ಯೆಹೋವನು ಒಡಂಬಡಿಕೆಗಳ ದೇವರಾಗಿದ್ದಾನೆ
“ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು.”—ಯೆರೆಮೀಯ 31:31.
1, 2. (ಎ) ಸಾ.ಶ. 33ರ ನೈಸಾನ್ 14ರ ರಾತ್ರಿಯಂದು ಯೇಸು ಯಾವ ಆಚರಣೆಯನ್ನು ಆರಂಭಿಸಿದನು? (ಬಿ) ತನ್ನ ಮರಣದ ಸಂಬಂಧದಲ್ಲಿ ಯೇಸು ಯಾವ ಒಡಂಬಡಿಕೆಗೆ ಸೂಚಿಸಿದನು?
ಸಾಮಾನ್ಯ ಶಕ 33, ನೈಸಾನ್ 14ರ ರಾತ್ರಿಯಂದು, ಯೇಸು ತನ್ನ 12 ಅಪೊಸ್ತಲರೊಂದಿಗೆ ಪಸ್ಕಹಬ್ಬವನ್ನು ಆಚರಿಸಿದನು. ಇದು ಅವರೊಂದಿಗಿನ ತನ್ನ ಕೊನೆಯ ಊಟವಾಗಿರುವುದೆಂದೂ, ತಾನು ತನ್ನ ಶತ್ರುಗಳ ಕೈಗಳಲ್ಲಿ ಬೇಗನೆ ಸಾಯುವೆನೆಂದೂ ಅವನಿಗೆ ತಿಳಿದಿದ್ದುದರಿಂದ, ತನ್ನ ಅತ್ಯಾಪ್ತ ಶಿಷ್ಯರಿಗೆ ಅನೇಕ ಪ್ರಾಮುಖ್ಯ ಸಂಗತಿಗಳನ್ನು ವಿವರಿಸಲಿಕ್ಕಾಗಿ ಅವನು ಆ ಸಂದರ್ಭವನ್ನು ಉಪಯೋಗಿಸಿಕೊಂಡನು.—ಯೋಹಾನ 13:1—17:26.
2 ಇಸ್ಕಾರಿಯೋತ ಯೂದನನ್ನು ಹೊರ ಕಳುಹಿಸಿದ ಬಳಿಕ ಈ ಸಮಯದಲ್ಲಿ ಯೇಸು, ಕ್ರೈಸ್ತರಿಗೆ ಆಜ್ಞಾಪಿಸಲ್ಪಟ್ಟಿರುವ ಏಕಮಾತ್ರ ವಾರ್ಷಿಕ ಧಾರ್ಮಿಕ ಆಚರಣೆಯಾದ ತನ್ನ ಮರಣದ ಜ್ಞಾಪಕವನ್ನು ಆರಂಭಿಸಿದನು. ದಾಖಲೆಯು ಹೇಳುವುದು: “ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಮುರಿದು ಶಿಷ್ಯರಿಗೆ ಕೊಟ್ಟು—ತಕ್ಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ ಅಂದನು. ಆ ಮೇಲೆ ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅವರಿಗೆ ಕೊಟ್ಟು—ಇದರಲ್ಲಿರುವದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ . . . ಎಂದು ಹೇಳಿದನು.” (ಮತ್ತಾಯ 26:26-29) ಯೇಸುವಿನ ಹಿಂಬಾಲಕರು ಅವನ ಮರಣವನ್ನು ಸರಳವಾದ, ಘನತೆಯ ರೀತಿಯಲ್ಲಿ ಸ್ಮರಿಸಬೇಕಾಗಿತ್ತು. ಮತ್ತು ಯೇಸು ತನ್ನ ಮರಣದ ಸಂಬಂಧದಲ್ಲಿ ಒಂದು ಒಡಂಬಡಿಕೆಗೆ ಸೂಚಿಸಿದನು. ಲೂಕನ ವೃತ್ತಾಂತದಲ್ಲಿ ಅದನ್ನು “ಹೊಸ ಒಡಂಬಡಿಕೆ” ಎಂದು ಕರೆಯಲಾಗಿದೆ.—ಲೂಕ 22:20.
3. ಹೊಸ ಒಡಂಬಡಿಕೆಯ ಕುರಿತಾಗಿ ಯಾವ ಪ್ರಶ್ನೆಗಳು ಕೇಳಲ್ಪಟ್ಟಿವೆ?
3 ಹೊಸ ಒಡಂಬಡಿಕೆ ಏನಾಗಿದೆ? ಅದು ಹೊಸ ಒಡಂಬಡಿಕೆ ಆಗಿರುವಲ್ಲಿ, ಒಂದು ಹಳೆಯ ಒಡಂಬಡಿಕೆಯಿದೆಯೆಂಬುದನ್ನು ಅದು ಅರ್ಥೈಸುತ್ತದೊ? ಬೇರೆ ಯಾವುದೇ ಒಡಂಬಡಿಕೆಗಳು ಅದಕ್ಕೆ ಸಂಬಂಧಿಸಲ್ಪಟ್ಟಿವೆಯೊ? ಇವು ಪ್ರಾಮುಖ್ಯ ಪ್ರಶ್ನೆಗಳಾಗಿವೆ ಯಾಕಂದರೆ ಒಡಂಬಡಿಕೆಯ ರಕ್ತವು “ಪಾಪಗಳ ಕ್ಷಮೆಗಾಗಿ” ಸುರಿಸಲ್ಪಡುವುದೆಂದು ಯೇಸು ಹೇಳಿದನು. ನಮಗೆಲ್ಲರಿಗೂ ಅಂತಹ ಕ್ಷಮೆಯು ತುಂಬ ಅಗತ್ಯ.—ರೋಮಾಪುರ 3:23.
ಅಬ್ರಹಾಮನೊಂದಿಗೆ ಒಂದು ಒಡಂಬಡಿಕೆ
4. ಹೊಸ ಒಡಂಬಡಿಕೆಯನ್ನು ಅರ್ಥಮಾಡಿಕೊಳ್ಳಲು ಯಾವ ಪುರಾತನ ವಾಗ್ದಾನವು ನಮಗೆ ಸಹಾಯಮಾಡುತ್ತದೆ?
4 ಹೊಸ ಒಡಂಬಡಿಕೆಯನ್ನು ಅರ್ಥಮಾಡಿಕೊಳ್ಳಲು, ನಾವು ಯೇಸುವಿನ ಭೂಶುಶ್ರೂಷೆಗಿಂತ 2,000 ವರ್ಷಗಳ ಹಿಂದೆ, ತೆರಹ ಮತ್ತು ಅವನ ಕುಟುಂಬವು—ಅಬ್ರಾಮ (ತದನಂತರ, ಅಬ್ರಹಾಮ್) ಮತ್ತು ಅಬ್ರಾಮನ ಹೆಂಡತಿ ಸಾರಯ (ತದನಂತರ, ಸಾರ)—ಕಲ್ದೀಯರ ಸಂಪದ್ಭರಿತ ಊರ್ ಪಟ್ಟಣದಿಂದ ಉತ್ತರದ ಮೆಸಪೊಟೇಮಿಯದ ಹಾರಾನ್ಗೆ ಪ್ರಯಾಣಮಾಡಿದ ಸಮಯಕ್ಕೆ ಹೋಗಬೇಕು. ಅಲ್ಲಿ ಅವರು ತೆರಹನ ಮರಣದ ತನಕ ತಂಗಿದರು. ಅನಂತರ ಯೆಹೋವನ ಆಜ್ಞೆಯ ಮೇರೆಗೆ, 75 ವರ್ಷ ಪ್ರಾಯದ ಅಬ್ರಹಾಮನು ಯೂಫ್ರೆಟೀಸ್ ನದಿಯನ್ನು ದಾಟಿ, ಗುಡಾರಗಳಲ್ಲಿ ಅಲೆಮಾರಿ ಜೀವನವನ್ನು ನಡಿಸಲಿಕ್ಕಾಗಿ ನೈರುತ್ಯ ದಿಕ್ಕಿನ ಕಡೆಗೆ ಕಾನಾನ್ ದೇಶಕ್ಕೆ ಪ್ರಯಾಣಿಸಿದನು. (ಆದಿಕಾಂಡ 11:31—12:1, 4, 5; ಅ. ಕೃತ್ಯಗಳು 7:2-5) ಇದು ಸಾ.ಶ.ಪೂ. 1943ರಲ್ಲಿ ಸಂಭವಿಸಿತು. ಅಬ್ರಹಾಮನು ಹಾರಾನ್ನಲ್ಲಿದ್ದ ಸಮಯದಲ್ಲೇ ಯೆಹೋವನು ಅವನಿಗೆ ಹೇಳಿದ್ದು: “ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು. ನೀನು ಆಶೀರ್ವಾದನಿಧಿಯಾಗುವಿ. ನಿನ್ನನ್ನು ಹರಸುವವರನ್ನು ಹರಸುವೆನು; ನಿನ್ನನ್ನು ಶಪಿಸುವವರನ್ನು ಶಪಿಸುವೆನು. ನಿನ್ನ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವದು.” ತದನಂತರ, ಅಬ್ರಹಾಮನು ಕಾನಾನ್ ದೇಶವನ್ನು ದಾಟಿದ ನಂತರ, ಯೆಹೋವನು ಕೂಡಿಸಿ ಹೇಳಿದ್ದು: “ನಾನು ಈ ದೇಶವನ್ನು ನಿನ್ನ ಸಂತಾನಕ್ಕೆ ಕೊಡುವೆನು.”—ಆದಿಕಾಂಡ 12:2, 3, 7.
