ಯೆಹೋವನಲ್ಲಿ ಭರವಸೆಯಿಡಿರಿ!
“ನಿನ್ನ ಸರ್ವ ಹೃದಯದಿಂದ ಯೆಹೋವನಲ್ಲಿ ಭರವಸವಿಡು.”—ಜ್ಞಾನೋಕ್ತಿ 3:5, NW.
1. ಜ್ಞಾನೋಕ್ತಿ 3:5 ಒಬ್ಬ ಯುವಕನಲ್ಲಿ ಹೇಗೆ ಅಚ್ಚೊತಿತ್ತು, ಮತ್ತು ಯಾವ ದೀರ್ಘಕಾಲದ ಪರಿಣಾಮದೊಂದಿಗೆ?
ದೀರ್ಘ ಸಮಯದ ಒಬ್ಬ ಮಿಷನೆರಿ ಬರೆಯುವುದು: “ಸ್ವಬುದ್ಧಿಯನ್ನೇ ಆಧಾರ ಮಾಡಿಕೊಳ್ಳದೆ ನಿನ್ನ ಸರ್ವ ಹೃದಯದಿಂದ ಯೆಹೋವನಲ್ಲಿ ಭರವಸವಿಡು.’ ನಾನು ಭೇಟಿ ಕೊಡುತ್ತಿದ್ದ ಮನೆಯ ಗೋಡೆಯ ಮೇಲೆ ಚೌಕಟ್ಟು ಹಾಕಿ ತೂಗಿಸಲ್ಪಟ್ಟ ಬೈಬಲಿನ ಆ ವಚನಗಳು ನನ್ನ ಗಮನವನ್ನು ಆಕರ್ಷಿಸಿದವು. ಆ ದಿನದ ಉಳಿದ ಭಾಗದಲೆಲ್ಲ ನಾನು ಅವುಗಳನ್ನು ವಿಮರ್ಶಿಸಿದೆ. ನಾನು ನನ್ನ ಪೂರ್ಣ ಹೃದಯದಿಂದ ದೇವರಲ್ಲಿ ಭರವಸೆಯಿಡಶಕ್ತನೊ? ಎಂದು ನನ್ನನ್ನೇ ಕೇಳಿಕೊಂಡೆ.” ಈ ವ್ಯಕ್ತಿ ಆಗ 21 ವಯಸ್ಸಿನವನಾಗಿದ್ದರು. ಈಗ 90 ವರ್ಷ ವಯಸ್ಸಾಗಿದ್ದು, ಆಸ್ಟ್ರೇಲಿಯದ ಪರ್ತ್ನಲ್ಲಿ ಹಿರಿಯರಾಗಿ ಇನ್ನೂ ನಂಬಿಗಸ್ತಿಕೆಯಿಂದ ಸೇವೆ ಮಾಡುತ್ತಿರುವ ಇವರು, ಯೆಹೋವನ ಮೇಲೆ ಪೂರ್ಣ ಹೃದಯದ ಭರವಸೆಯ ಫಲವಾಗಿ ಸಮೃದ್ಧಿಗೊಂಡು, ಸಿಲೋನ್ (ಈಗ ಶ್ರೀ ಲಂಕ), ಬರ್ಮ (ಈಗ ಮಯನ್ಮಾರ್), ಮಲಯ, ಥಾಯ್ಲೆಂಡ್, ಭಾರತ, ಮತ್ತು ಪಾಕಿಸ್ತಾನದಂಥ ಹೊಸ ಮಿಷನೆರಿ ಕ್ಷೇತ್ರಗಳಲ್ಲಿ ಮಾಡಿದ 26 ಕಠಿನ ವರ್ಷಗಳ ಪಯನೀಯರ ಸೇವೆ ಸೇರಿದ ಜೀವನವನ್ನು ಹಿಂದಿರುಗಿ ನೋಡಬಲ್ಲರು.a
2. ಜ್ಞಾನೋಕ್ತಿ 3:5 ನಮ್ಮಲ್ಲಿ ಯಾವ ಭರವಸೆಯನ್ನು ಬೆಳೆಸಬೇಕು?
2 “ನಿನ್ನ ಸರ್ವ ಹೃದಯದಿಂದ ಯೆಹೋವನಲ್ಲಿ ಭರವಸವಿಡು”—ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್ ಜ್ಞಾನೋಕ್ತಿ 3:5 ರಲ್ಲಿ ಭಾಷಾಂತರಿಸಿರುವ ಈ ಮಾತುಗಳು, ನಾವು ನಮ್ಮ ಜೀವಿತಗಳನ್ನು ಯೆಹೋವನಿಗೆ ಪೂರ್ಣ ಹೃದಯದಿಂದ ಮೀಸಲಾಗಿಡುತ್ತಾ, ಪರ್ವತಸದೃಶ ತಡೆಗಳನ್ನು ಜಯಿಸುವಷ್ಟರ ಮಟ್ಟಿಗೂ ಆತನು ನಮ್ಮ ನಂಬಿಕೆಯನ್ನು ಬಲಪಡಿಸಶಕ್ತನೆಂಬ ಭರವಸೆಯುಳ್ಳವರಾಗಿ ಮುಂದುವರಿಯಬೇಕೆಂದು ನಮ್ಮೆಲ್ಲರನ್ನು ಪ್ರಚೋದಿಸಬೇಕು. (ಮತ್ತಾಯ 17:20) ಈಗ ನಾವು ಜ್ಞಾನೋಕ್ತಿ 3:5 ನ್ನು ಅದರ ಅರ್ಥಾನ್ವಯದಲ್ಲಿ ಪರೀಕ್ಷಿಸೋಣ.
ಪಿತೃಸದೃಶ ಶಿಕ್ಷಣ
3. (ಎ) ಜ್ಞಾನೋಕ್ತಿಯ ಪ್ರಥಮ ಒಂಬತ್ತು ಅಧ್ಯಾಯಗಳಲ್ಲಿ ಯಾವ ಉತ್ತೇಜನವು ಕಂಡುಕೊಳ್ಳಲ್ಪಡುತ್ತದೆ? (ಬಿ) ನಾವು ಜ್ಞಾನೋಕ್ತಿ 3:1, 2ಕ್ಕೆ ಏಕೆ ನಿಕಟ ಗಮನವನ್ನು ಕೊಡಬೇಕು?
3 ಬೈಬಲಿನ ಜ್ಞಾನೋಕ್ತಿ ಪುಸ್ತಕದ ಆರಂಭದ ಒಂಬತ್ತು ಅಧ್ಯಾಯಗಳು ಪಿತೃಸದೃಶ ಶಿಕ್ಷಣದಿಂದ, ಸ್ವರ್ಗದಲ್ಲಿ ಪುತ್ರತ್ವವನ್ನು ಅನುಭವಿಸುವರೆ ಮುನ್ನೋಡುವವರಿಗಾಗಿ ಅಥವಾ ಪ್ರಮೋದವನವಾದ ಭೂಮಿಯ ಮೇಲೆ “ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯ” ವನ್ನು ಮುನ್ನೋಡುವ ಸರ್ವರಿಗಾಗಿ ಯೆಹೋವನಿಂದ ಬರುವ ವಿವೇಕದ ಬುದ್ಧಿವಾದದಿಂದ ಬೆಳಗುತ್ತದೆ. (ರೋಮಾಪುರ 8:18-21, 23, NW.) ಪುತ್ರ ಪುತ್ರಿಯರನ್ನು ಬೆಳೆಸಲು ಹೆತ್ತವರು ಉಪಯೋಗಿಸಬಹುದಾದ ವಿವೇಕದ ಸಲಹೆ ಇಲ್ಲಿದೆ. ಜ್ಞಾನೋಕ್ತಿ 3 ನೆಯ ಅಧ್ಯಾಯದ ಬುದ್ಧಿವಾದವು ಗಮನಾರ್ಹವಾಗಿದ್ದು ಈ ಎಚ್ಚರಿಕೆಯಿಂದ ಆರಂಭಗೊಳ್ಳುತ್ತದೆ: “ಕಂದಾ, ನನ್ನ ಉಪದೇಶವನ್ನು ಮರೆಯಬೇಡ, ನನ್ನ ಆಜ್ಞೆಗಳನ್ನು ಮನಃಪೂರ್ವಕವಾಗಿ ನಡಿಸು.” ಸೈತಾನನ ದುಷ್ಟ ಲೋಕದ ಕೊನೆಯ ದಿವಸಗಳು ತಮ್ಮ ಅಂತ್ಯದತ್ತ ಸಾಗುವಾಗ, ನಾವಾದರೋ ಸದಾ ಯೆಹೋವನ ಜ್ಞಾಪನಗಳಿಗೆ ಹೆಚ್ಚು ಸಮೀಪ ಗಮನವನ್ನು ಕೊಡುವಂತಾಗಲಿ. ದಾರಿಯೋ ಲಂಬಿಸಿರುವಂತೆ ಭಾಸವಾಗಿರಬಹುದು, ಆದರೆ ತಾಳುವ ಸಕಲರಿಗಿರುವ ವಾಗ್ದಾನವೇನಂದರೆ, “ಅವು ನಿನ್ನ ದಿನಗಳನ್ನು ಹೆಚ್ಚಿಸಿ ನಿನ್ನ ಆಯುಷ್ಯವನ್ನು ವೃದ್ಧಿಗೊಳಿಸಿ ನಿನಗೆ ಸುಕ್ಷೇಮವನ್ನುಂಟು ಮಾಡುವವು”—ಯೆಹೋವನ ಹೊಸ ವ್ಯವಸ್ಥೆಯಲ್ಲಿ ಅನಂತ ಜೀವನ.—ಜ್ಞಾನೋಕ್ತಿ 3:1, 2.
