‘ಕ್ರಿಸ್ತನಲ್ಲಿ ಐಕ್ಯರಾಗಿ ನಡೆಯುತ್ತಾ ಇರಿ’
“ಆದದರಿಂದ ನೀವು ಕರ್ತನಾದ ಯೇಸುವೆಂಬ ಕ್ರಿಸ್ತನನ್ನು ಅಂಗೀಕರಿಸಿದಂತೆಯೇ ಆತನಲ್ಲಿದ್ದವರಾಗಿ [“ಐಕ್ಯರಾಗಿ ನಡೆಯುತ್ತಾ ಇರಿ,” NW] ನಡೆದುಕೊಳ್ಳಿರಿ.”—ಕೊಲೊಸ್ಸೆ 2:6.
1, 2. (ಎ) ಯೆಹೋವನಿಗೆ ನಂಬಿಗಸ್ತ ಸೇವೆಯನ್ನು ಸಲ್ಲಿಸಿದ ಹನೋಕನ ಜೀವಿತವನ್ನು ಬೈಬಲು ಹೇಗೆ ವರ್ಣಿಸುತ್ತದೆ? (ಬಿ) ಕೊಲೊಸ್ಸೆ 2:6, 7 ಸೂಚಿಸುವಂತೆ, ನಾವು ಯೆಹೋವನೊಂದಿಗೆ ನಡೆಯುವಂತೆ ಆತನು ನಮಗೆ ಹೇಗೆ ಸಹಾಯಮಾಡಿದ್ದಾನೆ?
ಎಳೆಯ ಹುಡುಗನೊಬ್ಬನು ತನ್ನ ತಂದೆಯೊಂದಿಗೆ ನಡೆಯುವುದನ್ನು ನೀವು ಎಂದಾದರೂ ನೋಡಿದ್ದೀರೊ? ಆ ಪೋರನು ತನ್ನ ತಂದೆಯ ಪ್ರತಿಯೊಂದು ಚಲನೆಯನ್ನು ಅನುಕರಿಸಿದಂತೆ, ಅವನ ಮುಖವು ಗೌರವದಿಂದ ಹೊಳೆಯುತ್ತದೆ; ಅವನ ತಂದೆಯು ರಸ್ತೆಯುದ್ದಕ್ಕೂ ಅವನಿಗೆ ಸಹಾಯಮಾಡುವಾಗ ತಂದೆಯ ಮುಖವು ಪ್ರೀತಿ ಮತ್ತು ಮೆಚ್ಚುಗೆಯಿಂದ ಬೆಳಗುತ್ತದೆ. ಯೋಗ್ಯವಾಗಿಯೇ, ಯೆಹೋವನು ತನಗೆ ಸಲ್ಲಿಸುವ ನಂಬಿಗಸ್ತ ಸೇವೆಯ ಒಂದು ಜೀವಿತವನ್ನು ವರ್ಣಿಸಲು ನಿಖರವಾಗಿ ಅಂತಹದ್ದೇ ವರ್ಣನೆಯನ್ನು ಬಳಸುತ್ತಾನೆ. ಉದಾಹರಣೆಗೆ, ನಂಬಿಗಸ್ತ ಪುರುಷನಾದ ಹನೋಕನು “[ಸತ್ಯ] ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ” ಇದ್ದನೆಂದು ದೇವರ ವಾಕ್ಯವು ಹೇಳುತ್ತದೆ.—ಆದಿಕಾಂಡ 5:24; 6:9.
2 ತನ್ನ ಎಳೆಯ ಮಗನು ತನ್ನೊಂದಿಗೆ ನಡೆಯುವಂತೆ ಒಬ್ಬ ವಿಚಾರಪರ ತಂದೆಯು ಸಹಾಯಮಾಡುವಂತೆಯೇ, ಸಾಧ್ಯವಿರುವುದರಲ್ಲಿಯೇ ಅತ್ಯುತ್ತಮವಾದ ನೆರವನ್ನು ಯೆಹೋವನು ನಮಗೆ ನೀಡಿದ್ದಾನೆ. ಆತನು ತನ್ನ ಏಕಜಾತ ಪುತ್ರನನ್ನು ಭೂಮಿಗೆ ಕಳುಹಿಸಿದನು. ಯೇಸು ಕ್ರಿಸ್ತನು ಭೂಮಿಯ ಮೇಲೆ ತನ್ನ ಜೀವನುದ್ದದ ನಡಗೆಯ ಪ್ರತಿಯೊಂದು ಹೆಜ್ಜೆಯಲ್ಲಿ, ತನ್ನ ಸ್ವರ್ಗೀಯ ತಂದೆಯನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಿದನು. (ಯೋಹಾನ 14:9, 10; ಇಬ್ರಿಯ 1:3) ಆದುದರಿಂದ ದೇವರೊಂದಿಗೆ ನಡೆಯಲಿಕ್ಕೋಸ್ಕರ ನಾವು ಯೇಸುವಿನೊಂದಿಗೆ ನಡೆಯಬೇಕು. ಅಪೊಸ್ತಲ ಪೌಲನು ಬರೆದುದು: “ಆದದರಿಂದ ನೀವು ಕರ್ತನಾದ ಯೇಸುವೆಂಬ ಕ್ರಿಸ್ತನನ್ನು ಅಂಗೀಕರಿಸಿದಂತೆಯೇ ಆತನಲ್ಲಿದ್ದವರಾಗಿ [“ಐಕ್ಯರಾಗಿ ನಡೆಯುತ್ತಾ ಇರಿ,” NW] ನಡೆದುಕೊಳ್ಳಿರಿ. ಆತನಲ್ಲಿ ಬೇರೂರಿಕೊಂಡು ಭಕ್ತಿವೃದ್ಧಿಯನ್ನು ಹೊಂದಿ [“ಕಟ್ಟಲ್ಪಟ್ಟವರಾಗಿ,” NW] ನಿಮಗೆ ಬೋಧಿಸಲ್ಪಟ್ಟ ಉಪದೇಶದ ಪ್ರಕಾರವೇ ಕ್ರಿಸ್ತನಂಬಿಕೆಯಲ್ಲಿ ನೆಲೆಗೊಂಡು ದೇವರಿಗೆ ಹೆಚ್ಚೆಚ್ಚಾಗಿ ಸ್ತೋತ್ರಮಾಡುವವರಾಗಿರಿ.”—ಕೊಲೊಸ್ಸೆ 2:6, 7.
3. ಕೊಲೊಸ್ಸೆ 2:6, 7ಕ್ಕನುಸಾರ, ಕ್ರಿಸ್ತನಲ್ಲಿ ಐಕ್ಯರಾಗಿ ನಡೆಯುವುದರಲ್ಲಿ ಕೇವಲ ದೀಕ್ಷಾಸ್ನಾನ ಪಡೆದುಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದು ಒಳಗೊಂಡಿದೆಯೆಂದು ನಾವು ಏಕೆ ಹೇಳಸಾಧ್ಯವಿದೆ?
