‘ನಾನು ಪವಿತ್ರನಾಗಿರುವುದರಿಂದ ನೀವೂ ಪವಿತ್ರರಾಗಿರಬೇಕು’
“ನಿಮ್ಮ ದೇವರಾದ ಯೆಹೋವನೆಂಬ ನಾನು ಪವಿತ್ರನಾಗಿರುವುದರಿಂದ ನೀವೂ ಪವಿತ್ರರಾಗಿರಬೇಕು.”—ಯಾಜಕಕಾಂಡ 19:2, NW.
1. ಲೋಕದಿಂದ ಪವಿತ್ರರಾಗಿ ಪರಿಗಣಿಸಲ್ಪಟ್ಟಿರುವ ಕೆಲವು ಜನರು ಯಾರಾಗಿದ್ದಾರೆ?
ಲೋಕದ ಅಧಿಕಾಂಶ ಪ್ರಮುಖ ಧರ್ಮಗಳಲ್ಲಿ, ಅವು ಯಾರನ್ನು ಪವಿತ್ರರೆಂದು ಪರಿಗಣಿಸುತ್ತವೋ ಅಂತಹವರಿದ್ದಾರೆ. ಭಾರತದ ಪ್ರಸಿದ್ಧಿಯನ್ನು ಪಡೆದಿರುವ ಮದರ್ ತೆರೇಸರನ್ನು—ಅವರು ತಮ್ಮನ್ನು ಬಡವರಿಗಾಗಿ ಮೀಸಲಾಗಿಟ್ಟುಕೊಂಡ ಕಾರಣದಿಂದಾಗಿ—ಅನೇಕವೇಳೆ ಪವಿತ್ರ ಭಾವದಿಂದ ವೀಕ್ಷಿಸಲಾಗುತ್ತದೆ. ಪೋಪನನ್ನು “ಪವಿತ್ರ ತಂದೆ” ಎಂದು ಕರೆಯಲಾಗುತ್ತದೆ. ಆಧುನಿಕ ಕ್ಯಾಥೊಲಿಕ್ ಸಂಘದ ಸ್ಥಾಪಕನಾದ ಓಪುಸ್ ಡೇಈ, ಹೋಸೆ ಮಾರೀಯ ಎಸ್ಕ್ರೀಬಾ, ಕೆಲವು ಕ್ಯಾಥೊಲಿಕರಿಂದ “ಪಾವಿತ್ರ್ಯದ ಮಾದರಿ”ಯಾಗಿ ವೀಕ್ಷಿಸಲ್ಪಡುತ್ತಾನೆ. ಹಿಂದೂಮತದಲ್ಲಿ ಅದರ ಸ್ವಾಮಿಗಳು ಅಥವಾ ಪವಿತ್ರ ಜನರಿದ್ದಾರೆ. ಗಾಂಧಿಯವರು ಪವಿತ್ರ ವ್ಯಕ್ತಿಯೋಪಾದಿ ಪೂಜ್ಯಭಾವದಿಂದ ಕಾಣಲ್ಪಟ್ಟಿದ್ದರು. ಬೌದ್ಧಮತದಲ್ಲಿ ಅದರ ಪವಿತ್ರ ಸಂನ್ಯಾಸಿಗಳಿದ್ದಾರೆ, ಮತ್ತು ಇಸ್ಲಾಮ್ಮತದಲ್ಲಿ ಅದರ ಪವಿತ್ರ ಪ್ರವಾದಿಯಿದ್ದಾನೆ. ಆದರೆ ಪವಿತ್ರರಾಗಿರುವುದು ನಿರ್ದಿಷ್ಟವಾಗಿ ಏನನ್ನು ಅರ್ಥೈಸುತ್ತದೆ?
2, 3. (ಎ) “ಪವಿತ್ರ” ಮತ್ತು “ಪಾವಿತ್ರ್ಯ” ಎಂಬ ಶಬ್ದಗಳು ಏನನ್ನು ಅರ್ಥೈಸುತ್ತವೆ? (ಬಿ) ಉತ್ತರಿಸಲ್ಪಡಬೇಕಾಗಿರುವ ಕೆಲವು ಪ್ರಶ್ನೆಗಳು ಯಾವುವು?
2 “ಪವಿತ್ರ” ಎಂಬ ಶಬ್ದವು ಹೀಗೆ ಅರ್ಥನಿರೂಪಿಸಲ್ಪಟ್ಟಿದೆ, “1. . . . ದೈವಿಕ ಶಕ್ತಿಯೊಂದಿಗೆ ಸಂಬಂಧಿಸಲ್ಪಟ್ಟದ್ದು; ಪರಿಶುದ್ಧ. 2. ಆರಾಧನೆ ಅಥವಾ ಪೂಜ್ಯಭಾವಕ್ಕೆ ಅರ್ಹವಾದದ್ದಾಗಿ ಪರಿಗ್ರಹಿಸಲ್ಪಟ್ಟಿರುವುದು . . . 3. ಕಟ್ಟುನಿಟ್ಟಿನ ಅಥವಾ ಬಹಳ ನೈತಿಕವಾದ ಧಾರ್ಮಿಕ ಅಥವಾ ಆತ್ಮಿಕ ವ್ಯವಸ್ಥೆಗನುಸಾರವಾಗಿ ಜೀವಿಸುತ್ತಿರುವುದು . . . 4. ಒಂದು ಧಾರ್ಮಿಕ ಉದ್ದೇಶಕ್ಕಾಗಿ ನಿಶ್ಚೈಸಿಕೊಂಡಿರುವುದು ಅಥವಾ ಮೀಸಲಾಗಿಟ್ಟುಕೊಂಡಿರುವುದು.” ಬೈಬಲ್ಸಂಬಂಧಿತ ಪೂರ್ವಾಪರ ಭಾಗಗಳಲ್ಲಿ, ಪಾವಿತ್ರ್ಯದ ಅರ್ಥವು “ಧಾರ್ಮಿಕ ಶುದ್ಧತೆ ಅಥವಾ ನಿಷ್ಕಳಂಕತೆ; ಪರಿಶುದ್ಧತೆ”ಯಾಗಿದೆ. ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್ ಎಂಬ ಬೈಬಲ್ ಪರಾಮರ್ಶೆಯ ಕೃತಿಗನುಸಾರವಾಗಿ, “ಕೊಧೇಶ್ ಎಂಬ ಮೂಲ ಹೀಬ್ರು [ಶಬ್ದ]ವು, ಪ್ರತ್ಯೇಕತೆ, ವಿಶಿಷ್ಟತೆ, ಅಥವಾ ದೇವರಿಗೆ ಪವಿತ್ರೀಕರಿಸಿಕೊಳ್ಳುವಿಕೆ, . . . ದೇವರ ಸೇವೆಗಾಗಿ ಬದಿಗಿರಿಸಿಕೊಂಡಿರುವ ಸ್ಥಿತಿಯ ಅಭಿಪ್ರಾಯವನ್ನು ಕೊಡುತ್ತದೆ.”a
3 ಇಸ್ರಾಯೇಲ್ ಜನಾಂಗವು ಪವಿತ್ರವಾಗಿರುವಂತೆ ಆಜ್ಞಾಪಿಸಲ್ಪಟ್ಟಿತ್ತು. ದೇವರ ನಿಯಮಶಾಸ್ತ್ರವು ಹೇಳಿದ್ದು: “ನಾನು ನಿಮ್ಮ ದೇವರಾದ ಯೆಹೋವನು; ಮತ್ತು ನೀವು ನಿಮ್ಮನ್ನು ಪರಿಶುದ್ಧೀಕರಿಸಿಕೊಳ್ಳಬೇಕು ಮತ್ತು ನೀವು ನಿಮ್ಮನ್ನು ಪವಿತ್ರೀಕರಿಸಿಕೊಳ್ಳಬೇಕು, ಏಕೆಂದರೆ ನಾನು ಪವಿತ್ರನಾಗಿದ್ದೇನೆ.” ಪಾವಿತ್ರ್ಯದ ಮೂಲನು ಯಾರಾಗಿದ್ದನು? ಅಪರಿಪೂರ್ಣರಾದ ಇಸ್ರಾಯೇಲ್ಯರು ಹೇಗೆ ಪವಿತ್ರರಾಗಸಾಧ್ಯವಿತ್ತು? ಮತ್ತು ಪಾವಿತ್ರ್ಯಕ್ಕಾಗಿರುವ ಯೆಹೋವನ ಕರೆಯಲ್ಲಿ ಇಂದು ಸ್ವತಃ ನಮಗಾಗಿ ನಾವು ಯಾವ ಪಾಠಗಳನ್ನು ಕಂಡುಕೊಳ್ಳಬಲ್ಲೆವು?—ಯಾಜಕಕಾಂಡ 11:44, NW.
