ಸಮೃದ್ಧವಾದ ನಮ್ಮ ಆತ್ಮಿಕ ಪರಂಪರೆ
ಫಿಲಿಪ್ಪ್ ಎಫ್. ಸ್ಮಿತ್ ಹೇಳಿದಂತೆ
“ಕಗ್ಗತ್ತಲೆಯ ಆಫ್ರಿಕದಾದ್ಯಂತ ಉರಿಯುವ ಒಂದು ದೀವಟಿಗೆಯನ್ನು ಹೊತ್ತಿಸಲಾಗಿದೆ.” ಮೇಲಿನ ಮಾತುಗಳನ್ನು 1992ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್)ದ 75 ನೆಯ ಪುಟದಲ್ಲಿ ಓದಲು, ನಾವು ಎಷ್ಟು ಹರ್ಷಭರಿತರಾಗಿದ್ದೆವು! ಆ ಪದಗಳು 1931 ರಲ್ಲಿ ನಮ್ಮ ಅಜ್ಜನಾದ ಫ್ರ್ಯಾಂಕ್ ಡಬ್ಲ್ಯೂ. ಸ್ಮಿತ್ರಿಂದ, ವಾಚ್ ಟವರ್ ಸೊಸೈಟಿಯ ಆಗಿನ ಅಧ್ಯಕ್ಷರಾದ ಸಹೋದರ ಜೋಸಫ್ ಎಫ್. ರಥರ್ಫರ್ಡರಿಗೆ ಒಂದು ಪತ್ರದಲ್ಲಿ ಬರೆಯಲ್ಪಟ್ಟಿದ್ದವು. ಅವರಿಂದ ಮತ್ತು ಅವರ ತಮ್ಮನಿಂದ ಮಾಡಲ್ಪಟ್ಟ ಒಂದು ಸಾರುವ ಸಂಚಾರದ ಕುರಿತು ವರದಿಸಲು ಅಜ್ಜ ಬರೆದಿದ್ದರು.
ಇಸವಿ 1992ರ ವರ್ಷಪುಸ್ತಕವು ವಿವರಿಸಿದ್ದು: “ಕೇಪ್ ಟೌನ್ [ದಕ್ಷಿಣ ಆಫ್ರಿಕ]ನ ಇಬ್ಬರು ಧೈರ್ಯವಂತ ಪಯನೀಯರ್ ಶುಶ್ರೂಷಕರಾದ ಗ್ರೇ ಸ್ಮಿತ್ ಮತ್ತು ಅವನ ಹಿರಿಯ ಸಹೋದರನಾದ ಫ್ರ್ಯಾಂಕ್, ಸುವಾರ್ತೆಯನ್ನು ಹಬ್ಬಿಸುವ ಸಾಧ್ಯತೆಗಳನ್ನು ಕಂಡುಹಿಡಿಯಲು ಬ್ರಿಟಿಷ್ ಪೂರ್ವ ಆಫ್ರಿಕಕ್ಕೆ ಪ್ರಯಾಣ ಹೊರಟರು. ಅವರು ಒಂದು ಕ್ಯಾರವ್ಯನ್ (ಗಾಲಿಮನೆ) ನಂತೆ ಮಾರ್ಪಡಿಸಿದ್ದ ಡಿ ಸೊಟೊ ಕಾರನ್ನು ತೆಗೆದುಕೊಂಡು, ಪುಸ್ತಕಗಳ 40 ರಟ್ಟು ಪೆಟ್ಟಿಗೆಗಳೊಂದಿಗೆ ಅದನ್ನು ಒಂದು ಹಡಗಿನಲ್ಲಿ ಹೊರಿಸಿ, ಕೆನ್ಯದ ರೇವುಪಟ್ಟಣವಾದ ಮೊಂಬಸಾಗೆ ಸಮುದ್ರಯಾನ ಮಾಡಿದರು.”
ಸಹೋದರ ರಥರ್ಫರ್ಡರಿಗೆ ಬರೆದ ತಮ್ಮ ಪತ್ರದಲ್ಲಿ ಅಜ್ಜ, ಮೊಂಬಸಾದಿಂದ ಕೆನ್ಯದ ರಾಜಧಾನಿಯಾದ ನೈರೋಬಿಗೆ ಮಾಡಿದ ಪ್ರವಾಸವನ್ನು ವಿವರಿಸಿದರು: “ನಾನು ಎಂದೂ ಕೈಗೊಂಡಿರದ ಅತಿ ಘೋರವಾದ ಮೋಟಾರು ಪ್ರವಾಸವನ್ನು ನಾವು ಆರಂಭಿಸಿದೆವು. 580 ಕಿಲೋಮೀಟರುಗಳನ್ನು ಪೂರ್ತಿಗೊಳಿಸಲು, ದಿನವಿಡೀ ಪ್ರಯಾಣ ಮಾಡುತ್ತಾ ನಮಗೆ ನಾಲ್ಕು ದಿನಗಳು ಹಿಡಿದವು. . . . ಪ್ರತಿ ಮೈಲ್ಗೂ ನಾನು ಏಣುಗಳನ್ನು ಮೊರಗುದ್ದಲಿಯಿಂದ ಸಮಗೊಳಿಸಲು, ಗುಂಡಿಗಳನ್ನು ತುಂಬಲು, ಗಾಲಿಗಳು ಬಿಗಿಯಾಗಿ ಹಿಡಿದುಕೊಳ್ಳುವಂತೆ ಜೌಗು ನೆಲವನ್ನು ತುಂಬಲು ಆನೆ ಹುಲ್ಲನ್ನು ಮತ್ತು ಮರಗಳನ್ನು ಕತ್ತರಿಸಲಿಕ್ಕಾಗಿ ಇಳಿಯಬೇಕಿತ್ತು.”
