ಪ್ರತಿಯೊಂದು ವಿಧದ ವಿಗ್ರಹಾರಾಧನೆಯಿಂದ ನಿಮ್ಮನ್ನು ಕಾಪಾಡಿಕೊಳ್ಳಿರಿ
“ದೇವರ ಮಂದಿರಕ್ಕೂ ವಿಗ್ರಹಗಳಿಗೂ ಒಪ್ಪಿಗೆ ಏನು?”—2 ಕೊರಿಂಥ 6:16.
1. ಇಸ್ರಾಯೇಲಿನ ದೇವದರ್ಶನಗುಡಾರ ಮತ್ತು ದೇವಾಲಯಗಳಿಂದ ಏನು ಸೂಚಿಸಲ್ಪಟ್ಟಿತು?
ವಿಗ್ರಹಗಳಿಗೆ ಆಸರೆ ಕೊಡದ ಒಂದು ಆಲಯ ಯೆಹೋವನಿಗೆ ಇದೆ. ಅದು ಮೋಶೆಯ ಮೂಲಕ ನಿರ್ಮಿಸಲ್ಪಟ್ಟ ಇಸ್ರಾಯೇಲ್ಯರ ದೇವದರ್ಶನ ಗುಡಾರದ ಮೂಲಕ ಮತ್ತು ಯೆರೂಸಲೇಮಿನಲ್ಲಿ ನಂತರ ಕಟ್ಟಿದ ಆಲಯಗಳ ಮೂಲಕ ಮುನ್ ಸೂಚಿಸಲ್ಪಟ್ಟಿತ್ತು. ಆ ಕಟ್ಟಡಗಳು “ನಿಜವಾದ ದೇವದರ್ಶನಗುಡಾರ” ವನ್ನು, ಯೆಹೋವನ ಮಹಾ ಆತ್ಮಿಕ ಆಲಯವನ್ನು ಪ್ರತಿನಿಧೀಕರಿಸಿದವು. (ಇಬ್ರಿಯ 8:1-5) ಆ ಆಲಯವು ಯೇಸು ಕ್ರಿಸ್ತನ ಈಡಿನ ಯಜ್ಞಾರ್ಪಣೆಯ ಆಧಾರದ ಮೇಲೆ ದೇವರನ್ನು ಆರಾಧನೆಯಲ್ಲಿ ಸಮೀಪಿಸುವ ಏರ್ಪಾಡಾಗಿರುತ್ತದೆ.—ಇಬ್ರಿಯ 9:2-10, 23.
2. ದೇವರ ಮಹಾ ಆತ್ಮಿಕಾಲಯದಲ್ಲಿ ಯಾರು ಸ್ತಂಭಗಳಾಗುತ್ತಾರೆ, ಮತ್ತು ಮಹಾ ಸಮೂಹದವರು ಯಾವ ಸ್ಥಾನದಲ್ಲಿ ಆನಂದಿಸುತ್ತಾರೆ?
2 ಪ್ರತಿಯೊಬ್ಬ ಅಭಿಷಿಕ್ತ ಕ್ರೈಸ್ತನು ಸ್ವರ್ಗದಲ್ಲಿ ಸ್ಥಾನವನ್ನು ಪಡೆದು, “[ದೇವರ] ಆಲಯದಲ್ಲಿ ಸ್ತಂಭ” ಆಗುವನು. ಹೆರೋದನ ಮೂಲಕ ಪುನಃ ಕಟ್ಟಲ್ಪಟ್ಟ ಆಲಯದಲ್ಲಿನ ಅನ್ಯರ ಅಂಗಳದ ಮೂಲಕ ಪ್ರತಿನಿಧಿಸಲ್ಪಟ್ಟ ಅಂಗಳದಲ್ಲಿ ಯೆಹೋವನ ಇತರ ಆರಾಧಕರ ಒಂದು “ಮಹಾ ಸಮೂಹವು” “[ದೇವರಿಗೆ] ಪವಿತ್ರ ಸೇವೆಯನ್ನು ಸಲ್ಲಿಸು” ತ್ತಿದೆ. ಯೇಸುವಿನ ಯಜ್ಞಾರ್ಪಣೆಯಲ್ಲಿನ ನಂಬಿಕೆಯ ಕಾರಣ, ಅವರಿಗೆ “ಮಹಾ ಹಿಂಸೆ” ಯಿಂದ ಸಂರಕ್ಷಣೆ ದೊರೆಯುವ ನೀತಿಯ ನಿಲುವಿದೆ.—ಪ್ರಕಟನೆ 3:12; 7:9-15.
3, 4. ಭೂಮಿಯ ಮೇಲಿರುವ ಅಭಿಷಿಕ್ತ ಕ್ರೈಸ್ತರ ಸಭೆಯನ್ನು ಯಾವುದಕ್ಕೆ ಹೋಲಿಸಲಾಗಿದೆ, ಮತ್ತು ಯಾವ ಮಾಲಿನ್ಯದಿಂದ ಅದು ಮುಕ್ತವಾಗಿರಬೇಕು?
3 ಭೂಮಿಯ ಮೇಲಿರುವ ಅಭಿಷಿಕ್ತ ಕ್ರೈಸ್ತರ ಸಭೆಯನ್ನು ವಿಗ್ರಹಾರಾಧನೆಯಿಂದ ಮುಕ್ತವಾಗಿರುವ ಇನ್ನೊಂದು ದೇವಾಲಯಕ್ಕೂ ಸಾಂಕೇತಿಕವಾಗಿ ಹೋಲಿಸಲಾಗಿದೆ. ‘ಪವಿತ್ರಾತ್ಮದಿಂದ ಮುದ್ರಿತ’ ರಾಗಿರುವ ಇಂಥವರಿಗೆ ಅಪೊಸ್ತಲ ಪೌಲನು ಹೇಳಿದ್ದು: “ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. ಯೇಸು ಕ್ರಿಸ್ತನೇ ಮುಖ್ಯವಾದ ಮೂಲೆಗಲ್ಲು; ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ಕಟ್ಟಡವು ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ಧ ದೇವಾಲಯವಾಗುತ್ತದೆ. ಆತನಲ್ಲಿ ನೀವು ಸಹ ಪವಿತ್ರಾತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವದಕ್ಕಾಗಿ ನಮ್ಮ ಸಂಗಡ ಕಟ್ಟಲ್ಪಡುತ್ತಾ ಇದ್ದೀರಿ.” (ಎಫೆಸ 1:13; 2:20-22) ಈ 144,000 ಮಂದಿ ಮುದ್ರಿತರು “ಜೀವವುಳ್ಳ ಕಲ್ಲುಗಳು” ಆಗಿ, “ಆತ್ಮಸಂಬಂಧವಾದ ಮಂದಿರವಾಗಿ ಕಟ್ಟಲ್ಪಡುತ್ತಾ” ಇದ್ದು “ಪವಿತ್ರ ಯಾಜಕವರ್ಗ” ದವರಾಗಿದ್ದಾರೆ.—1 ಪೇತ್ರ 2:5; ಪ್ರಕಟನೆ 7:4; 14:1.
4 ಈ ಉಪಯಾಜಕರು “ದೇವರ ಕಟ್ಟಡ” ವಾಗಿರುವುದರಿಂದ, ಈ ದೇವಾಲಯವು ಮಲಿನಗೊಳ್ಳುವಂತೆ ಆತನು ಬಿಡನು. (1 ಕೊರಿಂಥ 3:9, 16, 17) “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಇಜ್ಜೋಡಾಗಬೇಡಿರಿ,” ಎಂದು ಪೌಲನು ಎಚ್ಚರಿಸಿದನು. “ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು? ಬೆಳಕಿಗೂ ಕತ್ತಲೆಗೂ ಐಕ್ಯವೇನು? ಕ್ರಿಸ್ತನಿಗೂ ಸೈತಾನನಿಗೂ ಒಡನಾಟವೇನು? ನಂಬುವವನಿಗೂ ನಂಬದೆ ಇರುವವನಿಗೂ ಪಾಲುಗಾರಿಕೆ ಏನು? ದೇವರ ಮಂದಿರಕ್ಕೂ ವಿಗ್ರಹಗಳಿಗೂ ಒಪ್ಪಿಗೆ ಏನು?” “ಸರ್ವಶಕ್ತನಾದ ಕರ್ತ(ಯೆಹೋವ, NW)” ನಿಗೆ ಸೇರಿದ ಅಭಿಷಿಕ್ತ ಕ್ರೈಸ್ತರು ವಿಗ್ರಹಾರಾಧನಾಮುಕ್ತರಾಗಿರಬೇಕು. (2 ಕೊರಿಂಥ 6:14-18) ಮಹಾ ಸಮೂಹದವರು ಸಹ ಪ್ರತಿಯೊಂದು ವಿಧದ ವಿಗ್ರಹಾರಾಧನೆಯಿಂದ ದೂರವಿರಬೇಕು.