ಇಸ್ರಾಯೇಲ್ ಪಾವಿತ್ರ್ಯದ ಮೂಲನಿಗೆ ಸಂಬಂಧ ಸ್ಥಾಪಿಸಿದ ವಿಧ
4. ಯೆಹೋವನ ಪಾವಿತ್ರ್ಯವು ಇಸ್ರಾಯೇಲ್ನಲ್ಲಿ ಹೇಗೆ ದೃಷ್ಟಾಂತಿಸಲ್ಪಟ್ಟಿತ್ತು?
4 ಇಸ್ರಾಯೇಲ್ನ ಯೆಹೋವ ದೇವರ ಆರಾಧನೆಗೆ ಸಂಬಂಧಿಸಿದ ಎಲ್ಲಾ ವಿಷಯವು, ಪವಿತ್ರವಾಗಿ ಪರಿಗಣಿಸಲ್ಪಡಬೇಕಾಗಿತ್ತು ಮತ್ತು ಹಾಗೆಯೇ ಉಪಚರಿಸಲ್ಪಡಬೇಕಾಗಿತ್ತು. ಅದು ಹಾಗೇಕೆ? ಏಕೆಂದರೆ ಯೆಹೋವನು ತಾನೇ ಪಾವಿತ್ರ್ಯದ ಆರಂಭವೂ ಮೂಲನೂ ಆಗಿದ್ದಾನೆ. ಪವಿತ್ರ ಆರಾಧನಾಲಯ ಮತ್ತು ಬಲಿಪೀಠದ ವಸ್ತ್ರಗಳು ಹಾಗೂ ಅಲಂಕಾರಗಳ ತಯಾರಿಯ ಕುರಿತಾದ ಮೋಶೆಯ ವೃತ್ತಾಂತವು, ಈ ಮಾತುಗಳಿಂದ ಮುಕ್ತಾಯಗೊಳಿಸಲ್ಪಡುತ್ತದೆ: “ಅಂತಿಮವಾಗಿ ಅವರು ಚೊಕ್ಕ ಬಂಗಾರದಿಂದ, ಸಮರ್ಪಣೆಯ ಪವಿತ್ರ ಸಂಕೇತವಾದ ಹೊಳೆಯುವ ಫಲಕವನ್ನು ಮಾಡಿದರು ಮತ್ತು ಒಂದು ಮುದ್ರೆಯ ಕೆತ್ತನೆಯೊಂದಿಗೆ ಅದರ ಮೇಲೆ ಈ ರೀತಿ ಕೆತ್ತಿದರು: ‘ಪಾವಿತ್ರ್ಯವು ಯೆಹೋವನಿಗೆ ಸೇರಿದೆ.’” (NW) ಚೊಕ್ಕ ಬಂಗಾರದ ಈ ಹೊಳೆಯುವ ಫಲಕವು, ಮಹಾಯಾಜಕನ ಮುಂಡಾಸಿಗೆ ಬಿಗಿಯಲ್ಪಟ್ಟಿತು, ಮತ್ತು ಇದು ಅವನು ವಿಶೇಷ ಪಾವಿತ್ರ್ಯದ ಸೇವೆಗಾಗಿ ಮೀಸಲಾಗಿರಿಸಲ್ಪಟ್ಟಿದ್ದಾನೆಂಬುದನ್ನು ವ್ಯಕ್ತಪಡಿಸಿತು. ಕೆತ್ತಲ್ಪಟ್ಟ ಈ ಸೂಚನೆಯು ಸೂರ್ಯನ ಬೆಳಕಿನಲ್ಲಿ ಪ್ರಕಾಶಿಸುತ್ತಿರುವುದನ್ನು ಇಸ್ರಾಯೇಲ್ಯರು ಪ್ರತ್ಯಕ್ಷವಾಗಿ ನೋಡಿದಂತೆ, ಅವರು ಯೆಹೋವನ ಪಾವಿತ್ರ್ಯದ ಕುರಿತಾಗಿ ಕ್ರಮವಾಗಿ ಮರುಜ್ಞಾಪಿಸಲ್ಪಟ್ಟರು.—ವಿಮೋಚನಕಾಂಡ 28:36; 29:6; 39:30.
5. ಅಪರಿಪೂರ್ಣರಾದ ಇಸ್ರಾಯೇಲ್ಯರನ್ನು ಹೇಗೆ ಪವಿತ್ರರಾಗಿ ಪರಿಗಣಿಸಲ್ಪಡಸಾಧ್ಯವಿತ್ತು?
5 ಆದರೆ ಇಸ್ರಾಯೇಲ್ಯರು ಹೇಗೆ ಪವಿತ್ರರಾಗಸಾಧ್ಯವಿತ್ತು? ಕೇವಲ ಯೆಹೋವನೊಂದಿಗಿನ ತಮ್ಮ ಆಪ್ತ ಸಂಬಂಧ ಹಾಗೂ ಆತನಿಗೆ ಸಲ್ಲಿಸುವ ತಮ್ಮ ಶುದ್ಧ ಆರಾಧನೆಯ ಮೂಲಕವಾಗಿಯೇ. “ಅತಿ ಪವಿತ್ರನಾದಾತ”ನನ್ನು ಪಾವಿತ್ರ್ಯದಿಂದ, ಶಾರೀರಿಕ ಹಾಗೂ ಆತ್ಮಿಕ ಶುದ್ಧತೆಯಲ್ಲಿ ಆರಾಧಿಸಲಿಕ್ಕಾಗಿ, ಅವರಿಗೆ ಆತನ ಕುರಿತಾದ ನಿಷ್ಕೃಷ್ಟ ಜ್ಞಾನದ ಅಗತ್ಯವಿತ್ತು. (ಜ್ಞಾನೋಕ್ತಿ 2:1-6; 9:10, NW) ಆದುದರಿಂದ ಇಸ್ರಾಯೇಲ್ಯರು ದೇವರನ್ನು ಒಂದು ಶುದ್ಧ ಹೇತುವಿನೊಂದಿಗೆ ಹಾಗೂ ಶುದ್ಧ ಹೃದಯದಿಂದ ಆರಾಧಿಸಬೇಕಿತ್ತು. ಆರಾಧನೆಯ ಯಾವುದೇ ಕಪಟ ರೂಪವು ಯೆಹೋವನಿಗೆ ಅಸಹ್ಯಕರವಾದದ್ದಾಗಿರುವುದು.—ಜ್ಞಾನೋಕ್ತಿ 21:27.
ಯೆಹೋವನು ಇಸ್ರಾಯೇಲನ್ನು ಬಹಿರಂಗವಾಗಿ ಖಂಡಿಸಿದ ಕಾರಣ
6. ಮಲಾಕಿಯನ ದಿನದಲ್ಲಿನ ಯೆಹೂದ್ಯರು ಯೆಹೋವನ ಮೇಜನ್ನು ಹೇಗೆ ಉಪಚರಿಸಿದರು?
