ಒಂದು ವಿಭಜಿತ ಜಗತ್ತಿನಲ್ಲಿ ಕ್ರೈಸ್ತ ಆತಿಥ್ಯ
“ಆದುದರಿಂದ ನಾವು, ಸತ್ಯದಲ್ಲಿ ಜೊತೆ ಕೆಲಸಗಾರರಾಗಿ ಪರಿಣಮಿಸುವಂತೆ, ಅಂತಹ ವ್ಯಕ್ತಿಗಳನ್ನು ಆದರಾತಿಥ್ಯದಿಂದ ಸ್ವಾಗತಿಸುವ ಹಂಗಿನಲ್ಲಿದ್ದೇವೆ.”—3 ಯೋಹಾನ 8, NW.
1. ಸೃಷ್ಟಿಕರ್ತನು ಮಾನವಕುಲಕ್ಕೆ ಯಾವ ಅತ್ಯಪೇಕ್ಷಣೀಯ ಕೊಡುಗೆಗಳನ್ನು ಕೊಟ್ಟಿದ್ದಾನೆ?
“ಮನುಷ್ಯನು ಅನ್ನಪಾನಗಳನ್ನು ತೆಗೆದುಕೊಂಡು ಸಂತೋಷಪಡುವದಕ್ಕಿಂತ ಅವನಿಗೆ ಲೋಕದಲ್ಲಿ ಇನ್ನಾವ ಮೇಲೂ ಇಲ್ಲ . . . ದೇವರು ಅವನಿಗೆ ಲೋಕದಲ್ಲಿ ಅನುಗ್ರಹಿಸುವ ದಿನಗಳಲ್ಲೆಲ್ಲಾ ಅವನು ಪಡುವ ಪ್ರಯಾಸದಲ್ಲಿ ಸಂತೋಷವೇ ಸೇರಿರುವದು.” (ಪ್ರಸಂಗಿ 8:15) ಆ ಮಾತುಗಳಿಂದ ಹಳೆಯ ಹೀಬ್ರು ಜನಸಂಚಾಯಕನು, ಯೆಹೋವ ದೇವರು ತನ್ನ ಮಾನವ ಸೃಷ್ಟಿಯು ಹರ್ಷಭರಿತವೂ ಸಂತೋಷವುಳ್ಳದ್ದೂ ಆಗಿರಬೇಕೆಂದು ಬಯಸುವುದು ಮಾತ್ರವಲ್ಲ, ಅವರು ಹಾಗಿರುವಂತೆ ಬೇಕಾದ ಸಾಧನವನ್ನೂ ಒದಗಿಸುತ್ತಾನೆಂದು ನಮಗೆ ಹೇಳುತ್ತಾನೆ. ಮಾನವ ಇತಿಹಾಸದಲ್ಲಿಲ್ಲ ಎಲ್ಲ ಕಡೆಗಳಲ್ಲಿರುವ ಜನರ ಮಧ್ಯೆ ಇರುವ ಒಂದು ಸಾಮಾನ್ಯ ಬಯಕೆಯು ಐಷಾರಾಮವಾಗಿದ್ದು ಸಂತೋಷಾನುಭವಿಸುವುದೇ ಎಂದು ತೋರಿಬರುತ್ತದೆ.
2. (ಎ) ಯೆಹೋವನು ತಮಗಾಗಿ ಉದ್ದೇಶಿಸಿದ್ದನ್ನು ಮಾನವಕುಲವು ಹೇಗೆ ದುರುಪಯೋಗಿಸಿದೆ? (ಬಿ) ಫಲಿತಾಂಶವೇನು?
2 ಇಂದು ನಾವು, ಜನರು ಸುಖಾಭಿಲಾಷೆಗಳು ಮತ್ತು ಸುಸಮಯಗಳಲ್ಲಿ ತಲ್ಲೀನರಾಗಿರುವಂತಹ ಸುಖಪ್ರಿಯ ಸಮಾಜದಲ್ಲಿ ಜೀವಿಸುತ್ತೇವೆ. ಹೆಚ್ಚಿನ ಜನರು, ಬೈಬಲು ಮುಂತಿಳಿಸಿರುವಂತೆ, “ಸ್ವಾರ್ಥಚಿಂತಕರು . . . ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ” ಆಗಿದ್ದಾರೆ. (2 ತಿಮೊಥೆಯ 3:1-4) ಇದು ಯೆಹೋವ ದೇವರು ಉದ್ದೇಶಿಸಿರುವುದಕ್ಕೆ ತೀರ ಅಪಾರ್ಥವನ್ನು ಕೊಡುತ್ತದೆ ಎಂಬುದು ನಿಶ್ಚಯ. ಸುಸಮಯಗಳ ಬೆನ್ನಟ್ಟುವಿಕೆಯು ಮುಖ್ಯ ಗುರಿಯಾಗಿ ಪರಿಣಮಿಸುವಾಗ ಅಥವಾ ಆತ್ಮತೃಪ್ತಿಯು ಏಕಮಾತ್ರ ಉದ್ದೇಶವಾಗುವಾಗ, ನಿಜ ಸಂತೃಪ್ತಿಯು ಇಲ್ಲದೆ, ‘ಸಮಸ್ತವೂ ವ್ಯರ್ಥವೂ ಗಾಳಿಯನ್ನು ಹಿಂದಟ್ಟಿದಂತೆಯೂ’ ಆಗುತ್ತದೆ. (ಪ್ರಸಂಗಿ 1:14; 2:11) ಇದರ ಫಲವಾಗಿ, ಜಗತ್ತು ಒಂಟಿಗರೂ ಹತಾಶರೂ ಆದ ಜನರಿಂದ ತುಂಬಿದೆ, ಮತ್ತು ಸರದಿಯಾಗಿ, ಇದು ಸಮಾಜದಲ್ಲಿ ಅನೇಕ ಸಮಸ್ಯೆಗಳಿಗೆ ನಡೆಸುತ್ತದೆ. (ಜ್ಞಾನೋಕ್ತಿ 18:1) ಜನರು ಒಬ್ಬರನ್ನೊಬ್ಬರು ಅನುಮಾನಿಸುವವರಾಗುತ್ತಾರೆ ಮತ್ತು ವಂಶಸಂಬಂಧವಾಗಿ, ಕುಲಸಂಬಂಧವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ವಿಭಜಿತರಾಗುತ್ತಾರೆ.
3. ನಿಜ ಸಂತೋಷ ಮತ್ತು ಸಂತೃಪ್ತಿಯನ್ನು ನಾವು ಹೇಗೆ ಕಂಡುಕೊಳ್ಳಬಲ್ಲೆವು?