4, 5. (ಎ) ಯೋಹಾನ 5:19, 20 ರಲ್ಲಿ ಯಾವ ಸಂತೋಷದ ಸಂಬಂಧವನ್ನು ವರ್ಣಿಸಲಾಗಿದೆ? (ಬಿ) ಧರ್ಮೋಪದೇಶಕಾಂಡ 11:18-21ರ ಬುದ್ಧಿವಾದವು ನಮ್ಮ ದಿನದವರೆಗೆ ಹೇಗೆ ಅನ್ವಯಿಸುತ್ತದೆ?
4 ತಂದೆ ಮತ್ತು ಮಗನ ಮಧ್ಯೆ ಒಂದು ಸಂತೋಷದ ಸಂಬಂಧವು ಅತ್ಯಮೂಲ್ಯವಾಗಿರಬಲ್ಲದು. ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರು ಅದನ್ನು ಹಾಗಿರುವಂತೆ ಏರ್ಪಡಿಸಿದನು. ಕ್ರಿಸ್ತ ಯೇಸು, ಯೆಹೋವನೊಂದಿಗಿದ್ದ ತನ್ನ ಸ್ವಂತ ಆಪ್ತ ಸಂಬಂಧದ ಕುರಿತು ಹೇಳಿದ್ದು: “ತಂದೆಯು ಮಾಡುವದನ್ನು ಕಂಡು ಮಗನು ಮಾಡುತ್ತಾನೆ ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ಆತನು ಮಾಡುವದನ್ನೆಲ್ಲಾ ಹಾಗೆಯೇ ಮಗನೂ ಮಾಡುತ್ತಾನೆ. ತಂದೆಯು ಮಗನ ಮೇಲೆ ಮಮತೆಯಿಟ್ಟು ತಾನು ಮಾಡುವವುಗಳನ್ನೆಲ್ಲಾ ಅವನಿಗೆ ತೋರಿಸುತ್ತಾನೆ.” (ಯೋಹಾನ 5:19, 20) ಇದೇ ರೀತಿಯ ಆಪತ್ತೆಯು ತನ್ನ ಮತ್ತು ಭೂಮಿಯ ಮೇಲಿನ ತನ್ನ ಕುಟುಂಬವೆಲ್ಲದರ ಮಧ್ಯೆ, ಹಾಗೂ ಮಾನವ ಪಿತರ ಮತ್ತು ಅವರ ಮಕ್ಕಳ ಮಧ್ಯೆ ಇರಬೇಕೆಂದು ಯೆಹೋವನು ಉದ್ದೇಶಿಸಿದನು.
5 ಪುರಾತನ ಕಾಲದ ಇಸ್ರಾಯೇಲಿನಲ್ಲಿ ಒಂದು ಭರವಸೆಯ ಕುಟುಂಬ ಸಂಬಂಧವನ್ನು ಪ್ರೋತ್ಸಾಹಿಸಲಾಗುತ್ತಿತ್ತು. ಅಲ್ಲಿ ಯೆಹೋವನು ತಂದೆಗಳಿಗೆ ಬುದ್ಧಿಹೇಳಿದ್ದು: “ನೀವು ಈ ನನ್ನ ಮಾತುಗಳನ್ನು ನಿಮ್ಮ ಹೃದಯದಲ್ಲಿಯೂ ಮನಸ್ಸಿನಲ್ಲಿಯೂ ಇಟ್ಟುಕೊಳ್ಳಬೇಕು; ಇವುಗಳನ್ನು ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು; ಇವು ನಿಮ್ಮ ಹುಬ್ಬುಗಳ ನಡುವೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತಿರಬೇಕು. ನೀವು ಮನೆಯಲ್ಲಿರುವಾಗಲೂ ಪ್ರಯಾಣದಲ್ಲಿರುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡುತ್ತಾ ನಿಮ್ಮ ಮಕ್ಕಳಿಗೆ ಇವುಗಳನ್ನು ಅಭ್ಯಾಸ ಮಾಡಿಸಬೇಕು. ನಿಮ್ಮ ಮನೇಬಾಗಲಿನ ನಿಲುವುಪಟ್ಟಿಗಳಲಿಯ್ಲೂ ಹೆಬ್ಬಾಗಲುಗಳ ಮೇಲೆಯೂ ಇವುಗಳನ್ನು ಬರೆಯಬೇಕು. ಹೀಗಾದರೆ ಭೂಮಿಯ ಮೇಲೆ ಆಕಾಶವು ಎಷ್ಟು ಕಾಲ ನಿಂತಿರುವದೋ ಅಷ್ಟು ಕಾಲ ನೀವೂ ನಿಮ್ಮ ಸಂತತಿಯವರೂ ನಿಮ್ಮ ಪಿತೃಗಳಿಗೆ ಯೆಹೋವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ಆ ದೇಶದಲ್ಲಿ ಬಾಳುವಿರಿ.” (ಧರ್ಮೋಪದೇಶಕಾಂಡ 11:18-21) ನಮ್ಮ ಮಹೋಚ್ಚ ಶಿಕ್ಷಕನಾದ ಯೆಹೋವ ದೇವರ ಪ್ರೇರಿತ ವಾಕ್ಯವು ಆತನನ್ನು, ಹೆತ್ತವರು ಮತ್ತು ಅವರ ಮಕ್ಕಳೊಂದಿಗೆ ಹಾಗೂ ಕ್ರೈಸ್ತ ಸಭೆಯಲ್ಲಿ ಆತನನ್ನು ಸೇವಿಸುವವರೊಂದಿಗೆ ಜೋಡಿಸಲು ನಿಶ್ಚಯವಾಗಿಯೂ ಉಪಯುಕ್ತವಾಗಿರಬಲ್ಲದು.—ಯೆಶಾಯ 30:20, 21.
6. ನಾವು ದೇವರ ಮತ್ತು ಮನುಷ್ಯನ ಅನುಗ್ರಹವನ್ನು ಹೇಗೆ ಸಂಪಾದಿಸಬಹುದು?
