ಪಾಠ 8
ಸೂಕ್ತವಾದ ಉದಾಹರಣೆ
ಮತ್ತಾಯ 13:34, 35
ಏನು ಮಾಡಬೇಕು: ಸರಳವಾದ ಉದಾಹರಣೆಗಳನ್ನು ಕೊಟ್ಟು ನಿಮ್ಮ ಬೋಧನೆಯನ್ನು ಉತ್ತಮಗೊಳಿಸಿ. ಈ ಉದಾಹರಣೆಗಳು ನಿಮ್ಮ ಕೇಳುಗರಿಗೆ ಇಷ್ಟ ಆಗಬೇಕು ಮತ್ತು ಮುಖ್ಯಾಂಶಗಳನ್ನು ಕಲಿಸಲು ಸಹಾಯ ಮಾಡಬೇಕು.
ಹೇಗೆ ಮಾಡಬೇಕು:
ಸರಳವಾದ ಉದಾಹರಣೆಗಳನ್ನು ಉಪಯೋಗಿಸಿ. ಯೇಸುವಿನಂತೆ ಕಷ್ಟವಾದ ವಿಷಯಗಳನ್ನು ಕಲಿಸಲು ಸುಲಭವಾದ ವಿಷಯಗಳನ್ನು ಉಪಯೋಗಿಸಿ. ಅನಾವಶ್ಯಕ ವಿವರಗಳನ್ನು ಸೇರಿಸಬೇಡಿ. ಉದಾಹರಣೆಯಲ್ಲಿರುವ ಅಂಶಗಳು ನೀವು ಕಲಿಸುತ್ತಿರುವ ವಿಷಯಕ್ಕೆ ನೇರವಾಗಿ ಅನ್ವಯಿಸಲು ಸಾಧ್ಯವಾಗುವಂತೆ ಇರಬೇಕು. ಇಲ್ಲವಾದರೆ ಕೇಳುಗರಿಗೆ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ.
ಪ್ರಯೋಜನವಾಗುವ ಉದಾಹರಣೆಗಳನ್ನು ಉಪಯೋಗಿಸಿ. ನಿಮ್ಮ ಕೇಳುಗರ ಚಟುವಟಿಕೆ, ಆಸಕ್ತಿಯನ್ನು ಗಮನಿಸಿ. ಅದಕ್ಕೆ ಸಂಬಂಧಿಸಿದ ಉದಾಹರಣೆಗಳನ್ನು ಬಳಸಿ. ನೀವು ಕೊಡುವ ಉದಾಹರಣೆಗಳಿಂದ ನಿಮ್ಮ ಕೇಳುಗರಿಗೆ ಮುಜುಗರ ಆಗಬಾರದು, ನೋವಾಗಬಾರದು.
ಮುಖ್ಯಾಂಶಗಳಿಗೆ ಗಮನ ಕೊಡಿ. ಮುಖ್ಯಾಂಶಗಳನ್ನು ವಿವರಿಸಲು ಉದಾಹರಣೆಗಳನ್ನು ಕೊಡಿ. ಆದರೆ ಸಣ್ಣಪುಟ್ಟ ಅಂಶಗಳಿಗೆ ಉದಾಹರಣೆ ಕೊಡುವ ಆವಶ್ಯಕತೆ ಇಲ್ಲ. ನಿಮಗೆ ಕಿವಿಗೊಡುವ ವ್ಯಕ್ತಿಗೆ ಉದಾಹರಣೆ ಮಾತ್ರ ನೆನಪಲ್ಲಿದ್ದರೆ ಸಾಲದು, ಅದರ ಮೂಲಕ ನೀವು ಕಲಿಸಿದ ಪಾಠನೂ ನೆನಪಲ್ಲಿರಬೇಕು.