ಅಧ್ಯಾಯ 16
ಪಿಶಾಚನನ್ನು ಮತ್ತು ಅವನ ತಂತ್ರೋಪಾಯಗಳನ್ನು ಎದುರಿಸಿರಿ
“ಪಿಶಾಚನನ್ನು ಎದುರಿಸಿರಿ, ಆಗ ಅವನು ನಿಮ್ಮಿಂದ ಓಡಿಹೋಗುವನು.”—ಯಾಕೋಬ 4:7.
1, 2. ದೀಕ್ಷಾಸ್ನಾನದ ಸಂದರ್ಭಗಳು ಯಾರಿಗೆ ಸಂತೋಷವನ್ನು ತರುತ್ತವೆ?
ನೀವು ಹಲವಾರು ವರ್ಷಗಳಿಂದ ಯೆಹೋವನ ಸೇವೆಮಾಡುತ್ತಾ ಬಂದಿರುವಲ್ಲಿ ನಮ್ಮ ಸಮ್ಮೇಳನಗಳು ಮತ್ತು ಅಧಿವೇಶನಗಳಲ್ಲಿ ದೀಕ್ಷಾಸ್ನಾನದ ಭಾಷಣಗಳನ್ನು ಅನೇಕ ಬಾರಿ ಕೇಳಿಸಿಕೊಂಡಿರಬಹುದು. ನೀವು ಇಂಥ ಸಂದರ್ಭಕ್ಕೆ ಅದೆಷ್ಟೇ ಬಾರಿ ಹಾಜರಾಗಿದ್ದರೂ ಸಭಾಂಗಣದ ಮುಂದಿನ ಸಾಲುಗಳಲ್ಲಿ ಕುಳಿತಿರುವವರು ತಮ್ಮನ್ನು ದೀಕ್ಷಾಸ್ನಾನಕ್ಕಾಗಿ ನೀಡಿಕೊಳ್ಳಲು ಎದ್ದುನಿಲ್ಲುವುದನ್ನು ಪ್ರತಿ ಸಾರಿ ನೋಡುವಾಗ ನೀವು ಭಾವುಕರಾಗುವುದಿಲ್ಲವೊ? ಆ ಕ್ಷಣದಲ್ಲಿ ರೋಮಾಂಚನದ ಅನಿಸಿಕೆಯು ಇಡೀ ಸಭಾಂಗಣವನ್ನು ತುಂಬಿಕೊಳ್ಳುತ್ತದೆ, ತದನಂತರ ಹೃತ್ಪೂರ್ವಕವಾದ ಚಪ್ಪಾಳೆಯ ದನಿ ಕೇಳಿಬರುತ್ತದೆ. ಅಮೂಲ್ಯ ವ್ಯಕ್ತಿಗಳಿರುವ ಇನ್ನೊಂದು ಗುಂಪು ಯೆಹೋವನ ಪಕ್ಷ ವಹಿಸಿರುವುದನ್ನು ನೋಡುವಾಗ ನಿಮ್ಮ ಕಣ್ತುಂಬಿ ಬರಬಹುದು. ಇಂಥ ಸಮಯಗಳಲ್ಲಿ ನಮಗೆಷ್ಟು ಸಂತೋಷವಾಗುತ್ತದೆ!
2 ನಮ್ಮ ಪ್ರದೇಶದಲ್ಲಿ ಒಂದು ವರ್ಷದಲ್ಲಿ ನಾವು ಕೆಲವೇ ಬಾರಿ ದೀಕ್ಷಾಸ್ನಾನ ನಡೆಯುವುದನ್ನು ನೋಡುತ್ತೇವೆ, ಆದರೆ ದೇವದೂತರು ಇದನ್ನು ಹೆಚ್ಚು ಬಾರಿ ನೋಡುವ ಸುಯೋಗವನ್ನು ಹೊಂದಿದ್ದಾರೆ. ಪ್ರತಿ ವಾರ ಸಾವಿರಾರು ಮಂದಿ ಯೆಹೋವನ ಸಂಘಟನೆಯ ದೃಶ್ಯ ಭಾಗಕ್ಕೆ ಸೇರಿಸಲ್ಪಡುವುದನ್ನು ಅವರು ನೋಡುವಾಗ ‘ಸ್ವರ್ಗದಲ್ಲಿ [ಎಷ್ಟು] ಸಂತೋಷ’ ಉಂಟಾಗುತ್ತಿರಬೇಕು ಎಂಬುದನ್ನು ನೀವು ಊಹಿಸಿಕೊಳ್ಳಬಲ್ಲಿರೊ? (ಲೂಕ 15:7, 10) ಈ ಹೆಚ್ಚಳವನ್ನು ನೋಡಿ ದೇವದೂತರು ಪುಳಕಗೊಳ್ಳುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ!—ಹಗ್ಗಾಯ 2:7.
ಪಿಶಾಚನು “ಗರ್ಜಿಸುವ ಸಿಂಹದಂತೆ . . . ತಿರುಗುತ್ತಾನೆ”
3. ಸೈತಾನನು “ಗರ್ಜಿಸುವ ಸಿಂಹದಂತೆ” ಏಕೆ ತಿರುಗುತ್ತಿದ್ದಾನೆ ಮತ್ತು ಅವನು ಏನು ಮಾಡಲು ಬಯಸುತ್ತಾನೆ?
3 ಆದರೆ ತದ್ವಿರುದ್ಧವಾಗಿ, ಈ ದೀಕ್ಷಾಸ್ನಾನಗಳನ್ನು ಉಗ್ರ ಕೋಪದಿಂದ ನೋಡುವ ಆತ್ಮಜೀವಿಗಳೂ ಇದ್ದಾರೆ. ಸಾವಿರಾರು ಮಂದಿ ಈ ಭ್ರಷ್ಟ ಲೋಕಕ್ಕೆ ಬೆನ್ನುಹಾಕುತ್ತಿರುವುದನ್ನು ನೋಡುವಾಗ ಸೈತಾನನು ಮತ್ತು ದೆವ್ವಗಳು ಕೆಂಡಾಮಂಡಲವಾಗುತ್ತವೆ. ಯಾವನೇ ಮಾನವನು ನಿಸ್ವಾರ್ಥ ಪ್ರೀತಿಯಿಂದ ಯೆಹೋವನ ಸೇವೆಮಾಡುವುದಿಲ್ಲ ಮತ್ತು ತೀವ್ರವಾದ ಪರೀಕ್ಷೆಯ ಕೆಳಗೆ ಯಾರೊಬ್ಬನೂ ನಂಬಿಗಸ್ತಿಕೆಯನ್ನು ಕಾಪಾಡಿಕೊಳ್ಳುವುದಿಲ್ಲ ಎಂದು ಸೈತಾನನು ತಾನೇ ಕೊಚ್ಚಿಕೊಂಡಿದ್ದಾನೆ ಎಂಬುದು ನಿಜ. (ಯೋಬ 2:4, 5 ಓದಿ.) ಯಾರಾದರೂ ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವಂತೆ ಪ್ರಚೋದಿಸಲ್ಪಡುವಾಗೆಲ್ಲಾ ಸೈತಾನನು ಪ್ರತಿಪಾದಿಸಿದ್ದು ತಪ್ಪೆಂಬುದು ರುಜುವಾಗುತ್ತದೆ. ಇದು ಪ್ರತಿ ವಾರ ಸೈತಾನನ ಕೆನ್ನೆಗೆ ಸಾವಿರಾರು ಹೊಡೆತಗಳು ಬೀಳುತ್ತವೆಯೊ ಎಂಬಂತಿರುತ್ತದೆ. ಆದುದರಿಂದ ಅವನು “ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ” ತಿರುಗುವುದರಲ್ಲಿ ಆಶ್ಚರ್ಯವೇನಿಲ್ಲ. (1 ಪೇತ್ರ 5:8) ಈ “ಸಿಂಹ” ದೇವರೊಂದಿಗಿನ ನಮ್ಮ ಸಂಬಂಧವನ್ನು ಹಾಳುಮಾಡುವ ಮೂಲಕ ಅಥವಾ ಅದನ್ನು ಕಡಿದುಹಾಕುವ ಮೂಲಕವೂ ನಮ್ಮನ್ನು ಆಧ್ಯಾತ್ಮಿಕವಾಗಿ ನುಂಗಿಹಾಕಲು ತವಕಿಸುತ್ತದೆ.—ಕೀರ್ತನೆ 7:1, 2; 2 ತಿಮೊಥೆಯ 3:12.
ಯಾರಾದರೂ ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದುಕೊಳ್ಳುವಾಗೆಲ್ಲಾ ಸೈತಾನನು ಪ್ರತಿಪಾದಿಸಿದ್ದು ತಪ್ಪೆಂಬುದು ರುಜುವಾಗುತ್ತದೆ
4, 5. (ಎ) ಯೆಹೋವನು ಯಾವ ಎರಡು ವಿಧಗಳಲ್ಲಿ ಸೈತಾನನ ಪ್ರಭಾವವನ್ನು ನಿರ್ಬಂಧಿಸಿದ್ದಾನೆ? (ಬಿ) ಒಬ್ಬ ನಿಜ ಕ್ರೈಸ್ತನು ಯಾವ ವಿಷಯದಲ್ಲಿ ಆಶ್ವಾಸನೆಯಿಂದಿರಬಲ್ಲನು?
