ಬಾಳನ—ಆರಾಧನೆ ಇಸ್ರಾಯೇಲ್ಯರ ಹೃದಯಗಳನ್ನು ಸೆಳೆಯಲು ನಡೆದ ಸಂಘರ್ಷ
ಸುಮಾರು ಒಂದು ಸಾವಿರ ವರ್ಷಗಳ ವರೆಗೆ, ಇಸ್ರಾಯೇಲ್ ಜನಾಂಗದವರ ಹೃದಯಗಳನ್ನು ಸೆಳೆಯಲಿಕ್ಕಾಗಿ ಉಗ್ರವಾದ ಸಂಘರ್ಷವೊಂದು ನಡೆಯಿತು. ಇದು ಮೂಢನಂಬಿಕೆಗಳ ಭಯ ಹಾಗೂ ಲೈಂಗಿಕ ಸಂಸ್ಕಾರಗಳಿಗೂ, ಮತ್ತು ನಂಬಿಕೆ ಹಾಗೂ ನಿಷ್ಠೆಯ ನಡುವಿನ ಹೋರಾಟವಾಗಿತ್ತು. ಜೀವನ್ಮರಣಗಳ ಈ ಸಂಘರ್ಷವು, ಯೆಹೋವನ ಆರಾಧನೆ ಮತ್ತು ಬಾಳನ ಆರಾಧನೆಯ ನಡುವಿನ ಸಂಘರ್ಷವಾಗಿತ್ತು.
ಇಸ್ರಾಯೇಲ್ ಜನಾಂಗವು ತನ್ನನ್ನು ಐಗುಪ್ತದಿಂದ ಬಿಡಿಸಿದ ಸತ್ಯ ದೇವರಿಗೆ ನಿಷ್ಠೆಯಿಂದ ಅಂಟಿಕೊಳ್ಳುವುದೋ? (ವಿಮೋಚನಕಾಂಡ 20:2, 3) ಅಥವಾ ಭೂಮಿಯನ್ನು ಫಲವತ್ತಾಗಿ ಮಾಡುವೆನೆಂದು ವಾಗ್ದಾನಿಸಿದ ಕಾನಾನಿನ ಇಷ್ಟದೇವರಾದ ಬಾಳನ ಕಡೆಗೆ ತಿರುಗಿಕೊಳ್ಳುವುದೋ?
ಸಾವಿರಾರು ವರ್ಷಗಳ ಹಿಂದೆ ನಡೆದ ಈ ಆತ್ಮಿಕ ಸಂಘರ್ಷವು ಇಂದು ನಮಗೆ ಮಹತ್ವದ್ದಾಗಿದೆ. ಏಕೆ? ಏಕೆಂದರೆ, “ಅವರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನರೂಪವಾಗಿವೆ; ಮತ್ತು ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಬುದ್ಧಿವಾದಗಳಾಗಿ ಬರೆದವೆ” ಎಂದು ಅಪೊಸ್ತಲ ಪೌಲನು ಬರೆದನು. (1 ಕೊರಿಂಥ 10:11) ಆದರೆ, ಬಾಳನು ಯಾರಾಗಿದ್ದನು, ಮತ್ತು ಬಾಳನ ಆರಾಧನೆಯಲ್ಲಿ ಏನು ಒಳಗೊಂಡಿತ್ತು ಎಂಬುದನ್ನು ನಾವು ತಿಳಿದುಕೊಳ್ಳುವುದಾದರೆ ಮಾತ್ರ, ಈ ಐತಿಹಾಸಿಕ ಸಂಘರ್ಷದ ಗಂಭೀರವಾದ ಎಚ್ಚರಿಕೆಯು ಹೆಚ್ಚು ಅರ್ಥಭರಿತವಾಗಿರುವುದು.
ಬಾಳನು ಯಾರಾಗಿದ್ದನು?
ಇಸ್ರಾಯೇಲ್ಯರು ಸಾ.ಶ.ಪೂ. 1473ರಲ್ಲಿ ಕಾನಾನ್ ದೇಶವನ್ನು ಪ್ರವೇಶಿಸಿದಾಗ ಅವರಿಗೆ ಬಾಳನ ಪರಿಚಯವಾಯಿತು. ಐಗುಪ್ತದ ದೇವತೆಗಳಿಗೆ ಹೋಲುವ ದೇವತೆಗಳ ಒಂದು ಸಮೂಹವನ್ನೇ ಕಾನಾನ್ಯರು ಆರಾಧಿಸಿದರೆಂದು ಅವರಿಗೆ ತಿಳಿದುಬಂತು. ಹಾಗಿದ್ದರೂ, ಕಾನಾನ್ಯರ ದೇವತೆಗಳಿಗೆ ವಿಭಿನ್ನ ಹೆಸರುಗಳು ಹಾಗೂ ಕೆಲವೊಂದು ವಿಭಿನ್ನ ಗುಣವೈಶಿಷ್ಟ್ಯಗಳಿದ್ದವು. ಆದರೆ, ಬಾಳನು ಕಾನಾನ್ಯರ ಪ್ರಧಾನ ದೇವರಾಗಿದ್ದನೆಂದು ಬೈಬಲು ತಿಳಿಸುತ್ತದೆ ಮತ್ತು ಅವನ ಶ್ರೇಷ್ಠತೆಯನ್ನು ಪ್ರಾಕ್ತನಶಾಸ್ತ್ರದ ಪರಿಶೋಧನೆಗಳು ದೃಢೀಕರಿಸುತ್ತವೆ. (ನ್ಯಾಯಸ್ಥಾಪಕರು 2:11) ದೇವತೆಗಳ ಸಮೂಹದಲ್ಲಿ ಬಾಳನು ಸರ್ವಶ್ರೇಷ್ಠನಾಗಿರದಿದ್ದರೂ, ಅವನು ಕಾನಾನ್ಯರ ಇಷ್ಟದೇವರಾಗಿದ್ದನು. ಅವನಿಗೆ ಮಳೆ, ಗಾಳಿ ಮತ್ತು ಮೋಡಗಳ ಮೇಲೆ ಅಧಿಕಾರವಿದೆಯೆಂದು, ಮತ್ತು ಅವನು ಮಾತ್ರ ಜನರನ್ನು ಹಾಗೂ ಅವರ ಪಶುಪ್ರಾಣಿಗಳನ್ನು ಬಂಜೆತನದಿಂದ ಮತ್ತು ಮರಣದಿಂದ ಹಾಗೂ ಭೂಮಿಯನ್ನು ನಿಷ್ಫಲತೆಯಿಂದ ಕಾಪಾಡುವನೆಂದು ಅವರು ನಂಬಿದರು. ಅಲ್ಲದೆ ಬಾಳನ ಸಂರಕ್ಷಣೆಯಿಲ್ಲದಿದ್ದರೆ, ಕಾನಾನ್ಯರ ಪ್ರತೀಕಾರಕ ದೇವರಾದ ಮಾಟ್, ಖಂಡಿತವಾಗಿಯೂ ಅವರ ಮೇಲೆ ಕೇಡನ್ನು ತರುವವನಾಗಿದ್ದನು.
