“ನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ.”
ಎರಡನೆ ಕೊರಿಂಥದವರಿಗೆ ಪತ್ರದ ಮುಖ್ಯಾಂಶಗಳು
ಅಪೊಸ್ತಲ ಪೌಲನು ಕೊರಿಂಥದ ಕ್ರೈಸ್ತರ ಕುರಿತು ಚಿಂತಿಸುತ್ತಿದ್ದನು. ತನ್ನ ಒಂದನೆಯ ಪತ್ರದಲ್ಲಿ ಅವರಿಗೆ ಕೊಟ್ಟ ಸೂಚನೆಯನ್ನು ಅವರು ಹೇಗೆ ವೀಕ್ಷಿಸಲಿದ್ದರು? ಪತ್ರವು ಕೊರಿಂಥದವರನ್ನು ದುಃಖಪಡಿಸಿ, ಪಶ್ಚಾತ್ತಾಪಕ್ಕೆ ನಡಿಸಿತ್ತು ಎಂಬ ಸುವರದಿಯನ್ನು ತೀತನು ತಂದಾಗ, ಪೌಲನು ಮಕೆದೋನ್ಯದಲ್ಲಿದ್ದನು. ಅದು ಪೌಲನನ್ನೆಷ್ಟು ಸಂತೋಷಗೊಳಿಸಿತ್ತು !—2 ಕೊರಿಂಥ 7:8-13.
ಪೌಲನು ಎರಡನೆಯ ಕೊರಿಂಥದವರಿಗೆ ಪತ್ರವನ್ನು ಮಕೆದೋನ್ಯದಿಂದ ಬರೆದನು, ಪ್ರಾಯಶಃ ಸಾ.ಶ. 55ನೇ ವರ್ಷದ ಮಧ್ಯ ಭಾಗದಲ್ಲಿ. ತನ್ನ ಪತ್ರದಲ್ಲಿ ಅವನು, ಸಭೆಯನ್ನು ಶುದ್ಧವಾಗಿರಿಸಲು ತಕ್ಕೊಂಡ ಹೆಜ್ಜೆಗಳನ್ನು ಚರ್ಚಿಸಿದನು, ಯೂದಾಯದ ಬಡ ವಿಶ್ವಾಸಿಗಳಿಗಾಗಿ ಹಣ ಸಹಾಯ ಕೊಡುವ ಅಪೇಕ್ಷೆಯನ್ನು ಕಟ್ಟಿದನು ಮತ್ತು ತನ್ನ ಅಪೊಸ್ತಲತ್ವವನ್ನು ಸಮರ್ಥಿಸಿದನು. ಪೌಲನು ಹೇಳಿದ ಆ ಹೆಚ್ಚಿನ ವಿಷಯಗಳು, “ನಾವು ನಂಬಿಕೆಯಲ್ಲಿ ಇದ್ದೇವೂ ಇಲ್ಲವೋ ಎಂದು ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳಲು’ ಸಹಾಯ ಮಾಡಬಲ್ಲವು. (13:5) ಹೀಗೆ, ನಾವೀ ಪತ್ರಿಕೆಯಿಂದ ಏನನ್ನು ಆಯ್ದುಕೊಳ್ಳ ಬಹುದು?
