ಯೆಹೋವನನ್ನು ಸೇವಿಸುವುದರಲ್ಲಿ ನಿಜ ಸಂತೋಷ
“ಯಾವನಿಗೆ ಯಾಕೋಬನ ದೇವರು ಸಹಾಯಕನೋ ಯಾವನು ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ ಅವನು ಧನ್ಯನು. [ಸಂತೋಷವುಳ್ಳವನು, NW].”—ಕೀರ್ತನೆ 146:5.
1, 2. ಸಂತೋಷದ ಅರ್ಥ ವಿವರಣೆಯ ಕುರಿತು ಏನು ಹೇಳಲಾಗಿದೆ, ಮತ್ತು ಇಂದಿನ ಹೆಚ್ಚಿನ ಜನರಿಗೆ ಸಂತೋಷವು ಯಾವ ಅರ್ಥದಲ್ಲಿದೆ?
ಸಂತೋಷ ಎಂದರೇನು? ಅದರ ಅರ್ಥ ವಿವರಿಸಲು ನಿಘಂಟುಕಾರರು, ತತ್ವಜ್ಞಾನಿಗಳು ಮತ್ತು ದೇವತಾಶಾಸ್ತ್ರಜ್ಞರು ಶತಮಾನಗಳಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ ಸರ್ವಾನುಮತ ಒಪ್ಪಿಗೆಯನ್ನು ಪಡೆಯುವ ಒಂದು ಅರ್ಥವನ್ನು ಅವರು ಒದಗಿಸಿರುವುದಿಲ್ಲ. ದ ಎನ್ಸೈಕ್ಲೊಪೀಡಿಯ ಬ್ರಿಟಾನಿಕ ಅಂಗೀಕರಿಸುವುದು: “‘ಸಂತೋಷ’ ಅತ್ಯಂತ ನುಣುಚಿಕೊಳ್ಳುವ ಶಬ್ದಗಳಲ್ಲಿ ಒಂದಾಗಿದೆ.” ಜೀವಿತದ ಅವರ ಹೊರನೋಟದ ಮೇಲೆ ಹೊಂದಿಕೊಂಡು, ಸಂತೋಷ ವಿವಿಧ ಜನರಿಗೆ ವಿವಿಧ ಅರ್ಥದಲ್ಲಿರುವಂತೆ ತೋರುತ್ತದೆ.
2 ಹೆಚ್ಚಿನ ಜನರಿಗೆ ಸಂತೋಷವು ಒಳ್ಳೇ ಆರೋಗ್ಯ, ಪ್ರಾಪಂಚಿಕ ಸೊತ್ತುಗಳು ಮತ್ತು ಹಿತಕರವಾದ ಸಾಹಚರ್ಯದ ಸುತ್ತಲೂ ಆವರ್ತಿಸುತ್ತದೆ. ಆದರೂ ಇವೆಲ್ಲವನ್ನು ಪಡೆದಿರುವುದಾದರೂ ಅಸಂತೋಷದಿಂದಿರುವ ಜನರು ಇದ್ದಾರೆ. ಯೆಹೋವ ದೇವರಿಗೆ ಸಮರ್ಪಿತರಾದ ಪುರುಷ ಮತ್ತು ಸ್ತ್ರೀಯರಿಗೆ ಸಾಮಾನ್ಯ ನೋಟಕ್ಕಿಂತ ತೀರಾ ಬೇರೆಯಾದ ಸಂತೋಷದ ಒಂದು ಭಾವರೂಪವನ್ನು ಬೈಬಲ್ ಕೊಡುತ್ತದೆ.
ಸಂತೋಷದ ಒಂದು ಭಿನ್ನ ನೋಟ
3, 4. (ಎ) ಯಾರನ್ನು ಯೇಸು ಸಂತೋಷವುಳ್ಳವರೆಂದು ಪ್ರಕಟಿಸಿದನು? (ಬಿ) ಯೇಸು ತಿಳಿಸಿದ ಸಂತೋಷದ ವಿಷಯಗಳ ಸಂಬಂಧದಲ್ಲಿ ಏನನ್ನು ಗಮನಿಸಬಹುದು?
3 ಯೇಸು ಕ್ರಿಸ್ತನು ತನ್ನ ಪರ್ವತ ಪ್ರಸಂಗದಲ್ಲಿ, ಸಂತೋಷವು ಒಳ್ಳೇ ಆರೋಗ್ಯದ ಮೇಲೆ, ಪ್ರಾಪಂಚಿಕ ಸೊತ್ತುಗಳು ಮುಂತಾದವುಗಳ ಮೇಲೆ ಹೊಂದಿಕೊಂಡಿದೆ ಎಂದು ಹೇಳಲಿಲ್ಲ. “ತಮ್ಮ ಆತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು” ಮತ್ತು “ನೀತಿಗಾಗಿ ಹಸಿದು ಬಾಯಾರಿದವರು” ನಿಜವಾಗಿ ಸಂತೋಷವುಳ್ಳವರು ಎಂದು ಆತನು ಹೇಳಿದನು. ನಿಜ ಸಂತೋಷಕ್ಕೆ ಬೇಕಾದ ಈ ಎರಡು ನಿಜತ್ವಗಳಿಗೆ ಸಂಬಂಧಿಸಿರುವುದು ಯೇಸುವಂದ ಅಸಂಗತೋಕ್ತಿಯಂತೆ ಕಾಣುವ ಈ ಹೇಳಿಕೆ: “ದುಃಖಪಡುವವರು ಧನ್ಯರು [ಸಂತೋಷವುಳ್ಳವರು, NW] ಅವರು ಸಮಾಧಾನ ಹೊಂದುವರು.” (ಮತ್ತಾಯ 5:3-6) ಪ್ರಿಯ ಜನರಲ್ಲಿ ಒಬ್ಬರನ್ನು ಕಳಕೊಂಡಾಗ ಜನರು ಯಾಂತ್ರಿಕವಾಗಿಯೇ ಸಂತೋಷವುಳ್ಳವರಾಗುವರು ಎಂದು ಯೇಸು ಹೇಳಿರಲಿಲ್ಲವೆಂಬದು ವ್ಯಕ್ತ. ಬದಲಿಗೆ ತಮ್ಮ ಪಾಪಪೂರ್ಣ ಸ್ಥಿತಿಗಾಗಿ ಮತ್ತು ಅದರ ಫಲಿತಾಂಶಕ್ಕಾಗಿ ದುಃಖಪಡುತ್ತಿರುವವರ ಕುರಿತು ಅವನು ಮಾತಾಡುತ್ತಿದ್ದನು.
4 ಮಾನವ ಸೃಷ್ಟಿಯು “ನಾಶದ ವಶದಿಂದ ಬಿಡುಗಡೆಯಾಗುವ” ನಿರೀಕ್ಷೆಯ ಆಧಾರದ ಮೇಲೆ ಪಾಪದ ಕೆಳಗೆ ನರಳುತ್ತಾ ಇದೆ ಎಂದು ಅಪೊಸ್ತಲ ಪೌಲನು ಹೇಳಿದ್ದನು. (ರೋಮಾಪುರ 8:21, 22) ಕ್ರಿಸ್ತನ ವಿಮೋಚನಾ ಯಜ್ಞದ ಮೂಲಕ ಯೆಹೋವನ ಪಾಪ-ಪ್ರಾಯಶ್ಚಿತದ್ತ ಒದಗಿಸುವಿಕೆಯನ್ನು ಸ್ವೀಕರಿಸುವ ಮಾನವರು ಮತ್ತು ದೇವರ ಚಿತ್ತವನ್ನು ಮಾಡುವವರು ನಿಜವಾಗಿಯೂ ಸಮಾಧಾನ ಹೊಂದುವರು ಮತ್ತು ಸಂತೋಷವುಳ್ಳವರಾಗಿರುವರು. (ರೋಮಾಪುರ 4:6-8) “ಸೌಮ್ಯ-ಸ್ವಭಾವದವರು,” “ಕರುಣೆಯುಳ್ಳವರು,” “ನಿರ್ಮಲ ಹೃದಯದವರು,” ಮತ್ತು “ಶಾಂತಿಶೀಲರು” ಸಹ ಸಂತೋಷವುಳ್ಳವರೆಂದು ಯೇಸು ಪರ್ವತ ಪ್ರಸಂಗದಲ್ಲಿ ಪ್ರಕಟಿಸಿದನು. ಅಂಥ ದೀನ ಜನರು, ಹಿಂಸೆಪಡಿಸಲ್ಪಟ್ಟರು ಸಹ ತಮ್ಮ ಸಂತೋಷವನ್ನು ಕಳಕೊಳ್ಳಲಾರರು ಎಂಬ ಆಶ್ವಾಸನೆಯನ್ನು ಆತನು ಕೊಟ್ಟನು. (ಮತ್ತಾಯ 5:5-11, NW) ಈ ಉನ್ನತವಾದ ಸಂತೋಷದ ವಿಷಯಗಳು ಬಡವರನ್ನೂ ಧನಿಕರನ್ನೂ ಸಮಾನಸ್ಥಾನದಲಿಡ್ಲುತ್ತದೆ ಎಂದು ಗಮನಿಸುವುದು ಸ್ವಾರಸ್ಯಕರವಾಗಿದೆ.