5. ಯೆಹೋವನು ಪೂರ್ಣಭಕ್ತಿಗೆ ಅರ್ಹನೆಂದು ತಿಳಿದಿರುವ ನಿಜ ಕ್ರೈಸ್ತರು ಏನು ಮಾಡುತ್ತಾರೆ?
5 ನೇರ ಮತ್ತು ಕುತಂತ್ರದ—ಹೀಗೆ ಎರಡು ವಿಧಗಳ ವಿಗ್ರಹಾರಾಧನೆ ಇದೆ. ಇಲ್ಲ, ವಿಗ್ರಹಾರಾಧನೆಯು ಸುಳ್ಳು ದೇವರು ಮತ್ತು ದೇವಿಗಳ ಆರಾಧನೆಗೆ ಸೀಮಿತವಾಗಿರುವುದಿಲ್ಲ. ಯೆಹೋವನನ್ನು ಬಿಟ್ಟು ಇನ್ನಾವುದನ್ನೂ ಯಾ ಇನ್ನಾರನ್ನೂ ಆರಾಧಿಸುವುದೇ ಇದಾಗಿದೆ. ವಿಶ್ವ ಸಾರ್ವಭೌಮನಾದ ಆತನು ಸಮರ್ಪಕವಾಗಿಯೇ ಪೂರ್ಣ ಭಕ್ತಿಯನ್ನು ಕೇಳಿಕೊಳ್ಳುತ್ತಾನೆ ಮತ್ತು ಅದಕ್ಕೆ ಅರ್ಹನಾಗಿದ್ದಾನೆ. (ಧರ್ಮೋಪದೇಶಕಾಂಡ 4:24) ಇದರ ಅರಿವುಳ್ಳವರಾಗಿ, ನಿಜ ಕ್ರೈಸ್ತರು ಸಕಲ ವಿಗ್ರಹಾರಾಧನೆಯ ವಿರುದ್ಧ ಇರುವ ಎಚ್ಚರಿಕೆಗಳಿಗೆ ಕಿವಿಗೊಡುತ್ತಾರೆ. (1 ಕೊರಿಂಥ 10:7) ಯೆಹೋವನ ಸೇವಕರು ದೂರವಿರಬೇಕಾದ ಕೆಲವು ನಿರ್ದಿಷ್ಟ ವಿಗ್ರಹಾರಾಧನೆಯ ರೂಪಗಳನ್ನು ನಾವು ಪರಿಗಣಿಸೋಣ.
ಕ್ರೈಸ್ತ ಪ್ರಪಂಚದ ವಿಗ್ರಹಾರಾಧನೆ ಮುನ್ಬಿಂಬಿಸಲ್ಪಟ್ಟದ್ದು
6. ಯೆಹೆಜ್ಕೇಲನು ದರ್ಶನದಲ್ಲಿ ಯಾವ ಅಸಹ್ಯ ಸಂಗತಿಗಳನ್ನು ನೋಡಿದನು?
6 ಯೆಹೆಜ್ಕೇಲ ಪ್ರವಾದಿಯು ಸಾ.ಶ.ಪೂ. 612 ರಲ್ಲಿ ಬಬಿಲೋನ್ಯ ಪರದೇಶವಾಸಿಯಾಗಿದ್ದಾಗ, ಯೆರೂಸಲೇಮಿನ ಯೆಹೋವನ ದೇವಾಲಯದಲ್ಲಿ ಧರ್ಮಭ್ರಷ್ಟ ಯೆಹೂದ್ಯರು ಆಚರಿಸುತ್ತಿದ್ದ ಅಸಹ್ಯ ವಸ್ತುಗಳ ದರ್ಶನ ಅವನಿಗಾಯಿತು. “ರೋಷಗೊಳಿಸುವ ಆ ವಿಗ್ರಹ” ವನ್ನು ಯೆಹೆಜ್ಕೇಲನು ನೋಡಿದನು. ಎಪ್ಪತ್ತು ಜನ ಹಿರಿಯರು ದೇವಾಲಯದಲ್ಲಿ ಧೂಪಾರತಿ ಹಾಕುವುದನ್ನು ನೋಡಲಾಯಿತು. ಒಬ್ಬ ಸುಳ್ಳು ದೇವತೆಯ ಸಂಬಂಧದಲ್ಲಿ ಸ್ತ್ರೀಯರು ಅಳುತ್ತಿರುವುದು ಕಂಡುಬಂತು. ಮತ್ತು 25 ಪುರುಷರು ಸೂರ್ಯನನ್ನು ಆರಾಧಿಸುತ್ತಿದ್ದರು. ಈ ಧರ್ಮಭ್ರಷ್ಟ ಕೃತ್ಯಗಳ ಸೂಚಿತಾರ್ಥವೇನಾಗಿತ್ತು?
7, 8. “ರೋಷಗೊಳಿಸುವ ವಿಗ್ರಹ” ಏನಾಗಿದ್ದಿರಬಹುದು, ಮತ್ತು ಅದು ಯೆಹೋವನನ್ನು ರೋಷಕ್ಕೆ ಏಕೆ ಉದ್ರೇಕಿಸಿತು?
7 ಯೆಹೆಜ್ಕೇಲನು ದರ್ಶನದಲ್ಲಿ ನೋಡಿದ ಅಸಹ್ಯ ವಸ್ತುಗಳ ಮೂಲಕ ಕ್ರೈಸ್ತ ಪ್ರಪಂಚದಲ್ಲಿ ನಡೆಯುವ ವಿಗ್ರಹಾರಾಧನೆಯು ಮುನ್ಬಿಂಬಿಸಲ್ಪಟ್ಟಿತು. ಉದಾಹರಣೆಗೆ ಅವನಂದದ್ದು: “ಇಗೋ, ದೇವರನ್ನು ರೋಷಗೊಳಿಸುವ ಆ ವಿಗ್ರಹವೇ ಯಜ್ಞವೇದಿಯ ಬಾಗಿಲ ಬಡಗಲಲ್ಲಿ ಬಾಗಿಲ ಮುಂದೆ ನಿಂತಿತ್ತು. ಆಗ ಆತನು [ಯೆಹೋವ ದೇವರು] ನನಗೆ—ನರಪುತ್ರನೇ, ಇವರು ಮಾಡುವದನ್ನು ನೋಡಿದೆಯಾ? ಇಸ್ರಾಯೇಲ್ ವಂಶದವರು ಇಲ್ಲಿ ನಡಿಸುವ ಅಧಿಕ ದುರಾಚಾರಗಳನ್ನು ಕಂಡಿಯಾ? ಇದರಿಂದ ನಾನು ನನ್ನ ಪವಿತ್ರಾಲಯವನ್ನು ಬಿಟ್ಟು ದೂರ ಹೋಗಬೇಕಾಯಿತು” ಎಂದು ಹೇಳಿದನು.—ಯೆಹೆಜ್ಕೇಲ 8:1-6.
