ನಮ್ಮ ಪೂರ್ವಜರಿಗಾಗಿ ಒಂದು ಹೊಸ ಜೀವನ
ಮರಣದಲ್ಲಿ ಆತ್ಮಗಳ ಕ್ಷೇತ್ರದಲ್ಲಿ ಮುಂದುವರಿದ ಜೀವಿತಕ್ಕೆ ಎಲ್ಲರೂ ಸಲೀಸಾಗಿ ದಾಟುತ್ತಾರೆಂದು ದೇವರ ವಾಕ್ಯವಾದ ಬೈಬಲ್ ಕಲಿಸುತ್ತದೋ? ಇಲ್ಲ, ಅದು ಕಲಿಸುವುದಿಲ್ಲ. ಬೈಬಲು ಮರಣದ ನಂತರದ ಒಂದು ಅದ್ಭುತಕರ ಜೀವಿತದ ನಿರೀಕ್ಷೆಯನ್ನು ಪ್ರಸ್ತುತಪಡಿಸುತ್ತದೆ, ಆದರೆ ಅದು ಮಾಡುತ್ತದೆಂದು ಅನೇಕರು ನೆನೆಸುವ ವಿಧದಲ್ಲಿ ಅಲ್ಲ.
ನಮ್ಮ ಮೊದಲ ಪೂರ್ವಜನಾದ ಆದಾಮನ ಕುರಿತಾಗಿ ಬೈಬಲ್ ಏನು ಹೇಳುತ್ತದೆಂಬುದನ್ನು ಪರಿಗಣಿಸಿರಿ. ಯೆಹೋವನು ಅವನನ್ನು “ನೆಲದ ಮಣ್ಣಿನಿಂದ” ರಚಿಸಿದನು. (ಆದಿಕಾಂಡ 2:7) ಆದಾಮನಿಗೆ ಭೂಮಿಯ ಮೇಲೆ ಸಂತೋಷದಲ್ಲಿ ಸದಾಕಾಲ ಜೀವಿಸುವ ಅವಕಾಶವಿತ್ತು. (ಆದಿಕಾಂಡ 2:16, 17) ಆದಾಗಲೂ, ಅವನು ತನ್ನ ಪ್ರೀತಿಯುಳ್ಳ ಸೃಷ್ಟಿಕರ್ತನ ವಿರುದ್ಧವಾಗಿ ದಂಗೆಯೆದ್ದನು, ಮತ್ತು ಫಲಿತಾಂಶವು ಮರಣವಾಗಿತ್ತು.
ಮರಣದಲ್ಲಿ ಆದಾಮನು ಎಲ್ಲಿಗೆ ಹೋದನು? ದೇವರು ಅವನಿಗಂದದ್ದು: “ನೀನು ತಿರಿಗಿ ಮಣ್ಣಿಗೆ ಸೇರು[ವಿ] . . . ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಲ್ಲವೋ; ನೀನು ಮಣ್ಣಿಗೆ ಪುನಃ ಸೇರತಕ್ಕವನಾಗಿದ್ದೀ.”—ಆದಿಕಾಂಡ 3:19.
ಯೆಹೋವನು ಆದಾಮನನ್ನು ಮಣ್ಣಿನಿಂದ ಸೃಷ್ಟಿಸುವ ಮೊದಲು ಅವನೆಲ್ಲಿದ್ದನು? ಎಲ್ಲಿಯೂ ಇರಲಿಲ್ಲ. ಅವನು ಅಸ್ತಿತ್ವದಲ್ಲೇ ಇರಲಿಲ್ಲ. ಆದುದರಿಂದ, ಆದಾಮನು “ತಿರಿಗಿ ಮಣ್ಣಿಗೆ ಸೇರಲಿ” ದ್ದಾನೆಂದು ಯೆಹೋವನು ಹೇಳಿದಾಗ, ಆದಾಮನು ಪುನಃ ಒಮ್ಮೆ ನಿರ್ಜೀವ, ಮಣ್ಣಿನಂತೆಯೇ ಆಗುವನೆಂಬುದೇ ಅವನ ಅರ್ಥವಾಗಿರಸಾಧ್ಯವಿತ್ತು. ಆದಾಮನು ಪೂರ್ವಜರ ಆತ್ಮಗಳ ಲೋಕಕ್ಕೆ ಸ್ಥಾಪಕ ಪಿತನಾಗಲು ‘ದಾಟಿ’ ಹೋಗಲಿಲ್ಲ. ಸ್ವರ್ಗದಲ್ಲಿ ಪರಮಸುಖದ ಒಂದು ಜೀವನಕ್ಕೆ ಇಲ್ಲ ಯಾತನೆಯ ಒಂದು ಸ್ಥಳದಲ್ಲಿ ನಿತ್ಯ ಕಷ್ಟಾನುಭವಕ್ಕೆ ಅವನು ದಾಟಿಹೋಗಲಿಲ್ಲ. ಅವನು ಮಾಡಿದಂತಹ ಒಂದೇ ಪರಿವರ್ತನೆಯು, ಜೀವದಿಂದ ನಿರ್ಜೀವತೆ, ಅಸ್ತಿತ್ವದಿಂದ ಅನಸಿತ್ತದ್ವ ಒಂದು ಸ್ಥಿತಿಗೆ ಆಗಿತ್ತು.
