‘ಪ್ರೀತಿಯ ಆಧಾರದಲ್ಲಿ ಬುದ್ಧಿಹೇಳುವುದು’
ಸುಮಾರು ಸಾ.ಶ. 60-61 ರಲ್ಲಿ, ಪಲಾಯನಶೀಲ ದಾಸನೊಬ್ಬನು ರೋಮನ್ನು ಬಿಟ್ಟು ಏಷ್ಯಾ ಮೈನರ್ನ ನೈರುತ್ಯದಲ್ಲಿರುವ ತನ್ನ ಮನೆಯಾದ ಕೊಲೊಸ್ಸೆ ಎಂಬ ಪಟ್ಟಣಕ್ಕೆ 1,400 ಕಿಲೊಮೀಟರ್ ಪ್ರಯಾಣವನ್ನು ಕೈಕೊಳ್ಳುತ್ತಾನೆ. ಅವನ ಯಜಮಾನನಿಗಾಗಿ ಸ್ವತಃ ಅಪೊಸ್ತಲ ಪೌಲನಿಂದ ಬರೆಯಲ್ಪಟ್ಟ ಕೈಬರಹದ ಸಂದೇಶವನ್ನು ಅವನು ತನ್ನೊಂದಿಗೆ ಒಯ್ಯುತ್ತಾನೆ. ಇಂದು ಆ ಪತ್ರವು ಬೈಬಲಿನ ಒಂದು ಭಾಗವಾಗಿದ್ದು, ಅದನ್ನು ಪಡೆದವನಾದ ಫಿಲೆಮೋನ ಎಂಬ ಹೆಸರನ್ನು ಧರಿಸಿದೆ.
ಫಿಲೆಮೋನನಿಗೆ ಬರೆದ ಪತ್ರವು ಜಾಣ್ಮೆಯುಳ್ಳ, ಒಡಂಬಡಿಸುವ ತರ್ಕಸರಣಿಯಿಂದ ಕೂಡಿದ ಒಂದು ನಾಯಕ ಕೃತಿಯಾಗಿದೆ. ಅಧಿಕ ಮಹತ್ವದ್ದಾಗಿ, ಇಂದಿನ ಕ್ರೈಸ್ತರಿಗೆ ಹಲವಾರು ವ್ಯಾವಹಾರ್ಯ ಪಾಠಗಳು ಅದರಲ್ಲಿ ಅಡಕವಾಗಿವೆ. ಅದರಲ್ಲೊಂದು, ಕ್ರೈಸ್ತ ಪ್ರೀತಿಯ ಆಧಾರದಲ್ಲಿ ಒಬ್ಬರಿಗೊಬ್ಬರು ಬುದ್ಧಿಹೇಳುವ ಮೂಲ್ಯತೆಯೇ. ಈ ಸಂಕ್ಷಿಪ್ತವಾದ ಆದರೆ ಪ್ರಭಾವಯುಕ್ತ ಪತ್ರದೆಡೆಗೆ ನಾವು ನಿಕಟ ಗಮನವನ್ನು ಕೊಡೋಣ.
ಪಲಾಯನಶೀಲನು ಹಿಂತಿರುಗುತ್ತಾನೆ
ಫಿಲೆಮೋನನು ಒಬ್ಬ ಕ್ರೈಸ್ತನಾಗಿದ್ದನು, ಕೊಲೊಸ್ಸೆ ಸಭೆಯ ಅತಿ ಪ್ರಿಯ ಸದಸ್ಯನಾಗಿದ್ದನು. (ಫಿಲೆಮೋನ 4, 5) ಅಲ್ಲಿದ್ದ ಸಭೆಯು ಅವನ ಮನೆಯನ್ನು ಕೂಟದ ಸ್ಥಳವಾಗಿ ಉಪಯೋಗಿಸುತ್ತಿತ್ತು! (2 ನೆಯ ವಚನ) ಅದಲ್ಲದೆ ಅಪೊಸ್ತಲ ಪೌಲನ ವೈಯಕ್ತಿವಾದ ಪರಿಚಯವು ಫಿಲೆಮೋನನಿಗಿತ್ತು. ಅವನು ಕ್ರೈಸ್ತನಾಗಿ ಪರಿಣಮಿಸುವುದಕ್ಕೆ ಅಪೊಸ್ತಲ ಪೌಲನು ಸಾಧನವಾಗಿದ್ದಿರಲೂ ಬಹುದು. ತಾನು ವೈಯಕ್ತಿಕವಾಗಿ ಕೊಲೊಸ್ಸೆಯಲ್ಲಿ ಸಾರಲಿಲ್ಲವೆಂದು ಪೌಲನು ಸೂಚಿಸುತ್ತಾನೆ ನಿಜ. (ಕೊಲೊಸ್ಸೆ 2:1) ಆದರೂ ಅವನು ಎಫೆಸದಲ್ಲಿ ಎರಡು ವರ್ಷಗಳನ್ನು ಕಳೆದಿದ್ದು, “ಆಸ್ಯ ಸೀಮೆ [ಕೊಲೊಸ್ಸೆಯೂ ಸೇರಿದ್ದ] ಯಲ್ಲಿ ವಾಸವಾಗಿದ್ದ ಎಲ್ಲರೂ ಕರ್ತನ ವಾಕ್ಯವನ್ನು ಕೇಳುವ” ವಷ್ಟರ ಮಟ್ಟಿಗೆ ಸಾರಿದ್ದನು. (ಆ. ಕೃತ್ಯಗಳು 19:10) ಪ್ರತಿಕ್ರಿಯೆಯೊಂದಿಗೆ ಕೇಳಿದವರಲ್ಲಿ ಫಿಲೆಮೋನನೂ ಕೂಡಿದ್ದ ಸಂಭವನೀಯತೆ ಇದೆ.