ನೈರೋಬಿಯನ್ನು ತಲಪಿದ ತರುವಾಯ, ಫ್ರ್ಯಾಂಕ್ ಮತ್ತು ಗ್ರೇ ತಮ್ಮ ಬೈಬಲ್ ಸಾಹಿತ್ಯವನ್ನು ವಿತರಿಸಲು ಕ್ರಮಾನುಗತವಾಗಿ 21 ದಿನಗಳು ಕೆಲಸಮಾಡಿದರು. “ವರದಿಗಳನುಸಾರ, ಕೆಲಸವು ಧಾರ್ಮಿಕ ನೈರೋಬಿಯಲ್ಲಿ ಕೋಲಾಹಲವನ್ನು ಎಬ್ಬಿಸಿದೆ,” ಎಂಬುದಾಗಿ ಅಜ್ಜ ಬರೆದರು. ತರುವಾಯ ತಮ್ಮ ಎರಡು ವರ್ಷ ಪ್ರಾಯದ ಮಗ ಡಾನವನ್ ಮತ್ತು ತಮ್ಮ ಎರಡನೆಯ ಮಗು, ನಮ್ಮ ತಂದೆಯಾದ ಫ್ರ್ಯಾಂಕನ್ನು ಹೆರಲಿಕ್ಕಿದ್ದ ತಮ್ಮ ಹೆಂಡತಿ ಫಿಲಿಸ್ಳ ಬಳಿಗೆ ಮನೆಗೆ ಹಿಂದಿರುಗಲು ಅಜ್ಜ ಆತುರವುಳ್ಳವರಾದರು. ಮೊಂಬಸಾದಿಂದ ಲಭ್ಯವಿದ್ದ ಮೊದಲ ಹಡಗನ್ನು ಅಜ್ಜ ಹತ್ತಿದರು, ಆದರೆ ಮನೆಯನ್ನು ತಲಪುವ ಮುಂಚೆ ಮಲೇರಿಯ ರೋಗದಿಂದ ತೀರಿಹೋದರು.
ನನ್ನ ಅಕ್ಕ, ನನ್ನ ತಮ್ಮ ಮತ್ತು ನಾನು ವರ್ಷಪುಸ್ತಕದ ಆ ದಾಖಲೆಯ ಕುರಿತು ವಿಚಾರಮಾಡಿದಂತೆ, ನಮ್ಮ ಮನಸ್ಸುಗಳು ನಮ್ಮ ಪ್ರಿಯ ತಂದೆಯ ಕಡೆಗೆ ತಿರುಗಿದವು. 1992ರ ವರ್ಷಪುಸ್ತಕ ವನ್ನು ನಾವು ಪಡೆಯುವ ಕೇವಲ ಕೆಲವು ತಿಂಗಳುಗಳ ಮುಂಚೆ, 1991ರ ಮೇ ತಿಂಗಳಿನಲ್ಲಿ, ಹೃದಯ ಶಸ್ತ್ರಚಿಕಿತ್ಸೆಯ ತೊಡಕುಗಳಿಂದ ಅವರು ತೀರಿಹೋಗಿದ್ದರು. ತಮ್ಮ ತಂದೆಯನ್ನು ಅವರು ಎಂದೂ ಭೇಟಿಯಾಗಿರದಿದ್ದರೂ, ಯೆಹೋವನಿಗಾಗಿದ್ದ ತಮ್ಮ ತಂದೆಯ ಆಳವಾದ ಪ್ರೀತಿಯಲ್ಲಿ ಅವರು ಪಾಲು ತೆಗೆದುಕೊಂಡರು. 28 ವರ್ಷಗಳ ತರುವಾಯ, 1959 ರಲ್ಲಿ, ಪೂರ್ವ ಆಫ್ರಿಕಕ್ಕೆ ಒಬ್ಬ ಕ್ರೈಸ್ತ ಶುಶ್ರೂಷಕನಂತೆ ತಮ್ಮ ಹೆಜ್ಜೆಜಾಡುಗಳನ್ನು ಅವರ ಮಗನು ಅನುಸರಿಸಲಿರುವನೆಂದು ತಿಳಿಯಲು, ಅಜ್ಜ ಹೇಗೆ ಹರ್ಷಿಸುತ್ತಿರುತ್ತಿದ್ದರು!
ತಂದೆಯವರ ಆರಂಭದ ಜೀವನ
ನಮ್ಮ ತಂದೆ, ಅವರ ಸ್ವಂತ ತಂದೆಯ ಮರಣವಾದ ಎರಡು ತಿಂಗಳುಗಳ ಬಳಿಕ 1931ರ ಜುಲೈ 20 ರಂದು ಕೇಪ್ ಟೌನ್ನಲ್ಲಿ ಜನಿಸಿದರು. ಅವರಿಗೆ ಅವರ ತಂದೆಯ ಹೆಸರನ್ನು ಇಡಲಾಯಿತು. ಚಿಕ್ಕ ವಯಸ್ಸಿನಿಂದಲೇ ತಂದೆಯವರು ಯೆಹೋವನಿಗಾಗಿ ತಮ್ಮ ಪ್ರೀತಿಯನ್ನು ತೋರಿಸಿದರು. ಕೇವಲ ಒಂಬತ್ತು ವರ್ಷ ವಯಸ್ಸಿನವರಾಗಿದ್ದಾಗ, ಅವರ ಶಾಲಾಸಂಗಾತಿಗಳು ಅವರ ಪರಿಹಾಸ್ಯ ಮಾಡುತ್ತಿದ್ದಾಗ, ಇವರು ಕೇಪ್ ಟೌನ್ನ ಪ್ರಧಾನ ರೈಲು ನಿಲ್ದಾಣದಲ್ಲಿ ನಿಂತು ಪ್ರಕಟನ ಪತ್ರದ (ಪ್ಲ್ಯಾಕಾರ್ಡ್) ಮೂಲಕ ಸಾಕ್ಷಿಕಾರ್ಯವನ್ನು ಮಾಡಿದರು. 11 ನೆಯ ವಯಸ್ಸಿನಲ್ಲಿ ಯೆಹೋವನಿಗೆ ತಮ್ಮ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಅವರು ಸಂಕೇತಿಸಿದರು. ಕೆಲವೊಮ್ಮೆ ಶುಶ್ರೂಷೆಯಲ್ಲಿ ಒಂದು ಇಡೀ ರಸ್ತೆಯಲ್ಲಿ ಒಬ್ಬರೇ ಸಾಕ್ಷಿ ನೀಡುವಂತೆ ತಂದೆಯವರು ನೇಮಿಸಲ್ಪಡುತ್ತಿದ್ದರು. ಅವರು 18 ವರ್ಷದವರಾಗುವುದರೊಳಗೆ ಕೇಪ್ ಟೌನ್ನ ಒಂದು ಉಪನಗರದಲ್ಲಿ, ವೃದ್ಧರಾದ ಕ್ರೈಸ್ತ ಸಹೋದರಿಯರ ಒಂದು ಗುಂಪಿನೊಂದಿಗೆ ಕಾವಲಿನಬುರುಜು ಅಭ್ಯಾಸವನ್ನು ನಡೆಸುತ್ತಿದ್ದರು.