ಮಾನವಕುಲದ ಉಳಿದವರ ಕುರಿತಾಗಿ ಏನು? ಆದಾಮನ ಸಂತತಿಯವರು ಸಹ ಮರಣದಲ್ಲಿ ಅಸ್ತಿತ್ವವನ್ನು ಅಂತ್ಯಗೊಳಿಸುತ್ತಾರೋ? ಬೈಬಲ್ ಉತ್ತರಿಸುವುದು: “ಎಲ್ಲಾ [ಮಾನವರೂ ಪ್ರಾಣಿಗಳೂ] ಒಂದೇ ಸ್ಥಳಕ್ಕೆ ಹೋಗುವವು; ಎಲ್ಲಾ ಮಣ್ಣಿನಿಂದಾದವು, ಎಲ್ಲಾ ಮಣ್ಣಿಗೆ ಪುನಃ ಸೇರುವವು.”—ಪ್ರಸಂಗಿ 3:19, 20.
ಸತ್ತವರ ಸ್ಥಿತಿ
ಹೌದು, ಸತ್ತವರು ನಿರ್ಜೀವವಾಗಿದ್ದಾರೆ, ಕೇಳಲು, ನೋಡಲು, ಮಾತಾಡಲು ಅಥವಾ ಯೋಚಿಸಲು ಅಶಕ್ತರು. ಉದಾಹರಣೆಗಾಗಿ, ಬೈಬಲ್ ಹೇಳುವುದು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ [ಪ್ರಜ್ಞೆ, NW] ಇಲ್ಲ; . . . ಅವರ ಪ್ರೀತಿಯೂ ಹಗೆಯೂ ಹೊಟ್ಟೇಕಿಚ್ಚೂ ಅಳಿದು ಹೋದವು.” ಬೈಬಲು ಇದನ್ನೂ ತಿಳಿಸುತ್ತದೆ: “ನೀನು ಸೇರಬೇಕಾದ ಪಾತಾಳದಲ್ಲಿ [ಶಿಯೋಲ್, NW] ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.”—ಪ್ರಸಂಗಿ 9:5, 6, 10.
ಆ ಕಾರಣದಿಂದ, ದೇವರ ವಾಕ್ಯಕ್ಕನುಸಾರ ಜನರು ಜೀವಿತರಾಗಿರುವಾಗ, ಅವರಿಗೆ ಮರಣದ ಅರಿವಿದೆ. ಆದಾಗಲೂ, ಮರಣವು ಸಂಭವಿಸುವಾಗ ಅವರಿಗೆ ಯಾವದರ ಅರಿವು ಇರುವುದಿಲ್ಲ. ಅದರೊಂದಿಗೆ ಏನು ಮಾಡಲಾಗುತ್ತದೋ ಅದನ್ನು ಅವಲೋಕಿಸುತ್ತಾ ಅವರು ತಮ್ಮ ಸ್ವಂತ ಶವದ ಬಳಿಯಲ್ಲಿ ನಿಂತುಕೊಂಡಿರುವದಿಲ್ಲ. ಅನಸಿತ್ತದ್ವಲ್ಲಿ ಸುಖವೂ ಇಲ್ಲ ವೇದನೆಯೂ ಇಲ್ಲ, ಆನಂದವೂ ಇಲ್ಲ ದುಃಖವೂ ಇಲ್ಲ. ಸತ್ತವರಿಗೆ ಸಮಯದ ದಾಟುವಿಕೆಯ ಅರಿವಿಲ್ಲ. ಯಾವುದೇ ನಿದ್ರೆಗಿಂತ ಆಳವಾದ ಪ್ರಜ್ಞಾಹೀನ ಸ್ಥಿತಿ ಅವರದ್ದಾಗಿದೆ.
