ಅಧ್ಯಾಯ ಹನ್ನೊಂದು
‘ಪ್ರಥಮವಾಗಿ ರಾಜ್ಯವನ್ನು ಹುಡುಕುತ್ತಾ ಇರ್ರಿ’
1. (ಎ) ತನ್ನ ಕೇಳುಗರು ರಾಜ್ಯವನ್ನು ಪ್ರಥಮವಾಗಿ ಹುಡುಕುವಂತೆ ಯೇಸು ಅವರನ್ನು ಪ್ರೋತ್ಸಾಹಿಸಿದ್ದು ಏಕೆ? (ಬಿ) ನಾವು ನಮ್ಮನ್ನೇ ಯಾವ ಪ್ರಶ್ನೆಯನ್ನು ಕೇಳಿಕೊಳ್ಳಬೇಕು?
ಯೇಸು 1,900 ವರುಷಗಳಿಗೂ ಹಿಂದೆ ಗಲಿಲಾಯದಲ್ಲಿ ಕೊಟ್ಟ ಭಾಷಣದಲ್ಲಿ ತನ್ನ ಕೇಳುಗರನ್ನು, “ಪ್ರಥಮವಾಗಿ ರಾಜ್ಯವನ್ನೂ [ದೇವರ] ನೀತಿಯನ್ನೂ ಹುಡುಕುತ್ತಾ ಇರ್ರಿ,” ಎಂದು ಹೇಳಿ ಪ್ರೋತ್ಸಾಹಿಸಿದನು. ಅಂತಹ ಜರೂರಿಯ ಪ್ರೋತ್ಸಾಹಕ್ಕೆ ಕಾರಣವೇನು? ಕ್ರಿಸ್ತನು ರಾಜ್ಯಾಧಿಕಾರವನ್ನು ಪಡೆಯುವುದಕ್ಕೆ ಮುಂಚೆ ಅನೇಕ ಶತಮಾನಗಳು ಕಳೆದುಹೋಗಲಿಕ್ಕಿದ್ದವಲ್ಲವೊ? ಹೌದು, ಆದರೆ ಯೆಹೋವನು ತನ್ನ ಪರಮಾಧಿಕಾರವನ್ನು ನಿರ್ದೋಷೀಕರಿಸಿ, ಭೂಮಿಯ ಕಡೆಗಿರುವ ತನ್ನ ಮಹತ್ತಾದ ಉದ್ದೇಶವನ್ನು ನೆರವೇರಿಸಲಿಕ್ಕಿದ್ದ ಮಾಧ್ಯಮವು ಮೆಸ್ಸೀಯ ರಾಜ್ಯವಾಗಿತ್ತು. ಆದುದರಿಂದ ಆ ವಿಷಯಗಳ ಮಹತ್ವವನ್ನು ನಿಜವಾಗಿಯೂ ತಿಳಿದಿರುವ ಯಾವನೂ ತನ್ನ ಜೀವನದಲ್ಲಿ ಆ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಕೊಡಲಿದ್ದನು. ಇದು ಒಂದನೆಯ ಶತಮಾನದಲ್ಲಿಯೇ ನಿಜವಾಗಿದ್ದರೆ, ಈಗ ಕ್ರಿಸ್ತನು ಅರಸನಾಗಿ ಸಿಂಹಾಸನವೇರಿರುವಾಗ ಅದೆಷ್ಟು ಮಹತ್ವದ್ದಾಗಿರಬೇಕು! ಆದುದರಿಂದ ಪ್ರಶ್ನೆಯೇನೆಂದರೆ, ನಾನು ಪ್ರಥಮವಾಗಿ ದೇವರ ರಾಜ್ಯವನ್ನು ಹುಡುಕುತ್ತಾ ಇದ್ದೇನೆ ಎಂಬುದನ್ನು ನನ್ನ ಜೀವನ ರೀತಿಯು ತೋರಿಸುತ್ತದೋ?—ಮತ್ತಾಯ 6:33, NW.
2. ಜನರು ಸಾಮಾನ್ಯವಾಗಿ ಯಾವುದನ್ನು ತವಕದಿಂದ ಬೆನ್ನಟ್ಟುತ್ತಾರೆ?
2 ಇಂದು ಲೋಕಾದ್ಯಂತವಾಗಿ, ಕಾರ್ಯತಃ ಲಕ್ಷಾಂತರ ಜನರು ರಾಜ್ಯವನ್ನು ಪ್ರಥಮವಾಗಿ ಹುಡುಕುತ್ತಿದ್ದಾರೆ. ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡಿರುವ ಅವರು ಆತನ ಚಿತ್ತವನ್ನು ಮಾಡುವುದನ್ನು ತಮ್ಮ ಜೀವಿತದ ಕೇಂದ್ರಬಿಂದುವಾಗಿ ಮಾಡಿ, ರಾಜ್ಯಕ್ಕೆ ಬೆಂಬಲವನ್ನು ತೋರಿಸುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಮಾನವಕುಲದಲ್ಲಿ ಹೆಚ್ಚಿನ ಜನರು ಪ್ರಾಪಂಚಿಕ ವಿಷಯಗಳನ್ನು ಬೆನ್ನಟ್ಟುವುದರಲ್ಲಿ ಆಸಕ್ತರಾಗಿದ್ದಾರೆ. ಜನರು ಹಣ, ಸೊತ್ತು ಮತ್ತು ಹಣದಿಂದ ಖರೀದಿಸಸಾಧ್ಯವಿರುವ ಸುಖಾನುಭವಗಳನ್ನು ಬೆನ್ನಟ್ಟುತ್ತಾರೆ. ಅಥವಾ ಅವರು ತಮ್ಮ ಶಕ್ತಿಯನ್ನು ಅವರ ಜೀವನೋದ್ಯೋಗಗಳಲ್ಲಿ ಪ್ರಗತಿಯನ್ನು ಕಂಡುಕೊಳ್ಳಲು ವ್ಯಯಿಸುತ್ತಾರೆ. ಅವರ ಜೀವನಗತಿಯು, ಅವರ ಮನಸ್ಸು ಸ್ವತಃ ತಮ್ಮಲ್ಲಿ ಮತ್ತು ಪ್ರಾಪಂಚಿಕ ವಸ್ತುಗಳಲ್ಲಿ ಹಾಗೂ ಇಂದ್ರಿಯಭೋಗಗಳಲ್ಲಿ ಕೇಂದ್ರೀಕರಿಸಿರುವುದನ್ನು ಪ್ರತಿಬಿಂಬಿಸುತ್ತದೆ. ಅವರು ದೇವರಲ್ಲಿ ಒಂದುವೇಳೆ ನಂಬಿಕೆ ಇಟ್ಟಿದ್ದರೂ, ಜೀವಿತದಲ್ಲಿ ಆತನಿಗೆ ಎರಡನೆಯ ಸ್ಥಾನವನ್ನು ಕೊಡುತ್ತಾರೆ.—ಮತ್ತಾಯ 6:31, 32.
