ದೇವರು ವಾಗ್ದಾನಿಸಿರುವ ಒಂದು ಹೊಸ ಲೋಕ
“ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು” ಎಂದು ದೇವರ ಲಿಖಿತ ವಾಕ್ಯವಾಗಿರುವ ಬೈಬಲು ಹೇಳುವಾಗ, ನಮ್ಮಲ್ಲಿ ಅದು ನಿರೀಕ್ಷೆಯನ್ನು ತುಂಬಿಸುತ್ತದೆ.—2 ಪೇತ್ರ 3:13.
“ನೂತನಾಕಾಶಮಂಡಲ” ಎಂದರೇನು? ಬೈಬಲು ಆಕಾಶವನ್ನು ಆಳ್ವಿಕೆಯೊಂದಿಗೆ ಸಂಬಂಧಿಸುತ್ತದೆ. (ಅ. ಕೃತ್ಯಗಳು 7:49) “ನೂತನಾಕಾಶಮಂಡಲ”ವು ಭೂಮಿಯ ಮೇಲೆ ಆಳ್ವಿಕೆ ನಡೆಸಲಿರುವ ಒಂದು ಹೊಸ ಸರಕಾರವಾಗಿದೆ. ಇದನ್ನು ಏಕೆ ನೂತನ ಎಂದು ಕರೆಯಲಾಗಿದೆಯೆಂದರೆ, ಇದು ಸದ್ಯದ ಆಳ್ವಿಕೆಯ ವ್ಯವಸ್ಥೆಯನ್ನು ಸ್ಥಾನಪಲ್ಲಟಗೊಳಿಸುವುದು; ಅಷ್ಟುಮಾತ್ರವಲ್ಲ, ದೇವರ ಉದ್ದೇಶದ ಪೂರೈಕೆಯಲ್ಲಿ ಇದು ಒಂದು ನೂತನ ಹೆಜ್ಜೆಯಾಗಿದೆ. ಯೇಸು ನಮಗೆ ಯಾವುದಕ್ಕಾಗಿ ಪ್ರಾರ್ಥಿಸಲು ಕಲಿಸಿದನೋ ಆ ರಾಜ್ಯವು ಇದೇ ಆಗಿದೆ. (ಮತ್ತಾಯ 6:10) ದೇವರೇ ಇದರ ಸ್ಥಾಪಕನಾಗಿದ್ದು, ಆತನು ಪರಲೋಕದಲ್ಲಿ ನಿವಾಸಿಸುತ್ತಾನಾದ್ದರಿಂದ ಇದನ್ನು “ಪರಲೋಕರಾಜ್ಯ” ಎಂದು ಕರೆಯಲಾಗಿದೆ.—ಮತ್ತಾಯ 7:21.
“ನೂತನಭೂಮಂಡಲ” ಎಂದರೇನು? ಇದು ಹೊಸ ಭೂಗ್ರಹವೇನಲ್ಲ, ಏಕೆಂದರೆ ಭೂಮಿಯು ನಿತ್ಯಕ್ಕೂ ನಿವಾಸಿಸಲ್ಪಡುವುದು ಎಂದು ಬೈಬಲು ಸ್ಪಷ್ಟವಾಗಿ ಹೇಳುತ್ತದೆ. “ನೂತನಭೂಮಂಡಲ”ವು ಒಂದು ಹೊಸ ಮಾನವ ಸಮಾಜವಾಗಿದೆ. ದುಷ್ಟರು ಭೂಮಿಯಿಂದ ಕೀಳಲ್ಪಡುವ ಕಾರಣದಿಂದಲೇ ಅದು ನೂತನವಾಗಿರುವುದು. (ಜ್ಞಾನೋಕ್ತಿ 2:21, 22) ಆಗ ಜೀವಿಸುವವರೆಲ್ಲರೂ ಸೃಷ್ಟಿಕರ್ತನನ್ನು ಗೌರವಿಸುವರು ಮತ್ತು ಆತನಿಗೆ ವಿಧೇಯರಾಗುವರು ಹಾಗೂ ಆತನ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ ಜೀವಿಸುವರು. (ಕೀರ್ತನೆ 22:27) ಆ ಆವಶ್ಯಕತೆಗಳ ಕುರಿತು ಕಲಿಯುವಂತೆ ಮತ್ತು ಈಗಲೇ ತಮ್ಮ ಜೀವಿತಗಳನ್ನು ಅವುಗಳಿಗೆ ಹೊಂದಿಕೆಯಲ್ಲಿ ತರುವಂತೆ ಎಲ್ಲಾ ಜನಾಂಗಗಳ ಜನರಿಗೆ ಆಮಂತ್ರಣವು ಕೊಡಲ್ಪಡುತ್ತಿದೆ. ನೀವಿದಕ್ಕೆ ಪ್ರತಿಕ್ರಿಯಿಸುತ್ತಿದ್ದೀರೋ?
