ಇಸ್ರಾಯೇಲಿನ ಇತಿಹಾಸವನ್ನು ಗುರುತಿಸಿದ ಪ್ರಮುಖ ಹಬ್ಬಗಳು
“ವರುಷಕ್ಕೆ ಮೂರಾವರ್ತಿ ನಿಮ್ಮಲ್ಲಿರುವ ಗಂಡಸರೆಲ್ಲರೂ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಆತನು ಆದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು. ಒಬ್ಬರೂ ಕೈಯಲ್ಲಿ ಕಾಣಿಕೆಯಿಲ್ಲದೆ ಆತನ ಸನ್ನಿಧಿಗೆ ಬರಕೂಡದು.”—ಧರ್ಮೋಪದೇಶಕಾಂಡ 16:16.
1. ಬೈಬಲ್ ಸಮಯಗಳಲ್ಲಿನ ಹಬ್ಬದ ಸಂದರ್ಭಗಳ ಕುರಿತು ಏನು ಹೇಳಸಾಧ್ಯವಿದೆ?
ಹಬ್ಬವೊಂದರ ಕುರಿತು ನೀವು ಆಲೋಚಿಸುವಾಗ, ಯಾವ ವಿಷಯವು ನಿಮ್ಮ ಮನಸ್ಸಿಗೆ ಬರುತ್ತದೆ? ಪುರಾತನ ಸಮಯಗಳಲ್ಲಿನ ಕೆಲವು ಹಬ್ಬಗಳು, ಭೋಗಾಸಕ್ತಿ ಮತ್ತು ಅನೈತಿಕತೆಯಿಂದ ಗುರುತಿಸಲ್ಪಟ್ಟಿದ್ದವು. ಆಧುನಿಕ ದಿನದ ಕೆಲವು ಹಬ್ಬಗಳ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಆದರೆ ದೇವರ ಧರ್ಮಶಾಸ್ತ್ರದಲ್ಲಿ ಇಸ್ರಾಯೇಲ್ಯರಿಗೆ ವಿಧಿಸಲ್ಪಟ್ಟಿದ್ದ ಹಬ್ಬಗಳು ಭಿನ್ನವಾಗಿದ್ದವು. ಅವು ಉಲ್ಲಾಸಕರವಾದ ಸಂದರ್ಭಗಳಾಗಿದ್ದರೂ, ಅವುಗಳನ್ನು “ಪವಿತ್ರ ಸಭೆಗಳು” (NW) ಎಂದು ಸಹ ವರ್ಣಿಸಸಾಧ್ಯವಿತ್ತು.—ಯಾಜಕಕಾಂಡ 23:2.
2. (ಎ) ಇಸ್ರಾಯೇಲಿನ ಪುರುಷರು ವರ್ಷಕ್ಕೆ ಮೂರು ಬಾರಿ ಏನು ಮಾಡುವ ಅಗತ್ಯವಿತ್ತು? (ಬಿ) ಧರ್ಮೋಪದೇಶಕಾಂಡ 16:16ರಲ್ಲಿ ಉಪಯೋಗಿಸಲ್ಪಟ್ಟಿರುವಂತೆ, “ಹಬ್ಬ” ಎಂದರೇನು?
2 ನಂಬಿಗಸ್ತ ಇಸ್ರಾಯೇಲ್ಯ ಪುರುಷರು, ಅನೇಕವೇಳೆ ತಮ್ಮ ಕುಟುಂಬಗಳೊಂದಿಗೆ, ‘ಯೆಹೋವನು ಆದುಕೊಂಡ ಸ್ಥಳ’ವಾದ ಯೆರೂಸಲೇಮಿಗೆ ಪ್ರಯಾಣಿಸುವುದರಲ್ಲಿ ಚೈತನ್ಯದಾಯಕವಾದ ಆನಂದವನ್ನು ಕಂಡುಕೊಂಡರು ಮತ್ತು ಅವರು ಆ ಮೂರು ದೊಡ್ಡ ಹಬ್ಬಗಳಿಗಾಗಿ ಉದಾರವಾಗಿ ದಾನಕೊಟ್ಟರು. (ಧರ್ಮೋಪದೇಶಕಾಂಡ 16:16) ಹಳೆಯ ಒಡಂಬಡಿಕೆಯ ಶಬ್ದ ಅಧ್ಯಯನಗಳು (ಇಂಗ್ಲಿಷ್) ಎಂಬ ಪುಸ್ತಕವು, ಧರ್ಮೋಪದೇಶಕಾಂಡ 16:16 (NW)ರಲ್ಲಿ “ಹಬ್ಬ” ಎಂಬುದಾಗಿ ಭಾಷಾಂತರಿಸಲ್ಪಟ್ಟಿರುವ ಹೀಬ್ರು ಶಬ್ದವನ್ನು, “ಮಹತ್ತರವಾದ ಸಂತೋಷದ ಒಂದು ಸಂದರ್ಭವಾಗಿದ್ದು . . . ಆಗ ದೇವರ ಅನುಗ್ರಹದ ಕೆಲವು ಅಸಾಮಾನ್ಯ ಘಟನೆಗಳನ್ನು, ಯಜ್ಞಸಮರ್ಪಣೆ ಹಾಗೂ ಹಬ್ಬಾಚರಣೆಯಿಂದ ಆಚರಿಸಲಾಗುತ್ತಿತ್ತು” ಎಂದು ಅರ್ಥನಿರೂಪಿಸುತ್ತದೆ.a
ದೊಡ್ಡ ಹಬ್ಬಗಳ ಮೌಲ್ಯ
3. ಆ ಮೂರು ವಾರ್ಷಿಕ ಹಬ್ಬಗಳು, ಯಾವ ಆಶೀರ್ವಾದಗಳನ್ನು ಮನಸ್ಸಿಗೆ ತಂದವು?
3 ಇಸ್ರಾಯೇಲ್ಯರದು ವ್ಯವಸಾಯದ ಸಮಾಜವಾಗಿದ್ದರಿಂದ, ಅವರು ಮಳೆಯ ರೂಪದಲ್ಲಿ ದೇವರ ಆಶೀರ್ವಾದದ ಮೇಲೆ ಅವಲಂಬಿತರಾಗಿದ್ದರು. ಮೋಶೆಯ ಧರ್ಮಶಾಸ್ತ್ರದಲ್ಲಿ ಕೊಡಲ್ಪಟ್ಟಿದ್ದ ಮೂರು ದೊಡ್ಡ ಹಬ್ಬಗಳು, ವಸಂತಕಾಲದಾರಂಭದಲ್ಲಿ ಜವೆಗೋದಿಯ ಸುಗ್ಗಿಕಾಲ, ವಸಂತಕಾಲದ ಕೊನೆಯಲ್ಲಿ ಗೋದಿಯ ಸುಗ್ಗಿಕಾಲ, ಮತ್ತು ಬೇಸಿಗೆಕಾಲದ ಕೊನೆಯಲ್ಲಿ ಉಳಿದ ಸುಗ್ಗಿಕಾಲದ ಒಟ್ಟುಗೂಡಿಸುವಿಕೆಯೊಂದಿಗೆ ಸರಿಬೀಳುತ್ತಿದ್ದವು. ಇವು ಮಹತ್ತರವಾದ ಹರ್ಷಿಸುವಿಕೆ ಹಾಗೂ ಮಳೆಯ ಚಕ್ರದ ಸಂರಕ್ಷಕನಿಗೆ ಮತ್ತು ಉತ್ಪನ್ನದಾಯಕ ನೆಲದ ರಚಕನಿಗೆ ಕೃತಜ್ಞತೆಯನ್ನು ತೋರಿಸುವ ಸಂದರ್ಭಗಳಾಗಿದ್ದವು. ಆದರೆ ಈ ಹಬ್ಬಗಳಲ್ಲಿ ಇನ್ನೂ ಹೆಚ್ಚಿನದ್ದು ಸೇರಿತ್ತು.—ಧರ್ಮೋಪದೇಶಕಾಂಡ 11:11-14.
4. ಮೊದಲನೆಯ ಹಬ್ಬದಿಂದ ಯಾವ ಐತಿಹಾಸಿಕ ಘಟನೆಯು ಆಚರಿಸಲ್ಪಟ್ಟಿತು?