ನಿಜ ಸಂತೋಷಕ್ಕೆ ಆಧಾರ
5. ದೇವರ ಸಮರ್ಪಿತ ಜನರ ಸಂತೋಷಕ್ಕೆ ಮೂಲಾಧಾರವು ಯಾವುದು?
5 ನಿಜ ಸಂತೋಷದ ಮೂಲವು ಪ್ರಾಪಂಚಿಕ ಐಶ್ವರ್ಯದಲ್ಲಿ ಕಂಡುಬರುವುದಿಲ್ಲ. ಜ್ಞಾನಿ ಸೊಲೊಮೋನನು ಹೇಳಿದ್ದು: “ಯೆಹೋವನ ಆಶೀರ್ವಾದವು—ಐಶ್ವರ್ಯದಾಯಕವು, ಅದು ವ್ಯಸನವನ್ನು ಸೇರಿಸದು.” (ಜ್ಞಾನೋಕ್ತಿ 10:22) ಯೆಹೋವನ ವಿಶ್ವ ಸಾರ್ವಭೌಮತ್ವವನ್ನು ಅಂಗೀಕರಿಸುವ ಸೃಷ್ಟಿಜೀವಿಗಳಿಗೆ ಸಂತೋಷವು ದೇವರ ಆಶೀರ್ವಾದಕ್ಕೆ ಅಗಲಿಸಲಾರದ ರೀತಿಯಲ್ಲಿ ಸಂಬಂಧಿಸಿದೆ. ಯೆಹೋವನ ಆಶೀರ್ವಾದವು ಇರುವ ಮತ್ತು ಅದನ್ನು ಅನುಭವಿಸುವ ಸಮರ್ಪಿತ ವ್ಯಕ್ತಿಯು ನಿಜವಾಗಿ ಸಂತೋಷಿತನೇ ಸರಿ. ಬೈಬಲ್ನ ನೋಟಕ್ಕನುಸಾರ ಸಂತೋಷದಲ್ಲಿ—ಸಂತೃಪ್ತಿ, ಸಮಾಧಾನ ಮತ್ತು ಯೆಹೋವನ ಸೇವೆಯಲ್ಲಿ ಸಾಫಲ್ಯ ಒಳಗೂಡಿರುತ್ತದೆ.
6. ಯೆಹೋವನ ಜನರು ನಿಜವಾಗಿ ಸಂತೋಷವುಳ್ಳವರಾಗುವಂತೆ ಅವರಿಂದ ಏನು ಅವಶ್ಯಪಡಿಸಲ್ಪಡುತ್ತದೆ?
6 ನಿಜ ಸಂತೋಷವು ಯೆಹೋವನೊಂದಿಗೆ ಒಂದು ಯೋಗ್ಯ ಸಂಬಂಧದ ಮೇಲೆ ಆತುಕೊಂಡಿದೆ. ಅದು ದೇವರ ಮೇಲಣ ಪ್ರೀತಿ ಮತ್ತು ಆತನಿಗೆ ನಂಬಿಗಸ್ತಿಕೆಯ ಮೇಲೆ ಆಧಾರಿಸಿದೆ. ಯೆಹೋವನ ಸಮರ್ಪಿತ ಸೇವಕರು ಪೌಲನ ಮಾತುಗಳಿಗೆ ಹೃದಯಪೂರ್ವಕ ಅನುಮೋದನೆ ಕೊಡುತ್ತಾರೆ: “ನಮ್ಮಲ್ಲಿ ಒಬ್ಬನಾದರೂ ತನಗಾಗಿ ಬದುಕುವದೂ ಇಲ್ಲ . . . ಬದುಕಿದರೆ ಕರ್ತನಿಗಾಗಿ [ಯೆಹೋವನಿಗಾಗಿ, NW] ಬದುಕುತ್ತೇವೆ. . . . ಬದುಕಿದರೂ ಸತ್ತರೂ ನಾವು ಕರ್ತನವರೇ. [ಯೆಹೋವನವರೇ, NW].” (ರೋಮಾಪುರ 14:7, 8) ಹೀಗೆ ನಿಜ ಸಂತೋಷವು, ಯೆಹೋವನಿಗೆ ವಿಧೇಯತೆ ಮತ್ತು ಆತನ ಚಿತ್ತಕ್ಕೆ ಆನಂದಯುಕ್ತ ಅಧೀನತೆಯ ಹೊರತು ಲಭಿಸಲಾರದು. ಯೇಸುವಂದದ್ದು: “ದೇವರ ವಾಕ್ಯವನ್ನು ಕೇಳಿ ಅದಕ್ಕೆ ಸರಿಯಾಗಿ ನಡಕೊಳ್ಳುವವರೇ ಧನ್ಯರು [ಸಂತೋಷವುಳ್ಳವರು, NW].”—ಲೂಕ 11:28.
ಸಂತೋಷದ ಬದಲಾಗುವ ವಿಷಯಗಳು
7, 8. (ಎ) ಸಂತೋಷದ ವಿಷಯಗಳನ್ನು ಹೇಗೆ ವರ್ಗೀಕರಿಸಬಹುದು? (ಬಿ) ಮದುವೆ ಮತ್ತು ಮಕ್ಕಳನ್ನು ಹಡೆಯುವಿಕೆಯ ಸಂಬಂಧದಲ್ಲಿ ಏನನ್ನು ಹೇಳಬಹುದು?
7 ಮೇಲಿನ ಸಂತೋಷದ ವಿಷಯಗಳನ್ನು “ಮೂಲಾಧಾರಗಳು” ಅಥವಾ “ಬದಲಾಗದವುಗಳು”, ಎಂದು ಕರೆಯಬಹುದು ಯಾಕಂದರೆ ಅವು ಯೆಹೋವನ ಸಮರ್ಪಿತ ಸೇವಕರಿಗೆ ಯಾವಾಗಲೂ ಸಾಧಾರವುಳ್ಳವುಗಳಾಗಿವೆ. ಅದಲ್ಲದೆ, ಯಾವುವನ್ನು ಬದಲಾಗುವವುಗಳೆಂದು ಕರೆಯಬಹುದೋ ಅಂಥವುಗಳು ಅಂದರೆ, ಒಂದು ಸಮಯ ಸಂತೋಷದಲ್ಲಿ ಪರಿಣಮಿಸಬಹುದಾದ ಆದರೆ ಇನ್ನೊಂದು ಸಮಯದಲ್ಲಿ ತುಸು ಅಥವಾ ಏನೂ ಸಂತೋಷವನ್ನು ಕೊಡದ ವಿಷಯಗಳು ಇರಬಲ್ಲವು. ಮೂಲಪಿತೃಗಳ ಮತ್ತು ಕ್ರೈಸ್ತ-ಪೂರ್ವದ ಕಾಲಾವಧಿಗಳಲ್ಲಿ, ಮದುವೆ ಮತ್ತು ಮಕ್ಕಳನ್ನು ಹಡೆಯುವಿಕೆಯು ಸಂತೋಷಕ್ಕೆ ಅತ್ಯಾವಶ್ಯಕವಾಗಿ ಪರಿಗಣಿಸಲ್ಪಡುತ್ತಿದ್ದವು. ಇದು ರಾಹೇಲಳು ಯಾಕೋಬನಿಗೆ ಮಾಡಿದ ಮನೋವೇಧಕ ವಿನಂತಿಯಲ್ಲಿ ಪ್ರತಿಬಿಂಬಿಸಿಯದೆ: “ಮಕ್ಕಳನ್ನು ನನಗೆ ಕೊಡು; ಇಲ್ಲದಿದ್ದರೆ ಸಾಯುವೆನು.” (ಆದಿಕಾಂಡ 30:1) ಮಕ್ಕಳನ್ನು ಹಡೆಯುವ ಕಡೆಗಿನ ಈ ಮನೋಭಾವವು ಆ ಕಾಲಾವಧಿಗಾಗಿ ಯೆಹೋವನ ಉದ್ದೇಶಕ್ಕೆ ತಕ್ಕದ್ದಾಗಿತ್ತು.—ಆದಿಕಾಂಡ 13:14-16; 22:17.
