ನೀವು ಆತ್ಮಿಕವಾಗಿ ಚೆನ್ನಾಗಿ ತಿನ್ನುತ್ತೀರೊ?
“ಒಂದು ಒಳ್ಳೆಯ ಆಹಾರ ಪಥ್ಯವು ಅತ್ಯಂತ ಮೂಲಭೂತ ಮಾನವ ಆವಶ್ಯಕತೆಯಾಗಿದೆ. . . . ಸಾಕಷ್ಟು ಆಹಾರವಿಲ್ಲದಿದ್ದರೆ ನಾವು ಸಾಯುವೆವು.”—ಆಹಾರ ಮತ್ತು ಪೌಷ್ಟಿಕತೆ (ಇಂಗ್ಲಿಷ್).
ಆ ಮೂಲಭೂತ ಸತ್ಯತೆಯು, ಈ “ಅತ್ಯಂತ ಮೂಲಭೂತ ಮಾನವ ಆವಶ್ಯಕತೆ”ಯು ಲಭ್ಯವಾಗಿರದ, ಹಸಿವೆಯಿಂದ ನರಳುತ್ತಿರುವ ಸ್ತ್ರೀಪುರುಷರು ಹಾಗೂ ಮಕ್ಕಳ ಕೃಶವಾದ ಆಕೃತಿಗಳಲ್ಲಿ ಕಣ್ಣಿಗೆಕಟ್ಟಿದಂತೆ ದೃಷ್ಟಾಂತಿಸಲಾಗುತ್ತದೆ. ಇನ್ನಿತರರು ಸ್ವಲ್ಪ ಮಟ್ಟಿಗೆ ಈ ಆವಶ್ಯಕತೆಯನ್ನು ಪಡೆದುಕೊಳ್ಳಲು ಶಕ್ತರಾಗಿದ್ದಾರಾದರೂ, ಅವರಿನ್ನೂ ಗುರುತರವಾಗಿ ನ್ಯೂನಪೋಷಿತರಾಗಿದ್ದಾರೆ. ಆದರೂ, ಚೆನ್ನಾಗಿ ಉಣ್ಣಲು ಸಾಧ್ಯವಿರುವವರು, ಅನೇಕವೇಳೆ ನಿಜವಾದ ಪೋಷಣೆಯನ್ನು ಸ್ವಲ್ಪಮಾತ್ರವೇ ಒದಗಿಸುವ ಕಳಪೆ ಆಹಾರದಿಂದ ತಮ್ಮನ್ನು ತೃಪ್ತಿಪಡಿಸಿಕೊಳ್ಳುತ್ತಾರೆ. “ಆಹಾರವು, ನಮ್ಮ ಸ್ವತ್ತುಗಳಲ್ಲೇ ಅತಿ ಹೆಚ್ಚಾಗಿ ದುರುಪಯೋಗಿಸಲ್ಪಡುವಂತಹ ಸ್ವತ್ತಾಗಿ ಕಂಡುಬರುತ್ತದೆ” ಎಂದು ಆರೋಗ್ಯಕರ ಉಣ್ಣುವಿಕೆ (ಇಂಗ್ಲಿಷ್) ಎಂಬ ಪುಸ್ತಕವು ಹೇಳುತ್ತದೆ.
ಆತ್ಮಿಕ ಆಹಾರದ—ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವ ಸತ್ಯದ—ವಿಷಯದಲ್ಲೂ ಇದು ಸತ್ಯವಾಗಿದೆ. ಕೆಲವು ಜನರಿಗೆ, ಅತ್ಯಂತ ಮೂಲಭೂತ ಆತ್ಮಿಕ ಪೋಷಣೆಯು ಸಹ ದೊರಕುವುದಿಲ್ಲ; ಅವರು ಆತ್ಮಿಕವಾಗಿ ಹೊಟ್ಟೆಗಿಲ್ಲದೆ ನರಳುತ್ತಾರೆ. ಇತರರಾದರೋ ಲಭ್ಯವಿರುವ ಆತ್ಮಿಕ ಆಹಾರವನ್ನು ಸದುಪಯೋಗಿಸಿಕೊಳ್ಳಲು ಅಲಕ್ಷ್ಯಭಾವ ತೋರಿಸುತ್ತಾರೆ. ನಿಮ್ಮ ಕುರಿತಾಗಿ ಏನು? ವೈಯಕ್ತಿಕವಾಗಿ ನೀವು ಆತ್ಮಿಕವಾಗಿ ಚೆನ್ನಾಗಿ ಉಣ್ಣುತ್ತೀರೊ? ಅಥವಾ ನೀವು ನಿಮ್ಮನ್ನೇ ಆತ್ಮಿಕ ಪೋಷಣೆಯಿಂದ ವಂಚಿಸಿಕೊಳ್ಳುತ್ತಿರಸಾಧ್ಯವಿದೆಯೊ? ಈ ವಿಷಯದಲ್ಲಿ ಸ್ವತಃ ಪ್ರಾಮಾಣಿಕರಾಗಿರುವುದು ಪ್ರಾಮುಖ್ಯವಾದದ್ದಾಗಿದೆ. ಏಕೆಂದರೆ, ನಮಗೆ ಶಾರೀರಿಕ ಆಹಾರವು ಬೇಕಾಗಿರುವುದಕ್ಕಿಂತಲೂ ಹೆಚ್ಚಾಗಿ ಆತ್ಮಿಕ ಆಹಾರವು ಬೇಕಾಗಿದೆ.—ಮತ್ತಾಯ 4:4.
ಆತ್ಮಿಕ ಬೆಳವಣಿಗೆಗಾಗಿ ಆಹಾರ
ಯೋಗ್ಯವಾದ ಒಂದು ಆಹಾರ ಪಥ್ಯವಿರುವುದರ ಪ್ರಮುಖತೆಯನ್ನು ಚರ್ಚಿಸುವ, ಆಹಾರ ಮತ್ತು ಪುಷ್ಟಿ (ಇಂಗ್ಲಿಷ್) ಎಂಬ ಒಂದು ಪಠ್ಯಪುಸ್ತಕವು, ಚೆನ್ನಾಗಿ ಉಣ್ಣುವುದಕ್ಕಿರುವ ಮೂರು ಸಕಾರಣಗಳನ್ನು ನಮಗೆ ಕೊಡುತ್ತದೆ. ಮೊದಲನೆಯ ಕಾರಣವೇನೆಂದರೆ, “ಬೆಳವಣಿಗೆಯನ್ನು ಪ್ರವರ್ಧಿಸಲು ಮತ್ತು ದೇಹದ ಜೀವಕೋಶಗಳ ಕ್ಷಯಿಸುವಿಕೆಯನ್ನು ಸರಿದೂಗಿಸಲು” ನಮಗೆ ಆಹಾರವು ಬೇಕಾಗಿದೆ. ನಿಮ್ಮ ಜೀವಿತದ ಪ್ರತಿ ದಿನ, ನಿಮ್ಮ ದೇಹದ ಜೀವಕೋಶಗಳಲ್ಲಿ ಒಂದು ಟ್ರಿಲ್ಯನ್ ಜೀವಕೋಶಗಳು ನಾಶವಾಗುತ್ತವೆ ಮತ್ತು ಅವುಗಳನ್ನು ಪುನಃ ಸ್ಥಾನಭರ್ತಿಮಾಡುವ ಅಗತ್ಯವಿದೆ ಎಂಬುದು ನಿಮಗೆ ತಿಳಿದಿತ್ತೊ? ಸರಿಯಾದ ಬೆಳವಣಿಗೆ ಮತ್ತು ದೇಹದ ಸಂರಕ್ಷಣೆಗೆ ಪುಷ್ಟಿಕರವಾದ ಆಹಾರದ ಅಗತ್ಯವಿದೆ.