ಹೇಗಿದ್ದರೂ, ಆ ಕಾಲದ ಅನೇಕ ಶ್ರೀಮಂತ ಮನುಷ್ಯರಂತೆ, ಫಿಲೆಮೋನನೂ ಗುಲಾಮರ ಧಣಿಯಾಗಿದ್ದನು. ಪುರಾತನ ಕಾಲದಲ್ಲಿ ಗುಲಾಮಗಿರಿಯು ಯಾವಾಗಲೂ ಕೀಳು ದರ್ಜೆಯದ್ದಾಗಿರಲಿಲ್ಲ. ಒಬ್ಬನನ್ನು ಅಥವಾ ಕುಟುಂಬ ಸದಸ್ಯರನ್ನು ದಾಸ್ಯಕ್ಕೆ ಮಾರಿಕೊಳ್ಳುವುದು ಯೆಹೂದ್ಯರಲ್ಲಿ ಸಾಲವನ್ನು ಸಲ್ಲಿಸುವ ಒಂದು ಅಂಗೀಕೃತ ಸಾಧನವಾಗಿತ್ತು. (ಯಾಜಕಕಾಂಡ 25:39, 40) ದ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಬೈಬಲ್ ಎನ್ಸೈಕ್ಲೊಪೀಡಿಯ ರೋಮನ್ ಕಾಲಾವಧಿಯ ಕುರಿತು ತಿಳಿಸುವುದು: “ವಿವಿಧ ಕಾರಣಗಳಿಗಾಗಿ ಜನರು ದೊಡ್ಡ ಸಂಖ್ಯೆಯಲ್ಲಿ ತಮ್ಮನ್ನು ದಾಸ್ಯಕ್ಕೆ ಮಾರಿಕೊಳ್ಳುತ್ತಿದ್ದರು. ಹೆಚ್ಚಿನ ಕಾರಣವು ಸ್ವತಂತ್ರ ಪ್ರಜೆಯಾಗಿ ಹುಟ್ಟಿ ದಾರಿದ್ರ್ಯದ ಅಸ್ತಿತ್ವಕ್ಕಿಂತ ಸುಲಭವಾದ ಮತ್ತು ಹೆಚ್ಚು ಭದ್ರವಾದ ಒಂದು ಜೀವಿತವನ್ನು ಪ್ರವೇಶಿಸಲು, ವಿಶೇಷ ಉದ್ಯೊಗಗಳನ್ನು ಪಡೆಯಲು, ಸಾಮಾಜಿಕವಾಗಿ ಏಳಿಗೆ ಪಡೆಯುವುದೇ ಆಗಿತ್ತು. . . . ಗುಲಾಮಗಿರಿಮುಕ್ತ [ಬಿಡುಗಡೆ] ಮಾಡಲ್ಪಟ್ಟಾಗ ತಾವು ರೋಮನ್ ನಾಗರಿಕರಾಗಿ ಪರಿಣಮಿಸುವ ರೋಮನ್ ನಿಯಮಕ್ಕೆ ಒಳಪಟ್ಟವರಾಗಿ, ನ್ಯಾಯಸಮ್ಮತ ಅಪೇಕ್ಷೆಯೊಂದಿಗೆ, ಅನೇಕ ರೋಮನ್ಯೇತರರು ತಮ್ಮನ್ನು ರೋಮನ್ ನಾಗರಿಕರಿಗೆ ಮಾರಿಕೊಂಡರು.”