6 ಇಸ್ರಾಯೇಲ್ಯರು ಅರೆಮನಸ್ಸಿನಿಂದ ಕಳಪೆಯಾದ, ದೋಷಯುಕ್ತ ಯಜ್ಞಗಳನ್ನು ದೇವಾಲಯಕ್ಕೆ ತರುತ್ತಿದ್ದಾಗ, ಇದು ಸ್ಪಷ್ಟವಾಗಿ ದೃಷ್ಟಾಂತಿಸಲ್ಪಟ್ಟಿತು. ಯೆಹೋವನು ತನ್ನ ಪ್ರವಾದಿಯಾದ ಮಲಾಕಿಯನ ಮೂಲಕ ಅವರ ನಿಕೃಷ್ಟ ಅರ್ಪಣೆಗಳನ್ನು ಬಹಿರಂಗವಾಗಿ ಖಂಡಿಸಿದನು: “ನಾನು ನಿಮಗೆ ಮೆಚ್ಚೆನು, ನಿಮ್ಮ ಕೈಯಿಂದ ನೈವೇದ್ಯವನ್ನು ಸ್ವೀಕರಿಸೆನು; ಇದು ಸೇನಾಧೀಶ್ವರ ಯೆಹೋವನ ನುಡಿ. . . . ನೀವೋ—ಯೆಹೋವನ ಮೇಜು ಅಶುದ್ಧ, ಅದರ ಮೇಲಣ ಎಡೆಯು ತುಚ್ಛ ಅಂದುಕೊಳ್ಳುವದರಿಂದ ನನ್ನ ನಾಮವನ್ನು ಅಪಕೀರ್ತಿಗೆ ಗುರಿಮಾಡಿದ್ದೀರಿ. ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ—ಅಯ್ಯೋ, [ಈ ಸೇವೆಯು] ಎಷ್ಟೋ ಬೇಸರವೆಂದು ನೀವು ಅಂದುಕೊಂಡು ಅದನ್ನು ಛೀಗುಟ್ಟುತ್ತೀರಿ; ಕಳವಿನ ಪಶುವನ್ನೂ ಕುಂಟಾದದ್ದನ್ನೂ ರೋಗಿಯಾದದ್ದನ್ನೂ ತಂದೊಪ್ಪಿಸುತ್ತೀರಿ; ಇಂಥ ನೈವೇದ್ಯವನ್ನು ತಂದೊಪ್ಪಿಸುತ್ತಿರುವಲ್ಲಿ ನಾನು ಅದನ್ನು ನಿಮ್ಮ ಕೈಯಿಂದ ಸ್ವೀಕರಿಸಲೋ; ಇದು ಯೆಹೋವನ ನುಡಿ.”—ಮಲಾಕಿಯ 1:10, 12, 13.
7. ಸಾ.ಶ.ಪೂ. ಐದನೆಯ ಶತಮಾನದಲ್ಲಿ, ಯಾವ ಅಪವಿತ್ರ ಕ್ರಿಯೆಗಳನ್ನು ಯೆಹೂದ್ಯರು ಕೈಕೊಳ್ಳುತ್ತಿದ್ದರು?
7 ಬಹುಶಃ ಸಾ.ಶ.ಪೂ. ಐದನೆಯ ಶತಮಾನದ ಸಮಯದಲ್ಲಿ, ಯೆಹೂದ್ಯರ ಸುಳ್ಳು ಪದ್ಧತಿಗಳನ್ನು ಬಹಿರಂಗವಾಗಿ ಖಂಡಿಸಲಿಕ್ಕಾಗಿ, ಮಲಾಕಿಯನು ದೇವರಿಂದ ಉಪಯೋಗಿಸಲ್ಪಟ್ಟನು. ಆ ಯಾಜಕರು ನ್ಯೂನ ಮಾದರಿಯನ್ನು ಇಡುತ್ತಿದ್ದರು, ಮತ್ತು ಅವರ ನಡವಳಿಕೆಯು ನಿಶ್ಚಯವಾಗಿಯೂ ಪವಿತ್ರವಾಗಿರಲಿಲ್ಲ. ಜನರು ಆ ಮುಂದಾಳುತ್ವವನ್ನು ಅನುಸರಿಸುತ್ತಾ, ದೈವಿಕ ಮೂಲತತ್ವಗಳಿಗೆ ಅಂಟಿಕೊಳ್ಳಲಿಲ್ಲ—ಬಹುಶಃ ತಾವು ಇನ್ನೂ ಚಿಕ್ಕಪ್ರಾಯದ ವಿಧರ್ಮಿ ಹೆಂಡತಿಯರನ್ನು ಪಡೆದುಕೊಳ್ಳಸಾಧ್ಯವಾಗುವಂತೆ, ಅವರು ತಮ್ಮ ಹೆಂಡತಿಯರನ್ನು ವಿವಾಹವಿಚ್ಛೇದ ಮಾಡುವ ಹಂತಕ್ಕೂ ತಲಪಿದ್ದರು. ಮಲಾಕಿಯನು ಬರೆದುದು: “ನಿನಗೂ ನಿನ್ನ ಯೌವನದ ಹೆಂಡತಿಗೂ ಆದ ಒಡಂಬಡಿಕೆಗೆ ಯೆಹೋವನೇ ಸಾಕ್ಷಿಯಾಗಿದ್ದಾನಲ್ಲಾ. ನಿನ್ನ ಸಹಚಾರಿಣಿಯೂ ನಿನ್ನ ಒಡಂಬಡಿಕೆಯ ಪತ್ನಿಯೂ ಆದ ಆಕೆಗೆ ದ್ರೋಹಮಾಡಿದ್ದೀ [“ದ್ರೋಹದಿಂದ ವ್ಯವಹರಿಸಿದ್ದೀ,” NW].b . . . ಹೀಗಿರಲು ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ, ಯಾವನೂ ತನ್ನ ಯೌವನದ ಪತ್ನಿಗೆ ದ್ರೋಹಮಾಡದಿರಲಿ [“ದ್ರೋಹದಿಂದ ವ್ಯವಹರಿಸದಿರಲಿ,” NW]. ಇಸ್ರಾಯೇಲಿನ ದೇವರಾದ ಯೆಹೋವನು ಇಂತೆನ್ನುತ್ತಾನೆ—ನಾನು ಪತ್ನೀತ್ಯಾಗವನ್ನೂ [“ವಿವಾಹವಿಚ್ಛೇದ ಮಾಡುವಿಕೆಯನ್ನು,” NW] . . . ಹಗೆಮಾಡುತ್ತೇನೆ.”—ಮಲಾಕಿಯ 2:14-16.
8. ವಿವಾಹವಿಚ್ಛೇದದ ಕುರಿತಾದ ಆಧುನಿಕ ನೋಟದಿಂದ, ಕ್ರೈಸ್ತ ಸಭೆಯಲ್ಲಿರುವ ಕೆಲವರು ಹೇಗೆ ಬಾಧಿಸಲ್ಪಟ್ಟಿದ್ದಾರೆ?