8 ಮದುವೆ ಮತ್ತು ಮಕ್ಕಳನ್ನು ಹಡೆಯುವಿಕೆಯು ಆರಂಭದ ಕಾಲದ ಯೆಹೋವನ ಜನರ ನಡುವೆ ದೇವ-ದತ್ತ ಆಶೀರ್ವಾದಗಳಾಗಿ ಎಣಿಸಲ್ಪಡುತ್ತಿದ್ದವು. ಆದರೂ ಅವರ ಇತಿಹಾಸದ ವಿಪತ್ಕಾರಕ ಅವಧಿಗಳಲ್ಲಿ ಇವುಗಳೊಂದಿಗೆ ಸಂಕಟಗಳು ಮತ್ತು ಬೇರೆ ಪರಿಸ್ಥಿತಿಗಳು ಜತೆಗೂಡಿದ್ದವು. (ಕೀರ್ತನೆ 127, 128 ನ್ನು ಯೆರೆಮೀಯ 6:12; 11:22; ಪ್ರಲಾಪಗಳು 2:19; 4:4, 5 ರೊಂದಿಗೆ ಹೋಲಿಸಿರಿ.) ಹೀಗೆ, ವಿವಾಹ ಮತ್ತು ಮಕ್ಕಳನ್ನು ಹಡೆಯುವಿಕೆಗಳು ಶಾಶ್ವತವಾದ ಸಂತೋಷಕಾರಕ-ವಿಷಯಗಳಲ್ಲ ಎಂಬದು ವ್ಯಕ್ತ.
ಗತಕಾಲದಲ್ಲಿ ವಿವಾಹರಹಿತ ಸಂತೋಷ
9. ಯೆಪ್ತಾಹನ ಕುಮಾರಿಯು ವಾರ್ಷಿಕ ಸುತ್ತ್ಯಾರ್ಹತೆಯನ್ನು ಪಡೆದದೇಕ್ದೆ?
9 ದೇವರ ಸೇವಕರಲ್ಲಿ ಅನೇಕರು ಮದುವೆ ರಹಿತವಾಗಿ ನಿಜ ಸಂತೋಷವನ್ನು ಕಂಡುಕೊಂಡಿದ್ದಾರೆ. ಯೆಪಾಹ್ತನ ಕುಮಾರಿಯು ತನ್ನ ತಂದೆಯ ಹರಕೆಯನ್ನು ಮಾನ್ಯಮಾಡುವದಕ್ಕಾಗಿ ಅವಿವಾಹಿತಳಾಗಿ ಉಳಿದಳು. ಸ್ವಲ್ಪ ಕಾಲದ ತನಕ ಅವಳು ಮತ್ತು ಅವಳ ಗೆಳತಿಯರು ಆಕೆಯ ಕನ್ಯಾವಸ್ಥೆಗಾಗಿ ಗೋಳಾಡಿದರು. ಆದರೆ ಯೆಹೋವನ ಆಲಯದಲ್ಲಿ, ಪ್ರಾಯಶಃ “ದೇವದರ್ಶನದ ಗುಡಾರದ ಬಾಗಲ ಬಳಿ ಸೇವೆ ಮಾಡುತ್ತಿದ್ದ ಸ್ತ್ರೀಯ” ರೊಂದಿಗೆ ಪೂರ್ಣ ಸಮಯದ ಸೇವೆ ಮಾಡುವ ಎಂಥ ಸಂತೋಷವು ಅವಳಿಗೆ ಸಿಕ್ಕಿತು! (ವಿಮೋಚನಕಾಂಡ 38:8) ಇದಕ್ಕಾಗಿ ಅವಳಿಗೆ, ವಾರ್ಷಿಕ ಸ್ತುತ್ಯಾರ್ಹತೆಯು ದೊರೆಯಿತು.—ನ್ಯಾಯಸ್ಥಾಪಕರು 11:37-40.
10. ಯೆರೆಮೀಯನಿಂದ ಯೆಹೋವನು ಏನನ್ನು ಆವಶ್ಯಪಡಿಸಿದನು, ಮತ್ತು ಫಲಿತಾಂಶವಾಗಿ ಅವನು ಒಂದು ಅಸಂತೋಷಿತ ಜೀವನವನ್ನು ನಡಿಸಿದ್ದನೆಂದು ತೋರುತ್ತದೋ?
10 ಪ್ರವಾದಿ ಯೆರೆಮೀಯನು ಜೀವಿಸಿದ್ದ ಸಮಯದ ಗಮನಾರ್ಹತೆಯ ಕಾರಣ, ಮದುವೆಯಾಗುವುದನ್ನು ಮತ್ತು ಮಕ್ಕಳನ್ನು ಹಡೆಯುವುದನ್ನು ವರ್ಜಿಸುವಂತೆ ಯೆಹೋವನಿಂದ ಆವಶ್ಯಪಡಿಸಲ್ಪಟ್ಟನು. (ಯೆರೆಮೀಯ 16:1-4) ಆದರೆ ಯೆರೆಮೀಯನು ದೇವರ ಮಾತುಗಳ ಸತ್ಯಪೂರ್ಣತೆಯನ್ನು ಅನುಭವಿಸಿದನು: “ಯಾವನು ಯೆಹೋವನಲ್ಲಿ ನಂಬಿಕೆ ಇಟ್ಟಿದ್ದಾನೋ ಯಾವನಿಗೆ ಯೆಹೋವನು ಭರವಸವಾಗಿದ್ದಾನೋ ಅವನು ಧನ್ಯನು.” (ಯೆರೆಮೀಯ 17:7) ತನ್ನ ಪ್ರವಾದನಾ ಸೇವೆಯ ನಾಲ್ವತ್ತಕ್ಕಿಂತಲೂ ಹೆಚ್ಚು ವರ್ಷಗಳಲ್ಲೆಲ್ಲಾ ಯೆರೆಮೀಯನು ಅವಿವಾಹಿತನಾಗಿಯೇ ಯೆಹೋವನಿಗೆ ನಂಬಿಗಸ್ತ ಸೇವೆಯನ್ನು ಸಲ್ಲಿಸಿದನು. ನಮಗೆ ತಿಳಿದಿರುವಷ್ಟರ ಮಟ್ಟಿಗೆ, ಅವನು ಮದುವೆ-ಮಕ್ಕಳಿಲ್ಲದೇ ಉಳಿದನು. ಆದರೂ, ‘ಯೆಹೋವನ ಒಳ್ಳೇತನದಿಂದಾಗಿ ಕಳೆಯೇರಿ’ ದವರಾದ ನಂಬಿಗಸ್ತ ಯೆಹೂದಿ ಉಳಿಕೆಯವರಂತೆ, ಯೆರೆಮೀಯನು ಸಂತೋಷವುಳ್ಳವನಾಗಿದ್ದನು ಎಂಬದನ್ನು ಯಾರಾದರೂ ಸಂದೇಹಿಸ್ಯಾರೇ?—ಯೆರೆಮೀಯ 31:12.
11. ಒಬ್ಬ ವಿವಾಹ ಜೊತೆಯಿಲದ್ಲಿದ್ದರೂ ಸಂತೋಷವುಳ್ಳವರಾಗಿದ್ದ ಯೆಹೋವನ ನಂಬಿಗಸ್ತ ಸೇವಕರ ಕೆಲವು ಶಾಸ್ತ್ರೀಯ ಉದಾಹರಣೆಗಳು ಯಾವುವು?