ಫಿಲೆಮೋನನ ದಾಸರಲ್ಲಿ ಒಬ್ಬನಾದ ಒನೇಸಿಮನು ಅವನನ್ನು ಬಿಟ್ಟು ರೋಮಿಗೆ ಪಲಾಯನ ಗೈದಾಗಲಾದರೋ ಒಂದು ಸಮಸ್ಯೆಯು ಉಂಟಾಯಿತು, ಓಡಿಹೋಗಲು ಬೇಕಾದ ಹಣವನ್ನು ಅವನು ಫಿಲೆಮೋನನಿಂದ ಕದ್ದಿರುವ ಶಕ್ಯತೆಯೂ ಇತ್ತು. (18 ನೆಯ ವಚನ) ರೋಮಿನಲ್ಲಿ ಒನೇಸಿಮನು ಅಲ್ಲಿ ಸೆರೆವಾಸಿಯಾಗಿದ್ದ ಅಪೊಸ್ತಲ ಪೌಲನ ಸಂಪರ್ಕಕ್ಕೆ ಬಂದನು.
ಗುಲಾಮ ದುಡಿತವನ್ನು ಬಿಟ್ಟು ಓಡಿಹೋದ ಈ “ಮೊದಲು ಅಪ್ರಯೋಜಕನಾಗಿದ್ದ” ದಾಸನು ಈಗ ಕ್ರೈಸ್ತನಾಗಿ ಪರಿಣಮಿಸಿದನು. ಅವನು ತನ್ನನ್ನು ಪೌಲನಿಗೆ ದೊರಕಿಸಿಕೊಟ್ಟವನಾಗಿ ಸೆರೆಯಲ್ಲಿದ್ದ ಅಪೊಸ್ತಲನಿಗೆ ಉಪಯುಕ್ತ ಸೇವೆಯನ್ನು ಸಲ್ಲಿಸಿದನು. ಒನೇಸಿಮನು ಪೌಲನಿಗೆ “ಪ್ರಾಣದಂತಿದ್ದು” ಅವನಿಗೆ “ಪ್ರಿಯ ಸಹೋದರನಂತಾಗಿ” ಪರಿಣಮಿಸಿದರಲ್ಲೇನೂ ಆಶ್ಚರ್ಯವಿಲ್ಲ!—11, 12, 16 ನೆಯ ವಚನಗಳು.
ಒನೇಸಿಮನನ್ನು ತನ್ನ ಬಳಿಯಲ್ಲೇ ಇರಿಸಿಕೊಳ್ಳಲು ಅಪೊಸ್ತಲ ಪೌಲನು ಬಯಸಿದ್ದಿರಬಹುದು, ಆದರೆ ಒನೇಸಿಮನ ಯಜಮಾನನಾಗಿದ್ದ ಫಿಲೆಮೋನನಿಗೆ ನ್ಯಾಯಬದ್ಧ ಹಕ್ಕುಗಳಿದ್ದವು. ಹೀಗೆ ಒನೇಸಿಮನು ತನ್ನ ನ್ಯಾಯಬದ್ಧ ಯಜಮಾನನ ಸೇವೆಗೆ ಹಿಂತಿರುಗುವ ಹಂಗಿಗನಾದನು. ಹೀಗಿರಲಾಗಿ ಫಿಲೆಮೋನನು ಅವನನ್ನು ಹೇಗೆ ಸ್ವೀಕರಿಸುವನು? ಕಠಿಣಶಿಕ್ಷೆಯನ್ನು ವಿಧಿಸಲು ತನಗಿರುವ ನ್ಯಾಯಬದ್ಧ ಹಕ್ಕನ್ನು ಅವನು ಕೋಪದಿಂದ ತಗಾದೆ ಮಾಡುವನೋ? ಜತೆಕ್ರೈಸ್ತನು ತಾನೆಂಬ ಒನೇಸಿಮನ ವಾದದ ಯಥಾರ್ಥತೆಯನ್ನು ಅವನು ಆಕ್ಷೇಪಿಸುವನೋ?
ವಿಷಯಗಳನ್ನು ಪ್ರೀತಿಯಿಂದ ಬಗೆಹರಿಸುವುದು
ಒನೇಸಿಮನ ಕುರಿತು ಬರೆಯಲು ಪೌಲನು ಪ್ರೇರೇಪಿಸಲ್ಪಟ್ಟನು. ಅವನು ಆ ಪತ್ರವನ್ನು ತನ್ನ ವಾಡಿಕೆಯ ಪ್ರಕಾರ ಕಾರ್ಯದರ್ಶಿಯನ್ನು ಉಪಯೋಗಿಸದೆ ತನ್ನ ಸ್ವಂತ ಕೈಯಿಂದ ಬರೆದನು. (19 ನೆಯ ವಚನ) ಫಿಲೆಮೋನನಿಗೆ ಬರೆದ ಆ ಸಂಕ್ಷಿಪ್ತ ಪತ್ರವನ್ನು ಕೆಲವು ನಿಮಿಷಗಳನ್ನು ತಕ್ಕೊಂಡು ಪೂರ್ಣವಾಗಿ ಓದಿರಿ. ತನ್ನ ಪರಿಚಯವನ್ನು ಹೇಳಿದ ನಂತರ ಮತ್ತು ಫಿಲೆಮೋನ ಮತ್ತು ಅವನ ಕುಟುಂಬಕ್ಕೆ “ಕೃಪೆಯೂ ಶಾಂತಿಯೂ ಆಗಲಿ” ಎಂದು ಕೋರಿದ ಬಳಿಕ, ಪೌಲನು ಫಿಲೆಮೋನನನ್ನು, ‘ಅವನು ಕರ್ತನಾದ ಯೇಸುವಿನಲ್ಲಿ ಮತ್ತು ದೇವಜನರೆಲ್ಲರ ಮೇಲೆ ಇಟ್ಟಿರುವ ಪ್ರೀತಿ ಮತ್ತು ನಂಬಿಕೆಗಾಗಿ’ ಪ್ರಶಂಸಿಸಿದನು.—1-7 ವಚನಗಳು.