ಮರಣದ ನಂತರ ಜನರು ಜೀವಿಸುವುದನ್ನು ಮುಂದುವರಿಸುವದಿಲ್ಲವೆಂದು, ಪುರಾತನ ಸಮಯಗಳಲ್ಲಿ ಒಬ್ಬ ದೇವರ ಸೇವಕನಾಗಿದ್ದ ಯೋಬನಿಗೆ ತಿಳಿದಿತ್ತು. ದೇವರ ಹಸ್ತಕ್ಷೇಪವಿಲ್ಲದೆ ಪುನಃ ಜೀವಕ್ಕೆ ಬರುವ ಯಾವ ನಿರೀಕ್ಷೆಯು ಇಲ್ಲವೆಂದು ಸಹ ಅವನಿಗೆ ತಿಳಿದಿತ್ತು. ಯೋಬನು ಹೇಳಿದ್ದು: “ಮನುಷ್ಯನಾದರೋ ಸತ್ತು ಬೋರಲಬೀಳುವನು; ಪ್ರಾಣಹೋಗಲು ಅವನು ಎಲ್ಲಿಯೋ! ಮನುಷ್ಯರು ಮಲಗಿಕೊಂಡು ಏಳದೇ ಇರುವರು.” (ಯೋಬ 14:10, 12) ತಾನು ಸತ್ತಾಗ, ಆತ್ಮಗಳ ಒಂದು ಲೋಕದಲ್ಲಿ ತನ್ನ ಪೂರ್ವಜರನ್ನು ಸೇರಲು ಯೋಬನು ಖಂಡಿತವಾಗಿ ನಿರೀಕ್ಷಿಸಲಿಲ್ಲ.
ಪುನರುತ್ಥಾನದ ನಿರೀಕ್ಷೆ
ಮರಣದಲ್ಲಿ ಜೀವಿತರು ಅಸ್ತಿತ್ವದಲ್ಲಿರುವುದನ್ನು ಕೊನೆಗಾಣಿಸುವದರಿಂದ, ಯೋಬನು ಹೀಗೆ ಕೇಳಿದಾಗ ಎಬ್ಬಿಸಿದಂತಹ ಪ್ರಶ್ನೆಯು ನಿರ್ಣಾಯಕವಾಗಿದೆ: “ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ?” ಯೋಬನು ಸ್ವತಃ ಈ ಉತ್ತರವನ್ನು ಕೊಟ್ಟನು: “ಹಾಗಾಗುವದಾದರೆ ನನಗೆ ಬಿಡುಗಡೆಯಾಗುವ ವರೆಗೆ ನನ್ನ ವಾಯಿದೆಯ ದಿನಗಳಲ್ಲೆಲ್ಲಾ [ಸಮಾಧಿಯಲ್ಲಿನ ಸಮಯ] ಕಾದುಕೊಂಡಿರುವೆನು; ನೀನು [ಯೆಹೋವನು] ಕರೆದರೆ ಉತ್ತರಕೊಡುವೆನು, ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಹಂಬಲಿಕೆ ಹುಟ್ಟೀತು.”—ಯೋಬ 14:14, 15.
ಬೇರೆ ಮಾತುಗಳಲ್ಲಿ, ಯೋಬನು ಅನಸ್ತಿತ್ವಕ್ಕೆ ದಾಟಿದರೂ, ದೇವರು ಅವನನ್ನು ಮರೆಯಲಾರನು. ಪುನರುತ್ಥಾನದ ಮೂಲಕ ಯೆಹೋವ ದೇವರು ಅವನನ್ನು ಪುನಃ ಜೀವಿತಕ್ಕೆ “ಕರೆ”ಯುವ ಸಮಯ ಬರುವದೆಂದು ಯೋಬನಿಗೆ ನಂಬಿಕೆಯಿತ್ತು.
ಪುನರುತ್ಥಾನದಲ್ಲಿ ಯೋಬನ ನಿರೀಕ್ಷೆಯು ವಾಸ್ತವಿಕವಾಗಿತ್ತೆಂದು ದೇವರ ಮಗನಾದ ಯೇಸು ಕ್ರಿಸ್ತನು ತೋರಿಸಿದನು. ಸತ್ತವರು ಎಬ್ಬಿಸಲ್ಪಡಸಾಧ್ಯವಿದೆಯೆಂಬುದನ್ನು ಯೇಸು ರುಜುಪಡಿಸಿದನು. ಹೇಗೆ? ಅವನದನ್ನು ಮಾಡಿದ ಮೂಲಕವೇ! ಯೋಬನನ್ನು ಪುನರುತ್ಥಾನಗೊಳಿಸಲು ಅವನಲ್ಲಿರಲಿಲ್ಲ, ಆದರೆ ಭೂಮಿಯಲ್ಲಿರುವಾಗ ಅವನು ನಾಯಿನ್ ನಗರದ ಒಬ್ಬ ವಿಧವೆಯ ಮಗನನ್ನು ಪುನರುತ್ಥಾನಗೊಳಿಸಿದನು. ಯಾಯೀರನೆಂಬ ಹೆಸರಿನ ಒಬ್ಬ ಮನುಷ್ಯನ 12 ವರ್ಷದ ಮಗಳನ್ನು ಸಹ ಜೀವಕ್ಕೆ ಎಬ್ಬಿಸಿದನು. ಮತ್ತು ನಾಲ್ಕು ದಿನ ಸತ್ತಿದ್ದ ತನ್ನ ಸ್ನೇಹಿತನಾದ ಲಾಜರನನ್ನು ಪುನರುತ್ಥಾನಗೊಳಿಸಿದನು.—ಲೂಕ 7:11-15; 8:41, 42, 49-56; ಯೋಹಾನ 11:38-44.
ಈ ಅದ್ಭುತಗಳನ್ನು ನಡಿಸುವದಕ್ಕೆ ಕೂಡಿಸಿ, ಒಂದು ಮಹತ್ತಾದ ಭವಿಷ್ಯದ ಪುನರುತ್ಥಾನದ ಕುರಿತಾಗಿ ಯೇಸು ಮಾತಾಡಿದನು. ಅವನಂದದ್ದು: “ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.” (ಯೋಹಾನ 5:28, 29) ಅನಂತರ ಒಬ್ಬ ಯುವಕನನ್ನು ಪುನರುತ್ಥಾನಗೊಳಿಸಲು, ಯೆಹೋವನು ಉಪಯೋಗಿಸಿದ ಅಪೊಸ್ತಲ ಪೌಲನು ಸಹ, ಭವಿಷ್ಯದಲ್ಲಿನ ಒಂದು ಪುನರುತ್ಥಾನದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿದನು. ಅವನಂದದ್ದು: “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು . . . ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ.”—ಅ. ಕೃತ್ಯಗಳು 20:7-12; 24:15.
ಒಂದು ಭವಿಷ್ಯದ ಪುನರುತ್ಥಾನವನ್ನು ಸೂಚಿಸುವ ಈ ಶಾಸ್ತ್ರೀಯ ಸೂಚಿಗಳು, ಆತ್ಮಗಳ ಕ್ಷೇತ್ರದಲ್ಲಿ ಮುಂದುವರಿದ ಜೀವನಕ್ಕೆ ಸಂಬಂಧಿಸುವದಿಲ್ಲ. ಸತ್ತ ಲಕ್ಷಾಂತರ ಜನರು ಶಾರೀರಿಕ ದೇಹಗಳೊಂದಿಗೆ ಇಲ್ಲಿಯೇ ಭೂಮಿಯ ಮೇಲೆ ಜೀವಕ್ಕೆ ಹಿಂದಿರುಗುವ ಸಮಯಕ್ಕೆ ಅವು ನಿರ್ದೇಶಿಸುತ್ತವೆ. ಈ ಪುನರುತಿತ್ಥ ಜನರು ಭೂಮಿಯ ಮೇಲೆ ಈ ಮುಂಚೆ ಅವರ ಜೀವನದ ಕುರಿತಾದ ಯಾವುದೇ ಸ್ಮರಣೆ ಇಲ್ಲದಂತಹ ಜನರಾಗಿರುವದಿಲ್ಲ. ಅವರು ಶಿಶುಗಳಾಗಿ ಪುನಃ ಜನಿಸುವದಿಲ್ಲ. ಬದಲಾಗಿ, ಅವರು ಸತ್ತಾಗ ಆಗಿದ್ದಂತಹ ಅದೇ ವ್ಯಕ್ತಿಗಳು, ಅದೇ ಸ್ಮರಣೆಗಳು ಮತ್ತು ವ್ಯಕ್ತಿತ್ವವನ್ನು ಹೊಂದಿದವರಾಗಿರುವರು. ಅವರು ತಮ್ಮಿಂದಲೂ ಇತರರಿಂದಲೂ ಗುರುತಿಸಲ್ಪಡಶಕ್ತರಾಗುವರು. ತಮಗೆ ಹಾಗೂ ಇತರರಿಗೆ ಗುರುತಿಸಸಾಧ್ಯವಾಗಿರುವರು. ಈ ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬಗಳನ್ನು ಪುನಃ ಸೇರುವಾಗ ಎಂತಹ ಒಂದು ಆನಂದ ಅದಾಗಿರುವುದು! ಮತ್ತು ನಮ್ಮ ಪೂರ್ವಜರನ್ನು ಸಂಧಿಸುವುದು ಎಷ್ಟೊಂದು ಉದ್ರೇಕಕಾರಿಯಾಗಿರುವದು!