ಆತ್ಮಿಕ ವಿಷಯದಲ್ಲಿಯೂ ಅದು ಸತ್ಯವಾಗಿದೆ. ಉದಾಹರಣೆಗಾಗಿ, ಎಫೆಸದಲ್ಲಿರುವ ಸಭೆಗೆ ಪೌಲನು ಪತ್ರ ಬರೆದಾಗ, “ಸಂಪೂರ್ಣವಾಗಿ ಬೆಳೆದ ಮನುಷ್ಯ”ನಾಗಿ (NW) ಪರಿಣಮಿಸಲು, ಪ್ರತಿಯೊಬ್ಬ ಕ್ರೈಸ್ತನಿಗೆ ಹೇಗೆ ಒಳ್ಳೆಯ ಆತ್ಮಿಕ ಆಹಾರದ ಆವಶ್ಯಕತೆಯಿದೆ ಎಂಬುದನ್ನು ಅವನು ಒತ್ತಿಹೇಳಿದನು. (ಎಫೆಸ 4:11-13) ಪೌಷ್ಟಿಕವಾದ ಆತ್ಮಿಕ ಆಹಾರವನ್ನು ನಾವು ಸರಿಯಾಗಿ ಉಣ್ಣುವಾಗ, ಸ್ವತಃ ತಮ್ಮನ್ನು ಪರಾಮರಿಸಿಕೊಳ್ಳಲು ಅಶಕ್ತರಾಗಿದ್ದು, ಎಲ್ಲಾ ರೀತಿಯ ಅಪಾಯಗಳಿಗೆ ತುತ್ತಾಗುವ ನಿರ್ಬಲ ಶಿಶುಗಳೋಪಾದಿ ನಾವು ಇನ್ನುಮುಂದೆ ಇರುವುದಿಲ್ಲ. (ಎಫೆಸ 4:14) ಬದಲಾಗಿ, ನಾವು ದೃಢಕಾಯ ವಯಸ್ಕರಾಗಿ ಬೆಳೆದು, ನಂಬಿಕೆಗೋಸ್ಕರ ಕಠಿನವಾಗಿ ಹೋರಾಡಲು ಶಕ್ತರಾಗುತ್ತೇವೆ. ಏಕೆಂದರೆ, ನಾವು “ನಂಬಿಕೆಯ . . . ವಾಕ್ಯಗಳಲ್ಲಿ ಅಭ್ಯಾಸ [“ಪೋಷಣೆ,” NW]” ಹೊಂದಿದವರಾಗಿದ್ದೇವೆ.—1 ತಿಮೊಥೆಯ 4:6.
ನಿಮ್ಮ ವಿಷಯದಲ್ಲಿಯೂ ಇದು ಸತ್ಯವಾಗಿದೆಯೊ? ನೀವು ಆತ್ಮಿಕವಾಗಿ ಬೆಳೆದಿದ್ದೀರೊ? ಅಥವಾ ನೀವು ಇನ್ನೂ, ಸುಲಭಭೇದ್ಯವಾಗಿರುವ, ಸಂಪೂರ್ಣವಾಗಿ ಇತರರ ಮೇಲೆ ಅವಲಂಬಿಸಿರುವ, ಹಾಗೂ ಸಂಪೂರ್ಣ ಕ್ರೈಸ್ತ ಜವಾಬ್ದಾರಿಗಳನ್ನು ನಿರ್ವಹಿಸಲು ಅಶಕ್ತವಾಗಿರುವ ಒಂದು ಆತ್ಮಿಕ ಶಿಶುವಿನಂತೆ ಇದ್ದೀರೊ? ನಾವು ಆತ್ಮಿಕವಾಗಿ ಒಂದು ಶಿಶುವಿನಂತಿದ್ದೇವೆ ಎಂದು ನಮ್ಮಲ್ಲಿ ಕೆಲವರೇ ಸಿದ್ಧಮನಸ್ಸಿನಿಂದ ಹೇಳಬಹುದೆಂಬುದು ಗ್ರಾಹ್ಯವಾದರೂ, ಯಥಾರ್ಥವಾದ ಸ್ವಪರೀಕ್ಷೆಯು ಸೂಕ್ತವಾದದ್ದಾಗಿದೆ. ಪ್ರಥಮ ಶತಮಾನದಲ್ಲಿ ಕೆಲವು ಅಭಿಷಿಕ್ತ ಕ್ರೈಸ್ತರು ಹಾಗಿದ್ದರು. ಅವರು ಸ್ವತಃ “ಬೋಧಕ”ರೂ, ದೇವರ ವಾಕ್ಯವು ಹೇಳುವ ವಿಷಯವನ್ನು ಇತರರಿಗೆ ಬೋಧಿಸಲು ಸಮರ್ಥರೂ ಸಿದ್ಧಮನಸ್ಕರೂ ಆಗಿರಬೇಕಿತ್ತಾದರೂ, ಅಪೊಸ್ತಲ ಪೌಲನು ಬರೆದುದು: “ಒಬ್ಬನು ನಿಮಗೆ ದೈವೋಕ್ತಿಗಳ ಮೂಲಪಾಠಗಳನ್ನು ತಿರಿಗಿ ಕಲಿಸಿಕೊಡಬೇಕಾಗಿದೆ; ನೀವು ಹಾಲು ಕುಡಿಯತಕ್ಕವರೇ ಹೊರತು ಗಟ್ಟಿಯಾದ ಆಹಾರವನ್ನು ತಿನ್ನತಕ್ಕವರಲ್ಲ.” ನೀವು ಆತ್ಮಿಕವಾಗಿ ಬೆಳೆಯಲು ಬಯಸುವುದಾದರೆ, ಒಳ್ಳೆಯ, ಗಟ್ಟಿಯಾದ ಆತ್ಮಿಕ ಆಹಾರಕ್ಕಾಗಿ ಹಸಿವನ್ನು ಬೆಳೆಸಿಕೊಳ್ಳಿರಿ. ಆತ್ಮಿಕ ಶಿಶು ಆಹಾರದಿಂದಷ್ಟೇ ಸಂತೃಪ್ತರಾಗಬೇಡಿರಿ!—ಇಬ್ರಿಯ 5:12.