8 ಆಧುನಿಕ ಸಮಯಗಳಲ್ಲಿ, ವಿವಾಹವಿಚ್ಛೇದವನ್ನು ಸುಲಭವಾಗಿ ಪಡೆದುಕೊಳ್ಳಸಾಧ್ಯವಿರುವ ಅನೇಕ ದೇಶಗಳಲ್ಲಿ, ವಿವಾಹವಿಚ್ಛೇದದ ಪ್ರಮಾಣವು ಗಗನಕ್ಕೇರಿದೆ. ಕ್ರೈಸ್ತ ಸಭೆಯೂ ಇದರಿಂದ ಬಾಧಿಸಲ್ಪಟ್ಟಿದೆ. ವಿಘ್ನಗಳನ್ನು ಜಯಿಸಲಿಕ್ಕಾಗಿ ಹಾಗೂ ತಮ್ಮ ವಿವಾಹವನ್ನು ಯಶಸ್ವಿಗೊಳಿಸಲಿಕ್ಕಾಗಿ ಹಿರಿಯರ ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸುವುದಕ್ಕೆ ಬದಲಾಗಿ, ಕೆಲವರು ತಮ್ಮ ಸಂಗಾತಿಗೆ ವಿವಾಹವಿಚ್ಛೇದ ನೀಡಿದ್ದಾರೆ. ಅನೇಕವೇಳೆ ಮಕ್ಕಳು ಅತ್ಯಧಿಕ ಭಾವನಾತ್ಮಕ ಮೌಲ್ಯವನ್ನು ತೆರುವಂತೆ ಬಿಡಲ್ಪಡುತ್ತಾರೆ.—ಮತ್ತಾಯ 19:8, 9.
9, 10. ಯೆಹೋವನಿಗೆ ಸಲ್ಲಿಸುವ ನಮ್ಮ ಆರಾಧನೆಯ ಮೇಲೆ ನಾವು ಹೇಗೆ ಚಿಂತನೆ ಮಾಡಬೇಕು?
9 ನಾವು ಈ ಹಿಂದೆ ಗಮನಿಸಿದಂತೆ, ಮಲಾಕಿಯನ ದಿನದಲ್ಲಿನ ಶೋಚನೀಯ ಆತ್ಮಿಕ ಸ್ಥಿತಿಯ ದೃಷ್ಟಿಯಲ್ಲಿ, ಯೆಹೋವನು ಯೆಹೂದದ ಗಾಢಾಸಕ್ತಿಯಿಲ್ಲದ ಆರಾಧನೆಯನ್ನು ಮುಚ್ಚುಮರೆಯಿಲ್ಲದೆ ಖಂಡಿಸಿದನು ಮತ್ತು ತಾನು ಶುದ್ಧ ಆರಾಧನೆಯನ್ನು ಮಾತ್ರ ಸ್ವೀಕರಿಸುವೆನೆಂಬುದನ್ನು ತೋರಿಸಿದನು. ಇದು ನಮ್ಮನ್ನು ವಿಶ್ವದ ಪರಮಾಧಿಕಾರಿ ಕರ್ತನೂ, ನಿಜ ಪಾವಿತ್ರ್ಯದ ಮೂಲನೂ ಆಗಿರುವ ಯೆಹೋವ ದೇವರಿಗೆ ನಾವು ಸಲ್ಲಿಸುವ ನಮ್ಮ ಆರಾಧನೆಯ ಗುಣಮಟ್ಟದ ಮೇಲೆ ಚಿಂತನೆ ಮಾಡುವಂತೆ ಪ್ರಚೋದಿಸಬಾರದೊ? ನಾವು ನಿಜವಾಗಿಯೂ ದೇವರಿಗೆ ಪವಿತ್ರ ಸೇವೆಯನ್ನು ಅರ್ಪಿಸುತ್ತಿದ್ದೇವೊ? ನಾವು ನಮ್ಮನ್ನು ಆತ್ಮಿಕವಾಗಿ ಸ್ವಚ್ಛವಾದ ಒಂದು ಸ್ಥಿತಿಯಲ್ಲಿ ಇರಿಸಿಕೊಳ್ಳುತ್ತೇವೊ?
10 ಇದು ಯಾವುದು ಅಸಾಧ್ಯವಾಗಿದೆಯೊ ಆ ವಿಷಯವನ್ನು—ನಾವು ಪರಿಪೂರ್ಣರಾಗಿರಬೇಕು, ಅಥವಾ ನಾವು ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಬೇಕು ಎಂಬುದನ್ನು ಅರ್ಥೈಸುವುದಿಲ್ಲ. ಬದಲಾಗಿ ಪ್ರತಿಯೊಬ್ಬ ಕ್ರೈಸ್ತನೂ ವ್ಯಕ್ತಿಪರ ಸನ್ನಿವೇಶದೊಳಗೆ ಅವನ ಅಥವಾ ಅವಳ ಅತ್ಯುತ್ತಮವಾದ ಆರಾಧನೆಯನ್ನು ದೇವರಿಗೆ ಸಲ್ಲಿಸುತ್ತಿರಬೇಕು ಎಂಬುದನ್ನು ಇದು ಅರ್ಥೈಸುತ್ತದೆ. ಇದು ನಮ್ಮ ಆರಾಧನೆಯ ಗುಣಮಟ್ಟಕ್ಕೆ ನಿರ್ದೇಶಿಸುತ್ತದೆ. ನಮ್ಮ ಪರಿಶುದ್ಧ ಸೇವೆಯು ನಮ್ಮಿಂದಾದಷ್ಟು ಅತ್ಯುತ್ತಮವಾದ ಪವಿತ್ರ ಸೇವೆಯಾಗಿರಬೇಕು. ಅದು ಹೇಗೆ ಪೂರೈಸಲ್ಪಡುತ್ತದೆ?—ಲೂಕ 16:10; ಗಲಾತ್ಯ 6:3, 4.
ಶುದ್ಧ ಹೃದಯಗಳು ಶುದ್ಧ ಆರಾಧನೆಗೆ ಮುನ್ನಡಿಸುತ್ತವೆ
11, 12. ಅಪವಿತ್ರ ನಡವಳಿಕೆಯು ಎಲ್ಲಿಂದ ಹುಟ್ಟುತ್ತದೆ?
11 ಹೃದಯದಲ್ಲಿ ಏನಿದೆಯೋ ಅದು ಒಬ್ಬ ವ್ಯಕ್ತಿಯು ಏನು ಹೇಳುತ್ತಾನೋ ಹಾಗೂ ಮಾಡುತ್ತಾನೋ ಅದರಿಂದ ವ್ಯಕ್ತವಾಗುವುದೆಂದು ಯೇಸು ಸ್ಪಷ್ಟವಾಗಿ ಕಲಿಸಿದನು. ಸ್ವನೀತಿವಂತರಾದರೂ ಅಪವಿತ್ರರಾದ ಫರಿಸಾಯರಿಗೆ ಯೇಸು ಹೇಳಿದ್ದು: “ಸರ್ಪಜಾತಿಯವರೇ, ನೀವು ಕೆಟ್ಟವರಾಗಿರಲಾಗಿ ಒಳ್ಳೆಯ ಮಾತುಗಳನ್ನಾಡುವದಕ್ಕೆ ನಿಮ್ಮಿಂದ ಹೇಗಾದೀತು? ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು.” ಹೃದಯದಲ್ಲಿ, ಅಥವಾ ಆಂತರಿಕ ವ್ಯಕ್ತಿಯಲ್ಲಿರುವ ದುಷ್ಟ ಆಲೋಚನೆಗಳಿಂದ, ದುಷ್ಟ ಕೃತ್ಯಗಳು ಹೊರಉಕ್ಕುತ್ತವೆಂಬುದನ್ನು ತದನಂತರ ಅವನು ತೋರಿಸಿದನು. ಅವನು ಹೇಳಿದ್ದು: “ಬಾಯೊಳಗಿಂದ ಹೊರಡುವಂಥವುಗಳು ಮನಸ್ಸಿನೊಳಗಿಂದ ಬರುತ್ತವೆ; ಇವೇ ಮನುಷ್ಯನನ್ನು ಹೊಲೆಮಾಡುವವು. ಹೇಗಂದರೆ ಮನಸ್ಸಿನೊಳಗಿಂದ ಕೆಟ್ಟ ಆಲೋಚನೆ ಕೊಲೆ ಹಾದರ ಸೂಳೆಗಾರಿಕೆ ಕಳ್ಳತನ ಸುಳ್ಳುಸಾಕ್ಷಿ ಬೈಗಳು ಹೊರಟು ಬರುತ್ತವೆ. ಮನುಷ್ಯನನ್ನು ಕೆಡಿಸುವಂಥವುಗಳು ಇವೇ.”—ಮತ್ತಾಯ 12:34; 15:18-20.
