ನೀವು ಪುನರ್ಜನ್ಮವನ್ನು ನಂಬಬೇಕೊ?
ಗ್ರೀಕ್ ತತ್ತ್ವಜ್ಞಾನಿಯಾದ ಪ್ಲೇಟೊ, ಪ್ರಣಯಕ್ಕೊಳಗಾಗುವುದನ್ನು, ಪುನರ್ಜನ್ಮದ ವಿಚಾರದೊಂದಿಗೆ ಸಂಬಂಧಿಸಿದನು. ದೇಹದ ಮರಣದ ನಂತರ, ಪ್ರಾಣವು ಅಮರವಾಗಿರುವುದರಿಂದ, “ಶುದ್ಧವಾದ ನೈಜ ತತ್ತ್ವಗಳ ಕ್ಷೇತ್ರಕ್ಕೆ” ವಲಸೆಹೋಗುತ್ತದೆಂದು ಅವನು ನಂಬಿದನು. ದೇಹರಹಿತವಾಗಿ, ಅದು ಆ ಆಕಾರಗಳನ್ನು ಅವಲೋಕಿಸುತ್ತಾ, ಸ್ವಲ್ಪ ಸಮಯದ ವರೆಗೆ ಅಲ್ಲಿ ಉಳಿಯುತ್ತದೆ. ಅನಂತರ ಅದು ಇನ್ನೊಂದು ದೇಹದಲ್ಲಿ ಪುನರ್ಜನಿಸುವಾಗ, ಪ್ರಾಣವು ನೈಜ ತತ್ತ್ವಗಳ ಕ್ಷೇತ್ರವನ್ನು ಉಪಪ್ರಜ್ಞೆಯಿಂದ ಜ್ಞಾಪಿಸಿಕೊಂಡು, ಅದಕ್ಕಾಗಿ ಹಾತೊರೆಯುತ್ತದೆ. ಪ್ಲೇಟೊಗನುಸಾರ, ಜನರು ಪ್ರಣಯಕ್ಕೊಳಗಾಗುವುದು ಯಾಕಂದರೆ, ಅವರು ಅಸ್ಪಷ್ಟವಾಗಿ ಜ್ಞಾಪಿಸಿಕೊಳ್ಳುವ ಮತ್ತು ಹುಡುಕುವಂತಹ ಸೌಂದರ್ಯದ ಆದರ್ಶ ಆಕಾರವನ್ನು ತಮ್ಮ ಪ್ರಿಯತಮರಲ್ಲಿ ಕಾಣುತ್ತಾರೆ.
ಮೂಲ ಮತ್ತು ಆಧಾರವನ್ನು ಗುರುತಿಸುವುದು
ಪ್ರಾಣವು ಅಮರವಾಗಿರುವುದನ್ನು ಪುನರ್ಜನ್ಮದ ಬೋಧನೆಯು ಅವಶ್ಯಪಡಿಸುತ್ತದೆ. ಹಾಗಾದರೆ, ಪುನರ್ಜನ್ಮದ ಆರಂಭವನ್ನು, ಅಂತಹ ನಂಬಿಕೆಯಿದ್ದ ಜನಾಂಗಗಳು ಅಥವಾ ರಾಷ್ಟ್ರಗಳಿಗೆ ಪತ್ತೆಹಚ್ಚಬೇಕು. ಈ ಆಧಾರದ ಮೇಲೆ, ಅದು ಪ್ರಾಚೀನ ಐಗುಪ್ತದಲ್ಲಿ ಆರಂಭವಾಯಿತೆಂದು ಕೆಲವರು ನೆನಸುತ್ತಾರೆ. ಅದು ಪುರಾತನ ಬಬಿಲೋನ್ಯದಲ್ಲಿ ಆರಂಭವಾಯಿತೆಂದು ಇನ್ನಿತರರು ನಂಬುತ್ತಾರೆ. ಬಬಿಲೋನಿನ ಧರ್ಮಕ್ಕಾಗಿ ಪ್ರತಿಷ್ಠೆಯನ್ನು ಉಂಟುಮಾಡಲು, ಅದರ ಪುರೋಹಿತವರ್ಗವು ಪ್ರಾಣದ ದೇಹಾಂತರದ ಸಿದ್ಧಾಂತವನ್ನು ಪ್ರಸ್ತಾಪಿಸಿತು. ಹೀಗೆ ತಮ್ಮ ಧಾರ್ಮಿಕ ವೀರನಾಯಕರು, ತುಂಬಾ ಸಮಯದ ಹಿಂದೆ ಸತ್ತಿದ್ದರೂ, ಪ್ರಸಿದ್ಧರಾಗಿದ್ದ ಪೂರ್ವಜರ ಪುನರವತಾರಗಳಾಗಿದ್ದರೆಂದು ಅವರು ವಾದಿಸಸಾಧ್ಯವಿತ್ತು.