ಪೌಲನು ಅಪೊಸ್ತಲನೋಪಾದಿ ತನ್ನ ಅಧಿಕಾರವನ್ನು ಸುಲಭವಾಗಿ ಉಪಯೋಗಿಸಿ ‘ಯಾವುದು ಯೋಗ್ಯವೋ ಅದನ್ನು ಮಾಡುವಂತೆ ಫಿಲೆಮೋನನಿಗೆ ಅಪ್ಪಣೆ’ ಕೊಡಬಹುದಿತ್ತು, ಆದರೆ ಅದಕ್ಕೆ ಬದಲಿಗೆ ಪೌಲನು ‘ಪ್ರೀತಿಯ ಆಧಾರದಲ್ಲಿ ಬುದ್ಧಿಹೇಳಿದನು.’ ಒನೇಸಿಮನು ನಿಜವಾಗಿಯೂ ಒಬ್ಬ ಕ್ರೈಸ್ತ ಸಹೋದರನಾಗಿದ್ದಾನೆ, ತನ್ನನ್ನು ಪೌಲನಿಗೆ ಉಪಯುಕ್ತನಾಗಿ ರುಜುಪಡಿಸಿದ್ದಾನೆಂಬ ನಿಜತ್ವಕ್ಕೆ ಅವನು ಸಾಕ್ಷ್ಯ ಕೊಟ್ಟನು. ಅಪೊಸ್ತಲನು ಅಂಗೀಕರಿಸಿದ್ದು: “ನಾನು ಸುವಾರ್ತೆಯ ನಿಮಿತ್ತ ಸೆರೆಯಲ್ಲಿರಲಾಗಿ ನಿನಗೆ ಬದಲಾಗಿ ಅವನು ನನಗೆ ಉಪಚಾರ ಮಾಡುವಂತೆ ಅವನನ್ನು [ಒನೇಸಿಮನನ್ನು] ನನ್ನ ಬಳಿಯಲ್ಲೇ ಇಟ್ಟುಕೊಳ್ಳಬೇಕೆಂದು ಯೋಚಿಸಿದ್ದೆನು. ಆದರೆ,” ಪೌಲನು ಮುಂದುವರಿಸಿದ್ದು, “ನಿನ್ನ ಉಪಕಾರವು ಬಲಾತ್ಕಾರದಿಂದಾಗದೆ ಮನಃಪೂರ್ವಕವಾಗಿಯೇ ಇರಬೇಕೆಂದು ಯೋಚಿಸಿ ನಿನ್ನ ಸಮ್ಮತಿಯಿಲ್ಲದೆ ಏನೂ ಮಾಡಲು ನನಗೆ ಇಷ್ಟವಿರಲಿಲ್ಲ.”—8-14 ವಚನಗಳು.
