ನೀತಿ—ಬಾಯಿ ಮಾತಿನ ಸಂಪ್ರದಾಯಗಳಿಂದಲ್ಲ
“ನಿಮ್ಮ ನೀತಿಯು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ಹೆಚ್ಚಿನದಾಗದಿದ್ದರೆ ನೀವು ಪರಲೋಕ ರಾಜ್ಯದಲ್ಲಿ ಸೇರಲಾರಿರಿ.” —ಮತ್ತಾಯ 5:20.
1, 2. ಯೇಸು ತನ್ನ ಪರ್ವತ ಪ್ರಸಂಗವನ್ನು ಕೊಡುವ ತುಸು ಮೊದಲು ಏನು ಸಂಭವಿಸಿತು?
ಯೇಸು ಆ ರಾತ್ರಿಯನ್ನು ಒಂದು ಬೆಟ್ಟದ ಮೇಲೆ ಕಳೆದಿದ್ದನು. ಮೇಲೆ ತಾರಾರಂಜಿತ ಆಕಾಶವು ಚಾಚಿಕೊಂಡಿತ್ತು. ಇರುಳಿನ ಚಿಕ್ಕ ಚಿಕ್ಕ ಜೀವಿಗಳು ಪೊದೆಗಳಲ್ಲಿ ಮುರಮುರ ಸದ್ದು ಮಾಡುತ್ತಿದ್ದವು. ಪೂರ್ವ ದಿಕ್ಕಿನಲ್ಲಿ ಗಲಿಲಾಯ ಸಮುದ್ರದ ನೀರು ಲಘುವಾಗಿ ತೀರವನ್ನು ಅಪ್ಪಳಿಸುತ್ತಿತ್ತು. ಆದರೆ ಯೇಸುವಿಗೆ ತನ್ನ ಸುತ್ತಮುತ್ತಲಿನ ಈ ಶಾಂತಮಯ, ಮನಮೋಹಕ ಸೌಂದರ್ಯದ ಅನಿಸಿಕೆಯು ತೀರಾ ಕೊಂಚವಾಗಿದ್ದಿರಬೇಕು. ಅವನು ರಾತ್ರಿಯನ್ನು ತನ್ನ ಸ್ವರ್ಗೀಯ ತಂದೆಯಾದ ಯೆಹೋವನಿಗೆ ಪ್ರಾರ್ಥನೆ ಮಾಡುವುದರಲ್ಲಿ ಕಳೆದಿದ್ದನು. ಆತನಿಗೆ ತನ್ನ ತಂದೆಯ ಮಾರ್ಗದರ್ಶನೆಯ ಅಗತ್ಯವಿತ್ತು. ಮುಂದಿದ್ದ ದಿನವು ಸಂದುಕಟ್ಟಿನದ್ದಾಗಿತ್ತು.
2 ಪೂರ್ವ ದಿಕ್ಕಿನಲ್ಲಿ ಆಕಾಶವು ಬೆಳಗಲಾರಂಭಿಸಿತ್ತು. ಪಕ್ಷಿಗಳು ಮೆಲ್ಲ ಮೆಲ್ಲನೇ ಚಿಲಿಪಿಲಿಗುಟ್ಟುತ್ತಾ ಅತ್ತಿತ್ತು ಚಲಿಸ ತೊಡಗಿದವು. ವನಪುಷ್ಪಗಳು ಗಾಳಿಯಲ್ಲಿ ಮೆಲ್ಲಮೆಲ್ಲನೇ ಓಲಾಡ ತೊಡಗಿದವು. ಸೂರ್ಯನ ಪ್ರಥಮ ಕಿರಣಗಳು ದಿಗಂತದಲ್ಲಿ ಮೇಲೇರುತ್ತಾ ಹೋದಂತೆ, ಯೇಸು ತನ್ನ ಶಿಷ್ಯರನ್ನು ಹತ್ತರಕ್ಕೆ ಕರೆದನು ಮತ್ತು ಅವರೊಳಗಿಂದ 12 ಮಂದಿಯನ್ನು ತನ್ನ ಅಪೋಸ್ತಲರಾಗಿ ಆರಿಸಿಕೊಂಡನು. ಅನಂತರ ಅವರೆಲ್ಲರೊಂದಿಗೆ ಅವನು ಬೆಟ್ಟದ ಪಕ್ಕದಿಂದ ಕೆಳಗಿಳಿಯ ತೊಡಗಿದನು. ಆವಾಗಲೇ ಜನರ ಗುಂಪು ಗಲಿಲಾಯ, ತೂರ್ ಮತ್ತು ಸಿದೋನ್, ಯೂದಾಯ ಮತ್ತು ಯೆರೂಸಲೇಮ್ನಿಂದ ಆತನ ಬಳಿಗೆ ಬರುತ್ತಿರುವುದು ಕಾಣಿಸುತ್ತಿತ್ತು. ಅವರು ತಮ್ಮ ರೋಗಗಳನ್ನು ವಾಸಿಮಾಡಿಸಿಕೊಳ್ಳಲು ಬಂದಿದ್ದರು. ಅನೇಕರು ಆತನನ್ನು ಸ್ಪರ್ಶಿಸಿದಂತೆ ಯೆಹೋವನ ಶಕ್ತಿಯು ಯೇಸುವಿನಿಂದ ಹೊರಟು ಅವರನ್ನು ವಾಸಿಮಾಡುತ್ತಿತ್ತು. ಆತನು ಹೇಳುವ ಮಾತುಗಳನ್ನು ಕೇಳಲೂ ಅವರು ಬಂದಿದ್ದರು, ಅದು ಅವರ ಚಿಂತಿತ ಆತ್ಮಗಳಿಗೆ ಶಾಂತಿಕಾರಕ ಲೇಪದಂತಿತ್ತು.—ಮತ್ತಾಯ 4:25; ಲೂಕ 6:12-19.
3. ಯೇಸು ಮಾತಾಡಲಾರಂಭಿಸಿದಾಗ ಶಿಷ್ಯರು ಮತ್ತು ಜನರ ಗುಂಪು ತವಕದಿಂದ ಮುನ್ನೋಡಿದ್ದೇಕೆ?
3 ರಬ್ಬೀಗಳು ತಮ್ಮ ಹೆಚ್ಚು ವಿಧಿವಿಹಿತವಾದ ಶಿಕ್ಷಣ ಕಾರ್ಯಕ್ರಮಗಳಲ್ಲಿ ಕೂತುಕೊಳ್ಳುವದು ರೂಢಿಯಾಗಿತ್ತು. ಮತ್ತು ಸಾ.ಶ. 31ರ ಈ ವಿಶಿಷ್ಟ ವಸಂತಋತುವಿನ ಮುಂಜಾನೆ, ಯೇಸು ಅದನ್ನೇ ಮಾಡಿದನು, ಬೆಟ್ಟವನ್ನೇರಿ ಒಂದು ಸಮತಟ್ಟಾದ ಜಾಗದಲ್ಲಿ ಕೂತುಕೊಂಡನು. ಅವನ ಶಿಷ್ಯರು ಮತ್ತು ಜನರ ಗುಂಪು ಇದನ್ನು ಕಂಡಾಗ, ಏನೋ ವಿಶೇಷ ಸಂಗತಿ ನಡಿಯಲಿಕ್ಕಿದೆಯೆಂದು ಮನಗಂಡು, ತವಕಾಪೇಕ್ಷೆಯಿಂದ ಅತನ ಸುತ್ತಲೂ ಕೂಡಿಬಂದರು. ಅವನು ಮಾತಾಡಲು ಆರಂಭಿಸಿದಾಗ, ಅವರು ಆತನ ಮಾತುಗಳ ನಿರೀಕ್ಷಣೆಯಿಂದಿದ್ದರು ಮತ್ತು ತುಸು ಸಮಯದ ಮೇಲೆ ಅವನದನ್ನು ಮುಗಿಸಿದಾಗ, ಅವರು ತಾವು ಕೇಳಿದ ಸಂಗತಿಗಳಿಂದಾಗಿ ಅತ್ಯಾಶ್ಚರ್ಯ ಪಟ್ಟರು. ಅದೇಕೆಂದು ನಾವು ನೋಡೋಣ.—ಮತ್ತಾಯ 7:28.