ದೇವರ ನೂತನ ಲೋಕದಲ್ಲಿ ಪ್ರತಿಯೊಬ್ಬರೂ ಆತನ ಆಳ್ವಿಕೆಯನ್ನು ಗೌರವಿಸುವರು. ದೇವರಿಗಾಗಿರುವ ಪ್ರೀತಿಯು ನಿಮ್ಮನ್ನು ಆತನಿಗೆ ವಿಧೇಯರಾಗುವಂತೆ ಪ್ರಚೋದಿಸುತ್ತದೋ? (1 ಯೋಹಾನ 5:3) ಇಂಥ ವಿಧೇಯತೆಯು ನಿಮ್ಮ ಮನೆಯಲ್ಲಿ, ಕೆಲಸದ ಸ್ಥಳದಲ್ಲಿ ಅಥವಾ ಶಾಲೆಯಲ್ಲಿ, ನೀವು ನಿಮ್ಮ ಜೀವಿತವನ್ನು ಉಪಯೋಗಿಸುವ ರೀತಿಯಲ್ಲಿ ಸುವ್ಯಕ್ತವಾಗುತ್ತದೋ?
ಆ ಹೊಸ ಲೋಕದಲ್ಲಿ, ಮಾನವ ಸಮಾಜವು ಸತ್ಯ ದೇವರ ಆರಾಧನೆಯಲ್ಲಿ ಐಕ್ಯವಾಗಿರುವುದು. ಭೂಪರಲೋಕಗಳ ಸೃಷ್ಟಿಕರ್ತನನ್ನೇ ನೀವು ಆರಾಧಿಸುತ್ತೀರೊ? ನಿಮ್ಮ ಆರಾಧನೆಯು, ಎಲ್ಲಾ ಜನಾಂಗ ಕುಲ ಭಾಷೆಗಳ ಜೊತೆ ಆರಾಧಕರೊಂದಿಗೆ ನಿಮ್ಮನ್ನು ನಿಜವಾಗಿಯೂ ಐಕ್ಯಗೊಳಿಸುತ್ತದೊ?—ಕೀರ್ತನೆ 86:9, 10; ಯೆಶಾಯ 2:2-4; ಚೆಫನ್ಯ 3:9.
[ಪುಟ 17ರಲ್ಲಿರುವ ಚೌಕ]
ಈ ವಿಷಯಗಳನ್ನು ವಾಗ್ದಾನಿಸುವಂಥ ದೇವರು
ಆತನು ಭೌತಿಕ ಆಕಾಶಮಂಡಲ ಮತ್ತು ಭೂಗ್ರಹದ ಸೃಷ್ಟಿಕರ್ತನಾಗಿದ್ದಾನೆ. ‘ಒಬ್ಬನೇ ಸತ್ಯ ದೇವರು’ ಎಂದು ಆತನನ್ನೇ ಯೇಸು ಕ್ರಿಸ್ತನು ಗುರುತಿಸಿದನು.—ಯೋಹಾನ 17:3.
