ಅಧ್ಯಾಯ 4
ದೇವರ ಹೆಸರು
ಮೊದಲ ಬಾರಿ ಒಬ್ಬರನ್ನು ಪರಿಚಯ ಮಾಡಿಕೊಳ್ಳುವಾಗ ಅವರ ಹತ್ತಿರ ನೀನು ಏನು ಕೇಳ್ತಿಯ?— ನಿಮ್ಮ ಹೆಸರೇನು ಅಂತ ಕೇಳ್ತಿಯ ಅಲ್ವಾ? ನಮ್ಮೆಲ್ಲರಿಗೂ ಒಂದೊಂದು ಹೆಸರಿದೆ. ಮೊದಲ ಮನುಷ್ಯನಿಗೂ ದೇವರು ಹೆಸರನ್ನು ಕೊಟ್ಟನು. ಅವನ ಹೆಸರು ಆದಾಮ. ಆದಾಮನ ಹೆಂಡತಿಯ ಹೆಸರು ಹವ್ವ.
ಹೆಸರು ಮನುಷ್ಯರಿಗೆ ಮಾತ್ರ ಇರಬೇಕಂತ ಏನಿಲ್ಲ. ಬೇರೆ ಯಾವುದಕ್ಕೆಲ್ಲ ಹೆಸರು ಇಡಬಹುದು ಯೋಚಿಸು ನೋಡೋಣ. ನಿನಗೆ ಯಾರಾದರೂ ಒಂದು ಗೊಂಬೆಯನ್ನೋ ಒಂದು ನಾಯಿ ಮರಿಯನ್ನೋ ಕೊಟ್ಟರೆ ನೀನು ಅದಕ್ಕೆ ಕೂಡಲೇ ಹೆಸರಿಡುತ್ತೀಯ ಅಲ್ವಾ?— ಹೌದು, ಹೆಸರು ಅನ್ನೋದು ತುಂಬಾ ಮುಖ್ಯ.
ಆಕಾಶದಲ್ಲಿ ರಾತ್ರಿ ನಕ್ಷತ್ರಗಳು ಮಿನುಗುತ್ತಿರುವುದನ್ನು ನೀನು ನೋಡಿದಿಯಾ? ಅವು ಎಷ್ಟಿವೆ ಎಂದರೆ ಅವುಗಳನ್ನು ಲೆಕ್ಕಿಸಲು ನಮ್ಮಿಂದ ಸಾಧ್ಯವಿಲ್ಲ. ಅವುಗಳಿಗೆಲ್ಲ ಹೆಸರಿದೆ ಅಂತ ನಿನಗೆ ಅನಿಸುತ್ತದಾ?— ‘ದೇವರು ನಕ್ಷತ್ರಗಳನ್ನು ಎಣಿಸಿ ಪ್ರತಿಯೊಂದಕ್ಕೆ ಹೆಸರಿಟ್ಟಿದ್ದಾನೆ’ ಎಂದು ಬೈಬಲ್ ಹೇಳುತ್ತದೆ. ಹೌದು, ಪ್ರತಿಯೊಂದು ನಕ್ಷತ್ರದ ಹೆಸರು ದೇವರಿಗೆ ಗೊತ್ತು.—ಕೀರ್ತನೆ 147:4.
ವಿಶ್ವದಲ್ಲೇ ಎಲ್ಲರಿಗಿಂತ ಪ್ರಾಮುಖ್ಯ ವ್ಯಕ್ತಿ ಯಾರು ಅಂತ ಹೇಳು ನೋಡೋಣ?— ದೇವರು. ಆದರೆ, ದೇವರಿಗೂ ಒಂದು ಹೆಸರಿದೆಯಾ?— ಹೌದು, ದೇವರಿಗೆ ಒಂದು ಹೆಸರಿದೆ ಎಂದು ಯೇಸು ಹೇಳಿದನು. ಒಂದ್ಸಲ ಯೇಸು ಪ್ರಾರ್ಥನೆಯಲ್ಲಿ, ‘ನಿನ್ನ ಹೆಸರನ್ನು ನನ್ನ ಹಿಂಬಾಲಕರಿಗೆ ತಿಳಿಸಿದ್ದೇನೆ’ ಎಂದು ಹೇಳಿದನು. (ಯೋಹಾನ 17:26) ದೇವರ ಹೆಸರು ಏನು ಗೊತ್ತಾ?— ತನ್ನ ಹೆಸರನ್ನು ಪರಿಚಯಿಸುತ್ತಾ “ನಾನೇ ಯೆಹೋವನು; ಇದೇ ನನ್ನ ನಾಮ” ಎಂದು ದೇವರು ಹೇಳಿದನು. ಹಾಗಾದ್ರೆ ದೇವರ ಹೆಸರು “ಯೆಹೋವ.”—ಯೆಶಾಯ 42:8.