4 ಮೊತ್ತಮೊದಲ ಹಬ್ಬವು, ಪುರಾತನ ಬೈಬಲ್ ಕ್ಯಾಲೆಂಡರಿನ ಮೊದಲನೆಯ ತಿಂಗಳಿನಲ್ಲಿ, ನೈಸಾನ್ 15ರಿಂದ 21ರ ವರೆಗೆ ನಡೆಯಿತು. ಇದು ನಮ್ಮ ಮಾರ್ಚ್ ತಿಂಗಳಿನ ಕೊನೆಯ ಭಾಗಕ್ಕೆ ಅಥವಾ ಏಪ್ರಿಲ್ ತಿಂಗಳಿನ ಆರಂಭದ ಭಾಗಕ್ಕೆ ಸರಿಹೊಂದುತ್ತದೆ. ಇದು ಹುಳಿಯಿಲ್ಲದ ರೊಟ್ಟಿಗಳ ಹಬ್ಬವೆಂದು ಕರೆಯಲ್ಪಟ್ಟಿತು, ಮತ್ತು ಈ ಹಬ್ಬವು ನೈಸಾನ್ 14ರ ಪಸ್ಕದ ಬಳಿಕ ಆ ಕೂಡಲೆ ಹಿಂಬಾಲಿಸಿ ಬರುತ್ತಿದ್ದುದರಿಂದ, ಇದನ್ನು “ಪಸ್ಕಹಬ್ಬ”ವೆಂದೂ ಕರೆಯಲಾಯಿತು. (ಲೂಕ 2:41; ಯಾಜಕಕಾಂಡ 23:5, 6) ಈ ಹಬ್ಬವು ಇಸ್ರಾಯೇಲ್ಯರಿಗೆ, ಐಗುಪ್ತದ ಕಷ್ಟದಿಂದ ಅವರ ವಿಮೋಚನೆಯನ್ನು ಜ್ಞಾಪಕಕ್ಕೆ ತಂದಿತು; ಈ ಹುಳಿಯಿಲ್ಲದ ರೊಟ್ಟಿಗಳು “ಕಷ್ಟವನ್ನು ಸೂಚಿಸುವ . . . ರೊಟ್ಟಿಗಳು” ಎಂದು ಕರೆಯಲ್ಪಟ್ಟವು. (ಧರ್ಮೋಪದೇಶಕಾಂಡ 16:3) ಐಗುಪ್ತದಿಂದ ಅವರು ಮಾಡಿದ ಪಲಾಯನವು ಎಷ್ಟು ಅವಸರದ್ದಾಗಿತ್ತೆಂದರೆ, ನಾದಿದ ಹಿಟ್ಟಿಗೆ ಹುಳಿಯನ್ನು ಬೆರಸಿ, ಅದು ಹುಳಿಹಿಡಿದು ಉಬ್ಬುವಂತೆ ಕಾಯುವಷ್ಟು ಸಮಯವೂ ಅವರಿಗಿರಲಿಲ್ಲ ಎಂಬುದನ್ನು ಇದು ಅವರಿಗೆ ಜ್ಞಾಪಕಹುಟ್ಟಿಸಿತು. (ವಿಮೋಚನಕಾಂಡ 12:34) ಈ ಹಬ್ಬದ ಸಮಯದಲ್ಲಿ, ಇಸ್ರಾಯೇಲ್ಯನ ಮನೆಯಲ್ಲಿ ಹುಳಿಹಾಕಿದ ರೊಟ್ಟಿಯು ಕಂಡುಬರಬಾರದಿತ್ತು. ಈ ಹಬ್ಬವನ್ನು ಆಚರಿಸುವ ಯಾವನೇ ವ್ಯಕ್ತಿಯು—ಒಬ್ಬ ಪರದೇಶಿಯನ್ನೂ ಸೇರಿಸಿ—ಹುಳಿಹಿಡಿದ ರೊಟ್ಟಿಯನ್ನು ತಿಂದ ಪಕ್ಷದಲ್ಲಿ, ಅವನಿಗೆ ಮರಣದಂಡನೆ ವಿಧಿಸಲಾಗುತ್ತಿತ್ತು.—ವಿಮೋಚನಕಾಂಡ 12:19.
5. ಎರಡನೆಯ ಹಬ್ಬದಿಂದ ಯಾವ ಸುಯೋಗವು ಜ್ಞಾಪಿಸಿಕೊಳ್ಳಲ್ಪಟ್ಟಿದ್ದಿರಬಹುದು, ಮತ್ತು ಆ ಆನಂದಿಸುವಿಕೆಯಲ್ಲಿ ಯಾರನ್ನು ಒಳಗೂಡಿಸಬೇಕಾಗಿತ್ತು?
5 ಎರಡನೆಯ ಹಬ್ಬವು, ನೈಸಾನ್ 16ರ ಅನಂತರ ಏಳು ವಾರಗಳ (49 ದಿನಗಳು) ಬಳಿಕ ನಡೆಯುತ್ತಿತ್ತು ಮತ್ತು ನಮ್ಮ ಮೇ ತಿಂಗಳಿನ ಕೊನೆಯ ಭಾಗಕ್ಕೆ ಸರಿಹೊಂದುವ, ಸಿವನ್ ಎಂಬ ಮೂರನೆಯ ತಿಂಗಳಿನ 6ನೆಯ ದಿನದಂದು ಆ ಹಬ್ಬವು ಬರುತ್ತಿತ್ತು. (ಯಾಜಕಕಾಂಡ 23:15, 16) ಅದನ್ನು ವಾರಗಳ ಹಬ್ಬವೆಂದು ಕರೆಯಲಾಗುತ್ತಿತ್ತು (ಯೇಸುವಿನ ದಿನದಲ್ಲಿ, ಅದನ್ನು ಪಂಚಾಶತ್ತಮ ಎಂದೂ ಕರೆಯಲಾಗುತ್ತಿತ್ತು, ಗ್ರೀಕ್ ಭಾಷೆಯಲ್ಲಿ “ಐವತ್ತನೆಯ” ಎಂದರ್ಥ), ಮತ್ತು ಸೀನಾಯಿ ಬೆಟ್ಟದ ಬಳಿ ಇಸ್ರಾಯೇಲ್ ಧರ್ಮಶಾಸ್ತ್ರದೊಡಂಬಡಿಕೆಯೊಳಗೆ ಪ್ರವೇಶಿಸಿದ ವರ್ಷದ ಅದೇ ಸಮಯಕ್ಕೆ ನಿಕಟವಾಗಿ ಇದು ಸಂಭವಿಸಿತು. (ವಿಮೋಚನಕಾಂಡ 19:1, 2) ಈ ಹಬ್ಬದ ಸಮಯದಲ್ಲಿ ನಂಬಿಗಸ್ತ ಇಸ್ರಾಯೇಲ್ಯರು, ದೇವರ ಪವಿತ್ರ ಜನಾಂಗದೋಪಾದಿ ಪ್ರತ್ಯೇಕಿಸಲ್ಪಟ್ಟ ತಮ್ಮ ಸುಯೋಗವನ್ನು ಜ್ಞಾಪಿಸಿಕೊಂಡಿದ್ದಿರಬಹುದು. ಅವರು ದೇವರ ವಿಶೇಷ ಜನರಾಗಿರುವುದು, ದೇವರ ಧರ್ಮಶಾಸ್ತ್ರಕ್ಕೆ ವಿಧೇಯತೆಯನ್ನು ಅಗತ್ಯಪಡಿಸಿತು; ಅದರಲ್ಲಿ ಪ್ರತಿಕೂಲ ಸ್ಥಿತಿಯಲ್ಲಿರುವವರು ಸಹ ಈ ಹಬ್ಬದಲ್ಲಿ ಆನಂದವನ್ನು ಪಡೆದುಕೊಳ್ಳಸಾಧ್ಯವಾಗುವಂತೆ, ಅವರಿಗೆ ಪ್ರೀತಿಪೂರ್ಣ ಕಾಳಜಿಯನ್ನು ತೋರಿಸುವಂತಹ ಆಜ್ಞೆಯೂ ಒಳಗೂಡಿತ್ತು.—ಯಾಜಕಕಾಂಡ 23:22; ಧರ್ಮೋಪದೇಶಕಾಂಡ 16:10-12.
6. ಮೂರನೆಯ ಹಬ್ಬವು ದೇವಜನರಿಗೆ ಯಾವ ಅನುಭವದ ಕುರಿತು ಜ್ಞಾಪಕಹುಟ್ಟಿಸಿತು?
6 ಮೂರು ದೊಡ್ಡ ವಾರ್ಷಿಕ ಹಬ್ಬಗಳಲ್ಲಿ ಕೊನೆಯದನ್ನು, ಫಲಸಂಗ್ರಹದ ಹಬ್ಬ, ಅಥವಾ ಪರ್ಣಶಾಲೆಗಳ ಹಬ್ಬವೆಂದು ಕರೆಯಲಾಯಿತು. ನಮ್ಮ ಅಕ್ಟೋಬರ್ ತಿಂಗಳಿನ ಆರಂಭದ ಭಾಗಕ್ಕೆ ಸರಿಹೊಂದುವ, ತೀಶ್ರಿ, ಅಥವಾ ಎಥನಿಮ್ ಎಂಬ ಏಳನೆಯ ತಿಂಗಳಿನ, 15ರಿಂದ 21ನೆಯ ದಿನದ ವರೆಗೆ ಅದು ನಡೆಯಿತು. (ಯಾಜಕಕಾಂಡ 23:34) ಈ ಸಮಯದಲ್ಲಿ ದೇವಜನರು, ತಮ್ಮ ಮನೆಗಳ ಹೊರಗೆ ಅಥವಾ ತಮ್ಮ ಚಾವಣಿಗಳ ಮೇಲೆ, ಮರಗಳ ರೆಂಬೆಗಳು ಹಾಗೂ ಎಲೆಗಳಿಂದ ರಚಿಸಲ್ಪಟ್ಟ ತಾತ್ಕಾಲಿಕ ವಸತಿಗಳಲ್ಲಿ (ಪರ್ಣಶಾಲೆಗಳಲ್ಲಿ) ವಾಸಿಸಿದರು. ಈ ಜನಾಂಗವು ತನ್ನ ದೈನಂದಿನ ಆವಶ್ಯಕತೆಗಳಿಗಾಗಿ ದೇವರ ಮೇಲೆ ಆತುಕೊಳ್ಳಲು ಕಲಿಯಬೇಕಾಗಿದ್ದ, ಐಗುಪ್ತದಿಂದ ವಾಗ್ದತ್ತ ದೇಶಕ್ಕೆ ಅವರು ಮಾಡಿದ 40 ವರ್ಷಗಳ ಪ್ರಯಾಣದ ನೆನಪನ್ನು ಇದು ಅವರಿಗೆ ಕೊಟ್ಟಿತು.—ಯಾಜಕಕಾಂಡ 23:42, 43; ಧರ್ಮೋಪದೇಶಕಾಂಡ 8:15, 16.
