ಅಧ್ಯಾಯ ಹತ್ತು
‘ಎಂದಿಗೂ ಅಳಿಯದ’ ರಾಜ್ಯ
1. ಮಾನವಕುಲದ ಇತಿಹಾಸದಲ್ಲೆಲ್ಲ ಲೋಕ ಘಟನೆಗಳು ಯಾವ ನಿಜತ್ವವನ್ನು ಒತ್ತಿಹೇಳಿರುತ್ತವೆ?
ಪ್ರತಿದಿನದ ಲೋಕ ಘಟನೆಗಳು, ಮನುಷ್ಯರು ಯೆಹೋವನ ಪರಮಾಧಿಕಾರವನ್ನು ತಳ್ಳಿಹಾಕಿ ತಮ್ಮನ್ನು ತಾವೇ ಆಳಿಕೊಳ್ಳಲು ಪ್ರಯತ್ನಿಸಿರುವುದರಿಂದ ಸಂತೋಷವನ್ನು ಕಂಡುಕೊಂಡಿರುವುದಿಲ್ಲ ಎಂಬುದನ್ನು ಒತ್ತಿಹೇಳುತ್ತವೆ. ಮಾನವಕುಲಕ್ಕೆ ಯಾವುದೇ ಮಾನವ ಸರಕಾರ ವ್ಯವಸ್ಥೆಯೂ ಪಕ್ಷಪಾತವಿಲ್ಲದ ಪ್ರಯೋಜನಗಳನ್ನು ತಂದಿರುವುದಿಲ್ಲ. ಮನುಷ್ಯರು ತಮ್ಮ ವೈಜ್ಞಾನಿಕ ತಿಳಿವಳಿಕೆಯಲ್ಲಿ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿ ಪ್ರಗತಿ ಮಾಡಿರುವುದಾದರೂ, ಅವರು ರೋಗವನ್ನು ಜಯಿಸಿದ್ದಾಗಲಿ ಮರಣಕ್ಕೆ ಅಂತ್ಯವನ್ನು ತಂದಿದ್ದಾಗಲಿ ಇಲ್ಲ—ಇದು ಕೇವಲ ಒಬ್ಬ ವ್ಯಕ್ತಿಯ ವಿಷಯದಲ್ಲೂ ಅವರು ಮಾಡಸಾಧ್ಯವಾಗಿಲ್ಲ. ಮಾನವಾಳಿಕೆಯು ಯುದ್ಧ, ಹಿಂಸಾಚಾರ, ಪಾತಕ, ಭ್ರಷ್ಟಾಚಾರ ಅಥವಾ ದಾರಿದ್ರ್ಯವನ್ನು ನಿವಾರಿಸಿರುವುದಿಲ್ಲ. ಅನೇಕ ದೇಶಗಳಲ್ಲಿ ದಬ್ಬಾಳಿಕೆ ನಡೆಸುವ ಸರಕಾರಗಳು ಇನ್ನೂ ಜನರ ಮೇಲೆ ಪ್ರಭುತ್ವ ನಡೆಸುತ್ತವೆ. (ಪ್ರಸಂಗಿ 8:9) ಯಂತ್ರಕಲೆ, ಲೋಭ ಮತ್ತು ಅಜ್ಞಾನಗಳು ಭೂಮಿ, ಜಲ ಮತ್ತು ವಾಯುವನ್ನು ಮಲಿನಗೊಳಿಸುವುದರಲ್ಲಿ ಜೊತೆಗೂಡುತ್ತವೆ. ಅಧಿಕಾರಿಗಳ ಆರ್ಥಿಕ ದುರ್ನಿರ್ವಹಣೆಯ ಕಾರಣ ಅನೇಕರಿಗೆ ಜೀವನಾವಶ್ಯಕತೆಗಳನ್ನು ಪಡೆದುಕೊಳ್ಳುವುದೇ ಕಷ್ಟಕರವಾಗಿರುತ್ತದೆ. ಸಾವಿರಾರು ವರುಷಗಳ ಮಾನವಾಳಿಕೆಯು ಈ ನಿಜತ್ವವನ್ನು ಸ್ಪಷ್ಟಪಡಿಸುತ್ತದೆ: “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲ . . . ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”—ಯೆರೆಮೀಯ 10:23.
2. ಮಾನವಕುಲದ ಸಮಸ್ಯೆಗಳಿಗಿರುವ ಏಕಮಾತ್ರ ಪರಿಹಾರವೇನು?
2 ಹಾಗಾದರೆ ಪರಿಹಾರವಾದರೂ ಏನು? ಯೇಸು ತನ್ನ ಹಿಂಬಾಲಕರಿಗೆ, “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂದು ಪ್ರಾರ್ಥಿಸಲು ಕಲಿಸಿದ ದೇವರ ರಾಜ್ಯವೇ ಈ ಪರಿಹಾರ. (ಮತ್ತಾಯ 6:9, 10) ದೇವರ ಸ್ವರ್ಗೀಯ ರಾಜ್ಯವನ್ನು 2 ಪೇತ್ರ 3:13ರಲ್ಲಿ “ನೂತನಾಕಾಶಮಂಡಲ” ಎಂದು ವರ್ಣಿಸಲಾಗಿದೆ. ಇದು “ನೂತನಭೂಮಂಡಲ”ದ ಮೇಲೆ ಅಂದರೆ ನೀತಿಯ ಮಾನವ ಸಮಾಜದ ಮೇಲೆ ಆಳಿಕೆ ನಡೆಸುವುದು. ದೇವರ ರಾಜ್ಯವು ಎಷ್ಟು ಪ್ರಮುಖವೆಂದರೆ, ಯೇಸು ಅದನ್ನು ತನ್ನ ಸಾರುವಿಕೆಯ ಮುಖ್ಯ ವಿಷಯವನ್ನಾಗಿ ಮಾಡಿದನು. (ಮತ್ತಾಯ 4:17) “ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ” ಎಂದು ಹೇಳುವುದರ ಮೂಲಕ ನಮ್ಮ ಜೀವನದಲ್ಲಿ ಅದಕ್ಕಿರಬೇಕಾದ ಸ್ಥಾನವನ್ನು ಅವನು ತಿಳಿಸಿದನು.—ಮತ್ತಾಯ 6:33.
3. ದೇವರ ರಾಜ್ಯದ ಕುರಿತು ಕಲಿತುಕೊಳ್ಳುವುದು ಈಗ ಏಕೆ ಅತ್ಯಂತ ತುರ್ತಿನ ವಿಷಯವಾಗಿದೆ?