ಮಾನವರಲ್ಲಿ ಹೆಚ್ಚಿನವರು ತಾವೇ ಮಾಡಿಕೊಂಡಿರುವ ದೇವದೇವತೆಗಳನ್ನು ಆರಾಧಿಸುತ್ತಾರೆ. ಲಕ್ಷಾಂತರ ಜನರು ನಿರ್ಜೀವ ಮೂರ್ತಿಗಳಿಗೆ ಅಡ್ಡಬೀಳುತ್ತಾರೆ. ಇನ್ನೂ ಕೆಲವರು ಮಾನವ ಸಂಘಟನೆಗಳನ್ನು, ಪ್ರಾಪಂಚಿಕ ತತ್ತ್ವಜ್ಞಾನವನ್ನು, ಅಥವಾ ಅವರ ಸ್ವಂತ ಬಯಕೆಗಳನ್ನು ಪೂಜ್ಯಸ್ಥಾನದಲ್ಲಿಡುತ್ತಾರೆ. ಬೈಬಲನ್ನು ಉಪಯೋಗಿಸುತ್ತೇವೆಂದು ಹೇಳಿಕೊಳ್ಳುವವರು ಸಹ, ಬೈಬಲು ಯಾರನ್ನು “[ಸತ್ಯ] ದೇವರು” ಎಂದು ಗುರುತಿಸುತ್ತದೋ ಆತನ ಹೆಸರನ್ನು ಗೌರವಿಸುವುದಿಲ್ಲ.—ಧರ್ಮೋಪದೇಶಕಾಂಡ 4:35.
ತನ್ನ ಕುರಿತಾಗಿ ಸೃಷ್ಟಿಕರ್ತನು ಹೇಳುವುದು: “ನಾನೇ ಯೆಹೋವನು; ಇದೇ ನನ್ನ ನಾಮವು.” (ಯೆಶಾಯ 42:5, 8) ಬೈಬಲು ಬರೆಯಲ್ಪಟ್ಟ ಮೂಲ ಭಾಷೆಗಳಲ್ಲಿ ಈ ಹೆಸರು ಸುಮಾರು 7,000 ಬಾರಿ ಕಂಡುಬರುತ್ತದೆ. ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಹೀಗೆ ಪ್ರಾರ್ಥಿಸುವಂತೆ ಕಲಿಸಿದನು: “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.”—ಮತ್ತಾಯ 6:10.
ಸತ್ಯ ದೇವರು ಎಂಥ ರೀತಿಯ ವ್ಯಕ್ತಿಯಾಗಿದ್ದಾನೆ? ‘ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯುಳ್ಳವನೂ’ ಹಾಗೂ ಯಾರು ತನ್ನ ಆಜ್ಞೆಗಳನ್ನು ಬೇಕುಬೇಕೆಂದು ಉಲ್ಲಂಘಿಸುತ್ತಾರೋ ಅವರಿಗೆ ಖಡಾಖಂಡಿತವಾಗಿ ಶಿಕ್ಷೆಯನ್ನು ವಿಧಿಸುವವನೂ ಆಗಿರುವುದಾಗಿ ಆತನು ತನ್ನ ಬಗ್ಗೆ ವರ್ಣಿಸುತ್ತಾನೆ. (ವಿಮೋಚನಕಾಂಡ 34:6, 7) ಮಾನವಕುಲದೊಂದಿಗಿನ ಆತನ ವ್ಯವಹಾರಗಳ ಕುರಿತಾದ ಇತಿಹಾಸವು ಈ ವಿವರಣೆಯ ಸತ್ಯತೆಯನ್ನು ದೃಢಪಡಿಸುತ್ತದೆ.
ಈ ಹೆಸರನ್ನು ಮತ್ತು ಈ ಹೆಸರಿನಿಂದ ಪ್ರತಿನಿಧಿಸಲ್ಪಡುವ ವ್ಯಕ್ತಿಯನ್ನು ಪವಿತ್ರವಾಗಿ ಪರಿಗಣಿಸಬೇಕಾಗಿದೆ. ಆತನು ಸೃಷ್ಟಿಕರ್ತನೂ ವಿಶ್ವದ ಪರಮಾಧಿಕಾರಿಯೂ ಆಗಿರುವುದರಿಂದ, ನಮ್ಮ ವಿಧೇಯತೆ ಹಾಗೂ ನಮ್ಮೆಲ್ಲಾ ಆರಾಧನೆಗೆ ಆತನು ಅರ್ಹನಾಗಿದ್ದಾನೆ. ವೈಯಕ್ತಿಕವಾಗಿ ನೀವು ಆತನಿಗೆ ಇವುಗಳನ್ನು ಸಲ್ಲಿಸುತ್ತೀರೋ?