3. (ಎ) ಯೇಸು ತನ್ನ ಶಿಷ್ಯರಿಗೆ ಅವರು ಯಾವ ರೀತಿಯ ಸ್ವತ್ತುಗಳನ್ನು ಹುಡುಕಬೇಕೆಂದು ಹೇಳಿದನು, ಮತ್ತು ಏಕೆ? (ಬಿ) ಪ್ರಾಪಂಚಿಕ ವಿಷಯಗಳ ಕುರಿತು ವಿಪರೀತವಾಗಿ ಚಿಂತಿತರಾಗುವ ಅಗತ್ಯವಿಲ್ಲವೇಕೆ?
3 ಯೇಸು ತನ್ನ ಶಿಷ್ಯರಿಗೆ ಈ ಬುದ್ಧಿವಾದವನ್ನು ನೀಡಿದನು: “ಭೂಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಬೇಡಿರಿ.” ಏಕೆಂದರೆ ಅಂತಹ ಸ್ವತ್ತುಗಳು ಸದಾಕಾಲ ಬಾಳುವುದಿಲ್ಲ. “ಆದರೆ,” ಯೆಹೋವನನ್ನು ಸೇವಿಸುವ ಮೂಲಕ “ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಿರಿ,” ಎಂದು ಹೇಳಿದನು. ತನ್ನ ಶಿಷ್ಯರು ದೇವರ ಚಿತ್ತವನ್ನು ಮಾಡುವುದರ ಮೇಲೆ ತಮ್ಮ ಗಮನ ಮತ್ತು ಶಕ್ತಿಯನ್ನು ಕೇಂದ್ರೀಕರಿಸುತ್ತಾ, ತಮ್ಮ ಕಣ್ಣುಗಳನ್ನು “ನೆಟ್ಟಗೆ [“ಸರಳವಾಗಿ,” NW]” ಇಟ್ಟುಕೊಳ್ಳುವಂತೆ ಯೇಸು ಪ್ರೋತ್ಸಾಹಿಸಿದನು. “ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ,” ಎಂದು ಅವರಿಗೆ ಹೇಳಿದನು. ಆದರೆ ಆಹಾರ, ಬಟ್ಟೆ, ಮನೆಯಂತಹ ಪ್ರಾಪಂಚಿಕ ವಸ್ತುಗಳ ವಿಷಯದಲ್ಲಿ ಏನು? “ಚಿಂತೆ ಮಾಡಬೇಡಿರಿ,” ಎಂದು ಯೇಸು ಬುದ್ಧಿಹೇಳಿದನು. ಅವನು ಪಕ್ಷಿಗಳ ಕಡೆಗೆ ಗಮನವನ್ನು ಸೆಳೆದು, ದೇವರು ಅವುಗಳಿಗೆ ಆಹಾರವನ್ನು ಒದಗಿಸುತ್ತಾನೆಂದು ಹೇಳಿದನು. ಹೂವುಗಳಿಂದ ಪಾಠ ಕಲಿಯುವಂತೆ ಯೇಸು ಶಿಷ್ಯರಿಗೆ ಉತ್ತೇಜನ ಕೊಟ್ಟನು, ಏಕೆಂದರೆ ದೇವರು ಅವುಗಳನ್ನು ಅಲಂಕರಿಸುತ್ತಾನೆ. ಹಾಗಿದ್ದರೆ ಯೆಹೋವನ ಬುದ್ಧಿಶಕ್ತಿಯುಳ್ಳ ಮಾನವ ಸೇವಕರು ಇವುಗಳಲ್ಲಿ ಯಾವುದಕ್ಕಿಂತಲೂ ಹೆಚ್ಚು ಅಮೂಲ್ಯರಲ್ಲವೆ? “ಹಾಗಾದರೆ, ಪ್ರಥಮವಾಗಿ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ ಇರ್ರಿ ಮತ್ತು ಆಗ ಈ ಎಲ್ಲ ಇತರ [ಆವಶ್ಯಕ] ವಿಷಯಗಳು ನಿಮಗೆ ಕೂಡಿಸಲ್ಪಡುವವು” ಎಂದು ಯೇಸು ಹೇಳಿದನು. (ಮತ್ತಾಯ 6:19-34, NW) ನಿಮ್ಮ ವರ್ತನೆಗಳು ಇದನ್ನು ನೀವು ನಂಬುತ್ತೀರೆಂದು ತೋರಿಸುತ್ತವೆಯೆ?
ರಾಜ್ಯ ಸತ್ಯವು ಅಡಗಿಸಿ ಹಿಡಿಯಲ್ಪಡುವಂತೆ ಬಿಡಬೇಡಿ
4. ಒಬ್ಬನು ಪ್ರಾಪಂಚಿಕ ವಿಷಯಗಳಿಗೆ ಹೆಚ್ಚು ಪ್ರಾಧಾನ್ಯವನ್ನು ನೀಡುವಲ್ಲಿ ಪರಿಣಾಮವೇನಾಗಬಹುದು?