3 ಪ್ರಾಮಾಣಿಕ ಹೃದಯದ ಬೈಬಲ್ ವಿದ್ಯಾರ್ಥಿಗಳು, ಕ್ರಿಸ್ತನ ಪರಿಪೂರ್ಣ ಹೆಜ್ಜೆಗಳನ್ನು ಅನುಸರಿಸಲು ಪ್ರಯತ್ನಿಸುತ್ತಾ, ಅವನೊಂದಿಗೆ ಐಕ್ಯರಾಗಿ ನಡೆಯಲು ಬಯಸುವ ಕಾರಣ ದೀಕ್ಷಾಸ್ನಾನ ಪಡೆದುಕೊಳ್ಳುತ್ತಾರೆ. (ಲೂಕ 3:21; ಇಬ್ರಿಯ 10:7-9) ಲೋಕವ್ಯಾಪಕವಾಗಿ, ಇಸವಿ 1997ರಲ್ಲೇ, 3,75,000ಕ್ಕಿಂತಲೂ ಹೆಚ್ಚು ಜನರು—ಪ್ರತಿದಿನ ಸರಾಸರಿ 1,000ಕ್ಕಿಂತಲೂ ಹೆಚ್ಚು ಜನರು—ಈ ಅತ್ಯಾವಶ್ಯಕ ಹೆಜ್ಜೆಯನ್ನು ತೆಗೆದುಕೊಂಡರು. ಈ ಅಭಿವೃದ್ಧಿಯು ರೋಮಾಂಚಕವಾಗಿದೆ! ಹಾಗಿದ್ದರೂ, ಕೊಲೊಸ್ಸೆ 2:6, 7ರಲ್ಲಿ ದಾಖಲಿಸಲ್ಪಟ್ಟಿರುವ ಪೌಲನ ಮಾತುಗಳು, ಕ್ರಿಸ್ತನಲ್ಲಿ ಐಕ್ಯರಾಗಿ ನಡೆಯುವುದರಲ್ಲಿ ಕೇವಲ ದೀಕ್ಷಾಸ್ನಾನ ಪಡೆದುಕೊಳ್ಳುವುದಕ್ಕಿಂತಲೂ ಹೆಚ್ಚಿನ ವಿಷಯವು ಒಳಗೊಂಡಿದೆ ಎಂಬುದನ್ನು ತೋರಿಸುತ್ತವೆ. “ನಡೆಯುತ್ತಾ ಇರಿ” ಎಂಬುದಾಗಿ ತರ್ಜುಮೆ ಮಾಡಲ್ಪಟ್ಟ ಗ್ರೀಕ್ ಕ್ರಿಯಾಪದವು, ಸತತವಾಗಿರುವ, ಮುಂದುವರಿಯಬೇಕಾದ ಒಂದು ಕ್ರಿಯೆಯನ್ನು ವರ್ಣಿಸುತ್ತದೆ. ಅಲ್ಲದೆ, ಕ್ರಿಸ್ತನೊಂದಿಗೆ ನಡೆಯುವುದು ನಾಲ್ಕು ವಿಷಯಗಳನ್ನು ಒಳಗೊಳ್ಳುತ್ತದೆಂದು ಪೌಲನು ಕೂಡಿಸುತ್ತಾನೆ: ಕ್ರಿಸ್ತನಲ್ಲಿ ಬೇರೂರಿರುವುದು, ಅವನಲ್ಲಿ ಕಟ್ಟಲ್ಪಡುವುದು, ನಂಬಿಕೆಯಲ್ಲಿ ನೆಲೆಗೊಂಡಿರುವುದು, ಮತ್ತು ಉಪಕಾರಸ್ತುತಿಯಲ್ಲಿ ತುಂಬಿಹರಿಯುವುದು. ನಾವು ಪ್ರತಿಯೊಂದು ವಾಕ್ಸರಣಿಯನ್ನು ಪರಿಗಣಿಸೋಣ ಮತ್ತು ಕ್ರಿಸ್ತನಲ್ಲಿ ಐಕ್ಯರಾಗಿ ನಡೆಯುತ್ತಾ ಮುಂದುವರಿಯಲು ಅದು ನಮಗೆ ಹೇಗೆ ಸಹಾಯಮಾಡುತ್ತದೆ ಎಂಬುದನ್ನು ನೋಡೋಣ.
ನೀವು ‘ಕ್ರಿಸ್ತನಲ್ಲಿ ಬೇರೂರಿದ್ದೀರೊ’?
4. ‘ಕ್ರಿಸ್ತನಲ್ಲಿ ಬೇರೂರಿರುವುದರ’ ಅರ್ಥವೇನು?
4 ಪ್ರಥಮವಾಗಿ ಪೌಲನು ಬರೆಯುವುದು, ನಾವು ‘ಕ್ರಿಸ್ತನಲ್ಲಿ ಬೇರೂರಿರುವ’ ಅಗತ್ಯವಿದೆ. (ಹೋಲಿಸಿ ಮತ್ತಾಯ 13:20, 21.) ಕ್ರಿಸ್ತನಲ್ಲಿ ಬೇರೂರಿರಲು ವ್ಯಕ್ತಿಯೊಬ್ಬನು ಹೇಗೆ ಕ್ರಿಯೆಗೈಯಬಲ್ಲನು? ಗಿಡವೊಂದರ ಬೇರುಗಳು ಕಣ್ಣಿಗೆ ಕಾಣುವುದಿಲ್ಲವಾದರೂ, ಅವು ಗಿಡಕ್ಕೆ ಅತ್ಯಾವಶ್ಯಕವಾಗಿವೆ—ಅವು ಅದಕ್ಕೆ ಸ್ಥಿರತೆಯನ್ನು ಮತ್ತು ಪೋಷಣೆಯನ್ನು ಒದಗಿಸುತ್ತವೆ. ತದ್ರೀತಿಯಲ್ಲಿ, ಕ್ರಿಸ್ತನ ಮಾದರಿ ಮತ್ತು ಬೋಧನೆಯು ನಮ್ಮ ಹೃದಮನಗಳಲ್ಲಿ ಭದ್ರವಾಗಿ ತಳವೂರುತ್ತಾ, ಮೊದಲು ನಮ್ಮನ್ನು ಅದೃಶ್ಯವಾಗಿ ಪ್ರಭಾವಿಸುತ್ತದೆ. ಅಲ್ಲಿ ಅವು ನಮ್ಮನ್ನು ಪೋಷಿಸಿ, ಬಲಪಡಿಸುತ್ತವೆ. ನಮ್ಮ ಯೋಚನೆ, ನಮ್ಮ ಕ್ರಿಯೆಗಳು, ಮತ್ತು ನಮ್ಮ ನಿರ್ಣಯಗಳನ್ನು ಅವು ಆಳುವಂತೆ ನಾವು ಬಿಡುವಾಗ, ನಮ್ಮ ಜೀವಿತಗಳನ್ನು ಯೆಹೋವನಿಗೆ ಸಮರ್ಪಿಸುವಂತೆ ನಾವು ಪ್ರೇರಿಸಲ್ಪಡುತ್ತೇವೆ.—1 ಪೇತ್ರ 2:21.
5. ಆತ್ಮಿಕ ಆಹಾರಕ್ಕಾಗಿ ನಾವು ಹೇಗೆ “ಹಂಬಲವನ್ನು ಬೆಳೆಸಿಕೊಳ್ಳ”ಸಾಧ್ಯವಿದೆ?
5 ದೇವರಿಂದ ಬಂದ ಜ್ಞಾನವನ್ನು ಯೇಸು ಪ್ರೀತಿಸಿದನು. ಅದನ್ನು ಅವನು ಆಹಾರಕ್ಕೂ ಹೋಲಿಸಿದನು. (ಮತ್ತಾಯ 4:4) ಅಷ್ಟೇಕೆ, ತನ್ನ ಪರ್ವತ ಪ್ರಸಂಗದಲ್ಲಿ, ಅವನು ಹೀಬ್ರೂ ಶಾಸ್ತ್ರಗಳ ಎಂಟು ವಿಭಿನ್ನ ಪುಸ್ತಕಗಳಿಂದ 21 ಉದ್ಧರಣಗಳನ್ನು ಮಾಡಿದನು. ಅವನ ಮಾದರಿಯನ್ನು ಅನುಸರಿಸಲು, ನಾವು ಅಪೊಸ್ತಲ ಪೇತ್ರನು ಪ್ರೇರಿಸುವಂತೆ ಮಾಡಬೇಕು—“ನವಜಾತ ಶಿಶುಗಳಂತೆ” ಆತ್ಮಿಕ ಆಹಾರಕ್ಕಾಗಿ “ಹಂಬಲವನ್ನು ಬೆಳೆಸಿಕೊಳ್ಳ”ಬೇಕು. (1 ಪೇತ್ರ 2:2, NW) ನವಜಾತ ಶಿಶುವೊಂದು ಪೋಷಣೆಗಾಗಿ ಹಂಬಲಿಸುವಾಗ, ತನ್ನ ತೀವ್ರವಾದ ಹಂಬಲವನ್ನು ಅದು ಸ್ಪಷ್ಟವಾಗಿ ತಿಳಿಯಪಡಿಸುತ್ತದೆ. ಆತ್ಮಿಕ ಆಹಾರದ ಕುರಿತು ಆ ರೀತಿಯಲ್ಲಿ ನಮಗೆ ಈಗ ಅನಿಸದಿದ್ದಲ್ಲಿ, ಆ ಹಂಬಲವನ್ನು “ಬೆಳೆಸಿಕೊಳ್ಳು”ವಂತೆ ಪೇತ್ರನ ಮಾತುಗಳು ನಮಗೆ ಉತ್ತೇಜನ ನೀಡುತ್ತವೆ. ಹೇಗೆ? ಕೀರ್ತನೆ 34:8ರಲ್ಲಿ ಕಂಡುಕೊಳ್ಳಲ್ಪಡುವ ಮೂಲತತ್ವವು ಸಹಾಯಮಾಡಬಹುದು: “ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡಿರಿ.” ನಾವು ಕ್ರಮವಾಗಿ ಯೆಹೋವನ ವಾಕ್ಯವಾದ ಬೈಬಲಿನ “ಸವಿ” ನೋಡುವುದಾದರೆ, ಬಹುಶಃ ಪ್ರತಿದಿನ ಅದರ ಒಂದು ಭಾಗವನ್ನು ಓದುವ ಮೂಲಕ, ಅದು ಆತ್ಮಿಕವಾಗಿ ಪುಷ್ಟಿಕರವೂ ಒಳ್ಳೆಯದೂ ಆಗಿದೆಯೆಂಬುದನ್ನು ನಾವು ನೋಡುವೆವು. ಸಕಾಲದಲ್ಲಿ, ಅದಕ್ಕಾಗಿರುವ ನಮ್ಮ ಹಂಬಲವು ವೃದ್ಧಿಯಾಗುವುದು.