ಆದಾಗಲೂ, ಪುನರ್ಜನ್ಮದಲ್ಲಿನ ನಂಬಿಕೆಯು ಪೂರ್ಣವಾಗಿ ಅರಳಿಕೊಂಡದ್ದು ಭಾರತದಲ್ಲಿ. ಹಿಂದೂ ಸಂನ್ಯಾಸಿಗಳು, ದುಷ್ಟತನ ಮತ್ತು ಮನುಷ್ಯರ ನಡುವಿನ ಕಷ್ಟಾನುಭವದ ವಿಶ್ವವ್ಯಾಪಿ ಸಮಸ್ಯೆಗಳೊಂದಿಗೆ ಹೆಣಗಾಡುತ್ತಿದ್ದರು. ‘ಒಬ್ಬ ನೀತಿವಂತ ಸೃಷ್ಟಿಕರ್ತನ ಕಲ್ಪನೆಯೊಂದಿಗೆ ಈ ಸಂಗತಿಗಳನ್ನು ಹೇಗೆ ಹೊಂದಿಸಿಕೊಳ್ಳಸಾಧ್ಯವಿದೆ?’ ಎಂದು ಅವರು ಕೇಳಿದರು. ದೇವರ ನೀತಿ ಮತ್ತು ಲೋಕದಲ್ಲಿನ ಮುಂಗಾಣದ ಆಪತ್ತುಗಳು ಮತ್ತು ಅಸಮಾನತ್ವಗಳ ನಡುವಿನ ಘರ್ಷಣೆಯನ್ನು ಅವರು ಬಗೆಹರಿಸಲು ಪ್ರಯತ್ನಿಸಿದರು. ಸಮಯಾನಂತರ ಅವರು “ಕರ್ಮ ನಿಯಮ”ವನ್ನು, ಕಾರಣ ಕಾರ್ಯ ಭಾವದ ನಿಯಮವನ್ನು—‘ಮನುಷ್ಯನು ತಾನು ಏನನ್ನು ಬಿತ್ತುತ್ತಾನೋ ಅದನ್ನೇ ಕೊಯ್ಯುವನು’—ರಚಿಸಿದರು. ಅವರು ಒಂದು ವಿಸ್ತೃತ ‘ಜಮಾಖರ್ಚು ಪಟ್ಟಿ’ಯನ್ನು ಬರೆದುಹಾಕಿದರು. ಇದರಿಂದ ಒಬ್ಬನ ಜೀವಿತದಲ್ಲಿನ ಸುಗುಣಗಳು ಮತ್ತು ಅವಗುಣಗಳು, ಮುಂದಿನ ಜೀವಿತದಲ್ಲಿ ಬಹುಮಾನಿಸಲ್ಪಡುವವು ಅಥವಾ ಶಿಕ್ಷಿಸಲ್ಪಡುವವು.
“ಕರ್ಮ”ದ ಸರಳಾರ್ಥ “ಕ್ರಿಯೆ.” ಒಬ್ಬ ಹಿಂದೂ ವ್ಯಕ್ತಿಯು, ಸಾಮಾಜಿಕ ಮತ್ತು ಧಾರ್ಮಿಕ ರೂಢಿಗಳನ್ನು ಅನುಸರಿಸುವುದಾದರೆ, ಒಳ್ಳೆಯ ಕರ್ಮವನ್ನು ಹೊಂದಿರುತ್ತಾನೆ, ಮತ್ತು ಅವನು ಅವುಗಳನ್ನು ಅನುಸರಿಸದಿದ್ದರೆ ಕೆಟ್ಟ ಕರ್ಮವನ್ನು ಹೊಂದಿರುತ್ತಾನೆಂದು ಹೇಳಲಾಗುತ್ತದೆ. ಅವನ ಕ್ರಿಯೆ, ಅಥವಾ ಕರ್ಮವು, ಪ್ರತಿಯೊಂದು ಅನುಕ್ರಮಿಕ ಪುನರ್ಜನ್ಮದಲ್ಲಿನ ಅವನ ಭವಿಷ್ಯತ್ತನ್ನು ನಿರ್ಧರಿಸುತ್ತದೆ. “ಎಲ್ಲಾ ಮನುಷ್ಯರು ವ್ಯಕ್ತಿತ್ವದ ಒಂದು ನೀಲಿನಕ್ಷೆಯೊಂದಿಗೆ ಹುಟ್ಟುತ್ತಾರೆ. ಇದು ಮುಖ್ಯವಾಗಿ, ಅವರ ಶಾರೀರಿಕ ಲಕ್ಷಣಗಳು ಆನುವಂಶೀಯತೆಯಿಂದ ನಿರ್ಧರಿಸಲ್ಪಟ್ಟಿರುವುದಾದರೂ, ಹಿಂದಿನ ಜೀವಿತಗಳಲ್ಲಿನ ಅವರ ಕ್ರಿಯೆಗಳಿಂದ ತಯಾರಿಸಲ್ಪಟ್ಟಿದೆ,” ಎಂದು ತತ್ತ್ವಜ್ಞಾನಿ ನಿಖಿಲಾನಂದರು ಹೇಳುತ್ತಾರೆ. “[ಹೀಗೆ] ಒಬ್ಬ ಮನುಷ್ಯನು ತನ್ನ ಸ್ವಂತ ಅದೃಷ್ಟದ ವಾಸ್ತುಶಿಲ್ಪಿ, ತನ್ನ ಸ್ವಂತ ಭಾಗ್ಯವನ್ನು ಕಟ್ಟುವವನಾಗಿದ್ದಾನೆ.” ಆದಾಗಲೂ, ಕೊನೆಯ ಗುರಿಯು, ಈ ದೇಹಾಂತರ ಚಕ್ರದಿಂದ ವಿಮೋಚಿಸಲ್ಪಟ್ಟು, ಬ್ರಹ್ಮ—ಪರಮ ಸತ್ಯಾತ್ಮ—ನೊಂದಿಗೆ ಐಕ್ಯವಾಗುವುದಾಗಿದೆ. ಸಾಮಾಜಿಕವಾಗಿ ಸ್ವೀಕೃತವಾಗಿರುವ ನಡವಳಿಕೆ ಮತ್ತು ವಿಶೇಷ ಹಿಂದೂ ಶಾಸ್ತ್ರ ಜ್ಞಾನಕ್ಕಾಗಿ ಶ್ರಮಿಸುವ ಮೂಲಕ ಇದನ್ನು ಸಾಧಿಸಲಾಗುತ್ತದೆಂದು ನಂಬಲಾಗುತ್ತದೆ.