5. ಯೆಹೋವನು ಅಬ್ರಹಾಮನಿಗೆ ಮಾಡಿದ ವಾಗ್ದಾನವು ಯಾವ ಐತಿಹಾಸಿಕ ಪ್ರವಾದನೆಗೆ ಜೋಡಿಸಲ್ಪಟ್ಟಿದೆ?
5 ಅಬ್ರಹಾಮನಿಗೆ ಕೊಡಲ್ಪಟ್ಟ ವಾಗ್ದಾನವು, ಯೆಹೋವನ ಇನ್ನೊಂದು ವಾಗ್ದಾನಕ್ಕೆ ಸಂಬಂಧಿಸಲ್ಪಟ್ಟಿತ್ತು. ವಾಸ್ತವದಲ್ಲಿ ಅದು ಅಬ್ರಹಾಮನನ್ನು ಮಾನವ ಇತಿಹಾಸದಲ್ಲಿ ಒಬ್ಬ ಪ್ರಮುಖ ವ್ಯಕ್ತಿಯನ್ನಾಗಿ, ದಾಖಲಿಸಲ್ಪಟ್ಟಿರುವ ಪ್ರವಾದನೆಗಳಲ್ಲೇ ಪ್ರಥಮ ಪ್ರವಾದನೆಯ ನೆರವೇರಿಕೆಯಲ್ಲಿ ಒಂದು ಸಂಪರ್ಕಕೊಂಡಿಯನ್ನಾಗಿ ಮಾಡಿತು. ಏದೆನ್ ತೋಟದಲ್ಲಿ ಆದಾಮ ಹವ್ವರು ಪಾಪಮಾಡಿದ ಅನಂತರ, ಯೆಹೋವನು ಅವರಿಬ್ಬರ ಮೇಲೂ ತೀರ್ಪನ್ನು ಘೋಷಿಸಿದನು ಮತ್ತು ಅದೇ ಸಂದರ್ಭದಲ್ಲಿ ಆತನು, ಹವ್ವಳನ್ನು ದಾರಿತಪ್ಪಿಸಿದ ಸೈತಾನನನ್ನು ಸಂಬೋಧಿಸುತ್ತಾ ಹೇಳಿದ್ದು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಆದಿಕಾಂಡ 3:15) ಅಬ್ರಹಾಮನೊಂದಿಗಿನ ಯೆಹೋವನ ಒಡಂಬಡಿಕೆಯು, ಯಾರ ಮೂಲಕ ಸೈತಾನನ ಕೆಲಸಗಳು ಇಲ್ಲದಂತೆ ಮಾಡಲ್ಪಡುವವೊ, ಆ ಸಂತಾನವು ಆ ಮೂಲಪಿತೃನ ವಂಶದಲ್ಲಿ ಬರುವುದೆಂಬುದನ್ನು ಸೂಚಿಸಿತು.
6. (ಎ) ಯೆಹೋವನು ಅಬ್ರಹಾಮನಿಗೆ ಮಾಡಿದ ವಾಗ್ದಾನವು ಯಾರ ಮೂಲಕ ನೆರವೇರಲಿತ್ತು? (ಬಿ) ಅಬ್ರಹಾಮ ಸಂಬಂಧಿತ ಒಡಂಬಡಿಕೆಯು ಏನಾಗಿದೆ?
6 ಯೆಹೋವನ ವಾಗ್ದಾನವು ಒಂದು ಸಂತಾನಕ್ಕೆ ಸಂಬಂಧಪಟ್ಟಿತ್ತಾದುದರಿಂದ, ಅಬ್ರಹಾಮನಿಗೆ ಆ ಸಂತಾನವು ಬರಸಾಧ್ಯವಾಗುವಂತೆ ಒಬ್ಬ ಮಗನ ಅಗತ್ಯವಿತ್ತು. ಆದರೆ ಅವನು ಮತ್ತು ಸಾರಳು ವೃದ್ಧರಾಗಿದ್ದರು ಮತ್ತು ಅವರಿಗೆ ಇನ್ನೂ ಮಕ್ಕಳಿರಲಿಲ್ಲ. ಕೊನೆಯಲ್ಲಾದರೊ, ಯೆಹೋವನು ಅವರ ಪುನರುತ್ಪತ್ತಿಯ ಸಾಮರ್ಥ್ಯಗಳನ್ನು ಅದ್ಭುತಕರ ರೀತಿಯಲ್ಲಿ ಪುನರುಜ್ಜೀವಿಸುತ್ತಾ ಅವರನ್ನು ಆಶೀರ್ವದಿಸಿದನು, ಮತ್ತು ಸಾರಳು ಅಬ್ರಹಾಮನಿಗೆ ಇಸಾಕನೆಂಬ ಒಬ್ಬ ಮಗನನ್ನು ಹೆತ್ತಳು. ಹೀಗೆ ಯೆಹೋವನು ಒಂದು ಸಂತಾನದ ವಾಗ್ದಾನವನ್ನು ಜೀವಂತವಾಗಿಟ್ಟನು. (ಆದಿಕಾಂಡ 17:15-17; 21:1-7) ಕೆಲವು ವರ್ಷಗಳ ನಂತರ—ತನ್ನ ಪ್ರಿಯ ಮಗನಾದ ಇಸಾಕನನ್ನು ಯಜ್ಞವಾಗಿ ಅರ್ಪಿಸುವ ಅಬ್ರಹಾಮನ ಸಿದ್ಧಮನಸ್ಸನ್ನು ಪರೀಕ್ಷಿಸುವ ಮಟ್ಟಿಗೂ ಅವನ ನಂಬಿಕೆಯನ್ನು ಪರೀಕ್ಷಿಸಿದ ಬಳಿಕ—ಯೆಹೋವನು ಅಬ್ರಹಾಮನಿಗೆ ತನ್ನ ವಾಗ್ದಾನವನ್ನು ಪುನರುಚ್ಚರಿಸಿದನು: “ನಾನು ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು; ನಿನ್ನ ಸಂತತಿಯನ್ನು ಹೆಚ್ಚಿಸೇ ಹೆಚ್ಚಿಸುವೆನು; ಅದನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದಲ್ಲಿರುವ ಉಸುಬಿನಂತೆಯೂ ಅಸಂಖ್ಯವಾಗಿ ಮಾಡುವೆನು; ಅವರು ಶತ್ರುಗಳ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳುವರು. ನೀನು ನನ್ನ ಮಾತನ್ನು ಕೇಳಿದ್ದರಿಂದ ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು.” (ಆದಿಕಾಂಡ 22:15-18) ಈ ವಿಸ್ತೃತವಾದ ವಾಗ್ದಾನವನ್ನು ಅನೇಕವೇಳೆ ಅಬ್ರಹಾಮ ಸಂಬಂಧಿತ ಒಡಂಬಡಿಕೆ ಎಂದು ಕರೆಯಲಾಗುತ್ತದೆ, ಮತ್ತು ತದನಂತರದ ಹೊಸ ಒಡಂಬಡಿಕೆಯು ಇದಕ್ಕೆ ನಿಕಟವಾಗಿ ಜೋಡಿಸಲ್ಪಡಲಿತ್ತು.
