ಯೆಹೋವನು ಇಂದು ನಮ್ಮಿಂದ ಏನನ್ನು ಕೇಳಿಕೊಳ್ಳುತ್ತಾನೆ?
“ಇದಲ್ಲದೆ ಆ ಮೋಡದೊಳಗಿಂದ—ಈತನು ಪ್ರಿಯನಾಗಿರುವ ನನ್ನ ಮಗನು; ಈತನನ್ನು ನಾನು ಮೆಚ್ಚಿದ್ದೇನೆ; ಈತನ ಮಾತನ್ನು ಕೇಳಿರಿ ಎಂಬ ಆಕಾಶವಾಣಿ ಆಯಿತು.”—ಮತ್ತಾಯ 17:5.
1. ಧರ್ಮಶಾಸ್ತ್ರವು ತನ್ನ ಉದ್ದೇಶವನ್ನು ಯಾವಾಗ ಪೂರೈಸಿತು?
ಯೆಹೋವನು, ಅನೇಕ ವೈಶಿಷ್ಟ್ಯಗಳನ್ನೊಳಗೊಂಡಿದ್ದ ಧರ್ಮಶಾಸ್ತ್ರವನ್ನು ಇಸ್ರಾಯೇಲ್ ಜನಾಂಗಕ್ಕೆ ನೀಡಿದನು. ಅವುಗಳ ಕುರಿತು ಅಪೊಸ್ತಲ ಪೌಲನು ಬರೆದುದು: ಅವು “ದೇಹಕ್ಕೆ ಮಾತ್ರ ಸಂಬಂಧಪಟ್ಟ ನಿಯಮಗಳಾಗಿದ್ದು ತಿದ್ದುಪಾಟಿನ ಕಾಲದ ವರೆಗೆ ಮಾತ್ರ ನೇಮಕವಾದವು.” (ಇಬ್ರಿಯ 9:10) ಇಸ್ರಾಯೇಲ್ ಜನರ ಒಂದು ಗುಂಪು, ಯೇಸುವನ್ನು ಮೆಸ್ಸೀಯ ಇಲ್ಲವೆ ಕ್ರಿಸ್ತನೆಂಬುದಾಗಿ ಅಂಗೀಕರಿಸುವಂತೆ ಧರ್ಮಶಾಸ್ತ್ರವು ಸಹಾಯ ಮಾಡಿದಾಗ, ಅದು ತನ್ನ ಉದ್ದೇಶವನ್ನು ಪೂರೈಸಿತು. ಆದುದರಿಂದಲೇ, ಪೌಲನು ಪ್ರಕಟಿಸಿದ್ದು: “ಕ್ರಿಸ್ತನು ಧರ್ಮಶಾಸ್ತ್ರವನ್ನು ಕೊನೆಗಾಣಿಸುವವನಾಗಿದ್ದಾನೆ.”—ರೋಮಾಪುರ 10:4, NW; ಗಲಾತ್ಯ 3:19-25; 4:4, 5.
2. ಯಾರು ಧರ್ಮಶಾಸ್ತ್ರಕ್ಕೆ ಅಧೀನರಾಗಿದ್ದರು, ಮತ್ತು ಯಾವಾಗ ಅವರು ಅದರಿಂದ ಮುಕ್ತರಾದರು?
2 ಧರ್ಮಶಾಸ್ತ್ರವು ಇನ್ನು ಮುಂದೆ ನಮ್ಮನ್ನು ನಿರ್ಬಂಧಕ್ಕೊಳಪಡಿಸಲಾರದೆಂಬುದು ಇದರರ್ಥವೊ? ವಾಸ್ತವದಲ್ಲಿ, ಹೆಚ್ಚಿನ ಮಾನವಕುಲವು ಧರ್ಮಶಾಸ್ತ್ರಕ್ಕೆ ಅಧೀನವಾಗಿ ಇರಲೇ ಇಲ್ಲವೆಂಬುದನ್ನು ಕೀರ್ತನೆಗಾರನು ವಿವರಿಸುತ್ತಾನೆ: “[ಯೆಹೋವನು] ತನ್ನ ವಾಕ್ಯವನ್ನು ಯಾಕೋಬ್ಯರಿಗೆ ತಿಳಿಸುತ್ತಾನೆ; ತನ್ನ ನಿಯಮವಿಧಿಗಳನ್ನು ಇಸ್ರಾಯೇಲ್ಯರಿಗೆ ಪ್ರಕಟಿಸುತ್ತಾನೆ. ಬೇರೆ ಯಾವ ಜನಾಂಗದವರಿಗೂ ಆತನು ಹೀಗೆ ಮಾಡಲಿಲ್ಲ; ಆತನ ನ್ಯಾಯವಿಧಿಗಳನ್ನು ಅವರು ಅರಿಯರು.” (ಕೀರ್ತನೆ 147:19, 20) ಯೇಸುವಿನ ಯಜ್ಞಾರ್ಪಣೆಯ ಆಧಾರದ ಮೇಲೆ ದೇವರು ಹೊಸ ಒಡಂಬಡಿಕೆಯನ್ನು ಸ್ಥಾಪಿಸಿದಾಗ, ಧರ್ಮಶಾಸ್ತ್ರಕ್ಕೆ ವಿಧೇಯರಾಗುವ ಹಂಗು ಇಸ್ರಾಯೇಲ್ಯರಿಗೂ ಇರಲಿಲ್ಲ. (ಗಲಾತ್ಯ 3:13; ಎಫೆಸ 2:15; ಕೊಲೊಸ್ಸೆ 2:13, 14, 16) ಹಾಗಾದರೆ, ಧರ್ಮಶಾಸ್ತ್ರವು ಇನ್ನು ಮುಂದೆ ನಮ್ಮನ್ನು ನಿರ್ಬಂಧಕ್ಕೊಳಪಡಿಸದಿದ್ದಲ್ಲಿ, ಯೆಹೋವನನ್ನು ಇಂದು ಸೇವಿಸಲಿಚ್ಛಿಸುವ ಜನರಿಂದ ಆತನು ಯಾವ ವಿಷಯವನ್ನು ಕೇಳಿಕೊಳ್ಳುತ್ತಾನೆ?
ಯೆಹೋವನು ಕೇಳಿಕೊಳ್ಳುವಂತಹ ವಿಷಯ
3, 4. (ಎ) ಇಂದು ಮೂಲಭೂತವಾಗಿ ಯೆಹೋವನು ನಮ್ಮಿಂದ ಏನನ್ನು ಕೇಳಿಕೊಳ್ಳುತ್ತಾನೆ? (ಬಿ) ನಾವು ಏಕೆ ಯೇಸುವಿನ ಹೆಜ್ಜೆಜಾಡಿನಲ್ಲಿ ನಿಕಟವಾಗಿ ನಡೆಯಬೇಕು?
