು: “ಯೆಹೋವನ ಮಾತಿಗೆ ಭಯಪಡುವವರೇ, ಆತನ ಮಾತನ್ನು ಕೇಳಿರಿ! ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ದ್ವೇಷಿಸಿ ಬಹಿಷ್ಕರಿಸಿದ ನಿಮ್ಮ ಸಂಬಂಧಿಗಳು [“ಸಹೋದರರು,” NW]—ಯೆಹೋವನು ಮಹಿಮೆಪಡಲಿ, ನಿಮಗಾಗುವ ಉತ್ಸಾಹವನ್ನು ನೋಡೋಣ ಎಂದು ಹೇಳಿದ್ದಾರಲ್ಲಾ; ಅವರಿಗಂತು ಅವಮಾನವಾಗುವದು.” (ಯೆಶಾಯ 66:5) ಯೆಶಾಯನ “ಸಹೋದರರು,” ಅಂದರೆ ಅವನ ಸ್ವದೇಶಸ್ಥರು ಯೆಹೋವ ದೇವರನ್ನು ಪ್ರತಿನಿಧಿಸುವ ಮತ್ತು ಆತನ ಪರಮಾಧಿಕಾರಕ್ಕೆ ಅಧೀನರಾಗುವ ದೇವದತ್ತ ಜವಾಬ್ದಾರಿಯನ್ನು ಹೊಂದಿದ್ದಾರೆ. ಅದನ್ನು ಮಾಡುವುದರಲ್ಲಿ ತಪ್ಪಿಬಿದ್ದಿರುವ ಅವರ ಪಾಪವು ಘೋರವೆಂಬುದು ನಿಶ್ಚಯ. ಆದರೆ ಅವರ ಪಾಪಕ್ಕೆ ಇನ್ನಷ್ಟು ಕೂಡಿಸುವಂಥದ್ದೇನೆಂದರೆ, ಅವರು ಯೆಶಾಯನಂತೆ ನಂಬಿಗಸ್ತರೂ ದೀನರೂ ಆದ ಜನರನ್ನು ದ್ವೇಷಿಸುವುದೇ. ಈ ಧರ್ಮಭ್ರಷ್ಟರು, ನಂಬಿಗಸ್ತರು ಸತ್ಯದಿಂದ ಯೆಹೋವ ದೇವರನ್ನು ಪ್ರತಿನಿಧಿಸುವ ಕಾರಣ ಅವರನ್ನು ದ್ವೇಷಿಸಿ ಬಹಿಷ್ಕರಿಸುತ್ತಾರೆ. ಈ ಅರ್ಥದಲ್ಲಿ ಅವರು “[ದೇವರ] ಹೆಸರಿನ ನಿಮಿತ್ತ” ಬಹಿಷ್ಕರಿಸಲ್ಪಡುತ್ತಾರೆ. ಅದೇ ಸಮಯದಲ್ಲಿ, ಯೆಹೋವನ ಈ ಸುಳ್ಳು ಸೇವಕರು ಆತನನ್ನು ಪ್ರತಿನಿಧಿಸುತ್ತೇವೆಂದು ಹೇಳಿಕೊಂಡು, “ಯೆಹೋವನು ಮಹಿಮೆಪಡಲಿ” ಎಂಬಂತಹ ಧಾರ್ಮಿಕವಾಗಿ ಧ್ವನಿಸುವ ಕಪಟ ಮಾತುಗಳನ್ನು ಉಪಯೋಗಿಸುತ್ತಾರೆ.a
12. ಯೆಹೋವನ ನಂಬಿಗಸ್ತ ಸೇವಕರನ್ನು ಧಾರ್ಮಿಕ ಕಪಟಿಗಳು ಹಿಂಸಿಸಿದ ಕೆಲವು ಉದಾಹರಣೆಗಳಾವುವು?
12 ಶುದ್ಧಾರಾಧನೆಯ ಅನುಯಾಯಿಗಳ ಕಡೆಗೆ ಸುಳ್ಳು ಧರ್ಮಕ್ಕಿರುವ ಹಗೆತನವು ಹೊಸದೇನೂ ಅಲ್ಲ. ಇದು, ಸೈತಾನನ ಸಂತಾನ ಮತ್ತು ದೇವರ ಸ್ತ್ರೀಯ ಸಂತಾನದ ಮಧ್ಯೆ ದೀರ್ಘಕಾಲಿಕ ವೈರತ್ವವನ್ನು ಮುಂತಿಳಿಸಿದ ಆದಿಕಾಂಡ 3:15ರ ಪ್ರವಾದನೆಯ ಇನ್ನೊಂದು ನೆರವೇರಿಕೆಯಾಗಿದೆ. ಒಂದನೆಯ ಶತಮಾನದಲ್ಲಿ ಯೇಸು ತನ್ನ ಅಭಿಷಿಕ್ತ ಹಿಂಬಾಲಕರಿಗೆ, ಅವರು ಸಹ ತಮ್ಮ ಸ್ವದೇಶಸ್ಥರಿಂದ ಹಿಂಸೆಗೊಳಗಾಗುವರು, ಅಂದರೆ ಸಭಾಮಂದಿರಗಳಿಂದ ಬಹಿಷ್ಕರಿಸಲ್ಪಟ್ಟು ಮರಣದ ಹಂತದ ವರೆಗೂ ಹಿಂಸೆಗೊಳಗಾಗುವರೆಂದು ಹೇಳಿದನು. (ಯೋಹಾನ 16:2) ಆಧುನಿಕ ಸಮಯಗಳ ಕುರಿತೇನು? “ಕಡೇ ದಿವಸಗಳ” ಆರಂಭದಲ್ಲಿ, ತಮ್ಮ ಮುಂದೆ ಅದೇ ರೀತಿಯ ಹಿಂಸೆ ಕಾದಿದೆಯೆಂಬುದನ್ನು ದೇವಜನರು ಮನಗಂಡರು. (2 ತಿಮೊಥೆಯ 3:1) ದ ವಾಚ್ಟವರ್ ಪತ್ರಿಕೆಯು 1914ರಲ್ಲಿ ಯೆಶಾಯ 66:5ನ್ನು ಉಲ್ಲೇಖಿಸಿ ಹೇಳಿದ್ದು: “ದೇವಜನರ ಮೇಲೆ ಬಂದಿರುವ ಹೆಚ್ಚುಕಡಿಮೆ ಎಲ್ಲ ಹಿಂಸೆಗಳು ಕ್ರೈಸ್ತರೆನಿಸಿಕೊಳ್ಳುವವರಿಂದ ಬಂದಿವೆ.” ಅದೇ ಲೇಖನವು ಹೀಗೂ ಹೇಳಿತು: “ಅವರು ನಮ್ಮ ದಿನಗಳಲ್ಲಿ ನಮ್ಮನ್ನು ಸಾಮಾಜಿಕವಾಗಿ ಕುಲಗೆಟ್ಟವರಂತೆ ಉಪಚರಿಸುವ, ಸಂಸ್ಥೆಗೆ ಬಲವಂತದಿಂದ ತಡೆಮಾಡುವ, ಮತ್ತು ಪ್ರಾಯಶಃ ನಮ್ಮನ್ನು ಕೊಲ್ಲುವ ವಿಪರೀತಕ್ಕೆ ಹೋಗುವರೊ ಇಲ್ಲವೊ ಎಂಬುದು ನಮಗೆ ತಿಳಿದಿಲ್ಲ.” ಆ ಮಾತುಗಳು ಎಷ್ಟು ಸತ್ಯವಾಗಿ ಪರಿಣಮಿಸಿದವು! ಇದು ಪ್ರಕಟಿಸಲ್ಪಟ್ಟ ಸ್ವಲ್ಪದರಲ್ಲೇ, ಪಾದ್ರಿಗಳಿಂದ ಚಿತಾಯಿಸಲ್ಪಟ್ಟ ಹಿಂಸೆಯು Iನೆಯ ಲೋಕ ಯುದ್ಧದ ಸಮಯದಲ್ಲಿ ವಿಪರೀತವಾಗಿ ತೀಕ್ಷ್ಣಗೊಂಡಿತು. ಆದರೆ ಮುಂತಿಳಿಸಲ್ಪಟ್ಟಂತೆ, ಕ್ರೈಸ್ತಪ್ರಪಂಚವು ಅವಮಾನಕ್ಕೊಳಗಾಯಿತು. ಅದು ಹೇಗೆ?