ಬೇರೆಯವರಿಗೆ ನಿನ್ನ ಹೆಸರು ನೆನಪಿದ್ದರೆ ನಿನಗೆ ಹೇಗನಿಸುತ್ತೆ?— ಓ, ನನ್ನ ಹೆಸರು ಅವರಿಗೆ ತಿಳಿದಿದೆ ಅಂತ ನಿನಗೆ ಖುಷಿಯಾಗುತ್ತದೆ ಅಲ್ವಾ?— ಹಾಗೆಯೇ ಯೆಹೋವನು ಸಹ ತನ್ನ ಹೆಸರನ್ನು ಜನರು ತಿಳಿದುಕೊಳ್ಳಬೇಕೆಂದು ಇಷ್ಟಪಡುತ್ತಾನೆ. ಆದಕಾರಣ ನಾವು ದೇವರ ಬಗ್ಗೆ ಮಾತಾಡುವಾಗೆಲ್ಲ ಯೆಹೋವ ಎಂಬ ಆತನ ಹೆಸರನ್ನು ಉಪಯೋಗಿಸಬೇಕು. ಮಹಾ ಬೋಧಕನು ಸಹ ಜನರೊಂದಿಗೆ ದೇವರ ಕುರಿತು ಮಾತಾಡುವಾಗ ಯೆಹೋವ ಎಂಬ ಹೆಸರನ್ನು ಉಪಯೋಗಿಸಿದನು. ಒಮ್ಮೆ ಯೇಸು, ‘ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದ ಪ್ರೀತಿಸಬೇಕು’ ಎಂದು ಹೇಳಿದನು.—ಮಾರ್ಕ 12:30.
“ಯೆಹೋವ” ಎಂಬ ಹೆಸರಿಗೆ ಎಷ್ಟು ಮಹತ್ವವಿದೆ ಎಂದು ಯೇಸುವಿಗೆ ಚೆನ್ನಾಗಿ ಗೊತ್ತಿತ್ತು. ಆದಕಾರಣ ದೇವರ ಹೆಸರನ್ನು ಉಪಯೋಗಿಸುವಂತೆ ಅವನು ತನ್ನ ಹಿಂಬಾಲಕರಿಗೆ ಕಲಿಸಿದನು. ಮಾತ್ರವಲ್ಲ, ದೇವರ ಹೆಸರಿನ ಪರಿಶುದ್ಧತೆಗಾಗಿಯೂ ಪ್ರಾರ್ಥಿಸುವಂತೆ ಕಲಿಸಿದನು. ಯೆಹೋವ ಎಂಬ ತನ್ನ ಹೆಸರನ್ನು ಎಲ್ಲಾ ಜನರು ತಿಳಿದುಕೊಳ್ಳಬೇಕೆಂದು ದೇವರು ಇಷ್ಟಪಡುತ್ತಾನೆ ಅನ್ನೋದು ಯೇಸುವಿಗೆ ಗೊತ್ತಿತ್ತು.
