ದೇವರ ವಾಕ್ಯವನ್ನು ನೀವೆಷ್ಟು ಪ್ರೀತಿಸುತ್ತೀರಿ?
“ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ.”—ಕೀರ್ತನೆ 119:97.
1. ದೇವಭಯವುಳ್ಳ ವ್ಯಕ್ತಿಗಳು ದೇವರ ವಾಕ್ಯಕ್ಕಾಗಿರುವ ತಮ್ಮ ಪ್ರೀತಿಯನ್ನು ತೋರ್ಪಡಿಸುವ ಒಂದು ವಿಧವು ಯಾವುದಾಗಿದೆ?
ಕೋಟಿಗಟ್ಟಲೆ ಜನರ ಬಳಿ ಬೈಬಲ್ ಇದೆ. ಆದರೆ ಒಂದು ಬೈಬಲನ್ನು ಹೊಂದಿರುವುದಕ್ಕೂ ದೇವರ ವಾಕ್ಯವನ್ನು ಪ್ರೀತಿಸುವುದಕ್ಕೂ ವ್ಯತ್ಯಾಸವಿದೆ. ಒಬ್ಬ ವ್ಯಕ್ತಿಯು ದೇವರ ವಾಕ್ಯವನ್ನು ಅಪರೂಪವಾಗಿ ಓದುವುದಾದರೆ, ತಾನು ದೇವರ ವಾಕ್ಯವನ್ನು ಪ್ರೀತಿಸುತ್ತೇನೆಂದು ಅವನು ವಾದಿಸುವುದು ನ್ಯಾಯವೊ? ಖಂಡಿತವಾಗಿಯೂ ಇಲ್ಲ! ಇದಕ್ಕೆ ವ್ಯತಿರಿಕ್ತವಾಗಿ, ಈ ಹಿಂದೆ ಬೈಬಲಿಗೆ ಹೆಚ್ಚು ಮಹತ್ವವನ್ನು ಕೊಡದಿದ್ದಂತಹ ಜನರು ಈಗ ಅದನ್ನು ಪ್ರತಿ ದಿನ ಓದುತ್ತಾರೆ. ಅವರು ದೇವರ ವಾಕ್ಯವನ್ನು ಪ್ರೀತಿಸಲು ಕಲಿತುಕೊಂಡಿದ್ದಾರೆ, ಮತ್ತು ಕೀರ್ತನೆಗಾರನಂತೆ ಅವರು ಈಗ “ದಿನವೆಲ್ಲಾ” ದೇವರ ವಾಕ್ಯದ ಬಗ್ಗೆ ಧ್ಯಾನಿಸುತ್ತಾರೆ.—ಕೀರ್ತನೆ 119:97.
2. ಕಷ್ಟಕರ ಪರಿಸ್ಥಿತಿಗಳ ಕೆಳಗೆ ಯೆಹೋವನ ಸಾಕ್ಷಿಗಳಲ್ಲೊಬ್ಬರ ನಂಬಿಕೆಯು ಹೇಗೆ ಪೋಷಿಸಲ್ಪಟ್ಟಿತು?
2 ನಾಶೋ ಡೋರೀ ದೇವರ ವಾಕ್ಯವನ್ನು ಪ್ರೀತಿಸಲು ಕಲಿತು ಕೊಂಡವರಲ್ಲಿ ಒಬ್ಬರಾಗಿದ್ದರು. ತಮ್ಮ ಸ್ವದೇಶವಾದ ಅಲ್ಬೇನಿಯದಲ್ಲಿ, ತಮ್ಮ ಜೊತೆ ವಿಶ್ವಾಸಿಗಳೊಂದಿಗೆ ಇವರು ಯೆಹೋವನ ಸೇವೆಯಲ್ಲಿ ಅನೇಕ ದಶಕಗಳ ವರೆಗೆ ತಾಳ್ಮೆಯಿಂದ ಮುಂದುವರಿದರು. ಈ ಎಲ್ಲ ವರ್ಷಗಳಲ್ಲಿ, ಯೆಹೋವನ ಸಾಕ್ಷಿಗಳ ಕೆಲಸವು ನಿಷೇಧಿಸಲ್ಪಟ್ಟಿತ್ತು ಮತ್ತು ಈ ನಂಬಿಗಸ್ತ ಕ್ರೈಸ್ತರಿಗೆ ಬೈಬಲ್ ಸಾಹಿತ್ಯವು ಸಿಗುತ್ತಿರಲಿಲ್ಲ. ಆದರೂ, ಸಹೋದರ ಡೋರೀಯವರ ನಂಬಿಕೆಯು ತುಂಬ ಬಲವಾಗಿತ್ತು. ಹೇಗೆ? “ಒಂದು ದಿನಕ್ಕೆ ಕಡಿಮೆಪಕ್ಷ ಒಂದು ತಾಸಾದರೂ ಬೈಬಲನ್ನು ಓದುವುದು ನನ್ನ ಗುರಿಯಾಗಿತ್ತು, ಮತ್ತು ನನ್ನ ದೃಷ್ಟಿಯು ಕಡಿಮೆಯಾಗುವುದಕ್ಕೆ ಮುಂಚೆ, ಅಂದರೆ ಸುಮಾರು 60 ವರ್ಷ ನಾನು ಇದನ್ನು ಬಿಡದೆ ಮಾಡಿದ್ದೇನೆ” ಎಂದು ಅವರು ಹೇಳಿದರು. ಇತ್ತೀಚಿನ ವರೆಗೆ, ಅಲ್ಬೇನಿಯನ್ ಭಾಷೆಯಲ್ಲಿ ಇಡೀ ಬೈಬಲು ಲಭ್ಯವಿರಲಿಲ್ಲ. ಆದರೆ ಚಿಕ್ಕವರಿದ್ದಾಗ ಡೋರೀ ಗ್ರೀಕ್ ಭಾಷೆಯನ್ನು ಕಲಿತಿದ್ದರು, ಆದುದರಿಂದ ಗ್ರೀಕ್ ಭಾಷೆಯಲ್ಲಿ ಅವರು ಬೈಬಲನ್ನು ಓದುತ್ತಿದ್ದರು. ಅನೇಕಾನೇಕ ಪರೀಕ್ಷೆಗಳ ಸಮಯದಲ್ಲಿ, ಕ್ರಮವಾದ ಬೈಬಲ್ ವಾಚನವು ಸಹೋದರ ಡೋರೀಯನ್ನು ಆತ್ಮಿಕವಾಗಿ ಪೋಷಿಸಿತು ಮತ್ತು ಅದು ನಮ್ಮನ್ನೂ ಪೋಷಿಸಬಲ್ಲದು.
ದೇವರ ವಾಕ್ಯಕ್ಕಾಗಿ “ಹಂಬಲವನ್ನು ಬೆಳೆಸಿಕೊಳ್ಳಿರಿ”
3. ಕ್ರೈಸ್ತರು ದೇವರ ವಾಕ್ಯದ ಕಡೆಗೆ ಯಾವ ಮನೋಭಾವವನ್ನು ಬೆಳೆಸಿಕೊಳ್ಳತಕ್ಕದ್ದು?
3 “ನವಜಾತ ಶಿಶುಗಳಂತೆ, ವಾಕ್ಯಕ್ಕೆ ಸೇರಿರುವ ಕಲುಷಿತಗೊಳ್ಳದ ಹಾಲಿಗಾಗಿ ಹಂಬಲವನ್ನು ಬೆಳೆಸಿಕೊಳ್ಳಿರಿ” ಎಂದು ಅಪೊಸ್ತಲ ಪೇತ್ರನು ಬರೆದನು. (1 ಪೇತ್ರ 2:2, NW) ಒಂದು ಮಗುವು ತನ್ನ ತಾಯಿಯ ಹಾಲಿಗಾಗಿ ಹಂಬಲಿಸುವಂತೆಯೇ, ತಮ್ಮ ಆತ್ಮಿಕ ಆವಶ್ಯಕತೆಯ ಪ್ರಜ್ಞೆಯುಳ್ಳವರಾಗಿರುವ ಕ್ರೈಸ್ತರು ದೇವರ ವಾಕ್ಯವನ್ನು ಓದುವುದರಲ್ಲಿ ಅತ್ಯಾನಂದವನ್ನು ಕಂಡುಕೊಳ್ಳುತ್ತಾರೆ. ನಿಮಗೂ ಹಾಗೆಯೇ ಅನಿಸುತ್ತದೊ? ಹಾಗೆ ಅನಿಸದಿರುವಲ್ಲಿ, ನಿರಾಶೆಪಡಬೇಡಿ. ನೀವು ಸಹ ದೇವರ ವಾಕ್ಯಕ್ಕಾಗಿ ಹಂಬಲವನ್ನು ಬೆಳೆಸಿಕೊಳ್ಳಸಾಧ್ಯವಿದೆ.