3 ಇತರರೊಂದಿಗೆ ವ್ಯವಹರಿಸುವುದರಲ್ಲಿ ಯೆಹೋವನ ಮಾರ್ಗ—ದಯೆ, ಔದಾರ್ಯ, ಆದರಾತಿಥ್ಯ—ವನ್ನು ಜನರು ಅನುಕರಿಸುವಲ್ಲಿ, ವಿಷಯಗಳು ಅದೆಷ್ಟು ಭಿನ್ನವಾಗಿರುವುವು! ನಿಜ ಸಂತೋಷದ ಕೀಲಿ ಕೈಯು, ನಮ್ಮ ಸ್ವಂತ ಬಯಕೆಗಳನ್ನು ತೃಪ್ತಿಪಡಿಸಲು ಪ್ರಯತ್ನಿಸುವುದರಲ್ಲಿ ಇರುವುದಿಲ್ಲವೆಂದು ಆತನು ಸ್ಪಷ್ಟಗೊಳಿಸಿದನು. ಬದಲಾಗಿ, ಕೀಲಿ ಕೈಯು ಇದಾಗಿದೆ: “ಪಡೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.” (ಅ. ಕೃತ್ಯಗಳು 20:35, NW) ನಿಜ ಸಂತೋಷ ಮತ್ತು ಸಂತೃಪ್ತಿಯನ್ನು ಪಡೆದುಕೊಳ್ಳಲು, ನಾವು ನಮ್ಮನ್ನು ಸೀಮಿತಗೊಳಿಸಿಕೊಳ್ಳಬಹುದಾದ ತಡೆಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಜಯಿಸಬೇಕು. ಮತ್ತು ನಮ್ಮೊಂದಿಗೆ ಯೆಹೋವನ ಸೇವೆಮಾಡುತ್ತಿರುವವರೊಂದಿಗೆ ನಾವು ಕೈಚಾಚಬೇಕು. “ಆದುದರಿಂದ ನಾವು, ಸತ್ಯದಲ್ಲಿ ಜೊತೆ ಕೆಲಸಗಾರರಾಗಿ ಪರಿಣಮಿಸುವಂತೆ, ಅಂತಹ ವ್ಯಕ್ತಿಗಳನ್ನು ಆದರಾತಿಥ್ಯದಿಂದ ಸ್ವಾಗತಿಸುವ ಹಂಗಿನಲ್ಲಿದ್ದೇವೆ,” ಎಂಬ ಸಲಹೆಗೆ ನಾವು ಕಿವಿಗೊಡುವುದು ಅತ್ಯಾವಶ್ಯಕ. (3 ಯೋಹಾನ 8, NW) ನಮ್ಮ ಪರಿಸ್ಥಿತಿಗಳು ಅನುಮತಿಸುವ ಮಟ್ಟಿಗೆ, ಅರ್ಹರಿಗೆ ಆತಿಥ್ಯವನ್ನು ತೋರಿಸುವುದು ಎರಡು ವಿಧಗಳಲ್ಲಿ ಪ್ರಯೋಜನಕರ—ಅದು ದಾನಿಗಳಿಗೂ ಸ್ವೀಕರಿಸುವವರಿಗೂ ಪ್ರಯೋಜನವನ್ನು ತರುತ್ತದೆ. ಹಾಗಾದರೆ, ನಾವು ‘ಆದರಾತಿಥ್ಯದಿಂದ ಸ್ವಾಗತಿಸಬೇಕಾದ’ ಅರ್ಹರಲ್ಲಿ ಯಾರು ಯಾರು ಇದ್ದಾರೆ?
“ಅನಾಥರನ್ನೂ ವಿಧವೆಯರನ್ನೂ” ಪರಾಮರಿಸಿರಿ
4. ಯೆಹೋವನ ಜನರಲ್ಲಿಯೂ ಕೆಲವರ ಮಧ್ಯೆ ಕುಟುಂಬ ರಚನೆಯಲ್ಲಿ ಯಾವ ಬದಲಾವಣೆಯನ್ನು ಕಾಣಸಾಧ್ಯವಿದೆ?
4 ಸುದೃಢವಾದ ಕುಟುಂಬಗಳೂ ಸಂತೋಷಕರ ವಿವಾಹಗಳೂ ಇಂದು ವಿರಳ. ಲೋಕಾದ್ಯಂತವಾಗಿ ಏರುತ್ತಿರುವ ವಿವಾಹ ವಿಚ್ಛೇದ ಪ್ರಮಾಣಗಳು ಮತ್ತು ಅವಿವಾಹಿತ ತಾಯಂದಿರ ಹೆಚ್ಚುತ್ತಿರುವ ಸಂಖ್ಯೆಯು ಸಾಂಪ್ರದಾಯಿಕ ಕುಟುಂಬಗಳನ್ನು ತೀವ್ರವಾಗಿ ಬದಲಾಯಿಸಿದೆ. ಇದರ ಫಲವಾಗಿ, ಇತ್ತೀಚಿನ ವರ್ಷಗಳಲ್ಲಿ ಯೆಹೋವನ ಸಾಕ್ಷಿಗಳಾಗಿರುವವರಲ್ಲಿ ಅನೇಕರು ಒಡೆದ ಕುಟುಂಬಗಳಿಂದ ಬಂದಿರುತ್ತಾರೆ. ಅವರು ತಮ್ಮ ವಿವಾಹ ಸಂಗಾತಿಗಳಿಂದ ಒಂದೇ ವಿಚ್ಛೇದಿಸಲ್ಪಟ್ಟಿದ್ದಾರೆ ಇಲ್ಲವೆ ಪ್ರತ್ಯೇಕ ವಾಸಿಗಳಾಗಿದ್ದಾರೆ; ಅಥವಾ ಅವರು ಒಂಟಿಹೆತ್ತವರಿರುವ ಕುಟುಂಬಗಳಲ್ಲಿ ವಾಸಿಸುತ್ತಾರೆ. ಇದಕ್ಕೆ ಕೂಡಿಸಿ, ಯೇಸು ಮುಂತಿಳಿಸಿದಂತೆ, ಅವನು ಕಲಿಸಿದ ಸತ್ಯದ ಪರಿಣಾಮವಾಗಿ ಅನೇಕ ಕುಟುಂಬಗಳಲ್ಲಿ ವಿಭಾಗಗಳಾಗಿವೆ.—ಮತ್ತಾಯ 10:34-37; ಲೂಕ 12:51-53.
5. ವಿಭಜಿತ ಕುಟುಂಬದಲ್ಲಿರುವವರಿಗೆ ಪ್ರೋತ್ಸಾಹದ ಮೂಲವಾಗಿರಸಾಧ್ಯವಿರುವ ಯಾವ ವಿಷಯವನ್ನು ಯೇಸು ಹೇಳಿದನು?
5 ಹೊಸಬರು ಸತ್ಯಕ್ಕಾಗಿ ಸ್ಥಿರವಾದ ಸ್ಥಾನವನ್ನು ತೆಗೆದುಕೊಳ್ಳುವುದನ್ನು ನೋಡುವುದು ನಮ್ಮ ಹೃದಯಗಳನ್ನು ಹುರಿದುಂಬಿಸುತ್ತದೆ, ಮತ್ತು ನಾವು ಅನೇಕ ಬಾರಿ, ಯೇಸುವಿನ ಈ ಪ್ರೋತ್ಸಾಹಕರವಾದ ವಾಗ್ದಾನದಿಂದ ಅವರಿಗೆ ಸಾಂತ್ವನ ನೀಡುತ್ತೇವೆ: “ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ನನ್ನ ನಿಮಿತ್ತವೂ ಸುವಾರ್ತೆಯ ನಿಮಿತ್ತವೂ ಮನೆಯನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ಬಿಟ್ಟು ಬಿಟ್ಟಿರುವನೋ ಅವನಿಗೆ ಈಗಿನ ಕಾಲದಲ್ಲಿ ಮನೆ ಅಣ್ಣ ತಮ್ಮ ಅಕ್ಕ ತಂಗಿ ತಾಯಿ ಮಕ್ಕಳು ಭೂಮಿ ಇವೆಲ್ಲವೂ ಹಿಂಸೆಗಳು ಸಹಿತವಾಗಿ ನೂರರಷ್ಟು ಸಿಕ್ಕೇ ಸಿಕ್ಕುತ್ತವೆ; ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವದು.”—ಮಾರ್ಕ 10:29, 30.
6. ನಾವು ನಮ್ಮ ಮಧ್ಯೆ ಇರುವ ‘ಅನಾಥರಿಗೂ ವಿಧವೆಯರಿಗೂ’ “ಅಣ್ಣ ತಮ್ಮ ಅಕ್ಕ ತಂಗಿ ತಾಯಿ ಮಕ್ಕಳು” ಹೇಗೆ ಆಗಸಾಧ್ಯವಿದೆ?