12 ಅಪವಿತ್ರ ಕೃತ್ಯಗಳು ಕೇವಲ ಸ್ವಪ್ರೇರಣೆಯವುಗಳು ಅಥವಾ ಪೂರ್ವಾಧಾರವಿಲ್ಲದವುಗಳಾಗಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ. ಇವು ಹೃದಯದಲ್ಲಿ ಗುಪ್ತವಾಗಿ ಅಡಗಿರುವ—ರಹಸ್ಯಮಯವಾದ ಅಪೇಕ್ಷೆಗಳು ಮತ್ತು ಭ್ರಾಂತಿಗಳಾಗಿರಬಹುದು—ಕಲುಷಿತಗೊಳಿಸುವ ಆಲೋಚನೆಗಳ ಫಲಿತಾಂಶವಾಗಿವೆ. ಆದುದರಿಂದಲೇ ಯೇಸು ಹೀಗೆ ಹೇಳಸಾಧ್ಯವಾಯಿತು: “ವ್ಯಭಿಚಾರ ಮಾಡಬಾರದೆಂದು ಹೇಳಿಯದೆ ಎಂಬದಾಗಿ ನೀವು ಕೇಳಿದ್ದೀರಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ—ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.” ಬೇರೆ ಮಾತುಗಳಲ್ಲಿ ಹೇಳುವುದಾದರೆ, ಯಾವುದೇ ಕೃತ್ಯವು ಸಂಭವಿಸುವುದಕ್ಕೆ ಮೊದಲೇ, ಹೃದಯದಲ್ಲಿ ಜಾರತ್ವ ಮತ್ತು ವ್ಯಭಿಚಾರಗಳು ಈಗಾಗಲೇ ಬೇರೂರಿರುತ್ತವೆ. ತದನಂತರ, ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಸಂದರ್ಭವು ತಾನೇ ಅನುಮತಿಸುವಾಗ, ಅಪವಿತ್ರ ಆಲೋಚನೆಗಳು ಅಪವಿತ್ರ ನಡವಳಿಕೆಯಾಗಿ ಪರಿಣಮಿಸುತ್ತವೆ. ಜಾರತ್ವ, ವ್ಯಭಿಚಾರ, ಪುರುಷಮೈಥುನ, ಕಳ್ಳತನ, ದೇವದೂಷಣೆಗಳು, ಮತ್ತು ಧರ್ಮಭ್ರಷ್ಟತೆಗಳು, ಸುವ್ಯಕ್ತವಾದ ಫಲಿತಾಂಶಗಳಲ್ಲಿ ಕೆಲವು ಫಲಿತಾಂಶಗಳಾಗಿ ಪರಿಣಮಿಸುತ್ತವೆ.—ಮತ್ತಾಯ 5:27, 28; ಗಲಾತ್ಯ 5:19-21.
13. ಅಪವಿತ್ರ ಆಲೋಚನೆಗಳು ಅಪವಿತ್ರ ಕೃತ್ಯಗಳಿಗೆ ಮುನ್ನಡಿಸಸಾಧ್ಯವಿರುವ ವಿಧದ ಕುರಿತಾಗಿರುವ ಕೆಲವು ಉದಾಹರಣೆಗಳು ಯಾವುವು?
13 ಇದನ್ನು ಹಲವಾರು ವಿಧಗಳಲ್ಲಿ ದೃಷ್ಟಾಂತಿಸಸಾಧ್ಯವಿದೆ. ಕೆಲವು ದೇಶಗಳಲ್ಲಿ, ಜೂಜುಗೃಹಗಳು ಅಣಬೆಗಳಂತೆ ಉದ್ಭವಿಸುತ್ತಾ, ಹೀಗೆ ಜೂಜಾಡುವ ಅವಕಾಶವನ್ನು ಹೆಚ್ಚಿಸುತ್ತಿವೆ. ಒಬ್ಬನ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದಿಂದ ಒಬ್ಬನು ಈ ಮಿಥ್ಯ ಪರಿಹಾರವನ್ನು ಅವಲಂಬಿಸುವಂತೆ ಶೋಧನೆಗೊಳಪಡಿಸಲ್ಪಡಬಹುದು. ವಂಚನಾತ್ಮಕ ಪರ್ಯಾಲೋಚನೆಯು, ತನ್ನ ಬೈಬಲ್ ಮೂಲತತ್ವಗಳನ್ನು ನಿರಾಕರಿಸುವಂತೆ ಅಥವಾ ಸಮನ್ವಯಿಸಿಕೊಳ್ಳುವಂತೆ ಒಬ್ಬ ಸಹೋದರನನ್ನು ಪ್ರಚೋದಿಸಬಹುದು.c ಇನ್ನೊಂದು ಉದಾಹರಣೆಯಲ್ಲಿ, ಟಿವಿ, ವಿಡಿಯೋಗಳು, ಕಂಪ್ಯೂಟರ್ಗಳ ಮೂಲಕವೊ ಪುಸ್ತಕಗಳ ಮೂಲಕವೊ ಲಂಪಟ ಸಾಹಿತ್ಯಕ್ಕೆ ನಡೆಸುವ ಸುಲಭ ಮಾರ್ಗವು, ಕ್ರೈಸ್ತನೊಬ್ಬನನ್ನು ಅಪವಿತ್ರ ನಡವಳಿಕೆಯೊಳಗೆ ಮುನ್ನಡಿಸಸಾಧ್ಯವಿದೆ. ಅವನು ತನ್ನ ಆತ್ಮಿಕ ರಕ್ಷಾಕವಚವನ್ನು ಮಾತ್ರವೇ ಅಸಡ್ಡೆಮಾಡುವ ಅಗತ್ಯವಿದೆ, ಮತ್ತು ಅವನು ಅದನ್ನು ಅರಿಯುವ ಮೊದಲೇ ಅವನು ಅನೈತಿಕತೆಯೊಳಗೆ ಸಿಕ್ಕಿಬಿದ್ದಿದ್ದಾನೆ. ಆದರೆ ಅಧಿಕಾಂಶ ವಿದ್ಯಮಾನಗಳಲ್ಲಿ ಪಾಪದೊಳಕ್ಕೆ ಜಾರುವುದು ಮನಸ್ಸಿನಲ್ಲಿ ಆರಂಭವಾಗುತ್ತದೆ. ಹೌದು, ಇವುಗಳಂತಹ ಸನ್ನಿವೇಶಗಳಲ್ಲಿ, ಯಾಕೋಬನ ಮಾತುಗಳು ನೆರವೇರಿಸಲ್ಪಡುತ್ತವೆ: “ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ. ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ.”—ಯಾಕೋಬ 1:14, 15; ಎಫೆಸ 6:11-18.
14. ಅನೇಕರು ತಮ್ಮ ಅಪವಿತ್ರ ನಡವಳಿಕೆಯಿಂದ ಹೇಗೆ ಚೇತರಿಸಿಕೊಂಡಿದ್ದಾರೆ?