ಮುಂದಿನ ವರ್ಷ ಯೂರೋಪಿನಲ್ಲಿ ಅಂತಾರಾಷ್ಟ್ರೀಯ ಅಧಿವೇಶನಗಳು ನಡೆಸಲ್ಪಡುವವೆಂದು 1954 ರಲ್ಲಿ ವಾಚ್ ಟವರ್ ಸೊಸೈಟಿಯು ಪ್ರಕಟಿಸಿತು. ಅಲ್ಲಿಗೆ ಹೋಗಲು ತಂದೆಯವರು ಬಹಳವಾಗಿ ಬಯಸಿದರು, ಆದರೆ ಕೇಪ್ ಟೌನ್ನಿಂದ ಅಲ್ಲಿಗೆ ಪ್ರಯಾಣಿಸಲು ಅವರಲ್ಲಿ ಸಾಕಷ್ಟು ಹಣವಿರಲಿಲ್ಲ. ಆದುದರಿಂದ ಉತ್ತರ ರೊಡೇಷಿಯ (ಈಗ ಸಾಂಬಿಯ) ದಲ್ಲಿನ ತಾಮ್ರದ ಗಣಿಗಳಲ್ಲಿ ಒಬ್ಬ ರಸಾಯನ ಶಾಸ್ತ್ರಜ್ಞನಂತೆ ಮೂರು ತಿಂಗಳುಗಳ ವರೆಗೆ ಕೆಲಸ ಮಾಡಲು ಅವರು ಒಪ್ಪಿಕೊಂಡರು. ಖನಿಜ ಅದುರಿನ ಲೋಹ ಪರೀಕ್ಷೆಯನ್ನು ಮಾಡುವ ಸೌಕರ್ಯಗಳು ಆಫ್ರಿಕದ ಪೊದೆಗಾಡಿನಲ್ಲಿದ್ದವು.
ಉತ್ತರ ರೊಡೇಷಿಯದಲ್ಲಿ ಆಫ್ರಿಕನ್ ಸಾಕ್ಷಿಗಳ ದೊಡ್ಡ ಸಂಖ್ಯೆಯು ಇತ್ತೆಂದು ತಂದೆಯವರಿಗೆ ಗೊತ್ತಿತ್ತು, ಆದುದರಿಂದ ಅವರು ಬಂದು ತಲಪಿದಾಗ ಸಾಕ್ಷಿಗಳಿಗಾಗಿ ಹುಡುಕಿದರು ಮತ್ತು ಸಾಕ್ಷಿಗಳು ತಮ್ಮ ಕೂಟಗಳನ್ನು ಎಲ್ಲಿ ನಡೆಸಿದರೆಂಬುದನ್ನು ತಿಳಿದುಕೊಂಡರು. ಸ್ಥಳೀಯ ಭಾಷೆಯಲ್ಲಿ ಮಾತಾಡಲು ಅವರಿಗೆ ಸಾಧ್ಯವಾಗದಿದ್ದರೂ, ಅವರು ಸಾಕ್ಷಿಗಳೊಂದಿಗೆ ಜೊತೆಗೂಡಿದರು ಮತ್ತು ಯೆಹೋವನ ಸಾಕ್ಷಿಗಳ ಮೈನ್ ಸಭೆಯ ಕೂಟಗಳಿಗೆ ಕ್ರಮವಾಗಿ ಹಾಜರಾದರು. ಗಣಿಗಳಲ್ಲಿದ್ದ ಯೂರೋಪಿಯನರು ಕುಲಸಂಬಂಧವಾಗಿ ಪೂರ್ವಾಗ್ರಹ ಪೀಡಿತರಾಗಿದ್ದರು ಮತ್ತು ಅನೇಕವೇಳೆ ಆಫ್ರಿಕನರನ್ನು ಮಾತುಗಳಲ್ಲಿ ತೆಗಳುವ ಮೂಲಕ ತಮ್ಮ ಪೂರ್ವಾಗ್ರಹವನ್ನು ತೋರಿಸಿದರು. ಆದರೆ ತಂದೆಯವರು ಯಾವಾಗಲೂ ದಯಾಪರರಾಗಿದ್ದರು.
ಮೂರು ತಿಂಗಳುಗಳ ಕೊನೆಯಲ್ಲಿ, ಸಾಕ್ಷಿಯಾಗಿರದಿದ್ದ ಒಬ್ಬ ಆಫ್ರಿಕನ್ ಕೆಲಸಗಾರನು ತಂದೆಯವರ ಬಳಿ ಬಂದು ಕೇಳಿದ್ದು: “ನಾವು ನಿಮ್ಮನ್ನು ಏನೆಂದು ಕರೆಯುತ್ತೇವೆಂದು ನಿಮಗೆ ಗೊತ್ತೊ?” ಆ ಮನುಷ್ಯನು ನಸುನಕ್ಕು ಹೇಳಿದ್ದು: “ನಾವು ನಿಮ್ಮನ್ನು ಬಾನ್ವ [ಶ್ರೀಮಾನ್] ವಾಚ್ಟವರ್ ಎಂದು ಕರೆಯುತ್ತೇವೆ.”
ಇಸವಿ 1955 ರಲ್ಲಿ, ತಂದೆಯವರು “ವಿಜಯಿಯಾದ ರಾಜ್ಯ” ಎಂಬ ಸಮ್ಮೇಳನಗಳನ್ನು ಯೂರೋಪ್ನಲ್ಲಿ ಹಾಜರಾಗಲು ಶಕ್ತರಾದರು. ಅಲ್ಲಿ ಅವರು ಮೇರಿ ಸಾಹಾರಿಯೂಳನ್ನು ಭೇಟಿಯಾದರು. ಆಕೆ ಮುಂದಿನ ವರ್ಷ ಅವರ ಪತ್ನಿಯಾದಳು. ತಮ್ಮ ಮದುವೆಯ ನಂತರ ಅವರು ಅಮೆರಿಕದ ಓಹೈಯೊವಿನ ಪರ್ಮಾದಲ್ಲಿ ನೆಲೆಸಿದರು.