3 ಯೇಸುವಿನ ಶುಶ್ರೂಷೆಯ ಅಂತಿಮ ವರ್ಷದಲ್ಲಿ, ಅವನ ಅಪೊಸ್ತಲರಾದ ಪೇತ್ರ, ಯಾಕೋಬ ಮತ್ತು ಯೋಹಾನರು ಅವನೊಂದಿಗೆ ಸೇರಿ ಒಂದು ದೊಡ್ಡ ಪರ್ವತಕ್ಕೆ, ಬಹುಶಃ ಹೆರ್ಮೋನ್ ಪರ್ವತದ ದಿಣ್ಣೆಗೆ ಹೋದರು. ಅಲ್ಲಿ ಅವರು ಯೇಸುವಿನ ಮಹಾ ಮಹಿಮೆಯ ಪ್ರವಾದನಾತ್ಮಕ ದರ್ಶನವನ್ನು ಕಂಡು, ಸ್ವತಃ ದೇವರ ಧ್ವನಿಯನ್ನೇ ಕೇಳಿಸಿಕೊಂಡರು. ಅದು ಪ್ರಕಟಿಸಿದ್ದು: “ಈತನು ಪ್ರಿಯನಾಗಿರುವ ನನ್ನ ಮಗನು; ಈತನನ್ನು ನಾನು ಮೆಚ್ಚಿದ್ದೇನೆ; ಈತನ ಮಾತನ್ನು ಕೇಳಿರಿ.” (ಮತ್ತಾಯ 17:1-5) ಮುಖ್ಯವಾಗಿ, ಯೆಹೋವನು ನಮ್ಮಿಂದ ಇದನ್ನೇ ಕೇಳಿಕೊಳ್ಳುತ್ತಾನೆ. ಅಂದರೆ, ತನ್ನ ಮಗನಿಗೆ ಕಿವಿಗೊಟ್ಟು, ಅವನ ಮಾದರಿ ಹಾಗೂ ಬೋಧನೆಗಳನ್ನು ಅನುಸರಿಸಬೇಕೆಂಬುದೇ. (ಮತ್ತಾಯ 16:24) ಹೀಗೆ, ಅಪೊಸ್ತಲ ಪೇತ್ರನು ಬರೆದುದು: “ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.”—1 ಪೇತ್ರ 2:21.
4 ನಾವು ಯೇಸುವಿನ ಹೆಜ್ಜೆಯ ಜಾಡಿನಲ್ಲಿ ಒತ್ತಾಗಿ ಏಕೆ ನಡೆಯಬೇಕು? ಏಕೆಂದರೆ, ಯೇಸುವನ್ನು ಅನುಕರಿಸುವ ಮೂಲಕ, ನಾವು ಯೆಹೋವ ದೇವರನ್ನು ಅನುಕರಿಸುತ್ತೇವೆ. ಯೇಸು ಈ ಭೂಮಿಗೆ ಬರುವ ಮುಂಚೆ, ಸ್ವರ್ಗದಲ್ಲಿ ತಂದೆಯೊಂದಿಗೆ ಅಗಣಿತ ವರ್ಷಗಳನ್ನು ಕಳೆದಿರುವುದರಿಂದ, ಅವನಿಗೆ ತಂದೆಯ ಗಾಢಪರಿಚಯವಿತ್ತು. (ಜ್ಞಾನೋಕ್ತಿ 8:22-31; ಯೋಹಾನ 8:23; 17:5; ಕೊಲೊಸ್ಸೆ 1:15-17) ಮತ್ತು ಯೇಸು ಭೂಮಿಯಲ್ಲಿದ್ದಾಗ, ನಿಷ್ಠೆಯಿಂದ ತನ್ನ ತಂದೆಯನ್ನು ಪ್ರತಿಬಿಂಬಿಸಿದನು. ಅವನು ವಿವರಿಸಿದ್ದು: ‘ತಂದೆಯು ನನಗೆ ಬೋಧಿಸಿದ ಹಾಗೆ ಅದನ್ನೆಲ್ಲಾ ಮಾತಾಡಿದೆನು.’ ವಾಸ್ತವದಲ್ಲಿ, ಯೇಸು ಯೆಹೋವನನ್ನು ಎಷ್ಟು ನಿಖರವಾಗಿ ಅನುಕರಿಸಿದನೆಂದರೆ, “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ” ಎಂಬುದಾಗಿ ಅವನು ಹೇಳಶಕ್ತನಾದನು.—ಯೋಹಾನ 8:28; 14:9.
5. ಕ್ರೈಸ್ತರು ಯಾವ ನಿಯಮದ ಕೆಳಗಿದ್ದಾರೆ, ಮತ್ತು ಆ ನಿಯಮವು ಯಾವಾಗ ಜಾರಿಗೆ ಬಂತು?
5 ಯೇಸುವಿಗೆ ಕಿವಿಗೊಡುವುದರಲ್ಲಿ ಮತ್ತು ಅವನನ್ನು ಅನುಕರಿಸುವುದರಲ್ಲಿ ಏನೆಲ್ಲ ಒಳಗೂಡಿದೆ? ಅದು ಧರ್ಮಶಾಸ್ತ್ರಕ್ಕೆ ಅಧೀನರಾಗಿರುವುದನ್ನು ಅರ್ಥೈಸುತ್ತದೊ? ಪೌಲನು ಬರೆದುದು: “ನಾನು ನಿಯಮಗಳಿಗೆ ಅಧೀನನಲ್ಲ.” ಇಲ್ಲಿ ಅವನು ಇಸ್ರಾಯೇಲ್ ಜನಾಂಗದೊಂದಿಗೆ ಮಾಡಲಾದ ನಿಯಮದೊಡಂಬಡಿಕೆಯನ್ನು, ಅಂದರೆ “ಹಳೇ ಒಡಂಬಡಿಕೆ”ಯನ್ನು ಸೂಚಿಸಿ ಮಾತಾಡುತ್ತಿದ್ದನು. ಆದರೆ, ತಾನು “ಕ್ರಿಸ್ತನ ನಿಯಮಕ್ಕೊಳಗಾದವನೇ” ಎಂಬುದಾಗಿ ಪೌಲನು ಅಂಗೀಕರಿಸುತ್ತಾನೆ. (1 ಕೊರಿಂಥ 9:20, 21; 2 ಕೊರಿಂಥ 3:14) ಹಳೆಯ ನಿಯಮದೊಡಂಬಡಿಕೆಯ ಅಂತ್ಯದೊಂದಿಗೆ, “ಹೊಸ ಒಡಂಬಡಿಕೆಯು” ಜಾರಿಗೆ ಬಂತು. ಇದರಲ್ಲಿ, ಯೆಹೋವನ ಆಧುನಿಕ ದಿನದ ಸೇವಕರೆಲ್ಲರೂ ವಿಧೇಯರಾಗಲೇಬೇಕಾದ ‘ಕ್ರಿಸ್ತನ ನಿಯಮವು’ ಸೇರಿತ್ತು.—ಲೂಕ 22:20; ಗಲಾತ್ಯ 6:2; ಇಬ್ರಿಯ 8:7-13.
6. “ಕ್ರಿಸ್ತನ ನಿಯಮವನ್ನು” ಯಾವ ರೀತಿಯಲ್ಲಿ ವರ್ಣಿಸಬಹುದು, ಮತ್ತು ನಾವು ಅದಕ್ಕೆ ವಿಧೇಯರಾಗುವುದು ಹೇಗೆ?