6 ಆಬಾಲವೃದ್ಧರಾದ ದೇವಜನರಿಗೆ ವಿವೇಕಭರಿತವಾದ ಪಿತೃಸದೃಶ ಸಲಹೆಯು ಜ್ಞಾನೋಕ್ತಿ 3 ನೆಯ ಅಧ್ಯಾಯದ 3 ಮತ್ತು 4 ನೆಯ ವಚನಗಳಲ್ಲಿ ಮುಂದುವರಿಯುತ್ತದೆ: “ಪ್ರೀತಿಸತ್ಯತೆಗಳು ನಿನ್ನನ್ನು ಬಿಡದಿರಲಿ, ಅವುಗಳನ್ನು ನಿನ್ನ ಕೊರಳಿಗೆ ಕಟ್ಟು, ನಿನ್ನ ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆ; ಇದರಿಂದ ನೀನು ದೇವರ ಮತ್ತು ಮನುಷ್ಯರ ದಯೆಯನ್ನೂ ಸಮ್ಮತಿಯನ್ನೂ ಪಡೆದುಕೊಳ್ಳುವಿ.” ಪ್ರೀತಿದಯೆ ಮತ್ತು ಸತ್ಯತೆಯನ್ನು ಪ್ರದರ್ಶಿಸುವುದರಲ್ಲಿ ಯೆಹೋವ ದೇವರೇ ಮೇಲಾದವನು. ಕೀರ್ತನೆ 25:10 ಹೇಳುವಂತೆ, “ಆತನ ಎಲ್ಲಾ ಮಾರ್ಗಗಳು ಕೃಪೆಯೂ ಸತ್ಯತೆಯೂ ಉಳ್ಳವು.” ಯೆಹೋವನನ್ನು ಅನುಕರಿಸುತ್ತಾ, ಈ ಗುಣಗಳನ್ನು ಮತ್ತು ಅವುಗಳ ಸಂರಕ್ಷಣಾ ಶಕ್ತಿಯನ್ನು ನಾವು ಅಮೂಲ್ಯವೆಂದು ಎಣಿಸಿ, ಅವು ಬೆಲೆಬಾಳುವ ಒಂದು ಕಂಠಹಾರವೂ ಎಂಬಂತೆ ಅಮೂಲ್ಯವೆಂದೆಣಿಸಿ, ನಮ್ಮ ಹೃದಯದಲ್ಲಿ ಅವುಗಳನ್ನು ಅಳಿಸಿ ಹೋಗದಂತೆ ಕೆತ್ತಬೇಕು. ಆಗ ನಾವು ಉತ್ಸಾಹದಿಂದ ಹೀಗೆ ಪ್ರಾರ್ಥಿಸಬಲ್ಲೆವು: “ಯೆಹೋವನೇ, . . . ನಿನ್ನ ಕೃಪಾಸತ್ಯತೆಗಳು ಯಾವಾಗಲೂ ನನ್ನನ್ನು ಕಾಪಾಡಲಿ.”—ಕೀರ್ತನೆ 40:11.
ಒಂದು ಬಾಳುವ ಭರವಸೆ
7. ಯೆಹೋವನು ತನ್ನ ಭರವಸಾರ್ಹತೆಯನ್ನು ಯಾವ ವಿಧಗಳಲ್ಲಿ ತೋರಿಸಿದ್ದಾನೆ?
7 ಭರವಸೆಯನ್ನು ವೆಬ್ಸ್ಟರ್ಸ್ ನೈಂತ್ ಕಲೀಜಿಯೇಟ್ ಡಿಕ್ಷನೆರಿ, “ಯಾವನಾದರೂ ಒಬ್ಬನ ಅಥವಾ ಒಂದು ವಸ್ತುವಿನ ನಡತೆ, ಸಾಮರ್ಥ್ಯ, ಬಲ ಯಾ ಸತ್ಯದ ಮೇಲಿರುವ ನಿಶ್ಚಿತ ನೆಚ್ಚಿಕೆ,” ಎಂದು ನಿರೂಪಿಸುತ್ತದೆ. ಯೆಹೋವನ ನಡತೆಯೋ ಆತನ ಪ್ರೀತಿದಯೆಯಲ್ಲಿ ಭದ್ರವಾಗಿ ಆಶ್ರಯಿಸಿದೆ. ಮತ್ತು ಆತನ ವಾಗ್ದಾನವನ್ನು ಕೈಗೂಡಿಸುವ ಆತನ ಸಾಮರ್ಥ್ಯದಲ್ಲಿ ನಾವು ಪೂರ್ಣ ಭರವಸೆಯಿಂದಿರಬಲ್ಲೆವು, ಏಕೆಂದರೆ ಯೆಹೋವನೆಂಬ ಆತನ ನಾಮವೇ ಆತನನ್ನು ಮಹಾ ಉದ್ದೇಶಕನೆಂದು ಗುರುತಿಸುತ್ತದೆ. (ವಿಮೋಚನಕಾಂಡ 3:14; 6:2-8) ಸೃಷ್ಟಿಕರ್ತನೋಪಾದಿ ಆತನು ಬಲದ ಮತ್ತು ಚಲನಾತ್ಮಕ ಶಕ್ತಿಯ ಬುಗ್ಗೆಯಾಗಿದ್ದಾನೆ. (ಯೆಶಾಯ 40:26, 29) ಆತನು ಸತ್ಯದ ಸಾರ, ಏಕೆಂದರೆ “ಸುಳ್ಳಾಡುವುದು ದೇವರಿಗೆ ಅಸಾಧ್ಯ.” (ಇಬ್ರಿಯ 6:18) ಆದುದರಿಂದ, ಯಾರಿಗೆ ತನ್ನಲ್ಲಿ ಭರವಸೆಯಿಡುವವರನ್ನು ಸಂರಕ್ಷಿಸುವ ಮತ್ತು ತನ್ನ ಮಹಾ ಉದ್ದೇಶಗಳನ್ನೆಲ್ಲಾ ಮಹಿಮಾಭರಿತ ಕಾರ್ಯಸಿದ್ಧಿಗೆ ತರುವ ಸರ್ವಶಕ್ತಿಯಿದೆಯೋ ಆ ಸಕಲ ಸತ್ಯದ ಮಹಾ ಉಗಮನಾದ, ನಮ್ಮ ದೇವರಾದ ಯೆಹೋವನಲ್ಲಿ ಸಂಶಯರಹಿತವಾದ ಭರವಸೆಯನ್ನಿಡುವಂತೆ ನಾವು ಪ್ರೋತ್ಸಾಹಿಸಲ್ಪಡುತ್ತೇವೆ.—ಕೀರ್ತನೆ 91:1, 2; ಯೆಶಾಯ 55:8-11.
8, 9. ಲೋಕದಲ್ಲಿ ಭರವಸೆಯ ದುಃಖಕರವಾದ ಕೊರತೆ ಏಕಿದೆ, ಮತ್ತು ಯೆಹೋವನ ಜನರು ಒಂದು ವ್ಯತ್ಯಾಸವನ್ನು ಹೇಗೆ ಒದಗಿಸುತ್ತಾರೆ?
8 ನಮ್ಮ ಸುತ್ತಲೂ ಇರುವ ಹೀನ ಸ್ಥಿತಿಗಿಳಿದಿರುವ ಲೋಕದಲ್ಲಿ, ವಿಷಾದಕರವಾಗಿ ಭರವಸೆಯ ಅಭಾವವಿದೆ. ಇದಕ್ಕೆ ಬದಲಾಗಿ, ನಾವು ದುರಾಶೆ ಮತ್ತು ಭ್ರಷ್ಟಾಚಾರವನ್ನು ಎಲ್ಲೆಲ್ಲಿಯೂ ಕಂಡುಕೊಳ್ಳುತ್ತೇವೆ. ವರ್ಲ್ಡ್ ಪ್ರೆಸ್ ರಿವ್ಯೂ ಪತ್ರಿಕೆಯ ಮೇ 1993ರ ಸಂಚಿಕೆಯ ಮುಖಪುಟದಲ್ಲಿ ಈ ಸಂದೇಶವು ಅಲಂಕರಿಸಲ್ಪಟ್ಟಿತ್ತು: “ಭ್ರಷ್ಟಾಚಾರದ ಮಹಾ ಏರಿಕೆ—ಹೊಸ ಲೋಕ ವ್ಯವಸ್ಥೆಯಲ್ಲಿ ಮಲಿನ ಹಣ. ಈ ಭ್ರಷ್ಟಾಚಾರದ ಉದ್ಯಮವು ಅಮೆರಿಕದಿಂದ ಆರ್ಜೆಂಟೀನದ ವರೆಗೆ, ಸ್ಪೆಯ್ನ್ನಿಂದ ಪೆರುವಿನ ವರೆಗೆ, ಇಟೆಲಿಯಿಂದ ಮೆಕ್ಸಿಕೊ ವರೆಗೆ, ವ್ಯಾಟಿಕನ್ನಿಂದ ರಷ್ಯದ ವರೆಗೆ ವಿಸ್ತಾರಗೊಂಡಿದೆ.” ದ್ವೇಷ, ಲೋಭ ಮತ್ತು ಸಂದೇಹದ ಮೇಲೆ ಆಧಾರಗೊಂಡಿರುವ ಮಾನವನ ಹೊಸ ಲೋಕ ವ್ಯವಸ್ಥೆ ಎನ್ನಿಸಿಕೊಳ್ಳುವ ಸಂಗತಿಯು ಮಾನವಕುಲಕ್ಕೆ ಹೆಚ್ಚುತ್ತಿರುವ ದುರವಸ್ಥೆಗಳನ್ನಲ್ಲದೆ ಇನ್ನಾವುದನ್ನೂ ಕೊಯ್ಯುವುದಿಲ್ಲ.