ಎರಡು ವಿಧದ ನೀತಿಗಳು
4. (ಎ) ಚರ್ಚೆಯಲ್ಲಿದ್ದ ಆ ಎರಡು ವಿಧದ ನೀತಿಗಳು ಯಾವುವು? (ಬಿ) ಬಾಯಿಮಾತಿನ ಸಂಪ್ರದಾಯಗಳ ಉದ್ದೇಶವೇನಾಗಿತ್ತು ಮತ್ತು ಅದು ಪೂರೈಸಲ್ಪಟ್ಟಿತೊ?
4 ಮತ್ತಾಯ 5:1–7:29ರಲ್ಲಿ ಮತ್ತು ಲೂಕ 6:17-49ರಲ್ಲಿ ವರದಿಸಲ್ಪಟ್ಟ ತನ್ನ ಪರ್ವತ ಪ್ರಸಂಗದಲ್ಲಿ, ಯೇಸುವು ಎರಡು ವರ್ಗಗಳ ನಡುವಣ ತೀವ್ರ ಪ್ರತಿಹೋಲಿಕೆಯನ್ನು ಮಾಡಿದನು: ಶಾಸ್ತ್ರಿಗಳು ಮತ್ತು ಫರಿಸಾಯರು ಮತ್ತು ಅವರು ದಬ್ಬಾಳಿಕೆ ನಡಿಸಿದ ಸಾಮಾನ್ಯ ಜನರು. ಆತನು ಎರಡು ವಿಧದ ನೀತಿಯನ್ನು ಕುರಿತು ಮಾತಾಡಿದನು, ಫರಿಸಾಯರ ಕಪಟತನದ ನೀತಿ ಮತ್ತು ದೇವರ ನಿಜ ನೀತಿ. (ಮತ್ತಾಯ 5:6, 20) ಫರಿಸಾಯರ ಸ್ವ-ನೀತಿಯು ಬಾಯಿಮಾತಿನ ಸಂಪ್ರದಾಯಗಳಲ್ಲಿ ಬೇರೂರಿತ್ತು, ಇವು ಸಾ.ಶ.ಪೂ. ಎರಡನೆಯ ಶತಮಾನದಲ್ಲಿ ಆರಂಭಿಸಲ್ಪಟ್ಟವು, ಅವು “ನಿಯಮದ ಸುತ್ತಲೂ ಬೇಲಿಯೋಪಾದಿ” ಇದ್ದು ಅದನ್ನು ಹೆಲೆನಿಸ್ಮ್ (ಗ್ರೀಕ್ ಸಂಸ್ಕೃತಿ)ಯ ಒಳದಾರಿಗಳಿಂದ ರಕ್ಷಿಸಲಿಕ್ಕಾಗಿ ರಚಿಸಲಾಗಿತ್ತು. ಆದರೆ ಅವು ತದನಂತರ ನಿಯಮದ ಒಂದು ಭಾಗವಾಗಿ ವೀಕ್ಷಿಸಲ್ಪಟ್ಟವು. ವಾಸ್ತವದಲ್ಲಿ, ಬಾಯಿಮಾತಿನ ಸಂಪ್ರದಾಯಗಳನ್ನು ದೇವರ ಲಿಖಿತ ನಿಯಮಕ್ಕಿಂತ ಹೆಚ್ಚಿನದ್ದಾಗಿ ಶಾಸ್ತ್ರಿಗಳು ಪರಿಗಣಿಸಿದರು. ಮಿಶ್ನಾ ಹೇಳುವದು: “ಶಾಸ್ತ್ರಿಗಳ ಮಾತುಗಳಿಗೆ [ಬಾಯಿ ಮಾತಿನ ಸಂಪ್ರದಾಯಗಳಿಗೆ] ಲಿಖಿತ ಶಾಸ್ತ್ರದ ಮಾತುಗಳ ಪಾಲನೆಗಿಂತ ಅಧಿಕ ಹೆಚ್ಚು ಕಟ್ಟುನಿಟ್ಟನ್ನು ಅನ್ವಯಿಸಲಾಗುತ್ತಿತ್ತು.” ಆದಕಾರಣ, ಅವರ ಸಂಪ್ರದಾಯಗಳು, “ನಿಯಮದ ಸುತ್ತಲೂ ಒಂದು ಬೇಲಿಯೋಪಾದಿ” ಅದರ ರಕ್ಷಣೆಗಾಗಿ ಇರುವ ಬದಲಾಗಿ, ಧರ್ಮಶಾಸ್ತ್ರವನ್ನು ನಿರರ್ಥಕಪಡಿಸಲು, ನಿರ್ಬಲಗೊಳಿಸಲು ಕಾರಣವಾದವು. ಯೇಸು ಅಂದಂತೆ, “ನೀವು ದೇವರ ಆಜ್ಞೆಯನ್ನು ಬಿಟ್ಟು ಮನುಷ್ಯರು ಕಲ್ಪಿಸಿದ ಸಂಪ್ರದಾಯವನ್ನು ಹಿಡಿದಿದ್ದೀರಿ.”—ಮಾರ್ಕ 7:5-9; ಮತ್ತಾಯ 15:1-9.
5. (ಎ) ಯೇಸುವಿಗೆ ಕಿವಿಗೊಡಲು ಬಂದಿದ್ದ ಆ ಸಾಮಾನ್ಯ ಜನರ ಪರಿಸ್ಥಿತಿಯು ಏನಾಗಿತ್ತು ಮತ್ತು ಫರಿಸಾಯರು ಮತ್ತು ಶಾಸ್ತ್ರಿಗಳಿಂದ ಅವರು ಹೇಗೆ ವೀಕ್ಷಿಸಲ್ಪಟ್ಟಿದ್ದರು? (ಬಿ) ಬಾಯಿಮಾತಿನ ಸಂಪ್ರದಾಯಗಳನ್ನು ಕೆಲಸಗಾರರಿಗೆ ಅಷ್ಟೊಂದು ಭಾರವಾದ ಹೊರೆಯನ್ನಾಗಿ ಮಾಡಿದ್ದು ಯಾವುದು?
5 ಯೇಸುವಿಗೆ ಕಿವಿಗೊಡಲು ಗುಂಪು ಗುಂಪಾಗಿ ಕೂಡಿಬಂದ ಆ ಸಾಮಾನ್ಯ ಜನರು “ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ”ದರ್ದಿಂದ, ಆತ್ಮಿಕವಾಗಿ ದುರ್ಬಲರಾಗಿದ್ದರು. (ಮತ್ತಾಯ 9:36) ಅಹಂಕಾರ ದರ್ಪದಿಂದ ಕೂಡಿದ್ದ ಶಾಸ್ತ್ರಿಗಳು ಮತ್ತು ಫರಿಸಾಯರು ಅವರನ್ನು ತುಚ್ಚೀಕರಿಸಿದ್ದರು, ಅವರನ್ನು ಆಮ್ ಹರಾ-ರೆಟ್ಸ್ (ನೆಲದ ಜನರು) ಎಂದು ಕರೆದರು, ವಾಚಿಕ ಸಂಪ್ರದಾಯಗಳನ್ನು ಅವರು ಪಾಲಿಸದರ್ದಿಂದ ಅವರನ್ನು ಅಜ್ಞಾನಿಗಳು, ಪುನರುತ್ಥಾನವಿಲ್ಲದ ಶಾಪಗ್ರಸ್ತ ಪಾಪಿಗಳು ಎಂದು ಜರೆದರು. ಯೇಸುವಿನ ಸಮಯದೊಳಗೆ ಆ ಸಂಪ್ರದಾಯಗಳು ವಿಸ್ತಾರವಾಗಿ ಬೆಳೆದು, ಒಂದು ಕಟ್ಟುನಿಟ್ಟಿನ ಕಟ್ಟಳೆಗಳಾಗಿ ಮತ್ತು ವ್ಯರ್ಥಕಾಲಹರಣೆಯ ಆಚಾರ ಪದ್ಧತಿಗಳ ಹೊರೆಯಾಗಿ ಎಂಥ ಜಬರದಸ್ತಿನ ಜವುಗಾಗಿತ್ತೆಂದರೆ, ಯಾವ ಕೆಲಸಗಾರನೂ ಅದನ್ನು ಪಾಲಿಸ ಶಕ್ತನಾಗಿರಲಿಲ್ಲ. ಯೇಸು ಆ ಸಂಪ್ರದಾಯಗಳನ್ನು, ‘ಜನರ ಹೆಗಲ ಮೇಲೆ ಹೊರಿಸಿದ ಭಾರವಾದ ಹೊರೆಗಳು’ ಎಂದು ಕರೆದದರ್ದಲ್ಲೇನೂ ಆಶ್ಚರ್ಯವಿಲ್ಲ.—ಮತ್ತಾಯ 23:4; ಯೋಹಾನ 7:45-49.