14 ಸಂತೋಷಕರವಾಗಿಯೇ, ಬಲಹೀನತೆಯಿಂದ ಪಾಪಮಾಡುವ ಅನೇಕ ಕ್ರೈಸ್ತರು ಪಶ್ಚಾತ್ತಾಪವನ್ನು ತೋರಿಸುತ್ತಾರೆ, ಮತ್ತು ಅಂತಹವರನ್ನು ಹಿರಿಯರು ಆತ್ಮಿಕವಾಗಿ ಪುನಸ್ಸ್ಥಾಪಿಸಲು ಶಕ್ತರಾಗಿದ್ದಾರೆ. ಪಶ್ಚಾತ್ತಾಪದ ಕೊರತೆಯ ಕಾರಣದಿಂದ ಬಹಿಷ್ಕರಿಸಲ್ಪಟ್ಟಿರುವ ಅನೇಕರು ಸಹ, ಕ್ರಮೇಣವಾಗಿ ತಮ್ಮ ಅವಿವೇಕದ ಅರಿವುಳ್ಳವರಾಗಿ, ಸಭೆಗೆ ಪುನಸ್ಸ್ಥಾಪಿಸಲ್ಪಟ್ಟಿದ್ದಾರೆ. ಹೃದಯದಲ್ಲಿ ಅಪವಿತ್ರ ಆಲೋಚನೆಗಳು ಬೇರೂರುವಂತೆ ತಾವು ಅನುಮತಿಸಿದಾಗ, ಸೈತಾನನು ತಮ್ಮನ್ನು ಹೇಗೆ ಸುಲಭವಾಗಿ ಸಿಕ್ಕಿಬೀಳಿಸುತ್ತಾನೆಂಬುದನ್ನು ಅವರು ಗ್ರಹಿಸತೊಡಗುತ್ತಾರೆ.—ಗಲಾತ್ಯ 6:1; 2 ತಿಮೊಥೆಯ 2:24-26; 1 ಪೇತ್ರ 5:8, 9.
ಪಂಥಾಹ್ವಾನ—ನಮ್ಮ ಬಲಹೀನತೆಗಳನ್ನು ಎದುರಿಸುವುದು
15. (ಎ) ನಾವು ನಮ್ಮ ಬಲಹೀನತೆಗಳನ್ನು ಏಕೆ ಎದುರಿಸಬೇಕು? (ಬಿ) ನಮ್ಮ ಬಲಹೀನತೆಗಳನ್ನು ಒಪ್ಪಿಕೊಳ್ಳುವಂತೆ ಯಾವುದು ನಮಗೆ ಸಹಾಯ ಮಾಡಬಲ್ಲದು?
15 ನಮ್ಮ ಸ್ವಂತ ಹೃದಯವನ್ನು ವಾಸ್ತವಿಕವಾಗಿ ತಿಳಿದುಕೊಳ್ಳಲಿಕ್ಕಾಗಿ ನಾವು ಪ್ರಯತ್ನವನ್ನು ಮಾಡಬೇಕು. ನಾವು ನಮ್ಮ ಬಲಹೀನತೆಗಳನ್ನು ಎದುರಿಸಿ, ಅವುಗಳನ್ನು ಒಪ್ಪಿಕೊಂಡು, ತದನಂತರ ಅವುಗಳನ್ನು ನಿಗ್ರಹಿಸುವುದಕ್ಕಾಗಿ ಕಾರ್ಯನಡಿಸಲು ನಾವು ಸಿದ್ಧಮನಸ್ಕರಾಗಿದ್ದೇವೊ? ನಿಷ್ಕಪಟಿಯಾದ ಸ್ನೇಹಿತನೊಬ್ಬನ ಬಳಿ, ನಾವು ಹೇಗೆ ಉತ್ತಮಗೊಳ್ಳಸಾಧ್ಯವಿದೆ ಎಂದು ಕೇಳಲು ಹಾಗೂ ತದನಂತರ ಅವನ ಬುದ್ಧಿವಾದಕ್ಕೆ ಕಿವಿಗೊಡಲು ನಾವು ಸಿದ್ಧಮನಸ್ಕರಾಗಿದ್ದೇವೊ? ಪವಿತ್ರರಾಗಿ ಉಳಿಯಲು ನಾವು ನಮ್ಮ ಕುಂದುಕೊರತೆಗಳನ್ನು ಜಯಿಸಲೇಬೇಕು. ಏಕೆ? ಸೈತಾನನು ನಮ್ಮ ಬಲಹೀನತೆಗಳನ್ನು ತಿಳಿದುಕೊಂಡಿರುವುದರಿಂದಲೇ. ನಮ್ಮನ್ನು ಪಾಪ ಹಾಗೂ ಅಪವಿತ್ರ ನಡವಳಿಕೆಯೊಳಗೆ ಉದ್ರೇಕಿಸಲಿಕ್ಕಾಗಿ, ಅವನು ತನ್ನ ಕುಶಾಗ್ರ ಒಳಸಂಚುಗಳನ್ನು ಉಪಯೋಗಿಸುವನು. ಅವನ ಕುಟಿಲ ಕೃತ್ಯಗಳ ಮೂಲಕ, ನಾವು ಇನ್ನುಮುಂದೆ ಪವಿತ್ರೀಕರಿಸಲ್ಪಡದಂತೆ ಹಾಗೂ ಯೆಹೋವನ ಆರಾಧನೆಗಾಗಿ ಉಪಯುಕ್ತರಾಗದಂತೆ, ಅವನು ನಮ್ಮನ್ನು ದೇವರ ಪ್ರೀತಿಯಿಂದ ಪ್ರತ್ಯೇಕಿಸಲು ಪ್ರಯತ್ನಿಸುತ್ತಾನೆ.—ಯೆರೆಮೀಯ 17:9; ಎಫೆಸ 6:11; ಯಾಕೋಬ 1:19.
16. ಪೌಲನಿಗೆ ಯಾವ ಹೋರಾಟವಿತ್ತು?
16 ರೋಮಾಪುರದವರಿಗೆ ಬರೆದ ತನ್ನ ಪತ್ರದಲ್ಲಿ ಅಪೊಸ್ತಲ ಪೌಲನು ಸಾಕ್ಷ್ಯನೀಡಿರುವಂತೆ, ಅವನಿಗೆ ತನ್ನದೇ ಆದ ಪರಿಶೋಧನೆಗಳು ಹಾಗೂ ಪರೀಕ್ಷೆಗಳು ಇದ್ದವು: “ನನ್ನಲ್ಲಿ ಅಂದರೆ ನನ್ನ ಶರೀರಾಧೀನಸ್ವಭಾವದಲ್ಲಿ ಒಳ್ಳೇದೇನೂ ವಾಸವಾಗಿಲ್ಲವೆಂದು ನನಗೆ ತಿಳಿದದೆ. ಒಳ್ಳೇದನ್ನು ಮಾಡುವದಕ್ಕೆ ನನಗೇನೋ ಮನಸ್ಸುಂಟು; ಆದರೆ ಅದನ್ನು ಮಾಡುವದು ನನ್ನಿಂದಾಗದು. ನಾನು ಮೆಚ್ಚುವ ಒಳ್ಳೇ ಕಾರ್ಯವನ್ನು ಮಾಡದೆ ಮೆಚ್ಚದಿರುವ ಕೆಟ್ಟ ಕಾರ್ಯವನ್ನೇ ಮಾಡುವವನಾಗಿದ್ದೇನೆ. . . . ನಾನು ಒಳಗೆ ಹೇಗಿದ್ದೇನೋ ಆ [ಆತ್ಮಿಕ] ಪುರುಷನಿಗನುಸಾರ ದೇವರ ನಿಯಮದಲ್ಲಿ ನಿಜವಾಗಿಯೂ ಹರ್ಷಿಸುತ್ತೇನೆ. ಆದರೆ ನನ್ನ ಅಂಗಗಳಲ್ಲಿ ಬೇರೊಂದು ನಿಯಮ ಉಂಟೆಂದು ನೋಡುತ್ತೇನೆ. ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರುದ್ಧವಾಗಿ ಕಾದಾಡಿ ನನ್ನನ್ನು ಸೆರೆಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ವಶಮಾಡುವಂಥದಾಗಿದೆ.”—ರೋಮಾಪುರ 7:18-23, NW.
