ಸದ್ಗುಣವನ್ನು ಏಕೆ ಬೆಳೆಸಿಕೊಳ್ಳಬೇಕು?
ಕುನೀಹೀಟೋ ಎಂಬ ಮಧ್ಯವಯಸ್ಸಿನ ಒಬ್ಬ ಜ್ಯಾಪನೀಸ್ ವ್ಯಕ್ತಿ ಇತ್ತೀಚೆಗೆ ಅಮೆರಿಕಕ್ಕೆ ವಲಸೆಹೋದನು.a ಅವನು ಅಮೆರಿಕಕ್ಕೆ ಹೋಗಿ ಕೆಲವೇ ವಾರಗಳು ಕಳೆದಿರಬೇಕು, ಆಗ ಅವನು ಮುಖಾಮುಖಿಯಾಗಿ ಒಂದು ಸನ್ನಿವೇಶವನ್ನು ಎದುರಿಸಿದನು. ಅದು ಅವನ ವೃತ್ತಿಜೀವನವನ್ನೇ ಕೆಡವಿಹಾಕುವುದರಲ್ಲಿತ್ತು. ಕುನೀಹೀಟೋ ಹೇಳುವುದು: “ಒಂದು ನಿರ್ದಿಷ್ಟವಾದ ಜವಾಬ್ದಾರಿಯನ್ನು ನೀನು ವಹಿಸಿಕೊಳ್ಳಸಾಧ್ಯವೋ ಎಂದು ನನ್ನ ಸೂಪರ್ವೈಸರ್ ಕೇಳಿದಾಗ, ಅದನ್ನು ವಹಿಸಿಕೊಳ್ಳುವ ಆತ್ಮವಿಶ್ವಾಸ ನನ್ನಲ್ಲಿತ್ತು. ಆದರೆ ನಮ್ರತೆ ಒಂದು ಸದ್ಗುಣ ಎಂದು ಕಲಿಸಿದಂತಹ ಕುಟಂಬದಲ್ಲಿ ಬೆಳೆದು ದೊಡ್ಡವನಾದ ಕಾರಣ, ‘ನಾನು ಅದನ್ನು ಮಾಡುತ್ತೇನೆ ಎಂಬ ಭರವಸೆ ನನಗಿಲ್ಲ, ಆದರೂ ನಾನು ನನ್ನ ಕೈಲಾದ ಪ್ರಯತ್ನವನ್ನು ಮಾಡುತ್ತೇನೆ’ ಎಂದು ಉತ್ತರಿಸಿದೆ. ಇದನ್ನು ಕೇಳಿಸಿಕೊಂಡ ನನ್ನ ಅಮೆರಿಕದ ಸೂಪರ್ವೈಸರ್ ನಾನು ಅಸಮರ್ಥನೂ ಆತ್ಮವಿಶ್ವಾಸವಿಲ್ಲದವನೂ ಆಗಿದ್ದೇನೆಂದು ನೆನೆಸಿದನು. ಅವನು ಹಾಗೆ ನೆನಸಿದನೆಂದು ನನಗೆ ತಿಳಿದುಬಂದಾಗ, ನಾನು ಸಹ ಜೀವಿತದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಬೇಕು ಎಂದು ಅನಿಸಿತು.”
ನ್ಯೂ ಯಾರ್ಕ್ ನಗರದಲ್ಲಿ ವಾಸಿಸುವ ಮರೀಯ, ಕಾಲೇಜಿನಲ್ಲಿಯೇ ಬಹಳ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದಳು. ಅವಳು ಯಾವಾಗಲೂ ತನ್ನ ಕ್ಲಾಸ್ನಲ್ಲಿರುವವರಿಗೆ ಸಹಾಯಮಾಡುತ್ತಿದ್ದಳು. ಹೀಗೆ ಅವಳ ಜೊತೆ ಓದುತ್ತಿರುವ ಹ್ವಾನ್ ಎಂಬ ವಿದ್ಯಾರ್ಥಿ ಆಗಾಗ್ಗೆ ಅವಳ ಸಹಾಯವನ್ನು ಕೇಳಿಬರುತ್ತಿದ್ದನು. ಆದರೆ ಅವನು ಅವಳಲ್ಲಿ ಮೋಹಿತನಾಗಿದ್ದು, ಅವಳನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನು. ನೈತಿಕವಾಗಿ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಲು ಎಷ್ಟೇ ಪ್ರಯತ್ನಮಾಡಿದರೂ ಕೊನೆಗೂ, ಮರೀಯ ಹ್ವಾನನ ಮೋಹದ ಬಲೆಗೆ ಬಿದ್ದಳು ಹಾಗೂ ಲೈಂಗಿಕ ಅನೈತಿಕತೆಯಲ್ಲಿ ಒಳಗೂಡಿದಳು.
ಸಾಂಸ್ಕೃತಿಕವಾಗಿ ಭಿನ್ನವಾಗಿರುವ ಹಾಗೂ ನೈತಿಕವಾಗಿ ಭ್ರಷ್ಟವಾಗಿರುವ ಈ ಲೋಕದಲ್ಲಿ ಸದ್ಗುಣವನ್ನು ತೋರಿಸುವುದು ನಿಜವಾಗಿಯೂ ಒಂದು ಸವಾಲೇ ಸರಿ. ಆದರೂ ನಾವೇಕೆ ಸದ್ಗುಣವನ್ನು ಬೆಳೆಸಿಕೊಳ್ಳಬೇಕು? ಏಕೆಂದರೆ, ಸದ್ಗುಣಶೀಲ ನಡತೆಯನ್ನು ದೇವರು ಮೆಚ್ಚುತ್ತಾನೆ ಮತ್ತು ನಮ್ಮಲ್ಲಿ ಅನೇಕರು ನಿಜವಾಗಿಯೂ ಆತನ ಅನುಗ್ರಹವನ್ನು ಆಶಿಸುತ್ತೇವೆ.
ದೇವರ ವಾಕ್ಯವಾದ ಬೈಬಲು, ಸದ್ಗುಣವನ್ನು ಬೆಳೆಸಿಕೊಳ್ಳುವಂತೆ ತನ್ನ ಓದುಗರಿಗೆ ಬುದ್ಧಿವಾದವನ್ನು ನೀಡುತ್ತದೆ. ಉದಾಹರಣೆಗೆ, ಅಪೊಸ್ತಲ ಪೌಲನು ಬರೆಯುವುದು: “ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ.” (ಫಿಲಿಪ್ಪಿ 4:8) ‘ಪೂರ್ಣಾಸಕ್ತಿಯಿಂದ ನಮ್ಮ ನಂಬಿಕೆಗೆ ಸದ್ಗುಣವನ್ನು’ ಸೇರಿಸುವಂತೆ ಅಪೊಸ್ತಲ ಪೇತ್ರನು ನಮ್ಮನ್ನು ಪ್ರೇರೇಪಿಸುತ್ತಾನೆ. (2 ಪೇತ್ರ 1:5) ಆದರೆ ಸದ್ಗುಣ ಅಂದರೇನು? ಅದನ್ನು ಕ್ಲಾಸ್ರೂಮಿನಲ್ಲಿ ಕಲಿಸಸಾಧ್ಯವೋ? ನಾವು ಅದನ್ನು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ?
[ಪಾದಟಿಪ್ಪಣಿ]
a ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.