6. ಯೇಸುವಿನ ಆರಂಭದ ಘೋಷಣೆಯನ್ನು ಅಷ್ಟು ಆಶ್ಚರ್ಯಕರವಾಗಿ ಮಾಡಿದ್ದು ಯಾವುದು ಮತ್ತು ಅದು ಶಿಷ್ಯರಿಗೆ ಮತ್ತು ಫರಿಸಾಯರು ಮತ್ತು ಶಾಸ್ತ್ರಿಗಳಿಗೆ ಯಾವ ಬದಲಾವಣೆಯನ್ನು ಸೂಚಿಸಿತು?
6 ಹೀಗೆ ಯೇಸುವು ಬೆಟ್ಟದ ಪಕ್ಕದಲ್ಲಿ ಕೂತುಕೊಂಡಾಗ ಅವನನ್ನು ಕೇಳಲು ಹತ್ತಿರ ನೆರೆದು ಬಂದವರು, ಯೇಸುವಿನ ಶಿಷ್ಯರು ಮತ್ತು ಆತ್ಮಿಕವಾಗಿ ಹಸಿದಿದ್ದ ಜನರಾಗಿದ್ದರು. ಆತನ ಆರಂಭದ ಈ ಘೋಷಣೆಗಳು ಅವರನ್ನು ಆಶ್ಚರ್ಯಪಡಿಸಿರಬೇಕು: ‘ಬಡವರಾಗಿರುವವರು ಧನ್ಯರು, ಹಸಿದವರು ಧನ್ಯರು, ದುಃಖಪಡುವವರು ಧನ್ಯರು, ದ್ವೇಷಿಸಲ್ಪಡುವವರು ಧನ್ಯರು.’ ಆದರೆ ಬಡವರು, ಹಸಿದವರು, ದುಃಖಿತರು ಮತ್ತು ದ್ವೇಷಿಸಲ್ಪಡುವ ಯಾರಾದರೂ ಹೇಗೆ ಧನ್ಯರಾದಾರು? ಮತ್ತು ಐಶ್ವರ್ಯವಂತರಿಗೆ, ಹೊಟ್ಟೆತುಂಬಿದವರಿಗೆ, ನಗುವವರಿಗೆ ಮತ್ತು ಹೊಗಳಿಕೆ ಪಡೆದವರಿಗೆ ದುರ್ಗತಿಯನ್ನು ಘೋಷಿಸಲಾಗಿತ್ತು. (ಲೂಕ 6:20-26) ಕೆಲವೇ ಮಾತುಗಳಲ್ಲಿ ಯೇಸು, ವಾಡಿಕೆಯಲ್ಲಿದ್ದ ಎಲ್ಲಾ ಬೆಲೆಕಟ್ಟುವಿಕೆಗಳನ್ನು ಮತ್ತು ಸ್ವೀಕರಣೀಯವಾದ ಮಾನವ ಮಟ್ಟಗಳನ್ನು ವಿಪರ್ಯಸ್ತ ಮಾಡಿದನು. ಯೇಸುವಿನ ಅನಂತರದ ಮಾತುಗಳಿಗೆ ಹೊಂದಿಕೆಯಲ್ಲಿ, ಅದು ಸ್ಥಾನಗಳ ಒಂದು ನಾಟಕೀಯ ವಿಪರ್ಯಸತ್ತೆಯೂ ಆಗಿತ್ತು: “ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.”—ಲೂಕ 18:9-14.
7. ಯೇಸುವಿನ ಆರಂಭದ ಮಾತುಗಳು ಆತನಿಗೆ ಕಿವಿಗೊಡುತ್ತಿದ್ದ ಆತ್ಮಿಕವಾಗಿ ಹಸಿದಿದ್ದ ಜನರ ಮೇಲೆ ಯಾವ ಪ್ರಭಾವವನ್ನು ಹಾಕಿದಿರ್ದಬೇಕು?
7 ಸ್ವಸಂತುಷ್ಟರಾಗಿದ್ದ ಫರಿಸಾಯರು ಮತ್ತು ಶಾಸ್ತ್ರಿಗಳಿಗೆ ಹೋಲಿಕೆಯಲ್ಲಿ, ಈ ವಿಶಿಷ್ಠ ದಿನದ ಮುಂಜಾನೆ ಯೇಸುವಿನ ಬಳಿಗೆ ಬಂದಿದ್ದ ಆ ಜನರು ತಮ್ಮ ದುಃಖಿತ ಆತ್ಮಿಕ ಸ್ಥಿತಿಯನ್ನು ಅರಿತವಾಗಿದ್ದರು. ಆತನ ಆರಂಭದ ಮಾತುಗಳು ಅವರನ್ನು ನಿರೀಕ್ಷೆಯಿಂದ ತುಂಬಿಸಿದ್ದಿರಬೇಕು: “ಆತ್ಮಿಕ ಅವಶ್ಯಕತೆಯ ಪ್ರಜ್ಞೆಯುಳ್ಳವರು ಧನ್ಯರು, ಪರಲೋಕ ರಾಜ್ಯವು ಅವರದು.” ಮತ್ತು, “ನೀತಿಗೆ ಹಸಿದು ಬಾಯಾರಿದವರು ಧನ್ಯರು, ಅವರಿಗೆ ತೃಪ್ತಿಯಾಗುವದು” ಎಂದು ಆತನು ಮತ್ತೂ ಹೇಳಿದಾಗ ಅವರ ಆತ್ಮವೆಷ್ಟು ನಲಿದಿರಬೇಕು! (ಮತ್ತಾಯ 5:3, 6; ಯೋಹಾನ 6:35; ಪ್ರಕಟನೆ 7:16, 17) ನೀತಿಯಿಂದ ತುಂಬಿರುವ ಸಂತೃಪ್ತಿಯದು ಹೌದು, ಆದರೆ ಫರಿಸಾಯರ ತರಹದ ನೀತಿಯಲ್ಲ.
“ಮನುಷ್ಯರ ಮುಂದೆ ನೀತಿವಂತರಾಗಿರುವದು” ಸಾಕಾಗದು
8. ತಮ್ಮ ನೀತಿಯು ಫರಿಸಾಯರ ಮತ್ತು ಶಾಸ್ತ್ರಿಗಳ ನೀತಿಗಿಂತ ಹೆಚ್ಚಾಗುವದು ಹೇಗೆ ಸಾಧ್ಯವೆಂದು ಕೆಲವರು ಯೋಚಿಸುವುದೇಕೆ, ಆದರೂ ಅದು ಹೆಚ್ಚಾಗಲೇ ಬೇಕು ಏಕೆ?