ಬಹಳ ವರ್ಷಗಳ ಹಿಂದೆ ದೇವರು ತನ್ನ ಹೆಸರಿನ ಮಹತ್ವವನ್ನು ಮೋಶೆ ಎಂಬವನಿಗೆ ತೋರಿಸಿಕೊಟ್ಟನು. ಮೋಶೆ ಇಸ್ರಾಯೇಲ್ಯ ಜನಾಂಗಕ್ಕೆ ಸೇರಿದವನಾಗಿದ್ದನು. ಮೋಶೆಯ ಕಾಲದಲ್ಲಿ ಈ ಇಸ್ರಾಯೇಲ್ಯರು ಈಜಿಪ್ಟ್ ದೇಶದಲ್ಲಿ ವಾಸಿಸುತ್ತಿದ್ದರು. ಈಜಿಪ್ಟ್ ದೇಶದವರು ಇಸ್ರಾಯೇಲ್ಯರನ್ನು ಗುಲಾಮರನ್ನಾಗಿ ಮಾಡಿ ಅವರಿಗೆ ತುಂಬಾ ಕಷ್ಟ ಕೊಡುತ್ತಿದ್ದರು. ಹೀಗೆ ಅವರು ಒಮ್ಮೆ ಕಷ್ಟಕೊಡುತ್ತಿದ್ದಾಗ ತನ್ನ ಜನರಲ್ಲಿ ಒಬ್ಬನನ್ನು ರಕ್ಷಿಸಲು ಮೋಶೆ ಹೋದನು. ಇಸ್ರಾಯೇಲ್ಯರಿಗೆ ಮೋಶೆ ಸಹಾಯ ಮಾಡುತ್ತಿದ್ದಾನೆಂದು ತಿಳಿದು ಈಜಿಪ್ಟಿನ ರಾಜ ಫರೋಹನಿಗೆ ತುಂಬಾ ಕೋಪಬಂತು. ಅವನು ಮೋಶೆಯನ್ನು ಕೊಲ್ಲಲು ಪ್ರಯತ್ನಿಸಿದನು. ತನ್ನ ಜೀವ ಉಳಿಸಿಕೊಳ್ಳಲು ಮೋಶೆ ಆ ದೇಶವನ್ನು ಬಿಟ್ಟು ಓಡಿಹೋದನು.
ಈಜಿಪ್ಟ್ನಿಂದ ಓಡಿಹೋದ ಮೋಶೆ ಮಿದ್ಯಾನ್ ಎಂಬ ದೇಶಕ್ಕೆ ಬಂದನು. ಅಲ್ಲಿ ಕುರಿಕಾಯುವ ಕೆಲಸ ಮಾಡಿದನು. ಮದುವೆಯಾಗಿ ಹೆಂಡತಿ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದನು. ಹೀಗಿರುವಾಗ ಒಂದು ದಿನ ಆಶ್ಚರ್ಯಕರ ಸಂಗತಿ ನಡೆಯಿತು. ಮೋಶೆ ಬೆಟ್ಟದ ಹತ್ತಿರ ಕುರಿ ಮೇಯಿಸುತ್ತಿದ್ದಾಗ ಒಂದು ಮುಳ್ಳಿನ ಪೊದೆಗೆ ಬೆಂಕಿ ಹತ್ತಿ ಉರಿಯುತ್ತಿತ್ತು. ಅದ್ಭುತವೆಂದರೆ ಬೆಂಕಿ ಉರಿಯುತ್ತಿದ್ದರೂ ಆ ಪೊದೆ ಮಾತ್ರ ಸುಟ್ಟು ಹೋಗದೆ ಹಾಗೆ ಇತ್ತು! ಇದೇನಪ್ಪಾ ಅಂತ ನೋಡಲು ಮೋಶೆ ಇನ್ನಷ್ಟು ಹತ್ತಿರ ಹೋದನು.
