ಯೆಹೋವನ ದಿವ್ಯ ರಥ ಸಂಚರಿಸುತ್ತ ಇದೆ
“ಚಕ್ರಗಳ ಸಂಬಂಧದಲ್ಲಿ, ಅವುಗಳನ್ನು ನನ್ನ ಕಿವಿಗಳಲ್ಲಿ, ಓ ಚಕ್ರವ್ಯವಸ್ಥೆಯ! ಎಂದು ಕರೆಯಲಾಯಿತು.”—ಯೆಹೆಜ್ಕೇಲ 10:13, NW.
1. ಯೆಹೋವನಲ್ಲಿ ಯಾವ ವಿಧದ ವಾಹನವಿದೆ?
ಹೊಳಪಾದ ಜೆಟ್ ವಿಮಾನಗಳ ಈ ದಿನಗಳಲ್ಲಿ, ಲೋಕನಾಯಕರು, ಸಂಚಾರ ಕಾರ್ಯಸಾಮರ್ಥ್ಯದಲ್ಲಿ ತಾವು ಕಟ್ಟಕಡೆಯ ಸೌಕರ್ಯವನ್ನು ಅನುಭವಿಸುತ್ತಿದ್ದೇವೆಂದು ಎಣಿಸಬಹುದು. ಆದರೂ, 2,600 ವರುಷಗಳ ಹಿಂದೆ ಯೆಹೋವ ದೇವರು, ಇದುವರೆಗೆ ಯಾವ ಇಂಜಿನಿಯರನೂ ನೋಡದ ಒಂದು ಪರಮೋತ್ಕೃಷ್ಟ ಸಾರಿಗೆಯ ವ್ಯವಸ್ಥೆ ತನಗಿದೆಯೆಂದು ತೋರಿಸಿದನು. ಇದೊಂದು ಬೃಹದಾಕಾರದ ಭಯೋತ್ಪಾದಕ ರಥವಾಗಿದೆ! ವಿಶ್ವ ನಿರ್ಮಾಣಿಕನು ಇಂಥ ರಥಸದೃಶ ವಾಹನದಲ್ಲಿ ಸವಾರಿ ಮಾಡುವುದು ವಿಚಿತ್ರವೊ? ಅಲ್ಲ, ಏಕೆಂದರೆ ಯೆಹೋವನ ದಿವ್ಯ ವಾಹನ ಮನುಷ್ಯನು ರೂಪಿಸಿರುವ ಯಾವ ವಾಹನಕ್ಕಿಂತಲೂ ಎಷ್ಟೊ ಭಿನ್ನವಾಗಿದೆ.
2. ಯೆಹೋವನ ದಿವ್ಯ ರಥವನ್ನು ಯೆಹೆಜ್ಕೇಲ 1ನೆಯ ಅಧ್ಯಾಯ ಹೇಗೆ ಚಿತ್ರಿಸುತ್ತದೆ, ಮತ್ತು ಪ್ರವಾದಿ ಪ್ರಥಮವಾಗಿ ಯಾರ ಕಡೆಗೆ ಗಮನ ಸೆಳೆಯುತ್ತಾನೆ?
2 ಯೆಹೆಜ್ಕೇಲನ ಪ್ರವಾದನೆಯ 1ನೆಯ ಅಧ್ಯಾಯದಲ್ಲಿ, ಯೆಹೋವನು ಮಹಾ ದಿವ್ಯ ರಥವೊಂದರಲ್ಲಿ ಸವಾರಿ ಮಾಡುವುದನ್ನು ಚಿತ್ರಿಸಲಾಗಿದೆ. ಈ ಭಯೋತ್ಪಾದಕವಾದ ನಾಲ್ಕು ಚಕ್ರಗಳ ವಾಹನವು ಸ್ವಯಂಚಾಲಕವಾಗಿದ್ದು ಅದ್ಭುತಕರವಾದ ವಿಷಯಗಳನ್ನು ಮಾಡಬಲ್ಲದು. ಯೆಹೆಜ್ಕೇಲನು ಸಾ.ಶ.ಪೂ. 613ರಲ್ಲಿ ಪುರಾತನಕಾಲದ ಬಾಬೆಲಿನ ಒಂದು ಕಾಲುವೆಯ ಬಳಿಯಲ್ಲಿದ್ದಾಗ, ಒಂದು ದರ್ಶನದಲ್ಲಿ ಈ ಸ್ವರ್ಗೀಯ ರಥವನ್ನು ನೋಡಿದನು. ಪ್ರವಾದಿಯು ಪ್ರಥಮವಾಗಿ, ಆ ದಿವ್ಯ ರಥದಲ್ಲಿ ಸೇವೆ ಮಾಡುವವರ ಕಡೆಗೆ ಗಮನವನ್ನು ಸೆಳೆಯುತ್ತಾನೆ. ನಾವು ಓದುವಾಗ, ಯೆಹೆಜ್ಕೇಲನು ನೋಡಿದುದನ್ನು ಚಿತ್ರೀಕರಿಸಲು ಪ್ರಯತ್ನಿಸೋಣ.
ನಾಲ್ಕು ಜೀವಿಗಳು
3. ನಾಲ್ಕು ಕೆರೂಬಿಗಳಲ್ಲಿ ಪ್ರತಿಯೊಂದರ ನಾಲ್ಕು ಮುಖಗಳು ಏನು ಸೂಚಿಸುತ್ತವೆ?
3 ಯೆಹೆಜ್ಕೇಲನು ವರದಿ ಮಾಡುವುದು: “ಇಗೋ, ನಾನು ನೋಡಿದೆನು; ಬಡಗಲಿಂದ ಬಿರುಗಾಳಿಯು ಬೀಸಿತು, ಎಡೆಬಿಡದೆ ಝಗಝಗಿಸುವ ಜ್ವಾಲೆಯುಳ್ಳ ಮಹಾ ಮೇಘವು ಕಾಣಿಸಿತು. . . ಅದರ ಮಧ್ಯದೊಳಗಿಂದ ನಾಲ್ಕು ಜೀವಿಗಳ ಆಕಾರಗಳು ಕಂಡುಬಂದವು.” (ಯೆಹೆಜ್ಕೇಲ 1:4, 5) ಈ ನಾಲ್ಕು ಜೀವಿಗಳಲ್ಲಿ ಯಾ ಕೆರೂಬಿಯರಲ್ಲಿ ಪ್ರತಿಯೊಂದಕ್ಕೆ ನಾಲ್ಕು ರೆಕ್ಕೆಗಳೂ ನಾಲ್ಕು ಮುಖಗಳೂ ಇದ್ದವು. ಅವುಗಳಿಗೆ ಯೆಹೋವನ ನ್ಯಾಯವನ್ನು ಸೂಚಿಸುವ ಸಿಂಹದ ಮುಖ, ದೇವರ ಶಕ್ತಿಯನ್ನು ಪ್ರತಿನಿಧೀಕರಿಸುವ ಹೋರಿಯ ಮುಖ, ಆತನ ವಿವೇಕವನ್ನು ಸೂಚಿಸುವ ಗರುಡಪಕ್ಷಿಯ ಮುಖವಿತ್ತು. ಯೆಹೋವನ ಪ್ರೀತಿಯನ್ನು ತೋರಿಸುವ ಮನುಷ್ಯನ ಮುಖವೂ ಅವುಗಳಿಗಿತ್ತು.—ಧರ್ಮೋಪದೇಶಕಾಂಡ 32:4; ಯೋಬ 12:13; ಯೆಶಾಯ 40:26; ಯೆಹೆಜ್ಕೇಲ 1:10; 1 ಯೋಹಾನ 4:8.