8 “ನಿಮ್ಮ ನೀತಿಯು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ಹೆಚ್ಚಿನದಾಗದಿದ್ದರೆ,” ಯೇಸುವಂದದ್ದು, “ನೀವು ಪರಲೋಕ ರಾಜ್ಯವನ್ನು ಸೇರಲಾರಿರಿ.” (ಮತ್ತಾಯ 5:17-20; ಮಾರ್ಕ 2:23-28; 3:1-6; 7:1-13 ನೋಡಿ.) ‘ಫರಿಸಾಯರ ನೀತಿಗಿಂತಲೂ ಹೆಚ್ಚಿನದ್ದೋ?’ ಎಂದು ಕೆಲವರು ಕೇಳಾರು. ಅವರು ಉಪವಾಸ, ಪ್ರಾರ್ಥನೆ ಮಾಡುತ್ತಾರೆ, ದಶಮಾಂಶ ಮತ್ತು ದಾನಗಳನ್ನು ಕೊಡುತ್ತಾರೆ, ಧಮಶಾಸ್ತ್ರದ ಅಧ್ಯಯನದಲ್ಲಿ ತಮ್ಮ ಜೀವನವನ್ನೇ ಕಳೆಯುತ್ತಾರೆ. ನಮ್ಮ ನೀತಿಯು ಅವರಿಗಿಂತ ಹೆಚ್ಚಿನದ್ದಾಗಿರುವದಾದರೂ ಹೇಗೆ?’ ಆದರೆ ಅದು ಹೆಚ್ಚಾಗಲೇ ಬೇಕು. ಫರಿಸಾಯರು ಜನರಿಂದ ಅತ್ಯಂತ ಹೆಚ್ಚು ಮಾನನೀಯರಾಗಿ ಕಾಣಬಹುದು, ಆದರೆ ದೇವರಿಂದಲ್ಲ. ಇನ್ನೊಂದು ಸಂದರ್ಭದಲ್ಲಿ ಯೇಸು ಈ ಫರಿಸಾಯರಿಗೆ ಅಂದದ್ದು: “ಮನುಷ್ಯರ ಮುಂದೆ ನೀತಿವಂತರೆಂದು ತೋರಿಸಿಕೊಳ್ಳುವವರು ನೀವು; ಆದರೆ ದೇವರು ನಿಮ್ಮ ಹೃದಯಗಳನ್ನು ತಿಳುಕೊಂಡಿದ್ದಾನೆ. ಮನುಷ್ಯರಲ್ಲಿ ಶ್ರೇಷ್ಟವೆನಿಸಿಕೊಳ್ಳುವಂಥದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ.”—ಲೂಕ 16:15.
9-11. (ಎ) ದೇವರ ಮುಂದೆ ನೀತಿವಂತರೆಂಬ ನಿಲುವನ್ನು ತಾವು ಪಡೆಯುವೆವು ಎಂದು ಫರಿಸಾಯರು ಮತ್ತು ಶಾಸ್ತ್ರಿಗಳು ನೆನಸಿದ್ದ ಒಂದು ವಿಧಾನ ಯಾವುದು? (ಬಿ) ನೀತಿಯನ್ನು ಗಳಿಸಲು ಅವರು ನೆನಸಿದ್ದ ಎರಡನೆಯ ವಿಧಾನ ಯಾವುದು? (ಸಿ) ಅವರು ಆತುಕೊಂಡಿದ್ದ ಮೂರನೆಯ ವಿಧಾನ ಯಾವುದು, ಮತ್ತು ಅವುಗಳ ವ್ಯರ್ಥತೆಯನ್ನು ಖಚಿತವಾಗಿ ತೋರಿಸಲು ಅಪೊಸ್ತಲ ಪೌಲನು ಅಂದದ್ದೇನು?
9 ನೀತಿಯನ್ನು ಗಳಿಸುವುದಕ್ಕೆ ರಬ್ಬಿಗಳು ತಮ್ಮ ಸ್ವಂತ ನಿಯಮವನ್ನು ಸಂಶೋಧಿಸಿದ್ದರು. ಒಂದು ಯೋಗ್ಯತೆಯು, ಅಬ್ರಹಾಮನ ಸಂತಾನದವರಾಗಿರುವದೇ: “ನಮ್ಮ ತಂದೆಯಾದ ಅಬ್ರಹಾಮನ ಶಿಷ್ಯರೇ ಈ ಲೋಕವನ್ನು ಆನಂದಿಸಿರಿ ಮತ್ತು ಬರಲಿರುವ ಲೋಕವನ್ನು ಬಾಧ್ಯವಾಗಿ ಹೊಂದಿರಿ.” (ಮಿಶ್ನಾ) ಒಂದುವೇಳೆ ಈ ಸಂಪ್ರದಾಯವನ್ನು ಪ್ರತಿಭಟಿಸಲಿಕ್ಕಾಗಿಯೆ ಸ್ನಾನಿಕನಾದ ಯೋಹಾನನು ತನ್ನ ಬಳಿಗೆ ಬಂದ ಫರಿಸಾಯರನ್ನು ಎಚ್ಚರಿಸಿದ್ದು: “ಹಾಗಾದರೆ ನಿಮ್ಮ ಮನಸ್ಸು ದೇವರ ಕಡೆಗೆ ತಿರುಗಿತೆಂಬದನ್ನು ತಕ್ಕ ಫಲದಿಂದ ತೋರಿಸಿರಿ. ಅಬ್ರಹಾಮನು ನಮ್ಮ ಮೂಲಪುರುಷನಲ್ಲವೇ [ಅಷ್ಟೇ ಸಾಕು ಎಂಬ] ಎಂಬುವ ಆಲೋಚನೆಯನ್ನು ಬಿಟ್ಟುಬಿಡಿರಿ.”—ಮತ್ತಾಯ 3:7-9; ಯೋಹಾನ 8:33, 39 ಸಹಾ ನೋಡಿ.
10 ನೀತಿಯನ್ನು ಗಳಿಸುವ ಎರಡನೆಯ ವಿಧಾನವು, ಅವರಂದದ್ದು, ಧರ್ಮಗಳನ್ನು ಮಾಡುವ ಮೂಲಕ. ಸಾ.ಶ.ಪೂ ಎರಡನೆಯ ಶತಮಾನದ ಸಮಯದಲ್ಲಿ ಯೆಹೂದಿ ಭಕ್ತರಿಂದ ಬರೆಯಲ್ಪಟ್ಟ ಎರಡು ಅಪೋಕ್ರಿಪ (ಖೋಟಾ) ಪುಸ್ತಕಗಳು ಆ ಸಂಪ್ರದಾಯಿಕ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಅಂಥ ಒಂದು ಹೇಳಿಕೆಯು ಟೋಬಿಟ್ನಲ್ಲಿ ಕಂಡುಬರುತ್ತದೆ: “ಧರ್ಮಮಾಡುವದು ಒಬ್ಬನನ್ನು ಮರಣದಿಂದ ಕಾಪಾಡುತ್ತದೆ ಮತ್ತು ಪ್ರತಿಯೊಂದು ಪಾಪವನ್ನು ಪರಿಹಾರ ಮಾಡುತ್ತದೆ.” (12:9, ದ ನ್ಯೂ ಅಮೆರಿಕನ್ ಬೈಬಲ್) ದಿ ಬುಕ್ ಆಫ್ ಸಿರಾಕ್ (ಎಕೀಸ್ಲಿಯಾಸಿಕ್ಟಸ್) ಹೇಳುವದು: “ಜಲವು ಅಗ್ನಿ ಜ್ವಾಲೆಯನ್ನು ನಂದಿಸುತ್ತದೆ, ದಾನಧರ್ಮವು ಪಾಪಕ್ಕೆ ಪ್ರಾಯಶ್ಚಿತ್ತ ಕೊಡುತ್ತದೆ.”—3:29, NAB.
11 ಅವರು ನೀತಿಯನ್ನು ಗಳಿಸಲು ಪ್ರಯತ್ನಿಸಿದ ಮೂರನೆಯ ವಿಧಾನವು ನಿಯಮ ಶಾಸ್ತ್ರದ ಕೃತ್ಯಗಳನ್ನು ನಡಿಸುವ ಮೂಲಕ. ಒಬ್ಬ ಮನುಷ್ಯನ ಕೃತ್ಯಗಳು ಬಹಳಷ್ಟು ಉತ್ತಮವಾಗಿದ್ದರೆ, ಅವನು ರಕ್ಷಿಸಲ್ಪಡುವನು ಎಂದು ವಾಚಿಕ ಸಂಪ್ರದಾಯಗಳು ಕಲಿಸಿದ್ದವು. “ಒಳ್ಳೇ ಅಥವಾ ಕೆಟ್ಟ ಕೃತ್ಯಗಳ ಅತಿರೇಕತೆಗೆ ಅನುಸಾರವಾಗಿ,” ತೀರ್ಪಾಗುತ್ತಿತ್ತು. (ಮಿಶ್ನ) ಒಳ್ಳೇ ತೀರ್ಪು ಸಿಗಬೇಕಾದರೆ “ಪಾಪಗಳನ್ನು ತೂಕದಲ್ಲಿ ಮೀರಿಸುವ ಯೋಗ್ಯತೆಗಳನ್ನು ಗಳಿಸಬೇಕಿತ್ತು.” ಒಬ್ಬ ವ್ಯಕ್ತಿಯ ಸುಕೃತ್ಯಗಳು ಅವನ ದುಷ್ಕೃತ್ಯಗಳಿಗಿಂತ ಒಂದಾದರೂ ಹೆಚ್ಚಾದರೆ, ಅವನು ರಕ್ಷಿಸಲ್ಪಡುವನು—ಅವರ ಅಲ್ಪ ಚಟುವಟಿಕೆಗಳ ಲೆಕ್ಕವನ್ನು ಇಡುವ ಮೂಲಕ ದೇವರು ಅವರ ತೀರ್ಪನ್ನು ಮಾಡುತ್ತಾನೋ ಎಂಬಂತೆ! (ಮತ್ತಾಯ 23:23, 24) ಒಂದು ಸರಿಯಾದ ನೋಟವನ್ನು ನೀಡುತ್ತಾ ಪೌಲನು ಬರೆದದ್ದು: “ಯಾವನಾದರೂ ನೇಮನಿಷ್ಟೆಗಳನ್ನು ಅನುಸರಿಸಿ ದೇವರ ಸನ್ನಿಧಿಯಲ್ಲಿ ನೀತಿವಂತನೆಂದು ಎಣಿಸಲ್ಪಡುವದಿಲ್ಲ.” (ರೋಮಾಪುರ 3:20) ನಿಶ್ಚಯವಾಗಿ ಕ್ರೈಸ್ತ ನೀತಿಯು, ಫರಿಸಾಯರು ಮತ್ತು ಶಾಸ್ತ್ರಿಗಳಿಗಿಂತ ಅತ್ಯಂತ ಹೆಚ್ಚಾಗಿರಲೇ ಬೇಕು!