11 ಒಂದು ವಿವಾಹದ ಜೊತೆಯಿಲ್ಲದೆ ಬೇರೆ ಅನೇಕರು ಯೆಹೋವನನ್ನು ಸಂತೋಷಭರಿತರಾಗಿ ಸೇವಿಸಿದ್ದಾರೆ. ಅವರು ಒಂಟಿಗರಾಗಿ, ವಿಧವೆ ಯಾ ವಿಧುರರಾಗಿ ಇದ್ದರು. ಅವರಲ್ಲಿ ಪ್ರವಾದಿನಿ ಅನ್ನ; ಪ್ರಾಯಶಃ ದೊರ್ಕ ಅಥವಾ ತಬೀಥ; ಅಪೊಸ್ತಲ ಪೌಲ; ಮತ್ತು ಎಲ್ಲರಿಗಿಂತ ಅತ್ಯಂತ ಮಹಾನ್ ಮಾದರಿಯಾದ—ಯೇಸು ಕ್ರಿಸ್ತನು ಇವರು ಕೂಡಿದ್ದಾರೆ.
ಅವಿವಾಹಿತರು ಆದರೆ ಇಂದು ಸಂತೋಷಿತರು
12. ಯೆಹೋವನ ಸಂತೋಷವುಳ್ಳ ಸಮರ್ಪಿತ ಸೇವಕರಲ್ಲಿ ಕೆಲವರು ಇಂದು ಯಾವುದಕ್ಕಾಗಿ ಸ್ಥಳಮಾಡಿದ್ದಾರೆ, ಮತ್ತು ಏಕೆ?
12 ವಿವಾಹ ಜೊತೆಯಿಲ್ಲದೆ ಇಂದು ಸಾವಿರಾರು ಯೆಹೋವನ ಸಾಕ್ಷಿಗಳು ದೇವರನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಿದ್ದಾರೆ. ಕೆಲವರು ಯೇಸುವಿನ ಆಮಂತ್ರಣವನ್ನು ಸ್ವೀಕರಿಸ ಶಕ್ತರಾಗಿದ್ದಾರೆ: “ಅಂಗೀಕರಿಸಬಲ್ಲವನು [ಅವಿವಾಹಿತತನದ ವರವನ್ನು] ಅಂಗೀಕರಿಸಲಿ.” “ಪರಲೋಕ ರಾಜ್ಯದ ನಿಮಿತ್ತವಾಗಿ” ಅವರಿದನ್ನು ಮಾಡಿರುತ್ತಾರೆ. (ಮತ್ತಾಯ 19:11, 12) ಅಂದರೆ, ರಾಜ್ಯಾಭಿರುಚಿಗಳನ್ನು ಪ್ರವರ್ಧಿಸುವುದಕ್ಕಾಗಿ ಹೆಚ್ಚು ಸಮಯ ಮತ್ತು ಶಕ್ತಿಯನ್ನು ಮೀಸಲಾಗಿಟ್ಟ ಮೂಲಕ ಅವರು ತಮ್ಮ ದೇವದತ್ತ ಸ್ವಾತಂತ್ರ್ಯವನ್ನು ಸದುಪಯೋಗಕ್ಕೆ ಹಾಕಿದ್ದಾರೆ. ಅನೇಕರು ಪಯನೀಯರರಾಗಿ, ಮಿಶನೆರಿಗಳಾಗಿ, ವಾಚ್ ಟವರ್ ಸೊಸೈಟಿಯ ಲೋಕ ಕೇಂದ್ರಾಲಯದಲ್ಲಿ ಅಥವಾ ಅದರ ಒಂದು ಬ್ರಾಂಚ್ ಆಫೀಸಿನಲ್ಲಿ ಬೆತೆಲ್ ಕುಟುಂಬದ ಸದಸ್ಯರಾಗಿ ಸೇವೆಮಾಡುತ್ತಿದ್ದಾರೆ.
13. ಕ್ರೈಸ್ತನು ಅವಿವಾಹಿತನಾಗಿದ್ದರೂ ಸಂತೋಷವುಳ್ಳವನಾಗಿರಬಲ್ಲನು ಎಂದು ಯಾವ ಉದಾಹರಣೆಗಳು ತೋರಿಸುತ್ತವೆ?
13 ಒಬ್ಬ ಪ್ರಿಯ ವೃದ್ಧ ಸಹೋದರಿಯು, “ಒಂಟಿಗ ಮತ್ತು ಸಂತೋಷವುಳ್ಳ ಪಯನೀಯರಳಾಗಿ” ಎಂಬ ಸ್ವಯಂ ಸೂಚಕ ಶೀರ್ಷಿಕೆಯಿಂದ ತನ್ನ ಜೀವನ ಕಥೆಯನ್ನು ತಿಳಿಸಿದ್ದಾಳೆ. (ದ ವಾಚ್ಟವರ್, ಮೇ 1, 1985, ಪುಟ 23-6) ಬೆತೆಲ್ ಸೇವೆಯಲ್ಲಿ 50ಕ್ಕಿಂತಲೂ ಹೆಚ್ಚು ವರ್ಷಗಳನ್ನು ಕಳೆದ ಇನ್ನೊಬ್ಬ ಅವಿವಾಹಿತೆ ಸಹೋದರಿ ಅಂದದ್ದು: “ನನ್ನ ಜೀವಿತದಲ್ಲಿ ಮತ್ತು ನನ್ನ ಕೆಲಸದಲ್ಲಿ ನಾನು ಪೂರ್ಣ ಸಂತೃಪ್ತಳು. ನಾನು ಅತಿಯಾಗಿ ಪ್ರೀತಿಸುವ ಒಂದು ಕೆಲಸದಲ್ಲಿ ನಾನು ಎಂದಿಗಿಂತಲೂ ಹೆಚ್ಚು ಕಾರ್ಯಮಗ್ನಳಿದ್ದೇನೆ. ಯಾವ ವಿಷಾದವೂ ನನಗಿಲ್ಲ. ಪುನಃ ಇದೇ ನಿರ್ಣಯವನ್ನು ಮಾಡುವೆನು.”—ದ ವಾಚ್ಟವರ್, ಜೂನ್ 15, 1982, ಪುಟ 15.
14, 15. (ಎ) ಅಪೊಸ್ತಲ ಪೌಲನಿಗೆ ಅನುಸಾರವಾಗಿ, ಅವಿವಾಹಿತರಾಗಿ ಉಳಿಯಲು ಯಾವುದು ಆವಶ್ಯಕವಾಗಿದೆ? (ಬಿ) ಅವಿವಾಹಿತ ವ್ಯಕ್ತಿ “ಒಳ್ಳೇದನ್ನು” ಮಾಡುತ್ತಾನೆ ಮತ್ತು ಹೆಚ್ಚು “ಸುಖ” ಉಳ್ಳವನೆಂದು ಪೌಲನು ಹೇಳುವುದೇಕೆ?