6. ನಾವು ಓದುವ ವಿಷಯದ ಕುರಿತು ಮನನ ಮಾಡುವುದು ಏಕೆ ಪ್ರಾಮುಖ್ಯವಾಗಿದೆ?
6 ಹಾಗಿದ್ದರೂ, ನಾವು ಆಹಾರವನ್ನು ಸೇವಿಸಿದ ಬಳಿಕ ಅದನ್ನು ಚೆನ್ನಾಗಿ ಜೀರ್ಣಿಸಿಕೊಳ್ಳುವುದು ಪ್ರಾಮುಖ್ಯವಾಗಿದೆ. ಆದುದರಿಂದ ನಾವು ಓದುವ ವಿಷಯದ ಕುರಿತು ಮನನ ಮಾಡುವ ಅಗತ್ಯವಿದೆ. (ಕೀರ್ತನೆ 77:11, 12) ಉದಾಹರಣೆಗೆ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ನಾವು ಓದಿದಂತೆ, ವಾಚನವನ್ನು ಮಧ್ಯದಲ್ಲಿ ನಿಲ್ಲಿಸಿ ನಮ್ಮನ್ನೇ ಹೀಗೆ ಕೇಳಿಕೊಳ್ಳುವುದಾದರೆ, ಪ್ರತಿಯೊಂದು ಅಧ್ಯಾಯವು ನಮಗೆ ಹೆಚ್ಚು ಪ್ರಯೋಜನಕಾರಿಯಾಗಿರುವುದು: ‘ಈ ವೃತ್ತಾಂತದಲ್ಲಿ ನಾನು ಕ್ರಿಸ್ತನ ವ್ಯಕ್ತಿತ್ವದ ಯಾವ ಅಂಶವನ್ನು ಕಾಣುತ್ತೇನೆ, ಮತ್ತು ಅದನ್ನು ನನ್ನ ಸ್ವಂತ ಜೀವಿತದಲ್ಲಿ ನಾನು ಹೇಗೆ ಅನುಕರಿಸಸಾಧ್ಯವಿದೆ?’ ಆ ವಿಧದಲ್ಲಿ ಮನನ ಮಾಡುವುದು, ನಾವು ಕಲಿಯುವಂತಹ ವಿಷಯವನ್ನು ಅನ್ವಯಿಸಿಕೊಳ್ಳುವಂತೆ ನಮ್ಮನ್ನು ಶಕ್ತಗೊಳಿಸುವುದು. ತದನಂತರ, ಒಂದು ನಿರ್ಣಯವನ್ನು ಎದುರಿಸುವಾಗ, ಯೇಸು ಏನು ಮಾಡಿದ್ದಿರಬಹುದೆಂದು ನಾವು ನಮ್ಮನ್ನೇ ಕೇಳಿಕೊಳ್ಳಬಹುದು. ನಮ್ಮ ನಿರ್ಣಯವನ್ನು ನಾವು ಅದಕ್ಕನುಸಾರ ಮಾಡುವುದಾದರೆ, ನಾವು ಕ್ರಿಸ್ತನಲ್ಲಿ ನಿಜವಾಗಿಯೂ ಬೇರೂರಿರುವುದರ ಸಾಕ್ಷ್ಯವನ್ನು ಕೊಡುತ್ತೇವೆ.
7. ಗಟ್ಟಿಯಾದ ಆತ್ಮಿಕ ಪೋಷಣೆಯ ಕುರಿತು ನಮ್ಮ ನೋಟವು ಏನಾಗಿರಬೇಕು?
7 ದೇವರ ವಾಕ್ಯದ ಹೆಚ್ಚು ಆಳವಾದ ಸತ್ಯಗಳನ್ನು, “ಗಟ್ಟಿಯಾದ ಆಹಾರ”ವನ್ನು ತೆಗೆದುಕೊಳ್ಳುವಂತೆಯೂ ಪೌಲನು ನಮ್ಮನ್ನು ಪ್ರೇರಿಸುತ್ತಾನೆ. (ಇಬ್ರಿಯ 5:14) ಈ ಸಂಬಂಧದಲ್ಲಿ ಇಡೀ ಬೈಬಲನ್ನು ಓದುವುದು ನಮ್ಮ ಪ್ರಥಮ ಗುರಿಯಾಗಿರಬಹುದು. ತರುವಾಯ, ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞ, ಯೆಹೋವನು ತನ್ನ ಜನರೊಂದಿಗೆ ಮಾಡಿದಂತಹ ಹಲವಾರು ಒಡಂಬಡಿಕೆಗಳು, ಇಲ್ಲವೆ ಬೈಬಲಿನಲ್ಲಿರುವ ಕೆಲವು ಪ್ರವಾದನಾತ್ಮಕ ಸಂದೇಶಗಳಂತಹ ಹೆಚ್ಚು ನಿರ್ದಿಷ್ಟವಾದ ಅಧ್ಯಯನ ವಿಷಯಗಳಿವೆ. ಇಂತಹ ಗಟ್ಟಿಯಾದ ಆತ್ಮಿಕ ಆಹಾರವನ್ನು ಹೀರಿಕೊಳ್ಳಲು ಮತ್ತು ಜೀರ್ಣಿಸಿಕೊಳ್ಳಲು ನಮಗೆ ಸಹಾಯಮಾಡುವ ಪುಷ್ಕಳ ವಿಷಯವಿದೆ. ಇಂತಹ ಜ್ಞಾನವನ್ನು ಪಡೆದುಕೊಳ್ಳುವುದರ ಗುರಿಯೇನಾಗಿದೆ? ಅದು, ಜಂಬಕೊಚ್ಚಿಕೊಳ್ಳಲು ನಮಗೊಂದು ಕಾರಣವನ್ನು ಕೊಡಲಿಕ್ಕಾಗಿಯಲ್ಲ, ಬದಲಾಗಿ ಯೆಹೋವನಿಗಾಗಿರುವ ನಮ್ಮ ಪ್ರೀತಿಯನ್ನು ಹೆಚ್ಚಿಸಿಕೊಳ್ಳಲಿಕ್ಕಾಗಿ ಮತ್ತು ನಾವು ಆತನ ಸಮೀಪಕ್ಕೆ ಸೆಳೆಯಲ್ಪಡಲಿಕ್ಕಾಗಿಯೇ. (1 ಕೊರಿಂಥ 8:1; ಯಾಕೋಬ 4:8) ನಾವು ಅತ್ಯಾಸಕ್ತಿಯಿಂದ ಈ ಜ್ಞಾನವನ್ನು ಪಡೆದುಕೊಂಡು, ನಮಗೇ ಅನ್ವಯಿಸಿಕೊಂಡು, ಮತ್ತು ಇತರರಿಗೆ ಸಹಾಯಮಾಡಲು ಅದನ್ನು ಉಪಯೋಗಿಸುವುದಾದರೆ, ನಾವು ನಿಜವಾಗಿಯೂ ಕ್ರಿಸ್ತನನ್ನು ಅನುಕರಿಸುತ್ತಿರುವೆವು. ಇದು ಅವನಲ್ಲಿ ಯೋಗ್ಯವಾಗಿ ಬೇರೂರಿರುವಂತೆ ನಮಗೆ ಸಹಾಯಮಾಡುವುದು.
ನೀವು ‘ಕ್ರಿಸ್ತನಲ್ಲಿ ಕಟ್ಟಲ್ಪಡುತ್ತಿದ್ದೀರೊ’?
8. ‘ಕ್ರಿಸ್ತನಲ್ಲಿ ಕಟ್ಟಲ್ಪಡುವುದರ’ ಅರ್ಥವೇನು?