4. ಕೆರೂಬಿಗಳಿಗೆ ನಾಲ್ಕು ಮುಖಗಳೇಕೆ, ಮತ್ತು ಕೆರೂಬಿಗಳ ವೇಗವೆಷ್ಟು?
4 ಪ್ರತಿ ಕೆರೂಬಿಗೆ ನಾಲ್ಕರಲ್ಲಿ ಒಂದು ದಿಕ್ಕಿಗೆ ಮಖಮಾಡಿದ ಮುಖವಿತ್ತು. ಹೀಗೆ, ಕೆರೂಬಿಗಳು ತತ್ಕ್ಷಣ ದಿಕ್ಕು ಬದಲಾಯಿಸಿ ಅಪೇಕ್ಷಿತ ದಿಕ್ಕನ್ನು ನೋಡುವ ಮುಖವನ್ನು ಹಿಂಬಾಲಿಸಶಕ್ತವಾಗಿದ್ದವು. ಆದರೆ ಕೆರೂಬಿಗಳ ವೇಗವೆಷ್ಟಾಗಿತ್ತು? ಮಿಂಚಿನಷ್ಟು ವೇಗವಾಗಿ ಅವು ಚಲಿಸಶಕ್ತವಾಗಿದ್ದವು! (ಯೆಹೆಜ್ಕೇಲ 1:14) ಯಾವ ಮನುಷ್ಯ ನಿರ್ಮಿತ ವಾಹನವೂ ಇಂಥ ವೇಗವನ್ನು ಎಂದಿಗೂ ಮುಟ್ಟಿರುವುದಿಲ್ಲ.
5. ರಥದ ಚಕ್ರಗಳು ಮತ್ತು ಅವುಗಳ ಸುತ್ತುಕಟ್ಟುಗಳನ್ನು ಯೆಹೆಜ್ಕೇಲನು ಹೇಗೆ ವರ್ಣಿಸುತ್ತಾನೆ?
5 ಥಟ್ಟನೆ, ರಥದ ಚಕ್ರಗಳು ಗೋಚರವಾಗುತ್ತವೆ. ಅವೆಷ್ಟು ಅಸಾಧಾರಣ! 16 ಮತ್ತು 18ನೆಯ ವಚನಗಳು ಹೇಳುವುದು: “ಆ ಚಕ್ರಗಳ ವರ್ಣನೆಯೂ ರಚನೆಯೂ ಹೇಗಿದ್ದವೆಂದರೆ . . . ಒಂದು ಚಕ್ರದೊಳಗೆ ಇನ್ನೊಂದು ಚಕ್ರವು ರಚಿಸಿದಂತಿತ್ತು. ಗಾಲಿಗಳ ಸುತ್ತಣ ಭಾಗಗಳು ಎತ್ತರವಾಗಿಯೂ ಭಯಂಕರವಾಗಿಯೂ ಇದ್ದವು. ಈ ಭಾಗಗಳ ಎಲ್ಲಾ ಕಡೆಗಳಲ್ಲಿಯೂ ತುಂಬಾ ಕಣ್ಣುಗಳಿದ್ದವು.” ಪ್ರತಿಯೊಂದು ಕೆರೂಬಿಯ ಪಕ್ಕದಲ್ಲಿ ಒಂದೊಂದು ಚಕ್ರವೆಂದರೆ ನಾಲ್ಕು ಸಂಬಂಧಿತ ಸ್ಥಳಗಳಲ್ಲಿ ನಾಲ್ಕು ಚಕ್ರಗಳಾಗುತ್ತವೆ. ಈ ಚಕ್ರಗಳು ಪಾರದರ್ಶಕ ಯಾ ಪಾರದೀಪಕವಾದ ಹಳದಿ ಯಾ ಪಚ್ಚೆ ರತ್ನವಾದ ಕ್ರಿಸೊಲೈಟಿನಂತೆ ಹೊಳಿಯುತ್ತಿದ್ದವು. ಇದು ಈ ಮಹಿಮಾಭರಿತ ದರ್ಶನಕ್ಕೆ ಬೆಳಕು ಮತ್ತು ಸೌಂದರ್ಯವನ್ನು ಕೂಡಿಸಿದವು. ಗಾಲಿಯ ಸುತ್ತುಕಟ್ಟುಗಳಲ್ಲಿ “ಎಲ್ಲಾ ಕಡೆಗಳಲ್ಲಿಯೂ ತುಂಬಾ ಕಣ್ಣು”ಗಳಿರುವುದರಿಂದ ಅವು ಕುರುಡಾಗಿ ಅದೊ ಇದೊ ದಿಕ್ಕಿನಲ್ಲಿ ಹೋಗುತ್ತಿರಲಿಲ್ಲ. ಮತ್ತು ಆ ಚಕ್ರಗಳು ಭಾರಿ ಎತ್ತರವಾಗಿದ್ದವು ಮತ್ತು ಹೀಗೆ ಅವು ಮಹಾ ದೂರವನ್ನು ತಮ್ಮ ಅಕ್ಷದ ಒಂದು ಸುತ್ತಿನಲ್ಲಿಯೆ ಮುಟ್ಟಶಕ್ತವಾಗಿದ್ದವು. ಅವು, ಕೆರೂಬಿಗಳಂತೆಯೆ, ಮಿಂಚಿನಷ್ಟು ವೇಗವಾಗಿ ಚಲಿಸಶಕ್ತವಾಗಿದ್ದವು.
ಚಕ್ರಗಳೊಳಗೆ ಚಕ್ರಗಳು
6. (ಎ) ರಥಕ್ಕೆ ಚಕ್ರಗಳೊಳಗೆ ಚಕ್ರಗಳು ಇದ್ದದ್ದು ಹೇಗೆ? (ಬಿ) ಚಕ್ರಗಳು ತಮ್ಮ ಚಲನೆಯ ದಿಕ್ಕನ್ನು ಯಾವುದಕ್ಕೆ ಹೊಂದಿಸಿಕೊಂಡವು?
6 ವಿಚಿತ್ರವಾದ ಇನ್ನೊಂದು ಸಂಗತಿಯಿತ್ತು. ಒಂದು ಚಕ್ರದೊಳಗೆ ಇನ್ನೊಂದು ಚಕ್ರವಿತ್ತು—ಒಂದೇ ವ್ಯಾಸದ ಚಕ್ರ, ಅದೇ ವ್ಯಾಸದ ಇನ್ನೊಂದರ ಬುಡಕ್ಕೆ ಅಡವ್ಡಾಗಿ ಜೋಡಿಸಲ್ಪಟ್ಟಿತ್ತು. ಈ ರೀತಿಯಲ್ಲಿ ಮಾತ್ರ ಚಕ್ರಗಳು “ನಾಲ್ಕು ಕಡೆಗಳಲ್ಲಿ ಯಾವ ಕಡೆಗಾದರೂ ಹೊರಳತ್ತಿದ್ದವು” ಎಂದು ಹೇಳಸಾಧ್ಯವಿತ್ತು. (17ನೆಯ ವಚನ) ಒಂದು ಕ್ಷಣದಲ್ಲಿ, ಚಕ್ರಗಳು ದಿಕ್ಕು ಬದಲಾಯಿಸಶಕ್ತವಾಗಿದ್ದವು, ಹೇಗೆಂದರೆ ಚಕ್ರದ ಒಂದೊಂದು ಪಕ್ಕ ಒಂದೊಂದು ದಿಕ್ಕನ್ನು ಮುಖ ಮಾಡಿ ನಿಂತಿದ್ದವು. ಚಕ್ರಗಳು ತಮ್ಮ ದಿಕ್ಕನ್ನು ಕೆರೂಬಿಗಳದ್ದಕ್ಕೆ ಹೊಂದಿಸಿಕೊಂಡಿದ್ದವು. ಈ ನಾಲ್ಕು ಚಕ್ರಗಳ ಮೇಲೆ ದೇವರ ರಥದ ಒಡಲು ನೀರಿನ ಮೇಲ್ಮೈಯನ್ನು ಗಾಳಿಯ ದಿಂಬಿನ ಮೇಲೆ ಸೋಕಿಕೊಂಡು ಹೋಗುವ ಬಹುಶಕ್ತಿಯ ದೋಣಿಯೋಪಾದಿ, ಅದೃಶ್ಯ ಆಧಾರದಿಂದ ಚಲಿಸಸಾಧ್ಯವಿತ್ತು.