ಕ್ಷಿಪ್ರವಾದ ಮತ್ತು ಹಠಾತ್ತಾದ ಪುನಸ್ಸ್ಥಾಪನೆ
13. ಮೊದಲನೆಯ ನೆರವೇರಿಕೆಯಲ್ಲಿ, “ಪಟ್ಟಣದ ಕಡೆಯಿಂದ ಗದ್ದಲದ ಶಬ್ದ”ವು ಏನಾಗಿದೆ?
13 ಯೆಶಾಯನು ಪ್ರವಾದಿಸುವುದು: “ಇಗೋ, ಪಟ್ಟಣದ ಕಡೆಯಿಂದ ಗದ್ದಲದ ಶಬ್ದ! ದೇವಾಲಯದಲ್ಲಿ ಶಬ್ದ! ಯೆಹೋವನು ತನ್ನ ಶತ್ರುಗಳಿಗೆ ಮುಯ್ಯಿತೀರಿಸುವ ಶಬ್ದ!” (ಯೆಶಾಯ 66:6) ಈ ಮಾತುಗಳ ಮೊದಲನೆಯ ನೆರವೇರಿಕೆಯಲ್ಲಿ, ಆ “ಪಟ್ಟಣ”ವು ಯೆಹೋವನ ದೇವಾಲಯವಿದ್ದ ಯೆರೂಸಲೇಮ್ ಆಗಿತ್ತು. “ಗದ್ದಲದ ಶಬ್ದ”ವು ಯುದ್ಧದ ಗಲಭೆಯನ್ನು ಸೂಚಿಸುತ್ತದೆ. ಆಕ್ರಮಣ ಮಾಡುತ್ತಿದ್ದ ಬಾಬೆಲಿನ ಸೈನ್ಯಗಳು ಸಾ.ಶ.ಪೂ. 607ರಲ್ಲಿ ದಾಳಿಮಾಡಿದಾಗ ಈ ಗಲಭೆಯು ಪಟ್ಟಣದಲ್ಲಿ ಕೇಳಿಬರುತ್ತದೆ. ಆದರೆ, ಇದರ ಆಧುನಿಕ ದಿನಗಳ ನೆರವೇರಿಕೆಯ ಕುರಿತಾಗಿ ಏನು?
14. (ಎ) ಯೆಹೋವನು ತನ್ನ ಆಲಯಕ್ಕೆ ಬರುವ ವಿಷಯದಲ್ಲಿ ಮಲಾಕಿಯನು ಏನು ಮುಂತಿಳಿಸಿದನು? (ಬಿ) ಯೆಹೆಜ್ಕೇಲನ ಪ್ರವಾದನೆಗನುಸಾರ, ಯೆಹೋವನು ತನ್ನ ಆಲಯಕ್ಕೆ ಬಂದಾಗ ಏನು ಸಂಭವಿಸಿತು? (ಸಿ) ಯೆಹೋವನೂ ಯೇಸುವೂ ಆತ್ಮಿಕ ಆಲಯವನ್ನು ಯಾವಾಗ ಪರೀಕ್ಷಿಸಿದರು, ಮತ್ತು ಶುದ್ಧಾರಾಧನೆಯನ್ನು ಪ್ರತಿನಿಧಿಸುತ್ತೇವೆಂದು ಹೇಳಿಕೊಳ್ಳುತ್ತಿದ್ದವರ ಮೇಲೆ ಇದು ಯಾವ ಪ್ರಭಾವವನ್ನು ಬೀರಿತು?