ಸ್ವರ್ಗದಲ್ಲಿ ಜೀವನಕ್ಕೆ ಪುನರುತ್ಥಾನ
ಕೆಲವರು ಸ್ವರ್ಗಕ್ಕೆ ಹೋಗುವರೆಂದು ಯೇಸು ಹೇಳಲಿಲ್ಲವೋ? ಹೌದು, ಹೇಳಿದನು. ತಾನು ಸಾಯಿಸಲ್ಪಡುವ ಮುಂಚಿನ ಸಂಜೆ ಅವನಂದದ್ದು: “ನನ್ನ ತಂದೆಯ ಮನೆಯಲ್ಲಿ ಬಹಳ ಬಿಡಾರಗಳು ಅವೆ; . . . ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗುತ್ತೇನಲ್ಲಾ. ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ಧಮಾಡಿದ ಮೇಲೆ ತಿರಿಗಿ ಬಂದು ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಯಾಕಂದರೆ ನಾನಿರುವ ಸ್ಥಳದಲ್ಲಿ ನೀವು ಸಹ ಇರಬೇಕು.” (ಯೋಹಾನ 14:2, 3) ಯೇಸು ತನ್ನ ನಂಬಿಗಸ್ತ ಅಪೊಸ್ತಲರೊಂದಿಗೆ ಮಾತಾಡುತ್ತಿದ್ದನು, ಆದರೆ ಎಲ್ಲಾ ಒಳ್ಳೇ ಜನರು ಸ್ವರ್ಗಕ್ಕೆ ಹೋಗುವರೆಂದು ಅವನ ಮಾತುಗಳು ಅರ್ಥೈಸುವದಿಲ್ಲ.
ಸ್ವರ್ಗಕ್ಕೆ ಪುನರುತ್ಥಾನವಾಗುವವರು ಕೇವಲ ಒಂದು ಒಳ್ಳೆಯ ಜೀವನವನ್ನು ನಡಿಸುವುದನ್ನು ಬಿಟ್ಟು ಮುಟ್ಟಬೇಕಾದ ಇತರ ಆವಶ್ಯಕತೆಗಳಿದ್ದವೆಂದು ಯೇಸು ತೋರಿಸಿದನು. ಯೆಹೋವನ ಮತ್ತು ಅವನ ಉದ್ದೇಶಗಳ ನಿಷ್ಕೃಷ್ಟ ಜ್ಞಾನವನ್ನು ಹೊಂದಿರುವುದು ಒಂದು ಆವಶ್ಯಕತೆಯಾಗಿದೆ. (ಯೋಹಾನ 17:3) ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯನ್ನು ಅಭ್ಯಾಸಿಸುವುದು ಮತ್ತು ದೇವರಿಗೆ ವಿಧೇಯರಾಗುವುದು ಇತರ ಆವಶ್ಯಕತೆಗಳಾಗಿವೆ. (ಯೋಹಾನ 3:16; 1 ಯೋಹಾನ 5:3) ದೇವರ ಪವಿತ್ರಾತ್ಮದಿಂದ ಉತ್ಪಾದಿಸಲ್ಪಟ್ಟ ಒಬ್ಬ ದೀಕ್ಷಾಸ್ನಾನಿತ ಕ್ರೈಸ್ತನೋಪಾದಿ ‘ಹೊಸದಾಗಿ ಹುಟ್ಟುವುದು’ ಇನ್ನೊಂದು ಆವಶ್ಯಕತೆಯಾಗಿದೆ. (ಯೋಹಾನ 1:12, 13; 3:3-6) ಸ್ವರ್ಗೀಯ ಜೀವನಕ್ಕೆ ಇನ್ನೊಂದು ಅವಶ್ಯಕತೆಯು, ಮರಣದ ವರೆಗೂ ದೇವರಿಗೆ ನಂಬಿಗಸ್ತರಾಗಿರುತ್ತಾ, ಯೇಸು ಮಾಡಿದಂತೆ ತಾಳಿಕೊಳ್ಳುವದಾಗಿದೆ.—ಲೂಕ 22:29; ಪ್ರಕಟನೆ 2:10.