7. ಚಕ್ರಗಳ ಶಕ್ತಿಯ ಮೂಲ ಯಾವುದಾಗಿತ್ತು?
7 ಆ ನಾಲ್ಕು ಕೆರೂಬಿಗಳ ಚಲನೆಗೆ ಹೊಂದಿಕೊಳ್ಳುವಂತೆ ಆ ಚಕ್ರಗಳು ಎಲ್ಲಿಂದ ಶಕ್ತಿ ಪಡೆದವು? ಸರ್ವಶಕ್ತ ದೇವರ ಪವಿತ್ರಾತ್ಮದಿಂದಲೆ. 20ನೆಯ ವಚನ ಹೇಳುವುದು: “ದೇವರಾತ್ಮವು ಸಾಗಿಸಿದ ಕಡೆಗೇ ಸಾಗಿದವು. ಜೀವಿಗಳೊಳಗಣ ಆತ್ಮವು ಚಕ್ರಗಳಲ್ಲಿಯೂ” ಇತ್ತು. ಕೆರೂಬಿಯರಲ್ಲಿದ್ದ ದೇವರ ಕ್ರಿಯಾಶೀಲ ಶಕ್ತಿಯೇ ಆ ಚಕ್ರಗಳಲ್ಲಿಯೂ ಇತ್ತು.
8. ಚಕ್ರಗಳಿಗೆ ಯಾವ ಹೆಸರು ಕೊಡಲ್ಪಟ್ಟಿತು, ಮತ್ತು ಏಕೆ?
8 ಆ ಚಕ್ರಗಳನ್ನು “ಚಕ್ರವ್ಯವಸ್ಥೆ” ಎಂದು ಕರೆಯಲಾಗಿದೆ. (ಯೆಹೆಜ್ಕೇಲ 10:13, NW) ಪ್ರತಿಯೊಂದು ಚಕ್ರ ಮಾಡುವ ಕೆಲಸದ ಕಾರಣ ಇದಕ್ಕೆ ಈ ಹೆಸರೆಂದು ವ್ಯಕ್ತವಾಗುತ್ತದೆ. ಅದು ಹೊರಳುತ್ತದೆ ಯಾ ತಿರುಗುತ್ತದೆ. ದಿವ್ಯ ರಥದ ಈ ಭಾಗವನ್ನು ಹೀಗೆ ಹೆಸರಿಸಿರುವುದು ದಿವ್ಯ ರಥವು ಚಲಿಸುವ ವೇಗಕ್ಕೆ ಗಮನವನ್ನೆಳೆಯುತ್ತದೆ. ಅದರ ಚಕ್ರಗಳು ಅಷ್ಟು ವೇಗವಾಗಿ ಸುತ್ತಿದರೂ ತುಂಬ ಕಣ್ಣುಗಳಿರುವ ಕಾರಣ ಅವುಗಳಿಗೆ ಸದಾ ದಾರಿ ಕಾಣುತ್ತಿತ್ತು.
9. ರಥದ ವೇಗವಾಗಿ ಚಲಿಸುವ ನಾಲ್ಕು ಚಕ್ರಗಳ ಮೇಲೆ ಏನಿತ್ತೆಂದು ಯೆಹೆಜ್ಕೇಲನು ಹೇಗೆ ವರ್ಣಿಸಿದನು?
9 ಆದರೆ ಈಗ ನಾವು, ಆ ಭಯಂಕರ ಎತ್ತರವಾಗಿರುವ, ವೇಗವಾಗಿ ಚಲಿಸುವ ಗಾಲಿಗಳ ಮೇಲೆ ಏನಿದೆಯೆಂದು ನೋಡೋಣ. ಯೆಹೆಜ್ಕೇಲ 1ನೆಯ ಅಧ್ಯಾಯದ 22ನೆಯ ವಚನ ಹೇಳುವುದು: “ಭೀಕರವಾದ ಮಂಜುಗಡ್ಡೆಯಂತೆ ಥಳಥಳಿಸುವ ಒಂದು ತರದ ನೆಲಗಟ್ಟು ಆ ಜೀವಿಗಳ ತಲೆಯ ಮೇಲ್ಗಡೆ ಹಾಕಿತ್ತು.” ಆ ನೆಲಗಟ್ಟು ಗಟ್ಟಿಯಾಗಿದ್ದರೂ, ಥಳಥಳಿಸುವ “ಭೀಕರವಾದ ಮಂಜುಗಡ್ಡೆಯಂತೆ” ಪಾರದೀಪಕವಾಗಿತ್ತು. ಸಾವಿರಾರು ವಜ್ರಗಳ ಮೇಲೆ ಸೂರ್ಯಪ್ರಕಾಶ ಬಡಿಯುವಾಗ ಅವು ಹೇಗೆ ಥಳಥಳಿಸುತ್ತವೆಯೊ ಹಾಗೆಯೆ ಇದೂ ಥಳಥಳಿಸುತ್ತಿತ್ತು. ಎಷ್ಟು ಭಯಭಕ್ತಿ ಉತ್ಪಾದಕ ಸಂಗತಿ!
ಮಹಿಮಾಭರಿತ ರಥ ಸವಾರ
10. (ಎ) ಸಿಂಹಾಸನವನ್ನು ಮತ್ತು ಸಿಂಹಾಸನದ ಮೇಲೆ ಇದ್ದಾತನನ್ನು ಹೇಗೆ ವರ್ಣಿಸಲಾಗಿದೆ? (ಬಿ) ರಥ ಸವಾರನು ಮಹಿಮೆಯಿಂದ ಆವೃತನಾಗಿರುವುದು ಯಾವುದನ್ನು ಸೂಚಿಸುತ್ತದೆ?