14 ಯೆಶಾಯ ಪುಸ್ತಕದಲ್ಲಿರುವ ಈ ಮಾತುಗಳು, ಇನ್ನೆರಡು ಕಡೆಗಳಲ್ಲಿರುವ ಪ್ರವಾದನ ಮಾತುಗಳಿಗೆ ಅಂದರೆ ಯೆಹೆಜ್ಕೇಲ 43:4, 6-9 ಮತ್ತು ಮಲಾಕಿಯ 3:1-5ರಲ್ಲಿ ದಾಖಲಿಸಲ್ಪಟ್ಟಿರುವ ಮಾತುಗಳಿಗೆ ಹೊಂದಿಕೆಯಲ್ಲಿವೆ. ಯೆಹೆಜ್ಕೇಲ ಮತ್ತು ಮಲಾಕಿಯ ಇವರಿಬ್ಬರೂ ಯೆಹೋವನು ತನ್ನ ದೇವಾಲಯಕ್ಕೆ ಬರುವ ಸಮಯದ ಕುರಿತು ಮುಂತಿಳಿಸುತ್ತಾರೆ. ಯೆಹೋವನು ತನ್ನ ಶುದ್ಧಾರಾಧನೆಯ ಆಲಯವನ್ನು ಪರೀಕ್ಷಿಸಲು ಮತ್ತು ಅಕ್ಕಸಾಲಿಗನಂತೆ ಕ್ರಿಯೆಗೈಯಲು ಹಾಗೂ ತನ್ನನ್ನು ತಪ್ಪಾಗಿ ಪ್ರತಿನಿಧಿಸುವವರನ್ನು ತಳ್ಳಿಹಾಕಲು ಬರುವುದನ್ನು ಮಲಾಕಿಯನ ಪ್ರವಾದನೆ ತೋರಿಸುತ್ತದೆ. ಯೆಹೆಜ್ಕೇಲನ ದರ್ಶನವು ಯೆಹೋವನು ಆಲಯವನ್ನು ಪ್ರವೇಶಿಸಿ, ಅನೈತಿಕತೆ ಮತ್ತು ವಿಗ್ರಹಾರಾಧನೆಯ ಎಲ್ಲ ಸುಳಿವುಗಳು ತೆಗೆದುಹಾಕಲ್ಪಡಬೇಕೆಂದು ಹಕ್ಕಿನಿಂದ ಕೇಳಿಕೊಳ್ಳುವುದನ್ನು ಚಿತ್ರಿಸುತ್ತದೆ.b ಈ ಪ್ರವಾದನೆಗಳ ಆಧುನಿಕ ನೆರವೇರಿಕೆಯಲ್ಲಿ, 1918ರಲ್ಲಿ ಯೆಹೋವನ ಆರಾಧನೆಯ ಸಂಬಂಧದಲ್ಲಿ ಒಂದು ಪ್ರಧಾನ ಆತ್ಮಿಕ ಬೆಳವಣಿಗೆ ಘಟಿಸಿತು. ಆಗ ಶುದ್ಧಾರಾಧನೆಯನ್ನು ಪ್ರತಿನಿಧಿಸುತ್ತೇವೆಂದು ಹೇಳಿಕೊಳ್ಳುವವರನ್ನು ಯೆಹೋವನೂ ಯೇಸುವೂ ಪರೀಕ್ಷಿಸಿ ನೋಡಿದರೆಂದು ಸ್ಪಷ್ಟವಾಗುತ್ತದೆ. ಆ ಪರೀಕ್ಷೆಯು ಭ್ರಷ್ಟವಾದ ಕ್ರೈಸ್ತಪ್ರಪಂಚದ ಅಂತಿಮ ತ್ಯಜನಕ್ಕೆ ನಡೆಸಿತು. ಕ್ರಿಸ್ತನ ಅಭಿಷಿಕ್ತ ಹಿಂಬಾಲಕರಿಗಾದರೋ ಈ ಪರೀಕ್ಷೆಯು ಸ್ವಲ್ಪ ಕಾಲಾವಧಿಯ ಶುದ್ಧೀಕರಣದ ಅವಧಿಯಾಗಿತ್ತು ಮತ್ತು ಆ ಬಳಿಕ 1919ರಲ್ಲಿ ತ್ವರಿತಗತಿಯ ಆತ್ಮಿಕ ಪುನಸ್ಸ್ಥಾಪನೆಗೆ ನಡೆಸಿತು.—1 ಪೇತ್ರ 4:17.
15. ಯಾವ ಜನನವು ಮುಂತಿಳಿಸಲ್ಪಟ್ಟಿದೆ, ಮತ್ತು ಇದು ಸಾ.ಶ.ಪೂ. 537ರಲ್ಲಿ ಹೇಗೆ ನೆರವೇರಿತು?
15 ಈ ಪುನಸ್ಸ್ಥಾಪನೆಯನ್ನು ಯೆಶಾಯನ ಮುಂದಿನ ವಚನಗಳಲ್ಲಿ ಸೂಕ್ತವಾಗಿ ಚಿತ್ರಿಸಲಾಗಿದೆ: “ಆಹಾ, ಬೇನೆ ತಿನ್ನುವದರೊಳಗೆ ಹೆರಿಗೆಯಾಯಿತು, ಪ್ರಸವವೇದನೆ ಇನ್ನು ಕಾಣದಿರುವಲ್ಲಿ ಗಂಡನ್ನು ಹಡೆದಳು. ಇಂಥಾ ಸುದ್ದಿಯನ್ನು ಯಾರು ಕೇಳಿದ್ದಾರೆ? ಇಂಥಾ ಸಂಗತಿಯನ್ನು ಕಂಡವರಾರು? ಒಂದು ದಿನದಲ್ಲಿ ರಾಷ್ಟ್ರವು [“ದೇಶವು,” NW] ಹುಟ್ಟೀತೇ? ಕ್ಷಣಮಾತ್ರದಲ್ಲಿ ಜನಾಂಗವನ್ನು ಹೆರಲಿಕ್ಕಾದೀತೇ? ಹೌದು, ಚೀಯೋನೆಂಬಾಕೆಯು ಬೇನೆತಿಂದು ತನಗಾಗಿ ಮಕ್ಕಳನ್ನು ಹಡೆದಿದ್ದಾಳೆ.” (ಯೆಶಾಯ 66:7, 8) ಬಾಬೆಲಿನಲ್ಲಿ ದೇಶಭ್ರಷ್ಟರಾಗಿದ್ದ ಯೆಹೂದ್ಯರು ಈ ಮಾತುಗಳ ರೋಮಾಂಚಕವಾದ ಪ್ರಥಮ ನೆರವೇರಿಕೆಯನ್ನು ನೋಡಿದರು. ಮತ್ತು ಈಗ, ಚೀಯೋನ್ ಅಥವಾ ಯೆರೂಸಲೇಮ್ ಪುನಃ ಮಗುವನ್ನು ಹಡೆಯುವ ಸ್ತ್ರೀಯಾಗಿ ಚಿತ್ರಿಸಲ್ಪಟ್ಟಿದ್ದಾಳೆ. ಆದರೆ ಎಂತಹ ವಿಚಿತ್ರ ಜನನ! ಅದು ಎಷ್ಟು ಕ್ಷಿಪ್ರವಾಗಿ ಮತ್ತು ಹಠಾತ್ತಾಗಿ ನಡೆಯುತ್ತದೆಂದರೆ, ಪ್ರಸವವೇದನೆಗೆ ಮೊದಲೇ ಜನನ ಸಂಭವಿಸುತ್ತದೆ! ಈ ಚಿತ್ರಣವು ಸಮಂಜಸವಾದದ್ದಾಗಿದೆ. ಏಕೆಂದರೆ, ಸಾ.ಶ.ಪೂ. 537ರಲ್ಲಿ ದೇವಜನರು ಪ್ರತ್ಯೇಕ ಜನಾಂಗವಾಗಿ ಪುನಃ ಹುಟ್ಟಿದ ವಿಷಯವು ಎಷ್ಟು ಕ್ಷಿಪ್ರವಾಗಿ ಮತ್ತು ಹಠಾತ್ತಾಗಿ ನಡೆಯಿತೆಂದರೆ, ಅದು ಒಂದು ಅದ್ಭುತ ವಿಷಯವಾಗಿ ಕಂಡುಬಂತು. ಹೇಗೆಂದರೆ, ಕೋರೆಷನು ಯೆಹೂದ್ಯರನ್ನು ಬಂಧಿವಾಸದಿಂದ ಬಿಡಿಸಿದಂದಿನಿಂದ ಆ ನಂಬಿಗಸ್ತ ಉಳಿಕೆಯವರು ತಮ್ಮ ಸ್ವದೇಶಕ್ಕೆ ಹಿಂದಿರುಗುವ ವರೆಗೆ ಹಿಡಿದ ಸಮಯವು ಕೇವಲ ಕೆಲವೇ ತಿಂಗಳುಗಳಾಗಿದ್ದವು! ಇಸ್ರಾಯೇಲ್ ಜನಾಂಗದ ಆರಂಭದ ಜನನಕ್ಕೆ ನಡೆಸಿದ ವಿಷಯಗಳಿಗಿಂತ ಇದೆಷ್ಟು ಭಿನ್ನವಾಗಿದೆ! ಸಾ.ಶ.ಪೂ. 537ರಲ್ಲಿ, ಬಿಡುಗಡೆಗಾಗಿ ವಿರೋಧಿಸುವವನಾದ ಒಬ್ಬ ರಾಜನಿಗೆ ಮನವಿಮಾಡಿಕೊಳ್ಳುವ ಅಗತ್ಯವಿರುವುದಿಲ್ಲ. ಶತ್ರು ಸೈನ್ಯವು ಬೆನ್ನಟ್ಟುವಾಗ ಓಡಿಹೋಗಬೇಕಾಗಿರುವುದಿಲ್ಲ. ಅರಣ್ಯದಲ್ಲಿ 40 ವರುಷಗಳ ವರೆಗೆ ಅಲೆದಾಡಬೇಕಾಗಿಲ್ಲ.