4 ನಾವು ಒಬ್ಬ ಕ್ರೂರ ವೈರಿಯನ್ನು ಎದುರಿಸುತ್ತಿರುವುದಾದರೂ ಭಯದಿಂದ ಕುಗ್ಗಿಹೋಗುವ ಆವಶ್ಯಕತೆ ಇಲ್ಲ. ಏಕೆ? ಏಕೆಂದರೆ ಯೆಹೋವನು ಎರಡು ಪ್ರಮುಖ ವಿಧಗಳಲ್ಲಿ ಆ “ಗರ್ಜಿಸುವ ಸಿಂಹದ” ಪ್ರಭಾವವನ್ನು ನಿರ್ಬಂಧಿಸಿದ್ದಾನೆ. ಆ ಎರಡು ವಿಧಗಳು ಯಾವುವು? ಮೊದಲನೆಯದಾಗಿ, ನಿಜ ಕ್ರೈಸ್ತರ “ಒಂದು ಮಹಾ ಸಮೂಹವು” ಬರಲಿರುವ “ಮಹಾ ಸಂಕಟವನ್ನು” ಪಾರಾಗುವುದು ಎಂದು ಯೆಹೋವನು ಮುಂತಿಳಿಸಿದ್ದಾನೆ. (ಪ್ರಕಟನೆ 7:9, 14) ದೇವರು ಕೊಟ್ಟ ಪ್ರವಾದನೆಗಳು ಎಂದಿಗೂ ವಿಫಲವಾಗುವುದಿಲ್ಲ. ಆದುದರಿಂದ ಇಡೀ ಗುಂಪಾಗಿ ದೇವಜನರು ಅವನ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂಬುದನ್ನು ಸೈತಾನನು ಸಹ ತಿಳಿಯಬೇಕು.
5 ಎರಡನೆಯ ನಿರ್ಬಂಧವು ದೇವರ ಪ್ರಾಚೀನ ಕಾಲದ ನಂಬಿಗಸ್ತ ಪುರುಷರಲ್ಲಿ ಒಬ್ಬನು ತಿಳಿಸಿದ ಮೂಲಭೂತ ಸತ್ಯದಿಂದ ಸುವ್ಯಕ್ತವಾಗುತ್ತದೆ. ಪ್ರವಾದಿಯಾದ ಅಜರ್ಯನು ರಾಜ ಆಸನಿಗೆ, “ನೀವು ಯೆಹೋವನನ್ನು ಹೊಂದಿಕೊಂಡಿರುವ ತನಕ ಆತನೂ ನಿಮ್ಮೊಂದಿಗಿರುವನು” ಎಂದು ಹೇಳಿದನು. (2 ಪೂರ್ವಕಾಲವೃತ್ತಾಂತ 15:2; 1 ಕೊರಿಂಥ 10:13 ಓದಿ.) ಗತಕಾಲದಲ್ಲಿ ದೇವರ ಸೇವಕರಲ್ಲಿ ಯಾರು ಆತನಿಗೆ ಸಮೀಪವಾಗಿ ಉಳಿದರೋ ಅವರನ್ನು ನುಂಗಿಹಾಕಲು ಸೈತಾನನಿಂದ ಸಾಧ್ಯವಾಗಲೇ ಇಲ್ಲ ಎಂಬುದನ್ನು ದಾಖಲಿಸಲ್ಪಟ್ಟಿರುವ ಹಲವಾರು ಉದಾಹರಣೆಗಳು ದೃಷ್ಟಾಂತಿಸುತ್ತವೆ. (ಇಬ್ರಿಯ 11:4-40) ಇಂದು, ದೇವರಿಗೆ ಸಮೀಪವಾಗಿ ಉಳಿಯುವ ಒಬ್ಬ ಕ್ರೈಸ್ತನು ಪಿಶಾಚನನ್ನು ಎದುರಿಸಲು ಶಕ್ತನಾಗುತ್ತಾನೆ ಮಾತ್ರವಲ್ಲ ಅವನನ್ನು ಜಯಿಸಲೂ ಶಕ್ತನಾಗುವನು. ವಾಸ್ತವದಲ್ಲಿ, “ಪಿಶಾಚನನ್ನು ಎದುರಿಸಿರಿ, ಆಗ ಅವನು ನಿಮ್ಮಿಂದ ಓಡಿಹೋಗುವನು” ಎಂದು ದೇವರ ವಾಕ್ಯವು ನಮಗೆ ಆಶ್ವಾಸನೆ ಕೊಡುತ್ತದೆ.—ಯಾಕೋಬ 4:7.
‘ನಮಗಿರುವ ಹೋರಾಟವು ದುಷ್ಟಾತ್ಮ ಸೇನೆಗಳ ವಿರುದ್ಧವಾಗಿದೆ’
6. ಕ್ರೈಸ್ತರಲ್ಲಿ ಒಬ್ಬೊಬ್ಬರ ವಿರುದ್ಧವೂ ಸೈತಾನನು ಹೇಗೆ ಹೋರಾಟವನ್ನು ನಡೆಸುತ್ತಾನೆ?
6 ಈ ಸಾಂಕೇತಿಕ ಯುದ್ಧದಲ್ಲಿ ಸೈತಾನನು ಜಯಗಳಿಸಲು ಸಾಧ್ಯವಿಲ್ಲ, ಆದರೆ ನಾವು ಜಾಗ್ರತೆ ವಹಿಸದಿದ್ದಲ್ಲಿ ಅವನು ನಮ್ಮಲ್ಲಿ ಒಬ್ಬೊಬ್ಬರ ಮೇಲೆ ಜಯಗಳಿಸಸಾಧ್ಯವಿದೆ. ಯೆಹೋವನೊಂದಿಗಿನ ನಮ್ಮ ಬಂಧವನ್ನು ದುರ್ಬಲಗೊಳಿಸುವಲ್ಲಿ ಅವನು ನಮ್ಮನ್ನು ನುಂಗಿಹಾಕಸಾಧ್ಯವಿದೆ ಎಂಬುದು ಸೈತಾನನಿಗೆ ತಿಳಿದಿದೆ. ಇದನ್ನು ಸಾಧಿಸಲು ಸೈತಾನನು ಹೇಗೆ ಪ್ರಯತ್ನಿಸುತ್ತಾನೆ? ನಮ್ಮ ಮೇಲೆ ತೀವ್ರವಾಗಿ, ವೈಯಕ್ತಿಕವಾಗಿ ಮತ್ತು ಕುತಂತ್ರದಿಂದ ಆಕ್ರಮಣಮಾಡುವ ಮೂಲಕವೇ. ಸೈತಾನನ ಈ ಮುಖ್ಯ ಸಮರತಂತ್ರಗಳನ್ನು ನಾವು ಈಗ ಪರಿಗಣಿಸೋಣ.
7. ಸೈತಾನನು ಏಕೆ ಯೆಹೋವನ ಜನರ ಮೇಲೆ ತೀವ್ರವಾದ ಆಕ್ರಮಣಮಾಡುತ್ತಿದ್ದಾನೆ?
7 ತೀವ್ರವಾದ ಆಕ್ರಮಣಗಳು. “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ಅಪೊಸ್ತಲ ಯೋಹಾನನು ಹೇಳಿದನು. (1 ಯೋಹಾನ 5:19) ಈ ಮಾತುಗಳಲ್ಲಿ ನಿಜ ಕ್ರೈಸ್ತರೆಲ್ಲರಿಗೆ ಒಂದು ಎಚ್ಚರಿಕೆಯಿದೆ. ಸೈತಾನನು ಈಗಾಗಲೇ ಇಡೀ ಭಕ್ತಿಹೀನ ಮಾನವಕುಲವನ್ನು ನುಂಗಿಹಾಕಿರುವುದರಿಂದ ಇದು ವರೆಗೂ ಅವನಿಂದ ಉಪಾಯವಾಗಿ ತಪ್ಪಿಸಿಕೊಂಡಿರುವ ಯೆಹೋವನ ಜನರ ಮೇಲೆ ಅವನು ಈಗ ತನ್ನ ಗಮನವನ್ನು ಕೇಂದ್ರೀಕರಿಸಬಲ್ಲನು ಮತ್ತು ತನ್ನ ಆಕ್ರಮಣಗಳನ್ನು ತೀವ್ರಗೊಳಿಸಬಲ್ಲನು. (ಮೀಕ 4:1; ಯೋಹಾನ 15:19; ಪ್ರಕಟನೆ 12:12, 17) ತನಗಿರುವ ಕಾಲವು ಸ್ವಲ್ಪವೆಂದು ತಿಳಿದಿರುವುದರಿಂದ ಅವನಿಗೆ ತುಂಬ ಕೋಪ ಬಂದಿದೆ. ಆದುದರಿಂದ ಅವನು ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದ್ದಾನೆ. ಇಂದು ನಾವು ಅವನ ಕ್ರೌರ್ಯ ಮತ್ತು ವಿನಾಶದ ಕೊನೆಯ ಕ್ರೋಧಾವೇಶವನ್ನು ಎದುರಿಸುತ್ತಿದ್ದೇವೆ. ಆದುದರಿಂದ ಹಿಂದೆಂದಿಗಿಂತಲೂ ಈಗ ನಾವು ‘ಸಮಯೋಚಿತಜ್ಞಾನವುಳ್ಳವರಾಗಿ ಮಾಡತಕ್ಕದ್ದನ್ನು ಅರಿತವರಾಗಿರಬೇಕು.’—1 ಪೂರ್ವಕಾಲವೃತ್ತಾಂತ 12:32.
8. ನಮಗೆ ದುಷ್ಟಾತ್ಮಗಳ ವಿರುದ್ಧ “ಹೋರಾಟ” ಮಾಡಲಿಕ್ಕಿದೆ ಎಂದು ಅಪೊಸ್ತಲ ಪೌಲನು ಹೇಳಿದಾಗ ಅವನ ಮಾತುಗಳ ಅರ್ಥವೇನಾಗಿತ್ತು?