3 ದೇವರ ರಾಜ್ಯದ ವಿಷಯದಲ್ಲಿ ಈಗ ಕಲಿತುಕೊಳ್ಳುವುದು ಅತ್ಯಂತ ತುರ್ತಿನದ್ದಾಗಿದೆ. ಏಕೆಂದರೆ ಬೇಗನೆ ಆ ರಾಜ್ಯವು ಈ ಭೂಮಿಯ ಆಳಿಕೆಯನ್ನು ಸದಾಕಾಲಕ್ಕೂ ಬದಲಾಯಿಸಲು ಕ್ರಮವನ್ನು ಕೈಕೊಳ್ಳಲಿರುವುದು. ದಾನಿಯೇಲ 2:44 ಮುಂತಿಳಿಸುವುದು: “ಆ ರಾಜರ [ಈಗ ಆಳುತ್ತಿರುವ ಸರಕಾರಗಳ] ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು [ಪರಲೋಕದಲ್ಲಿ] ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು [ಮಾನವರು ಇನ್ನೆಂದಿಗೂ ಭೂಮಿಯನ್ನು ಆಳರು], ಆ [ಸದ್ಯದ] ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” ಹೀಗೆ ಆ ರಾಜ್ಯವು ಇಡೀ ದುಷ್ಟ ವಿಷಯಗಳ ವ್ಯವಸ್ಥೆಯನ್ನು ನಾಶಪಡಿಸಿ ಈ ಕೊನೇ ದಿವಸಗಳನ್ನು ಅಂತ್ಯಗೊಳಿಸುವುದು. ಆಗ ಸ್ವರ್ಗೀಯ ರಾಜ್ಯದ ಮೂಲಕ ಬರುವ ಭೂಆಳಿಕೆಯ ವಿಷಯದಲ್ಲಿ ಯಾವುದೇ ವಿವಾದವಿರದು. ಇದು ತರಲಿರುವ ಉಪಶಮನವು ಈಗ ಅತಿ ಹತ್ತಿರದಲ್ಲಿದೆಯೆಂಬುದಕ್ಕೆ ನಾವೆಷ್ಟು ಕೃತಜ್ಞರು!
4. ರಾಜ್ಯದ ಸಂಬಂಧದಲ್ಲಿ, 1914ರಲ್ಲಿ ಸ್ವರ್ಗದಲ್ಲಿ ಏನು ನಡೆಯಿತು, ಮತ್ತು ಅದು ನಮಗೇಕೆ ಪ್ರಾಮುಖ್ಯ?
4 ಕ್ರಿಸ್ತ ಯೇಸುವನ್ನು 1914ರಲ್ಲಿ ಅರಸನಾಗಿ ಪ್ರತಿಷ್ಠಾಪಿಸಲಾದಾಗ ಅವನಿಗೆ “[ತನ್ನ] ವೈರಿಗಳ ಮಧ್ಯದಲ್ಲಿ ದೊರೆತನ” ಮಾಡುವಂತೆ ಅಧಿಕಾರವು ಕೊಡಲ್ಪಟ್ಟಿತು. (ಕೀರ್ತನೆ 110:1, 2) ಮತ್ತು ಅದೇ ವರುಷ, ಈಗಿನ ದುಷ್ಟ ವಿಷಯಗಳ ವ್ಯವಸ್ಥೆಯ “ಕಡೇ ದಿವಸ”ಗಳು ಆರಂಭಗೊಂಡವು. (2 ತಿಮೊಥೆಯ 3:1-5, 13) ಅದೇ ಸಮಯದಲ್ಲಿ, ದಾನಿಯೇಲನು ತನ್ನ ಪ್ರವಾದನಾತ್ಮಕ ದರ್ಶನದಲ್ಲಿ ನೋಡಿದ್ದ ಘಟನೆಗಳು ಸ್ವರ್ಗದಲ್ಲಿ ವಾಸ್ತವವಾಗಿ ನೆರವೇರಿದವು. “ಮಹಾವೃದ್ಧ”ನಾದ ಯೆಹೋವ ದೇವರು ಮನುಷ್ಯಕುಮಾರನಾದ ಯೇಸು ಕ್ರಿಸ್ತನಿಗೆ, “ಸಕಲಜನಾಂಗ ಕುಲಭಾಷೆಗಳವರು ಅವನನ್ನು ಸೇವಿಸಲೆಂದು” ‘ದೊರೆತನವನ್ನೂ ಘನತೆಯನ್ನೂ ರಾಜ್ಯವನ್ನೂ ಕೊಟ್ಟನು.’ ಈ ದರ್ಶನದ ಬಗ್ಗೆ ವರದಿ ಮಾಡುತ್ತಾ ದಾನಿಯೇಲನು ಬರೆದುದು: “ಅವನ ಆಳಿಕೆಯು ಅಂತ್ಯವಿಲ್ಲದ್ದು, ಶಾಶ್ವತವಾದದ್ದು; ಅವನ ರಾಜ್ಯವು ಎಂದಿಗೂ ಅಳಿಯದು.” (ದಾನಿಯೇಲ 7:13, 14) ಪ್ರಥಮ ಹೆತ್ತವರು ಪರದೈಸಿನಲ್ಲಿದ್ದಾಗ ದೇವರು ಉದ್ದೇಶಿಸಿದ ಅಸಂಖ್ಯಾತ ಸುಸಂಗತಿಗಳನ್ನು ನೀತಿಪ್ರಿಯರು ಅನುಭವಿಸುವಂತೆ ಆತನು ಸಾಧ್ಯಮಾಡುವುದು, ಕ್ರಿಸ್ತ ಯೇಸುವಿನ ಅಧಿಕಾರದಲ್ಲಿರುವ ಈ ಸ್ವರ್ಗೀಯ ರಾಜ್ಯದ ಮೂಲಕವೇ.
5. ರಾಜ್ಯದ ಬಗ್ಗೆ ಯಾವ ವಿವರಗಳು ನಮಗೆ ತೀರ ಆಸಕ್ತಿಯವುಗಳಾಗಿವೆ ಮತ್ತು ಏಕೆ?
5 ಈ ರಾಜ್ಯದ ನಿಷ್ಠಾವಂತ ಪ್ರಜೆಯಾಗಿರಲು ನೀವು ಬಯಸುತ್ತೀರೊ? ಹಾಗಿರುವಲ್ಲಿ, ಈ ಸ್ವರ್ಗೀಯ ಸರಕಾರದ ರಚನೆ ಮತ್ತು ಕಾರ್ಯದಲ್ಲಿ ನೀವು ತೀರ ಆಸಕ್ತರಾಗಿರುವುದು ಖಂಡಿತ. ಅದು ಈಗ ಏನು ಮಾಡುತ್ತಿದೆ, ಭವಿಷ್ಯತ್ತಿನಲ್ಲಿ ಏನು ಮಾಡಲಿದೆ ಮತ್ತು ಅದು ನಿಮ್ಮಿಂದ ಏನನ್ನು ಅಪೇಕ್ಷಿಸುತ್ತದೆ ಎಂದು ನೀವು ತಿಳಿಯಬಯಸುವಿರಿ. ನೀವು ಈ ರಾಜ್ಯವನ್ನು ನಿಕಟವಾಗಿ ಪರೀಕ್ಷಿಸುವಾಗ, ಅದಕ್ಕಾಗಿ ನಿಮಗಿರುವ ಕೃತಜ್ಞತಾಭಾವವು ಬೆಳೆಯಬೇಕು. ನೀವು ಅದರ ಆಳಿಕೆಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ತೋರಿಸುವಲ್ಲಿ, ದೇವರ ರಾಜ್ಯವು ವಿಧೇಯ ಮಾನವಕುಲಕ್ಕೆ ಮಾಡಲಿರುವ ಅದ್ಭುತಕರವಾದ ವಿಷಯಗಳನ್ನು ಇತರರಿಗೆ ತಿಳಿಸಲು ಹೆಚ್ಚು ಸನ್ನದ್ಧರಾಗುವಿರಿ.—ಕೀರ್ತನೆ 48:12, 13.