6 ಯೆಹೋವನು ಹಳೆಯ ನಿಯಮದೊಡಂಬಡಿಕೆಗೆ ಒಂದು ನಿಯಮಾವಳಿಯ ರೂಪಕೊಟ್ಟು, ಅದನ್ನು ಹಲವಾರು ವರ್ಗಗಳಾಗಿ ವಿಂಗಡಿಸಿದಂತೆ “ಕ್ರಿಸ್ತನ ನಿಯಮವನ್ನು” ವಿಂಗಡಿಸಲಿಲ್ಲ. ಕ್ರಿಸ್ತನ ಹಿಂಬಾಲಕರು ಅನುಸರಿಸುವ ಈ ಹೊಸ ನಿಯಮದಲ್ಲಿ ವಿಸ್ತೃತವಾದ ವಿಧಿಗಳ ಪಟ್ಟಿಯಿರುವುದಿಲ್ಲ. ಆದರೆ, ಯೆಹೋವನು ತನ್ನ ವಾಕ್ಯದಲ್ಲಿ, ತನ್ನ ಮಗನ ಜೀವನ ಹಾಗೂ ಬೋಧನೆಗಳನ್ನೊಳಗೊಂಡ ನಾಲ್ಕು ಸಮಗ್ರವಾದ ವೃತ್ತಾಂತಗಳನ್ನು ಸಂರಕ್ಷಿಸಿಟ್ಟಿದ್ದಾನೆ. ಅಲ್ಲದೆ, ವೈಯಕ್ತಿಕ ನಡವಳಿಕೆ, ಸಭೆಗೆ ಸಂಬಂಧಿಸಿದ ವಿಷಯಗಳು, ಕುಟುಂಬ ವೃತ್ತದೊಳಗೆ ನಡತೆ, ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಲಿಖಿತ ಉಪದೇಶಗಳನ್ನು ಒದಗಿಸುವಂತೆ, ಯೇಸುವಿನ ಆರಂಭದ ಹಿಂಬಾಲಕರಲ್ಲಿ ಕೆಲವರನ್ನು ದೇವರು ಪ್ರೇರಿಸಿದನು. (1 ಕೊರಿಂಥ 6:18; 14:26-35; ಎಫೆಸ 5:21-33; ಇಬ್ರಿಯ 10:24, 25) ನಾವು ನಮ್ಮ ಜೀವಿತಗಳನ್ನು ಯೇಸು ಕ್ರಿಸ್ತನ ಮಾದರಿ ಮತ್ತು ಬೋಧನೆಗಳಿಗೆ ತಕ್ಕಂತೆ ಹೊಂದಿಸಿಕೊಂಡು, ಪ್ರಥಮ ಶತಮಾನದ ಪ್ರೇರಿತ ಬೈಬಲ್ ಬರಹಗಾರರ ಸಲಹೆಗೆ ಕಿವಿಗೊಡುವುದಾದರೆ, ನಾವು “ಕ್ರಿಸ್ತನ ನಿಯಮ”ಕ್ಕೆ ವಿಧೇಯರಾಗುತ್ತಿದ್ದೇವೆ. ಇಂದು ಯೆಹೋವನು ತನ್ನ ಸೇವಕರಿಂದ ಇದನ್ನೇ ಕೇಳಿಕೊಳ್ಳುತ್ತಾನೆ.
ಪ್ರೀತಿಯ ಮಹತ್ವ
7. ಅಪೊಸ್ತಲರೊಂದಿಗೆ ಯೇಸು ತನ್ನ ಕೊನೆಯ ಪಸ್ಕವನ್ನು ಆಚರಿಸಿದ ಸಂದರ್ಭದಲ್ಲಿ, ತನ್ನ ನಿಯಮದ ಸಾರವನ್ನು ಹೇಗೆ ಒತ್ತಿಹೇಳಿದನು?
7 ಧರ್ಮಶಾಸ್ತ್ರದಲ್ಲಿ ಪ್ರೀತಿಯು ಒಂದು ಪ್ರಮುಖ ಪಾತ್ರವನ್ನು ವಹಿಸಿತ್ತು, ಆದರೆ ಈಗ ಅದು ಕ್ರಿಸ್ತನ ನಿಯಮದ ತಿರುಳು ಅಥವಾ ಸಾರವೇ ಆಗಿದೆ. ಸಾ.ಶ. 33ರ ಪಸ್ಕವನ್ನು ಆಚರಿಸಲು ಯೇಸು ತನ್ನ ಅಪೊಸ್ತಲರೊಂದಿಗೆ ಕೂಡಿಬಂದಾಗ ಈ ನಿಜಾಂಶವನ್ನೇ ಒತ್ತಿಹೇಳಿದನು. ಆ ರಾತ್ರಿ ಯೇಸು ತನ್ನ ಹೃತ್ಪೂರ್ವಕವಾದ ಸಂಭಾಷಣೆಯಲ್ಲಿ, ಸುಮಾರು 28 ಬಾರಿ ಪ್ರೀತಿಯ ಕುರಿತು ಮಾತಾಡಿದನೆಂದು ಅಪೊಸ್ತಲ ಯೋಹಾನನ ವೃತ್ತಾಂತವು ತೋರಿಸುತ್ತದೆ. ಇದರಿಂದ ಯೇಸುವಿನ ಧರ್ಮಶಾಸ್ತ್ರದ ಮುಖ್ಯ ತಿರುಳು ಇಲ್ಲವೆ ಸಾರವು ಏನೆಂಬುದನ್ನು ಅವನ ಅಪೊಸ್ತಲರು ಮನಗಾಣುವಂತಾಯಿತು. ಅರ್ಥಗರ್ಭಿತವಾಗಿಯೇ, ಯೋಹಾನನು ಆ ಬಹು ಮುಖ್ಯವಾದ ಸಂಜೆಯ ಘಟನಾವಳಿಗಳನ್ನು ವರದಿಸುತ್ತಾ, ಹೀಗೆ ಆರಂಭಿಸಿದನು: “ಪಸ್ಕಹಬ್ಬದ ಮುಂದೆ ಯೇಸು ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ಕಾಲ ಬಂತೆಂದು ತಿಳುಕೊಂಡು ಲೋಕದಲ್ಲಿರುವ ತನ್ನವರನ್ನು ಪ್ರೀತಿಸಿ ಪರಿಪೂರ್ಣವಾಗಿ ಅವರನ್ನು ಪ್ರೀತಿಸುತ್ತಾ ಬಂದನು.”—ಯೋಹಾನ 13:1.
8. (ಎ) ಅಪೊಸ್ತಲರ ಮಧ್ಯೆ ಬಗೆಹರಿಸಲಾಗದಂತಹ ಜಗಳವು ನಡೆಯುತ್ತಾ ಇತ್ತೆಂಬುದನ್ನು ಯಾವುದು ಸೂಚಿಸಿತು? (ಬಿ) ಯೇಸು ತನ್ನ ಅಪೊಸ್ತಲರಿಗೆ ದೈನ್ಯಭಾವದ ವಿಷಯವಾಗಿ ಒಂದು ಪಾಠವನ್ನು ಹೇಗೆ ಕಲಿಸಿದನು?
8 ಯೇಸು ತನ್ನ ಅಪೊಸ್ತಲರಲ್ಲಿದ್ದ ಅಧಿಕಾರದಾಹ ಮತ್ತು ಸ್ಥಾನಮಾನದ ಅತ್ಯಾಶೆಯನ್ನು ಹೋಗಲಾಡಿಸಲು ಬಹಳವಾಗಿ ಪ್ರಯತ್ನಿಸಿದನಾದರೂ, ಸಾಕಷ್ಟು ಯಶಸ್ಸನ್ನು ಗಳಿಸಲಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಅವನು ಅವರನ್ನು ಪ್ರೀತಿಸಿದನು. ಯೆರೂಸಲೇಮಿಗೆ ಆಗಮಿಸುವ ಹಲವಾರು ತಿಂಗಳುಗಳ ಮುಂಚೆಯೇ, ಅವರು ‘[ತಮ್ಮಲ್ಲಿ] ಯಾವನು ಹೆಚ್ಚಿನವನೆಂದು ವಾಗ್ವಾದಮಾಡಿಕೊಂಡಿದ್ದರು.’ ಮತ್ತು ಪಸ್ಕದ ಆಚರಣೆಗಾಗಿ ಅವರು ನಗರವನ್ನು ಇನ್ನೇನು ಪ್ರವೇಶಿಸಲಿದ್ದಾಗ, ಸ್ಥಾನಮಾನದ ಕುರಿತಾದ ವಾಗ್ವಾದವು ಪುನಃ ತಲೆಯೆತ್ತಿತು. (ಮಾರ್ಕ 9:33-37; 10:35-45) ಅಪೊಸ್ತಲರೆಲ್ಲರೂ ಮೇಲಿನ ಕೋಣೆಯನ್ನು ಪ್ರವೇಶಿಸಿ, ಒಟ್ಟಾಗಿ ಆಚರಿಸಲಿದ್ದ ಕೊನೆಯ ಪಸ್ಕದ ಸಂದರ್ಭದಲ್ಲಿ ನಡೆದ ಘಟನೆಯಿಂದ, ಇದೊಂದು ಬಗೆಹರಿಸಲಾಗದ ಸಮಸ್ಯೆಯೆಂಬುದು ಬೇಗನೆ ತಿಳಿದುಬಂತು. ಆ ಸಂದರ್ಭದಲ್ಲಿ, ಇತರರ ಪಾದಗಳನ್ನು ತೊಳೆಯುವ ಆತಿಥ್ಯದ ಸಾಂಪ್ರದಾಯಿಕ ಸೇವೆಯನ್ನು ಸಲ್ಲಿಸಲು ಯಾರೂ ಮುಂದೆ ಬರಲಿಲ್ಲ. ಅವರಿಗೆ ದೈನ್ಯಭಾವದ ಒಂದು ಪಾಠವನ್ನು ಕಲಿಸುವ ಉದ್ದೇಶದಿಂದ, ಯೇಸು ತಾನೇ ಅವರ ಪಾದಗಳನ್ನು ತೊಳೆದನು.—ಯೋಹಾನ 13:2-15; 1 ತಿಮೊಥೆಯ 5:9, 10.