8 ವೈಯಕ್ತಿಕ ಹೋರಾಟ. ಅಪೊಸ್ತಲ ಪೌಲನು ಜೊತೆ ಕ್ರೈಸ್ತರಿಗೆ, ‘ನಮಗಿರುವ ಹೋರಾಟವು ಸ್ವರ್ಗೀಯ ಸ್ಥಳಗಳಲ್ಲಿರುವ ದುಷ್ಟಾತ್ಮ ಸೇನೆಗಳ ವಿರುದ್ಧವಾಗಿದೆ’ ಎಂದು ಎಚ್ಚರಿಸಿದನು. (ಎಫೆಸ 6:12) “ಹೋರಾಟ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು ಅಕ್ಷರಾರ್ಥವಾಗಿ “ಕುಸ್ತಿ” ಎಂಬರ್ಥವನ್ನು ಹೊಂದಿದೆ ಮತ್ತು ಇದು ಮುಷ್ಟಿ ಕಾಳಗವನ್ನು ಹಾಗೂ ಹತ್ತಿರದಿಂದ ಮಾಡಲ್ಪಡುವ ಸೆಣಸಾಟವನ್ನು ಸೂಚಿಸುತ್ತದೆ. ಆದುದರಿಂದ ಈ ಪದವನ್ನು ಉಪಯೋಗಿಸುವ ಮೂಲಕ ಪೌಲನು ನಮ್ಮಲ್ಲಿ ಪ್ರತಿಯೊಬ್ಬರು ದುಷ್ಟಾತ್ಮಗಳ ವಿರುದ್ಧ ವೈಯಕ್ತಿಕ ಹೋರಾಟವನ್ನು ಮಾಡಲಿಕ್ಕಿದೆ ಎಂಬುದನ್ನು ಒತ್ತಿಹೇಳಿದನು. ನಾವಿರುವ ದೇಶದಲ್ಲಿ ದುಷ್ಟಾತ್ಮಗಳಲ್ಲಿನ ನಂಬಿಕೆಯು ಪ್ರಬಲವಾಗಿರಲಿ ಇಲ್ಲದಿರಲಿ, ನಾವು ನಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡಾಗ ಕುಸ್ತಿ ಕಣಕ್ಕೆ ಕಾಲಿಟ್ಟಂತಾಯಿತು ಎಂಬುದನ್ನು ಎಂದಿಗೂ ಮರೆಯಬಾರದು. ತನ್ನ ಸಮರ್ಪಣೆಯ ಬಳಿಕವಂತೂ ಪ್ರತಿಯೊಬ್ಬ ಕ್ರೈಸ್ತನು ಈ ಹೋರಾಟವನ್ನು ಮಾಡಲೇಬೇಕು. ಆದುದರಿಂದ ಪೌಲನು ಎಫೆಸದಲ್ಲಿದ್ದ ಕ್ರೈಸ್ತರಿಗೆ ‘ದೃಢವಾಗಿ ನಿಲ್ಲಿರಿ’ ಮತ್ತು ‘ಸ್ಥಿರವಾಗಿ ನಿಲ್ಲಿರಿ’ ಎಂದು ಪುನಃ ಪುನಃ ಪ್ರೋತ್ಸಾಹಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ!—ಎಫೆಸ 6:11, 13, 15.
9. (ಎ) ಸೈತಾನನು ಮತ್ತು ದೆವ್ವಗಳು ಬೇರೆ ಬೇರೆ ರೀತಿಯ ‘ತಂತ್ರೋಪಾಯಗಳನ್ನು’ ಏಕೆ ಉಪಯೋಗಿಸುತ್ತವೆ? (ಬಿ) ಸೈತಾನನು ನಮ್ಮ ಯೋಚನಾಧಾಟಿಯನ್ನು ಕೆಡಿಸಲು ಪ್ರಯತ್ನಿಸುವುದೇಕೆ ಮತ್ತು ಅವನ ಪ್ರಯತ್ನಗಳನ್ನು ನಾವು ಹೇಗೆ ಪ್ರತಿರೋಧಿಸಬಲ್ಲೆವು? (“ಸೈತಾನನ ಕುಯುಕ್ತಿಯ ವಿಷಯದಲ್ಲಿ ಎಚ್ಚರಿಕೆಯಿಂದಿರಿ!” ಎಂಬ ಚೌಕವನ್ನು ನೋಡಿ.) (ಸಿ) ನಾವು ಈಗ ಯಾವ ತಂತ್ರೋಪಾಯದ ಕುರಿತು ಪರಿಗಣಿಸಲಿದ್ದೇವೆ?
9 ಕುಯುಕ್ತಿಯ ಒಳಸಂಚುಗಳು. ಸೈತಾನನ “ತಂತ್ರೋಪಾಯಗಳ” ವಿರುದ್ಧ ದೃಢವಾಗಿ ನಿಲ್ಲುವಂತೆ ಅಪೊಸ್ತಲ ಪೌಲನು ಕ್ರೈಸ್ತರನ್ನು ಪ್ರೋತ್ಸಾಹಿಸುತ್ತಾನೆ. (ಎಫೆಸ 6:11) ಇಲ್ಲಿ ಪೌಲನು ಬಹುವಚನವನ್ನು ಉಪಯೋಗಿಸಿರುವುದನ್ನು ಗಮನಿಸಿರಿ. ದುಷ್ಟಾತ್ಮಗಳು ಒಂದಲ್ಲ ಬದಲಾಗಿ ಹಲವಾರು ವಿಧದ ಕುಯುಕ್ತಿಯ ವಿಧಾನಗಳನ್ನು ಉಪಯೋಗಿಸುತ್ತವೆ ಮತ್ತು ಸಕಾರಣದಿಂದಲೇ ಹೀಗೆ ಮಾಡುತ್ತವೆ. ಒಂದು ವಿಧದ ಪರೀಕ್ಷೆಯ ಕೆಳಗೆ ದೃಢವಾಗಿ ನಿಂತ ಕೆಲವು ವಿಶ್ವಾಸಿಗಳು ಕಾಲಕ್ರಮೇಣ ಮ್ತತೊಂದು ವಿಧದ ಪರೀಕ್ಷೆಗೆ ಬಲಿಯಾಗಿದ್ದಾರೆ. ಆದುದರಿಂದ ಪಿಶಾಚನು ಮತ್ತು ದೆವ್ವಗಳು ನಮ್ಮ ಅತಿ ದುರ್ಬಲ ಅಂಶವನ್ನು ಕಂಡುಹಿಡಿಯಲಿಕ್ಕೋಸ್ಕರ ನಮ್ಮಲ್ಲಿ ಪ್ರತಿಯೊಬ್ಬರ ನಡವಳಿಕೆಯನ್ನು ನಿಕಟವಾಗಿ ಗಮನಿಸುತ್ತಾ ಇರುತ್ತವೆ. ಆ ಬಳಿಕ ನಮ್ಮಲ್ಲಿರಬಹುದಾದ ಯಾವುದೇ ಆಧ್ಯಾತ್ಮಿಕ ದೌರ್ಬಲ್ಯವನ್ನು ದುರುಪಯೋಗಿಸಿಕೊಳ್ಳುತ್ತವೆ. ಆದರೂ ಪಿಶಾಚನ ಕಾರ್ಯವಿಧಾನಗಳಲ್ಲಿ ಹೆಚ್ಚಿನವುಗಳು ಬೈಬಲಿನಲ್ಲಿ ಬಯಲುಪಡಿಸಲ್ಪಟ್ಟಿರುವುದರಿಂದ ನಾವು ಅವುಗಳನ್ನು ಗ್ರಹಿಸಬಲ್ಲೆವು ಎಂಬುದು ಸಂತೋಷಕರ ಸಂಗತಿಯಾಗಿದೆ. (2 ಕೊರಿಂಥ 2:11) ಈ ಪ್ರಕಾಶನದ ಆರಂಭದ ಅಧ್ಯಾಯಗಳಲ್ಲಿ ನಾವು ಪ್ರಾಪಂಚಿಕತೆಯ ಸೆಳೆತ, ಹಾನಿಕರ ಸಹವಾಸ ಮತ್ತು ಲೈಂಗಿಕ ಅನೈತಿಕತೆಯಂಥ ಒಳಸಂಚುಗಳ ಕುರಿತು ಚರ್ಚಿಸಿದೆವು. ಈಗ ನಾವು ಸೈತಾನನ ಮತ್ತೊಂದು ತಂತ್ರೋಪಾಯವಾಗಿರುವ ಪ್ರೇತವ್ಯವಹಾರವನ್ನು ಪರಿಗಣಿಸೋಣ.
ಪ್ರೇತವ್ಯವಹಾರದಲ್ಲಿ ಒಳಗೂಡುವುದು ನಂಬಿಕೆದ್ರೋಹದ ಒಂದು ಕೃತ್ಯ
10. (ಎ) ಪ್ರೇತವ್ಯವಹಾರ ಏನಾಗಿದೆ? (ಬಿ) ಯೆಹೋವನು ಪ್ರೇತವ್ಯವಹಾರವನ್ನು ಹೇಗೆ ವೀಕ್ಷಿಸುತ್ತಾನೆ ಮತ್ತು ನೀವು ಅದನ್ನು ಹೇಗೆ ವೀಕ್ಷಿಸುತ್ತೀರಿ?