ದೇವರ ರಾಜ್ಯದ ರಾಜರು
6. (ಎ) ಮೆಸ್ಸೀಯ ರಾಜ್ಯದ ಮೂಲಕ ಯಾರ ಪರಮಾಧಿಕಾರವು ವ್ಯಕ್ತವಾಗುತ್ತದೆಂಬುದನ್ನು ಶಾಸ್ತ್ರವಚನಗಳು ಹೇಗೆ ತೋರಿಸುತ್ತವೆ? (ಬಿ) ರಾಜ್ಯದ ಬಗ್ಗೆ ನಾವೇನು ಕಲಿಯುತ್ತೇವೊ ಅದರಿಂದ ನಾವು ಹೇಗೆ ಪ್ರಭಾವಿತರಾಗಬೇಕು?
6 ಇಂತಹ ಪರೀಕ್ಷೆಯು ತಿಳಿಯಪಡಿಸುವ ಪ್ರಥಮ ವಿಷಯಗಳಲ್ಲಿ ಒಂದು, ಮೆಸ್ಸೀಯನ ರಾಜ್ಯವು ದೇವರ ಸ್ವಂತ ಪರಮಾಧಿಕಾರದ ಅಭಿವ್ಯಕ್ತಿಯಾಗಿದೆ ಎಂದೇ. ತನ್ನ ಪುತ್ರನಿಗೆ ‘ದೊರೆತನವನ್ನೂ ಘನತೆಯನ್ನೂ ರಾಜ್ಯವನ್ನೂ’ ಕೊಟ್ಟದ್ದು ಯೆಹೋವನೇ. ದೇವಕುಮಾರನಿಗೆ ಅರಸನಾಗಿ ಆಳುವ ಅಧಿಕಾರ ದೊರೆತಾಗ, ಪರಲೋಕದ ಜಯಘೋಷಗಳು ಯೋಗ್ಯವಾಗಿಯೇ ಪ್ರಕಟಿಸಿದ್ದು: “ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ [ಯೆಹೋವ ದೇವರಿಗೂ] ಆತನು ಅಭಿಷೇಕಿಸಿದವನಿಗೂ ಉಂಟಾಯಿತು; ಆತನು [ಯೆಹೋವನು] ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು.” (ಪ್ರಕಟನೆ 11:15) ಹೀಗೆ ಈ ರಾಜ್ಯದ ಬಗ್ಗೆ ಮತ್ತು ಅದರ ಸಾಧನೆಯ ಬಗ್ಗೆ ನಾವು ಗಮನಿಸುವ ಪ್ರತಿಯೊಂದು ವಿಷಯವು, ನಮ್ಮನ್ನು ಯೆಹೋವನ ಬಳಿಗೆ ಇನ್ನೂ ಹೆಚ್ಚು ಸಮೀಪಕ್ಕೆ ಸೆಳೆಯಬಲ್ಲದು. ನಾವೇನು ಕಲಿಯುತ್ತಿದ್ದೇವೊ ಅದು ನಮ್ಮಲ್ಲಿ ಆತನ ಪರಮಾಧಿಕಾರಕ್ಕೆ ಸದಾಕಾಲ ಅಧೀನರಾಗುವ ಬಯಕೆಯನ್ನು ಹುಟ್ಟಿಸಬೇಕು.
7. ಯೇಸು ಕ್ರಿಸ್ತನು ಯೆಹೋವನ ಪ್ರತಿನಿಧಿ ರಾಜನಾಗಿದ್ದಾನೆಂಬುದು ನಮಗೆ ಏಕೆ ವಿಶೇಷ ಆಸಕ್ತಿಯ ವಿಷಯವಾಗಿದೆ?
7 ಯೆಹೋವನು ಯೇಸು ಕ್ರಿಸ್ತನನ್ನು ಸಿಂಹಾಸನದ ಮೇಲೆ ಪ್ರತಿನಿಧಿ ರಾಜನಾಗಿ ಕುಳ್ಳಿರಿಸಿರುವ ನಿಜತ್ವವನ್ನೂ ಪರಿಗಣಿಸಿರಿ. ದೇವರು ಭೂಮಿಯನ್ನೂ ಮಾನವರನ್ನೂ ನಿರ್ಮಿಸಿದಾಗ ಯೇಸುವನ್ನು ಕುಶಲ ಶಿಲ್ಪಿಯಾಗಿ ಉಪಯೋಗಿಸಿದ್ದುದರಿಂದ, ನಮಗೆ ಏನು ಆವಶ್ಯಕವೆಂಬುದು ನಮಗಿಂತಲೂ ಅವನಿಗೆ ಚೆನ್ನಾಗಿ ತಿಳಿದಿದೆ. ಇದಲ್ಲದೆ, ಮಾನವ ಇತಿಹಾಸ ಮೊದಲ್ಗೊಂಡು ಅವನು ‘ಮಾನವಸಂತಾನದಲ್ಲಿ ಹರ್ಷಿಸಿದನು.’ (ಜ್ಞಾನೋಕ್ತಿ 8:30, 31; ಕೊಲೊಸ್ಸೆ 1:15-17) ಮಾನವರಿಗಾಗಿ ಅವನಲ್ಲಿ ಎಷ್ಟು ಮಹತ್ತಾದ ಪ್ರೀತಿಯಿತ್ತೆಂದರೆ, ಅವನು ತಾನೇ ಭೂಮಿಗೆ ಬಂದು ತನ್ನ ಜೀವವನ್ನು ನಮ್ಮ ಸಲುವಾಗಿ ವಿಮೋಚನಾ ಯಜ್ಞವಾಗಿ ಕೊಟ್ಟನು. (ಯೋಹಾನ 3:16) ಹೀಗೆ ಅವನು ನಮಗೆ ಪಾಪ ಮತ್ತು ಮರಣದಿಂದ ಬಿಡುಗಡೆಯ ಮತ್ತು ನಿತ್ಯಜೀವದ ಅವಕಾಶದ ಮಾಧ್ಯಮವನ್ನು ಲಭ್ಯಗೊಳಿಸಿದನು.—ಮತ್ತಾಯ 20:28.
8. (ಎ) ಮಾನವ ಆಳಿಕೆಗಳಿಗೆ ವೈದೃಶ್ಯವಾಗಿ, ದೇವರ ಸರಕಾರವು ಏಕೆ ಶಾಶ್ವತವಾಗಿ ಉಳಿಯುವ ಸರಕಾರವಾಗಿದೆ? (ಬಿ) “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಮತ್ತು ಸ್ವರ್ಗೀಯ ಸರಕಾರದ ಮಧ್ಯೆ ಯಾವ ಸಂಬಂಧವಿದೆ?