ಸಂತೈಸುವ ದೇವರ ಶುಶ್ರೂಷಕರು
ದೇವರು ನಮ್ಮನ್ನು ಎಲ್ಲಾ ಸಂಕಟಗಳಲ್ಲಿ ಸಂತೈಸುವದರಿಂದ, ನಾವೂ ಇತರರನ್ನು ಸಂತೈಸಬೇಕು ಮತ್ತು ಇತರರಿಗಾಗಿ ಪ್ರಾರ್ಥನೆ ಮಾಡಬೇಕೆಂದು ಪೌಲನು ತೋರಿಸುತ್ತಾನೆ. (1:1–2:11) ಪೌಲ ಮತ್ತು ಅವನ ಸಂಗಡಿಗರು ಅತ್ಯಂತ ಒತ್ತಡದ ಕೆಳಗಿದ್ದರೂ, ದೇವರು ಅವರನ್ನು ಕಾಪಾಡಿದನು. ಆದರೂ ಕೊರಿಂಥದವರು ಅವರಿಗೋಸ್ಕರ ಪ್ರಾರ್ಥನೆ ಮಾಡಿ ನೆರವಾಗ ಸಾಧ್ಯವಿತ್ತು, ನಿಜ ನಂಬಿಕೆಯನ್ನು ಅವಲಂಬಿಸುವ ಇತರರಿಗಾಗಿಯೂ ನಾವು ಪ್ರಾರ್ಥಿಸ ಬೇಕು. ಆದರೆ 1 ನೇ ಕೊರಿಂಥ 5 ನೆಯ ಅಧ್ಯಾಯದಲ್ಲಿ ತಿಳಿಸಲ್ಪಟ್ಟ ಆ ಅನೈತಿಕ ಮನುಷ್ಯನ ಕುರಿತೇನು? ಅವನು ಬಹಿಷ್ಕ್ರತನಾಗಿದ್ದವನು ಆದರೆ, ಪಶ್ಚಾತ್ತಾಪ ಪಟ್ಟಿದ್ದನು. ಕೊರಿಂಥದವರು ಅವನಿಗೆ ಕ್ಷಮೆಯನ್ನು ನೀಡಿ, ಪ್ರೀತಿಯಿಂದ ತಮ್ಮ ಮಧ್ಯೆ ಅವನನ್ನು ಪುನಃ ಸ್ಥಾಪಿಸಿದಾಗ, ಅವನಿಗೆಷ್ಟು ಆದರಣೆಯು ದೊರೆತಿರ ಬೇಕು!
ಪೌಲನ ಮಾತುಗಳು ಕ್ರೈಸ್ತ ಶುಶ್ರೂಷೆಗೆ ನಮ್ಮ ಗಣ್ಯತೆಯನ್ನು ಹೆಚ್ಚಿಸಿ, ನಂಬಿಕೆಗಾಗಿ ನಾವು ಬಲವಾಗಿ ನಿಲ್ಲುವಂತೆ ಮಾಡುತ್ತವೆ. (2:12–6:10) ಹೊಸ ಒಡಂಬಡಿಕೆಯ ಶುಶ್ರೂಷಕರಿಗಾದರೋ, ದೇವರು ತಾನೇ ಮುಂದಾಳಾಗಿರುವ “ಜಯೋತ್ಸವದ ಮೆರವಣಿಗೆಯಲ್ಲಿ” ಕೂಡಿರುವ ಸುಯೋಗವು ಕೊಡಲ್ಪಟ್ಟಿದೆ! ಪೌಲನು ಮತ್ತು ಅವನ ಜತೆ ಕೆಲಸಗಾರರು ಶುಶ್ರೂಷೆಯನ್ನು ನಿಕ್ಷೇಪದಂತೆ ನೋಡಿದ್ದರು ಯಾಕೆಂದರೆ ಅವರಿಗೆ ಕೃಪೆಯು ತೋರಿಸಲ್ಪಟ್ಟಿತ್ತು. ಅವರಂತೆಯೇ ಇಂದಿನ ಅಭಿಷಿಕ್ತ ಕ್ರೈಸ್ತರಿಗೆ, ಸಮಾಧಾನದ ಶುಶ್ರೂಷೆಯಿದೆ. ಆದರೂ ಯೆಹೋವನ ಸಾಕ್ಷಿಗಳೆಲ್ಲರೂ, ತಮ್ಮ ಶುಶ್ರೂಷೆಯ ಮೂಲಕ ಇತರರನ್ನು ಸಮೃದ್ಧರನ್ನಾಗಿ ಮಾಡುತ್ತಾರೆ.