6 ಆದರೆ, ಈ “ಅಣ್ಣ ತಮ್ಮ ಅಕ್ಕ ತಂಗಿ ತಾಯಿ ಮಕ್ಕಳು” ಯಾರು? ರಾಜ್ಯ ಸಭಾಗೃಹದಲ್ಲಿ ಜನರ ಒಂದು ದೊಡ್ಡ ಸಂಖ್ಯೆಯನ್ನು, ಅನೇಕ ವೇಳೆ ನೂರು ಅಥವಾ ಹೆಚ್ಚು ಮಂದಿ ಸಹೋದರ, ಸಹೋದರಿ ಎಂಬುದಾಗಿ ತಮ್ಮನ್ನು ಕರೆದುಕೊಳ್ಳುವವರನ್ನು ಕೇವಲ ನೋಡುವುದು, ಒಬ್ಬ ವ್ಯಕ್ತಿಗೆ, ಇವರು ತನ್ನ ಅಣ್ಣ, ತಂಗಿ, ತಾಯಿ ಮತ್ತು ಮಕ್ಕಳಾಗಿದ್ದಾರೆ ಎಂಬ ಅನಿಸಿಕೆಯನ್ನು ಯಾಂತ್ರಿಕವಾಗಿ ಕೊಡುವುದಿಲ್ಲ. ಈ ವಿಷಯವನ್ನು ಪರಿಗಣಿಸಿ: ನಮ್ಮ ಆರಾಧನೆಯು ಯೆಹೋವನಿಗೆ ಸ್ವೀಕಾರಯೋಗ್ಯವಾಗಿರಬೇಕಾದರೆ, ‘ಸಂಕಟದಲ್ಲಿ ಬಿದ್ದ ಅನಾಥರನ್ನೂ ವಿಧವೆಯರನ್ನೂ ಪರಾಮರಿಸಿ ತನಗೆ ಪ್ರಪಂಚದ ದೋಷವು ಹತ್ತದಂತೆ’ ನೋಡಿಕೊಳ್ಳಬೇಕೆಂದು ಶಿಷ್ಯ ಯಾಕೋಬನು ನಮಗೆ ಜ್ಞಾಪಕ ಹುಟ್ಟಿಸುತ್ತಾನೆ. (ಯಾಕೋಬ 1:27) ಅದರ ಅರ್ಥವು, ನಾವು ಲೌಕಿಕ ಮನೋಭಾವಗಳಾದ ಆರ್ಥಿಕ ಜಂಬ ಮತ್ತು ವರ್ಗ ಶ್ರೇಷ್ಠತೆಗಳು, ಇಂತಹ ‘ಅನಾಥರು ಮತ್ತು ವಿಧವೆಯರ’ ಕಡೆಗೆ ಅನುಕಂಪದ ದ್ವಾರವನ್ನು ಮುಚ್ಚಿಬಿಡುವಂತೆ ಅನುಮತಿಸಬಾರದು. ಬದಲಾಗಿ, ನಾವು ಅವರಿಗೆ ನಮ್ಮ ಸಖ್ಯ ಮತ್ತು ಆತಿಥ್ಯವನ್ನು ತೋರಿಸಲು ಆರಂಭಿಕ ಹೆಜ್ಜೆಯನ್ನು ತೆಗೆದುಕೊಳ್ಳಬೇಕು.
7. (ಎ) ‘ಅನಾಥರಿಗೂ ವಿಧವೆಯರಿಗೂ’ ಆತಿಥ್ಯವನ್ನು ತೋರಿಸುವ ನಿಜೋದ್ದೇಶವು ಯಾವುದು? (ಬಿ) ಕ್ರೈಸ್ತ ಆತಿಥ್ಯವನ್ನು ತೋರಿಸುವುದರಲ್ಲಿ ಯಾರು ಸಹ ಭಾಗವಹಿಸಶಕ್ತರಾಗಬಹುದು?
7 ‘ಅನಾಥರಿಗೂ ವಿಧವೆಯರಿಗೂ’ ಆತಿಥ್ಯವನ್ನು ತೋರಿಸುವುದರಲ್ಲಿ ಯಾವಾಗಲೂ ಅವರಿಗೆ ಪ್ರಾಪಂಚಿಕ ರೀತಿಯಲ್ಲಿ ಇರುವ ಕೊರತೆಯನ್ನು ಭರ್ತಿಮಾಡುವುದು ಸೇರಿರುವುದಿಲ್ಲ. ಒಂಟಿ ಹೆತ್ತವರಿರುವ ಕುಟುಂಬಗಳು ಅಥವಾ ಧಾರ್ಮಿಕವಾಗಿ ವಿಭಜಿತವಾದ ಮನೆವಾರ್ತೆಗಳು ಆರ್ಥಿಕವಾಗಿ ಕಷ್ಟದ ಪರಿಸ್ಥಿತಿಗಳಲ್ಲಿರಬೇಕೆಂದಿಲ್ಲ. ಆದರೂ, ಹಿತಕರ ಸಹವಾಸ, ಕುಟುಂಬ ವಾತಾವರಣ, ವಿವಿಧ ವಯಸ್ಸಿನ ವ್ಯಕ್ತಿಗಳ ಸಂಗಡ ಸಖ್ಯ ಮತ್ತು ಆತ್ಮಿಕ ಸುಸಂಗತಿಗಳಲ್ಲಿ ಪಾಲಿಗರಾಗುವಿಕೆ—ಇವು ಅತ್ಯಮೂಲ್ಯವಾಗಿರಲು ಯೋಗ್ಯವಾದ ಜೀವನಾಂಶಗಳು. ಹೀಗೆ, ಸಂದರ್ಭದ ವಿಸ್ತೃತ ಯೋಜನೆಯಲ್ಲ, ಪ್ರೀತಿ ಮತ್ತು ಐಕ್ಯದ ಮನೋಭಾವವು ಮುಖ್ಯವೆಂಬುದನ್ನು ಜ್ಞಾಪಿಸಿಕೊಳ್ಳುತ್ತ, ‘ಅನಾಥರೂ ವಿಧವೆಯರೂ’ ಕೂಡ ಜೊತೆಕ್ರೈಸ್ತರಿಗೆ ಆತಿಥ್ಯವನ್ನು ತೋರಿಸುವುದರಲ್ಲಿ ಕೆಲವೊಮ್ಮೆ ಭಾಗವಹಿಸಬಲ್ಲರೆಂಬುದು ಎಷ್ಟೊಂದು ಉತ್ತಮವಾದದ್ದಾಗಿದೆ!—ಹೋಲಿಸಿ 1 ಅರಸುಗಳು 17:8-16.
ನಮ್ಮಲ್ಲಿ ವಿದೇಶೀಯರು ಇದ್ದಾರೊ?
8. ಯೆಹೋವನ ಸಾಕ್ಷಿಗಳ ಅನೇಕ ಸಭೆಗಳಲ್ಲಿ ಯಾವ ಬದಲಾವಣೆ ಕಂಡುಬರುತ್ತದೆ?
8 ನಾವು ಮಹಾ ಜನಸಂಖ್ಯಾ ಚಲನೆಯ ಸಮಯದಲ್ಲಿ ಜೀವಿಸುತ್ತೇವೆ. “ಲೋಕವ್ಯಾಪಕವಾಗಿ, 10 ಕೋಟಿಗಿಂತಲೂ ಹೆಚ್ಚು ಜನರು ತಾವು ಪೌರರಲ್ಲದ ದೇಶಗಳಲ್ಲಿ ಜೀವಿಸುತ್ತಾರೆ, ಮತ್ತು 2 ಕೋಟಿ 30 ಲಕ್ಷ ಜನರು ತಮ್ಮ ಸ್ವದೇಶದಲ್ಲಿಯೇ ಸ್ಥಾನಚ್ಯುತರಾಗಿದ್ದಾರೆ,” ಎನ್ನುತ್ತದೆ ವರ್ಲ್ಡ್ ಪ್ರೆಸ್ ರಿವ್ಯೂ. ಇದರ ಒಂದು ನೇರವಾದ ಪರಿಣಾಮವು, ಅನೇಕ ಪ್ರದೇಶಗಳಲ್ಲಿ, ವಿಶೇಷವಾಗಿ ಹೆಚ್ಚು ದೊಡ್ಡ ನಗರಗಳಲ್ಲಿ, ಒಮ್ಮೆ ಹೆಚ್ಚಾಗಿ ಒಂದು ಕುಲ ಅಥವಾ ರಾಷ್ಟ್ರೀಯತೆಯಿಂದ ರಚಿಸಲ್ಪಟ್ಟಿದ್ದ ಯೆಹೋವನ ಜನರ ಸಭೆಗಳು, ಈಗ ಜಗತ್ತಿನ ವಿವಿಧ ಭಾಗಗಳಿಂದ ಬಂದಿರುವ ಜನರನ್ನು ಒಳಗೊಂಡಿರುತ್ತವೆ. ಇದು ಪ್ರಾಯಶಃ ನೀವಿರುವಲ್ಲಿ ಸತ್ಯವಾಗಿದೆ. ಆದರೂ, ಯಾರ ಭಾಷೆ, ಪದ್ಧತಿಗಳು ಮತ್ತು ಜೀವನ ಶೈಲಿಯು ನಮ್ಮದಕ್ಕಿಂತ ಭಿನ್ನವಾಗಿದೆಯೊ ಮತ್ತು ಯಾರನ್ನು ಜಗತ್ತು “ಅನ್ಯರು” ಮತ್ತು “ವಿದೇಶೀಯರು” ಎಂದು ಕರೆಯುತ್ತದೊ, ಅಂತಹವರನ್ನು ನಾವು ಹೇಗೆ ವೀಕ್ಷಿಸಬೇಕು?