ಪೂರ್ವ ಆಫ್ರಿಕಕ್ಕೆ
ಅಮೆರಿಕದಲ್ಲಿ ನಡೆದ ಜಿಲ್ಲಾ ಅಧಿವೇಶನವೊಂದರ ಸಂದರ್ಭದಲ್ಲಿ, ಶುಶ್ರೂಷಕರಿಗಾಗಿ ಅಗತ್ಯವು ಹೆಚ್ಚಾಗಿರುವಲ್ಲಿ ಸೇವೆ ಮಾಡುವಂತೆ ಅಧಿವೇಶನಗಾರರಿಗೆ ಆಮಂತ್ರಣವೊಂದು ನೀಡಲ್ಪಟ್ಟಿತು. ನಮ್ಮ ಹೆತ್ತವರು ಪೂರ್ವ ಆಫ್ರಿಕಕ್ಕೆ ಹೋಗಲು ನಿರ್ಣಯಿಸಿದರು. ವಾಚ್ ಟವರ್ ಸೊಸೈಟಿಯು ಏನನ್ನು ಸೂಚಿಸಿತೊ, ಅವರು ನಿಖರವಾಗಿ ಅದನ್ನೇ ಮಾಡಿದರು. ಒಂದುವೇಳೆ ಕೆಲಸವೊಂದನ್ನು ಗಳಿಸುವುದರಲ್ಲಿ ತಂದೆಯವರು ಅಸಫಲರಾದ ಸಂದರ್ಭದಲ್ಲಿ, ಹೋಗಿ ಬರುವ ಟಿಕೀಟುಗಳನ್ನು ಖರೀದಿಸಲು ಸಾಕಾಗುವಷ್ಟು ಹಣವನ್ನು ಅವರು ಕೂಡಿಸಿಟ್ಟರು. ಯಾಕೆಂದರೆ ಕೆಲಸ ಮಾಡುವ ಪರವಾನಗಿ ಇರುವವರು ಮಾತ್ರ ಆ ಕ್ಷೇತ್ರದಲ್ಲಿ ವಾಸಿಸುವಂತೆ ಅನುಮತಿಸಲ್ಪಡುತ್ತಿದ್ದರು.
ಪಾಸ್ಪೋರ್ಟ್ಗಳನ್ನು, ವೀಸಾಗಳನ್ನು ಪಡೆದು, ಲಸಿಕೆಗಳನ್ನು ಹಾಕಿಸಿಕೊಂಡ ನಂತರ, ಜುಲೈ 1959 ರಲ್ಲಿ ತಂದೆ ಮತ್ತು ತಾಯಿ ಒಂದು ವ್ಯಾಪಾರದ ಹಡಗಿನಲ್ಲಿ ನ್ಯೂ ಯಾರ್ಕ್ ನಗರದಿಂದ ಕೇಪ್ ಟೌನ್ನ ಮಾರ್ಗವಾಗಿ ಮೊಂಬಸಾಗೆ ಸಮುದ್ರಯಾನ ಮಾಡಿದರು. ಸಂಚಾರವು ನಾಲ್ಕು ವಾರಗಳ ಸಮಯವನ್ನು ಹಿಡಿಯಿತು. ಮೊಂಬಸಾದಲ್ಲಿ, ಅಗತ್ಯವು ಹೆಚ್ಚಾಗಿದ್ದ ಸ್ಥಳದಲ್ಲಿ ಸೇವೆ ಮಾಡಲು ಅವರಿಗಿಂತ ಮುಂಚೆ ಬಂದಿದ್ದ ಕ್ರೈಸ್ತ ಸಹೋದರರಿಂದ ಅವರು, ಹಡಗುಕಟ್ಟೆಯ ಬಳಿ ಆದರಣೀಯ ಸ್ವಾಗತವನ್ನು ಪಡೆದರು. ನೈರೋಬಿಯನ್ನು ಅವರು ತಲಪಿದಾಗ, ಅವರಿಗಾಗಿ ಪತ್ರವೊಂದು ಕಾಯುತ್ತಾ ಇದುದ್ದನ್ನು ತಂದೆಯವರು ಕಂಡುಕೊಂಡರು. ಅದು ಯುಗಾಂಡದ ಎನ್ಟೆಬಿಯಲ್ಲಿರುವ ಜೀಒಲಾಜಿಕಲ್ ಸರ್ವೇ ಇಲಾಖೆಯಲ್ಲಿ ಒಬ್ಬ ರಸಾಯನ ಶಾಸ್ತ್ರಜ್ಞನ ಸ್ಥಾನಕ್ಕಾಗಿ ಅವರ ವಿನಂತಿಗೆ ಉತ್ತರವಾಗಿತ್ತು. ತಂದೆ ಮತ್ತು ತಾಯಿ ಯುಗಾಂಡದ ಕಂಪಾಲಕ್ಕೆ ಹೋಗುವ ರೈಲುಗಾಡಿಯನ್ನು ಹತ್ತಿದರು; ಅಲ್ಲಿ ತಂದೆಯವರ ಇಂಟರ್ವ್ಯೂ ಮಾಡಲಾಯಿತು ಮತ್ತು ಕೆಲಸಕ್ಕೆ ಗೊತ್ತುಮಾಡಲಾಯಿತು. ಆ ಸಮಯದಲ್ಲಿ, ಕಂಪಾಲದ ಎನ್ಟೆಬಿ ಕ್ಷೇತ್ರದಲ್ಲಿ ಜಾರ್ಜ್ ಕಾಡೂ ಎಂಬ ಇನ್ನೊಬ್ಬ ಸಾಕ್ಷಿ ಮಾತ್ರ ಇದ್ದರು.
ಸ್ಥಳೀಯ ಭಾಷೆಯಾದ ಲುಗಾಂಡವನ್ನು ತಂದೆಯವರು ಕಲಿಯುವಂತೆ ಕಲೋನಿಯಲ್ ಸರಕಾರವು ವೆಚ್ಚವನ್ನು ವಹಿಸಿಕೊಂಡಿತು. ಅವರು ಹರ್ಷಿಸಿದರು, ಯಾಕೆಂದರೆ ಶುಶ್ರೂಷೆಯಲ್ಲಿ ತಾವು ಹೆಚ್ಚು ಪರಿಣಾಮಕಾರಿಯಾಗಿರಸಾಧ್ಯವೆಂದು ಅವರು ಹೇಗೂ ಅದನ್ನು ಕಲಿಯಲು ಯೋಜಿಸಿದ್ದರು. ತದನಂತರ, “ರಾಜ್ಯದ ಈ ಸುವಾರ್ತೆ” ಎಂಬ ಪುಸ್ತಿಕೆಯನ್ನು ಲುಗಾಂಡದಲ್ಲಿ ಭಾಷಾಂತರಿಸಲು ಸಹ ತಂದೆಯವರು ಸಹಾಯ ಮಾಡಿದರು.
ಇತರರಿಗೆ ಸಾಕ್ಷಿನೀಡುವುದರಲ್ಲಿ ತಂದೆಯವರು ಭಯರಹಿತರಾಗಿದ್ದರು. ತಮ್ಮ ಇಲಾಖೆಯಲ್ಲಿದ್ದ ಎಲ್ಲ ಯೂರೋಪಿಯನರೊಂದಿಗೆ ಅವರು ಮಾತಾಡಿದರು ಮತ್ತು ಯುಗಾಂಡದ ಜನರಿಗೆ ಸಾರುವುದರಲ್ಲಿ ಕ್ರಮವಾಗಿ ಭಾಗವಹಿಸಿದರು. ಯುಗಾಂಡದ ಆಫ್ರಿಕನ್ ಸರಕಾರಿ ವಕೀಲನಿಗೂ ಅವರು ಸಾಕ್ಷಿನೀಡಿದರು. ಆ ಮನುಷ್ಯನು ರಾಜ್ಯದ ಸಂದೇಶಕ್ಕೆ ಕಿವಿಗೊಟ್ಟನು ಮಾತ್ರವಲ್ಲ, ತಂದೆ ಮತ್ತು ತಾಯಿಯವರನ್ನು ಊಟಕ್ಕೂ ಆಮಂತ್ರಿಸಿದನು.