8 ಈ ವಿಗ್ರಹಾರಾಧಕಾತ್ಮಕವಾದ ರೋಷ ಪ್ರತೀಕವು, ಕಾನಾನ್ಯರು ತಮ್ಮ ಬಾಳ್ ದೇವರ ಪತ್ನಿಯೆಂದು ವೀಕ್ಷಿಸುತ್ತಿದ್ದ ಸುಳ್ಳು ದೇವಿಯನ್ನು ಪ್ರತಿನಿಧೀಕರಿಸುತ್ತಿದ್ದ ಪವಿತ್ರ ಕಂಬವಾಗಿದ್ದಿರಬಹುದು. ಯಾವುದರ ಪ್ರತೀಕವೇ ಆಗಿದ್ದಿರಲಿ, ಯೆಹೋವನಲ್ಲಿ ಅದು ರೋಷವನ್ನು ಉದ್ರೇಕಿಸಿತು. ಏಕೆಂದರೆ ಇದು ಇಸ್ರಾಯೇಲ್ಯರು ಆತನಿಗೆ ತೋರಿಸಬೇಕಾದ ಪೂರ್ಣ ಭಕ್ತಿಯನ್ನು ವಿಂಗಡಿಸಿತು. ಆತನ ಈ ಆಜ್ಞೆಗಳ ಉಲ್ಲಂಘನೆಯಾಗಿ ಇದಿತ್ತು: “ಯೆಹೋವನು ಎಂಬ ನಿನ್ನ ದೇವರು ನಾನೇ. ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು. ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವದರ ರೂಪವನ್ನೂ ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡ ಬೀಳಲೂ ಬಾರದು ಪೂಜೆ ಮಾಡಲೂ ಬಾರದು. ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದವನು.”—ವಿಮೋಚನಕಾಂಡ 20:2-5.
9. ಕ್ರೈಸ್ತ ಪ್ರಪಂಚವು ಹೇಗೆ ಯೆಹೋವನನ್ನು ರೋಷಕ್ಕೆಬ್ಬಿಸಿದೆ?
9 ಧರ್ಮಭ್ರಷ್ಟ ಇಸ್ರಾಯೇಲ್ಯರು ಗೈದ ಅತಿ ಅಸಹ್ಯ ಕೃತ್ಯಗಳಲ್ಲಿ, ದೇವರ ಆಲಯದಲ್ಲಿ ರೋಷದ ಪ್ರತೀಕವನ್ನು ಆರಾಧಿಸಿದ್ದು ಒಂದಾಗಿತ್ತು. ತದ್ರೀತಿ, ಕ್ರೈಸ್ತ ಪ್ರಪಂಚದ ಚರ್ಚುಗಳು ದೇವರಿಗೆ ಅಪಮಾನ ತರುವ ಪ್ರತೀಕ ಮತ್ತು ಮೂರ್ತಿಗಳಿಂದ ಮಲಿನಗೊಂಡಿವೆ ಮತ್ತು ಇದು, ತಾವು ಸೇವಿಸುತ್ತೇವೆಂದು ಅವರು ಹೇಳಿಕೊಳ್ಳುವಾತನಿಗೆ ಅವರು ಕೊಡುವ ಪೂರ್ಣ ಭಕ್ತಿಯನ್ನು ವಿಂಗಡಿಸುತ್ತದೆ. ಪುರೋಹಿತ ವರ್ಗವು ಮಾನವ ಕುಲದ ಏಕಮಾತ್ರ ನಿರೀಕ್ಷೆಯಾದ ಆತನ ರಾಜ್ಯವನ್ನು ತಿರಸ್ಕರಿಸಿ, ಯಾವುದು ನಿಲ್ಲಬಾರದು ಸ್ಥಳದಲ್ಲಿ ನಿಂತಿದೆಯೋ ಆ “ಪವಿತ್ರ ಸ್ಥಾನದಲ್ಲಿ ನಿಂತಿರುವ” “ಅಸಹ್ಯ ವಸ್ತು” ವಾದ ಸಂಯುಕ್ತ ರಾಷ್ಟ್ರ ಸಂಘವನ್ನು ಮೂರ್ತೀಕರಿಸುವುದರಿಂದಲೂ ದೇವರು ರೋಷಕ್ಕೆ ಉದ್ರೇಕಿಸಲ್ಪಡುತ್ತಾನೆ.—ಮತ್ತಾಯ 24:15, 16; ಮಾರ್ಕ 13:14.
10. ಯೆಹೆಜ್ಕೇಲನು ದೇವಾಲಯದೊಳಗೆ ಏನು ನೋಡಿದನು, ಮತ್ತು ಇದು, ಕ್ರೈಸ್ತ ಪ್ರಪಂಚದಲ್ಲಿ ಗಮನಿಸಲಾಗುವುದನ್ನು ಹೇಗೆ ಹೋಲುತ್ತದೆ?
10 ದೇವಾಲಯವನ್ನು ಪ್ರವೇಶಿಸಿ, ಯೆಹೆಜ್ಕೇಲನು ವರದಿ ಮಾಡುವುದು: “ಅಕಟಾ, ಎಲ್ಲಾ ಜಾತಿಯ ಕ್ರಿಮಿಕೀಟಗಳೂ ಅಸಹ್ಯ ಮೃಗಗಳೂ ಇಸ್ರಾಯೇಲ್ ವಂಶದವರು ಪೂಜಿಸುವ ಸಕಲ ಮೂರ್ತಿಗಳೂ ಸುತ್ತಲೂ ಗೋಡೆಯಲ್ಲಿ ಚಿತ್ರಿಸಲ್ಪಟ್ಟಿದ್ದವು. ಇಸ್ರಾಯೇಲ್ ವಂಶದ ಎಪ್ಪತ್ತು ಮಂದಿ ಹಿರಿಯರೂ . . . ತಮ್ಮ ತಮ್ಮ ಕೈಗಳಲ್ಲಿ ಧೂಪಾರತಿಗಳನ್ನು ಹಿಡಿದುಕೊಂಡು ಆ ಚಿತ್ರಗಳ ಮುಂದೆ ನಿಂತಿದ್ದರು; ಧೂಪದ ಸುವಾಸನೆಯ ಧೂಮವು ಮೇಘವಾಗಿ ಏರುತ್ತಿತ್ತು.” ತುಸು ಯೋಚಿಸಿ! ಯೆಹೋವನ ಆಲಯದಲ್ಲಿ ಇಸ್ರಾಯೇಲ್ಯ ಹಿರಿಯರು ಗೋಡೆಯ ಮೇಲಿನ ಅಸಹ್ಯವಾದ ಕೆತ್ತನೆಯ ಕೆಲಸಗಳಿಂದ ಪ್ರತಿನಿಧೀಕರಿಸಲ್ಪಟ್ಟ ಸುಳ್ಳು ದೇವತೆಗಳಿಗೆ ಧೂಪಾರತಿ ಎತ್ತುತ್ತಿದ್ದಾರೆ. (ಯೆಹೆಜ್ಕೇಲ 8:10-12) ಇದಕ್ಕೆ ಸದೃಶವಾಗಿ, ಪಕ್ಷಿಗಳು ಮತ್ತು ವನ್ಯಮೃಗಗಳು ಕ್ರೈಸ್ತ ಪ್ರಪಂಚದ ದೇಶಗಳನ್ನು ಸೂಚಿಸಲು ಉಪಯೋಗಿಸಲ್ಪಡುತ್ತಿವೆ ಮತ್ತು ಇವಕ್ಕೆ ಜನರು ತಮ್ಮ ಭಕ್ತಿಯನ್ನು ಕೊಡುತ್ತಾರೆ. ಇದಲ್ಲದೆ, ಪುರೋಹಿತರಲ್ಲಿ ಅನೇಕರು, ಯೆಹೋವ ದೇವರು ಮಾಡಿದ ಸೃಷ್ಟಿಯ ಕುರಿತ ನಿಜ ಬೈಬಲ್ ವೃತ್ತಾಂತವನ್ನು ಸಮರ್ಥಿಸುವ ಬದಲಿಗೆ, ಮಾನವನು ಮನುಷ್ಯ ಜಾತಿಗಿಂತ ಕೆಳಗಿರುವ ಪ್ರಾಣಿ ಜೀವರೂಪಗಳಿಂದ ವಿಕಾಸಗೊಂಡು ಬಂದಿದ್ದಾನೆ ಎಂಬುದನ್ನು ಸಮರ್ಥಿಸಿ ಜನರನ್ನು ತಪ್ಪು ದಾರಿಗೆಳೆಯಲು ಸಹಾಯ ಮಾಡುವ ದೋಷಕ್ಕೊಳಗಾಗಿದ್ದಾರೆ.—ಅ. ಕೃತ್ಯಗಳು 17:24-28.
11. ಧರ್ಮಭ್ರಷ್ಟರಾದ ಇಸ್ರಾಯೇಲ್ಯ ಸ್ತ್ರೀಯರು ತಮ್ಮೂಜ್ನ ಸಂಬಂಧದಲ್ಲಿ ಅಳುತ್ತಿದ್ದುದೇಕೆ?