7. ಪುರಾತನ ಇಸ್ರಾಯೇಲಿನಲ್ಲಿನ ಹಬ್ಬಾಚರಣೆಗಳ ಪುನರ್ವಿಮರ್ಶೆಯಿಂದ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳುತ್ತೇವೆ?
7 ದೇವರ ಪುರಾತನ ಜನರ ಇತಿಹಾಸದಲ್ಲಿ ಗಮನಾರ್ಹವಾದದ್ದಾಗಿ ಪರಿಣಮಿಸಿದ ಕೆಲವು ಹಬ್ಬಗಳನ್ನು ನಾವು ಪುನರ್ವಿಮರ್ಶಿಸೋಣ. ಇದು ಇಂದು ನಮ್ಮನ್ನು ಉತ್ತೇಜಿಸುವಂತಹದ್ದಾಗಿರಬೇಕು, ಏಕೆಂದರೆ ಕ್ರಮವಾಗಿ ಪ್ರತಿ ವಾರ ಮತ್ತು ಪ್ರತಿ ವರ್ಷ ಮೂರು ಬಾರಿ ದೊಡ್ಡ ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ಒಟ್ಟಾಗಿ ಕೂಡಿಬರುವಂತೆ ನಾವು ಸಹ ಆಮಂತ್ರಿಸಲ್ಪಡುತ್ತೇವೆ.—ಇಬ್ರಿಯ 10:24, 25.
ದಾವೀದನ ಮನೆತನದ ರಾಜರ ಸಮಯದಲ್ಲಿನ ಹಬ್ಬಗಳು
8. (ಎ) ರಾಜ ಸೊಲೊಮೋನನ ದಿನಗಳಲ್ಲಿ ಯಾವ ಐತಿಹಾಸಿಕ ಆಚರಣೆಯು ನಡೆಯಿತು? (ಬಿ) ಸೂಚಿತರೂಪದ ಪರ್ಣಶಾಲೆಗಳ ಹಬ್ಬದ ಯಾವ ಮಹತ್ತರವಾದ ಪರಾಕಾಷ್ಠೆಯನ್ನು ನಾವು ಮುನ್ನೋಡಸಾಧ್ಯವಿದೆ?
8 ದಾವೀದನ ಮಗನಾದ ರಾಜ ಸೊಲೊಮೋನನ ಸಮೃದ್ಧ ಆಳಿಕೆಯ ಕಾಲದಲ್ಲಿ, ಪರ್ಣಶಾಲೆಗಳ ಹಬ್ಬದ ಸಮಯದಲ್ಲಿ, ಒಂದು ಐತಿಹಾಸಿಕ ಆಚರಣೆಯು ನಡೆಯಿತು. ಪರ್ಣಶಾಲೆಗಳ ಹಬ್ಬಕ್ಕಾಗಿ ಮತ್ತು ದೇವಾಲಯದ ಆರಂಭೋತ್ಸವಕ್ಕಾಗಿ, ವಾಗ್ದತ್ತ ದೇಶದ ಬಹುದೂರದ ಸ್ಥಳಗಳಿಂದ ಬಂದ “ತುಂಬ ದೊಡ್ಡದಾದ ಒಂದು ಸಭೆಯು” (NW) ಒಟ್ಟುಗೂಡಿತು. (2 ಪೂರ್ವಕಾಲವೃತ್ತಾಂತ 7:8) ಅದು ಮುಕ್ತಾಯಗೊಂಡಾಗ, ಹಬ್ಬವನ್ನು ಆಚರಿಸಲಿಕ್ಕಾಗಿ ಹಾಜರಾಗಿದ್ದವರಿಗೆ, ರಾಜ ಸೊಲೊಮೋನನು ಹೋಗಲು ಅಪ್ಪಣೆಕೊಟ್ಟನು. ಅವರು “ಅರಸನನ್ನು ವಂದಿಸಿ ಯೆಹೋವನು ತನ್ನ ಸೇವಕನಾದ ದಾವೀದನಿಗೂ ತನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೂ ಮಾಡಿದ ಸರ್ವೋಪಕಾರಗಳನ್ನು ನೆನಸಿ ಆನಂದಚಿತ್ತರಾಗಿ ಹರ್ಷಿಸುತ್ತಾ ತಮ್ಮ ತಮ್ಮ ನಿವಾಸಗಳಿಗೆ ತೆರಳಿದರು.” (1 ಅರಸುಗಳು 8:66) ಅದು ನಿಜವಾಗಿಯೂ ಹಬ್ಬದ ಒಂದು ಸಂದರ್ಭವಾಗಿತ್ತು. ಇಂದು, ದೇವರ ಸೇವಕರು, ಮಹಾ ಸೊಲೊಮೋನನಾದ ಯೇಸು ಕ್ರಿಸ್ತನ ಸಾವಿರ ವರ್ಷದಾಳಿಕೆಯ ಅಂತ್ಯದಲ್ಲಿ, ಸೂಚಿತರೂಪದ ಪರ್ಣಶಾಲೆಗಳ ಹಬ್ಬದ ಮಹಾ ಪರಾಕಾಷ್ಠೆಯನ್ನು ಎದುರುನೋಡುತ್ತಾರೆ. (ಪ್ರಕಟನೆ 20:3, 7-10, 14, 15) ಆ ಸಮಯದಲ್ಲಿ, ಭೂಮಿಯ ಪ್ರತಿಯೊಂದು ಮೂಲೆಯಲ್ಲಿ ಜೀವಿಸುತ್ತಿರುವ ಜನರು—ಪುನರುತ್ಥಿತರು ಹಾಗೂ ಅರ್ಮಗೆದ್ದೋನಿನಿಂದ ಪಾರಾದವರೂ ಸೇರಿ—ಯೆಹೋವ ದೇವರ ಹರ್ಷಭರಿತ ಆರಾಧನೆಯಲ್ಲಿ ಐಕ್ಯಗೊಳಿಸಲ್ಪಡುವರು.—ಜೆಕರ್ಯ 14:16.
9-11. (ಎ) ರಾಜ ಹಿಜ್ಕೀಯನ ದಿನಗಳಲ್ಲಿ ಹಬ್ಬದ ಘಟ್ಟಕ್ಕೆ ಯಾವುದು ನಡೆಸಿತು? (ಬಿ) ಉತ್ತರದ ಹತ್ತು-ಕುಲ ರಾಜ್ಯದಿಂದ ಬಂದ ಅನೇಕರಿಂದ ಯಾವ ಮಾದರಿಯು ಇಡಲ್ಪಟ್ಟಿತು, ಮತ್ತು ಅದು ಇಂದು ನಮಗೆ ಯಾವುದರ ಕುರಿತು ಜ್ಞಾಪಕಹುಟ್ಟಿಸುತ್ತದೆ?
9 ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಇನ್ನೊಂದು ಪ್ರಮುಖ ಹಬ್ಬವು, ದುಷ್ಟ ರಾಜನಾದ ಆಹಾಜನ ಆಳಿಕೆಯ ನಂತರ ಬಂತು. ಇವನು ದೇವಾಲಯವನ್ನು ಮುಚ್ಚಿಸಿ, ಯೆಹೂದ ರಾಜ್ಯವನ್ನು ಧರ್ಮಭ್ರಷ್ಟತೆಗೆ ನಡಿಸಿದನು. ಆಹಾಜನ ಉತ್ತರಾಧಿಕಾರಿಯು, ಒಳ್ಳೆಯ ರಾಜನಾದ ಹಿಜ್ಕೀಯನಾಗಿದ್ದನು. ಅವನ ಆಳಿಕೆಯ ಮೊದಲನೆಯ ವರ್ಷದಲ್ಲಿ, 25ರ ಪ್ರಾಯದಲ್ಲಿ ಹಿಜ್ಕೀಯನು, ಪುನಸ್ಸ್ಥಾಪನೆ ಮತ್ತು ಸುಧಾರಣೆಯ ಮಹಾನ್ ಕಾರ್ಯಕ್ರಮವನ್ನು ಆರಂಭಿಸಿದನು. ಆ ಕೂಡಲೆ ಅವನು ದೇವಾಲಯವನ್ನು ತೆರೆಸಿ, ಅದರ ದುರಸ್ತಿಗಾಗಿ ಏರ್ಪಡಿಸಿದನು. ತದನಂತರ, ಆ ರಾಜನು ಉತ್ತರದಲ್ಲಿ ಇಸ್ರಾಯೇಲಿನ ಶತ್ರುತ್ವವುಳ್ಳ ಹತ್ತು-ಕುಲ ರಾಜ್ಯದ ನಿವಾಸಿಗಳಾದ ಇಸ್ರಾಯೇಲ್ಯರಿಗೆ ಪತ್ರಗಳನ್ನು ಕಳುಹಿಸಿ, ಪಸ್ಕ ಹಾಗೂ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಲಿಕ್ಕಾಗಿ ಬರುವಂತೆ ಅವರನ್ನು ಆಮಂತ್ರಿಸಿದನು. ತಮ್ಮ ಜೊತೆಮಾನವರು ಪರಿಹಾಸ್ಯಮಾಡಿದರೂ, ಅನೇಕರು ಬಂದರು.—2 ಪೂರ್ವಕಾಲವೃತ್ತಾಂತ 30:1, 10, 11, 18.