ನನ್ನ ಅಕ್ಕ ಆ್ಯನ್ಥಿ, 1960 ರಲ್ಲಿ ಜನಿಸಿದಳು ಮತ್ತು ನಾನು 1965 ರಲ್ಲಿ ಆಗಮಿಸಿದೆ. ನಮ್ಮ ಕುಟುಂಬವು ರಾಜಧಾನಿಯಾದ ಕಂಪಾಲದಲ್ಲಿದ್ದ ಸಣ್ಣದಾದ, ಆದರೆ ಬೆಳೆಯುತ್ತಾ ಇದ್ದ ಸಭೆಯಲ್ಲಿರುವ ಸಹೋದರ ಸಹೋದರಿಯರೊಂದಿಗೆ ಅತಿ ನಿಕಟವಾಗಿ ಹೊಂದಿಕೊಂಡಿತು. ಹತ್ತಿರದ ಎನ್ಟೆಬಿಯಲ್ಲಿರುವ ಏಕಮಾತ್ರ ಬಿಳಿ ಸಾಕ್ಷಿಗಳೋಪಾದಿ ಕೆಲವು ಮನರಂಜಿಸುವ ಅನುಭವಗಳು ನಮಗಾದವು. ಒಮ್ಮೆ ತಂದೆಯವರ ಒಬ್ಬ ಮಿತ್ರರು ಅನಿರೀಕ್ಷಿತವಾಗಿ ಎನ್ಟೆಬಿಯಲ್ಲಿ ಇಳುಕೊಂಡು ತಂದೆಯವರನ್ನು ಸಂಪರ್ಕಿಸಲು ಪ್ರಯತ್ನಿಸಿದರು. “ಇಲ್ಲಿ ಯೆಹೋವನ ಸಾಕ್ಷಿಗಳಾಗಿರುವ ಯೂರೋಪಿಯನ್ ದಂಪತಿಗಳ ಪರಿಚಯ ನಿಮಗಿದೆಯೊ?” ಎಂದು ಕೇಳುವ ತನಕ ಅವರು ಅಸಫಲರಾಗಿದ್ದರು. ಆ ವ್ಯಕ್ತಿಯು ಅವರನ್ನು ನೇರವಾಗಿ ತಂದೆ ಮತ್ತು ತಾಯಿಯವರ ಮನೆಗೆ ಕರೆದುಕೊಂಡು ಹೋದನು.
ಎರಡು ಸಶಸ್ತ್ರ ದಂಗೆಗಳನ್ನು ಅನುಭವಿಸುವುದರ ಜೊತೆಗೆ ನಮಗೆ ಕಷ್ಟಕರ ಅನುಭವಗಳೂ ಆದವು. ಒಂದು ಸಮಯದಲ್ಲಿ ನಿರ್ದಿಷ್ಟವಾದೊಂದು ಕುಲಸಂಬಂಧವಾದ ಗುಂಪಿನ ಯಾವನನ್ನಾದರೂ ಸರಕಾರದ ಸೈನಿಕರು ಗುಂಡಿಕ್ಕಿ ಕೊಲ್ಲುತ್ತಿದ್ದರು. ಹಗಲುರಾತ್ರಿ ಎಡೆಬಿಡದೆ ಗುಂಡು ಹಾರಿಸುತ್ತಿದ್ದರು. ಸಂಜೆ 6 ಗಂಟೆಯಿಂದ ಬೆಳಗ್ಗೆ 6ರ ವರೆಗೆ ಕರ್ಫ್ಯೂ ಇದ್ದ ಕಾರಣ, ಕೂಟಗಳು ಮಧ್ಯಾಹ್ನಗಳಲ್ಲಿ ಎನ್ಟೆಬಿಯಲ್ಲಿದ್ದ ನನ್ನ ಹೆತ್ತವರ ಮನೆಯಲ್ಲಿ ನಡೆಸಲ್ಪಟ್ಟವು.
ತದನಂತರ ಕರ್ಫ್ಯೂ ಕೊನೆಗೊಂಡಾಗ, ಕಾವಲಿನಬುರುಜು ಅಭ್ಯಾಸಕ್ಕಾಗಿ ತಂದೆಯವರು ನಮ್ಮನ್ನು ಕಂಪಾಲಕ್ಕೆ ಕರೆದುಕೊಂಡು ಹೋದರು. ಸೈನಿಕನೊಬ್ಬನು ನಮ್ಮ ಕಡೆಗೆ ಬಂದೂಕನ್ನು ಗುರಿಮಾಡಿ, ನಮ್ಮ ಕಾರನ್ನು ನಿಲ್ಲಿಸಿ, ನಾವು ಎಲ್ಲಿಗೆ ಹೋಗುತ್ತಿದ್ದೇವೆಂದು ತಿಳಿಯಲು ಒತ್ತಯಾಪಡಿಸಿ ಕೇಳಿದನು. ನಾನು ಆಗ ಕೇವಲ ಒಂದು ಶಿಶು ಆಗಿದ್ದೆ ಮತ್ತು ಆ್ಯನ್ಥಿ ಐದು ವರ್ಷದವಳಾಗಿದ್ದಳು. ಸೈನಿಕನಿಗೆ ನಮ್ಮ ಬೈಬಲುಗಳನ್ನು ಮತ್ತು ಸಾಹಿತ್ಯಗಳನ್ನು ತೋರಿಸುತ್ತಾ, ತಂದೆಯವರು ಶಾಂತವಾಗಿ ವಿವರಿಸಿದಾಗ, ಹೋಗುವಂತೆ ಅವನು ನಮ್ಮನ್ನು ಬಿಟ್ಟನು.