11 ಯೆಹೋವನ ಆಲಯದ ಹೆಬ್ಬಾಗಿಲಿನ ಪ್ರವೇಶ ಸ್ಥಳದಲ್ಲಿ, ಧರ್ಮಭ್ರಷ್ಟ ಇಸ್ರಾಯೇಲ್ಯ ಸ್ತ್ರೀಯರು ತಮ್ಮೂಜ್ ದೇವತೆಗಾಗಿ ಅಳುವುದನ್ನು ಯೆಹೆಜ್ಕೇಲನು ನೋಡಿದನು. (ಯೆಹೆಜ್ಕೇಲ 8:13, 14) ಬಬಿಲೋನ್ಯರು ಮತ್ತು ಸಿರಿಯನರು ತಮ್ಮೂಜ್ ದೇವತೆಯನ್ನು ಮಳೆಗಾಲದಲ್ಲಿ ಬೆಳೆದು ಬೇಸಗೆಯಲ್ಲಿ ಸಾಯುವ ಸಸ್ಯದ ದೇವರೆಂದು ವೀಕ್ಷಿಸುತ್ತಿದ್ದರು. ಸಸ್ಯದ ಸಾಯುವಿಕೆ ತಮ್ಮೂಜನ ಮರಣವನ್ನು ಚಿತ್ರಿಸಿದ ಕಾರಣ ವಾರ್ಷಿಕವಾಗಿ ಅತಿ ಹೆಚ್ಚು ಕಾವಿನ ಸಮಯದಲ್ಲಿ ಅವನ ಆರಾಧಕರು ಗೋಳಾಡುತ್ತಿದ್ದರು. ಮಳೆಗಾಲದಲ್ಲಿ ಸಸ್ಯದ ಪುನರಾಗಮನವಾಗುವಾಗ ತಮ್ಮೂಜನು ಅಧೋಲೋಕದಿಂದ ಹಿಂದಿರುಗುತ್ತಿದ್ದನಂತೆ. ಅವನನ್ನು ಅವನ ಹೆಸರಿನ ಪ್ರಥಮ ಅಕ್ಷರವಾದ ಮತ್ತು ಶಿಲುಬೆಯ ಒಂದು ರೂಪವಾದ ಹಳೆಯ ಕಾಲದ ಟಾ (tau) ಎಂಬುದರಿಂದ ಪ್ರತಿನಿಧೀಕರಿಸಲಾಗುತ್ತಿತ್ತು. ಇದು ನಮಗೆ ಕ್ರೈಸ್ತ ಪ್ರಪಂಚವು ಶಿಲುಬೆಗೆ ಕೊಡುವ ವಿಗ್ರಹಾರಾಧನಾತ್ಮಕ ಪೂಜ್ಯಭಾವವನ್ನು ನೆನಪಿಸಬಹುದು.
12. ಧರ್ಮಭ್ರಷ್ಟರಾದ 25 ಇಸ್ರಾಯೇಲ್ಯ ಪುರುಷರು ಏನು ಮಾಡುವುದನ್ನು ಯೆಹೆಜ್ಕೇಲನು ನೋಡಿದನು, ಮತ್ತು ತದ್ರೀತಿಯ ಯಾವ ವರ್ತನೆ ಕ್ರೈಸ್ತ ಪ್ರಪಂಚದಲ್ಲಿ ನಡೆಯುತ್ತದೆ?
12 ದೇವಾಲಯದ ಒಳಾಂಗಣದಲ್ಲಿ, ಯೆಹೆಜ್ಕೇಲನು ಆ ಬಳಿಕ, ಧರ್ಮಭ್ರಷ್ಟರಾದ 25 ಇಸ್ರಾಯೇಲ್ಯ ಪುರುಷರು ಸೂರ್ಯಾರಾಧನೆ—ವಿಗ್ರಹಾರಾಧನೆಯ ವಿರುದ್ಧ ಯೆಹೋವನು ಕೊಟ್ಟಿದ್ದ ಆಜ್ಞೆಯ ಉಲ್ಲಂಘನೆ—ಮಾಡುವುದನ್ನು ನೋಡಿದನು. (ಧರ್ಮೋಪದೇಶಕಾಂಡ 4:15-19) ಈ ವಿಗ್ರಹಾರಾಧಕರು ದೇವರ ಮೂಗಿಗೆ ಒಂದು ಅಶ್ಲೀಲ ಪತ್ರೆ—ಪ್ರಾಯಶಃ ಮಾನವ ಶಿಶ್ನದ ಪ್ರತಿನಿಧೀಕರಣ—ಯನ್ನೂ ಎತ್ತಿಹಿಡಿದಿದ್ದರು. ದೇವರು ಅವರ ಪ್ರಾರ್ಥನೆಗಳಿಗೆ ಉತ್ತರ ಕೊಡದೆ ಇದ್ದುದು ಆಶ್ಚರ್ಯವಲ್ಲ, ತದ್ರೀತಿ “ಮಹಾ ಸಂಕಟ” ದಲ್ಲಿ ಕ್ರೈಸ್ತ ಪ್ರಪಂಚವು ಆತನ ಸಹಾಯವನ್ನು ಯಾಚಿಸಿದರೂ ಅದು ವ್ಯರ್ಥವಾಗಿರುವುದು. (ಮತ್ತಾಯ 24:21) ಧರ್ಮಭ್ರಷ್ಟ ಇಸ್ರಾಯೇಲ್ಯರು ಯೆಹೋವನ ಆಲಯಕ್ಕೆ ಬೆನ್ನು ಹಾಕಿ ಜೀವದಾಯಕ ಸೂರ್ಯನನ್ನು ಆರಾಧಿಸಿದಂತೆಯೇ, ಕ್ರೈಸ್ತ ಪ್ರಪಂಚವು ದೇವರಿಂದ ಬರುವ ಬೆಳಕಿಗೆ ಬೆನ್ನು ಹಾಕಿ, ಸುಳ್ಳು ತತ್ವಗಳನ್ನು ಕಲಿಸಿ, ಲೌಕಿಕ ವಿವೇಕವನ್ನು ಮೂರ್ತೀಕರಿಸಿ, ಲೈಂಗಿಕ ದುರಾಚಾರವನ್ನು ಕಂಡೂ ಕಾಣದಂತೆ ವರ್ತಿಸುತ್ತದೆ.—ಯೆಹೆಜ್ಕೇಲ 8:15-18.
13. ಯೆಹೆಜ್ಕೇಲನು ದರ್ಶನದಲ್ಲಿ ನೋಡಿದ ವಿಗ್ರಹಾರಾಧನೆಯ ವಿಧಗಳನ್ನು ಯೆಹೋವನ ಸಾಕ್ಷಿಗಳು ಯಾವ ರೀತಿಗಳಲ್ಲಿ ವರ್ಜಿಸುತ್ತಾರೆ?