10 ಪ್ರೇತವ್ಯವಹಾರದಲ್ಲಿ ಅಥವಾ ಭೂತಶ್ರದ್ಧೆಯಲ್ಲಿ ಒಳಗೂಡುವ ಮೂಲಕ ಒಬ್ಬನು ದುಷ್ಟಾತ್ಮಗಳೊಂದಿಗೆ ನೇರವಾದ ಸಂಪರ್ಕವನ್ನು ಮಾಡುತ್ತಾನೆ. ಕಣಿಹೇಳುವುದು, ಮಾಟ, ಯಂತ್ರಮಂತ್ರಗಳನ್ನು ಮಾಡುವುದು ಮತ್ತು ಸತ್ತವರನ್ನು ವಿಚಾರಿಸುವುದು ಮುಂತಾದವುಗಳು ಪ್ರೇತವ್ಯವಹಾರದ ಕೆಲವು ರೂಪಗಳಾಗಿವೆ. ಯೆಹೋವನು ಪ್ರೇತವ್ಯವಹಾರವನ್ನು ‘ಅಸಹ್ಯವಾಗಿ’ ವೀಕ್ಷಿಸುತ್ತಾನೆ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. (ಧರ್ಮೋಪದೇಶಕಾಂಡ 18:10-12; ಪ್ರಕಟನೆ 21:8) ನಾವು ಕೂಡ ‘ಕೆಟ್ಟದ್ದನ್ನು ಹೇಸಬೇಕಾಗಿರುವುದರಿಂದ’ ನಾವು ಎಂದಾದರೂ ದುಷ್ಟಾತ್ಮ ಸೇನೆಗಳ ಸಹವಾಸವನ್ನು ಕೋರುವುದರ ಬಗ್ಗೆ ಯೋಚಿಸಿನೋಡಲೂ ಸಾಧ್ಯವಿಲ್ಲ. (ರೋಮನ್ನರಿಗೆ 12:9) ಇದು ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನ ವಿರುದ್ಧ ಮಾಡುವ ನಂಬಿಕೆದ್ರೋಹದ ಎಂಥ ಅಸಹ್ಯಕರ ಕೃತ್ಯವಾಗಿರುವುದು!
11. ನಾವು ಪ್ರೇತವ್ಯವಹಾರದಲ್ಲಿ ಒಳಗೂಡುವಂತೆ ಸೈತಾನನು ಪ್ರೇರೇಪಿಸಶಕ್ತನಾಗುವಲ್ಲಿ ಅದು ಅವನಿಗೆ ಹೇಗೆ ಮಹಾ ವಿಜಯವಾಗಿರುವುದು? ದೃಷ್ಟಾಂತಿಸಿ.
11 ಆದರೂ ಪ್ರೇತವ್ಯವಹಾರದಲ್ಲಿ ಒಳಗೂಡುವುದು ಯೆಹೋವನ ವಿರುದ್ಧ ಮಾಡಲ್ಪಡುವ ಮಹಾ ದ್ರೋಹವಾಗಿರುವುದರಿಂದಲೇ ಸೈತಾನನು ನಮ್ಮಲ್ಲಿ ಕೆಲವರನ್ನು ಅದರಲ್ಲಿ ಒಳಗೂಡಿಸಲು ದೃಢನಿಶ್ಚಯವುಳ್ಳವನಾಗಿದ್ದಾನೆ. ಅವನು ಭೂತಶ್ರದ್ಧೆಯಲ್ಲಿ ಒಳಗೂಡುವಂತೆ ಒಬ್ಬ ಕ್ರೈಸ್ತನನ್ನು ಪ್ರೇರೇಪಿಸಸಾಧ್ಯವಾದಾಗೆಲ್ಲಾ ಮಹಾ ವಿಜಯವನ್ನು ಸಾಧಿಸುತ್ತಾನೆ. ಏಕೆ? ಈ ಹೋಲಿಕೆಯನ್ನು ಗಮನಿಸಿ: ಒಬ್ಬ ಸೈನಿಕನು ತನ್ನ ಸೈನ್ಯವನ್ನು ತೊರೆದು ಅದಕ್ಕೆ ನಂಬಿಕೆದ್ರೋಹಮಾಡುವ ಮೂಲಕ ವೈರಿ ಸೈನ್ಯವನ್ನು ಸೇರಿಕೊಳ್ಳುವಂತೆ ಒಡಂಬಡಿಸಲ್ಪಡುವಲ್ಲಿ ವೈರಿ ಸೈನ್ಯದ ಸೇನಾಧಿಪತಿಯು ತುಂಬ ಸಂತೋಷಪಡುವನು. ಅವನು ಈ ಸೈನಿಕನ ಹಿಂದಿನ ಸೇನಾಧಿಪತಿಯನ್ನು ಅವಮಾನಿಸುವ ಸಲುವಾಗಿ ಈ ವಿಶ್ವಾಸಘಾತುಕನನ್ನು ವಿಜಯದ ಒಂದು ಪ್ರತೀಕದಂತೆ ಮೆರವಣಿಗೆ ಕೂಡ ಮಾಡಿಸಬಹುದು. ತದ್ರೀತಿಯಲ್ಲಿ ಒಬ್ಬ ಕ್ರೈಸ್ತನು ಪ್ರೇತವ್ಯವಹಾರದಲ್ಲಿ ತೊಡಗುವುದಾದರೆ ಅವನು ಇಷ್ಟಪೂರ್ವಕವಾಗಿ ಮತ್ತು ಉದ್ದೇಶಪೂರ್ವಕವಾಗಿ ಯೆಹೋವನನ್ನು ತೊರೆದು ನೇರವಾಗಿ ತನ್ನನ್ನು ಸೈತಾನನ ಅಧಿಕಾರದ ಕೆಳಗೆ ಅಧೀನಪಡಿಸಿಕೊಳ್ಳುವನು. ಯೆಹೋವನನ್ನು ತೊರೆದ ಈ ವ್ಯಕ್ತಿಯನ್ನು ತನ್ನ ವಿಜಯದ ಒಂದು ಪ್ರತೀಕದಂತೆ ಮೆರವಣಿಗೆ ಮಾಡಿಸುವುದು ಸೈತಾನನಿಗೆ ಎಷ್ಟು ಸಂತೋಷವನ್ನು ಕೊಡಬಹುದು ಎಂಬುದನ್ನು ಊಹಿಸಿನೋಡಿ! ನಮ್ಮಲ್ಲಿ ಯಾರಾದರೂ ಪಿಶಾಚನಿಗೆ ಇಂಥ ವಿಜಯವನ್ನು ಕೊಡಲು ಬಯಸುವೆವೊ? ಖಂಡಿತವಾಗಿಯೂ ಇಲ್ಲ! ನಾವು ವಿಶ್ವಾಸಘಾತುಕರಲ್ಲ.
ಸಂಶಯವನ್ನು ಉಂಟುಮಾಡಲು ಪ್ರಶ್ನೆಗಳನ್ನು ಎಬ್ಬಿಸುವುದು
12. ಪ್ರೇತವ್ಯವಹಾರದ ಕುರಿತಾದ ನಮ್ಮ ನೋಟವನ್ನು ಪ್ರಭಾವಿಸಲು ಸೈತಾನನು ಯಾವ ವಿಧಾನವನ್ನು ಉಪಯೋಗಿಸುತ್ತಾನೆ?
12 ನಾವು ಎಷ್ಟರ ತನಕ ಪ್ರೇತವ್ಯವಹಾರವನ್ನು ಹೇಸುತ್ತೇವೋ ಅಷ್ಟರ ತನಕ ಸೈತಾನನು ಅದನ್ನು ಉಪಯೋಗಿಸಿ ನಮ್ಮ ವಿರುದ್ಧ ಜಯವನ್ನು ಸಾಧಿಸಲಾರನು. ಆದುದರಿಂದ ನಮ್ಮ ಆಲೋಚನಾಧಾಟಿಯನ್ನು ಬದಲಾಯಿಸಬೇಕು ಎಂಬುದನ್ನು ಅವನು ಗ್ರಹಿಸುತ್ತಾನೆ. ಹೇಗೆ? ಕ್ರೈಸ್ತರಲ್ಲಿ ಕೆಲವರು “ಕೆಟ್ಟದ್ದನ್ನು ಒಳ್ಳೇದೆಂದೂ ಒಳ್ಳೇದನ್ನು ಕೆಟ್ಟದ್ದೆಂದೂ” ನೆನಸುವಷ್ಟರ ಮಟ್ಟಿಗೆ ಅವನು ಅವರನ್ನು ಗಲಿಬಿಲಿಗೊಳಿಸುವ ವಿಧಗಳಿಗಾಗಿ ಹುಡುಕುತ್ತಾನೆ. (ಯೆಶಾಯ 5:20) ಇದನ್ನು ಸಾಧಿಸಲು ಸೈತಾನನು ಅನೇಕವೇಳೆ ಅವನ ಸಮಯಶೋಧಿತ ವಿಧಾನಗಳಲ್ಲಿ ಒಂದನ್ನು ಉಪಯೋಗಿಸುತ್ತಾನೆ. ಅದೇನೆಂದರೆ ಸಂಶಯವನ್ನು ಉಂಟುಮಾಡಲು ಅವನು ಪ್ರಶ್ನೆಗಳನ್ನು ಎಬ್ಬಿಸುತ್ತಾನೆ.
13. ಸೈತಾನನು ಸಂಶಯವನ್ನು ಉಂಟುಮಾಡಲು ಪ್ರಶ್ನೆಗಳನ್ನು ಎಬ್ಬಿಸುವ ವಿಧಾನವನ್ನು ಹೇಗೆ ಉಪಯೋಗಿಸಿದ್ದಾನೆ?