10 ಸವಾರನು ಯೆಹೆಜ್ಕೇಲನಿಗೆ ಮಾತನಾಡುವಂತೆ ರಥ ನಿಲ್ಲುತ್ತದೆಂದು ವ್ಯಕ್ತವಾಗುತ್ತದೆ. ಆ ನೆಲಗಟ್ಟಿನ ಮೇಲೆ, ನೀಲಮಣಿಯಂತೆ ಯಾ ಕಡುನೀಲ ಬಣ್ಣದಂತೆ ತೋರುವ ಸಿಂಹಾಸನದ ಹೋಲಿಕೆಯಿದೆ. ಆ ಸಿಂಹಾಸನದ ಮೇಲೆ ಮನುಷ್ಯನಂತೆ ತೋರುವ ಯಾವನೊ ಇದ್ದಾನೆ. ಯೆಹೆಜ್ಕೇಲನು ಈ ದೈವಿಕ ತೋರಿಕೆಯನ್ನು ಮನುಷ್ಯ ರೂಪದ ಮೂಲಕ ಅತಿ ಹೆಚ್ಚು ಗಣ್ಯ ಮಾಡಸಾಧ್ಯವಿತ್ತು. ಆದರೆ ಆ ಮನುಷ್ಯ ರೂಪವು ಮಹಿಮೆಯಿಂದ ತುಂಬಿತ್ತು, ಚಿನ್ನ ಮತ್ತು ಬೆಳ್ಳಿಯ ಹೊಳೆಯುವ ಮಿಶ್ರಲೋಹವಾದ ಇಲೆಕ್ಟ್ರಮಿನಂತೆ ಹೊಳೆಯುತ್ತಿತ್ತು. ಎಂಥ ಕಂಪಿಸುವ ಸೌಂದರ್ಯ! ಈ ಮನುಷ್ಯರೂಪದ ಸೊಂಟದಿಂದ ಕೆಳಗೂ ಮೇಲೆಯೂ ಈ ಸೊಬಗುಳ್ಳ ಮಹಿಮೆ ಮೇಲೆಯೂ ಕೆಳಗೂ ವ್ಯಾಪಿಸಿದೆ. ಹೀಗೆ, ಇಡೀ ರೂಪವೆ ಮಹಿಮೆಯಿಂದಾವೃತವಾಗಿದೆ. ಇದು, ಯೆಹೋವನು ವರ್ಣನಾತೀತವಾಗಿ ಮಹಿಮಾಭರಿತನೆಂದು ಸೂಚಿಸುತ್ತದೆ. ಇದಲ್ಲದೆ, ರಥದ ಸವಾರನು ಒಂದು ಸೊಗಸಾದ ಮಳೆಬಿಲಿನ್ಲ ಜೊತೆಯಲ್ಲಿದ್ದಾನೆ. ಬಿರುಗಾಳಿ ಮಳೆ ಮುಗಿದಾಗ ತೋರಿಬರುವ ಮಳೆಬಿಲ್ಲು ಎಂಥ ಪ್ರಶಾಂತಿ ಮತ್ತು ನೆಮ್ಮದಿಯನ್ನು ಸೂಚಿಸುತ್ತದೆ! ಇಂಥ ಪ್ರಶಾಂತ ಮನೋಭಾವವುಳ್ಳ ಯೆಹೋವನು ತನ್ನ ಗುಣಗಳಾದ ವಿವೇಕ, ನ್ಯಾಯ, ಶಕ್ತಿ ಮತ್ತು ಪ್ರೀತಿಯನ್ನು ಪರಿಪೂರ್ಣ ಸಮತೆಯಲ್ಲಿ ಇಟ್ಟುಕೊಳ್ಳುತ್ತಾನೆ.
11. ಯೆಹೋವನ ರಥ ಮತ್ತು ಸಿಂಹಾಸನದ ದರ್ಶನದಿಂದ ಯೆಹೆಜ್ಕೇಲನು ಹೇಗೆ ಪ್ರಭಾವಿತನಾದನು?
11 ಯೆಹೋವನ ರಥವೂ ಸಿಂಹಾಸನವೂ ಬೆಳಕು ಮತ್ತು ಸುಂದರ ವರ್ಣಗಳಿಂದ ಆವೃತವಾಗಿವೆ. ಅಂಧಕಾರ ಮತ್ತು ಇಂದ್ರಜಾಲದ ಪ್ರಭುವಾದ ಸೈತಾನನಿಗಿಂತ ಇದೆಷ್ಟು ವ್ಯತ್ಯಸ್ತ! ಮತ್ತು ಇವೆಲ್ಲವುಗಳಿಂದ ಯೆಹೆಜ್ಕೇಲನು ಹೇಗೆ ಪ್ರಭಾವಿತನಾದನು? “ಇದು ಕಣ್ಣಿಗೆ ಬೀಳಲು ನಾನು ಅಡ್ಡಬಿದ್ದು ಮಾತಾಡುವಾತನ ವಾಣಿಯನ್ನು ಕೇಳಿದೆನು” ಎಂದು ಅವನು ಹೇಳಿದನು.—ಯೆಹೆಜ್ಕೇಲ 1:28.
ರಥವು ಚಿತ್ರಿಸಿದ ವಸ್ತು
12. ಯೆಹೋವನ ದಿವ್ಯ ರಥದಿಂದ ಯಾವುದು ಚಿತ್ರಿಸಲ್ಪಡುತ್ತದೆ?
12 ಈ ಆಶ್ಚರ್ಯಕರವಾದ ರಥದಿಂದ ಯಾವುದು ಚಿತ್ರಿಸಲ್ಪಟ್ಟಿದೆ? ಯೆಹೋವ ದೇವರ ದಿವ್ಯ ಯಾ ಸ್ವರ್ಗೀಯ ಸಂಸ್ಥೆಯೆ. ಅದೃಶ್ಯ ಮಂಡಲದಲ್ಲಿರುವ ಆತನ ಸಕಲ ಆತ್ಮಜೀವಿಗಳನ್ನು—ಸೆರಾಫರು, ಕೆರೂಬಿಗಳು ಮತ್ತು ದೇವದೂತರನ್ನು ಇದು ಒಳಗೊಂಡಿದೆ. ಯೆಹೋವನು ಸರ್ವೋನ್ನತ ದೇವರಾಗಿರುವುದರಿಂದ, ಅತನ ಸಕಲ ಆತ್ಮ ಜೀವಿಗಳು ಆತನಿಗೆ ಅಧೀನರು, ಮತ್ತು ಆತನು ಧರ್ಮಶೀಲತೆಯಿಂದ ಅವರ ಮೇಲೆ ಅಧಿಕಾರ ನಡೆಸಿ ತನ್ನ ಉದ್ದೇಶಾನುಸಾರ ಅವರನ್ನು ಉಪಯೋಗಿಸುತ್ತಾನೆ ಎಂಬರ್ಥದಲ್ಲಿ ಆತನು ಅವರ ಮೇಲೆ ಸವಾರಿ ಮಾಡುತ್ತಾನೆ.—ಕೀರ್ತನೆ 103:20.
13. (ಎ) ಯೆಹೋವನು ತನ್ನ ಸಂಘಟನೆಯ ಮೇಲೆ ಸವಾರಿ ಮಾಡುತ್ತಾನೆಂದು ಏಕೆ ಹೇಳಬಹುದು? (ಬಿ) ಯೆಹೋವನ ಸಂಚರಿಸುತ್ತಿರುವ ನಾಲ್ಕು ಚಕ್ರಗಳ ರಥದ ದರ್ಶನ ನಿಮ್ಮನ್ನು ಹೇಗೆ ಪ್ರಭಾವಿಸುತ್ತದೆ?