4. ಬೈಬಲ್ ವಾಚನವನ್ನು ದೈನಂದಿನ ಹವ್ಯಾಸವಾಗಿ ಮಾಡಿಕೊಳ್ಳುವುದರಲ್ಲಿ ಏನು ಒಳಗೂಡಿದೆ?
4 ದೇವರ ವಾಕ್ಯಕ್ಕಾಗಿ ಹಂಬಲವನ್ನು ಬೆಳೆಸಿಕೊಳ್ಳಬೇಕಾದರೆ, ಮೊದಲಾಗಿ ಬೈಬಲ್ ವಾಚನವನ್ನು ಒಂದು ಕ್ರಮವಾದ ಅಭ್ಯಾಸವಾಗಿ, ಸಾಧ್ಯವಿರುವಲ್ಲಿ ದೈನಂದಿನ ಹವ್ಯಾಸವಾಗಿ ಮಾಡಿಕೊಳ್ಳಲು ನಿಮ್ಮನ್ನು ಮಾನಸಿಕವಾಗಿ ಸಿದ್ಧಪಡಿಸಿಕೊಳ್ಳಬೇಕು. (ಅ. ಕೃತ್ಯಗಳು 17:11) ನಾಶೋ ಡೋರೀಯಂತೆ ಪ್ರತಿ ದಿನ ಬೈಬಲ್ ವಾಚನದಲ್ಲಿ ಒಂದು ತಾಸನ್ನು ಕಳೆಯುವುದು ನಿಮಗೆ ಅಸಾಧ್ಯವಾಗಿರಬಹುದು. ಆದರೆ ಪ್ರತಿ ದಿನ ದೇವರ ವಾಕ್ಯವನ್ನು ಓದಲು ಸ್ವಲ್ಪ ಸಮಯವನ್ನು ನೀವು ಬದಿಗಿರಿಸಸಾಧ್ಯವಿದೆ. ಬೈಬಲಿನ ಒಂದು ಭಾಗದ ಕುರಿತು ಮನನಮಾಡಲಿಕ್ಕಾಗಿ ಅನೇಕ ಕ್ರೈಸ್ತರು ಬೆಳಗ್ಗೆ ಬೇಗನೆ ಏಳುತ್ತಾರೆ. ದಿನವನ್ನು ಒಳ್ಳೆಯ ರೀತಿಯಲ್ಲಿ ಆರಂಭಿಸಲು ಇದಕ್ಕಿಂತಲೂ ಇನ್ನಾವ ಉತ್ತಮ ಸಂಗತಿಯು ಇರಸಾಧ್ಯವಿದೆ? ಇತರರು ಮಲಗುವುದಕ್ಕೆ ಮೊದಲು ಬೈಬಲನ್ನು ಓದುವ ಮೂಲಕ ಆ ದಿನವನ್ನು ಕೊನೆಗೊಳಿಸಲು ಇಷ್ಟಪಡುತ್ತಾರೆ. ಇನ್ನಿತರರು ತಮಗೆ ಅನುಕೂಲಕರವಾದ ಸಮಯದಲ್ಲಿ ಬೈಬಲನ್ನು ಓದುತ್ತಾರೆ. ಬೈಬಲನ್ನು ಕ್ರಮವಾಗಿ ಓದುವುದೇ ಅತಿ ಪ್ರಾಮುಖ್ಯವಾದ ಸಂಗತಿಯಾಗಿದೆ. ತದನಂತರ, ನೀವು ಓದಿರುವ ವಿಚಾರವನ್ನು ಮನನಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ದೇವರ ವಾಕ್ಯವನ್ನು ಓದಿ, ಅದರ ಕುರಿತು ಮನನಮಾಡುವುದರ ಮೂಲಕ ಪ್ರಯೋಜನಗಳನ್ನು ಪಡೆದುಕೊಂಡ ವ್ಯಕ್ತಿಗಳ ಕೆಲವು ಉದಾಹರಣೆಗಳನ್ನು ನಾವೀಗ ಪರಿಗಣಿಸೋಣ.
ದೇವರ ಧರ್ಮಶಾಸ್ತ್ರವನ್ನು ಪ್ರೀತಿಸಿದ ಕೀರ್ತನೆಗಾರ
5, 6. ಯಾರು 119ನೆಯ ಕೀರ್ತನೆಯನ್ನು ಬರೆದನೋ ಆ ಬರಹಗಾರನ ಹೆಸರು ನಮಗೆ ಗೊತ್ತಿಲ್ಲದಿರುವುದಾದರೂ, ಅವನು ಬರೆದಿರುವ ವಿಚಾರವನ್ನು ಓದಿ ಮನನಮಾಡುವಾಗ ಅವನ ಕುರಿತು ನಾವೇನನ್ನು ಕಲಿಯಬಲ್ಲೆವು?
5 ಕೀರ್ತನೆ 119ರ ಬರಹಗಾರನಿಗೆ ದೇವರ ವಾಕ್ಯದ ಕಡೆಗೆ ಆಳವಾದ ಗಣ್ಯತೆಯಿತ್ತು ಎಂಬುದು ನಿಶ್ಚಯ. ಈ ಕೀರ್ತನೆಯನ್ನು ಯಾರು ಬರೆದರು? ಇದರ ಬರಹಗಾರನು ಯಾರು ಎಂಬುದನ್ನು ಬೈಬಲು ಸೂಚಿಸುವುದಿಲ್ಲ. ಆದರೂ, ಪೂರ್ವಾಪರ ವಚನಗಳ ಸಹಾಯದಿಂದ ನಾವು ಅವನ ಕುರಿತಾದ ಕೆಲವು ವಿವರಗಳನ್ನು ತಿಳಿದುಕೊಳ್ಳಸಾಧ್ಯವಿದೆ, ಮತ್ತು ಅವನು ತನ್ನ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಅನುಭವಿಸಿದನು ಎಂಬುದು ನಮಗೆ ಗೊತ್ತಿದೆ. ಯೆಹೋವನ ಆರಾಧಕರಾಗಿರಬೇಕಾಗಿದ್ದ ಅವನ ಪರಿಚಯಸ್ಥರಲ್ಲಿ ಕೆಲವರು, ಬೈಬಲ್ ಮೂಲತತ್ವಗಳ ಬಗ್ಗೆ ಅವನಿಗಿದ್ದ ಪ್ರೀತಿಯಲ್ಲಿ ಪಾಲ್ಗೊಳ್ಳಲಿಲ್ಲ. ಹಾಗಿದ್ದರೂ, ಅವರ ಮನೋಭಾವವು, ಯಾವುದು ಸರಿಯಾಗಿತ್ತೋ ಅದನ್ನು ಮಾಡುವುದರಿಂದ ತನ್ನನ್ನು ತಡೆಯುವಂತೆ ಕೀರ್ತನೆಗಾರನು ಬಿಡಲಿಲ್ಲ. (ಕೀರ್ತನೆ 119:23) ಬೈಬಲ್ ಮಟ್ಟಗಳಿಗೆ ಅಗೌರವವನ್ನು ತೋರಿಸುವ ಜನರೊಂದಿಗೆ ನೀವು ಜೀವಿಸುತ್ತಿರುವಲ್ಲಿ ಅಥವಾ ಕೆಲಸಮಾಡುತ್ತಿರುವಲ್ಲಿ, ಕೀರ್ತನೆಗಾರನ ಸನ್ನಿವೇಶಕ್ಕೂ ನಿಮ್ಮ ಸ್ವಂತ ಸನ್ನಿವೇಶಕ್ಕೂ ಇರುವ ಹೋಲಿಕೆಗಳನ್ನು ನೀವು ಅರ್ಥಮಾಡಿಕೊಳ್ಳಸಾಧ್ಯವಿದೆ.