13 ಸೈತಾನನು ಈ ವಿಧಾನವನ್ನು ಹಿಂದೆ ಹೇಗೆ ಉಪಯೋಗಿಸಿದನು ಎಂಬುದನ್ನು ಗಮನಿಸಿ. ಏದೆನಿನಲ್ಲಿ ಅವನು ಹವ್ವಳಿಗೆ, “ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ”? ಎಂದು ಕೇಳಿದನು. ಯೋಬನ ಸಮಯದಲ್ಲಿ ಸ್ವರ್ಗದಲ್ಲಿ ದೇವದೂತರು ಒಮ್ಮೆ ಕೂಡಿಬಂದಿರುವಾಗ ಸೈತಾನನು, “ಯೋಬನು ದೇವರಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ?” ಎಂಬ ಪ್ರಶ್ನೆಯನ್ನು ಎಬ್ಬಿಸಿದನು. ಮತ್ತು ಯೇಸುವಿನ ಭೂಶುಶ್ರೂಷೆಯ ಆರಂಭದಲ್ಲಿ ಸೈತಾನನು, “ನೀನು ದೇವರ ಮಗನಾಗಿರುವಲ್ಲಿ ಈ ಕಲ್ಲುಗಳಿಗೆ ರೊಟ್ಟಿಗಳಾಗುವಂತೆ ಹೇಳು” ಎಂದು ಹೇಳುವ ಮೂಲಕ ಕ್ರಿಸ್ತನಿಗೆ ಸವಾಲೊಡ್ಡಿದನು. ಯೇಸುವಿನ ವಿಷಯದಲ್ಲಿ, ಸುಮಾರು ಆರು ವಾರಗಳ ಹಿಂದೆ “ಇವನು ಪ್ರಿಯನಾಗಿರುವ ನನ್ನ ಮಗನು; ಇವನನ್ನು ನಾನು ಮೆಚ್ಚಿದ್ದೇನೆ” ಎಂದು ಸ್ವತಃ ಯೆಹೋವನು ಹೇಳಿದ ಮಾತುಗಳನ್ನೇ ಸೈತಾನನು ಗೇಲಿಮಾಡುವ ಧೈರ್ಯಮಾಡಿದನು ಎಂಬುದನ್ನು ಆಲೋಚಿಸಿ ನೋಡಿ!—ಆದಿಕಾಂಡ 3:1; ಯೋಬ 1:9; ಮತ್ತಾಯ 3:17; 4:3.
14. (ಎ) ಪ್ರೇತವ್ಯವಹಾರದ ಬಗ್ಗೆ ಸಂಶಯವನ್ನು ಉಂಟುಮಾಡುವ ತನ್ನ ಒಳಸಂಚನ್ನು ಸೈತಾನನು ಹೇಗೆ ಉಪಯೋಗಿಸುತ್ತಾನೆ? (ಬಿ) ನಾವು ಈಗ ಏನನ್ನು ಪರಿಗಣಿಸುವೆವು?
14 ಇಂದು ಪ್ರೇತವ್ಯವಹಾರದ ಕೆಡುಕಿನ ಬಗ್ಗೆ ಸಂಶಯವನ್ನು ಉಂಟುಮಾಡುವ ಪ್ರಯತ್ನದಲ್ಲಿ ಪಿಶಾಚನು ತದ್ರೀತಿಯ ಒಳಸಂಚನ್ನು ಉಪಯೋಗಿಸುತ್ತಾನೆ. ದುಃಖಕರವಾಗಿಯೇ ಕೆಲವು ವಿಶ್ವಾಸಿಗಳ ಮನಸ್ಸಿನಲ್ಲಿ ಸಂಶಯವನ್ನು ಉಂಟುಮಾಡುವುದರಲ್ಲಿ ಅವನು ಯಶಸ್ಸನ್ನು ಪಡೆದಿದ್ದಾನೆ. ಪ್ರೇತವ್ಯವಹಾರದ ಕೆಲವು ರೂಪಗಳು ನಿಜವಾಗಿಯೂ ಅಷ್ಟು ಕೆಟ್ಟವುಗಳಾಗಿವೆಯೋ ಎಂದು ಅವರು ಪ್ರಶ್ನಿಸಲು ಆರಂಭಿಸಿದ್ದಾರೆ. (2 ಕೊರಿಂಥ 11:3) ಇಂಥವರು ತಮ್ಮ ಆಲೋಚನಾಧಾಟಿಯನ್ನು ಬದಲಾಯಿಸಿಕೊಳ್ಳಲು ನಾವು ಹೇಗೆ ಸಹಾಯಮಾಡಬಲ್ಲೆವು? ಸೈತಾನನ ಒಳಸಂಚು ನಮ್ಮನ್ನು ಪ್ರಭಾವಿಸದಿರುವಂತೆ ನಾವು ಹೇಗೆ ನೋಡಿಕೊಳ್ಳಬಲ್ಲೆವು? ಇದಕ್ಕೆ ಉತ್ತರವನ್ನು ಕಂಡುಕೊಳ್ಳಲು, ಸೈತಾನನು ಪ್ರೇತವ್ಯವಹಾರಕ್ಕೆ ಸಂಬಂಧಪಟ್ಟ ವಿಷಯಗಳಿಂದ ಉಪಾಯವಾಗಿ ಮಲಿನಗೊಳಿಸಿರುವ ಜೀವನದ ಎರಡು ಕ್ಷೇತ್ರಗಳನ್ನು ನಾವು ಈಗ ಪರಿಗಣಿಸೋಣ. ಅವು ಮನೋರಂಜನೆ ಮತ್ತು ಆರೋಗ್ಯಾರೈಕೆಯೇ ಆಗಿವೆ.
ನಮ್ಮ ಬಯಕೆಗಳು ಮತ್ತು ಅಗತ್ಯಗಳನ್ನು ದುರುಪಯೋಗಿಸುವುದು
15. (ಎ) ಪಾಶ್ಚಾತ್ಯ ಜಗತ್ತಿನಲ್ಲಿ ಅನೇಕರಿಗೆ ಪ್ರೇತವ್ಯವಹಾರದ ವಿಷಯದಲ್ಲಿ ಯಾವ ದೃಷ್ಟಿಕೋನವಿದೆ? (ಬಿ) ಕೆಲವು ಕ್ರೈಸ್ತರು ಪ್ರೇತವ್ಯವಹಾರದ ಕುರಿತಾದ ಲೋಕದ ದೃಷ್ಟಿಕೋನದಿಂದ ಹೇಗೆ ಪ್ರಭಾವಿತರಾಗಿದ್ದಾರೆ?
15 ವಿಶೇಷವಾಗಿ ಪಾಶ್ಚಾತ್ಯ ಜಗತ್ತಿನಲ್ಲಿ ಇಂದ್ರಜಾಲ, ಮಾಟ ಹಾಗೂ ಪ್ರೇತವ್ಯವಹಾರದ ಇತರ ರೂಪಗಳು ಹೆಚ್ಚೆಚ್ಚು ಹಗುರವಾಗಿ ಪರಿಗಣಿಸಲ್ಪಡುತ್ತಿವೆ. ಚಲನಚಿತ್ರಗಳು, ಪುಸ್ತಕಗಳು, ಟಿವಿ ಕಾರ್ಯಕ್ರಮಗಳು ಮತ್ತು ಕಂಪ್ಯೂಟರ್ ಆಟಗಳು ಹೆಚ್ಚೆಚ್ಚಾಗಿ ಪೈಶಾಚಿಕ ರೂಢಿಗಳನ್ನು ತಮಾಷೆಯಾಗಿ, ಜಾಣತನವಾಗಿ ಹಾಗೂ ಹಾನಿರಹಿತವಾಗಿ ಚಿತ್ರಿಸುತ್ತವೆ. ಮಾಂತ್ರಿಕತೆಯ ಮೇಲೆ ಕೇಂದ್ರೀಕರಿಸುವಂಥ ಕಥಾವಸ್ತುಗಳಿರುವ ಕೆಲವು ಚಲನಚಿತ್ರಗಳು ಮತ್ತು ಪುಸ್ತಕಗಳು ಎಷ್ಟು ವ್ಯಾಪಕವಾಗಿ ಜನಪ್ರಿಯವಾಗಿವೆಯೆಂದರೆ, ಅವುಗಳಲ್ಲಿ ಕಟ್ಟಾಭಿಮಾನವುಳ್ಳವರು ಅಭಿಮಾನಿಗಳ ಸಂಘಗಳನ್ನೇ ಏರ್ಪಡಿಸಿದ್ದಾರೆ. ಮಾಂತ್ರಿಕತೆಯ ಅಪಾಯಗಳನ್ನು ಕ್ಷುಲ್ಲಕವಾಗಿ ಪರಿಗಣಿಸುವಂತೆ ಮಾಡುವುದರಲ್ಲಿ ದೆವ್ವಗಳು ಯಶಸ್ಸನ್ನು ಪಡೆದಿವೆ ಎಂಬುದಂತೂ ಸ್ಪಷ್ಟ. ಪ್ರೇತವ್ಯವಹಾರವನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿಯು ಕ್ರೈಸ್ತರ ಮೇಲೂ ಪ್ರಭಾವ ಬೀರಿದೆಯೊ? ಕೆಲವರ ಆಲೋಚನೆಯ ಮೇಲೆ ಇದು ಪ್ರಭಾವ ಬೀರಿದೆ. ಯಾವ ರೀತಿಯಲ್ಲಿ? ಒಂದು ಉದಾಹರಣೆಯನ್ನು ಕೊಡುವುದಾದರೆ, ಮಾಂತ್ರಿಕತೆಯ ಮೇಲೆ ಕೇಂದ್ರೀಕರಿಸಿದ್ದಂಥ ಒಂದು ಚಲನಚಿತ್ರವನ್ನು ನೋಡಿದ ಬಳಿಕ ಒಬ್ಬ ಕ್ರೈಸ್ತನು, “ನಾನು ಚಲನಚಿತ್ರವನ್ನು ನೋಡಿದೆ, ಆದರೆ ಪ್ರೇತವ್ಯವಹಾರದ ಕೃತ್ಯಗಳಲ್ಲಿ ಒಳಗೂಡಲಿಲ್ಲ” ಎಂದು ಹೇಳಿದನು. ಇಂಥ ಸಮರ್ಥನೆಯು ಏಕೆ ಅಪಾಯಕರವಾಗಿದೆ?