17. ಬಲಹೀನತೆಗಳೊಂದಿಗಿನ ತನ್ನ ಹೆಣಗಾಟದಲ್ಲಿ, ಪೌಲನು ಹೇಗೆ ಜಯಶೀಲನಾಗಿ ಹೊರಬಂದನು?
17 ಈಗ ಪೌಲನ ವಿದ್ಯಮಾನದಲ್ಲಿನ ಅತ್ಯಾವಶ್ಯಕ ಅಂಶವು, ಅವನು ತನ್ನ ಬಲಹೀನತೆಗಳನ್ನು ಒಪ್ಪಿಕೊಂಡದ್ದಾಗಿದೆ. ಅವುಗಳ ಹೊರತಾಗಿಯೂ, ಅವನು ಹೀಗೆ ಹೇಳಸಾಧ್ಯವಿತ್ತು: “ನಾನು ಒಳಗೆ ಹೇಗಿದ್ದೇನೋ ಆ [ಆತ್ಮಿಕ] ಪುರುಷನಿಗನುಸಾರ ದೇವರ ನಿಯಮದಲ್ಲಿ ನಿಜವಾಗಿಯೂ ಹರ್ಷಿಸುತ್ತೇನೆ.” ಪೌಲನು ಯಾವುದು ಒಳ್ಳೆಯದಾಗಿತ್ತೊ ಅದನ್ನು ಪ್ರೀತಿಸಿದನು ಹಾಗೂ ಯಾವುದು ಕೆಟ್ಟದ್ದಾಗಿತ್ತೊ ಅದನ್ನು ದ್ವೇಷಿಸಿದನು. ಆದರೆ ಅವನಿಗೆ, ನಮಗೆಲ್ಲರಿಗೂ ಇರುವ ಹೋರಾಟದ—ಸೈತಾನನ, ಲೋಕದ, ಹಾಗೂ ಶರೀರಭಾವದ ವಿರುದ್ಧವಾಗಿ—ರೀತಿಯದ್ದೇ ಆದ ಹೋರಾಟವನ್ನು ನಿಭಾಯಿಸಲಿಕ್ಕಿತ್ತು. ಆದುದರಿಂದ ಈ ಲೋಕದಿಂದ ಹಾಗೂ ಅದರ ಆಲೋಚನೆಯಿಂದ ಪ್ರತ್ಯೇಕಿತರಾಗಿದ್ದು, ಪವಿತ್ರರಾಗಿ ಉಳಿಯುವ ಕದನವನ್ನು ನಾವು ಹೇಗೆ ಗೆಲ್ಲಸಾಧ್ಯವಿದೆ?—2 ಕೊರಿಂಥ 4:4; ಎಫೆಸ 6:12.
ನಾವು ಹೇಗೆ ಪವಿತ್ರರಾಗಿ ಉಳಿಯಬಲ್ಲೆವು?
18. ನಾವು ಹೇಗೆ ಪವಿತ್ರರಾಗಿ ಉಳಿಯಸಾಧ್ಯವಿದೆ?
18 ಅತ್ಯಂತ ಸುಲಭವಾದ ಕ್ರಿಯಾಪಥವನ್ನು ತೆಗೆದುಕೊಳ್ಳುವ ಅಥವಾ ವಿಷಯಲೋಲುಪರಾಗಿರುವ ಮೂಲಕ ಪಾವಿತ್ರ್ಯವು ಸಾಧಿಸಲ್ಪಡುವುದಿಲ್ಲ. ಅಂತಹ ರೀತಿಯ ವ್ಯಕ್ತಿಯು ಯಾವಾಗಲೂ ತನ್ನ ನಡವಳಿಕೆಗಾಗಿ ನೆವನಗಳನ್ನು ಕೊಡುತ್ತಾನೆ ಮತ್ತು ದೋಷಾರೋಪವನ್ನು ಬೇರೆಲ್ಲಿಯಾದರೂ ಹಾಕಲು ಪ್ರಯತ್ನಿಸುತ್ತಾನೆ. ನಾವು ನಮ್ಮ ಕೃತ್ಯಗಳಿಗಾಗಿ ಜವಾಬ್ದಾರರಾಗಲು ಕಲಿಯುವ ಅಗತ್ಯವಿರಬಹುದು ಮತ್ತು ಕುಟುಂಬ ಹಿನ್ನೆಲೆ ಅಥವಾ ಆನುವಂಶೀಯ ಪ್ರವೃತ್ತಿಗಳು ತಮ್ಮ ಕೃತ್ಯಗಳನ್ನು ಪೂರ್ವನಿರ್ಣಯಮಾಡಿವೆಯೆಂದು ಆರೋಪಿಸುವ ಕೆಲವರಂತಿರಬಾರದು. ವಿಷಯದ ಬೇರು, ವ್ಯಕ್ತಿಯೊಬ್ಬನ ಹೃದಯದಲ್ಲಿ ಅಡಗಿದೆ. ಅವನು ಅಥವಾ ಅವಳು ನೀತಿಯನ್ನು ಪ್ರೀತಿಸುತ್ತಾರೊ? ಪಾವಿತ್ರ್ಯಕ್ಕಾಗಿ ಹಂಬಲಿಸುತ್ತಾರೊ? ದೇವರ ಆಶೀರ್ವಾದವನ್ನು ಅಪೇಕ್ಷಿಸುತ್ತಾರೊ? “ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನೇ ಮಾಡು; ಸಮಾಧಾನವನ್ನು ಹಾರೈಸಿ ಅದಕ್ಕಾಗಿ ಪ್ರಯತ್ನಪಡು” ಎಂದು ಕೀರ್ತನೆಗಾರನು ಹೇಳಿದಾಗ, ಅವನು ಪಾವಿತ್ರ್ಯಕ್ಕಾಗಿರುವ ಅಗತ್ಯವನ್ನು ಸ್ಪಷ್ಟಪಡಿಸಿದನು. ಅಪೊಸ್ತಲ ಪೌಲನು ಬರೆದುದು: “ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ. ಕೆಟ್ಟತನಕ್ಕೆ ಹೇಸಿಕೊಂಡು ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ.”—ಕೀರ್ತನೆ 34:14; 97:10; ರೋಮಾಪುರ 12:9.
19, 20. (ಎ) ನಾವು ಹೇಗೆ ನಮ್ಮ ಮನಸ್ಸನ್ನು ಸ್ಥಿರಪಡಿಸಿಕೊಳ್ಳಬಲ್ಲೆವು? (ಬಿ) ಪರಿಣಾಮಕರವಾದ ವೈಯಕ್ತಿಕ ಅಭ್ಯಾಸವು ಏನನ್ನು ಅಗತ್ಯಪಡಿಸುತ್ತದೆ?