7. ಅಬ್ರಹಾಮನ ಸಂತತಿಯು ಸಂಖ್ಯೆಯಲ್ಲಿ ವೃದ್ಧಿಯಾಗಲು ಆರಂಭಿಸಿದ್ದು ಹೇಗೆ, ಮತ್ತು ಯಾವ ಪರಿಸ್ಥಿತಿಗಳು ಅವರನ್ನು ಐಗುಪ್ತದ ನಿವಾಸಿಗಳಾಗುವಂತೆ ನಡಿಸಿದವು?
7 ಸಕಾಲದಲ್ಲಿ ಇಸಾಕನಿಗೆ ಏಸಾವ ಮತ್ತು ಯಾಕೋಬರೆಂಬ ಅವಳಿ ಪುತ್ರರಿದ್ದರು. ಯೆಹೋವನು ಯಾಕೋಬನನ್ನು ವಾಗ್ದತ್ತ ಸಂತಾನದ ಪೂರ್ವಜನಾಗಿರುವಂತೆ ಆರಿಸಿಕೊಂಡನು. (ಆದಿಕಾಂಡ 28:10-15; ರೋಮಾಪುರ 9:10-13) ಯಾಕೋಬನಿಗೆ 12 ಮಂದಿ ಪುತ್ರರಿದ್ದರು. ಸ್ಪಷ್ಟವಾಗಿ, ಅಬ್ರಹಾಮನ ಸಂತತಿಯು ಈ ಸಮಯದಿಂದ ವೃದ್ಧಿಯಾಗತೊಡಗಿತು. ಯಾಕೋಬನ ಪುತ್ರರು ವಯಸ್ಕರಾಗಿ, ಅನೇಕರು ತಮ್ಮ ಸ್ವಂತ ಕುಟುಂಬಗಳುಳ್ಳವರಾಗಿದ್ದಾಗ, ಅವರೆಲ್ಲರೂ ಐಗುಪ್ತಕ್ಕೆ ಸ್ಥಳಾಂತರಿಸುವಂತೆ ಒಂದು ಕ್ಷಾಮವು ಅವರನ್ನು ಬಲವಂತಪಡಿಸಿತು. ಅಲ್ಲಿ ಯಾಕೋಬನ ಪುತ್ರನಾದ ಯೋಸೇಫನು ದೈವಾನುಗ್ರಹದಿಂದ ಮಾರ್ಗವನ್ನು ಸಿದ್ಧಮಾಡಿಟ್ಟಿದ್ದನು. (ಆದಿಕಾಂಡ 45:5-13; 46:26, 27) ಕೆಲವೊಂದು ವರ್ಷಗಳ ಅನಂತರ, ಕಾನಾನ್ ದೇಶದಲ್ಲಿನ ಕ್ಷಾಮವು ನಿಂತುಹೋಯಿತು. ಆದರೆ ಯಾಕೋಬನ ಕುಟುಂಬವು ಐಗುಪ್ತದಲ್ಲಿ—ಆರಂಭದಲ್ಲಿ ಅತಿಥಿಗಳೋಪಾದಿ ಆದರೆ ಅನಂತರ ದಾಸರಾಗಿ—ಉಳಿಯಿತು. ಅಬ್ರಹಾಮನು ಯೂಫ್ರೇಟೀಸ್ ನದಿಯನ್ನು ದಾಟಿ 430 ವರ್ಷಗಳು ಕಳೆದ ನಂತರ ಸಾ.ಶ.ಪೂ. 1513ರಲ್ಲಿ, ಮೋಶೆಯು ಯಾಕೋಬನ ವಂಶಜರನ್ನು ಸ್ವತಂತ್ರಗೊಳಿಸುತ್ತಾ ಐಗುಪ್ತದಿಂದ ಹೊರನಡೆಸಿದನು. (ವಿಮೋಚನಕಾಂಡ 1:8-14; 12:40, 41; ಗಲಾತ್ಯ 3:16, 17) ಯೆಹೋವನು, ಅಬ್ರಹಾಮನೊಂದಿಗೆ ಮಾಡಿದ ತನ್ನ ಒಡಂಬಡಿಕೆಗೆ ಈಗ ವಿಶೇಷವಾದ ಗಮನವನ್ನು ಕೊಡಲಿದ್ದನು.—ವಿಮೋಚನಕಾಂಡ 2:24; 6:2-5.
“ಹಳೆಯ ಒಡಂಬಡಿಕೆ”
8. ಸೀನಾಯಿ ಬೆಟ್ಟದಲ್ಲಿ ಯಾಕೋಬನ ಸಂತತಿಯೊಂದಿಗೆ ಯೆಹೋವನು ಏನು ಮಾಡಿದನು, ಮತ್ತು ಇದಕ್ಕೆ ಅಬ್ರಹಾಮ ಸಂಬಂಧಿತ ಒಡಂಬಡಿಕೆಯೊಂದಿಗೆ ಯಾವ ಸಂಬಂಧವಿತ್ತು?
8 ಯಾಕೋಬ ಮತ್ತು ಅವನ ಪುತ್ರರು ಐಗುಪ್ತಕ್ಕೆ ಸ್ಥಳಾಂತರಿಸಿದಾಗ ಅವರು ವಿಸ್ತೃತ ಕುಟುಂಬವಾಗಿದ್ದರೂ, ಅವರ ವಂಶಜರು ಐಗುಪ್ತವನ್ನು ಬಿಟ್ಟುಹೋದಾಗ, ಅವರು ಜನಭರಿತವಾದ ಕುಲಗಳ ಒಂದು ದೊಡ್ಡ ಸಮೂಹವಾಗಿದ್ದರು. (ವಿಮೋಚನಕಾಂಡ 1:5-7; 12:37, 38) ಯೆಹೋವನು ಅವರನ್ನು ಕಾನಾನ್ ದೇಶಕ್ಕೆ ತರುವ ಮುಂಚೆ, ಅವರನ್ನು ಅರೇಬಿಯದಲ್ಲಿರುವ ಹೋರೆಬ್ (ಅಥವಾ, ಸೀನಾಯಿ) ಎಂಬ ಹೆಸರಿನ ಪರ್ವತದ ತಪ್ಪಲಿಗೆ ದಕ್ಷಿಣಾಭಿಮುಖವಾಗಿ ನಡೆಸಿದನು. ಅಲ್ಲಿ ಆತನು ಅವರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿದನು. ಇದನ್ನು, “ಹೊಸ ಒಡಂಬಡಿಕೆ”ಗೆ ಹೋಲಿಕೆಯಲ್ಲಿ “ಹಳೇ ಒಡಂಬಡಿಕೆ” ಎಂದು ಕರೆಯಲಾಯಿತು. (2 ಕೊರಿಂಥ 3:14) ಹಳೆಯ ಒಡಂಬಡಿಕೆಯ ಮೂಲಕ ಯೆಹೋವನು, ತಾನು ಅಬ್ರಹಾಮನೊಂದಿಗೆ ಮಾಡಿದ ಒಡಂಬಡಿಕೆಯ ಪೂರ್ವಭಾವಿ ನೆರವೇರಿಕೆಯನ್ನು ನಡಿಸಿದನು.