ಲೈಂಗಿಕ ಸಂಸ್ಕಾರಗಳು ಬಾಳನ ಆರಾಧನೆಗೆ ಜೀವಕಳೆ ತುಂಬಿದವು. ಬಾಳನಿಗೆ ಸಂಬಂಧಿಸಿದ ಕಲ್ಲುಗಂಬಗಳು ಹಾಗೂ ವಿಗ್ರಹಸ್ತಂಭಗಳಂತಹ ಧಾರ್ಮಿಕ ಪ್ರತೀಕಗಳಿಗೂ ಲೈಂಗಿಕ ಅರ್ಥವಿತ್ತು. ಈ ಕಲ್ಲುಗಂಬಗಳು, ಲಿಂಗದ ರೂಪದಲ್ಲಿ ಕೆತ್ತಲ್ಪಟ್ಟ ಕಲ್ಲುಗಳು ಇಲ್ಲವೆ ಬಂಡೆಗಳಾಗಿದ್ದು, ಲೈಂಗಿಕ ಸಂಯೋಗದಲ್ಲಿ ಪುರುಷನ ಅಂಗವನ್ನು, ಅಂದರೆ ಬಾಳನನ್ನು ಪ್ರತಿನಿಧಿಸಿದವು. ಆದರೆ ವಿಗ್ರಹಸ್ತಂಭಗಳು, ಅಶೇರಳನ್ನು ಪ್ರತಿನಿಧಿಸಿದ ಕಟ್ಟಿಗೆಯ ಪ್ರತೀಕಗಳು ಇಲ್ಲವೆ ಮರಗಳಾಗಿದ್ದವು. ಅಶೇರಳು ಬಾಳನ ಜೊತೆಗಾರ್ತಿ ಹಾಗೂ ಹೆಣ್ಣಿನ ಲೈಂಗಿಕ ಅಂಗವನ್ನು ಪ್ರತಿನಿಧಿಸಿದಳು.—1 ಅರಸು 18:19.
ದೇವಸ್ಥಾನ ವೇಶ್ಯಾವಾಟಿಕೆ ಮತ್ತು ಮಕ್ಕಳ ಆಹುತಿ ಬಾಳನ ಆರಾಧನೆಯ ಪ್ರಮುಖ ಅಂಶಗಳಾಗಿದ್ದವು. (1 ಅರಸು 14:23, 24; 2 ಪೂರ್ವಕಾಲವೃತ್ತಾಂತ 28:2, 3) ಬೈಬಲ್ ಮತ್ತು ಪ್ರಾಕ್ತನಶಾಸ್ತ್ರ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಕಾನಾನ್ಯರ ದೇವಾಲಯಗಳಲ್ಲಿ ದೇವದಾಸ ಮತ್ತು ದಾಸಿಯರು (‘ಪುನೀತ’ ಸ್ತ್ರೀಪುರುಷರು) ಇದ್ದರು ಮತ್ತು ಅಲ್ಲಿ ಎಲ್ಲ ರೀತಿಯ ಕಾಮಕ್ರೀಡೆಗಳ ವೈಪರೀತ್ಯಗಳು ನಡೆಸಲ್ಪಟ್ಟವು. ಈ ಸಂಸ್ಕಾರಗಳು ಯಾವುದೊ ವಿಧದಲ್ಲಿ ಬೆಳೆಗಳ ಮತ್ತು ದನಕರುಗಳ ಅಭಿವೃದ್ಧಿಯನ್ನು ಉಂಟುಮಾಡಿದವೆಂದು [ಕಾನಾನ್ಯರು] ನಂಬಿದರು.” ಇದು ಕೇವಲ ಅವರ ಧಾರ್ಮಿಕ ಸಮರ್ಥನೆಯಾಗಿತ್ತಾದರೂ, ವಾಸ್ತವದಲ್ಲಿ ಇಂತಹ ಅನೈತಿಕತೆಯು ಆರಾಧಕರ ದೈಹಿಕ ಇಚ್ಛೆಗಳನ್ನು ಈಡೇರಿಸಿತು. ಹಾಗಾದರೆ, ಬಾಳನು ಇಸ್ರಾಯೇಲ್ಯರನ್ನು ಹೇಗೆ ಸೆಳೆದನು?
ಏಕೆ ಅಷ್ಟು ಆಕರ್ಷಕ?
ತಮ್ಮಿಂದ ಹೆಚ್ಚನ್ನು ಕೇಳಿಕೊಳ್ಳದ ಒಂದು ಧರ್ಮವನ್ನು ಅನುಸರಿಸಲು ಅನೇಕ ಇಸ್ರಾಯೇಲ್ಯರು ಇಷ್ಟಪಟ್ಟರು. ಏಕೆಂದರೆ ಬಾಳನ ಆರಾಧನೆಯಲ್ಲಿ, ಅವರು ಧರ್ಮಶಾಸ್ತ್ರದ ಕೆಲವೊಂದು ವಿಧಿಗಳನ್ನು, ಅಂದರೆ ಸಬ್ಬತ್ತಿನ ಆಚರಣೆ ಹಾಗೂ ಅನೇಕ ನೈತಿಕ ನಿರ್ಬಂಧಗಳನ್ನು ಪಾಲಿಸಬೇಕಾಗಿರಲಿಲ್ಲ. (ಯಾಜಕಕಾಂಡ 18:2-30; ಧರ್ಮೋಪದೇಶಕಾಂಡ 5:1-3) ಬಹುಶಃ ಕಾನಾನ್ಯರ ಭೌತಿಕ ಏಳಿಗೆಯನ್ನು ಕಂಡವರು, ಬಾಳನನ್ನು ಪ್ರಸನ್ನಗೊಳಿಸುವುದರ ಅಗತ್ಯವನ್ನು ಮನಗಂಡರು.