16. ಯೆಶಾಯ 66:7, 8ರ ಆಧುನಿಕ ದಿನಗಳ ನೆರವೇರಿಕೆಯಲ್ಲಿ ಚೀಯೋನು ಏನನ್ನು ಚಿತ್ರಿಸುತ್ತದೆ, ಮತ್ತು ಆಕೆಯ ಸಂತತಿಗೆ ಹೇಗೆ ಪುನರ್ಜನನವಾಗಿದೆ?
16 ಆಧುನಿಕ ದಿನದ ನೆರವೇರಿಕೆಯಲ್ಲಿ, ಚೀಯೋನು ಯೆಹೋವನ ಸ್ವರ್ಗೀಯ “ಸ್ತ್ರೀ”ಯನ್ನು, ಅಂದರೆ ಆತ್ಮ ಜೀವಿಗಳ ಆತನ ಸ್ವರ್ಗೀಯ ಸಂಸ್ಥೆಯನ್ನು ಪ್ರತಿನಿಧಿಸುತ್ತದೆ. 1919ರಲ್ಲಿ ಈ “ಸ್ತ್ರೀ”ಯು, ತನ್ನ ಅಭಿಷಿಕ್ತ ಪುತ್ರರು ಭೂಮಿಯ ಮೇಲೆ ಒಂದು ಸಂಘಟಿತ ಜನರಾಗಿ, ಒಂದು “ಜನಾಂಗ”ವಾಗಿ ಹುಟ್ಟುವುದನ್ನು ನೋಡಿ ಸಂತೋಷಿಸಿದಳು. ಆ ಪುನರ್ಜನನವು ಕ್ಷಿಪ್ರವಾಗಿಯೂ ಹಠಾತ್ತಾಗಿಯೂ ನಡೆಯಿತು.c ಕೆಲವೇ ತಿಂಗಳುಗಳಲ್ಲಿ, ಅಭಿಷಿಕ್ತರು ಒಂದು ಸಮೂಹದೋಪಾದಿ ಮರಣಸದೃಶ ನಿಷ್ಕ್ರಿಯ ಸ್ಥಿತಿಯಿಂದ ಹೊರಬಂದು, ತಮ್ಮ “ದೇಶ”ದಲ್ಲಿ ಅಂದರೆ ತಮ್ಮ ಆತ್ಮಿಕ ಚಟುವಟಿಕೆಯ ದೇವದತ್ತ ಕ್ಷೇತ್ರದಲ್ಲಿ ಹುರುಪಿನಿಂದ ಕೂಡಿದ ಕ್ರಿಯಾಶೀಲ ಜೀವನಕ್ಕೆ ತಿರುಗಿದರು. (ಪ್ರಕಟನೆ 11:8-12) ಅವರು 1919ರ ಶರತ್ಕಾಲದೊಳಗೆ, ದ ವಾಚ್ಟವರ್ ಪತ್ರಿಕೆಗೆ ಪೂರಕವಾಗಿ ಒಂದು ಹೊಸ ಪತ್ರಿಕೆಯ ಪ್ರಕಾಶನವನ್ನೂ ಪ್ರಕಟಿಸಿದರು. ದ ಗೋಲ್ಡನ್ ಏಜ್ (ಈಗ ಎಚ್ಚರ!) ಎಂಬ ಈ ಹೊಸ ಪತ್ರಿಕೆಯು, ದೇವಜನರು ಪುನರ್ಚೇತರಿಸಲ್ಪಟ್ಟು ಪುನಃ ಸೇವೆಗಾಗಿ ಸಂಘಟಿಸಲ್ಪಟ್ಟಿದ್ದಾರೆಂಬುದಕ್ಕೆ ಪುರಾವೆಯಾಗಿತ್ತು.
17. ಆತ್ಮಿಕ ಇಸ್ರಾಯೇಲಿನ ಸಂಬಂಧದಲ್ಲಿ ತನಗಿರುವ ಉದ್ದೇಶವನ್ನು ನೆರವೇರಿಸುವುದರಲ್ಲಿ ಆತನನ್ನು ಯಾವುದೂ ತಡೆಯಲಾರದೆಂದು ಯೆಹೋವನು ತನ್ನ ಜನರಿಗೆ ಹೇಗೆ ಆಶ್ವಾಸನೆ ನೀಡುತ್ತಾನೆ?
17 ವಿಶ್ವದ ಯಾವ ಶಕ್ತಿಯೂ ಈ ಆತ್ಮಿಕ ಜನನವನ್ನು ತಡೆಯಲು ಸಾಧ್ಯವಿರಲಿಲ್ಲ. ಮುಂದಿನ ವಚನವು ಹೆಚ್ಚುಕಡಿಮೆ ಅದನ್ನೇ ಸುವ್ಯಕ್ತವಾಗಿ ಹೇಳುತ್ತದೆ: “ನಾನು ಗರ್ಭದ್ವಾರವನ್ನು ತೆರೆದ ಮೇಲೆ ಪ್ರಸವಿಸಗೊಡದೆ ಹೋದೇನೋ ಎಂದು ಯೆಹೋವನು ಹೇಳುತ್ತಾನೆ. ಪ್ರಸವಮಾಡಿಸುವವನಾದ ನಾನು ಗರ್ಭವನ್ನು ಮುಚ್ಚೇನೋ ಎಂದು ನಿನ್ನ ದೇವರು ನುಡಿಯುತ್ತಾನೆ.” (ಯೆಶಾಯ 66:9) ಹುಟ್ಟಿನ ಕಾರ್ಯವಿಧಾನವು ಒಮ್ಮೆ ಆರಂಭವಾದಲ್ಲಿ ಹೇಗೆ ಅನಿವಾರ್ಯವೊ ಹಾಗೆಯೆ ಒಮ್ಮೆ ಆರಂಭವಾದ ಆತ್ಮಿಕ ಇಸ್ರಾಯೇಲ್ಯರ ಪುನರ್ಜನನವು ನಿಲ್ಲಿಸಲಾಗದ್ದಾಗಿತ್ತು. ಹೌದು, ಆಗ ಅದಕ್ಕೆ ವಿರೋಧವಿತ್ತು ಮತ್ತು ಭವಿಷ್ಯತ್ತಿನಲ್ಲಿ ಕೂಡ ಹೆಚ್ಚು ವಿರೋಧವಿದ್ದೀತು. ಆದರೆ ತಾನು ಆರಂಭಿಸಿದ್ದನ್ನು ಯೆಹೋವನು ಮಾತ್ರ ನಿಲ್ಲಿಸಶಕ್ತನು ಮತ್ತು ಆತನು ಎಂದಿಗೂ ಹಾಗೆ ನಿಲ್ಲಿಸುವುದಿಲ್ಲ! ಆದರೆ ಯೆಹೋವನು ತನ್ನ ಪುನರ್ಚೇತರಿಸಲ್ಪಟ್ಟ ಜನರನ್ನು ಹೇಗೆ ನೋಡಿಕೊಳ್ಳುತ್ತಾನೆ?