[ಪುಟ 18ರಲ್ಲಿರುವ ಚೌಕ/ಚಿತ್ರ]
‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲವು’ ಯಾವ ಬದಲಾವಣೆಗಳನ್ನು ತರುವುದು?
ಪರದೈಸಾಗಿ ಮಾರ್ಪಡುವ ಭೂಮಿ ಲೂಕ 23:43
ಸರ್ವರಿಗೂ ಭೂವ್ಯಾಪಕ ಶಾಂತಿ, ಕೀರ್ತನೆ 37:10, 11;
ನಿಜ ಭದ್ರತೆ ಮೀಕ 4:3, 4
ಸಂತೃಪ್ತಿಕರ ಕೆಲಸ, ಯೆಶಾಯ 25:6;
ಬೇಕಾದಷ್ಟು ಆಹಾರ 65:17, 21-23
ರೋಗ, ದುಃಖ, ಮರಣಗಳ ಯೆಶಾಯ 25:8;
ಸಂಪೂರ್ಣ ನಿರ್ನಾಮ ಪ್ರಕಟನೆ 21:1, 4
ಸತ್ಯ ದೇವರ ಆರಾಧನೆಯಲ್ಲಿ ಪ್ರಕಟನೆ 15:3, 4
ಐಕ್ಯವಾಗಿರುವಂಥ ಒಂದು ಲೋಕ
[ಪುಟ 19ರಲ್ಲಿರುವ ಚೌಕ/ಚಿತ್ರಗಳು]
ನೀವು ಪ್ರಯೋಜನ ಹೊಂದುವಿರೊ?
ದೇವರು ಸುಳ್ಳಾಡಲಾರನು!—ತೀತ 1:1.
ಯೆಹೋವನು ಹೀಗನ್ನುತ್ತಾನೆ: “ನನ್ನ . . . ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.”—ಯೆಶಾಯ 55:11.
ಈಗಾಗಲೇ ಯೆಹೋವನು “ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ” ಸೃಷ್ಟಿಸುತ್ತಿದ್ದಾನೆ. ಸ್ವರ್ಗೀಯ ಸರಕಾರವು ಈಗಾಗಲೇ ಕಾರ್ಯನಡಿಸುತ್ತಿದೆ. “ನೂತನಭೂಮಂಡಲ”ಕ್ಕಾಗಿ ಈಗಾಗಲೇ ಅಸ್ತಿವಾರವು ಹಾಕಲ್ಪಟ್ಟಿದೆ.
‘ನೂತನಾಕಾಶಮಂಡಲವೂ ನೂತನಭೂಮಂಡಲವೂ’ ಮಾನವಕುಲಕ್ಕೆ ತರಲಿರುವ ವಿಸ್ಮಯಕರ ಸಂಗತಿಗಳಲ್ಲಿ ಕೆಲವನ್ನು ತಿಳಿಯಪಡಿಸಿದ ಬಳಿಕ, ವಿಶ್ವದ ಪರಮಾಧಿಕಾರಿಯಾಗಿರುವ ದೇವರು ಸ್ವತಃ ಹೀಗೆ ಹೇಳುವುದನ್ನು ಪ್ರಕಟನೆ ಪುಸ್ತಕವು ಉಲ್ಲೇಖಿಸುತ್ತದೆ: “ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ.” ಅಷ್ಟುಮಾತ್ರವಲ್ಲ, ಆತನು ಇನ್ನೂ ಹೇಳುವುದು: “ಇದನ್ನು ಬರೆ; ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ.”—ಪ್ರಕಟನೆ 21:1, 5.
ಆದರೆ ನಿರ್ಣಾಯಕ ಪ್ರಶ್ನೆಯೇನೆಂದರೆ, “ನೂತನಾಕಾಶಮಂಡಲ”ದ ಕೆಳಗಿನ ಆ “ನೂತನಭೂಮಂಡಲ”ದ ಭಾಗವಾಗುವ ಅರ್ಹತೆಯನ್ನು ಪಡೆಯಲು ಅಗತ್ಯವಿರುವ ಹೊಂದಾಣಿಕೆಗಳನ್ನು ನಾವು ಮಾಡುತ್ತಿದ್ದೇವೊ?