ಅಂತಹ ಉಚ್ಚ ಆವಶ್ಯಕತೆಗಳಿಗಾಗಿ ಒಂದು ಕಾರಣವಿದೆ. ಸ್ವರ್ಗಕ್ಕೆ ಪುನರುತ್ಥಾನಗೊಳಿಸಲ್ಪಡುವವರಿಗೆ ಮಾಡಲು ಒಂದು ಪ್ರಮುಖ ಕೆಲಸವಿದೆ. ಭೂಮಿಯ ಮೇಲಿನ ವ್ಯವಹಾರಗಳನ್ನು ಮಾನವ ಸರಕಾರಗಳು ಎಂದೂ ಯಶಸ್ವಿಕರವಾಗಿ ನಿರ್ವಹಿಸಲಾರವು ಎಂದು ಯೆಹೋವನಿಗೆ ತಿಳಿದಿತ್ತು. ಆದುದರಿಂದ ಮಾನವಕುಲದ ಮೇಲೆ ಆಳಲಿದ್ದ ಒಂದು ಸ್ವರ್ಗೀಯ ಸರಕಾರ, ಆಥವಾ ರಾಜ್ಯಕ್ಕಾಗಿ ಅವನು ಏರ್ಪಡಿಸಿದನು. (ಮತ್ತಾಯ 6:9, 10) ಆ ರಾಜ್ಯದ ಅರಸನು ಯೇಸು ಆಗಿರುವನು. (ದಾನಿಯೇಲ 7:13, 14) ಭೂಮಿಯಿಂದ ಆರಿಸಲ್ಪಟ್ಟ ಮತ್ತು ಸ್ವರ್ಗಕ್ಕೆ ಪುನರುತ್ಥಾನಗೊಳಿಸಲ್ಪಡುವ ಕೆಲವರು ಆತನೊಂದಿಗೆ ಆಳುವರು. ಈ ಪುನರುತ್ಥಾನಗೊಳಿಸಲ್ಪಟ್ಟವರು ‘ನಮ್ಮ ದೇವರಿಗೋಸ್ಕರ ರಾಜ್ಯವೂ ಯಾಜಕರೂ ಆಗುವರು ಮತ್ತು ಅವರು ಭೂಮಿಯ ಮೇಲೆ ರಾಜರಾಗಿ ಆಳುವರು’ ಎಂದು ಬೈಬಲ್ ಮುಂತಿಳಿಸಿತು.—ಪ್ರಕಟನೆ 5:10.
ಒಂದು ಸ್ವರ್ಗೀಯ ಪುನರುತ್ಥಾನಕ್ಕಾಗಿರುವ ಆವಶ್ಯಕತೆಗಳನ್ನು ಜನರ ದೊಡ್ಡ ಸಂಖ್ಯೆಗಳು ಮುಟ್ಟುವವೊ? ಇಲ್ಲ. ತಮ್ಮದೇ ಆದ ದೋಷದ ಕಾರಣದಿಂದಲ್ಲದಿದ್ದರೂ, ಮರಣದಲ್ಲಿ ನಿದ್ರಿಸುತ್ತಿರುವ ಹೆಚ್ಚಿನವರು ಅರ್ಹರಾಗುವದಿಲ್ಲ. ಅನೇಕರಿಗೆ ಯೆಹೋವನ ಮತ್ತು ಆತನ ಉದ್ದೇಶಗಳ ಕುರಿತಾದ ಸತ್ಯವನ್ನು ಕಲಿಯಲು ಸ್ವಲ್ಪವೇ ಅವಕಾಶವಿತ್ತು ಅಥವಾ ಇರಲೇ ಇಲ್ಲ. ಯೇಸು ಕ್ರಿಸ್ತನ ಅಥವಾ ದೇವರ ರಾಜ್ಯದ ಕುರಿತಾಗಿ ಯಾವುದೇ ಜ್ಞಾನವಿಲ್ಲದೆ ಅವರು ಜೀವಿಸಿದರು ಮತ್ತು ಸತ್ತರು.