ಈ ಹಗೆಸಾಧಕ ಲೋಕದಲ್ಲಿ ನಾವು ಎದುರಿಸುವ ದೈನಂದಿನ ಪರೀಕ್ಷೆಗಳಿಂದ ಉಂಟಾಗುವ ಯಾವುದೇ ಹಾನಿಯನ್ನು ಸರಿಪಡಿಸಲಿಕ್ಕಾಗಿಯೂ ನಮಗೆ ಈ ಗಟ್ಟಿಯಾದ ಆತ್ಮಿಕ ಆಹಾರದ ಆವಶ್ಯಕತೆಯಿದೆ. ಈ ಪರೀಕ್ಷೆಗಳು ನಮ್ಮ ಆತ್ಮಿಕ ಬಲವನ್ನು ಬತ್ತಿಸಬಲ್ಲವು. ಆದರೆ ದೇವರು ಆ ಬಲವನ್ನು ಪುನಃ ನವೀಕರಿಸಬಲ್ಲನು. ಪೌಲನು ಹೇಳಿದ್ದು: “ನಾವು ಧೈರ್ಯಗೆಡುವದಿಲ್ಲ. ನಮ್ಮ ದೇಹವು ನಾಶವಾಗುತ್ತಾ ಇದ್ದರೂ ನಮ್ಮ ಆಂತರ್ಯವು ದಿನೇದಿನೇ ಹೊಸದಾಗುತ್ತಾ ಬರುತ್ತದೆ.” (2 ಕೊರಿಂಥ 4:16) ನಾವು “ದಿನೇದಿನೇ ಹೊಸದಾಗುತ್ತಾ ಬರು”ವುದು ಹೇಗೆ? ಭಾಗಶಃ, ಶಾಸ್ತ್ರಗಳು ಮತ್ತು ಬೈಬಲಾಧಾರಿತ ಪ್ರಕಾಶನಗಳ ವೈಯಕ್ತಿಕ ಹಾಗೂ ಗುಂಪು ಅಭ್ಯಾಸದ ಮೂಲಕ ದೇವರ ವಾಕ್ಯದಿಂದ ಕ್ರಮವಾಗಿ ಉಣ್ಣುವುದರಿಂದಲೇ.
ಆತ್ಮಿಕ ಶಕ್ತಿಗಾಗಿ ಆಹಾರ
“ಶಾಖ ಮತ್ತು ಶಕ್ತಿಯನ್ನು ಉತ್ಪಾದಿಸಲಿಕ್ಕಾಗಿ”ಯೂ ಆಹಾರವು ಬೇಕಾಗಿದೆ. ಆಹಾರವು, ಸರಿಯಾಗಿ ಕಾರ್ಯನಡಿಸಲು ಬೇಕಾಗಿರುವ ಇಂಧನವನ್ನು ನಮ್ಮ ದೇಹಕ್ಕೆ ಒದಗಿಸುತ್ತದೆ. ನಾವು ಸರಿಯಾಗಿ ಉಣ್ಣದಿರುವಲ್ಲಿ, ನಮ್ಮಲ್ಲಿ ಕಡಿಮೆ ಶಕ್ತಿಯಿರುತ್ತದೆ. ನಮ್ಮ ಆಹಾರ ಪಥ್ಯದಲ್ಲಿನ ಕಬ್ಬಿಣಸ್ವತದ ಕೊರತೆಯು, ನಮ್ಮಲ್ಲಿ ಆಯಾಸದ ಹಾಗೂ ಜಡತೆಯ ಅನಿಸಿಕೆಯನ್ನು ಉಂಟುಮಾಡಬಲ್ಲದು. ಆತ್ಮಿಕ ಚಟುವಟಿಕೆಯ ಸಂಬಂಧದಲ್ಲಿ ಕೆಲವೊಮ್ಮೆ ನಿಮಗೆ ಆ ರೀತಿಯ ಅನಿಸಿಕೆಯಾಗುತ್ತದೊ? ಒಬ್ಬ ಕ್ರೈಸ್ತನಾಗಿರುವುದರ ಜೊತೆಗೆ ಬರುವ ಕರ್ತವ್ಯಗಳನ್ನು ಪೂರೈಸುವುದು ನಿಮಗೆ ಕಷ್ಟಕರವಾಗಿದೆಯೊ? ಯೇಸು ಕ್ರಿಸ್ತನ ಹಿಂಬಾಲಕರೆಂದು ಹೇಳಿಕೊಳ್ಳುವ ಕೆಲವರು, ಸ್ವದರ್ತನೆ ತೋರಿಸುವುದರಲ್ಲಿ ಬೇಸರಗೊಳ್ಳುತ್ತಾರೆ, ಮತ್ತು ಕ್ರೈಸ್ತ ಕಾರ್ಯಗಳಿಗಾಗಿ ಅವರಲ್ಲಿ ತಾಕತ್ತಿನ ಕೊರತೆಯಿರುತ್ತದೆ. (ಯಾಕೋಬ 2:17, 26) ಇದು ನಿಮ್ಮ ವಿಷಯದಲ್ಲಿ ಸತ್ಯವಾಗಿದೆಯೆಂದು ನೀವು ನೋಡುವಲ್ಲಿ, ನಿಮ್ಮ ಆತ್ಮಿಕ ಆಹಾರ ಪಥ್ಯವನ್ನು ಉತ್ತಮಗೊಳಿಸುವುದರಲ್ಲಿ ಅಥವಾ ನಿಮ್ಮ ಆತ್ಮಿಕ ಆಹಾರವನ್ನು ಸೇವಿಸುವುದರಲ್ಲಿ ಹೆಚ್ಚಳವನ್ನು ಮಾಡುವುದರಲ್ಲಿ ಬಹುಮಟ್ಟಿಗೆ ಪರಿಹಾರವು ಅಡಗಿರಬಹುದು.—ಯೆಶಾಯ 40:29-31; ಗಲಾತ್ಯ 6:9.