ಯೆಹೋವನ ಕೋಮಲ ಆರೈಕೆ
18, 19. (ಎ) ಯಾವ ಹೃದಯಸ್ಪರ್ಶಿ ದೃಷ್ಟಾಂತವನ್ನು ಯೆಹೋವನು ಉಪಯೋಗಿಸುತ್ತಾನೆ, ಮತ್ತು ಇದು ಆತನ ದೇಶಭ್ರಷ್ಟ ಜನರಿಗೆ ಹೇಗೆ ಅನ್ವಯಿಸುತ್ತದೆ? (ಬಿ) ಇಂದು ಅಭಿಷಿಕ್ತ ಉಳಿಕೆಯವರು ಪ್ರೀತಿಯ ಪೋಷಣೆ ಮತ್ತು ಆರೈಕೆಯಿಂದ ಹೇಗೆ ಪ್ರಯೋಜನ ಪಡೆದಿದ್ದಾರೆ?
18 ಮುಂದಿನ ನಾಲ್ಕು ವಚನಗಳು, ಯೆಹೋವನ ಕೋಮಲ ಪರಾಮರಿಕೆಯ ಹೃದಯಸ್ಪರ್ಶಿ ಚಿತ್ರಣವನ್ನು ಒದಗಿಸುತ್ತವೆ. ಮೊದಲನೆಯದಾಗಿ, ಯೆಶಾಯನು ಹೇಳುವುದು: “ಯೆರೂಸಲೇಮ್ ಪುರಿಯನ್ನು ಪ್ರೀತಿಸುವವರೇ, ನೀವೆಲ್ಲರೂ ಆಕೆಯೊಂದಿಗೆ ಆನಂದಿಸಿರಿ, ಆಕೆಯ ವಿಷಯದಲ್ಲಿ ಹರ್ಷಗೊಳ್ಳಿರಿ! ಆಕೆಯ ನಿಮಿತ್ತ ದುಃಖಿಸುವವರೇ, ನೀವೆಲ್ಲರೂ—ಆಕೆಯ ಸಮಾಧಾಯಕಸ್ತನ್ಯವನ್ನು ಕುಡಿದು ತೃಪ್ತಿಗೊಳ್ಳುವೆವು, ಹೌದು, ಆಕೆಯ ವೈಭವದ ಸಮೃದ್ಧಿಯನ್ನು ಹೀರುತ್ತಾ ಹಿಗ್ಗುವೆವು ಎಂದು ಆಕೆಯೊಂದಿಗೆ ಉತ್ಸಾಹದಿಂದ ಉಲ್ಲಾಸಿಸಿರಿ.” (ಯೆಶಾಯ 66:10, 11) ಯೆಹೋವನು ಇಲ್ಲಿ, ತನ್ನ ಮಗುವಿಗೆ ಮೊಲೆಹಾಲು ಕುಡಿಸುತ್ತಿರುವ ಸ್ತ್ರೀಯ ದೃಷ್ಟಾಂತವನ್ನು ಕೊಡುತ್ತಾನೆ. ಮಗುವಿಗೆ ಹಸಿವೆಯಾಗುವಾಗ ಅದು ಗೋಳುಗರೆಯುತ್ತದೆ. ಆದರೆ ಹಾಲು ಕುಡಿಯಲಿಕ್ಕಾಗಿ ಅದು ತಾಯಿಯ ಸ್ತನದ ಹತ್ತಿರ ತರಲ್ಪಟ್ಟಾಗ, ಅದರ ಗೋಳು ಸಂತುಷ್ಟಿ ಮತ್ತು ತೃಪ್ತಿಯಾಗಿ ಪರಿವರ್ತನೆಹೊಂದುತ್ತದೆ. ಇದೇ ರೀತಿಯಲ್ಲಿ, ಬಾಬೆಲಿನಲ್ಲಿರುವ ಯೆಹೂದಿ ನಂಬಿಗಸ್ತ ಉಳಿಕೆಯವರ ಬಿಡುಗಡೆ ಮತ್ತು ಪುನಸ್ಸ್ಥಾಪನೆಯ ಸಮಯವು ಬರುವಾಗ, ಆ ಕೂಡಲೆ ಅವರು ದುಃಖದ ಸ್ಥಿತಿಯಿಂದ ಸಂತೋಷದ ಸ್ಥಿತಿಗೆ ತರಲ್ಪಡುವರು. ಅವರು ಹರ್ಷಿಸುವರು. ಯೆರೂಸಲೇಮ್ ಪುನರ್ನಿರ್ಮಾಣಗೊಂಡು ಜನರು ಅದರಲ್ಲಿ ಪುನಃ ವಾಸಿಸತೊಡಗುವಾಗ ಅದರ ಮಹಿಮೆಯು ನವೀಕರಿಸಲ್ಪಡುವುದು. ತದನಂತರ, ಆ ನಗರದ ಮಹಿಮೆಯು ಅದರ ನಂಬಿಗಸ್ತ ನಿವಾಸಿಗಳನ್ನು ಆವರಿಸುವುದು. ಅವರು ಪುನಃ ಒಂದು ಕ್ರಿಯಾಶೀಲ ಯಾಜಕತ್ವದ ಮೂಲಕ ಆತ್ಮಿಕವಾಗಿ ಪೋಷಿಸಲ್ಪಡುವರು.—ಯೆಹೆಜ್ಕೇಲ 44:15, 23.
