ದೇವರು ನಮ್ಮ ಅದೃಷವ್ಟನ್ನು ಈ ಮೊದಲೆ ನಿರ್ಣಯಿಸಿದ್ದಾನೊ?
“ಅನೇಕ ವೇಳೆ ಅಪಾರ್ಥಮಾಡಲ್ಪಡುವ ಪೂರ್ವಾದೃಷ್ಟ ಎಂಬ ಶಬ್ದವು ಬಳಸಲ್ಪಡದೆ ಇದ್ದಲ್ಲಿ ಎಷ್ಟೊ ಕಾಲ್ಪನಿಕ ಸಮಸ್ಯೆಗಳು ವರ್ಜಿಸಲ್ಪಡುತ್ತಿದ್ದವು.” “ಪೂರ್ವಾದೃಷ್ಟ” ಎಂಬ ಶಬ್ದವನ್ನು ನೀವು ಉಪಯೋಗಿಸಿದ್ದರೆ ಅಥವಾ ಉಪಯೋಗಿಸುವುದನ್ನು ಕೇಳಿದ್ದರೆ, ಮೇಲಿನ ಹೇಳಿಕೆಯ ಅರ್ಥವೇನೆಂದು ಸೋಜಿಗಪಟ್ಟೀರಿ.
ಇತ್ತೀಚಿನ ಫ್ರೆಂಚ್ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ ಟೀಆ ಕ್ಕನುಸಾರವಾಗಿ, “ಪೂರ್ವಾದೃಷ್ಟ” ಎಂಬ ಶಬ್ದವನ್ನು ಬಳಸದಿರುವುದು ಒಳ್ಳೆಯದೆಂದು ಹೇಳಲಾಗಿದೆ. ಇನ್ನೊಂದು ಪುಸ್ತಕ ಹೇಳುವುದು: “ಇಂದು ವೇದಾಂತಶಾಸ್ತ್ರದ ಚರ್ಚೆಗಳಲ್ಲಿ ಪೂರ್ವಾದೃಷ್ಟವು, ಹೆಚ್ಚಿನ ಪ್ರಾಟೆಸ್ಟಂಟರಿಗೆ ಕೂಡ ಇನ್ನುಮೇಲೆ ಮುಖ್ಯವಿಷಯವಲ್ಲವೆಂದು ತೋರುತ್ತದೆ.”
ಆದರೂ, ಪೂರ್ವಾದೃಷ್ಟ ಪ್ರಶ್ನೆಯು ಇತಿಹಾಸದಾದ್ಯಂತ ಅನೇಕ ಜನರ ಮನಸ್ಸನ್ನು ಕಲಕಿಸಿರುತ್ತದೆ. ಮತ ಸುಧಾರಣೆಯನ್ನು ಬರಮಾಡಿದ ವಾಗ್ವಾದದಲ್ಲಿ ಅದು ಮುಖ್ಯವಿಷಯವಾಗಿತ್ತು, ಮತ್ತು ಕ್ಯಾತೊಲಿಕ್ ಚರ್ಚಿನೊಳಗೂ ಶತಮಾನಗಳಿಂದ ಅದೊಂದು ಉದ್ರಿಕ್ತ ಚರ್ಚಾ ವಿಷಯವಾಗಿತ್ತು. ಇಂದು ಕಡಿಮೆ ಚರ್ಚಾಸ್ಪದವಾಗಿದ್ದರೂ, ಅದಿನ್ನೂ ಒಂದು ಸಮಸ್ಯೆಯಾಗಿ ಉಳಿಯುತ್ತದೆ. ತನ್ನ ಅದೃಷವ್ಟು ಮುಂಚಿತವಾಗಿ ನಿರ್ಣಯಿಸಲ್ಪಟ್ಟಿದೆಯೆ ಎಂದು ತಿಳಿಯಲು ಬಯಸದಿರುವವನು ಯಾರು?