ಇಸವಿ 1967 ರಲ್ಲಿ, ಯುಗಾಂಡದಲ್ಲಿ ಸುಮಾರು ಎಂಟು ವರ್ಷಗಳಿದ್ದ ತರುವಾಯ, ಆರೋಗ್ಯ ಸಮಸ್ಯೆಗಳು ಮತ್ತು ಕುಟುಂಬದ ಜವಾಬ್ದಾರಿಗಳ ಕಾರಣದಿಂದ ಅಮೆರಿಕಕ್ಕೆ ಹಿಂದಿರುಗಲು ನಮ್ಮ ಹೆತ್ತವರು ತೀರ್ಮಾನಿಸಿದರು. ನಾವು, ತಂದೆಯವರು ಒಬ್ಬ ಹಿರಿಯರಾಗಿ ಸೇವೆಮಾಡಿದ ಓಹೈಯೊವಿನ ಕ್ಯಾನ್ಫೀಲ್ಡ್ ಸಭೆಯ ಭಾಗವಾದೆವು. ಅಲ್ಲಿ ನನ್ನ ಹೆತ್ತವರು, ಕಂಪಾಲದಲ್ಲಿದ್ದ ಆ ಚಿಕ್ಕ ಸಭೆಯನ್ನು ಪ್ರೀತಿಸಿದಂತೆಯೇ ಈ ಸಹೋದರರನ್ನು ಅಕ್ಕರೆಯಿಂದ ಪ್ರೀತಿಸುವವರಾದರು.
ಪ್ರೀತಿಯ ಕ್ರೈಸ್ತೋಚಿತ ಪಾಲನೆ
ಇಸವಿ 1971 ರಲ್ಲಿ ನನ್ನ ತಮ್ಮ ಡೇವಿಡ್ ಜನಿಸಿದನು. ನಾವು ಬೆಳೆದಂತೆ, ಪ್ರೀತಿ ಮತ್ತು ಆದರಣೆಯಿಂದ ತುಂಬಿದ್ದ ಒಂದು ಮನೆಯ ವಾತಾವರಣದಲ್ಲಿ ನಾವು ಪೋಷಿಸಲ್ಪಟ್ಟೆವು. ಇದು ನಿಸ್ಸಂದೇಹವಾಗಿ ನಮ್ಮ ಹೆತ್ತವರು ಒಬ್ಬರು ಇನ್ನೊಬ್ಬರೊಂದಿಗೆ ಆನಂದಿಸಿದ ಪ್ರೀತಿಯ ಸಂಬಂಧದಿಂದ ಹುಟ್ಟಿತು.
ನಾವು ಎಳೆಯರಾಗಿದ್ದಾಗ, ಮಲಗುವ ಸಮಯದಲ್ಲಿ ತಂದೆಯವರು ಯಾವಾಗಲೂ ಒಂದು ಬೈಬಲ್ ಕಥೆಯನ್ನು ನಮಗಾಗಿ ಓದಿ, ಪ್ರಾರ್ಥಿಸಿ, ಮತ್ತು ತದನಂತರ ತಾಯಿಗೆ ತಿಳಿಯದ ಹಾಗೆ ಮಿರುಗುವ ಸುವರ್ಣ ಹಾಳೆಯಲ್ಲಿ ಸುತ್ತಿರುವ ಚಾಕೊಲೆಟನ್ನು ನಮಗೆ ಕೊಡುತ್ತಿದ್ದರು. ನಾವು ಎಲ್ಲೇ ಇರಲಿ ಕಾವಲಿನಬುರುಜು ಪತ್ರಿಕೆಯನ್ನು ಯಾವಾಗಲೂ ಒಂದು ಕುಟುಂಬದಂತೆ ಒಟ್ಟಿಗೆ ಅಭ್ಯಸಿಸಿದೆವು. ಕುಟುಂಬವಾಗಿ ರಜೆಗಳನ್ನು ಆನಂದಿಸುತ್ತಿದ್ದಾಗ, ನಾವು ಅದನ್ನು ಒಮ್ಮೆ ಬೆಟ್ಟದ ಪಕ್ಕದಲ್ಲಿ, ಇನ್ನೊಂದು ಸಂದರ್ಭದಲ್ಲಿ ಸಾಗರದ ಎದುರಿಗೆ ಅಭ್ಯಸಿಸಿದೆವು. ಅವು ತಮ್ಮ ಅತ್ಯಂತ ಸಂತೋಷಮಯ ನೆನಪುಗಳಲ್ಲಿ ಕೆಲವಾಗಿದವ್ದೆಂದು ತಂದೆಯವರು ಅನೇಕವೇಳೆ ಹೇಳಿದರು. ಒಂದು ಕುಟುಂಬ ಅಭ್ಯಾಸವು ತರಬಲ್ಲ ಮಹಾ ಆನಂದವನ್ನು ಪಡೆಯದೇ ಹೋಗುವವರಿಗಾಗಿ ಅವರು ಮರುಗಿದರೆಂದು ಹೇಳಿದರು.
ಯೆಹೋವನಿಗೆ ಪ್ರೀತಿಯನ್ನು ತೋರಿಸುವ ವಿಷಯದಲ್ಲಿ ತಂದೆಯವರು ಉದಾಹರಣೆಯ ಮೂಲಕ ಕಲಿಸಿದರು. ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಯ ಒಂದು ಹೊಸ ಪ್ರತಿ ಬಂದಾಗಲೆಲ್ಲಾ, ಅಥವಾ ನಾವು ಮತ್ತೊಂದು ಕಾವಲಿನಬುರುಜು ಪ್ರಕಾಶನವನ್ನು ಪಡೆದಾಗೆಲ್ಲಾ, ತಂದೆಯವರು ಆತುರದಿಂದ ಇಡೀ ಪ್ರಕಾಶನವನ್ನು ಓದುತ್ತಿದ್ದರು. ಬೈಬಲ್ ಸತ್ಯವನ್ನು ಲಘುವಾಗಿ ಎಣಿಸದೆ, ಒಂದು ಅಮೂಲ್ಯ ನಿಧಿಯಂತೆ ವೀಕ್ಷಿಸಬೇಕೆಂದು ನಾವು ಅವರಿಂದ ಕಲಿತೆವು. ನಮ್ಮ ಅತ್ಯಂತ ಅಮೂಲ್ಯ ಸ್ವತ್ತುಗಳಲ್ಲಿ ಒಂದು, ತಂದೆಯವರ ರೆಫರೆನ್ಸ್ ಬೈಬಲ್ ಆಗಿದೆ. ಕಾರ್ಯತಃ ಪ್ರತಿಯೊಂದು ಪುಟವು ಅವರ ಅಧ್ಯಯನಗಳಿಂದ ಆಯುತ್ದೆಗೆದ ಟಿಪ್ಪಣಿಗಳಿಂದ ಆವರಿಸಲ್ಪಟ್ಟಿದೆ. ಅಂಚಿನಲ್ಲಿ ಬರೆದ ಅವರ ಹೇಳಿಕೆಗಳನ್ನು ನಾವು ಈಗ ಓದುವಾಗ, ಅವರು ನಮಗೆ ಕಲಿಸುತ್ತಾ, ಸಲಹೆ ನೀಡುತ್ತಾ ಇರುವುದನ್ನು ನಾವು ಈಗಲೂ ಬಹುಮಟ್ಟಿಗೆ ಕೇಳಸಾಧ್ಯವಿದೆ.