19 ಆತ್ಮಿಕ ಇಸ್ರಾಯೇಲ್ ಸಹ 1919ರ ಪುನಸ್ಸ್ಥಾಪನೆಯ ಬಳಿಕ ಹೇರಳವಾದ ಪೋಷಣೆಯಿಂದ ಆಶೀರ್ವದಿಸಲ್ಪಟ್ಟಿತು. ಅಂದಿನಿಂದ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸಿರುವ ಆತ್ಮಿಕ ಆಹಾರವು ಎಡೆಬಿಡದೆ ಹಂಚಲ್ಪಡುತ್ತಾ ಇದೆ. (ಮತ್ತಾಯ 24:45-47) ಈ ಸಮಯವು ಅಭಿಷಿಕ್ತ ಉಳಿಕೆಯವರಿಗೆ ಖಂಡಿತವಾಗಿಯೂ ಸಾಂತ್ವನ ಮತ್ತು ಹರ್ಷದ ಸಮಯವಾಗಿದೆ. ಆದರೆ ಇನ್ನೂ ಹೆಚ್ಚಿನ ಆಶೀರ್ವಾದಗಳು ಮುಂದಿದ್ದವು.
20. ಪುರಾತನ ಕಾಲದಲ್ಲಿಯೂ ಆಧುನಿಕ ಕಾಲಗಳಲ್ಲಿಯೂ ಯೆರೂಸಲೇಮ್ “ತುಂಬಿ ತುಳುಕುವ ತೊರೆ”ಯಿಂದ ಹೇಗೆ ಆಶೀರ್ವದಿಸಲ್ಪಟ್ಟಿದೆ?
20 ಪ್ರವಾದನೆಯು ಮುಂದುವರಿಸುವುದು: “ಯೆಹೋವನು ಹೀಗನ್ನುತ್ತಾನೆ—ಇಗೋ, ನಾನು ಆಕೆಗೆ ಸುಖವನ್ನು ನದಿಯಂತೆ ದಯಪಾಲಿಸಿ ತುಂಬಿ ತುಳುಕುವ ತೊರೆಯನ್ನೋ ಎಂಬಂತೆ ಜನಾಂಗಗಳ ವೈಭವವನ್ನು ನೀಡುವೆನು; ನೀವು ಪಾನಮಾಡುವಿರಿ; ನಿಮ್ಮನ್ನು ಕಂಕುಳಲ್ಲಿ ಎತ್ತಿಕೊಂಡು ಹೋಗುವರು, ತೊಡೆಯ ಮೇಲೆ ನಲಿದಾಡಿಸುವರು.” (ಯೆಶಾಯ 66:12) ಇಲ್ಲಿ ಮೊಲೆಯೂಡಿಸುವ ಕೆಲಸವನ್ನು ಆಶೀರ್ವಾದಗಳ ಹೇರಳ ಹರಿವಿನ ಚಿತ್ರಣದೊಂದಿಗೆ, ಅಂದರೆ “ನದಿ” ಮತ್ತು “ತುಂಬಿ ತುಳುಕುವ ತೊರೆ”ಯೊಂದಿಗೆ ಜೋಡಿಸಲಾಗಿದೆ. ಆದುದರಿಂದ, ಯೆರೂಸಲೇಮು ಯೆಹೋವನಿಂದ ಬರುವ ಸಮೃದ್ಧ ಶಾಂತಿಯಿಂದ ಆಶೀರ್ವದಿಸಲ್ಪಡುವುದು ಮಾತ್ರವಲ್ಲ, ದೇವಜನರ ಬಳಿಗೆ ಹರಿದು ಅವರನ್ನು ಆಶೀರ್ವದಿಸುವ “ಜನಾಂಗಗಳ ವೈಭವ”ದಿಂದಲೂ ಆಶೀರ್ವದಿಸಲ್ಪಡುವುದು. ಜನಾಂಗಗಳವರು ಯೆಹೋವನ ಜನರ ಬಳಿಗೆ ಪ್ರವಹಿಸಿ ಬರುವರೆಂಬುದು ಇದರ ಅರ್ಥವಾಗಿದೆ. (ಹಗ್ಗಾಯ 2:7) ಪುರಾತನ ಕಾಲದ ನೆರವೇರಿಕೆಯಲ್ಲಿ, ವಿವಿಧ ಜನಾಂಗಗಳ ಅನೇಕರು ಬಂದು ಯೆಹೂದಿ ಮತಾಂತರಿಗಳಾಗಿ ಇಸ್ರಾಯೇಲ್ಯರೊಂದಿಗೆ ಸೇರಿಕೊಂಡದ್ದು ನಿಜ. ಆದರೂ ಅದಕ್ಕಿಂತಲೂ ಎಷ್ಟೋ ದೊಡ್ಡದಾದ ನೆರವೇರಿಕೆಯು ನಮ್ಮ ಸ್ವಂತ ದಿನಗಳಲ್ಲಿ ನಡೆದಿದೆ. ‘ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲ ಭಾಷೆಗಳನ್ನಾಡುವವರೂ ಆದ ಮಹಾ ಸಮೂಹ’ವೊಂದು, ನಿಜವಾಗಿಯೂ ಮಾನವಕುಲದ ತುಂಬಿ ತುಳುಕುತ್ತಿರುವ ತೊರೆಯೊಂದು, ಆತ್ಮಿಕ ಯೆಹೂದ್ಯರಲ್ಲಿ ಉಳಿಕೆಯವರೊಂದಿಗೆ ಸೇರಿಕೊಂಡಿದೆ.—ಪ್ರಕಟನೆ 7:9; ಜೆಕರ್ಯ 8:23.
21. ಒಂದು ಆಕರ್ಷಕ ಶಬ್ದ ಚಿತ್ರದಲ್ಲಿ, ಯಾವ ರೀತಿಯ ಸಾಂತ್ವನವು ಮುಂತಿಳಿಸಲ್ಪಟ್ಟಿದೆ?
21 ಒಂದು ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಹೋಗುವುದು ಮತ್ತು ತೊಡೆಯ ಮೇಲೆ ನಲಿದಾಡಿಸುವುದು, ಒಬ್ಬ ತಾಯಿಯ ಪ್ರೀತಿಯ ಅಭಿವ್ಯಕ್ತಿಯಾಗಿದೆ. ಇದರ ಕುರಿತು ಸಹ ಯೆಶಾಯ 66:12ನೆಯ ವಚನವು ಹೇಳುತ್ತದೆ. ಮುಂದಿನ ವಚನದಲ್ಲಿ ಇದೇ ವಿಚಾರವನ್ನು, ದೃಷ್ಟಿಕೋನದಲ್ಲಿ ಒಂದು ಆಸಕ್ತಿಕರ ಬದಲಾವಣೆಯೊಂದಿಗೆ ವ್ಯಕ್ತಪಡಿಸಲಾಗಿದೆ: “ತಾಯಿ ಮಗನನ್ನು [“ಪುರುಷನನ್ನು,” NW] ಸಂತೈಸುವ ಪ್ರಕಾರ ನಾನು ನಿಮ್ಮನ್ನು ಸಂತೈಸುವೆನು; ಯೆರೂಸಲೇಮಿನಲ್ಲೇ ನಿಮಗೆ ದುಃಖಶಮನವಾಗುವದು.” (ಯೆಶಾಯ 66:13) ಆ ಮಗು ಈಗ “ಪುರುಷ”ನು ಅಥವಾ ವಯಸ್ಕನಾಗಿರುವುದಾದರೂ, ಅವನ ತಾಯಿ ಕಷ್ಟದ ಸಮಯದಲ್ಲಿ ಅವನನ್ನು ಸಂತೈಸುವ ಬಯಕೆಯನ್ನು ಕಳೆದುಕೊಂಡಿರುವುದಿಲ್ಲ.