ಪೂಜಾಸ್ಥಳಗಳೆಂದು ಕರೆಯಲ್ಪಟ್ಟ ಕಾನಾನ್ಯರ ಮಂದಿರಗಳು, ಬೆಟ್ಟಸಾಲಿನ ಕಾಡುಗಳಲ್ಲಿ ನೆಲೆಸಿದ್ದವು. ಈ ಕಾಡುಗಳು, ಅಲ್ಲಿ ನಡೆಯುತ್ತಿದ್ದ ಫಲಶಕ್ತಿಯ ಸಂಸ್ಕಾರಗಳಿಗೆ ಮನಮೋಹಕ ಹಿನ್ನೆಲೆಯನ್ನು ರೂಪಿಸಿದ್ದಿರಬೇಕು. ಕಾನಾನ್ಯರ ಪೂಜಾಸ್ಥಳಗಳನ್ನು ಸಂದರ್ಶಿಸುವುದರಲ್ಲಿ ಮಾತ್ರ ತೃಪ್ತಿಪಡೆಯದೆ, ಇಸ್ರಾಯೇಲ್ಯರು ತಮ್ಮ ಸ್ವಂತ ಪೂಜಾಸ್ಥಳಗಳನ್ನು ಕಟ್ಟಿದರು. “ಪಿತೃಗಳಂತೆಯೇ ಅವರೂ ತಮಗೋಸ್ಕರ ಪೂಜಾಸ್ಥಳಗಳನ್ನು ಏರ್ಪಡಿಸಿಕೊಂಡರು. ಪ್ರತಿಯೊಂದು ಮರದ ಕೆಳಗೆಯೂ ಕಲ್ಲಿನ ಕಂಬಗಳನ್ನೂ ಅಶೇರವಿಗ್ರಹಸ್ತಂಭಗಳನ್ನೂ ನಿಲ್ಲಿಸಿದರು.”—1 ಅರಸು 14:23; ಹೋಶೇಯ 4:13.
ಪ್ರಪ್ರಥಮವಾಗಿ, ಬಾಳನ ಆರಾಧನೆಯು ದೈಹಿಕ ಇಚ್ಛೆಗಳಿಗೆ ಆಕರ್ಷಕವಾಗಿತ್ತು. (ಗಲಾತ್ಯ 5:19-21) ಅಲ್ಲಿ ನಡೆಸಲ್ಪಟ್ಟ ಇಂದ್ರಿಯ ಸುಖಭೋಗಗಳು, ಕೇವಲ ಯಥೇಷ್ಟ ಬೆಳೆ ಹಾಗೂ ದನಕರುಗಳಿಗಾಗಿರುವ ಬಯಕೆಯನ್ನು ಪ್ರತಿಬಿಂಬಿಸಲಿಲ್ಲ, ಬದಲಿಗೆ ಲೈಂಗಿಕತೆಯನ್ನು ಮಹಿಮೆಪಡಿಸಲಾಯಿತು. ಇದು ಭೂಮಿಯಿಂದ ಅಗೆದುತೆಗೆಯಲಾದ ಅನೇಕ ಶಿಲಾಪ್ರತಿಮೆಗಳಿಂದ ವ್ಯಕ್ತವಾಗುತ್ತದೆ. ಇವು ಲೈಂಗಿಕ ಉದ್ರೇಕವನ್ನು ಚಿತ್ರಿಸುವ ಕಾಮಾಸಕ್ತ ವೈಶಿಷ್ಟ್ಯಗಳನ್ನು ತೋರ್ಪಡಿಸುತ್ತವೆ. ಔತಣ, ನೃತ್ಯ, ಮತ್ತು ಸಂಗೀತಗಳು ಈ ಕಾಮುಕ ವರ್ತನೆಗೆ ಇಂಬುಕೊಟ್ಟವು.
ಶರತ್ಕಾಲದ ಆದಿಭಾಗದಲ್ಲಿ ನಡೆಯುವ ಸಾಂಕೇತಿಕರೂಪದ ಈ ದೃಶ್ಯವನ್ನು ನಾವು ಕಲ್ಪಿಸಿಕೊಳ್ಳಬಹುದು. ಕಣ್ಮನತಣಿಸುವ ನೈಸರ್ಗಿಕ ಹಿನ್ನೆಲೆಯಲ್ಲಿ, ಮೃಷ್ಟಾನ್ನಭೋಜನವನ್ನು ಹೊಟ್ಟೆ ತುಂಬ ತಿಂದ ಮತ್ತು ದ್ರಾಕ್ಷಾರಸದಿಂದ ಮತ್ತೇರಿದ ಆರಾಧಕರು ಕುಣಿಯುತ್ತಾರೆ. ಫಲಶಕ್ತಿಗಾಗಿ ನಡೆಸಲ್ಪಡುವ ಈ ನೃತ್ಯವು, ಬಾಳನನ್ನು ಅವನ ಬೇಸಗೆಯ ನಿಷ್ಕ್ರಿಯತೆಯಿಂದ ಎಬ್ಬಿಸಿ, ಮಳೆಯಿಂದ ಭೂಮಿಯನ್ನು ಆಶೀರ್ವದಿಸುವಂತೆ ಮಾಡುವ ಉದ್ದೇಶವನ್ನು ಹೊಂದಿದೆ. ಆರಾಧಕರು ಲಿಂಗ ಸಂಭ್ತಗಳು ಹಾಗೂ ಪವಿತ್ರಕಂಬಗಳ ಸುತ್ತಲೂ ಕುಣಿಯುತ್ತಾರೆ. ಅವರ ಅಭಿನಯಗಳು, ವಿಶೇಷವಾಗಿ ದೇವದಾಸದಾಸಿಯರ ಅಭಿನಯಗಳು ಕಾಮಾಸಕ್ತವೂ ವಿಷಯಲಂಪಟವೂ ಆಗಿರುತ್ತವೆ. ಸಂಗೀತವು ಮತ್ತು ಅಲ್ಲಿ ನೆರೆದು ಬಂದ ಜನರು ನೃತ್ಯಗಾರರನ್ನು ಹುರಿದುಂಬಿಸುತ್ತಾರೆ. ಮತ್ತು ಬಹುಶಃ ಈ ನೃತ್ಯದ ಪರಾಕಾಷ್ಠೆಯಲ್ಲಿ, ನೃತ್ಯಗಾರರು ಅನೈತಿಕ ಸಂಬಂಧಗಳಿಗಾಗಿ ಬಾಳನ ಮಂದಿರದಲ್ಲಿರುವ ಕೋಣೆಗಳೆಡೆಗೆ ಸಾಗುತ್ತಾರೆ.—ಅರಣ್ಯಕಾಂಡ 25:1, 2; ಹೋಲಿಸಿ ವಿಮೋಚನಕಾಂಡ 32:6, 17-19; ಆಮೋಸ 2:8.