4 ಒಬ್ಬನು ತನ್ನ ಮತ್ತು ತನ್ನ ಕುಟುಂಬದ ಪ್ರಾಪಂಚಿಕ ಆವಶ್ಯಕತೆಗಳನ್ನು ತೃಪ್ತಿಪಡಿಸಲು ಸಾಕಷ್ಟು ವಸ್ತುಗಳು ತನ್ನಲ್ಲಿರಬೇಕೆಂದು ಚಿಂತಿಸುವುದು ಸಮಂಜಸ. ಆದರೆ ಅವನು ಪ್ರಾಪಂಚಿಕ ವಿಷಯಗಳ ಕುರಿತು ವಿಪರೀತವಾಗಿ ಚಿಂತಿಸುವುದಾದರೆ, ಪರಿಣಾಮಗಳು ವಿಪತ್ಕಾರಕವಾಗಬಹುದು. ತನಗೆ ರಾಜ್ಯದಲ್ಲಿ ನಂಬಿಕೆಯಿದೆಯೆಂದು ಅವನು ಹೇಳಬಹುದಾದರೂ, ಅವನು ತನ್ನ ಹೃದಯದಲ್ಲಿ ಇತರ ವಿಷಯಗಳನ್ನು ಪ್ರಥಮವಾಗಿಡುವಲ್ಲಿ, ರಾಜ್ಯ ಸತ್ಯವು ಅಡಗಿಸಿ ಹಿಡಿಯಲ್ಪಡುವುದು. (ಮತ್ತಾಯ 13:18-22) ದೃಷ್ಟಾಂತಕ್ಕೆ, ಒಂದು ಸಂದರ್ಭದಲ್ಲಿ ಐಶ್ವರ್ಯವಂತ ಯೌವನಸ್ಥ ಅಧಿಕಾರಿಯೊಬ್ಬನು, “ನಾನು ನಿತ್ಯಜೀವಕ್ಕೆ ಬಾಧ್ಯಸ್ಥನಾಗಬೇಕಾದರೆ ಏನು ಮಾಡಬೇಕು” ಎಂದು ಯೇಸುವನ್ನು ಕೇಳಿದನು. ಅವನು ನೀತಿವಂತನೂ ಇತರರನ್ನು ಸದ್ಭಾವದಿಂದ ಉಪಚರಿಸುವವನೂ ಆಗಿದ್ದರೂ ತನ್ನ ಪ್ರಾಪಂಚಿಕ ಸ್ವತ್ತುಗಳಿಗೆ ಅವನು ವಿಪರೀತವಾಗಿ ಅಂಟಿಕೊಂಡಿದ್ದವನಾಗಿದ್ದನು. ಕ್ರಿಸ್ತನ ಶಿಷ್ಯನಾಗುವ ಗುರಿಯಿಂದ ಅವನು ಆ ಸ್ವತ್ತುಗಳಿಂದ ಬೇರ್ಪಡಲು ಬಯಸಲಿಲ್ಲ. ಇದರ ಫಲವಾಗಿ, ಸ್ವರ್ಗೀಯ ರಾಜ್ಯದಲ್ಲಿ ಕ್ರಿಸ್ತನೊಂದಿಗಿರುವ ಸದವಕಾಶವನ್ನು ಅವನು ತ್ಯಜಿಸಿಬಿಟ್ಟನು. ಆ ಸಂದರ್ಭದಲ್ಲಿ ಯೇಸು ಹೇಳಿದ್ದು: “ಧನವಂತರು ದೇವರ ರಾಜ್ಯದಲ್ಲಿ ಸೇರುವದು ಎಷ್ಟೋ ಕಷ್ಟ.”—ಮಾರ್ಕ 10:17-23.
5. (ಎ) ಯಾವುದರಲ್ಲಿ ತೃಪ್ತನಾಗಿರುವಂತೆ ಪೌಲನು ತಿಮೊಥೆಯನಿಗೆ ಉತ್ತೇಜನ ಕೊಟ್ಟನು, ಮತ್ತು ಏಕೆ? (ಬಿ) ಸೈತಾನನು “ಹಣದಾಸೆ”ಯನ್ನು ನಾಶಕರವಾದ ಬಲೆಯಾಗಿ ಹೇಗೆ ಉಪಯೋಗಿಸುತ್ತಾನೆ?
5 ವರುಷಗಳು ಕಳೆದ ಬಳಿಕ, ಅಪೊಸ್ತಲ ಪೌಲನು ಸಮೃದ್ಧಿಯ ವ್ಯಾಪಾರ ಕೇಂದ್ರವಾಗಿದ್ದ ಎಫೆಸದಲ್ಲಿದ್ದ ತಿಮೊಥೆಯನಿಗೆ ಹೇಳಿದ್ದು: “ನಾವು ಲೋಕದೊಳಕ್ಕೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು. ನಮಗೆ ಅನ್ನವಸ್ತ್ರಗಳಿದ್ದರೆ ಸಾಕು.” ಒಬ್ಬನು ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ “ಅನ್ನವಸ್ತ್ರ”ಗಳನ್ನು ಒದಗಿಸುವುದು ನ್ಯಾಯವಾಗಿದೆ. ಆದರೆ ಪೌಲನು ಎಚ್ಚರಿಸಿದ್ದು: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ.” ಸೈತಾನನು ಕುತಂತ್ರಿ. ಪ್ರಥಮವಾಗಿ ಅವನು ಒಬ್ಬನನ್ನು ಸಣ್ಣ ರೀತಿಗಳಲ್ಲಿ ಸೆಳೆಯಬಹುದು. ಇದನ್ನು ಹಿಂಬಾಲಿಸುತ್ತಾ ಮಹತ್ತಾದ ಒತ್ತಡಗಳು ಬರಬಹುದು. ದೊಡ್ಡ ಪದವಿಗೆ ಭರ್ತಿಯಾಗುವ ಅಥವಾ ಹೆಚ್ಚು ವೇತನ ದೊರೆಯುವ ಆದರೆ ಈ ಮೊದಲು ಆತ್ಮಿಕ ವಿಷಯಗಳಿಗೆಂದು ಬದಿಗಿರಿಸಲ್ಪಟ್ಟ ಸಮಯವನ್ನು ಕೇಳಿಕೊಳ್ಳುವ ಉದ್ಯೋಗವು ದೊರೆಯಬಹುದು. ನಾವು ಎಚ್ಚರಿಕೆಯಿಂದಿಲ್ಲದಿರುವಲ್ಲಿ, ಈ “ಹಣದಾಸೆಯು” ಹೆಚ್ಚು ಪ್ರಾಮುಖ್ಯವಾದ ಆತ್ಮಿಕ ಅಭಿರುಚಿಗಳನ್ನು ಅಡಗಿಸಿ ಹಿಡಿಯಬಹುದು. ಪೌಲನು ಅದನ್ನು ಹೀಗೆ ಹೇಳಿದನು: “ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.”—1 ತಿಮೊಥೆಯ 6:7-10.
6. (ಎ) ಪ್ರಾಪಂಚಿಕತೆಯ ಬೋನಿನಿಂದ ವಂಚಿಸಲ್ಪಡದಿರಲು ನಾವೇನು ಮಾಡಬೇಕು? (ಬಿ) ಇಂದಿನ ಲೋಕದ ಆರ್ಥಿಕ ಸಮಸ್ಯೆಗಳ ಎದುರಿನಲ್ಲಿಯೂ ನಮಗೆ ಯಾವ ಭರವಸೆಯಿರಸಾಧ್ಯವಿದೆ?