22. ಯೆಹೋವನು ತನ್ನ ಪ್ರೀತಿಯ ಕೋಮಲತೆಯನ್ನೂ ಶಕ್ತಿಯನ್ನೂ ಹೇಗೆ ತೋರಿಸುತ್ತಾನೆ?
22 ಈ ಆಕರ್ಷಕ ರೀತಿಯಲ್ಲಿ ಯೆಹೋವನು, ತನ್ನ ಜನರ ಕಡೆಗಿರುವ ಆತನ ಪ್ರೀತಿಯ ಶಕ್ತಿಯನ್ನೂ ಕೋಮಲತೆಯನ್ನೂ ದೃಷ್ಟಾಂತಿಸುತ್ತಾನೆ. ಒಬ್ಬ ತಾಯಿಗಿರುವ ಅತಿ ಬಲವಾದ ಪ್ರೀತಿಯು ಸಹ, ಯೆಹೋವನಿಗೆ ತನ್ನ ನಂಬಿಗಸ್ತ ಜನರ ಕಡೆಗಿರುವ ಆಳವಾದ ಪ್ರೀತಿಯ ಎದುರಿನಲ್ಲಿ ಮೊಬ್ಬಾದ ಪ್ರತಿಬಿಂಬವಾಗಿದೆ. (ಯೆಶಾಯ 49:15) ಎಲ್ಲ ಕ್ರೈಸ್ತರು ತಮ್ಮ ಸ್ವರ್ಗೀಯ ತಂದೆಯ ಈ ಗುಣವನ್ನು ಪ್ರತಿಬಿಂಬಿಸುವುದು ಎಷ್ಟು ಅತ್ಯಾವಶ್ಯಕವಾಗಿದೆ! ಅಪೊಸ್ತಲ ಪೌಲನು ಹೀಗೆ ಮಾಡುವ ಮೂಲಕ ಕ್ರೈಸ್ತ ಸಭೆಯ ಹಿರಿಯರಿಗೆ ಒಂದು ಉತ್ತಮ ಮಾದರಿಯನ್ನಿಟ್ಟಿದ್ದಾನೆ. (1 ಥೆಸಲೊನೀಕ 2:7) ಸಹೋದರ ಪ್ರೇಮವು ತನ್ನ ಹಿಂಬಾಲಕರನ್ನು ಗುರುತಿಸುವ ಪ್ರಧಾನ ಚಿಹ್ನೆಯೆಂದು ಯೇಸು ಹೇಳಿದನು.—ಯೋಹಾನ 13:34, 35.
23. ಯೆಹೋವನ ಪುನಸ್ಸ್ಥಾಪಿತ ಜನರ ಸಂತೋಷದ ಸ್ಥಿತಿಯನ್ನು ವರ್ಣಿಸಿರಿ.
23 ಯೆಹೋವನು ತನ್ನ ಪ್ರೀತಿಯನ್ನು ಕಾರ್ಯದಲ್ಲಿ ತೋರಿಸುತ್ತಾನೆ. ಆದಕಾರಣ ಆತನು ಮುಂದುವರಿಸುವುದು: “ನೀವು ಇದನ್ನು ಕಣ್ಣಾರೆ ಕಾಣುವಿರಿ, ನಿಮ್ಮ ಹೃದಯವು ಉಲ್ಲಾಸಿಸುವದು, ನಿಮ್ಮ ಎಲುಬುಗಳು ಹಸಿ ಹುಲ್ಲಿನಂತೆ ರಸವತ್ತಾಗುವವು; ಆಗ ಯೆಹೋವನು ತನ್ನ ಸೇವಕರ ಮೇಲೆ ಕೃಪಾಹಸ್ತವನ್ನು ವ್ಯಕ್ತಪಡಿಸಿ ತನ್ನ ಶತ್ರುಗಳ ಮೇಲೆ ರೋಷಗೊಳ್ಳುವನು.” (ಯೆಶಾಯ 66:14) ಹೀಬ್ರು ಭಾಷೆಯ ವ್ಯಾಕರಣಕಾರನೊಬ್ಬನ ಅಭಿಪ್ರಾಯವೇನಂದರೆ, “ನೀವು ಇದನ್ನು ಕಣ್ಣಾರೆ ಕಾಣುವಿರಿ” ಎಂಬ ಮಾತುಗಳು, ಹಿಂದಿರುಗುವ ದೇಶಭ್ರಷ್ಟರು ತಮ್ಮ ಪುನಸ್ಸ್ಥಾಪಿತ ದೇಶದಲ್ಲಿ ಎಲ್ಲಿ ನೋಡಿದರೂ “ಹರ್ಷವನ್ನೇ ಕಾಣುವರು” ಎಂಬುದನ್ನು ಸೂಚಿಸುತ್ತದೆ. ತಮ್ಮ ಅಚ್ಚುಮೆಚ್ಚಿನ ಸ್ವದೇಶಕ್ಕೆ ಪುನಸ್ಸ್ಥಾಪಿಸಲ್ಪಟ್ಟದ್ದಕ್ಕಾಗಿ ಅವರು ನಿಶ್ಚಯವಾಗಿಯೂ ಉಲ್ಲಾಸಿಸುವರು, ವರ್ಣಿಸಲಾಗದಷ್ಟು ರೋಮಾಂಚನಗೊಳ್ಳುವರು. ತಮ್ಮ ಎಲುಬುಗಳು ಪುನಃ ಬಲಾಢ್ಯವಾಗಿ ಬೆಳೆಯುತ್ತವೋ ಎಂಬಂತೆ ಅವರು ನವೀಕರಿಸಲ್ಪಡುವರು, ವಸಂತಕಾಲದ ಹುಲ್ಲಿನಂತೆ ಚೇತನಗೊಳಿಸಲ್ಪಡುವರು. ಈ ಧನ್ಯ ಪರಿಸ್ಥಿತಿಯು ಬಂದೊದಗಿದ್ದು ಮಾನವ ಪ್ರಯತ್ನದಿಂದಲ್ಲ, ‘ಯೆಹೋವನ ಕೃಪಾಹಸ್ತದಿಂದಲೇ’ ಎಂದು ಎಲ್ಲರೂ ತಿಳಿಯುವರು.