9. ಕ್ರೈಸ್ತ ಸಭೆಯೊಳಗೆ ಬರುತ್ತಿರುವ “ಅನ್ಯರು” ಮತ್ತು “ವಿದೇಶೀಯರ” ಕುರಿತ ನಮ್ಮ ನೋಟದ ಸಂಬಂಧದಲ್ಲಿ ಯಾವ ಗುರುತರವಾದ ಅಪಾಯಗಳು ನಮ್ಮನ್ನು ಸಿಕ್ಕಿಸಿಹಾಕಬಲ್ಲವು?
9 ಸರಳವಾಗಿ ಹೇಳುವುದಾದರೆ, ಯಾವುದೇ ಪರಕೀಯ ದ್ವೇಷ ಪ್ರವೃತ್ತಿಗಳು, ಸತ್ಯವನ್ನು ತಿಳಿಯುವ ಸುಯೋಗಕ್ಕೆ ನಾವು, ಒಂದು ಅಪರಿಚಿತ ಅಥವಾ ವಿಧರ್ಮಿ ದೇಶವೆಂದು ಹೇಳಲ್ಪಡುವ ದೇಶಗಳಿಂದ ಬಂದವರಿಗಿಂತ ಹೇಗೊ ಹೆಚ್ಚು ಅರ್ಹರೆಂದು ಭಾವಿಸುವಂತೆ ಅನುಮತಿಸಲೂ ಬಾರದು, ಈ ಹೊಸದಾಗಿ ಬಂದವರು ರಾಜ್ಯ ಸಭಾಗೃಹ ಮತ್ತು ಇತರ ಸೌಕರ್ಯಗಳ ಉಪಯೋಗವನ್ನು ಅತಿಕ್ರಮಿಸುತ್ತಿದ್ದಾರೆ ಎಂಬಂತೆ ಭಾವಿಸಲೂಬಾರದು. ಇಂತಹ ವೀಕ್ಷಣಗಳಿಗೆ ಇಂಬುಕೊಟ್ಟಿದ್ದ ಒಂದನೆಯ ಶತಮಾನದ ಕ್ರೈಸ್ತರಿಗೆ ಅಪೊಸ್ತಲ ಪೌಲನು, ಯಾರೂ ಅರ್ಹರಾಗಿರಲಿಲ್ಲವೆಂದೂ, ಯಾವನಾದರೂ ರಕ್ಷಣೆ ಪಡೆಯುವಂತೆ ಸಾಧ್ಯವಾಗಿರುವುದಾದರೆ ಅದು ದೇವರ ಅಪಾತ್ರ ದಯೆಯೇ ಎಂದೂ ಜ್ಞಾಪಿಸಬೇಕಾಗಿತ್ತು. (ರೋಮಾಪುರ 3:9-12, 23, 24) ದೇವರ ಅಪಾತ್ರ ದಯೆಯು ಈಗ, ಒಂದೊ ಇನ್ನೊಂದೊ ವಿಧದಲ್ಲಿ ಸುವಾರ್ತೆಯನ್ನು ಕೇಳಲು ಸಂದರ್ಭವು ಅಲ್ಲಗಳೆಯಲ್ಪಟ್ಟಿರುವ ಎಷ್ಟೋ ಜನರನ್ನು ತಲಪುತ್ತಿದೆ ಎಂಬುದಕ್ಕಾಗಿ ನಾವು ಹರ್ಷಿಸತಕ್ಕದ್ದು. (1 ತಿಮೊಥೆಯ 2:4) ಅವರ ಕಡೆಗೆ ನಮಗಿರುವ ಪ್ರೇಮವು ಯಥಾರ್ಥವಾದದ್ದೆಂದು ನಾವು ಹೇಗೆ ತೋರಿಸಬಲ್ಲೆವು?
10. ನಮ್ಮ ಮಧ್ಯೆ ಇರುವ “ವಿದೇಶೀಯ”ರಿಗೆ ನಾವು ನಿಜವಾಗಿಯೂ ಆತಿಥ್ಯವುಳ್ಳವರಾಗಿದ್ದೇವೆಂದು ಹೇಗೆ ತೋರಿಸಬಲ್ಲೆವು?
10 “ಕ್ರಿಸ್ತನು ಸಹ ನಿಮ್ಮನ್ನು ಸ್ವಾಗತಿಸಿದಂತೆಯೇ ನೀವೂ, ದೇವರಿಗಾಗುವ ಮಹಿಮೆಯ ದೃಷ್ಟಿಯಲ್ಲಿ ಒಬ್ಬರನ್ನೊಬ್ಬರು ಸ್ವಾಗತಿಸಿರಿ,” ಎಂಬ ಪೌಲನ ಬುದ್ಧಿವಾದವನ್ನು ನಾವು ಅನುಸರಿಸಬಲ್ಲೆವು. (ರೋಮಾಪುರ 15:7, NW) ಇತರ ದೇಶಗಳ ಅಥವಾ ಹಿನ್ನೆಲೆಗಳ ಜನರು ಅನೇಕ ವೇಳೆ ಪ್ರತಿಕೂಲತೆಗೊಳಗಾಗಿದ್ದಾರೆ ಎಂಬುದನ್ನು ಅರಿತವರಾಗಿ, ನಾವು ಶಕ್ತರಾಗಿರುವಾಗ ಅವರಿಗೆ ದಯೆ ಮತ್ತು ಕಾಳಜಿಯನ್ನು ತೋರಿಸಬೇಕು. ನಾವು ಅವರನ್ನು ನಮ್ಮ ಮಧ್ಯೆ ಸ್ವಾಗತಿಸಿ, ಅವರಲ್ಲಿ ಪ್ರತಿಯೊಬ್ಬರನ್ನು “ಸ್ವದೇಶದವರಂತೆಯೇ” “ನಿಮ್ಮಂತೆಯೇ ಪ್ರೀತಿಸಬೇಕು.” (ಯಾಜಕಕಾಂಡ 19:34) ಇದನ್ನು ಮಾಡುವುದು ಸುಲಭವಾಗಿರಲಿಕ್ಕಿಲ್ಲ, ಆದರೆ ನಾವು ಈ ಸಲಹೆಯನ್ನು ಜ್ಞಾಪಿಸಿಕೊಳ್ಳುವಲ್ಲಿ ಜಯಹೊಂದುವೆವು: “ವಿಷಯಗಳ ಈ ವ್ಯವಸ್ಥೆಯಂತೆ ರೂಪಿಸಿಕೊಳ್ಳಲ್ಪಡುವುದನ್ನು ತ್ಯಜಿಸಿ, ನಿಮ್ಮ ಮನಸ್ಸನ್ನು ಬದಲಾಯಿಸುವ ಮೂಲಕ ರೂಪಾಂತರಗೊಳ್ಳಿರಿ; ದೇವರ ಒಳ್ಳೆಯ, ಸ್ವೀಕಾರಯೋಗ್ಯವಾದ ಮತ್ತು ಪರಿಪೂರ್ಣ ಚಿತ್ತವನ್ನು ನಿಮಗೆ ರುಜುಪಡಿಸಿಕೊಳ್ಳುವುದಕ್ಕಾಗಿ ಹಾಗೆ ಮಾಡಿರಿ.”—ರೋಮಾಪುರ 12:2, NW.
ಪವಿತ್ರ ಜನರೊಂದಿಗೆ ಭಾಗಿಗಳಾಗಿರಿ
11, 12. ಯೆಹೋವನ ಕೆಲವು ಸೇವಕರಿಗೆ (ಎ) ಪುರಾತನ ಇಸ್ರಾಯೇಲಿನಲ್ಲಿ (ಬಿ) ಒಂದನೆಯ ಶತಮಾನದಲ್ಲಿ ಯಾವ ವಿಶೇಷ ಪರಿಗಣನೆಯು ಕೊಡಲ್ಪಟ್ಟಿತು?