ಹೀಗೆ ತನ್ನ ಹಿಂದಣ ದಾಸನನ್ನು ಸಹೋದರನಾಗಿ ಹಿಂದೆ ಸ್ವೀಕರಿಸುವಂತೆ ಫಿಲೆಮೋನನನ್ನು ಪೌಲನು ಪ್ರೇರೇಪಿಸಿದನು. “ನೀನು ನನ್ನನ್ನು ಸೇರಿಸಿಕೊಳ್ಳುವ ಪ್ರಕಾರವೇ [ದಯೆಯಿಂದ, NW] ಅವನನ್ನು ಸೇರಿಸಿಕೋ,” ಎಂದು ಬರೆದನು ಪೌಲನು. ಒನೇಸಿಮನನ್ನು ದಾಸ್ಯದಿಂದ ಬಿಡಿಸಬೇಕೆಂಬ ಅವಶ್ಯಕತೆಯಲ್ಲಲ್ಲ. ತನ್ನ ದಿನಗಳಲ್ಲಿ ಅಸ್ತಿತ್ವದಲ್ಲಿದ್ದ ಸಾಮಾಜಿಕ ಕ್ರಮವನ್ನು ಬದಲಾಯಿಸುವಂತೆ ಪೌಲನು ಚಳುವಳಿ ಹೂಡಿರಲಿಲ್ಲ. (ಎಫೆಸ 6:9 ನ್ನು ಹೋಲಿಸಿರಿ; ಕೊಲೊಸ್ಸೆ 4:1; 1 ತಿಮೊಥಿ 6:2.) ಆದರೂ ದಾಸ-ಧಣಿಯ ಸಂಬಂಧವು, ಒನೇಸಿಮನ ಮತ್ತು ಫಿಲೆಮೋನನ ನಡುವೆ ಈಗ ಅಸ್ತಿತ್ವದಲ್ಲಿರುವ ಕ್ರಿಸ್ತೀಯ ಬಂಧದಿಂದ ನಿಸ್ಸಂಶಯವಾಗಿ ಪ್ರಭಾವಿತವಾಗುವುದು. ಫಿಲೆಮೋನನು ಒನೇಸಿಮನನ್ನು “ದಾಸನಿಗಿಂತ ಉತ್ತಮನಾಗಿ ಪ್ರಿಯ ಸಹೋದರನು” ಎಂಬ ನೋಟದಲ್ಲಿ ನೋಡುವನು.—15-17 ವಚನಗಳು.
ಒನೇಸಿಮನು ತನ್ನ ಮೇಲೆ ಪ್ರಾಯಶಃ ಕಳ್ಳತನದ ಫಲಿತಾಂಶವಾಗಿ ಏನಾದರೂ ಸಾಲವನ್ನು ತಂದುಕೊಂಡಿದ್ದರೆ ಆಗೇನು? ಪುನಃ ಪೌಲನು, ಫಿಲೆಮೋನನಲ್ಲಿ ತನಗಿದ್ದ ಸ್ನೇಹಕ್ಕೆ ಅಪ್ಪೀಲು ಮಾಡುತ್ತಾ ಅಂದದ್ದು: “ಅವನಿಂದ ನೀನೇನಾದರೂ ನಷ್ಟಪಟ್ಟಿದ್ದರೆ ಅಥವಾ ಅವನ ಸಾಲವೇನಾದರೂ ತೀರಿಸಬೇಕಾಗಿದ್ದರೆ ಅದನ್ನು ನನ್ನ ಲೆಕ್ಕಕ್ಕೆ ಹಾಕು.” ಫಿಲೆಮೋನನು ಕ್ಷಮಿಸುವ ಭಾವವನ್ನು ತೋರಿಸಿ, ಪೌಲನು ಮಾಡಿದ ವಿನಂತಿಗಿಂತಲೂ ಹೆಚ್ಚನ್ನು ಮಾಡುವನೆಂಬ ಭರವಸವನ್ನು ಪೌಲನು ವ್ಯಕ್ತಪಡಿಸಿದನು. ಪೌಲನು ಬೇಗನೇ ಬಿಡುಗಡೆಯಾಗಲು ನಿರೀಕ್ಷಿಸಿದರ್ದಿಂದ, ಭವಿಷ್ಯದಲ್ಲಿ ಬೇಗನೇ ಫಿಲೆಮೋನನ ಸತ್ಕಾರವನ್ನು ಆನಂದಿಸಲು ಸಹ ಏರ್ಪಡಿಸಿದನು. ಹೆಚ್ಚಿನ ವಂದನೆಗಳನ್ನು ಮತ್ತು ಫಿಲೆಮೋನನಿಗೆ “ಕರ್ತನಾದ ಯೇಸು ಕ್ರಿಸ್ತನ ಕೃಪೆಯನ್ನು” ಕೋರುತ್ತಾ, ಪೌಲನು ತನ್ನ ಪತ್ರವನ್ನು ಮುಗಿಸಿದನು.
ಇಂದಿನ ಕ್ರೈಸ್ತರಿಗೆ ಪಾಠಗಳು
ಇಂದಿನ ಕ್ರೈಸ್ತರಿಗೆ ಫಿಲೆಮೋನನ ಪುಸ್ತಕವು ಹೇರಳವಾದ ವ್ಯಾವಹಾರಿಕ ಪಾಠಗಳನ್ನು ಒದಗಿಸುತ್ತದೆ. ಒಂದನೆಯದಾಗಿ, ನಮ್ಮ ಜತೆ ವಿಶ್ವಾಸಿಯು ನಮಗೆ ಗಂಭೀರ ತಪ್ಪನ್ನು ಮಾಡಿದಾಗಲೂ, ಕ್ಷಮಿಸುವ ಅಗತ್ಯವನ್ನು ಅದು ನಮ್ಮ ಜ್ಞಾಪಕಕ್ಕೆ ತರುತ್ತದೆ. “ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ,” ಯೇಸು ಕ್ರಿಸ್ತನಂದದ್ದು, “ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು.”—ಮತ್ತಾಯ 6:14.
