ರಾಜ್ಯ ಘೋಷಕರು ವರದಿ ಮಾಡುತ್ತಾರೆ
“ನಿನ್ನ ಎಲ್ಲಾ ಆಜ್ಞೆಗಳು ಸತ್ಯವಾಗಿವೆ”
ಮೋಶೆಯು, ತನ್ನ ಮರಣಕ್ಕೆ ಸ್ವಲ್ಪ ಮುಂಚೆ, ಯೆಹೋವನ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗುವಂತೆ ಇಸ್ರಾಯೇಲಿನ ಜನರಿಗೆ ಎಚ್ಚರಿಕೆ ನೀಡಿದನು. ಅವನು ಹೇಳಿದ್ದು: “ನಾನು ಈಗ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳಿರಿ, ಮತ್ತು ನಿಮ್ಮ ಸಂತತಿಯವರಿಗೆ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸರಿಸಬೇಕೆಂದು ಆಜ್ಞಾಪಿಸಿರಿ. ಇದು ನಿರರ್ಥಕವೆಂದು ಭಾವಿಸಬಾರದು; ಇದರಿಂದ ನೀವು ಬಾಳುವಿರಿ.”—ಧರ್ಮೋಪದೇಶಕಾಂಡ 32:46, 47.
ನೂರಾರು ವರ್ಷಗಳ ನಂತರ, “ಯೆಹೋವನೇ, ನೀನು ಹತ್ತಿರವೇ ಇದ್ದೀ, ಹಾಗೂ ನಿನ್ನ ಎಲ್ಲಾ ಆಜ್ಞೆಗಳು ಸತ್ಯವಾಗಿವೆ” ಎಂಬುದಾಗಿ ಕೀರ್ತನೆಗಾರನು ಹೇಳಿದಾಗ, ಅವನು ದೇವರ ಎಲ್ಲಾ ಬೋಧನೆಗಳ ಪ್ರಮುಖತೆಯನ್ನು ಎತ್ತಿಹೇಳಿದನು. (ಕೀರ್ತನೆ 119:151, NW) ಪ್ರಥಮ ಶತಮಾನದಲ್ಲಿ, ಸ್ವತಃ ಯೇಸು “ದೇವರ [“ಯೆಹೋವನ,” NW] ಬಾಯಿಂದ ಹೊರಡುವ ಪ್ರತಿಯೊಂದು ಮಾತಿ”ನ ಮೌಲ್ಯಕ್ಕೆ ನಿರ್ದೇಶಿಸಿದನು. (ಮತ್ತಾಯ 4:4) ಮತ್ತು ದೇವರ ನಿರ್ದೇಶನದ ಕೆಳಗೆ ಅಪೊಸ್ತಲ ಪೌಲನು, “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು . . . ಉಪಯುಕ್ತವಾಗಿದೆ” ಎಂದು ಬರೆದನು.—2 ತಿಮೊಥೆಯ 3:16.
ಸ್ಪಷ್ಟವಾಗಿಯೇ, ಯೆಹೋವ ದೇವರು ತನ್ನ ವಾಕ್ಯದ ಪುಟಗಳಲ್ಲಿ ನಮಗೆ ತಿಳಿಯಪಡಿಸಿರುವ ಸಂಪೂರ್ಣ ಸಂದೇಶಕ್ಕೆ ತನ್ನ ಆರಾಧಕರು ಗಂಭೀರವಾದ ಪರಿಗಣನೆಯನ್ನು ಕೊಡುವಂತೆ ನಿರೀಕ್ಷಿಸುತ್ತಾನೆ. ಬೈಬಲಿನಲ್ಲಿ ಮೌಲ್ಯದ ಕೊರತೆಯುಳ್ಳ ಒಂದೇ ಒಂದು ಭಾಗವೂ ಇಲ್ಲ. ಮರೀಷಸ್ನಿಂದ ಬಂದಂತಹ ಕೆಳಗಿನ ಅನುಭವದಿಂದ ದೃಷ್ಟಾಂತಿಸಲ್ಪಟ್ಟಂತೆ, ಯೆಹೋವನ ಸಾಕ್ಷಿಗಳು ದೇವರ ವಾಕ್ಯದ ಕುರಿತಾಗಿ ಭಾವಿಸುವುದು ಹೀಗೆಯೇ.