9. (ಎ) ಅಬ್ರಹಾಮ ಸಂಬಂಧಿತ ಒಡಂಬಡಿಕೆಯ ಮೂಲಕ ಯೆಹೋವನು ಯಾವ ನಾಲ್ಕು ಸಂಗತಿಗಳನ್ನು ವಾಗ್ದಾನಿಸಿದನು? (ಬಿ) ಇಸ್ರಾಯೇಲಿನೊಂದಿಗಿನ ಯೆಹೋವನ ಒಡಂಬಡಿಕೆಯಿಂದ ಯಾವ ಹೆಚ್ಚಿನ ಪ್ರತೀಕ್ಷೆಗಳು ಲಭ್ಯಗೊಂಡವು, ಮತ್ತು ಯಾವ ಷರತ್ತಿನ ಮೇಲೆ?
9 ಈ ಒಡಂಬಡಿಕೆಯ ಷರತ್ತುಗಳನ್ನು ಯೆಹೋವನು ಇಸ್ರಾಯೇಲಿಗೆ ವಿವರಿಸಿದನು: “ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯಜನರಾಗುವಿರಿ; ಸಮಸ್ತ ಭೂಮಿಯೂ ನನ್ನದಷ್ಟೆ. ನೀವು ನನಗೆ ಯಾಜಕರಾಜ್ಯವು ಪರಿಶುದ್ಧಜನ [“ಪವಿತ್ರ ಜನಾಂಗ,” NW]ವೂ ಆಗಿರುವಿರಿ.” (ವಿಮೋಚನಕಾಂಡ 19:5, 6) ಅಬ್ರಹಾಮನ ಸಂತತಿಯು, (1) ಒಂದು ದೊಡ್ಡ ಜನಾಂಗವಾಗಿ ಪರಿಣಮಿಸುವುದು, (2) ತಮ್ಮ ಶತ್ರುಗಳ ಮೇಲೆ ಜಯವನ್ನು ಹೊಂದುವುದು, (3) ಕಾನಾನ್ ದೇಶವನ್ನು ಬಾಧ್ಯತೆಯಾಗಿ ಪಡೆದುಕೊಳ್ಳುವುದು, ಮತ್ತು (4) ಜನಾಂಗಗಳ ಆಶೀರ್ವಾದಗಳಿಗಾಗಿ ಒಂದು ಮಾಧ್ಯಮವಾಗಿರುವುದೆಂದು ಯೆಹೋವನು ವಾಗ್ದಾನಿಸಿದ್ದನು. ಅವರು ತನ್ನ ಆಜ್ಞೆಗಳಿಗೆ ವಿಧೇಯರಾಗುವಲ್ಲಿ, “ಯಾಜಕರಾಜ್ಯ”ದೋಪಾದಿ, ತನ್ನ ವಿಶೇಷ ಜನರಾದ ಇಸ್ರಾಯೇಲ್ನೋಪಾದಿ ಈ ಆಶೀರ್ವಾದಗಳನ್ನು ಅವರು ಸ್ವತಃ ಬಾಧ್ಯತೆಯಾಗಿ ಪಡೆದುಕೊಳ್ಳಸಾಧ್ಯವಿದೆಯೆಂದು ಆತನು ಈಗ ಪ್ರಕಟಪಡಿಸಿದನು. ಇಸ್ರಾಯೇಲ್ಯರು ಈ ಒಡಂಬಡಿಕೆಯೊಳಗೆ ಪ್ರವೇಶಿಸಲು ಒಪ್ಪಿಕೊಂಡರೊ? ಅವರು ಒಮ್ಮತದಿಂದ ಉತ್ತರಿಸಿದ್ದು: “ಯೆಹೋವನು ಹೇಳಿದಂತೆಯೇ ಮಾಡುವೆವು.”—ವಿಮೋಚನಕಾಂಡ 19:8.
10. ಯೆಹೋವನು ಇಸ್ರಾಯೇಲ್ಯರನ್ನು ಒಂದು ಜನಾಂಗವಾಗಿ ವ್ಯವಸ್ಥಾಪಿಸಿದ್ದು ಹೇಗೆ, ಮತ್ತು ಆತನು ಅವರಿಂದ ಏನನ್ನು ನಿರೀಕ್ಷಿಸಿದನು?
10 ಈ ಕಾರಣದಿಂದ, ಯೆಹೋವನು ಇಸ್ರಾಯೇಲ್ಯರನ್ನು ಒಂದು ಜನಾಂಗವಾಗಿ ಸಂಘಟಿಸಿದನು. ಆರಾಧನೆ ಮತ್ತು ದಿನನಿತ್ಯದ ಜೀವನವನ್ನು ಒಳಪಡಿಸುವ ನಿಯಮಗಳನ್ನು ಆತನು ಅವರಿಗೆ ಕೊಟ್ಟನು. ಆತನು ಅವರಿಗೆ ಒಂದು ದೇವಗುಡಾರ (ತದನಂತರ, ಯೆರೂಸಲೇಮಿನಲ್ಲಿ ಒಂದು ದೇವಾಲಯ)ವನ್ನೂ, ದೇವಗುಡಾರದಲ್ಲಿ ಪವಿತ್ರ ಸೇವೆಯನ್ನು ಸಲ್ಲಿಸಲಿಕ್ಕಾಗಿ ಒಂದು ಯಾಜಕತ್ವವನ್ನೂ ಒದಗಿಸಿದನು. ಒಡಂಬಡಿಕೆಯನ್ನು ಪಾಲಿಸುವುದು, ಯೆಹೋವನ ನಿಯಮಗಳಿಗೆ ವಿಧೇಯರಾಗುವುದು ಮತ್ತು ವಿಶೇಷವಾಗಿ ಕೇವಲ ಆತನನ್ನು ಆರಾಧಿಸುವುದನ್ನು ಅರ್ಥೈಸಿತು. ಆ ನಿಯಮಗಳ ಕೇಂದ್ರಬಿಂದುವಾಗಿದ್ದ ದಶಾಜ್ಞೆಗಳಲ್ಲಿ ಪ್ರಥಮ ಆಜ್ಞೆಯು ಇದಾಗಿತ್ತು: “ನೀನು ದಾಸತ್ವದಲ್ಲಿದ್ದ ಐಗುಪ್ತದೇಶದೊಳಗಿಂದ ನಿನ್ನನ್ನು ಬಿಡುಗಡೆ ಮಾಡಿದ ಯೆಹೋವನು ಎಂಬ ನಿನ್ನ ದೇವರು ನಾನೇ. ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು.”—ವಿಮೋಚನಕಾಂಡ 20:2, 3.
ಧರ್ಮಶಾಸ್ತ್ರದೊಡಂಬಡಿಕೆಯ ಮುಖಾಂತರ ಆಶೀರ್ವಾದಗಳು
11, 12. ಹಳೆಯ ಒಡಂಬಡಿಕೆಯಲ್ಲಿನ ವಾಗ್ದಾನಗಳು ಯಾವ ವಿಧಗಳಲ್ಲಿ ಇಸ್ರಾಯೇಲಿನಲ್ಲಿ ನೆರವೇರಿಸಲ್ಪಟ್ಟವು?