ಹೀಗೆ ಪುನರ್ಜನ್ಮದ ಬೋಧನೆಯು, ಪ್ರಾಣದ ಅಮರತ್ವದ ಸಿದ್ಧಾಂತವನ್ನು ತನ್ನ ಅಸ್ತಿವಾರದೋಪಾದಿ ಉಪಯೋಗಿಸುತ್ತದೆ ಮತ್ತು ಕರ್ಮ ನಿಯಮವನ್ನು ಉಪಯೋಗಿಸಿ ಅದರ ಮೇಲೆ ಕಟ್ಟುತ್ತದೆ. ಈ ವಿಚಾರಗಳ ಕುರಿತಾಗಿ ದೇವರ ಪ್ರೇರಿತ ವಾಕ್ಯವಾದ ಬೈಬಲಿಗೆ ಏನು ಹೇಳಲಿಕ್ಕಿದೆಯೆಂಬುದನ್ನು ನಾವು ನೋಡೋಣ.
ಮನುಷ್ಯನ ಒಂದು ಭಾಗವು ಅಮರವೊ?
ಈ ಪ್ರಶ್ನೆಯನ್ನು ಉತ್ತರಿಸಲು, ಈ ವಿಷಯದ ಮೇಲೆ ಅತ್ಯುಚ್ಚ ಪ್ರಮಾಣವಾಗಿರುವ—ಸೃಷ್ಟಿಕರ್ತನ ಪ್ರೇರಿತ ವಾಕ್ಯದ ಕಡೆಗೆ ನಾವು ತಿರುಗೋಣ. ಪ್ರಥಮ ಮನುಷ್ಯನಾದ ಆದಾಮನ ಸೃಷ್ಟಿಯನ್ನು ವರ್ಣಿಸುತ್ತಾ, ಬೈಬಲಿನ ಮೊದಲನೆಯ ಪುಸ್ತಕವು ಹೇಳುವುದು: “ಯೆಹೋವ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು, ಮತ್ತು ಆಗ ಮನುಷ್ಯನು ಜೀವಿಸುವ ಪ್ರಾಣವಾದನು [ನೆಫೆಷ್].”a (ಆದಿಕಾಂಡ 2:7, NW) ಸ್ಪಷ್ಟವಾಗಿ, ಜೀವಾತ್ಮ ಅಥವಾ ಪ್ರಾಣವು ಪ್ರಥಮ ಮನುಷ್ಯನಿಂದ ಪ್ರತ್ಯೇಕವಾಗಿರುವ ಒಂದು ವಿಷಯವೆಂದು ಶಾಸ್ತ್ರವಚನಗಳು ಸೂಚಿಸುವುದಿಲ್ಲ. ಮನುಷ್ಯನು ಒಂದು ಪ್ರಾಣವನ್ನು ಹೊಂದಿರುವುದಿಲ್ಲ, ಅವನೇ ಒಂದು ಪ್ರಾಣ ಆಗಿದ್ದಾನೆ. ಪ್ರಾಣಕ್ಕಾಗಿ ಇಲ್ಲಿ ಉಪಯೋಗಿಸಲ್ಪಟ್ಟಿರುವ ಹೀಬ್ರು ಶಬ್ದವು ನೆಫೆಷ್ ಆಗಿದೆ. ಅದು ಬೈಬಲಿನಲ್ಲಿ ಸುಮಾರು 700 ಸಲ ತೋರಿಬರುತ್ತದೆ. ಮತ್ತು ಅದು ಎಂದೂ ಒಬ್ಬ ಮನುಷ್ಯನ ಪ್ರತ್ಯೇಕವಾದ ಮತ್ತು ಅಪಾರ್ಥಿವ ಭಾಗಕ್ಕೆ ಸೂಚಿಸುವುದಿಲ್ಲ, ಬದಲಾಗಿ ಸ್ಪರ್ಶ್ಯ ಹಾಗೂ ದೈಹಿಕವಾಗಿರುವ ಒಂದು ವಿಷಯಕ್ಕೆ ಯಾವಾಗಲೂ ಸೂಚಿಸುತ್ತದೆ.—ಯೋಬ 6:7; ಕೀರ್ತನೆ 35:13; 107:9; 119:28.
ಹಾಗಾದರೆ ಮರಣದಲ್ಲಿ ಏನು ಸಂಭವಿಸುತ್ತದೆ? ಆದಾಮನಿಗೆ ಮರಣದಲ್ಲಿ ಏನು ಸಂಭವಿಸಿತೊ ಅದನ್ನು ಪರಿಗಣಿಸಿರಿ. ಅವನು ಪಾಪಮಾಡಿದಾಗ, ದೇವರು ಅವನಿಗೆ ಹೇಳಿದ್ದು: “ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಲ್ಲವೋ; ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ.” (ಆದಿಕಾಂಡ 3:19) ಅದರ ಅರ್ಥವೇನೆಂಬುದರ ಕುರಿತಾಗಿ ಯೋಚಿಸಿರಿ. ದೇವರು ಅವನನ್ನು ಮಣ್ಣಿನಿಂದ ಸೃಷ್ಟಿಸುವ ಮುಂಚೆ, ಆದಾಮನು ಅಸ್ತಿತ್ವದಲ್ಲಿರಲಿಲ್ಲ. ಅವನ ಮರಣದ ನಂತರ, ಆದಾಮನು ಅದೇ ಅಸ್ತಿತ್ವಹೀನ ಸ್ಥಿತಿಗೆ ಹಿಂದಿರುಗಿದನು.
ಸರಳವಾಗಿ ಹೇಳುವುದಾದರೆ, ಮರಣವು ಜೀವಕ್ಕೆ ತದ್ವಿರುದ್ಧವಾದ ವಿಷಯವಾಗಿದೆ ಎಂದು ಬೈಬಲ್ ಕಲಿಸುತ್ತದೆ. ಪ್ರಸಂಗಿ 9:5, 10ರಲ್ಲಿ ನಾವು ಹೀಗೆ ಓದುತ್ತೇವೆ: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇಲ್ಲ, ಅವರ ಜ್ಞಾಪಕವೇ ಹೋಯಿತಲ್ಲವೆ. ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು; ನೀನು ಸೇರಬೇಕಾದ ಪಾತಾಳದಲ್ಲಿ ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.”