ಶ್ರೀ. ಡಿ—— ಎಂಬುವನು ಬಹುದೂರದ ಗ್ರಾಮೀಣ ಹಳ್ಳಿಯೊಂದರಲ್ಲಿ ವಾಸಿಸಿದ್ದನು; ಅಲ್ಲಿ ಅವನು ಒಬ್ಬ ರಾತ್ರಿ ಕಾವಲುಗಾರನಾಗಿದ್ದನು. ಬಹಳ ದೀರ್ಘ ಸಮಯದಂದಿನಿಂದ, ಅವನು ದೇವರನ್ನು ಆರಾಧಿಸಲಿಕ್ಕಾಗಿರುವ ಸೂಕ್ತವಾದ ಮಾರ್ಗಕ್ಕಾಗಿ ಪ್ರಾಮಾಣಿಕವಾಗಿ ಅನ್ವೇಷಿಸುತ್ತಿದ್ದನು. ರಾತ್ರಿಯಲ್ಲಿ ತನ್ನ ಕಾವಲಿನ ಕೆಲಸ ಮಾಡುತ್ತಿರುವಾಗ, ಅವನು ಬೈಬಲನ್ನು ಓದಲಾರಂಭಿಸಿದನು. ಸಕಾಲದಲ್ಲಿ, ಅವನು ಇಡೀ ಬೈಬಲನ್ನು ಓದಿದ್ದನು. ಯೆಹೋವ—ಅವನ ಹಿಂದಿ ಭಾಷೆಯ ಬೈಬಲಿನಲ್ಲಿ ಅನೇಕ ಬಾರಿ ಕಂಡುಬರುವ ಒಂದು ಹೆಸರು—ಎಂಬುದು ದೇವರ ಹೆಸರಾಗಿದೆ ಎಂದು ಅವನು ಕಲಿತನು. ಅವನು ಪ್ರಕಟನೆ ಪುಸ್ತಕವನ್ನು ವಿಶೇಷವಾಗಿ ಆಕರ್ಷಕವಾದುದಾಗಿ ಕಂಡುಕೊಂಡನು.
ತದನಂತರ, ಬೈಬಲನ್ನು ಅದರ ಸಂಪೂರ್ಣತೆಯಲ್ಲಿ ಹಿಂಬಾಲಿಸಿದ ಒಂದು ಧರ್ಮವು ಇತ್ತೋ ಎಂದು ಅವನು ಸ್ವತಃ ಕೇಳಿಕೊಂಡನು. ಅವನಿಗೆ ಪರಿಚಯವಿದ್ದ ಧರ್ಮಗಳು, ಅತ್ಯಂತ ಅನುಕೂಲಕರವಾದ ಪರಿಸ್ಥಿತಿಗಳ ಕೆಳಗೆ, ಬೈಬಲಿನ ಕೇವಲ ಕೆಲವೊಂದು ಭಾಗಗಳನ್ನು ಅನುಸರಿಸುತ್ತಿದ್ದವು ಎಂಬುದನ್ನು ಅವನು ಗಮನಿಸಿದನು. ಕೆಲವು ಧರ್ಮಗಳು ಹೀಬ್ರು ಶಾಸ್ತ್ರವಚನಗಳನ್ನು ಅಂಗೀಕರಿಸಿ, ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳನ್ನು ತಿರಸ್ಕರಿಸಿದವು. ಇತರ ಧರ್ಮಗಳು, ಕೇವಲ ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಿಗೆ ಪ್ರಾಯೋಗಿಕ ಮೌಲ್ಯವಿದೆಯೆಂದು ಹೇಳುತ್ತಾ, ಹೀಬ್ರು ಶಾಸ್ತ್ರವಚನಗಳನ್ನು ಅಲಕ್ಷ್ಯಮಾಡುತ್ತಿದ್ದವು.