8 ದೇವರ ರಾಜ್ಯವು ಸ್ಥಿರವಾಗಿರುವ, ಶಾಶ್ವತವಾಗಿ ಉಳಿಯಲಿರುವ ಸರಕಾರವಾಗಿದೆ. ಯೆಹೋವನು ತಾನೇ ಮರಣಾಧೀನನಾಗಿಲ್ಲದಿರುವ ನಿಜತ್ವವು, ಅದು ಶಾಶ್ವತವಾಗಿರುವುದೆಂಬುದಕ್ಕೆ ಆಶ್ವಾಸನೆಯನ್ನು ಕೊಡುತ್ತದೆ. (ಕೀರ್ತನೆ 146:3-5, 10) ಮಾನವ ಅರಸರಿಗೆ ವೈದೃಶ್ಯವಾಗಿ, ದೇವರು ಯಾರಿಗೆ ರಾಜತ್ವವನ್ನು ಒಪ್ಪಿಸಿಕೊಟ್ಟನೊ ಆ ಯೇಸು ಕ್ರಿಸ್ತನೂ ಅಮರತ್ವವುಳ್ಳವನಾಗಿದ್ದಾನೆ. (ರೋಮಾಪುರ 6:9; 1 ತಿಮೊಥೆಯ 6:15, 16) ಸ್ವರ್ಗೀಯ ಸಿಂಹಾಸನಗಳಲ್ಲಿ ಕ್ರಿಸ್ತನೊಂದಿಗೆ, “ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ” ಬಂದ 1,44,000 ಮಂದಿ ದೇವರ ನಿಷ್ಠಾವಂತ ಸೇವಕರೂ ಇರುವರು. ಇವರಿಗೂ ಅಮರತ್ವವು ಕೊಡಲ್ಪಡುತ್ತದೆ. (ಪ್ರಕಟನೆ 5:9, 10; 14:1-4; 1 ಕೊರಿಂಥ 15:42-44, 53) ಇವರಲ್ಲಿ ಹೆಚ್ಚಿನವರು ಈಗಾಗಲೇ ಸ್ವರ್ಗದಲ್ಲಿದ್ದಾರೆ. ಮತ್ತು ಇವರಲ್ಲಿ ಭೂಮಿಯಲ್ಲಿ ಇನ್ನೂ ಉಳಿದಿರುವವರು ಈ ದಿನಗಳ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗವಾಗಿದ್ದಾರೆ. ಮತ್ತು ಈ ವರ್ಗವು ಭೂಮಿಯ ಮೇಲಿನ ಆ ರಾಜ್ಯದ ಅಭಿರುಚಿಗಳನ್ನು ವರ್ಧಿಸುತ್ತದೆ.—ಮತ್ತಾಯ 24:45-47.
9, 10. (ಎ) ಯಾವ ವಿಭಾಜಕ ಮತ್ತು ಭ್ರಷ್ಟ ಪ್ರಭಾವಗಳನ್ನು ದೇವರ ರಾಜ್ಯವು ತೊಲಗಿಸುವುದು? (ಬಿ) ನಮಗೆ ದೇವರ ರಾಜ್ಯದ ಶತ್ರುಗಳಾಗಿರುವ ಅಪೇಕ್ಷೆ ಇಲ್ಲದಿರುವಲ್ಲಿ, ಯಾವ ತೊಡಕುಗಳಿಂದ ನಾವು ದೂರವಿರಬೇಕು?
9 ಈಗ ಬೇಗನೆ, ಯೆಹೋವನು ತನ್ನ ನೇಮಿತ ಸಮಯದಲ್ಲಿ ಭೂಮಿಯನ್ನು ಶುಚಿಗೊಳಿಸಲು ತನ್ನ ಕಾರ್ಯನಿರ್ವಾಹಕ ಸೈನ್ಯಗಳನ್ನು ಕಳುಹಿಸಿಕೊಡುವನು. ಆಗ ಯಾರು ತಮ್ಮ ಸ್ವಂತ ಆಯ್ಕೆಯಿಂದ ಯೆಹೋವನ ಪರಮಾಧಿಕಾರವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೊ ಮತ್ತು ಆತನು ಯೇಸು ಕ್ರಿಸ್ತನ ಮೂಲಕ ಮಾಡುವ ಪ್ರೀತಿಪೂರ್ವಕ ಏರ್ಪಾಡುಗಳನ್ನು ತಾತ್ಸಾರ ಮಾಡುತ್ತಾರೊ ಅಂತಹ ಮಾನವರನ್ನು ಈ ಸೈನ್ಯಗಳು ನಿತ್ಯಕ್ಕೂ ನಾಶಗೊಳಿಸುವವು. (2 ಥೆಸಲೊನೀಕ 1:6-9) ಅದು ಯೆಹೋವನ ದಿನ, ವಿಶ್ವ ಪರಮಾಧಿಕಾರಿಯಾಗಿ ಆತನ ನಿರ್ದೋಷೀಕರಣಕ್ಕೆ ದೀರ್ಘಕಾಲದಿಂದ ಕಾದುಕೊಂಡಿದ್ದ ದಿನವಾಗಿರುವುದು. “ಇಗೋ, ಯೆಹೋವನ ದಿನವು ಬರುತ್ತಿದೆ; ಅದು . . . ಪಾಪಿಗಳನ್ನು ನಿರ್ಮೂಲಪಡಿಸುವದಕ್ಕೆ ಕೋಪೋದ್ರೇಕದಿಂದಲೂ ತೀಕ್ಷ್ಣರೋಷದಿಂದಲೂ ಕ್ರೂರವಾಗಿರುವದು.” (ಯೆಶಾಯ 13:9) “ಆ ದಿನವು ರೌದ್ರದ ದಿನ, ಶ್ರಮಸಂಕಟಗಳ ದಿನ, ಹಾಳುಪಾಳುಮಾಡುವ ದಿನ, ಕತ್ತಲಿನ ಮೊಬ್ಬಿನ ದಿನ, ಕಾರ್ಮುಗಿಲ ಕಗ್ಗತ್ತಲ ದಿನ.”—ಚೆಫನ್ಯ 1:15.