11 ಧರ್ಮಶಾಸ್ತ್ರದೊಡಂಬಡಿಕೆಯಲ್ಲಿದ್ದ ವಾಗ್ದಾನಗಳು ಇಸ್ರಾಯೇಲ್ಯರಲ್ಲಿ ನೆರವೇರಿದವೊ? ಇಸ್ರಾಯೇಲ್ ಒಂದು “ಪವಿತ್ರ ಜನಾಂಗ”ವಾಗಿ ಪರಿಣಮಿಸಿತೊ? ಆದಾಮನ ವಂಶಜರೋಪಾದಿ, ಇಸ್ರಾಯೇಲ್ಯರು ಪಾಪಿಗಳಾಗಿದ್ದರು. (ರೋಮಾಪುರ 5:12) ಆದರೂ ಧರ್ಮಶಾಸ್ತ್ರದ ಕೆಳಗೆ, ಅವರ ಪಾಪಗಳನ್ನು ಮುಚ್ಚಲಿಕ್ಕಾಗಿ ಯಜ್ಞಗಳು ಅರ್ಪಿಸಲ್ಪಡುತ್ತಿದ್ದವು. ವಾರ್ಷಿಕ ದೋಷಪರಿಹಾರಕ ದಿನದಂದು ಅರ್ಪಿಸಲ್ಪಡುತ್ತಿದ್ದ ಯಜ್ಞಗಳ ಕುರಿತಾಗಿ ಯೆಹೋವನು ಹೇಳಿದ್ದು: “ನೀವು ಪರಿಶುದ್ಧರಾಗುವದಕ್ಕಾಗಿ ಈ ದಿನದಲ್ಲಿ ನಿಮಗೋಸ್ಕರ ದೋಷಪರಿಹಾರವಾಗುವದು, ಯೆಹೋವನ ದೃಷ್ಟಿಯಲ್ಲಿ ನಿಮ್ಮ ಎಲ್ಲಾ ದೋಷಗಳು ನಿವಾರಣೆಯಾಗುವವು.” (ಯಾಜಕಕಾಂಡ 16:30) ಆದುದರಿಂದ, ಇಸ್ರಾಯೇಲ್ಯರು ನಂಬಿಗಸ್ತಿಕೆಯಿಂದ ವಿಧೇಯರಾದಾಗ, ಅವರು ಯೆಹೋವನ ಸೇವೆಗಾಗಿ ಶುದ್ಧಗೊಳಿಸಲ್ಪಟ್ಟಿದ್ದ ಒಂದು ಪವಿತ್ರ ಜನಾಂಗವಾಗಿದ್ದರು. ಆದರೆ ಈ ಶುದ್ಧ ಸ್ಥಿತಿಯು, ಅವರು ಧರ್ಮಶಾಸ್ತ್ರಕ್ಕೆ ವಿಧೇಯರಾಗುವ ಮತ್ತು ಸತತವಾಗಿ ಯಜ್ಞಗಳನ್ನು ಅರ್ಪಿಸುವುದರ ಮೇಲೆ ಅವಲಂಬಿಸಿತು.
12 ಇಸ್ರಾಯೇಲ್ ಒಂದು “ಯಾಜಕರಾಜ್ಯ”ವಾಗಿ ಪರಿಣಮಿಸಿತೊ? ಆರಂಭದಿಂದಲೇ ಅದು, ಯೆಹೋವನು ಸ್ವರ್ಗೀಯ ರಾಜನಾಗಿರುವ, ಒಂದು ರಾಜ್ಯವಾಗಿತ್ತು. (ಯೆಶಾಯ 33:22) ಇನ್ನೂ ಹೆಚ್ಚಾಗಿ, ಧರ್ಮಶಾಸ್ತ್ರದೊಡಂಬಡಿಕೆಯಲ್ಲಿ ಒಂದು ಮಾನವ ಅರಸುತನಕ್ಕಾಗಿ ಏರ್ಪಾಡುಗಳು ಸೇರಿದ್ದವು. ಹೀಗೆ ತದನಂತರ ಯೆರೂಸಲೇಮಿನಲ್ಲಿ ಆಳುತ್ತಿದ್ದ ರಾಜರು ಯೆಹೋವನನ್ನು ಪ್ರತಿನಿಧಿಸಿದರು. (ಧರ್ಮೋಪದೇಶಕಾಂಡ 17:14-18) ಆದರೆ ಇಸ್ರಾಯೇಲ್, ಯಾಜಕರ ಒಂದು ರಾಜ್ಯವಾಗಿತ್ತೊ? ಅದಕ್ಕೆ, ದೇವಗುಡಾರದಲ್ಲಿ ಪವಿತ್ರ ಸೇವೆಯನ್ನು ಸಲ್ಲಿಸುತ್ತಿದ್ದ ಒಂದು ಯಾಜಕತ್ವವಿತ್ತು. ಆ ದೇವಗುಡಾರವು (ತದನಂತರ, ದೇವಾಲಯವು) ಇಸ್ರಾಯೇಲ್ಯರಿಗಾಗಿ ಮತ್ತು ಇಸ್ರಾಯೇಲ್ಯೇತರರಿಗೂ ಶುದ್ಧಾರಾಧನೆಯ ಕೇಂದ್ರವಾಗಿತ್ತು. ಮತ್ತು ಆ ಜನಾಂಗವು, ಮಾನವಕುಲಕ್ಕಾಗಿ ಪ್ರಕಟಿತ ಸತ್ಯದ ಏಕಮಾತ್ರ ಮಾಧ್ಯಮವಾಗಿತ್ತು. (2 ಪೂರ್ವಕಾಲವೃತ್ತಾಂತ 6:32, 33; ರೋಮಾಪುರ 3:1, 2) ಕೇವಲ ಲೇವಿ ಯಾಜಕರಲ್ಲ, ಎಲ್ಲ ನಂಬಿಗಸ್ತ ಇಸ್ರಾಯೇಲ್ಯರು ಯೆಹೋವನ ‘ಸಾಕ್ಷಿಗಳಾಗಿದ್ದರು.’ ಇಸ್ರಾಯೇಲ್, ‘ಸ್ತೋತ್ರವನ್ನು ಪ್ರಚಾರಪಡಿಸ’ಲಿಕ್ಕಾಗಿ ರಚಿಸಲ್ಪಟ್ಟಿದ್ದ ಯೆಹೋವನ “ಸೇವಕ”ನಾಗಿತ್ತು. (ಯೆಶಾಯ 43:10, 21) ಅನೇಕ ನಮ್ರಭಾವದ ವಿದೇಶೀಯರು, ಯೆಹೋವನು ತನ್ನ ಜನರ ಪರವಾಗಿ ತೋರಿಸಿದ ಶಕ್ತಿಯನ್ನು ನೋಡಿದರು ಮತ್ತು ಶುದ್ಧಾರಾಧನೆಗೆ ಆಕರ್ಷಿಸಲ್ಪಟ್ಟರು. ಅವರು ಯೆಹೂದ್ಯ ಮತಾವಲಂಬಿಗಳಾಗಿ ಪರಿಣಮಿಸಿದರು. (ಯೆಹೋಶುವ 2:9-13) ಆದರೆ ಕೇವಲ ಒಂದು ಕುಲವು ವಾಸ್ತವದಲ್ಲಿ ಅಭಿಷಿಕ್ತ ಯಾಜಕರೋಪಾದಿ ಸೇವೆಸಲ್ಲಿಸುತ್ತಿತ್ತು.
ಇಸ್ರಾಯೇಲಿನಲ್ಲಿ ಯೆಹೂದ್ಯ ಮತಾವಲಂಬಿಗಳು
13, 14. (ಎ) ಯೆಹೂದ್ಯ ಮತಾವಲಂಬಿಗಳು ಧರ್ಮಶಾಸ್ತ್ರದೊಡಂಬಡಿಕೆಯಲ್ಲಿ ಭಾಗಿಗಳಾಗಿರಲಿಲ್ಲವೆಂದು ಏಕೆ ಹೇಳಸಾಧ್ಯವಿದೆ? (ಬಿ) ಯೆಹೂದ್ಯ ಮತಾವಲಂಬಿಗಳು ಧರ್ಮಶಾಸ್ತ್ರದೊಡಂಬಡಿಕೆಯ ಅಧೀನದಲ್ಲಿ ಬಂದದ್ದು ಹೇಗೆ?