13 ಯೆಹೋವನು ಈ ಸಂಘಟನೆಯ ಮೇಲೆ ರಥದೋಪಾದಿ, ಆತನ ಆತ್ಮವು ಅದನ್ನು ಎಲ್ಲಿಗೆ ಪ್ರೇರಿಸುತ್ತದೊ ಅಲ್ಲಿಗೆ ಅದು ಸಂಚರಿಸುವಂತೆ ಮಾಡಿ, ಸವಾರಿ ಮಾಡುತ್ತಾನೆ. ಅದು ಸಿಕ್ಕಾಬಟ್ಟೆ, ನಿಯಂತ್ರಣವಿಲ್ಲದೆ ಯಾ ಬುದ್ಧಿಶಕ್ತಿಯ ಮೇಲ್ವಿಚಾರಣೆಯಿಲ್ಲದೆ ಓಡಿಯಾಡುವುದಿಲ್ಲ. ಅದು ಎಲ್ಲಿಗೆ ಹೋಗಲು ಮನಸ್ಸು ಮಾಡುತ್ತದೊ ಅಲ್ಲಿಗೆ ಹೋಗುವಂತೆ ದೇವರು ಈ ಸಂಸ್ಥೆಯನ್ನು ಬಿಡುವುದಿಲ್ಲ. ಬದಲಿಗೆ, ಅದು ಆತನ ನಿರ್ದೇಶನವನ್ನು ಅನುಸರಿಸುತ್ತದೆ. ದೇವರ ಪೂರ್ತಿ ಉದ್ದೇಶ ಸಾಧನೆಯ ದೃಷ್ಟಿಯಿಂದ ಎಲ್ಲರೂ ಏಕತೆಯಿಂದ ಮುಂದೆ ನಡೆಯುತ್ತಾರೆ. ಯೆಹೋವನ ಸಂಚರಿಸುತ್ತಿರುವ ನಾಲ್ಕು ಗಾಲಿಗಳ ಈ ದಿವ್ಯ ರಥದ ದರ್ಶನದಿಂದ ಎಷ್ಟೊಂದು ಅದ್ಭುತಕರವಾದ ಸ್ವರ್ಗೀಯ ಸಂಘಟನೆಯೊಂದು ತೋರಿಸಲ್ಪಟ್ಟಿದೆ! ಇದಕ್ಕೆ ಹೊಂದಿಕೆಯಾಗಿಯೆ ಯೆಹೋವನ ಸಂಘಟನೆಯು ಚಚ್ಚೌಕವಾಗಿ, ಪರಿಪೂರ್ಣ ಸಮತೆಯುಳ್ಳದ್ದಾಗಿ ಪ್ರತಿನಿಧೀಕರಿಸಲ್ಪಟ್ಟಿದೆ.
ಕಾವಲುಗಾರನಾಗಿ ನೇಮಿಸಲ್ಪಟ್ಟದ್ದು
14. ಪ್ರವಾದಿ ಯೆಹೆಜ್ಕೇಲನು ಯಾರನ್ನು ಚಿತ್ರಿಸುತ್ತಾನೆ?
14 ಆದರೆ ಪ್ರವಾದಿ ಯೆಹೆಜ್ಕೇಲನಿಂದ ಯಾರು ಚಿತ್ರಿಸಲ್ಪಟ್ಟಿದ್ದಾರೆ? ಇತಿಹಾಸದ ನಿಜತ್ವಗಳಿಂದ ಸ್ಪಷ್ಟವಾಗಿಗುವುದೇನಂದರೆ ಆತ್ಮಾಭಿಷಿಕ್ತ ಯೆಹೋವನ ಸಾಕ್ಷಿಗಳ ಸಮುದಾಯವು ಈ ದಿವ್ಯ ರಥದೊಂದಿಗೆ ಜೊತೆಗೊಂಡಿದೆ. ಹೀಗೆ, ಯೆಹೆಜ್ಕೇಲನು 1919ರಿಂದಿರುವ ಅಭಿಷಿಕ್ತ ಉಳಿಕೆಯವರನ್ನು ಉತ್ತಮವಾಗಿ ಚಿತ್ರಿಸುತ್ತಾನೆ. ಆತ್ಮಿಕವಾಗಿ, ದೇವರ ಸ್ವರ್ಗೀಯ ಸಂಘಟನೆ ಆ ವರುಷದಿಂದ ಅಭಿಷಿಕ್ತ ಉಳಿಕೆಯವರೊಂದಿಗೆ, ಅವರು ಇಡೀ ಜಗತ್ತಿಗೆ ಯೆಹೋವನ ಸಾಕ್ಷಿಗಳಾಗುವಂತೆ ಅವರನ್ನು ಚೇತರಿಸುವ ಉದ್ದೇಶದಿಂದ ಸಂಪರ್ಕ ಬೆಳೆಸಿತು. (ಪ್ರಕಟನೆ 11:1-12 ಹೋಲಿಸಿ.) ಆಗ ಆ ರಥಸದೃಶವಾದ ಸಂಘಟನೆ, ಇಂದಿನಂತೆಯೆ ಚಲಿಸತೊಡಗಿತು. ವಾಸ್ತವವೇನಂದರೆ, ಅದರ ಪ್ರಗತಿ ಚಕ್ರಗಳು ಈಗ ಹಿಂದೆಂದಿಗಿಂತಲೂ ವೇಗವಾಗಿ ಉರುಳುತ್ತಿವೆ. ಯೆಹೋವನು ವೇಗದಿಂದ ಮುಂದಕ್ಕೆ ಸವಾರಿ ಮಾಡುತ್ತಾನೆ!
15. ದಿವ್ಯ ರಥದ ಸವಾರನ ವಾಣಿ ಏನನ್ನುತ್ತದೆ, ಮತ್ತು ಯೆಹೆಜ್ಕೇಲನು ಯಾವ ನೇಮಕ ವಡೆಯುತ್ತಾನೆ?
15 ಈ ದಿವ್ಯ ರಥ ತನ್ನ ಮುಂದೆ ಬಂದು ಏಕೆ ನಿಂತಿತೆಂದು ಯೆಹೆಜ್ಕೇಲನು ತಿಳಿಯಬಯಸಿದನು. ರಥದಲ್ಲಿ ಆಸೀನನಾಗಿದ್ದಾತನಿಂದ ಬಂದ ವಾಣಿಯಿಂದ ಇದು ಅವನಿಗೆ ತಿಳಿದು ಬಂತು. ಭಯಭಕ್ತಿ ಹುಟ್ಟಿಸುವ ಈ ದೃಶ್ಯದಿಂದ ಪರವಶನಾದ ಯೆಹೆಜ್ಕೇಲನು ಆಗ ಅಡ್ಡಬಿದ್ದನು. ಈಗ ಆ ದಿವ್ಯ ರಥದ ಸವಾರನ ವಾಣಿಯನ್ನು ಕೇಳಿರಿ: “ನರಪುತ್ರನೇ, ಎದ್ದು ನಿಂತುಕೋ, ನಿನ್ನ ಸಂಗಡ ಮಾತಾಡುವೆನು.” (ಯೆಹೆಜ್ಕೇಲ 2:1) ಬಳಿಕ ಯೆಹೋವನು ಯೆಹೆಜ್ಕೇಲನನ್ನು ಕಾವಲುಗಾರನಾಗಲು ಮತ್ತು ದ್ರೋಹಿಗಳಾದ ಇಸ್ರಾಯೇಲ್ಯರನ್ನು ಎಚ್ಚರಿಸಲು ನೇಮಿಸಿದನು. ದೈವಿಕ ನಾಮದಲ್ಲಿ ಮಾತಾಡಲಿಕ್ಕೂ ಅವನು ನೇಮಿಸಲ್ಪಟ್ಟನು. ಯೆಹೆಜ್ಕೇಲ ಹೆಸರಿನ ಅರ್ಥ “ದೇವರು ಬಲಪಡಿಸುತ್ತಾನೆ” ಎಂದಾಗಿದೆ. ಹೀಗೆ, ದೇವರು ಯೆಹೆಜ್ಕೇಲ ವರ್ಗವನ್ನು ಬಲಪಡಿಸಿ, ಅವರು ಕ್ರೈಸ್ತ ಪ್ರಪಂಚಕ್ಕೆ ಕಾವಲುಗಾರನಾಗಿರುವಂತೆ ನೇಮಿಸಿ ಅವರನ್ನು ಕಳುಹಿಸಿದ್ದಾನೆ.