19 ನಾವು ವಿಷಯಗಳನ್ನು ಯೆಹೋವನ ದೃಷ್ಟಿಕೋನದಿಂದ ನೋಡುವುದಾದರೆ ಮತ್ತು ನಮ್ಮಲ್ಲಿ ಕ್ರಿಸ್ತನಂತಹ ಮನಸ್ಸಿರುವುದಾದರೆ, ನಾವು “ಒಳ್ಳೇದನ್ನು ಬಿಗಿಯಾಗಿ ಹಿಡಿದು”ಕೊಳ್ಳಬಲ್ಲೆವು. (1 ಕೊರಿಂಥ 2:16) ಇದನ್ನು ಹೇಗೆ ಪೂರೈಸಸಾಧ್ಯವಿದೆ? ದೇವರ ವಾಕ್ಯದ ಕ್ರಮವಾದ ಅಭ್ಯಾಸ ಹಾಗೂ ಅದರ ಮನನಮಾಡುವಿಕೆಯಿಂದಲೇ. ಈ ಸಲಹೆಯು ಎಷ್ಟು ಪದೇ ಪದೇ ಕೊಡಲ್ಪಟ್ಟಿದೆ! ಆದರೆ ನಾವು ಅದನ್ನು ಸಾಕಷ್ಟು ಗಂಭೀರವಾಗಿ ಪರಿಗಣಿಸುತ್ತೇವೊ? ಉದಾಹರಣೆಗಾಗಿ, ನೀವು ಕೂಟಕ್ಕೆ ಬರುವ ಮೊದಲು, ಬೈಬಲ್ ವಚನಗಳನ್ನು ಪರೀಕ್ಷಿಸುತ್ತಾ, ಈ ಪತ್ರಿಕೆಯನ್ನು ನಿಜವಾಗಿಯೂ ಅಭ್ಯಾಸಿಸುತ್ತೀರೊ? ಅಭ್ಯಾಸವೆಂದರೆ, ಪ್ರತಿಯೊಂದು ಪ್ಯಾರಗ್ರಾಫ್ನಲ್ಲಿ ಕೆಲವೊಂದು ವಾಕ್ಸರಣಿಗಳಿಗೆ ಕೇವಲ ಅಡಿಗೆರೆಹಾಕುವುದನ್ನು ನಾವು ಅರ್ಥೈಸುವುದಿಲ್ಲ. ಅಭ್ಯಾಸ ಲೇಖನವೊಂದನ್ನು ಸುಮಾರು 15 ನಿಮಿಷಗಳೊಳಗೆ ಪರಿಶೀಲಿಸಿ, ಅಡಿಗೆರೆಹಾಕಿಬಿಡಸಾಧ್ಯವಿದೆ. ನಾವು ಆ ಲೇಖನವನ್ನು ಅಭ್ಯಾಸಿಸಿದ್ದೇವೆಂಬುದು ಅದರ ಅರ್ಥವಾಗಿದೆಯೊ? ವಾಸ್ತವವಾಗಿ, ಪ್ರತಿಯೊಂದು ಲೇಖನವು ಪ್ರಸ್ತುತಪಡಿಸುವ ಆತ್ಮಿಕ ಪ್ರಯೋಜನವನ್ನು ಅಭ್ಯಾಸಿಸಿ, ಅಂತರ್ಗತಮಾಡಿಕೊಳ್ಳಲು, ಒಂದೆರಡು ತಾಸುಗಳು ತಗಲಬಹುದು.
20 ಪ್ರತಿ ವಾರ ಕೆಲವೊಂದು ತಾಸುಗಳ ವರೆಗೆ ಟಿವಿಯಿಂದ ವಿಮುಖರಾಗಲು ಮತ್ತು ನಮ್ಮ ವೈಯಕ್ತಿಕ ಪಾವಿತ್ರ್ಯದ ಮೇಲೆ ನಿಜವಾಗಿಯೂ ಕೇಂದ್ರೀಕರಿಸಲು, ನಾವು ನಮ್ಮನ್ನು ಶಿಸ್ತುಗೊಳಿಸಿಕೊಳ್ಳುವ ಅಗತ್ಯವಿರಬಹುದು. ನಮ್ಮ ಕ್ರಮವಾದ ಅಭ್ಯಾಸವು, ಸರಿಯಾದ ನಿರ್ಣಯವನ್ನು—“ನಡವಳಿಕೆಯ ಪವಿತ್ರ ಕೃತ್ಯ”ಗಳಿಗೆ ಮುನ್ನಡಿಸುವ ನಿರ್ಣಯಗಳನ್ನು—ಮಾಡುವಂತೆ ಮನಸ್ಸನ್ನು ಪ್ರಚೋದಿಸುವ ಮೂಲಕ, ನಮಗೆ ಆತ್ಮಿಕವಾಗಿ ಭಕ್ತಿವೃದ್ಧಿಯನ್ನುಂಟುಮಾಡುತ್ತದೆ.—2 ಪೇತ್ರ 3:11, NW; ಎಫೆಸ 4:23; 5:15, 16.
21. ಯಾವ ಪ್ರಶ್ನೆಯು ಉತ್ತರಿಸಲ್ಪಡಲಿಕ್ಕಾಗಿ ಉಳಿದಿದೆ?
21 ಈಗ ಪ್ರಶ್ನೆಯೇನಂದರೆ, ಯೆಹೋವನು ಪವಿತ್ರನಾಗಿರುವಂತೆಯೇ, ನಾವು ಕ್ರೈಸ್ತರೋಪಾದಿ ಇನ್ನೂ ಯಾವ ಕಾರ್ಯಕ್ಷೇತ್ರಗಳಲ್ಲಿ ಹಾಗೂ ನಡವಳಿಕೆಯಲ್ಲಿ ಪವಿತ್ರರಾಗಸಾಧ್ಯವಿದೆ? ಜಾಗರೂಕವಾದ ಪರಿಗಣನೆಗೆ ಅರ್ಹವಾಗಿರುವ ಸ್ವಲ್ಪ ವಿಷಯವನ್ನು ಮುಂದಿನ ಲೇಖನವು ಪ್ರಸ್ತುತಪಡಿಸುವುದು.
[ಅಧ್ಯಯನ ಪ್ರಶ್ನೆಗಳು]
a ಈ ಎರಡು ಸಂಪುಟದ ಪರಾಮರ್ಶೆಯ ಕೃತಿಯು, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿದೆ.
b ‘ದ್ರೋಹದಿಂದ’ ಎಂಬುದು ಏನನ್ನು ಅರ್ಥೈಸುತ್ತದೆ ಎಂಬುದರ ಕುರಿತಾದ ಹೆಚ್ಚಿನ ಸಂಪೂರ್ಣ ಪರಿಗಣನೆಗಾಗಿ, ಫೆಬ್ರವರಿ 8, 1994ರ ಅವೇಕ್! ಪತ್ರಿಕೆಯ 21ನೆಯ ಪುಟದಲ್ಲಿರುವ “ದೇವರು ಎಂತಹ ರೀತಿಯ ವಿವಾಹವಿಚ್ಛೇದ ಮಾಡುವಿಕೆಯನ್ನು ದ್ವೇಷಿಸುತ್ತಾನೆ?” ಎಂಬ ವಿಷಯವನ್ನು ನೋಡಿರಿ.
c ಜೂಜಾಟವು ಏಕೆ ಅಪವಿತ್ರ ನಡವಳಿಕೆಯಾಗಿದೆ ಎಂಬುದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿರುವ, ಆಗಸ್ಟ್ 8, 1994ರ ಅವೇಕ್! ಪತ್ರಿಕೆಯ 14-15ನೆಯ ಪುಟಗಳನ್ನು ನೋಡಿರಿ.
ನಿಮಗೆ ನೆನಪಿದೆಯೊ?
◻ ಇಸ್ರಾಯೇಲ್ನಲ್ಲಿ ಪಾವಿತ್ರ್ಯದ ಮೂಲವು ಹೇಗೆ ಗುರುತಿಸಲ್ಪಟ್ಟಿತು?
◻ ಮಲಾಕಿಯನ ದಿನದಲ್ಲಿ, ಇಸ್ರಾಯೇಲ್ಯ ಆರಾಧನೆಯು ಯಾವ ವಿಧಗಳಲ್ಲಿ ಅಪವಿತ್ರವಾಗಿತ್ತು?
◻ ಅಪವಿತ್ರ ನಡವಳಿಕೆಯು ಎಲ್ಲಿ ಆರಂಭವಾಗುತ್ತದೆ?
◻ ಪವಿತ್ರರಾಗಿರಲು, ನಾವು ಏನನ್ನು ಅಂಗೀಕರಿಸಬೇಕು?
◻ ನಾವು ಹೇಗೆ ಪವಿತ್ರರಾಗಿ ಉಳಿಯಬಲ್ಲೆವು?