11 ನಮ್ಮ ಪರಿಗಣನೆ ಮತ್ತು ಆತಿಥ್ಯಕ್ಕೆ ನಿಜವಾಗಿಯೂ ಅರ್ಹರಾಗಿರುವವರಲ್ಲಿ, ನಮ್ಮ ಆತ್ಮಿಕ ಹಿತಕ್ಕಾಗಿ ಕಷ್ಟಪಟ್ಟು ಶ್ರಮಿಸುವ ಪರಿಪಕ್ವರಾದ ಕ್ರೈಸ್ತರಿದ್ದಾರೆ. ಪುರಾತನ ಇಸ್ರಾಯೇಲಿನಲ್ಲಿ, ಯಾಜಕರಿಗೂ ಲೇವ್ಯರಿಗೂ ಯೆಹೋವನು ವಿಶೇಷ ಮುನ್ನೇರ್ಪಾಡುಗಳನ್ನು ಮಾಡಿದನು. (ಅರಣ್ಯಕಾಂಡ 18:25-29) ಪ್ರಥಮ ಶತಮಾನದಲ್ಲಿ, ತಮಗೆ ವಿಶೇಷ ಸಾಮರ್ಥ್ಯಗಳಲ್ಲಿ ಸೇವೆಸಲ್ಲಿಸಿದವರನ್ನೂ ಪರಾಮರಿಸುವಂತೆ ಕ್ರೈಸ್ತರು ಪ್ರೋತ್ಸಾಹಿಸಲ್ಪಟ್ಟರು. 3 ಯೋಹಾನ 5-8 ನಮಗೆ, ಆದಿ ಕ್ರೈಸ್ತರ ಮಧ್ಯೆ ಅಸ್ತಿತ್ವದಲ್ಲಿದ್ದ ನಿಕಟವಾದ ಪ್ರೀತಿಯ ಬಂಧದ ನಸುನೋಟವೊಂದನ್ನು ಕೊಡುತ್ತದೆ.
12 ಸಭೆಯನ್ನು ಭೇಟಿಮಾಡಲು ಕಳುಹಿಸಲ್ಪಟ್ಟ ಕೆಲವು ಸಂಚಾರಿ ಸಹೋದರರಿಗೆ ಗಾಯನು ತೋರಿಸಿದ್ದ ದಯೆ ಮತ್ತು ಆತಿಥ್ಯವನ್ನು ವೃದ್ಧ ಅಪೊಸ್ತಲ ಯೋಹಾನನು ತೀರ ಬೆಲೆಯುಳ್ಳದ್ದಾಗಿ ಎಣಿಸಿದನು. ಪತ್ರಿಕಾವಾಹಕನೆಂದು ವಿದಿತವಾಗಿರುವ ದೇಮೇತ್ರಿಯನನ್ನು ಒಳಗೊಂಡಿದ್ದ ಈ ಸಹೋದರರೆಲ್ಲರೂ ಅಪರಿಚಿತರಾಗಿದ್ದರು ಅಥವಾ ಈ ಮೊದಲು ಗಾಯನಿಗೆ ಅಜ್ಞಾತರಾಗಿದ್ದರು. ಆದರೆ ಅವರನ್ನು ಆತಿಥ್ಯದಿಂದ ಸ್ವಾಗತಿಸಲಾಯಿತು, ಏಕೆಂದರೆ, “ಅವರು ಹೊರಟುಹೋದದ್ದು [ದೇವರ] ಹೆಸರಿನ ಪ್ರಯೋಜನಾರ್ಥವಾಗಿ.” ಯೋಹಾನನು ಅದನ್ನು ಈ ರೀತಿಯಲ್ಲಿ ಹೇಳುತ್ತಾನೆ: “ಆದುದರಿಂದ ನಾವು, ಸತ್ಯದಲ್ಲಿ ಜೊತೆ ಕೆಲಸಗಾರರಾಗಿ ಪರಿಣಮಿಸುವಂತೆ, ಅಂತಹ ವ್ಯಕ್ತಿಗಳನ್ನು ಆದರಾತಿಥ್ಯದಿಂದ ಸ್ವಾಗತಿಸುವ ಹಂಗಿನಲ್ಲಿದ್ದೇವೆ.”—3 ಯೋಹಾನ 1, 7, 8, NW.
13. ಇಂದು ನಮ್ಮ ಮಧ್ಯೆ ‘ಆದರಾತಿಥ್ಯದಿಂದ ಸ್ವಾಗತಿಸಲ್ಪಡಲು’ ವಿಶೇಷವಾಗಿ ಯಾರು ಅರ್ಹರು?
13 ಇಂದು, ಯೆಹೋವನ ಸಂಸ್ಥೆಯಲ್ಲಿ, ಇಡೀ ಸಹೋದರರ ಸಂಘದ ಪ್ರಯೋಜನಾರ್ಥವಾಗಿ ತಮ್ಮನ್ನು ಓಜಸ್ಸಿನಿಂದ ಶ್ರಮಿಸಿಕೊಳ್ಳುವ ಅನೇಕರಿದ್ದಾರೆ. ಇವರಲ್ಲಿ, ಸಭೆಗಳ ಆತ್ಮೋನ್ನತಿಗಾಗಿ ವಾರ ವಾರ ತಮ್ಮ ಸಮಯ ಮತ್ತು ಶಕ್ತಿಯನ್ನು ವ್ಯಯಿಸುವ ಸಂಚರಣ ಮೇಲ್ವಿಚಾರಕರು; ಕುಟುಂಬಗಳನ್ನು ಮತ್ತು ಸ್ನೇಹಿತರನ್ನು ಹಿಂದೆ ಬಿಟ್ಟು ವಿದೇಶಗಳಲ್ಲಿ ಸಾರುವ ಮಿಷನೆರಿಗಳು; ಲೋಕವ್ಯಾಪಕವಾದ ಸಾರುವ ಕೆಲಸವನ್ನು ಬೆಂಬಲಿಸಲಿಕ್ಕಾಗಿ ಸ್ವಇಚ್ಛೆಯಿಂದ ಮುಂದೆ ಬಂದು, ಬೆತೆಲ್ ಗೃಹಗಳಲ್ಲಿ ಅಥವಾ ಬ್ರಾಂಚ್ ಆಫೀಸುಗಳಲ್ಲಿ ಸೇವೆಮಾಡುತ್ತಿರುವವರು; ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ತಮ್ಮ ಸಮಯ ಮತ್ತು ಶಕ್ತಿಯಲ್ಲಿ ಹೆಚ್ಚಿನ ಭಾಗವನ್ನು ವ್ಯಯಿಸುವ ಪಯನೀಯರ್ ಸೇವೆಯಲ್ಲಿರುವವರು ಸೇರಿದ್ದಾರೆ. ಮೂಲಭೂತವಾಗಿ, ಇವರೆಲ್ಲರೂ ಯಾವುದೇ ವೈಯಕ್ತಿಕ ಕೀರ್ತಿ ಅಥವಾ ಲಾಭಕ್ಕಾಗಿ ಅಲ್ಲ, ಬದಲಾಗಿ ಕ್ರೈಸ್ತ ಸಹೋದರತ್ವಕ್ಕಾಗಿ ಮತ್ತು ಯೆಹೋವನಿಗಾಗಿ ತಮಗಿರುವ ಪ್ರೀತಿಯ ಕಾರಣ, ಕಷ್ಟಪಟ್ಟು ಕೆಲಸಮಾಡುತ್ತಾರೆ. ಅವರ ಪೂರ್ಣ ಪ್ರಾಣದ ಭಕ್ತಿಯ ಕಾರಣ ನಾವು ಅನುಕರಿಸಲು ಅವರು ಯೋಗ್ಯರಾಗಿದ್ದಾರೆ ಮತ್ತು ‘ಆದರಾತಿಥ್ಯದಿಂದ ಸ್ವಾಗತಿಸಲ್ಪಡಲು’ ಅರ್ಹರಾಗಿದ್ದಾರೆ.