ಸತ್ತವರು ಏನನ್ನೂ ಮಾಡಲು ಅಥವಾ ಅನುಭವಿಸಲು ಸಾಧ್ಯವಿಲ್ಲವೆಂಬುದನ್ನು ಇದು ಅರ್ಥೈಸುತ್ತದೆ. ಅವರಿಗೆ ಇನ್ನು ಮುಂದೆ ಯಾವುದೇ ಆಲೋಚನೆಗಳು ಇರುವುದಿಲ್ಲ, ಇಲ್ಲವೇ ಅವರಿಗೆ ಯಾವುದೇ ವಿಷಯವು ಜ್ಞಾಪಕದಲ್ಲಿರುವುದಿಲ್ಲ. ಕೀರ್ತನೆಗಾರನು ತಿಳಿಸುವುದು: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯ ಮಾಡ ಶಕ್ತನಲ್ಲ; ಅವನ ಉಸಿರು ಹೋಗಲು ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.”—ಕೀರ್ತನೆ 146:3, 4.
ಮರಣದಲ್ಲಿ ಜೀವಾತ್ಮ ಅಥವಾ ಪ್ರಾಣವು ಇನ್ನೊಂದು ದೇಹಕ್ಕೆ ಸ್ಥಳಾಂತರಿಸುವುದಿಲ್ಲ, ಬದಲಾಗಿ ಸಾಯುತ್ತದೆಂದು ಬೈಬಲ್ ಸ್ಪಷ್ಟವಾಗಿ ತೋರಿಸುತ್ತದೆ. “ಪಾಪ ಮಾಡುತ್ತಿರುವ ಪ್ರಾಣವು—ಅದು ತಾನೇ ಸಾಯುವುದು” (NW) ಎಂದು ಬೈಬಲ್ ಒತ್ತಿಹೇಳುತ್ತದೆ. (ಯೆಹೆಜ್ಕೇಲ 18:4, 20; ಅ. ಕೃತ್ಯಗಳು 3:23; ಪ್ರಕಟನೆ 16:3) ಹೀಗೆ, ಪ್ರಾಣದ ಅಮರತ್ವದ ಸಿದ್ಧಾಂತ—ಪುನರ್ಜನ್ಮ ವಾದದ ಅಸ್ತಿವಾರ—ಕ್ಕೆ ಶಾಸ್ತ್ರಗಳಲ್ಲಿ ಯಾವುದೇ ಬೆಂಬಲವಿಲ್ಲ. ಅದಿಲ್ಲದೆ, ಆ ವಾದವು ಕುಸಿದುಬೀಳುತ್ತದೆ. ಹಾಗಾದರೆ ಲೋಕದಲ್ಲಿ ನಾವು ನೋಡುವ ಕಷ್ಟಾನುಭವಕ್ಕೆ ಕಾರಣವೇನು?
ಜನರು ಏಕೆ ಕಷ್ಟಾನುಭವಿಸುತ್ತಾರೆ?
ಮಾನವ ಕಷ್ಟಾನುಭವಕ್ಕಾಗಿರುವ ಮೂಲಭೂತ ಕಾರಣವು, ಪಾಪಪೂರ್ಣ ಆದಾಮನಿಂದ ನಾವೆಲ್ಲರೂ ಬಾಧ್ಯತೆಯಾಗಿ ಪಡೆಯುವ ಅಪರಿಪೂರ್ಣತೆಯಾಗಿದೆ. “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು” ಎಂದು ಬೈಬಲ್ ಹೇಳುತ್ತದೆ. (ರೋಮಾಪುರ 5:12) ಆದಾಮನಿಂದ ಹುಟ್ಟಿದವರಾಗಿ, ನಾವೆಲ್ಲರೂ ಅಸ್ವಸ್ಥರು, ವೃದ್ಧರು ಆಗಿ ಸಾಯುತ್ತೇವೆ.—ಕೀರ್ತನೆ 41:1, 3; ಫಿಲಿಪ್ಪಿ 2:25-27.
ಇನ್ನೂ ಹೆಚ್ಚಾಗಿ, ಸೃಷ್ಟಿಕರ್ತನ ಅನಮ್ಯ ನೈತಿಕ ನಿಯಮವು ತಿಳಿಸುವುದು: “ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು.” (ಗಲಾತ್ಯ 6:7, 8) ಹೀಗೆ, ಸ್ವೇಚ್ಛಾಚಾರದ ಒಂದು ಜೀವನ ಶೈಲಿಯು, ಭಾವನಾತ್ಮಕ ಸಂಕಟ, ಬೇಡವಾದ ಗರ್ಭಧಾರಣೆಗಳು, ಮತ್ತು ರತಿ ರವಾನಿತ ರೋಗಗಳಿಗೆ ನಡಿಸಬಹುದು. “[ಅಮೆರಿಕದಲ್ಲಿ] ಮರಣಾಂತಿಕ ಕ್ಯಾನ್ಸರ್ಗಳಲ್ಲಿ ಆಶ್ಚರ್ಯಗೊಳಿಸುವ 30 ಪ್ರತಿಶತವನ್ನು, ಪ್ರಧಾನವಾಗಿ ಧೂಮಪಾನಕ್ಕೆ ಆರೋಪಿಸಸಾಧ್ಯವಿದೆ. ಮತ್ತು ತತ್ಸಮಾನವಾದ ಸಂಖ್ಯೆಯನ್ನು, ಜೀವನಶೈಲಿಗೆ, ವಿಶೇಷವಾಗಿ ಆಹಾರಪಥ್ಯದ ಅಭ್ಯಾಸಗಳು ಮತ್ತು ವ್ಯಾಯಾಮದ ಕೊರತೆಗೆ ಆರೋಪಿಸಸಾಧ್ಯವಿದೆ,” ಎಂದು ಸೈಯಂಟಿಫಿಕ್ ಅಮೆರಿಕನ್ ಪತ್ರಿಕೆಯು ಹೇಳುತ್ತದೆ. ಕಷ್ಟಾನುಭವವನ್ನು ಉಂಟುಮಾಡುವ ಕೆಲವು ವಿಪತ್ತುಗಳು, ಈ ಭೂಮಿಯ ಸಂಪನ್ಮೂಲಗಳ ವಿಷಯದಲ್ಲಿ ಮನುಷ್ಯನ ದುರ್ನಿರ್ವಹಣೆಯ ಫಲಿತಾಂಶವಾಗಿವೆ.—ಪ್ರಕಟನೆ 11:18ನ್ನು ಹೋಲಿಸಿರಿ.