10 ಆ ಹಬ್ಬವು ಯಶಸ್ವಿಕರವಾಗಿ ನಡೆಯಿತೊ? ಬೈಬಲು ವರದಿಸುವುದು: “ಯೆರೂಸಲೇಮಿನಲ್ಲಿ ಕೂಡಿಬಂದ ಇಸ್ರಾಯೇಲ್ಯರು ಏಳು ದಿನಗಳ ವರೆಗೂ ಮಹಾ ಸಂತೋಷದಿಂದ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸುತ್ತಾ ಇದ್ದರು. ಲೇವಿಯರೂ ಯಾಜಕರೂ ಮಹಾವಾದ್ಯದೊಡನೆ ಯೆಹೋವನನ್ನು ಪ್ರತಿದಿನವೂ ಕೀರ್ತಿಸುತ್ತಾ ಇದ್ದರು.” (2 ಪೂರ್ವಕಾಲವೃತ್ತಾಂತ 30:21) ಆ ಇಸ್ರಾಯೇಲ್ಯರಲ್ಲಿ ಅನೇಕರು, ಈ ಸಭೆಗಳಿಗೆ ಹಾಜರಾಗಲಿಕ್ಕಾಗಿ ವಿರೋಧವನ್ನು ತಾಳಿಕೊಂಡು, ಬಹುದೂರ ಪ್ರಯಾಣಿಸಿ ಬಂದಿದ್ದರು. ಇಂದು ದೇವಜನರಿಗಾಗಿ ಅವರು ಎಂತಹ ಒಂದು ಅತ್ಯುತ್ತಮ ಮಾದರಿಯನ್ನು ಇಡುತ್ತಾರೆ!
11 ಉದಾಹರಣೆಗಾಗಿ, 1989ರಲ್ಲಿ ಪೋಲೆಂಡಿನಲ್ಲಿ ನಡೆದ ಮೂರು “ದಿವ್ಯ ಭಕ್ತಿ” ಜಿಲ್ಲಾ ಅಧಿವೇಶನಗಳನ್ನು ಪರಿಗಣಿಸಿರಿ. ಹಾಜರಿದ್ದ 1,66,518 ಮಂದಿಯಲ್ಲಿ, ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳ ಕೆಲಸವು ನಿಷೇಧಿಸಲ್ಪಟ್ಟಿದ್ದ ಹಿಂದಿನ ಸೋವಿಯಟ್ ಯೂನಿಯನ್ನಿಂದ ಹಾಗೂ ಇತರ ಪೂರ್ವ ಯೂರೋಪಿಯನ್ ದೇಶಗಳಿಂದ ಬಂದ ದೊಡ್ಡ ಗುಂಪುಗಳೂ ಸೇರಿದ್ದವು. ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್)b ಎಂಬ ಪುಸ್ತಕವು ವರದಿಸುವುದೇನೆಂದರೆ, “ಈ ಅಧಿವೇಶನಗಳಿಗೆ ಹಾಜರಾದ ಕೆಲವರಿಗೆ, ಯೆಹೋವನ ಜನರಲ್ಲಿ 15 ಅಥವಾ 20ಕ್ಕಿಂತ ಹೆಚ್ಚು ಮಂದಿಯಿದ್ದ ದೊಡ್ಡ ಕೂಟದಲ್ಲಿ ಹಾಜರಿದ್ದದ್ದು ಇದೇ ಮೊದಲ ಬಾರಿಯಾಗಿತ್ತು. ಕ್ರೀಡಾಂಗಣಗಳಲ್ಲಿರುವ ಹತ್ತಾರು ಸಾವಿರ ಜನರು, ತಮ್ಮೊಂದಿಗೆ ಪ್ರಾರ್ಥನೆಯಲ್ಲಿ ಜೊತೆಗೂಡಿ, ಯೆಹೋವನಿಗೆ ಹಾಡಲ್ಪಟ್ಟ ಸ್ತುತಿಗೀತಗಳಲ್ಲಿ ತಮ್ಮ ಧ್ವನಿಗಳನ್ನು ಸೇರಿಸುವುದನ್ನು ಅವರು ನೋಡಿದಾಗ, ಅವರ ಹೃದಯಗಳು ಗಣ್ಯತೆಯಿಂದ ತುಂಬಿದವು.”—279ನೆಯ ಪುಟ.
12. ರಾಜ ಯೋಷೀಯನ ಆಳಿಕೆಯಲ್ಲಿ, ಹಬ್ಬದ ಘಟ್ಟಕ್ಕೆ ಯಾವುದು ಮುನ್ನಡೆಸಿತು?
12 ಹಿಜ್ಕೀಯನ ಮರಣದ ಬಳಿಕ, ಮನಸ್ಸೆ ಹಾಗೂ ಅಮ್ಮೋನ ರಾಜರ ಆಳಿಕೆಯ ಕೆಳಗೆ ಯೂದಾಯದವರು ಮತ್ತೊಮ್ಮೆ ಸುಳ್ಳು ಆರಾಧನೆಗೆ ವಶವಾದರು. ತದನಂತರ ಇನ್ನೊಬ್ಬ ಒಳ್ಳೆಯ ರಾಜನು—ಚಿಕ್ಕ ಪ್ರಾಯದ ಯೋಷೀಯನು—ಆಳಿಕೆಗೆ ಬಂದನು, ಅವನು ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸುವುದರಲ್ಲಿ ಧೈರ್ಯದಿಂದ ಕಾರ್ಯನಿರ್ವಹಿಸಿದನು. 25ನೆಯ ವರ್ಷ ಪ್ರಾಯದಲ್ಲಿ ಯೋಷೀಯನು, ದೇವಾಲಯದ ದುರಸ್ತಿ ಕಾರ್ಯದ ಆಜ್ಞೆಯನ್ನು ಹೊರಡಿಸಿದನು. (2 ಪೂರ್ವಕಾಲವೃತ್ತಾಂತ 34:8) ದುರಸ್ತಿ ಕೆಲಸವು ನಡೆಯುತ್ತಿದ್ದಾಗ, ಮೋಶೆಯಿಂದ ಬರೆಯಲ್ಪಟ್ಟ ಧರ್ಮಶಾಸ್ತ್ರವು ದೇವಾಲಯದಲ್ಲಿ ಸಿಕ್ಕಿತು. ದೇವರ ಧರ್ಮಶಾಸ್ತ್ರದಲ್ಲಿ ತಾನು ಓದಿದ ವಿಷಯದಿಂದ ರಾಜ ಯೋಷೀಯನು ಬಹಳವಾಗಿ ಪ್ರಚೋದಿತನಾಗಿ, ಎಲ್ಲ ಜನರಿಗಾಗಿ ಅದನ್ನು ಓದಿಸುವ ಏರ್ಪಾಡನ್ನು ಮಾಡಿದನು. (2 ಪೂರ್ವಕಾಲವೃತ್ತಾಂತ 34:14, 30) ಆ ಬಳಿಕ, ಏನು ಬರೆಯಲ್ಪಟ್ಟಿತ್ತೋ ಅದಕ್ಕನುಸಾರವಾಗಿ, ಅವನು ಪಸ್ಕದ ಆಚರಣೆಯನ್ನು ವ್ಯವಸ್ಥಾಪಿಸಿದನು. ಆ ಸಂದರ್ಭಕ್ಕಾಗಿ ಉದಾರವಾಗಿ ದಾನವನ್ನು ನೀಡುವ ಮೂಲಕವೂ ಆ ರಾಜನು ಅತ್ಯುತ್ತಮವಾದ ಮಾದರಿಯನ್ನು ಇಟ್ಟನು. ಇದರ ಫಲಿತಾಂಶವಾಗಿ, ಬೈಬಲು ವರದಿಸುವುದು: “ಇಂಥಾ ಪಸ್ಕಹಬ್ಬವು ಪ್ರವಾದಿಯಾದ ಸಮುವೇಲನ ದಿವಸಗಳಿಂದ ಇಸ್ರಾಯೇಲ್ಯರಲ್ಲಿ ನಡೆಯಲೇ ಇಲ್ಲ.”—2 ಪೂರ್ವಕಾಲವೃತ್ತಾಂತ 35:7, 17, 18.
13. ಹಿಜ್ಕೀಯ ಮತ್ತು ಯೋಷೀಯರ ಹಬ್ಬಾಚರಣೆಗಳು ಇಂದು ನಮಗೆ ಯಾವುದರ ಕುರಿತು ಜ್ಞಾಪಕಹುಟ್ಟಿಸುತ್ತವೆ?