6 ಕೀರ್ತನೆಗಾರನು ದೇವಭಯವುಳ್ಳ ವ್ಯಕ್ತಿಯಾಗಿದ್ದನಾದರೂ, ಯಾವುದೇ ರೀತಿಯಲ್ಲಿ ಅವನು ಸ್ವನೀತಿವಂತನಾಗಿರಲಿಲ್ಲ. ಅವನು ತನ್ನ ಸ್ವಂತ ಅಪರಿಪೂರ್ಣತೆಗಳನ್ನು ಮುಚ್ಚುಮರೆಯಿಲ್ಲದೆ ಒಪ್ಪಿಕೊಂಡನು. (ಕೀರ್ತನೆ 119:5, 6, 67) ಆದರೂ, ಪಾಪವು ತನ್ನನ್ನು ನಿಯಂತ್ರಿಸುವಂತೆ ಅವನು ಬಿಡಲಿಲ್ಲ. “ಯೌವನಸ್ಥನು ತನ್ನ ನಡತೆಯನ್ನು ಶುದ್ಧಪಡಿಸಿಕೊಳ್ಳುವದು ಯಾವದರಿಂದ?” ಎಂದು ಅವನು ಪ್ರಶ್ನಿಸಿದನು. ಅನಂತರ ಅವನೇ ಉತ್ತರಿಸಿದ್ದು: “ನಿನ್ನ ವಾಕ್ಯವನ್ನು ಗಮನಿಸಿ ನಡೆಯುವದರಿಂದಲೇ.” (ಕೀರ್ತನೆ 119:9) ತದನಂತರ, ದೇವರ ವಾಕ್ಯವು ಒಳ್ಳೇದಕ್ಕಾಗಿ ಎಷ್ಟು ಬಲವಾದ ಪ್ರಚೋದಕ ಶಕ್ತಿಯಾಗಿದೆ ಎಂಬುದನ್ನು ಒತ್ತಿಹೇಳುತ್ತಾ, ಕೀರ್ತನೆಗಾರನು ಕೂಡಿಸಿ ಹೇಳಿದ್ದು: “ನಿನಗೆ ವಿರೋಧವಾಗಿ ಪಾಪಮಾಡದಂತೆ ನಿನ್ನ ನುಡಿಗಳನ್ನು ನನ್ನ ಹೃದಯದಲ್ಲಿಟ್ಟುಕೊಂಡಿದ್ದೇನೆ.” (ಕೀರ್ತನೆ 119:11) ದೇವರ ವಿರುದ್ಧ ಪಾಪಮಾಡದಂತೆ ನಮಗೆ ಸಹಾಯ ಮಾಡಸಾಧ್ಯವಿರುವ ಶಕ್ತಿಯು ಖಂಡಿತವಾಗಿಯೂ ತುಂಬ ಪ್ರಬಲವಾದದ್ದಾಗಿದೆ!
7. ವಿಶೇಷವಾಗಿ ಯುವ ಜನರು ಪ್ರತಿ ದಿನ ಬೈಬಲನ್ನು ಓದುವ ಆವಶ್ಯಕತೆಯ ಕುರಿತು ಏಕೆ ವಿಶೇಷ ಪ್ರಜ್ಞೆಯುಳ್ಳವರಾಗಿರತಕ್ಕದ್ದು?
7 ಕ್ರೈಸ್ತ ಯುವ ಜನರು ಕೀರ್ತನೆಗಾರನ ಮಾತುಗಳನ್ನು ಪರಿಗಣಿಸುವುದು ಒಳ್ಳೇದು. ಏಕೆಂದರೆ ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಯುವ ಕ್ರೈಸ್ತರು ಅತ್ಯಧಿಕ ಮಟ್ಟದಲ್ಲಿ ಆಕ್ರಮಣಕ್ಕೆ ತುತ್ತಾಗಿದ್ದಾರೆ. ಯೆಹೋವನ ಆರಾಧಕರ ನಡುವೆ ಇರುವ ಯುವ ಜನತೆಯನ್ನು ಭ್ರಷ್ಟಗೊಳಿಸುವುದು ಪಿಶಾಚನಿಗೆ ತುಂಬ ಅಚ್ಚುಮೆಚ್ಚು. ಶಾರೀರಿಕ ಬಯಕೆಗಳಿಗೆ ಬಲಿಬಿದ್ದು, ದೇವರ ನಿಯಮಗಳನ್ನು ಮುರಿಯುವಂತೆ ಯುವ ಕ್ರೈಸ್ತರನ್ನು ಪ್ರಲೋಭಿಸುವುದೇ ಸೈತಾನನ ಮುಖ್ಯ ಗುರಿಯಾಗಿದೆ. ಕೆಲವೊಮ್ಮೆ ಚಲನ ಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳು ಪಿಶಾಚನ ಆಲೋಚನೆಯನ್ನೇ ಪ್ರತಿಬಿಂಬಿಸುತ್ತವೆ. ಅಂತಹ ಕಾರ್ಯಕ್ರಮಗಳ ನಟನಟಿಯರು ತುಂಬ ಆಕರ್ಷಕವಾಗಿಯೂ ಮೋಹಕವಾಗಿಯೂ ಕಂಡುಬರುತ್ತಾರೆ; ಅವರ ನಡುವಣ ಅನೈತಿಕ ಸಂಬಂಧಗಳು ಸರ್ವಸಾಮಾನ್ಯವೋ ಎಂಬಂತೆ ಚಿತ್ರಿಸಲ್ಪಡುತ್ತವೆ. ಇದು ಯಾವ ಸಂದೇಶವನ್ನು ವ್ಯಕ್ತಪಡಿಸುತ್ತದೆ? ‘ಎಷ್ಟರ ತನಕ ಅವಿವಾಹಿತ ಸ್ತ್ರೀಪುರುಷರು ನಿಜವಾಗಿಯೂ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೋ ಅಷ್ಟರ ತನಕ ಅವರಿಬ್ಬರೂ ಲೈಂಗಿಕ ಸಂಬಂಧಗಳನ್ನು ಹೊಂದಿರುವುದರಲ್ಲಿ ತಪ್ಪೇನಿಲ್ಲ.’ ದುಃಖಕರವಾದ ಸಂಗತಿಯೇನೆಂದರೆ, ಪ್ರತಿ ವರ್ಷ ಅನೇಕ ಯುವ ಕ್ರೈಸ್ತರು ಇಂತಹ ತರ್ಕಕ್ಕೆ ಬಲಿಬೀಳುತ್ತಿದ್ದಾರೆ. ಕೆಲವರು ತಮ್ಮ ನಂಬಿಕೆಯ ಹಡಗೊಡೆತವನ್ನು ಅನುಭವಿಸುತ್ತಾರೆ. ಆದುದರಿಂದ, ಯುವ ಜನರ ಮೇಲೆ ಒತ್ತಡವು ಹೆಚ್ಚಾಗುತ್ತಿದೆ! ಆದರೆ ಈ ಒತ್ತಡವು ನಿಮ್ಮಂತಹ ಯುವ ಜನರನ್ನು ಸಂಪೂರ್ಣವಾಗಿ ದಮನಮಾಡುವಷ್ಟು ತೀವ್ರವಾಗಿದೆಯೊ? ಖಂಡಿತವಾಗಿಯೂ ಇಲ್ಲ! ಅಹಿತಕರವಾದ ಬಯಕೆಗಳನ್ನು ಜಯಿಸಲಿಕ್ಕಾಗಿ ಯೆಹೋವನು ಯುವ ಕ್ರೈಸ್ತರಿಗೆ ಒಂದು ಮಾರ್ಗವನ್ನು ಒದಗಿಸಿದ್ದಾನೆ. ‘ದೇವರ ವಾಕ್ಯಕ್ಕನುಸಾರ ಜಾಗರೂಕರಾಗಿದ್ದು, ದೇವರ ನುಡಿಗಳನ್ನು ತಮ್ಮ ಹೃದಯದಲ್ಲಿಟ್ಟುಕೊಳ್ಳುವ’ ಮೂಲಕ, ಪಿಶಾಚನು ಉಪಯೋಗಿಸಸಾಧ್ಯವಿರುವ ಯಾವುದೇ ಅಸ್ತ್ರವನ್ನು ಅವರು ಎದುರಿಸಬಲ್ಲರು. ಕ್ರಮವಾದ ವೈಯಕ್ತಿಕ ಬೈಬಲ್ ವಾಚನ ಹಾಗೂ ಮನನಮಾಡುವಿಕೆಯಲ್ಲಿ ನೀವೆಷ್ಟು ಸಮಯವನ್ನು ಕಳೆಯುತ್ತೀರಿ?
8. ಮೋಶೆಯ ಧರ್ಮಶಾಸ್ತ್ರಕ್ಕಾಗಿರುವ ನಿಮ್ಮ ಗಣ್ಯತೆಯನ್ನು ಬೆಳೆಸಿಕೊಳ್ಳಲಿಕ್ಕಾಗಿ, ಈ ಪ್ಯಾರಗ್ರಾಫ್ನಲ್ಲಿ ಕೊಡಲ್ಪಟ್ಟಿರುವ ಉದಾಹರಣೆಗಳು ನಿಮಗೆ ಹೇಗೆ ಸಹಾಯ ಮಾಡಬಲ್ಲವು?