9. ಕೊನೆಯ ಪಸ್ಕದ ಸಮಯದಲ್ಲಿ ಎದ್ದಂತಹ ಸನ್ನಿವೇಶವನ್ನು ಯೇಸು ಹೇಗೆ ನಿಭಾಯಿಸಿದನು?
9 ಆ ಪಾಠವನ್ನು ನೀಡಿಯಾದ ಮೇಲೆಯೂ, ಯೇಸು ಪಸ್ಕವನ್ನು ಮುಗಿಸಿ ತನ್ನ ಸನ್ನಿಹಿತವಾದ ಮರಣದ ಜ್ಞಾಪಕಾಚರಣೆಯನ್ನು ಸ್ಥಾಪಿಸಿದ ಬಳಿಕ ಏನು ಸಂಭವಿಸಿತೆಂಬುದನ್ನು ಗಮನಿಸಿರಿ. ಲೂಕನ ಸುವಾರ್ತಾ ವೃತ್ತಾಂತವು ಹೇಳುವುದು: “ಇದಲ್ಲದೆ ತಮ್ಮಲ್ಲಿ ಯಾವನು ಹೆಚ್ಚಿನವನೆನಿಸಿಕೊಳ್ಳುವವನು ಎಂಬ ವಿಷಯದಲ್ಲಿ ಅವರೊಳಗೆ ಚರ್ಚೆ ಹುಟ್ಟಿತು.” ಯೇಸು ಅಪೊಸ್ತಲರ ಮೇಲೆ ಕೋಪಗೊಂಡು ಅವರನ್ನು ಬೈಯುವ ಬದಲು, ತಾವು ಈ ಲೋಕದ ಅಧಿಕಾರದಾಹಿ ಪ್ರಭುಗಳಿಗಿಂತ ಭಿನ್ನರಾಗಿರುವ ಅಗತ್ಯದ ಕುರಿತು ಸ್ನೇಹಭಾವದಿಂದ ಅವರಿಗೆ ಸಲಹೆ ನೀಡಿದನು. (ಲೂಕ 22:24-27) ತರುವಾಯ, ಕ್ರಿಸ್ತನ ನಿಯಮದ ಮೂಲೆಗಲ್ಲು ಎಂಬುದಾಗಿ ಕರೆಯಬಹುದಾದ ಆಜ್ಞೆಯನ್ನು ನೀಡುತ್ತಾ ಅವನಂದದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು.”—ಯೋಹಾನ 13:34.
10. ಯೇಸು ತನ್ನ ಶಿಷ್ಯರಿಗೆ ಯಾವ ಆಜ್ಞೆಯನ್ನಿತ್ತನು, ಮತ್ತು ಅದು ಏನನ್ನು ಒಳಗೊಂಡಿತು?
10 ತದನಂತರ, ಈ ಕ್ರಿಸ್ತಸದೃಶ ಪ್ರೀತಿಯು ಎಷ್ಟು ವ್ಯಾಪಕವಾಗಿರಬೇಕೆಂಬುದನ್ನು ಯೇಸು ಆ ಸಂಜೆ ಸ್ಪಷ್ಟಗೊಳಿಸಿದನು. ಅವನಂದದ್ದು: “ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನಾನು ಕೊಡುವ ಆಜ್ಞೆಯಾಗಿದೆ. ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ.” (ಯೋಹಾನ 15:12, 13) ಸಂದರ್ಭವು ಅಗತ್ಯಪಡಿಸುವಲ್ಲಿ, ತನ್ನ ಹಿಂಬಾಲಕರು ಜೊತೆ ವಿಶ್ವಾಸಿಗಳಿಗಾಗಿ ಪ್ರಾಣವನ್ನೂ ಕೊಡಲು ಸಿದ್ಧರಾಗಿರಬೇಕೆಂದು ಯೇಸು ಹೇಳುತ್ತಿದ್ದನೊ? ಈ ಘಟನೆಯ ಪ್ರತ್ಯಕ್ಷಸಾಕ್ಷಿಯಾಗಿದ್ದ ಯೋಹಾನನ ಅಭಿಪ್ರಾಯವು ಹೌದೆಂದಾಗಿತ್ತು. ಅವನು ತದನಂತರ ಬರೆದುದು: “ಕ್ರಿಸ್ತನು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟದರಲ್ಲಿಯೇ ಪ್ರೀತಿ ಇಂಥದೆಂದು ನಮಗೆ ತಿಳಿದು ಬಂದದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ.”—1 ಯೋಹಾನ 3:16.
11. (ಎ) ನಾವು ಕ್ರಿಸ್ತನ ನಿಯಮವನ್ನು ಹೇಗೆ ನೆರವೇರಿಸುತ್ತೇವೆ? (ಬಿ) ಯಾವ ಮಾದರಿಯನ್ನು ಯೇಸು ಒದಗಿಸಿದನು?
11 ಆದುದರಿಂದ, ನಾವು ಕ್ರಿಸ್ತನ ನಿಯಮವನ್ನು ನೆರವೇರಿಸಬೇಕಾದರೆ, ಅವನ ಬಗ್ಗೆ ಇತರರಿಗೆ ಕೇವಲ ಕಲಿಸುವುದಕ್ಕಿಂತ ಹೆಚ್ಚಿನದ್ದನ್ನು ಮಾಡಬೇಕು. ನಾವು ಯೇಸುವಿನಂತೆ ಜೀವಿಸಿ, ನಡೆಯಬೇಕು. ಯೇಸು ತನ್ನ ಉಪದೇಶಗಳಲ್ಲಿ ಸುಂದರವಾದ, ಮನಮುಟ್ಟುವ ಮಾತುಗಳನ್ನು ಉಪಯೋಗಿಸಿದನೆಂಬುದು ನಿಜ. ಆದರೆ, ಅವನು ತನ್ನ ಮಾದರಿಯ ಮೂಲಕವೂ ಕಲಿಸಿದನು. ಯೇಸು ಈ ಮೊದಲು ಸ್ವರ್ಗದಲ್ಲಿ ಒಬ್ಬ ಶಕ್ತಿಶಾಲಿ ಆತ್ಮ ಜೀವಿಯಾಗಿ ವಾಸಿಸಿದ್ದರೂ, ಭೂಮಿಯಲ್ಲಿ ತನ್ನ ತಂದೆಯ ಚಿತ್ತವನ್ನು ನೆರವೇರಿಸಲು ಮತ್ತು ನಾವು ಹೇಗೆ ಜೀವಿಸಬೇಕೆಂಬುದನ್ನು ತೋರಿಸಿಕೊಡಲು, ತನಗೆ ದೊರೆತ ಅವಕಾಶವನ್ನು ಉಪಯೋಗಿಸಿಕೊಂಡನು. ಅವನು ದೀನನೂ, ದಯಾಪರನೂ, ಮತ್ತು ಸಹಾನುಭೂತಿಯುಳ್ಳವನೂ ಆಗಿದ್ದು, ಕುಗ್ಗಿಹೋದವರಿಗೂ ಪೀಡಿತರಿಗೂ ಸಹಾಯ ಮಾಡಿದನು. (ಮತ್ತಾಯ 11:28-30; 20:28; ಫಿಲಿಪ್ಪಿ 2:5-8; 1 ಯೋಹಾನ 3:8) ಮತ್ತು ಯೇಸು ತನ್ನ ಹಿಂಬಾಲಕರನ್ನು ಪ್ರೀತಿಸಿದ ಪ್ರಕಾರ, ಅವರೂ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ಯೇಸು ಅವರನ್ನು ಪ್ರೇರೇಪಿಸಿದನು.