ಕ್ರೈಸ್ತ ಸಭೆಯೊಳಗೆ ಇಂದು ಅಧಿಕಾರದ ಸ್ಥಾನದಲ್ಲಿರುವವರು ಫಿಲೆಮೋನನ ಪುಸ್ತಕದಿಂದ ವಿಶೇಷವಾಗಿ ಪ್ರಯೋಜನ ಪಡೆಯಬಹುದು. ಯಾವುದು ಯೋಗ್ಯವೂ ಅದನ್ನು ಮಾಡುವಂತೆ ಆಜ್ಞಾಪಿಸಲು ಪೌಲನು ತನ್ನ ಅಪೊಸ್ತಲಿಕ ಅಧಿಕಾರವನ್ನು ಉಪಯೋಗಿಸುವುದರಿಂದ ತಡೆದು ಹಿಡಿದದ್ದು ಗಮನಾರ್ಹವು. ಅದಲ್ಲದೆ, ಪೌಲನ ಸೇವೆಗಾಗಿ ಒನೇಸಿಮನು ರೋಮಿನಲ್ಲಿ ಉಳಿಯುವಂತೆ ಬಿಡಬೇಕೆಂದು ಪೌಲನು ನಿರ್ಬಂಧಿಸಲಿಲ್ಲ. ಇತರರ ಆಸ್ತಿಯ ಹಕ್ಕನ್ನು ಪೌಲನು ಗೌರವಿಸಿದ್ದನು. ಒಂದು ಅಧಿಕಾರಯುಕ್ತ ಗೋಚರವು ಫಿಲೆಮೋನನನ್ನು ಆಜ್ಞಾನುವರ್ತಿಯಾಗಿ ಮಾಡುತ್ತಿತ್ತಾದರೂ, ಅವನು ಹೃದಯಪೂರ್ವಕವಾಗಿ ಕ್ರಿಯೆಗೈಯುವುದು ಲೇಸೆಂಬದನ್ನೂ ಪೌಲನು ಗಣ್ಯಮಾಡಿದ್ದನು. ಒಂದು ಹೃತ್ಪೂರ್ವಕ ಪ್ರತಿಕ್ರಿಯೆಯನ್ನು ಪಡೆಯಲು ಪ್ರೀತಿಯ ಮೇಲಾಧಾರಿತ ಅಪ್ಪೀಲನ್ನು ಅವನು ಮಾಡಿದನು.
ಆದುದರಿಂದ ಇಂದು ಕ್ರೈಸ್ತ ಹಿರಿಯರು ತಮ್ಮ ಅಧಿಕಾರದ ದುರುಪಯೋಗ ಮಾಡುವ ಮೂಲಕ ಅಥವಾ ಮಂದೆಯೊಂದಿಗೆ ವ್ಯವಹರಿಸುವಾಗ ಕಠಿಣವಾಗಿ, ಅಧಿಕಾರಯುಕ್ತ ರೀತಿಯನ್ನು ಬಳಸುವ ಮೂಲಕ “ದೇವರು ನಿಮ್ಮ ವಶದಲ್ಲಿಟ್ಟಿರುವ ಸಭೆಗಳ ಮೇಲೆ ದೊರೆತನಮಾಡುವವರಂತೆ” ಎಂದೂ ನಡೆಯಬಾರದು. (1 ಪೇತ್ರ 5:1-3) ಯೇಸುವಂದದ್ದು: “ಜನಗಳನ್ನಾಳುವವರು ಅವರ ಮೇಲೆ ಅಹಂಕಾರದಿಂದ ದೊರೆತನ ಮಾಡುತ್ತಾರೆ. ಮತ್ತು ದೊಡ್ಡವರು ಬಲಾತ್ಕಾರದಿಂದ ಅಧಿಕಾರ ನಡಿಸುತ್ತಾರೆ ಎಂದು ನೀವು ಬಲ್ಲಿರಷ್ಟೆ. ನಿಮ್ಮಲ್ಲಿ ಹಾಗಿರಬಾರದು.” (ಮತ್ತಾಯ 20:25, 26) ಆಜ್ಞೆಗಳಿಗಿಂತ ಹೆಚ್ಚಾಗಿ ಪ್ರೀತಿಯ ಅಪ್ಪೀಲುಗಳಿಗೆ ಸಭೆಯ ಸದಸ್ಯರು ಪ್ರತಿವರ್ತಿಸುತ್ತಾರೆಂದು ಮೇಲ್ವಿಚಾರಕರು ಸಾಮಾನ್ಯವಾಗಿ ಕಂಡುಕೊಳ್ಳುತ್ತಾರೆ. ಮೇಲ್ವಿಚಾರಕರು ಅವರ ಸಮಸ್ಯೆಗಳಿಗೆ ಕಿವಿಗೊಡಲು ದಯೆಯಿಂದ ಸಮಯ ಕೊಟ್ಟು ತಿಳುವಳಿಕೆಯುಳ್ಳ ಸೂಚನೆಯನ್ನು ಕೊಡುವುದನ್ನು, ಯಾರು ಖಿನ್ನತೆಯಿಂದ ಬಳಲುತ್ತಾರೋ ಅವರು ಗಣ್ಯಮಾಡುತ್ತಾರೆ.