ಪವಿತ್ರತ್ವದ ಸಿದ್ಧಿ ಮತ್ತು ಔದಾರ್ಯದಿಂದಿರ್ರಿ
ಕ್ರೈಸ್ತ ಶುಶ್ರೂಷಕರು ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರ ಬೇಕೆಂದು ಪೌಲನು ತೋರಿಸುತ್ತಾನೆ. (6:11–7:16) ನಂಬಿಕೆಯಲ್ಲಿ ದೃಢರಾಗಿ ನಿಲ್ಲಬೇಕಾದರೆ ಅವಿಶ್ವಾಸಿಗಳೊಂದಿಗೆ ಇಜ್ಜೋಡಾಗುವುದರಿಂದ ನಾವು ದೂರವಿರಬೇಕು, ಮತ್ತು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿ ಕೊಳ್ಳಬೇಕು. ಅನೈತಿಕ ತಪ್ಪಿತಸ್ಥನನ್ನು ಬಹಿಷ್ಕರಿಸಿದ ಮೂಲಕ ಕೊರಿಂಥದವರು, ಆ ಶುಚಿಮಾಡಿದ ಕ್ರಿಯೆಯನ್ನು ಕೈಕೊಂಡರು, ಮತ್ತು ಮೊದಲನೆ ಪತ್ರವು ಅವರನ್ನು ದುಃಖ ಪಡಿಸಿ, ರಕ್ಷಣೆಗಾಗಿ ಪಶ್ಚಾತ್ತಾಪ ಪಡುವಂತೆ ನಡಿಸಿದ್ದಕ್ಕಾಗಿ ಪೌಲನು ಸಂತೋಷದಿಂದ ತುಂಬಿದನು.
ತಮ್ಮ ಔದಾರ್ಯಕ್ಕಾಗಿ ದೇವಭೀರು ಶುಶ್ರೂಷಕರಿಗೆ ಪ್ರತಿಫಲ ಸಿಗುವದೆಂದೂ ನಾವು ಕಲಿಯುತ್ತೇವೆ. (8:1–9:15) ಬಡವರಾದ “ದೇವಜನರಿಗೆ” ಹಣ ಸಹಾಯ ಮಾಡುವ ಕುರಿತು ಮಕೆದೋನ್ಯದವರ ಒಳ್ಳೇ ಮಾದರಿಯನ್ನು ಪೌಲನು ತಿಳಿಸುತ್ತಾನೆ. ಅವರು ತಮ್ಮ ಶಕ್ತಿಗೆ ಮೀರಿದ ಉದಾರತೆ ತೋರಿಸಿದ್ದರು, ಮತ್ತು ಅದೇ ರೀತಿಯ ಔದಾರ್ಯವನ್ನು ಕೊರಿಂಥದವರಲ್ಲೂ ಕಾಣುವಂತೆ ಪೌಲನು ನಿರೀಕ್ಷಿಸಿದ್ದನು. ಅವರ ದಾನವು—ನಮ್ಮದು ಸಹಾ—ಹೃದಯಪೂರ್ವಕವಾಗಿ ಕೊಟ್ಟದ್ದಾಗಿರಬೇಕು ಯಾಕಂದರೆ “ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು” ಮತ್ತು ಎಲ್ಲಾ ರೀತಿಯ ಔದಾರ್ಯಕ್ಕಾಗಿ ದೇವರು ತನ್ನ ಜನರನ್ನು ಸಮೃದ್ಧಗೊಳಿಸುವನು.
ಪೌಲ—ಹಿತಚಿಂತಕನಾದ ಅಪೊಸ್ತಲ
ಶುಶ್ರೂಷಕರಾದ ನಾವು ಯೆಹೋವನ ಸೇವೆಯಲ್ಲಿ ಏನನ್ನಾದರೂ ಪೂರೈಸಿದಾದ್ದರೆ ನಾವು ಆತನಲ್ಲಿ ಹೆಚ್ಚಳ ಪಡಬೇಕು, ನಮ್ಮನ್ನು ಹೊಗಳಿಕೊಳ್ಳುವದಲ್ಲ. (10:1–12:13) ಎಷ್ಟೆಂದರೂ “ದೇವರಿಂದ ಪ್ರಬಲವಾಗಿ ಮಾಡಲ್ಪಟ್ಟ” ಅಧ್ಯಾತ್ಮಿಕ ಆಯುಧಗಳಿಂದಲೇ ನಾವು ತಪ್ಪು