6 ತನ್ನ ಕ್ರೈಸ್ತ ಸಹೋದರನಾದ ತಿಮೊಥೆಯನಿಗೆ ನಿಜವಾದ ಪ್ರೀತಿಯನ್ನು ತೋರಿಸುತ್ತಾ ಪೌಲನು ಅವನನ್ನು ಪ್ರೋತ್ಸಾಹಿಸಿದ್ದು: “ನೀನಾದರೋ ಇವುಗಳಿಗೆ ದೂರವಾಗಿರು,” ಮತ್ತು “ಕ್ರಿಸ್ತನಂಬಿಕೆಯುಳ್ಳವರು ಮಾಡತಕ್ಕ ಶ್ರೇಷ್ಠ ಹೋರಾಟವನ್ನು ಮಾಡು.” (1 ತಿಮೊಥೆಯ 6:11, 12) ನಮ್ಮನ್ನು ಆವರಿಸಿರುವ ಲೋಕದ ಪ್ರಾಪಂಚಿಕ ಜೀವನಮಾರ್ಗವು ನಮ್ಮನ್ನು ಬಡಿದುಕೊಂಡು ಹೋಗದಿರಬೇಕಾದರೆ ನಮ್ಮಿಂದ ಶ್ರದ್ಧಾಪೂರ್ವಕವಾದ ಪ್ರಯತ್ನವು ಅಗತ್ಯವಾಗಿದೆ. ನಮ್ಮ ನಂಬಿಕೆಗೆ ಹೊಂದಿಕೆಯಲ್ಲಿ ನಾವು ಪ್ರಯಾಸಪಡುವುದಾದರೆ ಯೆಹೋವನು ಎಂದಿಗೂ ನಮ್ಮ ಕೈಬಿಡನು. ವಸ್ತುಗಳ ಬೆಲೆಯೇರಿಕೆ ಮತ್ತು ವ್ಯಾಪಕವಾದ ನಿರುದ್ಯೋಗದ ಎದುರಿನಲ್ಲಿಯೂ, ನಮಗೆ ನಿಜವಾಗಿಯೂ ಅಗತ್ಯವಾಗಿರುವುದು ನಮಗೆ ಸಿಗುವಂತೆ ಆತನು ನೋಡಿಕೊಳ್ಳುವನು. ಪೌಲನು ಬರೆದುದು: “ದ್ರವ್ಯಾಶೆ [“ಹಣದಾಸೆ,” NW]ಯಿಲ್ಲದವರಾಗಿರಿ; ನಿಮಗಿರುವವುಗಳಲ್ಲಿ ತೃಪ್ತರಾಗಿರಿ; ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲವೆಂದು ದೇವರು ತಾನೇ ಹೇಳಿದ್ದಾನೆ. ಆದದರಿಂದ—ಕರ್ತನು [“ಯೆಹೋವನು,” NW] ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು? ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.” (ಇಬ್ರಿಯ 13:5, 6) ಮತ್ತು ರಾಜ ದಾವೀದನು ಹೇಳಿದ್ದು: “ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ.”—ಕೀರ್ತನೆ 37:25.
ಆದಿಶಿಷ್ಯರು ಮಾದರಿಯನ್ನು ಒದಗಿಸುತ್ತಾರೆ
7. ಸಾರುವ ಕೆಲಸದ ಬಗ್ಗೆ ಯಾವ ಸಲಹೆಗಳನ್ನು ಯೇಸು ತನ್ನ ಶಿಷ್ಯರಿಗೆ ಕೊಟ್ಟನು ಮತ್ತು ಇವು ತಕ್ಕ ಸಲಹೆಗಳಾಗಿದ್ದದ್ದು ಹೇಗೆ?
7 ಯೇಸು ತನ್ನ ಅಪೊಸ್ತಲರಿಗೆ ಯೋಗ್ಯ ತರಬೇತನ್ನು ಕೊಟ್ಟಮೇಲೆ, ಅವರು ಇಸ್ರಾಯೇಲಿನಲ್ಲಿ, “ಪರಲೋಕರಾಜ್ಯವು ಸಮೀಪವಾಯಿತು” ಎಂದು ಸುವಾರ್ತೆ ಸಾರುವಂತೆ ಅವರನ್ನು ಕಳುಹಿಸಿಕೊಟ್ಟನು. ಅದೆಂತಹ ರೋಮಾಂಚಕ ಸಂದೇಶವಾಗಿತ್ತು! ಮೆಸ್ಸೀಯ ರಾಜನಾದ ಯೇಸು ಕ್ರಿಸ್ತನು ಅವರ ಮಧ್ಯೆ ಇದ್ದನು. ಅಪೊಸ್ತಲರು ದೇವರ ಸೇವೆಗೆ ತಮ್ಮನ್ನು ಮೀಸಲಾಗಿಟ್ಟಿದ್ದ ಕಾರಣ, ದೇವರೇ ಅವರನ್ನು ಪರಾಮರಿಸುವನೆಂಬ ಭರವಸೆಯನ್ನಿಡುವಂತೆ ಯೇಸು ಪ್ರೋತ್ಸಾಹಿಸಿದನು. ಆದಕಾರಣ ಅವನು ಹೇಳಿದ್ದು: “ದಾರಿಗೆ ಏನೂ ತಕ್ಕೊಂಡುಹೋಗಬೇಡಿರಿ, ಕೋಲು ಹಸಿಬೆ ಬುತ್ತಿ ಹಣ ಬೇಡ; ಎರಡಂಗಿಗಳಿರಬಾರದು. ಇದಲ್ಲದೆ ನೀವು ಯಾವ ಮನೆಯಲ್ಲಿ ಇಳುಕೊಂಡರೂ ಅಲ್ಲೇ ಇರ್ರಿ, ಅಲ್ಲಿಂದಲೇ ಹೊರಡಿರಿ.” (ಮತ್ತಾಯ 10:5-10; ಲೂಕ 9:1-6) ಯಾರ ಮಧ್ಯೆ ಅಪರಿಚಿತರಿಗೆ ಅತಿಥಿ ಸತ್ಕಾರವನ್ನು ತೋರಿಸುವುದು ಒಂದು ರೂಢಿಯಾಗಿತ್ತೊ ಆ ಜೊತೆ ಇಸ್ರಾಯೇಲ್ಯರು ಅವರ ಅಗತ್ಯಗಳನ್ನು ಪೂರೈಸುವಂತೆ ಯೆಹೋವನು ನೋಡಿಕೊಳ್ಳಲಿದ್ದನು.
8. (ಎ) ತಾನು ಸಾಯುವುದಕ್ಕಿಂತ ತುಸು ಮೊದಲು, ಯೇಸು ಹೊಸತಾದ ಸಾರುವ ಸಲಹೆಗಳನ್ನು ಕೊಟ್ಟದ್ದೇಕೆ? (ಬಿ) ಯೇಸುವಿನ ಹಿಂಬಾಲಕರ ಜೀವಿತಗಳಲ್ಲಿ ಯಾವುದು ಇನ್ನೂ ಪ್ರಥಮ ಸ್ಥಾನದಲ್ಲಿರಬೇಕಾಗಿತ್ತು?