13 ಯೆಹೆಜ್ಕೇಲನು ಮುನ್ನೋಡಿದ ಮೂಲಬಿಂಬವಾಗಿರುವ ಯೆರೂಸಲೇಮನಲ್ಲಿ, ಯಾ ಕ್ರೈಸ್ತ ಪ್ರಪಂಚದಲ್ಲಿ ಆಚರಿಸಲ್ಪಡುವ ವಿಗ್ರಹಾರಾಧನಾ ವಿಧಗಳನ್ನು ಯೆಹೋವನ ಸಾಕ್ಷಿಗಳು ವಿಸರ್ಜಿಸುತ್ತಾರೆ. ನಾವು ದೇವರನ್ನು ಅವಮಾನಕ್ಕೊಳಪಡಿಸುವ ಪ್ರತೀಕಗಳನ್ನು ಮೂರ್ತೀಕರಿಸುವುದಿಲ್ಲ. ನಾವು ಸರಕಾರೀ “ಮೇಲಿರುವ ಅಧಿಕಾರಿಗಳಿಗೆ” ಗೌರವ ತೋರಿಸುವುದಾದರೂ, ಅವರಿಗೆ ನಮ್ಮ ಅಧೀನತೆ ಸಂಬಂಧಸೂಚಕವಾಗಿದೆ. (ರೋಮಾಪುರ 13:1-7; ಮಾರ್ಕ 12:17; ಅ. ಕೃತ್ಯಗಳು 5:29) ನಮ್ಮ ಹೃತ್ಪೂರ್ವಕ ಭಕ್ತಿಯು ದೇವರಿಗೂ, ಆತನ ರಾಜ್ಯಕ್ಕೂ ಕೊಡಲ್ಪಡುತ್ತದೆ. ಸೃಷ್ಟಿಕರ್ತ ಮತ್ತು ಆತನ ಸೃಷ್ಟಿಯ ಸ್ಥಾನದಲ್ಲಿ ನಾವು ವಿಕಾಸವಾದವನ್ನು ಬದಲಿಯಾಗಿಡುವುದಿಲ್ಲ. (ಪ್ರಕಟನೆ 4:11) ನಾವು ಶಿಲುಬೆಯನ್ನು ಪೂಜಿಸುವುದಾಗಲಿ, ಪ್ರಜ್ಞಾ ಪ್ರಾಧಾನ್ಯವನ್ನು, ತತ್ವಜ್ಞಾನವನ್ನು ಯಾ ಇತರ ರೀತಿಯ ಲೌಕಿಕ ವಿವೇಕವನ್ನು ಮೂರ್ತೀಕರಿಸುವುದಾಗಲಿ ಎಂದಿಗೂ ಇಲ್ಲ. (1 ತಿಮೊಥೆಯ 6:20, 21) ನಾವು ಇತರ ಸಕಲ ವಿಧಗಳ ವಿಗ್ರಹಾರಾಧನೆಯ ವಿರುದ್ಧವಾಗಿಯೂ ಎಚ್ಚರದಿಂದಿರುತ್ತೇವೆ. ಇವುಗಳಲ್ಲಿ ಕೆಲವು ಯಾವುವು?
ಇತರ ವಿಧಗಳ ವಿಗ್ರಹಾರಾಧನೆ
14. ಪ್ರಕಟನೆ 13:1 ರ ಕಾಡು “ಮೃಗ” ದ ಸಂಬಂಧದಲ್ಲಿ ಯೆಹೋವನ ಸಾಕ್ಷಿಗಳು ಯಾವ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ?
14 ಕ್ರೈಸ್ತರು ಒಂದು ಸಾಂಕೇತಿಕ ಕಾಡು “ಮೃಗ” ವನ್ನು ಮೂರ್ತೀಕರಿಸುವುದರಲ್ಲಿ ಮಾನವಕುಲದೊಂದಿಗೆ ಭಾಗಿಗಳಾಗುವುದಿಲ್ಲ. ಅಪೊಸ್ತಲ ಯೋಹಾನನು ಹೇಳಿದ್ದು: “ಸಮುದ್ರದಿಂದ ಮೃಗವು ಏರಿಬರುವದನ್ನು ಕಂಡೆನು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಕೊಂಬುಗಳ ಮೇಲೆ ಹತ್ತು ಮುಕುಟಗಳೂ . . . ಇದ್ದವು. ಭೂನಿವಾಸಿಗಳೆಲ್ಲರೂ ಅದಕ್ಕೆ ನಮಸ್ಕಾರ ಮಾಡುವರು.” (ಪ್ರಕಟನೆ 13:1, 8) ಮೃಗಗಳು “ರಾಜರು” ಯಾ ರಾಜಕೀಯ ಶಕ್ತಿಗಳನ್ನು ಸೂಚಿಸಬಲ್ಲವು. (ದಾನಿಯೇಲ 7:17; 8:3-8, 20-25) ಹಾಗಾದರೆ ಈ ಸಾಂಕೇತಿಕ ಕಾಡುಮೃಗದ ಏಳು ತಲೆಗಳು ಲೋಕ ಶಕ್ತಿಗಳನ್ನು—ಐಗುಪ್ತ, ಅಶ್ಶೂರ್ಯ, ಬಾಬೆಲ್, ಮೇದ್ಯಯ ಪಾರಸಿಯ, ಗ್ರೀಸ್, ರೋಮ್, ಮತ್ತು ಅಮೆರಿಕ ಮತ್ತು ಬ್ರಿಟನ್ ದೇಶಗಳ ಆ್ಯಂಗ್ಲೊ-ಅಮೆರಿಕನ್ ಒಕ್ಕೂಟ—ಗಳನ್ನು ಪ್ರತಿನಿಧೀಕರಿಸುತ್ತವೆ. ಮಾನವ ಕುಲವು “ಇಹಲೋಕಾಧಿಪತಿ” ಯಾದ ಸೈತಾನನ ರಾಜಕೀಯ ವ್ಯವಸ್ಥೆಯನ್ನು ಮೂರ್ತೀಕರಿಸುವುದರಲ್ಲಿ ಕ್ರೈಸ್ತ ಪ್ರಪಂಚದ ವೈದಿಕರು ನಾಯಕತ್ವ ವಹಿಸುವುದರ ಮೂಲಕ, ದೇವರಿಗೂ ಕ್ರಿಸ್ತನಿಗೂ ಮಹಾ ಅಗೌರವವನ್ನು ತೋರಿಸುತ್ತಾರೆ. (ಯೋಹಾನ 12:31) ಆದರೆ ಯೆಹೋವನ ಸೇವಕರು ಕ್ರೈಸ್ತ ತಟಸ್ಥರೂ ರಾಜ್ಯ ಪಕ್ಷವಾದಿಗಳೂ ಆಗಿದ್ದು, ಇಂಥ ವಿಗ್ರಹಾರಾಧನೆಯನ್ನು ತೊರೆದು ಬಿಡುತ್ತಾರೆ.—ಯಾಕೋಬ 1:27.
15. ಯೆಹೋವನ ಜನರು ಲೌಕಿಕ ತಾರೆಗಳನ್ನು ಹೇಗೆ ವೀಕ್ಷಿಸುತ್ತಾರೆ, ಮತ್ತು ಒಬ್ಬ ಸಾಕ್ಷಿ ಈ ವಿಷಯದಲ್ಲಿ ಏನಂದನು?
15 ದೇವಜನರು ಮನೋರಂಜನೆ ಮತ್ತು ಕ್ರೀಡಾ ತಾರೆಗಳನ್ನು ಮೂರ್ತೀಕರಿಸುವುದರಿಂದಲೂ ವಿಮುಖರಾಗಿರುತ್ತಾರೆ. ಯೆಹೋವನ ಸಾಕ್ಷಿಯಾದ ಬಳಿಕ ಒಬ್ಬ ಸಂಗೀತಗಾರನು ಹೇಳಿದ್ದು: “ಮನೋರಂಜನೆ ಮತ್ತು ನಾಟ್ಯಗಳಿಗಾಗಿರುವ ಗೀತಗಳು ಕೆಟ್ಟ ಅಪೇಕ್ಷೆಗಳನ್ನು ಎಬ್ಬಿಸಬಲ್ಲವು. . . . ಹಾಡುವವನು ಆನಂದ ಮತ್ತು ಮೃದುತ್ವದ ವಿಷಯ ಹಾಡುವಾಗ ಅನೇಕ ಶ್ರೋತೃಗಳಿಗೆ ಅವು ತಮ್ಮ ವಿವಾಹಜೊತೆಗಳಲ್ಲಿ ಇಲ್ಲವೆಂದು ಅನಿಸಬಹುದು. ಕಲಾವಿದನನ್ನು ಅನೇಕ ವೇಳೆ ಅವನು ಏನು ಹಾಡುತ್ತಾನೋ ಅದರೊಂದಿಗೆ ಗುರುತಿಸಲಾಗುತ್ತದೆ. ನನಗೆ ಪರಿಚಯವಿರುವ ಕೆಲವು ಸಂಗೀತ ವೃತ್ತಿಯವರು ಈ ಕಾರಣದಿಂದ ಸ್ತ್ರೀಯರಿಗೆ ಬಲು ಇಷ್ಟರು. ಈ ಭ್ರಾಂತಿಯ ಲೋಕದಲ್ಲಿ ಒಬ್ಬನು ಒಮ್ಮೆ ಮುಳುಗಿ ಹೋಗುವಲ್ಲಿ, ಅವನು ಆ ಸಂಗೀತಗಾರರನ್ನು ಮೂರ್ತೀಕರಿಸುವಂತೆ ನಡೆಸಲ್ಪಡಬಲ್ಲನು. ಅದು ತೀರಾ ಹಾನಿಕರವಲ್ಲದ ರೀತಿಯಲ್ಲಿ, ಒಬ್ಬನು ಸಂಗೀತಗಾರನ ಸ್ವಹಸ್ತಾಕ್ಷರವನ್ನು ಒಂದು ಸ್ಮರಣವಸ್ತುವಿನಂತೆ ಕೇಳಿಕೊಳ್ಳುವುದರಿಂದ ಆರಂಭವಾಗಬಹುದು. ಆದರೆ ಕೆಲವರು ಆ ಕಲಾವಿದನನ್ನು ತಮ್ಮ ಆದರ್ಶವಾಗಿ ವೀಕ್ಷಿಸುತ್ತಾರೆ, ಮತ್ತು ಅವನಿಗೆ ಅನರ್ಹ ಗೌರವವನ್ನು ಕೊಡುವುದರ ಮೂಲಕ ಅವನನ್ನು ಒಂದು ಮೂರ್ತಿಯಾಗಿ ಮಾಡುತ್ತಾರೆ. ಅವರು ಆ ತಾರೆಯ ಚಿತ್ರವನ್ನು ಗೋಡೆಗೇರಿಸಬಹುದು ಮತ್ತು ಅವನು ಉಡುಪು ತೊಡುವ ಮತ್ತು ಕೇಶಾಲಂಕಾರ ಮಾಡುವಂತೆಯೇ, ಅವರೂ ಮಾಡಲು ಆರಂಭಿಸಬಹುದು. ಭಕ್ತಿಯು ಸಲ್ಲುವುದು ದೇವರಿಗೆ ಮಾತ್ರ ಎಂಬುದನ್ನು ಕ್ರೈಸ್ತರು ಮನದಲ್ಲಿಡುವುದು ಅಗತ್ಯ.”