ಹೌದು, ತನ್ನ ದುರವಸ್ಥೆಯಲ್ಲಿ ಹೆಚ್ಚಿನದ್ದಕ್ಕೆ ಮನುಷ್ಯನೇ ಕಾರಣನಾಗಿದ್ದಾನೆ. ಆದಾಗಲೂ, ಪ್ರಾಣವು ಅಮರವಾಗಿರದಿರುವುದರಿಂದ, ‘ನೀವೇನನ್ನು ಬಿತ್ತುತ್ತೀರೊ ಅದನ್ನು ಕೊಯ್ಯುವಿರಿ’ ಎಂಬ ನಿಯಮವನ್ನು, ಒಂದು ಕರ್ಮಕ್ಕೆ—ಹಿಂದಿನ ಒಂದು ಜೀವಿತದ್ದೆಂದು ಭಾವಿಸಲಾಗುವ ಕ್ರಿಯೆಗಳು—ಮಾನವ ಕಷ್ಟಾನುಭವವನ್ನು ಸಂಬಂಧಿಸುವಂತೆ ಉಪಯೋಗಿಸಲು ಸಾಧ್ಯವಿಲ್ಲ. “ಸತ್ತವನು ಪಾಪದ ವಶದಿಂದ ಬಿಡುಗಡೆ ಹೊಂದಿದ್ದಾನಷ್ಟೆ” ಎಂದು ಬೈಬಲ್ ತಿಳಿಸುತ್ತದೆ. (ರೋಮಾಪುರ 6:7, 23) ಹೀಗೆ ಪಾಪದ ಫಲವನ್ನು ಮರಣಾನಂತರ ಒಂದು ಜೀವಿತಕ್ಕೆ ಮುಂದೆ ಒಯ್ಯಲಾಗುವುದಿಲ್ಲ.
ಪಿಶಾಚನಾದ ಸೈತಾನನೂ ತುಂಬ ಕಷ್ಟಾನುಭವವನ್ನು ಉಂಟುಮಾಡುತ್ತಾನೆ. ವಾಸ್ತವದಲ್ಲಿ, ಈ ಲೋಕವು ಸೈತಾನನಿಂದ ಆಳಲ್ಪಡುತ್ತದೆ. (1 ಯೋಹಾನ 5:19) ಮತ್ತು ಯೇಸು ಕ್ರಿಸ್ತನು ಮುಂತಿಳಿಸಿದಂತೆ, ಅವನ ಶಿಷ್ಯರು ‘ಅವನ ಹೆಸರಿನ ನಿಮಿತ್ತ ಎಲ್ಲರಿಂದ ಹಗೆಮಾಡಲ್ಪಡುವರು.’ (ಮತ್ತಾಯ 10:22) ಫಲಿತಾಂಶವಾಗಿ, ದುಷ್ಟರಿಗಿಂತ ನೀತಿವಂತರು ಅನೇಕವೇಳೆ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಾರೆ.
ಯಾವುದರ ಕಾರಣಗಳು ಕೂಡಲೆ ವ್ಯಕ್ತವಾಗುವುದಿಲ್ಲವೊ, ಅಂತಹ ಕೆಲವು ಘಟನೆಗಳು ಈ ಲೋಕದಲ್ಲಿ ಸಂಭವಿಸುತ್ತವೆ. ಅತಿ ವೇಗದ ಓಟಗಾರನು ಎಡವಿ, ಓಟದಲ್ಲಿ ಸೋಲಬಹುದು. ಒಂದು ಬಲಿಷ್ಠ ಸೇನೆಯು, ಕಡಿಮೆದರ್ಜೆಯ ಸೇನಾಪಡೆಗಳ ಎದುರಿನಲ್ಲಿ ಅಪಜಯಗೊಳ್ಳಬಹುದು. ಒಬ್ಬ ವಿವೇಕಿ ಪುರುಷನು, ಒಂದು ಒಳ್ಳೆಯ ಉದ್ಯೋಗವನ್ನು ಪಡೆಯಲು ಅಶಕ್ತನಾಗಿ, ಈ ರೀತಿಯಲ್ಲಿ ಹಸಿವನ್ನು ಅನುಭವಿಸಬಹುದು. ವ್ಯಾಪಾರ ವ್ಯವಹಾರದ ಅತ್ಯುತ್ಕೃಷ್ಟ ತಿಳುವಳಿಕೆಯುಳ್ಳ ಜನರು, ಪರಿಸ್ಥಿತಿಗಳ ಕಾರಣದಿಂದ ತಮ್ಮ ಜ್ಞಾನವನ್ನು ಕಾರ್ಯರೂಪಕ್ಕೆ ಹಾಕಲು ಅಶಕ್ತರಾಗಿ, ಬಡತನಕ್ಕೆ ತಲಪಬಹುದು. ಜ್ಞಾನಿಗಳು ಅಧಿಕಾರದಲ್ಲಿರುವವರ ಕೋಪವನ್ನು ಬರಮಾಡಿಕೊಂಡು, ಅವರ ಅಪ್ರಸನ್ನತೆಗೆ ಗುರಿಯಾಗಬಹುದು. ಹೀಗೇಕೆ? “ಏಕೆಂದರೆ ಕಾಲ ಮತ್ತು ಮುಂಗಾಣದ ಸಂಭವವು ಯಾರಿಗೂ ತಪ್ಪಿದ್ದಲ್ಲ,” ಎಂದು ಉತ್ತರಿಸುತ್ತಾನೆ ವಿವೇಕಿ ಅರಸನಾದ ಸೊಲೊಮೋನನು.—ಪ್ರಸಂಗಿ 9:11, NW.