8 ಕ್ರಿಸ್ತನೊಂದಿಗೆ ಐಕ್ಯರಾಗಿ ನಡೆಯುವ ಮತ್ತೊಂದು ಅಂಶಕ್ಕಾಗಿ, ಪೌಲನು ಬೇಗನೆ ಒಂದು ಸ್ಫುಟವಾದ ಚಿತ್ರದಿಂದ ಮತ್ತೊಂದಕ್ಕೆ—ಗಿಡದ ಚಿತ್ರದಿಂದ ಕಟ್ಟಡದ ಚಿತ್ರಕ್ಕೆ—ನೆಲೆ ಬದಲಾಯಿಸುತ್ತಾನೆ. ನಿರ್ಮಾಣಗೊಳ್ಳುತ್ತಿರುವ ಒಂದು ಕಟ್ಟಡದ ಕುರಿತು ಯೋಚಿಸುವಾಗ, ನಾವು ಕೇವಲ ತಳಪಾಯದ ಕುರಿತು ಮಾತ್ರವಲ್ಲ, ಬಹಳಷ್ಟು ಪರಿಶ್ರಮದಿಂದಾಗಿ ಎದ್ದುನಿಂತಿರುವ, ಯಾವ ತಡೆಯೂ ಇಲ್ಲದೆ ಕಾಣುವ ರಚನೆಯ ಕುರಿತೂ ಯೋಚಿಸುತ್ತೇವೆ. ತದ್ರೀತಿಯಲ್ಲಿ, ಕ್ರಿಸ್ತಸದೃಶ ಗುಣಗಳನ್ನು ಮತ್ತು ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ನಾವು ಬಹಳಷ್ಟು ಪರಿಶ್ರಮ ಪಡಬೇಕು. ಅಂತಹ ಪರಿಶ್ರಮವು ಲಕ್ಷ್ಯಕ್ಕೆ ಬಾರದೆ ಹೋಗುವುದಿಲ್ಲ. ಇದು ಪೌಲನು ತಿಮೊಥೆಯನಿಗೆ ಬರೆದ ವಿಷಯದಂತೆಯೂ ಇದೆ: ‘ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗಲಿ.’ (1 ತಿಮೊಥೆಯ 4:15; ಮತ್ತಾಯ 5:16) ಭಕ್ತಿವೃದ್ಧಿಮಾಡುವಂತಹ ಕೆಲವು ಕ್ರೈಸ್ತ ಚಟುವಟಿಕೆಗಳಾವುವು?
9. (ಎ) ಶುಶ್ರೂಷೆಯಲ್ಲಿ ಕ್ರಿಸ್ತನನ್ನು ಅನುಕರಿಸಲು, ನಾವು ಇಡಬಹುದಾದ ಕೆಲವು ಪ್ರಾಯೋಗಿಕ ಗುರಿಗಳಾವುವು? (ಬಿ) ನಾವು ನಮ್ಮ ಶುಶ್ರೂಷೆಯಲ್ಲಿ ಆನಂದಿಸಬೇಕೆಂದು ಯೆಹೋವನು ಬಯಸುತ್ತಾನೆಂದು ನಮಗೆ ಹೇಗೆ ಗೊತ್ತು?
9 ಸುವಾರ್ತೆಯನ್ನು ಸಾರುವ ಮತ್ತು ಕಲಿಸುವ ನೇಮಕವನ್ನು ಯೇಸು ನಮಗೆ ಕೊಟ್ಟಿದ್ದಾನೆ. (ಮತ್ತಾಯ 24:14; 28:19, 20) ಧೈರ್ಯದಿಂದಲೂ ಪರಿಣಾಮಕಾರಿಯಾಗಿಯೂ ಸಾಕ್ಷಿನೀಡುತ್ತಾ, ಅವನು ಪರಿಪೂರ್ಣ ಮಾದರಿಯನ್ನಿಟ್ಟನು. ನಿಶ್ಚಯವಾಗಿಯೂ, ಅವನು ಮಾಡಿದಷ್ಟು ಉತ್ತಮವಾಗಿ ನಾವು ಎಂದಿಗೂ ಮಾಡಲಾರೆವು. ಆದರೂ, ಅಪೊಸ್ತಲ ಪೇತ್ರನು ನಮ್ಮ ಮುಂದೆ ಈ ಗುರಿಯನ್ನು ಇಡುತ್ತಾನೆ: “ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠೆಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರಿ; ಆದರೆ ಅದನ್ನು ಸಾತ್ವಿಕತ್ವದಿಂದಲೂ ಮನೋಭೀತಿಯಿಂದಲೂ ಹೇಳಿರಿ.” (1 ಪೇತ್ರ 3:15) ನೀವು “ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧ”ರಾಗಿಲ್ಲವೆಂದು ನಿಮಗನಿಸುವುದಾದರೆ, ಹತಾಶರಾಗಬೇಡಿ. ಆ ಮಟ್ಟಕ್ಕೆ ನೀವು ಕ್ರಮೇಣ ಪ್ರಗತಿಮಾಡುವಂತೆ ನಿಮಗೆ ಸಹಾಯಮಾಡುವ ಸಮಂಜಸವಾದ ಗುರಿಗಳನ್ನಿಡಿರಿ. ಮುಂಚಿತವಾದ ತಯಾರಿಯು ನಿಮ್ಮ ನಿರೂಪಣೆಯನ್ನು ಬದಲಾಯಿಸುವಂತೆ ಇಲ್ಲವೆ ಒಂದೆರಡು ವಚನಗಳನ್ನು ಒಳಗೂಡಿಸುವಂತೆ ನಿಮ್ಮನ್ನು ಶಕ್ತರನ್ನಾಗಿ ಮಾಡಬಹುದು. ಹೆಚ್ಚಿನ ಬೈಬಲ್ ಸಾಹಿತ್ಯವನ್ನು ನೀಡುವ, ಹೆಚ್ಚಿನ ಪುನರ್ಭೇಟಿಗಳನ್ನು ಮಾಡುವ, ಇಲ್ಲವೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸುವ ಗುರಿಗಳನ್ನು ನೀವು ಇಟ್ಟುಕೊಳ್ಳಬಹುದು. ತಾಸುಗಳ, ಕೊಡಿಕೆಗಳ, ಇಲ್ಲವೆ ಅಧ್ಯಯನಗಳ ಸಂಖ್ಯೆಯಲ್ಲಿರುವಂತೆ, ಪ್ರಮುಖತೆಯು ಬರೀ ಪ್ರಮಾಣದ ಮೇಲಲ್ಲ, ಗುಣಮಟ್ಟದ ಮೇಲಿರಬೇಕು. ಸಮಂಜಸವಾದ ಗುರಿಗಳನ್ನು ಇಡುವುದು ಮತ್ತು ಅವುಗಳನ್ನು ಸಾಧಿಸಲು ಪ್ರಯಾಸಪಡುವುದು, ಶುಶ್ರೂಷೆಯಲ್ಲಿ ನಮ್ಮನ್ನು ನೀಡಿಕೊಳ್ಳುವುದರಲ್ಲಿ ಆನಂದಿಸುವಂತೆ ನಮಗೆ ಸಹಾಯಮಾಡಬಲ್ಲದು. ಯೆಹೋವನು ಬಯಸುವಂತಹದ್ದು ಇದನ್ನೇ—ಆತನನ್ನು ನಾವು “ಸಂತೋಷದಿಂದ” ಸೇವಿಸಬೇಕು ಎಂಬುದನ್ನೇ.—ಕೀರ್ತನೆ 100:2; ಹೋಲಿಸಿ 2 ಕೊರಿಂಥ 9:7.
10. ನಾವು ಮಾಡಬೇಕಾದ ಇತರ ಕೆಲವು ಕ್ರೈಸ್ತ ಕಾರ್ಯಗಳಾವುವು, ಮತ್ತು ಇವು ನಮಗೆ ಹೇಗೆ ಸಹಾಯಮಾಡುತ್ತವೆ?
10 ನಾವು ಸಭೆಯಲ್ಲಿ ಮಾಡುವಂತಹ ಕಾರ್ಯಗಳೂ ನಮ್ಮನ್ನು ಕ್ರಿಸ್ತನಲ್ಲಿ ಕಟ್ಟುತ್ತವೆ. ಅಧಿಕ ಮಹತ್ವದ ಸಂಗತಿಯು, ಪರಸ್ಪರರಿಗಾಗಿ ಪ್ರೀತಿಯನ್ನು ತೋರಿಸುವುದಾಗಿದೆ, ಏಕೆಂದರೆ ಇದು ನಿಜ ಕ್ರೈಸ್ತರನ್ನು ಗುರುತಿಸುವ ಚಿಹ್ನೆಯಾಗಿದೆ. (ಯೋಹಾನ 13:34, 35) ನಾವಿನ್ನೂ ಅಧ್ಯಯನ ಮಾಡುತ್ತಿರುವಾಗ, ನಮ್ಮಲ್ಲಿ ಅನೇಕರು ಸಹಜವಾಗಿಯೇ ನಮ್ಮ ಶಿಕ್ಷಕನಿಗೆ ಅಂಟಿಕೊಳ್ಳುತ್ತೇವೆ. ಆದರೆ, ಸಭೆಯಲ್ಲಿರುವ ಇತರರ ಪರಿಚಯ ಮಾಡಿಕೊಳ್ಳುವ ಮೂಲಕ, “ವಿಶಾಲಮಾಡಿಕೊಳ್ಳಿರಿ” ಎಂಬ ಪೌಲನ ಸಲಹೆಯನ್ನು ನಾವು ಈಗ ಅನುಸರಿಸಸಾಧ್ಯವೋ? (2 ಕೊರಿಂಥ 6:13) ಹಿರಿಯರಿಗೂ ನಮ್ಮ ಪ್ರೀತಿ ಮತ್ತು ಗಣ್ಯತೆಯ ಅಗತ್ಯವಿದೆ. ಅವರೊಂದಿಗೆ ಸಹಕರಿಸುವ ಮೂಲಕ, ಅವರ ಶಾಸ್ತ್ರೀಯ ಸಲಹೆಯನ್ನು ಕೋರುವ ಮತ್ತು ಸ್ವೀಕರಿಸಿಕೊಳ್ಳುವ ಮೂಲಕ, ಅವರ ಕಠಿನ ಕೆಲಸವನ್ನು ನಾವು ಹೆಚ್ಚು ಸರಾಗಗೊಳಿಸಬಲ್ಲೆವು. (ಇಬ್ರಿಯ 13:17) ಅದೇ ಸಮಯದಲ್ಲಿ, ಕ್ರಿಸ್ತನಲ್ಲಿ ನಾವು ಕಟ್ಟಲ್ಪಡುವುದಕ್ಕೆ ಇದು ನೆರವು ನೀಡುವುದು.