13 ಅಂತಹ ಯೆಹೂದ್ಯ ಮತಾವಲಂಬಿಗಳ ನಿಲುವೇನಾಗಿತ್ತು? ಯೆಹೋವನು ತನ್ನ ಒಡಂಬಡಿಕೆಯನ್ನು ಮಾಡಿದಾಗ, ಅದನ್ನು ಕೇವಲ ಇಸ್ರಾಯೇಲಿನೊಂದಿಗೆ ಮಾಡಿದ್ದನು; “ಬಹು ಮಂದಿ ಅನ್ಯ”ರು ಉಪಸ್ಥಿತರಿದ್ದರೂ, ಅವರನ್ನು ಭಾಗಿಗಳಾಗಿ ಹೆಸರಿಸಲಾಗಲಿಲ್ಲ. (ವಿಮೋಚನಕಾಂಡ 12:38; 19:3, 7, 8) ಇಸ್ರಾಯೇಲಿನ ಚೊಚ್ಚಲು ಪುತ್ರರಿಗಾಗಿ ಪ್ರಾಯಶ್ಚಿತ್ತ ಬೆಲೆಯು ಲೆಕ್ಕಮಾಡಲ್ಪಟ್ಟಾಗ, ಅವರ ಚೊಚ್ಚಲು ಪುತ್ರರು ಲೆಕ್ಕಕ್ಕೆ ತೆಗೆದುಕೊಳ್ಳಲ್ಪಡಲಿಲ್ಲ. (ಅರಣ್ಯಕಾಂಡ 3:44-51) ದಶಕಗಳ ಬಳಿಕ, ಕಾನಾನ್ ದೇಶವು ಇಸ್ರಾಯೇಲ್ಯ ಕುಲಗಳ ನಡುವೆ ವಿಭಾಗಿಸಲ್ಪಟ್ಟಾಗ, ಇಸ್ರಾಯೇಲ್ಯೇತರ ವಿಶ್ವಾಸಿಗಳಿಗಾಗಿ ಏನೂ ಬದಿಗಿರಿಸಲ್ಪಡಲಿಲ್ಲ. (ಆದಿಕಾಂಡ 12:7; ಯೆಹೋಶುವ 13:1-14) ಯಾಕೆ? ಯಾಕೆಂದರೆ ಧರ್ಮಶಾಸ್ತ್ರದೊಡಂಬಡಿಕೆಯು ಯೆಹೂದ್ಯ ಮತಾವಲಂಬಿಗಳೊಂದಿಗೆ ಮಾಡಲ್ಪಟ್ಟಿರಲಿಲ್ಲ. ಆದರೆ ಯೆಹೂದ್ಯ ಮತಾವಲಂಬಿ ಪುರುಷರಿಗೆ, ಧರ್ಮಶಾಸ್ತ್ರಕ್ಕನುಸಾರವಾಗಿ ಸುನ್ನತಿಮಾಡಲಾಗುತ್ತಿತ್ತು. ಅವರು ಅದರ ಕಾಯಿದೆಗಳನ್ನು ಪಾಲಿಸಿದರು ಮತ್ತು ಅದರ ಏರ್ಪಾಡುಗಳಿಂದ ಪ್ರಯೋಜನಪಡೆದುಕೊಂಡರು. ಯೆಹೂದ್ಯ ಮತಾವಲಂಬಿಗಳು ಹಾಗೂ ಇಸ್ರಾಯೇಲ್ಯರು ಧರ್ಮಶಾಸ್ತ್ರದೊಡಂಬಡಿಕೆಯ ಅಧೀನದಲ್ಲಿದ್ದರು.—ವಿಮೋಚನಕಾಂಡ 12:48, 49; ಅರಣ್ಯಕಾಂಡ 15:14-16; ರೋಮಾಪುರ 3:19.
14 ಉದಾಹರಣೆಗೆ, ಒಬ್ಬ ಯೆಹೂದ್ಯ ಮತಾವಲಂಬಿಯು ಅಕಸ್ಮಾತ್ತಾಗಿ ಒಬ್ಬ ವ್ಯಕ್ತಿಯನ್ನು ಕೊಲ್ಲುವಲ್ಲಿ, ಅವನು ಒಬ್ಬ ಇಸ್ರಾಯೇಲ್ಯನಂತೆ ಆಶ್ರಯ ನಗರಕ್ಕೆ ಓಡಿಹೋಗಸಾಧ್ಯವಿತ್ತು. (ಅರಣ್ಯಕಾಂಡ 35:15, 22-25; ಯೆಹೋಶುವ 20:9) ದೋಷಪರಿಹಾರಕ ದಿನದಂದು, “ಇಸ್ರಾಯೇಲ್ಯರ ಎಲ್ಲಾ ಜನಸಮೂಹಕ್ಕೋಸ್ಕರ” ಒಂದು ಯಜ್ಞವನ್ನು ಅರ್ಪಿಸಲಾಗುತ್ತಿತ್ತು. ಸಭೆಯ ಭಾಗವಾಗಿ ಯೆಹೂದ್ಯ ಮತಾವಲಂಬಿಗಳು ಕಾರ್ಯಾವಳಿಯಲ್ಲಿ ಭಾಗವಹಿಸುತ್ತಿದ್ದರು ಮತ್ತು ಆ ಯಜ್ಞವು ಅವರಿಗೂ ಅನ್ವಯವಾಗುತ್ತಿತ್ತು. (ಯಾಜಕಕಾಂಡ 16:7-10, 15, 17, 29; ಧರ್ಮೋಪದೇಶಕಾಂಡ 23:7, 8) ಧರ್ಮಶಾಸ್ತ್ರದ ಕೆಳಗೆ ಯೆಹೂದ್ಯ ಮತಾವಲಂಬಿಗಳು ಇಸ್ರಾಯೇಲಿನೊಂದಿಗೆ ಎಷ್ಟು ನಿಕಟವಾಗಿ ಜೊತೆಗೂಡಿದ್ದರೆಂದರೆ, ಸಾ.ಶ. 33ರ ಪಂಚಾಶತ್ತಮದಲ್ಲಿ, ಪ್ರಥಮ ‘ಪರಲೋಕರಾಜ್ಯದ ಬೀಗದ ಕೈ’ ಯೆಹೂದ್ಯರ ಪರವಾಗಿ ಉಪಯೋಗಿಸಲ್ಪಟ್ಟಾಗ, ಯೆಹೂದ್ಯ ಮತಾವಲಂಬಿಗಳೂ ಪ್ರಯೋಜನಪಡೆದರು. ಫಲಿತಾಂಶವಾಗಿ, “ಯೆಹೂದ್ಯ ಮತಾವಲಂಬಿಯಾದ ಅಂತಿಯೋಕ್ಯದ ನಿಕೊಲಾಯ” ಒಬ್ಬ ಕ್ರೈಸ್ತನಾಗಿ ಪರಿಣಮಿಸಿ, ಯೆರೂಸಲೇಮಿನ ಸಭೆಯ ಅಗತ್ಯಗಳ ಕಾಳಜಿವಹಿಸಲಿಕ್ಕಾಗಿ ನೇಮಿಸಲ್ಪಟ್ಟಿದ್ದ “ಏಳು ಮಂದಿ”ಯಲ್ಲಿ ಒಬ್ಬನಾದನು.—ಮತ್ತಾಯ 16:19; ಅ. ಕೃತ್ಯಗಳು 2:5-10; 6:3-6; 8:26-39.
ಯೆಹೋವನು ಅಬ್ರಹಾಮನ ಸಂತತಿಯನ್ನು ಆಶೀರ್ವದಿಸುತ್ತಾನೆ
15, 16. ಅಬ್ರಹಾಮನಿಗೆ ಯೆಹೋವನು ಮಾಡಿದ ವಾಗ್ದಾನವು ಧರ್ಮಶಾಸ್ತ್ರದೊಡಂಬಡಿಕೆಯಲ್ಲಿ ನೆರವೇರಿದ್ದು ಹೇಗೆ?