12. ಕ್ರಿಸ್ತನ ನಿಯಮವು, ಯೆಹೋವನನ್ನು ಪ್ರೀತಿಸುವ ಅಗತ್ಯವನ್ನು ಕಡೆಗಣಿಸುವುದಿಲ್ಲವೆಂದು ಏಕೆ ಹೇಳಸಾಧ್ಯವಿದೆ?
12 ಯೆಹೋವನನ್ನು ಪ್ರೀತಿಸಬೇಕೆಂಬ ಧರ್ಮಶಾಸ್ತ್ರದ ಅತ್ಯಂತ ಮಹಾ ಆಜ್ಞೆಗೆ ಕ್ರಿಸ್ತನ ನಿಯಮದಲ್ಲಿ ಯಾವ ಸ್ಥಾನವಿದೆ? (ಮತ್ತಾಯ 22:37, 38; ಗಲಾತ್ಯ 6:2) ಎರಡನೆಯ ಸ್ಥಾನವೊ? ಖಂಡಿತವಾಗಿಯೂ ಇಲ್ಲ! ಯೆಹೋವನಿಗಾಗಿ ಮತ್ತು ನಮ್ಮ ಜೊತೆ ಕ್ರೈಸ್ತರಿಗಾಗಿ ಇರುವ ಪ್ರೀತಿಯು ಬೇರ್ಪಡಿಸಲಾರದ ರೀತಿಯಲ್ಲಿ ಜೋಡಿಸಲ್ಪಟ್ಟಿವೆ. ತನ್ನ ಸಹೋದರನನ್ನು ಪ್ರೀತಿಸದೆ ಒಬ್ಬನು ಯೆಹೋವನನ್ನು ನಿಜವಾಗಿಯೂ ಪ್ರೀತಿಸಸಾಧ್ಯವಿಲ್ಲ. ಏಕೆಂದರೆ, ಅಪೊಸ್ತಲ ಯೋಹಾನನು ಬರೆದುದು: “ಒಬ್ಬನು ತಾನು ದೇವರನ್ನು ಪ್ರೀತಿಸುತ್ತೇನೆಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗಿದ್ದಾನೆ. ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಪ್ರೀತಿಸಲಾರನು.”—1 ಯೋಹಾನ 4:20; ಹೋಲಿಸಿ 1 ಯೋಹಾನ 3:17, 18.
13. ಯೇಸುವಿನ ಹೊಸ ಆಜ್ಞೆಗೆ ಶಿಷ್ಯರು ತೋರಿಸಿದ ವಿಧೇಯತೆಯ ಪರಿಣಾಮವು ಏನಾಗಿತ್ತು?
13 ಯೇಸು ತನ್ನ ಶಿಷ್ಯರಿಗೆ ಒಂದು ಹೊಸ ಆಜ್ಞೆಯನ್ನು ಕೊಟ್ಟು, ತಾನು ಅವರನ್ನು ಪ್ರೀತಿಸಿದ ಪ್ರಕಾರ ಅವರೂ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ಹೇಳಿದಾಗ, ಅದು ಬೀರಲಿದ್ದ ಪರಿಣಾಮವನ್ನು ಅವನು ವರ್ಣಿಸಿದನು. “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು” ಎಂದು ಅವನು ಹೇಳಿದನು. (ಯೋಹಾನ 13:35) ಯೇಸು ಮೃತಪಟ್ಟು ಸುಮಾರು ನೂರಕ್ಕಿಂತಲೂ ಹೆಚ್ಚು ವರ್ಷಗಳಾನಂತರ ಜೀವಿಸಿದ ಟೆರ್ಟಲಿಯನ್ಗನುಸಾರ, ಆದಿ ಕ್ರೈಸ್ತರಲ್ಲಿದ್ದ ಸಹೋದರ ಪ್ರೀತಿಯು, ಯೇಸು ತಿಳಿಸಿದ್ದ ಪರಿಣಾಮವನ್ನೇ ಬೀರಿತು. ಕ್ರಿಸ್ತನ ಹಿಂಬಾಲಕರ ಕುರಿತು, ‘ನೋಡಿ, ಅವರು ಹೇಗೆ ಒಬ್ಬರನ್ನೊಬ್ಬರು ಪ್ರೀತಿಸಿ, ಒಬ್ಬರಿನ್ನೊಬ್ಬರಿಗಾಗಿ ಸಾಯಲೂ ಸಿದ್ಧರಾಗಿದ್ದಾರೆಂದು’ ಕ್ರೈಸ್ತೇತರರು ಹೇಳಿಕೊಳ್ಳುತ್ತಿದ್ದುದ್ದನ್ನು ಟೆರ್ಟಲಿಯನ್ ಉಲ್ಲೇಖಿಸುತ್ತಾನೆ. ‘ಯೇಸುವಿನ ಶಿಷ್ಯರಲ್ಲಿ ನಾನೂ ಒಬ್ಬನೆಂದು ರುಜುಪಡಿಸುವಂತಹ ಪ್ರೀತಿಯನ್ನು ನನ್ನ ಜೊತೆ ಕ್ರೈಸ್ತರ ಕಡೆಗೆ ತೋರಿಸುತ್ತೇನೊ?’ ಎಂಬ ಪ್ರಶ್ನೆಯನ್ನು ನಾವು ಸ್ವತಃ ಕೇಳಿಕೊಳ್ಳಬಹುದು.
ನಮ್ಮ ಪ್ರೀತಿಯನ್ನು ನಾವು ರುಜುಪಡಿಸುವ ವಿಧ
14, 15. ಕ್ರಿಸ್ತನ ನಿಯಮಕ್ಕೆ ವಿಧೇಯರಾಗುವುದನ್ನು ಯಾವುದು ಕಷ್ಟಕರವಾಗಿ ಮಾಡಬಹುದು, ಆದರೆ ವಿಧೇಯರಾಗುವಂತೆ ಯಾವುದು ಸಹಾಯ ಮಾಡಬಲ್ಲದು?
14 ಯೆಹೋವನ ಸೇವಕರು ಕ್ರಿಸ್ತಸದೃಶ ಪ್ರೀತಿಯನ್ನು ತೋರಿಸಬೇಕಾದದ್ದು ಅತ್ಯಾವಶ್ಯಕವಾಗಿದೆ. ಆದರೆ, ಸ್ವಾರ್ಥಪರ ಗುಣಗಳನ್ನು ವ್ಯಕ್ತಪಡಿಸುವ ಜೊತೆ ಕ್ರೈಸ್ತರನ್ನು ಪ್ರೀತಿಸುವುದು ಕಷ್ಟಕರವೆಂದು ನಿಮಗನಿಸುತ್ತದೊ? ನಾವು ಈಗಾಗಲೇ ನೋಡಿರುವಂತೆ, ಅಪೊಸ್ತಲರು ಸಹ ವಾಗ್ವಾದಮಾಡಿ, ತಮ್ಮ ಸ್ವಂತ ಸ್ಥಾನಮಾನಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದರು. (ಮತ್ತಾಯ 20:20-24) ಗಲಾತ್ಯದವರು ಸಹ ತಮ್ಮೊಳಗೆ ಕಚ್ಚಾಡಿಕೊಂಡರು. ನೆರೆಯವನ ಪ್ರೀತಿಯು ತಾನೇ ಧರ್ಮಶಾಸ್ತ್ರವನ್ನು ನೆರವೇರಿಸುವುದೆಂದು ಸೂಚಿಸಿ ಹೇಳಿದ ಮೇಲೆ, ಪೌಲನು ಅವರಿಗೆ ಎಚ್ಚರಿಕೆ ನೀಡಿದ್ದು: “ಆದರೆ ನೀವು ಒಬ್ಬರನ್ನೊಬ್ಬರು ಕಚ್ಚಿ ಹರಕೊಂಡು ನುಂಗುವವರಾದರೆ ಒಬ್ಬರಿಂದೊಬ್ಬರು ನಾಶವಾದೀರಿ, ನೋಡಿರಿ.” ಶರೀರಭಾವದ ಕರ್ಮಗಳು ಹಾಗೂ ದೇವರಾತ್ಮದ ಫಲಗಳ ನಡುವೆ ಭೇದಕಲ್ಪಿಸುತ್ತಾ, ಪೌಲನು ಈ ಬುದ್ಧಿವಾದವನ್ನು ಕೂಡಿಸಿದನು: ನಾವು “ಅಹಂಕಾರಿಗಳೂ ಒಬ್ಬರನ್ನೊಬ್ಬರು ಕೆಣಕುವವರೂ ಒಬ್ಬರ ಮೇಲೊಬ್ಬರು ಮತ್ಸರವುಳ್ಳವರೂ ಆಗದೆ ಇರೋಣ.” ಬದಲಿಗೆ, ‘ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳುತ್ತಾ, ಹೀಗೆ ಕ್ರಿಸ್ತನ ನಿಯಮವನ್ನು ನೆರವೇರಿಸುವ’ ಜನರಾಗಿ ಇರೋಣವೆಂದು ಅಪೊಸ್ತಲನು ನಮ್ಮನ್ನು ಪ್ರೇರಿಸುತ್ತಾನೆ.—ಗಲಾತ್ಯ 5:14–6:2.
15 ಕ್ರಿಸ್ತನ ನಿಯಮಕ್ಕೆ ವಿಧೇಯರಾಗುವಂತೆ ಕೇಳಿಕೊಳ್ಳುವ ಮೂಲಕ, ದೇವರು ನಮ್ಮಿಂದ ತೀರ ಹೆಚ್ಚನ್ನು ಕೇಳಿಕೊಳ್ಳುತ್ತಿದ್ದಾನೊ? ಚುಚ್ಚುಮಾತುಗಳಿಂದ ನಮ್ಮನ್ನು ಘಾಸಿಗೊಳಿಸಿ, ಭಾವನಾತ್ಮಕವಾಗಿ ನಮಗೆ ಹಾನಿಯನ್ನು ಉಂಟುಮಾಡಿರುವವರ ಕಡೆಗೆ ದಯೆಯಿಂದ ವರ್ತಿಸುವುದು ಕಷ್ಟಕರವಾಗಿರಬಹುದಾದರೂ, ನಾವು “ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿ . . . ಪ್ರೀತಿಯಲ್ಲಿ ನಡೆದು”ಕೊಳ್ಳುವ ಹಂಗಿನಲ್ಲಿದ್ದೇವೆ. (ಎಫೆಸ 5:1, 2) ‘ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದರಲ್ಲಿ . . . ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ’ ದೇವರ ಮಾದರಿಯನ್ನು ನಾವು ಸದಾ ಅನುಸರಿಸುವವರಾಗಿರಬೇಕು. (ರೋಮಾಪುರ 5:8) ನಮ್ಮನ್ನು ದುರುಪಚರಿಸಿದವರನ್ನು ಸೇರಿಸಿ, ಇತರರಿಗೆ ಸಹಾಯ ಮಾಡಲು ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವ ಮೂಲಕ, ನಾವು ದೇವರನ್ನು ಅನುಕರಿಸುತ್ತಾ ಕ್ರಿಸ್ತನ ನಿಯಮಕ್ಕೆ ವಿಧೇಯರಾಗುತ್ತಿದ್ದೇವೆ ಎಂಬ ಸಂತೃಪ್ತಭಾವನೆಯನ್ನು ಅನುಭವಿಸುವವರಾಗುವೆವು.
16. ನಾವು ದೇವರಿಗಾಗಿ ಮತ್ತು ಕ್ರಿಸ್ತನಿಗಾಗಿರುವ ನಮ್ಮ ಪ್ರೀತಿಯನ್ನು ಹೇಗೆ ರುಜುಪಡಿಸಸಾಧ್ಯವಿದೆ?
16 ನಾವು ಬರಿಯ ಬಾಯಿಮಾತಿನಿಂದಲ್ಲ, ಬದಲಿಗೆ ಕ್ರಿಯೆಗಳಿಂದ ನಮ್ಮ ಪ್ರೀತಿಯ ಪ್ರಮಾಣವನ್ನು ನೀಡುತ್ತೇವೆಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಒಮ್ಮೆ ಯೇಸುವಿಗೆ ಸಹ, ದೇವರ ಚಿತ್ತದ ಒಂದು ಅಂಶಕ್ಕನುಗುಣವಾಗಿ ನಡೆದುಕೊಳ್ಳುವುದು ತುಂಬ ಕಷ್ಟಕರವಾಗಿತ್ತು, ಏಕೆಂದರೆ ಅದರಲ್ಲಿ ಅನೇಕ ವಿಷಯಗಳು ಸೇರಿದ್ದವು. ಅವನು ಬೇಡಿಕೊಂಡದ್ದು: “ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು.” ಆದರೆ, ಬೇಗನೆ ಅವನು ಕೂಡಿಸಿ ಹೇಳಿದ್ದು: “ಹೇಗೂ ನನ್ನ ಚಿತ್ತವಲ್ಲ, ನಿನ್ನ ಚಿತ್ತವೇ ಆಗಲಿ.” (ಲೂಕ 22:42) ಯೇಸು ಬಹಳಷ್ಟು ಕಷ್ಟಾನುಭವಿಸಿ, ದೇವರ ಚಿತ್ತವನ್ನು ಮಾಡಿದನು. (ಇಬ್ರಿಯ 5:7, 8) ವಿಧೇಯತೆಯು, ನಮ್ಮ ಪ್ರೀತಿಯ ಪ್ರಮಾಣಗಳಲ್ಲಿ ಒಂದಾಗಿದ್ದು, ನಾವು ದೇವರ ಮಾರ್ಗವನ್ನೇ ಅತ್ಯುತ್ತಮವಾದ ಮಾರ್ಗವಾಗಿ ಗ್ರಹಿಸುತ್ತೇವೆಂಬುದನ್ನು ಅದು ತೋರಿಸಿಕೊಡುತ್ತದೆ. ಬೈಬಲು ಹೇಳುವುದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ.” (1 ಯೋಹಾನ 5:3) ಮತ್ತು “ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವಿರಿ” ಎಂಬುದಾಗಿ ಯೇಸು ತನ್ನ ಅಪೊಸ್ತಲರಿಗೆ ಹೇಳಿದನು.—ಯೋಹಾನ 14:15.
17. ಯೇಸು ತನ್ನ ಹಿಂಬಾಲಕರಿಗೆ ಯಾವ ವಿಶೇಷ ಆಜ್ಞೆಯನ್ನಿತ್ತನು, ಮತ್ತು ಇಂದು ಅದು ನಮಗೆ ಅನ್ವಯಿಸುತ್ತದೆಂದು ನಾವು ಹೇಗೆ ಬಲ್ಲೆವು?