9 ರಾಜಕೀಯ ರಾಷ್ಟ್ರಗಳಿಗೆ ವ್ಯತಿರಿಕ್ತವಾಗಿ, ಯೆಹೋವನ ಸಾಕ್ಷಿಗಳಾದರೋ, “ಯೆಹೋವನು ದೇವರಾಗಿರುವ ಜನಾಂಗ” ವಾಗಿರಲು ಸಂತೋಷಿಸುತ್ತಾರೆ. ಸತ್ಯತೆಯಿಂದ ಕೇವಲ ಅವರೇ “ನಮ್ಮ ಭರವಸೆ ದೇವರು” ಎಂದು ಹೇಳಬಲ್ಲರು. ಅವರಲ್ಲಿ ಪ್ರತಿಯೊಬ್ಬರೂ ಹರ್ಷದಿಂದ, “ದೇವರ ವಾಗ್ದಾನಕ್ಕೋಸ್ಕರ ಆತನಲ್ಲಿಯೇ ಹೆಚ್ಚಳಪಡುವೆನು; . . . ದೇವರನ್ನು ನಂಬಿ ನಿರ್ಭಯದಿಂದಿರುವೆನು,” ಎಂದು ಕೂಗಿ ಹೇಳಬಲ್ಲರು.—ಕೀರ್ತನೆ 33:12; 56:4, 11.
10. ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಅನೇಕ ಯುವ ಕ್ರೈಸ್ತರಿಗೆ ಯಾವುದು ಬಲಪಡಿಸಿದೆ?
10 ಸಾವಿರಾರು ಯುವ ಸಾಕ್ಷಿಗಳು ಕಠಿನ ಹೊಡೆತ ಮತ್ತು ಸೆರೆವಾಸಗಳನ್ನು ಅನುಭವಿಸಿರುವ ಏಷ್ಯದ ಒಂದು ದೇಶದಲ್ಲಿ, ಯೆಹೋವನ ಮೇಲಿನ ಭರವಸೆ ಅವರಲ್ಲಿ ಅಧಿಕಾಂಶ ಮಂದಿಗೆ ತಾಳಿಕೊಳ್ಳುವಂತೆ ಸಾಧ್ಯ ಮಾಡಿದೆ. ಸೆರೆಮನೆಯಲ್ಲಿ ಒಂದು ರಾತ್ರಿ, ಭಯಂಕರ ಯಾತನೆಯನ್ನು ಅನುಭವಿಸಿದ್ದ ಒಬ್ಬ ಯುವ ಸಾಕ್ಷಿಯು ತನಗೆ ಇನ್ನು ತಾಳಿಕೊಳ್ಳಲು ಸಾಧ್ಯವಿಲ್ಲ ಎಂದೆಣಿಸಿದನು. ಆದರೆ ಇನ್ನೊಬ್ಬ ಯುವಕನು ಕತ್ತಲೆಯಲ್ಲಿ ಗುಟ್ಟಿನಲ್ಲಿ ಅವನ ಬಳಿಗೆ ಬಂದು, “ತಾಳ್ಮೆಗೆಡಬೇಡ; ನಾನು ಒಪ್ಪಂದ ಮಾಡಿಕೊಂಡೆ, ಆದರೆ ಅಂದಿನಿಂದ ನನಗೆ ಮನಶ್ಶಾಂತಿಯಿಲ್ಲ,” ಎಂದು ಪಿಸುಗುಟ್ಟಿದನು. ಆಗ ಮೊದಲಿನ ಯುವಕನು ಸ್ಥಿರವಾಗಿ ನಿಲ್ಲುವ ತನ್ನ ನಿರ್ಧಾರವನ್ನು ನವೀಕರಿಸಿಕೊಂಡನು. ನಮ್ಮ ಸಮಗ್ರತೆಯನ್ನು ಸವೆಯಿಸುವ ಸೈತಾನನ ಯಾವುದೇ ಮತ್ತು ಪ್ರತಿಯೊಂದು ಪ್ರಯತ್ನವನ್ನು ಜಯಿಸಲು ಯೆಹೋವನು ಸಹಾಯ ಮಾಡುವನೆಂದು ನಾವು ಪೂರ್ಣ ಭರವಸೆಯನ್ನಿಡಬಲ್ಲೆವು.—ಯೆರೆಮೀಯ 7:3-7; 17:1-8; 38:6-13, 15-17.
11. ಯೆಹೋವನಲ್ಲಿ ಭರವಸೆಯಿಡಲು ನಮ್ಮನ್ನು ಹೇಗೆ ಹುರಿದುಂಬಿಸಲಾಗಿದೆ?
11 ಒಂದನೆಯ ಆಜ್ಞೆ ಅಂಶಿಕವಾಗಿ ಓದಲ್ಪಡುವುದು: “ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣ ಹೃದಯದಿಂದ ಪ್ರೀತಿಸಬೇಕು.” (ಮಾರ್ಕ 12:30, NW.) ನಾವು ದೇವರ ವಾಕ್ಯದ ಸತ್ಯವನ್ನು ಧ್ಯಾನಿಸಿದಂತೆ, ನಾವು ಕಲಿಯುತ್ತಿರುವ ಮಹಾ ಸತ್ಯತೆಗಳು ನಮ್ಮ ಹೃದಯದೊಳಗೆ ಆಳವಾಗಿ ಇಳಿಯುತ್ತವೆ. ಇದರಿಂದಾಗಿ ನಮ್ಮ ಸರ್ವಸ್ವವನ್ನು ನಾವು ನಮ್ಮ ಅದ್ಭುತಸ್ವರೂಪಿಯಾದ ಮತ್ತು ಪರಮಾಧಿಕಾರಿ ಕರ್ತನಾದ ಯೆಹೋವನ ಸೇವೆಯಲ್ಲಿ ಕಳೆಯುವಂತೆ ಪ್ರಚೋದಿಸಲ್ಪಡುತ್ತೇವೆ. ಆತನು ನಮಗೆ ಕಲಿಸಿರುವ, ಮಾಡಿರುವ ಮತ್ತು ಇನ್ನು ಮಾಡಲಿರುವ ಸಕಲ ವಿಷಯಗಳಿಗಾಗಿ ಗಣ್ಯತೆಯಿಂದ ತುಂಬಿ ತುಳುಕುವ ಹೃದಯದಿಂದಲೇ ನಾವು ಆತನ ರಕ್ಷಣೆಯಲ್ಲಿ ನಿಸ್ಸಂಶಯವಾಗಿ ಭರವಸೆಯಿಡುವಂತೆ ಹುರಿದುಂಬಿಸಲ್ಪಡುತ್ತೇವೆ.—ಯೆಶಾಯ 12:2.
12. ಕಳೆದ ಅನೇಕ ವರ್ಷಗಳಲ್ಲಿ, ಅನೇಕ ಕ್ರೈಸ್ತರು ಯೆಹೋವನಲ್ಲಿ ಅವರ ಭರವಸೆಯನ್ನು ಹೇಗೆ ತೋರಿಸಿಕೊಟ್ಟಿದ್ದಾರೆ?