ಅವರು ನಂಬಿಕೆಯಿಂದಲ್ಲ, ನೋಟದಿಂದ ನಡೆದರು
ಇಂತಹ ಇಂದ್ರಿಯ ಸುಖಭೋಗದ ಆರಾಧನಾ ಕ್ರಮವು ಅನೇಕರನ್ನು ಆಕರ್ಷಿಸಿತಾದರೂ, ಭಯವು ಕೂಡ ಇಸ್ರಾಯೇಲ್ಯರನ್ನು ಬಾಳನ ಆರಾಧನೆಗೆ ಪ್ರೇರಿಸಿತು. ಇಸ್ರಾಯೇಲ್ಯರು ಯೆಹೋವನಲ್ಲಿನ ತಮ್ಮ ನಂಬಿಕೆಯನ್ನು ಕಳೆದುಕೊಂಡಂತೆ, ಮೃತರ ಭಯ, ಭವಿಷ್ಯತ್ತಿನ ಭಯ, ಮತ್ತು ನಿಗೂಢವಾದದ ಆಕರ್ಷಣೆ, ಅವರನ್ನು ಪ್ರೇತವ್ಯವಹಾರಕ್ಕೆ ನಡೆಸಿತು. ಅದರಲ್ಲಿ ತುಂಬ ನೀತಿಭ್ರಷ್ಟ ಸಂಸ್ಕಾರಗಳು ಒಳಗೂಡಿದ್ದವು. ಕಾನಾನ್ಯರು ಪೂರ್ವಜರ ಆರಾಧನೆಯ ಒಂದು ಭಾಗದೋಪಾದಿ ಮೃತರ ಆತ್ಮವನ್ನು ಹೇಗೆ ಗೌರವಿಸಿದರು ಎಂಬುದನ್ನು ದಿ ಇಂಟರ್ನ್ಯಾಷನಲ್ ಸ್ಟಾಂಡರ್ಡ್ ಬೈಬಲ್ ಎನ್ಸೈಕ್ಲೊಪೀಡಿಯ ವರ್ಣಿಸುವುದು: “ಕುಟುಂಬದ ರುದ್ರಭೂಮಿಯಲ್ಲಿ ಇಲ್ಲವೆ ಹೂಣಿಟ್ಟ ದಿಬ್ಬಗಳ ಬಳಿ . . . ಉತ್ಸವಗಳನ್ನು ನಡೆಸಲಾಯಿತು. ಅದರಲ್ಲಿ ಕುಡಿತ ಹಾಗೂ ಲೈಂಗಿಕತೆ (ಬಹುಶಃ ಅಗಮ್ಯಗಮನವು ಸೇರಿತ್ತು) ಒಳಗೂಡಿದ್ದು, ಮೃತರು ಅದರಲ್ಲಿ ಭಾಗವಹಿಸುತ್ತಾರೆಂದು ನೆನಸಲಾಯಿತು.” ಇಂತಹ ಕೀಳ್ಮಟ್ಟದ ಪ್ರೇತವ್ಯವಹಾರಾತ್ಮಕ ಆಚರಣೆಗಳಲ್ಲಿ ಭಾಗವಹಿಸುವ ಮೂಲಕ, ಇಸ್ರಾಯೇಲ್ಯರು ತಮ್ಮ ದೇವರಾದ ಯೆಹೋವನಿಂದ ಬಹುದೂರ ಸರಿದುಬಿಟ್ಟರು.—ಧರ್ಮೋಪದೇಶಕಾಂಡ 18:9-12.
ನಂಬಿಕೆಯಿಂದಲ್ಲ ನೋಟದಿಂದ ನಡೆಯಲು ಇಷ್ಟಪಟ್ಟ ಇಸ್ರಾಯೇಲ್ಯರು, ಮೂರ್ತಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ಮತಸಂಸ್ಕಾರಗಳಿಂದಲೂ ಆಕರ್ಷಿಸಲ್ಪಟ್ಟರು. (2 ಕೊರಿಂಥ 5:7) ಯೆಹೋವನ ಅದೃಶ್ಯ ಹಸ್ತವು ನಡೆಸಿದ ಪ್ರೇಕ್ಷಣೀಯ ಅದ್ಭುತಗಳನ್ನು ನೋಡಿದ ಮೇಲೆಯೂ, ಐಗುಪ್ತವನ್ನು ಬಿಟ್ಟುಬಂದಿದ್ದ ಅನೇಕ ಇಸ್ರಾಯೇಲ್ಯರಿಗೆ ದೇವರ ಒಂದು ದೃಷ್ಟಿಗೋಚರ ಮರುಜ್ಞಾಪನವು ಬೇಕಾಯಿತು. (ವಿಮೋಚನಕಾಂಡ 32:1-4) ಅಂತೆಯೇ ಅವರ ಸಂತತಿಯವರಲ್ಲಿ ಕೆಲವರು, ಬಾಳನ ಮೂರ್ತಿಗಳಂತೆ ಕಣ್ಣಿಗೆ ಕಾಣುವಂತಹವುಗಳನ್ನೇ ಆರಾಧಿಸಲು ಇಷ್ಟಪಟ್ಟರು.—1 ಅರಸು 12:25-30.
ಯಾರು ವಿಜಯಿಯಾದರು?