8 ಕೀರ್ತನೆ 119ರ ಬರಹಗಾರನು ಉದ್ಗರಿಸಿದ್ದು: “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ.” (ಕೀರ್ತನೆ 119:97) ಅವನು ಯಾವ ಧರ್ಮಶಾಸ್ತ್ರದ ಬಗ್ಗೆ ಹೇಳುತ್ತಿದ್ದನು? ಮೋಶೆಯ ಧರ್ಮಶಾಸ್ತ್ರದ ನಿಯಮಾವಳಿಯನ್ನೂ ಒಳಗೊಂಡು ಯೆಹೋವನ ಪ್ರಕಟಿತ ವಾಕ್ಯದ ಬಗ್ಗೆ ಅವನು ಹೇಳುತ್ತಿದ್ದನು. ಮೇಲ್ನೋಟಕ್ಕೆ ಈ ನಿಯಮಾವಳಿಯು ಹಳೆಯಕಾಲದ್ದು ಎಂದು ನೆನಸಿ ಕೆಲವರು ಅದನ್ನು ತಿರಸ್ಕರಿಸಬಹುದು, ಅಷ್ಟುಮಾತ್ರವಲ್ಲದೆ ಇದನ್ನು ಯಾರು ಪ್ರೀತಿಸಸಾಧ್ಯವಿದೆ ಎಂದು ಅವರು ಕುತೂಹಲಪಡಬಹುದು. ಆದರೂ, ಕೀರ್ತನೆಗಾರನಂತೆ ನಾವು ಮೋಶೆಯ ಧರ್ಮಶಾಸ್ತ್ರದ ಬೇರೆ ಬೇರೆ ವೈಶಿಷ್ಟ್ಯಗಳ ಕುರಿತು ಮನನಮಾಡುವಾಗ, ಆ ಧರ್ಮಶಾಸ್ತ್ರದ ಹಿಂದಿರುವ ವಿವೇಕವನ್ನು ನಾವು ಗಣ್ಯಮಾಡಸಾಧ್ಯವಿದೆ. ಧರ್ಮಶಾಸ್ತ್ರದ ಅನೇಕ ಪ್ರವಾದನಾ ಅಂಶಗಳು ಮಾತ್ರವಲ್ಲ, ನೈರ್ಮಲ್ಯ ಹಾಗೂ ಆಹಾರಪಥ್ಯದ ಕುರಿತಾದ ಅದರ ನಿಯಮಗಳು ಸಹ ಸ್ವಚ್ಛತೆ ಹಾಗೂ ಒಳ್ಳೆಯ ಆರೋಗ್ಯಕ್ಕೆ ಸಹಾಯಕರವಾಗಿವೆ. (ಯಾಜಕಕಾಂಡ 7:23, 24, 26; 11:2-8) ವ್ಯಾಪಾರವ್ಯವಹಾರಗಳಲ್ಲಿ ಪ್ರಾಮಾಣಿಕತೆಯನ್ನು ತೋರಿಸುವಂತೆ ಧರ್ಮಶಾಸ್ತ್ರವು ಪ್ರೋತ್ಸಾಹಿಸಿತು ಮತ್ತು ಅಗತ್ಯದಲ್ಲಿರುವ ಜೊತೆ ಆರಾಧಕರಿಗೆ ಸಹಾನುಭೂತಿಯನ್ನು ತೋರಿಸುವಂತೆ ಇಸ್ರಾಯೇಲ್ಯರನ್ನು ಪ್ರಚೋದಿಸಿತು. (ವಿಮೋಚನಕಾಂಡ 22:26, 27; 23:6; ಯಾಜಕಕಾಂಡ 19:35, 36; ಧರ್ಮೋಪದೇಶಕಾಂಡ 24:17-21) ಯಾವುದೇ ರೀತಿಯಲ್ಲಿ ಪಕ್ಷಪಾತವನ್ನು ತೋರಿಸದೆ ನ್ಯಾಯನಿರ್ಣಯಗಳನ್ನು ಮಾಡಬೇಕಿತ್ತು. (ಧರ್ಮೋಪದೇಶಕಾಂಡ 16:19; 19:15) 119ನೆಯ ಕೀರ್ತನೆಯ ಬರಹಗಾರನು ಜೀವಿತದಲ್ಲಿ ಹೆಚ್ಚೆಚ್ಚು ಅನುಭವವನ್ನು ಗಳಿಸಿದಂತೆ, ದೇವರ ಧರ್ಮಶಾಸ್ತ್ರವನ್ನು ತಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳುವವರಿಗೆ ಎಷ್ಟು ಒಳಿತಾಗುತ್ತದೆ ಎಂಬುದನ್ನು ಮನಗಂಡನು ಎಂಬುದರಲ್ಲಿ ಸಂದೇಹವೇ ಇಲ್ಲ. ಆದುದರಿಂದ, ಅದರ ಕಡೆಗಿನ ಅವನ ಪ್ರೀತಿಯು ಹೆಚ್ಚೆಚ್ಚು ಬಲಗೊಳ್ಳುತ್ತಾಹೋಯಿತು. ತದ್ರೀತಿಯಲ್ಲಿ ಇಂದು, ಬೈಬಲ್ ಮೂಲತತ್ವಗಳನ್ನು ಅನ್ವಯಿಸಿಕೊಳ್ಳುವುದರಲ್ಲಿ ಕ್ರೈಸ್ತರು ಸಫಲರಾಗುವಾಗ, ದೇವರ ವಾಕ್ಯಕ್ಕಾಗಿರುವ ಅವರ ಪ್ರೀತಿ ಹಾಗೂ ಗಣ್ಯತೆಯು ಅಧಿಕಗೊಳ್ಳುತ್ತದೆ.
ಇತರರಿಗಿಂತ ಭಿನ್ನನಾಗಿರಲು ಸಾಕಷ್ಟು ಧೈರ್ಯಮಾಡಿದ ಒಬ್ಬ ರಾಜಕುಮಾರ
9. ಅರಸನಾದ ಹಿಜ್ಕೀಯನು ದೇವರ ವಾಕ್ಯದ ಕಡೆಗೆ ಯಾವ ಮನೋಭಾವವನ್ನು ಬೆಳೆಸಿಕೊಂಡನು?
9 ಕೀರ್ತನೆ 119ರಲ್ಲಿ ತಿಳಿಸಲ್ಪಟ್ಟಿರುವ ವಿಷಯಗಳು, ಹಿಜ್ಕೀಯನು ಇನ್ನೂ ಒಬ್ಬ ಚಿಕ್ಕ ರಾಜಕುಮಾರನಾಗಿದ್ದಾಗ ಅವನ ಕುರಿತು ನಮಗೆ ಏನು ತಿಳಿದಿದೆಯೋ ಆ ವಿವರದೊಂದಿಗೆ ಸರಿಯಾಗಿ ಹೊಂದಿಕೊಳ್ಳುತ್ತವೆ. ಹಿಜ್ಕೀಯನೇ ಕೀರ್ತನೆ ಪುಸ್ತಕದ ಬರಹಗಾರನಾಗಿದ್ದನು ಎಂದು ಕೆಲವು ಬೈಬಲ್ ವಿದ್ವಾಂಸರು ಹೇಳುತ್ತಾರೆ. ಇದರ ಬಗ್ಗೆ ನಮಗೆ ಖಚಿತವಾಗಿ ತಿಳಿದಿಲ್ಲವಾದರೂ, ದೇವರ ವಾಕ್ಯದ ಬಗ್ಗೆ ಹಿಜ್ಕೀಯನಿಗೆ ತುಂಬ ಗೌರವವಿತ್ತು ಎಂಬ ವಿಷಯವು ನಮಗೆ ಗೊತ್ತಿದೆ. ಕೀರ್ತನೆ 119:97ರಲ್ಲಿರುವ ಮಾತುಗಳನ್ನು ತಾನು ಪೂರ್ಣ ಹೃದಯದಿಂದ ಒಪ್ಪಿಕೊಳ್ಳುತ್ತೇನೆ ಎಂಬುದನ್ನು ಅವನು ತನ್ನ ಜೀವನಕ್ರಮದಿಂದ ತೋರಿಸಿದನು. ಹಿಜ್ಕೀಯನ ಕುರಿತು ಬೈಬಲು ಹೇಳುವುದು: “ಇವನು ಯೆಹೋವನನ್ನೇ ಹೊಂದಿಕೊಂಡು ಆತನನ್ನು ಬಿಡದೆ ಹಿಂಬಾಲಿಸಿ ಆತನು ಮೋಶೆಯ ಮುಖಾಂತರವಾಗಿ ಅನುಗ್ರಹಿಸಿದ ಆಜ್ಞೆಗಳನ್ನು ಕೈಕೊಂಡನು.”—2 ಅರಸು 18:6.