ವಿವೇಚನೆಗಳನ್ನು ಕೆಡವಿ ಹಾಕಶಕ್ತರಾಗಿದ್ದೇವೆ. ಕೊರಿಂಥದವರ ನಡುವೆ ಇದ್ದ ಜಂಭದ “ಅತಿ ಶ್ರೇಷ್ಠರಾದ ಅಪೊಸ್ತಲರು,” ಕ್ರಿಸ್ತನ ಶುಶ್ರೂಷಕನಾದ ಪೌಲನ ಸಹನೆಯ ದಾಖಲೆಗೆ ಎಂದೂ ಎಣೆಯಲ್ಲ. ಆದರೂ, ಅವನು ಅತಿಶಯವಾಗಿ ಹೆಚ್ಚಳ ಪಡದಂತೆ ಅವನ “ಶರೀರದಲ್ಲಿ ನಾಟಿದ್ದ ಶೂಲವನ್ನು”—ಪ್ರಾಯಶಃ ದೃಪ್ಟಿಮಾಂದ್ಯತೆಯನ್ನು ಅಥವಾ ಆ ಸುಳ್ಳು ಅಪೊಸ್ತಲರನ್ನು—ದೇವರು ತೆಗೆದು ಬಿಡಲಿಲ್ಲ. ಪೌಲನಾದರೋ ತನ್ನ ಬಲಹೀನತೆಗಳಲ್ಲೀ, “ಕ್ರಿಸ್ತನ ಬಲವು” ತನ್ನಲ್ಲಿ ನೆಲಸುವುದಕ್ಕೋಸ್ಕರ, ಹೆಚ್ಚಳ ಪಟ್ಟನು. ನಂಬಿಕೆಯಲ್ಲಿ ದೃಢನಾಗಿ ನಿಂತ ಮನುಷ್ಯನೋಪಾದಿ ಪೌಲನು ಅತಿ ಶ್ರೇಷ್ಠರೆನಿಸಿಕೊಂಡ ಆ ಅಪೊಸ್ತಲರಿಗೆ ಕಡಿಮೆಯವನಾಗಿ ರುಜುವಾಗಲಿಲ್ಲ. “ತಾಳಿ ಕೊಳ್ಳುವದರಲ್ಲಿ, ಸೂಚಕ ಕಾರ್ಯಗಳನ್ನು ಮತ್ತು ಮಹತ್ಕಾರ್ಯಗಳನ್ನು ನಡಿಸಿದರಲ್ಲಿ” ಪೌಲನು ಅವರ ನಡುವೆ ಒದಗಿಸಿದ್ದ ಅಪೊಸ್ತಲತ್ವದ ರುಜುವಾತುಗಳನ್ನು ಕೊರಿಂಥದವರು ತಾವೇ ಕಂಡಿದ್ದರು.
ಶುಶ್ರೂಷಕನೂ ಅಪೊಸ್ತಲನೂ ಆಗಿದ್ದ ಪೌಲನಿಗೆ ಜತೆ ವಿಶ್ವಾಸಿಗಳ ಆತ್ಮಿಕ ಹಿತ ಚಿಂತನೆಯು ಹೃದಯದಲ್ಲಿತ್ತು, ನಮ್ಮಲ್ಲೂ ಅದು ಇರಬೇಕು. (12:14–13:14) ‘ಅವರ ಆತ್ಮ ಸಂರಕ್ಷಣೆಗಾಗಿ ತನ್ನನ್ನು ಅತಿ ಸಂತೋಷದಿಂದ ವೆಚ್ಚಮಾಡಲು’ ಅವನು ಸಿದ್ಧನಿದ್ದನು. ಆದರೆ ಕೊರಿಂಥಕ್ಕೆ ಪುನಃ ಬಂದಾಗ ದೈಹಿಕಕೃತ್ಯಗಳಿಗಾಗಿ ಪಶ್ಚಾತ್ತಾಪ ಪಡದೇ ಇದ್ದ ಯಾರನ್ನಾದರೂ ಕಾಣುವೆನೋ ಎಂಬ ಭಯ ಪೌಲನಿಗಿತ್ತು. ಆದ್ದರಿಂದ ಅವರೆಲ್ಲರೂ, ತಾವು ನಂಬಿಕೆಯಲ್ಲಿ ಇದ್ದಾರೋ ಇಲ್ಲವೋ ಎಂದು ತಮ್ಮನ್ನು ಪರೀಕ್ಷಿಸುವಂತೆ ಅವನು ಸೂಚಿಸಿದನು ಮತ್ತು ಅವರು “ಕೆಟ್ಟದ್ದೇನೂ ಮಾಡಬಾರದೆಂದು” ಪ್ರಾರ್ಥಿಸಿದನು. ಸಮಾಪ್ತಿಯಲ್ಲಿ ಅವರನ್ನು, ಸಂತೋಷಪಡುವಂತೆ, ಕ್ರಮದಿಂದಿರುವಂತೆ, ಏಕಮನಸ್ಸುಳ್ಳವರೂ ಶಾಂತಿ ಮತ್ತು ಸಮಾಧಾನದವರೂ ಆಗಿರುವಂತೆ ಪ್ರೇರೇಪಿಸಿದನು.