16. ನೀತಿವಂತ ದೇವದೂತರು ವಿಗ್ರಹಾರಾಧನೆಯನ್ನು ವಿಸರ್ಜಿಸುತ್ತಾರೆಂದು ಯಾವುದು ತೋರಿಸುತ್ತದೆ?
16 ಹೌದು, ಭಕ್ತಿ ಯಾ ಆರಾಧನೆಗೆ ದೇವರು ಮಾತ್ರ ಅರ್ಹನು. ಯೋಹಾನನು ತನಗೆ ಆಶ್ಚರ್ಯಕರವಾದ ವಿಷಯಗಳನ್ನು ತೋರಿಸಿದ “ದೇವದೂತನ ಪಾದಗಳ ಮುಂದೆ ಆರಾಧನೆ ಮಾಡಲು ಬಿದ್ದಾಗ” ಆ ಆತ್ಮ ಜೀವಿಯು ಯಾವ ವಿಧದಲ್ಲಿಯೂ ಮೂರ್ತೀಕರಿಸಲ್ಪಡಲು ನಿರಾಕರಿಸಿ ಹೇಳಿದ್ದು: “ಎಚ್ಚರಿಕೆ! ಹಾಗೆ ಮಾಡಬೇಡ! ನಾನು ಕೇವಲ ನಿನ್ನ, ಮತ್ತು ಪ್ರವಾದಿಗಳಾಗಿರುವ ನಿನ್ನ ಸೋದರರ, ಮತ್ತು ಈ ಸುರುಳಿಯಲ್ಲಿರುವ ಮಾತುಗಳನ್ನು ಪಾಲಿಸುವವರ ಜೊತೆದಾಸನು. ದೇವರನ್ನು ಆರಾಧಿಸು.” (ಪ್ರಕಟನೆ 22:8, 9, NW) ಯೆಹೋವನ ಭಯ, ಯಾ ಆತನೆಡೆಗಿನ ಆಳವಾದ ಪೂಜ್ಯ ಭಾವನೆಯು ನಾವು ಆತನನ್ನು ಮಾತ್ರ ಆರಾಧಿಸುವಂತೆ ಮಾಡುತ್ತದೆ. (ಪ್ರಕಟನೆ 14:7) ಹೀಗೆ, ನಿಜ ದೇವಭಕ್ತಿಯು ನಮ್ಮನ್ನು ವಿಗ್ರಹಾರಾಧನೆಯಿಂದ ಸಂರಕ್ಷಿಸುತ್ತದೆ.—1 ತಿಮೊಥೆಯ 4:8.
17. ವಿಗ್ರಹಾರಾಧನಾತ್ಮಕ ಲೈಂಗಿಕ ಅನೈತಿಕತೆಯಿಂದ ನಾವು ಹೇಗೆ ಕಾಪಾಡಿಕೊಳ್ಳಬಲ್ಲೆವು?
17 ಲೈಂಗಿಕ ಅನೈತಿಕತೆ ಯೆಹೋವನ ಸೇವಕರಿಂದ ವಿಸರ್ಜಿಸಲಾಗುವ ವಿಗ್ರಹಾರಾಧನೆಯ ಇನ್ನೊಂದು ರೂಪವಾಗಿದೆ. “ಜಾರರು ದುರಾಚಾರಿಗಳು ವಿಗ್ರಹಾರಾಧಕರಂತಿರುವ ಲೋಭಿಗಳು ಇವರಲ್ಲಿ ಒಬ್ಬರಿಗಾದರೂ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯತೆ ಇಲ್ಲವೇ ಇಲ್ಲ” ವೆಂದು ಅವರಿಗೆ ಗೊತ್ತು. (ಎಫೆಸ 5:5) ಇಲ್ಲಿ ವಿಗ್ರಹಾರಾಧನೆ ಸೇರಿರುವುದು ಹೇಗಂದರೆ ಈ ನಿಷಿದ್ಧ ಸುಖಕ್ಕಿರುವ ಕಡು ಬಯಕೆಯು ಭಕ್ತಿಯ ವಸ್ತುವಾಗುತ್ತದೆ. ಅಯೋಗ್ಯ ಲೈಂಗಿಕಾಪೇಕ್ಷೆಯಿಂದಾಗಿ ದೈವಿಕ ಗುಣಗಳು ಅಪಾಯಕ್ಕೊಳಗಾಗುತ್ತವೆ. ತನ್ನ ಕಣ್ಣು ಮತ್ತು ಕಿವಿಗಳ ಮೂಲಕ ಅಶ್ಲೀಲ ಸಾಹಿತ್ಯಗಳಿಗೆ ಗಮನ ಕೊಡುವುದರಿಂದ, ಒಬ್ಬ ವ್ಯಕ್ತಿಯು ತನಗೆ ಪವಿತ್ರ ದೇವರಾದ ಯೆಹೋವನೊಂದಿಗಿರುವ ಯಾವುದೇ ಸಂಬಂಧವನ್ನು ಗಂಡಾಂತರಕ್ಕೊಳಪಡಿಸುತ್ತಾನೆ. (ಯೆಶಾಯ 6:3) ಹಾಗಾದರೆ, ಇಂಥ ವಿಗ್ರಹಾರಾಧನೆಯಿಂದ ಕಾಪಾಡಿಕೊಳ್ಳಲು ದೇವರ ಸೇವಕರು ಅಶ್ಲೀಲ ವಿಷಯ ವರ್ಣನೆಯ ಸಾಹಿತ್ಯವನ್ನೂ, ಭ್ರಷ್ಟಗೊಳಿಸುವ ಸಂಗೀತವನ್ನೂ ತೊರೆದು ಬಿಡಬೇಕು. ಅವರು ಶಾಸ್ತ್ರಾಧಾರಿತವಾದ ಬಲಾಢ್ಯ ಆತ್ಮಿಕ ಮೌಲ್ಯಗಳಿಗೆ ಅಂಟಿಕೊಳ್ಳುವುದು ಅಗತ್ಯ. ಮತ್ತು ಅವರು “ದೇವರ ಚಿತ್ತಾನುಸಾರವಾಗಿ ನಿಜ ನೀತಿ ಮತ್ತು ನಿಷ್ಠೆಯಲ್ಲಿ ಸೃಷ್ಟಿಸಲ್ಪಟ್ಟಿದ್ದ ನೂತನ ವ್ಯಕ್ತಿತ್ವವನ್ನು” ಇಟ್ಟುಕೊಂಡಿರಬೇಕು.—ಎಫೆಸ 4:22-24, NW.