ಪೂರ್ವಾದೃಷ್ಟ—ಶಬ್ದದ ಅರ್ಥ
ಚರ್ಚುಗಳಲ್ಲಿ “ಪೂರ್ವಾದೃಷ್ಟ” ಎಂಬ ಶಬ್ದದ ಅರ್ಥವೇನು? ಡೀಕ್ಸ್ಯಾನರ್ ಡ ಟೇಆಲಾಜಿ ಕಾಟಾಲೀಕ್ ಅದನ್ನು, “ಯಾರು ವ್ಯಕ್ತಿಪರವಾಗಿ ಹೆಸರಿನಿಂದ ಸೂಚಿಸಲ್ಪಟ್ಟಿದ್ದಾರೊ ಆ ನಿರ್ದಿಷ್ಟ ವ್ಯಕ್ತಿಗಳನ್ನು ನಿತ್ಯಜೀವಕ್ಕೆ ಕರತರುವ ದೈವಿಕ ಸಂಕಲ್ಪ” ವಾಗಿ ಪರಿಗಣಿಸುತ್ತದೆ. “ಹೆಸರಿನಿಂದ ಸೂಚಿಸಲ್ಪಟ್ಟವರಾದ” ಆದುಕೊಳ್ಳಲ್ಪಟ್ಟವರು ಅಪೊಸ್ತಲ ಪೌಲನಿಂದ ರೋಮಾಪುರದವರಿಗೆ ಬರೆದ ಪತ್ರದಲ್ಲಿ ಈ ಕೆಳಗಿನ ಪದಗಳಿಂದ ಸೂಚಿತರಾದವರೆಂದು ಸಾಮಾನ್ಯವಾಗಿ ನೆನಸಲಾಗುತ್ತದೆ: “ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ದೇವರು ಕಾರ್ಯನಡಿಸುತ್ತಾನೆ. ತಾನು ಮೊದಲು ತಿಳಿದುಕೊಂಡವರನ್ನು ತನ್ನ ಮಗನ ಸಾರೂಪ್ಯವುಳ್ಳವರಾಗಿರುವಂತೆಯೂ ಪೂರ್ವನಿರ್ಣಯಿಸಿದನು. . . . ಮತ್ತು ಯಾರನ್ನು ಪೂರ್ವನಿರ್ಣಯಿಸಿದನೊ ಅವರನ್ನು ಕರೆದನು ಕೂಡ; ಯಾರನ್ನು ಕರೆದನೊ ಅವರನ್ನು ನೀತಿವಂತರೆಂದೂ ನಿರ್ಣಯಿಸಿದನು; ಯಾರನ್ನು ನೀತಿವಂತರೆಂದು ನಿರ್ಣಯಿಸಿದನೊ ಅವರನ್ನು ಮಹಿಮೆಗೇರಿಸಿದನು ಸಹ.”—ರೋಮಾಪುರ 8:28-30, ರಿವೈಸ್ಡ್ ಸ್ಟ್ಯಾಂಡರ್ಡ್ ವರ್ಷನ್.
ಕೆಲವು ಜನರು ಅವರು ಹುಟ್ಟುವ ಮುಂಚೆಯೆ ಪರಲೋಕದಲ್ಲಿ ಕ್ರಿಸ್ತನ ಮಹಿಮೆಯಲ್ಲಿ ಪಾಲುಗಾರರಾಗುವ ನೋಟದಿಂದ ದೇವರಿಂದ ಆರಿಸಲ್ಪಟ್ಟಿದ್ದರೆಂಬ ಕಲ್ಪನೆಯಿದೆ. ಇದು ದೀರ್ಘವಾಗ್ವಾದದ ಪ್ರಶ್ನೆಗೆ ನಡಿಸುತ್ತದೆ: ಯಾರನ್ನು ರಕ್ಷಿಸಲು ಬಯಸುತ್ತಾನೆಂಬುದನ್ನು ದೇವರು ತನ್ನ ಸ್ವೇಚ್ಛಾನುಸಾರವಾಗಿ ಆರಿಸಿಕೊಳ್ಳುತ್ತಾನೊ, ಇಲ್ಲವೆ ಮನುಷ್ಯರಿಗೆ ದೇವರ ಮೆಚ್ಚಿಕೆಯನ್ನು ಗಳಿಸಿಕೊಂಡು ಅದನ್ನು ಕಾಪಾಡಿಕೊಳ್ಳುವ ಇಚ್ಛಾ ಸ್ವಾತಂತ್ರ್ಯವಿದೆಯೆ?