10. ದೇವಭಯವುಳ್ಳ ಹೆತ್ತವರಿಂದ ಬೆಳೆಸಲ್ಪಟ್ಟಿರದ ಕ್ರೈಸ್ತರಿಗೆ, ಹಿಜ್ಕೀಯನ ಉದಾಹರಣೆಯು ಯಾವ ಉತ್ತೇಜನವನ್ನು ಕೊಡುತ್ತದೆ?
10 ಹಿಜ್ಕೀಯನು ದೇವಭಯವುಳ್ಳ ಒಂದು ಕುಟುಂಬದಲ್ಲಿ ಬೆಳೆದು ದೊಡ್ಡವನಾಗಲಿಲ್ಲ ಎಂಬುದನ್ನು ಅನೇಕ ಘಟನೆಗಳು ರುಜುಪಡಿಸುತ್ತವೆ. ಅವನ ತಂದೆಯಾದ ಆಹಾಜನು ಒಬ್ಬ ಅಪನಂಬಿಗಸ್ತ ವಿಗ್ರಹಾರಾಧಕನಾಗಿದ್ದನು. ಆಹಾಜನು ಕಡಿಮೆಪಕ್ಷ ತನ್ನ ಗಂಡುಮಕ್ಕಳಲ್ಲಿ ಒಬ್ಬನನ್ನು, ಅಂದರೆ ಹಿಜ್ಕೀಯನ ಸ್ವಂತ ಸಹೋದರನನ್ನು, ಸುಳ್ಳು ದೇವರಿಗೆ ಬಲಿಯರ್ಪಣೆಯೋಪಾದಿ ಜೀವಂತವಾಗಿ ದಹಿಸಿಬಿಟ್ಟನು! (2 ಅರಸು 16:3) ಹಿಜ್ಕೀಯನ ತಂದೆಯು ಈ ಕೆಟ್ಟ ಮಾದರಿಯನ್ನಿಟ್ಟರೂ, ದೇವರ ವಾಕ್ಯದ ಸತ್ಯಾಂಶವನ್ನು ಚೆನ್ನಾಗಿ ತಿಳಿದುಕೊಳ್ಳುವ ಮೂಲಕ ಹಿಜ್ಕೀಯನು, ವಿಧರ್ಮಿ ಪ್ರಭಾವಗಳಿಂದ “ತನ್ನ ಮಾರ್ಗವನ್ನು ಶುದ್ಧೀಕರಿಸಿ”ಕೊಳ್ಳಲು ಶಕ್ತನಾದನು.—2 ಪೂರ್ವಕಾಲವೃತ್ತಾಂತ 29:2, NW.
11. ಹಿಜ್ಕೀಯನ ಕಣ್ಣೆದುರಿಗೇ, ಅವನ ಅಪನಂಬಿಗಸ್ತ ತಂದೆಯ ಆಳ್ವಿಕೆಯಲ್ಲಿ ಏನೆಲ್ಲ ಸಂಭವಿಸಿತು?
11 ಹಿಜ್ಕೀಯನು ದೊಡ್ಡವನಾದಂತೆ, ತನ್ನ ವಿಗ್ರಹಾರಾಧಕ ತಂದೆಯು ರಾಜ್ಯದ ವ್ಯವಹಾರವನ್ನು ಹೇಗೆ ನಡೆಸುತ್ತಿದ್ದನು ಎಂಬುದನ್ನು ಕಣ್ಣಾರೆ ಕಂಡನು. ಯೆಹೂದವು ಶತ್ರುಗಳಿಂದ ಆವರಿಸಲ್ಪಟ್ಟಿತ್ತು. ಅರಾಮ್ಯರ ಅರಸನಾದ ರೆಚೀನನೂ ಇಸ್ರಾಯೇಲ್ಯರ ಅರಸನಾದ ಪೆಕಹನೂ ಸೇರಿಕೊಂಡು ಯೆರೂಸಲೇಮಿನ ಸುತ್ತಲೂ ಮುತ್ತಿಗೆಹಾಕಿದ್ದರು. (2 ಅರಸು 16:5, 6) ಎದೋಮ್ಯರು ಮತ್ತು ಫಿಲಿಷ್ಟಿಯರು ಸೇರಿಕೊಂಡು ಯೆಹೂದದ ಮೇಲೆ ದಾಳಿಮಾಡಿ, ಯೆಹೂದದ ಕೆಲವು ಪಟ್ಟಣಗಳನ್ನು ವಶಪಡಿಸಿಕೊಳ್ಳುವುದರಲ್ಲಿಯೂ ಯಶಸ್ವಿಯಾಗಿದ್ದರು. (2 ಪೂರ್ವಕಾಲವೃತ್ತಾಂತ 28:16-19) ಆಹಾಜನು ಇಂತಹ ಬಿಕ್ಕಟ್ಟುಗಳೊಂದಿಗೆ ಹೇಗೆ ವ್ಯವಹರಿಸಿದನು? ಅರಾಮ್ಯರ ವಿರುದ್ಧ ಹೋರಾಡಲು ಸಹಾಯ ಮಾಡುವಂತೆ ಯೆಹೋವನನ್ನು ಬೇಡಿಕೊಳ್ಳುವುದಕ್ಕೆ ಬದಲಾಗಿ, ಅಶ್ಶೂರದ ರಾಜನಿಗೆ ದೇವಾಲಯದ ಖಜಾನೆಯಿಂದ ಚಿನ್ನ ಮತ್ತು ಬೆಳ್ಳಿಯನ್ನು ತೆಗೆದು ಲಂಚವಾಗಿ ಕೊಡುತ್ತಾ, ಆಹಾಜನು ಅವನ ಸಹಾಯವನ್ನು ಯಾಚಿಸಿದನು. ಆದರೆ ಇದು ಯೆಹೂದಕ್ಕೆ ಶಾಶ್ವತವಾದ ಶಾಂತಿಯನ್ನು ತರಲಿಲ್ಲ.—2 ಅರಸು 16:6, 8.
12. ಏನನ್ನು ಮಾಡುವ ಮೂಲಕ ಹಿಜ್ಕೀಯನು ತನ್ನ ತಂದೆಯು ಮಾಡಿದ ತಪ್ಪುಗಳನ್ನೇ ಪುನರಾವರ್ತಿಸದಂತೆ ಜಾಗ್ರತೆವಹಿಸಸಾಧ್ಯವಿತ್ತು?
12 ಕಾಲಕ್ರಮೇಣ ಆಹಾಜನು ಮರಣಹೊಂದಿದನು ಮತ್ತು 25ರ ಪ್ರಾಯದಲ್ಲಿ ಹಿಜ್ಕೀಯನು ರಾಜನಾದನು. (2 ಪೂರ್ವಕಾಲವೃತ್ತಾಂತ 29:1) ಅವನು ಹೆಚ್ಚುಕಡಿಮೆ ಯುವಪ್ರಾಯದವನಾಗಿದ್ದನಾದರೂ, ಒಬ್ಬ ಯಶಸ್ವಿಕರ ಅರಸನಾಗುವುದರಿಂದ ಇದು ಅವನನ್ನು ತಡೆಗಟ್ಟಲಿಲ್ಲ. ತನ್ನ ಅಪನಂಬಿಗಸ್ತ ತಂದೆಯ ನಡತೆಯನ್ನು ಅನುಕರಿಸುವುದಕ್ಕೆ ಬದಲಾಗಿ, ಅವನು ಯೆಹೋವನ ಧರ್ಮಶಾಸ್ತ್ರಕ್ಕೆ ದೃಢವಾಗಿ ಅಂಟಿಕೊಂಡನು. ಅರಸರಿಗೆ ಕೊಡಲ್ಪಟ್ಟಿದ್ದ ಒಂದು ವಿಶೇಷ ಆಜ್ಞೆಯು ಸಹ ಇದರಲ್ಲಿ ಒಳಗೂಡಿತ್ತು: “ಅವನು [ಅರಸನು] ರಾಜ್ಯಾಧಿಕಾರಕ್ಕೆ ಬಂದಾಗ ಯಾಜಕ ಸೇವೆಮಾಡುವ ಲೇವಿಯರ ವಶದಲ್ಲಿರುವ ಈ ಧರ್ಮಶಾಸ್ತ್ರಗ್ರಂಥದ ಒಂದು ಪ್ರತಿಯನ್ನು ತನಗೋಸ್ಕರ ಪುಸ್ತಕ ರೂಪವಾಗಿ ಬರೆಯಿಸಿಕೊಳ್ಳಬೇಕು. . . . ಯೆಹೋವನ ಆಜ್ಞೆಯನ್ನು ಮೀರಿ ಎಡಬಲಕ್ಕೆ ತಿರುಗಿಕೊಳ್ಳದೆ ತನ್ನ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಈ ಧರ್ಮಶಾಸ್ತ್ರದ ಎಲ್ಲಾ ವಾಕ್ಯಗಳನ್ನೂ ವಿಧಿಗಳನ್ನೂ ಅನುಸರಿಸುವದಕ್ಕೆ ಅಭ್ಯಾಸಮಾಡಿಕೊಳ್ಳುವಂತೆ ಈ ಗ್ರಂಥವು ಅವನ ಬಳಿಯಲ್ಲೇ ಇರಬೇಕು.” (ಧರ್ಮೋಪದೇಶಕಾಂಡ 17:18, 19) ಪ್ರತಿ ದಿನ ದೇವರ ವಾಕ್ಯವನ್ನು ಓದುವ ಮೂಲಕ, ಹಿಜ್ಕೀಯನು ಯೆಹೋವನಿಗೆ ಭಯಪಡಲು ಕಲಿತುಕೊಳ್ಳಸಾಧ್ಯವಿತ್ತು ಮತ್ತು ತನ್ನ ಭಕ್ತಿಹೀನ ತಂದೆಯು ಮಾಡಿದ ತಪ್ಪುಗಳನ್ನೇ ಪುನರಾವರ್ತಿಸದಂತೆ ನೋಡಿಕೊಳ್ಳಸಾಧ್ಯವಿತ್ತು.