16, 17. (ಎ) ದಿವ್ಯ ರಥದರ್ಶನವು ಯೆಹೆಜ್ಕೇಲನಿಗೆ ಹೇಗೆ ಪ್ರಯೋಜನ ಕೊಟ್ಟಿತು? (ಬಿ) ನಮ್ಮ ದಿನಗಳಲ್ಲಿ, ದಿವ್ಯ ರಥದರ್ಶನದ ತಿಳಿವಳಿಕೆ ಯೆಹೆಜ್ಕೇಲ ವರ್ಗವನ್ನೂ ಮಹಾ ಸಮೂಹವನ್ನೂ ಹೇಗೆ ಪ್ರಭಾವಿಸಿದೆ?
16 ಈ ದಿವ್ಯ ರಥದ ದರ್ಶನವು ಯೆಹೆಜ್ಕೇಲನನ್ನು ಸ್ತಿಮಿತಕ್ಕೆ ತಂದು ಸ್ತಬ್ದನಾಗಿ ಮಾಡಿತು. ಅದು ಅವನನ್ನು ಬರಲಿದ್ದ ಯೆರೂಲೇಮಿನ ನಾಶನದ ಎಚ್ಚರಿಕೆ ಕೊಡಲು ಕಾವಲುಗಾರನಾಗಿ ಅವನ ನೇಮಕಕ್ಕೂ ಅವನನ್ನು ತಯಾರಿಸಿತು. ಇದು ಇಂದಿನ ಕಾವಲುಗಾರ ವರ್ಗದ ವಿಷಯದಲ್ಲೂ ಸತ್ಯವಾಗಿದೆ. ಸಂಚರಿಸುತ್ತಿರುವ ಯೆಹೋವನ ದಿವ್ಯ ರಥದ ದರ್ಶನದ ಕುರಿತು ಅವರಿಗೆ ಸಿಕ್ಕಿರುವ ತಿಳಿವಳಿಕೆ ಅಭಿಷಿಕ್ತ ಉಳಿಕೆಯವರ ಮೇಲೆ ಮಹಾ ಪರಿಣಾಮವನ್ನು ಮಾಡಿದೆ. ಅವರು 1931ರಲ್ಲಿ, ಒಂದನೆಯ ವಿಂಡಿಕೇಶನ್ ಪುಸ್ತಕದಿಂದ ಯೆಹೆಜ್ಕೇಲನ ದರ್ಶನದ ಕುರಿತು ಹೆಚ್ಚು ಕಲಿತರು. ಆಗ ಅವರಿಗೆ ಎಷ್ಟು ಸಮ ಮನಸ್ಸಿನ ಗಣ್ಯತೆ ಹುಟ್ಟಿತೆಂದರೆ 1931, ಒಕ್ಟೋಬರ 15ರ ಸಂಚಿಕೆಯಿಂದ 1950, ಆಗಸ್ಟ್ 1ರ ಸಂಚಿಕೆಯ ತನಕ ದ ವಾಚ್ಟವರ್ ಪತ್ರಿಕೆ ತನ್ನ ಮುಖಪುಟದ ಮೇಲೆ ಬಲಬದಿಯಲ್ಲಿ ಯೆಹೆಜ್ಕೇಲನ ದರ್ಶನದ ದಿವ್ಯ ರಥದ ಕುರಿತ ಕಲಾಕಾರನ ಕಲ್ಪನೆಯ ಚಿತ್ರವನ್ನು ಕೊಟ್ಟಿತು. ಹೀಗೆ, ಯೆಹೆಜ್ಕೇಲ ವರ್ಗವು ತಮಗೆ ಸಿಕ್ಕಿದ ನೇಮಕಾನುಸಾರ ವರ್ತಿಸಿದೆ ಮತ್ತು ಅವರು ಕಾವಲುಗಾರನಂತೆ ವರ್ತಿಸಿ ದೈವಿಕ ಎಚ್ಚರಿಕೆಯನ್ನು ಪ್ರಕಟಿಸಿದ್ದಾರೆ. ದಿವ್ಯ ರಥದಲ್ಲಿ ಸಿಂಹಾಸನಾರೂಢನಾಗಿರುವ ಯೆಹೋವನಿಂದ ಕ್ರೈಸ್ತ ಪ್ರಪಂಚದ ನಾಶದ ಸಮಯ ಎಂದೂ ಇದಕ್ಕಿಂತ ನಿಕಟವಾಗಿದ್ದದ್ದಿಲ್ಲ!
17 ಇಂದು, ಕುರಿಸದೃಶರಾದ “ಮಹಾ ಸಮೂಹ”ವೊಂದು ಅಭಿಷಿಕ್ತ ಉಳಿಕೆಯವರೊಂದಿಗೆ ಜೊತೆಸೇರಿದೆ. (ಪ್ರಕಟನೆ 7:9) ಇವರು ಇಂದು ಸೇರಿ ಕ್ರೈಸ್ತ ಪ್ರಪಂಚದ ಮತ್ತು ಈ ಸಮಸ್ತ ಪೈಶಾಚಿಕ ವ್ಯವಸ್ಥೆಯ ಮೇಲೆ ಬರಲಿರುವ ನಾಶನದ ಕುರಿತು ಎಚ್ಚರಿಸುತ್ತಿದ್ದಾರೆ. ಈ ಎಚ್ಚರಿಸುವ ಕೆಲಸ ಈಗ ವೇಗವಾಗಿ ಮುಂದುವರಿಯುತ್ತಾ ಇದೆ, ಮತ್ತು, ಪ್ರಕಟನೆ 14:6, 7, ಸೂಚಿಸುವಂತೆ, ದೇವದೂತರು ಇದಕ್ಕೆ ಬೆಂಬಲ ನೀಡುತ್ತಿದ್ದಾರೆ.
ದಿವ್ಯ ರಥದ ಜೊತೆಯಲ್ಲಿ ಚಲಿಸುವುದು
18. ದೇವದೂತರಿಂದ ಮುಂದುವರಿಯುವ ಬೆಂಬಲ ಪಡೆಯಲು ಏನು ಮಾಡತಕ್ಕದ್ದು, ಮತ್ತು ನಾವು ಯಾವುದಕ್ಕೆ ಸೂಕ್ಷ್ಮವೇದಿಗಳಾಗಿರಬೇಕು?