ಆಗಸ್ಟೀನ್, ಪೂರ್ವಾದೃಷ್ಟದ ಪಿತ
ಬೇರೆ ಚರ್ಚ್ ಪ್ರಮುಖರು ಹಿಂದೆ ಪೂರ್ವಾದೃಷ್ಟದ ಕುರಿತು ಬರೆದಿದ್ದರಾದರೂ, ಕ್ಯಾತೊಲಿಕ್ ಮತ್ತು ಪ್ರಾಟೆಸ್ಟಂಟ್ ಇವೆರಡೂ ಚರ್ಚುಗಳಿಗೆ ಈ ತತ್ವದ ತಳಪಾಯಗಳನ್ನು ಹಾಕಿದವನು ಆಗಸ್ಟೀನ್ (ಸಾ.ಶ. 354-430) ಎಂದು ಸಾಮಾನ್ಯವಾಗಿ ಎಣಿಸಲಾಗುತ್ತದೆ. ಆಗಸ್ಟೀನನಿಗನುಸಾರವಾಗಿ, ನೀತಿವಂತರು ನಿತ್ಯ ಆಶೀರ್ವಾದಗಳನ್ನು ಪಡೆದುಕೊಳ್ಳುವುದಕ್ಕಾಗಿ ಅನಾದಿಕಾಲದಿಂದ ದೇವರಿಂದ ಪೂರ್ವನಿರ್ಣಯವನ್ನು ಹೊಂದಿದ್ದಾರೆ. ಇನ್ನೊಂದು ಕಡೆ, ಅನೀತಿವಂತರು, ಶಬ್ದದ ನಿರ್ದಿಷ್ಟಾರ್ಥದಲ್ಲಿ, ದೇವರಿಂದ ಪೂರ್ವಾದೃಷ್ಟ ಹೊಂದದಿದ್ದರೂ, ತಮ್ಮ ಪಾಪಗಳಿಗೆ ಅರ್ಹವಾದ ದಂಡನೆಯನ್ನು, ಅಂದರೆ ಶಾಪವನ್ನು ಪಡೆಯಲಿದ್ದಾರೆ. ಆಗಸ್ಟೀನ್ನ ಅರ್ಥವಿವರವು ಇಚ್ಛಾ ಸ್ವಾತಂತ್ರ್ಯಕ್ಕೆ ಕೊಂಚವೆ ಅನುಮತಿಯನ್ನಿತ್ತು, ಹೀಗೆ ಬಹಳಷ್ಟು ವಾಗ್ವಾದಕ್ಕೆ ದಾರಿಯನ್ನು ತೆರೆಯಿತು.
ಆಗಸ್ಟೀನ್ನ ವಾರಸುದಾರರು
ಪೂರ್ವಾದೃಷ್ಟ ಮತ್ತು ಇಚ್ಛಾ ಸ್ವಾತಂತ್ರ್ಯದ ಕುರಿತ ಚರ್ಚೆಯು ಮಧ್ಯಯುಗಗಳಲ್ಲಿ ಕ್ರಮವಾಗಿ ತಲೆದೋರಿತು ಮತ್ತು ಮತ ಸುಧಾರಣೆಯ ಸಮಯದಲ್ಲಿ ಉತ್ಕಟ ಸ್ಥಿತಿಗೇರಿತು. ಲೂತರನು ವೈಯಕ್ತಿಕ ಪೂರ್ವಾದೃಷ್ಟವನ್ನು, ಆದುಕೊಂಡವರ ಭವಿಷ್ಯತ್ತಿನ ಅರ್ಹತೆಗಳನ್ನು ಅಥವಾ ಸತ್ಕಾರ್ಯಗಳನ್ನು ದೇವರು ಮುನ್ನೋಡದೆ ತನ್ನ ಪಕ್ಷದಿಂದ ಮಾಡಿರುವ ಸ್ವತಂತ್ರ ಆಯ್ಕೆಯಾಗಿ ವೀಕ್ಷಿಸಿದನು, ಕ್ಯಾಲ್ವಿನ್ ತನ್ನ ಇಮ್ಮಡಿ ಪೂರ್ವಾದೃಷ್ಟದೊಂದಿಗೆ ಹೆಚ್ಚು ತೀವ್ರಗಾಮಿ ತೀರ್ಮಾನಕ್ಕೆ ಬಂದನು: ಕೆಲವರು ನಿತ್ಯ ರಕ್ಷಣೆಯ, ಮತ್ತು ಇತರರು ನಿತ್ಯ ಶಾಪದ ಪೂರ್ವಾದೃಷ್ಟವನ್ನು ಹೊಂದಿದ್ದಾರೆ. ಆದರೂ, ದೇವರ ಆಯ್ಕೆಯು ಅನಿಯಂತ್ರಿತವಾದುದು, ಗ್ರಹಿಸಲಸಾಧ್ಯವೂ ಆಗಿದೆಯೆಂದೂ ಕ್ಯಾಲ್ವಿನನು ಪರಿಗಣಿಸಿದನು.