“ಹೇಳಿಯದೆ ಎಂಬದಾಗಿ ನೀವು ಕೇಳಿದೀರ್ದಷ್ಟೆ”
12. (ಎ) ಯೇಸು ತನ್ನ ಪರ್ವತ ಪ್ರಸಂಗದಲ್ಲಿ ಹಿಬ್ರೂ ಶಾಸ್ತ್ರವಚನಗಳ ನಿರ್ದೇಶನಕ್ಕೆ ಪ್ರಸ್ತಾಪಿಸುವ ತನ್ನ ಸಾಮಾನ್ಯ ವಿಧಾನದಲ್ಲಿ ಯಾವ ಬದಲಾವಣೆ ಮಾಡಿದನು ಮತ್ತು ಏಕೆ? (ಬಿ) “ಎಂದು ಹೇಳಿಯದೆ” ಎಂಬ ಹೇಳಿಕೆಯ ಆರನೆಯ ಉಪಯೋಗದಲ್ಲಿ ನಾವೇನನ್ನು ಕಲಿಯುತ್ತೇವೆ?
12 ಯೇಸು ಹಿಂದೆ ಹಿಬ್ರೂ ಶಾಸ್ತ್ರದಿಂದ ಉಲ್ಲೇಕಿಸಿದಾಗ, “ಎಂದು ಬರೆದದೆ” ಎಂದು ಹೇಳಿದ್ದನು. (ಮತ್ತಾಯ 4:4, 7, 10) ಆದರೆ ಪರ್ವತ ಪ್ರಸಂಗದಲ್ಲಿ ಆರು ಸಾರಿ ಯೇಸುವು, ಹಿಬ್ರೂ ಶಾಸ್ತ್ರಗಳ ಉದ್ದರಣೆಗಳೆಂದು ಕಂಡುಬಂದ ಹೇಳಿಕೆಗಳನ್ನು ನಿರ್ದೇಶಿಸಿದಾಗ, “ಎಂದು ಹೇಳಿಯದೆ” ಎಂದು ಪ್ರಸ್ತಾಪಿಸಿದ್ದಾನೆ. (ಮತ್ತಾಯ 5:21, 27, 31, 33, 38, 43) ಯಾಕೆ? ಯಾಕೆಂದರೆ ಅವನು ದೇವರ ಆಜ್ಞೆಗಳನ್ನು ಪ್ರತಿರೋಧಿಸಿದ ಫರಿಸಾಯ ಸಂಪ್ರದಾಯಗಳ ಬೆಳಕಿನಲ್ಲಿ ಶಾಸ್ತ್ರ ವಚನಗಳ ಅರ್ಥವಿವರಣೆ ಮಾಡುತ್ತಿದ್ದನು. (ಧರ್ಮೋಪದೇಶಕಾಂಡ 4:2; ಮತ್ತಾಯ 15:3) ಇದು ಯೇಸುವಿನ ಆರನೆಯ ಮತ್ತು ಕೊನೆಯ ನಿರ್ದೇಶನೆಯಲ್ಲಿ ವ್ಯಕ್ತವಾಗುತ್ತದೆ: “ನಿಮ್ಮ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ಹಗೆಮಾಡಬೇಕೆಂದು ಹೇಳಿದೆ ಎಂಬದಾಗಿ ಕೇಳಿದೀರ್ದಷ್ಟೆ.” ಆದರೆ ಮೋಶೆಯ ಯಾವ ನಿಯಮವಾದರೂ “ನಿಮ್ಮ ವೈರಿಗಳನ್ನು ಹಗೆ ಮಾಡಿರಿ” ಎಂದು ಹೇಳಿರುವುದಿಲ್ಲ. ಅದನ್ನು ಹೇಳಿದವರು ಫರಿಸಾಯರು ಮತ್ತು ಶಾಸ್ತ್ರಿಗಳು. ನಿಮ್ಮ ನೆರೆಯವರನ್ನು ಪ್ರೀತಿಸುವ ನಿಯಮದ ಅವರ ಅರ್ಥ ವಿವರಣೆ ಅದಾಗಿತ್ತು—ನಿಮ್ಮ ಯೆಹೂದ್ಯ ನೆರೆಯವರನ್ನು ಪ್ರೀತಿಸು, ಬೇರೆಯವರನ್ನಲ್ಲ.
13. ಕಾರ್ಯಥ ಕೊಲೆಗೆ ನಡಿಸ ಸಾಧ್ಯವಿರುವ ನಡತೆಯನ್ನು ಆರಂಭಿಸುವ ವಿರುದ್ಧವಾಗಿಯೂ ಯೇಸು ಎಚ್ಚರಿಸಿದ್ದು ಹೇಗೆ?
13 ಈ ಆರು ಹೇಳಿಕೆಗಳ ಮಾಲೆಯಲ್ಲಿ ಮೊದಲನೆಯದನ್ನು ನಾವೀಗ ಗಮನಿಸೋಣ: “ನರಹತ್ಯ ಮಾಡಬಾರದು; ನರಹತ್ಯ ಮಾಡುವವನು ನ್ಯಾಯವಿಚಾರಣೆಗೆ ಗುರಿಯಾಗುವನೆಂದು ಹಿರಿಯರಿಗೆ ಹೇಳಿಯದೆ ಎಂದು ಕೇಳಿದೀರ್ದಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ—ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ ಪ್ರತಿ ಮನುಷ್ಯನು ನ್ಯಾಯವಿಚಾರಣೆಗೆ ಗುರಿಯಾಗುವನು.” (ಮತ್ತಾಯ 5:21, 22) ಹೃದಯದಲ್ಲಿನ ಕೋಪವು ದುರ್ಬಾಷೆಗೆ, ಮತ್ತು ಅಲ್ಲಿಂದ ನಿಂದಾತ್ಮಕ ತೀರ್ಪು ಮಾಡುವಂತೆ ಒಬ್ಬನನ್ನು ನಡಿಸಬಹುದು ಮತ್ತು ಕೊನೆಗೆ ಅದು ಕೊಲೆಪಾತದಲ್ಲಿ ತಾನೇ ಒಳಗೂಡಬಹುದು. ಬಹಳ ಸಮಯದಿಂದ ಹೃದಯದಲ್ಲಿ ಬಚ್ಚಿಟ್ಟುಕೊಳ್ಳುವ ಕೋಪವು ಮಾರಕವಾಗಿರಬಲ್ಲದು: “ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ.”—1 ಯೋಹಾನ 3:15.
14. ವ್ಯಭಿಚಾರಕ್ಕೆ ನಡಿಸುವ ದಾರಿಯನ್ನು ಆರಂಭಿಸುವ ವಿರುದ್ಧವೂ ಯೇಸು ಸೂಚನೆ ಕೊಟ್ಟದ್ದು ಹೇಗೆ?