14. (ಎ) ನಾವು ನಂಬಿಗಸ್ತರಿಗೆ ಆತಿಥ್ಯವನ್ನು ತೋರಿಸುವಾಗ, ನಾವು ಹೇಗೆ ಹೆಚ್ಚು ಉತ್ತಮವಾದ ಕ್ರೈಸ್ತರಾಗಿ ಪರಿಣಮಿಸುತ್ತೇವೆ? (ಬಿ) ಮರಿಯಳು “ಉತ್ತಮ ಭಾಗವನ್ನು” ಆರಿಸಿಕೊಂಡಳೆಂದು ಯೇಸು ಹೇಳಿದ್ದೇಕೆ?
14 ನಾವು “ಅಂತಹ ವ್ಯಕ್ತಿಗಳನ್ನು ಆದರಾತಿಥ್ಯದಿಂದ ಸ್ವಾಗತಿಸು”ವಾಗ, ನಾವು “ಸತ್ಯದಲ್ಲಿ ಜೊತೆ ಕೆಲಸಗಾರರಾಗಿ ಪರಿಣಮಿಸು”ತ್ತೇವೆಂದು ಅಪೊಸ್ತಲ ಯೋಹಾನನು ತೋರಿಸಿದನು. ಒಂದು ಅರ್ಥದಲ್ಲಿ, ಇದರ ಫಲವಾಗಿ ನಾವು ಹೆಚ್ಚು ಉತ್ತಮ ಕ್ರೈಸ್ತರಾಗುತ್ತೇವೆ. ಇದು, ಜೊತೆ ವಿಶ್ವಾಸಿಗಳಿಗೆ ಒಳ್ಳೆಯದನ್ನು ಮಾಡುವುದು ಕ್ರೈಸ್ತ ಕ್ರಿಯೆಗಳಲ್ಲಿ ಸೇರಿರುವುದರಿಂದಲೇ. (ಜ್ಞಾನೋಕ್ತಿ 3:27, 28; 1 ಯೋಹಾನ 3:18) ಇನ್ನೊಂದು ವಿಧದಲ್ಲಿಯೂ ಪ್ರತಿಫಲಗಳಿವೆ. ಮರಿಯ ಮತ್ತು ಮಾರ್ಥ ಯೇಸುವನ್ನು ತಮ್ಮ ಮನೆಗೆ ಸ್ವಾಗತಿಸಿದಾಗ, ಮಾರ್ಥಳು ಯೇಸುವಿಗಾಗಿ “ಅನೇಕ ವಿಷಯ”ಗಳನ್ನು ತಯಾರಿಸುವ ಮೂಲಕ ಒಬ್ಬ ಒಳ್ಳೆಯ ಆತಿಥೇಯಳಾಗಿರಬಯಸಿದಳು. ಮರಿಯಳು ಒಂದು ಪ್ರತ್ಯೇಕ ರೀತಿಯಲ್ಲಿ ಆತಿಥ್ಯವನ್ನು ತೋರಿಸಿದಳು. ಆಕೆ “ಸ್ವಾಮಿಯ ಪಾದಗಳ ಬಳಿಯಲ್ಲಿ ಕೂತುಕೊಂಡು ಆತನ ವಾಕ್ಯವನ್ನು ಕೇಳುತ್ತಿದ್ದಳು,” ಮತ್ತು “ಉತ್ತಮ ಭಾಗವನ್ನು” ಆರಿಸಿಕೊಂಡದ್ದಕ್ಕಾಗಿ ಯೇಸು ಆಕೆಯನ್ನು ಪ್ರಶಂಸಿಸಿದನು. (ಲೂಕ 10:38-42) ಅನೇಕ ವರ್ಷಗಳ ಅನುಭವವಿರುವವರೊಡನೆ ನಡೆಯುವ ಸಂಭಾಷಣೆಗಳು ಮತ್ತು ಚರ್ಚೆಗಳು, ಅನೇಕ ವೇಳೆ ಅವರ ಒಡನಾಟದಲ್ಲಿ ಕಳೆದ ಸಾಯಂಕಾಲವೊಂದರ ಉಜ್ವಲ ಭಾಗಗಳಾಗಿವೆ.—ರೋಮಾಪುರ 1:11, 12.
ವಿಶೇಷ ಸಂದರ್ಭಗಳಲ್ಲಿ
15. ಯಾವ ವಿಶೇಷ ಸಂದರ್ಭಗಳು ಯೆಹೋವನ ಜನರಿಗೆ ಸಂತೋಷದ ಸಮಯಗಳಾಗಿ ಪರಿಣಮಿಸಬಹುದು?
15 ಸತ್ಯ ಕ್ರೈಸ್ತರು ಜನಪ್ರಿಯ ಪದ್ಧತಿಗಳನ್ನು ಅನುಸರಿಸುವುದಾಗಲಿ ಲೌಕಿಕ ರಜಾದಿನಗಳನ್ನು ಮತ್ತು ಉತ್ಸವಗಳನ್ನು ಆಚರಿಸುವುದಾಗಲಿ ಇಲ್ಲವಾದರೂ, ಅವರು ಪರಸ್ಪರವಾಗಿ ಒಡನಾಟದಲ್ಲಿ ಸಂತೋಷಿಸಲು ನಿಶ್ಚಯವಾಗಿಯೂ ಕೂಡಿಬರುವ ಸಂದರ್ಭಗಳಿವೆ. ಉದಾಹರಣೆಗೆ, ಯೇಸು ಕಾನಾದಲ್ಲಿ ಒಂದು ವಿವಾಹದ ಔತಣದಲ್ಲಿ ಉಪಸ್ಥಿತನಾಗಿದ್ದು, ಅಲ್ಲಿ ತನ್ನ ಪ್ರಥಮ ಅದ್ಭುತವನ್ನು ಮಾಡಿದ ಮೂಲಕ ಆ ಸಂದರ್ಭದ ಸಂತೋಷಕ್ಕೆ ನೆರವಾದನು. (ಯೋಹಾನ 2:1-11) ತದ್ರೀತಿ ಇಂದು, ಅದೇ ರೀತಿಯ ವಿಶೇಷ ಸಂದರ್ಭಗಳಲ್ಲಿ ಯೆಹೋವನ ಜನರಿಗೆ ಒಟ್ಟುಗೂಡಿ ಕಳೆಯುವ ಸಂತೋಷದ ಸಮಯಗಳಿವೆ. ಮತ್ತು ಸೂಕ್ತ ರೀತಿಯ ಆಚರಣೆ ಮತ್ತು ಸಂತೋಷ ಸಮಾರಂಭವು ಅಂತಹ ಸಂದರ್ಭಗಳಿಗೆ ಹೆಚ್ಚನ್ನು ಕೂಡಿಸುತ್ತದೆ. ಆದರೆ ಯಾವುದು ಸೂಕ್ತ ರೀತಿಯದ್ದು?
16. ವಿಶೇಷ ಸಂದರ್ಭಗಳಲ್ಲಿಯೂ ಸ್ವದರ್ತನೆಯ ಕುರಿತ ಯಾವ ಮಾರ್ಗದರ್ಶನಗಳು ನಮಗಿವೆ?
16 ಬೈಬಲಿನ ಅಧ್ಯಯನದಿಂದ ನಾವು, ಕ್ರೈಸ್ತರಿಗೆ ಯಾವುದು ಸೂಕ್ತವಾದ ನಡತೆಯಾಗಿದೆಯೆಂಬುದನ್ನು ಕಲಿಯುತ್ತೇವೆ, ಮತ್ತು ಇದನ್ನು ಎಲ್ಲಾ ಸಮಯಗಳಲ್ಲಿಯೂ ನಾವು ಅನುಸರಿಸುತ್ತೇವೆ. (ರೋಮಾಪುರ 13:12-14; ಗಲಾತ್ಯ 5:19-21; ಎಫೆಸ 5:3-5) ವಿವಾಹಗಳ ಸಂಬಂಧದಲ್ಲಾಗಲಿ, ಇನ್ನಾವ ಕಾರಣಕ್ಕಾಗಲಿ ನಡೆಯುವ ಸಮಾಜ ಗೋಷ್ಠಿಗಳು, ನಮ್ಮ ಕ್ರೈಸ್ತ ಮಟ್ಟಗಳನ್ನು ತ್ಯಜಿಸುವಂತೆ ಅಥವಾ ನಾವು ಸಾಮಾನ್ಯವಾಗಿ ಮಾಡದೆ ಇರುವಂತಹ ಯಾವುದನ್ನೋ ಮಾಡುವಂತೆ ನಮಗೆ ಪರವಾನಗಿಯನ್ನು ನೀಡುವುದಿಲ್ಲ; ನಾವು ಜೀವಿಸುತ್ತಿರುವ ದೇಶದ ಸಕಲ ಪದ್ಧತಿಗಳನ್ನು ಅನುಸರಿಸಬೇಕೆಂಬ ಹಂಗೂ ನಮಗಿಲ್ಲ. ಅಂತಹ ಅನೇಕ ಪದ್ಧತಿಗಳು ಸುಳ್ಳು ಧಾರ್ಮಿಕ ಆಚಾರಗಳ ಮೇಲೆ ಅಥವಾ ಮೂಢನಂಬಿಕೆಗಳ ಮೇಲೆ ಆಧಾರಿಸಿವೆ, ಮತ್ತು ಇನ್ನು ಕೆಲವು ಕ್ರೈಸ್ತರಿಗೆ ಸ್ಪಷ್ಟವಾಗಿ ಅಸ್ವೀಕಾರಯೋಗ್ಯವಾದ ನಡತೆಯನ್ನೊಳಗೊಂಡಿವೆ.—1 ಪೇತ್ರ 4:3, 4.