ಆಗ ಏನು ನಡೆಯಿತು ಗೊತ್ತಾ?— ಉರಿಯುತ್ತಿದ್ದ ಆ ಪೊದೆಯ ಮಧ್ಯದಿಂದ ಒಂದು ಧ್ವನಿ ಕೇಳಿ ಬಂತು. ಅದು ‘ಮೋಶೆ, ಮೋಶೆ’ ಎಂದು ಕರೆಯಿತು. ಆ ಧ್ವನಿ ಯಾರದೆಂದು ಊಹಿಸಬಲ್ಲೆಯಾ?— ಯೆಹೋವ ದೇವರ ಧ್ವನಿ! ಮೋಶೆಗೆ ಒಂದು ದೊಡ್ಡ ಕೆಲಸ ಕೊಡಲಿಕ್ಕಾಗಿ ದೇವರು ಕರೆಯುತ್ತಿದ್ದನು. ‘ನನ್ನ ಜನರಾಗಿರುವ ಇಸ್ರಾಯೇಲ್ಯರನ್ನು ಈಜಿಪ್ಟ್ನಿಂದ ಬಿಡಿಸುವುದಕ್ಕಾಗಿ ನಿನ್ನನ್ನು ಈಜಿಪ್ಟಿನ ರಾಜನಾದ ಫರೋಹನ ಬಳಿಗೆ ಕಳುಹಿಸುತ್ತೇನೆ’ ಎಂದು ದೇವರು ಮೋಶೆಗೆ ಹೇಳಿದನು. ಈ ದೊಡ್ಡ ಕೆಲಸವನ್ನು ಮಾಡಲು ಬೇಕಾದ ಸಹಾಯವನ್ನು ಕೊಡುವೆನೆಂದು ಸಹ ದೇವರು ಮೋಶೆಗೆ ಮಾತುಕೊಟ್ಟನು.
ಆದರೆ ಮೋಶೆ ದೇವರನ್ನು, ‘ನಾನು ಈಜಿಪ್ಟ್ನಲ್ಲಿರುವ ಇಸ್ರಾಯೇಲ್ಯರ ಬಳಿಗೆ ಹೋಗಿ, ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ಹೇಳುವಾಗ ಅವರೇನಾದರೂ ಆತನ ಹೆಸರೇನೆಂದು ನನ್ನನ್ನು ಕೇಳಿದರೆ ನಾನೇನು ಉತ್ತರಕೊಡಬೇಕು?’ ಎಂದು ಕೇಳಿದನು. ಅದಕ್ಕೆ ದೇವರು ಮೋಶೆಗೆ ಹೀಗೆ ಹೇಳಿದನು, “ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಹೇಳಬೇಕು. ಇದು ಸದಾಕಾಲಕ್ಕೂ ನನ್ನ ಹೆಸರು.” (ವಿಮೋಚನಕಾಂಡ 3:1-15) ಇದರಿಂದ ಏನು ತಿಳಿದುಬರುತ್ತದೆ? ದೇವರ ಹೆಸರು ಸದಾಕಾಲಕ್ಕೂ ಯೆಹೋವ ಎಂದಾಗಿರುತ್ತದೆ. ಅದನ್ನು ಆತನೆಂದೂ ಬದಲಾಯಿಸುವುದಿಲ್ಲ. ಎಂದೆಂದಿಗೂ ಜನರು ಯೆಹೋವ ಎಂಬ ಹೆಸರಿನಿಂದಲೇ ತನ್ನನ್ನು ಗುರುತಿಸಬೇಕೆಂದು ದೇವರು ಬಯಸಿದನು.
ಮೋಶೆ ಫರೋಹನನ್ನು ನೋಡಲು ಈಜಿಪ್ಟ್ಗೆ ಹಿಂದಿರುಗಿದನು. ಯೆಹೋವ ದೇವರ ಬಗ್ಗೆ ಈಜಿಪ್ಟ್ನವರು ಏನು ನೆನಸಿದರು ಗೊತ್ತಾ? ಇಸ್ರಾಯೇಲ್ಯರು ಆರಾಧಿಸುತ್ತಿದ್ದ ಯಾವುದೋ ಒಂದು ದೇವರಾಗಿರಬೇಕು ಅಂತ ಅಂದುಕೊಂಡಿದ್ದರು. ಯೆಹೋವನು ಇಡೀ ಜಗತ್ತಿಗೇ ದೇವರಾಗಿದ್ದಾನೆ ಎಂದು ಅವರು ಯೋಚಿಸಲಿಲ್ಲ. ಆದುದರಿಂದ ಯೆಹೋವನು ಈಜಿಪ್ಟಿನ ರಾಜನಿಗೆ, ‘ಲೋಕದ ಎಲ್ಲಾ ಜನರು ನನ್ನ ಹೆಸರನ್ನು ತಿಳಿಯುವಂತೆ ಮಾಡುತ್ತೇನೆ’ ಎಂದು ಹೇಳಿದನು. (ವಿಮೋಚನಕಾಂಡ 9:16) ಅದೇ ರೀತಿ ಮಾಡಿತೋರಿಸಿದನು. ಹೇಗೆಂದು ನಿನಗೆ ಗೊತ್ತಾ?—