ಆತ್ಮಿಕವಾಗಿ ನ್ಯೂನ ಉಣ್ಣುವಿಕೆಯ ರೂಢಿಗಳನ್ನು ಬೆಳೆಸಿಕೊಳ್ಳುವ ವಿಷಯದಲ್ಲಿ ಮರುಳಾಗಬೇಡಿರಿ. ಶತಮಾನಗಳಿಂದಲೂ ಸೈತಾನನು ಉಪಯೋಗಿಸಿರುವ ಅತ್ಯಂತ ದೊಡ್ಡ ವಂಚನೆಗಳಲ್ಲಿ ಒಂದು, ಜನರು ಬೈಬಲನ್ನು ಓದುವ ಹಾಗೂ ಅದರಿಂದ ನಿಷ್ಕೃಷ್ಟವಾದ ಜ್ಞಾನವನ್ನು ಪಡೆದುಕೊಳ್ಳುವ ಅಗತ್ಯವಿಲ್ಲ ಎಂದು ಅವರಿಗೆ ಮನಗಾಣಿಸುವುದೇ ಆಗಿದೆ. ವೈರಿ ಪಟ್ಟಣಗಳನ್ನು ಜಯಿಸಲಿಕ್ಕಾಗಿ, ದಂಡೆತ್ತಿಹೋಗುವ ಸೇನೆಗಳಿಂದ ಉಪಯೋಗಿಸಲ್ಪಟ್ಟ, ಪ್ರಾಚೀನಕಾಲದಿಂದ ಅಸ್ತಿತ್ವದಲ್ಲಿರುವ ತಂತ್ರೋಪಾಯವನ್ನೇ—ಅವರಿಗೆ ಆಹಾರವಿಲ್ಲದಂತೆ ಮಾಡಿ, ಶರಣಾಗತರಾಗುವ ತನಕ ಹೊಟ್ಟೆಗಿಲ್ಲದೆ ನರಳುವಂತೆ ಮಾಡುವುದು—ಅವನು ಉಪಯೋಗಿಸುತ್ತಾನೆ. ಆದರೆ ಅವನು ಈ ತಂತ್ರೋಪಾಯವನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದಿದ್ದಾನೆ. ಅವರ ಸುತ್ತಲೂ ಹಿತಕರವಾದ ಆತ್ಮಿಕ ಆಹಾರವು ಸಮೃದ್ಧವಾಗಿರುವಾಗ, ತಾನು “ಮುತ್ತಿಗೆಹಾಕು”ತ್ತಿರುವವರನ್ನು ಅವನು, ಸ್ವತಃ ಹೊಟ್ಟೆಗಿಲ್ಲದೆ ನರಳುವಂತೆ ವಂಚಿಸುತ್ತಾನೆ. ಬಹಳ ಮಂದಿ ಅವನ ಆಕ್ರಮಣಗಳಿಗೆ ತುತ್ತಾಗುವುದರಲ್ಲಿ ಆಶ್ಚರ್ಯವೇನಿಲ್ಲ!—ಎಫೆಸ 6:10-18.
ಆತ್ಮಿಕ ಆರೋಗ್ಯಕ್ಕಾಗಿ ಆಹಾರ
ನಮಗೆ ಆಹಾರದ ಆವಶ್ಯಕತೆಯಿರುವ ಮೂರನೆಯ ಕಾರಣವು ಯಾವುದೆಂದರೆ, “ದೇಹದ ಆರೋಗ್ಯವನ್ನು ಕ್ರಮಪಡಿಸಲು . . . ಮತ್ತು ರೋಗವನ್ನು ತಡೆಗಟ್ಟಲಿಕ್ಕಾಗಿಯೇ” ಎಂದು ಆಹಾರ ಮತ್ತು ಪೌಷ್ಟಿಕತೆ (ಇಂಗ್ಲಿಷ್) ಪುಸ್ತಕವು ಹೇಳುತ್ತದೆ. ಒಳ್ಳೆಯ ಆಹಾರದ ಆರೋಗ್ಯ ಪ್ರಯೋಜನಗಳು ಒಡನೆಯೇ ವ್ಯಕ್ತವಾಗುವುದಿಲ್ಲ. ನಾವು ಒಂದು ಒಳ್ಳೆಯ ಊಟವನ್ನು ಮುಗಿಸಿದಾಗ, ‘ಆ ಊಟವು ನನ್ನ ಹೃದಯಕ್ಕೆ (ಅಥವಾ ನನ್ನ ಮೂತ್ರಜನಕಾಂಗಗಳಿಗೆ ಅಥವಾ ನನ್ನ ಮಾಂಸಖಂಡಗಳಿಗೆ, ಇನ್ನು ಮುಂತಾದವುಗಳಿಗೆ) ಒಳಿತನ್ನು ಮಾಡಿದೆ’ ಎಂದು ಯೋಚಿಸುವುದೇ ವಿರಳ. ಆದರೂ, ಬಹಳ ಸಮಯದ ವರೆಗೆ ಆಹಾರ ಸೇವಿಸದೆ ಇರಲು ಪ್ರಯತ್ನಿಸಿರಿ, ಮತ್ತು ನಿಮ್ಮ ಆರೋಗ್ಯದ ಪರಿಣಾಮಗಳು ಸ್ಪಷ್ಟವಾಗಿ ವ್ಯಕ್ತವಾಗುತ್ತವೆ. ಯಾವ ಪರಿಣಾಮಗಳು? “ಅತ್ಯಂತ ಸಾಮಾನ್ಯ ಪರಿಣಾಮವು ಒಂದು ಹಾನಿಕರವಾದ ಪರಿಣಾಮವಾಗಿದೆ: ಬೆಳವಣಿಗೆಯಲ್ಲಿ ವಿಫಲತೆ, ವರ್ಧಿಸುವ ಸೋಂಕನ್ನು ಪ್ರತಿರೋಧಿಸುವ ವಿಷಯದಲ್ಲಿ ವಿಫಲತೆ, ಶಕ್ತಿ ಅಥವಾ ಆರಂಭಕ ಸಾಮರ್ಥ್ಯದ ಕೊರತೆ” ಎಂದು ಒಂದು ವೈದ್ಯಕೀಯ ಪರಾಮರ್ಶೆಯ ಕೃತಿಯು ಹೇಳುತ್ತದೆ. ಒಂದು ತುಲನಾತ್ಮಕವಾದ ರೀತಿಯ ಆತ್ಮಿಕ ಅನಾರೋಗ್ಯವು, ಸ್ವಲ್ಪ ಸಮಯದ ವರೆಗೆ ಪುರಾತನ ಇಸ್ರಾಯೇಲ್ಯರನ್ನು ಬಾಧಿಸಿತು. ಅವರ ಕುರಿತಾಗಿ ಪ್ರವಾದಿಯಾದ ಯೆಶಾಯನು ಹೇಳಿದ್ದು: “ತಲೆಯೆಲ್ಲಾ ರೋಗ, ಹೃದಯವೆಲ್ಲಾ ದುರ್ಬಲ. ಅಂಗಾಲಿನಿಂದ ನಡುನೆತ್ತಿಯ ತನಕ ಪೆಟ್ಟು ಬಾಸುಂಡೆ ಮಾಗದ ಗಾಯಗಳೇ ಹೊರತು ಏನೂ ಸೌಖ್ಯವಿಲ್ಲ.”—ಯೆಶಾಯ 1:5, 6.