13 ಹಿಜ್ಕೀಯ ಮತ್ತು ಯೋಷೀಯರ ಸುಧಾರಣೆಗಳು, 1914ರಲ್ಲಿ ಯೇಸು ಕ್ರಿಸ್ತನ ಸಿಂಹಾಸನಾರೋಹಣದಂದಿನಿಂದ ನಿಜ ಕ್ರೈಸ್ತರ ನಡುವೆ ಸಂಭವಿಸಿರುವ ಸತ್ಯಾರಾಧನೆಯ ಅದ್ಭುತಕರ ಪುನಸ್ಸ್ಥಾಪನೆಗೆ ಸಮಾಂತರವಾಗಿವೆ. ಯೋಷೀಯನ ಸುಧಾರಣೆಗಳ ವಿಷಯದಲ್ಲಿ ಇದು ವಿಶೇಷವಾಗಿ ಸತ್ಯವಾಗಿದ್ದಂತೆಯೇ, ಈ ಆಧುನಿಕ ದಿನದ ಪುನಸ್ಸ್ಥಾಪನೆಯು, ದೇವರ ವಾಕ್ಯದಲ್ಲಿ ಏನು ಬರೆಯಲ್ಪಟ್ಟಿದೆಯೋ ಅದರ ಮೇಲೆ ಆಧಾರಿತವಾಗಿದೆ. ಮತ್ತು, ಹಿಜ್ಕೀಯ ಮತ್ತು ಯೋಷೀಯರ ದಿನಗಳಿಗೆ ಸಮಾಂತರವಾಗಿ, ಈ ಆಧುನಿಕ ದಿನದ ಪುನಸ್ಸ್ಥಾಪನೆಯು, ಸಮ್ಮೇಳನಗಳು ಹಾಗೂ ಅಧಿವೇಶನಗಳಿಂದ ಗುರುತಿಸಲ್ಪಟ್ಟಿದ್ದು, ಅಲ್ಲಿ ಬೈಬಲ್ ಪ್ರವಾದನೆಯ ರೋಮಾಂಚಕ ವಿವರಣೆಗಳು ಹಾಗೂ ಬೈಬಲ್ ಮೂಲತತ್ವಗಳ ಸಮಯೋಚಿತ ಅನ್ವಯಗಳು ವಿವರವಾಗಿ ತೋರಿಸಲ್ಪಟ್ಟಿವೆ. ಈ ಬೋಧಪ್ರದ ಸಂದರ್ಭಗಳ ಸಂತೋಷಕ್ಕೆ ಹೆಚ್ಚನ್ನು ಕೂಡಿಸುವಂತಹ ವಿಷಯವು, ದೀಕ್ಷಾಸ್ನಾನವನ್ನು ಪಡೆದುಕೊಂಡ ದೊಡ್ಡ ಸಂಖ್ಯೆಯೇ ಆಗಿದೆ. ಹಿಜ್ಕೀಯ ಹಾಗೂ ಯೋಷೀಯರ ದಿನಗಳಲ್ಲಿನ ಪಶ್ಚಾತ್ತಾಪಪಟ್ಟ ಇಸ್ರಾಯೇಲ್ಯರಂತೆ, ಹೊಸದಾಗಿ ದೀಕ್ಷಾಸ್ನಾನ ಪಡೆದುಕೊಂಡಿರುವ ಜನರು, ಕ್ರೈಸ್ತಪ್ರಪಂಚದ ಹಾಗೂ ಸೈತಾನನ ಲೋಕದ ಉಳಿದ ಭಾಗದ ದುಷ್ಟ ಆಚರಣೆಗಳನ್ನು ತೊರೆದುಬಿಟ್ಟಿದ್ದಾರೆ. 1997ರಲ್ಲಿ, ಪವಿತ್ರ ದೇವರಾದ ಯೆಹೋವನಿಗೆ ತಮ್ಮ ಸಮರ್ಪಣೆಯ ಸಂಕೇತವಾಗಿ 3,75,000ಕ್ಕಿಂತಲೂ ಹೆಚ್ಚು ಜನರು ದೀಕ್ಷಾಸ್ನಾನವನ್ನು ಪಡೆದುಕೊಂಡರು—ಒಂದು ದಿನಕ್ಕೆ ಸರಾಸರಿ 1,000ಕ್ಕಿಂತಲೂ ಹೆಚ್ಚು ಮಂದಿ.
ದೇಶಭ್ರಷ್ಟತೆಯ ಬಳಿಕ
14. ಸಾ.ಶ.ಪೂ. 537ರಲ್ಲಿನ ಹಬ್ಬದ ಘಟ್ಟಕ್ಕೆ ಯಾವುದು ಮುನ್ನಡೆಸಿತು?
14 ಯೋಷೀಯನ ಮರಣಾನಂತರ, ಆ ಜನಾಂಗವು ಪುನಃ ತುಚ್ಛವಾದ ಸುಳ್ಳು ಆರಾಧನೆಗೆ ಹಿಂದಿರುಗಿತು. ಕಾಲಕ್ರಮೇಣ, ಸಾ.ಶ.ಪೂ. 607ರಲ್ಲಿ, ಯೆರೂಸಲೇಮಿನ ವಿರುದ್ಧ ಬಾಬೆಲಿನ ಸೈನ್ಯಗಳನ್ನು ಬರಮಾಡುವ ಮೂಲಕ ಯೆಹೋವನು ತನ್ನ ಜನರನ್ನು ಶಿಕ್ಷಿಸಿದನು. ಆ ನಗರವೂ ಅದರ ದೇವಾಲಯವೂ ನಾಶಗೊಳಿಸಲ್ಪಟ್ಟಿತು, ಮತ್ತು ಆ ಪ್ರದೇಶವು ನಿರ್ಜನವಾಯಿತು. ಬಳಿಕ ಬಾಬೆಲಿನಲ್ಲಿ 70 ವರ್ಷಗಳ ಯೆಹೂದಿ ಬಂದಿವಾಸವು ಅನುಸರಿಸಿಬಂತು. ಆಗ ದೇವರು, ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸಲಿಕ್ಕಾಗಿ ವಾಗ್ದತ್ತ ದೇಶಕ್ಕೆ ಹಿಂದಿರುಗಿದ ಪಶ್ಚಾತ್ತಾಪಿ ಯೆಹೂದಿ ಉಳಿಕೆಯವರನ್ನು ಪುನಶ್ಚೈತನ್ಯಗೊಳಿಸಿದನು. ಸಾ.ಶ.ಪೂ. 537ನೆಯ ವರ್ಷದ ಏಳನೆಯ ತಿಂಗಳಿನಲ್ಲಿ, ಹಾಳುಬಿದ್ದಿದ್ದ ಯೆರೂಸಲೇಮ್ ನಗರಕ್ಕೆ ಅವರು ಆಗಮಿಸಿದರು. ಅವರು ಮಾಡಿದ ಪ್ರಪ್ರಥಮ ಕೆಲಸವು, ಧರ್ಮಶಾಸ್ತ್ರದೊಡಂಬಡಿಕೆಯಲ್ಲಿ ವಿಧಿಸಲ್ಪಟ್ಟಿರುವಂತೆ, ಕ್ರಮವಾದ ದೈನಂದಿನ ಯಜ್ಞಾರ್ಪಣೆಗಳನ್ನು ಅರ್ಪಿಸಲಿಕ್ಕಾಗಿ ಒಂದು ಯಜ್ಞವೇದಿಯನ್ನು ಸ್ಥಾಪಿಸುವುದಾಗಿತ್ತು. ಇದು ಇನ್ನೊಂದು ಐತಿಹಾಸಿಕ ಆಚರಣೆಗಾಗಿ ಸಕಾಲದಲ್ಲಿ ಮಾಡಲ್ಪಡುತ್ತಿತ್ತು. “ಶಾಸ್ತ್ರದಲ್ಲಿ ಬರೆದಿರುವಂತೆ ಅವರು ಪರ್ಣಶಾಲೆಗಳ ಜಾತ್ರೆಯನ್ನು ಆಚರಿಸಿ”ದರು.—ಎಜ್ರ 3:1-4.
15. ಸಾ.ಶ.ಪೂ. 537ರಲ್ಲಿ ಪುನಸ್ಸ್ಥಾಪಿತ ಉಳಿಕೆಯವರಿಗೆ ಯಾವ ಕೆಲಸವು ಕಾದಿತ್ತು, ಮತ್ತು 1919ರಲ್ಲಿ ಹೇಗೆ ಒಂದು ಸಮಾಂತರ ಸನ್ನಿವೇಶವು ಅಸ್ತಿತ್ವದಲ್ಲಿತ್ತು?
15 ಹಿಂದಿರುಗಿ ಬಂದ ಈ ದೇಶಭ್ರಷ್ಟರಿಗೆ ಒಂದು ಭಾರಿ ಕೆಲಸವು ಕಾದಿತ್ತು—ದೇವರ ದೇವಾಲಯವನ್ನೂ ಅದರ ಗೋಡೆಗಳೊಂದಿಗೆ ಯೆರೂಸಲೇಮನ್ನು ಪುನಃ ನಿರ್ಮಿಸುವುದು. ಅಸೂಯಾಪರರಾದ ನೆರೆಹೊರೆಯವರಿಂದ ಹೆಚ್ಚು ವಿರೋಧವಿತ್ತು. ದೇವಾಲಯವು ಪುನಃ ಕಟ್ಟಲ್ಪಡುತ್ತಿದ್ದಾಗ, ಅದು “ಅಲ್ಪಕಾರ್ಯಗಳ ದಿನ”ವಾಗಿತ್ತು. (ಜೆಕರ್ಯ 4:10) ಈ ಸನ್ನಿವೇಶವು, 1919ರಲ್ಲಿನ ನಂಬಿಗಸ್ತ ಅಭಿಷಿಕ್ತ ಕ್ರೈಸ್ತರ ಸ್ಥಿತಿಗೆ ಸಮಾಂತರವಾಗಿತ್ತು. ಆ ಸ್ಮರಣಾರ್ಹ ವರ್ಷದಲ್ಲಿ, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಆತ್ಮಿಕ ಬಂದಿವಾಸದಿಂದ ಅವರು ಬಿಡುಗಡೆಗೊಳಿಸಲ್ಪಟ್ಟರು. ಅವರು ಕೆಲವೇ ಸಾವಿರ ಮಂದಿಯಾಗಿದ್ದು, ಶತ್ರುತ್ವ ತುಂಬಿದ ಲೋಕವನ್ನು ಎದುರಿಸಿದರು. ದೇವರ ವೈರಿಗಳು ಸತ್ಯಾರಾಧನೆಯ ಅಭಿವೃದ್ಧಿಯನ್ನು ನಿಲ್ಲಿಸಲು ಶಕ್ತರಾಗಿರುವರೊ? ಆ ಪ್ರಶ್ನೆಗೆ ಉತ್ತರವು, ಹೀಬ್ರು ಶಾಸ್ತ್ರಗಳಲ್ಲಿ ದಾಖಲಿಸಲ್ಪಟ್ಟಿರುವ ಕೊನೆಯ ಎರಡು ಹಬ್ಬಾಚರಣೆಗಳನ್ನು ಮನಸ್ಸಿಗೆ ತರುತ್ತದೆ.