10 ಆಗ ಅದೃಶ್ಯನಾಗಿರುವ ದುಷ್ಟ ಲೋಕಾಧಿಪತಿಯಿಂದ ಇದುವರೆಗೆ ದುರುಪಯೋಗಿಸಲ್ಪಟ್ಟಿರುವ ಎಲ್ಲಾ ಸುಳ್ಳುಧರ್ಮ ಮತ್ತು ಸಕಲ ಮಾನವ ಸರಕಾರಗಳು ಎಂದೆಂದಿಗೂ ನಾಶಗೊಳಿಸಲ್ಪಡುವವು. ಆಗ ಸ್ವಾರ್ಥಮಗ್ನತೆಯ, ಅಪ್ರಾಮಾಣಿಕತೆಯ ಮತ್ತು ದುರ್ನೀತಿಯ ಜೀವನಮಾರ್ಗವನ್ನು ಬೆನ್ನಟ್ಟುತ್ತಾ ಈ ಲೋಕದೊಂದಿಗೆ ತಮ್ಮನ್ನು ಗುರುತಿಸಿಕೊಂಡಿರುವ ಸಕಲರು ನಾಶಗೊಳ್ಳುವರು. ಸೈತಾನನೂ ಅವನ ದೆವ್ವಗಳೂ ಭದ್ರವಾಗಿ ಸಾವಿರ ವರುಷಗಳ ಬಂಧನದಲ್ಲಿರುವಾಗ, ಭೂನಿವಾಸಿಗಳೊಂದಿಗೆ ಅವರಿಗಿರುವ ಸಂಪರ್ಕವು ಕಡಿಯಲ್ಪಡುವುದು. ಆಗ ಸಕಲ ಭೂವಿಚಾರಗಳು ದೇವರ ರಾಜ್ಯದ ಪೂರ್ಣ ನಿಯಂತ್ರಣದಲ್ಲಿರುವವು. ಆಗ ನೀತಿಪ್ರಿಯರಿಗೆಲ್ಲ ಅದೆಂಥ ಉಪಶಮನವು ದೊರೆಯುವುದು!—ಪ್ರಕಟನೆ 18:21, 24; 19:11-16, 19-21; 20:1, 2.
ಆ ರಾಜ್ಯದ ಉದ್ದೇಶಗಳು—ಅವು ಸಾಧಿಸಲ್ಪಡುವ ವಿಧ
11. (ಎ) ಮೆಸ್ಸೀಯ ರಾಜ್ಯವು ಭೂಮಿಗಾಗಿರುವ ಯೆಹೋವನ ಉದ್ದೇಶಗಳನ್ನು ಹೇಗೆ ಪೂರೈಸುವುದು? (ಬಿ) ಆಗ ಭೂಮಿಯ ಮೇಲೆ ಜೀವಿಸುತ್ತಿರುವವರಿಗೆ ರಾಜ್ಯ ಆಳಿಕೆಯು ಯಾವ ಅರ್ಥದಲ್ಲಿರುವುದು?
11 ಭೂಮಿಗಾಗಿರುವ ದೇವರ ಮೂಲೋದ್ದೇಶಗಳನ್ನು ಮೆಸ್ಸೀಯನ ರಾಜ್ಯವು ಪೂರ್ಣವಾಗಿ ನೆರವೇರಿಸುವುದು. (ಆದಿಕಾಂಡ 1:28; 2:8, 9, 15) ಆ ಉದ್ದೇಶವನ್ನು ಸಮರ್ಥಿಸುವುದರಲ್ಲಿ ಮಾನವಕುಲವು ಇಂದಿನ ವರೆಗೂ ತಪ್ಪಿಬಿದ್ದಿದೆ. ಆದರೂ, “ಮುಂದಣ ಸಾಮ್ರಾಜ್ಯವು” ಮನುಷ್ಯ ಕುಮಾರನಾದ ಯೇಸು ಕ್ರಿಸ್ತನ ಅಧೀನದಲ್ಲಿರುವುದು. ಈ ಹಳೆಯ ವ್ಯವಸ್ಥೆಯ ಮೇಲೆ ಯೆಹೋವನ ನ್ಯಾಯತೀರ್ಪಿನ ನಿರ್ವಹಣೆಯಾಗುವಾಗ ಬದುಕಿ ಉಳಿಯವವರೆಲ್ಲರೂ, ಭೂಮಿಯು ಭೌಗೋಳಿಕ ಪರದೈಸವಾಗುವಂತೆ, ಅರಸನಾದ ಕ್ರಿಸ್ತನ ಕೆಳಗೆ ಐಕ್ಯರಾಗಿ ಕಾರ್ಯನಡಿಸುವರು ಮತ್ತು ಅವನು ಏನು ಹೇಳುತ್ತಾನೊ ಅದನ್ನೆಲ್ಲ ಸಂತೋಷದಿಂದ ಮಾಡುವರು. (ಇಬ್ರಿಯ 2:5-9) ಮಾನವಕುಲವೆಲ್ಲ ತನ್ನ ಕೈಕೆಲಸದ ಸಂತೋಷವನ್ನು ಅನುಭವಿಸಿ, ಭೂಉತ್ಪಾದನೆಯ ಸಮೃದ್ಧಿಯಲ್ಲಿ ಪೂರ್ಣವಾಗಿ ಪ್ರಯೋಜನ ಹೊಂದುವುದು.—ಕೀರ್ತನೆ 72:1, 7, 8, 16-19; ಯೆಶಾಯ 65:21, 22.
12. ರಾಜ್ಯದ ಪ್ರಜೆಗಳಿಗೆ ಮನಸ್ಸು ಮತ್ತು ಶರೀರದ ಪರಿಪೂರ್ಣತೆಯನ್ನು ಹೇಗೆ ಒದಗಿಸಲಾಗುವುದು?
12 ಆದಾಮಹವ್ವರು ಸೃಷ್ಟಿಸಲ್ಪಟ್ಟಾಗ ಅವರು ಪರಿಪೂರ್ಣರಾಗಿದ್ದರು, ಮತ್ತು ಅವರ ಸಂತತಿಯವರೆಲ್ಲರೂ ಮನಸ್ಸು ಮತ್ತು ಶರೀರಗಳಲ್ಲಿ ಪರಿಪೂರ್ಣತೆಯನ್ನು ಹೊಂದಿದವರಾಗಿ ಭೂಮಿಯನ್ನು ತುಂಬಿಕೊಳ್ಳಬೇಕೆಂಬುದು ದೇವರ ಉದ್ದೇಶವಾಗಿತ್ತು. ಆ ಉದ್ದೇಶವು ದೇವರ ರಾಜ್ಯದಾಳಿಕೆಯ ಕೆಳಗೆ ಮಹತ್ತಾಗಿ ನಿಜವಾಗುವುದು. ಹೀಗಾಗಬೇಕಾದರೆ, ಪಾಪದ ಸಕಲ ಫಲಗಳನ್ನು ತೊಡೆದುಹಾಕಬೇಕಾಗಿರುವುದರಿಂದ, ಕ್ರಿಸ್ತನು ಆಗ ಅರಸನಾಗಿ ಮಾತ್ರವಲ್ಲ ಮಹಾಯಾಜಕನಾಗಿಯೂ ಸೇವೆಮಾಡುವನು. ಅವನು ತಾಳ್ಮೆಯಿಂದ ವಿಧೇಯ ಪ್ರಜೆಗಳು ತನ್ನ ಸ್ವಂತ ಮಾನವ ಜೀವದ ಪಾಪ ವಿಮೋಚನಾರ್ಥಕ ಯಜ್ಞದ ಬೆಲೆಯಿಂದ ಪ್ರಯೋಜನ ಪಡೆಯುವಂತೆ ಸಹಾಯಮಾಡುವನು.