ಒಂದು ದಿನ ಒಬ್ಬ ವಿವಾಹಿತ ದಂಪತಿಗಳು ಮಳೆಯಲ್ಲಿ ನೆನೆಯುತ್ತಿರುವುದನ್ನು ಶ್ರೀ. ಡಿ—— ಕಂಡನು ಮತ್ತು ತನ್ನ ಮನೆಯಲ್ಲಿ ಆಶ್ರಯವನ್ನು ಕಂಡುಕೊಳ್ಳುವಂತೆ ಅವರನ್ನು ಆಮಂತ್ರಿಸಿದನು. ಅವರು ಯೆಹೋವನ ಸಾಕ್ಷಿಗಳಾಗಿದ್ದರು. ಆ ಹೆಂಡತಿಯು, ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಎಂಬ ಪುಸ್ತಕವನ್ನು ಹಿಡಿದುಕೊಂಡಿದ್ದಳು.a ಆ ಕೂಡಲೆ ಶ್ರೀ. ಡಿ—— ಅವರ ಬಳಿ ಆ ಪುಸ್ತಕಕ್ಕಾಗಿ ಕೇಳಿಕೊಂಡನು. ಪ್ರಕಟನೆಯ ಪ್ರವಾದನೆಯ ಕುರಿತಾದ ವಿಷಯವು ಅವನಿಗೆ ಗ್ರಹಿಸಿಕೊಳ್ಳಲು ತೀರ ಕಷ್ಟಕರವಾಗಿದೆಯೆಂದು ಆ ಸಾಕ್ಷಿಗಳು ಭಾವಿಸಿದರು, ಆದುದರಿಂದ ಅದಕ್ಕೆ ಬದಲಾಗಿ ಇನ್ನೊಂದು ಪ್ರಕಾಶನವನ್ನು ಅವರು ಅವನಿಗೆ ನೀಡಿದರು. ಆದರೆ ಶ್ರೀ. ಡಿ—— ಪ್ರಕಟನೆ ಪುಸ್ತಕವನ್ನು ಪಡೆದುಕೊಳ್ಳಲಿಕ್ಕಾಗಿ ಪಟ್ಟುಹಿಡಿದನು.
ತನ್ನ ಪ್ರತಿಯನ್ನು ಅವನು ಪಡೆದುಕೊಂಡಾಗ, ಅವನು ತ್ವರಿತಗತಿಯಲ್ಲಿ ಆ ಪುಸ್ತಕವನ್ನು ಓದಿದನು. ತದನಂತರ ಅವನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಭ್ಯಾಸವನ್ನು ಮಾಡಲು ಒಪ್ಪಿಕೊಂಡನು. ಸಾಕ್ಷಿಗಳು ಇಡೀ ಬೈಬಲನ್ನು ಉಚ್ಚ ಮಾನ್ಯತೆಯಿಂದ ಪರಿಗಣಿಸುತ್ತಾರೆಂಬ ವಾಸ್ತವಾಂಶದಿಂದ ಅವನು ಬೇಗನೆ ಪ್ರಭಾವಿತನಾದನು. ಎಲ್ಲಿ ಹೀಬ್ರು ಶಾಸ್ತ್ರವಚನಗಳನ್ನು ಮತ್ತು ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳನ್ನು—ಎರಡನ್ನೂ—ಜಾಗರೂಕತೆಯಿಂದ ಅಭ್ಯಾಸಿಸಲಾಗುತ್ತದೋ, ಆ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿನ ಕೂಟಗಳಿಗೆ ಅವನು ಕ್ರಮವಾಗಿ ಹಾಜರಾಗಲಾರಂಭಿಸಿದನು. ಈಗ ಅವನು ಒಬ್ಬ ರಾಜ್ಯ ಘೋಷಕನೂ ಕ್ರೈಸ್ತ ಸಭೆಯ ದೀಕ್ಷಾಸ್ನಾನಿತ ಸದಸ್ಯನೂ ಆಗಿದ್ದಾನೆ.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.