15 ಅಬ್ರಹಾಮನ ಸಂತತಿಯವರು ಧರ್ಮಶಾಸ್ತ್ರದ ಕೆಳಗೆ ಒಂದು ಜನಾಂಗವಾಗಿ ವ್ಯವಸ್ಥಾಪಿಸಲ್ಪಟ್ಟಿರಲಾಗಿ, ಯೆಹೋವನು ಆ ಮೂಲಪಿತೃನಿಗೆ ಮಾಡಿದಂತಹ ವಾಗ್ದಾನಕ್ಕನುಸಾರ ಅವರನ್ನು ಆಶೀರ್ವದಿಸಿದನು. ಸಾ.ಶ.ಪೂ. 1473ರಲ್ಲಿ, ಮೋಶೆಯ ಉತ್ತರಾಧಿಕಾರಿಯಾದ ಯೆಹೋಶುವನು ಇಸ್ರಾಯೇಲ್ಯರನ್ನು ಕಾನಾನ್ ದೇಶದೊಳಕ್ಕೆ ನಡಿಸಿದನು. ಕುಲಗಳ ಮಧ್ಯೆ ತರುವಾಯದ ದೇಶದ ವಿಭಜನೆಯು, ಅಬ್ರಹಾಮನ ಸಂತತಿಗೆ ಆ ದೇಶವನ್ನು ಕೊಡುವ ಯೆಹೋವನ ವಾಗ್ದಾನವನ್ನು ನೆರವೇರಿಸಿತು. ಇಸ್ರಾಯೇಲ್ಯರು ನಂಬಿಗಸ್ತರಾಗಿದ್ದಾಗ, ಅವರ ಶತ್ರುಗಳ ಮೇಲೆ ಜಯವನ್ನು ಕೊಡುವ ತನ್ನ ವಾಗ್ದಾನವನ್ನು ಯೆಹೋವನು ನೆರವೇರಿಸಿದನು. ಇದು ರಾಜನಾದ ದಾವೀದನ ಆಳ್ವಿಕೆಯ ಸಮಯದಲ್ಲಿ ವಿಶೇಷವಾಗಿ ಸತ್ಯವಾಗಿತ್ತು. ದಾವೀದನ ಪುತ್ರನಾದ ಸೊಲೊಮೋನನ ಸಮಯದಷ್ಟಕ್ಕೆ, ಅಬ್ರಹಾಮ ಸಂಬಂಧಿತ ವಾಗ್ದಾನದ ಮೂರನೆಯ ಅಂಶವು ನೆರವೇರಿಸಲ್ಪಟ್ಟಿತು. “ಇಸ್ರಾಯೇಲ್ಯೆಹೂದ್ಯರು ಸಮುದ್ರತೀರದ ಉಸುಬಿನಷ್ಟು ಅಸಂಖ್ಯರಾಗಿದ್ದರು; ಅವರು ಅನ್ನಪಾನಗಳಲ್ಲಿ ತೃಪ್ತರಾಗಿ ಸಂತೋಷದಿಂದಿದ್ದರು.”—1 ಅರಸುಗಳು 4:20.
16 ಜನಾಂಗಗಳು ಅಬ್ರಹಾಮನ ಸಂತತಿಯಾದ ಇಸ್ರಾಯೇಲಿನ ಮೂಲಕ ತಮ್ಮನ್ನು ಆಶೀರ್ವದಿಸಿಕೊಳ್ಳುವುದಾದರೂ ಹೇಗೆ? ಈಗಾಗಲೇ ತಿಳಿಸಲ್ಪಟ್ಟಿರುವಂತೆ, ಇಸ್ರಾಯೇಲ್ ಜನರು ಜನಾಂಗಗಳ ನಡುವೆ ಯೆಹೋವನ ಪ್ರತಿನಿಧಿ, ಆತನ ವಿಶೇಷ ಜನರಾಗಿದ್ದರು. ಇಸ್ರಾಯೇಲ್ ಕಾನಾನ್ ದೇಶದೊಳಗೆ ಸೇರುವ ಸ್ವಲ್ಪ ಸಮಯದ ಮುಂಚೆ, ಮೋಶೆ ಹೇಳಿದ್ದು: “ಜನಾಂಗಗಳಿರಾ, ದೇವರ ಜನರೊಡನೆ ಉಲ್ಲಾಸಪಡಿರಿ.” (ಧರ್ಮೋಪದೇಶಕಾಂಡ 32:43, NW) ಅನೇಕ ವಿದೇಶೀಯರು ಪ್ರತಿಕ್ರಿಯೆ ತೋರಿಸಿದರು. ಈಗಾಗಲೇ ‘ಬಹು ಮಂದಿ ಅನ್ಯರು’ ಇಸ್ರಾಯೇಲ್ಯರೊಂದಿಗೆ ಐಗುಪ್ತದಿಂದ ಹೊರಬಂದು, ಅರಣ್ಯದಲ್ಲಿ ಯೆಹೋವನ ಶಕ್ತಿಯನ್ನು ಪ್ರತ್ಯಕ್ಷವಾಗಿ ನೋಡಿದರು, ಮತ್ತು ಉಲ್ಲಾಸಪಡಲು ಮೋಶೆಯು ನೀಡಿದ್ದ ಆಮಂತ್ರಣದ ಕುರಿತು ಕೇಳಿಸಿಕೊಂಡಿದ್ದರು. (ವಿಮೋಚನಕಾಂಡ 12:37, 38) ತದನಂತರ, ಮೋವಾಬ್ಯಳಾದ ರೂತಳು, ಇಸ್ರಾಯೇಲ್ಯನಾದ ಬೋವಜನನ್ನು ವಿವಾಹವಾಗಿ, ಮೆಸ್ಸೀಯನ ಪೂರ್ವಜೆಯಾದಳು. (ರೂತಳು 4:13-22) ಕೇನ್ಯನಾದ ಯೆಹೋನಾದಾಬನು ಮತ್ತು ಅವನ ಸಂತತಿಯವರು ಹಾಗೂ ಎಬೆದ್ಮೆಲೆಕನೆಂಬ ಕೂಷ್ಯನು, ಅನೇಕ ಮಾಂಸಿಕ ಇಸ್ರಾಯೇಲ್ಯರು ಅಪನಂಬಿಗಸ್ತರಾಗಿದ್ದಾಗ, ಸರಿಯಾದ ತತ್ವಗಳಿಗೆ ಅಂಟಿಕೊಳ್ಳುವ ಮೂಲಕ ತಮ್ಮನ್ನು ಪ್ರತ್ಯೇಕಿಸಿಕೊಂಡರು. (2 ಅರಸುಗಳು 10:15-17; ಯೆರೆಮೀಯ 35:1-19; 38:7-13) ಪರ್ಷಿಯದ ಸಾಮ್ರಾಜ್ಯದ ಕೆಳಗೆ, ಅನೇಕ ವಿದೇಶೀಯರು ಯೆಹೂದ್ಯ ಮತಾವಲಂಬಿಗಳಾಗಿ ಪರಿಣಮಿಸಿದರು ಮತ್ತು ಇಸ್ರಾಯೇಲಿನ ಶತ್ರುಗಳ ವಿರುದ್ಧ ಇಸ್ರಾಯೇಲ್ಯರೊಡಗೂಡಿ ಹೋರಾಡಿದರು.—ಎಸ್ತೇರಳು 8:17, NW ಪಾದಟಿಪ್ಪಣಿ.
ಒಂದು ಹೊಸ ಒಡಂಬಡಿಕೆಯ ಅಗತ್ಯವಿದೆ
17. (ಎ) ಇಸ್ರಾಯೇಲಿನ ಉತ್ತರ ಮತ್ತು ದಕ್ಷಿಣ ರಾಜ್ಯಗಳನ್ನು ಯೆಹೋವನು ತಿರಸ್ಕರಿಸಿದ್ದೇಕೆ? (ಬಿ) ಯೆಹೂದ್ಯರ ಕೊನೆಯ ತಿರಸ್ಕರಿಸುವಿಕೆಗೆ ಯಾವುದು ನಡಿಸಿತು?