13. ರಾಜ್ಯ ಆಳಿಕೆಯ ಕೆಳಗೆ ಯಾವ ಶಾರೀರಿಕ ಪ್ರಯೋಜನಗಳು ಅನುಭವಿಸಲ್ಪಡುವವು?
13 ರಾಜ್ಯದ ಆಳಿಕೆಯ ಕೆಳಗೆ ಭೂನಿವಾಸಿಗಳು ಅದ್ಭುತಕರವಾದ ಶಾರೀರಿಕ ಪ್ರಯೋಜನಗಳನ್ನು ಅನುಭವಿಸುವರು. “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು.” (ಯೆಶಾಯ 35:5, 6) ಮುಪ್ಪು ಮತ್ತು ರೋಗದ ಪರಿಣಾಮವಾಗಿ ರೂಪಗೆಟ್ಟಿರುವ ದೇಹವು ಮಗುವಿನ ದೇಹಕ್ಕಿಂತಲೂ ಹೆಚ್ಚು ಕಳೆಯೇರಿದ್ದಾಗಿರುವುದು ಮತ್ತು ಬಹುಕಾಲದ ಬಲಹೀನತೆಗಳು ವೀರ್ಯವತ್ತಾದ ಆರೋಗ್ಯಕ್ಕೆ ದಾರಿಮಾಡಿಕೊಡುವವು. “ಅವನ ದೇಹವು ಬಾಲ್ಯಕ್ಕಿಂತಲೂ ಕೋಮಲವಾಗುವದು, ಅವನು ಪುನಃ ಎಳೆಯತನದ ದಿನಗಳನ್ನು ಅನುಭವಿಸುವನು.” (ಯೋಬ 33:25) “ತಾನು ಅಸ್ವಸ್ಥನು” ಎಂದು ಯಾರೂ ಹೇಳಲು ಕಾರಣವಿಲ್ಲದ ದಿನಗಳು ಬರುವವು. ಏಕೆ? ಏಕೆಂದರೆ ದೇವಭಯವುಳ್ಳ ಮಾನವರು ಪಾಪದ ಹೊರೆ ಮತ್ತು ಅದರ ಘೋರ ಪರಿಣಾಮಗಳಿಲ್ಲದವರಾಗಿ ನೆಮ್ಮದಿಯನ್ನು ಪಡೆಯುವರು. (ಯೆಶಾಯ 33:24; ಲೂಕ 13:11-13) ಹೌದು, ದೇವರು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:4.
14. ಮಾನವ ಪರಿಪೂರ್ಣತೆಯನ್ನು ತಲಪುವುದರಲ್ಲಿ ಏನು ಸೇರಿದೆ?
14 ಆದರೆ ಪರಿಪೂರ್ಣತೆಯಲ್ಲಿ ಸ್ವಸ್ಥವಾದ ದೇಹ ಮತ್ತು ಸ್ವಸ್ಥವಾದ ಮನಸ್ಸುಗಳಿಗಿಂತ ಹೆಚ್ಚಿನದ್ದು ಸೇರಿದೆ. ನಾವು ‘ದೇವರ ಸ್ವರೂಪದಲ್ಲಿ ಆತನ ಹೋಲಿಕೆಗೆ ಸರಿಯಾಗಿ’ ಉಂಟುಮಾಡಲ್ಪಟ್ಟಿರುವುದರಿಂದ ಯೆಹೋವನ ಗುಣಲಕ್ಷಣಗಳನ್ನು ಸರಿಯಾಗಿ ಪ್ರತಿಬಿಂಬಿಸುವುದೂ ಅದರಲ್ಲಿ ಸೇರಿದೆ. (ಆದಿಕಾಂಡ 1:26) ಇದನ್ನು ಪೂರೈಸಲು ಹೆಚ್ಚು ಶಿಕ್ಷಣವು ಆವಶ್ಯಕ. ನೂತನ ಲೋಕದಲ್ಲಿ “ನೀತಿಯು ವಾಸವಾಗಿರುವದು.” ಆದುದರಿಂದ, ಯೆಶಾಯನು ಮುಂತಿಳಿಸಿದಂತೆ, “ಭೂನಿವಾಸಿಗಳು ಧರ್ಮಜ್ಞಾನವನ್ನು [“ನೀತಿಯನ್ನು,” NW] ಪಡೆದುಕೊಳ್ಳುವರು.” (2 ಪೇತ್ರ 3:13; ಯೆಶಾಯ 26:9) ಈ ಗುಣವು ಎಲ್ಲಾ ಕುಲಗಳ ಜನರ ಮಧ್ಯೆ, ಆಪ್ತ ಒಡನಾಡಿಗಳ ಮಧ್ಯೆ, ಕುಟುಂಬದಲ್ಲಿ ಮತ್ತು ಎಲ್ಲಕ್ಕೂ ಮಿಗಿಲಾಗಿ ಸ್ವತಃ ದೇವರೊಂದಿಗೆ ಶಾಂತಿಗೆ ನಡೆಸುತ್ತದೆ. (ಕೀರ್ತನೆ 85:10-13; ಯೆಶಾಯ 32:17) ಯಾರು ನೀತಿಯನ್ನು ಕಲಿಯುತ್ತಾರೊ ಅವರಿಗೆ, ತಮಗಾಗಿರುವ ದೇವರ ಚಿತ್ತದ ಕುರಿತಾದ ಪ್ರಗತಿಪರ ಶಿಕ್ಷಣವು ದೊರೆಯುವದು. ಅವರ ಹೃದಯಗಳಲ್ಲಿ ಯೆಹೋವನ ಪ್ರೀತಿಯು ಆಳವಾಗಿ ಬೇರೂರಿದಾಗ, ಅವರು ತಮ್ಮ ಜೀವಿತದ ಪ್ರತಿಯೊಂದು ಭಾಗದಲ್ಲಿ ಆತನ ಮಾರ್ಗಗಳನ್ನು ಅನುಸರಿಸುವರು. ಆಗ ಅವರು, ‘ನಾನು ತಂದೆಗೆ ಮೆಚ್ಚಿಗೆಯಾಗಿರುವುದನ್ನು ಯಾವಾಗಲೂ ಮಾಡುತ್ತೇನೆ’ ಎಂದು ಯೇಸು ಹೇಳಿದಂತೆಯೇ ಹೇಳಬಲ್ಲರು. (ಯೋಹಾನ 8:29) ಸಕಲ ಮಾನವಕುಲವು ಹಾಗೆ ಹೇಳುವಲ್ಲಿ ಜೀವನವು ಎಷ್ಟು ಆನಂದದಾಯಕವಾಗಿರುವುದು!