ಪ್ರಶಂಸೆ ಮತ್ತು ಜಾಣತನದ ಬೆಲೆಯ ಕುರಿತೂ ಪೌಲನ ಪತ್ರವು ಹಿರಿಯರಿಗೆ ಜ್ಞಾಪಕ ಕೊಡುತ್ತದೆ. ಫಿಲೆಮೋನನ ಮೂಲಕ ‘ದೇವಜನರ ಹೃದಯಕ್ಕೆ ಪ್ರೋತ್ಸಾಹ ಉಂಟಾಯಿತು’ ಎಂದು ಅಂಗೀಕರಿಸುವ ಮೂಲಕ ಆತನು ಆರಂಭಿಸುತ್ತಾನೆ. (7 ನೆಯ ವಚನ) ಈ ಯಥಾರ್ಥವಾದ ಹೊಗಳಿಕೆಯು ನಿಸ್ಸಂಶಯವಾಗಿ ಫಿಲೆಮೋನನನ್ನು ಹೆಚ್ಚು ಸ್ವೀಕಾರಾರ್ಹ ಮನೋಭಾವಕ್ಕೆ ನಡಿಸಿರಬೇಕು. ಅದೇ ರೀತಿ, ಸೂಚನೆ ಮತ್ತು ಸಲಹೆಯನ್ನು ಆಗಿಂದಾಗ್ಯೆ ಯಥಾರ್ಥವಾದ, ಹೃತ್ಪೂರ್ವಕ ಹೊಗಳಿಕೆಯಿಂದ ಮೆತ್ತೆಹಾಕಬಹುದು. ಮತ್ತು ಅಂಥ ಸೂಚನೆಯು ಒರಟೂ ಜಾಣ್ಮೆರಹಿತವೂ ಆಗಿರದೆ, ಕೇಳುವವನಿಗೆ ಹೆಚ್ಚು ಒಗ್ಗುವಂತೆ ತುಂಬಾ “ರಸವತ್ತಾಗಿ” [ಉಪ್ಪಿನಿಂದ ಕೂಡಿದ್ದಾಗಿ, NW] ಇರಬೇಕು.—ಕೊಲೊಸ್ಸೆ 4:6.
ಫಿಲೆಮೋನನು ಯೋಗ್ಯವಾದದ್ದನ್ನೇ ಮಾಡುವನೆಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುತ್ತಾ ಅಪೊಸ್ತಲ ಪೌಲನು ಮತ್ತೂ ಅಂದದ್ದು: “ನನ್ನ ಮಾತನ್ನು ಕೇಳುವಿ ಎಂಬ ಭರವಸವುಳ್ಳವನಾಗಿ ಈ ಪತ್ರಿಕೆಯನ್ನು ನಿನಗೆ ಬರೆದಿದ್ದೇನೆ. ನಾನು ಹೇಳಿದ್ದಕ್ಕಿಂತಲೂ ಹೆಚ್ಚಾಗಿ ಮಾಡುವಿಯೆಂದು ನನಗೆ ಗೊತ್ತುಂಟು.” (21 ನೆಯ ವಚನ) ಹಿರಿಯರೇ, ಇದೇ ಆತ್ಮವಿಶ್ವಾಸವನ್ನು ನಿಮ್ಮ ಜತೆ ಕ್ರೈಸ್ತರಲ್ಲಿ ನೀವು ವ್ಯಕ್ತಪಡಿಸುತ್ತೀರೋ? ಯಾವುದು ಯೋಗ್ಯವೂ ಅದನ್ನು ಮಾಡಬಯಸುವಂತೆ ಇದು ಅವರಿಗೆ ಸಹಾಯ ಮಾಡದೋ?