ಮೋಶೆ ಇಸ್ರಾಯೇಲ್ಯರನ್ನು ಈಜಿಪ್ಟಿನಿಂದ ಬಿಡಿಸಿ ಹೊರತರುವಂತೆ ಯೆಹೋವನು ಸಾಧ್ಯಗೊಳಿಸಿದನು. ಅವರು ಈಜಿಪ್ಟಿನಿಂದ ಕೆಂಪುಸಮುದ್ರದ ತೀರಕ್ಕೆ ಬಂದರು. ಆಗ ಸಮುದ್ರದ ನೀರು ಇಬ್ಭಾಗವಾಗಿ ಇಸ್ರಾಯೇಲ್ಯರಿಗೆ ದಾರಿ ಬಿಟ್ಟು ಕೊಡುವಂತೆ ಯೆಹೋವನು ಮಾಡಿದನು. ಇಸ್ರಾಯೇಲ್ಯರು ಆ ದಾರಿಯ ಮೂಲಕ ಹಾದು ಸುರಕ್ಷಿತವಾಗಿ ಆಚೆ ದಡವನ್ನು ತಲಪಿದರು. ಇಸ್ರಾಯೇಲ್ಯರನ್ನು ಅಟ್ಟಿಸಿಕೊಂಡು ಬರುತ್ತಿದ್ದ ಫರೋಹ ಮತ್ತು ಅವನ ಸೈನ್ಯದವರು ಸಹ ಸಮುದ್ರದ ಅದೇ ದಾರಿಯ ಮೂಲಕ ಹೋಗಲು ಪ್ರಯತ್ನಿಸಿದರು. ಆದರೆ ದಾರಿಯ ಎರಡು ಕಡೆಗಳಲ್ಲಿ ಗೋಡೆಯಂತೆ ನಿಂತಿದ್ದ ಸಮುದ್ರದ ನೀರು ಧಡಮ್ಮನೇ ಅವರ ಮೇಲೆ ಕುಸಿದು ಬಿತ್ತು. ಅವರೆಲ್ಲರೂ ನೀರುಪಾಲಾಗಿ ಸತ್ತುಹೋದರು.
ಯೆಹೋವನು ಕೆಂಪುಸಮುದ್ರದ ಬಳಿ ಮಾಡಿದ ಈ ಅದ್ಭುತದ ಸುದ್ದಿ ಬೇಗನೆ ಭೂಮಿಯ ಎಲ್ಲಾ ಕಡೆ ಹರಡಿತು. ಎಲ್ಲಾ ಕಡೆ ಹರಡಿತು ಅಂತ ನಾವು ಹೇಗೆ ಹೇಳಬಹುದು?— ಆ ಅದ್ಭುತ ನಡೆದು 40 ವರ್ಷ ಆದ ಮೇಲೆ ಏನಾಯಿತು ಗೊತ್ತಾ? ಇಸ್ರಾಯೇಲ್ಯರು ಕಾನಾನ್ ಎಂಬ ದೇಶಕ್ಕೆ ಬಂದರು. ಆ ದೇಶವನ್ನು ಅವರಿಗೆ ಕೊಡುವುದಾಗಿ ದೇವರು ಬಹಳ ಹಿಂದೆಯೇ ಮಾತುಕೊಟ್ಟಿದ್ದನು. ಕಾನಾನ್ ದೇಶದ ರಾಹಾಬ್ ಎಂಬ ಮಹಿಳೆಯು ಇಬ್ಬರು ಇಸ್ರಾಯೇಲ್ಯ ಪುರುಷರಿಗೆ, ‘ನೀವು ಈಜಿಪ್ಟ್ನಿಂದ ಹೊರಟು ಬಂದ ಮೇಲೆ ಯೆಹೋವನು ಕೆಂಪುಸಮುದ್ರದ ನೀರನ್ನು ಬತ್ತಿಸಿ ನಿಮಗೆ ದಾರಿ ಮಾಡಿಕೊಟ್ಟನು ಎಂದು ನಾವು ಕೇಳಿದ್ದೇವೆ’ ಎಂದು ಹೇಳಿದಳು. ಹಾಗಾದರೆ, ಈ ಸುದ್ದಿ ದೂರದಲ್ಲಿದ್ದ ಕಾನಾನ್ಗೂ ತಲಪಿತ್ತು.—ಯೆಹೋಶುವ 2:10.