16. ಮಾಂತ್ರಿಕತೆಯ ರೂಢಿಗಳ ಮೇಲೆ ಕೇಂದ್ರೀಕರಿಸುವಂಥ ಮನೋರಂಜನೆಯನ್ನು ಆರಿಸಿಕೊಳ್ಳುವುದು ಅಪಾಯಕರವಾಗಿದೆ ಏಕೆ?
16 ಪ್ರೇತವ್ಯವಹಾರದಲ್ಲಿ ನಿಜವಾಗಿಯೂ ಒಳಗೂಡುವುದು ಮತ್ತು ಕೇವಲ ಅದನ್ನು ನೋಡುವುದರಲ್ಲಿ ಭಿನ್ನತೆಯಿರುವುದಾದರೂ ಮಾಂತ್ರಿಕತೆಯನ್ನು ವೀಕ್ಷಿಸುವುದು ಯಾವುದೇ ರೀತಿಯ ಅಪಾಯವನ್ನು ಒಡ್ಡುವುದಿಲ್ಲ ಎಂಬರ್ಥವನ್ನು ಅದು ಕೊಡುವುದಿಲ್ಲ ಎಂಬುದಂತೂ ನಿಶ್ಚಯ. ಏಕೆ? ಇದನ್ನು ಪರಿಗಣಿಸಿ: ಸೈತಾನನಿಗೆ ಅಥವಾ ಅವನ ದೆವ್ವಗಳಿಗೆ ನಮ್ಮ ಆಲೋಚನೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿಲ್ಲ ಎಂದು ದೇವರ ವಾಕ್ಯವು ಸೂಚಿಸುತ್ತದೆ.a ಆದುದರಿಂದ ಈ ಮುಂಚೆಯೇ ತಿಳಿಸಿರುವಂತೆ, ನಾವೇನು ಆಲೋಚಿಸುತ್ತಿದ್ದೇವೆ ಎಂಬುದನ್ನು ಕಂಡುಕೊಳ್ಳಲಿಕ್ಕಾಗಿ ಮತ್ತು ನಮ್ಮಲ್ಲಿರುವ ಯಾವುದೇ ಆಧ್ಯಾತ್ಮಿಕ ದೌರ್ಬಲ್ಯವನ್ನು ಗುರುತಿಸಲಿಕ್ಕಾಗಿ ದುಷ್ಟಾತ್ಮಗಳು ನಮ್ಮ ಕೃತ್ಯಗಳನ್ನು ನಿಕಟವಾಗಿ ಗಮನಿಸಬೇಕಾಗಿರುತ್ತದೆ—ಇದರಲ್ಲಿ ಮನೋರಂಜನೆಯ ವಿಷಯದಲ್ಲಿ ನಾವು ಮಾಡುವ ಆಯ್ಕೆಯೂ ಒಳಗೂಡಿದೆ. ಪ್ರೇತ ಮಾಧ್ಯಮಗಳು, ಮಂತ್ರತಂತ್ರ, ದೆವ್ವಹಿಡಿದವರ ಕೃತ್ಯಗಳು ಅಥವಾ ತದ್ರೀತಿಯ ಪೈಶಾಚಿಕ ವಿಷಯಗಳ ಮೇಲೆ ಕೇಂದ್ರೀಕರಿಸಿರುವಂಥ ಚಲನಚಿತ್ರಗಳು ಮತ್ತು ಪುಸ್ತಕಗಳಲ್ಲಿ ಕ್ರೈಸ್ತನೊಬ್ಬನು ಆನಂದಿಸುತ್ತಾನೆ ಎಂಬುದನ್ನು ಅವನ ವರ್ತನೆಯು ತೋರಿಸುವಾಗ, ಅವನು ದೆವ್ವಗಳಿಗೆ ಒಂದು ಸಂದೇಶವನ್ನು ಕಳುಹಿಸುತ್ತಾನೆ. ವಾಸ್ತವದಲ್ಲಿ ಅವನು ತನ್ನ ದೌರ್ಬಲ್ಯದ ವಿಷಯದಲ್ಲಿ ಅವರಿಗೆ ಸೂಚನೆಯನ್ನು ಕೊಡುತ್ತಾನೆ! ಇದಕ್ಕೆ ಪ್ರತಿಕ್ರಿಯಿಸುತ್ತಾ, ಹೋರಾಟದಲ್ಲಿ ತಾವು ಜಯವನ್ನು ಪಡೆಯುವ ತನಕ, ಕ್ರೈಸ್ತನೊಬ್ಬನು ಬಯಲುಪಡಿಸಿರುವಂಥ ದೌರ್ಬಲ್ಯವನ್ನು ಪೂರ್ಣವಾಗಿ ದುರುಪಯೋಗಿಸಲಿಕ್ಕಾಗಿ ದೆವ್ವಗಳು ಅವನೊಂದಿಗಿನ ತಮ್ಮ ಹೋರಾಟವನ್ನು ತೀವ್ರಗೊಳಿಸಸಾಧ್ಯವಿದೆ. ವಾಸ್ತವದಲ್ಲಿ, ಮುಖ್ಯವಾಗಿ ಮಾಂತ್ರಿಕತೆಗೆ ಒತ್ತುನೀಡುವಂಥ ಮನೋರಂಜನೆಯಿಂದಾಗಿ ಯಾರಿಗೆ ಮೊದಲು ಪ್ರೇತವ್ಯವಹಾರದಲ್ಲಿ ಆಸಕ್ತಿ ಕೆರಳಿತೋ ಅವರು ಕಾಲಕ್ರಮೇಣ ಪ್ರೇತವ್ಯವಹಾರದಲ್ಲಿ ನಿಜವಾಗಿಯೂ ಒಳಗೂಡಿದವರಾಗಿ ಪರಿಣಮಿಸಿದ್ದಾರೆ.—ಗಲಾತ್ಯ 6:7 ಓದಿ.
17. ಅಸ್ವಸ್ಥರಾಗಿರುವವರನ್ನು ಸೈತಾನನು ಯಾವ ತಂತ್ರೋಪಾಯದ ಮೂಲಕ ಶೋಷಿಸಬಹುದು?
17 ಸೈತಾನನು ಮನೋರಂಜನೆಗಾಗಿರುವ ನಮ್ಮ ಬಯಕೆಯನ್ನು ಮಾತ್ರವಲ್ಲ ನಮ್ಮ ಆರೋಗ್ಯಾರೈಕೆಯ ಅಗತ್ಯವನ್ನೂ ದುರುಪಯೋಗಿಸುತ್ತಾನೆ. ಹೇಗೆ? ಕ್ಷೀಣಿಸುತ್ತಿರುವ ಆರೋಗ್ಯವನ್ನು ಗುಣಪಡಿಸಲು ಹಲವಾರು ಪ್ರಯತ್ನಗಳನ್ನು ಮಾಡಿಯೂ ವಿಫಲನಾಗಿರುವಂಥ ಒಬ್ಬ ಕ್ರೈಸ್ತನು ಹತಾಶನಾಗಬಹುದು. (ಮಾರ್ಕ 5:25, 26) ಇದು ಅವನನ್ನು ಶೋಷಿಸಲು ಸೈತಾನನಿಗೆ ಮತ್ತು ದೆವ್ವಗಳಿಗೆ ಒಂದು ಅನುಕೂಲಕರ ಅವಕಾಶವನ್ನು ಕೊಡಬಹುದು. ಅಸ್ವಸ್ಥನಾಗಿರುವ ಒಬ್ಬ ವ್ಯಕ್ತಿಯು ಹತಾಶೆಯಿಂದ “ಅಲೌಕಿಕ ಶಕ್ತಿ” ಅಥವಾ ಪ್ರೇತವ್ಯವಹಾರದ ಉಪಯೋಗವು ಒಳಗೂಡಿರುವ ಚಿಕಿತ್ಸೆಗಳನ್ನು ಅಥವಾ ಕಾರ್ಯವಿಧಾನಗಳನ್ನು ಆಶ್ರಯಿಸುವಂತೆ ದೆವ್ವಗಳು ಅವನನ್ನು ಪ್ರಲೋಭಿಸಬಹುದು. (ಯೆಶಾಯ 1:13, NW) ದೆವ್ವಗಳ ಈ ತಂತ್ರೋಪಾಯವು ಸಫಲವಾಗುವಲ್ಲಿ, ಇದು ಅಸ್ವಸ್ಥನಿಗೆ ದೇವರೊಂದಿಗಿರುವ ಸಂಬಂಧವನ್ನು ದುರ್ಬಲಗೊಳಿಸಸಾಧ್ಯವಿದೆ. ಯಾವ ವಿಧದಲ್ಲಿ?