11. ದೀಕ್ಷಾಸ್ನಾನದ ಕುರಿತು ನಾವು ಯಾವ ವಾಸ್ತವಿಕವಾದ ನೋಟವನ್ನು ಪಡೆದಿರಬೇಕು?
11 ದೀಕ್ಷಾಸ್ನಾನವು ಒಂದು ರೋಮಾಂಚಕ ಸಂದರ್ಭವಾಗಿದೆ! ಆದರೂ, ತದನಂತರದ ಜೀವಿತದ ಪ್ರತಿಯೊಂದು ಕ್ಷಣವು ಅಷ್ಟೇ ರೋಮಾಂಚಕವಾಗಿರಬೇಕೆಂದು ನಾವು ಅಪೇಕ್ಷಿಸಬಾರದು. ಕ್ರಿಸ್ತನಲ್ಲಿ ನಾವು ಕಟ್ಟಲ್ಪಡುವುದರ ಹೆಚ್ಚಿನ ಪಾಲು, “ಯಾವ ಸೂತ್ರವನ್ನನುಸರಿಸಿ . . . ಬಂದೆವೋ ಅದನ್ನೇ ಅನುಸರಿಸಿ ನಡೆ”ಯುವುದನ್ನು ಒಳಗೊಳ್ಳುತ್ತದೆ. (ಫಿಲಿಪ್ಪಿ 3:16) ಇದು ನೀರಸವಾದ, ಬೇಸರ ಹಿಡಿಸುವ ಜೀವನ ಶೈಲಿಯನ್ನು ಅರ್ಥೈಸುವುದಿಲ್ಲ. ಇದು ನೇರವಾದ ಹಾದಿಯಲ್ಲಿ ಮುನ್ನಡೆಯುವುದನ್ನೇ ಅರ್ಥೈಸುತ್ತದೆ—ಬೇರೆ ಮಾತುಗಳಲ್ಲಿ ಹೇಳುವುದಾದರೆ, ಒಳ್ಳೆಯ ಆತ್ಮಿಕ ಅಭ್ಯಾಸಗಳನ್ನು ಬೆಳೆಸಿಕೊಂಡು, ಅವುಗಳನ್ನು ಅನುದಿನವೂ ವರ್ಷಪೂರ್ತಿಯೂ ಕಾಪಾಡಿಕೊಳ್ಳುವುದನ್ನು ಅರ್ಥೈಸುತ್ತದೆ. ಜ್ಞಾಪಕದಲ್ಲಿಡಿ, “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.”—ಮತ್ತಾಯ 24:13.
ನೀವು ‘ನಂಬಿಕೆಯಲ್ಲಿ ನೆಲೆಗೊಳಿಸಲ್ಪಡುತ್ತಿದ್ದೀರೊ’?
12. ‘ನಂಬಿಕೆಯಲ್ಲಿ ನೆಲೆಗೊಂಡಿರು’ವುದರ ಅರ್ಥವೇನು?
12 ಕ್ರಿಸ್ತನಲ್ಲಿ ಐಕ್ಯವಾಗಿರುವ ನಮ್ಮ ನಡಗೆಯನ್ನು ವರ್ಣಿಸುವ ಪೌಲನ ಮೂರನೆಯ ವಾಕ್ಸರಣಿಯಲ್ಲಿ, ‘ನಂಬಿಕೆಯಲ್ಲಿ ನೆಲೆಗೊಂಡಿರುವಂತೆ’ ಅವನು ನಮ್ಮನ್ನು ಪ್ರೇರಿಸುತ್ತಾನೆ. ಒಂದು ತರ್ಜುಮೆಯು ಹೀಗೆ ಓದುತ್ತದೆ: “ನಂಬಿಕೆಯ ವಿಷಯದಲ್ಲಿ ದೃಢೀಕರಿಸಲ್ಪಟ್ಟಿರುವುದು.” ಏಕೆಂದರೆ ಪೌಲನು ಉಪಯೋಗಿಸಿದ ಗ್ರೀಕ್ ಪದವು, “ದೃಢೀಕರಿಸಲು, ಖಾತ್ರಿನೀಡಲು, ಮತ್ತು ಕಾನೂನುಬದ್ಧವಾಗಿ ಅಪರಿವರ್ತನೀಯ ಮಾಡು”ವುದನ್ನು ಅರ್ಥೈಸಬಲ್ಲದು. ನಾವು ಜ್ಞಾನದಲ್ಲಿ ಬೆಳೆದಂತೆ, ಯೆಹೋವ ದೇವರಲ್ಲಿನ ನಮ್ಮ ನಂಬಿಕೆಯು ಸಾಧಾರವಾದದ್ದು, ಮತ್ತು ವಾಸ್ತವವಾಗಿ ನ್ಯಾಯಬದ್ಧವಾಗಿ ಸ್ಥಾಪಿಸಲ್ಪಟ್ಟದ್ದೂ ಆಗಿದೆ ಎಂಬುದನ್ನು ಮನಗಾಣಲು ನಮಗೆ ಹೆಚ್ಚಿನ ಕಾರಣಗಳನ್ನು ಕೊಡಲಾಗುತ್ತದೆ. ಪರಿಣಾಮವು ನಮ್ಮ ಸ್ಥಿರತೆಯಲ್ಲಿನ ಅಭಿವೃದ್ಧಿಯಾಗಿದೆ. ನಮ್ಮನ್ನು ಅಲುಗಾಡಿಸುವುದು ಸೈತಾನನ ಲೋಕಕ್ಕೆ ಬಹಳಷ್ಟು ಕಷ್ಟಕರವಾಗಿ ಪರಿಣಮಿಸುತ್ತದೆ. ಇದು ನಮಗೆ, ‘ಪೂರ್ಣವಾದ ತಿಳುವಳಿಕೆಗೆ [“ಪ್ರೌಢತೆಗೆ,” NW] ಸಾಗುತ್ತಾ ಹೋಗಿರಿ’ ಎಂಬ ಪೌಲನ ಬುದ್ಧಿವಾದವನ್ನು ಮನಸ್ಸಿಗೆ ತರುತ್ತದೆ. (ಇಬ್ರಿಯ 6:1) ಪ್ರೌಢತೆ ಹಾಗೂ ಸ್ಥಿರತೆ ಜೊತೆಜೊತೆಯಾಗಿ ಸಾಗುತ್ತವೆ.
13, 14. (ಎ) ಕೊಲೊಸ್ಸೆಯಲ್ಲಿದ್ದ ಪ್ರಥಮ ಶತಮಾನದ ಕ್ರೈಸ್ತರು ತಮ್ಮ ಸ್ಥಿರತೆಗೆ ಯಾವ ಬೆದರಿಕೆಗಳನ್ನು ಎದುರಿಸಿದರು? (ಬಿ) ಯಾವ ವಿಷಯವು ಅಪೊಸ್ತಲ ಪೌಲನನ್ನು ಚಿಂತೆಗೀಡುಮಾಡಿದ್ದಿರಬಹುದು?