8 ಆದರೆ, ತನ್ನ ಮರಣಕ್ಕೆ ತುಸು ಮುಂಚಿತವಾಗಿ, ಭವಿಷ್ಯತ್ತಿನಲ್ಲಿ ಅವರು ಬದಲಾವಣೆ ಹೊಂದಿರುವ ಪರಿಸ್ಥಿತಿಗಳಲ್ಲಿ ಸೇವೆಮಾಡುವರೆಂಬ ನಿಜತ್ವದ ಕುರಿತು ಯೇಸು ತನ್ನ ಅಪೊಸ್ತಲರಿಗೆ ಎಚ್ಚರಿಕೆ ಕೊಟ್ಟನು. ಅವರ ಕಾರ್ಯದ ಮೇಲೆ ಬರಲಿರುವ ಅಧಿಕೃತ ವಿರೋಧದ ಫಲವಾಗಿ, ಇಸ್ರಾಯೇಲಿನಲ್ಲಿ ಅವರಿಗೆ ಅತಿಥಿ ಸತ್ಕಾರವು ಅಷ್ಟು ಸುಲಭವಾಗಿ ಸಿಗದೆ ಹೋದೀತು. ಅಲ್ಲದೆ, ಅವರು ಬೇಗನೆ ಅನ್ಯ ದೇಶಗಳಿಗೂ ಸುವಾರ್ತೆಯನ್ನು ಒಯ್ಯಲಿದ್ದರು. ಆದುದರಿಂದ ಈಗ ಅವರು “ಹಣದ ಚೀಲ” (NW) ಮತ್ತು “ಹಸಿಬೆ”ಯನ್ನು ಒಯ್ಯಬೇಕಾಗಿತ್ತು. ಹೀಗಿದ್ದರೂ, ಬೇಕಾಗಿರುವ ಅನ್ನವಸ್ತ್ರಗಳನ್ನು ಪಡೆಯಲು ತಾವು ಮಾಡುವ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸುವನೆಂಬ ಭರವಸೆಯಿಂದ ಅವರು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಪ್ರಥಮವಾಗಿ ಹುಡುಕಬೇಕಾಗಿತ್ತು.—ಲೂಕ 22:35-37.
9. ಪೌಲನು ತನ್ನ ಶಾರೀರಿಕ ಆವಶ್ಯಕತೆಗಳನ್ನು ನೋಡಿಕೊಳ್ಳುತ್ತಿದ್ದಾಗ ರಾಜ್ಯವನ್ನು ತನ್ನ ಜೀವಿತದಲ್ಲಿ ಪ್ರಥಮವಾಗಿ ಇಟ್ಟದ್ದು ಹೇಗೆ, ಮತ್ತು ಅವನು ಈ ವಿಷಯದಲ್ಲಿ ಯಾವ ಸಲಹೆಯನ್ನು ಕೊಟ್ಟನು?
9 ಯೇಸುವಿನ ಸಲಹೆಯನ್ನು ಅನ್ವಯಿಸಿಕೊಂಡವರಲ್ಲಿ ಅಪೊಸ್ತಲ ಪೌಲನು ಒಂದು ಉತ್ತಮ ಮಾದರಿಯಾಗಿದ್ದನು. ಪೌಲನ ಜೀವನದಲ್ಲಿ ಪ್ರಾಮುಖ್ಯ ವಿಷಯವು ಶುಶ್ರೂಷೆಯಾಗಿತ್ತು. (ಅ. ಕೃತ್ಯಗಳು 20:24, 25) ಅವನು ಸಾರಲಿಕ್ಕಾಗಿ ಒಂದು ಪ್ರದೇಶಕ್ಕೆ ಹೋದಾಗ, ಡೇರೆ ಹೊಲಿಯುವ ಕೆಲಸವನ್ನು ಮಾಡುವ ಮೂಲಕವೂ ತನ್ನ ಸ್ವಂತ ಶಾರೀರಿಕ ಆವಶ್ಯಕತೆಗಳನ್ನು ತಾನೇ ನೋಡಿಕೊಂಡನು. ಬೇರೆಯವರು ತನ್ನನ್ನು ಪರಾಮರಿಸುವಂತೆ ಅವನು ಅಪೇಕ್ಷಿಸಲಿಲ್ಲ. (ಅ. ಕೃತ್ಯಗಳು 18:1-4; 1 ಥೆಸಲೊನೀಕ 2:9) ಆದರೂ, ಅತಿಥಿ ಸತ್ಕಾರವನ್ನು ತೋರಿಸಿಯೊ ಕೊಡುಗೆಗಳನ್ನು ಕೊಟ್ಟೊ ಇತರರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದಾಗ, ಅವನು ಅದನ್ನು ಕೃತಜ್ಞತೆಯಿಂದ ಸ್ವೀಕರಿಸಿದನು. (ಅ. ಕೃತ್ಯಗಳು 16:15, 34; ಫಿಲಿಪ್ಪಿ 4:15-17) ಸಾರುವ ಸಲುವಾಗಿ ಕುಟುಂಬದ ಕಡೆಗಿರುವ ಅವಶ್ಯ ಕರ್ತವ್ಯಗಳನ್ನು ಅಸಡ್ಡೆಮಾಡಬಾರದೆಂದು ಮತ್ತು ಅವರಿಗಿರುವ ವಿವಿಧ ಜವಾಬ್ದಾರಿಗಳನ್ನು ನೋಡಿಕೊಳ್ಳುವುದರಲ್ಲಿ ಸಮತೆಯಿರಬೇಕೆಂದು ಪೌಲನು ಕ್ರೈಸ್ತರನ್ನು ಪ್ರೋತ್ಸಾಹಿಸಿದನು. ಅವರು ದುಡಿಯುವಂತೆಯೂ ತಮ್ಮ ಕುಟುಂಬಗಳನ್ನು ಪ್ರೀತಿಸುವಂತೆಯೂ ವಸ್ತುಗಳಲ್ಲಿ ಇತರರೊಂದಿಗೆ ಪಾಲಿಗರಾಗುವಂತೆಯೂ ಅವನು ಬುದ್ಧಿಹೇಳಿದನು. (ಎಫೆಸ 4:28; 2 ಥೆಸಲೊನೀಕ 3:7-12) ಪ್ರಾಪಂಚಿಕ ಸ್ವತ್ತುಗಳಲ್ಲಲ್ಲ ಬದಲಾಗಿ ದೇವರಲ್ಲಿ ಭರವಸೆಯಿಡಬೇಕೆಂದೂ, ಹೆಚ್ಚು ಪ್ರಾಮುಖ್ಯವಾದ ವಿಷಯಗಳು ಯಾವುವೆಂದು ನಿಜವಾಗಿಯೂ ತಿಳಿದುಕೊಂಡಿದ್ದಾರೆಂಬುದನ್ನು ತೋರಿಸುವಂಥ ರೀತಿಯಲ್ಲಿ ಅವರು ತಮ್ಮ ಜೀವಿತಗಳನ್ನು ಉಪಯೋಗಿಸಬೇಕೆಂದೂ ಅವನು ಪ್ರೋತ್ಸಾಹ ಕೊಟ್ಟನು. ಯೇಸುವಿನ ಬೋಧನೆಗಳಿಗೆ ಹೊಂದಿಕೆಯಲ್ಲಿ ಇವುಗಳನ್ನು ಮಾಡುವುದು, ಪ್ರಥಮವಾಗಿ ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುವುದನ್ನು ಅರ್ಥೈಸಿತು.—ಫಿಲಿಪ್ಪಿ 1:9-11.