13. ಒಂದು ಆತ್ಮಿಕ ಅರ್ಥದಲ್ಲಿ, ತಾನು ಮಾಡುವುದೆಲ್ಲವೂ ಸಫಲವಾಗುವುದು ಎಂದು ಕ್ರೈಸ್ತನೊಬ್ಬನು ಹೇಗೆ ಭರವಸೆಯಿಂದಿರಸಾಧ್ಯವಿದೆ?
13 ದೇವರ ವಾಕ್ಯಕ್ಕೆ ಯಾವಾಗಲೂ ಗಮನಕೊಡಬೇಕೆಂಬ ಉತ್ತೇಜನವು ಕೇವಲ ಇಸ್ರಾಯೇಲ್ ಅರಸರಿಗೆ ಮಾತ್ರ ಕೊಡಲ್ಪಟ್ಟಿರಲಿಲ್ಲ, ಬದಲಾಗಿ ದೇವಭಯವುಳ್ಳ ಎಲ್ಲ ಇಸ್ರಾಯೇಲ್ಯರು ಅದಕ್ಕೆ ಗಮನಕೊಡಬೇಕಾಗಿತ್ತು. ಯಾರು “ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ” ಅಂತಹ ಮನುಷ್ಯನು ನಿಜವಾಗಿಯೂ ಸಂತೋಷಭರಿತನಾಗಿದ್ದಾನೆ ಎಂದು ಕೀರ್ತನೆಯ ಮೊದಲ ವಚನಗಳು ವರ್ಣಿಸುತ್ತವೆ. (ಕೀರ್ತನೆ 1:1, 2) ಅಂತಹ ಮನುಷ್ಯನ ಕುರಿತು ಕೀರ್ತನೆಗಾರನು ಹೇಳುವುದು: “ಅವನ ಕಾರ್ಯವೆಲ್ಲವೂ ಸಫಲವಾಗುವದು.” (ಕೀರ್ತನೆ 1:3) ಇದಕ್ಕೆ ತದ್ವಿರುದ್ಧವಾಗಿ, ಯೆಹೋವ ದೇವರ ಮೇಲೆ ನಂಬಿಕೆಯನ್ನಿಡಲು ಹಿಂದೇಟುಹಾಕುವವನ ಕುರಿತು ಬೈಬಲು ಹೇಳುವುದು: “ಅವನು ಎರಡು ಮನಸ್ಸುಳ್ಳವನೂ ತನ್ನ ನಡತೆಯಲ್ಲೆಲ್ಲಾ ಚಂಚಲನೂ ಆಗಿದ್ದಾನೆ.” (ಯಾಕೋಬ 1:8) ನಾವೆಲ್ಲರೂ ಸಂತೋಷದಿಂದಿರಲು ಮತ್ತು ಜೀವನದಲ್ಲಿ ಸಫಲರಾಗಲು ಬಯಸುತ್ತೇವೆ. ಕ್ರಮವಾದ, ಅರ್ಥಭರಿತ ಬೈಬಲ್ ವಾಚನವು, ನಮ್ಮ ಸಂತೋಷವನ್ನು ಅಧಿಕಗೊಳಿಸಬಲ್ಲದು.
ದೇವರ ವಾಕ್ಯವು ಯೇಸುವನ್ನು ಪೋಷಿಸಿತು
14. ಯೇಸು ದೇವರ ವಾಕ್ಯಕ್ಕಾಗಿ ಹೇಗೆ ಪ್ರೀತಿಯನ್ನು ತೋರಿಸಿದನು?
14 ಒಂದು ಸಂದರ್ಭದಲ್ಲಿ, ಯೆರೂಸಲೇಮಿನಲ್ಲಿರುವ ದೇವಾಲಯದಲ್ಲಿ ಯೇಸು ಬೋಧಕರ ಮಧ್ಯೆ ಕುಳಿತುಕೊಂಡಿರುವುದನ್ನು ಅವನ ಹೆತ್ತವರು ನೋಡಿದರು. ದೇವರ ಧರ್ಮಶಾಸ್ತ್ರದಲ್ಲಿ ಪರಿಣತರಾಗಿದ್ದ ಈ ಜನರು “ಆತನ ಬುದ್ಧಿಗೂ ಉತ್ತರಗಳಿಗೂ” ಎಷ್ಟೊಂದು “ಆಶ್ಚರ್ಯಪಟ್ಟರು”! (ಲೂಕ 2:46, 47) ಯೇಸು 12 ವರ್ಷ ಪ್ರಾಯದವನಾಗಿದ್ದಾಗ ಈ ಘಟನೆಯು ಸಂಭವಿಸಿತು. ಹೌದು, ಬಹಳ ಚಿಕ್ಕ ಪ್ರಾಯದಲ್ಲಿಯೇ ಅವನು ದೇವರ ವಾಕ್ಯದ ಮೇಲೆ ಪ್ರೀತಿಯನ್ನು ಬೆಳೆಸಿಕೊಂಡಿದ್ದನೆಂಬುದು ಸುಸ್ಪಷ್ಟ. ತದನಂತರ, ಪಿಶಾಚನನ್ನು ಖಂಡಿಸಲಿಕ್ಕಾಗಿ ಯೇಸು ಶಾಸ್ತ್ರವಚನಗಳನ್ನು ಉಪಯೋಗಿಸಿದನು. ಅವನು ಹೇಳಿದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವುದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು.” (ಮತ್ತಾಯ 4:3-10) ಇದಾದ ಬಳಿಕ ಯೇಸು, ಶಾಸ್ತ್ರವಚನಗಳನ್ನು ಉಪಯೋಗಿಸುತ್ತಾ ತನ್ನ ಸ್ವಂತ ಊರಾದ ನಜರೇತಿನಲ್ಲಿದ್ದ ನಿವಾಸಿಗಳಿಗೆ ಸುವಾರ್ತೆಯನ್ನು ಸಾರಿದನು.—ಲೂಕ 4:16-21.
15. ಬೇರೆಯವರಿಗೆ ಸಾರುತ್ತಿರುವಾಗ ಯೇಸು ಹೇಗೆ ಒಂದು ಮಾದರಿಯನ್ನು ಇಟ್ಟನು?
15 ಅನೇಕಬಾರಿ ಯೇಸು ತನ್ನ ಬೋಧನೆಗಳನ್ನು ಸಮರ್ಥಿಸಲಿಕ್ಕಾಗಿ ದೇವರ ವಾಕ್ಯದಿಂದ ಉದ್ಧರಿಸಿ ಮಾತಾಡಿದನು. ಅವನಿಗೆ ಕಿವಿಗೊಡುತ್ತಿದ್ದ ಜನರು “ಆತನ ಉಪದೇಶಕ್ಕೆ ಅತ್ಯಾಶ್ಚರ್ಯ”ಪಟ್ಟರು. (ಮತ್ತಾಯ 7:28) ಮತ್ತು ಯೇಸುವಿನ ಬೋಧನೆಗಳನ್ನು ಯೆಹೋವ ದೇವರೇ ಕೊಟ್ಟಿದ್ದನೆಂಬುದರಲ್ಲಿ ಆಶ್ಚರ್ಯವೇನಿಲ್ಲ! ಯೇಸು ಹೇಳಿದ್ದು: “ನಾನು ಹೇಳುವ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದಾತನದು. ಕಲ್ಪಿಸಿ ಹೇಳುವವನು ತನಗೆ ಮಾನಬರಬೇಕೆಂದು ಅಪೇಕ್ಷಿಸುತ್ತಾನೆ; ತನ್ನನ್ನು ಕಳುಹಿಸಿದವನಿಗೆ ಮಾನಬರಬೇಕೆಂದು ಅಪೇಕ್ಷಿಸುವವನು ಸತ್ಯವಂತನು, ಅಧರ್ಮವು ಅವನಲ್ಲಿ ಇಲ್ಲ.”—ಯೋಹಾನ 7:16, 18.