13 ಕೊಲೊಸ್ಸೆಯಲ್ಲಿದ್ದ ಪ್ರಥಮ ಶತಮಾನದ ಕ್ರೈಸ್ತರು, ತಮ್ಮ ಸ್ಥಿರತೆಗೆ ಬೆದರಿಕೆಗಳನ್ನು ಎದುರಿಸಿದರು. ಪೌಲನು ಎಚ್ಚರಿಸಿದ್ದು: “ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರ್ರಿ.” (ಕೊಲೊಸ್ಸೆ 2:8) “[ದೇವರ] ಪ್ರಿಯ ಕುಮಾರನ ರಾಜ್ಯ”ದಲ್ಲಿ ಪ್ರಜೆಗಳಾಗಿದ್ದ ಕೊಲೊಸ್ಸೆಯವರು, ತಮ್ಮ ಆಶೀರ್ವದಿತ ಆತ್ಮಿಕ ಸ್ಥಿತಿಯಿಂದ ದೂರ ನಡೆಸಲ್ಪಡುವಂತೆ ಪೌಲನು ಬಯಸಲಿಲ್ಲ. (ಕೊಲೊಸ್ಸೆ 1:13) ಯಾವುದರ ಮೂಲಕ ದಾರಿತಪ್ಪಿಸಲ್ಪಡುವುದು? ಪೌಲನು “ತತ್ವಜ್ಞಾನ”ಕ್ಕೆ—ಈ ಪದವು ಬೈಬಲಿನಲ್ಲಿ ಒಂದೇ ಒಂದು ಸಾರಿ ಕಂಡುಬರುತ್ತದೆ—ಸೂಚಿಸಿದನು. ಅವನು ಪ್ಲೇಟೊ ಮತ್ತು ಸಾಕ್ರಟಿಸ್ರಂತಹ ಗ್ರೀಕ್ ತತ್ವಜ್ಞಾನಿಗಳ ಕುರಿತು ಮಾತನಾಡುತ್ತಿದ್ದನೊ? ಇವರು ನಿಜ ಕ್ರೈಸ್ತರಿಗೆ ಒಂದು ಬೆದರಿಕೆಯನ್ನು ಒಡ್ಡಿದರೂ, ಆ ದಿನಗಳಲ್ಲಿ “ತತ್ವಜ್ಞಾನ”ವೆಂಬ ಪದಕ್ಕೆ ವಿಶಾಲವಾದ ಅರ್ಥವಿತ್ತು. ಅದು ಸಾಮಾನ್ಯವಾಗಿ ಅನೇಕ ಗುಂಪುಗಳಿಗೆ ಮತ್ತು ಏಕಾಭಿಪ್ರಾಯವುಳ್ಳ ವ್ಯಕ್ತಿಗಳಿಗೆ—ಧಾರ್ಮಿಕವಾದವುಗಳು ಸಹ—ಸೂಚಿಸಿತು. ದೃಷ್ಟಾಂತಕ್ಕೆ, ಜೋಸೀಫಸ್ ಮತ್ತು ಫೀಲೊರಂತಹ ಪ್ರಥಮ ಶತಮಾನದ ಯೆಹೂದ್ಯರು ತಮ್ಮ ಸ್ವಂತ ಧರ್ಮವನ್ನು ಒಂದು ತತ್ವಜ್ಞಾನವೆಂದು—ಬಹುಶಃ ಅದರ ಆಕರ್ಷಣೆಗೆ ಕೂಡಿಸಲು—ಕರೆದರು.
14 ಪೌಲನನ್ನು ಚಿಂತೆಗೀಡುಮಾಡಿದ್ದಿರಬಹುದಾದ ಕೆಲವು ತತ್ವಜ್ಞಾನಗಳು, ಬಹುಶಃ ಧಾರ್ಮಿಕ ಸ್ವರೂಪದ್ದಾಗಿದ್ದವು. ಕೊಲೊಸ್ಸೆಯವರಿಗೆ ತಾನು ಬರೆದ ಪತ್ರದ ಅದೇ ಅಧ್ಯಾಯದಲ್ಲಿ ತರುವಾಯ, ಅವನು “ಇದನ್ನು ಹಿಡಿಯಬೇಡ, ಇದನ್ನು ರುಚಿನೋಡಬೇಡ, ಅದನ್ನು ಮುಟ್ಟಬೇಡ” ಎಂಬುದಾಗಿ ಕಲಿಸಿದವರನ್ನು ಸಂಬೋಧಿಸುತ್ತಾ, ಹೀಗೆ ಕ್ರಿಸ್ತನ ಮರಣದಿಂದ ಅಂತ್ಯಗೊಂಡ ಮೋಶೆಯ ಧರ್ಮಶಾಸ್ತ್ರದ ವೈಶಿಷ್ಟ್ಯಗಳಿಗೆ ಅಪ್ರತ್ಯಕ್ಷವಾಗಿ ಸೂಚಿಸಿದನು. (ರೋಮಾಪುರ 10:4) ವಿಧರ್ಮಿ ತತ್ವಜ್ಞಾನಗಳೊಂದಿಗೆ, ಸಭೆಯ ಆತ್ಮಿಕತೆಯನ್ನು ಬೆದರಿಸಿದಂತಹ ಪ್ರಭಾವಗಳು ಇದ್ದವು. (ಕೊಲೊಸ್ಸೆ 2:20-22) “ಪ್ರಾಪಂಚಿಕಬಾಲಬೋಧೆಯ” ಭಾಗವಾಗಿದ್ದ ತತ್ವಜ್ಞಾನದ ವಿರುದ್ಧ ಪೌಲನು ಎಚ್ಚರಿಸಿದನು. ಅಂತಹ ಸುಳ್ಳು ಉಪದೇಶವು ಮಾನವ ಮೂಲದಿಂದ ಬಂದ ಉಪದೇಶವಾಗಿತ್ತು.
15. ಅನೇಕ ವೇಳೆ ನಮ್ಮ ಮನಸ್ಸಿಗೆ ಬರುವ ಅಶಾಸ್ತ್ರೀಯ ಆಲೋಚನೆಯಿಂದ ಅಲುಗಾಡಿಸಲ್ಪಡುವುದರಿಂದ ನಾವು ಹೇಗೆ ದೂರವಿರಸಾಧ್ಯವಿದೆ?
15 ದೇವರ ವಾಕ್ಯದ ಮೇಲೆ ದೃಢವಾಗಿ ಆಧಾರಿತವಾಗಿರದ ಮಾನವ ವಿಚಾರಗಳು ಮತ್ತು ಆಲೋಚನೆಯ ಪ್ರವರ್ಧನೆಯು, ಕ್ರೈಸ್ತ ಸ್ಥಿರತೆಗೆ ಒಂದು ಬೆದರಿಕೆಯನ್ನು ಒಡ್ಡಬಲ್ಲದು. ನಾವು ಅಂತಹ ಬೆದರಿಕೆಗಳ ವಿಷಯದಲ್ಲಿ ಇಂದು ಜಾಗರೂಕರಾಗಿರಬೇಕು. ಅಪೊಸ್ತಲ ಯೋಹಾನನು ಪ್ರೇರಿಸಿದ್ದು: “ಪ್ರಿಯರೇ, . . . ನೀವು ಆತ್ಮದ ಎಲ್ಲಾ ನುಡಿಗಳನ್ನು ನಂಬದೆ ಆಯಾ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.” (1 ಯೋಹಾನ 4:1) ಆದುದರಿಂದ, ಬೈಬಲ್ ಮಟ್ಟಗಳಿಗನುಸಾರ ಜೀವಿಸುವುದು ಹಳೆಯ ಶೈಲಿಯದ್ದಾಗಿದೆಯೆಂದು ಸಹಪಾಠಿಯೊಬ್ಬನು ನಿಮಗೆ ಮನಗಾಣಿಸಲು ಪ್ರಯತ್ನಿಸುವುದಾದರೆ, ಇಲ್ಲವೆ ಒಂದು ಪ್ರಾಪಂಚಿಕ ಮನೋಭಾವವನ್ನು ನೀವು ಅಂಗೀಕರಿಸುವಂತೆ ನಿಮ್ಮ ಮೇಲೆ ಪ್ರಭಾವಬೀರಲು ನೆರೆಯವನೊಬ್ಬನು ಪ್ರಯತ್ನಿಸುವುದಾದರೆ, ಇಲ್ಲವೆ ನಿಮ್ಮ ಬೈಬಲ್ಶಿಕ್ಷಿತ ಮನಸ್ಸಾಕ್ಷಿಯನ್ನು ನೀವು ಉಲ್ಲಂಘಿಸುವಂತೆ ನಿಮ್ಮ ಮೇಲೆ ಜೊತೆಕೆಲಸಗಾರನೊಬ್ಬನು ಗ್ರಹಿಸಲಾಗದ ರೀತಿಯಲ್ಲಿ ಒತ್ತಡ ಹೇರುವುದಾದರೆ, ಇಲ್ಲವೆ ಸಭೆಯಲ್ಲಿರುವವರ ಕುರಿತು ತನ್ನ ಸ್ವಂತ ಅಭಿಪ್ರಾಯದ ಮೇಲೆ ಆಧರಿಸಿದ ಟೀಕಾತ್ಮಕ, ಅನುಚಿತವಾದ ಹೇಳಿಕೆಗಳನ್ನು ಒಬ್ಬ ಜೊತೆ ವಿಶ್ವಾಸಿಯೂ ವ್ಯಕ್ತಪಡಿಸುವುದಾದರೆ, ಅವರು ಹೇಳುವಂತಹದ್ದನ್ನು ಕಣ್ಣುಮುಚ್ಚಿ ನಂಬಬೇಡಿ. ದೇವರ ವಾಕ್ಯಕ್ಕೆ ಅನುಗುಣವಾಗಿರದ ವಿಷಯಗಳನ್ನು ಕಡೆಗಣಿಸಿಬಿಡಿ. ನಾವು ಹಾಗೆ ಮಾಡಿದಂತೆ, ಕ್ರಿಸ್ತನಲ್ಲಿ ನಾವು ಐಕ್ಯರಾಗಿ ನಡೆಯುವಾಗ ನಮ್ಮ ಸ್ಥಿರತೆಯನ್ನು ಕಾಪಾಡಿಕೊಳ್ಳುವೆವು.