12 ಈ ಭರವಸೆಯನ್ನು ವರ್ಷಗಳ ದಾಟುವಿಕೆಯಿಂದ ಬೆಳೆಸಸಾಧ್ಯವಿದೆ. ವಾಚ್ ಟವರ್ ಸೊಸೈಟಿಯ ಬ್ರೂಕ್ಲಿನ್ ಮುಖ್ಯ ಕಾರ್ಯಾಲಯಗಳಲ್ಲಿ ಎಪ್ರಿಲ್ 1927 ರಿಂದ ಹಿಡಿದು 50 ಕ್ಕೂ ಹೆಚ್ಚು ವರ್ಷಕಾಲ ನಂಬಿಕೆಯಿಂದ ಸೇವೆ ಮಾಡಿರುವ ಒಬ್ಬ ದೀನ ಯೆಹೋವನ ಸಾಕ್ಷಿ ಬರೆದುದು: “ಆ ತಿಂಗಳ ಅಂತ್ಯದಲ್ಲಿ ನಾನು 5 ಡಾಲರುಗಳ ಭತ್ಯವನ್ನು ಪಡೆದೆ. ಅದು ಒಂದು ಲಕೋಟೆಯೊಳಗೆ ಜ್ಞಾನೋಕ್ತಿ 3:5, 6ರ ವಚನವನ್ನು ಒಳಗೊಂಡಿದ್ದ ಒಂದು ಸುಂದರವಾದ ಕಾರ್ಡಿನೊಂದಿಗೆ ದೊರೆಯಿತು. . . . ಯೆಹೋವನಲ್ಲಿ ಭರವಸವಿಡಲು ಸಕಲ ಕಾರಣಗಳೂ ನನಗಿದ್ದವು, ಏಕೆಂದರೆ ಇಲ್ಲಿ ಭೂಮಿಯ ಮೇಲೆ ಸರ್ವ ರಾಜ್ಯಾಭಿರುಚಿಗಳನ್ನು ನಂಬಿಗಸ್ತಿಕೆಯಿಂದ ಪರಾಮರಿಸುವ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಯೆಹೋವನಿಗಿದೆಯೆಂದು ಮುಖ್ಯಕಾರ್ಯಾಲಯದಲ್ಲಿ ನಾನು ಬೇಗನೆ ಗಣ್ಯ ಮಾಡಿದೆ.—ಮತ್ತಾಯ 24:45-47.”b ಈ ಕ್ರೈಸ್ತನ ಹೃದಯವು ಹಣದಾಸೆಯ ಮೇಲಲ್ಲ, “ಪರಲೋಕದಲ್ಲಿ ಲಯವಾಗದ ದ್ರವ್ಯ” ವನ್ನು ಪಡೆಯುವುದರ ಮೇಲಿತ್ತು. ತದ್ರೀತಿ, ಈಗಲೂ ಭೂಮಿಯ ಸುತ್ತಲೂ ವಾಚ್ ಟವರ್ ಸೊಸೈಟಿಯ ಬೆತೆಲ್ ಮನೆಗಳಲ್ಲಿ ಸೇವೆ ಮಾಡುವ ಸಾವಿರಾರು ಜನರು ಒಂದು ರೀತಿಯ ಶಾಸನಬದ್ಧವಾದ ದಾರಿದ್ರ್ಯ ವ್ರತವನ್ನು ಕೈಕೊಂಡು ಸೇವೆ ಮಾಡುತ್ತಾರೆ. ಯೆಹೋವನು ತಮ್ಮ ಪ್ರತಿನಿತ್ಯದ ಆವಶ್ಯಕತೆಗಳನ್ನು ಒದಗಿಸಲು ಅವರು ಆತನಲ್ಲಿ ಭರವಸವಿಡುತ್ತಾರೆ.—ಲೂಕ 12:29-31, 33, 34.
ಯೆಹೋವನನ್ನು ಆಶ್ರಯಿಸಿರಿ
13, 14. (ಎ) ಪಕ್ವವಾದ ಬುದ್ಧಿವಾದವನ್ನು ಎಲ್ಲಿ ಮಾತ್ರ ಕಂಡುಕೊಳ್ಳಬಹುದು? (ಬಿ) ಹಿಂಸೆಯನ್ನು ಪಾರಾಗಲು ಯಾವುದರಿಂದ ದೂರವಿರತಕ್ಕದ್ದು?
13 ನಮ್ಮ ಸ್ವರ್ಗೀಯ ತಂದೆ ನಮಗೆ ಬುದ್ಧಿ ಹೇಳುವುದು: ‘ಸ್ವಬುದ್ಧಿಯನ್ನೇ ಆಧಾರ ಮಾಡಿಕೊಳ್ಳಬೇಡ.’ (ಜ್ಞಾನೋಕ್ತಿ 3:5) ಲೌಕಿಕ ಸಲಹೆಗಾರರೂ ಮನಶ್ಶಾಸ್ತ್ರಜ್ಞರೂ ಯೆಹೋವನು ಪ್ರದರ್ಶಿಸುವ ವಿವೇಕ ಮತ್ತು ತಿಳಿವಳಿಕೆಯನ್ನು ಸಮೀಪಿಸಲು ಎಂದೂ ನಿರೀಕ್ಷಿಸಸಾಧ್ಯವಿಲ್ಲ. “ಆತನ ಜ್ಞಾನವು ಅಪರಿಮಿತವಾಗಿದೆ.” (ಕೀರ್ತನೆ 147:5) ಲೋಕದ ಪ್ರಮುಖ ಜನರ ವಿವೇಕವನ್ನು ಅಥವಾ ನಮ್ಮ ತಿಳಿವಳಿಕೆಯಿಲ್ಲದ ಭಾವಾವೇಶವನ್ನು ಆಶ್ರಯಿಸುವ ಬದಲಿಗೆ, ನಾವು ಪಕ್ವತೆಯ ಬುದ್ಧಿವಾದಕ್ಕಾಗಿ ಯೆಹೋವನ, ಆತನ ವಾಕ್ಯದ, ಮತ್ತು ಕ್ರೈಸ್ತ ಸಭೆಯ ಹಿರಿಯರ ಕಡೆಗೆ ನೋಡೋಣ.—ಕೀರ್ತನೆ 55:22; 1 ಕೊರಿಂಥ 2:5.
14 ಮಾನವ ವಿವೇಕವಾಗಲಿ ಸ್ಥಾನಾಹಂಕರಾವಾಗಲಿ ತ್ವರಿತ ಗತಿಯಿಂದ ಸಮೀಪಿಸುತ್ತಿರುವ ಕಠಿನ ಪರೀಕ್ಷಾ ದಿನದಲ್ಲಿ ನಮ್ಮನ್ನೆಲಿಗ್ಲೂ ತಲುಪಿಸದು. (ಯೆಶಾಯ 29:14; 1 ಕೊರಿಂಥ 2:14) ಜಪಾನಿನಲ್ಲಿ, II ನೆಯ ಲೋಕ ಯುದ್ಧಕಾಲದಲ್ಲಿ, ದೇವಜನರ, ಸಮರ್ಥ ಆದರೂ ಅಹಂಕಾರದ ಒಬ್ಬ ಕುರುಬನು ತನ್ನ ಸ್ವಂತ ತಿಳಿವಳಿಕೆಯನ್ನು ಆಧಾರಮಾಡಿಕೊಳ್ಳಲು ಆರಿಸಿಕೊಂಡನು. ಒತ್ತಡದಿಂದಾಗಿ ಅವನು ಧರ್ಮಭ್ರಷ್ಟನಾದನು, ಮತ್ತು ಅವನ ಹಿಂಡಿನಲ್ಲಿ ಅಧಿಕಾಂಶವೂ ಹಿಂಸೆಯ ಕಾರಣ ಚಟುವಟಿಕೆಯನ್ನು ನಿಲ್ಲಿಸಿತು. ಕೊಳಕಾದ ಸೆರೆಕೋಣೆಗಳಲ್ಲಿ ಭಯಂಕರ ಪೀಡೆಯನ್ನು ಧೈರ್ಯದಿಂದ ಪಾರಾದ ಒಬ್ಬ ಕರ್ತವ್ಯವನಿಷ್ಠಳಾದ ಜಪಾನೀ ಸಹೋದರಿ ಹೇಳಿದ್ದು: “ನಂಬಿಗಸ್ತರಾಗಿ ಉಳಿದವರಲ್ಲಿ ಯಾವ ವಿಶೇಷ ಸಾಮರ್ಥ್ಯಗಳೂ ಇರಲಿಲ್ಲ, ಮತ್ತು ಅವರು ಅಪ್ರಸಿದ್ಧರಾಗಿದ್ದರು. ನಾವೆಲ್ಲರೂ ಸದಾ ನಮ್ಮ ಸರ್ವ ಹೃದಯದಿಂದ ಯೆಹೋವನಲ್ಲಿ ಭರವಸವಿಡಬೇಕೆಂಬುದು ನಿಶ್ಚಯ.”c
15. ನಾವು ಯೆಹೋವನನ್ನು ಮೆಚ್ಚಿಸಬೇಕಾದರೆ ಯಾವ ದೈವಿಕ ಗುಣವು ಅಗತ್ಯ?