ಇಸ್ರಾಯೇಲ್ಯರ ಹೃದಯಗಳನ್ನು ಸೆಳೆಯಲು ನಡೆದ ಈ ಸಂಘರ್ಷವು, ಅವರು ವಾಗ್ದತ್ತ ದೇಶವನ್ನು ಪ್ರವೇಶಿಸುವ ಸ್ವಲ್ಪ ಮುಂಚೆ, ಮೋವಾಬಿನ ಬಯಲಿನಲ್ಲಿ ಆಗಮಿಸಿದ ಸಮಯದಿಂದ ಬಾಬೆಲಿಗೆ ಗಡೀಪಾರು ಮಾಡಲ್ಪಟ್ಟ ಸಮಯದ ವರೆಗೆ, ಅಂದರೆ ಶತಮಾನಗಳ ವರೆಗೆ ಉಗ್ರವಾಗಿ ಮುಂದುವರಿಯಿತು. ಜಯಪರಾಜಯವು ತೂಗು ತೊಲೆಯಂತೆ ತೂಗಾಡಿತು. ಕೆಲವೊಮ್ಮೆ ಹೆಚ್ಚಿನ ಇಸ್ರಾಯೇಲ್ಯರು ಯೆಹೋವನಿಗೆ ನಿಷ್ಠಾವಂತರಾಗಿ ಉಳಿದರಾದರೂ, ಪದೇ ಪದೇ ಅವರು ಬಾಳನ ಕಡೆಗೆ ತಿರುಗಿದರು. ಇದಕ್ಕೆ ಮುಖ್ಯ ಕಾರಣವು, ಅವರ ಸುತ್ತಲೂ ಇದ್ದ ವಿಧರ್ಮಿಯರೊಂದಿಗಿನ ಅವರ ನಿಕಟವಾದ ಸಹವಾಸವೇ ಆಗಿತ್ತು.
ತಮ್ಮ ಮಿಲಿಟರಿ ಸೋಲಿನ ತರುವಾಯ, ಕಾನಾನ್ಯರು ಹೆಚ್ಚು ನವಿರಾದ ವಿಧಾನಗಳನ್ನು ಬಳಸಿ ಹೋರಾಡಿದರು. ಅವರು ಇಸ್ರಾಯೇಲ್ಯರೊಂದಿಗೆ ವಾಸಿಸುತ್ತಾ, ಆ ದೇಶದ ದೇವರುಗಳನ್ನು ತಮ್ಮ ವಿಜೇತರೂ ಪೂಜಿಸುವಂತೆ ಹುರಿದುಂಬಿಸಿದರು. ಆದರೆ ಗಿದ್ಯೋನ್ ಮತ್ತು ಸಮುವೇಲರಂತಹ ಧೈರ್ಯವಂತ ನ್ಯಾಯಸ್ಥಾಪಕರು ಈ ಪ್ರವೃತ್ತಿಯನ್ನು ಪ್ರತಿರೋಧಿಸಿದರು. ಸಮುವೇಲನು ಜನರನ್ನು ಪ್ರೇರಿಸಿದ್ದು: “ನೀವು ಪೂರ್ಣಮನಸ್ಸಿನಿಂದ ಯೆಹೋವನ ಕಡೆಗೆ ತಿರುಗಿಕೊಂಡಿರುವದಾದರೆ ನಿಮ್ಮ ಮಧ್ಯದಲ್ಲಿರುವ . . . ಅನ್ಯದೇವತೆಗಳನ್ನು ತೆಗೆದುಹಾಕಿ ಯೆಹೋವನ ಮೇಲೆಯೇ ಮನಸ್ಸಿಟ್ಟು ಆತನೊಬ್ಬನನ್ನೇ ಸೇವಿಸಿರಿ.” ಸ್ವಲ್ಪ ಸಮಯದ ವರೆಗೆ ಇಸ್ರಾಯೇಲ್ಯರು ಸಮುವೇಲನ ಮಾತಿಗೆ ಕಿವಿಗೊಟ್ಟು, “ಬಾಳ್ ಅಷ್ಟೋರೆತ್ ದೇವತೆಗಳನ್ನು ತೆಗೆದುಹಾಕಿ ಯೆಹೋವನೊಬ್ಬನನ್ನೇ ಸೇವಿಸತೊಡಗಿದರು.”—1 ಸಮುವೇಲ 7:3, 4; ನ್ಯಾಯಸ್ಥಾಪಕರು 6:25-27.
ಸೌಲ ಮತ್ತು ದಾವೀದರ ಆಳ್ವಿಕೆಯ ನಂತರ, ಸೊಲೊಮೋನನು ತನ್ನ ಜೀವಿತದ ಕೊನೆಯ ಕಾಲದಲ್ಲಿ ಅನ್ಯದೇವರುಗಳಿಗೆ ಯಜ್ಞಾರ್ಪಿಸತೊಡಗಿದನು. (1 ಅರಸು 11:4-8) ಇಸ್ರಾಯೇಲ್ ಮತ್ತು ಯೆಹೂದದ ಇತರ ಅರಸರೂ ಅವನ ಹೆಜ್ಜೆಯನ್ನೇ ಹಿಂಬಾಲಿಸಿ, ಬಾಳನಿಗೆ ತಲೆಬಾಗಿದರು. ಹಾಗಿದ್ದರೂ, ಎಲೀಯ, ಎಲೀಷ ಮತ್ತು ಯೋಶೀಯನಂತಹ ನಂಬಿಗಸ್ತ ಪ್ರವಾದಿಗಳು ಮತ್ತು ಅರಸರು, ಬಾಳನ ಆರಾಧನೆಯ ವಿರುದ್ಧ ಹೋರಾಡುವುದರಲ್ಲಿ ನಾಯಕತ್ವ ವಹಿಸಿಕೊಂಡರು. (2 ಪೂರ್ವಕಾಲವೃತ್ತಾಂತ 34:1-5) ಅಲ್ಲದೆ, ಇಸ್ರಾಯೇಲ್ಯ ಇತಿಹಾಸದ ಈ ಸಮಯಾವಧಿಯಲ್ಲಿ, ಯೆಹೋವನಿಗೆ ನಂಬಿಗಸ್ತರಾಗಿ ಉಳಿದ ವ್ಯಕ್ತಿಗಳೂ ಇದ್ದರು. ಅಹಾಬ್ ಮತ್ತು ಈಜೆಬೆಲಳ ಸಮಯದಲ್ಲಿ ಬಾಳನ ಆರಾಧನೆಯು ಅದರ ಪರಾಕಾಷ್ಠೆಯಲ್ಲಿದ್ದಾಗಲೂ, ಏಳು ಸಾವಿರ ಜನರು ‘ಬಾಳನಿಗೆ ಅಡ್ಡಬೀಳಲು’ ನಿರಾಕರಿಸಿದರು.—1 ಅರಸು 19:18.