ಈಗಾಗಲೇ ವ್ಯಕ್ತವಾಗಿರುವ ಸಾಧನೆಗಳು
15. ಈ ಪರಿಚ್ಛೇದದ ಪ್ರಶ್ನೆಗಳನ್ನು ಉಪಯೋಗಿಸುತ್ತಾ, ರಾಜ್ಯದ ಸಾಧನೆಗಳನ್ನು ಎತ್ತಿ ಹೇಳಿರಿ ಮತ್ತು ನಾವು ಈಗ ಏನು ಮಾಡಬೇಕೆಂಬುದನ್ನು ವಿವರಿಸಿರಿ.
15 ದೇವರ ರಾಜ್ಯದ ಮತ್ತು ಅದರ ಪ್ರಜೆಗಳ ಮನತಟ್ಟುವ ಸಾಧನೆಗಳು ವ್ಯಕ್ತವಾಗಿವೆ. ಅವುಗಳಲ್ಲಿ ಕೆಲವು ಸಾಧನೆಗಳನ್ನು ಮತ್ತು ರಾಜ್ಯದ ಪ್ರಜೆಗಳು ಈಗ ಮಾಡಸಾಧ್ಯವಿರುವ ಮತ್ತು ಮಾಡಬೇಕಾದ ವಿಷಯಗಳನ್ನು ಈ ಕೆಳಗಿನ ಪ್ರಶ್ನೆಗಳೂ ಶಾಸ್ತ್ರವಚನಗಳೂ ನಿಮಗೆ ಜ್ಞಾಪಕ ಹುಟ್ಟಿಸುವವು.
ರಾಜ್ಯವು ಪ್ರಥಮವಾಗಿ ಯಾರ ಮೇಲೆ ಕ್ರಮವನ್ನು ಕೈಕೊಂಡಿತು, ಮತ್ತು ಪರಿಣಾಮವೇನು? (ಪ್ರಕಟನೆ 12:7-10, 12)
ಕ್ರಿಸ್ತನು ಸಿಂಹಾಸನವೇರಿದಂದಿನಿಂದ ಯಾವ ಗುಂಪಿನ ಉಳಿದ ಸದಸ್ಯರ ಒಟ್ಟುಗೂಡಿಸುವಿಕೆಗೆ ಗಮನ ಕೊಡಲಾಗುತ್ತಿದೆ? (ಪ್ರಕಟನೆ 14:1-3)
ಮಹಾ ಸಂಕಟವು ಆರಂಭವಾದ ಬಳಿಕ, ಮತ್ತಾಯ 25:31-33ರಲ್ಲಿ ದಾಖಲೆಯಾಗಿರುವಂತೆ, ತಾನು ಯಾವ ಕೆಲಸವನ್ನು ಮಾಡುವೆನೆಂದು ಯೇಸು ಮುಂತಿಳಿಸಿದನು?
ಯಾವ ಪೂರ್ವಸಿದ್ಧತೆಯ ಕೆಲಸವನ್ನು ಈಗ ಸಾಧಿಸಲಾಗುತ್ತಿದೆ? ಅದರಲ್ಲಿ ಯಾರು ಭಾಗವಹಿಸುತ್ತಿದ್ದಾರೆ? (ಕೀರ್ತನೆ 110:3; ಮತ್ತಾಯ 24:14; ಪ್ರಕಟನೆ 14:6, 7)
ರಾಜಕೀಯ ಮತ್ತು ಧಾರ್ಮಿಕ ವಿರೋಧಿಗಳಿಗೆ ಸಾರುವ ಕೆಲಸವನ್ನು ನಿಲ್ಲಿಸಲಾಗದಿರುವುದು ಏಕೆ? (ಜೆಕರ್ಯ 4:6; ಅ. ಕೃತ್ಯಗಳು 5:38, 39)
ರಾಜ್ಯದ ಆಳಿಕೆಗೆ ಅಧೀನರಾಗಿರುವವರ ಜೀವನಗಳಲ್ಲಿ ಯಾವ ಬದಲಾವಣೆಗಳು ಸಂಭವಿಸಿವೆ? (ಯೆಶಾಯ 2:4; 1 ಕೊರಿಂಥ 6:9-11)
ಸಹಸ್ರ ವರುಷಗಳ ರಾಜ್ಯ
16. (ಎ) ಕ್ರಿಸ್ತನು ಎಷ್ಟು ಕಾಲ ಆಳುವನು? (ಬಿ) ಆ ಸಮಯದಲ್ಲಿ ಮತ್ತು ಆ ಸಮಯದ ತರುವಾಯ ಯಾವ ಅದ್ಭುತಕರವಾದ ವಿಷಯಗಳು ಮಾಡಲ್ಪಡುವವು?
16 ಸೈತಾನನನ್ನೂ ಅವನ ದೆವ್ವಗಳನ್ನೂ ಅಧೋಲೋಕಕ್ಕೆ ದೊಬ್ಬಿದ ಬಳಿಕ, ಯೇಸು ಕ್ರಿಸ್ತನೂ ಅವನ 1,44,000 ಮಂದಿ ಜೊತೆ ಬಾಧ್ಯಸ್ಥರೂ ರಾಜರು ಮತ್ತು ಯಾಜಕರಾಗಿ ಒಂದು ಸಾವಿರ ವರುಷ ಆಳುವರು. (ಪ್ರಕಟನೆ 20:6) ಆ ಸಮಯದಲ್ಲಿ, ಪಾಪ ಮತ್ತು ಆದಾಮನಿಂದ ಬಂದ ಮರಣವು ಸದಾಕಾಲಕ್ಕೂ ತೆಗೆದುಹಾಕಲ್ಪಡುವಾಗ, ಮಾನವಕುಲವು ಪರಿಪೂರ್ಣತೆಗೆ ತರಲ್ಪಡುವುದು. ಆ ಸಹಸ್ರ ವರುಷಗಳ ಆಳಿಕೆಯ ಅಂತ್ಯದಲ್ಲಿ, ಮೆಸ್ಸೀಯ ರಾಜಯಾಜಕನಾಗಿ ಸೇವೆಮಾಡಿ ತನ್ನ ನೇಮಕವನ್ನು ಜಯಪ್ರದವಾಗಿ ಪೂರೈಸುವ ಯೇಸು, “ದೇವರು ಸಮಸ್ತರಲ್ಲಿಯೂ ಸಮಸ್ತವೂ” ಆಗುವಂತೆ “ದೇವರಿಗೆ ರಾಜ್ಯವನ್ನು ಒಪ್ಪಿಸಿ”ಕೊಡುವನು. (1 ಕೊರಿಂಥ 15:24-28) ಆ ಹಂತದಲ್ಲಿ, ಯೆಹೋವನ ವಿಶ್ವ ಪರಮಾಧಿಕಾರದ ಸಮರ್ಥನೆಯ ವಿಷಯದಲ್ಲಿ ರಕ್ಷಿಸಲ್ಪಟ್ಟ ಮಾನವಕುಲವನ್ನು ಪರೀಕ್ಷಿಸಲಿಕ್ಕಾಗಿ ಸೈತಾನನನ್ನು ಸ್ವಲ್ಪಕಾಲ ಬಿಡುಗಡೆಮಾಡಲಾಗುತ್ತದೆ. ಆ ಕೊನೆಯ ಪರೀಕ್ಷೆಯು ಮುಗಿದಾಗ, ಯೆಹೋವನು ಸೈತಾನನನ್ನೂ ಅವನ ಪಕ್ಷವಹಿಸಿರುವ ದಂಗೆಕೋರರನ್ನೂ ನಾಶಮಾಡುವನು. (ಪ್ರಕಟನೆ 20:7-10) ಯೆಹೋವನ ಪರಮಾಧಿಕಾರವನ್ನು, ಅಂದರೆ ಆಳಲು ಆತನಿಗಿರುವ ಹಕ್ಕನ್ನು ಸಮರ್ಥಿಸಿರುವವರು ಆಗ ತಮ್ಮ ಅಚಲವಾದ ನಿಷ್ಠೆಯನ್ನು ಪೂರ್ಣವಾಗಿ ಪ್ರದರ್ಶಿಸಿರುವರು. ಆಗ ಅವರು ಯೆಹೋವನೊಂದಿಗೆ ಯೋಗ್ಯವಾದ ಸಂಬಂಧಕ್ಕೆ ತರಲ್ಪಡುವರು. ಅವರು ನಿತ್ಯಜೀವಕ್ಕಾಗಿ ದೈವಿಕವಾಗಿ ಒಪ್ಪಿಗೆ ಹೊಂದಿರುವ ಪುತ್ರಪುತ್ರಿಯರಾಗಿ ಆತನಿಂದ ಅಂಗೀಕರಿಸಲ್ಪಡುವರು.—ರೋಮಾಪುರ 8:21.