ಲೋಭ ಮತ್ತು ದುರಾಶೆಯನ್ನು ವಿಸರ್ಜಿಸಿರಿ
18, 19. (ಎ) ಲೋಭ ಮತ್ತು ದುರಾಶೆ ಎಂದರೇನು? (ಬಿ) ವಿಗ್ರಹಾರಾಧನಾತ್ಮಕ ಲೋಭ ಮತ್ತು ದುರಾಶೆಗಳಿಂದ ನಾವು ಹೇಗೆ ಕಾಪಾಡಿಕೊಳ್ಳಬಲ್ಲೆವು?
18 ಕ್ರೈಸ್ತರು ಯಾವುದು ವಿಗ್ರಹಾರಾಧನೆಯ ಹತ್ತಿರ ಸಂಬಂಧದ ರೂಪಗಳಾಗಿವೆಯೋ ಅಂತಹ ಲೋಭ ಮತ್ತು ದುರಾಶೆಯ ವಿರುದ್ಧವೂ ತಮ್ಮನ್ನು ಕಾಪಾಡಿಕೊಳ್ಳುತ್ತಾರೆ. ಲೋಭವು ಮಿತಿಮೀರಿದ ಯಾ ತೀವ್ರಾಭಿಲಾಷೆಯಾಗಿದೆ ಮತ್ತು ದುರಾಶೆಯು ಇನ್ನೊಬ್ಬನಿಗೆ ಸೇರಿರುವ ಯಾವುದಕ್ಕೂ ಇರುವ ಲೋಭವಾಗಿದೆ. ಯೇಸು ದುರಾಶೆಯ ವಿರುದ್ಧ ಎಚ್ಚರಿಕೆಯನ್ನು ಕೊಡುತ್ತಾ, ಮರಣದಲ್ಲಿ ತನ್ನ ಸಂಪತ್ತಿನಿಂದ ಯಾವ ಪ್ರಯೋಜನವನ್ನೂ ಪಡೆಯದ ಮತ್ತು “ದೇವರ ವಿಷಯಗಳಲ್ಲಿ ಐಶ್ವರ್ಯವಂತ” ನಾಗಿರದ ಶೋಚನೀಯ ಸ್ಥಿತಿಯಲ್ಲಿದ್ದ ದುರಾಶೆಯ ಒಬ್ಬ ಐಶ್ವರ್ಯವಂತನ ಕುರಿತು ಮಾತಾಡಿದನು. (ಲೂಕ 12:15-21) ಪೌಲನು ಸಮಯೋಚಿತವಾಗಿ ಜೊತೆ ವಿಶ್ವಾಸಿಗಳಿಗೆ ಬುದ್ಧಿ ಹೇಳಿದ್ದು: “ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. . . . ವಿಗ್ರಹಾರಾಧನೆಗೆ ಸಮವಾಗಿರುವ ಲೋಭ ಇವುಗಳನ್ನು ವಿಸರ್ಜಿಸಿಬಿಡಿರಿ.”—ಕೊಲೊಸ್ಸೆ 3:5.
19 ಹಣದಾಶೆ, ಆಹಾರ ಮತ್ತು ಮದ್ಯಪಾನೀಯಗಳಿಗೆ ಅತ್ಯಾಶೆ, ಯಾ ಅಧಿಕಾರಕ್ಕಾಗಿ ಹೆಬ್ಬಯಕೆಯ ಭ್ರಾಂತಿಯಿಂದಿರುವವರು ಅಂಥ ಆಶೆಗಳನ್ನು ತಮ್ಮ ಮೂರ್ತಿಗಳಾಗಿ ಮಾಡುತ್ತಾರೆ. ಪೌಲನು ತೋರಿಸಿದಂತೆ, ಲೋಭಿಯು ವಿಗ್ರಹಾರಾಧಕನು ಮತ್ತು ಅವನು ದೇವರ ರಾಜ್ಯಕ್ಕೆ ಬಾಧ್ಯನಾಗುವುದಿಲ್ಲ. (1 ಕೊರಿಂಥ 6:9, 10; ಎಫೆಸ 5:5) ಆದುದರಿಂದ ಲೋಭಿಗಳಾಗಿ ವಿಗ್ರಹಾರಾಧನೆಯನ್ನು ಆಚರಿಸುತ್ತಾ ಹೋಗುವ ಸ್ನಾನಿತ ವ್ಯಕ್ತಿಗಳು ಕ್ರೈಸ್ತ ಸಭೆಯಿಂದ ಬಹಿಷ್ಕಾರ ಹೊಂದಬಲ್ಲರು. ಆದರೆ ಶಾಸ್ತ್ರವಚನಗಳನ್ನು ಅನ್ವಯಿಸಿಕೊಳ್ಳುತ್ತಾ, ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸುತ್ತಾ ಇರುವಲ್ಲಿ, ನಾವು ಲೋಭವನ್ನು ವಿಸರ್ಜಿಸಬಲ್ಲೆವು. ಜ್ಞಾನೋಕ್ತಿ 30:7-9 ಹೇಳುವುದು: “ನಿನ್ನಿಂದ [ಯೆಹೋವ ದೇವರಿಂದ] ಎರಡು ವರಗಳನ್ನು ಬೇಡಿಕೊಂಡಿದ್ದೇನೆ; ಅನುಗ್ರಹಿಸದಿರಬೇಡ, ನಾನು ಸಾಯುವದರೊಳಗಾಗಿ ಅವುಗಳನ್ನು ಅನುಗ್ರಹಿಸು. ನನ್ನಿಂದ ಕಪಟವನ್ನೂ ಸುಳ್ಳು ಮಾತನ್ನೂ ತೊಲಗಿಸು. ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ಕೊಡದೆ ನನಗೆ ತಕ್ಕಷ್ಟು ಆಹಾರವನ್ನು ಭೋಜನ ಮಾಡಿಸು. ಹಾಗಾಗದೆ ಹೊಟ್ಟೆತುಂಬಿದವನಾದರೆ ಯೆಹೋವನು ಯಾರೋ ಎಂದು ನಿನ್ನನ್ನು ತಿರಸ್ಕರಿಸೇನು; ಬಡವನಾದರೆ ಕಳ್ಳತನ ಮಾಡಿ ನನ್ನ ದೇವರಾದ ನಿನ್ನ ಹೆಸರನ್ನು ಅಯೋಗ್ಯವಾಗಿ ಎತ್ತೇನು.” ಇಂಥ ಮನೋಭಾವವು ವಿಗ್ರಹಾರಾಧನಾತ್ಮಕ ಲೋಭ ಮತ್ತು ದುರಾಶೆಯಿಂದ ಕಾಪಾಡಿಕೊಳ್ಳುವಂತೆ ನಮಗೆ ಸಹಾಯ ಮಾಡಬಲ್ಲದು.
ಸ್ವಯಂ-ವಿಗ್ರಹಾರಾಧನೆಯಿಂದ ಕಾಪಾಡಿಕೊಳ್ಳಿರಿ
20, 21. ಸ್ವಯಂ-ವಿಗ್ರಹಾರಾಧನೆಯಿಂದ ಯೆಹೋವನ ಜನರು ಹೇಗೆ ಕಾಪಾಡಿಕೊಳ್ಳುತ್ತಾರೆ?