14 ಯೇಸು ಅನಂತರ ಹೇಳಿದ್ದು: “ವ್ಯಭಿಚಾರ ಮಾಡಬಾರದೆಂದು ಹೇಳಿಯದೆ ಎಂಬದಾಗಿ ನೀವು ಕೇಳಿದೀರ್ದಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ—ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡುವವನಾದನು.” (ಮತ್ತಾಯ 5:27, 28) ವ್ಯಭಿಚಾರವನ್ನು ನೀವು ಮಾಡುವದಿಲ್ಲವೋ? ಹಾಗಾದರೆ ಅದರ ಕುರಿತು ಆಲೋಚನೆಗಳನ್ನು ಮಾಡುವ ಮೂಲಕ ಆ ದಾರಿಯಲ್ಲಿ ಪ್ರಾರಂಭವನ್ನೂ ಮಾಡಬೇಡಿರಿ. ಎಲ್ಲಿ ಅಂಥ ವಿಷಯಗಳು ಉಗಮಿಸುತ್ತವೆಯೋ ಆ ನಿಮ್ಮ ಹೃದಯವನ್ನು ರಕ್ಷಿಸಿಕೊಳ್ಳಿರಿ. (ಜ್ಞಾನೋಕ್ತಿ 4:23; ಮತ್ತಾಯ 15:18, 19) ಯಾಕೋಬ 1:14, 15 ಎಚ್ಚರಿಸುವುದು: “ಆದರೆ ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರಿಸಲ್ಪಡುತ್ತಾನೆ. ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ. ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ.” ಜನರು ಕೆಲವು ಸಾರಿ ಹೀಗನ್ನುತ್ತಾರೆ: ‘ಏನನ್ನು ಮುಗಿಸಲಾರಿರೋ ಅದನ್ನು ಆರಂಭಿಸಲೂ ಬೇಡಿರಿ.’ ಆದರೆ ಈ ಸಂದರ್ಭದಲ್ಲಿ ನಾವು ಹೀಗನ್ನಬೇಕು: ‘ಏನನ್ನು ನಿಲ್ಲಿಸಲಾರಿರೋ ಅದನ್ನು ಪ್ರಾರಂಭಿಸಲೂ ಬೇಡಿರಿ.’ ಗುಂಡು ಹಾರಿಸುವ ತಂಡದ ಮುಂದೆ ಸಾವಿನ ಬೆದರಿಕೆಗೆ ಒಡ್ಡಲ್ಪಟ್ಟಾಗಲೂ ನಂಬಿಗಸ್ತರಾಗಿದ್ದ ಕೆಲವರು, ತದನಂತರ, ಲೈಂಗಿಕ ಅನೈತಿಕತೆಯ ಮೋಸದ ಪಾಶಕ್ಕೆ ಬಿದ್ದುಹೋದ ಸಂದರ್ಭಗಳಿವೆ.
15. ವಿವಾಹ ವಿಚ್ಛೇದನೆಯ ವಿಷಯದಲ್ಲಿ ಯೇಸುವಿನ ನಿಲುವು ಯೆಹೂದ್ಯರ ವಾಚಿಕ ಸಂಪ್ರದಾಯಗಳಿಂದ ತೀರಾ ಬೇರೆಯಾಗಿದ್ದದ್ದು ಹೇಗೆ?
15 ನಾವೀಗ ಯೇಸುವಿನ ಮೂರನೆಯ ಹೇಳಿಕೆಯ ಕಡೆಗೆ ಬರುತ್ತೇವೆ. ಅವನಂದದ್ದು: “ಇದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಆಕೆಗೆ ತ್ಯಾಗಪತ್ರವನ್ನು ಕೊಡತಕ್ಕದೆಂದು ಹೇಳಿದೆಯಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ—ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಬಿಡುವವನು ಅವಳು ವ್ಯಭಿಚಾರ ಮಾಡುವದಕ್ಕೆ ಕಾರಣನಾಗುತ್ತಾನೆ. ಮತ್ತು ಗಂಡ ಬಿಟ್ಟವಳನ್ನು [ಅಂದರೆ, ಲೈಂಗಿಕ ಅನೈತಿಕತೆಯ ಹೊರತು ಬೇರೆ ಕಾರಣದಿಂದ ವಿಚ್ಛೇದವಾದವಳನ್ನು] ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡಿದವನಾಗಿದ್ದಾನೆ.” ಕೆಲವು ಯೆಹೂದ್ಯರು ತಮ್ಮ ಪತ್ನಿಯರೊಂದಿಗೆ ವಂಚನೆಯಿಂದ ವ್ಯವಹರಿಸಿದ್ದರು ಮತ್ತು ಅತ್ಯಂತ ಕ್ಷುಲ್ಲಕ ಕಾರಣಗಳ ಮೇಲೆ ವಿವಾಹವಿಚ್ಛೇದ ಮಾಡುತ್ತಿದ್ದರು. (ಮಲಾಕಿಯ 2:13-16; ಮತ್ತಾಯ 19:3-9) ಬಾಯಿಮಾತಿನ ಸಂಪ್ರದಾಯಗಳು ಒಬ್ಬ ಪುರುಷನಿಗೆ ತನ್ನ ಪತ್ನಿಯನ್ನು, “ಅವನ ಒಂದು ಊಟವನ್ನು ಕೆಡಿಸಿದಾಗಲೂ” ಅಥವಾ “ಅವಳಿಗಿಂತ ಬೆಳ್ಳಗಾದ ಇನ್ನೊಬ್ಬಳನ್ನು ಕಂಡುಕೊಂಡಾಗ ಸಹಾ” ವಿಚ್ಛೇದಿಸಲು ಅನುಮತಿಸುತ್ತಿದ್ದವು.—ಮಿಶ್ನಾ.
16. ಯಾವ ಯೆಹೂದಿ ಪದ್ಧತಿಯು ಆಣೆ ಇಡುವುದನ್ನು ಅರ್ಥರಹಿತವನ್ನಾಗಿ ಮಾಡಿತ್ತು, ಮತ್ತು ಯೇಸು ಯಾವ ನಿಲುವನ್ನು ತಕ್ಕೊಂಡನು?
16 ಅದೇ ರೀತಿಯ ಧಾಟಿಯಲ್ಲಿ ಯೇಸು ಮುಂದರಿಸುತ್ತಾ ಅಂದದ್ದು: “ನೀವು ಇಟ್ಟುಕೊಂಡ ಆಣೆಗಳನ್ನು ಸಲ್ಲಿಸಬೇಕೆಂದು ಹಿರಿಯರಿಗೆ ಹೇಳಿಯದೆ ಎಂದು ಕೇಳಿದಿರಷ್ಟೆ. . . . ಆದರೆ ನಾನು ನಿಮಗೆ ಹೇಳುವದೇನಂದರೆ—ನೀನು ಆಣೆಯನ್ನೇ ಇಡಬೇಡ.” ಆ ಸಮಯದೊಳಗೆ ಯೆಹೂದ್ಯರು ಆಣೆಯಿಡುವದರ ದುರುಪಯೋಗ ಮಾಡುತ್ತಿದ್ದರು ಮತ್ತು ಅಲ್ಪ ವಿಷಯಗಳಲ್ಲೂ ಆಣೆಯಿಟ್ಟು ಅದನ್ನು ಸಲ್ಲಿಸದೆ ಇರುತ್ತಿದ್ದರು. ಆದರೆ ಯೇಸುವಂದದ್ದು: “ಆಣೆಯನ್ನೇ ಇಡಬೇಡ. . . . ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ ಎಂದಿರಲಿ.” ಆತನ ಸೂತ್ರವು ಸರಳವಾಗಿತ್ತು: ಎಲ್ಲಾ ಸಮಯದಲ್ಲಿ ಸತ್ಯವನ್ನೇ ಆಡು, ನಿನ್ನ ಮಾತಿನ ಖಾತರಿಗಾಗಿ ಆಣೆ ಇಡುವ ಅವಶ್ಯವಿಲ್ಲ. ಆಣೆಗಳನ್ನು ಮಹತ್ವದ ವಿಷಯಗಳಿಗಾಗಿ ಕಾದಿರಿಸು.—ಮತ್ತಾಯ 5:33-37; 23:16-22ನ್ನು ಹೋಲಿಸು.