17. (ಎ) ಸಾವಿರ ವರುಷಗಳ ಅಂತ್ಯದಲ್ಲಿ ರಾಜ್ಯಕ್ಕೆ ಏನಾಗುವುದು? (ಬಿ) ರಾಜ್ಯವು “ಎಂದಿಗೂ ಅಳಿಯದು” ಎಂಬುದು ಯಾವ ಅರ್ಥದಲ್ಲಿ?
17 ಹಾಗಿರುವುದರಿಂದ, ಭೂಮಿಯ ಸಂಬಂಧದಲ್ಲಿ ಸ್ವತಃ ಯೇಸುವಿಗೂ 1,44,000 ಮಂದಿಗೂ ಇರುವ ಪಾತ್ರಗಳು ಬದಲಾವಣೆ ಹೊಂದುವವು. ಅವರ ಭಾವೀ ಕೆಲಸವು ಏನಾಗಿರುವುದು? ಇದನ್ನು ಬೈಬಲು ತಿಳಿಸುವುದಿಲ್ಲ. ಆದರೆ ನಾವು ಯೆಹೋವನ ಪರಮಾಧಿಕಾರವನ್ನು ನಂಬಿಗಸ್ತಿಕೆಯಿಂದ ಸಮರ್ಥಿಸುವಲ್ಲಿ, ಸಾವಿರ ವರುಷಗಳ ಆಳಿಕೆಯ ಅಂತ್ಯದಲ್ಲಿ ಜೀವಿತರಾಗಿರುವೆವು. ಆಗ ಯೆಹೋವನು ಅವರಿಗಾಗಿಯೂ ತನ್ನ ಬೆರಗಾಗಿಸುವ ವಿಶ್ವಕ್ಕಾಗಿಯೂ ಏನು ಉದ್ದೇಶಿಸಿರುತ್ತಾನೆಂದು ನಾವು ಕಂಡುಹಿಡಿಯಬಲ್ಲೆವು. ಆದರೂ, ಕ್ರಿಸ್ತನ ಸಾವಿರ ವರುಷಗಳ ಆಳಿಕೆಯು “ಅಂತ್ಯವಿಲ್ಲದ್ದು, [“ಅನಿಶ್ಚಿತಕಾಲ ಉಳಿಯುವಂತಹದ್ದು,” NW]” ಮತ್ತು ಅವನ ರಾಜ್ಯವು “ಎಂದಿಗೂ ಅಳಿಯದು.” (ದಾನಿಯೇಲ 7:14) ಹಾಗಾಗುವುದು ಯಾವ ಅರ್ಥದಲ್ಲಿ? ಒಂದು ವಿಷಯವೇನಂದರೆ, ಯೆಹೋವನೇ ಆಳುವಾತನಾಗಿರುವುದರಿಂದ, ಆಳುವ ಅಧಿಕಾರವು ವಿಭಿನ್ನ ಉದ್ದೇಶಗಳಿರುವಂಥ ಇತರರಿಗೆ ದಾಟಿಸಲ್ಪಡುವುದಿಲ್ಲ. ಅಲ್ಲದೆ ಆ ರಾಜ್ಯವು “ಎಂದಿಗೂ ಅಳಿಯದು,” ಏಕೆಂದರೆ ಅದರ ಸಾಧನೆಗಳು ಎಂದೆಂದಿಗೂ ಉಳಿಯುವವು. (ದಾನಿಯೇಲ 2:44) ಮತ್ತು ಮೆಸ್ಸೀಯ ರಾಜಯಾಜಕನೂ ಅವನ ಜೊತೆ ರಾಜಯಾಜಕರೂ ಯೆಹೋವನಿಗೆ ನಂಬಿಗಸ್ತಿಕೆಯ ಸೇವೆಯನ್ನು ಸಲ್ಲಿಸಿರುವ ಕಾರಣ ಎಂದೆಂದಿಗೂ ಗೌರವಿಸಲ್ಪಡುವರು.
ಪುನರ್ವಿಮರ್ಶೆಯ ಚರ್ಚೆ
• ದೇವರ ರಾಜ್ಯವು ಮಾನವಕುಲದ ಸಮಸ್ಯೆಗಳಿಗಿರುವ ಏಕಮಾತ್ರ ಪರಿಹಾರವೇಕೆ? ದೇವರ ರಾಜ್ಯದ ರಾಜನು ಆಳಲಾರಂಭಿಸಿದ್ದು ಯಾವಾಗ?
• ದೇವರ ರಾಜ್ಯ ಮತ್ತು ಅದು ಸಾಧಿಸಲಿರುವ ಸಂಗತಿಗಳಲ್ಲಿ ವಿಶೇಷವಾಗಿ ನಿಮ್ಮ ಮನಸ್ಸನ್ನು ಸ್ಪರ್ಶಿಸುವ ವಿಷಯ ಯಾವುದು?
• ರಾಜ್ಯದ ಯಾವ ಸಾಧನೆಗಳನ್ನು ನಾವು ಈಗಾಗಲೇ ನೋಡಬಲ್ಲೆವು, ಮತ್ತು ಇವುಗಳಲ್ಲಿ ನಮಗೆ ಯಾವ ಪಾಲು ಇದೆ?
[ಪುಟ 92, 93ರಲ್ಲಿರುವ ಚಿತ್ರ]
ದೇವರ ರಾಜ್ಯದ ಕೆಳಗೆ ಎಲ್ಲಾ ಜನರು ನೀತಿಯನ್ನು ಕಲಿಯುವರು