‘ನಂಬಿಕೆಯೊಂದಿಗೆ ಉಪಕಾರಸ್ತುತಿಯಲ್ಲಿ ತುಂಬಿಹರಿಯುವುದು’
16. ಕ್ರಿಸ್ತನಲ್ಲಿ ಐಕ್ಯರಾಗಿ ನಡೆಯುವುದರ ನಾಲ್ಕನೆಯ ಅಂಶವು ಏನಾಗಿದೆ, ಮತ್ತು ಯಾವ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬಹುದು?
16 ಕ್ರಿಸ್ತನಲ್ಲಿ ಐಕ್ಯರಾಗಿ ನಡೆಯುವುದರ ಬಗ್ಗೆ ಪೌಲನು ಉಲ್ಲೇಖಿಸುವ ನಾಲ್ಕನೆಯ ಅಂಶವು, ನಾವು ‘ನಂಬಿಕೆಯೊಂದಿಗೆ ಉಪಕಾರಸ್ತುತಿಯಲ್ಲಿ ತುಂಬಿಹರಿಯ’ (NW)ಬೇಕೆಂಬುದೇ ಆಗಿದೆ. (ಕೊಲೊಸ್ಸೆ 2:7) ‘ತುಂಬಿಹರಿ’ ಎಂಬ ಪದವು, ತನ್ನ ದಡಗಳಲ್ಲಿ ತುಂಬಿಹರಿಯುತ್ತಿರುವ ನದಿಯ ಜ್ಞಾಪಕವನ್ನು ಹುಟ್ಟಿಸುತ್ತದೆ. ಇದು ಸೂಚಿಸುವುದೇನೆಂದರೆ, ಕ್ರೈಸ್ತರೋಪಾದಿ ನಮಗಾದರೊ ನಮ್ಮ ಉಪಕಾರಸ್ತುತಿಯು ಸತತವಾದ ಇಲ್ಲವೆ ರೂಢಿಯ ಸಂಗತಿಯಾಗಿರಬೇಕು. ‘ನಾನು ಆಭಾರಿಯಾಗಿದ್ದೇನೊ?’ ಎಂಬುದಾಗಿ ನಮ್ಮಲ್ಲಿ ಪ್ರತಿಯೊಬ್ಬರೂ ಕೇಳಿಕೊಳ್ಳುವುದು ಒಳ್ಳೆಯದು.
17. (ಎ) ಕಷ್ಟಕರ ಸಮಯಗಳಲ್ಲೂ ನಾವು ಆಭಾರಿಗಳಾಗಿರಲು ನಮಗೆಲ್ಲರಿಗೂ ಬಹಳಷ್ಟು ಇದೆ ಎಂದು ಏಕೆ ಹೇಳಬಹುದು? (ಬಿ) ಯೆಹೋವನಿಂದ ಬಂದಿರುವ ಯಾವ ಕೆಲವು ಕೊಡುಗೆಗಳಿಗೆ, ವಿಶೇಷವಾಗಿ ಆಭಾರಿಗಳಾಗಿರುವ ಅನಿಸಿಕೆ ನಿಮಗಾಗುತ್ತದೆ?
17 ನಿಜವಾಗಿಯೂ ಯೆಹೋವನಿಗೆ ಪ್ರತಿದಿನ ತುಂಬಿಹರಿಯುವಷ್ಟು ಉಪಕಾರಗಳನ್ನು ಸಲ್ಲಿಸಲು ನಮಗೆಲ್ಲರಿಗೂ ಸಾಕಷ್ಟು ಕಾರಣವಿದೆ. ಅತ್ಯಂತ ಕೆಟ್ಟ ಸಮಯಗಳಲ್ಲೂ, ಉಪಶಮನದ ಕ್ಷಣಗಳನ್ನು ಒದಗಿಸುವಂತಹ ಕೆಲವೊಂದು ಚಿಕ್ಕಪುಟ್ಟ ಸಂಗತಿಗಳಿರಬಹುದು. ಮಿತ್ರನೊಬ್ಬನು ಸಹಾನುಭೂತಿಯನ್ನು ತೋರಿಸುತ್ತಾನೆ. ಪ್ರಿಯ ವ್ಯಕ್ತಿಯೊಬ್ಬನು ಮತ್ತೆ ಧೈರ್ಯ ತುಂಬುವ ರೀತಿಯಲ್ಲಿ ಸ್ಪರ್ಶಿಸುತ್ತಾನೆ. ರಾತ್ರಿಯಲ್ಲಿ ಪಡೆದ ಒಂದು ಒಳ್ಳೆಯ ನಿದ್ರೆಯು ಪುನಶ್ಚೈತನ್ಯಕಾರಕವಾಗಿರುತ್ತದೆ. ರುಚಿಕರವಾದ ಭೋಜನವು ಹಸಿವಿನ ಯಾತನೆಯನ್ನು ಅಡಗಿಸುತ್ತದೆ. ಹಕ್ಕಿಯ ಗಾನ, ಮಗುವಿನ ನಗು, ಮಿನುಗುವ ನೀಲಾಕಾಶ, ಚೈತನ್ಯದಾಯಕ ನಸುಗಾಳಿ—ಇವೆಲ್ಲವನ್ನು ಮತ್ತು ಇನ್ನೂ ಹೆಚ್ಚಿನ ಸಂಗತಿಗಳನ್ನು ನಾವು ಒಂದೇ ದಿನದಲ್ಲಿ ಅನುಭವಿಸಸಾಧ್ಯವಿದೆ. ಅಂತಹ ಕೊಡುಗೆಗಳನ್ನು ತೀರ ಕ್ಷುಲ್ಲಕವಾಗಿ ಎಣಿಸುವುದು ತೀರ ಸುಲಭವಾಗಿದೆ. ಅವೆಲ್ಲವು ಒಂದು ಉಪಕಾರಕ್ಕೆ ಯೋಗ್ಯವಾಗಿರುವುದಿಲ್ಲವೊ? ಅವೆಲ್ಲವೂ, “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳ” ಮೂಲನಾದ ಯೆಹೋವನಿಂದ ಬರುತ್ತವೆ. (ಯಾಕೋಬ 1:17) ಇವುಗಳನ್ನು ಕ್ಷುಲ್ಲಕಗೊಳಿಸುವ ಕೊಡುಗೆಗಳನ್ನು—ಉದಾಹರಣೆಗೆ, ಜೀವವನ್ನೇ—ಆತನು ನಮಗೆ ಕೊಟ್ಟಿದ್ದಾನೆ. (ಕೀರ್ತನೆ 36:9) ಅಲ್ಲದೆ, ಸದಾಕಾಲ ಜೀವಿಸುವ ಒಂದು ಸಂದರ್ಭವನ್ನು ಆತನು ನಮಗೆ ಕೊಟ್ಟಿದ್ದಾನೆ. ಈ ಕೊಡುಗೆಯನ್ನು ಒದಗಿಸಲಿಕ್ಕಾಗಿ, ಯೆಹೋವನು ತನ್ನ ಏಕಜಾತ ಪುತ್ರನನ್ನು, ‘ಯಾರನ್ನು ಆತನು ವಿಶೇಷವಾಗಿ ಪ್ರೀತಿಸಿದನೊ’ (NW) ಅವನನ್ನು ಕಳುಹಿಸುವ ಮೂಲಕ ಅತಿಶ್ರೇಷ್ಠ ತ್ಯಾಗವನ್ನು ಮಾಡಿದನು.—ಜ್ಞಾನೋಕ್ತಿ 8:30; ಯೋಹಾನ 3:16.
18. ಯೆಹೋವನಿಗೆ ನಾವು ಆಭಾರಿಗಳೆಂದು ನಾವು ಹೇಗೆ ತೋರಿಸಬಹುದು?