14 “ನಿರ್ಣಯ” ಎಂಬ ಆ ಶಬ್ದವನ್ನು ಗಮನಿಸಿರಿ. ಪೌಲನು ಬರೆದದ್ದು: “ಆದರೆ ಒಬ್ಬನು ದೃಢಚಿತ್ತನಾಗಿದ್ದು ಬಲವಂತವೇನೂ ಇಲ್ಲದೆ ತನ್ನಿಷ್ಟವನ್ನು ನಡಿಸುವುದಕ್ಕೆ ಹಕ್ಕುಳ್ಳವನಾಗಿ ತನ್ನ ಅವಿವಾಹಿತ ಸ್ಥಿತಿಯನ್ನು ಇಟ್ಟುಕೊಳ್ಳಲು ತನ್ನೊಳಗೆ ನಿರ್ಣಯಿಸಿಕೊಂಡರೆ ಅವನು ಹಾಗೆ ಮಾಡುವದು ಒಳ್ಳೇದು. ಹಾಗೆಯೇ ಮದುವೆಯಾಗಿ ತನ್ನ ಒಂಟಿತನವನ್ನು ಬಿಟ್ಟುಕೊಡುವವನೂ ಒಳ್ಳೇದನ್ನು ಮಾಡುತ್ತಾನೆ. ಆದರೂ, ಮದುವೆ ಮಾಡಿಕೊಳ್ಳದೆ ಇರುವವನು ಇನ್ನೂ ಒಳ್ಳೇದನ್ನು ಮಾಡುತ್ತಾನೆ.” (1 ಕೊರಿಂಥ 7:37, 38, NW) “ಇನ್ನೂ ಒಳ್ಳೇದು” ಏಕೆ? ಪೌಲನು ವಿವರಿಸುವುದು: “ಆದರೆ ನೀವು ಚಿಂತೆಯಿಲ್ಲದವರಾಗಿರಬೇಕೆಂದೇ ನನ್ನ ಇಷ್ಟ. ಮದುವೆಯಿಲ್ಲದವನು ತಾನು ಕರ್ತನನ್ನು ಹೇಗೆ ಮೆಚ್ಚಿಸಬಹುದೆಂದು ಕರ್ತನ ಕಾರ್ಯಗಳ ಕುರಿತು ಚಿಂತಿಸುತ್ತಾನೆ. . . . ಮದುವೆಯಿಲ್ಲದವಳು . . . ಕರ್ತನ ಕಾರ್ಯದ ಕುರಿತು ಚಿಂತಿಸುತ್ತಾಳೆ. . . . ನೀವು ಸಜ್ಜನರಿಗೆ ತಕ್ಕಹಾಗೆ ನಡೆದು ಭಿನ್ನಭಾವವಿಲ್ಲದೆ ಕರ್ತನಿಗೆ ಪಾದಸೇವೆ ಮಾಡಬೇಕೆಂದು [ಅಪಕರ್ಷಣೆಯಿಲ್ಲದೆ ಸದಾ ಕರ್ತನ ಸೇವೆಮಾಡುವಂತೆ ಪ್ರೇರೇಪಿಸಲು, NW] ನಿಮ್ಮ ಹಿತಕ್ಕೋಸ್ಕರವೇ ಇದನ್ನು ಹೇಳುತ್ತೇನೆ.”—1 ಕೊರಿಂಥ 7:32-35.
15 ‘ಕರ್ತನ ಅನುಗ್ರಹವನ್ನು ಪಡೆಯುವ’ ನೋಟದೊಂದಿಗೆ “ಅಪಕರ್ಷಣೆಯಿಲ್ಲದೆ ಸದಾ ಕರ್ತನ ಸೇವೆ ಮಾಡು” ವುದಕ್ಕೆ ಸಂತೋಷವು ಸಂಬಂಧಿಸಿದೆಯೇ? ಪೌಲನು ಹಾಗೆ ನೆನಸಿದ್ದನೆಂಬದು ವ್ಯಕ್ತ. ಒಬ್ಬ ಕ್ರೈಸ್ತ ವಿಧವೆಯ ಕುರಿತು ಮಾತಾಡುತ್ತಾ ಅವನಂದದ್ದು: “ಆಕೆಯು ಬೇಕಾದವನನ್ನು [ಕರ್ತನಲ್ಲಿ ಮಾತ್ರವೇ, NW] ಮದುವೆಮಾಡಿಕೊಳ್ಳುವದಕ್ಕೆ ಸ್ವತಂತ್ರಳಾಗಿದ್ದಾಳೆ. ಆದರೂ ಮದುವೆ ಮಾಡಿಕೊಳ್ಳುವದಕ್ಕಿಂತಲೂ ಇದ್ದ ಹಾಗೆಯೇ ಇರುವದು ಆಕೆಗೆ ಸುಖ [ಹೆಚ್ಚು ಸಂತೋಷ, NW] ವೆಂದು ನನ್ನ ಅಭಿಪ್ರಾಯ; ನನಗೂ ದೇವರ ಆತ್ಮವುಂಟೆಂದು ನೆನಸುತ್ತೇನೆ.”—1 ಕೊರಿಂಥ 7:39, 40.
ಅವಿವಾಹಿತ ಸ್ಥಿತಿಯ ಪ್ರಯೋಜನಗಳು
16. ಯೆಹೋವನ ಅವಿವಾಹಿತ ಸಾಕ್ಷಿಗಳಿಂದ ಆನಂದಿಸಲ್ಪಡುವ ಕೆಲವು ಪ್ರಯೋಜನಗಳು ಯಾವುವು?
16 ವ್ಯಕ್ತಿಯೊಬ್ಬನು ಅವಿವಾಹಿತನಾಗಿರುವುದು ವೈಯಕ್ತಿಕ ನಿರ್ಣಯದಿಂದಾಗಿರಲಿ ಅಥವಾ ಪರಿಸ್ಥಿತಿಗಳ ಒತ್ತಿನಿಂದಾಗಿರಲಿ, ಅವಿವಾಹಿತ ಸ್ಥಿತಿಯು ಅದರೊಂದಿಗೆ ಅನೇಕ ವೈಯಕ್ತಿಕ ಪ್ರಯೋಜನಗಳನ್ನು ತರುತ್ತದೆ. ಒಂಟಿಗ ವ್ಯಕ್ತಿಗಳಿಗೆ ಹೆಚ್ಚಾಗಿ ದೇವರ ವಾಕ್ಯದ ಅಧ್ಯಯನ ಮತ್ತು ಮನನಕ್ಕಾಗಿ ಅಧಿಕ ಸಮಯವಿರುತ್ತದೆ. ಅವರು ಈ ಪರಿಸ್ಥಿತಿಯ ಸದುಪಯೋಗ ಮಾಡಿದರೆ, ಅವರ ಆತ್ಮಿಕತೆಯು ಆಳವಾಗಿ ಬೆಳೆಯುವುದು. ತಮ್ಮ ಸಮಸ್ಯೆಗಳಲ್ಲಿ ಪಾಲುಗಾರರಾಗಲು ವಿವಾಹಿತ ಜೊತೆಯು ಇಲ್ಲದಿರುವ ಕಾರಣ, ಅನೇಕರು ಯೆಹೋವನ ಮೇಲೆ ಹೆಚ್ಚು ಆಳವಾಗಿ ಆತುಕೊಳ್ಳಲು ಮತ್ತು ಎಲ್ಲಾ ವಿಷಯಗಳಲ್ಲಿ ಆತನ ಮಾರ್ಗದರ್ಶನವನ್ನು ಹುಡುಕಲು ಕಲಿಯುತ್ತಾರೆ. (ಕೀರ್ತನೆ 37:5) ಇದು ಯೆಹೋವನೊಂದಿಗೆ ಒಂದು ಹೆಚ್ಚು ಹತ್ತಿರದ ಸಂಬಂಧಕ್ಕೆ ಬರಲು ನೆರವಾಗುತ್ತದೆ.
17, 18. (ಎ) ಮದುವೆಯಾಗದ ಯೆಹೋವನ ಸೇವಕರಿಗಾಗಿ, ಒಂದು ವಿಸ್ತಾರ್ಯ ಸೇವಾ ರಂಗಕ್ಕಾಗಿ ಯಾವ ಸಂದರ್ಭಗಳು ದೊರೆಯುತ್ತವೆ? (ಬಿ) ಅವಿವಾಹಿತರಾದ ನಿರ್ದಿಷ್ಟ ಯೆಹೋವನ ಸೇವಕರು ತಮ್ಮ ಸಂತೋಷವನ್ನು ವರ್ಣಿಸಿದ್ದು ಹೇಗೆ?