ಪರೀಕ್ಷಿಸಿಕೊಳ್ಳುತ್ತಾ ಇರ್ರಿ!
ಹೀಗೆ, ನಾವು ನಂಬಿಕೆಯಲ್ಲಿ ಇದ್ದೇವೋ ಇಲ್ಲವೋ ಎಂಬದನ್ನು ಪರೀಕ್ಷಿಸಿ ಕೊಳ್ಳುವ ಹಲವಾರು ವಿಧಗಳನ್ನು ಕೊರಿಂಥದ ಕ್ರೈಸ್ತರಿಗೆ ಪೌಲನು ಬರೆದ ಎರಡನೇ ಪತ್ರವು ಸೂಚಿಸಿದೆ. ಆತನ ಮಾತುಗಳು, ನಮ್ಮೆಲ್ಲಾ ಸಂಕಟಗಳಲ್ಲಿ ದೇವರು ನಮ್ಮನ್ನು ಸಂತೈಸುವ ಪ್ರಕಾರವೇ, ನಾವು ಸಹಾ ಇತರರನ್ನು ಸಂತೈಸುವಂತೆ ಖಂಡಿತವಾಗಿಯೂ ಪ್ರೇರೇಪಿಸ ಬೇಕು. ಕ್ರೈಸ್ತ ಶುಶ್ರೂಷೆಯ ಕುರಿತು ಪೌಲನು ಏನು ಹೇಳಿದನೋ ಅದು, ಯೆಹೋವನ ಭಯದಿಂದ ಪವಿತ್ರತ್ವವನ್ನು ಸಿದ್ಧಿಗೆ ತರುವಲ್ಲಿ ನಾವದನ್ನು ನಂಬಿಗಸ್ತಿಕೆಯಿಂದ ನಡಿಸುವಂತೆ ನಮ್ಮನ್ನು ಪ್ರಚೋದಿಸಬೇಕು.
ಪೌಲನ ಸೂಚನೆಯನ್ನು ಅನ್ವಯಿಸುವುದು ನಮ್ಮನ್ನು, ಅಧಿಕ ಉದಾರಿಗಳೂ ಸಹಾಯ ಕೊಡುವವರೂ ಆಗುವಂತೆಯೂ ಮಾಡಬಹುದು. ಆದರೂ, ನಾವು ಯೆಹೋವನಲ್ಲೀ ಹೊರತು ನಮ್ಮಲ್ಲಿ ಹೆಚ್ಚಳಪಡದಂತೆ ಆತನ ಮಾತುಗಳು ಸೂಚಿಸುತ್ತವೆ. ಜೊತೆ ವಿಶ್ವಾಸಿಗಳ ಕಡೆಗೆ ನಮ್ಮ ಪ್ರೀತಿಯ ಹಿತಚಿಂತೆಯನ್ನು ಅದು ಹೆಚ್ಚಿಸ ಬೇಕು. ನಿಶ್ಚಯವಾಗಿಯೂ ಇವು ಮತ್ತು ಎರಡನೇ ಕೊರಿಂಥದಲ್ಲಿರುವ ಇತರ ವಿಷಯಗಳು, ನಾವು ‘ನಂಬಿಕೆಯಲ್ಲಿ ಇದ್ದೇವೋ ಇಲ್ಲವೋ ಎಂದು ಪರೀಕ್ಷಿಸುತ್ತಾ’ ಇರುವಂತೆ ನಮಗೆ ನೆರವಾಗಬಲ್ಲವು. (w90 9/15)
[ಪುಟ 30 ರಲ್ಲಿರುವ ಚೌಕ/ಚಿತ್ರಗಳು]
ಯೆಹೋವನ ಪ್ರಭಾವವನ್ನು ಪ್ರತಿಬಿಂಬಿಸುವುದು: ಮೋಶೆಯು ಆಜ್ಞಾಶಾಸನಗಳಾದ ಕಲ್ಲಿನ ಹಲಗೆಗಳೊಂದಿಗೆ ಸೀನಾಯಿ ಬೆಟ್ಟದಿಂದ ಇಳಿದು ಬಂದಾಗ ಅವನ ಮುಖವು ಪ್ರಕಾಶಮಾನವಾಗಿತ್ತು ಯಾಕಂದರೆ ದೇವರು ಅವನೊಂದಿಗೆ ಮಾತಾಡಿದ್ದನು. (ವಿಮೋಚನಕಾಂಡ 34:29, 30) ಪೌಲನು ಇದನ್ನು ತಿಳಿಸುತ್ತಾ, ಅಂದದ್ದು: “ನಾವೆಲ್ಲರೂ ಮುಸುಕು ತೆಗೆದಿರುವ ಮುಖದಿಂದ ಯೆಹೋವನ ಪ್ರಭಾವವನ್ನು ದರ್ಪಣದಲ್ಲಿ ಕಾಣಿಸುತ್ತದೋ ಎಂಬಂತೆ ದೃಷ್ಟಿಸುವವರಾಗಿದ್ದು ಪ್ರಭಾವದಿಂದ ಅಧಿಕ ಪ್ರಭಾವಕ್ಕೆ ಹೋಗುತ್ತಾ ಆ ಪ್ರಭಾವದ ಸಾರೂಪ್ಯ ಉಳ್ಳವರೇ ಆಗುತ್ತೇವೆ. ಇದು ದೇವರಾತ್ಮನಾಗಿರುವ ಯೆಹೋವನ ಕೆಲಸಕ್ಕೆ ಅನುಸಾರವಾದದ್ದೇ.” (2 ಕೊರಿಂಥ 3:7-18) ಪುರಾತನ ಕೈಗನ್ನಡಿಗಳು ಕಂಚು ಅಥವಾ ತಾಮ್ರದಿಂದ ಮಾಡಲ್ಪಟ್ಟಿದ್ದು, ಮೇಲ್ಮೈಗಳು ಚೆನ್ನಾಗಿ ಪ್ರತಿಬಿಂಬಿಸುವಂತೆ ಅವನ್ನು ಬಹಳ ನಯವಾಗಿ ಮಿಂಚಿಸಲಾಗುತ್ತಿತ್ತು. ಅಭಿಷಿಕ್ತ ಕ್ರೈಸ್ತರು ಕನ್ನಡಿಗಳಂತೆ, ಯೇಸು ಕ್ರಿಸ್ತನಿಂದ ತಮ್ಮ ಕಡೆಗೆ ಹೊಳೆಯುವ ದೇವರ ಪ್ರಭಾವವನ್ನು ಪ್ರತಿಬಿಂಬಿಸುತ್ತಾರೆ, ಯೆಹೋವನ ಪ್ರಭಾವವನ್ನು ಪ್ರತಿಬಿಂಬಿಸುವ ಮಗನಿಂದ ದೊರೆತ ಆ ಪ್ರಭೆಯನ್ನು ಪ್ರಗತಿಪರರಾಗಿ ಹೆಚ್ಚಿಸುತ್ತಾ ‘ಆ ಪ್ರಭಾವದ ಸಾರೂಪ್ಯ ಉಳ್ಳವರೇ ಆಗುತ್ತಾರೆ’. (2 ಕೊರಿಂಥ 4:6; ಎಫೆಸ 5:1) ಪವಿತ್ರಾತ್ಮದ ಮತ್ತು ಶಾಸ್ತ್ರ ಗ್ರಂಥದ ಮೂಲಕ ದೇವರು ಅವರಲ್ಲಿ ತನ್ನ ಸ್ವಂತ ಗುಣಗಳ ಒಂದು ಸಾರೂಪ್ಯವನ್ನು, “ಹೊಸ ವ್ಯಕ್ತಿತ್ವವನ್ನು” ನಿರ್ಮಿಸುತ್ತಾನೆ. (ಎಫೆಸ 4:24; ಕೊಲೊಸ್ಸೆ 3:10) ನಮ್ಮ ನಿರೀಕ್ಷೆ ಸ್ವರ್ಗೀಯ ಅಥವಾ ಐಹಿಕವಾಗಿರಲಿ, ನಾವೆಲ್ಲರೂ ಆ ವ್ಯಕ್ತಿತ್ವವನ್ನು ಪ್ರದರ್ಶಿಸೋಣ ಮತ್ತು ನಮ್ಮ ಶುಶ್ರೂಷೆಯಲ್ಲಿ ದೇವರ ಪ್ರಭಾವವನ್ನು ಪ್ರತಿಬಿಂಬಿಸುವ ಆ ಸುಯೋಗವನ್ನು ಕಾಪಾಡಿಕೊಳ್ಳೋಣ.