16. ಸಾ.ಶ.ಪೂ. 515ರಲ್ಲಿನ ಹಬ್ಬವೊಂದರ ಮಹತ್ವವೇನಾಗಿತ್ತು?
16 ಕಾಲಕ್ರಮೇಣ, ಸಾ.ಶ.ಪೂ. 515ರ ಆಡಾರ್ ತಿಂಗಳಿನಲ್ಲಿ ಆ ದೇವಾಲಯವು ಕಟ್ಟಲ್ಪಟ್ಟಿತು. ನೈಸಾನ್ ವಸಂತಕಾಲದ ಹಬ್ಬಕ್ಕೆ ಅದು ಸರಿಯಾದ ಸಮಯವಾಗಿತ್ತು. ಬೈಬಲು ವರದಿಸುವುದು: “ಇಸ್ರಾಯೇಲ್ದೇವರ ಆಲಯವನ್ನು ಕಟ್ಟುವದರಲ್ಲಿ ಅಶ್ಶೂರದ ಅರಸನು ತಮಗೆ ಸಹಾಯಮಾಡುವಂತೆ ಯೆಹೋವನು ಅವನ ಮನಸ್ಸನ್ನು ತಿರುಗಿಸಿ ತಮಗೆ ಸಂತೋಷವನ್ನು ಉಂಟುಮಾಡಿದ್ದಾನೆ ಎಂದು ಹರ್ಷಿಸುತ್ತಾ ಏಳು ದಿವಸಗಳ ವರೆಗೂ ಹುಳಿಯಿಲ್ಲದ ರೊಟ್ಟಿಗಳ ಜಾತ್ರೆಯನ್ನು ಆಚರಿಸಿದನು.”—ಎಜ್ರ 6:22.
17, 18. (ಎ) ಸಾ.ಶ.ಪೂ. 455ರಲ್ಲಿ ಯಾವ ಹಬ್ಬದ ಘಟ್ಟವು ತಲಪಲ್ಪಟ್ಟಿತು? (ಬಿ) ಇಂದು ನಾವು ಹೇಗೆ ತದ್ರೀತಿಯ ಒಂದು ಸನ್ನಿವೇಶದಲ್ಲಿದ್ದೇವೆ?
17 ಅರವತ್ತು ವರ್ಷಗಳ ತರುವಾಯ, ಸಾ.ಶ.ಪೂ. 455ರಲ್ಲಿ, ಇನ್ನೊಂದು ಗಮನಾರ್ಹ ಘಟ್ಟವನ್ನು ತಲಪಲಾಯಿತು. ಆ ವರ್ಷದ ಪರ್ಣಶಾಲೆಗಳ ಹಬ್ಬವು, ಯೆರೂಸಲೇಮಿನ ಗೋಡೆಗಳ ಪುನರ್ನಿರ್ಮಾಣದ ಪೂರ್ಣತೆಯನ್ನು ಗುರುತಿಸಿತು. ಬೈಬಲು ವರದಿಸುವುದು: “ನೂನನ ಮಗನಾದ ಯೆಹೋಶುವನ ಕಾಲದಿಂದ ಆ ವರೆಗೂ ಇಸ್ರಾಯೇಲ್ಯರು ಹೀಗೆ ಮಾಡಿದ್ದಿಲ್ಲ. ಸೆರೆಯಿಂದ ತಿರಿಗಿ ಬಂದ ಸರ್ವಸಮೂಹದವರಾದರೋ ಪರ್ಣಶಾಲೆಗಳನ್ನು ಮಾಡಿಕೊಂಡು ಅವುಗಳಲ್ಲಿ ವಾಸಿಸುತ್ತಾ ಬಹು ಸಂತೋಷಪಟ್ಟರು.”—ನೆಹೆಮೀಯ 8:17.
18 ಉಗ್ರವಾದ ವಿರೋಧದ ಎದುರಿನಲ್ಲಿಯೂ, ದೇವರ ಸತ್ಯಾರಾಧನೆಯ ಎಂತಹ ಒಂದು ಸ್ಮರಣಯೋಗ್ಯ ಪುನಸ್ಸ್ಥಾಪನೆ! ಇಂದಿನ ಸನ್ನಿವೇಶವೂ ತದ್ರೀತಿಯದ್ದಾಗಿದೆ. ಹಿಂಸೆ ಹಾಗೂ ವಿರೋಧದ ಅಲೆಗಳ ಎದುರಿನಲ್ಲಿಯೂ, ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಮಹಾ ಕೆಲಸವು, ಭೂಮಿಯ ಮೂಲೆಮೂಲೆಗಳನ್ನು ತಲಪಿದೆ, ಮತ್ತು ದೇವರ ನ್ಯಾಯತೀರ್ಪಿನ ಸಂದೇಶಗಳು ಬಹು ದೂರದ ವರೆಗೂ ಧ್ವನಿಸಲ್ಪಟ್ಟಿವೆ. (ಮತ್ತಾಯ 24:14) 1,44,000 ಮಂದಿ ಅಭಿಷಿಕ್ತ ಉಳಿಕೆಯವರ ಕೊನೆಯ ಮುದ್ರೆಯೊತ್ತುವಿಕೆಯು ಸಮೀಪವಾಗುತ್ತಿದೆ. ಅವರ “ಬೇರೆ ಕುರಿಗಳ” ಐವತ್ತು ಲಕ್ಷಕ್ಕಿಂತಲೂ ಹೆಚ್ಚು ಜೊತೆಗಾರರು, ಎಲ್ಲ ಜನಾಂಗಗಳಿಂದ ಒಟ್ಟುಗೂಡಿಸಲ್ಪಟ್ಟು, ಅಭಿಷಿಕ್ತ ಕ್ರೈಸ್ತರೊಂದಿಗೆ ‘ಒಂದೇ ಹಿಂಡಿಗೆ’ ಸೇರಿಸಲ್ಪಟ್ಟಿದ್ದಾರೆ. (ಯೋಹಾನ 10:16; ಪ್ರಕಟನೆ 7:3, 9, 10) ಪರ್ಣಶಾಲೆಗಳ ಹಬ್ಬದ ಪ್ರವಾದನಾತ್ಮಕ ಚಿತ್ರಣದ ಎಂತಹ ಒಂದು ಅದ್ಭುತಕರ ನೆರವೇರಿಕೆ! ಮತ್ತು ಈ ಒಟ್ಟುಗೂಡಿಸುವಿಕೆಯ ಮಹತ್ತರವಾದ ಕೆಲಸವು, ನೂರಾರುಕೋಟಿ ಪುನರುತ್ಥಿತರು, ಪರ್ಣಶಾಲೆಗಳ ಸೂಚಿತರೂಪದ ಹಬ್ಬವನ್ನು ಆಚರಿಸುವುದರಲ್ಲಿ ಜೊತೆಗೂಡುವಂತೆ ಆಮಂತ್ರಿಸಲ್ಪಡುವ ತನಕ, ಹೊಸ ಲೋಕದಲ್ಲಿಯೂ ಮುಂದುವರಿಯುವುದು.—ಜೆಕರ್ಯ 14:16-19.
ಸಾ.ಶ. ಪ್ರಥಮ ಶತಮಾನದಲ್ಲಿ
19. ಸಾ.ಶ. 32ರಲ್ಲಿನ ಪರ್ಣಶಾಲೆಗಳ ಹಬ್ಬವನ್ನು ಅಷ್ಟೊಂದು ಎದ್ದುಕಾಣುವಂತೆ ಮಾಡಿದ್ದು ಯಾವುದು?
19 ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಅತ್ಯಂತ ಪ್ರಮುಖ ಹಬ್ಬಾಚರಣೆಗಳಲ್ಲಿ, ದೇವಕುಮಾರನಾದ ಯೇಸು ಕ್ರಿಸ್ತನು ಹಾಜರಾದ ಹಬ್ಬಗಳು ಪ್ರಮುಖವಾಗಿದ್ದವೆಂಬುದು ನಿಸ್ಸಂದೇಹ. ಉದಾಹರಣೆಗೆ, ಸಾ.ಶ. 32ನೆಯ ವರ್ಷದಲ್ಲಿ ನಡೆದ ಪರ್ಣಶಾಲೆಗಳ (ಅಥವಾ, ದೇವದರ್ಶನದ ಗುಡಾರಗಳ) ಹಬ್ಬದಲ್ಲಿನ ಯೇಸುವಿನ ಹಾಜರಿಯನ್ನು ಪರಿಗಣಿಸಿರಿ. ಪ್ರಮುಖವಾದ ಸತ್ಯತೆಗಳನ್ನು ಕಲಿಸಲು ಅವನು ಆ ಸಂದರ್ಭವನ್ನು ಉಪಯೋಗಿಸಿದನು, ಮತ್ತು ಹೀಬ್ರು ಶಾಸ್ತ್ರಗಳಿಂದ ಉದ್ಧರಿಸುವ ಮೂಲಕ ತನ್ನ ಬೋಧನೆಯನ್ನು ದೃಢಪಡಿಸಿದನು. (ಯೋಹಾನ 7:2, 14, 37-39) ಈ ಹಬ್ಬದ ಕ್ರಮವಾದ ಒಂದು ವೈಶಿಷ್ಟ್ಯವು, ದೇವಾಲಯದ ಒಳ ಪ್ರಾಂಗಣದಲ್ಲಿ ನಾಲ್ಕು ದೊಡ್ಡ ಕವಲೊಡೆದ ದೀಪಸ್ತಂಭಗಳನ್ನು ಉರಿಸುವ ಸಂಪ್ರದಾಯವಾಗಿತ್ತು. ರಾತ್ರಿಯ ವರೆಗೆ ಮುಂದುವರಿಯುತ್ತಿದ್ದ ಹಬ್ಬದ ಚಟುವಟಿಕೆಗಳ ಆನಂದಕ್ಕೆ ಇದು ನೆರವು ನೀಡಿತು. “ನಾನೇ ಲೋಕಕ್ಕೆ ಬೆಳಕು; ನನ್ನನ್ನು ಅನುಸರಿಸುವವನು ಕತ್ತಲೆಯಲ್ಲಿ ನಡೆಯದೆ ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು” ಎಂದು ಯೇಸು ಹೇಳಿದಾಗ, ಅವನು ಅಪ್ರತ್ಯಕ್ಷವಾಗಿ ಈ ದೊಡ್ಡ ದೀಪಗಳನ್ನೇ ಸೂಚಿಸಿದನೆಂಬುದು ಸ್ಪಷ್ಟ.—ಯೋಹಾನ 8:12.