ರಸಕರವಾಗಿಯೇ, ತಮ್ಮ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ವಕ್ತಪಡಿಸುವುದು ಸಹ ಒಳ್ಳೇ ಪ್ರಭಾವ ಬೀರುತ್ತದೆಂದು ಹೆತ್ತವರು ಆಗಿಂದಾಗ್ಯೆ ಕಂಡುಕೊಳ್ಳುತ್ತಾರೆ. ಕೇವಲ ಆವಶ್ಯಕತೆಯನ್ನು ಮುಟ್ಟುವುದಕ್ಕಿಂತ ಹೆಚ್ಚಿನದಾದ್ದ—ಮನಸಾರೆ ವಿಧೇಯತೆ ತೋರಿಸುವ ಅಪೇಕ್ಷೆಯ—ಬೆಲೆಯನ್ನು ಮನಗಾಣುವ ಮೂಲಕ ಹೆತ್ತವರು ತಮ್ಮ ಮಕ್ಕಳಿಗೆ ಒಂದು ರೀತಿಯ ಪ್ರತಿಷ್ಠೆಯನ್ನು ಕೊಡಬಲ್ಲರು. ಹೆತ್ತವರ ಆಜ್ಞೆಗಳು ಯಾ ವಿನಂತಿಗಳು ಸಾಧ್ಯವಾದಲ್ಲೆಲ್ಲಾ ಒಂದು ದಯೆಯುಳ್ಳ, ಪ್ರೀತಿಯ ದ್ವನಿಯಲ್ಲಿ ಮಾಡಲ್ಪಡಬೇಕು. ಅನುತಾಪವು ತೋರಿಸಲ್ಪಡಬೇಕು, ಕಾರಣಗಳನ್ನು ಕೊಡಬೇಕು. ಎಲ್ಲಿ ಅಂಥ ಹೊಗಳಿಕೆಯು ಅರ್ಹವೋ ಅಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಹೃತ್ಪೂರ್ವಕವಾಗಿ ಪ್ರಶಂಸಿಸಬೇಕು ಮತ್ತು ವಿಶೇಷವಾಗಿ ಎಲ್ಲರ ಎದುರಲ್ಲಿ ಕಟುವಾಗಿ ಟೀಕಿಸುವುದನ್ನು ವರ್ಜಿಸಬೇಕು.
ಇದೇ ವಿಚಾರದಲ್ಲಿ, ಗಂಡಂದಿರು ತಮ್ಮ ಪತ್ನಿಯರನ್ನು ಹೊಗಳಲು ಸಿದ್ಧರಾಗಿರುವ ಮೂಲಕ ವಿವೇಚನೆ ಮತ್ತು ದಯೆಯ ಗುಣಗಳನ್ನು ಪ್ರದರ್ಶಿಸಬಲ್ಲರು. ಇದು ಪತ್ನಿಯ ಅಧೀನತೆಯನ್ನು ಒಂದು ಉಲ್ಲಾಸಕರ ಹಾಗೂ ಚೈತನ್ಯ ಮತ್ತು ಆನಂದದ ಮೂಲವನ್ನಾಗಿ ಮಾಡುವುದು!—ಜ್ಞಾನೋಕ್ತಿ 31:28; ಎಫೆಸ 5:28.
ಪೌಲನ ಪತ್ರಕ್ಕೆ ಫಿಲೆಮೋನನು ಸರಿಯಾಗಿ ಹೇಗೆ ಪ್ರತಿಕ್ರಿಯಿಸಿದನೆಂದು ತಿಳಿಸಲ್ಪಟ್ಟಿಲ್ಲ. ಆದರೂ ಅವನಲ್ಲಿ ಪೌಲನಿಗಿದ್ದ ಭರವಸೆಯು ಅನುಚಿತವಾಗಿತ್ತೆಂದು ನಾವು ಊಹಿಸ ಸಾಧ್ಯವಿಲ್ಲ. ಇಂದಿನ ಕ್ರೈಸ್ತ ಹಿರಿಯರು, ಹೆತ್ತವರು ಮತ್ತು ಗಂಡಂದಿರು ಇದೇ ರೀತಿ ತಮ್ಮ ವ್ಯವಹಾರಗಳಲ್ಲಿ ಬಲಾತ್ಕಾರ, ಆಜ್ಞಾಪನೆ, ಮತ್ತು ಒತ್ತಾಯದಿಂದಲ್ಲ, ಬದಲಾಗಿ ‘ಪ್ರೀತಿಯ ಆಧಾರದಲ್ಲಿ ಬುದ್ಧಿಹೇಳುವ’ ಮೂಲಕ ಸಾಫಲ್ಯವನ್ನು ಪಡೆಯುವಂತಾಗಲಿ. (w92 4/15)
[ಪುಟ 23 ರಲ್ಲಿರುವ ಚಿತ್ರ]
ಅಪೊಸ್ತಲನಾದ ತನ್ನ ಅಧಿಕಾರಕ್ಕೆ ಅಪ್ಪೀಲು ಮಾಡುವ ಬದಲಾಗಿ ಪೌಲನು ಫಿಲೆಮೋನನಿಗೆ ಕ್ರೈಸ್ತ ಪ್ರೀತಿಯ ಆಧಾರದಲ್ಲಿ ಬುದ್ಧಿಹೇಳಿದನು