ಪಾಠ 69
ಗಬ್ರಿಯೇಲನು ಮರಿಯಳನ್ನು ಭೇಟಿಯಾಗುತ್ತಾನೆ
ಎಲಿಸಬೇತಳಿಗೆ ಮರಿಯ ಎಂಬ ಸಂಬಂಧಿಕಳಿದ್ದಳು. ಈ ಯುವತಿ ಗಲಿಲಾಯದ ನಜರೇತ್ ಎಂಬ ಪಟ್ಟಣದಲ್ಲಿ ವಾಸಿಸುತ್ತಿದ್ದಳು. ಮರಿಯಳಿಗೆ ಯೋಸೇಫನೆಂಬ ಬಡಗಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಎಲಿಸಬೇತಳು ಆರು ತಿಂಗಳ ಗರ್ಭಿಣಿಯಾಗಿದ್ದಾಗ, ಗಬ್ರಿಯೇಲ ದೂತನು ಮರಿಯಳಿಗೆ ಕಾಣಿಸಿಕೊಂಡನು. ಅವನು ಅವಳಿಗೆ, ‘ಮರಿಯಳೇ, ನಿನಗೆ ಶುಭವಾಗಲಿ, ನಿನಗೆ ಯೆಹೋವನ ದಯೆ ದೊರಕಿದೆ’ ಎಂದನು. ಗಬ್ರಿಯೇಲನ ಮಾತುಗಳು ಅವಳಿಗೆ ಅರ್ಥವಾಗಲಿಲ್ಲ. ಬಳಿಕ ಅವನು ಅವಳಿಗೆ, ‘ನೀನು ಗರ್ಭಿಣಿಯಾಗಿ ಒಂದು ಗಂಡು ಮಗುವನ್ನು ಹೆರುವಿ ಮತ್ತು ನೀನು ಅವನಿಗೆ ಯೇಸು ಎಂದು ಹೆಸರಿಡಬೇಕು. ಆತನು ರಾಜನಾಗಿ ಆಳುವನು. ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ’ ಎಂದು ಹೇಳಿದನು.
ಮರಿಯಳು ಗಬ್ರಿಯೇಲನಿಗೆ, ‘ನನಗಿನ್ನೂ ಮದುವೆ ಆಗಿಲ್ಲ. ಹಾಗಿರುವಾಗ ಮಗುವಾಗುವುದು ಹೇಗೆ?’ ಅಂದಳು. ಆಗ ಗಬ್ರಿಯೇಲನು, ‘ಯೆಹೋವನಿಗೆ ಯಾವುದೂ ಅಸಾಧ್ಯವಲ್ಲ. ಪವಿತ್ರಾತ್ಮವು ನಿನ್ನ ಮೇಲೆ ಬರುವುದು ಮತ್ತು ನಿನಗೆ ಒಂದು ಮಗು ಹುಟ್ಟುವುದು. ನಿನ್ನ ಸಂಬಂಧಿಕಳಾದ ಎಲಿಸಬೇತಳಿಗೆ ತುಂಬ ವಯಸ್ಸಾಗಿದ್ದರೂ ಅವಳು ಗರ್ಭಿಣಿಯಾಗಿದ್ದಾಳೆ’ ಎಂದನು. ಆಗ ಮರಿಯಳು ಗಬ್ರಿಯೇಲನಿಗೆ, ‘ಇಗೋ, ನಾನು ಯೆಹೋವನ ದಾಸಿ. ನೀನು ಹೇಳಿದಂತೆಯೇ ನನಗಾಗಲಿ’ ಅಂದಳು.
ಮರಿಯಳು ಎಲಿಸಬೇತಳನ್ನು ಭೇಟಿಯಾಗಲು ಅವಳ ಊರಿಗೆ ಹೋದಳು. ಮರಿಯಳು ಅವಳನ್ನು ವಂದಿಸಿದಾಗ, ಎಲಿಸಬೇತಳ ಹೊಟ್ಟೆಯಲ್ಲಿದ್ದ ಮಗು ಜಿಗಿಯಿತು. ಅವಳ ಮೇಲೆ ಪವಿತ್ರಾತ್ಮ ಬಂದು, ‘ಮರಿಯಳೇ, ಯೆಹೋವನು ನಿನ್ನನ್ನು ಆರ್ಶಿರ್ವದಿಸಿದ್ದಾನೆ. ನನ್ನ ಕರ್ತನ ತಾಯಿ ನನ್ನ ಮನೆಗೆ ಬಂದಿರುವುದು ನನಗೊಂದು ಗೌರವವೇ ಸರಿ’ ಎಂದಳು. ಆಗ ಮರಿಯಳು, ‘ನಾನು ಪೂರ್ಣ ಹೃದಯದಿಂದ ಯೆಹೋವನನ್ನು ಸುತ್ತಿಸುತ್ತೇನೆ’ ಎಂದಳು. ಮರಿಯಳು ಸುಮಾರು ಮೂರು ತಿಂಗಳು ಎಲಿಸಬೇತಳೊಂದಿಗೆ ಇದ್ದು ನಂತರ ನಜರೇತಿನಲ್ಲಿದ್ದ ತನ್ನ ಮನೆಗೆ ಹೋದಳು.
ಮರಿಯಳು ಗರ್ಭಿಣಿಯಾಗಿದ್ದಾಳೆ ಎಂದು ಯೋಸೇಫನಿಗೆ ತಿಳಿದಾಗ, ಅವಳೊಟ್ಟಿಗೆ ನಿಶ್ಚಯವಾಗಿದ್ದ ಮದುವೆಯನ್ನು ಮುರಿಯುವ ಯೋಚನೆ ಮಾಡಿದನು. ಆದರೆ ಒಬ್ಬ ದೇವದೂತನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು, ‘ಮರಿಯಳನ್ನು ಮದುವೆಯಾಗಲು ಹಿಂಜರಿಯಬೇಡ. ಅವಳು ಯಾವ ತಪ್ಪೂ ಮಾಡಿಲ್ಲ’ ಅಂದನು. ಆದ್ದರಿಂದ ಯೋಸೇಫನು ಮರಿಯಳನ್ನು ಮದುವೆಯಾಗಲು ನಿರ್ಧರಿಸಿದನು ಮತ್ತು ಅವಳನ್ನು ತನ್ನ ಮನೆಗೆ ಕರಕೊಂಡು ಹೋದನು.
“ಯೆಹೋವನು ಭೂಮಿಯಲ್ಲಿಯೂ ಆಕಾಶದಲ್ಲಿಯೂ ತನಗೆ ಬೇಕಾದದ್ದನ್ನು ಮಾಡುತ್ತಾನೆ.”—ಕೀರ್ತನೆ 135:6