ಒಳ್ಳೆಯ ಆತ್ಮಿಕ ಆಹಾರವು, ಅಂತಹ ಆತ್ಮಿಕ ದೌರ್ಬಲ್ಯವನ್ನು ಹಾಗೂ ಆತ್ಮಿಕ ಸೋಂಕಿನ ಪರಿಣಾಮಗಳನ್ನು ಪ್ರತಿರೋಧಿಸಲು ನಮಗೆ ಬಲವನ್ನು ಕೊಡುತ್ತದೆ. ದೇವರಿಂದ ಬರುವ ಜ್ಞಾನವು—ಅದನ್ನು ನಾವು ಉಣ್ಣುವಲ್ಲಿ—ನಮ್ಮನ್ನು ಆತ್ಮಿಕವಾಗಿ ಒಂದು ಒಳ್ಳೆಯ ಸ್ಥಿತಿಯಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ! ತನ್ನ ದಿನದ ಅಧಿಕಾಂಶ ಜನರು, ಸರಿಯಾದ ಆತ್ಮಿಕ ಉಣ್ಣುವಿಕೆಯ ವಿಷಯದಲ್ಲಿ ತಮ್ಮ ಪಿತೃಗಳ ಅಲಕ್ಷ್ಯಭಾವದಿಂದ ಹೇಗೆ ಯಾವ ಪಾಠವನ್ನೂ ಕಲಿಯಲಿಲ್ಲ ಎಂಬುದರ ಕುರಿತಾಗಿ ಯೇಸು ಕ್ರಿಸ್ತನು ಹೇಳಿಕೆಯನ್ನಿತ್ತನು. ಅವರು ಅವನು ಬೋಧಿಸುತ್ತಿದ್ದ ಸತ್ಯತೆಗಳನ್ನು ಉಣ್ಣಲು ಸಹ ನಿರಾಕರಿಸಿದರು. ಫಲಿತಾಂಶವೇನು? ಯೇಸು ಹೇಳಿದ್ದು: “ಈ ಜನರ ಹೃದಯವು ಕೊಬ್ಬಿತು; ಇವರ ಕಿವಿ ಮಂದವಾಯಿತು; ಇವರು ಕಣ್ಣು ಮುಚ್ಚಿಕೊಂಡಿದ್ದಾರೆ. ತಾವು ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ ಹೃದಯದಿಂದ ತಿಳಿದು ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದಬಾರದೆಂದು ಮಾಡಿಕೊಂಡಿದ್ದಾರೆ.” (ಮತ್ತಾಯ 13:15) ಹೆಚ್ಚಿನ ಜನರು ದೇವರ ವಾಕ್ಯದ ವಾಸಿಮಾಡುವಿಕೆಯ ಬಲದಿಂದ ಎಂದೂ ಪ್ರಯೋಜನವನ್ನು ಪಡೆದುಕೊಳ್ಳಲಿಲ್ಲ. ಅವರು ಆತ್ಮಿಕವಾಗಿ ಅಸ್ವಸ್ಥರಾಗಿ ಉಳಿದರು. ಕೆಲವು ಅಭಿಷಿಕ್ತ ಕ್ರೈಸ್ತರು ಸಹ “ಬಲಹೀನರೂ ರೋಗಿಗಳೂ” ಆದರು. (1 ಕೊರಿಂಥ 11:30) ದೇವರು ಒದಗಿಸುತ್ತಿರುವ ಆತ್ಮಿಕ ಆಹಾರಕ್ಕಾಗಿ ನಾವೆಂದಿಗೂ ತಾತ್ಸಾರ ತೋರಿಸದಿರೋಣ.—ಕೀರ್ತನೆ 107:20.
ಆತ್ಮಿಕ ಕಲುಷಿತ ಸ್ಥಿತಿ
ಆತ್ಮಿಕ ಹಸಿವೆಯ ಬೆದರಿಕೆಯಲ್ಲದೆ, ನಾವು ಎಚ್ಚರಿಕೆಯಿಂದಿರಬೇಕಾದ ಇನ್ನೊಂದು ಅಪಾಯವಿದೆ—ನಾವು ಉಣ್ಣುವ ಆಹಾರವೇ ಕಲುಷಿತಗೊಂಡದ್ದಾಗಿರಬಹುದು. ಅಪಾಯಕರವಾದ ದೆವ್ವಸಂಬಂಧಿತ ಕಲ್ಪನೆಗಳಿಂದ ಹಾಳಾದ ಬೋಧನೆಗಳನ್ನು ಸ್ವೀಕರಿಸುವುದು, ಜೀವಾಣುಗಳು ಅಥವಾ ವಿಷಪದಾರ್ಥಗಳಿಂದ ಸೋಂಕಿತವಾಗಿರುವ ಶಾರೀರಿಕ ಆಹಾರವು ನಮ್ಮನ್ನು ವಿಷಮಯಗೊಳಿಸುವಷ್ಟೇ ಸುಲಭವಾಗಿ ವಿಷಮಯಗೊಳಿಸಬಲ್ಲದು. (ಕೊಲೊಸ್ಸೆ 2:8) ವಿಷಮಯವಾದ ಆಹಾರವನ್ನು ಗುರುತಿಸುವುದು ಯಾವಾಗಲೂ ಸುಲಭವಾಗಿರುವುದಿಲ್ಲ. “ಆಹಾರವು ಕೆಲವೊಮ್ಮೆ ತುಂಬ ಆರೋಗ್ಯಕರವಾದದ್ದಾಗಿ ಕಂಡುಬರಬಹುದಾದರೂ, ರೋಗೋತ್ಪತ್ತಿಮಾಡುವ ಬ್ಯಾಕ್ಟೀರಿಯಗಳಿಗೆ ಆಶ್ರಯಕೊಡಬಹುದು” ಎಂದು ಒಂದು ಮೂಲವು ಹೇಳುತ್ತದೆ. ಆದುದರಿಂದ ಧರ್ಮಭ್ರಷ್ಟ ಬರಹಗಳಂತಹ ಕೆಲವು ಸಾಹಿತ್ಯವು, ಅಶಾಸ್ತ್ರೀಯ ಬೋಧನೆಗಳು ಹಾಗೂ ತತ್ವಜ್ಞಾನಗಳ ಪೀಠಿಕೆಯಿಂದ ಸೋಂಕಿತವಾಗಿರಬಹುದು ಎಂಬುದನ್ನು ಮನಸ್ಸಿನಲ್ಲಿಟ್ಟವರಾಗಿದ್ದು, ನಮ್ಮ ಸಾಂಕೇತಿಕ ಆಹಾರದ ಮೂಲವನ್ನು ಪರೀಕ್ಷಿಸುವುದು ಒಳ್ಳೇದಾಗಿದೆ. ಕೆಲವು ಮಂದಿ ಆಹಾರ ತಯಾರಕರು, ತಮ್ಮ ಉತ್ಪನ್ನದಲ್ಲಿ ಸೇರಿರುವ ಪದಾರ್ಥಗಳ ವಿಷಯದಲ್ಲಿ ತಮ್ಮ ಗಿರಾಕಿಗಳಿಗೆ ಮೋಸಮಾಡಲಿಕ್ಕಾಗಿ, ತಪ್ಪಾದ ಗುರುತುಪಟ್ಟಿ (ಲೇಬಲ್)ಯನ್ನು ಸಹ ಉಪಯೋಗಿಸುತ್ತಾರೆ. ಮಹಾ ಮೋಸಗಾರನಾದ ಸೈತಾನನೂ ಅದನ್ನೇ ಮಾಡುತ್ತಾನೆಂಬುದನ್ನು ನಾವು ನಿಶ್ಚಯವಾಗಿಯೂ ನಿರೀಕ್ಷಿಸಬಲ್ಲೆವು. ಆದುದರಿಂದ, “ಕ್ರಿಸ್ತನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿ” ಉಳಿಯಲಿಕ್ಕಾಗಿ, ನೀವು ಅಂತಹ ಸಾಂಕೇತಿಕ ಆಹಾರವನ್ನು ವಿಶ್ವಾಸಾರ್ಹ ಮೂಲದಿಂದ ಪಡೆದುಕೊಳ್ಳುತ್ತಿದ್ದೀರೆಂಬುದನ್ನು ಖಚಿತಪಡಿಸಿಕೊಳ್ಳಿರಿ.—ತೀತ 1:9, 13.
ಹದಿನೇಳನೆಯ ಶತಮಾನದ ಧರ್ಮಬೋಧಕನಾದ ಥಾಮಸ್ ಆ್ಯಡಮ್ಸನು ತನ್ನ ಕಾಲದ ಜನರ ಕುರಿತಾಗಿ ಹೇಳಿದ್ದು: “ಅವರು ತಮ್ಮ ಹಲ್ಲುಗಳಿಂದಲೇ ತಮ್ಮ ಸಮಾಧಿಗಳನ್ನು ತೋಡಿಕೊಂಡಿದ್ದಾರೆ.” ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಅವರು ಏನನ್ನು ತಿಂದರೋ ಅದೇ ಅವರನ್ನು ಕೊಂದುಹಾಕಿತು. ನೀವು ಆತ್ಮಿಕವಾಗಿ ಏನನ್ನು ಉಣ್ಣುತ್ತೀರೋ ಅದು ನಿಮ್ಮನ್ನು ಕೊಲ್ಲುವುದಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿರಿ. ಒಳ್ಳೆಯ ಆತ್ಮಿಕಾಹಾರದ ಸರಬರಾಯಿಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ. ತನ್ನ ಜನರೆಂದು ಹೇಳಿಕೊಂಡವರು, ಸುಳ್ಳು ಬೋಧಕರು ಹಾಗೂ ಸುಳ್ಳು ಪ್ರವಾದಿಗಳ ಕಡೆಗೆ ತಿರುಗಿಕೊಂಡಾಗ, “ಆಹಾರವಲ್ಲದ್ದಕ್ಕೆ ಹಣವನ್ನು ಏಕೆ ವ್ಯಯಮಾಡುತ್ತೀರಿ?” ಎಂದು ಯೆಹೋವ ದೇವರು ಕೇಳಿದನು. “ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ, ಒಳ್ಳೇದನ್ನೇ ಉಂಡು ಮೃಷ್ಟಾನ್ನದಲ್ಲಿ ಆನಂದಪಡಿರಿ. ಕಿವಿಯನ್ನು ಇತ್ತ ತಿರುಗಿಸಿರಿ, ನನ್ನ ಬಳಿಗೆ ಬನ್ನಿರಿ; ಆಲಿಸಿದರೆ ಬದುಕಿ ಬಾಳುವಿರಿ.”—ಯೆಶಾಯ 55:2, 3; ಹೋಲಿಸಿರಿ ಯೆರೆಮೀಯ 2:8, 13.
ಆತ್ಮಿಕ ಆಹಾರದ ಸಮೃದ್ಧಿ
ನಿಶ್ಚಯವಾಗಿಯೂ ಒಳ್ಳೆಯ ಆತ್ಮಿಕ ಆಹಾರದ ಅಭಾವವೇ ಇಲ್ಲ. ಯೇಸು ಕ್ರಿಸ್ತನು ಪ್ರವಾದಿಸಿದಂತೆ, “ಹೊತ್ತುಹೊತ್ತಿಗೆ ಆಹಾರ”ವನ್ನು ಬಯಸುವ ಯಾರಿಗೇ ಆಗಲಿ, ಅದನ್ನು ಒದಗಿಸುವುದರಲ್ಲಿ ಕಾರ್ಯಮಗ್ನವಾಗಿರುವ ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗ ಈಗ ಅವನಿಗಿದೆ. (ಮತ್ತಾಯ 24:45) ಪ್ರವಾದಿಯಾದ ಯೆಶಾಯನ ಮೂಲಕ ಯೆಹೋವನು ವಾಗ್ದಾನಿಸಿದ್ದು: “ಇಗೋ, ನನ್ನ ಸೇವಕರು ಊಟಮಾಡುವರು, ನೀವು ಹಸಿದಿರುವಿರಿ; . . . ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು.” ವಾಸ್ತವದಲ್ಲಿ, ಯಾರು ಆಹಾರದ ಔತಣವನ್ನು ಸವಿಯಲು ಬಯಸುತ್ತಾರೋ ಅವರಿಗಾಗಿ ಆತನು ಒಂದು ಔತಣವನ್ನು ವಾಗ್ದಾನಿಸುತ್ತಾನೆ. “ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲಜನಾಂಗಗಳಿಗೂ ಸಾರವತ್ತಾದ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು.”—ಯೆಶಾಯ 25:6; 65:13, 14.