ರಾಜ್ಯವನ್ನು ನಿಮ್ಮ ಜೀವನದಲ್ಲಿ ಪ್ರಥಮವಾಗಿಡಿರಿ
10. ಪ್ರಥಮವಾಗಿ ರಾಜ್ಯವನ್ನು ಹುಡುಕಿರಿ ಎಂಬುದರ ಅರ್ಥವೇನು?
10 ನಾವು ವೈಯಕ್ತಿಕವಾಗಿ ರಾಜ್ಯ ಸುವಾರ್ತೆಯನ್ನು ಇತರರಿಗೆ ಸಾರುವುದರಲ್ಲಿ ಎಷ್ಟರ ಮಟ್ಟಿಗೆ ಪಾಲಿಗರಾಗಬೇಕು? ಅದು ಆಂಶಿಕವಾಗಿ ನಮ್ಮ ಪರಿಸ್ಥಿತಿಗಳ ಮೇಲೆಯೂ ನಮ್ಮ ಕೃತಜ್ಞತೆಯ ಮಟ್ಟದ ಮೇಲೆಯೂ ಹೊಂದಿಕೊಂಡಿದೆ. ‘ನಿಮಗೆ ಮಾಡಲು ಇನ್ನೇನೂ ಇಲ್ಲದಿರುವಾಗ ರಾಜ್ಯವನ್ನು ಹುಡುಕಿರಿ’ ಎಂದು ಯೇಸು ಹೇಳಲಿಲ್ಲ ಎಂಬುದನ್ನು ಮನಸ್ಸಿನಲ್ಲಿಡಿರಿ. ರಾಜ್ಯದ ಪ್ರಮುಖತೆಯನ್ನು ತಿಳಿದವನಾಗಿದ್ದ ಅವನು, “ಆತನ ರಾಜ್ಯವನ್ನು ಎಡೆಬಿಡದೆ ಹುಡುಕಿರಿ” ಎಂದು ಹೇಳಿ ತನ್ನ ತಂದೆಯ ಚಿತ್ತವನ್ನು ತಿಳಿಯಪಡಿಸಿದನು. (ಲೂಕ 12:31, NW) ನಮ್ಮ ಮತ್ತು ನಮ್ಮ ಕುಟುಂಬಗಳ ಆವಶ್ಯಕತೆಗಳನ್ನು ಪೂರೈಸಲು ನಮ್ಮಲ್ಲಿ ಹೆಚ್ಚಿನವರು ಕೆಲಸ ಮಾಡಲೇಬೇಕೆಂಬುದು ನಿಜವಾದರೂ, ನಮಗೆ ನಂಬಿಕೆಯಿರುವಲ್ಲಿ, ನಮ್ಮ ಜೀವನವು ದೇವರು ಕೊಟ್ಟಿರುವ ರಾಜ್ಯ ಸೇವೆಯ ಸುತ್ತಲೂ ಕಟ್ಟಲ್ಪಟ್ಟಿರುವುದು. ಅದೇ ಸಮಯದಲ್ಲಿ, ನಾವು ನಮ್ಮ ಕುಟುಂಬ ಜವಾಬ್ದಾರಿಗಳನ್ನೂ ನೋಡಿಕೊಳ್ಳುವೆವು.—1 ತಿಮೊಥೆಯ 5:8.
11. (ಎ) ರಾಜ್ಯ ಸಂದೇಶವನ್ನು ಸಾರುವುದರಲ್ಲಿ ಎಲ್ಲರೂ ಒಂದೇ ಪ್ರಮಾಣದ ಸೇವೆಯನ್ನು ಮಾಡಲಾರರೆಂಬುದನ್ನು ಯೇಸು ಹೇಗೆ ಚಿತ್ರಿಸಿದನು? (ಬಿ) ಒಬ್ಬನು ಮಾಡಸಾಧ್ಯವಿರುವ ಸೇವೆಯು ಯಾವ ವಿಷಯಗಳ ಮೇಲೆ ಹೊಂದಿಕೊಂಡಿದೆ?
11 ನಮ್ಮಲ್ಲಿ ಕೆಲವರಿಗೆ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಇತರರಿಗಿಂತ ಹೆಚ್ಚು ಸಮಯವನ್ನು ವ್ಯಯಿಸಲು ಸಾಧ್ಯವಾಗುತ್ತದೆ. ಆದರೆ ಯೇಸು ಹೇಳಿದ ವಿವಿಧ ರೀತಿಯ ಮಣ್ಣಿನ ದೃಷ್ಟಾಂತದಲ್ಲಿ, ಯಾರ ಹೃದಯಗಳು ಒಳ್ಳೆಯ ಮಣ್ಣಿನಂತಿರುವವೊ ಅವರೆಲ್ಲರು ಫಲಬಿಡುವರೆಂದು ಅವನು ತೋರಿಸಿದನು. ಎಷ್ಟರ ಮಟ್ಟಿಗೆ? ಪ್ರತಿಯೊಬ್ಬನ ಪರಿಸ್ಥಿತಿಗಳು ವಿಭಿನ್ನವಾಗಿರುತ್ತವೆ. ವಯಸ್ಸು, ಆರೋಗ್ಯ ಮತ್ತು ಕುಟುಂಬ ಜವಾಬ್ದಾರಿಗಳು ಇವುಗಳಲ್ಲಿ ಸೇರಿರುತ್ತವೆ. ಆದರೆ ಎಲ್ಲಿ ನಿಜವಾದ ಕೃತಜ್ಞತಾಭಾವವಿರುತ್ತದೆಯೊ ಅಲ್ಲಿ ಹೆಚ್ಚನ್ನು ಸಾಧಿಸಸಾಧ್ಯವಿದೆ.—ಮತ್ತಾಯ 13:23.
12. ಯುವ ಜನರು ಯಾವ ಹಿತಕರವಾದ ಗುರಿಗಳ ಕುರಿತು ಚಿಂತಿಸುವಂತೆ ವಿಶೇಷವಾಗಿ ಪ್ರೋತ್ಸಾಹಿಸಲ್ಪಡುತ್ತಾರೆ?