ಸ್ವರ್ಗಕ್ಕೆ ಹೋಗುವವರನ್ನು ಯೇಸು “ಚಿಕ್ಕ ಹಿಂಡು” ಎಂದು ಕರೆದನು. (ಲೂಕ 12:32) ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳಲು “ಭೂಲೋಕದೊಳಗಿಂದ ಕೊಂಡುಕೊಳ್ಳಲ್ಪಟ್ಟ” ವರ ಸಂಖ್ಯೆಯು 144,000 ಆಗಿರುವದೆಂದು ಅನಂತರ ಪ್ರಕಟಪಡಿಸಲಾಯಿತು. (ಪ್ರಕಟನೆ 14:1-3; 20:6) ಯೇಸು ಸೂಚಿಸಿದಂತಹ “ಬಹಳ ಬಿಡಾರಗಳ”ನ್ನು ತುಂಬಿಸುವಷ್ಟು ದೊಡ್ಡ ಸಂಖ್ಯೆಯು 144,000 ಆಗಿರುವದಾದರೂ, ಆದಾಮನಿಂದ ಇಳಿದು ಬಂದಿರುವ ಕೋಟ್ಯಂತರ ಜನರಿಗೆ ಹೋಲಿಸುವಾಗ ಅದು ಚಿಕ್ಕದ್ದಾಗಿದೆ.—ಯೋಹಾನ 14:2.
ಐಹಿಕ ಪುನರುತ್ಥಾನದ ಮುಂಚಿನ ಘಟನೆಗಳು
ನಾವು ಇಷ್ಟರ ವರೆಗೆ ಏನನ್ನು ಚರ್ಚಿಸಿದ್ದೇವೋ ಅದನ್ನು ಪುನರ್ವಿಮರ್ಶಿಸೋಣ. ಬೈಬಲಿಗನುಸಾರ, ಸಾಯುವವರು ಯೆಹೋವ ದೇವರಿಂದ ಪುನರುತ್ಥಾನಗೊಳಿಸಲ್ಪಡುವ ತನಕ ಮರಣದಲ್ಲಿ ನಿರ್ಜೀವಿಗಳಾಗಿದ್ದಾರೆ. ಕೆಲವರು, ತಾವು ಎಲ್ಲಿ ಯೇಸು ಕ್ರಿಸ್ತನೊಂದಿಗೆ ರಾಜ್ಯ ಸರಕಾರದಲ್ಲಿ ಆಳುವರೋ, ಆ ಸ್ವರ್ಗದಲ್ಲಿ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡುವರು. ಆ ರಾಜ್ಯದ ಪ್ರಜೆಗಳಾಗಲು ಹೆಚ್ಚಿನ ಜನರು ಭೂಮಿಯ ಮೇಲೆ ಪುನರುತ್ಥಾನಗೊಳಿಸಲ್ಪಡುವರು.
ಐಹಿಕ ಪುನರುತ್ಥಾನದ ಮೂಲಕ ಆಂಶಿಕವಾಗಿ, ಯೆಹೋವನು ಭೂಮಿಗಾಗಿರುವ ತನ್ನ ಉದ್ದೇಶವನ್ನು ನೆರವೇರಿಸುವನು. ಯೆಹೋವನು ಅದನ್ನು “ಜನನಿವಾಸಕ್ಕಾಗಿ” ಸೃಷ್ಟಿಸಿದನು. (ಯೆಶಾಯ 45:18) ಅದು ಮಾನವಕುಲದ ಚಿರಸ್ಥಾಯಿ ಮನೆಯಾಗಿರಲಿತ್ತು. ಈ ಕಾರಣದಿಂದ ಕೀರ್ತನೆಗಾರನು ಹಾಡಿದ್ದು: “ಪರಲೋಕವು ಯೆಹೋವನದು; ಭೂಲೋಕವನ್ನು ನರಸಂತಾನಕ್ಕೆ ಕೊಟ್ಟಿದ್ದಾನೆ.”—ಕೀರ್ತನೆ 115:16.
ಭೂಮಿಯ ಮೇಲೆ ಜೀವಿತಕ್ಕೆ ಪುನರುತ್ಥಾನವು ಆರಂಭವಾಗುವ ಮುಂಚೆ, ಮಹತ್ತಾದ ಬದಲಾವಣೆಗಳು ಜರುಗಬೇಕು. ಭೂಮಿಯು ಯುದ್ಧ, ಮಾಲಿನ್ಯ, ಪಾತಕ ಮತ್ತು ಹಿಂಸಾಚಾರದಿಂದ ತುಂಬಬೇಕೆಂದು ದೇವರ ಉದ್ದೇಶವಾಗಿರಲಿಲ್ಲವೆಂದು ನೀವು ಪ್ರಾಯಶಃ ಒಪ್ಪುವಿರಿ. ದೇವರಿಗಾಗಿ ಮತ್ತು ಆತನ ನೀತಿಯ ನಿಯಮಗಳಿಗಾಗಿ ಯಾವುದೆ ಗೌರವವಿರದ ಜನರಿಂದ ಈ ಸಮಸ್ಯೆಗಳು ಉಂಟುಮಾಡಲ್ಪಟ್ಟಿವೆ. ಆದುದರಿಂದ ಆತನ ಚಿತ್ತವನ್ನು ಈ ಭೂಮಿಯ ಮೇಲೆ ಜಾರಿಗೆ ತರುವ ಒಂದು ಪ್ರಮುಖ ಹೆಜ್ಜೆಯಾಗಿ, ದೇವರ ರಾಜ್ಯವು “ಲೋಕನಾಶಕರನ್ನು ನಾಶ” ಮಾಡುವುದು. (ಪ್ರಕಟನೆ 11:18) ಆ ರಾಜ್ಯವು ಎಲ್ಲಾ ದುಷ್ಟ ಜನರನ್ನು ನಾಶಮಾಡಿ, ನೀತಿವಂತರು ಭೂಮಿಯ ಮೇಲೆ ಸದಾಕಾಲ ಜೀವಿಸುವಂತೆ ಬಿಡುವುದು.—ಕೀರ್ತನೆ 37:9, 29.