16. ದೇವರ ವಾಕ್ಯಕ್ಕಾಗಿರುವ ತನ್ನ ಪ್ರೀತಿಯನ್ನು ಯೇಸು ಎಷ್ಟರ ಮಟ್ಟಿಗೆ ವ್ಯಕ್ತಪಡಿಸಿದನು?
16 ಕೀರ್ತನೆ 119ರ ಬರಹಗಾರನಿಗೆ ಅಸದೃಶವಾಗಿ, ಯೇಸುವಿನಲ್ಲಿ “ಅಧರ್ಮವು” ಇರಲಿಲ್ಲ. ಅವನು ಪಾಪರಹಿತನಾಗಿದ್ದು, “ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದ” ದೇವಕುಮಾರನಾಗಿದ್ದನು. (ಫಿಲಿಪ್ಪಿ 2:8; ಇಬ್ರಿಯ 7:26) ಯೇಸು ಪರಿಪೂರ್ಣನಾಗಿದ್ದರೂ, ದೇವರ ಧರ್ಮಶಾಸ್ತ್ರವನ್ನು ಅಭ್ಯಾಸಿಸಿದನು ಮತ್ತು ಅದಕ್ಕೆ ವಿಧೇಯನಾದನು. ಯಥಾರ್ಥತೆಯನ್ನು ಕಾಪಾಡಿಕೊಳ್ಳುವ ಅವನ ಸಾಮರ್ಥ್ಯದಲ್ಲಿ ಇದು ಪ್ರಾಮುಖ್ಯವಾದ ಅಂಶವಾಗಿತ್ತು. ಜನರು ತನ್ನ ಗುರುವನ್ನು ಸೆರೆಹಿಡಿಯಲು ಬಂದಾಗ, ಅದನ್ನು ತಡೆಯಲಿಕ್ಕಾಗಿ ಪೇತ್ರನು ತನ್ನ ಕತ್ತಿಯನ್ನು ಉಪಯೋಗಿಸಿದಾಗ, ಯೇಸು ಆ ಅಪೊಸ್ತಲನನ್ನು ಗದರಿಸುತ್ತಾ ಕೇಳಿದ್ದು: “ನಾನು ನನ್ನ ತಂದೆಯನ್ನು ಬೇಡಿಕೊಳ್ಳಲಾರನೆಂದೂ ಬೇಡಿಕೊಂಡರೆ ಆತನು ನನಗೆ ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು ಕಳುಹಿಸಿಕೊಡುವದಿಲ್ಲವೆಂದೂ ನೆನಸುತ್ತೀಯಾ? ಕಳುಹಿಸಿಕೊಟ್ಟರೆ ನನಗೆ ಇಂಥಿಂಥದು ಆಗಬೇಕೆಂಬುವ ಶಾಸ್ತ್ರದ ಮಾತುಗಳು ನೆರವೇರುವದು ಹೇಗೆ”? (ಮತ್ತಾಯ 26: 53, 54) ಹೌದು, ಒಂದು ಕ್ರೂರವಾದ ಹಾಗೂ ಅವಮಾನಕರವಾದ ಮರಣದಿಂದ ತಪ್ಪಿಸಿಕೊಳ್ಳುವುದಕ್ಕಿಂತಲೂ, ಶಾಸ್ತ್ರವಚನಗಳ ನೆರವೇರಿಕೆಯು ಯೇಸುವಿಗೆ ಅತಿ ಮಹತ್ವದ ಸಂಗತಿಯಾಗಿತ್ತು. ದೇವರ ವಾಕ್ಯಕ್ಕಾಗಿ ಎಂತಹ ಉತ್ಕೃಷ್ಟ ಪ್ರೀತಿಯನ್ನು ಅವನು ತೋರಿಸಿದನು!
ಕ್ರಿಸ್ತನನ್ನು ಅನುಕರಿಸಿದ ಇನ್ನಿತರ ವ್ಯಕ್ತಿಗಳು
17. ಅಪೊಸ್ತಲ ಪೌಲನಿಗೆ ದೇವರ ವಾಕ್ಯವು ಎಷ್ಟು ಪ್ರಾಮುಖ್ಯವಾದದ್ದಾಗಿತ್ತು?
17 ಅಪೊಸ್ತಲ ಪೌಲನು ಜೊತೆ ಕ್ರೈಸ್ತರಿಗೆ ಬರೆದುದು: “ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.” (1 ಕೊರಿಂಥ 11:1) ತನ್ನ ಗುರುವಿನಂತೆಯೇ ಪೌಲನು ಸಹ ಶಾಸ್ತ್ರವಚನಗಳ ಕಡೆಗೆ ಪ್ರೀತಿಯನ್ನು ಬೆಳೆಸಿಕೊಂಡನು. ಅವನು ಒಪ್ಪಿಕೊಂಡದ್ದು: “ನನ್ನ ಅಂತರಾಳದಲ್ಲಿ ನಾನು ದೇವರ ಧರ್ಮಶಾಸ್ತ್ರವನ್ನು ತುಂಬ ಪ್ರೀತಿಸುತ್ತೇನೆ.” (ರೋಮಾಪುರ 7:22, ದ ಜೆರೂಸಲೇಮ್ ಬೈಬಲ್) ಪೌಲನು ಆಗಿಂದಾಗ್ಗೆ ದೇವರ ವಾಕ್ಯದಿಂದ ಉದ್ಧರಿಸಿ ಮಾತಾಡಿದನು. (ಅ. ಕೃತ್ಯಗಳು 13:32-41; 17:2, 3; 28:23) ತನ್ನ ಪ್ರೀತಿಯ ಜೊತೆ ಶುಶ್ರೂಷಕನಾದ ತಿಮೊಥೆಯನಿಗೆ ಪೌಲನು ತನ್ನ ಅಂತಿಮ ಉಪದೇಶಗಳನ್ನು ನೀಡಿದಾಗ, ಪ್ರತಿಯೊಬ್ಬ “ದೇವರ ಮನುಷ್ಯನ” ದೈನಂದಿನ ಜೀವಿತದಲ್ಲಿ ದೇವರ ವಾಕ್ಯವು ವಹಿಸಬೇಕಾದ ಅತಿ ಪ್ರಮುಖ ಪಾತ್ರದ ಕುರಿತು ಒತ್ತಿಹೇಳಿದನು.—2 ತಿಮೊಥೆಯ 3:15-17.
18. ಆಧುನಿಕ ಸಮಯಗಳಲ್ಲಿ ದೇವರ ವಾಕ್ಯಕ್ಕಾಗಿ ಗೌರವವನ್ನು ತೋರಿಸಿದಂತಹ ಒಬ್ಬ ವ್ಯಕ್ತಿಯ ಉದಾಹರಣೆಯನ್ನು ಕೊಡಿರಿ.