18. ಯಾವ ರೀತಿಯ ಚಿಕಿತ್ಸಾ ವಿಧಾನಗಳನ್ನು ಒಬ್ಬ ಕ್ರೈಸ್ತನು ನಿರಾಕರಿಸುವನು ಮತ್ತು ಏಕೆ?
18 ‘ಅಲೌಕಿಕ ಶಕ್ತಿಯನ್ನು’ ಆಶ್ರಯಿಸಿದ್ದ ಇಸ್ರಾಯೇಲ್ಯರನ್ನು ಎಚ್ಚರಿಸುತ್ತಾ ಯೆಹೋವನು, “ನೀವು [ನನ್ನ ಕಡೆಗೆ] ಕೈಯೆತ್ತುವಾಗ ನಿಮ್ಮನ್ನು ನೋಡದಂತೆ ನನ್ನ ಕಣ್ಣುಗಳನ್ನು ಮರೆಮಾಡಿಕೊಳ್ಳುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿದರೂ ನಾನು ಕೇಳೆನು” ಎಂದು ಹೇಳಿದನು. (ಯೆಶಾಯ 1:15) ನಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಾಗಬಹುದಾದ ಮತ್ತು ಯೆಹೋವನಿಂದ ನಾವು ಪಡೆದುಕೊಳ್ಳುವ ಬೆಂಬಲವನ್ನು ಕಡಿಮೆಗೊಳಿಸಬಹುದಾದ ಯಾವುದೇ ವಿಷಯದಿಂದ ನಾವು ಯಾವಾಗಲೂ ದೂರವಿರಲು ಬಯಸುತ್ತೇವೆ ಎಂಬುದು ಖಂಡಿತ. ಮುಖ್ಯವಾಗಿ ಅಸ್ವಸ್ಥರಾಗಿರುವ ಸಮಯದಲ್ಲಿ ನಾವು ಈ ವಿಷಯಕ್ಕೆ ಹೆಚ್ಚಿನ ಗಮನವನ್ನು ಕೊಡುತ್ತೇವೆ. (ಕೀರ್ತನೆ 41:3) ಆದುದರಿಂದ ರೋಗನಿರ್ಣಯಕ್ಕಾಗಿರುವ ಒಂದು ನಿರ್ದಿಷ್ಟ ಕಾರ್ಯವಿಧಾನ ಅಥವಾ ಒಂದು ನಿರ್ದಿಷ್ಟ ಔಷಧೋಪಚಾರದಲ್ಲಿ ಪ್ರೇತವ್ಯವಹಾರಕ್ಕೆ ಸಂಬಂಧಪಟ್ಟ ಅಂಶಗಳು ಒಳಗೂಡಿರಬಹುದು ಎಂಬ ಸೂಚನೆಗಳು ಕಂಡುಬರುವಲ್ಲಿ ಒಬ್ಬ ನಿಜ ಕ್ರೈಸ್ತನು ಅದನ್ನು ನಿರಾಕರಿಸಬೇಕು.b (ಮತ್ತಾಯ 6:13) ಈ ರೀತಿಯಲ್ಲಿ ಅವನು ಯೆಹೋವನ ಬೆಂಬಲವನ್ನು ಉಳಿಸಿಕೊಳ್ಳುವ ಖಾತ್ರಿಯಿಂದಿರಬಲ್ಲನು.—“ಇದು ನಿಜವಾಗಿಯೂ ಪ್ರೇತವ್ಯವಹಾರವಾಗಿದೆಯೊ?” ಎಂಬ ಚೌಕವನ್ನು ನೋಡಿ.
ದೆವ್ವಗಳ ಕುರಿತಾದ ಕಥೆಗಳು ಎಲ್ಲೆಲ್ಲಿಯೂ ಕೇಳಿಬರುವಾಗ
19. (ಎ) ಪಿಶಾಚನು ತನ್ನ ಶಕ್ತಿಯ ಬಗ್ಗೆ ಅನೇಕರು ಏನನ್ನು ನಂಬುವಂತೆ ಮಾಡುವ ಮೂಲಕ ಅವರನ್ನು ಮೋಸಗೊಳಿಸಿದ್ದಾನೆ? (ಬಿ) ನಿಜ ಕ್ರೈಸ್ತರು ಯಾವ ಕಥೆಗಳಿಂದ ದೂರವಿರುತ್ತಾರೆ?
19 ಪಾಶ್ಚಾತ್ಯ ದೇಶಗಳಲ್ಲಿರುವ ಅನೇಕರು ಸೈತಾನನಿಗಿರುವ ಶಕ್ತಿಯನ್ನು ಹಗುರಗೊಳಿಸುತ್ತಿರುವಾಗ ಲೋಕದ ಬೇರೆ ಭಾಗಗಳಲ್ಲಿ ಇದಕ್ಕೆ ತದ್ವಿರುದ್ಧವಾದದ್ದು ನಡೆಯುತ್ತದೆ. ಇಂಥ ಕಡೆಗಳಲ್ಲಿ ಪಿಶಾಚನು ತನಗೆ ವಾಸ್ತವದಲ್ಲಿ ಇರುವುದಕ್ಕಿಂತಲೂ ಹೆಚ್ಚಿನ ಶಕ್ತಿಯಿದೆ ಎಂದು ಅನೇಕರು ನಂಬುವಂತೆ ಮಾಡುವ ಮೂಲಕ ಅವರನ್ನು ಮೋಸಗೊಳಿಸಿದ್ದಾನೆ. ಕೆಲವರು ದುಷ್ಟಾತ್ಮಗಳ ಭಯದಲ್ಲೇ ಜೀವಿಸುತ್ತಾರೆ, ತಿನ್ನುತ್ತಾರೆ, ಕೆಲಸಮಾಡುತ್ತಾರೆ ಮತ್ತು ಮಲಗುತ್ತಾರೆ. ದೆವ್ವಗಳ ಪ್ರಬಲವಾದ ಕೃತ್ಯಗಳ ಕುರಿತಾದ ಕಥೆಗಳು ಎಲ್ಲೆಲ್ಲಿಯೂ ಕೇಳಿಬರುತ್ತವೆ. ಇಂಥ ಕಥೆಗಳು ಅನೇಕವೇಳೆ ಮನರಂಜಕವಾಗಿ ಹೇಳಲ್ಪಡುತ್ತವೆ; ಜನರು ಅವುಗಳ ಮೋಡಿಗೊಳಗಾಗುತ್ತಾರೆ. ಇಂಥ ಕಥೆಗಳನ್ನು ಹಬ್ಬಿಸುವುದರಲ್ಲಿ ನಾವು ಪಾಲಿಗರಾಗಬೇಕೊ? ಇಲ್ಲ. ಸತ್ಯ ದೇವರ ಸೇವಕರು ಎರಡು ಕಾರಣಗಳಿಗಾಗಿ ಹೀಗೆ ಮಾಡುವುದಿಲ್ಲ.
20. ಒಬ್ಬನು ತನಗೆ ತಿಳಿಯದೇ ಹೇಗೆ ಸೈತಾನನ ಪರವಾಗಿ ಪ್ರಚಾರವನ್ನು ಮಾಡಸಾಧ್ಯವಿದೆ?
20 ಮೊದಲನೆಯದಾಗಿ, ದೆವ್ವಗಳ ಸಾಧನೆಗಳ ಕುರಿತಾದ ಕಥೆಗಳನ್ನು ಹಬ್ಬಿಸುವ ಮೂಲಕ ಒಬ್ಬ ವ್ಯಕ್ತಿಯು ಸೈತಾನನ ಅಭಿರುಚಿಗಳನ್ನು ಪ್ರವರ್ಧಿಸುತ್ತಾನೆ. ಹೇಗೆ? ಸೈತಾನನು ಮಹತ್ಕಾರ್ಯಗಳನ್ನು ಮಾಡಲು ಶಕ್ತನಾಗಿದ್ದಾನೆ ಎಂಬುದನ್ನು ದೇವರ ವಾಕ್ಯವು ದೃಢಪಡಿಸುತ್ತದಾದರೂ ಅವನು ‘ಸುಳ್ಳಾದ ಸೂಚಕಕಾರ್ಯಗಳನ್ನು’ ಮತ್ತು ‘ವಂಚನೆಯನ್ನು’ ಉಪಯೋಗಿಸುತ್ತಾನೆ ಎಂಬ ಎಚ್ಚರಿಕೆಯನ್ನೂ ಅದು ಕೊಡುತ್ತದೆ. (2 ಥೆಸಲೊನೀಕ 2:9, 10) ಸೈತಾನನು ಮಹಾ ವಂಚಕನಾಗಿರುವುದರಿಂದ ಪ್ರೇತವ್ಯವಹಾರದ ಕಡೆಗೆ ಓಲುತ್ತಿರುವವರ ಮನಸ್ಸುಗಳನ್ನು ಹೇಗೆ ಪ್ರಭಾವಿಸುವುದು ಮತ್ತು ಸತ್ಯವಲ್ಲದ ವಿಷಯಗಳನ್ನು ಅವನು ನಂಬುವಂತೆ ಹೇಗೆ ಮಾಡುವುದು ಎಂಬುದು ಅವನಿಗೆ ತಿಳಿದಿದೆ. ಇಂಥವರು ತಾವು ಕೆಲವು ವಿಷಯಗಳನ್ನು ನೋಡಿದೆವು ಮತ್ತು ಕೇಳಿಸಿಕೊಂಡೆವು ಎಂದು ಪ್ರಾಮಾಣಿಕವಾಗಿ ನಂಬಬಹುದು ಹಾಗೂ ತಮ್ಮ ಅನುಭವಗಳನ್ನು ಸತ್ಯವೋ ಎಂಬಂತೆ ಇತರರಿಗೆ ತಿಳಿಸಬಹುದು. ಕಾಲಕ್ರಮೇಣ ಅವರ ಕಥೆಗಳು ಪುನಃ ಪುನಃ ಹೇಳಲ್ಪಡುವ ಮೂಲಕ ಉತ್ಪ್ರೇಕ್ಷಿಸಲ್ಪಡುತ್ತವೆ. ಒಬ್ಬ ಕ್ರೈಸ್ತನು ಇಂಥ ಕಥೆಗಳನ್ನು ಹಬ್ಬಿಸುವಲ್ಲಿ, ಕಾರ್ಯತಃ ಅವನು ‘ಸುಳ್ಳಿಗೆ ತಂದೆಯಾಗಿರುವ’ ಪಿಶಾಚನ ಇಚ್ಛೆಯನ್ನು ಪೂರೈಸುತ್ತಿರುವನು. ಅವನು ಸೈತಾನನ ಪರವಾಗಿ ಪ್ರಚಾರವನ್ನು ಮಾಡುತ್ತಿರುವನು.—ಯೋಹಾನ 8:44; 2 ತಿಮೊಥೆಯ 2:16.