ಭೂಮಿಯ ಮೇಲೆ ಪ್ರಮೋದವನ
ಶುಚೀಕರಿಸಲ್ಪಟ್ಟ ಒಂದು ಭೂಮಿಯ ಮೇಲೆ ಪುನರುತ್ಥಾನಗೊಳಿಸಲ್ಪಡುವ ಜನರು, ಯೋಗ್ಯವಾದದ್ದನ್ನು ಮಾಡುವ ಕಾಳಜಿ ವಹಿಸುವ, ಸೌಮ್ಯ ಜನರಾಗಿರುವರು. (ಮತ್ತಾಯ 5:5ನ್ನು ಹೋಲಿಸಿರಿ.) ದೇವರ ರಾಜ್ಯದ ಪ್ರೀತಿಯ ಮೇಲ್ವಿಚಾರಣೆಯ ಕೆಳಗೆ, ಅವರು ಭದ್ರತೆಯಲ್ಲಿ ಸಂತೋಷದ ಜೀವಿತಗಳನ್ನು ಜೀವಿಸುವರು. ಆಗ ಚಾಲ್ತಿಯಲ್ಲಿರಲಿರುವ ಪರಿಸ್ಥಿತಿಗಳ ಈ ಅದ್ಭುತಕರವಾದ ಮುನ್ನೋಟವನ್ನು ಬೈಬಲು ಕೊಡುತ್ತದೆ: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:4.
ಹೌದು, ಭೂಮಿಯು ಒಂದು ಪ್ರಮೋದವನವಾಗಿ ಪರಿವರ್ತನೆ ಹೊಂದುವುದು. (ಲೂಕ 23:43) ಅದರ ಅರ್ಥವೇನಾಗಿರುವದೆಂದು ಯೋಚಿಸಿರಿ! ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಗಳು ಬಳಕೆಯಲ್ಲಿಲ್ಲದ್ದಾಗಿ ಹೋಗುವುವು. ಪ್ರಮೋದವನದಲ್ಲಿ, ವೃದ್ಧಾಪ್ಯದ ಪರಿಣಾಮಗಳಿಂದ ಈಗ ಬಾಧಿಸಲ್ಪಡುವವರು ಪುನಃ ಒಮ್ಮೆ ದೃಢಕಾಯರೂ ಆರೋಗ್ಯವಂತರೂ ಆಗಿರುವರು. (ಯೋಬ 33:25; ಯೆಶಾಯ 35:5, 6) ಶವಾಗಾರಗಳು, ಸ್ಮಶಾನಗಳು, ಮತ್ತು ಸಮಾಧಿಸ್ತಂಭಗಳು ಇನ್ನು ಮುಂದೆ ಇರುವದಿಲ್ಲ. ತನ್ನ ರಾಜ್ಯದ ಮೂಲಕ, ಯೆಹೋವನು “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು.” (ಯೆಶಾಯ 25:8) ಅಂತಹ ಆಶೀರ್ವಾದಗಳು ನಿಶ್ಚಯವಾಗಿಯೂ ನಮಗೆ ಮತ್ತು ನಮ್ಮ ಪೂರ್ವಜರಿಗೆ ಒಂದು ಹೊಸ ಜೀವನದ ಅರ್ಥದಲ್ಲಿರುವುವು.
[ಪುಟ 7 ರಲ್ಲಿರುವ ಚಿತ್ರ]
ಭೂಮಿಯ ಮೇಲೆ ಪುನರುತ್ಥಾನಗೊಳಿಸಲ್ಪಡುವವರು ರಾಜ್ಯದ ಪ್ರಜೆಗಳಾಗಿರುವರು.