ಪೂರ್ವಾದೃಷ್ಟದ ವಾದಾಂಶವು ಮತ್ತು ನಿಕಟವಾಗಿ ಸಂಬಂಧಿಸಿದ “ಕೃಪೆ”ಯ ಪ್ರಶ್ನೆಯು—ಯಾವುದರಿಂದ ದೇವರು ಮನುಷ್ಯರನ್ನು ರಕ್ಷಿಸಿ ನೀತಿವಂತರೆಂದು ನಿರ್ಣಯಿಸುತ್ತಾನೊ ಆ ಕ್ರಿಯೆಯನ್ನು ನಿರ್ದೇಶಿಸಲು ಚರ್ಚುಗಳು ಬಳಸುವ ಶಬ್ದ—ಎಷ್ಟು ದೊಡ್ಡದಾಯಿತೆಂದರೆ, 1611 ರಲ್ಲಿ ರೋಮ್ ಮಠಾಧಿಪತ್ಯವು ಆ ವಿಷಯದಲ್ಲಿ ತನ್ನ ಒಪ್ಪಿಗೆಯ ಹೊರತು ಏನನ್ನಾದರೂ ಪ್ರಕಟಿಸುವುದನ್ನು ನಿಷೇಧಿಸಿತು. ಕ್ಯಾತೊಲಿಕ್ ಚರ್ಚಿನೊಳಗೆ, ಆಗಸ್ಟೀನ್ನ ಬೋಧನೆಗಳಿಗೆ 17 ನೆಯ ಮತ್ತು 18 ನೆಯ ಶತಮಾನಗಳ ಫ್ರೆಂಚ್ ಜ್ಯಾನ್ಸನ್ವಾದಿಗಳಿಂದ ಬಲವಾದ ಬೆಂಬಲವು ಸಿಕ್ಕಿತು. ಅವರು ಕ್ರೈಸ್ತತ್ವದ ಒಂದು ಅತಿ ವಿರಕ್ತ ಮತ್ತು ಉತ್ಕೃಷ್ಟ ವಿಧವನ್ನು ಪ್ರತಿಪಾದಿಸಿದರು ಮತ್ತು ಅವರ ಹಿಂಬಾಲಕರಲ್ಲಿ ಶ್ರೀಮಂತ ಪ್ರಭುತ್ವದವರೂ ಸೇರಿದ್ದರು. ಆದರೂ, ವಿಷಯದ ಮೇಲಣ ವಾಗ್ವಾದವು ಕಡಿಮೆಯಾಗಲಿಲ್ಲ. ಅರಸ XIV ನೆಯ ಲೂಯಿ, ಜ್ಯಾನ್ಸನ್ವಾದಿಗಳ ತತ್ವದ ತೊಟ್ಟಿಲಾದ ಪೋರ್ಟ್ರಾಯಲ್ ಕ್ರೈಸ್ತ ಮಠವನ್ನು ನಾಶಗೊಳಿಸಲು ಆಜ್ಞಾಪಿಸಿದನು.