24. (ಎ) ಇಂದು ಯೆಹೋವನ ಜನರನ್ನು ಬಾಧಿಸುತ್ತಿರುವ ಸಂಗತಿಗಳನ್ನು ಪರ್ಯಾಲೋಚಿಸುವಾಗ ನೀವು ಯಾವ ತೀರ್ಮಾನಕ್ಕೆ ಬರುತ್ತೀರಿ? (ಬಿ) ನಮ್ಮ ದೃಢನಿರ್ಧಾರವೇನಾಗಿರಬೇಕು?
24 ಯೆಹೋವನ ಹಸ್ತವು ಆತನ ಜನರ ಮಧ್ಯೆ ಕೆಲಸಮಾಡುತ್ತಿರುವುದನ್ನು ನೀವು ಗುರುತಿಸುತ್ತೀರೊ? ಶುದ್ಧಾರಾಧನೆಯ ಪುನಸ್ಸ್ಥಾಪನೆಯನ್ನು ಮಾಡುವುದು ಯಾವ ಮನುಷ್ಯನಿಂದಲೂ ಸಾಧ್ಯವಿಲ್ಲ. ಲಕ್ಷಾಂತರ ಮಂದಿ ಅಮೂಲ್ಯ ಜನರು ಪ್ರವಾಹದಂತೆ ಎಲ್ಲ ಜನಾಂಗಗಳಿಂದ ನಂಬಿಗಸ್ತ ಉಳಿಕೆಯವರನ್ನು ಅವರ ಆತ್ಮಿಕ ದೇಶದಲ್ಲಿ ಕೂಡಿಕೊಳ್ಳಲು ಬರುವಂತೆ ಮಾಡುವುದು ಯಾವ ಮನುಷ್ಯನಿಗೂ ಅಸಾಧ್ಯ. ಯೆಹೋವ ದೇವರು ಮಾತ್ರ ಹಾಗೆ ಮಾಡಬಲ್ಲನು. ಯೆಹೋವನ ಪ್ರೀತಿಯ ಇಂತಹ ಅಭಿವ್ಯಕ್ತಿಗಳು ನಮಗೆ ಆಳವಾದ ಸಂತೋಷಕ್ಕೆ ಕಾರಣವನ್ನು ಕೊಡುತ್ತವೆ. ಆತನ ಪ್ರೀತಿಯನ್ನು ನಾವೆಂದೂ ಮಾಮೂಲಿಯಾಗಿ ತೆಗೆದುಕೊಳ್ಳದಿರೋಣ. ನಾವು ಆತನ ‘ಮಾತಿಗೆ ಭಯಪಡುತ್ತ’ ಮುಂದುವರಿಯೋಣ. ನಾವು ಬೈಬಲ್ ಮೂಲತತ್ತ್ವಗಳಿಗನುಸಾರ ಜೀವಿಸಲು ಮತ್ತು ಯೆಹೋವನನ್ನು ಸೇವಿಸುವುದರಲ್ಲಿ ಹರ್ಷವನ್ನು ಕಂಡುಕೊಳ್ಳಲು ನಿರ್ಧರಿಸೋಣ.
[ಪಾದಟಿಪ್ಪಣಿಗಳು]
a ಇಂದು ಕ್ರೈಸ್ತಪ್ರಪಂಚದಲ್ಲಿ ಅನೇಕರು ಯೆಹೋವನ ವೈಯಕ್ತಿಕ ಹೆಸರನ್ನು ಬಳಸಲು ನಿರಾಕರಿಸುವುದು ಮಾತ್ರವಲ್ಲ, ಅದನ್ನು ಅನೇಕ ಬೈಬಲ್ ಭಾಷಾಂತರಗಳಿಂದ ತೆಗೆದುಹಾಕಿದ್ದಾರೆ ಕೂಡ. ದೇವಜನರು ಆತನ ವೈಯಕ್ತಿಕ ಹೆಸರನ್ನು ಉಪಯೋಗಿಸುತ್ತಿರುವುದರಿಂದ ಕೆಲವರು ಅವರನ್ನು ತಿರಸ್ಕಾರದಿಂದ ಕಾಣುತ್ತಾರೆ. ಹಾಗಿದ್ದರೂ ಇವರಲ್ಲಿ ಅನೇಕರು “ಹಲ್ಲೆಲೂಯ” ಅಂದರೆ “ಯಾಹುವಿಗೆ ಸ್ತೋತ್ರ” ಎಂಬ ಅಭಿವ್ಯಕ್ತಿಯನ್ನು ಕಪಟಧಾರ್ಮಿಕತೆಯಿಂದ ಉಪಯೋಗಿಸುತ್ತಾರೆ.
b ಯೆಹೆಜ್ಕೇಲ 43:7, 9ರಲ್ಲಿ ಬಳಸಲಾಗಿರುವ, ‘ತಮ್ಮ . . . ಅರಸರ ಶವಗಳು’ ಎಂಬ ವಾಕ್ಸರಣಿಯು, ವಿಗ್ರಹಗಳನ್ನು ಸೂಚಿಸುತ್ತದೆ. ಯೆರೂಸಲೇಮಿನ ದಂಗೆಕೋರ ನಾಯಕರು ಮತ್ತು ಜನರು ದೇವಾಲಯವನ್ನು ವಿಗ್ರಹಗಳಿಂದ ಮಲಿನಗೊಳಿಸಿ, ಕಾರ್ಯತಃ ಅವುಗಳನ್ನು ಅರಸರನ್ನಾಗಿ ಮಾಡಿದ್ದರು.
c ಇಲ್ಲಿ ಪ್ರವಾದಿಸಲ್ಪಟ್ಟ ಜನನವು ಮತ್ತು ಪ್ರಕಟನೆ 12:1, 2, 5ರಲ್ಲಿ ವರ್ಣಿಸಲ್ಪಟ್ಟಿರುವ ಜನನವು ಒಂದೇ ಅಲ್ಲ. ಪ್ರಕಟನೆಯ ಆ ಅಧ್ಯಾಯದಲ್ಲಿ ತಿಳಿಸಲ್ಪಟ್ಟಿರುವ “ಗಂಡುಮಗು”ವು, 1914ರಲ್ಲಿ ಕಾರ್ಯನಡೆಸತೊಡಗಿದ ಮೆಸ್ಸೀಯ ಸಂಬಂಧಿತ ರಾಜ್ಯವನ್ನು ಚಿತ್ರಿಸುತ್ತದೆ. ಆದರೂ ಈ ಎರಡೂ ಪ್ರವಾದನೆಗಳ “ಸ್ತ್ರೀ” ಒಬ್ಬಳನ್ನೇ ಸೂಚಿಸುತ್ತದೆ.
[ಪುಟ 395ರಲ್ಲಿರುವ ಚಿತ್ರ]
“[ನನ್ನ ಕೈಯಿಂದಲೇ] ಇವುಗಳೆಲ್ಲಾ ಉಂಟಾದವು”
[ಪುಟ 402ರಲ್ಲಿರುವ ಚಿತ್ರ]
ಯೆಹೋವನು ಚೀಯೋನಿಗೆ “ಜನಾಂಗಗಳ ವೈಭವವನ್ನು” ನೀಡುವನು