17 ಅವಿವಾಹಿತ ಜನರಿಗೆ ಯೆಹೋವನ ಸ್ತುತಿಗಾಗಿ ಒಂದು ವಿಸ್ತಾರ್ಯವಾದ ಸೇವಾ ರಂಗದಲ್ಲಿ ಕೆಲಸ ಮಾಡುವ ಸಂದರ್ಭಗಳು ದೊರೆಯುತ್ತವೆ. ಮಿನಿಸ್ಟೀರಿಯಲ್ ಟ್ರೈನಿಂಗ್ ಶಾಲೆಯಲ್ಲಿ ಈಗ ನೀಡಲ್ಪಡುವ ವಿಶೇಷ ತರಬೇತು ಅವಿವಾಹಿತ ಸಹೋದರರಿಗೆ ಅಥವಾ ವಿಧುರರಿಗೆ ಸೀಮಿತವಾಗಿದೆ. ಅವಿವಾಹಿತ ಸಹೋದರಿಯರು ಸಹ ದೇವರ ಸೇವೆಯಲ್ಲಿ ಸೇವಾ ಸುಯೋಗಗಳಿಗಾಗಿ ಎಟಕಿಸಿಕೊಳ್ಳಲು ಹೆಚ್ಚು ಸ್ವತಂತ್ರರಿದ್ದಾರೆ. ಸ್ವಲ್ಪ ಹಿಂದೆ ಆರಂಭದಲ್ಲಿ ತಿಳಿಸಲ್ಪಟ್ಟ ಆ ವೃದ್ಧ ಸಹೋದರಿಯು ಒಂದು ಆಫ್ರಿಕನ್ ದೇಶದಲ್ಲಿ ಸೇವೆ ಮಾಡಲು ತನ್ನನ್ನು ನೀಡಿಕೊಂಡಾಗ, ಅವಳನ್ನು ಉಲ್ಲೇಖಿಸುವಲ್ಲಿ, ಅವಳು “50 ವರ್ಷ ವಯಸ್ಸು ಮೀರಿದ್ದ ದುರ್ಬಲ ಮಹಿಳೆ” ಆಗಿದ್ದಳು. ಮತ್ತು ಎಲ್ಲಾ ಮಿಶನೆರಿಗಳು ಗಡೀಪಾರು ಮಾಡಲ್ಪಟ್ಟ ಒಂದು ನಿಷೇಧದ ಸಮಯದಲ್ಲೂ, ಅವಳು ಅಲ್ಲಿಯೇ ಉಳಿದಳು. ಈಗ ಆಕೆ 80 ವರ್ಷಗಳಿಗಿಂತಲೂ ಹೆಚ್ಚು ವಯಸ್ಸಿನವಳಾದಾಗ್ಯೂ ಅಲ್ಲಿ ಪಯನೀಯರಳಾಗಿ ಸೇವೆ ಮಾಡುತ್ತಿದ್ದಾಳೆ. ಅವಳು ಸಂತೋಷಿತಳೋ? ತನ್ನ ಆತ್ಮಕಥೆಯಲ್ಲಿ ಅವಳು ಬರೆದದ್ದು: “ಅವಿವಾಹಿತತನವು ಶಕ್ಯಮಾಡುವ ಹೆಚ್ಚಿನ ಸ್ವಾತಂತ್ರ್ಯ ಮತ್ತು ಅನುಕೂಲವನ್ನು ಶುಶ್ರೂಷೆಯಲ್ಲಿ ಕಾರ್ಯಮಗ್ನಳಾಗಿರಲು ನಾನು ಉಪಯೋಗಿಸ ಶಕ್ತಳಾದೆನು, ಮತ್ತು ಇದು ನನಗೆ ಮಹಾ ಸಂತೋಷವನ್ನು ತಂದಿದೆ. . . . ಗತಿಸಿದ ವರ್ಷಗಳಲ್ಲೆಲ್ಲಾ ಯೆಹೋವನೊಂದಿಗೆ ನನ್ನ ಸಂಬಂಧವು ಹೆಚ್ಚು ಆಳಗೊಂಡಿದೆ. ಆಫ್ರಿಕನ್ ದೇಶವೊಂದರಲ್ಲಿ ಒಂಟಿಗ ಸ್ತ್ರೀಯಾಗಿದ್ದ ನನಗೆ ಆತನು ಸಂರಕ್ಷಕನಾಗಿರುವುದನ್ನು ನಾನು ಕಂಡಿದ್ದೇನೆ.”
18 ದಶಮಾನಗಳಿಂದ ವಾಚ್ ಟವರ್ ಸೊಸೈಟಿಯ ಮುಖ್ಯ ಕಾರ್ಯಾಲಯದಲ್ಲಿ ಸೇವೆಮಾಡಿದ ಒಬ್ಬ ಸಹೋದರನ ಮಾತುಗಳು ಸಹ ಗಮನಕ್ಕೆ ಅರ್ಹವು. ಅವನಿಗೆಂದೂ ಮದುವೆಯಾಗಿರದಿದ್ದರೂ ಮತ್ತು ಮದುವೆಯ ಪ್ರತೀಕ್ಷೆಯಿಲ್ಲದ ಒಂದು ಸ್ವರ್ಗೀಯ ನಿರೀಕ್ಷೆ ಅವನಿಗಿದ್ದರೂ, ಅವನು ಸಂತೋಷವುಳ್ಳವನಾಗಿದ್ದನು. ತನ್ನ 79 ನೆಯ ವಯಸ್ಸಿನಲ್ಲಿ ಅವನು ಬರೆದದ್ದು: “ಆತನ ಪವಿತ್ರ ಚಿತ್ತವನ್ನು ಮಾಡುತ್ತಾ ಇರುವುದಕ್ಕೋಸ್ಕರ ನನ್ನನ್ನು ಆತ್ಮಿಕವಾಗಿ ಹಾಗೂ ದೈಹಿಕವಾಗಿ ಸ್ವಸ್ಥನೂ ಬಲವುಳ್ಳವನೂ ಆಗಿಡುವಂತೆ ಬೇಕಾದ ಸಹಾಯ ಮತ್ತು ವಿವೇಕಕ್ಕಾಗಿ ನಾನು ಪ್ರತಿ ದಿನ ನನ್ನ ಪ್ರೀತಿಯ ಸ್ವರ್ಗೀಯ ತಂದೆಯನ್ನು ಪ್ರಾರ್ಥನೆಯಲ್ಲಿ ವಿನಂತಿಸುತ್ತೇನೆ. ಯೆಹೋವನ ಸೇವೆಯಲ್ಲಿ ಕಳೆದ ನಾಲ್ವತ್ತೊಂಭತ್ತು ವರ್ಷಗಳಲ್ಲಿ ನಾನು ನಿಶ್ಚಯವಾಗಿಯೂ ಒಂದು ಸಂತೋಷವುಳ್ಳ, ಪ್ರತಿಫಲದಾಯಕ ಮತ್ತು ಆಶೀರ್ವದಿತ ಜೀವನ ರೀತಿಯನ್ನು ಆನಂದಿಸಿದ್ದೇನೆ. ಮತ್ತು ಯೆಹೋವನ ಅಪರಿಮಿತ ಕೃಪೆಯಿಂದ ಆತನ ಗೌರವ ಮತ್ತು ಸ್ತುತಿಗಾಗಿ ಮತ್ತು ಆತನ ಜನರ ಆಶೀರ್ವಾದಕ್ಕಾಗಿ ಈ ಸೇವೆಯನ್ನು ಮುಂದರಿಸುತ್ತಾ ಇರುವುದನ್ನು ನಾನು ಮುನ್ನೋಡುತ್ತೇನೆ. . . . ಯೆಹೋವನ ವೈರಿಗಳು ಇಲ್ಲದೆ ಹೋಗುವ ಮತ್ತು ಭೂಮಿಯೆಲ್ಲವೂ ಆತನ ಮಹಿಮೆಯಿಂದ ತುಂಬುವ ಸಮಯಕ್ಕಾಗಿ ಎದುರುನೋಡುತ್ತಾ, ನಂಬಿಕೆಯ ಒಳ್ಳೇ ಹೋರಾಟವನ್ನು ಮಾಡುತ್ತಿರುವಂತೆ ಯೆಹೋವನ ಆನಂದವು ನನಗೆ ಸಹಾಯ ಮಾಡುತ್ತದೆ.”—ಅರಣ್ಯಕಾಂಡ 14:21; ನೆಹೆಮೀಯ 8:10; ದ ವಾಚ್ಟವರ್, ನವಂಬರ 15, 1968, ಪುಟಗಳು 699-702.
ನಿಜ ಸಂತೋಷವು ಯಾವುದರ ಮೇಲೆ ಆಧಾರಿಸಿರುತ್ತದೆ?
19. ನಮ್ಮ ಸಂತೋಷವು ಯಾವುದರ ಮೇಲೆ ಯಾವಾಗಲೂ ಆಧಾರಿಸಿರುವುದು?