17. “ಕಣ್ಣಿನ ಪ್ರತಿಯಾಗಿ ಕಣ್ಣು ಮತ್ತು ಹಲ್ಲಿಗೆ ಪ್ರತಿಯಾಗಿ ಹಲ್ಲು” ಇದಕ್ಕಿಂತ ಯಾವ ಉತ್ತಮ ವಿಧಾನವನ್ನು ಯೇಸು ಕಲಿಸಿದನು?
17 ಅನಂತರ ಯೇಸು ಹೇಳಿದ್ದು: “ಕಣ್ಣಿಗೆ ಪ್ರತಿಯಾಗಿ ಕಣ್ಣನ್ನು ಹಲ್ಲಿಗೆ ಪ್ರತಿಯಾಗಿ ಹಲ್ಲನ್ನು ತೆಗಿಸು ಅಂತ ಹೇಳಿದೆಯೆಂದು ನೀವು ಕೇಳಿದೀರ್ದಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ—ಕೆಡುಕನನ್ನು ಎದುರಿಸಬೇಡ. ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡು.” (ಮತ್ತಾಯ 5:38-42) ಇಲ್ಲಿ ಯೇಸು ಪೆಟ್ಟು ತಗಲುವ ಹಾಗೆ ಹೊಡೆಯುವುದನ್ನು ಸೂಚಿಸದೆ ಅಪಮಾನ ಮಾಡುವ ಹಿಂಗೈಯೇಟಿಗೆ ಸೂಚಿಸಿದ್ದಾನೆ. ಪ್ರತಿಯಾಗಿ ಬೈಯುವ ಮೂಲಕ ನಿಮ್ಮನ್ನು ಅಲ್ಪೀಕರಿಸಬೇಡಿ. ಕೆಡುಕಿಗೆ ಬದಲಾಗಿ ಕೆಡುಕನ್ನು ಮಾಡಬೇಡ. ಬದಲಾಗಿ, ಒಳ್ಳೇದನ್ನು ಮಾಡು ಮತ್ತು ಹೀಗೆ, “ಕೆಟ್ಟದನ್ನು ಒಳ್ಳೇದರಿಂದ ಜಯಿಸು.”—ರೋಮಾಪುರ 12:17-21.
18. (ಎ) ನಿಮ್ಮ ನೆರೆಯವರನ್ನು ಪ್ರೀತಿಸುವ ನಿಯಮವನ್ನು ಯೆಹೂದ್ಯರು ಬದಲಿಸಿದ್ದು ಹೇಗೆ, ಆದರೆ ಯೇಸು ಅದನ್ನು ಪ್ರತೀಕರಿಸಿದ್ದು ಹೇಗೆ? (ಬಿ) “ನೆರೆಯವರ” ಅನ್ವಯವನ್ನು ಸೀಮಿತಗೊಳಿಸಲು ಬಯಸಿದ್ದ ಒಬ್ಬ ಧರ್ಮಬೋಧಕನಿಗೆ ಯೇಸು ಕೊಟ್ಟ ಉತ್ತರವೇನು?
18 ಆರನೆಯ ಮತ್ತು ಕೊನೆಯ ಉದಾಹರಣೆಯಲ್ಲಿ, ರಬ್ಬೀಗಳ ಸಂಪ್ರದಾಯದಿಂದ ಹೇಗೆ ಮೋಶೆಯ ನಿಯಮಶಾಸ್ತ್ರವು ನಿರ್ಬಲಗೊಳಿಸಲ್ಪಟ್ಟಿತೆಂದು ಯೇಸು ಸ್ಪಷ್ಟವಾಗಿಗಿ ತೋರಿಸಿದನು. “ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ಹಗೆ ಮಾಡಬೇಕೆಂದು ಹೇಳಿದೆಯೆಂದು ಕೇಳಿದೀರ್ದಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ—ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ.” (ಮತ್ತಾಯ 5:43, 44) ಮೋಶೆಯ ಲಿಖಿತ ನಿಯಮವು ಪ್ರೀತಿಯ ಮೇಲೆ ಸೀಮಿತವನ್ನು ಹಾಕಿಲ್ಲ: “ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು.” (ಯಾಜಕಕಾಂಡ 19:18) ಈ ಆಜೆಗ್ಞೆ ಆಕ್ಷೇಪವನ್ನೆತ್ತಿದವರು ಫರಿಸಾಯರು, ಮತ್ತು ಅದರಿಂದ ಪಾರಾಗಲು “ನೆರೆಯವರು” ಎಂಬ ಶಬ್ದವನ್ನು ಸಂಪ್ರದಾಯ ಪಾಲಿಸುವವರಿಗೆ ಮೀಸಲಾಗಿಟ್ಟರು. ಆದ್ದರಿಂದಲೇ ಒಬ್ಬ ನಿರ್ದಿಷ್ಟ ಧರ್ಮಬೋಧಕನಿಗೆ ಯೇಸು, ‘ನಿನ್ನ ನೆರೆಯನನ್ನು ನಿನ್ನಂತೆಯೇ ಪ್ರೀತಿಸು’ ಎಂದು ಆಜ್ಞಾಪಿಸಿದಾಗ, ಅವನು ಮರುಸವಾಲು ಹಾಕಿದ್ದು: “ನನ್ನ ನೆರೆಯವನು ಯಾರು?” ಯೇಸು ಒಳ್ಳೇ ಸಮಾರ್ಯದವನ ದೃಷ್ಟಾಂತವನ್ನು ಕೊಟ್ಟು ಉತ್ತರಿಸಿದನು—ನಿನ್ನ ಅಗತ್ಯವಿರುವ ವ್ಯಕ್ತಿಗೆ ನಿನ್ನನ್ನು ಒಬ್ಬ ನೆರೆಯವನಾಗಿ ಮಾಡಿಕೋ.—ಲೂಕ 10:25-37.
19. ದುಷ್ಟರ ಕಡೆಗೆ ಯೆಹೋವನ ಯಾವ ಕ್ರಿಯೆಯನ್ನು ನಾವು ಅನುಸರಿಸುವಂತೆ ಯೇಸು ಶಿಫಾರಸು ಮಾಡಿದ್ದಾನೆ?
19 ತನ್ನ ಪ್ರಸಂಗವನ್ನು ಮುಂದುವರಿಸುತ್ತಾ ಯೇಸು, ‘ದೇವರು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ ಮತ್ತು ಅವರ ಮೇಲೆ ಮಳೆ ಸುರಿಸುತ್ತಾನೆ. ನಿಮಗೆ ಪ್ರೀತಿ ತೋರಿಸುವವರನ್ನೇ ಪ್ರೀತಿಸುವುದರಲ್ಲಿ ಅಸಾಮಾನ್ಯವೇನೂ ಇಲ್ಲ. ದುಷ್ಟರೂ ಅದನ್ನು ಮಾಡುತ್ತಾರೆ. ಆದರೆ ಅದರಿಂದ ಯಾವ ಫಲವೂ ಇಲ್ಲ. ನಿಮ್ಮನ್ನು ದೇವರ ಮಕ್ಕಳಾಗಿ ರುಜುಪಡಿಸಿರಿ. ಆತನನ್ನು ಅನುಕರಿಸಿರಿ. ಎಲ್ಲರಿಗೂ ನಿಮ್ಮನ್ನು ನೆರೆಯವರಾಗಿ ಮಾಡಿಕೊಳ್ಳಿರಿ ಮತ್ತು ನಿಮ್ಮ ನೆರೆಯವರನ್ನು ಪ್ರೀತಿಸಿರಿ. ಮತ್ತು ಹೀಗೆ, “ನಿಮ್ಮ ತಂದೆಯು ಪರಿಪೂರ್ಣನಾಗಿರುವಂತೆ ನೀವೂ ಪರಿಪೂರ್ಣರಾಗಿರಿ.” (ಮತ್ತಾಯ 5:45, 48, NW) ಜೀವನದಲ್ಲಿ ಅನುಸರಿಸಲು ಎಂಥ ಪಂಥಾಹ್ವಾನದ ಮಟ್ಟವಿದು! ಮತ್ತು ಫರಿಸಾಯರ ಮತ್ತು ಶಾಸ್ತ್ರಿಗಳ ನೀತಿಯನ್ನು ಎಷ್ಟು ಲೋಪವುಳ್ಳದ್ದಾಗಿ ಇದು ತೋರಿಸುತ್ತದೆ!