ಕಷ್ಟಾನುಭವವು ಏಕೆ ಅಸ್ತಿತ್ವದಲ್ಲಿದೆಯೆಂದು ಹಿಂದೂ ಸಂನ್ಯಾಸಿಗಳು ವಿವರಿಸಲು ಪ್ರಯತ್ನಿಸುವುದಕ್ಕೆ ಎಷ್ಟೋ ಮೊದಲು ಅದು ಮನುಷ್ಯನ ಪಾಡಾಗಿತ್ತು. ಆದರೆ ಒಂದು ಉತ್ತಮವಾದ ಭವಿಷ್ಯತ್ತಿನ ನಿರೀಕ್ಷೆಯಿದೆಯೊ? ಮತ್ತು ಸತ್ತವರಿಗಾಗಿ ಬೈಬಲ್ ಯಾವ ವಾಗ್ದಾನವನ್ನು ನೀಡುತ್ತದೆ?
ಒಂದು ಶಾಂತಿಪೂರ್ಣ ಭವಿಷ್ಯತ್ತು
ಸೃಷ್ಟಿಕರ್ತನು, ಸೈತಾನನ ನಿಯಂತ್ರಣದ ಕೆಳಗೆ ಇರುವ ಸದ್ಯದ ಲೋಕ ಸಮಾಜಕ್ಕೆ ತಾನು ಬೇಗನೆ ಅಂತ್ಯವನ್ನು ತರುವೆನೆಂದು ವಾಗ್ದಾನಿಸಿದ್ದಾನೆ. (ಜ್ಞಾನೋಕ್ತಿ 2:21, 22; ದಾನಿಯೇಲ 2:44) ಒಂದು ನೀತಿಯುತ ಹೊಸ ಮಾನವ ಸಮಾಜ—“ನೂತನಭೂಮಂಡಲ”—ವು ಆಗ ಒಂದು ವಾಸ್ತವಿಕ ಸಂಗತಿಯಾಗಿರುವುದು. (2 ಪೇತ್ರ 3:13) ಆ ಸಮಯದಲ್ಲಿ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” (ಯೆಶಾಯ 33:24) ಮರಣದ ಬೇಗುದಿಯೂ ತೆಗೆದುಹಾಕಲ್ಪಡುವುದು, ಯಾಕಂದರೆ ದೇವರು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:4.
ದೇವರ ವಾಗ್ದತ್ತ ಹೊಸ ಲೋಕದ ನಿವಾಸಿಗಳ ವಿಷಯದಲ್ಲಿ, ಕೀರ್ತನೆಗಾರನು ಮುಂತಿಳಿಸಿದ್ದು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) ಇನ್ನೂ ಹೆಚ್ಚಾಗಿ, ದೀನರು “ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:11.
ಹಿಂದಿನ ಲೇಖನದಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಮುಕುಂದ್ಭಾಯ್, ದೇವರ ಅದ್ಭುತಕರವಾದ ವಾಗ್ದಾನಗಳನ್ನು ತಿಳಿಯದೆ ಮರಣದಲ್ಲಿ ನಿದ್ರೆಹೋಗಿದ್ದಾರೆ. ಆದರೆ ದೇವರನ್ನು ತಿಳಿಯದೆ ಸತ್ತಿರುವ ಕೋಟಿಗಟ್ಟಲೆ ಜನರಿಗೆ, ಅಂತಹ ಒಂದು ಶಾಂತಿಪೂರ್ಣ ಹೊಸ ಲೋಕದಲ್ಲಿ ಎಬ್ಬಿಸಲ್ಪಡುವ ಪ್ರತೀಕ್ಷೆಯಿದೆ. ಯಾಕಂದರೆ ಬೈಬಲ್ ವಾಗ್ದಾನಿಸುವುದು: ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದು.’—ಅ. ಕೃತ್ಯಗಳು 24:15; ಲೂಕ 23:43.
ಇಲ್ಲಿ “ಪುನರುತ್ಥಾನ” ಎಂದು ಕೊಡಲ್ಪಟ್ಟಿರುವ ಶಬ್ದವು, ಆ್ಯನಸ್ಟ್ಯಾಸಿಸ್ ಎಂಬ ಗ್ರೀಕ್ ಶಬ್ದದಿಂದ ಭಾಷಾಂತರಿಸಲ್ಪಟ್ಟಿದೆ. ಇದರ ಅಕ್ಷರಶಃ ಅರ್ಥವು, “ಪುನಃ ಎದ್ದು ನಿಲ್ಲುವುದು” ಆಗಿದೆ. ಪುನರುತ್ಥಾನವು ಹೀಗೆ, ವ್ಯಕ್ತಿಯ ಜೀವನ ನಮೂನೆಯನ್ನು ಪುನಃ ಸಕ್ರಿಯಗೊಳಿಸುವುದನ್ನು ಒಳಗೂಡುತ್ತದೆ.