19 ಯೆಹೋವನೊಂದಿಗೆ ನಮ್ಮ ಅಮೂಲ್ಯ ಸಂಬಂಧ, ಆತನ ಅನುಗ್ರಹ ಮತ್ತು ಆತನ ಆಶೀರ್ವಾದ—ಈ ಮೂರು ವಿಷಯಗಳು ಅನಂತ ಕಾಲದ ನಿಜ ಸಂತೋಷವನ್ನು ನಮಗೆ ತರುವುವು. ನಿಜ ಸಂತೋಷವನ್ನು ಉತ್ಪಾದಿಸುವುದು ಯಾವುದು ಎಂಬ ಈ ಯೋಗ್ಯ ಹೊರನೋಟದೊಂದಿಗೆ, ಯೆಹೋವನ ವಿವಾಹಿತ ಸೇವಕರು ಸಹ ಮದುವೆಯು ತಮ್ಮ ಜೀವಿತದಲ್ಲಿ ಅತಿ ಮಹತ್ವದ ವಿಷಯವಲ್ಲ ಎಂಬದನ್ನು ಮನಗಾಣುತ್ತಾರೆ. ಅವರು ಅಪೊಸ್ತಲ ಪೌಲನ ಸೂಚನೆಯನ್ನು ಪಾಲಿಸುತ್ತಾರೆ: “ಸಮಯವು ಸಂಕೋಚವಾದದ್ದರಿಂದ ಇನ್ನು ಮೇಲೆ ಹೆಂಡತಿಯುಳ್ಳವರು ಹೆಂಡತಿಯಿಲ್ಲದವರಂತೆಯೂ . . . ಇರಬೇಕು.” (1 ಕೊರಿಂಥ 7:29) ಇದರ ಅರ್ಥವು ತಮ್ಮ ಪತ್ನಿಯರನ್ನು ದುರ್ಲಕ್ಷ್ಯಿಸಬೇಕೆಂದಲ್ಲ. ಬಲಿತ ಕ್ರೈಸ್ತ ಗಂಡಂದಿರು ಯೆಹೋವನ ಸೇವೆಯನ್ನು ಪ್ರಥಮವಾಗಿಡುತ್ತಾರೆ, ಹಾಗೆಯೇ ಅವರ ದೇವಭೀರು, ಪ್ರೀತಿಯುಳ್ಳ ಮತ್ತು ಬೆಂಬಲವೀಯುವ ಪತ್ನಿಯರೂ ಮಾಡುತ್ತಾರೆ, ಕೆಲವರು ತಮ್ಮ ಗಂಡಂದಿರ ಸಂಗಡಿಗರಾಗಿ ಪೂರ್ಣ ಸಮಯದ ಸೇವೆಯನ್ನೂ ಮಾಡುತ್ತಿದ್ದಾರೆ.—ಜ್ಞಾನೋಕ್ತಿ 31:10-12, 28; ಮತ್ತಾಯ 6:33.
20. ತಮ್ಮ ವಿವಾಹ ಸುಯೋಗಗಳ ಕಡೆಗೆ ಅನೇಕ ಕ್ರೈಸ್ತರಿಗೆ ಯಾವ ಯೋಗ್ಯ ಮನೋಭಾವವಿದೆ?
20 ವಿವಾಹಿತ ಸಹೋದರರಾದ ಸಂಚಾರ ಮೇಲ್ವಿಚಾರಕರು, ಬೆತೆಲ್ ಸ್ವಯಂಸೇವಕರು, ಸಭಾ ಹಿರಿಯರು—ನಿಶ್ಚಯವಾಗಿ ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡುವ ವಿವಾಹಿತ ಕ್ರೈಸ್ತರೆಲ್ಲರೂ—‘ಲೋಕವನ್ನು ಪೂರ್ಣವಾಗಿ ಅನುಭೋಗಿಸದೆ’ ಇದ್ದಾರೆ; ಅವರು ತಮ್ಮ ವಿವಾಹದ ಸುಯೋಗಗಳನ್ನು ಯೆಹೋವನಿಗೆ ತಮ್ಮ ಸಮರ್ಪಿತ ಜೀವನದ ಸೇವೆಯೊಳಗೆ ಒಪ್ಪುವಂತೆ ಕಾರ್ಯನಡಿಸುತ್ತಾರೆ. (1 ಕೊರಿಂಥ 7:31) ಆದರೂ ಅವರು ಸಂತೋಷವುಳ್ಳವರು. ಏಕೆ? ಏಕೆಂದರೆ ಅವರ ಸಂತೋಷಕ್ಕೆ ಪ್ರಧಾನ ಕಾರಣವು ಅವರ ವಿವಾಹವಲ್ಲ, ಬದಲಿಗೆ ಅವರು ಮಾಡುವ ಯೆಹೋವನ ಸೇವೆಯೇ. ಮತ್ತು ಅನೇಕ ನಂಬಿಗಸ್ತ ಗಂಡಂದಿರು ಮತ್ತು ಹೆಂಡತಿಯರು—ಹೌದು, ಮತ್ತು ಅವರ ಮಕ್ಕಳು ಸಹ—ವಿಷಯಗಳು ಹಾಗಿರುವುದಕ್ಕಾಗಿ ಸಂತೋಷಪಡುತ್ತಾರೆ.
21, 22. (ಎ) ಯೆರೆಮೀಯ 9:23, 24 ರ ಆಧಾರದಲ್ಲಿ, ಯಾವುದು ನಮ್ಮನ್ನು ಸಂತೋಷದಿಂದ ತುಂಬಬೇಕು? (ಬಿ) ಜ್ಞಾನೋಕ್ತಿ 3:13-18 ರಲ್ಲಿ ಯಾವ ಸಂತೋಷದ ವಿಷಯಗಳು ತಿಳಿಸಲ್ಪಟ್ಟಿವೆ?
21 ಪ್ರವಾದಿ ಯೆರೆಮೀಯನು ಬರೆದದ್ದು: “ಯೆಹೋವನು ಹೀಗೆನ್ನುತ್ತಾನೆ—ಜ್ಞಾನಿಯು ತನ್ನ ಜ್ಞಾನಕ್ಕೆ, ಪರಾಕ್ರಮಿಯು ತನ್ನ ಪರಾಕ್ರಮಕ್ಕೆ, ಐಶ್ವರ್ಯವಂತನು ತನ್ನ ಐಶ್ವರ್ಯಕ್ಕೆ ಹೆಚ್ಚಳಪಡದಿರಲಿ. ಹೆಚ್ಚಳಪಡುವವನು ತಾನು ನನ್ನನ್ನು ತಿಳಿದು ನಾನು ಲೋಕದಲ್ಲಿ ಪ್ರೀತಿನೀತಿನ್ಯಾಯಗಳನ್ನು ತೋರ್ಪಡಿಸುವ ಯೆಹೋವನಾಗಿರುವೆನು ಎಂದು ಗ್ರಹಿಸಿಕೊಂಡಿದ್ದೇನೆ ಎಂಬದಕ್ಕೇ ಹೆಚ್ಚಳಪಡಲಿ; ಪ್ರೀತಿನೀತಿನ್ಯಾಯಗಳೇ ನನಗೆ ಆನಂದವೆಂದು ಯೆಹೋವನು ಅನ್ನುತ್ತಾನೆ.”—ಯೆರೆಮೀಯ 9:23, 24.