ಯೆಹೂದ್ಯರು ಬಾಬೆಲಿನ ದೇಶಭ್ರಷ್ಟತೆಯಿಂದ ಹಿಂದಿರುಗಿದ ಮೇಲೆ, ಬಾಳನ ಆರಾಧನೆಯ ಕುರಿತಾದ ಯಾವ ಉಲ್ಲೇಖವೂ ಇಲ್ಲ. ಎಜ್ರ 6:21ರಲ್ಲಿ ಸೂಚಿಸಲ್ಪಟ್ಟವರಂತೆ, ಎಲ್ಲರು “ಇಸ್ರಾಯೇಲ್ದೇವರಾದ ಯೆಹೋವನನ್ನು ಹುಡುಕುವದಕ್ಕಾಗಿ ದೇಶನಿವಾಸಿಗಳ ಅಶುದ್ಧತ್ವವನ್ನು ತೊರೆದು”ಬಿಟ್ಟರು.
ಬಾಳನ ಆರಾಧನೆಯಿಂದ ಎಚ್ಚರಿಕೆಗಳು
ಬಾಳನ ಆರಾಧನೆಯು ಈಗ ಲೋಕ ದೃಶ್ಯದಿಂದ ಕಣ್ಮರೆಯಾಗಿರುವುದಾದರೂ, ಆ ಕಾನಾನ್ಯ ಧರ್ಮಕ್ಕೂ ಈಗಿನ ಸಮಾಜಕ್ಕೂ ಸಾಮಾನ್ಯವಾಗಿರುವ ವಿಷಯವು ಲೈಂಗಿಕತೆಯ ಮಹಿಮೆಪಡಿಸುವಿಕೆಯಾಗಿದೆ. ಅನೈತಿಕತೆಗೆ ನಡೆಸುವಂತಹ ಆಕರ್ಷಣೆಗಳು ಎಲ್ಲೆಡೆಯೂ ಇವೆ. (ಎಫೆಸ 2:2) ಪೌಲನು ಎಚ್ಚರಿಸುವುದು, “ನಾವು ಈ ಅಂಧಕಾರ ಲೋಕವನ್ನು ನಿಯಂತ್ರಿಸುವ ಅದೃಶ್ಯ ಶಕ್ತಿಯ ವಿರುದ್ಧವೂ ದುಷ್ಟತನದ ಮುಖ್ಯಕೇಂದ್ರದಿಂದ ಬರುವ ಆತ್ಮಿಕ ವ್ಯಕ್ತಿಗಳ ವಿರುದ್ಧವೂ ಹೋರಾಡುತ್ತೇವೆ.”—ಎಫೆಸ 6:12, ಫಿಲಿಪ್ಸ್.
ಸೈತಾನನ ಈ “ಅದೃಶ್ಯ ಶಕ್ತಿ”ಯು, ಆತ್ಮಿಕ ರೀತಿಯಲ್ಲಿ ಜನರನ್ನು ಗುಲಾಮರನ್ನಾಗಿ ಮಾಡಲು ಲೈಂಗಿಕ ಅನೈತಿಕತೆಯನ್ನು ಪ್ರವರ್ಧಿಸುತ್ತದೆ. (ಯೋಹಾನ 8:34) ಇಂದಿನ ಅನಿರ್ಬಂಧಿತ ಸಮಾಜದಲ್ಲಿ, ಲೈಂಗಿಕ ಸ್ವೇಚ್ಛಾಚಾರವನ್ನು ಫಲಶಕ್ತಿಯ ಸಂಸ್ಕಾರದಂತೆ ಆಚರಿಸಲಾಗುವುದಿಲ್ಲವಾದರೂ, ವೈಯಕ್ತಿಕ ತೃಪ್ತಿಯನ್ನು ಕಂಡುಕೊಳ್ಳುವ ಇಲ್ಲವೆ ಒಬ್ಬನು ತನ್ನಿಷ್ಟದಂತೆ ನಡೆದುಕೊಳ್ಳುವ ಒಂದು ವಿಧಾನವಾಗಿ ಆಚರಿಸಲ್ಪಡುತ್ತದೆ. ಮತ್ತು ಪ್ರಚಾರವು ಅಷ್ಟೇ ಪ್ರಮಾಣದಲ್ಲಿ ಪ್ರೇರಿಸುವಂತಹದ್ದಾಗಿದೆ. ಮನೋರಂಜನೆ, ಸಂಗೀತ, ಮತ್ತು ಜಾಹೀರಾತುಗಳು, ಜನರ ಮನಸ್ಸನ್ನು ಲೈಂಗಿಕ ಸಂದೇಶಗಳಿಂದ ಪೂರ್ತಿಯಾಗಿ ತುಂಬುತ್ತವೆ. ದೇವರ ಸೇವಕರು ಈ ಆಕ್ರಮಣದಿಂದ ವಿನಾಯಿತಿ ಪಡೆದಿರುವುದಿಲ್ಲ. ವಾಸ್ತವದಲ್ಲಿ, ಕ್ರೈಸ್ತ ಸಭೆಯಿಂದ ಬಹಿಷ್ಕರಿಸಲ್ಪಡುವ ವ್ಯಕ್ತಿಗಳಲ್ಲಿ ಹೆಚ್ಚಿನವರು ಇಂತಹ ನಡವಳಿಕೆಗೆ ಬಲಿಯಾದವರೇ ಆಗಿರುತ್ತಾರೆ. ಇಂತಹ ಅನೈತಿಕ ಸಂದೇಶಗಳನ್ನು ಸತತವಾಗಿ ನಿರಾಕರಿಸುವ ಮೂಲಕವೇ ಒಬ್ಬ ಕ್ರೈಸ್ತನು ನಿರ್ಮಲನಾಗಿ ಉಳಿಯಬಲ್ಲನು.—ರೋಮಾಪುರ 12:9.