ಪ್ರಾಟೆಸ್ಟಂಟ್ ರಿಫಾರ್ಮ್ಡ್ ಚರ್ಚುಗಳಲ್ಲಿ ಚರ್ಚೆಯು ಖಂಡಿತವಾಗಿಯೂ ಕೊನೆಗೊಂಡಿರಲಿಲ್ಲ. ಇತರ ಧಾರ್ಮಿಕ ಗುಂಪುಗಳೊಂದಿಗೆ, ಯಾಕೊಬ್ಯೂಸ್ ಅರ್ಮಿನಿಯಸ್ ಇವನನ್ನು ಅನುಸರಿಸಿದ ರೆಮನ್ಸ್ಟ್ರಾಂಟರು, ಮನುಷ್ಯನಿಗೆ ತನ್ನ ಸ್ವಂತ ರಕ್ಷಣೆಯಲ್ಲಿ ವಹಿಸತಕ್ಕ ಒಂದು ಪಾತ್ರವಿದೆಯೆಂದು ನಂಬಿದರು. ಪ್ರಾಟೆಸ್ಟಂಟ್ ಸಿನಡ್ ಆಫ್ ಡಾಡ್ರೆಕ್ಟ್ (ಕ್ರೈಸ್ತಮಠೀಯ ಆಡಳಿತಸಭೆ) (1618-19) ಕ್ಯಾಲ್ವಿನ್ನಿನ ಸಂಪ್ರದಾಯಬದ್ಧತೆಯ ಒಂದು ಕಟ್ಟುನಿಟ್ಟಿನ ವಿಧಾನವನ್ನು ಸ್ವೀಕರಿಸಿದಾಗ, ಪ್ರಶ್ನೆಯನ್ನು ತಾತ್ಕಾಲಿಕವಾಗಿ ಬಗೆಹರಿಸಿತು. ಲಾವಾಂಟ್ಯೂರ್ ಡಾ ಲಾ ರೆಫಾರ್ಮ್—ಲಾ ಮೊಂಡ್ ಡಾ ಜಾನ್ ಕಾಲಿವಾನ್ ಎಂಬ ಪುಸ್ತಕಕ್ಕನುಸಾರವಾಗಿ, ಜರ್ಮನಿಯಲ್ಲಿ ಪೂರ್ವಾದೃಷ್ಟ ಮತ್ತು ಇಚ್ಛಾ ಸ್ವಾತಂತ್ರ್ಯದ ಮೇಲಣ ಈ ಕಲಹವು ಒಂದು ಧೀರ್ಘಕಾಲದ “ರಾಜಿಪ್ರಯತ್ನಗಳ ವೈಫಲ್ಯಕ್ಕೆ, ಹಾಗೂ ದೂಷಣೆಗಳಿಗೆ, ಸೆರೆವಾಸಗಳಿಗೆ ಮತ್ತು ವೇದಾಂತಿಗಳ ಗಡೀಪಾರುಗಳಿಗೆ” ಜನ್ಮಕೊಟ್ಟಿತು.
ಪೂರ್ವಾದೃಷ್ಟವೊ ಯಾ ಇಚ್ಛಾ ಸ್ವಾತಂತ್ರ್ಯವೊ?
ಪೂರ್ವಾದೃಷ್ಟ ಮತ್ತು ಇಚ್ಛಾ ಸ್ವಾತಂತ್ರ್ಯವೆಂಬ ಈ ಎರಡು ನೇರಿದಿರಾದ ವಿಚಾರಗಳು ಪ್ರಾರಂಭದಿಂದಲೆ ಅನೇಕ ಉದ್ರಿಕ್ತ ಹೋರಾಟಗಳನ್ನು ಎಬ್ಬಿಸಿದವು. ಆಗಸ್ಟೀನನಂತೂ ಈ ಅಸಾಂಗತ್ಯವನ್ನು ವಿವರಿಸಲು ಶಕ್ತನಾಗಿದ್ದಿಲ್ಲ. ಕ್ಯಾಲ್ವಿನನೂ ಅದನ್ನು ದೇವರ ಪರಮಾಧಿಕಾರದ ಒಂದು ಅಭಿವ್ಯಕ್ತಿಯಾಗಿ ನೋಡಿದರ್ದಿಂದ ವಿವರಿಸಲಾಗದ್ದಾಗಿ ಕಂಡನು.
ಆದರೆ ಬೈಬಲ್ ಪ್ರಕಟಿಸುವ ದೇವರ ಗುಣಗಳು ಮತ್ತು ವ್ಯಕ್ತಿತ್ವವು ಈ ಪ್ರಶ್ನೆಗಳನ್ನು ಸವಿವರವಾಗಿ ತಿಳಿದುಕೊಳ್ಳುವಂತೆ ನಮಗೆ ನೆರವಾಗುತ್ತದೊ? ಹಿಂಬಾಲಿಸುವ ಲೇಖನವು ಈ ಅಂಶಗಳನ್ನು ಹೆಚ್ಚು ವಿವರವಾಗಿ ಚರ್ಚಿಸುವುದು.
[ಪುಟ 4 ರಲ್ಲಿರುವ ಚಿತ್ರಗಳು]
ಕ್ಯಾಲ್ವಿನ್
ಲೂತರ್
ಜ್ಯಾನ್ಸನ್
[ಕೃಪೆ]
Pictures: Bibliothèque Nationale, Paris