21. ನಾವು ನಮ್ಮ ಸಂಭಾಷಣೆಗಳನ್ನು ಯಾವುದರ ಮೇಲೆ ಕೇಂದ್ರೀಕರಿಸಲು ಬಯಸುತ್ತೇವೆ?
21 ಎರಡನೆಯದಾಗಿ, ಒಬ್ಬ ಕ್ರೈಸ್ತನು ಈ ಹಿಂದೆ ನಿಜವಾಗಿಯೂ ದುಷ್ಟಾತ್ಮಗಳನ್ನು ಎದುರಿಸಿರುವುದಾದರೂ ಅವನು ಜೊತೆ ವಿಶ್ವಾಸಿಗಳಿಗೆ ಇಂಥ ವಿಷಯಗಳ ಕುರಿತಾದ ಕಥೆಗಳನ್ನು ಹೇಳಿ ಪುನಃ ಪುನಃ ಅವರನ್ನು ರಂಜಿಸುವುದರಿಂದ ದೂರವಿರುವನು. ಏಕೆ? ‘ನಂಬಿಕೆಯ ಮುಖ್ಯ ನಿಯೋಗಿಯೂ ಪರಿಪೂರ್ಣಕನೂ ಆಗಿರುವ ಯೇಸುವಿನ ಮೇಲೆ ದೃಷ್ಟಿನೆಟ್ಟವರಾಗಿರಿ’ ಎಂದು ನಮ್ಮನ್ನು ಪ್ರೋತ್ಸಾಹಿಸಲಾಗಿದೆ. (ಇಬ್ರಿಯ 12:2) ಹೌದು ನಾವು ಸೈತಾನನ ಮೇಲಲ್ಲ, ಕ್ರಿಸ್ತನ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಬೇಕು. ಯೇಸು ಭೂಮಿಯಲ್ಲಿದ್ದಾಗ ಅವನು ಸೈತಾನನ ಸಾಮರ್ಥ್ಯಗಳ ಕುರಿತು ಹೆಚ್ಚನ್ನು ಹೇಳಸಾಧ್ಯವಿತ್ತಾದರೂ ದುಷ್ಟಾತ್ಮಗಳ ಕುರಿತಾದ ಕಥೆಗಳನ್ನು ಹೇಳಿ ತನ್ನ ಶಿಷ್ಯರನ್ನು ರಂಜಿಸಲಿಲ್ಲ ಎಂಬುದು ಗಮನಾರ್ಹವಾದ ವಿಷಯವಾಗಿದೆ. ಅದರ ಬದಲಿಗೆ ಯೇಸು ರಾಜ್ಯ ಸಂದೇಶದ ಮೇಲೆ ಗಮನವನ್ನು ಕೇಂದ್ರೀಕರಿಸಿದನು. ಆದುದರಿಂದ ಯೇಸುವನ್ನು ಮತ್ತು ಅಪೊಸ್ತಲರನ್ನು ಅನುಕರಿಸುತ್ತಾ ನಾವು ನಮ್ಮ ಸಂಭಾಷಣೆಗಳನ್ನು “ದೇವರ ಮಹೋನ್ನತ ಕಾರ್ಯಗಳ” ಮೇಲೆ ಕೇಂದ್ರೀಕರಿಸಲು ಬಯಸುತ್ತೇವೆ.—ಅಪೊಸ್ತಲರ ಕಾರ್ಯಗಳು 2:11; ಲೂಕ 8:1; ರೋಮನ್ನರಿಗೆ 1:11, 12.
22. ‘ಸ್ವರ್ಗದಲ್ಲಿ ಸಂತೋಷವನ್ನು’ ಉಂಟುಮಾಡುತ್ತಾ ಇರಲು ನಾವೇನು ಮಾಡಬಲ್ಲೆವು?
22 ಸೈತಾನನು ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ನಾಶಮಾಡುವ ಪ್ರಯತ್ನದಲ್ಲಿ ಪ್ರೇತವ್ಯವಹಾರವನ್ನೂ ಸೇರಿಸಿ ವಿವಿಧ ತಂತ್ರೋಪಾಯಗಳನ್ನು ಉಪಯೋಗಿಸುತ್ತಾನೆ ಎಂಬುದು ನಿಜ. ಆದರೆ ಕೆಟ್ಟದ್ದನ್ನು ಹೇಸುವ ಮೂಲಕ ಮತ್ತು ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳುವ ಮೂಲಕ, ಪ್ರೇತವ್ಯವಹಾರವನ್ನೂ ಅದರ ಎಲ್ಲ ರೂಪಗಳನ್ನೂ ನಿರಾಕರಿಸುವ ನಮ್ಮ ದೃಢನಿರ್ಧಾರವನ್ನು ದುರ್ಬಲಗೊಳಿಸಲು ನಾವು ಪಿಶಾಚನಿಗೆ ಯಾವುದೇ ಅವಕಾಶವನ್ನು ಕೊಡುವುದಿಲ್ಲ. (ಎಫೆಸ 4:27 ಓದಿ.) ನಾವು ಪಿಶಾಚನು ಇಲ್ಲದೆ ಹೋಗುವ ವರೆಗೂ ‘[ಅವನ] ತಂತ್ರೋಪಾಯಗಳ ವಿರುದ್ಧ ದೃಢರಾಗಿ ನಿಲ್ಲುವುದನ್ನು’ ಮುಂದುವರಿಸುವುದಾದರೆ ‘ಸ್ವರ್ಗದಲ್ಲಿ [ಎಷ್ಟು] ಸಂತೋಷ’ ಉಂಟಾಗುವುದೆಂಬುದನ್ನು ತುಸು ಊಹಿಸಿಕೊಳ್ಳಿ!—ಎಫೆಸ 6:11.
a ಸೈತಾನನಿಗೆ ಕೊಡಲ್ಪಟ್ಟಿರುವ ವರ್ಣನಾತ್ಮಕ ಹೆಸರುಗಳು (ಪ್ರತಿಭಟನಕಾರ, ಮಿಥ್ಯಾಪವಾದಿ, ವಂಚಕ, ಪ್ರಲೋಭಕ, ಸುಳ್ಳುಗಾರ) ಅವನಿಗೆ ನಮ್ಮ ಹೃದಯಗಳು ಮತ್ತು ಮನಸ್ಸುಗಳನ್ನು ಶೋಧಿಸುವ ಸಾಮರ್ಥ್ಯವಿದೆ ಎಂಬುದನ್ನು ಸೂಚಿಸುವುದಿಲ್ಲ. ಆದರೆ ಇದಕ್ಕೆ ಪ್ರತಿಯಾಗಿ, ಯೆಹೋವನನ್ನು “ಹೃದಯಗಳನ್ನು ಶೋಧಿಸುವವನು” ಎಂದೂ ಯೇಸುವನ್ನು “ಆಳವಾದ ಭಾವನೆಗಳನ್ನೂ ಆಲೋಚನೆಗಳನ್ನೂ [“ಹೃದಯಗಳನ್ನೂ,” ಪಾದಟಿಪ್ಪಣಿ] ಪರಿಶೋಧಿಸುವವನು” ಎಂದೂ ವರ್ಣಿಸಲಾಗಿದೆ.—ಜ್ಞಾನೋಕ್ತಿ 17:3; ಪ್ರಕಟನೆ 2:23.
b ಹೆಚ್ಚಿನ ಮಾಹಿತಿಗಾಗಿ, 1994, ಡಿಸೆಂಬರ್ 15ರ ಕಾವಲಿನಬುರುಜು ಪತ್ರಿಕೆಯ ಪುಟ 19-22ರಲ್ಲಿರುವ “ನಿಮಗಾಗಿ ಒಂದು ಆರೋಗ್ಯ ಪರೀಕ್ಷೆಯೊ?” ಎಂಬ ಲೇಖನವನ್ನು ಮತ್ತು 2001 ಜನವರಿ 8ರ ಎಚ್ಚರ! (ಇಂಗ್ಲಿಷ್) ಪತ್ರಿಕೆಯಲ್ಲಿರುವ “ಬೈಬಲಿನ ದೃಷ್ಟಿಕೋನ: ನೀವು ಆರಿಸಿಕೊಳ್ಳುವ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಚಿಂತಿಸಬೇಕೊ?” ಎಂಬ ಲೇಖನವನ್ನು ನೋಡಿ.