12 ರಾಜ್ಯ ಶುಶ್ರೂಷೆಯಲ್ಲಿ ನಮ್ಮ ಭಾಗವನ್ನು ಹೆಚ್ಚಿಸಲು ಸಹಾಯಕರವಾಗಿರುವ ಗುರಿಗಳನ್ನು ಇಟ್ಟುಕೊಳ್ಳುವುದು ಪ್ರಯೋಜನಕರ. ಎಳೆಯರು ಆ ಹುರುಪಿನ ಯುವ ಕ್ರೈಸ್ತ ತಿಮೊಥೆಯನ ಅತ್ಯುತ್ತಮ ಮಾದರಿಯ ಕುರಿತು ಗಂಭೀರವಾಗಿ ಚಿಂತಿಸಬೇಕು. (ಫಿಲಿಪ್ಪಿ 2:19-22) ತಮ್ಮ ಐಹಿಕ ಶಿಕ್ಷಣವನ್ನು ಮುಗಿಸಿದಾಗ, ಇನ್ನಾವ ಕೆಲಸವು ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸುವುದಕ್ಕಿಂತ ಹೆಚ್ಚು ಉತ್ತಮವಾದದ್ದಾಗಿದ್ದೀತು? ಹಿತಕರವಾದ ಆತ್ಮಿಕ ಗುರಿಗಳನ್ನು ಇಟ್ಟುಕೊಳ್ಳುವುದರಿಂದ ಪ್ರಾಯಸ್ಥರೂ ಪ್ರಯೋಜನ ಪಡೆಯುವರು.
13. (ಎ) ರಾಜ್ಯ ಸೇವೆಯಲ್ಲಿ ನಾವು ಸ್ವತಃ ಎಷ್ಟನ್ನು ಮಾಡಸಾಧ್ಯವಿದೆ ಎಂಬುದನ್ನು ನಿರ್ಣಯಿಸುವುದು ಯಾರು? (ಬಿ) ನಾವು ನಿಜವಾಗಿಯೂ ರಾಜ್ಯವನ್ನು ಪ್ರಥಮವಾಗಿ ಹುಡುಕುತ್ತಿರುವಲ್ಲಿ, ಯಾವುದನ್ನು ನಾವು ರುಜುಪಡಿಸುತ್ತೇವೆ?
13 ಹೆಚ್ಚು ಸೇವೆಯನ್ನು ಮಾಡಸಾಧ್ಯವಿದ್ದರೂ ಮಾಡುವುದಿಲ್ಲವೆಂದು ನಾವೆಣಿಸುವವರನ್ನು ಟೀಕಿಸುವ ಬದಲು, ವೈಯಕ್ತಿಕ ಪ್ರಗತಿಗೆ ಪ್ರಯಾಸಪಡುವಂತೆ ನಮ್ಮ ನಂಬಿಕೆಯು ನಮ್ಮನ್ನು ಪ್ರೇರಿಸಬೇಕು. ಆಗ ನಮ್ಮ ಸ್ವಂತ ಪರಿಸ್ಥಿತಿಗಳು ನಮ್ಮನ್ನು ಎಷ್ಟರ ಮಟ್ಟಿಗೆ ಅನುಮತಿಸುತ್ತವೆಯೊ ಅಷ್ಟು ಪೂರ್ಣವಾಗಿ ನಾವು ದೇವರನ್ನು ಸೇವಿಸುವಂತಾಗುವುದು. (ರೋಮಾಪುರ 14:10-12; ಗಲಾತ್ಯ 6:4, 5) ಯೋಬನಿಗೆ ಸಂಭವಿಸಿದ ವಿಷಯವು ತೋರಿಸುವಂತೆ, ನಮ್ಮ ಪ್ರಾಪಂಚಿಕ ಸ್ವತ್ತುಗಳು, ನಮ್ಮ ಸ್ವಂತ ಸುಖಸೌಕರ್ಯಗಳು, ಮತ್ತು ನಮ್ಮ ಸ್ವಂತ ಯೋಗಕ್ಷೇಮವು ನಮ್ಮ ಮುಖ್ಯ ಅಭಿರುಚಿಗಳಾಗಿವೆಯೆಂದೂ ದೇವರನ್ನು ಸೇವಿಸುವುದರಲ್ಲಿ ನಮಗಿರುವ ಹೇತು ಸ್ವಾರ್ಥಪೂರ್ಣವಾಗಿದೆಯೆಂದೂ ಸೈತಾನನು ಪಟ್ಟುಹಿಡಿದು ವಾದಿಸುತ್ತಾನೆ. ಆದರೆ ನಾವು ನಿಜವಾಗಿಯೂ ರಾಜ್ಯವನ್ನು ಪ್ರಥಮವಾಗಿ ಹುಡುಕುವಲ್ಲಿ, ಪಿಶಾಚನು ಮಹಾ ಸುಳ್ಳುಗಾರನೆಂದು ಸಾಬೀತುಪಡಿಸುವುದರಲ್ಲಿ ನಮಗೂ ಪಾಲಿರುತ್ತದೆ. ಆಗ ನಾವು ನಮ್ಮ ಜೀವಿತದಲ್ಲಿ ಪ್ರಥಮವಾಗಿರುವುದು ದೇವರ ಸೇವೆಯೇ ಎಂಬುದಕ್ಕೆ ಪುರಾವೆಯನ್ನು ಕೊಡುತ್ತೇವೆ. ಹೀಗೆ ನಡೆನುಡಿಗಳಲ್ಲಿ ಯೆಹೋವನಲ್ಲಿ ನಮಗಿರುವ ಆಳವಾದ ಪ್ರೀತಿಯನ್ನು, ಆತನ ಪರಮಾಧಿಕಾರಕ್ಕೆ ನಮ್ಮ ನಿಷ್ಠೆಯ ಬೆಂಬಲವನ್ನು ಮತ್ತು ನೆರೆಯವರಿಗೆ ನಮ್ಮ ಪ್ರೀತಿಯನ್ನು ನಾವು ರುಜುಪಡಿಸುತ್ತೇವೆ.—ಯೋಬ 1:9-11; 2:4, 5; ಜ್ಞಾನೋಕ್ತಿ 27:11.
14. (ಎ) ಕ್ಷೇತ್ರ ಸೇವೆಗೆ ಕಾಲತಖ್ತೆಯು ಏಕೆ ಪ್ರಯೋಜನಕರ? (ಬಿ) ಅನೇಕ ಮಂದಿ ಸಾಕ್ಷಿಗಳು ಕ್ಷೇತ್ರ ಶುಶ್ರೂಷೆಯಲ್ಲಿ ಎಷ್ಟರ ಮಟ್ಟಿಗೆ ಭಾಗವಹಿಸುತ್ತಿದ್ದಾರೆ?