22 ನಾವು ವಿವಾಹಿತರಾಗಿರಲಿ ಅವಿವಾಹಿತರಿರಲಿ, ನಮ್ಮ ಸಂತೋಷದ ಮಹತ್ತಾದ ಮೂಲವು ಯೆಹೋವನ ಕುರಿತಾದ ಜ್ಞಾನ ಮತ್ತು ಆತನ ಚಿತ್ತವನ್ನು ಮಾಡುವ ಕಾರಣ ನಮಗಾತನ ಆಶೀರ್ವಾದವಿದೆ ಎಂಬ ದೃಢಭರವಸೆಯೇ ಆಗಿರಬೇಕು. ಯಾವುದು ಮೌಲ್ಯಗಳ ನಿಜ ಪ್ರಮಾಣದಲ್ಲಿ ಕೂಡಿದೆಯೋ ಅದರ, ಯೆಹೋವನಿಗೆ ಯಾವುದು ಆನಂದಕರವೂ ಆ ವಿಷಯಗಳ ಒಳನೋಟವನ್ನು ಪಡೆಯುವುದಕ್ಕೂ ನಾವು ಸಂತೋಷಿಸುತ್ತೇವೆ. ಬಹಳ-ಮದುವೆ ಮಾಡಿಕೊಂಡ ರಾಜ ಸೊಲೊಮೋನನು ಮದುವೆಯೊಂದೇ ಸಂತೋಷದ ಕೀಲಿಕೈಯೆಂದು ಪರಿಗಣಿಸಲಿಲ್ಲ. ಅವನಂದದ್ದು: “ಜ್ಞಾನವನ್ನು ಪಡೆಯುವವನು ಧನ್ಯನು, ವಿವೇಕವನ್ನು ಸಂಪಾದಿಸುವವನು ಭಾಗ್ಯವಂತನು. ಅದರ ಲಾಭವು ಬೆಳ್ಳಿಯ ಲಾಭಕ್ಕಿಂತಲೂ ಅದರಿಂದಾಗುವ ಆದಾಯವು ಬಂಗಾರಕ್ಕಿಂತಲೂ ಅಮೂಲ್ಯವೇ ಸರಿ. ಅದರ ಬೆಲೆಯು ಹವಳಕ್ಕಿಂತಲೂ ಹೆಚ್ಚು, ನಿನ್ನ ಇಷ್ಟವಸ್ತುಗಳೆಲ್ಲವು ಅದಕ್ಕೆ ಸಮವಲ್ಲ. ಜ್ಞಾನವೆಂಬಾಕೆಯ ಬಲಗೈಯಲ್ಲಿ ದೀರ್ಘಾಯುಷ್ಯವೂ, ಎಡಗೈಯಲ್ಲಿ ಧನವೂ ಘನತೆಯೂ ಉಂಟು. ಆಕೆಯ ದಾರಿಗಳು ಸುಖಕರವಾಗಿವೆ, ಆಕೆಯ ಮಾರ್ಗಗಳೆಲ್ಲಾ ಸಮಾಧಾನವೇ. ಜ್ಞಾನವು ತನ್ನನ್ನು ಹಿಡುಕೊಳ್ಳುವವರಿಗೆ ಜೀವದ ಮರವಾಗಿದೆ; ಅದನ್ನು ಅವಲಂಬಿಸುವ ಪ್ರತಿಯೊಬ್ಬನೂ ಧನ್ಯನು. [ಸಂತೋಷವುಳ್ಳವನು, NW].”—ಜ್ಞಾನೋಕ್ತಿ 3:13-18.
23, 24. ಹೊಸ ವಿಷಯ ವ್ಯವಸ್ಥೆಯಲ್ಲಿ ಯೆಹೋವನ ನಂಬಿಗಸ್ತ ಸೇವಕರೆಲ್ಲರೂ ಸಂತೋಷವುಳ್ಳವರಾಗಿರುವರು ಎಂಬ ನಿಶ್ಚಯ ನಮಗಿರುವುದೇಕೆ?
23 ನಮ್ಮಲ್ಲಿ ಯಾರು ವಿವಾಹಿತರೋ ಅವರು ದೈವಿಕ ಚಿತ್ತವನ್ನು ಮಾಡುವುದರಲ್ಲಿ ನಿತ್ಯಾನಂದವನ್ನು ಕಾಣುವಂತಾಗಲಿ. ಮತ್ತು ಆಯ್ಕೆಯಿಂದಾಗಲಿ ಪರಿಸ್ಥಿತಿಗಳ ಒತ್ತರದಿಂದಾಗಲಿ ಅವಿವಾಹಿತರಾಗಿರುವ ನಮ್ಮ ಪ್ರಿಯ ಸಹೋದರರು ಮತ್ತು ಸಹೋದರಿಯರು ತಮ್ಮೆಲ್ಲಾ ಪರೀಕ್ಷೆಗಳನ್ನು ತಾಳಿಕೊಂಡು, ಯೆಹೋವನನ್ನು ಈಗಲೂ ಮತ್ತು ಎಂದೆಂದಿಗೂ ಸೇವಿಸುವುದರಲ್ಲಿ ಸಂತೋಷವನ್ನು ಮತ್ತು ಸಂತೃಪ್ತಿಯನ್ನು ಕಾಣುವಂತಾಗಲಿ. (ಲೂಕ 18:29, 30; 2 ಪೇತ್ರ 3:11-13) ಬರಲಿರುವ ದೇವರ ಹೊಸ ವ್ಯವಸ್ಥೆಯಲ್ಲಿ, “ಪುಸ್ತಕಗಳು” ತೆರೆಯಲ್ಪಡುವವು. (ಪ್ರಕಟನೆ 20:12) ಇವುಗಳಲ್ಲಿ ವಿಧೇಯ ಮಾನವ ಕುಲದ ಸಂತೋಷಕ್ಕೆ ನೆರವಾಗುವ ರೋಮಾಂಚಕರ ಹೊಸ ಆಜ್ಞೆಗಳೂ ಕಟ್ಟಳೆಗಳೂ ಅಡಕವಾಗಿರುವುವು.
24 ನಿಜವಾಗಿಯೂ, ನಮ್ಮ ಸಂಪೂರ್ಣ ಸಂತೋಷದಲ್ಲಿ ಫಲಿಸುವ ಆಶ್ಚರ್ಯಕರವಾದ ಸುವಸ್ತುಗಳನ್ನು ನಮ್ಮ “ಸಂತೋಷವುಳ್ಳ ದೇವರು” ನಮಗಾಗಿ ಕಾದಿರಿಸಿದ್ದಾನೆ ಎಂಬ ವಿಷಯದಲ್ಲಿ ನಾವು ಭರವಸೆಯಿಂದಿರಬಲ್ಲೆವು. (1 ತಿಮೊಥಿ 1:11) ದೇವರು ‘ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತಾ’ ಇರುವನು. (ಕೀರ್ತನೆ 145:16) ಯೆಹೋವನನ್ನು ಸೇವಿಸುವುದರಲ್ಲಿ ನಿಜ ಸಂತೋಷವು ಇಂದು ಮತ್ತು ಯಾವಾಗಲೂ ಇರುವುದು ಎಂಬದಕ್ಕೆ ಯಾವ ಸಂದೇಹವೂ ಇಲ್ಲ.
ನೀವು ಹೇಗೆ ಪ್ರತಿವರ್ತಿಸುವಿರಿ?
▫ ಯೆಹೋವನ ಸಮರ್ಪಿತ ಸೇವಕರ ಸಂತೋಷಕ್ಕೆ ಮೂಲಾಧಾರವು ಯಾವುದು?
▫ ಬೈಬಲ್ನ ಕಾಲದಲ್ಲಿ ಯೆಹೋವನ ಕೆಲವು ಸಂತೋಷಿತ, ಅವಿವಾಹಿತ ಸೇವಕರು ಯಾರು?
▫ ಪೌಲನು ಅವಿವಾಹಿತತನವನ್ನು ಶಿಫಾರಸುಮಾಡಿದ್ದೇಕೆ, ಮತ್ತು ಕೆಲವು ಕ್ರೈಸ್ತರು ಇದನ್ನು ಸಂತೋಷವುಳ್ಳ ಜೀವಿತವಾಗಿ ಕಂಡಿದ್ದಾರೆ ಹೇಗೆ?
▫ ನಮ್ಮ ಸಂತೋಷವು ಯಾವಾಗಲೂ ಯಾವುದರ ಮೇಲೆ ಆಧಾರಿಸಿರುವುದು?
▫ ಹೊಸ ವಿಷಯಗಳ ವ್ಯವಸ್ಥೆಯಲ್ಲಿ ನಂಬಿಗಸ್ತರೆಲ್ಲರು ಸಂತೋಷವುಳ್ಳವರಾಗುವರೆಂದು ನಾವು ಭರವಸೆಯಿಡುವುದೇಕೆ?
[ಪುಟ 16 ರಲ್ಲಿರುವ ಚಿತ್ರ]
ಅನೇಕ ಅವಿವಾಹಿತ ಸಹೋದರಿಯರು ಪೂರ್ಣ ಸಮಯದ ಶುಶ್ರೂಷಕರಾಗಿ ಯೆಹೋವನನ್ನು ಸಂತೋಷದಿಂದ ಸೇವಿಸುತ್ತಿದ್ದಾರೆ
[ಪುಟ 18 ರಲ್ಲಿರುವ ಚಿತ್ರ]
ಯೆಹೋವನ ಅಭಿರುಚಿಗಳನ್ನು ಸೇವಿಸುವುದು ಸಂತೋಷದ ಪ್ರಧಾನ ಮೂಲವಾಗಿದೆ