ಆದರೆ, ಇದನ್ನು ಪರಿಗಣಿಸಿರಿ: ಒಂದು ಔತಣದಲ್ಲಿ ನಾವು ಹೊಟ್ಟೆಗಿಲ್ಲದೆ ಸಾಯಸಾಧ್ಯವಿದೆ! ಆಹಾರದಿಂದ ಸುತ್ತುವರಿದಿದ್ದರೂ, ನಾವು ವಾಸ್ತವವಾಗಿ ಅದರಿಂದ ಏನನ್ನಾದರೂ ತಿನ್ನಲು ನಮ್ಮನ್ನು ಹುರಿದುಂಬಿಸಿಕೊಳ್ಳದಿದ್ದರೆ, ನಾವು ಗುರುತರವಾಗಿ ನ್ಯೂನಪೋಷಿತರಾಗಿರಸಾಧ್ಯವಿದೆ. ಜ್ಞಾನೋಕ್ತಿ 26:15 ಈ ಅಕ್ಷರಾರ್ಥ ವರ್ಣನೆಯನ್ನು ಒದಗಿಸುತ್ತದೆ: “ಸೋಮಾರಿಯು ಪಾತ್ರೆಯೊಳಗೆ ಕೈ ಮುಳುಗಿಸಿದ ಮೇಲೆ ತಿರಿಗಿ ಬಾಯ ಹತ್ತಿರ ತರಲಾರದಷ್ಟು ಆಯಾಸಪಡುತ್ತಾನೆ.” ಎಂತಹ ದುಃಖಮಯ ಸನ್ನಿವೇಶ! ಆತ್ಮಿಕ ಆಹಾರವನ್ನು ಸೇವಿಸುವುದರಲ್ಲಿ ನಮಗೆ ಸಹಾಯ ಮಾಡುವಂತೆ ವಿನ್ಯಾಸಿಸಲ್ಪಟ್ಟಿರುವ ದೇವರ ವಾಕ್ಯ ಹಾಗೂ ಬೈಬಲ್ ಪ್ರಕಾಶನಗಳ ವೈಯಕ್ತಿಕ ಅಭ್ಯಾಸದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದರಲ್ಲಿ ನಾವು ತದ್ರೀತಿಯಲ್ಲಿ ತೀರ ಸೋಮಾರಿಗಳಾಗಿ ಪರಿಣಮಿಸಬಲ್ಲೆವು. ಅಥವಾ ಕ್ರೈಸ್ತ ಸಭೆಯ ಕೂಟಗಳಿಗಾಗಿ ತಯಾರಿಮಾಡಲು ಅಥವಾ ಅದರಲ್ಲಿ ಭಾಗವಹಿಸಲು ನಾವು ತೀರ ದಣಿದವರಾಗಿ ಪರಿಣಮಿಸಸಾಧ್ಯವಿದೆ.
ಒಳ್ಳೆಯ ತಿನ್ನುವ ರೂಢಿಗಳು
ಆದುದರಿಂದ, ಆತ್ಮಿಕವಾಗಿ ಒಳ್ಳೆಯ ತಿನ್ನುವ ರೂಢಿಗಳನ್ನು ಬೆಳೆಸಿಕೊಳ್ಳಲು ನಮಗೆ ಪ್ರತಿಯೊಂದು ಕಾರಣವೂ ಇದೆ. ಆದಾಗಲೂ, ನಿಜಾಂಶವೇನೆಂದರೆ, ಅನೇಕರು ತಮ್ಮ ಆತ್ಮಿಕ ಆಹಾರವನ್ನು ಮಿತವಾಗಿ ಸೇವಿಸುತ್ತಾರೆ, ಕೆಲವರು ಸ್ವತಃ ಸಂಪೂರ್ಣವಾಗಿ ಹೊಟ್ಟೆಗಿಲ್ಲದವರಾಗಿಯೂ ಇರುತ್ತಾರೆ. ಅವರು ಸಮಯಾನಂತರ ಜೀವಿತದಲ್ಲಿ ಅದರ ಪರಿಣಾಮಗಳನ್ನು ಅನುಭವಿಸುವ ತನಕ, ಸರಿಯಾದ ಆಹಾರ ಪಥ್ಯದ ಪ್ರಮುಖತೆಯನ್ನು ಗಮನಿಸದ ವ್ಯಕ್ತಿಗಳಂತಿರಸಾಧ್ಯವಿದೆ. ಒಳ್ಳೆಯ ತಿನ್ನುವಿಕೆಯು ಜೀವಿತಕ್ಕೆ ಅತ್ಯಾವಶ್ಯಕವಾಗಿದೆ ಎಂಬುದು ಗೊತ್ತಿದ್ದರೂ, ನಾವು ನಮ್ಮ ತಿನ್ನುವ ರೂಢಿಗಳ ಕುರಿತು ಏಕೆ ಅಜಾಗರೂಕರಾಗಿರಬಹುದು ಎಂಬುದಕ್ಕೆ, ಆರೋಗ್ಯಕರ ತಿನ್ನುವಿಕೆ (ಇಂಗ್ಲಿಷ್) ಎಂಬ ಪುಸ್ತಕವು ಈ ಕಾರಣವನ್ನು ಕೊಡುತ್ತದೆ: “ಸಮಸ್ಯೆಯೇನಂದರೆ, [ನ್ಯೂನ ತಿನ್ನುವ ರೂಢಿಗಳ ಪರಿಣಾಮದೋಪಾದಿ] ಆರೋಗ್ಯದಲ್ಲಿ ತೀವ್ರಗತಿಯ ಕ್ಷೀಣಿಸುವಿಕೆ ಇರುವುದಿಲ್ಲ, ಅಜಾಗರೂಕವಾಗಿ ರಸ್ತೆ ದಾಟುತ್ತಿರುವಾಗ ಆಗುವಂತಹ ಅನಿರೀಕ್ಷಿತ ಫಲಿತಾಂಶವು ಉಂಟಾಗುವುದಿಲ್ಲ. ಬದಲಾಗಿ, ಒಬ್ಬನ ಆರೋಗ್ಯದಲ್ಲಿ ತುಂಬಾ ನಿಧಾನವಾದ, ಅಗೋಚರ ಕ್ಷೀಣಿಸುವಿಕೆ ಇರಬಹುದು, ಸೋಂಕುರೋಗಗಳು ಹೆಚ್ಚು ಬೇಗನೆ ದೇಹಕ್ಕೆ ತಗಲಬಹುದು, ಮೂಳೆಗಳು ಹೆಚ್ಚು ದುರ್ಬಲವಾಗಬಹುದು, ಗಾಯಗಳ ವಾಸಿಯಾಗುವಿಕೆ ಅಥವಾ ರೋಗದಿಂದ ಗುಣವಾಗುವಿಕೆಯು ತುಂಬ ನಿಧಾನವಾಗಬಹುದು.”