18 ಈ ಅಧೀನ ದೇವದೂತರು ದೇವರ ಸ್ವರ್ಗೀಯ ಸಂಸ್ಥೆಯ ಭಾಗವಾಗಿ ಹೊಂದಿಕೆಯಿಂದ ಮುಂದುವರಿದು ಯೆಹೋವನ ಭೂಸೇವಕರು ದೈವಿಕ ತೀರ್ಪಿನ ಎಚ್ಚರಿಕೆಗಳನ್ನು ಪ್ರಕಟಿಸುವ ತಮ್ಮ ನೇಮಕವನ್ನು ಪೂರೈಸಲು ಸಹಾಯ ಮಾಡುತ್ತಾರೆ. ಈ ಬಲಾಢ್ಯ ದೇವದೂತ ಸೇವಕರ ಮಂದುವರಿಯುವ ಕಾಪು ಮತ್ತು ಮಾರ್ಗದರ್ಶನ ನಮಗೆ ಬೇಕಾಗಿರುವಲ್ಲಿ ನಾವೂ ಹೊಂದಿಕೆಯಿಂದ ಸಾಂಕೇತಿಕ ಚಕ್ರವ್ಯವಸ್ಥೆಯೊಂದಿಗೆ ಹೆಜ್ಜೆಯಿಡತಕ್ಕದ್ದು. ಇದಲ್ಲದೆ, ದಿವ್ಯ ರಥಕ್ಕೆ ಸಮಾಂತರವಾಗಿ ಚಲಿಸುವ ಯೆಹೋವನ ದೃಶ್ಯ ಸಂಘಟನೆಯ ಭಾಗವಾಗಿರುವ ನಾವು ದೇವರಾತ್ಮದ ಮಾರ್ಗದರ್ಶನಕ್ಕೆ ಸೂಕ್ಷ್ಮವೇದಿಗಳಾಗಿರಬೇಕು. (ಫಿಲಿಪ್ಪಿ 2:13 ಹೋಲಿಸಿ.) ನಾವು ಯೆಹೋವನ ಸಾಕ್ಷಿಗಳಾಗಿರುವಲ್ಲಿ ದಿವ್ಯ ರಥವು ಹೋಗುವ ದಿಕ್ಕಿಗೇ ನಾವೂ ಹೋಗಬೇಕು. ನಾವು ಅದಕ್ಕೆ ವಿರುದ್ಧವಾಗಿ ಹೋಗಬಾರದೆಂಬುದು ನಿಶ್ಚಯ. ಹೋಗಬೇಕಾದ ದೆಸೆ ನಮಗೆ ತಿಳಿಸಲ್ಪಡುವಾಗ ನಾವು ಅದನ್ನೇ ಅನುಸರಿಸಬೇಕು. ಹೀಗೆ, ಸಭೆಯು ಒಡೆಯದೆ ಇರುತ್ತದೆ.—1 ಕೊರಿಂಥ 1:10.
19. (ಎ)ದಿವ್ಯ ರಥದ ಚಕ್ರಗಳಿಗೆ ಸುತ್ತಲೂ ಕಣ್ಣುಗಳಿರುವಂತೆಯೆ, ಯೆಹೋವನ ಜನರು ಯಾವುದಕ್ಕೆ ಜಾಗರವಾಗಿರಬೇಕು? (ಬಿ) ಈ ಗೊಂದಲದ ಸಮಯಗಳಲ್ಲಿ ನಮ್ಮ ವರ್ತನಾರೀತಿ ಯಾವುದಾಗಿರಬೇಕು?
19 ದೇವರ ರಥದ ಚಕ್ರದ ಸುತ್ತಲೂ ಇರುವ ಕಣ್ಣುಗಳು ಜಾಗರವನ್ನು ಸೂಚಿಸುತ್ತವೆ. ಸ್ವರ್ಗೀಯ ಸಂಸ್ಥೆ ಜಾಗರವಾಗಿರುವಂತೆಯೆ ಯೆಹೋವನ ಭೂಸಂಘಟನೆಯನ್ನು ಬೆಂಬಲಿಸಲು ನಾವು ಜಾಗರವಾಗಿರಬೇಕು. ಸಭಾ ಮಟ್ಟದಲ್ಲಿ, ಸ್ಥಳೀಕ ಹಿರಿಯರಿಗೆ ಸಹಕಾರ ನೀಡುತ್ತಾ ನಾವು ಈ ಬೆಂಬಲವನ್ನು ತೋರಿಸಬಲ್ಲೆವು. (ಇಬ್ರಿಯ 13:17) ಮತ್ತು ಈ ಗೊಂದಲದ ಸಮಯಗಳಲ್ಲಿ, ಕ್ರೈಸ್ತರು ಯೆಹೋವನ ಸಂಘಟನೆಗೆ ಅತಿ ಒತ್ತಾಗಿ ಅಂಟಿಕೊಂಡಿರಬೇಕು. ಘಟನೆಗಳನ್ನು ಸ್ವಂತ ವಿಧಗಳಲ್ಲಿ ತರ್ಜುಮೆ ಮಾಡುವಲ್ಲಿ ನಾವು ಯೆಹೋವನ ದಿವ್ಯ ರಥದೊಂದಿಗೆ ಮುಂದುವರಿಯುವವರಾಗುವುದಿಲ್ಲ. ‘ದಿವ್ಯ ರಥ ಯಾವ ಕಡೆ ಚಲಿಸುತ್ತಾ ಇದೆ?’ ಎಂದು ನಾವು ಸದಾ ಕೇಳಿಕೊಳ್ಳೋಣ. ದೇವರ ದೃಶ್ಯ ಸಂಸ್ಥೆಯೊಂದಿಗೆ ನಾವು ಮುಂದೆ ಚಲಿಸುವಲ್ಲಿ ಅದೃಶ್ಯ ಸಂಘಟನೆಯೊಂದಿಗೂ ಮುಂದೆ ಚಲಿಸುತ್ತೇವೆ.
20. ಅಪೊಸ್ತಲ ಪೌಲನು ಫಿಲಿಪ್ಪಿ 3:13-16ರಲ್ಲಿ ಯಾವ ಉತ್ತಮ ಸಲಹೆ ನೀಡುತ್ತಾನೆ?
20 ಈ ಸಂಬಂಧದಲ್ಲಿ ಪೌಲನು ಬರೆದುದು: “ಸಹೋದರರೇ, ನಾನಂತೂ ಹಿಡಿದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವದಿಲ್ಲ; ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತು ಬಿಟ್ಟು ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆಬೊಗ್ಗಿದವನಾಗಿ ದೇವರು ಕ್ರಿಸ್ತನ ಮೂಲಕ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿ ಮಾಡಿಕೊಂಡು ಓಡುತ್ತಾ ಇದ್ದೇನೆ. ನಮ್ಮಲ್ಲಿ ಪ್ರವೀಣರಾದವರು ಇದೇ ಅಭಿಪ್ರಾಯವುಳ್ಳವರಾಗಿರೋಣ. ಯಾವದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ ಅದನ್ನೂ ದೇವರು ನಿಮಗೆ ತೋರಿಸಿಕೊಡುವನು. ಆದರೆ ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯ ವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆಯೋಣ.”—ಫಿಲಿಪ್ಪಿ 3:13-16.
21. ಯಾವ ನಿತ್ಯಗಟ್ಟಳೆಯನ್ನು ಅನುಸರಿಸುವುದರ ಮೂಲಕ ದೇವರ ಸಂಘಟನೆಯೊಂದಿಗೆ ಆತ್ಮಿಕ ಪ್ರಗತಿ ಮಾಡಲು ನಮಗೆ ಸಾಧ್ಯವಿದೆ?