ಭೂಪರಲೋಕಗಳ ಸೃಷ್ಟಿಕರ್ತನ ವಿವೇಕವು ಅಪಾರ. (ಯೋಬ 12:13) ಸತ್ತವರ ಜೀವನ ನಮೂನೆಗಳನ್ನು ನೆನಪಿನಲ್ಲಿಡುವುದು ಆತನಿಗೆ ಒಂದು ಸಮಸ್ಯೆಯಾಗಿರುವುದಿಲ್ಲ. (ಯೆಶಾಯ 40:26ನ್ನು ಹೋಲಿಸಿರಿ.) ಯೆಹೋವ ದೇವರ ಪ್ರೀತಿಯೂ ಯಥೇಚ್ಛವಾಗಿದೆ. (1 ಯೋಹಾನ 4:8) ಹೀಗಿರುವುದರಿಂದ, ಆತನು ತನ್ನ ಪರಿಪೂರ್ಣವಾದ ಸ್ಮರಣಶಕ್ತಿಯನ್ನು, ಸತ್ತವರು ಮಾಡಿರುವ ಕೆಟ್ಟದ್ದಕ್ಕಾಗಿ ಅವರನ್ನು ಶಿಕ್ಷಿಸಲಿಕ್ಕಾಗಿ ಅಲ್ಲ, ಬದಲಾಗಿ ಅವರು ಸಾಯುವ ಮುಂಚೆ ಅವರಿಗಿದ್ದಂತಹ ವ್ಯಕ್ತಿತ್ವದೊಂದಿಗೆ ಅವರನ್ನು ಭೂಪ್ರಮೋದವನದಲ್ಲಿ ಉಜ್ಜೀವಿಸಲು ಉಪಯೋಗಿಸಸಾಧ್ಯವಿದೆ.
ಮುಕುಂದ್ಭಾಯ್ಯಂತಹ ಕೋಟಿಗಟ್ಟಲೆ ಜನರಿಗೆ ಪುನರುತ್ಥಾನವು, ತಮ್ಮ ಪ್ರಿಯ ಜನರೊಂದಿಗೆ ಪುನಃ ಇರುವುದನ್ನು ಅರ್ಥೈಸುವುದು. ಆದರೆ ಈಗ ಜೀವಿಸುತ್ತಿರುವವರಿಗೆ ಅದು ಏನನ್ನು ಅರ್ಥೈಸಬಲ್ಲದೆಂಬುದನ್ನು ಊಹಿಸಿಕೊಳ್ಳಿ. ಉದಾಹರಣೆಗಾಗಿ, ಮುಕುಂದ್ಭಾಯ್ಯವರ ಮಗನನ್ನು ತೆಗೆದುಕೊಳ್ಳಿರಿ. ದೇವರ ಮತ್ತು ಆತನ ಉದ್ದೇಶಗಳ ಕುರಿತಾದ ಅದ್ಭುತವಾದ ಸತ್ಯವು ಅವನಿಗೆ ಈಗ ತಿಳಿದುಬಂದಿದೆ. ತನ್ನ ತಂದೆಯು, ಪುನರ್ಜನ್ಮಗಳ ಬಹುಮಟ್ಟಿಗೆ ಅಂತ್ಯವಿಲ್ಲದ ಚಕ್ರದಲ್ಲಿ—ಪ್ರತಿಯೊಂದು ಪುನರ್ಜನ್ಮವು ದುಷ್ಟತನ ಮತ್ತು ಕಷ್ಟಾನುಭವದಿಂದ ಸುತ್ತುವರಿದಿರುವುದು—ಸಿಕ್ಕಿಬಿದ್ದಿಲ್ಲವೆಂಬುದನ್ನು ತಿಳಿಯುವುದು ಅವನಿಗೆಷ್ಟು ಸಾಂತ್ವನದಾಯಕವಾಗಿದೆ! ಅವನ ತಂದೆ ಒಂದು ಪುನರುತ್ಥಾನಕ್ಕಾಗಿ ಕಾಯುತ್ತಾ, ಮರಣದಲ್ಲಿ ಕೇವಲ ನಿದ್ರಿಸುತ್ತಿದ್ದಾರೆ. ತಾನು ಸ್ವತಃ ಬೈಬಲಿನಿಂದ ಕಲಿತಂತಹ ವಿಷಯವನ್ನು ತನ್ನ ತಂದೆಯೊಂದಿಗೆ ಹಂಚಿಕೊಳ್ಳುವ ಸಾಧ್ಯತೆಯ ಕುರಿತಾಗಿ ಪರಿಭಾವಿಸುವುದು, ಅವನಿಗೆಷ್ಟು ರೋಮಾಂಚಕಾರಿಯಾಗಿದೆ!
“ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿದೆ. (1 ತಿಮೊಥೆಯ 2:3, 4) ದೇವರ ಚಿತ್ತವನ್ನು ಈಗಾಗಲೇ ಮಾಡುತ್ತಿರುವ ಇತರ ಲಕ್ಷಾಂತರ ಜನರೊಂದಿಗೆ, ನೀವು ಒಂದು ಭೂಪ್ರಮೋದವನದಲ್ಲಿ ಸದಾಕಾಲ ಹೇಗೆ ಜೀವಿಸಬಲ್ಲಿರೆಂಬುದನ್ನು ಕಲಿಯುವ ಸಮಯವು ಇದಾಗಿದೆ.—ಯೋಹಾನ 17:3.