17 ತನ್ನ ಹಿಂಬಾಲಕರು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಆಜ್ಞೆಯ ಜೊತೆಗೆ, ಯಾವ ವಿಶೇಷವಾದ ಆಜ್ಞೆಯನ್ನು ಯೇಸು ಅವರಿಗೆ ಕೊಟ್ಟನು? ಅವರಿಗೆ ತರಬೇತಿ ನೀಡಿದ್ದಂತಹ ಸಾರುವ ಕೆಲಸವನ್ನು ಮಾಡುವಂತೆ ಅವನು ಅವರಿಗೆ ಆಜ್ಞೆಯಿತ್ತನು. ಪೇತ್ರನು ಹೇಳಿದ್ದು: “ಆತನೇ . . . ಜನರಿಗೆ ಸಾರಿ ಸಾಕ್ಷಿಹೇಳಬೇಕೆಂದು . . . ನಮಗೆ ಅಪ್ಪಣೆಕೊಟ್ಟನು.” (ಅ. ಕೃತ್ಯಗಳು 10:42) ಯೇಸು ನಿರ್ದಿಷ್ಟವಾಗಿ ಆಜ್ಞೆಯಿತ್ತದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19, 20; ಅ. ಕೃತ್ಯಗಳು 1:8) ಇಂತಹ ಉಪದೇಶಗಳು, “ಅಂತ್ಯಕಾಲ”ದಲ್ಲಿ ಜೀವಿಸುತ್ತಿರುವ ಅವನ ಹಿಂಬಾಲಕರಿಗೂ ಅನ್ವಯಿಸುವವೆಂದು ಯೇಸು ಹೇಳಿದನು. ಅವನಂದದ್ದು: “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ದಾನಿಯೇಲ 12:4; ಮತ್ತಾಯ 24:14) ನಾವು ಸಾರಬೇಕೆಂಬುದು ದೇವರ ಚಿತ್ತವಾಗಿದೆ. ಆದರೂ, ಈ ಕೆಲಸವನ್ನು ನಾವು ಮಾಡಬೇಕೆಂದು ಕೇಳಿಕೊಳ್ಳುವ ಮೂಲಕ, ದೇವರು ನಮ್ಮಿಂದ ತೀರ ಹೆಚ್ಚನ್ನು ಕೇಳಿಕೊಳ್ಳುತ್ತಿರುವನೆಂದು ಕೆಲವರು ನೆನಸಬಹುದು. ಅವರ ಆಲೋಚನೆಯು ಸರಿಯಾಗಿದೆಯೊ?
ಅದು ಕಷ್ಟಕರವಾಗಿ ತೋರಬಹುದಾದ ಕಾರಣ
18. ಯೆಹೋವನು ಕೇಳಿಕೊಳ್ಳುವ ವಿಷಯಕ್ಕಾಗಿ ನಾವು ಕಷ್ಟಾನುಭವಿಸುವಾಗ, ಯಾವ ವಿಷಯವನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು?
18 ನಾವು ಈಗಾಗಲೇ ನೋಡಿರುವಂತೆ, ಜನರು ಯೆಹೋವನ ವಿವಿಧ ಆವಶ್ಯಕತೆಗಳಿಗೆ ಹೊಂದಿಕೊಂಡು ನಡೆಯುವಂತೆ ಆತನು ಆದಿಯಿಂದಲೂ ಕೇಳಿಕೊಂಡಿದ್ದಾನೆ. ಅವರಿಂದ ಕೇಳಿಕೊಳ್ಳಲ್ಪಟ್ಟ ಸಂಗತಿಗಳು ವೈವಿಧ್ಯಮಯವಾಗಿದ್ದಂತೆಯೇ, ಅವರು ಅನುಭವಿಸಿದ ಸಂಕಷ್ಟಗಳು ಸಹ ವೈವಿಧ್ಯಮಯವಾಗಿದ್ದವು. ದೇವರ ಪ್ರಿಯ ಪುತ್ರನು ಅತ್ಯಂತ ಕಷ್ಟಕರವಾದ ಪರೀಕ್ಷೆಗಳನ್ನು ತಾಳಿಕೊಂಡನಲ್ಲದೆ, ದೇವರು ಕೇಳಿಕೊಂಡದ್ದನ್ನು ಮಾಡಿದುದಕ್ಕಾಗಿ ಅತ್ಯಂತ ಕ್ರೂರವಾದ ವಿಧದಲ್ಲಿ ಕೊಲ್ಲಲ್ಪಟ್ಟನು. ಯೆಹೋವನು ನಮ್ಮಿಂದ ಕೇಳಿಕೊಳ್ಳುವ ವಿಷಯಗಳಿಗಾಗಿ ನಾವು ಕಷ್ಟಾನುಭವಿಸುವಾಗ, ನಮ್ಮ ಪರೀಕ್ಷೆಗಳಿಗೆ ಆತನೇ ಜವಾಬ್ದಾರನಾಗಿದ್ದಾನೆ ಎಂದು ನಾವು ನೆನಸಬಾರದು. (ಯೋಹಾನ 15:18-20; ಯಾಕೋಬ 1:13-15) ಸೈತಾನನ ದಂಗೆಕೋರತನವು ಪಾಪ, ಕಷ್ಟಾನುಭವ, ಮತ್ತು ಮರಣವನ್ನು ತಂದಿದೆ, ಮತ್ತು ಯೆಹೋವನು ತನ್ನ ಸೇವಕರಿಂದ ಕೇಳಿಕೊಳ್ಳುವಂತಹ ವಿಷಯಗಳನ್ನು ಅವರು ನಡೆಸಿಕೊಡುವುದು ಬಹಳ ಕಠಿನವಾಗಿ ಮಾಡುವ ಸನ್ನಿವೇಶಗಳನ್ನೂ ಅವನೇ ಸೃಷ್ಟಿಸುತ್ತಾನೆ.—ಯೋಬ 1:6-19; 2:1-8.
19. ದೇವರು ತನ್ನ ಮಗನ ಮೂಲಕ ನಮ್ಮಿಂದ ಕೇಳಿಕೊಳ್ಳುವುದನ್ನು ಮಾಡುವುದು ಏಕೆ ಒಂದು ಸುಯೋಗವಾಗಿದೆ?
19 ಎಲ್ಲ ಮಾನವ ಕಷ್ಟಾನುಭವಕ್ಕೆ ರಾಜ್ಯದಾಳಿಕೆಯು ಏಕೈಕ ಪರಿಹಾರವಾಗಿದೆಯೆಂಬ ಭೂವ್ಯಾಪಕ ಪ್ರಕಟನೆಯನ್ನು, ಈ ಅಂತ್ಯಕಾಲದಲ್ಲಿ ತನ್ನ ಸೇವಕರು ಮಾಡುವಂತೆ ಯೆಹೋವನು ತನ್ನ ಮಗನ ಮೂಲಕ ನಿರ್ದೇಶಿಸಿದ್ದಾನೆ. ದೇವರ ಈ ಸರಕಾರವು, ಭೂಮಿಯಲ್ಲಿರುವ ಎಲ್ಲ ಸಮಸ್ಯೆಗಳನ್ನು, ಅಂದರೆ ಯುದ್ಧ, ಪಾತಕ, ಬಡತನ, ವೃದ್ಧಾಪ್ಯ, ಅನಾರೋಗ್ಯ, ಮರಣ, ಮುಂತಾದವುಗಳನ್ನು ಸಂಪೂರ್ಣವಾಗಿ ತೊಡೆದುಹಾಕುವುದು. ಈ ರಾಜ್ಯವು ಒಂದು ಮಹಿಮಾಭರಿತ ಭೂಪ್ರಮೋದವನವನ್ನು ಸಹ ತರುವುದು. ಅದರಲ್ಲಿ ಮೃತರು ಪುನರುತ್ಥಾನಗೊಳಿಸಲ್ಪಡುವರು. (ಮತ್ತಾಯ 6:9, 10; ಲೂಕ 23:43; ಅ. ಕೃತ್ಯಗಳು 24:15; ಪ್ರಕಟನೆ 21:3, 4) ಇಂತಹ ವಿಷಯಗಳ ಸುವಾರ್ತೆಯನ್ನು ಸಾರುವುದು ಎಂತಹ ಒಂದು ಸುಯೋಗವಾಗಿದೆ! ಹಾಗಾದರೆ, ಯೆಹೋವನು ನಮ್ಮಿಂದ ಕೇಳಿಕೊಳ್ಳುವ ವಿಷಯದ ಕುರಿತು ಯಾವ ಸಮಸ್ಯೆಯೂ ಇರುವುದಿಲ್ಲ. ನಾವು ವಿರೋಧವನ್ನು ಎದುರಿಸುತ್ತೇವೆ, ಆದರೆ ಇದಕ್ಕೆ ಪಿಶಾಚನಾದ ಸೈತಾನನು ಮತ್ತು ಅವನ ಲೋಕದವರು ಕಾರಣರಾಗಿದ್ದಾರೆ.