14 ನಮಗೆ ಒಂದು ಕಾಲತಖ್ತೆಯಿರುವಲ್ಲಿ, ಅದು ನಾವು ಸಾಧಾರಣಕ್ಕಿಂತ ಹೆಚ್ಚು ಸಂಗತಿಗಳನ್ನು ಮಾಡಿ ಮುಗಿಸುವಂತೆ ಸಹಾಯಮಾಡಬಲ್ಲದು. ತನ್ನ ಉದ್ದೇಶಗಳನ್ನು ನೆರವೇರಿಸಲು ಯೆಹೋವನಿಗೆ ತನ್ನದೇ ಆದ ಒಂದು ‘ಕಾಲನಿರ್ಣಯ’ ಇದೆ. (ವಿಮೋಚನಕಾಂಡ 9:5; ಮಾರ್ಕ 1:15) ಸಾಧ್ಯವಾಗುವಲ್ಲಿ, ಕ್ಷೇತ್ರ ಶುಶ್ರೂಷೆಯಲ್ಲಿ ಪ್ರತಿ ವಾರ ಒಂದು ಅಥವಾ ಅದಕ್ಕಿಂತ ಹೆಚ್ಚು ಬಾರಿ ನಿಯಮಿತ ಕಾಲದಲ್ಲಿ ಭಾಗವಹಿಸುವುದು ಒಳ್ಳೆಯದು. ಲೋಕಾದ್ಯಂತವಾಗಿ ನೂರಾರು ಸಾವಿರ ಯೆಹೋವನ ಸಾಕ್ಷಿಗಳು, ಸುವಾರ್ತೆ ಸಾರುವುದರಲ್ಲಿ ದಿನಕ್ಕೆ ಸುಮಾರು ಎರಡು ತಾಸುಗಳನ್ನು ವ್ಯಯಿಸುತ್ತಾ ಆಕ್ಸಿಲಿಯರಿ ಪಯನೀಯರ್ ಸೇವೆಗೆ ಸೇರಿದ್ದಾರೆ. ಇತರ ನೂರಾರು ಸಾವಿರ ಜನರು, ರಾಜ್ಯದ ಸಂದೇಶವನ್ನು ಸಾರಲು ದಿನಕ್ಕೆ ಎರಡೂವರೆ ತಾಸುಗಳನ್ನು ವ್ಯಯಿಸಿ, ರೆಗ್ಯುಲರ್ ಪಯನೀಯರರಾಗಿ ಸೇವೆಮಾಡುತ್ತಿದ್ದಾರೆ. ಸ್ಪೆಷಲ್ ಪಯನೀಯರರೂ ಮಿಷನೆರಿಗಳೂ ರಾಜ್ಯ ಸೇವೆಯಲ್ಲಿ ಅದಕ್ಕಿಂತಲೂ ಹೆಚ್ಚು ಸಮಯವನ್ನು ವ್ಯಯಿಸುತ್ತಾರೆ. ನಮಗೆ ಕಿವಿಗೊಡುವ ಯಾರೊಂದಿಗೇ ಆಗಲಿ ನಾವು ರಾಜ್ಯ ನಿರೀಕ್ಷೆಯನ್ನು ಅನೌಪಚಾರಿಕವಾಗಿ ಹಂಚಿಕೊಳ್ಳುವ ಸಂದರ್ಭಗಳಿಗಾಗಿಯೂ ಹುಡುಕಸಾಧ್ಯವಿದೆ. (ಯೋಹಾನ 4:7-15) ಈ ಕೆಲಸದಲ್ಲಿ ನಮ್ಮ ಪರಿಸ್ಥಿತಿಗಳು ಅನುಮತಿಸುವಷ್ಟು ಹೆಚ್ಚಾಗಿ ಭಾಗವಹಿಸುವುದು ನಮ್ಮ ಇಚ್ಛೆಯಾಗಿರಬೇಕು. ಏಕೆಂದರೆ ಯೇಸು ಹೇಳಿದ್ದು: “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”—ಮತ್ತಾಯ 24:14; ಎಫೆಸ 5:15-17.
15. ನಮ್ಮ ಶುಶ್ರೂಷೆಯ ವಿಷಯದಲ್ಲಿ, 1 ಕೊರಿಂಥ 15:58ರ ಸಲಹೆಯು ಸಮಯೋಚಿತವೆಂದು ನೀವು ಏಕೆ ಎಣಿಸುತ್ತೀರಿ?
15 ಯೆಹೋವನ ಸಾಕ್ಷಿಗಳು ಯಾವುದೇ ದೇಶದಲ್ಲಿ ಜೀವಿಸುತ್ತಿರಲಿ, ಭೂಮಿಯ ಎಲ್ಲಾ ಭಾಗಗಳಲ್ಲಿ ಅವರು ಐಕ್ಯದಿಂದ ಈ ಸೇವಾ ಸುಯೋಗದಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಈ ಪ್ರೇರಿತ ಬೈಬಲ್ ಸಲಹೆಯನ್ನು ತಮಗೆ ಅನ್ವಯಿಸಿಕೊಳ್ಳುತ್ತಾರೆ: “ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ.”—1 ಕೊರಿಂಥ 15:58.
ಪುನರ್ವಿಮರ್ಶೆಯ ಚರ್ಚೆ
• ‘ಪ್ರಥಮವಾಗಿ ರಾಜ್ಯವನ್ನು ಹುಡುಕುತ್ತಾ’ ಇರ್ರಿ ಎಂದು ಯೇಸು ಹೇಳಿದಾಗ, ಯಾವುದನ್ನು ಎರಡನೆಯ ಸ್ಥಾನದಲ್ಲಿ ಇಡಬೇಕೆಂದು ಅವನು ಸೂಚಿಸಿದನು?
• ನಮ್ಮ ಮತ್ತು ನಮ್ಮ ಕುಟುಂಬದ ಶಾರೀರಿಕ ಆವಶ್ಯಕತೆಗಳನ್ನು ಪರಾಮರಿಸುವುದರಲ್ಲಿ ನಮ್ಮ ದೃಷ್ಟಿಕೋನವು ಏನಾಗಿರಬೇಕು? ನಮಗೆ ದೇವರು ಯಾವ ಸಹಾಯವನ್ನು ಕೊಡುವನು?
• ರಾಜ್ಯ ಸೇವೆಯ ಯಾವ ವಿವಿಧ ವೈಶಿಷ್ಟ್ಯಗಳಲ್ಲಿ ನಾವು ಭಾಗವಹಿಸಬಲ್ಲೆವು?
[ಪುಟ 107ರಲ್ಲಿರುವ ಚಿತ್ರ]
ಇಂದು ಯೆಹೋವನ ಸಾಕ್ಷಿಗಳು, ಅಂತ್ಯವು ಬರುವ ಮೊದಲು ಪ್ರತಿಯೊಂದು ದೇಶದಲ್ಲಿಯೂ ಸುವಾರ್ತೆಯನ್ನು ಸಾರುತ್ತಿದ್ದಾರೆ