17. (ಎ) ಕಾನಾದಲ್ಲಿನ ವಿವಾಹದ ಔತಣವು ಸುವ್ಯವಸ್ಥಿತವೂ ಯೋಗ್ಯ ಮೇಲ್ವಿಚಾರಣೆಯಿದ್ದದ್ದೂ ಆಗಿತ್ತೆಂದು ಯಾವ ಸಂಗತಿಗಳು ತೋರಿಸುತ್ತವೆ? (ಬಿ) ಆ ಸಂದರ್ಭವನ್ನು ಯೇಸು ಸಮ್ಮತಿಸಿದನೆಂದು ಯಾವುದು ಸೂಚಿಸುತ್ತದೆ?
17 ಯೋಹಾನ 2:1-11ನ್ನು ಓದುವಾಗ ಅದೊಂದು ಎಚ್ಚರಿಕೆಯಿಂದ ವಿಸ್ತೃತವಾಗಿ ಯೋಜಿಸಿದ ಸಂದರ್ಭವಾಗಿತ್ತೆಂದೂ, ಅತಿಥಿಗಳು ದೊಡ್ಡ ಸಂಖ್ಯೆಯಲ್ಲಿ ಅಲ್ಲಿದ್ದರೆಂದೂ ನೋಡುವುದು ಕಷ್ಟಕರವಲ್ಲ. ಆದರೂ, ಯೇಸು ಮತ್ತು ಅವನ ಶಿಷ್ಯರು “ಆಮಂತ್ರಿತ” ಅತಿಥಿಗಳಾಗಿದ್ದರು; ಅವರಲ್ಲಿ ಕೆಲವರಾದರೂ ಆತಿಥೇಯನ ಸಂಬಂಧಿಗಳಾಗಿದ್ದಿರಬಹುದಾದರೂ, ಅವರು ಅನಿರೀಕ್ಷಿತವಾಗಿ ಬಂದಿರಲಿಲ್ಲ. ಅಲ್ಲಿ ‘ಕೆಲಸದವರು’ ಹಾಗೂ ಏನನ್ನು ಬಡಿಸಬೇಕು ಅಥವಾ ಮಾಡಬೇಕು ಎಂದು ನಿರ್ದೇಶಿಸುವ ಒಬ್ಬ “ಪಾರುಪತ್ಯಗಾರನು” ಇದ್ದನೆಂದೂ ನಾವು ಗಮನಿಸುತ್ತೇವೆ. ಇದೆಲ್ಲವೂ ಆ ಸಮಾರಂಭವು ಸುವ್ಯವಸ್ಥಿತವೂ ಯೋಗ್ಯವಾಗಿ ಮೇಲ್ವಿಚಾರಣೆ ಮಾಡಲ್ಪಟ್ಟದ್ದೂ ಆಗಿತ್ತೆಂದೂ ಸೂಚಿಸುತ್ತದೆ. ತಾನು ಆ ಔತಣದಲ್ಲಿ ಏನು ಮಾಡಿದನೊ ಅದರಿಂದ “ಯೇಸು ತನ್ನ ಮಹಿಮೆಯನ್ನು ತೋರಿಸಿದನು,” ಎಂದು ಹೇಳಿ ಆ ವೃತ್ತಾಂತವು ಸಮಾಪ್ತಿಗೊಳ್ಳುತ್ತದೆ. ಅದೊಂದು ಪುಂಡಾಟದ ಅಥವಾ ಸಂಭ್ರಮೋನ್ಮತ್ತ ಗೋಷ್ಠಿಯಾಗಿರುತ್ತಿದ್ದಲ್ಲಿ ಹಾಗೆ ಮಾಡಲು ಅವನು ಆ ಸಂದರ್ಭವನ್ನು ತೆಗೆದುಕೊಳ್ಳುತ್ತಿದ್ದನೊ? ನಿಸ್ಸಂದೇಹವಾಗಿಯೂ ಇಲ್ಲ.
18. ಯಾವುದೇ ಸಾಮಾಜಿಕ ಸಂಭವಕ್ಕೆ ಯಾವ ಗಂಭೀರವಾದ ಯೋಚನೆಯು ಕೊಡಲ್ಪಡಬೇಕು?
18 ಹಾಗಾದರೆ, ನಾವು ಆತಿಥೇಯರಾಗಿರುವ ಯಾವುದೇ ವಿಶೇಷ ಸಂದರ್ಭಗಳ ವಿಷಯದಲ್ಲೇನು? ಇತರರನ್ನು ಆತಿಥ್ಯದಿಂದ ಸ್ವಾಗತಿಸುವ ಉದ್ದೇಶವು ನಾವೆಲ್ಲರೂ, “ಸತ್ಯದಲ್ಲಿ ಜೊತೆ ಕೆಲಸಗಾರರಾಗಿ ಪರಿಣಮಿಸ”ಬಹುದು ಎಂದು ನಾವು ಜ್ಞಾಪಿಸಿಕೊಳ್ಳಲು ಬಯಸುತ್ತೇವೆ. ಹೀಗೆ, ಒಂದು ಸಂಭವವನ್ನು “ಸಾಕ್ಷಿ” ನೆರವಿಯೆಂದು ಹೆಸರಿಟ್ಟು ಕರೆಯುವುದು ಸಾಲದು. ನಾವು ಯಾರಾಗಿದ್ದೇವೊ ಮತ್ತು ಏನನ್ನು ನಂಬುತ್ತೇವೊ ಅದಕ್ಕೆ ಅದು ವಾಸ್ತವವಾಗಿ ಒಂದು ಸಾಕ್ಷಿಯೊ? ಎಂಬ ಪ್ರಶ್ನೆಯು ಕೇಳಲ್ಪಡಬಹುದು. ನಾವು ಅಂತಹ ಸಂದರ್ಭಗಳನ್ನು, ಲೋಕವನ್ನು ಅದರ ತಂತ್ರಗಳಲ್ಲಿ, “ಶರೀರದಾಶೆ, ಕಣ್ಣಿನಾಶೆ, ಬದುಕುಬಾಳಿನ ಡಂಬ”ವನ್ನು ತಣಿಸುವುದರಲ್ಲಿ ಪ್ರತಿಸ್ಪರ್ಧಿಸಲು ಎಷ್ಟರ ಮಟ್ಟಿಗೆ ಹೋಗಸಾಧ್ಯವಿದೆ ಎಂದು ನೋಡುವ ಅವಕಾಶಗಳಾಗಿ ಎಂದಿಗೂ ನೋಡಬಾರದು. (1 ಯೋಹಾನ 2:15, 16) ಬದಲಾಗಿ, ಈ ಸಂದರ್ಭಗಳು ಯೆಹೋವನ ಸಾಕ್ಷಿಗಳಾಗಿರುವ ನಮ್ಮ ಪಾತ್ರವನ್ನು ಯೋಗ್ಯವಾಗಿ ಪ್ರತಿಬಿಂಬಿಸಬೇಕು, ಮತ್ತು ನಾವು ಮಾಡುವ ವಿಷಯಗಳು ಯೆಹೋವನಿಗೆ ಮಹಿಮೆಯನ್ನೂ ಗೌರವವನ್ನೂ ತರುತ್ತವೆಂದು ಖಾತರಿಯಿಂದಿರಬೇಕು.—ಮತ್ತಾಯ 5:16; 1 ಕೊರಿಂಥ 10:31-33.