20. ಪಿಶಾಚನು ಒಡ್ಡುವ ಯಾವುದೇ ಸವಾಲನ್ನು ನಾವು ಹೇಗೆ ಎದುರಿಸಬಲ್ಲೆವು?
20 ಹಾಗಾದರೆ, ಸೈತಾನನು ಒಡ್ಡುವಂತಹ ಯಾವುದೇ ಸವಾಲನ್ನು ನಾವು ಹೇಗೆ ಯಶಸ್ವಿಕರವಾಗಿ ಎದುರಿಸಬಲ್ಲೆವು? ಈ ಮುಂದಿನ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಮೂಲಕವೇ ಆಗಿದೆ. ಆತನು ಹೇಳುವುದು: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವದು.” (ಜ್ಞಾನೋಕ್ತಿ 27:11) ಭೂಮಿಗಾಗಿದ್ದ ತನ್ನ ತಂದೆಯ ಚಿತ್ತವನ್ನು ನೆರವೇರಿಸಲಿಕ್ಕಾಗಿ, ಯೇಸು ಸ್ವರ್ಗೀಯ ಜೀವಿತದ ಭದ್ರತೆಯನ್ನು ತ್ಯಜಿಸಿಬಂದಾಗ, ಸೈತಾನನ ಕೆಣಕುನುಡಿಗೆ ಯೋಗ್ಯವಾದ ಉತ್ತರವನ್ನು ಕೊಟ್ಟನು. (ಯೆಶಾಯ 53:12; ಇಬ್ರಿಯ 10:7) ಒಬ್ಬ ಮಾನವನೋಪಾದಿ ಯೇಸು, ತಾನು ಎದುರಿಸಿದ ಪ್ರತಿಯೊಂದು ಪರೀಕ್ಷೆಯನ್ನು, ಯಾತನಾ ಕಂಭದ ಮೇಲೆ ಮರಣವನ್ನೂ ತಾಳಿಕೊಂಡನು. ನಾವು ನಮ್ಮ ಆದರ್ಶ ವ್ಯಕ್ತಿಯೋಪಾದಿ ಅವನನ್ನು ಅನುಕರಿಸುವುದಾದರೆ, ನಾವು ಸಹ ಕಷ್ಟಾನುಭವಗಳನ್ನು ತಾಳಿಕೊಂಡು, ಯೆಹೋವನು ನಮ್ಮಿಂದ ಕೇಳಿಕೊಳ್ಳುವುದನ್ನು ಮಾಡಸಾಧ್ಯವಿದೆ.—ಇಬ್ರಿಯ 12:1-3.
21. ಯೆಹೋವನು ಮತ್ತು ಆತನ ಮಗನು ತೋರಿಸಿರುವ ಪ್ರೀತಿಯ ಬಗ್ಗೆ ನಿಮಗೆ ಹೇಗನಿಸುತ್ತದೆ?
21 ದೇವರು ಮತ್ತು ಆತನ ಮಗನು ನಮಗಾಗಿ ಎಂತಹ ಪ್ರೀತಿಯನ್ನು ತೋರಿಸಿದ್ದಾರೆ! ಯೇಸುವಿನ ಯಜ್ಞದ ಕಾರಣ, ವಿಧೇಯ ಮಾನವಕುಲಕ್ಕೆ ಪ್ರಮೋದವನದಲ್ಲಿ ಸದಾಕಾಲ ಜೀವಿಸುವ ಪ್ರತೀಕ್ಷೆಯು ದೊರೆತಿದೆ. ಆದುದರಿಂದ ಯಾವ ಸಂಗತಿಯೂ ನಮ್ಮ ನಿರೀಕ್ಷೆಯನ್ನು ಅಸ್ಪಷ್ಟಗೊಳಿಸುವಂತೆ ನಾವು ಅನುಮತಿಸದಿರೋಣ. ಬದಲಿಗೆ, ನಾವು ಪೌಲನಂತೆ ಯೇಸು ಸಾಧ್ಯಗೊಳಿಸಿದ್ದನ್ನು ವೈಯಕ್ತಿಕವಾಗಿ ಹೃದಯಕ್ಕೆ ತೆಗೆದುಕೊಳ್ಳೋಣ. ಪೌಲನಂದದ್ದು: “ದೇವಕುಮಾರನು . . . ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನು ಒಪ್ಪಿಸಿಬಿಟ್ಟನು.” (ಗಲಾತ್ಯ 2:20, ಓರೆ ಅಕ್ಷರಗಳು ನಮ್ಮವು.) ಮತ್ತು ನಮ್ಮಿಂದ ಎಂದಿಗೂ ತೀರ ಹೆಚ್ಚನ್ನು ಕೇಳಿಕೊಳ್ಳದ ನಮ್ಮ ಪ್ರೀತಿಪೂರ್ಣ ದೇವರಾದ ಯೆಹೋವನಿಗೆ ನಾವು ಹೃತ್ಪೂರ್ವಕವಾದ ಕೃತಜ್ಞತೆಯನ್ನು ಸಲ್ಲಿಸೋಣ.
ನೀವು ಹೇಗೆ ಉತ್ತರಿಸುವಿರಿ?
◻ ಇಂದು ಯೆಹೋವನು ನಮ್ಮಿಂದ ಏನನ್ನು ಕೇಳಿಕೊಳ್ಳುತ್ತಾನೆ?
◻ ಕ್ರಿಸ್ತನು ತನ್ನ ಅಪೊಸ್ತಲರೊಂದಿಗೆ ಕಳೆದ ಕೊನೆಯ ಸಂಜೆಯಂದು, ಪ್ರೀತಿಯ ಮಹತ್ವವನ್ನು ಹೇಗೆ ಒತ್ತಿಹೇಳಿದನು?
◻ ನಾವು ದೇವರನ್ನು ಪ್ರೀತಿಸುತ್ತೇವೆಂದು ಹೇಗೆ ರುಜುಪಡಿಸಸಾಧ್ಯವಿದೆ?
◻ ಯೆಹೋವನು ನಮ್ಮಿಂದ ಕೇಳಿಕೊಳ್ಳುವುದನ್ನು ಮಾಡುವುದು ಏಕೆ ಒಂದು ಸುಯೋಗವಾಗಿದೆ?
[ಪುಟ 23 ರಲ್ಲಿರುವ ಚಿತ್ರ]
ಯೇಸು ತನ್ನ ಅಪೊಸ್ತಲರ ಪಾದಗಳನ್ನು ತೊಳೆಯುವ ಮೂಲಕ ಯಾವ ಪಾಠವನ್ನು ಕಲಿಸಿದನು?
[ಪುಟ 25 ರಲ್ಲಿರುವ ಚಿತ್ರ]
ವಿರೋಧದ ಎದುರಿನಲ್ಲೂ ಸುವಾರ್ತೆಯನ್ನು ಸಾರುವುದು ಒಂದು ಆನಂದಭರಿತ ಸುಯೋಗವಾಗಿದೆ