15 ನಮ್ಮ ಸ್ವಂತ ತಿಳಿವಳಿಕೆಯ ಬದಲು ಯೆಹೋವನಲ್ಲಿ ಭರವಸವಿಡುವುದರಲ್ಲಿ ದೈನ್ಯಭಾವವು ಒಳಗೊಂಡಿದೆ. ಯೆಹೋವನನ್ನು ಸಂತೋಷಿಸಲು ಬಯಸುವವರೆಲ್ಲರಿಗೂ ಈ ಗುಣವು ಅದೆಷ್ಟು ಪ್ರಾಮುಖ್ಯ! ನಮ್ಮ ದೇವರು ತಾನೇ, ಆತನು ಸರ್ವ ವಿಶ್ವದ ಪರಮಾಧಿಕಾರಿ ಕರ್ತನಾಗಿದ್ದರೂ ಕೂಡ, ತನ್ನ ಬುದ್ಧಿಶಕ್ತಿಯ ಸೃಷ್ಟಿಯೊಂದಿಗೆ ವ್ಯವಹರಿಸುವಾಗ ದೈನ್ಯವನ್ನು ಪ್ರದರ್ಶಿಸುತ್ತಾನೆ. ಇದಕ್ಕಾಗಿ ನಾವು ಕೃತಜ್ಞರಾಗಿರಬಲ್ಲೆವು. “ಆಕಾಶವನ್ನೂ ಭೂಮಿಯನ್ನೂ ನೋಡಲಿಕ್ಕೆ ಬಾಗುತ್ತಾನೆ. ಆತನು ದೀನರನ್ನು ಧೂಳಿಯಿಂದ ಎಬ್ಬಿಸುತ್ತಾನೆ.” (ಕೀರ್ತನೆ 113:6, 7) ಆತನ ಮಹಾ ಕರುಣೆಯಿಂದ, ನಮ್ಮ ಬಲಹೀನತೆಗಳನ್ನು ಮಾನವಸಂತತಿಗೆ ತನ್ನ ಅತ್ಯಂತ ಮಹಾ ಕೊಡುಗೆಯ, ತನ್ನ ಪ್ರಿಯ ಪುತ್ರನಾದ ಕ್ರಿಸ್ತ ಯೇಸುವಿನ ಅಮೂಲ್ಯ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ಆತನು ಕ್ಷಮಿಸುತ್ತಾನೆ. ಈ ಅಪಾತ್ರ ಕೃಪೆಗಾಗಿ ನಾವೆಷ್ಟು ಆಭಾರಿಗಳಾಗಿರಬೇಕು!
16. ಸಭೆಯಲ್ಲಿ ಸುಯೋಗಗಳನ್ನು ಪಡೆಯಲು ಸಹೋದರರು ಹೇಗೆ ಪ್ರಯತ್ನಪಡಬಹುದು?
16 ಯೇಸು ತಾನೇ ನಮಗೆ ಜ್ಞಾಪಕ ಹುಟ್ಟಿಸುವುದು: “ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು. ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.” (ಮತ್ತಾಯ 23:12) ದೈನ್ಯಭಾವದಿಂದ, ಸ್ನಾತ ಸಹೋದರರು ಕ್ರೈಸ್ತ ಸಭೆಯಲ್ಲಿ ಜವಾಬ್ದಾರಿಗಳನ್ನು ಪಡೆಯಲು ಪ್ರಯತ್ನಿಸಬೇಕು. ಆದರೂ, ಮೇಲ್ವಿಚಾರಕರು ತಮ್ಮ ನೇಮಕವನ್ನು ಅದೊಂದು ಸ್ಥಾನಮಾನದ ಗುರುತೆಂದು ಎಣಿಸದೆ, ಒಂದು ಕೆಲಸವನ್ನು ಯೇಸು ಮಾಡಿದಂತೆ, ದೈನ್ಯಭಾವದಿಂದ, ಗಣ್ಯತೆಯಿಂದ, ಆತುರದಿಂದ ಮಾಡುವ ಅವಕಾಶವೆಂದು ಎಣಿಸಬೇಕು. ಅವನು ಹೇಳಿದ್ದು: “ನನ್ನ ತಂದೆಯು ಇಂದಿನ ವರೆಗೂ ಕೆಲಸ ಮಾಡುತ್ತಾನೆ, ನಾನೂ ಕೆಲಸ ಮಾಡುತ್ತೇನೆ.”—ಯೋಹಾನ 5:17; 1 ಪೇತ್ರ 5:2, 3.
17. ನಾವೆಲ್ಲರೂ ಏನನ್ನು ಗಣ್ಯಮಾಡಬೇಕು, ಇದು ಯಾವ ಚಟುವಟಿಕೆಗೆ ನಡೆಸಬೇಕು?
17 ಯೆಹೋವನ ದೃಷ್ಟಿಯಲ್ಲಿ ನಾವು ಧೂಳಿಗಿಂತ ಹೆಚ್ಚಲ್ಲವೆಂಬುದನ್ನು ನಾವು ಸದಾ ದೈನ್ಯಭಾವದಿಂದ ಮತ್ತು ಪ್ರಾರ್ಥನಾಪೂರ್ವಕವಾಗಿ ಗಣ್ಯ ಮಾಡುವಂತಾಗಲಿ. ಆದುದರಿಂದ, “ಯೆಹೋವನ ಪ್ರೀತಿದಯೆಯು ಆತನಿಗೆ ಭಯಪಡುವವರ ಕಡೆಗೆ ಅನಿಶ್ಚಿತ ಕಾಲದಿಂದ ಅನಿಶ್ಚಿತ ಕಾಲದ ವರೆಗೂ, ಆತನ ನೀತಿಯು ಪುತ್ರರ ಪುತ್ರರ ವರೆಗೂ ಇರುತ್ತದೆ” ಎಂಬುದಕ್ಕೆ ನಾವೆಷ್ಟು ಆನಂದವುಳ್ಳವರಾಗಿರಬಲ್ಲೆವು! (ಕೀರ್ತನೆ 103:14, 17, NW.) ಆದಕಾರಣ ನಾವೆಲ್ಲರೂ ದೇವರ ವಾಕ್ಯದ ಉತ್ಸುಕ ವಿದ್ಯಾರ್ಥಿಗಳಾಗಿರಬೇಕು. ವೈಯಕ್ತಿಕ ಹಾಗೂ ಕುಟುಂಬ ಅಧ್ಯಯನ, ಮತ್ತು ಸಭಾ ಕೂಟಗಳಲ್ಲಿ ನಾವು ಕಳೆಯುವ ಸಮಯವು ನಮ್ಮ ಪ್ರತಿ ವಾರದ ಅತ್ಯಮೂಲ್ಯ ಸಮಯದ ಭಾಗವಾಗಿರಬೇಕು. ಈ ವಿಧದಲ್ಲಿ ನಾವು “ಅತಿ ಪರಿಶುದ್ಧನ ಜ್ಞಾನ” ವನ್ನು ಬೆಳೆಸುತ್ತೇವೆ. “ತಿಳಿವಳಿಕೆಯು ಇದೇ.”—ಜ್ಞಾನೋಕ್ತಿ 9:10, NW.
“ನಿನ್ನ ಸಕಲ ಮಾರ್ಗಗಳಲ್ಲಿ . . . ”
18, 19. ನಾವು ಜ್ಞಾನೋಕ್ತಿ 3:6 ನ್ನು ನಮ್ಮ ಜೀವಿತಗಳಲ್ಲಿ ಹೇಗೆ ಅನ್ವಯಿಸಬಹುದು, ಮತ್ತು ಇದರ ಪರಿಣಾಮವೇನು?