ಇಂದು ಎಷ್ಟೋ ಜನರು ಆ ಈಜಿಪ್ಟಿನವರಂತೆ ಇದ್ದಾರೆ. ಯೆಹೋವನು ಇಡೀ ಜಗತ್ತಿಗೆ ದೇವರಾಗಿದ್ದಾನೆ ಅಂತ ಅವರು ನಂಬುವುದಿಲ್ಲ. ಆದುದರಿಂದ ಅದನ್ನು ತನ್ನ ಭಕ್ತರು ಬೇರೆಯವರಿಗೆ ತಿಳಿಸಬೇಕೆಂದು ಯೆಹೋವನು ಬಯಸುತ್ತಾನೆ. ಯೇಸು ಸಹ ಯೆಹೋವನ ಬಗ್ಗೆ ಬೇರೆಯವರಿಗೆ ತಿಳಿಸಿದನು. ಸಾಯುವ ಮುನ್ನ ಅವನು ಪ್ರಾರ್ಥನೆಯಲ್ಲಿ ಯೆಹೋವನಿಗೆ, “ನಾನು ಇವರಿಗೆ ನಿನ್ನ ಹೆಸರನ್ನು ತಿಳಿಯಪಡಿಸಿದ್ದೇನೆ” ಎಂದು ಹೇಳಿದನು.—ಯೋಹಾನ 17:26.
ಯೇಸುವಿನ ಹಾಗೇ ಇರಲು ನಿನಗೂ ಇಷ್ಟ ಅಲ್ವಾ? ಹಾಗಾದರೆ, ದೇವರ ಹೆಸರು ಯೆಹೋವ ಎಂದು ಬೇರೆಯವರಿಗೆ ನೀನೂ ತಿಳಿಸಬೇಕು. ಅನೇಕರಿಗೆ ದೇವರ ಈ ಹೆಸರು ತಿಳಿದಿಲ್ಲ. ಅವರಿಗೆ ನೀನು ಬೈಬಲಿನಿಂದಲೇ ಯೆಹೋವನ ಹೆಸರನ್ನು ತೋರಿಸಬಹುದು. ಉದಾಹರಣೆಗೆ, ಕೀರ್ತನೆ 83:18 ನೇ ವಚನವನ್ನು ತೋರಿಸಬಹುದು. ಆ ವಚನ ಏನು ಹೇಳುತ್ತೆ ಅಂತ ನಾವು ಈಗ ನೋಡೋಣ. ಅದು ಹೀಗೆ ಹೇಳುತ್ತದೆ: “ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.”
ಈ ವಚನದಿಂದ ನಾವು ಏನು ಕಲಿಯುತ್ತೇವೆ?— ಬೇರೆ ಎಲ್ಲ ಹೆಸರುಗಳಿಗಿಂತಲೂ ಯೆಹೋವ ಎಂಬ ಹೆಸರು ಅತಿ ಪ್ರಾಮುಖ್ಯ ಎಂದು ಕಲಿಯುತ್ತೇವೆ. ಇದು ಸರ್ವಶಕ್ತ ದೇವರ ಹೆಸರಾಗಿದೆ. ಆತನೇ ಯೇಸುವಿನ ತಂದೆ ಹಾಗೂ ಎಲ್ಲವನ್ನೂ ಸೃಷ್ಟಿಮಾಡಿದವನು. ನಿನಗೆ ಯೇಸುವಿನ ಮಾತು ನೆನಪಿದೆಯಾ, ಯೆಹೋವನನ್ನು ನಾವು ಪೂರ್ಣ ಹೃದಯದಿಂದ ಪ್ರೀತಿಸಬೇಕು ಎಂದು ಅವನು ಹೇಳಿದನು. ನೀನು ಯೆಹೋವನನ್ನು ಪೂರ್ಣ ಹೃದಯದಿಂದ ಪ್ರೀತಿಸುತ್ತೀಯಾ?—