18 ಹಾಗಾದರೆ, “ಯೆಹೋವನೇ, ನಿನ್ನನ್ನು ಕೊಂಡಾಡುವದು . . . ಯುಕ್ತವಾಗಿದೆ” ಎಂಬ ಕೀರ್ತನೆಗಾರನ ಮಾತುಗಳು ಎಷ್ಟು ಸತ್ಯವಾಗಿವೆ. (ಕೀರ್ತನೆ 92:1) ತದ್ರೀತಿಯಲ್ಲಿ, ಥೆಸಲೊನೀಕದಲ್ಲಿದ್ದ ಕ್ರೈಸ್ತರಿಗೆ ಪೌಲನು ಜ್ಞಾಪಕಹುಟ್ಟಿಸಿದ್ದು: “ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ.” (1 ಥೆಸಲೊನೀಕ 5:18; ಎಫೆಸ 5:20; ಕೊಲೊಸ್ಸೆ 3:15) ನಮ್ಮಲ್ಲಿ ಪ್ರತಿಯೊಬ್ಬರೂ ಹೆಚ್ಚು ಆಭಾರಿಗಳಾಗಿರಲು ನಿಶ್ಚಯಿಸಿಕೊಳ್ಳಬಹುದು. ನಮ್ಮ ಪ್ರಾರ್ಥನೆಗಳಲ್ಲಿ, ದೇವರಿಗೆ ನಮ್ಮ ಅಗತ್ಯಗಳ ಕುರಿತಾದ ಮನವಿಗಳು ಮಾತ್ರ ಇರಬೇಕೆಂದಿಲ್ಲ. ಕೆಲವೊಂದು ಮನವಿಗಳು ಸೂಕ್ತವಾಗಿವೆ. ಆದರೆ ನಿಮ್ಮಿಂದ ಏನೋ ಅಗತ್ಯವಿರುವಾಗ ಮಾತ್ರ ನಿಮ್ಮೊಂದಿಗೆ ಮಾತಾಡುವ ಒಬ್ಬ ಮಿತ್ರನು ನಿಮಗಿರುವುದನ್ನು ಭಾವಿಸಿಕೊಳ್ಳಿ! ಆದುದರಿಂದ ಯೆಹೋವನಿಗೆ ಉಪಕಾರ ಸಲ್ಲಿಸಲು ಮತ್ತು ಆತನನ್ನು ಸ್ತುತಿಸಲು ಮಾತ್ರ ಏಕೆ ಪ್ರಾರ್ಥಿಸಬಾರದು? ಈ ಕೃತಘ್ನ ಲೋಕವನ್ನು ಆತನು ಸ್ವರ್ಗದಿಂದ ನೋಡುವಾಗ, ಅಂತಹ ಪ್ರಾರ್ಥನೆಗಳು ಅವನನ್ನು ಎಷ್ಟು ಪ್ರಸನ್ನಗೊಳಿಸುತ್ತಿರಬೇಕು! ಎರಡನೆಯ ಪ್ರಯೋಜನವು ಏನೆಂದರೆ, ಇಂತಹ ಪ್ರಾರ್ಥನೆಗಳು ನಾವು ನಿಜವಾಗಿಯೂ ಎಷ್ಟು ಆಶೀರ್ವದಿತರೆಂಬುದನ್ನು ನಮಗೆ ಜ್ಞಾಪಕಹುಟ್ಟಿಸುತ್ತಾ, ಜೀವಿತದ ಸಕಾರಾತ್ಮಕ ಅಂಶಗಳ ಮೇಲೆ ಕೇಂದ್ರೀಕರಿಸಲು ಅವು ನಮಗೆ ಸಹಾಯಮಾಡಬಹುದು.
19. ಕೊಲೊಸ್ಸೆ 2:6, 7ರಲ್ಲಿ ಪೌಲನು ಉಪಯೋಗಿಸಿದ ಭಾಷೆಯು, ನಾವೆಲ್ಲರೂ ಕ್ರಿಸ್ತನೊಂದಿಗೆ ನಡೆಯುವುದರಲ್ಲಿ ಸುಧಾರಣೆಮಾಡುವುದನ್ನು ಹೇಗೆ ಮುಂದುವರಿಸಬಹುದೆಂದು ಸೂಚಿಸುತ್ತದೆ?
19 ದೇವರ ವಾಕ್ಯದ ಒಂದೇ ವಚನದಿಂದ ಇಷ್ಟೊಂದು ವಿವೇಕಯುತ ಮಾರ್ಗದರ್ಶನವನ್ನು ಪಡೆದುಕೊಳ್ಳಸಾಧ್ಯವಿರುವುದು ಗಮನಾರ್ಹವಾದ ವಿಷಯವಾಗಿಲ್ಲವೊ? ಕ್ರಿಸ್ತನೊಂದಿಗೆ ನಡೆಯುತ್ತಾ ಇರುವಂತಹ ಪೌಲನ ಸಲಹೆ, ನಮ್ಮಲ್ಲಿ ಪ್ರತಿಯೊಬ್ಬರು ಹೃದಯಕ್ಕೆ ತೆಗೆದುಕೊಳ್ಳಬೇಕಾದ ಸಲಹೆಯಾಗಿದೆ. ಹಾಗಾದರೆ, ‘ಕ್ರಿಸ್ತನಲ್ಲಿ ಬೇರೂರಿರಲು,’ ‘ಅವನಲ್ಲಿ ಭಕ್ತಿವೃದ್ಧಿಹೊಂದಲು,’ ‘ನಂಬಿಕೆಯಲ್ಲಿ ನೆಲೆಗೊಂಡಿರಲು,’ ಮತ್ತು ‘ಉಪಕಾರಸ್ತುತಿಯಲ್ಲಿ ತುಂಬಿಹರಿಯಲು’ ನಾವೆಲ್ಲರೂ ನಿಶ್ಚಯಿಸಿಕೊಳ್ಳೋಣ. ಇಂತಹ ಸಲಹೆಯು ಹೊಸದಾಗಿ ದೀಕ್ಷಾಸ್ನಾನ ಪಡೆದುಕೊಂಡವರಿಗೆ ವಿಶೇಷವಾಗಿ ಅತ್ಯಾವಶ್ಯಕವಾಗಿದೆ. ಆದರೆ ಅದು ನಮಗೆಲ್ಲರಿಗೂ ಅನ್ವಯಿಸುತ್ತದೆ. ತಾಯಿಬೇರು ಹೇಗೆ ಹೆಚ್ಚೆಚ್ಚು ಕೆಳಮುಖವಾಗಿ ಬೆಳೆಯುತ್ತದೆಂದು ಮತ್ತು ನಿರ್ಮಾಣಗೊಳ್ಳುತ್ತಿರುವ ಕಟ್ಟಡವು ಹೇಗೆ ಹೆಚ್ಚೆಚ್ಚು ಮೇಲ್ಮುಖವಾಗಿ ಏರುತ್ತದೆಂದು ಯೋಚಿಸಿರಿ. ಹೀಗೆ ಕ್ರಿಸ್ತನೊಂದಿಗಿನ ನಮ್ಮ ನಡಗೆಯು ಎಂದೂ ಕೊನೆಗೊಳ್ಳುವುದಿಲ್ಲ. ಬೆಳೆವಣಿಗೆಗಾಗಿ ಸಾಕಷ್ಟು ಅವಕಾಶವಿದೆ. ಯೆಹೋವನು ನಮಗೆ ಸಹಾಯ ನೀಡುವನು ಮತ್ತು ನಮ್ಮನ್ನು ಆಶೀರ್ವದಿಸುವನು, ಏಕೆಂದರೆ ನಾವು ಆತನೊಂದಿಗೆ ಮತ್ತು ಆತನ ಪ್ರಿಯ ಪುತ್ರನೊಂದಿಗೆ ಸದಾಕಾಲ ನಡೆಯುತ್ತಾ ಇರುವಂತೆ ಆತನು ಬಯಸುತ್ತಾನೆ.
ನೀವು ಹೇಗೆ ಉತ್ತರಿಸುವಿರಿ?
◻ ಕ್ರಿಸ್ತನಲ್ಲಿ ಐಕ್ಯರಾಗಿ ನಡೆಯುವುದರಲ್ಲಿ ಏನು ಒಳಗೂಡಿದೆ?
◻ ‘ಕ್ರಿಸ್ತನಲ್ಲಿ ಬೇರೂರಿರುವುದು’ ಏನನ್ನು ಅರ್ಥೈಸುತ್ತದೆ?
◻ ನಾವು ಹೇಗೆ ‘ಕ್ರಿಸ್ತನಲ್ಲಿ ಕಟ್ಟಲ್ಪಡ’ಬಹುದು?
◻ ‘ನಂಬಿಕೆಯಲ್ಲಿ ನೆಲೆಗೊಂಡಿರುವುದು’ ಏಕೆ ಇಷ್ಟೊಂದು ಪ್ರಾಮುಖ್ಯವಾಗಿದೆ?
◻ ‘ಉಪಕಾರಸ್ತುತಿಯಲ್ಲಿ ತುಂಬಿಹರಿಯಲು’ ನಮಗೆ ಯಾವ ಕಾರಣಗಳಿವೆ?
[ಪುಟ 10 ರಲ್ಲಿರುವ ಚಿತ್ರ]
ಮರವೊಂದರ ಬೇರುಗಳು ಕಣ್ಣಿಗೆ ಕಾಣದೆ ಇರಬಹುದಾದರೂ, ಅವು ಮರಕ್ಕೆ ಆಹಾರವನ್ನು ಒದಗಿಸುತ್ತವೆ ಮತ್ತು ಅದನ್ನು ದೃಢವಾಗಿ ನಿಲ್ಲಿಸುತ್ತವೆ