20 ಯೆಹೋವನ ಜನರು ಸ್ವಯಂ-ವಿಗ್ರಹಾರಾಧನೆಯಿಂದಲೂ ಕಾಪಾಡಿಕೊಳ್ಳುತ್ತಾರೆ. ಈ ಜಗತ್ತಿನಲ್ಲಿ ಒಬ್ಬನು ತನ್ನನ್ನು ತಾನೇ ಮತ್ತು ತನ್ನ ಸಚ್ವಿತವ್ತನ್ನು ಮೂರ್ತೀಕರಿಸುವುದು ಸಾಮಾನ್ಯ. ಕೀರ್ತಿ ಮತ್ತು ಪ್ರಶಸ್ತಿಯ ಬಯಕೆಯು ಅನೇಕರು ಕುಟಿಲ ರೀತಿಗಳಲ್ಲಿ ವರ್ತಿಸುವಂತೆ ಮಾಡುತ್ತದೆ. ಅವರ ಅಪೇಕ್ಷೆಯು ತಮ್ಮ ಇಷ್ಟ—ದೇವರದ್ದಲ್ಲ—ಮಾಡಲ್ಪಡಬೇಕೆಂಬುದೇ. ಆದರೆ ನಾವು ನಮ್ಮ ಸ್ವಂತ ಇಷ್ಟವನ್ನು ಕುಟಿಲ ರೀತಿಯಲ್ಲಿ ಜಾರಿಗೆ ತರುವ ಮೂಲಕ ಮತ್ತು ಇತರರ ಮೇಲೆ ದೊರೆತನ ಮಾಡುವ ಮೂಲಕ ಸ್ವಯಂ-ವಿಗ್ರಹಾರಾಧನೆಗೆ ಅವಕಾಶ ಕೊಡುವುದಾದರೆ, ನಮಗೆ ದೇವರೊಂದಿಗೆ ಯಾವ ಸಂಬಂಧವೂ ಇಲ್ಲದಿರಸಾಧ್ಯವಿದೆ. (ಜ್ಞಾನೋಕ್ತಿ 3:32; ಮತ್ತಾಯ 20:20-28; 1 ಪೇತ್ರ 5:2, 3) ಯೇಸುವಿನ ಹಿಂಬಾಲಕರಾಗಿರುವ ನಾವು, ಈ ಲೋಕದ ಮೋಸದ ವಿಷಯಗಳನ್ನು ಬಿಟ್ಟುಬಿಟ್ಟಿದೇವ್ದೆ.—2 ಕೊರಿಂಥ 4:1, 2.
21 ದೇವಜನರು ಕೀರ್ತಿಯನ್ನು ಹುಡುಕುವ ಬದಲು, ಪೌಲನ ಬುದ್ಧಿವಾದವನ್ನು ಅನುಸರಿಸುತ್ತಾರೆ: “ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ.” (1 ಕೊರಿಂಥ 10:31) ನಾವು ಯೆಹೋವನ ಸೇವಕರಾಗಿರುವುದರಿಂದ, ವಿಗ್ರಹಾರಾಧನಾತ್ಮಕವಾಗಿ ನಮ್ಮ ಸ್ವಂತ ಇಚ್ಛೆಯೇ ನಡೆಯಬೇಕೆಂದು ಪಟ್ಟುಹಿಡಿಯದೆ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಕೊಡುವ ಮಾರ್ಗದರ್ಶನವನ್ನು ಅಂಗೀಕರಿಸುತ್ತಾ ಮತ್ತು ಯೆಹೋವನ ಸಂಘಟನೆಗೆ ಪೂರ್ತಿ ಸಹಕಾರ ಕೊಡುತ್ತಾ ದೇವರ ಚಿತ್ತವನ್ನು ಸಂತೋಷದಿಂದ ಮಾಡುವೆವು.—ಮತ್ತಾಯ 24:45-47.
ಎಚ್ಚರಿಕೆಯಿಂದಿರ್ರಿ!
22, 23. ಪ್ರತಿಯೊಂದು ವಿಧದ ವಿಗ್ರಹಾರಾಧನೆಯ ವಿಷಯದಲ್ಲಿ ನಾವು ಯಾವ ವಿಧದಲ್ಲಿ ಕಾಪಾಡಿಕೊಳ್ಳಬಲ್ಲೆವು?
22 ಯೆಹೋವನ ಜನರಾಗಿರುವ ನಾವು ಪ್ರಾಪಂಚಿಕ ವಿಗ್ರಹಗಳಿಗೆ ಅಡ್ಡಬೀಳುವುದಿಲ್ಲ. ನಾವು ವಿಗ್ರಹಾರಾಧನೆಯ ಸೂಕ್ಷ್ಮರೂಪಗಳಿಂದಲೂ ಕಾಪಾಡಿಕೊಳ್ಳುತ್ತೇವೆ. ವಾಸ್ತವವೇನಂದರೆ, ನಾವು ಪ್ರತಿಯೊಂದು ವಿಧದ ವಿಗ್ರಹಾರಾಧನೆಯನ್ನು ವರ್ಜಿಸುವುದನ್ನು ಮುಂದುವರಿಸುತ್ತಾ ಇರಬೇಕು. ಆದುದರಿಂದ ನಾವು ಯೋಹಾನನ ಬುದ್ಧಿವಾದವನ್ನು ಅನುಸರಿಸುತ್ತೇವೆ: “ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ.”—1 ಯೋಹಾನ 5:21.
23 ನೀವು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿರುವಲ್ಲಿ, ಸದಾ ನಿಮ್ಮ ಬೈಬಲ್-ಶಿಕ್ಷಿತ ಮನಸ್ಸಾಕ್ಷಿಯನ್ನೂ, ವಿವೇಚನಾಶಕ್ತಿಯನ್ನೂ ಉಪಯೋಗಿಸಿರಿ. (ಇಬ್ರಿಯ 5:14) ಆಗ ನೀವು ಜಗತ್ತಿನ ವಿಗ್ರಹಾರಾಧನಾತ್ಮಕ ಆತ್ಮದಿಂದ ಮಲಿನಗೊಳ್ಳದೆ, ಆ ಮೂವರು ನಂಬಿಗಸ್ತ ಇಬ್ರಿಯರಂತೆ ಮತ್ತು ನಿಷ್ಠಾವಂತರಾದ ಆದಿ ಕ್ರೈಸ್ತರಂತೆ ಇರುವಿರಿ. ನೀವು ಯೆಹೋವನಿಗೆ ಪೂರ್ಣ ಭಕ್ತಿಯನ್ನು ತೋರಿಸುವಿರಿ, ಮತ್ತು ಆತನು ನಿಮ್ಮನ್ನು ನೀವು ಪ್ರತಿಯೊಂದು ವಿಧದ ವಿಗ್ರಹಾರಾಧನೆಯಿಂದ ಕಾಪಾಡಿಕೊಳ್ಳುವಂತೆ ಸಹಾಯ ಮಾಡುವನು.
ನಿಮ್ಮ ಯೋಚನೆಗಳೇನು?
▫ ಯೆಹೆಜ್ಕೇಲನ ದರ್ಶನದಲ್ಲಿ ನೋಡಲಾದ ವಿಗ್ರಹಾರಾಧನೆಯ ವಿಧಗಳನ್ನು ಯೆಹೋವನ ಸಾಕ್ಷಿಗಳು ಹೇಗೆ ವಿಸರ್ಜಿಸುತ್ತಾರೆ?
▫ ಪ್ರಕಟನೆ 13:1 ರ ಕಾಡು “ಮೃಗ” ಎಂದರೇನು, ಮತ್ತು ಯೆಹೋವನ ಸೇವಕರು ಅದರ ಸಂಬಂಧದಲ್ಲಿ ಯಾವ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ?
▫ ಮನೋರಂಜನೆಯ ಮತ್ತು ಕ್ರೀಡಾ ತಾರೆಗಳನ್ನು ಮೂರ್ತೀಕರಿಸುವುದರಿಂದ ಕಾಪಾಡಿಕೊಳ್ಳಬೇಕು ಏಕೆ?
▫ ನಾವು ಸ್ವಯಂ-ವಿಗ್ರಹಾರಾಧನೆಯಿಂದ ಹೇಗೆ ಕಾಪಾಡಿಕೊಳ್ಳಬಲ್ಲೆವು?
▫ ಪ್ರತಿಯೊಂದು ವಿಧದ ವಿಗ್ರಹಾರಾಧನೆಯ ಕುರಿತು ಏಕೆ ಎಚ್ಚರಿಕೆಯಿಂದಿರಬೇಕು?
[ಪುಟ 26 ರಲ್ಲಿರುವ ಚಿತ್ರಗಳು]
ಯೆಹೆಜ್ಕೇಲನ ದರ್ಶನದಲ್ಲಿ ನೋಡಲಾದ ಅಸಹ್ಯ ವಸ್ತುಗಳು ಕ್ರೈಸ್ತ ಪ್ರಪಂಚದ ವಿಗ್ರಹಾರಾಧನೆಯನ್ನು ಹೇಗೆ ಮುನ್ಬಿಂಬಿಸಿದವೆಂದು ನೀವು ಬಲ್ಲಿರೊ?
[ಕೃಪೆ]
Artwork (upper left) based on photo by Ralph Crane/Bardo Museum