20. ಸಾ.ಶ. 33ರಲ್ಲಿನ ಪಸ್ಕವು ಏಕೆ ಅಷ್ಟೊಂದು ಪ್ರಮುಖವಾದದ್ದಾಗಿತ್ತು?
20 ತದನಂತರ, ಗಮನಾರ್ಹ ವರ್ಷವಾದ ಸಾ.ಶ. 33ರ ಪಸ್ಕ ಹಾಗೂ ಹುಳಿಯಿಲ್ಲದ ರೊಟ್ಟಿಗಳ ಹಬ್ಬವು ಬಂತು. ಪಸ್ಕದ ಆ ದಿನದಂದು, ಯೇಸು ತನ್ನ ವೈರಿಗಳಿಂದ ವಧಿಸಲ್ಪಟ್ಟು, “ಲೋಕದ ಪಾಪವನ್ನು” ನಿವಾರಣೆಮಾಡಲಿಕ್ಕಾಗಿ ಮರಣಪಟ್ಟ ಸೂಚಿತರೂಪದ ಪಸ್ಕದ ಕುರಿಮರಿಯಾಗಿ ಪರಿಣಮಿಸಿದನು. (ಯೋಹಾನ 1:29; 1 ಕೊರಿಂಥ 5:7) ಮೂರು ದಿನಗಳ ಬಳಿಕ, ನೈಸಾನ್ 16ರಂದು, ದೇವರು ಯೇಸುವನ್ನು ಒಂದು ಅಮರ ಆತ್ಮಿಕ ದೇಹದೊಂದಿಗೆ ಪುನರುತ್ಥಾನಗೊಳಿಸಿದನು. ಇದು, ಧರ್ಮಶಾಸ್ತ್ರದಿಂದ ವಿಧಿಸಲ್ಪಟ್ಟಂತೆ, ಜವೆಗೋದಿಯ ಸುಗ್ಗಿಯ ಪ್ರಥಮಫಲಗಳ ಅರ್ಪಣೆಯೊಂದಿಗೆ ಸರಿಹೊಂದಿತು. ಹೀಗೆ, ಪುನರುತ್ಥಿತ ಕರ್ತನಾದ ಯೇಸು ಕ್ರಿಸ್ತನು ‘ಮರಣದಲ್ಲಿ ನಿದ್ರೆಹೋಗಿರುವವರಲ್ಲಿ ಪ್ರಥಮಫಲ’ವಾದನು.—1 ಕೊರಿಂಥ 15:20.
21. ಸಾ.ಶ. 33ರ ಪಂಚಾಶತ್ತಮದಲ್ಲಿ ಏನು ಸಂಭವಿಸಿತು?
21 ನಿಜವಾಗಿಯೂ ಎದ್ದುಕಾಣುವಂತಹ ಹಬ್ಬವು, ಸಾ.ಶ. 33ರಲ್ಲಿನ ಪಂಚಾಶತ್ತಮವಾಗಿತ್ತು. ಈ ದಿನದಲ್ಲಿ ಅನೇಕ ಯೆಹೂದ್ಯರು ಹಾಗೂ ಯೆಹೂದಿ ಮತಾವಲಂಬಿಗಳು ಯೆರೂಸಲೇಮಿನಲ್ಲಿ ಕೂಡಿಬಂದಿದ್ದರು. ಅವರಲ್ಲಿ ಯೇಸುವಿನ ಸುಮಾರು 120 ಮಂದಿ ಶಿಷ್ಯರೂ ಸೇರಿದ್ದರು. ಆ ಹಬ್ಬವು ನಡೆಯುತ್ತಿದ್ದಾಗ, ಪುನರುತ್ಥಿತ ಕರ್ತನಾದ ಯೇಸು ಕ್ರಿಸ್ತನು ಆ 120 ಮಂದಿಯ ಮೇಲೆ ದೇವರ ಪವಿತ್ರಾತ್ಮವನ್ನು ಸುರಿಸಿದನು. (ಅ. ಕೃತ್ಯಗಳು 1:15; 2:1-4, 33) ಹೀಗೆ ಅವರು ಅಭಿಷೇಕಿಸಲ್ಪಟ್ಟು, ಯೇಸು ಕ್ರಿಸ್ತನಿಂದ ಮಧ್ಯಸ್ಥಿಕೆ ವಹಿಸಲ್ಪಟ್ಟ ಹೊಸ ಒಡಂಬಡಿಕೆಯ ಮೂಲಕ ದೇವರಾದುಕೊಂಡ ಹೊಸ ಜನಾಂಗವಾದರು. ಈ ಹಬ್ಬದ ಸಮಯದಲ್ಲಿ, ಗೋದಿಯ ಸುಗ್ಗಿಯ ಪ್ರಥಮಫಲಗಳಿಂದ ಮಾಡಲ್ಪಟ್ಟ, ಹುಳಿಸೇರಿಸಿದ ಎರಡು ರೊಟ್ಟಿಗಳನ್ನು ಯೆಹೂದಿ ಮಹಾಯಾಜಕನು ದೇವರಿಗೆ ಅರ್ಪಿಸಿದನು. (ಯಾಜಕಕಾಂಡ 23:15-17) ಹುಳಿಸೇರಿಸಿದ ಈ ರೊಟ್ಟಿಗಳು, “ಭೂಮಿಯ ಮೇಲೆ ರಾಜರೋಪಾದಿ ಆಳಲಿಕ್ಕಾಗಿ . . . ಒಂದು ರಾಜ್ಯವಾಗಿಯೂ ಯಾಜಕರಾಗಿಯೂ” ಕಾರ್ಯನಡಿಸುವಂತೆ ಯೇಸು ‘ದೇವರಿಗೋಸ್ಕರ ಯಾರನ್ನು ಕೊಂಡುಕೊಂಡ’ನೋ, ಆ 1,44,000 ಮಂದಿ ಅಪರಿಪೂರ್ಣ ಮಾನವರನ್ನು ಚಿತ್ರಿಸುತ್ತವೆ. (ಪ್ರಕಟನೆ 5:9, 10; 14:1, 3) ಈ ಸ್ವರ್ಗೀಯ ರಾಜರು, ಪಾಪಪೂರ್ಣ ಮಾನವರ ಎರಡು ವಿಭಾಗಗಳಿಂದ—ಯೆಹೂದ್ಯರು ಮತ್ತು ಅನ್ಯರು—ಬರುತ್ತಾರೆಂಬ ವಾಸ್ತವಾಂಶವು, ಹುಳಿಸೇರಿಸಿದ ಈ ಎರಡು ರೊಟ್ಟಿಗಳಿಂದಲೂ ನಿರೂಪಿಸಲ್ಪಡಬಹುದು.
22. (ಎ) ಕ್ರೈಸ್ತರು ಧರ್ಮಶಾಸ್ತ್ರದೊಡಂಬಡಿಕೆಯ ಹಬ್ಬಗಳನ್ನು ಏಕೆ ಆಚರಿಸುವುದಿಲ್ಲ? (ಬಿ) ಮುಂದಿನ ಲೇಖನದಲ್ಲಿ ನಾವು ಏನನ್ನು ಪರಿಗಣಿಸುವೆವು?