[ಪುಟ 31 ರಲ್ಲಿರುವ ಚೌಕ/ಚಿತ್ರಗಳು]
“ನೀತಿಯೆಂಬ ಆಯುಧಗಳು”: ಪೌಲ ಮತ್ತು ಅವನ ಸಹವಾಸಿಗಳು ದೇವರ ಶುಶ್ರೂಷಕರಾಗಿ ತಮ್ಮನ್ನು ಸಮ್ಮತರನ್ನಾಗಿ ಮಾಡಿದ್ದ ಒಂದು ವಿಧಾನವು, “ಎಡಬಲಗೈಗಳಲ್ಲಿ ನೀತಿಯೆಂಬ ಆಯುಧಗಳನ್ನು” ಧರಿಸಿದ ಮೂಲಕವೇ. (2 ಕೊರಿಂಥ 6:3-7) ಬಲಗೈ ಕತ್ತಿಯನ್ನು ಚಲಾಯಿಸಲು ಮತ್ತು ಎಡಗೈ ಗುರಾಣಿಯನ್ನು ಹಿಡಿಯಲು ಬಳಸಲಾಗಿತ್ತು. ಎಲ್ಲಾ ಕಡೆಗಳಿಂದ ಆಕ್ರಮಿಸಲ್ಪಟ್ಟಿದ್ದರೂ ಪೌಲ ಮತ್ತು ಅವನ ಸಂಗಡಿಗರು, ಒಂದು ಆತ್ಮಿಕ ಯುದ್ಧವನ್ನು ಹೋರಾಡಲು ಸನ್ನದ್ಧರಾಗಿದ್ದರು. ಅದು ಸುಳ್ಳು ಬೋಧಕರ ಮತ್ತು “ಅತಿಶ್ರೇಷ್ಠ ಅಪೊಸ್ತಲರು” ಅನ್ನಿಸಿಕೊಂಡವರ ವಿರುದ್ಧ ನಡಿಸಿದ ಹೋರಾಟವಾಗಿತ್ತು ಯಾಕೆಂದರೆ ಕೊರಿಂಥದ ಸಭೆಯವರು ಕ್ರಿಸ್ತನ ಭಕ್ತಿಯಿಂದ ತೊಲಗಿ ಹೋಗದಂತೆಯೇ. ಪಾಪಪೂರ್ಣ ಮಾಂಸಿಕ ಆಯುಧಗಳಾದ— ಯುಕ್ತಿ, ವಂಚನೆ ಅಥವಾ ಮೋಸವನ್ನು ಪೌಲನು ಪ್ರಯೋಗಿಸಲಿಲ್ಲ. (2 ಕೊರಿಂಥ 10:8-10; 11:3, 12-14; 12:11, 16) ಬದಲಾಗಿ ಅವನು ಉಪಯೋಗಿಸಿದ “ಆಯುಧಗಳು” ನೀತಿಯವುಗಳು ಅಥವಾ ನ್ಯಾಯವಾದವುಗಳು, ಎಲ್ಲಾ ಆಕ್ರಮಣಗಳ ವಿರುದ್ಧದಲ್ಲಿ ಸತ್ಯಾರಾಧನೆಯನ್ನು ವರ್ಧಿಸುವ ಸಾಧನಗಳಾಗಿದ್ದವು. ಯೆಹೋವನ ಸಾಕ್ಷಿಗಳು ಈಗ, ಅಂಥ “ನೀತಿಯೆಂಬ ಆಯುಧಗಳನ್ನು” ಅದೇ ಉದ್ದೇಶಕ್ಕಾಗಿ ಉಪಯೋಗಿಸುತ್ತಾರೆ.