18 ತದ್ರೀತಿಯಲ್ಲಿ, ಆಧುನಿಕ ಸಮಯಗಳಲ್ಲಿರುವ ಯೆಹೋವನ ಅನೇಕ ನಂಬಿಗಸ್ತ ಸೇವಕರು ಸಹ ದೇವರ ವಾಕ್ಯಕ್ಕಾಗಿರುವ ಯೇಸುವಿನ ಪ್ರೀತಿಯನ್ನು ಅನುಕರಿಸಿದ್ದಾರೆ. ಈ ಶತಮಾನದ ಆರಂಭದಲ್ಲಿ, ಒಬ್ಬ ಯೌವನಸ್ಥನಿಗೆ ಅವನ ಗೆಳತಿಯು ಒಂದು ಬೈಬಲನ್ನು ಕೊಟ್ಟಳು. ಈ ಅಮೂಲ್ಯ ಕೊಡುಗೆಯು ತನ್ನ ಮೇಲೆ ಬೀರಿದ ಪರಿಣಾಮವನ್ನು ಅವನು ಈ ಮಾತುಗಳಲ್ಲಿ ವರ್ಣಿಸಿದನು: “ಪ್ರತಿ ದಿನ ತಪ್ಪದೆ ಬೈಬಲಿನ ಒಂದು ಭಾಗವನ್ನು ಓದುವುದನ್ನು ನನ್ನ ಜೀವಿತದ ಅವಿಭಾಜ್ಯ ಅಂಗವಾಗಿ ಮಾಡಿಕೊಳ್ಳಲು ನಾನು ನಿರ್ಧರಿಸಿದೆ.” ಈ ಯೌವನಸ್ಥರು ಫ್ರೆಡ್ರಿಕ್ ಫ್ರಾನ್ಸರೇ ಆಗಿದ್ದರು, ಮತ್ತು ಬೈಬಲಿನ ಕುರಿತು ಅವರಿಗಿದ್ದ ಗಾಢವಾದ ಪ್ರೀತಿಯು, ಯೆಹೋವನ ಸೇವೆಯಲ್ಲಿ ದೀರ್ಘವಾದ ಮತ್ತು ಯಶಸ್ವಿಕರವಾದ ಜೀವಿತವನ್ನು ಆನಂದಿಸಲು ಅವರಿಗೆ ಸಹಾಯ ಮಾಡಿತು. ಬೈಬಲಿನ ಇಡೀ ಅಧ್ಯಾಯಗಳನ್ನೇ ಬಾಯಿಪಾಠವಾಗಿ ಹೇಳುವ ಇವರ ಸಾಮರ್ಥ್ಯಕ್ಕಾಗಿ ತುಂಬ ಅಕ್ಕರೆಯಿಂದ ಇವರನ್ನು ಜ್ಞಾಪಿಸಿಕೊಳ್ಳಲಾಗುತ್ತದೆ.
19. ದೇವಪ್ರಭುತ್ವ ಶುಶ್ರೂಷಾ ಶಾಲೆಗಾಗಿ ಕೆಲವರು ಸಾಪ್ತಾಹಿಕ ಬೈಬಲ್ ವಾಚನವನ್ನು ಹೇಗೆ ಶೆಡ್ಯೂಲ್ ಮಾಡಿಕೊಳ್ಳುತ್ತಾರೆ?
19 ಯೆಹೋವನ ಸಾಕ್ಷಿಗಳು ಕ್ರಮವಾದ ಬೈಬಲ್ ವಾಚನಕ್ಕೆ ಅತ್ಯಧಿಕ ಮಹತ್ವವನ್ನು ಕೊಡುತ್ತಾರೆ. ಪ್ರತಿ ವಾರ, ತಮ್ಮ ಕ್ರೈಸ್ತ ಕೂಟಗಳಲ್ಲಿ ಒಂದಾದ ದೇವಪ್ರಭುತ್ವ ಶುಶ್ರೂಷಾ ಶಾಲೆಗಾಗಿ ಸಿದ್ಧತೆಯನ್ನು ಮಾಡುವಾಗ, ಅವರು ಬೈಬಲಿನ ಕೆಲವು ಅಧ್ಯಾಯಗಳನ್ನು ಓದುತ್ತಾರೆ. ಕೂಟದ ಸಮಯದಲ್ಲಿ, ನೇಮಿತ ಬೈಬಲ್ ವಾಚನದ ಮುಖ್ಯಾಂಶಗಳ ಕುರಿತು ಚರ್ಚಿಸಲಾಗುತ್ತದೆ. ಸಾಪ್ತಾಹಿಕ ಬೈಬಲ್ ವಾಚನವನ್ನು ಏಳು ಚಿಕ್ಕ ಚಿಕ್ಕ ಭಾಗಗಳಾಗಿ ವಿಭಾಗಿಸಿ, ಪ್ರತಿ ದಿನ ಓದುವುದು ಕೆಲವು ಸಾಕ್ಷಿಗಳಿಗೆ ಅನುಕೂಲಕರವಾದದ್ದಾಗಿದೆ. ಅವರು ಆ ಭಾಗಗಳನ್ನು ಓದಿದ ಮೇಲೆ, ಓದಿದಂತಹ ವಿಷಯದ ಕುರಿತು ಪರ್ಯಾಲೋಚಿಸುತ್ತಾರೆ. ಸಾಧ್ಯವಿದ್ದಾಗಲೆಲ್ಲ, ಬೈಬಲ್ ಆಧಾರಿತ ಪ್ರಕಾಶನಗಳ ಸಹಾಯದಿಂದ ಅವರು ಹೆಚ್ಚಿನ ರೀಸರ್ಚ್ ಮಾಡುತ್ತಾರೆ.
20. ಕ್ರಮವಾದ ಬೈಬಲ್ ವಾಚನಕ್ಕಾಗಿ ಸಮಯವನ್ನು ಮಾಡಿಕೊಳ್ಳಲು ಯಾವುದರ ಅಗತ್ಯವಿದೆ?
20 ಬೈಬಲನ್ನು ಕ್ರಮವಾಗಿ ಓದಲಿಕ್ಕಾಗಿ, ಬೇರೆ ಚಟುವಟಿಕೆಗಳಿಂದ ನೀವು ಸಮಯವನ್ನು ‘ಖರೀದಿಸುವ’ ಅಗತ್ಯವಿರಬಹುದು. (ಎಫೆಸ 5:16, NW) ಆದರೂ, ನಾವು ಮಾಡುವ ತ್ಯಾಗಗಳಿಗಿಂತಲೂ ಅದರಿಂದ ದೊರಕುವ ಪ್ರಯೋಜನಗಳು ಎಷ್ಟೋ ಮಿಗಿಲಾಗಿವೆ. ಪ್ರತಿ ದಿನ ಬೈಬಲನ್ನು ಓದುವ ಹವ್ಯಾಸವನ್ನು ನೀವು ಬೆಳೆಸಿಕೊಂಡಂತೆ, ದೇವರ ವಾಕ್ಯಕ್ಕಾಗಿರುವ ನಿಮ್ಮ ಪ್ರೀತಿಯು ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತದೆ. ಸ್ವಲ್ಪದರಲ್ಲೇ, ಕೀರ್ತನೆಗಾರನೊಂದಿಗೆ ನೀವು ಸಹ ಹೀಗೆ ಹೇಳುವಂತೆ ಪ್ರಚೋದಿಸಲ್ಪಡುವಿರಿ: “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ.” (ಕೀರ್ತನೆ 119:97) ಮುಂದಿನ ಲೇಖನವು ತೋರಿಸಲಿರುವಂತೆ, ಇಂತಹ ಮನೋಭಾವವು, ಈಗ ಮಾತ್ರವಲ್ಲ ಭವಿಷ್ಯತ್ತಿನಲ್ಲಿಯೂ ಮಹತ್ತರ ಪ್ರಯೋಜನಗಳನ್ನು ತರುವುದು.
ನಿಮಗೆ ನೆನಪಿದೆಯೊ?
◻ 119ನೆಯ ಕೀರ್ತನೆಯ ಬರಹಗಾರನು ದೇವರ ವಾಕ್ಯಕ್ಕಾಗಿ ಆಳವಾದ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಿದನು?
◻ ಯೇಸು ಮತ್ತು ಪೌಲರ ಉದಾಹರಣೆಗಳಿಂದ ನಾವು ಯಾವ ಪಾಠಗಳನ್ನು ಕಲಿತುಕೊಳ್ಳಸಾಧ್ಯವಿದೆ?
◻ ದೇವರ ವಾಕ್ಯಕ್ಕಾಗಿರುವ ನಮ್ಮ ಪ್ರೀತಿಯಲ್ಲಿ ನಾವು ವೈಯಕ್ತಿಕವಾಗಿ ಹೇಗೆ ಬೆಳೆಯಸಾಧ್ಯವಿದೆ?
[ಪುಟ 10 ರಲ್ಲಿರುವ ಚಿತ್ರಗಳು]
ನಂಬಿಗಸ್ತ ಅರಸರು ದೇವರ ವಾಕ್ಯವನ್ನು ಕ್ರಮವಾಗಿ ಓದಬೇಕಾಗಿತ್ತು. ನೀವು ಕೂಡ ಹಾಗೆ ಮಾಡುತ್ತೀರೊ?
[ಪುಟ 12 ರಲ್ಲಿರುವ ಚಿತ್ರ]
ಒಬ್ಬ ಚಿಕ್ಕ ಹುಡುಗನಾಗಿದ್ದಾಗಲೇ ಯೇಸುವಿಗೆ ದೇವರ ವಾಕ್ಯದ ಬಗ್ಗೆ ಪ್ರೀತಿಯಿತ್ತು