20. ಮೋಶೆಯ ಧರ್ಮಶಾಸ್ತ್ರವನ್ನು ಬದಿಗೊತ್ತುವ ಬದಲಾಗಿ ಯೇಸು ಹೇಗೆ ಅದರ ಆಳವನ್ನು ಮತ್ತು ವಿಸ್ತಾರ್ಯವನ್ನು ಅಧಿಕಗೊಳಿಸಿ ಅದನ್ನು ಇನ್ನೂ ಹೆಚ್ಚು ಉಚ್ಛತ್ತಮ ಮಟ್ಟದಲಿಟ್ಲನ್ಟು?
20 ಹೀಗೆ ಯೇಸು ನಿಯಮಶಾಸ್ತ್ರದ ಭಾಗಗಳಿಗೆ ಸೂಚಿಸುತ್ತಾ, “ಆದರೆ ನಾನು ನಿಮಗೆ ಹೇಳುವದೇನಂದರೆ” ಎಂದು ಕೂಡಿಸಿದಾಗ, ಆತನು ಮೋಶೆಯ ನಿಯಮವನ್ನು ಬದಿಗೆ ಹಾಕಿರಲಿಲ್ಲ ಅಥವಾ ಅದರ ಸ್ಥಳದಲ್ಲಿ ಬೇರೇನನ್ನೋ ಇಟ್ಟಿರಲಿಲ್ಲ. ಇಲ್ಲ, ಬದಲಾಗಿ ಆತನು ಅದರ ಹಿನ್ನೆಲೆಯ ಭಾವವನ್ನು ತೋರಿಸುವ ಮೂಲಕ ಅದರ ಬಲವನ್ನು ಆಳಗೊಳಿಸಿದ್ದನು ಮತ್ತು ವಿಸ್ತಾರಗೊಳಿಸಿದ್ದನು. ಸಹೋದರತ್ವದ ಬಗ್ಗೆ ಒಂದು ಉಚ್ಛತಮ ನಿಯಮವು ಯಾವಾಗಲೂ ಇಟ್ಟುಕೊಳ್ಳುವ ಮನಸ್ತಾಪವನ್ನು ಕೊಲೆಪಾತವೆಂದು ತೀರ್ಪಿಸುತ್ತದೆ. ಶುದ್ಧತೆಯ ಒಂದು ಉಚ್ಛತ್ತಮ ನಿಯಮವು, ಕಾಮಿಸುವ ಯೋಚನೆ ಮಾಡುತ್ತಾ ಇರುವದನ್ನು ವ್ಯಭಿಚಾರವೆಂದು ಖಂಡಿಸುತ್ತದೆ. ಮದುವೆಯ ಕುರಿತಾದ ಒಂದು ಉಚ್ಛತಮ ನಿಯಮವು ವಿವಾಹವಿಚ್ಚೇಧದ ಕ್ಷುಲ್ಲಕ ಕಾರಣಗಳನ್ನು ವ್ಯಭಿಚಾರಿ ಪುನರ್ವಿವಾಹಗಳಿಗೆ ನಡಿಸುವ ಮಾರ್ಗವೆಂದು ನಿರಾಕರಿಸುತ್ತದೆ. ಸತ್ಯನುಡಿಯುವ ವಿಷಯವಾದ ಒಂದು ಉಚ್ಛತಮ ನಿಯಮವು ಪದೆಪದೇ ಆಣೆ ಇಡುವುದನ್ನು ಅನಾವಶ್ಯಕವೆಂದು ತೋರಿಸುತ್ತದೆ. ದೀನತೆಯ ಕುರಿತಾದ ಒಂದು ಉಚ್ಛತ್ತಮ ನಿಯಮವು ಪ್ರತೀಕಾರ ಮಾಡುವದನ್ನು ಬದಿಗೆ ತಳ್ಳುತ್ತದೆ. ಪ್ರೀತಿಯ ಕುರಿತಾದ ಒಂದು ಉಚ್ಛತಮ ಸೂತ್ರವು ಸೀಮಿತಗಳಿಲ್ಲದ ದೈವಿಕ ಪ್ರೀತಿಗಾಗಿ ಕೇಳಿಕೊಳ್ಳುತ್ತದೆ.
21. ರಬ್ಬಿಗಳ ಸ್ವನೀತಿಯ ಸಂಬಂಧದಲ್ಲಿ ಯೇಸುವಿನ ಸದ್ಭೋದೆಯು ಏನನ್ನು ವ್ಯಕ್ತಪಡಿಸಿತು, ಮತ್ತು ಜನರ ಗುಂಪು ಬೇರೆ ಏನನ್ನು ಕಲಿಯಲಿಕ್ಕಿತ್ತು?
21 ಅಂಥ ಎಂದೂ ಕೇಳಿರದ ಸದ್ಭೋದನೆಗಳು ಅವನನ್ನು ಮೊತ್ತಮೊದಲಾಗಿ ಆಲೈಸಿದವರ ಮೇಲೆ ಎಂಥ ಪ್ರಬಲವಾದ ಅಚ್ಚೊತ್ತನ್ನು ಹಾಕಿರಬೇಕು! ರಬ್ಬೀಗಳ ಸಂಪ್ರದಾಯಗಳಿಗೆ ಅಡಿಯಾಳಾಗುವದರಿಂದ ಬರುವ ಕಪಟದ ಸ್ವನೀತಿಯನ್ನು ಎಷ್ಟು ನಿರರ್ಥಕವೆಂದು ಅವು ತೋರಿಸಿಕೊಟ್ಟವು. ಆದರೆ ಯೇಸು ತನ್ನ ಪರ್ವತ ಪ್ರಸಂಗವನ್ನು ಮುಂದುವರಿಸುತ್ತಿದ್ದಂತೆ, ದೇವರ ನೀತಿಗಾಗಿ ಹಸಿದು ಬಾಯಾರಿದ್ದ ಜನರ ಗುಂಪುಗಳು, ಅದನ್ನು ಪಡೆಯುವ ವಿಶಿಷ್ಟ ರೀತಿಯನ್ನು ಕಲಿಯಲಿಕ್ಕಿದ್ದರು, ಅದು ಹೇಗೆಂಬದನ್ನು ಹಿಂಬಾಲಿಸುವ ಲೇಖನವು ತೋರಿಸುತ್ತದೆ. (w90 10/1)
ಪುನರ್ವಿಮರ್ಶೆ ಪ್ರಶ್ನೆಗಳು
◻ ಯೆಹೂದ್ಯರು ತಮ್ಮ ಬಾಯಿಮಾತಿನ ಸಂಪ್ರದಾಯಗಳನ್ನು ನಿರ್ಮಿಸಿದ್ದೇಕೆ?
◻ ಶಾಸ್ತ್ರಿಗಳು ಮತ್ತು ಫರಿಸಾಯರು ಮತ್ತು ಸಾಮಾನ್ಯ ಜನರ ಸಂಬಂಧದಲ್ಲಿ ಯಾವ ನಾಟಕೀಯ ವಿಪರ್ಯಸತ್ತೆಯನ್ನು ಯೇಸು ಮಾಡಿದನು?
◻ ಫರಿಸಾಯರು ಮತ್ತು ಶಾಸ್ತ್ರಿಗಳು ಹೇಗೆ ದೇವರ ಮುಂದೆ ನೀತಿಯ ನಿಲುವನ್ನು ಪಡೆಯಲು ನಿರೀಕ್ಷಿಸಿದ್ದರು?
◻ ಜಾರತ್ವ ಮತ್ತು ವ್ಯಭಿಚಾರವನ್ನು ವರ್ಜಿಸುವ ದಾರಿ ಯಾವುದೆಂದು ಯೇಸು ತೋರಿಸಿದನು?
◻ ಮೋಶೆಯ ನಿಯಮಶಾಸ್ತ್ರದ ಹಿಂದಿದ್ದ ಭಾವವನ್ನು ತೋರಿಸಿದ ಮೂಲಕ, ಯಾವ ಉಚ್ಛತಮ ಮಟ್ಟಗಳನ್ನು ಯೇಸು ಸ್ಥಾಪಿಸಿದನು?