21 ಇಲ್ಲಿ ಹೇಳಿರುವ “ಸೂತ್ರ” [ನಿತ್ಯಗಟ್ಟಳೆ, NW] ಎಂಬ ಪದ, ನಾವು ಹೊರಗೆ ಬರಲಾಗದ ಕೆಟ್ಟ ರೂಢಿ ಎಂಬ ಅರ್ಥವನ್ನು ಕೊಡುವುದಿಲ್ಲ. ಯೆಹೋವನ ಜನರಲ್ಲಿ ಆತ್ಮಿಕ ಪ್ರಗತಿಯನ್ನು ಮಾಡುವರೆ ಉತ್ತಮ ನಿಯತಕ್ರಮವಿದೆ. ಅವರಲ್ಲಿ ಸ್ವಂತ ಬೈಬಲ್ ಅಧ್ಯಯನ, ಸಭಾ ಕೂಟಗಳಿಗೆ ಹಾಜರಿ, ಕ್ರಮವಾಗಿ ರಾಜ್ಯದ ಸುವಾರ್ತೆಯ ಸಾರುವಿಕೆ ಮತ್ತು ದೇವರ ಸ್ವರ್ಗೀಯ ಸಂಸ್ಥೆಯ ಗುಣಗಳನ್ನು ಪ್ರತಿಬಿಂಬಿಸುವುದು—ಇಂಥವುಗಳಲ್ಲಿ ಭಾಗವಹಿಸುವ ನಿತ್ಯಗಟ್ಟಳೆಯಿದೆ. ಇಂಥ ನಿತ್ಯಗಟ್ಟಳೆಯು ಅವರು ಯೆಹೋವನ ರಥಸದೃಶ ದಿವ್ಯ ಸಂಸ್ಥೆಯ ಮಾರ್ಗದರ್ಶನವನ್ನು ಅನುಸರಿಸುವಂತೆ ಸಾಧ್ಯ ಮಾಡುತ್ತದೆ. ಈ ವಿಧದಲ್ಲಿ ಪಟ್ಟು ಹಿಡಿಯುವಲ್ಲಿ ನಾವು ಸ್ವರ್ಗದಲ್ಲಿ ಅಮರ ಜೀವದ ಇನಾಮನ್ನಾಗಲಿ ಭೂಪ್ರಮೋದವನದಲ್ಲಿ ನಿತ್ಯಜೀವದ ಇನಾಮನ್ನಾಗಲಿ ಪಡೆಯುವ ಗುರಿಯನ್ನು ಮುಟ್ಟುವೆವು.
22. (ಎ) ಅಭಿಷಿಕ್ತ ಉಳಿಕೆಯವರು ಮತ್ತು ಬೇರೆ ಕುರಿಗಳ ಮಹಾ ಸಮೂಹದವರು ಏಕತೆಯಿಂದ ಸಂಘಟಿತರಾಗಬೇಕಾದರೆ ಏನು ಮಾಡತಕ್ಕದ್ದು? (ಬಿ) ಯಾವುದು ಯೆಹೋವನ ಗಮನಕ್ಕೆ ತಪ್ಪುವುದೇ ಇಲ್ಲ?
22 ಯೋಹಾನ 10:16 ಸೂಚಿಸುವಂತೆ, “ಬೇರೆ ಕುರಿಗಳು” ಮತ್ತು ಯೆಹೆಜ್ಕೇಲ ವರ್ಗದವರು ಏಕತೆಯಿಂದ ಸಂಘಟಿತರಾಗುವರು. ಹೀಗೆ, ಯೆಹೋವನ ಸಂಸ್ಥೆಯಲ್ಲಿರುವ ಸಕಲರು, ದೇವರ ದಿವ್ಯ ರಥಕ್ಕೆ ಹೊಂದಿಕೆಯಾಗಿ ಮುಂದುವರಿಯಬೇಕಾದರೆ ಯೆಹೆಜ್ಕೇಲ 1ನೆಯ ಅಧ್ಯಾಯದಲ್ಲಿ ದಾಖಲೆಯಾಗಿರುವ ದರ್ಶನದ ಪೂರ್ಣಾರ್ಥ ಮತ್ತು ಮಹತ್ವವನ್ನು ಗ್ರಹಿಸುವುದು ಅಗತ್ಯ. ಇದರ ದರ್ಶನವು, ನಾವು ಯೆಹೋವನ ದೃಶ್ಯಾದೃಶ್ಯ ಸಂಸ್ಥೆಗೆ ಹೊಂದಿಕೆಯಾಗಿ ಮುಂದುವರಿಯಬೇಕೆಂದು ಗಣ್ಯ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಯೆಹೋವನು “ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥ ಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ” ಎಂಬುದನ್ನೂ ಮನಸ್ಸಿನಲ್ಲಿಡಿರಿ. (2 ಪೂರ್ವಕಾಲವೃತ್ತಾಂತ 16:9) ಒಂದೇ ಒಂದು ಸಂಗತಿಯೂ, ವಿಶೇಷವಾಗಿ, ವಿಶ್ವ ಪರಮಾಧಿಕಾರಿಯಾಗಿರುವ ತನ್ನ ಉದ್ದೇಶಗಳ ಸಂಬಂಧದಲ್ಲಿ ತನ್ನನ್ನು ನಿರ್ದೋಷೀಕರಿಸುವ ಯಾವ ಸಂಗತಿಯೂ ಆತನ ಗಮನಕ್ಕೆ ತಪ್ಪುವುದಿಲ್ಲ.
23. ಯೆಹೋವನ ದಿವ್ಯ ರಥ ಮುಂದುವರಿಯುತ್ತಿರುವುದರಿಂದ ನಾವೇನು ಮಾಡತಕ್ಕದ್ದು?
23 ಇಂದು ಯೆಹೋವನ ದಿವ್ಯ ರಥ ನಿಶ್ಚಯವಾಗಿಯೂ ಸಂಚರಿಸುತ್ತ ಇದೆ. ಬೇಗನೆ ಸಕಲವೂ ರಥದಲ್ಲಿ ಸವಾರಿ ಮಾಡುವ ಮಹಿಮಾಭರಿತನಿಗನುಸಾರ ಮಹಿಮೆಗೆ ತರಲ್ಪಡುವುದು. ಸಕಲವೂ ವಿಶ್ವದ ಪರಮಕರ್ತನಾದ ಆತನ ಮೇಲಿರುವ ಅಪವಾದ ನಿವಾರಣೆಗಾಗಿರುವುದು. ನಮ್ಮ ಮಹಾ ಲೋಕವ್ಯಾಪಕ ಸಾರುವ ಕೆಲಸದಲ್ಲಿ ಆತನ ಸೆರಾಫರು, ಕೆರೂಬಿಯರು ಮತ್ತು ದೇವದೂತರು ನಮ್ಮನ್ನು ಸಮರ್ಥಿಸುತ್ತಿದ್ದಾರೆ. ಆದುದರಿಂದ, ನಾವು ಯೆಹೋವನ ಸ್ವರ್ಗೀಯ ಸಂಘಟನೆಯೊಂದಿಗೆ ಮುಂದೆ ಹೋಗೋಣ. ಆದರೆ, ಈ ವೇಗವಾಗಿ ಹೋಗುವ ದಿವ್ಯ ರಥದೊಂದಿಗೆ ನಾವು ಹೇಗೆ ಸಮಾನವೇಗದಲ್ಲಿ ಹೋಗಬಲ್ಲೆವು? ಈ ಪತ್ರಿಕೆಯ ಮುಂದಿನ ಸಂಚಿಕೆ ಇದನ್ನು ಚರ್ಚಿಸುವುದು. (w91 3/15)
ನೀವು ಹೇಗೆ ಉತ್ತರಿಸುವಿರಿ?
▫ ಯೆಹೆಜ್ಕೇಲನು ನೋಡಿದ ನಾಲ್ಕು ಜೀವಿಗಳು ಯಾವ ಗುಣಗಳನ್ನು ಪ್ರತಿನಿಧೀಕರಿಸುತ್ತವೆ?
▫ ಯೆಹೋವನ ದಿವ್ಯ ರಥ ಯಾವುದನ್ನು ಚಿತ್ರಿಸುತ್ತದೆ?
▫ ದೇವರ ಪ್ರವಾದಿ ಯೆಹೆಜ್ಕೇಲನು ಯಾರನ್ನು ಚಿತ್ರಿಸುತ್ತಾನೆ?
▫ ಯೆಹೋವನ ದಿವ್ಯ ರಥದ ತಿಳಿವಳಿಕೆ ಯೆಹೆಜ್ಕೇಲ ವರ್ಗದ ಮೇಲೆ ಮತ್ತು ಮಹಾ ಸಮೂಹದ ಮೇಲೆ ಯಾವ ಪರಿಣಾಮ ಮಾಡಿಯದೆ?