ಕೊನೆಯ ವರೆಗೆ ನಂಬಿಗಸ್ತರು
ಇಸವಿ 1991ರ ಮೇ 16 ರಂದು, ಹೊರಗೆ ಕ್ಷೇತ್ರ ಶುಶ್ರೂಷೆಯಲ್ಲಿದ್ದಾಗ ತಂದೆಯವರಿಗೆ ಹೃದಯಾಪಘಾತವಾಯಿತು. ವಾರಗಳ ನಂತರ, ಸಫಲವೆಂದು ತೋರಿಬಂದ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಅವರಿಗೆ ಮಾಡಲಾಯಿತು. ಹಾಗಿದ್ದರೂ, ಶಸ್ತ್ರಚಿಕಿತ್ಸೆಯನ್ನು ಹಿಂಬಾಲಿಸಿದ ರಾತ್ರಿಯಂದು, ಆಸ್ಪತ್ರೆಯಿಂದ ಒಂದು ಫೋನ್ ಕರೆಯು ನಮಗೆ ಬಂತು. ತಂದೆಯವರಿಗೆ ರಕ್ತಸ್ರಾವವಾಗುತ್ತಿತ್ತು, ಮತ್ತು ವೈದ್ಯರು ಬಹಳ ಚಿಂತಿತರಾಗಿದ್ದರು. ರಕ್ತಸ್ರಾವವನ್ನು ನಿಲ್ಲಿಸಲು ಪ್ರಯತ್ನಿಸುತ್ತಾ, ಆ ರಾತ್ರಿ ಶಸ್ತ್ರಚಿಕಿತ್ಸೆಯನ್ನು ಮಾಡಲು ಅವರನ್ನು ಎರಡು ಬಾರಿ ಕೊಂಡೊಯ್ಯಲಾಯಿತು, ಆದರೆ ಯಾವ ಪ್ರಯೋಜನವೂ ಆಗಲಿಲ್ಲ. ತಂದೆಯವರ ರಕ್ತ ಹೆಪ್ಪುಗಟ್ಟುತ್ತಿರಲಿಲ್ಲ.
ಮರುದಿನ ತಂದೆಯವರ ಪರಿಸ್ಥಿತಿ ತೀವ್ರವಾಗಿ ವಿಷಮಗೊಂಡಂತೆ, ತಂದೆಯವರಿಗಾಗಿ ಒಂದು ರಕ್ತ ಪೂರಣಕ್ಕೆ ಒಪ್ಪಿಗೆ ಕೊಡುವಂತೆ ಅವರ ಮೇಲೆ ಒತ್ತಡವನ್ನು ಹಾಕಲು, ವೈದ್ಯರು ಮೊದಲು ನನ್ನ ತಾಯಿಯೊಂದಿಗೆ ಮತ್ತು ನಂತರ ನನ್ನ ತಮ್ಮನೊಂದಿಗೆ ಖಾಸಗಿಯಾಗಿ ಮಾತಾಡಿದರು. ಆದರೂ ಈ ಹಿಂದೆಯೇ ತಂದೆಯವರು, ಯಾವುದೇ ಪರಿಸ್ಥಿತಿಯ ಕೆಳಗೆ ತಾವು ಒಂದು ರಕ್ತ ಪೂರಣವನ್ನು ಸ್ವೀಕರಿಸಲಾರೆನೆಂದು ವೈದ್ಯರಿಗೆ ಹೇಳಿದ್ದರು. ರಕ್ತವನ್ನು ನಿರಾಕರಿಸುವುದಕ್ಕಾಗಿ ತಮ್ಮ ಶಾಸ್ತ್ರೀಯ ಕಾರಣಗಳನ್ನು ಅವರಿಗೆ ವಿವರಿಸಿದರು, ಆದರೆ ರಕ್ತರಹಿತ ಬದಲಿಗಳನ್ನು ಸ್ವೀಕರಿಸುವೆನೆಂದು ಅವರು ಹೇಳಿದರು.—ಯಾಜಕಕಾಂಡ 17:13, 14; ಅ. ಕೃತ್ಯಗಳು 15:28, 29.
ವೈದ್ಯಕೀಯ ಸಿಬ್ಬಂದಿಯ ಹಲವಾರು ಸದಸ್ಯರ ವತಿಯಿಂದ ತೋರಿಸಲ್ಪಟ್ಟ ದ್ವೇಷವು, ಐಸಿಯು (ಇಂಟೆನ್ಸಿವ್ ಕೇರ್ ಯುನಿಟ್) ನಲ್ಲಿ ಬಹಳ ಬಿಗುಪಾದ ವಾತಾವರಣವನ್ನು ಸೃಷ್ಟಿಸಿತು. ಇದರೊಟ್ಟಿಗೆ ತಂದೆಯವರ ಕೆಡುತ್ತಾ ಇದ್ದ ಪರಿಸ್ಥಿತಿಯು ಕೆಲವೊಮ್ಮೆ ನಾವು ಸಹಿಸಸಾಧ್ಯವಿರುವುದಕ್ಕಿಂತ ಹೆಚ್ಚಾಗಿ ತೋರಿತು. ಸಹಾಯಕ್ಕಾಗಿ ನಾವು ಯೆಹೋವನ ಮೊರೆಹೋದೆವು ಮತ್ತು ನಾವು ಪಡೆದಿದ್ದ ಪ್ರಾಯೋಗಿಕ ಸಲಹೆಗಳನ್ನು ಅನ್ವಯಿಸಲು ಸಹ ಪ್ರಯತ್ನಿಸಿದೆವು. ಆದುದರಿಂದ ಐಸಿಯುಗೆ ಭೇಟಿ ನೀಡುವಾಗ, ನಾವು ಯಾವಾಗಲೂ ಚೆನ್ನಾಗಿ ಉಡುಪು ಧರಿಸಿಕೊಂಡಿರುತ್ತಿದ್ದೆವು ಮತ್ತು ವೈದ್ಯಕೀಯ ಸಿಬ್ಬಂದಿಯ ಕಡೆಗೆ ಗೌರವಪೂರ್ಣವಾಗಿ ಇರುತ್ತಿದೆವ್ದು. ಅರ್ಥಭರಿತ ಪ್ರಶ್ನೆಗಳನ್ನು ಕೇಳುವ ಮೂಲಕ ತಂದೆಯವರ ಪರಿಸ್ಥಿತಿಯಲ್ಲಿ ನಾವು ಸಕ್ರಿಯ ಆಸಕ್ತಿಯನ್ನು ವಹಿಸಿದೆವು, ಮತ್ತು ತಂದೆಯವರ ಆರೈಕೆಯಲ್ಲಿ ಒಳಗೊಂಡ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯನಿಗೆ ಉಪಕಾರ ಹೇಳಿದೆವು.