18 ತಿಳಿವಳಿಕೆಯ ದೈವಿಕ ಉಗಮದ ಕಡೆಗೆ ನಮ್ಮನ್ನು ನಡೆಸುತ್ತಾ, ಜ್ಞಾನೋಕ್ತಿ 3:6 (NW) ಮುಂದೆ ಹೇಳುವುದು: “ನಿನ್ನ ಸಕಲ ಮಾರ್ಗಗಳಲ್ಲಿ ಆತನನ್ನು ಗಮನಿಸು, ಮತ್ತು ಆತನು ತಾನೇ ನಿನ್ನ ಪಥಗಳನ್ನು ಸರಾಗ ಮಾಡುವನು.” ಯೆಹೋವನನ್ನು ಗಮನಿಸುವುದರಲ್ಲಿ ಆತನಿಗೆ ಪ್ರಾರ್ಥನೆಯಲ್ಲಿ ನಿಕಟವಿರುವುದು ಸೇರಿದೆ. ನಾವೆಲ್ಲಿಯೇ ಇರಲಿ, ಯಾವ ಸನ್ನಿವೇಶವೇ ಎದ್ದು ಬರಲಿ, ನಮಗೆ ಒಡನೆ ಪ್ರಾರ್ಥನೆಯಲ್ಲಿ ಆತನ ಬಳಿಗೆ ಪ್ರವೇಶವಿದೆ. ನಾವು ನಮ್ಮ ದೈನಂದಿನ ಕೆಲಸಗಳನ್ನು ಮಾಡುತ್ತಿರುವಾಗ, ಕ್ಷೇತ್ರ ಸೇವೆಗಾಗಿ ತಯಾರು ಮಾಡುತ್ತಿರುವಾಗ, ಆತನ ರಾಜ್ಯವನ್ನು ಘೋಷಿಸುತ್ತಾ ಮನೆಯಿಂದ ಮನೆಗೆ ಹೋಗುವಾಗ, ನಮ್ಮ ಚಟುವಟಿಕೆಯನ್ನು ಆತನು ಆಶೀರ್ವದಿಸಲಿ ಎಂಬುದು ಸದಾ ನಮ್ಮ ಪ್ರಾರ್ಥನೆಯಾಗಿರಸಾಧ್ಯವಿದೆ. ಹೀಗೆ, ನಮಗೆ ‘ದೇವರೊಂದಿಗೆ ನಡೆದಾಡುವ’ ಅಮೂಲ್ಯ ಸುಯೋಗವೂ ಆನಂದವೂ ಇದ್ದು, ಆತನು ದೇವಭಯ ತೋರಿಸಿದ ಹನೋಕ, ನೋಹ, ಮತ್ತು ಯೆಹೋಶುವ ಮತ್ತು ದಾನಿಯೇಲರಂತಹ ನಂಬಿಗಸ್ತ ಇಸ್ರಾಯೇಲ್ಯರಿಗೆ ಮಾಡಿದಂತೆಯೇ ‘ನಮ್ಮ ಮಾರ್ಗಗಳನ್ನು ಸರಾಗ ಮಾಡುವನು’ ಎಂಬ ಭರವಸೆಯಿಂದಿರಬಲ್ಲೆವು.—ಆದಿಕಾಂಡ 5:22; 6:9; ಧರ್ಮೋಪದೇಶಕಾಂಡ 8:6; ಯೆಹೋಶುವ 22:5; ದಾನಿಯೇಲ 6:23; ಅಲ್ಲದೆ, ಯಾಕೋಬ 4:8 10, ಸಹ ನೋಡಿ.
19 ನಾವು ನಮ್ಮ ವಿಜ್ಞಾಪನೆಗಳನ್ನು ದೇವರಿಗೆ ತಿಳಿಯಪಡಿಸುವಾಗ, ‘ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು’ ಎಂಬ ದೃಢತೆಯಿಂದ ನಾವಿರಬಲ್ಲೆವು. ಹರ್ಷಚಿತ್ತದಿಂದ ಪ್ರತಿಬಿಂಬಿತವಾದ ಚಹರೆಯಿಂದಿರುವ ಈ ದೇವಶಾಂತಿಯು, ನಾವು ನಮ್ಮ ಸಾರುವ ಕೆಲಸದ ಸಮಯದಲ್ಲಿ ಭೇಟಿಯಾಗುವ ಮನೆಯವರಿಗೆ ನಮ್ಮ ಸಂದೇಶವನ್ನು ಶಿಫಾರಸ್ಸು ಮಾಡಬಲ್ಲದು. (ಕೊಲೊಸ್ಸೆ 4:5, 6) ಈ ಕೆಳಗಿನ ವೃತ್ತಾಂತವು ತೋರಿಸುವಂತೆ, ಇಂದಿನ ಲೋಕದಲ್ಲಿ ಸಾಮಾನ್ಯವಾಗಿರುವ ಒತ್ತಡಗಳಿಂದ ಯಾ ಅನ್ಯಾಯಗಳಿಂದ ಪೀಡಿತರಾಗಿರುವವರನ್ನೂ ಇದು ಪ್ರೋತ್ಸಾಹಿಸಬಲ್ಲದು.d
20, 21. (ಎ)ನಾಜಿ ಭೀತಿಯ ಸಮಯದಲ್ಲಿ, ಯೆಹೋವನ ಸಾಕ್ಷಿಗಳ ಸಮಗ್ರತೆಯು ಇತರರನ್ನು ಹೇಗೆ ಪ್ರೋತ್ಸಾಹಿಸಿತ್ತು? (ಬಿ) ಯೆಹೋವನ ಧ್ವನಿಯು ನಮ್ಮಲ್ಲಿ ಯಾವ ನಿರ್ಧಾರವನ್ನು ಕೆರಳಿಸಬೇಕು?
20 ಅದ್ಭುತದಂತೆ ಕಂಡುಬಂದ ರೀತಿಯಲ್ಲಿ ಯೆಹೂದ್ಯ ಸರ್ವನಾಶವನ್ನು ಪಾರಾದ ಹುಟ್ಟು ಯೆಹೂದ್ಯರಾದ ಮ್ಯಾಕ್ಸ್ ಲೀಬ್ಸ್ಟರ್, ನಾಜಿ ನಿರ್ನಾಮ ಶಿಬಿರಕ್ಕೆ ತಮ್ಮ ಯಾತ್ರೆಯನ್ನು ಈ ಮಾತುಗಳಲ್ಲಿ ವರ್ಣಿಸುತ್ತಾರೆ: “ಇಬ್ಬರು ವ್ಯಕ್ತಿಗಳಿಗಾಗಿ ಅನೇಕ ಚಿಕ್ಕ ಕೋಣೆಗಳಾಗಿ ಮಾಡಿದ್ದ ರೈಲು ಬಂಡಿಗಳಲ್ಲಿ ನಮ್ಮನ್ನು ಬಂಧಿಸಲಾಗಿತ್ತು. ಅವುಗಳಲ್ಲಿ ಒಂದರೊಳಗೆ ಒದೆಯಲ್ಪಟ್ಟ ನಾನು ಪ್ರಶಾಂತತೆಯನ್ನು ಪ್ರತಿಬಿಂಬಿಸಿದ ಒಬ್ಬ ಬಂದಿಯನ್ನು ಎದುರಾದೆ. ಅವನು ದೇವರ ಆಜೆಗ್ಞೆ ತೋರಿಸಿದ ಗೌರವದ ಕಾರಣ, ಇತರ ಜನರ ರಕ್ತವನ್ನು ಸುರಿಸುವ ಬದಲಿಗೆ ಸೆರೆಮನೆ ಮತ್ತು ಮರಣದ ಸಾಧ್ಯತೆಯನ್ನು ಆಯ್ದುಕೊಂಡ ಕಾರಣ ಅಲ್ಲಿದ್ದನು. ಅವನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದನು. ಅವನ ಮಕ್ಕಳನ್ನು ಅವನ ವಶದಿಂದ ತೆಗೆದು ಒಯ್ಯಲಾಗಿತ್ತು, ಮತ್ತು ಅವನ ಪತ್ನಿಯನ್ನು ಹತಿಸಲಾಗಿತ್ತು. ಆಕೆಯ ಗತಿಯೇ ತನ್ನ ಗತಿಯೆಂದು ಅವನು ನಿರೀಕ್ಷಿಸಿದ್ದನು. ಹದಿನಾಲ್ಕು ದಿನಗಳ ಪ್ರಯಾಣವು ನನ್ನ ಪ್ರಾರ್ಥನೆಗಳಿಗೆ ಉತ್ತರವನ್ನು ತಂದಿತು, ಏಕೆಂದರೆ ನಿತ್ಯಜೀವದ ನಿರೀಕ್ಷೆಯನ್ನು ನಾನು ಕಂಡುಕೊಂಡದ್ದು ಈ ಮರಣಕ್ಕೆ ಸಾಗುತ್ತಿದ್ದ ಪ್ರಯಾಣದಲ್ಲಿಯೇ.”