22 ಸಾ.ಶ. 33ರ ಪಂಚಾಶತ್ತಮದಲ್ಲಿ ಈ ಹೊಸ ಒಡಂಬಡಿಕೆಯು ಕಾರ್ಯನಡಿಸಲಾರಂಭಿಸಿದಾಗ, ದೇವರ ದೃಷ್ಟಿಯಲ್ಲಿ ಹಳೆಯ ಧರ್ಮಶಾಸ್ತ್ರದೊಡಂಬಡಿಕೆಯು ಮೌಲ್ಯವನ್ನು ಕಳೆದುಕೊಂಡಿತು ಎಂಬುದನ್ನು ಅದು ಅರ್ಥೈಸಿತು. (2 ಕೊರಿಂಥ 3:14; ಇಬ್ರಿಯ 9:15; 10:16) ಅಭಿಷಿಕ್ತ ಕ್ರೈಸ್ತರು ನಿಯಮವಿಲ್ಲದೆ ಇದ್ದಾರೆಂಬುದನ್ನು ಅದು ಅರ್ಥೈಸುವುದಿಲ್ಲ. ಯೇಸು ಕ್ರಿಸ್ತನಿಂದ ಕಲಿಸಲ್ಪಟ್ಟ ಹಾಗೂ ತಮ್ಮ ಹೃದಯಗಳಲ್ಲಿ ಬರೆಯಲ್ಪಟ್ಟ ದೈವಿಕ ನಿಯಮದ ಕೆಳಗೆ ಅವರು ಬರುತ್ತಾರೆ. (ಗಲಾತ್ಯ 6:2) ಆದುದರಿಂದ, ಆ ಮೂರು ವಾರ್ಷಿಕ ಹಬ್ಬಗಳು ಧರ್ಮಶಾಸ್ತ್ರದೊಡಂಬಡಿಕೆಯ ಭಾಗವಾಗಿರುವುದಾದರೂ, ಕ್ರೈಸ್ತರಿಂದ ಆಚರಿಸಲ್ಪಡುವುದಿಲ್ಲ. (ಕೊಲೊಸ್ಸೆ 2:16, 17) ಆದರೂ, ದೇವರ ಕ್ರೈಸ್ತಪೂರ್ವ ಸೇವಕರ ಮನೋಭಾವದಿಂದ—ತಮ್ಮ ಹಬ್ಬಗಳು ಹಾಗೂ ಆರಾಧನೆಗಾಗಿರುವ ಇತರ ಕೂಟಗಳ ಕಡೆಗೆ—ನಾವು ಹೆಚ್ಚನ್ನು ಕಲಿಯಸಾಧ್ಯವಿದೆ. ನಮ್ಮ ಮುಂದಿನ ಲೇಖನದಲ್ಲಿ, ಕ್ರೈಸ್ತ ಒಟ್ಟುಗೂಡುವಿಕೆಗಳಲ್ಲಿ ಕ್ರಮವಾಗಿ ಹಾಜರಾಗುವ ಅಗತ್ಯವನ್ನು ಗಣ್ಯಮಾಡುವಂತೆ ನಮ್ಮೆಲ್ಲರನ್ನು ನಿಸ್ಸಂದೇಹವಾಗಿ ಪ್ರಚೋದಿಸುವ ಉದಾಹರಣೆಗಳನ್ನು ನಾವು ಪರಿಗಣಿಸುವೆವು.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿರುವ, ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ಪುಸ್ತಕದ, ಸಂಪುಟ 1, 820ನೆಯ ಪುಟದ, 1ನೆಯ ಅಂಕಣದಲ್ಲಿರುವ, “ಹಬ್ಬ” ಎಂಬ ಉಪಶೀರ್ಷಿಕೆಯ ಕೆಳಗೆ 1 ಮತ್ತು 3ನೆಯ ಪ್ಯಾರಗ್ರಾಫ್ಗಳನ್ನು ಸಹ ನೋಡಿರಿ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟದ್ದು.
ಪುನರ್ವಿಮರ್ಶೆಯ ಪ್ರಶ್ನೆಗಳು
◻ ಇಸ್ರಾಯೇಲಿನ ಮೂರು ದೊಡ್ಡ ಹಬ್ಬಗಳು ಯಾವ ಉದ್ದೇಶವನ್ನು ಪೂರೈಸಿದವು?
◻ ಹಿಜ್ಕೀಯ ಹಾಗೂ ಯೋಷೀಯರ ದಿನದ ಹಬ್ಬಗಳನ್ನು ಯಾವುದು ವೈಶಿಷ್ಟೀಕರಿಸಿತು?
◻ ಸಾ.ಶ.ಪೂ. 455ರಲ್ಲಿ ಯಾವ ಮಹತ್ವದ ಘಟ್ಟವು ಆಚರಿಸಲ್ಪಟ್ಟಿತು, ಮತ್ತು ಅದು ನಮಗೆ ಏಕೆ ಉತ್ತೇಜನದಾಯಕವಾದದ್ದಾಗಿದೆ?
◻ ಸಾ.ಶ. 33ರಲ್ಲಿನ ಪಸ್ಕ ಹಾಗೂ ಪಂಚಾಶತ್ತಮದ ವಿಷಯದಲ್ಲಿ ಯಾವುದು ಗಮನಾರ್ಹವಾಗಿತ್ತು?
[ಪುಟ 12 ರಲ್ಲಿರುವ ಚೌಕ]
ಇಂದು ನಮಗಿರುವ ಹಬ್ಬಸಂಬಂಧಿತ ಪಾಠ
ಯೇಸುವಿನ ಪಾಪ ಪರಿಹಾರಕ ಯಜ್ಞದಿಂದ ಶಾಶ್ವತವಾದ ಪ್ರಯೋಜನವನ್ನು ಪಡೆಯುವವರೆಲ್ಲರೂ, ಹುಳಿಯಿಲ್ಲದ ರೊಟ್ಟಿಗಳ ಹಬ್ಬದಿಂದ ಚಿತ್ರಿಸಲ್ಪಟ್ಟಿರುವ ವಿಷಯಕ್ಕೆ ಹೊಂದಿಕೆಯಲ್ಲಿ ಜೀವಿಸಬೇಕು. ಈ ಸೂಚಿತರೂಪದ ಹಬ್ಬವು, ಈ ದುಷ್ಟ ಲೋಕದಿಂದಾದ ತಮ್ಮ ವಿಮೋಚನೆಗಾಗಿ ಹಾಗೂ ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಮೂಲಕ ಪಾಪದ ಖಂಡನೆಯಿಂದಾದ ಬಿಡುಗಡೆಗೆ ನಡೆಸಲ್ಪಡುವ ಅಭಿಷಿಕ್ತ ಕ್ರೈಸ್ತರ ಆನಂದಭರಿತ ಆಚರಣೆಯಾಗಿದೆ. (ಗಲಾತ್ಯ 1:4; ಕೊಲೊಸ್ಸೆ 1:13, 14) ಆ ಅಕ್ಷರಾರ್ಥಕ ಹಬ್ಬವು ಏಳು ದಿನಗಳ ವರೆಗೆ ನಡೆಯಿತು—ಆತ್ಮಿಕ ಪೂರ್ಣತೆಯನ್ನು ಸಂಕೇತಿಸಲಿಕ್ಕಾಗಿ ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವ ಒಂದು ಸಂಖ್ಯೆ. ಸೂಚಿತರೂಪದ ಹಬ್ಬವು, ಭೂಮಿಯ ಮೇಲಿನ ಅಭಿಷಿಕ್ತ ಕ್ರೈಸ್ತ ಸಭೆಯ ಸಂಪೂರ್ಣ ಕಾಲಾವಧಿಯ ವರೆಗೆ ಉಳಿಯುತ್ತದೆ, ಮತ್ತು ಅದನ್ನು “ಪ್ರಾಮಾಣಿಕತೆಯಿಂದ ಹಾಗೂ ಸತ್ಯದಿಂದ” ಆಚರಿಸಬೇಕಾಗಿದೆ. ಇದರ ಅರ್ಥ, ಸಾಂಕೇತಿಕ ಹುಳಿಯ ವಿಷಯದಲ್ಲಿ ಸತತವಾಗಿ ಎಚ್ಚರವಾಗಿರುವುದು. ಬೈಬಲಿನಲ್ಲಿ ಹುಳಿಯು, ಭ್ರಷ್ಟ ಬೋಧನೆಗಳು, ಕಪಟಾಚಾರ, ಮತ್ತು ಕೆಟ್ಟತನವನ್ನು ಚಿತ್ರಿಸಲು ಉಪಯೋಗಿಸಲ್ಪಟ್ಟಿದೆ. ಯೆಹೋವನ ಸತ್ಯಾರಾಧಕರು ಅಂತಹ ಹುಳಿಯ ವಿಷಯದಲ್ಲಿ ದ್ವೇಷವನ್ನು ತೋರಿಸಬೇಕು; ಅದು ತಮ್ಮ ಸ್ವಂತ ಜೀವಿತಗಳನ್ನು ಭ್ರಷ್ಟಗೊಳಿಸುವಂತೆ ಅನುಮತಿಸಬಾರದು ಮತ್ತು ಅದು ಕ್ರೈಸ್ತ ಸಭೆಯ ನಿಷ್ಕಳಂಕತೆಯನ್ನು ಹಾಳುಮಾಡುವಂತೆ ಬಿಡಬಾರದು.—1 ಕೊರಿಂಥ 5:6-8; ಮತ್ತಾಯ 16:6, 12.
[ಪುಟ 9 ರಲ್ಲಿರುವ ಚಿತ್ರ]
ಯೇಸು ಪುನರುತ್ಥಾನಗೊಳಿಸಲ್ಪಟ್ಟ ದಿನವಾದ ನೈಸಾನ್ 16ರಂದು, ಪ್ರತಿ ವರ್ಷ ಹೊಸ ಜವೆಗೋದಿ ಸುಗ್ಗಿಯ ಒಂದು ಸಿವುಡನ್ನು ಅರ್ಪಿಸಲಾಗುತ್ತಿತ್ತು
[ಪುಟ 10 ರಲ್ಲಿರುವ ಚಿತ್ರ]
ಯೇಸು ತನ್ನನ್ನು “ಲೋಕಕ್ಕೆ ಬೆಳಕು” ಎಂದು ಕರೆದುಕೊಂಡಾಗ, ಅವನು ಹಬ್ಬದ ದೀಪಗಳ ವಿಷಯದಲ್ಲಿ ಅಪ್ರತ್ಯಕ್ಷವಾಗಿ ಸೂಚಿಸಿ ಹೇಳಿದ್ದಿರಬಹುದು