ನಮ್ಮ ಪ್ರಯತ್ನಗಳು ವೈದ್ಯಕೀಯ ಸಿಬ್ಬಂದಿಯ ಗಮನಕ್ಕೆ ಬಾರದೆ ಹೋಗಲಿಲ್ಲ. ಕೆಲವೇ ದಿನಗಳಲ್ಲಿ ಬಿಗುಪಾದ ವಾತಾವರಣವು ದಯಾಪರ ವಾತಾವರಣಕ್ಕೆ ಮಾರ್ಪಟ್ಟಿತು. ತಂದೆಯವರ ಆರೈಕೆ ಮಾಡಿದ ದಾದಿಗಳು ಇನ್ನು ಮುಂದೆ ಅವರ ಆರೈಕೆ ಮಾಡುವಂತೆ ನೇಮಿಸಲ್ಪಡದಿದ್ದರೂ, ತಂದೆಯವರ ಪ್ರಗತಿಯ ಪರಿಶೀಲನೆಯನ್ನು ಮಾಡುತ್ತಿದ್ದರು. ನಮ್ಮ ಕಡೆಗೆ ಬಹಳ ಒರಟಾಗಿದ್ದ ಒಬ್ಬ ವೈದ್ಯನು, ತಾಯಿಯನ್ನು ಅವರು ಹೇಗೆ ನಿಭಾಯಿಸುತ್ತಿದ್ದಾರೆ ಎಂದು ಕೇಳುವ ಮಟ್ಟಕ್ಕೆ ಮೃದುವಾದನು. ನಮ್ಮ ಸಭೆ ಮತ್ತು ಸಂಬಂಧಿಕರು ಕೂಡ ನಮ್ಮನ್ನು ಪ್ರೀತಿಯಿಂದ ಬೆಂಬಲಿಸಿದರು. ಅವರು ಆಹಾರವನ್ನು ಮತ್ತು ಅನೇಕ ಸಂತೈಸುವ ಕಾರ್ಡುಗಳನ್ನು ಕಳುಹಿಸಿದರು ಮತ್ತು ನಮ್ಮ ಪರವಾಗಿ ಪ್ರಾರ್ಥಿಸಿದರು.
ದುಃಖಕರವಾಗಿ ತಂದೆಯವರು ಚಿಕಿತ್ಸಾಕ್ರಮಕ್ಕೆ ಪ್ರತಿಕ್ರಿಯಿಸಲೇ ಇಲ್ಲ. ತಮ್ಮ ಪ್ರಥಮ ಶಸ್ತ್ರಚಿಕಿತ್ಸೆಯ ಹತ್ತು ದಿನಗಳ ಬಳಿಕ ಅವರು ತೀರಿಹೋದರು. ತಂದೆಯವರಿಗಾಗಿ ನಾವು ಆಳವಾಗಿ ದುಃಖಿಸುತ್ತೇವೆ. ಕೆಲವೊಮ್ಮೆ ನಷ್ಟದ ಅನಿಸಿಕೆಗಳು ಪೂರ್ತಿ ಕಂಗೆಡಿಸಿಬಿಡುತ್ತವೆ. ಸುಯೋಗದಿಂದ, ಆತನು ‘ಪ್ರತಿದಿನವೂ ನಮಗಾಗಿ ಹೊರೆಯನ್ನು ಹೊತ್ತುಕೊಳ್ಳುವನು,’ ಎಂದು ನಮ್ಮ ದೇವರು ವಾಗ್ದಾನಿಸುತ್ತಾನೆ ಮತ್ತು ನಾವು ಹಿಂದೆಂದಿಗಿಂತಲೂ ಈಗ ಆತನ ಮೇಲೆ ಆತುಕೊಳ್ಳಲು ಕಲಿತಿದ್ದೇವೆ.—ಕೀರ್ತನೆ 68:19.
ತಂದೆಯವರನ್ನು ಹೊಸ ಲೋಕದಲ್ಲಿ ನೋಡುವ ಆನಂದ ನಮಗಿರುವುದರಿಂದ, ನಾವು ಸಹ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುವುದನ್ನು ಮುಂದುವರಿಸುವೆವೆಂದು ನಾವೆಲ್ಲರು ದೃಢ ನಿಶ್ಚಯ ಮಾಡಿದ್ದೇವೆ.—ಮಾರ್ಕ 5:41, 42; ಯೋಹಾನ 5:28; ಅ. ಕೃತ್ಯಗಳು 24:15.
[ಪುಟ 21 ರಲ್ಲಿರುವ ಚಿತ್ರ]
ಕೇಪ್ ಟೌನ್ನಲ್ಲಿ, ತನ್ನ ತಾಯಿ ಫಿಲಿಸ್ಳೊಂದಿಗೆ ಫ್ರ್ಯಾಂಕ್ ಸ್ಮಿತ್
[ಪುಟ 22 ರಲ್ಲಿರುವ ಚಿತ್ರ]
ತಮ್ಮ ಮದುವೆಯ ಸಮಯದಲ್ಲಿ ತಂದೆ ಮತ್ತು ತಾಯಿ
[ಪುಟ 23 ರಲ್ಲಿರುವ ಚಿತ್ರ]
ಎನ್ಟೆಬಿಯಲ್ಲಿ ನಡೆದ ಪ್ರಥಮ ದೀಕ್ಷಾಸ್ನಾನಕ್ಕೆ, ಸಹೋದರರು ಒಬ್ಬ ಆಫ್ರಿಕನ್ ಮುಖ್ಯಸ್ಥನ ಕೊಳವನ್ನು ಬಾಡಿಗೆಗೆ ತೆಗೆದುಕೊಂಡರು
[ಪುಟ 23 ರಲ್ಲಿರುವ ಚಿತ್ರ]
ಸಾಂಪ್ರದಾಯಿಕ ವಿಧದಲ್ಲಿ ವಂದಿಸುವುದು
[ಪುಟ 24 ರಲ್ಲಿರುವ ಚಿತ್ರ]
ತಂದೆಯವರ ಮರಣದ ಸ್ವಲ್ಪ ಮುಂಚಿತವಾಗಿ ತಂದೆ ಮತ್ತು ತಾಯಿ