ವಿಶೇಷವಾಗಿ ಯುವ ಸಾಕ್ಷಿಗಳು ಈ ಗಂಡಾಂತರಕ್ಕೆ ಒಡ್ಡಲ್ಪಟ್ಟಿದ್ದಾರೆ, ಏಕೆಂದರೆ ಅವರಿಗೆ ಆಕರ್ಷಕವಾಗಿ ತೋರುವಂತಹ ಅನೇಕ ವಿಷಯಗಳು ಲೈಂಗಿಕತೆಯೊಂದಿಗೆ ಸಂಬಂಧಿಸಲ್ಪಟ್ಟಿವೆ. ಇನ್ನೂ ಕೆಟ್ಟದಾದ ವಿಷಯವೇನೆಂದರೆ, ಅವರನ್ನು ಹುರಿದುಂಬಿಸುವ ಇತರ ಯುವ ಜನರ ಪ್ರಭಾವದಿಂದಲೂ ಅವರು ದೂರವಿರಬೇಕು. (ಹೋಲಿಸಿ ಜ್ಞಾನೋಕ್ತಿ 1:10-15.) ಉದಾಹರಣೆಗೆ, ದೊಡ್ಡ ಪಾರ್ಟಿಗಳಲ್ಲಿ ಅನೇಕರು ತೊಂದರೆಯಲ್ಲಿ ಸಿಕ್ಕಿಕೊಂಡಿದ್ದಾರೆ. ಗತಕಾಲದ ಬಾಳನ ಆರಾಧನೆಯಲ್ಲಿ ನಡೆದಂತೆ, ಸಂಗೀತ, ನೃತ್ಯ ಮತ್ತು ಲೈಂಗಿಕ ಸೆಳೆತವು, ಮತ್ತೇರಿಸುವ ಸಂಯೋಜನೆಯಾಗಿದೆ.—2 ತಿಮೊಥೆಯ 2:22.
“ಯೌವನಸ್ಥನು ತನ್ನ ನಡತೆಯನ್ನು ಶುದ್ಧಪಡಿಸಿಕೊಳ್ಳುವದು ಯಾವದರಿಂದ?” ಎಂದು ಕೀರ್ತನೆಗಾರನು ಕೇಳಿದನು. “[ಯೆಹೋವನ] ವಾಕ್ಯವನ್ನು ಗಮನಿಸಿ ನಡೆಯುವದರಿಂದಲೇ.” (ಕೀರ್ತನೆ 119:9) ಇಸ್ರಾಯೇಲ್ಯರು ಕಾನಾನ್ಯರೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಳ್ಳಬಾರದೆಂದು ದೇವರ ಧರ್ಮಶಾಸ್ತ್ರವು ಆಜ್ಞಾಪಿಸಿದಂತೆಯೇ, ಬುದ್ಧಿಹೀನರ ಸಹವಾಸದಿಂದ ಬರುವ ಅಪಾಯಗಳ ಕುರಿತು ಬೈಬಲು ನಮ್ಮನ್ನು ಎಚ್ಚರಿಸುತ್ತದೆ. (1 ಕೊರಿಂಥ 15:32, 33) ಇಂದ್ರಿಯಸುಖವನ್ನು ನೀಡುವ ಯಾವುದೇ ಒಂದು ಕಾರ್ಯವು ಆಕರ್ಷಕವಾಗಿರಬಹುದಾದರೂ, ಅದು ನೈತಿಕವಾಗಿ ಹಾನಿಕಾರಕವಾಗಿದೆ ಎಂದು ಗೊತ್ತಿರುವ ಕಾರಣ ಅದನ್ನು ತಿರಸ್ಕರಿಸುವ ಒಬ್ಬ ಯುವ ಕ್ರೈಸ್ತನು ತನ್ನ ಪ್ರೌಢತೆಯನ್ನು ಪ್ರದರ್ಶಿಸುತ್ತಾನೆ. ನಂಬಿಗಸ್ತ ಎಲೀಯನಂತೆ, ಜನಪ್ರಿಯ ಅಭಿಪ್ರಾಯವು ನಮ್ಮ ಪರವಾಗಿ ತೀರ್ಮಾನಗಳನ್ನು ಮಾಡುವಂತೆ ನಾವು ಅನುಮತಿಸಬಾರದು.—1 ಅರಸು 18:21; ಹೋಲಿಸಿರಿ ಮತ್ತಾಯ 7:13, 14.
ಮತ್ತೊಂದು ಎಚ್ಚರಿಕೆಯು ನಂಬಿಕೆಯ ಕೊರತೆಗೆ, ಅಂದರೆ “ಹತ್ತಿಕೊಳ್ಳುವ ಪಾಪ”ಕ್ಕೆ ಸಂಬಂಧಿಸುತ್ತದೆ. (ಇಬ್ರಿಯ 12:1) ಅನೇಕ ಇಸ್ರಾಯೇಲ್ಯರು ಯೆಹೋವನಲ್ಲಿ ಭರವಸೆಯಿಟ್ಟರಾದರೂ, ತಮ್ಮ ಬೆಳೆಗಳನ್ನು ರಕ್ಷಿಸುವ ಮತ್ತು ಅನುದಿನದ ಅಗತ್ಯಗಳನ್ನು ಪೂರೈಸುವ ದೇವರು ಬಾಳನಾಗಿದ್ದಾನೆಂಬ ವಿಶ್ವಾಸ ಅವರಲ್ಲಿತ್ತು. ಯೆರೂಸಲೇಮಿನಲ್ಲಿದ್ದ ಯೆಹೋವನ ಆಲಯವು ತುಂಬ ದೂರವಿತ್ತೆಂದು ಮತ್ತು ಆತನ ನಿಯಮಗಳನ್ನು ಪಾಲಿಸುವುದು ಪ್ರಾಯೋಗಿಕವಾಗಿರಲಿಲ್ಲವೆಂದು ಅವರಿಗನಿಸಿತು. ಬಾಳನ ಆರಾಧನೆಯು ಬಹಳಷ್ಟು ಸರಳವೂ ಅನುಕೂಲಕರವೂ ಆಗಿತ್ತು. ಎಷ್ಟು ಅನುಕೂಲಕರವೆಂದರೆ, ಅವರು ತಮ್ಮ ಮಹಡಿಯ ಮೇಲೆಯೇ ಬಾಳನಿಗೆ ಧೂಪಹಾಕಸಾಧ್ಯವಿತ್ತು. (ಯೆರೆಮೀಯ 32:29) ಬಹುಶಃ ಕೆಲವೊಂದು ಸಂಸ್ಕಾರಗಳಲ್ಲಿ ಪಾಲ್ಗೊಳ್ಳುವ ಮೂಲಕ, ಅಥವಾ ಯೆಹೋವನ ಹೆಸರಿನಲ್ಲಿ ಬಾಳನಿಗೆ ಯಜ್ಞಾರ್ಪಣೆಗಳನ್ನು ಮಾಡುವ ಮೂಲಕ ಅವರು ಬಾಳನ ಆರಾಧನೆಯಲ್ಲಿ ಕ್ರಮೇಣ ಒಳಗೊಂಡರು.