17 ಆದರೂ, ದೇವರ ವಾಗ್ದಾನದ ಸಂಪೂರ್ಣ ನೆರವೇರಿಕೆಯನ್ನು ಪಡೆದುಕೊಳ್ಳಲಿಕ್ಕಾಗಿ, ದೇವರ ವಿಶೇಷ ಜನಾಂಗವು ನಂಬಿಗಸ್ತಿಕೆಯಿಂದಿರಬೇಕಿತ್ತು. ಅದು ನಂಬಿಗಸ್ತಿಕೆಯಿಂದಿರಲಿಲ್ಲ. ಗಮನಾರ್ಹವಾದ ನಂಬಿಕೆಯುಳ್ಳ ಇಸ್ರಾಯೇಲ್ಯರಿದ್ದರೆಂಬುದು ನಿಜ. (ಇಬ್ರಿಯ 11:32—12:1) ಹಾಗಿದ್ದರೂ, ಅನೇಕ ಸಂದರ್ಭಗಳಲ್ಲಿ ಜನಾಂಗವು, ಭೌತಿಕ ಲಾಭಗಳನ್ನು ಆಶಿಸುತ್ತಾ, ವಿಧರ್ಮಿ ದೇವತೆಗಳ ಕಡೆಗೆ ತಿರುಗಿತು. (ಯೆರೆಮೀಯ 34:8-16; 44:15-18) ಕೆಲವರು ಧರ್ಮಶಾಸ್ತ್ರವನ್ನು ತಪ್ಪಾಗಿ ಅನ್ವಯಿಸಿಕೊಂಡರು ಅಥವಾ ಅದನ್ನು ಅಲಕ್ಷಿಸಿದರು. (ನೆಹೆಮೀಯ 5:1-5; ಯೆಶಾಯ 59:2-8; ಮಲಾಕಿಯ 1:12-14) ಸೊಲೊಮೋನನ ಮರಣದ ನಂತರ, ಇಸ್ರಾಯೇಲು ಉತ್ತರ ಮತ್ತು ದಕ್ಷಿಣ ರಾಜ್ಯವಾಗಿ ವಿಭಜಿಸಲ್ಪಟ್ಟಿತು. ಉತ್ತರದ ರಾಜ್ಯವು ಅತ್ಯಂತ ಪ್ರತಿಭಟಕ ಸ್ವಭಾವದ್ದಾಗಿ ಪರಿಣಮಿಸಿದಾಗ, ಯೆಹೋವನು ಪ್ರಕಟಿಸಿದ್ದು: “ನೀವು ಜ್ಞಾನವನ್ನು ತಳ್ಳಿಬಿಟ್ಟದರಿಂದ ಇನ್ನು ನನಗೆ ಯಾಜಕಸೇವೆ ಮಾಡದಂತೆ ನಾನು ನಿಮ್ಮನ್ನು ತಳ್ಳಿಬಿಡುವೆನು; ನೀವು ನಿಮ್ಮ ದೇವರ ಧರ್ಮೋಪದೇಶವನ್ನು ಮರೆತ ಕಾರಣ ನಾನು ನಿಮ್ಮ ಸಂತತಿಯವರನ್ನು ಮರೆಯುವೆನು.” (ಹೋಶೇಯ 4:6) ದಕ್ಷಿಣ ರಾಜ್ಯವು ಒಡಂಬಡಿಕೆಗೆ ತಕ್ಕಂತೆ ನಡೆಯದಿದ್ದದರಿಂದ, ಅದು ಕೂಡ ಕಠಿನವಾಗಿ ಶಿಕ್ಷಿಸಲ್ಪಟ್ಟಿತು. (ಯೆರೆಮೀಯ 5:29-31) ಯೆಹೂದ್ಯರು ಯೇಸುವನ್ನು ಮೆಸ್ಸೀಯನೋಪಾದಿ ತಿರಸ್ಕರಿಸಿದಾಗ, ಯೆಹೋವನೂ ಅವರನ್ನು ಅದೇ ರೀತಿಯಲ್ಲಿ ತಿರಸ್ಕರಿಸಿದನು. (ಅ. ಕೃತ್ಯಗಳು 3:13-15; ರೋಮಾಪುರ 9:31—10:4) ಕೊನೆಯಲ್ಲಿ, ಯೆಹೋವನು, ಅಬ್ರಹಾಮ ಸಂಬಂಧಿತ ಒಡಂಬಡಿಕೆಯ ಸಂಪೂರ್ಣ ನೆರವೇರಿಕೆಯನ್ನು ನಡೆಸಲು ಒಂದು ಹೊಸ ಏರ್ಪಾಡನ್ನು ಮಾಡಿದನು.—ರೋಮಾಪುರ 3:20.
18, 19. ಅಬ್ರಹಾಮ ಸಂಬಂಧಿತ ಒಡಂಬಡಿಕೆಯು ಒಂದು ಸಂಪೂರ್ಣ ವಿಧದಲ್ಲಿ ನೆರವೇರಲು ಸಾಧ್ಯವಾಗುವಂತೆ ಯೆಹೋವನು ಯಾವ ಹೊಸ ಏರ್ಪಾಡನ್ನು ಮಾಡಿದನು?
18 ಆ ಹೊಸ ಏರ್ಪಾಡು, ಹೊಸ ಒಡಂಬಡಿಕೆಯಾಗಿತ್ತು. ಯೆಹೋವನು ಹೀಗೆ ಹೇಳಿದಾಗ ಇದನ್ನು ಮುಂತಿಳಿಸಿದ್ದನು: “ಯೆಹೋವನು ಇಂತೆನ್ನುತ್ತಾನೆ—ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು; . . . ಯೆಹೋವನು ಇಂತೆನ್ನುತ್ತಾನೆ—ಆ ದಿನಗಳು ಬಂದಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವದು—ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.”—ಯೆರೆಮೀಯ 31:31-33.
19 ಸಾ.ಶ. 33ರ ನೈಸಾನ್ 14ರಂದು ಯೇಸು ಸೂಚಿಸಿದ್ದ ಹೊಸ ಒಡಂಬಡಿಕೆ ಇದೇ ಆಗಿತ್ತು. ಯೇಸು ಮಧ್ಯಸ್ಥನಾಗಿದ್ದು, ಆ ವಾಗ್ದತ್ತ ಒಡಂಬಡಿಕೆಯು ತನ್ನ ಶಿಷ್ಯರ ಮತ್ತು ಯೆಹೋವನ ನಡುವೆ ಇನ್ನೇನು ಮಾಡಲ್ಪಡಲಿದೆಯೆಂದು ಅವನು ಆ ಸಂದರ್ಭದಲ್ಲಿ ಪ್ರಕಟಿಸಿದನು. (1 ಕೊರಿಂಥ 11:25; 1 ತಿಮೊಥೆಯ 2:5; ಇಬ್ರಿಯ 12:24) ನಾವು ಮುಂದಿನ ಲೇಖನದಲ್ಲಿ ನೋಡಲಿರುವಂತೆ ಈ ಹೊಸ ಒಡಂಬಡಿಕೆಯ ಮೂಲಕ ಅಬ್ರಹಾಮನಿಗೆ ಯೆಹೋವನು ಮಾಡಿದ ವಾಗ್ದಾನವು, ಹೆಚ್ಚು ಮಹಿಮಾಭರಿತವೂ ಶಾಶ್ವತವೂ ಆದ ಒಂದು ನೆರವೇರಿಕೆಯನ್ನು ಹೊಂದಲಿತ್ತು.
ನೀವು ವಿವರಿಸಬಲ್ಲಿರೊ?
◻ ಅಬ್ರಹಾಮ ಸಂಬಂಧಿತ ಒಡಂಬಡಿಕೆಯಲ್ಲಿ ಯೆಹೋವನು ಏನನ್ನು ವಾಗ್ದಾನಿಸಿದನು?
◻ ಮಾಂಸಿಕ ಇಸ್ರಾಯೇಲಿನ ಕಡೆಗೆ ಯೆಹೋವನು ಅಬ್ರಹಾಮ ಸಂಬಂಧಿತ ಒಡಂಬಡಿಕೆಯ ನೆರವೇರಿಕೆಯನ್ನು ಹೇಗೆ ನಡೆಸಿದನು?
◻ ಯೆಹೂದ್ಯ ಮತಾವಲಂಬಿಗಳು ಹಳೆಯ ಒಡಂಬಡಿಕೆಯಿಂದ ಹೇಗೆ ಪ್ರಯೋಜನಪಡೆದುಕೊಂಡರು?
◻ ಒಂದು ಹೊಸ ಒಡಂಬಡಿಕೆಯ ಅಗತ್ಯವಿತ್ತೇಕೆ?
[ಪುಟ 9 ರಲ್ಲಿರುವ ಚಿತ್ರ]
ಧರ್ಮಶಾಸ್ತ್ರದೊಡಂಬಡಿಕೆಯ ಮೂಲಕ, ಯೆಹೋವನು ಅಬ್ರಹಾಮ ಸಂಬಂಧಿತ ಒಡಂಬಡಿಕೆಯ ಪೂರ್ವಭಾವಿ ನೆರವೇರಿಕೆಯನ್ನು ನಡೆಸಿದನು