21 “ಸಿಂಹದ ಗವಿ” ಎಂದು ಅವನು ಕರೆದ ಆ ಆಷ್ವಿಟ್ಸ್ನ್ನು ಅನುಭವಿಸಿದ ಅನಂತರ ಮತ್ತು ದೀಕ್ಷಾಸ್ನಾನ ಹೊಂದಿದ ಅನಂತರ, ಈ ಸಹೋದರನು ಯಾರು ತಾನೇ ಬಂದಿಯಾಗಿದ್ದಳೋ ಮತ್ತು ಯಾರ ತಂದೆಯು ಡಾಕು ಕೂಟ ಶಿಬಿರದಲ್ಲಿ ಕಷ್ಟಾನುಭವಿಸಿದ್ದನೋ ಅಂತಹ ಯೆಹೋವನ ಸಾಕ್ಷಿಯೊಬ್ಬಳನ್ನು ಮದುವೆಯಾದನು. ಆಕೆಯ ತಂದೆ ಅಲ್ಲಿದ್ದಾಗ ಅವನ ಹೆಂಡತಿ ಮತ್ತು ಮಗಳನ್ನೂ ದಸ್ತಗಿರಿ ಮಾಡಲಾಗಿತ್ತು ಎಂಬ ಸುದ್ದಿಯನ್ನು ಅವನು ಕೇಳಿದನು. ಅವನ ಪ್ರತಿಕ್ರಿಯೆಯನ್ನು ಅವನು ಹೀಗೆ ವರ್ಣಿಸಿದನು: “ನಾನು ಆಳವಾಗಿ ಚಿಂತೆಗೊಂಡಿದ್ದೆ. ಆ ಬಳಿಕ ಒಂದು ದಿನ ನಾನು ಸ್ನಾನದ ಸರದಿಗಾಗಿ ಕಾದು ನಿಂತಿದ್ದಾಗ, ಜ್ಞಾನೋಕ್ತಿ 3:5, 6 ನ್ನು ಉಲ್ಲೇಖಿಸಿದ ಒಂದು ಧ್ವನಿ ನನಗೆ ಕೇಳಬಂತು. . . . ಅದು ಸ್ವರ್ಗದಿಂದ ಕೆಳಬರುತ್ತಿದ್ದ ಸರ್ವದಂತೆ ಪ್ರತಿಧ್ವನಿಸಿತು. ನನ್ನ ಸಮತೆಯನ್ನು ಪುನಃ ಪಡೆಯಲು ನನಗೆ ಅಗತ್ಯವಿದ್ದದ್ದು ಅದೇ.” ವಾಸ್ತವವಾಗಿ, ಈ ವಚನವನ್ನು ಉಲ್ಲೇಖಿಸಿದ ಆ ಸರ್ವವು ಇನ್ನೊಬ್ಬ ಬಂದಿಯದ್ದಾಗಿತ್ತು, ಆದರೆ ದೇವರ ವಾಕ್ಯವು ನಮ್ಮ ಮೇಲೆ ಯಾವ ಬಲವನ್ನು ಬೀರಬಲ್ಲದೆಂಬುದನ್ನು ಈ ಘಟನೆ ಒತ್ತಿಹೇಳುತ್ತದೆ. (ಇಬ್ರಿಯ 4:12) ಯೆಹೋವನ ಸರ್ವವು, 1994 ನೆಯ ನಮ್ಮ ವರ್ಷವಚನದ ಮಾತುಗಳ ಮೂಲಕ ಬಲಾಢ್ಯವಾಗಿ ಇಂದು ನಮ್ಮೊಂದಿಗೆ ಮಾತಾಡಲಿ: “ನಿನ್ನ ಸರ್ವ ಹೃದಯದಿಂದ ಯೆಹೋವನಲ್ಲಿ ಭರವಸವಿಡು.”
[ಅಧ್ಯಯನ ಪ್ರಶ್ನೆಗಳು]
a ಕ್ಲಾಡ್ ಎಸ್. ಗುಡ್ಮೆನ್ ಹೇಳಿರುವ, “ಪೂರ್ಣ ಹೃದಯದಿಂದ ಯೆಹೋವನಲ್ಲಿ ಭರವಸವಿಡುವುದು,” ಎಂಬ ಇಂಗ್ಲಿಷ್ ಲೇಖನವನ್ನು ದ ವಾಚ್ಟವರ್, ದಶಂಬರ್ 15, 1973, ಪುಟ 760-5 ರಲ್ಲಿ ನೋಡಿ.
b “ಯೆಹೋವನನ್ನು ಸ್ತುತಿಸಲು ನಿಷ್ಕರ್ಷಿಸಿರುವುದು” ಎಂಬ ಹ್ಯಾರಿ ಪೀಟರ್ಸನ್ ಹೇಳಿದಂತೆ ಲಿಖಿತವಾದ ಇಂಗ್ಲಿಷ್ ಲೇಖನವನ್ನು ಜುಲೈ 15, 1968 ರ ದ ವಾಚ್ಟವರ್ ನ 437-40 ಪುಟಗಳಲ್ಲಿ ನೋಡಿ.
c “ಯೆಹೋವನು ತನ್ನ ಜನರನ್ನು ತೊರೆಯುವುದಿಲ್ಲ,” ಎಂಬ ಮಾಟ್ಸುಈ ಈಶೀ ಹೇಳಿದಂತೆ ಲಿಖಿತವಾಗಿರುವ ಇಂಗ್ಲಿಷ್ ಲೇಖನವನ್ನು ಮೇ 1, 1988 ರ ದ ವಾಚ್ಟವರ್ ನ 21-5 ಪುಟಗಳಲ್ಲಿ ನೋಡಿ.
d “ವಿಮೋಚನೆ! ನಾವು ಕೃತಜ್ಞರೆಂದು ರುಜುಪಡಿಸುವುದು,” ಎಂಬ, ಮ್ಯಾಕ್ಸ್ ಲೀಬ್ಸ್ಟರ್ ಹೇಳಿದಂತೆ ಲಿಖಿತವಾಗಿರುವ ಲೇಖನವನ್ನು ಒಕ್ಟೋಬರ 1, 1978 ರ ವಾಚ್ಟವರ್ ನ 20-4 ಪುಟಗಳಲ್ಲಿ ನೋಡಿ.
ಸಾರಾಂಶದಲ್ಲಿ
▫ ಜ್ಞಾನೋಕ್ತಿಯಲ್ಲಿ ಯಾವ ರೀತಿಯ ಬುದ್ಧಿವಾದವನ್ನು ನೀಡಲಾಗಿದೆ?
▫ ಯೆಹೋವನಲ್ಲಿ ಭರವಸೆ ನಮಗೆ ಹೇಗೆ ಪ್ರಯೋಜನ ತರುತ್ತದೆ?
▫ ಯೆಹೋವನಲ್ಲಿ ಆಶ್ರಯಿಸುವುದರಲ್ಲಿ ಏನು ಒಳಗೊಂಡಿದೆ?
▫ ನಮ್ಮ ಸಕಲ ಮಾರ್ಗಗಳಲ್ಲಿ ನಾವು ಏಕೆ ಯೆಹೋವನನ್ನು ಗಮನಿಸಬೇಕು?
▫ ಯೆಹೋವನು ನಮ್ಮ ಮಾರ್ಗಗಳನ್ನು ಹೇಗೆ ಸರಾಗ ಮಾಡುತ್ತಾನೆ?
[ಪುಟ 15 ರಲ್ಲಿರುವ ಚಿತ್ರಗಳು]
ಹರ್ಷಕರವಾದ ರಾಜ್ಯ ಸಂದೇಶವು ಪ್ರಾಮಾಣಿಕ ಹೃದಯದ ಜನರಿಗೆ ತನ್ನ ಬೇಡಿಕೆಯನ್ನು ಮಾಡುತ್ತದೆ