ನಾವು ನಂಬಿಕೆಯನ್ನು ಕಳೆದುಕೊಂಡು, ಜೀವಂತ ದೇವರಿಂದ ಹೇಗೆ ನಿಧಾನವಾಗಿ ದೂರ ಸರಿಯಬಲ್ಲೆವು? (ಇಬ್ರಿಯ 3:12) ಕೂಟಗಳಿಗೆ ಮತ್ತು ಸಮ್ಮೇಳನಗಳಿಗೆ ಈ ಮೊದಲು ನಮ್ಮಲ್ಲಿದ್ದ ಗಣ್ಯತಾಭಾವವನ್ನು ನಾವು ಕ್ರಮೇಣ ಕಳೆದುಕೊಳ್ಳಸಾಧ್ಯವಿದೆ. ಅಂತಹ ಒಂದು ಮನೋಭಾವವು, ‘ಸರಿಯಾದ ಹೊತ್ತಿಗೆ’ ಯೆಹೋವನು ಒದಗಿಸುವ ಆತ್ಮಿಕ ಆಹಾರದಲ್ಲಿನ ಭರವಸೆಯ ಕೊರತೆಯನ್ನು ಪ್ರದರ್ಶಿಸುತ್ತದೆ. (ಮತ್ತಾಯ 24:45-47) ಹೀಗೆ ಬಲಹೀನಗೊಂಡ ನಾವು, ‘ಜೀವವಾಕ್ಯದ ಮೇಲಿನ ಹಿಡಿತವನ್ನು’ ಸಡಿಲಿಸಿ, ಇಲ್ಲವೆ ಪ್ರಾಪಂಚಿಕ ಬೆನ್ನಟ್ಟುವಿಕೆಗಳಿಗೆ ಅಥವಾ ಅನೈತಿಕತೆಗೆ ಮಣಿದು, ವಿಭಾಜಿತ ಹೃದಯವನ್ನೂ ವಿಕಸಿಸಿಕೊಳ್ಳಬಹುದು.—ಫಿಲಿಪ್ಪಿ 2:16; ಹೋಲಿಸಿ ಕೀರ್ತನೆ 119:113.
ನಮ್ಮ ಸಮಗ್ರತೆಯನ್ನು ಬಿಗಿಯಾಗಿ ಹಿಡಿದುಕೊಂಡಿರುವುದು
ಜನರನ್ನು ಸೆಳೆಯುವ ಪ್ರಯತ್ನದಲ್ಲಿ ಈಗಲೂ ಒಂದು ಸಂಘರ್ಷವು ನಡೆಯುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ. ನಾವು ಯೆಹೋವನಿಗೆ ನಿಷ್ಠಾವಂತರಾಗಿ ಉಳಿಯುವೆವೊ ಇಲ್ಲವೆ ಈ ಲೋಕದ ಅನೈತಿಕ ನಡತೆಯಿಂದ ತಪ್ಪುದಾರಿಗೆ ಎಳೆಯಲ್ಪಡುವೆವೊ? ಕಾನಾನ್ಯರ ಅಹಸ್ಯಕರ ಆಚರಣೆಗಳಿಂದ ಇಸ್ರಾಯೇಲ್ಯರು ಆಕರ್ಷಿತರಾದಂತೆಯೇ, ಇಂದು ಕೆಲವು ಕ್ರೈಸ್ತ ಸ್ತ್ರೀಪುರುಷರು ಲಜ್ಜಾಸ್ಪವಾದ ಕೃತ್ಯಗಳನ್ನು ಮಾಡುವಂತೆ ಸೆಳೆಯಲ್ಪಟ್ಟಿದ್ದಾರೆ.—ಹೋಲಿಸಿ ಜ್ಞಾನೋಕ್ತಿ 7:7, 21-23.
ನಾವು ಮೋಶೆಯಂತೆ ‘ಅದೃಶ್ಯನಾಗಿರುವಾತನನ್ನು ದೃಷ್ಟಿಸುವವರೋ ಎಂಬಂತೆ ದೃಢಚಿತ್ತರಾಗಿ’ರುವುದಾದರೆ, ಇಂತಹ ಒಂದು ಆತ್ಮಿಕ ಸೋಲಿನಿಂದ ದೂರವಿರಸಾಧ್ಯವಿದೆ. (ಇಬ್ರಿಯ 11:27) ಹೌದು, ನಾವು “ನಂಬಿಕೆಯನ್ನು ಕಾಪಾಡಿಕೊಳ್ಳುವದಕ್ಕೆ . . . ಹೋರಾಡ”ಬೇಕಾಗಿದೆ. (ಯೂದ 3) ಆದರೆ ದೇವರಿಗೆ ಮತ್ತು ಆತನ ತತ್ವಗಳಿಗೆ ನಿಷ್ಠಾವಂತರಾಗಿ ಉಳಿಯುವ ಮೂಲಕ, ಸುಳ್ಳಾರಾಧನೆಯು ನಿರ್ಮೂಲವಾಗುವ ಸಮಯಕ್ಕಾಗಿ ನಾವು ಎದುರುನೋಡಬಲ್ಲೆವು. ಬಾಳನ ಆರಾಧನೆಯ ಮೇಲೆ ಯೆಹೋವನ ಆರಾಧನೆಯು ಜಯಸಾಧಿಸಿದಂತೆಯೇ, ಶೀಘ್ರದಲ್ಲೇ “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು” ಎಂಬ ವಿಷಯದಲ್ಲಿ ನಾವು ಖಚಿತರಾಗಿರಬಲ್ಲೆವು.—ಯೆಶಾಯ 11:9.
[ಪುಟ 31 ರಲ್ಲಿರುವ ಚಿತ್ರ]
ಗೀಸರ್ ಪಟ್ಟಣದಲ್ಲಿ ಬಾಳನ ಆರಾಧನೆಗಾಗಿ ಉಪಯೋಗಿಸಲ್ಪಟ್ಟ ವಿಗಹ್ರಸ್ತಂಭಗಳ ಅವಶೇಷಗಳು
[ಪುಟ 28 ರಲ್ಲಿರುವ ಚಿತ್ರ ಕೃಪೆ]
Musée du Louvre, Paris