ವಿಪರೀತ ವಿದ್ಯಮಾನಗಳಲ್ಲಿ ಒಬ್ಬನು, ಆಹಾರಮಾಂದ್ಯದಿಂದ ಕಷ್ಟಾನುಭವಿಸುವ ಒಬ್ಬ ಯುವತಿಯಂತಾಗಬಹುದು. ಅವಳು ಶಾರೀರಿಕವಾಗಿ ಕ್ಷೀಣಿಸುತ್ತಿರುವುದು ವಾಸ್ತವಾಂಶವಾಗಿದ್ದರೂ, ತನಗೆ ಸ್ವಲ್ಪವೇ ಆಹಾರ ಸಾಕು, ತಾನು ಸಂಪೂರ್ಣವಾಗಿ ಆರೋಗ್ಯವಂತಳಾಗಿದ್ದೇನೆ ಎಂದು ಅವಳು ಸ್ವತಃ ಮನವರಿಕೆಮಾಡಿಕೊಳ್ಳುತ್ತಾಳೆ. ಕಟ್ಟಕಡೆಗೆ ಅವಳು ತಿನ್ನುವ ಬಯಕೆಯನ್ನೇ ಕಳೆದುಕೊಳ್ಳುತ್ತಾಳೆ. “ಅದು ಅಪಾಯಕರವಾದ ಒಂದು ಸ್ಥಿತಿಯಾಗಿದೆ” ಎಂದು ಒಂದು ವೈದ್ಯಕೀಯ ಪುಸ್ತಕವು ಹೇಳುತ್ತದೆ. ಏಕೆ? “ರೋಗಿಯು ಹಸಿವೆಯಿಂದ ಅಕ್ಷರಾರ್ಥವಾಗಿ ಮರಣಹೊಂದುವುದು ವಿರಳವಾಗಿರುವುದಾದರೂ, ಅವಳು ಗುರುತರವಾಗಿ ನ್ಯೂನಪೋಷಿತಳಾಗುತ್ತಾಳೆ ಮತ್ತು ಸಾಮಾನ್ಯವಾಗಿ ಯಾವುದು ಕ್ಷುಲ್ಲಕವಾದ ಸೋಂಕಾಗಿದೆಯೋ ಅದಕ್ಕೆ ತುತ್ತಾಗಬಹುದು.”
ಒಬ್ಬ ಕ್ರೈಸ್ತ ಸ್ತ್ರೀಯು ಒಪ್ಪಿಕೊಂಡದ್ದು: “ಅನೇಕ ವರ್ಷಗಳ ವರೆಗೆ ನಾನು ಕ್ರಮವಾದ ಕೂಟದ ತಯಾರಿ ಹಾಗೂ ವೈಯಕ್ತಿಕ ಅಭ್ಯಾಸಕ್ಕಾಗಿರುವ ಆವಶ್ಯಕತೆಯನ್ನು ತಿಳಿದುಕೊಳ್ಳುವ ಮತ್ತು ಅದನ್ನು ಎಂದೂ ಮಾಡಲು ಶಕ್ತಳಾಗಿರದ ವಿಷಯದೊಂದಿಗೆ ಹೆಣಗಾಡಿದೆ.” ದೇವರ ವಾಕ್ಯದ ಒಬ್ಬ ಒಳ್ಳೆಯ ವಿದ್ಯಾರ್ಥಿಯಾಗಲಿಕ್ಕಾಗಿ ಅವಳು ಕಾಲಕ್ರಮೇಣ ಬದಲಾವಣೆಗಳನ್ನು ಮಾಡಿದಳು—ಆದರೆ ಅವಳು ತನ್ನ ಸನ್ನಿವೇಶದ ಜರೂರಿಯನ್ನು ಸಂಪೂರ್ಣವಾಗಿ ಗ್ರಹಿಸಿಕೊಂಡಾಗ ಮಾತ್ರ.
ಆದುದರಿಂದ, ಅಪೊಸ್ತಲ ಪೇತ್ರನು ಕೊಟ್ಟ ಬುದ್ಧಿವಾದವನ್ನು ಮನಸ್ಸಿಗೆ ತೆಗೆದುಕೊಳ್ಳಿರಿ. “ನವಜಾತ ಶಿಶುಗಳಂತೆ” (NW) ಆಗಿ, “ಪಾರಮಾರ್ಥಿಕವಾದ ಶುದ್ಧ ಹಾಲನ್ನು ಬಯಸಿರಿ [“ಹಂಬಲವನ್ನು ಕಲ್ಪಿಸಿಕೊಳ್ಳಿರಿ,” NW]; ಅದರಿಂದ ಬೆಳೆಯುತ್ತಾ ರಕ್ಷಣೆಯನ್ನು ಹೊಂದುವಿರಿ.” (1 ಪೇತ್ರ 2:2) ಹೌದು, ನಿಮ್ಮ ಮನಸ್ಸನ್ನೂ ಹೃದಯವನ್ನೂ ದೇವರ ಜ್ಞಾನದಿಂದ ತುಂಬಿಸಿಕೊಳ್ಳಲು “ಹಂಬಲವನ್ನು ಕಲ್ಪಿಸಿಕೊಳ್ಳಿರಿ”—ಬಲವಾದ ಅಪೇಕ್ಷೆಯನ್ನು ಬೆಳೆಸಿಕೊಳ್ಳಿರಿ. ಆತ್ಮಿಕ ವಯಸ್ಕರು ಸಹ ಆ ಹಂಬಲವನ್ನು ಪೋಷಿಸಿಕೊಳ್ಳುತ್ತಾ ಇರುವ ಅಗತ್ಯವಿದೆ. ಆತ್ಮಿಕ ಆಹಾರವು, ‘ನಿಮ್ಮ ಸ್ವತ್ತುಗಳಲ್ಲೇ ಅತಿ ಹೆಚ್ಚು ದುರುಪಯೋಗಿಸಲ್ಪಟ್ಟಂತಹ ಸ್ವತ್ತಾಗಿ’ ಪರಿಣಮಿಸುವಂತೆ ಅನುಮತಿಸದಿರಿ. ಆತ್ಮಿಕವಾಗಿ ಚೆನ್ನಾಗಿ ಉಣ್ಣಿರಿ, ಮತ್ತು ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವ ಎಲ್ಲಾ “ಸ್ವಸ್ಥಬೋಧನಾವಾಕ್ಯ”ಗಳಿಂದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿರಿ.—2 ತಿಮೊಥೆಯ 1:13, 14.
[ಪುಟ 28 ರಲ್ಲಿರುವ ಚಿತ್ರ]
ನಿಮ್ಮ ಆಹಾರ ಪಥ್ಯವನ್ನು ನೀವು ಉತ್ತಮಗೊಳಿಸಿಕೊಳ್ಳುವ ಅಗತ್ಯವಿದೆಯೆ?