[ಅಧ್ಯಯನ ಪ್ರಶ್ನೆಗಳು]
a ಹೀಬ್ರು ಪದವಾದ ನೆಫೆಷ್ ಮತ್ತು ಗ್ರೀಕ್ ಪದವಾದ ಸೈಕೇ, ಭಾರತೀಯ ಭಾಷೆಗಳಲ್ಲಿನ ಬೈಬಲಿನಲ್ಲಿ, “ಆತ್ಮ,” “ಜೀವ,” “ಜೀವಾತ್ಮ,” “ಪ್ರಾಣಿ,” “ದೇಹಿ,” ಮತ್ತು “ವ್ಯಕ್ತಿ” ಎಂದು ಭಿನ್ನಭಿನ್ನವಾಗಿ ಭಾಷಾಂತರಿಸಲ್ಪಟ್ಟಿದೆ. (ಉದಾಹರಣೆಗಾಗಿ, ತಮಿಳ್ ಆ್ಯತೊರೈಸ್ಡ್ ವರ್ಷನ್ ಮತ್ತು ನ್ಯೂ ಹಿಂದಿ ಬೈಬಲ್ನಲ್ಲಿ, ಯೆಹೆಜ್ಕೇಲ 18:4 ಮತ್ತು ಮತ್ತಾಯ 10:28ನ್ನು ನೋಡಿರಿ.) ನಿಮ್ಮ ಬೈಬಲ್ ಸುಸಂಗತವಾಗಿ, ಆ ಮೂಲ ಭಾಷೆಯ ಪದಗಳನ್ನು “ಆತ್ಮ,” “ಪ್ರಾಣ” ಎಂಬುದಾಗಿ ಭಾಷಾಂತರಿಸಲಿ ಅಥವಾ ಬೇರೆ ರೀತಿಯಲ್ಲಿ ಭಾಷಾಂತರಿಸಲಿ, ನೆಫೆಷ್ ಮತ್ತು ಸೈಕೇ ಎಂಬ ಶಬ್ದಗಳು ಎಲ್ಲೆಲ್ಲಿ ತೋರಿಬರುತ್ತವೊ ಆ ವಚನಗಳ ಒಂದು ಪರೀಕ್ಷಣೆಯು, ಈ ಪದಗಳು ಪುರಾತನ ಕಾಲದ ದೇವರ ಜನರಿಗೆ ಏನನ್ನು ಅರ್ಥೈಸಿದವೆಂಬುದನ್ನು ನೋಡುವಂತೆ ನಿಮಗೆ ಸಹಾಯ ಮಾಡುವುದು. ಹೀಗೆ ಆತ್ಮದ ನಿಜ ಸ್ವರೂಪವನ್ನು ನೀವೇ ನಿರ್ಧರಿಸಿಕೊಳ್ಳಬಲ್ಲಿರಿ.
[ಪುಟ 7 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಕಾಲ ಮತ್ತು ಮುಂಗಾಣದ ಸಂಭವವು ಯಾರಿಗೂ ತಪ್ಪಿದ್ದಲ್ಲ.”—ಪ್ರಸಂಗಿ 9:11, NW
[ಪುಟ 6 ರಲ್ಲಿರುವ ಚೌಕ]
ದೇವರ ವ್ಯಕ್ತಿತ್ವ ಮತ್ತು ಕರ್ಮ ನಿಯಮ
“ಕರ್ಮ ನಿಯಮವು, ಜಗ್ಗದಂತಹದ್ದೂ, ತಪ್ಪಿಸಲು ಅಸಾಧ್ಯವಾದುದೂ ಆಗಿದೆ. ಹೀಗಿರುವುದರಿಂದ ದೇವರಿಗೆ ಮಧ್ಯೆ ಪ್ರವೇಶಿಸುವ ಅಗತ್ಯವೇ ಇಲ್ಲ. ಅವನು ನಿಯಮವನ್ನು ಸ್ಥಾಪಿಸಿದನು ಮತ್ತು ಸಾಂಕೇತಿಕವಾಗಿ ಹೇಳುವುದಾದರೆ, ಅಧಿಕ ಹಸ್ತಕ್ಷೇಪಮಾಡದೇ ನಿವೃತ್ತನಾದನು” ಎಂದು ಮೋಹನ್ದಾಸ್ ಕೆ. ಗಾಂಧಿಯವರು ವಿವರಿಸಿದರು. ಗಾಂಧಿಯವರಿಗೆ ಈ ವಿವರಣೆಯು ಕ್ಷೋಭೆಗೊಳಿಸುವಂತಹದ್ದಾಗಿತ್ತು.
ಇನ್ನೊಂದು ಕಡೆ, ಪುನರುತ್ಥಾನದ ವಾಗ್ದಾನವು, ದೇವರಿಗೆ ತನ್ನ ಸೃಷ್ಟಿಯಲ್ಲಿ ಗಾಢವಾದ ಆಸಕ್ತಿಯಿದೆಯೆಂಬುದನ್ನು ಪ್ರಕಟಪಡಿಸುತ್ತದೆ. ಒಬ್ಬ ಸತ್ತ ವ್ಯಕ್ತಿಯನ್ನು ಭೂಪ್ರಮೋದವನದಲ್ಲಿ ಉಜ್ಜೀವಿಸಲು, ದೇವರಿಗೆ ಆ ವ್ಯಕ್ತಿಯ ಕುರಿತಾಗಿ ಎಲ್ಲ ವಿಷಯವು ತಿಳಿದಿರಬೇಕು ಮತ್ತು ಜ್ಞಾಪಕದಲ್ಲಿರಬೇಕು. ದೇವರು ನಿಶ್ಚಯವಾಗಿಯೂ ನಮ್ಮಲ್ಲಿ ಪ್ರತಿಯೊಬ್ಬರ ಕುರಿತಾಗಿ ಕಾಳಜಿವಹಿಸುತ್ತಾನೆ.—1 ಪೇತ್ರ 5:6, 7.
[ಪುಟ 5 ರಲ್ಲಿರುವ ಚಿತ್ರ]
ಹಿಂದೂ ಜೀವನ ಚಕ್ರ
[ಪುಟ 8 ರಲ್ಲಿರುವ ಚಿತ್ರ]
ದೇವರ ವಾಕ್ಯವು ಪುನರುತ್ಥಾನವನ್ನು ಕಲಿಸುತ್ತದೆ