ಯೆಹೋವನನ್ನು ಪ್ರೀತಿಸುತ್ತೇವೆಂದು ನಾವು ಹೇಗೆ ತೋರಿಸಬಹುದು?— ಯೆಹೋವನ ಬಗ್ಗೆ ಹೆಚ್ಚೆಚ್ಚು ತಿಳಿಯುತ್ತಾ ಆತನೊಂದಿಗೆ ಗೆಳೆತನ ಬೆಳೆಸುವುದು ಒಂದು ವಿಧ. ಪ್ರೀತಿ ತೋರಿಸುವ ಮತ್ತೊಂದು ವಿಧ, ಆತನ ಹೆಸರನ್ನು ಬೇರೆಯವರಿಗೆ ತಿಳಿಸುವುದೇ ಆಗಿದೆ. ನಾವದನ್ನು ಬೈಬಲಿನಿಂದಲೇ ನೇರವಾಗಿ ತೋರಿಸಬಹುದು. ಮಾತ್ರವಲ್ಲ, ಯೆಹೋವನು ಏನೆಲ್ಲಾ ಸೃಷ್ಟಿಸಿದ್ದಾನೆ ಮತ್ತು ನಮಗಾಗಿ ಏನೆಲ್ಲಾ ಮಾಡಿದ್ದಾನೆ ಎಂಬ ವಿಷಯಗಳ ಬಗ್ಗೆ ಸಹ ನಾವು ಬೇರೆಯವರೊಂದಿಗೆ ಮಾತಾಡಬಹುದು. ನಾವು ಹೀಗೆ ಮಾಡಿದರೆ ಯೆಹೋವನು ತುಂಬಾ ಖುಷಿಪಡುತ್ತಾನೆ. ಏಕೆಂದರೆ ನಾವು ಆತನ ಬಗ್ಗೆ ಎಲ್ಲಾ ಜನರಿಗೆ ತಿಳಿಸಬೇಕೆಂದು ಆತನು ಇಷ್ಟಪಡುತ್ತಾನೆ. ನಾವದನ್ನು ಮಾಡಬಹುದಲ್ವಾ?—
ಯೆಹೋವನ ಬಗ್ಗೆ ನಾವು ಮಾತಾಡುವಾಗ ಕೆಲವರು ನಮ್ಮ ಮಾತನ್ನು ಕೇಳದೇ ಅಸಡ್ಡೆ ಮಾಡಬಹುದು. ಮಹಾ ಬೋಧಕನಾದ ಯೇಸು ಮಾತಾಡಿದಾಗ ಸಹ ಅನೇಕರು ಕೇಳಲಿಲ್ಲ. ಹಾಗಂತ ಯೇಸು ಯೆಹೋವನ ಬಗ್ಗೆ ಮಾತಾಡುವುದನ್ನು ನಿಲ್ಲಿಸಲಿಲ್ಲ.
ನಾವು ಕೂಡ ಯೇಸುವಿನ ಮಾದರಿಯನ್ನು ಅನುಸರಿಸೋಣ. ಯೆಹೋವನ ಬಗ್ಗೆ ಮಾತಾಡುತ್ತಾ ಇರೋಣ. ಹೀಗೆ ನಾವು ಯೆಹೋವನನ್ನು ಪ್ರೀತಿಸುತ್ತಾ ಅವನ ಹೆಸರಿಗೆ ಗೌರವ ತರುವಾಗ ಯೆಹೋವ ದೇವರಿಗೆ ತುಂಬಾ ತುಂಬಾ ಸಂತೋಷವಾಗುತ್ತದೆ.
ದೇವರ ಹೆಸರು ಎಷ್ಟು ಪ್ರಾಮುಖ್ಯವೆಂದು ತೋರಿಸುವ ಕೆಲವು ವಚನಗಳನ್ನು ನಾವು ಬೈಬಲಿನಿಂದ ಓದೋಣ: ಯೆಶಾಯ 12:4, 5; ಮತ್ತಾಯ 6:9; ಯೋಹಾನ 17:6 ಮತ್ತು ರೋಮನ್ನರಿಗೆ 10:13.