‘ಗುಣುಗುಟ್ಟದೆ ಆದರಾತಿಥ್ಯ ಮಾಡುವವರಾಗಿರಿ’
19. ನಾವು “ಗುಣುಗುಟ್ಟದೆ ಒಬ್ಬರಿಗೊಬ್ಬರು ಅತಿಥಿಸತ್ಕಾರ” ಮಾಡುವ ಅಗತ್ಯವಿರುವುದೇಕೆ?
19 ಲೋಕದ ಪರಿಸ್ಥಿತಿಗಳು ಕೆಡುತ್ತ ಹೋಗುವಾಗ ಮತ್ತು ಜನರು ಎಂದಿಗಿಂತ ಹೆಚ್ಚು ವಿಭಜಿತವಾಗಿ ಪರಿಣಮಿಸುವಾಗ, ನಾವು ನಿಜ ಕ್ರೈಸ್ತರ ಮಧ್ಯೆ ಅಸ್ತಿತ್ವದಲ್ಲಿರುವ ನಿಕಟ ಬಂಧವನ್ನು ಬಲಪಡಿಸಲು ನಮ್ಮಿಂದ ಸಾಧ್ಯವಿರುವುದನ್ನೆಲ್ಲಾ ಮಾಡುವುದು ಅಗತ್ಯ. (ಕೊಲೊಸ್ಸೆ 3:14) ಈ ಕಾರಣಕ್ಕಾಗಿ, ಪೇತ್ರನು ನಮ್ಮನ್ನು ಪ್ರೋತ್ಸಾಹಿಸಿದಂತೆ, “ನೀವು ಒಬ್ಬರಿಗೊಬ್ಬರು ತೀವ್ರವಾದ ಪ್ರೀತಿಯನ್ನು” (NW) ಹೊಂದಿರಬೇಕು. ಆಮೇಲೆ, ಪ್ರಾಯೋಗಿಕ ಮಾತುಗಳಲ್ಲಿ ಅವನು ಕೂಡಿಸಿದ್ದು: “ಗುಣಗುಟ್ಟದೆ ಒಬ್ಬರಿಗೊಬ್ಬರು ಅತಿಥಿಸತ್ಕಾರ ಮಾಡಿರಿ.” (1 ಪೇತ್ರ 4:7-9) ನಾವು ನಮ್ಮ ಸಹೋದರರಿಗೆ ಅತಿಥಿಸತ್ಕಾರ ಮಾಡಲು, ಅವರಿಗೆ ದಯಾವಂತರೂ ಸಹಾಯಕಾರಿಗಳೂ ಆಗಿರುವಂತೆ ಪ್ರಯಾಸಪಡಲು ಇಚ್ಛಿತರಾಗಿರುತ್ತೇವೊ? ಅಥವಾ ಅಂತಹ ಸಂದರ್ಭವು ಏಳುವಾಗ ನಾವು ಗುಣುಗುಟ್ಟುತ್ತೇವೊ? ಹಾಗೆ ಮಾಡುವಲ್ಲಿ, ನಮಗೆ ಶಕ್ಯವಾಗಿರುವ ಹರ್ಷವನ್ನು ನಾವು ರದ್ದುಮಾಡುವುದಲ್ಲದೆ, ಒಳ್ಳೇದನ್ನು ಮಾಡುವುದಕ್ಕಾಗಿರುವ ಸಂತೋಷದ ಪ್ರತಿಫಲವನ್ನೂ ಕಳೆದುಕೊಳ್ಳುತ್ತೇವೆ.—ಜ್ಞಾನೋಕ್ತಿ 3:27; ಅ. ಕೃತ್ಯಗಳು 20:35.
20. ಇಂದಿನ ವಿಭಜಿತ ಜಗತ್ತಿನಲ್ಲಿ ನಾವು ಆತಿಥ್ಯವನ್ನು ಆಚರಿಸುವಲ್ಲಿ ಯಾವ ಆಶೀರ್ವಾದಗಳು ನಮಗಾಗಿ ಕಾದಿರುತ್ತವೆ?
20 ನಮ್ಮ ಜೊತೆಕ್ರೈಸ್ತರೊಂದಿಗೆ ಒತ್ತಾಗಿ ಕೆಲಸಮಾಡುತ್ತ, ಒಬ್ಬರಿಗೊಬ್ಬರು ದಯಾವಂತರೂ ಅತಿಥಿಸತ್ಕಾರ ಮಾಡುವವರೂ ಆಗಿರುವುದು ಮಿತಿಯಿಲ್ಲದ ಆಶೀರ್ವಾದಗಳನ್ನು ತರುವುದು. (ಮತ್ತಾಯ 10:40-42) ಇಂತಹವರಿಗೆ ಯೆಹೋವನು, “ತನ್ನ ಗುಡಾರವನ್ನು ಅವರ ಮೇಲೆ ಆವರಿಸುವನು. ಇನ್ನು ಮುಂದೆ ಅವರು ಹಸಿಯುವುದೂ ಇಲ್ಲ, ಬಾಯಾರುವುದೂ ಇಲ್ಲ,” ಎಂದು ವಾಗ್ದಾನಿಸಿದನು. ಯೆಹೋವನ ಗುಡಾರದಲ್ಲಿರುವುದೆಂದರೆ ಆತನ ಸಂರಕ್ಷಣೆಯನ್ನೂ ಆತಿಥ್ಯವನ್ನೂ ಅನುಭವಿಸುವುದೆಂದರ್ಥ. (ಪ್ರಕಟನೆ 7:15, 16, NW; ಯೆಶಾಯ 25:6) ಹೌದು, ಯೆಹೋವನ ಆತಿಥ್ಯವನ್ನು ಸದಾಕಾಲ ಅನುಭವಿಸುವ ಪ್ರತೀಕ್ಷೆ ಇನ್ನೇನು ಮುಂದೆಯೇ ಇದೆ.—ಕೀರ್ತನೆ 27:4; 61:3, 4.
ನೀವು ವಿವರಿಸಬಲ್ಲಿರೊ?
◻ ನಿಜಾನಂದ ಮತ್ತು ಸಂತೃಪ್ತಿಯನ್ನು ಕಂಡುಕೊಳ್ಳಬಯಸುವುದಾದರೆ ನಾವು ಯಾವುದನ್ನು ಅಲಕ್ಷಿಸಬಾರದು?
◻ ‘ಅನಾಥರೂ ವಿಧವೆಯರೂ’ ಯಾರು, ಮತ್ತು ನಾವು ಅವರನ್ನು ಹೇಗೆ “ಪರಾಮರಿಸ”ಬೇಕು?
◻ ನಮ್ಮ ಮಧ್ಯೆ ಇರುವ “ಅನ್ಯ”ರನ್ನೂ “ವಿದೇಶೀಯ”ರನ್ನೂ ನಾವು ಹೇಗೆ ವೀಕ್ಷಿಸಬೇಕು?
◻ ಇಂದು ಯಾರು ಪ್ರತ್ಯೇಕ ಪರಿಗಣನೆಗೆ ಅರ್ಹರು?
◻ ವಿಶೇಷ ಸಂದರ್ಭಗಳು ಆತಿಥ್ಯದ ನಿಜ ಮನೋಭಾವವನ್ನು ಹೇಗೆ ಪ್ರತಿಬಿಂಬಿಸಬೇಕು?
[ಪುಟ 16,17 ರಲ್ಲಿರುವಚಿತ್ರ]
ಸಂತೋಷ ಸಮಾರಂಭಗಳಲ್ಲಿ ನಾವು ವಿದೇಶೀಯರಿಗೆ, ತಂದೆಯಿಲ್ಲದ ಮಕ್ಕಳಿಗೆ, ಪೂರ್ಣ ಸಮಯದ ಸೇವೆಯಲ್ಲಿರುವವರಿಗೆ ಮತ್ತು ಇತರ ಅತಿಥಿಗಳಿಗೆ ಆತಿಥ್ಯವನ್ನು ತೋರಿಸಸಾಧ್ಯವಿದೆ